ಲೋಕನಾಥ್
ಲೋಕನಾಥ್ (ಆಗಸ್ಟ್ ೧೪, ೧೯೨೭-ಡಿಸೆಂಬರ್, ೩೧, ೨೦೧೮) ಕನ್ನಡ ಚಿತ್ರರಂಗ ಮತ್ತು ರಂಗಭೂಮಿಯ ಒಬ್ಬ ಹಿರಿಯನಟ. ಕಿರುತೆರೆಯಲ್ಲೂ ಸಾಕಷ್ಟು ಕೆಲಸಮಾಡಿದ್ದಾರೆ. ಚಿತ್ರರಂಗವಲ್ಲದೆ ರಂಗಭೂಮಿಯ ಬಹಳಷ್ಟು ಉತ್ತಮ ಪ್ರಯೋಗಗಳಿಗೂ, ಕಿರುತೆರೆಯ ಉತ್ತಮ ಪಾತ್ರಗಳಿಗೂ ಲೋಕನಾಥರು ಮೆರುಗು ತಂದಿದ್ದಾರೆ. ಸುಮಾರು 650 ಸಿನಿಮಾಗಳು ಮತ್ತು 1 ಸಾವಿರಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. 1970ರಲ್ಲಿ ತೆರೆಕಂಡಿದ್ದ ಸಂಸ್ಕಾರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಲೋಕನಾಥ್ ಅವರು ಕೊನೆಯದಾಗಿ ಎ.ಕೆ. 56 ಮತ್ತು ಭೀಮಾ ತೀರದಲ್ಲಿ ಎಂಬ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.[೧]
ಲೋಕನಾಥ್ | |
---|---|
ಜನನ | ಆಗಸ್ಟ್ ೧೪, ೧೯೨೭ ಬೆಂಗಳೂರು |
ಮರಣ | ಡಿಸೆಂಬರ್, ೩೦, ೨೦೧೮ |
ವೃತ್ತಿ(ಗಳು) | ಚಲನಚಿತ್ರ ನಟರು; ರಂಗಭೂಮಿ ನಟ ನಿರ್ದೇಶಕರು; ಕಿರುತೆರೆಯ ನಟ, ನಿರ್ದೇಶಕ, ನಿರ್ಮಾಪಕರು |
ಜೀವನ
ಬದಲಾಯಿಸಿಲೋಕನಾಥರು ಜನಿಸಿದ್ದು ಆಗಸ್ಟ್ ೧೪, ೧೯೨೭ರಂದು. ಶಿಸ್ತುಬದ್ಧ ಜೀವನದ, ರಂಗಭೂಮಿ ಮತ್ತು ಚಲನಚಿತ್ರಲೋಕದ ಮೇರು ಕಲಾವಿದರಾದ ಲೋಕನಾಥ್‌ರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಹನುಮಂತಪ್ಪನವರು ಮತ್ತು ತಾಯಿ ಗೌರಮ್ಮನವರು. ಅವರದ್ದು ಜವಳಿ ವಾಣಿಜ್ಯ ವಹಿವಾಟಿನ ಕುಟುಂಬ. ಹೆಣ್ಣು ಮಕ್ಕಳು ಗಂಡು ಮಕ್ಕಳು ಎಂಬ ಭೇದವಿಲ್ಲದೆ ಸಂಜೆಯ ಒಳಗೆ ಮನೆ ಸೇರಬೇಕು ಎಂಬಂತಹ ಕಟ್ಟುಪಾಡಿನ ವಾತಾವರಣವಿದ್ದ ಸುಮಾರು ೪೦ ಜನರಿದ್ದ ಸಂಪ್ರದಾಯಸ್ತ ಅವಿಭಕ್ತ ಕುಟುಂಬ ಅವರದ್ದು. ಮೂಲತ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಲೋಕನಾಥರು ಕುಟುಂಬದ ವ್ಯಾಪಾರಕ್ಕೆ ಆಸರೆಯಾಗಿರಲು ಓದು ಬಿಟ್ಟರು. ಮನೆಯಲ್ಲಿದ್ದ ವೇಳೆಯಲ್ಲಿ ಸಂಗೀತದ ಮೇಲಿನ ಆಸೆಯಿಂದ ಸಂಗೀತವನ್ನು ಸುಮ್ಮನೆ ಗುನುಗುತ್ತಿದ್ದರು. ತಬಲಾ ಕಲಿಯಬೆಕೆಂಬ ಆಸೆಗೆ ತಬಲಾ ತಂದಿಟ್ಟುಕೊಂಡಾಗ ಮನೆಯ ವಾತಾವರಣ ಅದಕ್ಕೆ ಸರಿಹೋಗುವುದಿಲ್ಲ ಎಂದು ಅದನ್ನು ಕೈಬಿಟ್ಟರು.
ರಂಗಭೂಮಿ
ಬದಲಾಯಿಸಿವ್ಯಾಯಾಮ ಕಲಿಯಲು ಪ್ರಖ್ಯಾತ ಬರಹಗಾರ ಹಾಗೂ ಅಂಗಸೌಷ್ಟವದ ಮೇರು ಆಚಾರ್ಯರಾದ ಕೆ.ವಿ. ಅಯ್ಯರ್ ಸಂಪರ್ಕಕ್ಕೆ ಬಂದ ಸಂದರ್ಭದಲ್ಲಿ ಕೈಲಾಸಂ ಅವರಿಂದಾಗಿ ನಾಟಕರಂಗಕ್ಕೆ ಪ್ರವೇಶ ಮಾಡುವಂತಾಯಿತು. ಮುಂದೆ ೧೯೫೨ರಲ್ಲಿ 'ರವಿ ಕಲಾವಿದರು' ಸಂಸ್ಥೆ ಸೇರಿ ಅಭಿನಯಿಸಿದ ಮೊದಲ ನಾಟಕ ‘ಬಂಡವಾಳವಿಲ್ಲದ ಬಡಾಯಿ’. ಒಲ್ಲೆನೆಂದರೂ ಬಿಡದೆ ಮತ್ತೊಮ್ಮೆ ಬಣ್ಣ ಹಚ್ಚಿದ್ದು ದಾಶರಥಿ ದೀಕ್ಷಿತರ ‘ಅಳಿಯ ದೇವರು’ ನಾಟಕ. ಹೀಗೆ ಸಂಪ್ರದಾಯಸ್ಥ ಕುಟುಂಬದ ವಿರೋಧದ ನಡುವೆ ರಂಗಭೂಮಿ ಪ್ರವೇಶ ಮಾಡಿದ ಲೋಕನಾಥರು ರಕ್ತಾಕ್ಷಿ, ವಿಗಡವಿಕ್ರಮರಾಯ, ಬಿರುದಂತೆಂಬರ ಗಂಡ, ಬಹದ್ದೂರ್ ಗಂಡು, ಬಿಡುಗಡೆ, ಚಂದ್ರಹಾಸ, ಮನವೆಂಬ ಮರ್ಕಟ ನಾಟಕಗಳಲ್ಲಿ ಪ್ರಮುಖ ಪಾತ್ರ ವಹಿಸಿ ಅಪಾರ ಖ್ಯಾತಿ ಗಳಿಸಿದರು. ಮರಾಠಿ ನಾಟಕಗಳ ಅನುವಾದವಾದ ‘ತನುವು ನಿನ್ನದೆ ಮನವು ನಿನ್ನದೆ (ನೂರಾರು ಪ್ರದರ್ಶನ ಕಂಡ ನಾಟಕ)’, ‘ನಾನೇನು ಹೇಳಬೇಕು’, ‘ಹಂಚುಬೆಳದಿಂಗಳು’ ಮುಂತಾದ ನಾಟಕಗಳನ್ನು ನಿರ್ದೇಶಿಸಿದರು. ಬಿ.ವಿ. ಕಾರಂತರ ನಿರ್ದೇಶನದ ಗೋಸ್ಟ್, ಈಡಿಪಸ್, ನಾಗೇಶರ ನಿರ್ದೇಶನದ ನಾಟಕಗಳು, ಸಮುದಾಯದ ಪ್ರಸನ್ನರ ತಾಯಿ, ಗೆಲಿಲಿಯೋ ಮುಂತಾದವು ಅವರಿಗೆ ಮತ್ತಷ್ಟು ಖ್ಯಾತಿ ತಂದುಕೊಟ್ಟವು. ಕಾಲೇಜಿನ ಪಠ್ಯ ಪುಸ್ತಕವಾಗಿದ್ದದ ೨೭೨ ಪುಟಗಳ ಗೆಲಿಲಿಯೋ ನಾಟಕದಲ್ಲಿ ಪ್ರಾರಂಭದಿಂದ ಕೊನೆಯ ದೃಶ್ಯದವರೆಗೂ ಗೆಲಿಲಿಯೋ ಪಾತ್ರದಾರಿ ಆದ ಲೋಕನಾಥರು ರಂಗದ ಮೇಲಿರಬೇಕಿತ್ತು. ಸಂಭಾಷಣೆಗಳನ್ನು ಎಲ್ಲಿಯೂ ತಪ್ಪದೆ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದರು. ನಾಟಕ ಯಶಸ್ವಿಯಾಯಿತು. ಈಗಲೂ “ಅದು ನನ್ನ ಬದುಕಿನ ಅವಿಸ್ಮರಣಿಯ ಕ್ಷಣ” ಎನ್ನುತ್ತಾರೆ ಲೋಕನಾಥ್.
ಚಲನಚಿತ್ರರಂಗ
ಬದಲಾಯಿಸಿ‘ಸಂಸ್ಕಾರ’ದ ಮೂಲಕ ಚಿತ್ರರಂಗ ಪ್ರವೇಶಿಸಿದರಾದರೂ, ‘ಗೆಜ್ಜೆಪೂಜೆ’ ಅವರ ಮೊದಲು ಬಿಡುಗಡೆಯಾದ ಚಿತ್ರ. ಮುಂದೆ ಬಂಗಾರದ ಮನುಷ್ಯ, ದೂರದ ಬೆಟ್ಟ, ಭೂತಯ್ಯನ ಮಗ ಅಯ್ಯ, ಶರಪಂಜರ, ನಾಗರಹಾವು, ಹೇಮಾವತಿ, ಬಂಗಾರದ ಪಂಜರ, ಹೃದಯ ಸಂಗಮ, ಕೃಷ್ಣ ರುಕ್ಮಿಣಿ ಸತ್ಯಭಾಮ, ಭಾಗ್ಯಜ್ಯೋತಿ, ಕೂಡಿ ಬಾಳೋಣ, ಮಿಂಚಿನ ಓಟ, ಹೊಸ ನೀರು, ಮನೆ ಮನೆ ಕಥೆ, ಒಲವಿನ ಆಸರೆ ಹೀಗೆ ಅವರು ನಟಿಸಿದ ಚಿತ್ರಗಳ ಸಂಖ್ಯೆ ಸುಮಾರು 650ರ ಸಮೀಪದ್ದು. ನಾಗರಹಾವು ಚಿತ್ರದಲ್ಲಿ ರಾಮಾಚಾರಿ ಕಾಪಿ ಹೊಡೆದಾಗ ಆತನನ್ನು ಅವಮಾನಿಸಿದ್ದಕ್ಕಾಗಿ, ಆತನಿಂದ ಲೈಟು ಕಂಬಕ್ಕೆ ಕಟ್ಟಲ್ಪಟ್ಟ ಪ್ರಿನ್ಸಿಪಾಲ್ ಶ್ಯಾಮರಾಯರಾಗಿ, ಬೂತಯ್ಯನ ಮಗ ಅಯ್ಯು ಚಿತ್ರದಲ್ಲಿ ಚಪ್ಪಲಿ ಹೊಲೆಯುವ ಮಾಚನಾಗಿ; ಅದರಲ್ಲೂ ಬೂತಯ್ಯನ ಮನೆ ಉಪ್ಪಿನಕಾಯಿ ಜಾಡಿ ಕಾಲಿ ಮಾಡುವ ಅವರ ಅಭಿನಯ ಕನ್ನಡ ಚಲನಚಿತ್ರರಂಗ ಇರುವವರೆಗೂ ಅಜರಾಮರ. ಮಿಂಚಿನ ಓಟ, ಕಾಕನ ಕೋಟೆ, ಕಾಡು ಬೆಳದಿಂಗಳು ಮುಂತಾದ ಕಲಾತ್ಮಕ ಚಿತ್ರಗಳಲ್ಲಿನ ನಿರ್ವಹಣೆಗೆ, ಒಲವಿನ ಆಸರೆ, ಮನೆ ಮನೆ ಕಥೆ, ಹೌಸ್ ಫುಲ್ ಅಂತಹ ಅಸಂಖ್ಯಾತ ಪಾತ್ರಗಳಿಗಾಗಿ ಅವರ ಬಗೆಗಿನ ಪ್ರಶಂಸೆಗಳನ್ನು ಪತ್ರಿಕೆಗಳಿಂದಲೂ ಜನಸಾಮಾನ್ಯರಿಂದಲೂ ಕಾಣುತ್ತಲೇ ಇದ್ದೇವೆ.
ಪ್ರಶಸ್ತಿಗಳು
ಬದಲಾಯಿಸಿ"ಮಿಂಚಿನ ಓಟ ಚಿತ್ರದಲ್ಲಿ ಪೋಷಕ ಪಾತ್ರಕ್ಕೆ ಅವರಿಗೆ ಪ್ರಶಸ್ತಿ ಬಂದದ್ದು ಬಿಟ್ಟರೆ ಉಳಿದಂತೆ ನನಗೂ ಪ್ರಶಸ್ತಿಗಳಿಗೂ ಸಂಬಂಧವೇ ಇಲ್ಲ ಎನ್ನುವಂತಾಗಿದೆ” ಎನ್ನುತ್ತಾರೆ ಲೋಕನಾಥ್. ಆದರೆ ಅವರಿಗೆ ಜನರ ಪ್ರೀತಿ ಅಪಾರವಾಗಿ ದೊರೆತ ತೃಪ್ತಿಯಿದೆ. “ಪ್ರತಿಯೊಬ್ಬ ಕಲಾವಿದನನ್ನೂ ಅವನು ಮಾಡಿದ ಪಾತ್ರಗಳ ಮೂಲಕ ಅವನನ್ನು ಪ್ರಶಂಸಿಸಿದರೆ ಅವನಿಗೆ ಅದಕ್ಕಿಂತ ಬೇರೆ ಪ್ರಶಸ್ತಿ ಬೇಕಿಲ್ಲ. ನನಗೂ ಅಂತಹ ಅನುಭವ ಭೂತಯ್ಯನ ಮಗ ಅಯ್ಯು ಚಿತ್ರದಲ್ಲಾಯಿತು” ಎನ್ನುತ್ತಾರೆ ಲೋಕನಾಥ್. “ಆ ಚಿತ್ರ ಯಶಸ್ವಿಯಾದ ನಂತರ ಮಂಡ್ಯದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅಲ್ಲಿನ ಮಹಿಳೆಯೊಬ್ಬರು ಉಪ್ಪಿನಕಾಯಿ ಜಾಡಿಯನ್ನು ತಂದು ನನ್ನ ಮುಂದಿಟ್ಟು ಎಷ್ಟು ಬೇಕಾದರೂ ತಿನ್ನು. ಆದರೆ ಕದಿಯಬೇಡ ಎಂದು ಹೇಳಿದಳು.ಬೀದರಿನಲ್ಲಿ ಒಬ್ಬಳು ಮಹಿಳೆ ನನಗೆ ರೊಟ್ಟಿ ತಿನ್ನಿಸಿದರು. ಹೀಗೆ ನನ್ನ ಪಾತ್ರದ ಜನಪ್ರಿಯತೆ ನನಗೆ ತಿಳಿಯಿತು” ಎನ್ನುತ್ತಾರೆ ಲೋಕನಾಥ್.
ಕಿರುತೆರೆಯಲ್ಲಿ
ಬದಲಾಯಿಸಿಲೋಕನಾಥ್ ಅವರು ಕಿರುತೆರೆಯಲ್ಲೂ ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅನೀಶ್, ನಿರೀಕ್ಷೆ ಮುಂತಾದ ಧಾರವಾಹಿಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ. ಶಾಂಡಿಲ್ಯ ಕ್ರಿಯೇಷನ್ಸ್ ಎಂಬ ಹೆಸರಿನಲ್ಲಿ ಸ್ಟುಡಿಯೋ ತೆರೆದರು. ಆದರೆ ಜನ ಚೆನ್ನಾಗಿ ಉಪಯೋಗಿಸಿಕೊಂಡು ದುಡ್ಡು ಕೊಡಬೇಕು ಎಂಬುದನ್ನು ಜಾಣತನದಿಂದ ಮರೆತಾಗ ಸ್ಟುಡಿಯೋವನ್ನು ಮುಚ್ಚಿದರು.
ನಿಧನ
ಬದಲಾಯಿಸಿಲೋಕನಾಥ್ (೯೧) ೩೦ಡಿಸೆಂಬರ್೨೦೧೮ರ ರಾತ್ರಿ ೧೨:೧೫ಕ್ಕೆ(೩೧ ಡಿಸೆಂಬರ್) ಬೆಂಗಳೂರಿನಲ್ಲಿ ನಿಧನರಾದರು.[೨]
ಉಲ್ಲೇಖಗಳು
ಬದಲಾಯಿಸಿ- ↑ ಖ್ಯಾತ ಹಿರಿಯ ನಟ 'ಅಂಕಲ್' ಲೋಕನಾಥ್ ವಿಧಿವಶ, ವಯೋ ಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಲೋಕನಾಥ್ Archived 2018-12-31 ವೇಬ್ಯಾಕ್ ಮೆಷಿನ್ ನಲ್ಲಿ., ಕನ್ನಡಪ್ರಭ, 31 Dec 2018
- ↑ 'ಲೋಕನಾಥ್ ಅಂಕಲ್ ಇನ್ನಿಲ್ಲ' Archived 2020-09-20 ವೇಬ್ಯಾಕ್ ಮೆಷಿನ್ ನಲ್ಲಿ.,ಚಿತ್ರಲೋಕ.ಕಾಂ, ೩೧ಡಿಸೆಂಬರ್೨೦೧೮