ರೋಟಿಫೆರ ಸಿಹಿನೀರಿನ ಕೊಳ, ಹಳ್ಳ ಹಾಗೂ ಚರಂಡಿಗಳಲ್ಲಿ ವಾಸಿಸುವ, ಈಸಲು ಅನುಕೂಲವೆಸಗುವಂಥ ಚಕ್ರಚಲನೆಯ ಅಂಗವುಳ್ಳ ಹಲವು ಪ್ರಭೇದಗಳನ್ನೊಳಗೊಂಡ ಸೂಕ್ಷ್ಮಪ್ರಾಣಿಗಳ ಗುಂಪು. ಇದನ್ನೊಂದು ಪ್ರತ್ಯೇಕ ವರ್ಗ ಇಲ್ಲವೆ ವಂಶವೆಂದೂ ಗುರುತಿಸಲಾಗಿದೆ. ಚಕ್ರಪ್ರಾಣಿಗಳು (ಹ್ವೀಲ್ ಅನಿಮಲ್ಸ್) ಎಂಬುದು ಇವುಗಳ ಸಾಮಾನ್ಯ ಹೆಸರು.[] ಬಹುಕಣಜೀವಿಗಳ ಪೈಕಿ ಇವು ಅತಿಸೂಕ್ಷ್ಮವಾದವು. ಅತ್ಯಂತ ಚಿಕ್ಕ ಪ್ರಭೇದದ ಉದ್ದ ಕೆಲವೇ ಮೈಕ್ರಾನುಗಳಷ್ಟಿದ್ದರೆ ದೈತ್ಯಪ್ರಭೇದದ ಉದ್ದ ಕೇವಲ 1 ಮಿಮೀ ಮಾತ್ರ. ಜೀವಿಗಳು ಎಷ್ಟು ಚಿಕ್ಕವೊ ಹಾಗೆಯೇ ವರ್ಗವೂ ಕೂಡ. ಇಡೀ ವರ್ಗದಲ್ಲಿ ಒಂದೇ ಒಂದು ಉಪವರ್ಗ, 4 ಸರಣಿಗಳು, 15 ಗಣಗಳು, ಸು. 35 ಪ್ರಭೇದಗಳು ಮಾತ್ರ ಇವೆ.

ರೋಟಿಫೆರ
Temporal range: Eocene–Recent Possible Devonian and Permian records
ಡೆಲಾಯ್ಡ್ ರೋಟಿಫರ್ (ಡೆಲಾಯ್ಡೀ)
ಪಲ್ಚ್ರೀಟಿಯಾ ಡಾರ್ಸಿಕಾರ್ನೂಟಾ (ಮೋನೊಗೊನೊಂಟಾ)
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ಉಪಸಾಮ್ರಾಜ್ಯ: ಯೂಮೆಟಜ಼ೋವಾ
ಏಕಮೂಲ ವರ್ಗ: ಪ್ಯಾರಾಹೊಕ್ಸೋಜ಼ೋವಾ
ಏಕಮೂಲ ವರ್ಗ: ಬೈಲ್ಯಾಟೇರಿಯಾ
ಏಕಮೂಲ ವರ್ಗ: ನೆಫ಼್ರೊಜ಼ೋವಾ
(ಶ್ರೇಣಿಯಿಲ್ಲದ್ದು): ಪ್ರೋಟೊಸ್ಟೋಮಿಯಾ
(ಶ್ರೇಣಿಯಿಲ್ಲದ್ದು): ಸ್ಪೈರೇಲಿಯಾ
ಏಕಮೂಲ ವರ್ಗ: ನ್ಯಾತಿಫ಼ೆರಾ
ವಿಭಾಗ: ರೋಟಿಫೆರ
Cuvier, 1798
ವರ್ಗಗಳು ಮತ್ತು ಇತರ ಉಪಗುಂಪುಗಳು
  • ಯೂರೊಟಾಟೋರಿಯಾ
    • ಡೆಲಾಯ್ಡೀ
    • ಮೋನೊಗೊನೊಂಟಾ
  • ಪ್ಯಾರಾರೊಟೇಟೋರಿಯಾ
    • ಸೀಸೋನಿಡೀ

ದೇಹರಚನೆ

ಬದಲಾಯಿಸಿ

ರೋಟಿಫೆರ ವರ್ಗಕ್ಕೆ ಸೇರಿರುವ ಪ್ರಾಣಿಗಳು ವಿಶಿಷ್ಟ ಬಗೆಯವು. ಇತರ ಪ್ರಾಣಿಗಳಲ್ಲಿ ಸಾಮಾನ್ಯ ಎನಿಸುವಂಥ ತಲೆ ಈ ಪ್ರಾಣಿಗಳಿಗಿಲ್ಲ. ಶರೀರದ ಮುಂಭಾಗದಲ್ಲಿ ಕಿರೀಟದಂತೆ ವೃತ್ತಾಕಾರದಲ್ಲಿ ಅಳವಡಿಕೆಗೊಂಡಿರುವ ಕಶಾಂಗಗಳ (ಸಿಲಿಯ) ಗುಂಪು ಇದೆ. ಇದನ್ನು ಚಕ್ರಾಂಗ ಅಥವಾ ಲೋಪೊಫೊರ್ ಎಂದು ಕರೆಯವುದಿದೆ. ಬಾಯಿ ಈ ಚಕ್ರಾಂಗದ ಕೆಳಭಾಗದಲ್ಲಿದೆ. ಇನ್ನುಳಿದ ದೇಹದ ಭಾಗವನ್ನು ಹೊರಗಿನಿಂದ ಗಟ್ಟಿ ಕವಚದಂತಿರುವ ಚರ್ಮದ ಹೊರಪೊರೆ ಆವರಿಸಿದೆ. ದೇಹದ ಹಿಂಭಾಗ ಮೊನಚಾಗಿದ್ದು ಕೊನೆಯಲ್ಲಿ ಅಂಟಿಕೊಳ್ಳುವ ಅಂಗವಿದೆ.

ಏಕಕಣಜೀವಿಗಳು, ಪಾಚಿ ಹಾಗೂ ಇನ್ನಿತರ ಸೂಕ್ಷ್ಮಜೀವಿಗಳೇ ರೋಟಿಫೆರ್‌ಗಳ ಆಹಾರ. ಮುಂಭಾಗದಲ್ಲಿರುವ ಕಶಾಂಗಗಳ ಬಡಿತದಿಂದ ಉಂಟಾಗುವ ನೀರಿನ ಸುಳಿಯಲ್ಲಿ ಸಿಕ್ಕ ಸೂಕ್ಷ್ಮಜೀವಿಗಳು ಚಕ್ರಾಂಗದ ನಡುವೆ ಹಾಯುವಾಗ ಕಶಾಂಗಗಳು ಅವನ್ನು ಬಾಯೊಳಗೆ ತಳ್ಳುತ್ತವೆ. ಕೆಲವು ಪ್ರಭೇದಗಳಲ್ಲಿ ಹೀರುಬಾಯಿ ಇದ್ದು ಅದರ ಮೂಲಕ ಆಹಾರ ಅನ್ನನಾಳವನ್ನು ಪ್ರವೇಶಿಸುತ್ತದೆ. ಕೆಲವು ರೋಟಿಫೆರ್‌ಗಳು ವಾತಾವರಣದಲ್ಲಿ ಪ್ರತಿಕೂಲ ಸ್ಥಿತಿಯುಂಟಾದಾಗ ಸುಪ್ತಾವಸ್ಥೆ ಅಥವಾ ಶಿಶಿರನಿದ್ರಾವಶವಾಗುತ್ತವೆ. ಮತ್ತೆ ಕೆಲವು ಪ್ರಭೇದಗಳು ಶರೀರದ ನೀರನ್ನು ಕಳೆದುಕೊಂಡು ಒಣಗಿ ಕಡ್ಡಿಯಂತಾಗುತ್ತವೆ. ಪುನಃ ಅವಕ್ಕೆ ನೀರು ದೊರೆತಾಗ ನೀರನ್ನು ಹೀರಿಕೊಂಡು  ಕ್ರಿಯಾಶೀಲವಾಗುತ್ತವೆ.

ಪ್ರಭೇದಗಳು

ಬದಲಾಯಿಸಿ

ರೋಟಿಫೆರದ ಬಹುತೇಕ ಪ್ರಭೇದಗಳು ಸ್ವತಂತ್ರಜೀವಿಗಳು. ನೀರಿನಲ್ಲಿ ಸುಲಭವಾಗಿ ಈಸಬಲ್ಲವು. ಕೆಲವು ಮಾತ್ರ ತೇಲುತ್ತವೆ. ಇನ್ನುಳಿದ ಕೆಲವು ತಳಭಾಗಕ್ಕೆ ಅಂಟಿಕೊಂಡು ನಿವೃತ್ತಜೀವನ ನಡೆಸುತ್ತವೆ. ಇನ್ನೂ ಕೆಲವು ಪ್ರಭೇದಗಳು ಜಿಗಣೆಗಳಂತೆ ಕುಣಿಕೆ ಹಾಕಿ ಜಿಗಿಯುತ್ತವೆ. ಹೈಡಾಟಿನ, ಬ್ರಾಖಿಯೋನಸ್, ರೋಟಿಫೆರ್, ಅಸ್ಫ್ಲಾಂಕ ಮುಂತಾದವು ಈ ವರ್ಗವು ಮುಖ್ಯಪ್ರಭೇದಗಳು.

ಉಲ್ಲೇಖಗಳು

ಬದಲಾಯಿಸಿ
  1. Howey, Richard L. (1999). "Welcome to the Wonderfully Weird World of Rotifers". Micscape Magazine. Retrieved 2010-02-19.

ಹೊರಗಿನ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ರೋಟಿಫೆರ&oldid=1244991" ಇಂದ ಪಡೆಯಲ್ಪಟ್ಟಿದೆ