ರೇಡಿಯೊ ಅಲ್ಟಿಮೀಟರ್‌

ರೇಡಿಯೋ ಎತ್ತರ ಮಾಪಕ (Radio Altimeter) ಅಥವಾ ರಾಡಾರ್ ಎತ್ತರ ಮಾಪಕ (Radar Altimeter) ಎಂಬುದು ವಿಮಾನಗಳಲ್ಲಿ ಅಳವಡಿಸಲಾಗುವ ಒಂದು ಉಪಕರಣವಾಗಿದೆ. ಈ ಉಪಕರಣವು ವಿಮಾನವು ಹಾರಾಡುವ ಸ್ಥಳದಲ್ಲಿ ನೆಲದಿಂದ ನೇರವಾಗಿ ಎಷ್ಟು ಎತ್ತರದಲ್ಲಿದೆ ಎಂಬುದನ್ನು ಅಳೆದು ವಿಮಾನ ಚಾಲಕರಿಗೆ ತೋರಿಸುತ್ತದೆ. ಎತ್ತರ ಸೂಚಿಸುವ ಇನ್ನೊಂದು ಉಪಕರಣವೆಂದರೆ ವಾಯುಭಾರ ಮಾಪಕ. ಇದು ವಿಮಾನದ ಎತ್ತರವನ್ನು ಸುತ್ತಲಿನ ವಾಯು ಒತ್ತಡದಿಂದ ಅಳೆದು ಒಂದು ನಿರ್ದಿಷ್ಟ ಉಲ್ಲೇಖ ಅಳೆತೆಯೊಂದಿಗೆ ಹೋಲಿಸಿ ತೋರಿಸುತ್ತದೆ (ಉದಾ: ಸಮುದ್ರ ಮಟ್ಟದಿಂದ ಇಂತಿಷ್ಟು ಎತ್ತರ). ರೇಡಿಯೋ ಎತ್ತರ ಮಾಪಕಗಳು ಸಾಮಾನ್ಯವಾಗಿ ವಿಮಾನವು ಕೆಳಮಟ್ಟದಲ್ಲಿ (೫೦೦೦-೨೦೦೦ ಅಡಿಗಳು ಅಥವ ಇನ್ನೂ ಕಡಿಮೆ) ಹಾರಾಡುವಾಗ ಅತಿ ಉಪಯುಕ್ತವಾಗಿರುತ್ತವೆ. ಒಂದೇ ವಿಮಾನದಲ್ಲಿ ಎರಡು ಅಥವಾ ಮೂರು ರೇಡಿಯೋ ಎತ್ತರ ಮಾಪಕ ವ್ಯವಸ್ಥೆಗಳನ್ನು ಅಳವಡಿಸಬಹುದಾಗಿದೆ. ಈ ಉಪಕರಣವನ್ನು ನಾಗರಿಕ ಮತ್ತು ಸೈನಿಕ ವಿಮಾನಗಳಲ್ಲಿ ಬಳಸಲಾಗುತ್ತದೆ. ಈ ವ್ಯವಸ್ಥೆಯು ೪೨೦೦ ರಿಂದ ೪೪೦೦ ಮೆಗಾಹರ್ಟ್ಸ್ ಕಂಪನಾಂಕಗಳಲ್ಲಿ ಕಾರ್ಯವೆಸಗುತ್ತದೆ.

ಕಾರ್ಯತತ್ವ

ಬದಲಾಯಿಸಿ

ಹೆಸರೇ ಸೂಚಿಸುವಂತೆ ಈ ಉಪಕರಣವು ರೇಡಿಯೋ ಅಲೆಗಳನ್ನು (ವಿದ್ಯುನ್ಮಾನ ಅಲೆಗಳು) ಎತ್ತರ ಮಾಪನಕ್ಕಾಗಿ ಬಳಸುತ್ತದೆ. ವಿದ್ಯುನ್ಮಾನ ಅಲೆಗಳನ್ನು ನೆಲದತ್ತ ಬಿತ್ತರಿಸಿದಾಗ ಈ ಅಲೆಗಳು ನೆಲಕ್ಕೆ ಬಡಿದು ಹಿಂದಿರುಗುತ್ತವೆ. ಹೀಗೆ ನೆಲಕ್ಕೆ ಬಡಿದು ಉಪಕರಣಕ್ಕೆ ಹಿಂತಿರುಗಲು ತಗುಲಿದ ಸಮಯದ ಸರಾಸರಿಯನ್ನು ಪರಿಗಣಿಸಲಾಗುತ್ತದೆ. ವಿದ್ಯುನ್ಮಾನ ಅಲೆಗಳ ವೇಗವು ೧೮೬,೦೦೦ ಮೈಲಿ/ಪ್ರತಿ ಸೆಕುಂಡ್ ಎಂದು ತಿಳಿದಿರುವುದರಿಂದ ವೇಗ X ಸಮಯ = ದೂರ ಎಂಬ ಸೂತ್ರವನ್ನು ಬಳಸಿ ವಿಮಾನವು ನೆಲದಿಂದ ಎಷ್ಟು ಎತ್ತರದಲ್ಲಿದೆ ಎಂದು ಅಳೆಯಬಹುದು. ಬಿತ್ತರಿಕೆಯ ಸಮಯವನ್ನು ಗುರುತಿಸಲು ವಿದ್ಯುನ್ಮಾನ ಅಲೆಗಳನ್ನು ವಿಶೇಷ ಆಕಾರದಲ್ಲಿ ರೂಪಿಸಲಾಗುತ್ತದೆ. ಮೇಲೆ ಹೇಳಿದ ಕಾರ್ಯತತ್ವಕ್ಕೆ ಬದಲಿಗೆ ಬಳಸಲಾಗುವ ಇನ್ನೊಂದು ತಂತ್ರವು ಡಾಪ್ಲರ್ ಪ್ರಭಾವವನ್ನು (Doppler Effect) ಬಳಸಿಕೊಳ್ಳುತ್ತದೆ. ಬಿತ್ತರಿಸಿದ ಅಲೆಯು ಹಿಂತಿರುಗಿದಾಗ ಅದರ ತರಂಗದಲ್ಲಿ ವ್ಯತ್ಯಾಸ ಉಂಟಾದಂತೆ ಭಾಸವಾಗುತ್ತದೆ. ಅಲೆಯು ಹೆಚ್ಚು ದೂರ ಕ್ರಮಿಸಿದಂತೆ ವ್ಯತ್ಯಾಸವೂ ಹೆಚ್ಚುತ್ತದೆ. ಅಲೆಯ ಮೂಲ ತರಂಗ ಹಾಗೂ ದೂರ ಕ್ರಮಿಸಿದ ಅಲೆಯ ತರಂಗದಲ್ಲಿ ಉಂಟಾದಂತೆ ಭಾಸವಾಗುವ ವ್ಯತ್ಯಾಸವನ್ನು ಅಳೆಯುವುದರಿಂದ ಅಲೆಯು ಕ್ರಮಿಸಿದ ದೂರವನ್ನು ಅರಿಯಬಹುದು. ಈ ಕಾರ್ಯತತ್ವವನ್ನು ಬಳಸುವ ರೇಡಿಯೋ ಎತ್ತರ ಮಾಪಕಗಳು ಹೆಚ್ಚು ನಿಖರತೆಯುಳ್ಳವವಾಗಿರುತ್ತವೆ.

ವಿವರಣೆ

ಬದಲಾಯಿಸಿ

ರೇಡಿಯೋ ಎತ್ತರ ಮಾಪಕ ವ್ಯವಸ್ಥೆಯನ್ನು ಸಪೇಕ್ಷಕ-ನಿಷ್ಪೇಕ್ಷಕ, ದರ್ಶಕ ಹಾಗೂ ಏರಿಯಲ್ಗಳು ಎಂಬ ಮೂರು ಮುಖ್ಯ ಉಪಾಂಗಗಳನ್ನಾಗಿ ವಿಂಗಡಿಸಿ ವಿಮಾನದಲ್ಲಿ ಅಳವಡಿಸಲಾಗುತ್ತದೆ. ಇವಲ್ಲದೆ ಈ ಉಪಾಂಗಗಳನ್ನು ಜೋಡಿಸಲು ಬಳಸುವ ತಂತಿಗಳು, ಸ್ವಿಚ್ಚುಗಳು ಮುಂತಾದ ಸಣ್ಣಪುಟ್ಟ ಭಾಗಗಳೂ ಇರುತ್ತವೆ.

ಪ್ರೇಷಕ-ಅಭಿಗ್ರಾಹಕ

ಬದಲಾಯಿಸಿ

ಇದು ವ್ಯವಸ್ಥೆಯ ಪ್ರಮುಖ ಉಪಾಂಗವಾಗಿದೆ. ಆಂತರಿಕವಾಗಿ ಪ್ರೇಷಕ ಮತ್ತು ಅಭಿಗ್ರಾಹಕ (Transmitter-Receiver) ಎಂದು ಎರಡು ಭಾಗಗಳಿರುತ್ತವೆ. ಪ್ರೇಷಕವು ವಿದ್ಯುನ್ಮಾನ ಅಲೆಗಳನ್ನು ಉತ್ಪಾದಿಸಿ ಬೇಕಾದ ತರಂಗ, ರೂಪ ಹಾಗೂ ಬಲಕ್ಕೆ ಪರಿವರ್ತಿಸುತ್ತದೆ. ಏರಿಯಲ್ ಮೂಲಕ ಅಲೆಯನ್ನು ಬಿತ್ತರಿಸುತ್ತದೆ. ನೆಲಕ್ಕೆ ಬಡಿದು ಹಿಂತಿರುಗುವ ಅಲೆಗಳನ್ನು ಅಭಿಗ್ರಾಹಕವು ಏರಿಯಲ್ ಮೂಲಕ ಸ್ವೀಕರಿಸುತ್ತದೆ.

 
ರೇಡಿಯೋ ಎತ್ತರ ಮಾಪಕ ವ್ಯವಸ್ಥೆ

ಅನಂತರ ನಡೆಯುವ ಸಂಸ್ಕರಣ ಕಾರ್ಯದಿಂದ ವಿಮಾನವು ನೆಲದಿಂದ ಹಾರಾಡುತ್ತಿರುವ ಎತ್ತರವನ್ನು ನಿರ್ಧರಿಸಲಾಗುತ್ತದೆ. ತಾನು ಸಂಸ್ಕರಿಸಿದ ಫಲಿತಾಂಶವನ್ನು ವಿದ್ಯುತ್ ಸಂಕೇತಗಳ ರೂಪದಲ್ಲಿ ದರ್ಶಕಕ್ಕೆ ಕಳುಹಿಸುತ್ತದೆ. ಅವಶ್ಯವಿದ್ದಾಗ ರೇಡಿಯೋ ಎತ್ತರ ಮಾಪಕ ವ್ಯವಸ್ಥೆಯ ಆರೋಗ್ಯವನ್ನು ”’ಸ್ವಪರೀಕ್ಷೆ”’ಯ ಮೂಲಕ ಪರೀಕ್ಷಿಸಿ ಕಾರ್ಯಶೀಲತೆಯ ಸ್ಥಿತಿಯನ್ನು ಚಾಲಕನಿಗೆ ದರ್ಶಕದ ಮೂಲಕ ಪ್ರದರ್ಶಿಸುತ್ತದೆ. ವಿಮಾನದ ಸ್ವಯಂಚಾಲಕ ವ್ಯವಸ್ಥೆ, ಜಿಪಿಡಬ್ಲ್ಯುಎಸ್ ಮುಂತಾದ ವ್ಯವಸ್ಥೆಗಳೊಂದಿಗೆ ಪ್ರತಿಸ್ಪಂದಿಸಿ ಈ ವ್ಯವಸ್ಥೆಗಳಿಗೆ ಬೇಕಾದ ಮಾಹಿತಿಗಳನ್ನು ರವಾನಿಸುತ್ತದೆ.

 
ದರ್ಶಕ

ದರ್ಶಕವು ಮಾನವ-ಪ್ರತಿಸ್ಪಂದಿ ಉಪಕರಣವಾಗಿದ್ದು (Human Interface Device) ಇದನ್ನು ವಿಮಾನ ಚಾಲಕರಿಗೆ ಸುಲಭವಾಗಿ ತೋರುವಂತೆ ಕಾಕ್‌ಪಿಟ್‌ನಲ್ಲಿ ಅಳವಡಿಸಿರಲಾಗುತ್ತದೆ. ಪ್ರೇಷಕ - ಅಭಿಗ್ರಾಹಕವು ಕಳುಹಿಸಿದ ಫಲಿತಾಂಶವನ್ನು ದರ್ಶಕವು ಚಾಲಕರಿಗೆ ಅರ್ಥವಾಗುವಂತೆ ರೂಪಾಂತರಿಸಿ ಪ್ರದರ್ಶಿಸುತ್ತದೆ. ವ್ಯವಸ್ಥೆಯ ನಿಯಂತ್ರಣಕ್ಕೆ ಅವಶ್ಯವಿರುವ ಒತ್ತುಗುಂಡಿಗಳನ್ನು ಹೊಂದಿರುತ್ತದೆ.

ಏರಿಯಲ್

ಬದಲಾಯಿಸಿ

ರೇಡಿಯೋ ಎತ್ತರ ಮಾಪಕ ವ್ಯವಸ್ಥೆಯಲ್ಲಿ ಎರಡು ಏರಿಯಲ್‌ಗಳನ್ನು ಬಳಸಲಾಗುತ್ತದೆ. ಒಂದು ಏರಿಯಲ್ ಪ್ರೇಷಕವು ಕಳುಹಿಸುವ ವಿದ್ಯುನ್ಮಾನ ಅಲೆಗಳನ್ನು ನೆಲದತ್ತ ಬಿತ್ತರಿಸುತ್ತದೆ. ಹಿಂತಿರುಗುವ ಅಲೆಗಳನ್ನು ಇನ್ನೊಂದು ಏರಿಯಲ್ ಸ್ವೀಕರಿಸಿ ಅಭಿಗ್ರಾಹಕಕ್ಕೆ ಕಳುಹಿಸುತ್ತದೆ. ಏರಿಯಲ್‌ಗಳು ತಂತಿಗಳು ಹಾಗೂ ಸ್ವಿಚ್ಚುಗಳ ಮೂಲಕ ಪ್ರೇಷಕ-ಅಭಿಗ್ರಾಹಕಕ್ಕೆ ಜೋಡಿಸಲ್ಪಟ್ಟಿರುತ್ತವೆ.

ನಾಗರಿಕ ಬಳಕೆ

ಬದಲಾಯಿಸಿ

ಅಂತರ್ರಾಷ್ಟ್ರೀಯ ನಾಗರಿಕ ವೈಮಾನಿಕ ಸಂಘಟನೆಯ (International Civil Aviation Organisation) ಆದೇಶದ ಪ್ರಕಾರ ಎಲ್ಲಾ ನಾಗರಿಕ ವಿಮಾನಗಳು ರೇಡಿಯೋ ಎತ್ತರ ಮಾಪಕವನ್ನು ಹೊಂದಿರಬೇಕು. ಈ ವ್ಯವಸ್ಥೆಯನ್ನು ಹೊಂದಿರದ ವಿಮಾನಗಳು ಹಾರಾಟಕ್ಕೆ ಯೋಗ್ಯವಲ್ಲ (ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ) ಎಂದು ಪರಿಗಣಿಸಲಾಗುತ್ತದೆ ಹಾಗೂ ಅಂತಹ ವಿಮಾನಗಳನ್ನು ಹಾರಾಡಿಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ನಾಗರಿಕ ವಿಮಾನಗಳ ರೇಡಿಯೋ ಎತ್ತರ ಮಾಪಕಗಳು ಸಾಮಾನ್ಯವಾಗಿ ೫೦೦೦, ೨೫೦೦ ಅಥವಾ ೫೦೦ ಅಡಿಗಳಷ್ಟು ಗರಿಷ್ಠ ಮಿತಿಯುಳ್ಳವವಾಗಿರುತ್ತವೆ. ವಿಮಾನ ನಿಲ್ದಾಣವನ್ನು ಸಮೀಪಿಸುವಾಗ ಮತ್ತು ನೆಲಕ್ಕಿಳಿಯುವಾಗ ಈ ವ್ಯವಸ್ಥೆಯನ್ನು ಉಪಯೋಗಿಸಲಾಗುತ್ತದೆ.

ಸೈನಿಕ ಬಳಕೆ

ಬದಲಾಯಿಸಿ

ಸೈನಿಕ ವಿಮಾನಗಳಲ್ಲಿ ಅಳವಡಿಸಲಾಗುವ ರೇಡಿಯೋ ಎತ್ತರ ಮಾಪಕಗಳ ಗರಿಷ್ಠ ಮಿತಿಯು ನಾಗರಿಕ ವಿಮಾನಗಳ ವ್ಯವಸ್ಥೆಗಳಿಗಿಂತ ಅಧಿಕವಾಗಿರುತ್ತದೆ. ಸೈನಿಕ ವಿಮಾನಗಳು ವಿಮಾನ ನಿಲ್ದಾಣವನ್ನು ಸಮೀಪಿಸುವಾಗ ಮತ್ತು ನೆಲಕ್ಕಿಳಿಯುವಾಗಲ್ಲದೆ ಶತ್ರುಗಳ ರಾಡಾರ್‌ಗಳಿಗೆ ಕಾಣದಂತೆ ಅತಿ ಕೆಳಮಟ್ಟದಲ್ಲಿ ಹಾರಾಡುವಾಗ ಈ ವ್ಯವಸ್ಥೆಯನ್ನು ಬಳಸುತ್ತವೆ.

ಆಕರಗಳು

ಬದಲಾಯಿಸಿ

ಏರ್ಕ್ರಾಫ್ಟ್ ರೇಡಿಯೋ ಸಿಸ್ಟಂಸ್ - ಜೇಮ್ಸ್ ಪಾವೆಲ್ಲ್ (Aircraft Radio Systems By James Powell)

ಹೊರಗಿನ ಸಂಪರ್ಕಗಳು

ಬದಲಾಯಿಸಿ
  1. http://www.encyclopedia.com/doc/1E1-X-radioalt.html
  2. http://inventors.about.com/library/inventors/blaltimeter.htm[ಶಾಶ್ವತವಾಗಿ ಮಡಿದ ಕೊಂಡಿ]
  3. http://www.flightsafety.org/alar/alar_bn3-1-altimeter.pdf[ಶಾಶ್ವತವಾಗಿ ಮಡಿದ ಕೊಂಡಿ]
  4. http://www.britannica.com/eb/topic-488862/radio-altimeter Archived 2008-03-15 ವೇಬ್ಯಾಕ್ ಮೆಷಿನ್ ನಲ್ಲಿ.

Vedaprakasha ೧೫:೦೨, ೨೪ ಮಾರ್ಚ್ ೨೦೦೮ (UTC)