ಯೋನೆ ರೋಗವು ಹಸು, ಎಮ್ಮೆಗಳಿಗೆ ತಗಲುವ ಅಂಟುಜಾಡ್ಯ. ಕೆಲವೊಮ್ಮೆ ಕುರಿ, ಮೇಕೆಗಳಿಗೂ ತಗಲುವುದುಂಟು. ಮೈಕೋಬ್ಯಾಕ್ಟೀರಿಯಮ್ ಯೋನೈ ಎಂಬ ಬ್ಯಾಕ್ಟೀರಿಯದಿಂದ ಇದು ಉಂಟಾಗುತ್ತದೆ.[][]

ಪ್ರಾಣಿಯ ಯಾವುದೇ ವಯಸ್ಸಿನಲ್ಲಿ ಈ ರೋಗ ಕಂಡುಬರಬಹುದಾದರೂ ಎರಡರಿಂದ ಆರು ವರ್ಷಗಳ ಎಳೆಯ ದನಗಳಲ್ಲಿ ಬರುವುದು ಸಾಮಾನ್ಯ. ರೋಗಪೀಡಿತ ಪ್ರಾಣಿಗಳು ತತ್‌ಕ್ಷಣವೇ ಸಾಯದಿದ್ದರೂ ಬಹಳ ದಿವಸಗಳ ತನಕ ನರಳುತ್ತಿದ್ದು ಮನುಷ್ಯನಿಗೆ ಯಾವುದೇ ರೀತಿಯಲ್ಲಿ ಉಪಯುಕ್ತವಾಗಿರುವುದಿಲ್ಲ.

ರೋಗಲಕ್ಷಣಗಳು

ಬದಲಾಯಿಸಿ

ರೋಗ ತಗಲಿದ ದನಕರುಗಳು ದಿನೇ ದಿನೇ ಸೊರಗತೊಡಗುತ್ತವೆ. ಮೊದಮೊದಲು ದವಡೆಯ ಕೆಳಭಾಗದಲ್ಲಿ ಬಾವು ಕಾಣಿಸಿಕೊಳ್ಳುತ್ತದೆ. ತರುವಾಯ ಅತಿಸಾರ ಉಂಟಾಗಿ ಬಾವು ಕಡಿಮೆಯಾಗುತ್ತದೆ. ಕರಾವಿನ ದನಗಳಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾಗುತ್ತ ಹೋಗುತ್ತದೆ. ಪ್ರಾಣಿ ಮೇವನ್ನು ಚೆನ್ನಾಗಿ ತಿನ್ನುತ್ತದಾದರೂ ವಿಪರೀತ ಬಾಯಾರಿಕೆಯಿಂದ ಬಳಲುತ್ತದೆ. ಸಗಣಿ ನೀರು ನೀರಾಗಿರುತ್ತದಲ್ಲದೆ ದುರ್ವಾಸನೆ ಮತ್ತು ಬುರುಗಿನಿಂದ ಕೂಡಿರುತ್ತದೆ. ಭೇದಿ ಸತತವಾಗಿರಬಹುದು ಇಲ್ಲವೇ ಬಿಟ್ಟು ಬಿಟ್ಟು ಆಗುತ್ತಿರಬಹುದು. ಗರ್ಭಧರಿಸಿದ ದಿವಸಗಳಲ್ಲಿ ರೋಗಲಕ್ಷಣಗಳು ಕಡಿಮೆಯಾಗುತ್ತ ಆರೋಗ್ಯ ಸುಧಾರಣೆಯಾಗುವಂತೆ ಕಂಡರೂ ಕರು ಹಾಕಿದ ಸ್ವಲ್ಪ ದಿವಸಗಳಲ್ಲೇ ಮತ್ತೆ ತೀವ್ರವಾಗುತ್ತವೆ. ಹೀಗೆ ದನಗಳು ಹಲವಾರು ತಿಂಗಳು ಕಾಲ ನರಳಿ ಕೊನೆಗೆ ದೇಹದಲ್ಲಿ ನಿರ್ದ್ರವತೆ ಉಂಟಾಗಿ ಶಕ್ತಿಗುಂದಿ ಸಾವಿಗೀಡಾಗುವುವು. ಕುರಿ ಮತ್ತು ಮೇಕೆಗಳಲ್ಲಿ ಸೊರಗುವಿಕೆ, ಉಣ್ಣೆ ಉದುರಿ ಹೋಗುವುದು, ಹಿಕ್ಕೆಯ ಬದಲು ನೀರು ನೀರಾದ ಸಗಣಿಯಂತೆ ಮಲ ವಿಸರ್ಜನೆಯಾಗುವುದು - ಈ ರೋಗದ ಲಕ್ಷಣಗಳು.

ಚಿಕಿತ್ಸೆ

ಬದಲಾಯಿಸಿ

ಈ ರೋಗದ ವಿರುದ್ಧ ಯಶಸ್ವಿಯಾಗುವಂಥ ಖಚಿತ ಚಿಕಿತ್ಸಾ ಕ್ರಮವಿಲ್ಲ. ಸ್ಟ್ರೆಪ್ಟೊಮೈಸಿನ್ ಜೀವನಿರೋಧಕದಿಂದ ಕೊಂಚ ಗುಣ ಕಾಣಬಹುದಾದರೂ ರೋಗ ವಾಸಿಯಾಗುವ ಭರವಸೆ ಕಡಿಮೆ.

ರೋಗ ನಿಯಂತ್ರಣ

ಬದಲಾಯಿಸಿ

ರೋಗಪೀಡಿತ ದನಗಳನ್ನು ಹಿಂಡಿನಿಂದ ಬೇರ್ಪಡಿಸುವುದು, ಅವುಗಳ ಸಗಣಿಯಿಂದ ತಯಾರಾದ ಗೊಬ್ಬರಗಳನ್ನು ಬಳಸದಿರುವುದು,  ಆಗತಾನೇ ಹುಟ್ಟಿದ ಕರುಗಳನ್ನು ರೋಗಪೀಡಿತ ತಾಯಿ ಹಸುವಿನಿಂದ 12-20 ಗಂಟೆಗಳ ಅವಧಿಯೊಳಗೆ ಬೇರ್ಪಡಿಸುವುದು[] - ಇವು ಯೋನೆ ರೋಗ ನಿಯಂತ್ರಣದಲ್ಲಿ ಬಲು ಮುಖ್ಯವೆನಿಸಿದೆ.

ಪಾಶ್ಚಾತ್ಯದೇಶಗಳಲ್ಲಿ ಜೀವಂತ ರೋಗಾಣು, ಆಲಿವ್ ಎಣ್ಣೆ, ದ್ರವರೂಪದ ಪ್ಯಾರಾಫಿನ್ ಮತ್ತು ಅತ್ಯಲ್ಪ ಪ್ರಮಾಣದ ಪ್ಯೂಮಿಸ್ ಪುಡಿಯ ಮಿಶ್ರಣವನ್ನು ಲಸಿಕೆ (ವ್ಯಾಕ್ಸೀನ್) ಆಗಿ ಕೊಟ್ಟು ರೋಗವನ್ನು ಹತೋಟಿಯಲ್ಲಿಡುವ ಕ್ರಮ ಇದೆ.

ಉಲ್ಲೇಖಗಳು

ಬದಲಾಯಿಸಿ
  1. Britannica, The Editors of Encyclopaedia. "Johne’s disease". Encyclopedia Britannica, 27 Jun. 2017, https://www.britannica.com/science/Johnes-disease. Accessed 1 April 2024.
  2. https://www.bionity.com/en/encyclopedia/Johne%27s_disease.html#google_vignette
  3. Hendrick, Steve (19 March 2013). "Johne's Disease And The Ethical Dilemma". Beef Cattle Research Council.


ಹೊರಗಿನ ಕೊಂಡಿಗಳು

ಬದಲಾಯಿಸಿ


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: