ಬಾಯಾರಿಕೆ
ಬಾಯಾರಿಕೆ ಎಂದರೆ ದ್ರವಗಳಿಗಾಗಿ ಹಂಬಲಿಸುವುದು, ಪರಿಣಾಮವಾಗಿ ಪ್ರಾಣಿಗಳು ತಮ್ಮ ಮೂಲ ಸ್ವಭಾವವಾದ ಕುಡಿಯುವುದಕ್ಕೆ ಹಾತೊರೆಯುತ್ತವೆ. ಇದು ದ್ರವ ಸಮತೋಲನದಲ್ಲಿ ಒಳಗೊಂಡಿರುವ ಒಂದು ಅಗತ್ಯ ಕಾರ್ಯವಿಧಾನವಾಗಿದೆ. ಇದು ದ್ರವಗಳ ಕೊರತೆ ಅಥವಾ ಉಪ್ಪಿನಂತಹ ಕೆಲವು ಆಸ್ಮೊಲೈಟ್‍ಗಳ ಸಾರತೆಯಲ್ಲಿನ ಹೆಚ್ಚಳದಿಂದ ಉಂಟಾಗುತ್ತದೆ. ಶರೀರದ ನೀರಿನ ಪರಿಮಾಣ ಒಂದು ನಿರ್ದಿಷ್ಟ ಮಿತಿಗಿಂತ ಕಡಿಮೆಗೆ ಇಳಿದರೆ ಅಥವಾ ಆಸ್ಮೊಲೈಟ್‍ನ ಸಾರತೆ ತುಂಬಾ ಹೆಚ್ಚಾದರೆ, ಮಿದುಳು ಬಾಯಾರಿಕೆಯನ್ನು ಸಂಜ್ಞೆಮಾಡುತ್ತದೆ.
ನಿರಂತರ ನಿರ್ಜಲೀಕರಣವು ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು, ಆದರೆ ಇದು ಬಹುತೇಕ ವೇಳೆ ಮೂತ್ರಪಿಂಡದ ಸಮಸ್ಯೆಗಳು ಮತ್ತು ಸೆಳವುಗಳಂತಹ ನರ ಸಮಸ್ಯೆಗಳಿಗೆ ಸಂಬಂಧಿಸಿರುತ್ತದೆ. ಪಾಲಿಡಿಪ್ಸಿಯಾ ಎಂದು ಪರಿಚಿತವಾದ ವಿಪರೀತ ಬಾಯಾರಿಕೆ, ಜೊತೆಗೆ ಪಾಲಿಯೂರಿಯಾ ಎಂದು ಪರಿಚಿತವಾದ ವಿಪರೀತ ಮೂತ್ರವಿಸರ್ಜನೆಯು ಮಧುಮೇಹ ಅಥವಾ ಡಯಾಬಿಟಿಸ್ ಇನ್ಸಿಪಿಡಸ್‍ನ ಸೂಚನೆಯಿರಬಹುದು.
ಶರೀರದಲ್ಲಿ ಕಡಿಮೆಯಾದ ಪರಿಮಾಣ ಅಥವಾ ಹೆಚ್ಚಾದ ಅಸ್ಮೊಲೈಟ್ ಸಾರತೆಯನ್ನು ಕಂಡುಹಿಡಿಯುವ ಗ್ರಾಹಿಗಳು ಮತ್ತು ಇತರ ವ್ಯವಸ್ಥೆಗಳಿವೆ. ಅವು ಕೇಂದ್ರ ನರಮಂಡಲಕ್ಕೆ ಸಂಜ್ಞೆಮಾಡುತ್ತವೆ. ಅಲ್ಲಿ ಕೇಂದ್ರ ಸಂಸ್ಕರಣೆಯು ಯಶಸ್ವಿಯಾಗುತ್ತದೆ. ಹಾಗಾಗಿ ಕೆಲವು ಮೂಲಗಳು ಬಾಹ್ಯಕೋಶೀಯ ಬಾಯಾರಿಕೆಯನ್ನು ಅಂತರ್ಕೋಶೀಯ ಬಾಯಾರಿಕೆಯಿಂದ ವ್ಯತ್ಯಾಸಮಾಡುತ್ತವೆ.[೧] ಬಾಹ್ಯಕೋಶೀಯ ಬಾಯಾರಿಕೆಯು ಕಡಿಮೆಯಾದ ಪರಿಮಾಣದಿಂದ ಉತ್ಪನ್ನವಾಗುವ ಬಾಯಾರಿಕೆ ಮತ್ತು ಅಂತರ್ಕೋಶೀಯ ಬಾಯಾರಿಕೆಯು ಹೆಚ್ಚಿದ ಅಸ್ಮೊಲೈಟ್ ಸಾರತೆಯಿಂದ ಉತ್ಪನ್ನವಾಗುವ ಬಾಯಾರಿಕೆ. ಅದೇನೇ ಇದ್ದರೂ, ಸ್ವತಃ ಆ ಬಯಕೆಯು ಮಿದುಳಿನಲ್ಲಿನ ಕೇಂದ್ರ ಸಂಸ್ಕರಣದಿಂದ ಉತ್ಪನ್ನವಾಗುವಂಥದ್ದು, ಅದು ಹೇಗೆ ಕಂಡುಹಿಡಿಯಲ್ಪಡುತ್ತದೆ ಎಂಬುವುದು ಲೆಕ್ಕಕ್ಕೆ ಬರುವುದಿಲ್ಲ.
ಜೀವಿಗಳು ತಮ್ಮ ದ್ರವದ ಮಟ್ಟಗಳನ್ನು ತುಂಬಾ ಕಿರಿದಾದ ವ್ಯಾಪ್ತಿಗಳಲ್ಲಿ ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿರುತ್ತದೆ. ಜೀವಕೋಶದ ಹೊರಗಿನ ದ್ರವವಾದ ತೆರಪಿನ ದ್ರವವನ್ನು ಜೀವಕೋಶದ ಒಳಗಿನ ದ್ರವವಾದ ಅಂತರ್ಕೋಶೀಯ ದ್ರವದಷ್ಟೇ ಸಾರತೆಯಲ್ಲಿ ಇಟ್ಟುಕೊಳ್ಳುವುದು ಗುರಿಯಾಗಿರುತ್ತದೆ. ಈ ಸ್ಥಿತಿಯನ್ನು ಸಮಪರಾಸರಿ ಸ್ಥಿತಿ ಎಂದು ಕರೆಯಲಾಗುತ್ತದೆ ಮತ್ತು ಕೋಶದ ಪೊರೆಯ ಎರಡೂ ಬದಿಗಳಲ್ಲಿ ಸಮಾನ ಮಟ್ಟದ ದ್ರಾವ್ಯಗಳು ಇದ್ದಾಗ ಉಂಟಾಗುತ್ತದೆ ಮತ್ತು ಹಾಗಾಗಿ ನೀರಿನ ಒಟ್ಟು ಚಲನೆ ಶೂನ್ಯವಿರುತ್ತದೆ. ತೆರಪಿನ ದ್ರವವು ಅಂತರ್ಕೋಶೀಯ ದ್ರವಕ್ಕಿಂತ ದ್ರಾವ್ಯಗಳ ಹೆಚ್ಚಿನ ಸಾರತೆ ಹೊಂದಿದ್ದರೆ ಅದು ಕೋಶದಿಂದ ಹೊರಗೆ ನೀರನು ಸೆಳೆಯುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ Carlson, N. R. (2005). Foundations of Physiological Psychology: Custom edition for SUNY Buffalo. Boston, MA: Pearson Custom Publishing.