ಮೇದರ ಕೇತಯ್ಯ
ಹನ್ನೆರಡೆನೆಯ ಶತಮಾನದಲ್ಲಿ, ಸಾವಿರಾರು ವರ್ಷಗಳಿಂದ ಬೇರೂರಿದ ವರ್ಣಾಶ್ರಮ ಧರ್ಮ, ಅಂಧಶ್ರದ್ಧೆ, ಶೋಷಣೆ, ಮುಂತಾದ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿ ಸಾಮಾಜಿಕ ಕ್ರಾಂತಿಯನ್ನು ಶರಣರು ಮಾಡಿದರು. ಅದರ ಪ್ರವರ್ತಕ ಬಸವಣ್ಣ. ಈ ಕ್ರಾಂತಿಯ ಹಿನ್ನೆಲೆಯಲ್ಲಿ ಕೆಲಸ ಮಾಡಿದವರು ಅನೇಕ ಶತಮಾನಗಳಿಂದ ಸಮಾಜದಿಂದ ಅಲಕ್ಷ್ಯಕ್ಕೊಳಗಾದ ಕೆಳವರ್ಗದವರು, ದೀನ ದಲಿತರು. ಬಸವಣ್ಣನವರ ಜೊತೆ ಕೈಜೋಡಿಸಿದವರು ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ನುಲಿಯ ಚಂದಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ ಮುಂತಾದವರು. ಅವರಲ್ಲಿ ಮೇದರ ಕೇತಯ್ಯನೂ ಒಬ್ಬ.
ಮೇದರ ಕೇತಯ್ಯ | |
---|---|
ವೃತ್ತಿ | ಬಿದಿರು ಕಾಯಕ, ವಚನಕಾರ |
ರಾಷ್ಟ್ರೀಯತೆ | ಭಾರತೀಯ |
ಪ್ರಕಾರ/ಶೈಲಿ | ವಚನ |
ಪ್ರಭಾವಿತರು
|
ಮೇದರ ಕೇತಯ್ಯ |
---|
ಆತ ಬಸವಣ್ಣನಿಂದ ಪ್ರಭಾವಿತನಾಗಿ ಚಳುವಳಿಯಲ್ಲಿ ಪಾಲ್ಗೊಂಡಿದ್ದವನು. ಬಸವಣ್ಣನನ್ನು ಗುರುವಾಗಿ ಸ್ವೀಕರಿಸಿದಾತ. ಬಸವಣ್ಣನವರ ಪ್ರಭಾವದಿಂದ ಗುರು-ಲಿಂಗ-ಜಂಗಮರಲ್ಲಿ ನಿಜಸುಖವನ್ನು ಕಂಡವನು. ಭಕ್ತನಾಗಿ ಕಾಯಕದಿಂದ ಕೈಲಾಸವನ್ನು ಕಂಡವನು. ಈ ತತ್ತ್ವವನ್ನು ಅನುಷ್ಠಾನದಲ್ಲಿ ತಂದವನು.
ಮೇದರ ಕೇತಯ್ಯ ಬಸವಣ್ಣನವರ ಸಮಕಾಲೀನ ಶರಣ, ಅನುಭಾವಿ,, ಶುದ್ಧ ಕಾಯಕಜೀವಿ, ಜಂಗಮ, ನಿತ್ಯ ದಾಸೋಹಿ, ಸದ್ಭಕ್ತ, ನಿಷ್ಠೆಯಿಂದ ಕೂಡಿದ ಆಚಾರವಂತ, ವೀರ ಮಾಹೇಶ್ವರ, ಪ್ರಸಾದಿ, ಸರ್ವಾಂಗ ಲಿಂಗಿ, ಪ್ರಾಣಲಿಂಗಿ, ಸಚ್ಚಾರಿತ್ರ್ಯವುಳ್ಳಾತ. ತನು-ಮನ-ಧನಗಳನ್ನು ಜಂಗಮಕ್ಕೆ ಅರ್ಪಿಸಿದವ. ಐಕ್ಯಸ್ಥಲವನ್ನು ಮೆಟ್ಟಿನಿಂತವ. ವಚನಗಳಲ್ಲಿ ಶಿವಾನುಭವ ತತ್ವಗಳನ್ನು ನಿರೂಪಿಸಿದ ಶ್ರೇಷ್ಠ ಶಿವಾನುಭಾವಿ.
ಕೇತಯ್ಯ ಹನ್ನೆರಡನೆಯ ಶತಮಾನದ ಶ್ರೇಷ್ಠ ವಚನಕಾರ ಹಾಗು ಶರಣ. ಬಿದಿರುಬುಟ್ಟಿ, ಮೊರ ಮುಂತಾದವುಗಳನ್ನು ಮಾಡಿ ಇದರ ಕಾಯಕದ ಹಣದಿಂದ ದಾಸೋಹ ನಡೆಸಿ, ಪವಿತ್ರಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದ ಶರಣ. ವೀರಶೈವ ತತ್ತ್ವವನ್ನು ಅನುಸರಿಸಿ ಜನರಿಗೆ ಬೋಧಿಸಿದವ. ಶರಣ ಸಿದ್ಧಾಂತವನ್ನು, ವಚನಗಳನ್ನು ಪಸರಿಸಿದವ. ಈತ ವಚನಕಾರ. ಈತನ ಹನ್ನೊಂದು ವಚನಗಳನ್ನು ಪ್ರೊ. ಎಸ್. ಎಸ್. ಭೂಸರೆಡ್ಡಿಯವರು ಹಾಗೂ ಶ್ರೀಮತಿ ಎಸ್. ಎಸ್. ಮಟ್ಟಿ ಅವರು ಸಂಪಾದಿಸಿ ಪ್ರಕಟಿಸಿದ್ದಾರೆ.
ಮೇದರ ಕೇತಯ್ಯ ಐತಿಹಾಸಿಕ ವ್ಯಕ್ತಿ. ಕವಿಚರಿತ್ರೆಕಾರರು ಈತನ ಕಾಲವನ್ನು ೧೧೬೦ ಎಂದು ಗುರುತಿಸಿದ್ದಾರೆ. ಈತನಿಗೆ ಕೇತ, ಕೇತಿದೇವ, ಕೇತಯ್ಯ, ಕ್ಯಾತಯ್ಯ, ಕೇತತಂದೆ, ಕೇತಿದೇವಯ್ಯ ಎಂಬ ಹೆಸರುಗಳಿವೆ. ಈತ ಅನುಭವ ಮಂಟಪದಲ್ಲಿ ಬೆಳೆದ ಮಹಾಚೇತನ. ಈತನ ವಚನಗಳೆಲ್ಲಾ ಶರಣ ಸಿದ್ಧಾಂತ, ವೀರಶೈವ ತತ್ತ್ವದ ಸಾರ ಸಂಗ್ರಹವಾಗಿದೆ. ಮೇದರ ಕೇತಯ್ಯ ಮಾನವ ಸರಿಸಮಾನತೆಯ ಸಮಾಜ ರಚನೆ ಮಾಡಲು ಹೊರಟ ಧೀಮಂತ ಶರಣ!
ಮೇದರ ಕೇತಯ್ಯನ ಜೀವನ ಚರಿತ್ರೆ ತಿಳಿಯಲು ಸಾಕಷ್ಟು ಆಕರಗ್ರಂಥಗಳು ಶಿಷ್ಟ ಹಾಗೂ ಜನಪದ ಗ್ರಂಥಗಳಲ್ಲಿವೆ. ಆದರೆ ಪುರಾಣ ಲೇಪನ, ಇಲ್ಲವೇ ಜಾನಪದ ಮೆರಗಿನಿಂದ ಕೂಡಿವೆ. ಆತನ ಕೆಲವೇ ವಚನಗಳಿಂದ ಆತನ ಬಗೆಗೆ ಹೆಚ್ಚಿಗೆ ತಿಳಿಯಲಾಗದಿದ್ದರೂ ಆತನ ವ್ಯಕ್ತಿತ್ವ, ಮನೋಭಾವ, ಚಿಂತನ-ಮಂಥನಗಳ ಬಗೆಗೆ ಸ್ವಲ್ಪ ತಿಳಿದುಕೊಳ್ಳಬಹುದು.
ಮೇದರ ಕೇತಯ್ಯ ಬೇಲೂರಿನವ. ಅವನ ಹೆಂಡತಿ ಸಾತತ್ವೆ ಎಂದು ಜನಪದ ಸಾಹಿತ್ಯದಲ್ಲಿ ಬರುತ್ತದೆ. ಮಲೆನಾಡಿನ ಉಳಿಮೆ ಬೆಟ್ಟದ ಕೆಳಗಿನ ಬೇಲೂರು ಎಂದು ಹೇಳಿರುವುದರಿಂದ ಈತನ ಊರು ಉಳವಿಯಲ್ಲಿರುವ ಬೇಲೂರು. ಬ.ಗಿ. ಯಲ್ಲಟ್ಟಿಯವರು ಕೇತಯ್ಯನ ಊರು ಬೆಳಗಾವಿ ಜಿಲ್ಲೆಯ ಬಯಲು ಹೊಂಗಲ ತಾಲ್ಲೂಕಿನ ಬೇಲೂರು ಎಂದಿದ್ದಾರೆ. ಅದಕ್ಕೆ ಆಧಾರಗಳನ್ನು ನೀಡಿಲ್ಲ. ಆದುದರಿಂದ ಜನಪದ ಸಾಹಿತ್ಯದಲ್ಲಿ ಬರುವ ಉಳವಿಯ ಹತ್ತಿರದ ಬೇಲೂರೇ ಸರಿಯಾದುದು ಎನಿಸುತ್ತದೆ.
ಮೇದರ ಕೇತಯ್ಯ ಬೇಲೂರಿನಲ್ಲಿ ಬಿದಿರು[೧] ಕಾಯಕ ಮಾಡುತ್ತಾ, ಬಂದ ಹಣದಿಂದ ದಾಸೋಹಮಾಡಿಕೊಂಡು ಹೋಗುತ್ತಿದ್ದ. ಈತ ಕಲ್ಯಾಣದ ಬಸವಣ್ಣನ ತತ್ವಗಳನ್ನು ಕೇಳಿ ತಾನೂ ಅಲ್ಲಿಗೆ ಹೋಗಬೇಕೆಂದು ಮನಸ್ಸು ಮಾಡಿ ಹೆಂಡತಿ ಸಾತತ್ವೆ ಜೊತೆ ಹೋಗಿ ಮೇದರ ಕಸುಬನ್ನು ಮಾಡಿಕೊಂಡು ಹೋಗುತ್ತಿದ್ದ.
ಒಮ್ಮೆ ಪರಶಿವ ಈತನ ಮಹಿಮೆಯನ್ನು ಜಗತ್ತಿನಲ್ಲಿ ಹರಡಬೇಕೆಂದು ಬಂದು ಒಂದು ಪವಾಡವೆಸಗಿದ. ಅಂದು ಕೇತಯ್ಯ ಬಿದಿರನ್ನು ಕತ್ತರಿಸಿದಾಗ ಅದರಿಂದ ಹೊನ್ನು ಸುರಿಸಿದ. ಅದನ್ನು ನೋಡಿ ಅಚ್ಚರಿಯಾಯಿತು ಕೇತಯ್ಯನಿಗೆ. ಮತ್ತೊಂದನ್ನು ಕತ್ತರಿಸಿದ. ಅದರಲ್ಲೂ ಹೊನ್ನು ಸುರಿಯಿತು. ಇದೇನು ಹುಳುಗಳು! ಎಂದು ಅಲ್ಲಿಂದ ಓಡಿದ. ಮತ್ತೆ ಬೇರೊಂದು ದೊಡ್ಡ ಬಿದಿರಮೆಳೆ ಹತ್ತಿ ಕಡಿದ. ಅದರಿಂದಲೂ ಮುತ್ತುಗಳು ಸುರಿಯಲು ಕೆಳಕ್ಕುರುಳಿದ. ಬಿದಿರ ಸಿಬಿರು ದೇಹಕ್ಕೆ ನಾಟಿ ರಕ್ತ ಕಾರುತ್ತ ಹೊರಳಾಡಿದ. ಆತ ನೋವನ್ನು ಮರೆತು ದಾಸೋಹದ ಚಿಂತೆ ಮಾಡತೊಡಗಿದ. ಆಗ ಸೂರ್ಯನನ್ನುದ್ದೇಶಿಸಿ-
"ಎಲೈ ಸೂರ್ಯನೇ, ನಾನು ಹೇಳುವವರೆಗೆ ಮುಳುಗ ಬೇಡ. ಇದು ನನ್ನ ಕಾಯಕದ ಮೇಲಾಣೆ" ಎಂದು ತಾನು ತಂದಿದ್ದ ಬಿದಿರನ್ನು ತೆಗೆದುಕೊಂಡು ಹೆಂಡತಿಗೆ ಹೇಳಿದ "ಇದರಲ್ಲಿ ಮೊರ, ಬುಟ್ಟಿ, ಮಾಡಿ ಮಾರಿ ಬಾ" ಎಂದು. ಆಕೆ ಹಾಗೆಯೇ ಮಾಡಿ ಹಣ ತಂದಳು. ಅದರಿಂದ ಜಂಗಮ ದಾಸೋಹವನ್ನು ಮಾಡಿ ಮುಗಿಸು ಎಂದ. ಆಕೆ ಆ ಕಾಯಕ ಮಾಡಿದಳು. ಕೊನೆಗೆ ಹೆಂಡತಿಗೆ ಹೇಳಿದ- "ನನ್ನ ಎದೆಯನ್ನು ಚುಚ್ಚಿರುವ ಬಿದಿರು ಸಿಬಿರನ್ನು ತೆಗೆ" ಎಂದ. ಆಕೆ ಅದನ್ನು ಕೀಳಲು, ಕೇತಯ್ಯ ಇಹವನ್ನು ತ್ಯಜಿಸಿದ. ರಾತ್ರಿ ಹೆಂಡತಿಯು ರೋದಿಸಲಾರಂಭಿಸಿದಳು. ಬೆಳಗಾಯಿತು. ಹೂಗಾರ ಮಾದಣ್ಣ ಬಂದು ನೋಡಿ ಈ ವಿಷಯವನ್ನು ಬಸವಣ್ಣನಿಗೆ ತಿಳಿಸಿದ. ಬಸವಣ್ಣ ಬಂದು ನೋಡಿ ತನ್ನ ಪ್ರಾಣವನ್ನು ತೊರೆಯುವನು. ಅಷ್ಟರಲ್ಲಿ ಅಲ್ಲಿಗೆ ಮಾಚಯ್ಯ ಬರುತ್ತಾನೆ. ಆಗ ಮಡಿವಾಳ ಮಾಚಯ್ಯ ಇಬ್ಬರನ್ನು ಹೊಗಳುತ್ತಾ ಘಂಟೆಯನ್ನು ಬಾರಿಸಲು ಕೇತಯ್ಯ-ಬಸವಣ್ಣ ಇಬ್ಬರೂ ಶಿವಯೋಗ ನಿದ್ರೆಯಿಂದ ಎಚ್ಚರಗೊಳುತ್ತಾರೆ. ಆಗ ಕೇತಯ್ಯ-
"ಎನ್ನ ಕಾಯದ ಕಳವಳ ನಿಲಿಸಿ ಗುರುಲಿಂಗವ ತೋರಿದ
ಎನ್ನ ಮನದ ವ್ಯಾಕುಳವ ನಿಲಿಸಿ ಜಂಗಮಲಿಂಗನ ತೋರಿದ
ಇಂತು ಅಂತರಂಗ ಬಹಿರಂಗದಲ್ಲಿ ತಾನೆಯಾಗಿ ಎನ್ನ ಪಾವನವ ಮಾಡಿದ
ಅಮರಗಣಂಗಳು ಮುನಿದು ಎನ್ನ ಕೈಲಾಸಕ್ಕೆ ಒಯ್ದಡೆ
ಸದ್ಯೋನ್ಮುಕ್ತಿಯ ತೋರಲೆಂದು ಮರ್ತ್ಯಕ್ಕೆ ಮರಳಿ ತಂದ .
ಸಂಗನ ಬಸವಣ್ಣನೇ ಗುರುವೆನಗೆ ಸಂಗನ ಬಸವಣ್ಣನೆ ಪರವೆನಗೆ
ಸಂಗನ ಬಸವಣ್ಣನ ಕರುಣದಿಂದ ಘನಕ್ಕೆ ಘನ ಮಹಿಮ
ಅಲ್ಲಮ ಪ್ರಭುವಿನ
ಶ್ರೀಪಾದವ ಕಂಡು ಬದುಕಿದೆನು ಕಾಣಾ ಗೌರೇಶ್ವರಾ"
ಎಂದು ಹೇಳುತ್ತಾನೆ. ಕಾಯಕ ಮುಂದುವರಿಸುವ, ಮತ್ತೆ ದಾಸೋಹ ಮಾಡುವ ಭಾಗ್ಯ ದೊರೆಯಿತಲ್ಲಾ ಎಂದು ಹಿರಿಹಿಗ್ಗುತ್ತಾನೆ. ಇದು ಜಂಗಮ ಮಹತ್ವವನ್ನು ಎತ್ತಿ ಹಿಡಿಯುತ್ತದೆ. ತಮ್ಮ ಜಂಗಮರ ಪ್ರಾಣವನ್ನು ಮಿಗಿಲಾಗಿ ಪ್ರೀತಿಸುತ್ತಿದ್ದರು ಬಸವಣ್ಣನವರು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಈ ವಚನ ಗೂಳೂರು ಸಿದ್ಧ ವೀರಣ್ಣೊಡೆಯರ ಶೂನ್ಯ ಸಂಪಾದನೆಯಲ್ಲಿ ಬರುತ್ತದೆ.
ಜೀವನ ಚರಿತ್ರೆ-೧
ಬದಲಾಯಿಸಿ"ಬಸವತತ್ವ ರತ್ನಾಕರ"ದಲ್ಲಿ ಬರುವ ಒಂದು ಪವಾಡದ ಕಥೆ ಹೀಗಿದೆ-ಕೇತಯ್ಯನನ್ನು ಪರೀಕ್ಷಿಸಲು ಶಿವನು ಬಸವಣ್ಣನ ವೇಷ ಧರಿಸಿಕೊಂಡು ಕೇತಯ್ಯ ಮನೆಯಲ್ಲಿಲ್ಲದಾಗ ಬಂದ. ಆತನ ಹೆಂಡತಿ ಜಂಗಮ ಸತ್ಕಾರ ಮಾಡಿದಳು. ಸತ್ಕಾರ ಪಡೆದ ಮೇಲೆ ಆ ಜಂಗಮ "ಈ ಹೊನ್ನು ತೆಗೆದುಕೊಂಡು ದಾಸೋಹ ಮಾಡಿ" ಎಂದು ಕೊಡಲು ಆಕೆ ನಿರಾಕರಿಸುತ್ತಾಳೆ. ಆದರೂ ಆತ ಮನೆಯಲ್ಲಿಟ್ಟು ಹೊರಡುವನು. ಕೇತಯ್ಯ ಮನೆಗೆ ಬಂದ. ಹೊನ್ನು ನೋಡಿ- "ಇದು ಏನು?" ಎಂದ ಹೆಂಡತಿಯನ್ನುದ್ದೇಶಿಸಿ. "ಜಂಗಮರೊಬ್ಬರು ಬಂದಿದ್ದರು. ಅತಿಥಿ ಸತ್ಕಾರ ಮಾಡಿ ತೃಪ್ತಿಗೊಳಿಸಿದೆ. ಅವರು ಈ ಹೊನ್ನು ಬೇಡ ಎಂದರೂ ಅದನ್ನು ಬಿಟ್ಟು ಹೋದರು" ಎಂದಳು ಮಾರುತ್ತರವಾಗಿ. ಅಸಮಾಧಾನ ಹೊಂದಿದ ಕೇತಯ್ಯ ಆ ಹೊನ್ನನ್ನು ತಿಪ್ಪೆಗೆ ಬಿಸಾಡಿದ. ಹೊನ್ನಿದ್ದ ಸ್ಥಳವನ್ನು ಗೋಮಯದಿಂದ ಸಾರಿಸಿದ. "ಕಾಯಕದಿಂದಲ್ಲದೆ ಬಂದುದು ಮೈಲಿಗೆಯಾಯಿತು" ಎಂದು ಹೇಳಿ ಸ್ನಾನಕ್ಕೆ ಹೋಗುವನು. ಇದರಿಂದ ವ್ಯಕ್ತವಾಗುವುದು ಕೇತಯ್ಯನಿಗೆ ಹೊನ್ನಿನ ಬಗೆಗೆ ವ್ಯಾಮೋಹವಿರಲಿಲ್ಲ. ಕಾಯಕದಿಂದ ಬಂದ ಹಣದಿಂದಲೇ ತಾನು ತಿನ್ನಬೇಕು. ಜಂಗಮ ದಾಸೋಹಕ್ಕೆ ಉಪಯೋಗಿಸಿದಾಗಲೇ ಸಾರ್ಥಕ ಎಂಬುದು. ಹೊನ್ನು ಆತನ ಭಾಗಕ್ಕೆ ತೃಣ ಸಮಾನ ಎಂಬುದನ್ನು ಪುಷ್ಟೀಕರಿಸುತ್ತದೆ ಈ ಕಥೆ. ಅನಾಯಾಸವಾಗಿ ಬಂದ ಹೊನ್ನನ್ನು ಕಸವಾಗಿ ಭಾವಿಸಬೇಕು ಎಂಬುದೇ ಕೇತಯ್ಯನ ತತ್ವ.
ಉಪಸಂಹಾರ
ಬದಲಾಯಿಸಿಶರಣರು 'ನುಡಿದಂತೆ ನಡೆದರು' ಎಂಬುದಕ್ಕೆ ಮೇದರ ಕೇತಯ್ಯನ ಜೀವನವೇ ಸಾಕ್ಷಿ. ಈತ ಕರುಣೆ, ದಯೆ, ದಾನ, ಧರ್ಮಗಳಲ್ಲಿ ಎತ್ತಿದ ಕೈ. ಅಷ್ಟಾವರಣ, ಕಾಯಕ ತತ್ತ್ವ, ಏಕದೇವೋಪಾಸನೆ, ಭಕ್ತಿ, ದಾಸೋಹ, ಕರುಣೆ, ದಯೆ, ದಾನ ಧರ್ಮಗಳನ್ನೊಳಗೊಂಡ ಈತನ ಲೋಕಾನುಭವ, ಶಿವಾನುಭವಗಳು ವ್ಯಕ್ತವಾಗುವುವು. ತಾನು ಮಾಡುವ ಕಾಯಕದ ರೀತಿ, ಅದರ ಮಹತ್ವ ಹಾಗೂ ಕಾಯಕದ ಮೂಲಕ ಪಡೆದ ಲಿಂಗಾಂಗ ಸಾಮರಸ್ಯಗಳನ್ನು ಕೇತಯ್ಯ ತನ್ನ ವಚನಗಳಲ್ಲಿ ವಿವಸಿರಿಸಿದ್ದಾನೆ[೨].
ಎಸ್. ಉಮಾಪತಿಯವರು ಹೇಳುವಂತೆ "ಮೇದರ ಕೇತಯ್ಯರು, ಶ್ರೀ ಬಸವೇಶ್ವರರ ಸಮಕಾಲೀನ ಶರಣರಲ್ಲಿ ಹಿರಿಯ ಅನುಭಾವಿಗಳಾಗಿ, ದಲಿತವರ್ಗದ, ಶರಣರ ಪ್ರತಿನಿಧಿಯಾಗಿ, ಸತ್ಯ ಶುದ್ಧ ಕಾಯಕ ಜೀವಿಯಾಗಿ, ಜಂಗಮಪ್ರಾಣಿಯಾಗಿ, ನಿತ್ಯ ದಾಸೋಹಿಯಾಗಿ, ಕಾಯಕದಿಂದ ಬಂದುದನ್ನು, ದಾಸೋಹಕ್ಕೆ ವಿನಿಯೋಗಿಸಿ ಪ್ರಸಾದವನ್ನು ಸ್ವೀಕರಿಸಿ, ಪ್ರಸಾದವನ್ನು ಕಾಯಕವನ್ನಾಗಿಸಿಕೊಂಡು ಸದ್ಭಕ್ತನಾಗಿ ನಿಷ್ಠೆಯಿಂದ ಕೂಡಿದ ಆಚಾರಮಾರ್ಗದಲ್ಲಿ ನಡೆದು ವೀರಮಾಹೇಶ್ವರನಾಗಿ, ಪ್ರಸಾದಿಯಾಗಿ, ಸರ್ವಾಂಗ ಲಿಂಗಿಯಾಗಿ, ಪ್ರಾಣಲಿಂಗಿಯಾಗಿ, ಸಚ್ಚಾರಿತ್ರ್ಯದಿಂದ ಕೂಡಿ ತನು ಮನ ಧನಗಳನ್ನು ಗುರು ಲಿಂಗ ಜಂಗಮ[೩] ಕ್ಕೆ ವಿನಿಯೋಗಿಸಿ, ಶರಣನಾಗಿ ಜ್ಯೋತಿಯೊಳು ಜ್ಯೋತಿ ಬೆಳಗುವಂತೆ, ನದಿಯಲ್ಲಿ ನದಿ ಬೆರೆಯುವಂತೆ ಐಕ್ಯಸ್ಥಲವನ್ನು ಮುಟ್ಟಿ, ಮೆಟ್ಟಿ ನಿಂತ ನಿಲುವನ್ನು ವರ್ಣಿಸಲು ಯಾರಿಂದಲೂ ಸಾಧ್ಯ, ಅಸಾಧ್ಯ" ಎಂದು.
ಮೇದರ ಕೇತಯ್ಯ ಬಸವಣ್ಣನ ಅನುಷ್ಠಾನ, ಅನುಭೂತಿಗಳ ಕೇತನವೇ ಆಗಿದ್ದಾನೆ. ಶಿವನಿಗಿಂತಲೂ ಶರಣರು ಶ್ರೇಷ್ಠ ಎಂಬುದಕ್ಕೆ ಮೇದರ ಕೇತಯ್ಯನ ಕಾಯಕನಿಷ್ಠ ಜೀವನವೇ ಸಾಕ್ಷಿಯಾಗಿದೆ. ಕಾಯಕದ, ದಾಸೋಹದ ಮೇಲ್ಮೆಯನ್ನು ಮೇಲೆತ್ತರಕ್ಕೆ ಮುಟ್ಟಿಸಿದ ಕೇತಯ್ಯ ಮಹಾನ್ ವ್ಯಕ್ತಿ ಎಂಬುದರಲ್ಲಿ ಎಳ್ಳಷ್ಟು ಅನುಮಾನವಿಲ್ಲ.
ಮೇದರ ಕೇತಯ್ಯನಿಗೆ ಸಾಕ್ಷಾತ್ ಪರಶಿವನೇ ಸೋತು ಧರೆಗಿಳಿದು ಬಂದು ಸಾಕ್ಷಾತ್ಕಾರ ನೀಡಿದ ಎಂದ ಮೇಲೆ-
'ಶರಣ ಶಿವ ಕಾಯವ ಒರೆಗೆ ಹಚ್ಚುವರಾರು?
ಹರನ ಸಹಿತ ಸೋತು
ಬದುಕಿಸಿದ ಮೇದಾರ
ವರ ಕೇತ ನಿನಗೆ ಸರಿಯಾರು?'
ಉಲ್ಲೇಖನೆಗಳು
ಬದಲಾಯಿಸಿ- ↑ "ಮೇದರ ಸಮುದಾಯದವರ ಬದುಕಿಗೆ ಬೆಂಗಾವಲಾಗಿ ನಿಂತ ಬಿದಿರು". Archived from the original on 2016-03-04. Retrieved 2015-11-06.
- ↑ ಮೇದರ ಕೇತಯ್ಯ
- ↑ ಲಿಂಗಾಯತ