ಮರಾಠಿ

(ಮರಾಠಿ ಭಾಷೆ ಇಂದ ಪುನರ್ನಿರ್ದೇಶಿತ)

ಮರಾಠಿ - ಇಂಡೋಆರ್ಯನ್ ಭಾಷಾವರ್ಗಕ್ಕೆ ಸೇರಿದ ಪ್ರಮುಖಭಾಷೆ. ಮಹಾರಾಷ್ಟ್ರೀ ಅಪಭ್ರಂಶದಿಂದ ವಿಕಾಸಗೊಂಡಿದೆ. ಮಹಾರಾಷ್ಟ್ರ ರಾಜ್ಯದ ಆಡಳಿತ ಭಾಷೆಯಾಗಿರುವ ಇದು ೬೮,೦೦೨೨,೦೦೦(೨೦೦೧) ಜನರ ತಾಯಿನುಡಿಯಾಗಿದ್ದು ಭಾರತೀಯ ಸಂವಿಧಾನ ಮಾನ್ಯತೆ ಪಡೆದಿದೆ.

ಮರಾಠಿ
मराठी Marāṭhī
 
ಉಚ್ಛಾರಣೆ: IPA: ಟೆಂಪ್ಲೇಟು:IPA-mr
ಬಳಕೆಯಲ್ಲಿರುವ 
ಪ್ರದೇಶಗಳು:
India 
ಪ್ರದೇಶ: ಮಹಾರಾಷ್ಟ್ರ, ಗೋವಾ, ಕರ್ನಾಟಕ, ಮಧ್ಯ ಪ್ರದೇಶ, ಛತ್ತೀಶ್‍ಘಡ parts of ಗುಜರಾತ್, ಆಂಧ್ರ ಪ್ರದೇಶ, ದಾದ್ರ ಮತ್ತು ನಗರ ಹವೇಲಿ, ದಾಮನ್ ಮತ್ತು ದಿಯು,ಮತ್ತು ದೆಹಲಿ[]
ಒಟ್ಟು 
ಮಾತನಾಡುವವರು:
೭೩ million
ಭಾಷಾ ಕುಟುಂಬ: Indo-European
 Indo-Iranian
  Indo-Aryan
   Southern Indo-Aryan
    Marathi–Konkani
     ಮರಾಠಿ 
ಬರವಣಿಗೆ: ದೇವನಾಗರಿ ಲಿಪಿ (ಮರಾಠಿ ಅಕ್ಷರಮಾಲೆ)
Marathi Braille
Modi (historical) 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ:  ಭಾರತ: ಮಹಾರಾಷ್ಟ್ರ, Daman and Diu and Dadra and Nagar Haveli
ನಿಯಂತ್ರಿಸುವ
ಪ್ರಾಧಿಕಾರ:
Maharashtra Sahitya Parishad & various other institutions
ಭಾಷೆಯ ಸಂಕೇತಗಳು
ISO 639-1: mr
ISO 639-2: mar
ISO/FDIS 639-3: — 
Indic script
Indic script
ಈ ಪುಟ ಭಾರತೀಯ ಪದಗಳನ್ನು ಹೊಂದಿದೆ. ಸರಿಯಾದ ಪ್ರದರ್ಶನ ಬೆಂಬಲವಿಲ್ಲದೆದ್ದರೆ ನಿಮಗೆ ಅನಿಯತ ಸ್ವರಾಕ್ಷರ ಸ್ಥಾನ ಮತ್ತು ಸೇರ್ಪಡೆಗಳಲ್ಲಿ ತೊಂದರೆಗಲನ್ನು ಕಾಣಬಹುದು. ಹೆಚ್ಚು...

ವ್ಯಾಕರಣ

ಬದಲಾಯಿಸಿ

ಈ ಭಾಷೆಯಲ್ಲಿ ಸ್ವರ ವ್ಯಂಜನ ವಿಸರ್ಗ ಎಂಬ ಮೂರು ಬಗೆಯ ಸಂಧಿ ವ್ಯವಸ್ಥೆ ಇದೆ. ನಾಮಪದದಲ್ಲಿ ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕ ಭೇದಗಳೂ ಏಕವಚನ ಬಹುವಚನ ರೂಪುಗಳೂ ಇವೆ. ಪುಲ್ಲಿಂಗ ದೊಡ್ಡಸ್ಥಿಕೆಯನ್ನೂ ಸ್ತ್ರೀಲಿಂಗ ಕೋಮಲತೆಯನ್ನೂ ನಪುಂಸಕಲಿಂಗ ಕ್ಷುದ್ರತೆಯನ್ನೂ ಸೂಚಿಸುತ್ತವೆ. ಎಂಬುದು ಮರಾಠೀ ಜನರ ಭಾವನೆ.

ಬಹುವಚನ ರೂಪದ ಸಾಮಾನ್ಯ ಅಂತ್ಯ ಪ್ರತ್ಯಯಗಳೆಂದರೆ-ಏ,-ಯಾ, ಇವು ಪ್ರತ್ಯಯಗಳು ಸೇರಿ ನಾಮಪದಗಳಾಗುತ್ತವೆ.

  • ಪ್ರಥಮಾ; ಪ್ರತ್ಯಯಗಳಿಲ್ಲ;
  • ದ್ವಿತೀಯಾ;-ಸ,-ಲಾ-ತೇ;
  • ತೃತೀಯಾ; -ನೆ,-ಏ,-ಶೀ;
  • ಚತುರ್ಥಿ; -ಸ,-ಲಾ,-ತೇ;
  • ಪಂಚಮೀ; -ಊನ,-ಹೂನ;
  • ಷಷ್ಠಿ;-ಚೌ,-ಚೀ,-ಚೇ;
  • ಸಪ್ತಮೀ; -ತ, ಈ,- ಆ;
  • ಸಂಬೋಧನಾ; -ನೋ (ಬಹುವಚನ),

ಪುರುಷಾರ್ಥಕ ಸರ್ವನಾಮಗಳಲ್ಲಿ ಉತ್ತಮ ಪುರುಷ (ಮೀ- ನಾನು, ಆಮೀ- ನಾವು); ಮಧ್ಯಮ ಪುರುಷ(ತೂ-ನೀನು, ತುಮ್ಹೀ-ನೀವು); ಪ್ರಥಮ ಪುರುಷ(ತೋ-ಅವನು, ತೀ-ಅವಳು, ತೇ-ಅದು ತ್ಯಾ-ಅವರು, ತೇ-ಅವು)ರೂಪುಗಳಿವೆ. ಪ್ರಥಮ ಪುರುಷದ ಸರ್ವನಾಮಗಳು ನಿರ್ದೇಶಾತ್ಮಕ ಸರ್ವನಾಮಗಳಾಗಿ ಬಳಕೆಯಾಗುತ್ತವೆ.

ವಿಶೇಷಣಗಳು ನಾಮಗಳ ವಿಭಕ್ತಿ ಪ್ರತ್ಯಯಗಳನ್ನು ತೆಗೆದುಕೊಳ್ಳುತ್ತವೆ. ಸರ್ವನಾಮಗಳನ್ನು ವಿಶೇಷಣ ರೂಪದಲ್ಲಿ ಬಳಸುವುದುಂಟು. ತರತಮ ವ್ಯಕ್ತಪಡಿಸಲು-ಪೇಷೌ ಮತ್ತು ಹೊಸಪ್ರತ್ಯಯಗಳನ್ನು ಸೇರಿಸಿ ಹೇಳುತ್ತಾರೆ. ಉದಾಹರಣೆಗೆ ರಾಮಾಪೇಷೌ (ರಾಮನಿಗಿಂತ), ರುಪ್ಯಾಹೂನ (ರೂಪಾಯಿಗಿಂತ). ಅಗದೀ, ಅತಿ, ಅತಿಶಯ, ಮೋಠಾ, ಚಾಂಗಲಾ ಎಂಬ ಕ್ರಿಯಾವಿಶೇಷಣಗಳ ಸಹಾಯದಿಂದಲೂ ತರತಮ ಭಾವ ತೋರಿಸಲು ಸಾಧ್ಯವಿದೆ. ಅತಿಶಯ ಹುಶಾರ (ಬಲು ಬುದ್ಧಿವಂತ) ಅಗದೀ ಲಹಾನ (ಅತೀ ಚಿಕ್ಕದು) ಇತ್ಯಾದಿ. ವಸ್ತುಗಳೊಳಗಿನ ಸಾಮ್ಯವನ್ನು ಇತರಾ, ಏವಢಾ, ಸಾರಖಾ, ಪ್ರಮಾಣೀ ಈ ಶಬ್ದಗಳಿಂದ ಸೂಚಿಸಬಹುದು. ಏವಢಾಗೂಳ (ಇಷ್ಟು ಬೆಲ್ಲ). ಸಿಂಹಾಸಾರಖಾ (ಸಿಂಹದಂತೆ) ಇತ್ಯಾದಿ. ವಿಶೇಷಣ ದ್ವಿರುಕ್ತಿಗಳು ಅನೇಕತ್ವ (ಉಂಚ ಉಂಚ ವೃಕ್ಷೆ-ಎತ್ತರೆತ್ತರ ಮರಗಳು); ಗುಣಾಧಿಕ್ಯ (ತೋರಾಗಾನೇ ಲಾಲ ಲಾಲ ರ್ಛಾಲಾ-ಅವನು ಕೋಪದಿಂದ ಕೆಂಪುಕೆಂಪಾದನು); ಏರಿಳಿತಗಳು (ಸಕಾಳಚೀ ಸಾವಲೀ ಜೂಡ ಆಜೂಡ ಹೋತೇ-ಮುಂಜಾವಿನ ನೆರಳು ಗಿಡ್ಡಾಗಿಡ್ಡಾಗಿರುತ್ತದೆ. ದುಪಾರಜೀ ಲಾಂಬ ಲಾಂಬ ಹೋತ ಜಾತೇ - ಮಧ್ಯಾಹ್ನ ನೆರಳು ಉದ್ದುದ್ದಾಗುತ್ತ ಹೋಗುತ್ತದೆ.); ಪೃಥಕತ್ವ (ಸರ್ವ ಮುಕಾಸ ಏಕ ಲಾಡು ದ್ಯಾ-ಎಲ್ಲ ಮಕ್ಕಳಿಗೂ ಒಂದೊಂದು ಲಡ್ಡು ಕೊಡಿರಿ) ಸೂಚಿಸಲು ಬಳಕೆಯಾಗುತ್ತವೆ.

ಕ್ರಿಯಾಪದಗಳಲ್ಲಿ ಎರಡು ವಿಧ. ಪೂರ್ಣ ಮತ್ತು ಅಪೂರ್ಣ. ಸಾರ್ವಕಾಲಿಕ ಅರ್ಥದಲ್ಲಿ ಬಳಕೆಯಾಗುವಂಥವು ಪೂರ್ಣ ಕ್ರಿಯಾಪದಗಳು, ಸಕರ್ಮಕ, ಅಕರ್ಮಕ, ಸಹಾಯಕ, ಭಾವಾತ್ಮಕ ಮೊದಲಾದ ಕ್ರಿಯಾಪದಗಳೂ ಉಂಟು. ಧಾತುಗಳಿಗೆ ಸೇರಿಸುವ ಪ್ರತ್ಯಯಗಳಿಗೆ ಆಖ್ಯಾತ ಪ್ರತ್ಯಯಗಳೆನ್ನುತ್ತಾರೆ. ಇದನ್ನು ಸೇರಿಸಿ ಬೇರೆ ಬೇರೆ ಕ್ರಿಯಾಪದಗಳನ್ನು ರಚಿಸಿಕೊಳ್ಳಬಹುದು. ಉದಾಹರಣೆಗೆ ಅಜ್ಞಾರ್ಥಕ, ನಿಕ್ಷೇದಾರ್ಥಕ, ವಿಧ್ಯರ್ಥಕ, ಸಂಕೇತಾರ್ಥಕ ಇತ್ಯಾದಿ. ಕ್ರಿಯಾಪದಗಳು ಆತ್ಮನೇಪದ ಮತ್ತು ಪರಸ್ಮೈಪದ ಎಂಬುದಾಗಿ ಎರಡು ಗಣಗಳಲ್ಲಿ ನಡೆಯುತ್ತವೆ. ಆತ್ಮಪದದಲ್ಲಿ ಧಾತುಗಳಿಗೆ ಲೋಪಉಂಟಾಗುವುದಿಲ್ಲ ಮತ್ತು ಇದರಲ್ಲಿ ಅಕರ್ಮಕ ಮತ್ತು ಅನಿಯಮಿತ ಧಾತುಗಳಿರುತ್ತವೆ. ಪರಸ್ಮೈಪದದಲ್ಲಿ ಬರುವ ಧಾತುಗಳಿಗೆ-ಇ ಪ್ರತ್ಯಯ ಸೇರಿಸಿ, ಅವುಗಳ ರೂಪಗಳನ್ನು ಸಿದ್ಧಪಡಿಸುತ್ತಾರೆ. ಉದಾಹರಣೆಗೆ ಕರಣೇ(ಮಾಡು), ಮಿ ಕರಿತೋ ಆಹೆ (ನಾನು ಮಾಡುತ್ತಿರುವೆ.) ಕಾಲ ಮತ್ತು ಅರ್ಥವನ್ನೊಳಗೊಂಡ ಏಳು ಬಗೆಯ ಆಖ್ಯಾತ ಪ್ರತ್ಯಯಗಳಿವೆ. ಇವು ಸೇರಿ ಕ್ರಿಯಾಪದ ರೂಪಗಳುಂಟಾಗುತ್ತವೆ. ಇವುಗಳಲ್ಲಿ (1) ಮರಾಠೀ ಸ್ವತಂತ್ರ ಭಾಷೆಯಾಗಿ ಪರಿವರ್ತನೆ ಹೊಂದಿದ ಮೇಲೆ ಸಿದ್ಧವಾದ ಕೆಲವು ಆಖ್ಯಾತಗಳು. ಇವಕ್ಕೆ ಮರಾಠೀ ವ್ಯಾಕರಣ ನಿಯಮಗಳು ಪೂರ್ತಿ ಅನ್ವಯಿಸುತ್ತವೆ. ಇವುಗಳ ರೂಪ ಮೂರು ಬಗೆಯ ಲಿಂಗಗಳಲ್ಲಿ ಇರುತ್ತವೆ. (2) ಕೆಲವು ಪ್ರತ್ಯಯಗಳು ಸಂಸ್ಕøತ ಪ್ರತ್ಯಯಗಳಿಂದ ಬಂದಿವೆ. ಭೂತಕಾಲದ ಪ್ರತ್ಯಯ-ಲಾ,-ಲಾಸ,-ಲೋ, ಭವಿಷ್ಯತ್ಕಾಲದ ಪ್ರತ್ಯಯ,-ಏನ,-ಈನ, ವರ್ತಮಾನ ಕಾಲದ ಪ್ರತ್ಯಯ-ತೋ,-ತೋಸ ಇತ್ಯಾದಿ.

ಮೂಲಧಾತುವಿಗೆ-ವ ಸೇರಿಸಿ ಪೇರಣಾರ್ಥಕ ರೂಪಿಸುತ್ತಾರೆ. ಈ ರೂಪಕ್ಕೆ ಮತ್ತೆ ಆಖ್ಯಾತ ಪ್ರತ್ಯಯ ಸೇರಿಸಿ, ಕ್ರಿಯಾಪದ ಸಿದ್ಧಪಡಿಸುತ್ತಾರೆ. ಒಂದಕ್ಷರದ ಮತ್ತು ಇ-ಕಾರಾಂತ ಧಾತುಗಳಿಗೆ-ವವ ಸೇರಿಸುತ್ತಾರೆ. ರೂಪಗಳನ್ನು ರೂಪಿಸುವಾಗ ಪ್ರೇರಣಾರ್ಥಕ ಕ್ರಿಯಾಪದಗಳಿಗೆ ಇ ಪರಸ್ಮೈಪದ ಆದೇಶವಾಗುವುದಿಲ್ಲ. ಈ ಕ್ರಿಯಾಪದಗಳನ್ನು ಕರ್ತರಿ ಪ್ರಯೋಗ-ದಲ್ಲಿ ಬಳಸುವುದಿಲ್ಲ. ವಚನ ಕರ್ತೃವಿನ ಲಿಂಗದಂತೆ ಬದಲಾಗುವುದಿಲ್ಲ. ಸಕರ್ಮಕ ಪ್ರೇರಣಾರ್ಥಕ ಕ್ರಿಯಾಪದಗಳಿಂದ ಕರ್ಮಣಿ ಪ್ರಯೋಗವಾಗುತ್ತದೆ. ಸಕರ್ಮಕ ಮತ್ತು ಅಕರ್ಮಕ ಪ್ರಯೋಗಗಳಲ್ಲಿಯ ಉದ್ದೇಶ ಚರ್ತುಥಿಯಲ್ಲಿ ಅಥವಾ ಪ್ರಾತಿಪದಿಕದ ಷಷ್ಠಿ ರೂಪದಿಂದ ಸಿದ್ಧವಾದ ತೃತೀಯಾದಲ್ಲಿರುತ್ತದೆ. ಪ್ರೇರಣಾರ್ಥಕ ಕ್ರಿಯಾಪದಗಳನ್ನು ಎರಡು ರೀತಿಯಲ್ಲಿ ಸಿದ್ಧಪಡಿಸುತ್ತಾರೆ. ಮೂಲಧಾತುವಿನ-ಅವ ಪ್ರತ್ಯಯ ಸೇರಿಸುವುದು. ಮೂಲಧಾತುವಿನಲ್ಲಿ ವ್ಯತ್ಯಾಸಮಾಡುವುದು. ಅಕಾರಾಂತ ಧಾತುಗಳಿಗೆ ಪ್ರತ್ಯಯ ಪರರೂಪ ಸಂಧಿಯಿಂದ ಇಲ್ಲವೆ. ಸಂಧಿ ನಿಯಮದಿಂದ ಸೇರುತ್ತದೆ. ಉದಾಹರಣೆಗೆ ತರವ, ಬಸವ, ನಿಜವ, ಸಮಜಾವಣಿ ನಿಭಾವಣೀ, ಸನಜವಣೀ ನಿಭವಣೀ ಇತ್ಯಾದಿ. ಅನುಕರಣವಾಚಕ ಧಾತುಗಳಿಗೆ ಸಂಸ್ಕøತದ ಸಾಮಾನ್ಯ ಸಂಧಿನಿಯಮಗಳು ಅನ್ವಯಿಸುತ್ತವೆ. ಕೃದಂತ ಪ್ರತ್ಯಯಗಳಲ್ಲಿ-ಲಾ,-ಲೀಲಾ ಭೂತಕಾಲವನ್ನೂ-ಣಾರ,-ಣಾರಾ, ಭವಿಷ್ಯತ್ಕಾಲವನ್ನೂ-ತ-ತಾ-ತಾನಾ ವರ್ತಮಾನಕಾಲವನ್ನೂ ಸೂಚಿಸುತ್ತವೆ. ನಾಮ ಮತ್ತು ಧಾತುಸಾಧಿತಗಳ ನಡುವೆ ಸಂಯೋಗವಾಗಿ ಸಂಯುಕ್ತ ಕ್ರಿಯಾಪದಗಳಾಗುವುದುಂಟು. ಉದಾಹರಣೆಗೆ ಗೋವಿಂದರಾವಾನೀ ಪುಷ್ಕಳ ಪೈಸಾ ಸಂಪಾದಕ ಕೇಲಾ (ಗೋವಿಂದರಾವನು ಹೆಚ್ಚು ಹಣ ಸಂಪಾದನೆ ಮಾಡಿದನು), ಪರಮೇಶ್ವರಾನೇ ಜಗ ಉತ್ಪನ್ನಕೇಲೇ ಆಹೇ (ಪರಮೇಶ್ವರನು ಜಗತ್ತನ್ನು ಸೃಷ್ಟಿಸಿದ್ದಾನೆ). ಕರ್ತರಿ ಪ್ರಯೋಗದಲ್ಲಿ ಕ್ರಿಯಾಪದ ಕರ್ತೃವಿನಂತೆ ನಡೆಯುತ್ತದೆ. ಕರ್ತೃವಿನಂತೆ ಕ್ರಿಯಾಪದದ ಪುರುಷ ಮತ್ತು ವಚನ ಬದಲಾಗುತ್ತವೆ. ಕರ್ತರಿ ಪ್ರಯೋಗ ಸಕರ್ಮಕ ಮತ್ತು ಅಕರ್ಮಕ ಕರ್ಮಣಿ ಪ್ರಯೋಗದಲ್ಲಿ ಕ್ರಿಯಾಪದ ಕರ್ಮದಂತೆ ನಡೆಯುತ್ತದೆ. ಆಧುನಿಕ ಮರಾಠೀಯಲ್ಲಿ ಅಕರ್ಮಕ ಕ್ರಿಯಾಪದಗಳ ಭೂತಕಾಲದಲ್ಲಿ ವಿಧ್ಯರ್ಥಕ ವಾಕ್ಯಗಳಲ್ಲಿ ಕಮ್ ಪ್ರತ್ಯಯ ರಹಿತವಾಗಿದ್ದರೆ, ಕರ್ಮಣಿ ಪ್ರಯೋಗವಾಗುತ್ತದೆ. ಭಾವೇಪ್ರಯೋಗ ಈ ಭಾಷೆಯ ಒಂದು ವೈಶಿಷ್ಟ್ಯ. ಈ ಪ್ರಯೋಗದಲ್ಲಿ ಮೂಲಕ್ರಿಯೆಯ ಕರ್ಮವನ್ನು ತೋರಿಸುವ ಶಬ್ದ ಸಪ್ರತ್ಯವಾಗಿದ್ದು ಕರ್ತೃತೃತೀಯದಲ್ಲಿರುತ್ತದೆ. ಆದ್ದರಿಂದ ಕರ್ಮದಂತೆ ಕ್ರಿಯಾಪದ ನಡೆಯುವುದಿಲ್ಲ. ಕರ್ಮ ಸಪ್ರತ್ಯವಾಗಿರುವುದರಿಂದ ಅವರ ಪ್ರಭಾವ ಕ್ರಿಯಾಪದದ ಮೇಲೆ ಆಗುವುದಿಲ್ಲ. ಆದ್ದರಿಂದ ವಾಕ್ಯದಲ್ಲಿ ಕ್ರಿಯಾಪದದ ನಪುಂಸಕಲಿಂಗ ಏಕವಚನದ ರೂಪಮಾತ್ರ ಬರುತ್ತದೆ. ಭಾವೇ ಪ್ರಯೋಗದಲ್ಲಿ ಕ್ರಿಯೆಯ ಭಾವವೇ ಕರ್ತೃ, ಮೂಲಧಾತುವಿನ ಭೂತಕಾಲವಾಚಕ ಕೃದಂತದ ಮುಂದೆ ಸಹಾಯಕ `ಅಸ ಧಾತುವಿನ ರೂಪ ಪ್ರಯೋಗವಾಗಬೇಕು. ಆಧುನಿಕ ಮರಾಠೀಯಲ್ಲಿ `ಅಸ ಧಾತು ಲೋಪವಾಗಿ ಮೂಲಭೂತ ಕಾಲವಾಚಕ ಕೃದಂತವೇ ಕ್ರಿಯಾಪದವಾಗಿರುತ್ತದೆ. ಹೀಗಾಗಿ, ಮೂಲಕ್ರಿಯೆಯ ಕರ್ತೃ, ಕರ್ಮ ಮತ್ತು ನಪುಂಸಕಲಿಂಗ ರೂಪವೇ ಕ್ರಿಯಾಪದವೆಂದು ತಿಳಿಯುವುದುಯುಕ್ತ. ಭಾವೇ ಪ್ರಯೋಗ ಸಕರ್ಮಕ ಮತ್ತು ಅಕರ್ಮಕ ಕ್ರಿಯಾಪದಕ್ಕೆ ಆಗುತ್ತದೆ. ಸ್ಥಳವಾಚಕ, ಕಾಲವಾಚಕ ಸಂಖ್ಯಾವಾಚಕ, ಪರಿಣಾಮವಾಚಕ ಮತ್ತು ಕ್ರಿಯಾವಿಶೇಷಣಗಳುಂಟು. ನಾಮಗಳು ಮತ್ತು ಅವುಗಳಂತಿರುವ ಶಬ್ದಗಳೊಡನೆ ವಿಭಕ್ತಿಪ್ರತ್ಯಯದಂತೆ ಸಂಯೋಗ ಹೊಂದುವುದರ ಮೂಲಕ ಶಬ್ದಗಳೊಡನೆ ಸಂಬಂಧ ಕಲ್ಪಿಸುವ ಸ್ವತಂತ್ರ ಶಬ್ದಯೋಗಿ ಅವ್ಯಯಗಳೆನ್ನುತ್ತಾರೆ. ಕೆಲವು ಶಬ್ದಯೋಗೀ ಅವ್ಯಯಗಳು ಕ್ರಿಯಾವಿಶೇಷಣಗಳಾಗಿರುತ್ತವೆ. ಕ್ರಿಯಾಪದಗಳೊಡನೆ ಸ್ವತಂತ್ರ ಸಂಬಂಧವಿದ್ದಾಗ ಇವು ಕ್ರಿಯಾವಿಶೇಷಣಗಳಾಗುತ್ತವೆ. ನೇರವಾಗಿ ನಾಮಗಳೊಡನೆ ಸಂಬಂಧವಿದ್ದಾಗ ಇವು ಶಬ್ದಯೋಗಿ ಅವ್ಯಯಗಳಾಗುತ್ತವೆ.

ತದ್ಧಿತ ಶಬ್ದಗಳು ರೂಪಗೊಳ್ಳುವಾಗ ಬಗೆ ಬಗೆಯ ಅಕ್ಷರಗಳು ಆದಿಯಲ್ಲಿ ಬರುತ್ತವೆ. ಸಂಸ್ಕøತದ ಅನೇಕ ಉಪಸರ್ಗಗಳು ಸೇರ್ಪಡೆಯಾಗಿವೆ. ಉದಾಹರಣೆಗೆ ಅತಿ-ಅನ-ಅಭಿ-ಉತ್-ನಿ-ಪರಾ ಇತ್ಯಾದಿ. ಮರಾಠೀಯವೇ ಆದ ಕೆಲವನ್ನು ಇಲ್ಲಿ ಉದಾಹರಿಸಬಹುದು. ಅಡ-(ಅಡಸರ)-ಅಡ-(ಆ0ಡನಾಂವ), ಪಡ-(ಪಡತಾಳಾ), ಭರ-(ಭರಪೂರ), ಘಟ-(ಘಟಫಜಿ ತಿ)

ಈ ಭಾಷೆಯಲ್ಲಿ ಸಾಮಾನ್ಯ, ಸಂಯೋಜಿತ, ಮಿಶ್ರ ಎಂಬ ವಾಕ್ಯ ಭೇಧಗಳುಂಟು. ಕರ್ಮಣಿ ಪ್ರಯೋಗದ ವಾಕ್ಯಗಳಲ್ಲಿ ಮಾತ್ರ ಕ್ರಿಯಾಪದ ಕರ್ಮದಂತೆ ಪ್ರಯೋಗವಾಗುತ್ತದೆ. ಈ ಪದ್ಧತಿ ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳಿಂದ ಬಂದಿದೆ.

ಇದರ ಉಗಮ ನಾಗರಿ ಲಿಪಿಯಿಂದ ಆಗಿದೆ. ಅಶೋಕನ ಶಿಲಾಲೇಖದ ಬ್ರಾಹ್ಮೀ, ಸಾತವಾಹನ, ಕ್ಷಹರಾತ ಮೊದಲಾದವರ ಶಿಲಾಲೇಖಗಳಲ್ಲಿಯ ಬ್ರಾಹ್ಮೀ, ವಾಕಟಾಕರ ಕಾಲದ ಪೇಟಿಕಾ-ಶೀಷಕ ಹಾಗೂ ಉತ್ತರ ಬ್ರಾಹ್ಮೀ ಲಿಪಿಯ ನಾಗರೀ ರೂಪಗಳನ್ನು ಆಧರಿಸಿ ಈ ಲಿಪಿ ಜನ್ಮ ತಳೆಯಿತು. ಸುಮಾರು 10ನೆಯ ಶತಮಾನದ ಹೊತ್ತಿಗೆ ಮರಾಠೀ ಭಾಷೆ ಮತ್ತು ಬರೆಹ ಜನ್ಮ ತಾಳಿದವೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಶ್ರವಣಬೆಳಗೊಳಗೊಮ್ಮಟೇಶ್ವರ ಮೂರ್ತಿಯ ಪಾದ ಪಕ್ಕದಲ್ಲಿರುವ ಶಿಲಾಲೇಖ ಬರೆಹ (ಸುಮಾರು 982) ಚಾವುಂಡರಾಜೇಂ ಕರವೀಯಲೇ ಎಂಬುದು ಮರಾಠೀ ಭಾಷೆಯ ಪ್ರಾಚೀನ ಬರೆಹವೆಂದು ನಂಬಲಾಗಿತ್ತು. ಈ ಶಿಲಾಲಿಪಿ 12ನೆಯ ಶತಮಾನದ್ದೆಂದು ಎಚ್. ಜಿ. ತುಳಪುಳ ಮತ್ತು ಎ.ಎಸ್. ಆಳ್ತೆಕರ್ ಅವರು ನಿರ್ಧರಿಸಿದ್ದಾರೆ. ಶಿಲಹಾರಕೇಶಿದೇವನ ಅಕ್ಷೀಗ್ರಾಮದ ಶಿಲಾಲೇಖವೇ(1012) ಪ್ರಾಚೀನಬರೆಹವೆಂದು ತುಳಪುಳೆ ಅಭಿಪ್ರಾಯ ಪಟ್ಟಿದ್ದಾರೆ. ಎಮ್ ಜಿ. ದೀಕ್ಷಿತ ಎಂಬುವರು ಇದರ ಕಾಲ 1210 ಎಂದಿದ್ದಾರೆ. 1060ರ ದಿವೇ ಅಗರ್ ತಾಮ್ರಪಟ್ಟಿಕೆಯೇ ಪುರಾತನ ಶಿಲಾಲೇಖ ಎಂಬುದಾಗಿ ಅಭಿಪ್ರಾಯ ಪಟ್ಟಿರುವವರೂ ಉಂಟು. ಮುಕುಂದರಾಜನ ವಿವೇಕ ಸಿಂಧು ಎಂಬುದು ಪ್ರಾಚೀನ ಉಪಲಬ್ಧ ಗ್ರಂಥ(12ನೆಯ ಶತಮಾನ). ಅನಂತರದ್ದು ಜ್ಞಾನೇಶ್ವರಿ (1290), ತರುವಾಯದ್ದು ಮಹಾನುಭಾವ ಸಾಹಿತ್ಯ(13ನೆಯ ಶತಮಾನ). ಈ ಲಿಪಿ ಬಳಕೆ ದೇವಗಿರಿಯ ಯಾದವರ ಕಾಲದಲ್ಲಿ ಪ್ರಾಚುರ್ಯಕ್ಕೆ ಬಂದಿತ್ತು. ಇದನ್ನು ಪೃಷ್ಠಮಾತ್ರಾ ಶಿರೋಮಾತ್ರಾ ಮತ್ತು ಮೋಡಿ ಎಂಬುದಾಗಿ ವರ್ಗೀಕರಿಸಲಾಗಿದೆ. ಮರಾಠೀ ಮೊತ್ತ ಮೊದಲ ಬರಹಗಳನ್ನು ಪೃಷ್ಠ ಮಾತ್ರಾಶಿರೋಮಾತ್ರಾ ಇಲ್ಲವೇ ಇವೆರಡು ಮಿಶ್ರಣ ರೂಪದಲ್ಲಿ ಬರೆಯಲಾಗಿದೆ. ಕನ್ನಡ ಲಿಪಿಯಲ್ಲೂ ಬರೆದಿರುವ ನಿರ್ದೇಶನ ಉಂಟು ಉದಾಹರಣೆಗೆ ಶಾ.ಶ. 1271ರ ಕ್ರಿಶ. 1349) ವಿಮ್ನಮಂತ್ತಿಯ ಖಾಟೇಗ್ರಾಮದ ಮರಾಠೀ ತಾಮ್ರಪಟ.

ಶತಮಾನಗಳು ಕಳೆದಂತೆ ಈ ಲಿಪಿಯ ಒಂದೊಂದು ಅಕ್ಷರವೂ ತನ್ನ ಸ್ವರೂಪದಲ್ಲಿ ವ್ಯತ್ಯಾಸ ಪಡೆದಿದೆ. ಆ, ಇ, ಏ, ಓ, ಗಮನಾರ್ಹ ಬೆಳವಣಿಗೆ ಪಡೆದ ಅಕ್ಷರಗಳು (ಇ) ಮತ್ತು ತ್ರಿಕೋನಾಕೃತಿಯ ಏ ಅಕ್ಷರ ಯಾವುದಾದರೂ ದಾಖಲೆಯಲ್ಲಿದ್ದಾರೆ ಅವು ಲಿಪಿಯ ಪ್ರಾಚೀನತೆಯನ್ನು ಸೂಚಿಸುತ್ತವೆ.

ಚ,ಛ,ಜ,ಣ,ಥ,ಧ,ಬ.ಭ,ರ,ಸ ಅಕ್ಷರಗಳ ಚಾಕ್ಷುಷರೂಪಗಳು ಪ್ರಸ್ತುತ ಬಳಕೆಯಲ್ಲಿರುವ ಲಿಪಿಗೆ ಹತ್ತಿರವೇ ಆದ ರೂಪಗಳನ್ನು ಪಡೆದಿದ್ದುವು,ಶ-ಸ,ಲ-ಳ, ಇವು ಉಚ್ಚಾರಣಾ ಸಾಮ್ಯದಿಂದ ಒಂದರ ಸ್ಥಳದಲ್ಲಿ ಇನ್ನೊಂದು ಸಹಜವಾಗಿ ಪ್ರಯೋಗವಾಗುತ್ತಿದ್ದುವು. ಚ-ವ, ಪ-ಯ, ಧ-ಬ, ಉ-ಡ, ಇವು ಚಾಕ್ಷುಷ ರೂಪಸಾದೃಶ್ಯ ಪಡೆದಿದ್ದುವು. ಅನುಸ್ವಾರವನ್ನು ಅರ್ಧಚಂದ್ರಾಕೃತಿಯಲ್ಲಿ ಬರೆಯಲಾಗುತ್ತಿತ್ತು.

ಕ್ರಿ.ಶ. ಸು. 14-15ನೆಯ ಶತಮಾನದಲ್ಲಿ ಮೋಡೀ ಲಿಪಿ ಬಳಕೆಗೆ ಬಂದಿರಬಹುದು. ಬಹುಮನೀ ಸುಲ್ತಾನ್ ಮುಜಾಹಿದ್ ದೊರೆಯ ಕಾಲದ(1375-78) ಒಂದು ತಾಮ್ರಪಟ ಸದ್ಯ ಪ್ರಾಚೀನ ದಾಖಲೆ. ಆಂಧ್ರಪ್ರದೇಶ ಸರ್ಕಾರದ ಪುರಾತತ್ತ್ವ ಇಲಾಖೆಯಲ್ಲಿರುವ ಈ ದಾಖಲೆಯನ್ನು ಭುಸಾರೆ ಸಂಪಾದಿಸಿದ್ದಾರೆ. ಮೋಡೀಲಿಪಿಯನ್ನು ಮೊದಲು ಹೇಮಾದ್ರಿ ಮಂತ್ರಿ (13ನೆಯ ಶತಮಾನ) ಬಳಕೆಯಲ್ಲಿ ತಂದನು. ತ್ವರಿತವಾಗಿ ಬರೆಯಲು ಮೋಡೀ ಲಿಪಿಯನ್ನು ಬಳಸುತ್ತಿದ್ದುದರಿಂದ ಚಿರಸ್ಮಾರಕಗಳಾದ ಶಿಲಾಲೇಖಗಳಲ್ಲಿ ಅದನ್ನು ಬಳಸಲಿಲ್ಲವೆಂದು ತೋರುತ್ತದೆ. ಆದರೂ ಅದರ ಪ್ರಭಾವ ಬರೆವಣಿಗೆಯ ಮೇಲೆ ಸಾಕಷ್ಟು ಆಗಿದೆ. ಪಂಕ್ತಿಯ ಆರಂಭದಿಂದ ಅಂತ್ಯದವರೆಗೆ ಎಲ್ಲಿಯೂ ನಿಲ್ಲಿಸದೆ ಏಕಪ್ರಕಾರವಾಗಿ ಬರೆದುಕೊಂಡುಹೋಗುವ ಒಂದು ಕ್ಲಿಷ್ಟ ಬರೆವಣಿಗೆ ಮೋಡೀ ಲಿಪಿಯದು ಎನ್ನಬಹುದು.

ಇದನ್ನೂ ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Delhi Marathi. Delhi Marathi. Retrieved on 2013-07-28.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
Dictionaries
 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಮರಾಠಿ&oldid=1221019" ಇಂದ ಪಡೆಯಲ್ಪಟ್ಟಿದೆ