ವಾಕಾಟಕ ರಾಜವಂಶ ಕ್ರಿ.ಶ. ೩ನೇ ಶತಮಾನದ ಮಧ್ಯದಲ್ಲಿ ದಖ್ಖನದಿಂದ ಹುಟ್ಟಿಕೊಂಡ ಭಾರತೀಯ ಉಪಖಂಡದ ಒಂದು ರಾಜವಂಶ. ಇವರ ರಾಜ್ಯವು ಉತ್ತರದಲ್ಲಿ ಮಾಲ್ವಾದ ದಕ್ಷಿಣ ಅಂಚುಗಳು ಹಾಗು ಗುಜರಾತ್‍ನಿಂದ ದಕ್ಷಿಣದಲ್ಲಿ ತುಂಗಭದ್ರಾ ನದಿವರೆಗೆ, ಜೊತೆಗೆ ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ ಪೂರ್ವದಲ್ಲಿ ಛತ್ತೀಸ್‍ಗಢ್‍ನ ಅಂಚುಗಳವರೆಗೆ ವಿಸ್ತರಿಸಿತ್ತು ಎಂದು ನಂಬಲಾಗಿದೆ. ಇವರು ದಖ್ಖನದಲ್ಲಿ ಸಾತವಾಹನರ ಅತ್ಯಂತ ಮುಖ್ಯ ಉತ್ತರಾಧಿಕಾರಿಗಳಾಗಿದ್ದರು ಮತ್ತು ಉತ್ತರ ಭಾರತದ ಗುಪ್ತರೊಂದಿಗೆ ಸಮಕಾಲೀನರಾಗಿದ್ದರು.

ಕ್ರಿ.ಶ. ೩೭೫ರಲ್ಲಿ ವಾಕಾಟಕ ಪ್ರಾಂತ್ಯಗಳ ಅಂದಾಜು ವಿಸ್ತಾರ

ವಾಕಾಟಕ ರಾಜವಂಶವು ಒಂದು ಬ್ರಾಹ್ಮಣ ರಾಜವಂಶವಾಗಿತ್ತು.[೧] ಈ ವಂಶದ ಸಂಸ್ಥಾಪಕನಾದ ವಿಂಧ್ಯಶಕ್ತಿ (ಕ್ರಿ.ಶ. ೨೫೦ - ೨೭೦) ಬಗ್ಗೆ ಕಡಿಮೆ ತಿಳಿದಿದೆ. ಇವನ ಮಗ ಮೊದಲನೇ ಪ್ರವರಸೇನನ ಆಳ್ವಿಕೆಯಲ್ಲಿ ಪ್ರಾದೇಶಿಕ ವಿಸ್ತರಣೆ ಆರಂಭವಾಯಿತು. ಮೊದಲನೇ ಪ್ರವರಸೇನನ ನಂತರ ವಾಕಾಟಕ ರಾಜವಂಶವು ನಾಲ್ಕು ಶಾಖೆಗಳಾಗಿ ವಿಭಜನೆಗೊಂಡಿತು ಎಂದು ಸಾಮಾನ್ಯವಾಗಿ ನಂಬಲಾಗಿದೆ. ಎರಡು ಶಾಖೆಗಳು ಪರಿಚಿತವಾಗಿವೆ ಮತ್ತು ಎರಡು ಅಜ್ಞಾತವಾಗಿವೆ. ತಿಳಿದಿರುವ ಶಾಖೆಗಳೆಂದರೆ ಪ್ರವರಪುರ-ನಂದೀವರ್ಧನ ಶಾಖೆ ಮತ್ತು ವತ್ಸಗುಲ್ಮ ಶಾಖೆಗಳು. ಗುಪ್ತ ಸಾಮ್ರಾಟ ಎರಡನೇ ಚಂದ್ರಗುಪ್ತನು ತನ್ನ ಮಗಳನ್ನು ವಾಕಾಟಕ ಅರಸ ಕುಟುಂಬದಲ್ಲಿ ವಿವಾಹ ಮಾಡಿಕೊಟ್ಟನು ಮತ್ತು ಅವರ ಬೆಂಬಲದಿಂದ ಕ್ರಿ.ಶ. ೪ನೇ ಶತಮಾನದಲ್ಲಿ ಶಕ ಕ್ಷತ್ರಪರಿಂದ ಗುಜರಾತನ್ನು ಸೇರಿಸಿಕೊಂಡನು. ದಖ್ಖನದಲ್ಲಿ ವಾಕಾಟಕ ರಾಜವಂಶವನ್ನು ಬಾದಾಮಿ ಚಾಳುಕ್ಯರು ಅನುಸರಿಸಿದರು.

ವಾಕಾಟಕರು ಕಲೆ, ವಾಸ್ತುಶಿಲ್ಪ ಮತ್ತು ಸಾಹಿತ್ಯದ ಪೋಷಕರಾಗಿದ್ದಕ್ಕಾಗಿ ಗುರುತಿಸಲ್ಪಟ್ಟಿದ್ದಾರೆ. ಇವರು ಸಾರ್ವಜನಿಕ ಕಾರ್ಯಗಳನ್ನು ಮುನ್ನಡೆಸಿದರು ಮತ್ತು ಇವರ ಸ್ಮಾರಕಗಳು ಪ್ರತ್ಯಕ್ಷ ಪರಂಪರೆಯಾಗಿವೆ. ಅಜಂತಾ ಗುಹೆಗಳ (ಯುನೆಸ್ಕೊ ವಿಶ್ವ ಪರಂಪರೆ ತಾಣ) ಬಂಡೆಯಲ್ಲಿ ಕೆತ್ತಿದ ಬೌದ್ಧ ವಿಹಾರಗಳು ಮತ್ತು ಚೈತ್ಯಗಳನ್ನು ವಾಕಾಟಕ ಸಾಮ್ರಾಟ ಹರಿಶೇಣನ ಪೋಷಣೆಯ ಅಡಿಯಲ್ಲಿ ಕಟ್ಟಲಾಯಿತು.

ವಿಂಧ್ಯಶಕ್ತಿ (೨೫೦-೨೭೦) ಈ ರಾಜವಂಶದ ಸಂಸ್ಥಾಪಕ. ಇವನ ಹೆಸರು ವಿಂಧ್ಯಾ ದೇವತೆಯ ಹೆಸರಿನಿಂದ ಹುಟ್ಟಿಕೊಂಡಿದೆ. ಈ ರಾಜವಂಶ ಅಲ್ಲಿ ಹುಟ್ಟಿಕೊಂಡಿರಬಹುದು. ವಿಂಧ್ಯಶಕ್ತಿಯ ಬಹುತೇಕ ಎನೂ ಗೊತ್ತಿಲ್ಲ. ಅಜಂತಾದ ಹದಿನಾರನೇ ಗುಹೆಯ ಅಭಿಲೇಖದಲ್ಲಿ ಇವನನ್ನು ವಾಕಾಟಕ ಕುಟುಂಬದ ಧ್ವಜ ಹಾಗೂ ಒಬ್ಬ ದ್ವಿಜನೆಂದು ವರ್ಣಿಸಲಾಗಿದೆ. ದೊಡ್ಡ ಯುದ್ಧಗಳನ್ನು ಹೊಡೆದಾಡಿ ಇವನು ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡನು ಮತ್ತು ಇವನು ದೊಡ್ಡ ಅಶ್ವದಳವನ್ನು ಹೊಂದಿದ್ದನು ಎಂದು ಈ ಶಾಸನದಲ್ಲಿ ಹೇಳಲಾಗಿದೆ. ಆದರೆ ಈ ಶಾಸನದಲ್ಲಿ ಇವನ ಹೆಸರ ಹಿಂದೆ ಯಾವುದೇ ಸಾಮ್ರಾಜ್ಯಶಾಹಿ ಬಿರುದನ್ನು ಸೇರಿಸಲಾಗಿಲ್ಲ. ಇವನು ೯೬ ವರ್ಷಗಳು ಆಳಿದನು ಎಂದು ಪುರಾಣಗಳು ಹೇಳುತ್ತವೆ.

ಉಲ್ಲೇಖಗಳು ಬದಲಾಯಿಸಿ