ಮಡಿವಾಳ (ಹಕ್ಕಿ)
ಮಡಿವಾಳ ಹಕ್ಕಿ | |
---|---|
Male in Malaysia | |
Conservation status | |
Scientific classification | |
ಸಾಮ್ರಾಜ್ಯ: | ಆನಿಮೇಲಿಯಾ
|
ವಿಭಾಗ: | ಕಾರ್ಡೇಟಾ
|
ವರ್ಗ: | |
ಗಣ: | ಪ್ಯಾಸರಿಫ಼ಾರ್ಮೀಸ್
|
ಕುಟುಂಬ: | ಮಸ್ಕಿಕ್ಯಾಪಿಡೇ
|
ಕುಲ: | ಕಾಪ್ಸಿಕಸ್
|
ಪ್ರಜಾತಿ: | ಕಾ. ಸೌಲ್ಯಾರಿಸ್
|
Binomial name | |
ಕಾಪ್ಸಿಕಸ್ ಸೌಲ್ಯಾರಿಸ್ (Linnaeus, 1758)
|
ಮಡಿವಾಳ ಹಕ್ಕಿಯು (Copsychus saularis) ಪ್ಯಾಸೆರೀನ್ ಜಾತಿಯ ಒಂದು ಸಣ್ಣ ಪಕ್ಷಿಯಾಗಿದೆ. ಹಿಂದೆ ಹಾಡುಹಕ್ಕಿ ಕುಟುಂಬ ಶಿಳ್ಳಾರ (Turdidae)ದ ಸದಸ್ಯವಾಗಿ ವರ್ಗೀಕರಿಸಲಾಗಿತ್ತು, ಆದರೆ ಅನಂತರ ನೊಣಹಿಡುಕ (ಫ್ಲೈಕ್ಯಾಚರ್) ಎಂದು ಪರಿಗಣಿಸಲಾಗಿದೆ. ಇದು ಬುಲ್‍ಬುಲ್ ಪಕ್ಷಿಯ ಗಾತ್ರದ್ದು. ಇವು ನೆಟ್ಟಗೆ ಎದ್ದಿರುವ ಉದ್ದ ಬಾಲದ, ಕಪ್ಪು ಮತ್ತು ಬಿಳಿ ಬಣ್ಣದ, ನೆಲದ ಮೇಲೆ ಮೇಯುವ ಅಥವಾ ಕುಳಿತುಕೊಳ್ಳುವ ವಿಶಿಷ್ಟ ಪಕ್ಷಿಗಳು. ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದ ಭಾಗಗಳಲ್ಲಿ ಕಂಡುಬರುವ ಪಕ್ಷಿ. ಇವು ತೋಟಗಳಲ್ಲಿ ಹಾಗೂ ಕಾಡುಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ. ಹಳ್ಳಿ, ಊರುಗಳ ಸುತ್ತಮುತ್ತಲಿನ ಪೊದೆ ಕಾಡುಗಳಲ್ಲಿ ವಾಸಿಸುತ್ತದೆ. ನಗರಗಳ ಉದ್ಯಾನವನಗಳಲ್ಲೂ ಇದನ್ನು ನೋಡಬಹುದು. ಭಾರತಾದ್ಯಂತ ಇದರ ವ್ಯಾಪ್ತಿಯುಂಟು. ಇವು ತಮ್ಮ ಇಂಪಾದ ಹಾಡು ದನಿಯಿಂದ ಹೆಸರುವಾಸಿಯಾಗಿವೆ ಮತ್ತು ಒಂದು ಕಾಲದಲ್ಲಿ ಪಂಜರದ ಹಕ್ಕಿಯಾಗಿ ಜನಪ್ರಿಯವಾಗಿತ್ತು. ಈ ಹಕ್ಕಿಯನ್ನು ಬಾಂಗ್ಲಾದೇಶದ ರಾಷ್ಟ್ರೀಯ ಪಕ್ಷಿ ಎಂದು ಪರಿಗಣಿಸಲಾಗಿದೆ.
ಇವು ಗಾತ್ರದಲ್ಲಿ ಸಾಮಾನ್ಯ ಗುಬ್ಬಿಗಿಂತ ಸ್ವಲ್ಪ ದೊಡ್ಡದಾಗಿರುತ್ತವೆ. ಸುಮಾರು 20 ಸೆಂಮೀ ಉದ್ದದ ಹಕ್ಕಿಯಿದು. ಗಂಡುಹಕ್ಕಿಗೆ ತಲೆಯಿಂದ ಎದೆಯವರೆಗೆ ಕಪ್ಪು ಹಾಗೂ ಅದರ ಕೆಳಗೆ ಬಾಲದ ತುದಿಯವರೆಗೆ ಬಿಳಿಯ ಬಣ್ಣವಿರುತ್ತದೆ. ಬೆನ್ನು ಪೂರ್ತಿ ಕಪ್ಪಾಗಿದ್ದು, ಭುಜದ ಭಾಗದಲ್ಲಿ ಬಿಳಿಪಟ್ಟಿಯಿರುತ್ತದೆ. ಹೆಣ್ಣುಹಕ್ಕಿಗೆ ತಲೆಯಿಂದ ಎದೆಯವರೆಗೆ ಬೂದುಬಣ್ಣವಿರುತ್ತದೆ. ಎರಡರ ಉದರ ಭಾಗ ಮಾತ್ರ ಬಿಳಿ. ರೆಕ್ಕೆಗಳ ಮೇಲೆ ಬಿಳಿಬಣ್ಣದ ಗುರುತುಂಟು. ಬಣ್ಣಗಳಲ್ಲಿ ಕೆಲವು ಮಟ್ಟಿನ ವೈವಿಧ್ಯಗಳು ಕಂಡುಬರುತ್ತವೆ. ಒಂಟೊಂಟಿಯಾಗಿ ಇಲ್ಲವೆ ಗಂಡು ಹೆಣ್ಣು ಜೋಡಿಗಳಲ್ಲಿ ಓಡಾಡಿಕೊಂಡಿರುತ್ತವೆ. ಮಾರ್ಚಿನಿಂದ ಜುಲೈವರೆಗೆ ಇವುಗಳ ಸಂತಾನಾಭಿವೃದ್ಧಿ ಕಾಲ. ಆ ಕಾಲದಲ್ಲಿ ಗಂಡು ಹಕ್ಕಿ ಮರಗಳ ಇಲ್ಲವೆ ಕಂಬಗಳ ತುದಿ ಕುಳಿತು ಬಾಲವನ್ನು ಆಗಾಗ್ಗೆ ಮೇಲಕ್ಕೆ ಹಾರಿಸುತ್ತ ಇಂಪಾಗಿ ಗಟ್ಟಿಯಾಗಿ ಹಾಡುತ್ತದೆ. ತನ್ನ ಕ್ಷೇತ್ರದೊಳಗೆ ಬೇರೆ ಗಂಡುಗಳಾವುವನ್ನೂ ಬಿಡದೆ ಕಾಯ್ದುಕೊಳ್ಳುತ್ತದೆ. ಹೆಣ್ಣು ಗೂಡಿನಲ್ಲಿದ್ದು ಮರಿಗಳ ಆರೈಕೆ ನೋಡಿಕೊಂಡರೆ, ಗಂಡು ರಕ್ಷಣೆಯ ಕೆಲಸ ಮಾಡುತ್ತದೆ. ರೆಂಬೆಕವಲು, ಪೊಟರೆ, ಕಲ್ಲು ಬಂಡೆಗಳ ಬಿರುಕುಗಳಲ್ಲಿ ಅಥವಾ ಮನೆಗಳ ಸೂರಿನ ಸಂದುಗೊಂದುಗಳಲ್ಲಿ ಹುಲ್ಲು ನಾರು ಇತ್ಯಾದಿಗಳಿಂದ ಬಟ್ಟಲಾಕಾರದ ಗೂಡು ಕಟ್ಟುತ್ತದೆ.[೩] ಮೂರು ನಾಲ್ಕು ಹಸುರು ಬಣ್ಣದ ಮೊಟ್ಟೆಗಳನ್ನಿಡುವುದು. ಕಾವುಕೊಡುವ ಕಾರ್ಯ ಹೆಣ್ಣಿನದು.
ಆಹಾರ
ಬದಲಾಯಿಸಿಸಣ್ಣ ಹುಳುಗಳು, ಮಣ್ಣಿನಲ್ಲಿ ಸಿಕ್ಕುವ ಕೀಟಗಳು, ಬೂರುಗ, ಹಾಲುವಾಣ ಮುಂತಾದ ವೃಕ್ಷಗಳ ಮಕರಂದ, ಚಿಕ್ಕ ಮೀನುಗಳು[೪] ಇವುಗಳ ಆಹಾರ.
ವಿಶೇಷತೆಗಳು
ಬದಲಾಯಿಸಿಇಂಪಾದ ದನಿಯಿಂದ ಹಾಡುತ್ತವೆ. ಇತರ ಪಕ್ಷಿಗಳ ದನಿಯನ್ನು ಅನುಕರಿಸಿ ಕೂಗುತ್ತವೆ. ಕೂಗುವಾಗ ಇದರ ಬಾಲ ನೆಟ್ಟಗೆ ಎದ್ದು ನಿಲ್ಲುತ್ತದೆ.
ಹೊರ ಸಂಪರ್ಕಗಳು
ಬದಲಾಯಿಸಿ- Oriental Magpie Robin videos, photos & sounds on the Internet Bird Collection
- Magpie-robin in Banglapedia
- Introduction to Oriental Magpie Robin
ಉಲ್ಲೇಖಗಳು
ಬದಲಾಯಿಸಿ- ↑ BirdLife International (2004). Copsychus saularis. 2006. IUCN Red List of Threatened Species. IUCN 2006. www.iucnredlist.org. Retrieved on 12 May 2006.
- ↑ ಮಡಿವಾಳ ಪಕ್ಷಿ oriental magpie robin (Copsychus saularis) Archived 2017-10-01 ವೇಬ್ಯಾಕ್ ಮೆಷಿನ್ ನಲ್ಲಿ., ಲೇ: ಸುನಿಲ್ ಬಾರ್ಕೂರು, ವಿಜಯವಾಣಿ, ೧೭ಸೆಪ್ಟೆಂಬರ್೨೦೧೭
- ↑ ಮಡಿವಾಳ ಹಕ್ಕಿ, ಹಕ್ಕಿಪುಕ್ಕ.ಕಾಂ
- ↑ Sharma, Satish Kumar (1996). "Attempts of female Magpie Robin to catch a fish". J. Bombay Nat. Hist. Soc. 93 (3): 586.