ಬಿ. ಮಂಜಮ್ಮ ಜೋಗತಿ ಮಂಗಳಮುಖಿಯರಲ್ಲಿ ಬಹಳ ಪ್ರಮುಖ ಹೆಸರು . ಈಕೆ ತೃತೀಯಲಿಂಗವಾಗಿ ರೂಪಾಂತರಗೊಳ್ಳುವ ಸಂದರ್ಭದಲ್ಲಿ, ಕೌಟುಂಬಿಕ ಬಹಿಷ್ಕಾರಕ್ಕೆ ಒಳಗಾಗಿ, ನಂತರ ತಮ್ಮ ಬದುಕನ್ನು ಕಟ್ಟಿಕೊಂಡ[೧] ಮನನನೀಯವಾದುದು. ಅವರು ಕೌಟುಂಬಿಕ ಬಹಿಷ್ಕಾರಕ್ಕೆ ಒಳಗಾಗುವ ವೇಳೆಗಾಗಲೇ ಸ್ವೀಕರಿಸಿದ್ದ 'ಜೋಗತಿ' ವೃತ್ತಿಯನ್ನೇ ಬದುಕಿಗೆ ಆಧಾರ ಮಾಡಿಕೊಂಡು, ತಮ್ಮ ೧೮ನೇ ವಯಸ್ಸಿನಿಂದ ಕಲಾಸೇವೆ ಮಾಡುತ್ತಾ, [೨]ಜನಪದ ನೃತ್ಯದ ಮೂಲಕ ಗ್ರಾಮ, ಜಾತ್ರೆ,ಸಂತೆ, ವೇದಿಕೆ ಮುಂತಾದ ಸ್ಥಳಗಳಲ್ಲಿ ಈವರೆಗೆ ಸಾವಿರಾರು ಪ್ರದರ್ಶನಗಳನ್ನು ಕರ್ನಾಟಕದಾದ್ಯಂತ ನೀಡಿದ್ದಾರೆ[೩]

ಜನನಸಂಪಾದಿಸಿ

 • ಈಕೆ ಬಳ್ಳಾರಿ ಜಿಲ್ಲೆಯ ಕಲ್ಲುಕಂಬದವರು. 'ತಗ್ಗಿನ ಮಠ' ಎಂಬ ಊರಿನಲ್ಲಿ ಓಣಿಯಲ್ಲಿ ಹುಟ್ಟಿದರು. ಜನ್ಮನಾಮ ಮಂಜುನಾಥ. ಶಾಲಾ ದಾಖಲಾತಿಗಳಲ್ಲಿ ಕುಮಾರ ಬಿ. ಮಂಜುನಾಥಶೆಟ್ಟಿ ಎಂದು ದಾಖಲಾಗಿದೆ. ಜನ್ಮ ದಿನಾಂಕ ೧೮-೦೪-೧೯೬೪. ವಿದ್ಯಾ ಅರ್ಹತೆ ಎಸ್.ಎಸ್.ಎಲ್.ಸಿ. ತಂದೆ ಶ್ರೀ ಹನುಮಂತಯ್ಯ ಶೆಟ್ಟಿ, ತಾಯಿ ಶ್ರೀಮತಿ ಜಯಲಕ್ಷ್ಮೀ[೪][೫]

ಜೀವನಸಂಪಾದಿಸಿ

 • ಅವರನ್ನು ಶಾಲೆಗೆ ಸೇರಿಸುವ ದಿನ ಕೃಷ್ಣ ವೇಷ ಹಾಕಿ, ಜುಟ್ಟು ಕಟ್ಟಿ, ಕೊರಳಿಗೆ ಮಂಡಕ್ಕಿ ಸರ, ಕಲ್ಲಂಗಡಿ ಬೀಜ ಮತ್ತು ಕರಬೂಜ ಹಣ್ಣಿನ ಬೀಜದ ಮಾಲೆ ಹಾಕಿ, ಶಾಲೆಯಲ್ಲಿ ಪೂಜೆ ಮಾಡಿ, ತೆಂಗಿನ ಕಾಯಿ, ಕೊಬ್ರಿ, ಬೆಲ್ಲ, ಮಂಡಕ್ಕಿ ಮಿಶ್ರಣ ಮಾಡಿ ಮಕ್ಕಳಿಗೆಲ್ಲ ಹಂಚಿದ್ರು. ಅಂದು ಒಂದು ಮಗು ಶಾಲೆ ಸೇರುತ್ತದೆ ಎಂದರೆ ಸಂಭ್ರಮ, ಖುಷಿ ಇತ್ತು.
 • ಮಂಜಮ್ಮ ಏಳನೇ ತರಗತಿ ಓದುವಾಗಲೇ ತನ್ನ ಶರೀರದಲ್ಲಿ ಏನೋ ಬದಲಾವಣೆಯಾಗುತ್ತಿರುವಂತೆ ಭಾಸವಾಗಿ, ಯಾರ ಮುಂದೆಯು ಹೇಳಿಕೊಳ್ಳಲು ಆಗದಂತಹ ನೋವು, ಸಂಕಟ ಸಂಗತಿಗಳು ಇರುವಂತೆ ಭಾಸವಾಯಿತು. ಇತ್ತ ಹುಡುಗರೊಂದಿಗೂ ಹೊಂದಿಕೊಳ್ಳಲಾಗುತ್ತಿರಲಿಲ್ಲ, ಅತ್ತ ಹುಡುಗಿಯರೊಂದಿಗೂ ಹೊಂದಿ ಕೊಳ್ಳಲಾಗುತ್ತಿರಲಿಲ್ಲ. ಆ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಹಾಗೆ ಇರಬೇಕು, ಬದುಕ ಬೇಕು ಎಂಬ ಭಾವನೆಗಳನ್ನು ಹತ್ತಿಕ್ಕಿ ಕೊಳ್ಳಲಾರದೆ, ಶಾಲೆಯ ನಾಟಕಗಳಲ್ಲಿ ಸ್ತ್ರೀ ಪಾತ್ರಗಳನ್ನು ಮಾಡುತ್ತಿದ್ದರು.
 • ಹತ್ತನೆ ತರಗತಿ ಓದುವಷ್ಟರ ಹೊತ್ತಿಗೆ ಎಲ್ಲರಿಗೂ ಕಾಣುವಂತೆ ಶರೀರದಲ್ಲಿ ಹಲವಾರು ಮಾರ್ಪಾಡುಗಳಾದುವು. ಮಂಜುನಾಥಶೆಟ್ಟಿಯ ಇಡೀ ನಡವಳಿಕೆ ಹೆಣ್ಣಿನಂತೆ ಆಗಿಬಿಟ್ಟಿತು. ಹಾಗಾಗಿ ಅವರ ತಂದೆ ಹನುಮಂತಯ್ಯ ಶೆಟ್ಟಿ ಶಾಲೆ ಬಿಡಿಸಿ ಮಗನನ್ನು ಪಿಗ್ಮಿ ಸಂಗ್ರಹಿಸಲು ಕಳುಹಿಸ ತೊಡಗಿದರು. ಹುಡುಗಿಯಂತಾಡಿದರೆ ಬಡಿಗೆಯಿಂದ ಬಡಿಯ ತೊಡಗಿದರು.
 • ಏಕೆಂದರೆ ಇವರ ಕುಟುಂಬದಲ್ಲಿಯ ಒಬ್ಬರು ಈಗಾಗಲೇ ಈ ರೀತಿಯೇ ಆಗಿದ್ದರು. ಅವರು ಮಂಜುನಾಥಶೆಟ್ಟಿಗೆ ಮಾವನಾಗಬೇಕು. ಇವರ ತೌರಿನವರು ಅವರನ್ನು ಆ ಮಾವನ ಮನೆಯಲ್ಲಿಯೂ ಸ್ವಲ್ಪ ದಿನ ಬಿಟ್ಟಿರುತ್ತಾರೆ. ಅವರ ಮಾವ ಮಂಜುನಾಥಶೆಟ್ಟಿಯನ್ನು ಸಂತೈಸುವ ಮೊದಲು, ಅವನಿಗೆ ದಿನ ಹೊಡೆದು ಆ ಮನಃಸ್ಥಿತಿಯಿಂದ ದೂರವಿಡಲು ಪ್ರಯತ್ನಿಸಿ ಸೋಲುತ್ತಾರೆ.
 • ಮಂಜುನಾಥಶೆಟ್ಟಿಯ ಮೈಮೇಲೆ ಹುಲಿಗೆಮ್ಮ ಬರುತ್ತಾಳೆಂಬ ಪುಕಾರನ್ನು ಆ ಊರಿನ ಜನರು ಮನೆಯವರಿಗೆ ತಿಳಿಸಿ, ನಂತರ ಮನೆಯವರು ತಮ್ಮ ಮನೆತನದ ಮಾನ ಮರ್ಯಾದೆ ಉಳಿಸಿಕೊಳ್ಳಲು ಮಂಜುನಾಥಶೆಟ್ಟಿಯನ್ನು ಹುಲಿಗೆಮ್ಮ ದೇವತೆಗೆ ಮುಡಿಪಾಗಿಡಲು ನಿರ್ಧರಿಸುವರು.
 • ಹೊಸಪೇಟೆ ತಾಲೂಕು ಹುಲಿಗಿ ಗ್ರಾಮದ ಸುಪ್ರಸಿದ್ಧ ಹುಲಿಗೆಮ್ಮ ದೇಗುಲದಲ್ಲಿ ಜೋಗತಿಯಾಗಿ ದೀಕ್ಷೆ ಕೊಡಿಸುತ್ತಾರೆ. ಏಕೆಂದರೆ ದೈವಿ ಸ್ವರೂಪದ ಜೋಗತಿಯರು ಅನೈತಿಕ ಕೆಲಸಗಳನ್ನು ಮಾಡುವುದು ಕಡಿಮೆ ಎಂಬ ನಂಬಿಕೆ. ಮುತ್ತು ಕಟ್ಟಿಸಿಕೊಂಡ ಮೇಲೆ ಮನೆಯವರ ಅನಾದರಣೆಯನ್ನು ಸಹಿಸಲಾರದೆ ಸಾಯುವ ತೀರ್ಮಾನ ಕೈಗೊಂಡು,ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ಮನೆಯವರು ಚಿಗಟೇರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಿಟ್ಟವರು ತಿಂಗಳಾದರೂ ಮಗಳನ್ನು ತಿರುಗಿ ನೋಡುವುದಿಲ್ಲ.
 • ಆಗ ಮಂಜಮ್ಮ ಮನದಲ್ಲೇ ಬದುವ ನಿರ್ಧಾರ ಕೈಗೊಂಡು ಒಬ್ಬೊಂಟಿಯಾಗಿ, ಸಮಾಜಮುಖಿಯಾಗುತ್ತಾರೆ. ಅವರಿಗೆ ಗುರುವಾಗಿ, ತಾಯಿಯಾಗಿ ಕಾಳಮ್ಮ ಜೋಗತಿ ಸಿಗುತ್ತಾರೆ. ಅವರು ಮಂಜಮ್ಮಜೋಗತಿಯನ್ನು ತಮ್ಮ ಮನೆ ಮಗಳಾಗಿ ಕಂಡು, ಅವಳಿಗೆ ತಾವು ಕಲಿತಿದ್ದ ಸಕಲ ವಿದ್ಯೆಯನ್ನು ಧಾರೆ ಎರೆಯುತ್ತಾರೆ. ಸಾಯುವವರೆವಿಗೂ ಅವಳನ್ನು ತಮ್ಮ ಕಲಾ ತಂಡದೊಂದಿಗೆ ಇಟ್ಟು ಕೊಂಡಿರುತ್ತಾರೆ.

ನಿರ್ವಹಿಸಿದ ಹುದ್ದೆಸಂಪಾದಿಸಿ

 • ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆ.[೬]

ಪ್ರಶಸ್ತಿಸಂಪಾದಿಸಿ

 • ೨೦೦೬ : ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ
 • ೨೦೦೭ : ಜಾನಪದ ಶ್ರೀ ಪ್ರಶಸ್ತಿ
 • ೨೦೦೮ : ಜಾನಪದ ಲೋಕ ಪ್ರಶಸ್ತಿ
 • ೨೦೧೦ : ಕನ್ನಡ ರಾಜ್ಯೋತ್ಸವ ಪ್ರಶಸ್ತಿ
 • ೨೦೧೨ : ಶ್ರೀ ತಾಯಮ್ಮ ಮಲ್ಲಯ್ಯ ದತ್ತಿನಿಧಿ ಪ್ರಶಸ್ತಿ
 • ೨೦೧೪ : ಸಮಾಜ ಸಖಿ ಪ್ರಶಸ್ತಿ
 • ಸಂದೇಶ ಪ್ರಶಸ್ತಿ[೭]

ಹೆಚ್ಚಿನ ಮಾಹಿತಿಗೆಸಂಪಾದಿಸಿ

ಉಲ್ಲೇಖಸಂಪಾದಿಸಿ

 1. http://vijaykarnataka.indiatimes.com/district/haveri/shiggavi/articleshow/26801671.cms
 2. . http://aniketana.org/%e0%b2%9c%e0%b3%8b%e0%b2%97%e0%b2%bf-%e0%b2%ac%e0%b2%b3%e0%b2%97-%e0%b2%95%e0%b2%be%e0%b2%97%e0%b2%bf-%e0%b2%ac%e0%b2%b3%e0%b2%97/
 3. http://www.prajavani.net/article/%E0%B2%B9%E0%B2%BF%E0%B2%9C%E0%B2%A1%E0%B2%BE%E0%B2%97%E0%B2%B3-%E0%B2%AC%E0%B2%B3%E0%B3%8D%E0%B2%B3%E0%B2%BE%E0%B2%B0%E0%B2%BF-%E0%B2%AE%E0%B2%BE%E0%B2%A6%E0%B2%B0%E0%B2%BF
 4. http://www.planetkannada.com/node/9643
 5. http://www.icarelive.com/bedra/index.php?action=coverage&type=1130
 6. https://m.kannadaprabha.com/article/karnataka/manjamma-jogathi-selected-as-president-of-karnataka-janapada-academy/404040
 7. . https://www.daijiworld247.com/newsDisplay.aspx?newsID=5679