ಮಂಗರವಳ್ಳಿ
Cissus quadrangularis | |
---|---|
Scientific classification | |
ಸಾಮ್ರಾಜ್ಯ: | ಸಸ್ಯ |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | ಯೂಡೈಕಾಟ್‍ಗಳು |
ಏಕಮೂಲ ವರ್ಗ: | ರೋಸಿಡ್ಸ್ |
ಗಣ: | ವಿಟಾಲೀಸ್ |
ಕುಟುಂಬ: | ವಿಟೇಸಿಯೀ |
ಕುಲ: | ಸಿಸಸ್ |
ಪ್ರಜಾತಿ: | C. quadrangularis
|
Binomial name | |
Cissus quadrangularis | |
Synonyms[೧] | |
|
ಭಾರತದಾದ್ಯಂತ ಬೆಳೆಯುವ ಮಂಗರವಳ್ಳಿಗೆ ಮುರಿದ ಮೂಳೆಗಳನ್ನು ಜೋಡಿಸುವ ಗುಣವಿರುವುದಕ್ಕಾಗಿ ಸಂಸ್ಕೃತದಲ್ಲಿ ಅಸ್ಥಿಶೃಂಖಲ ಎಂದು ಕರೆಯಲಾಗುತ್ತದೆ. ಇದೊಂದು ಬಳ್ಳಿ ಗಿಡ. ಇದನ್ನು ಸಂದು ಬಳ್ಳಿ, ಸಂದಕದ ಗಿಡ ಎಂದೂ ಕರೆಯುವುದುಂಟು. ಬೇಲಿಗಳ ಮತ್ತು ಪೊದರುಗಳ ಮೇಲೆ ಬಲುಸಾಮಾನ್ಯ. ತನ್ನ ತಂತುಕುಡಿಗಳ ನೆರವಿನಿಂದ ಬೇರೆ ಸಸ್ಯಗಳ ಮೇಲೆ ಹಬ್ಬಿ ಬೆಳೆಯುತ್ತದೆ. ಎಲ್ಲೆಡೆ ಅಲಂಕಾರಿಕ ಗಿಡವಾಗಿ ಬೆಳೆಯುತ್ತಾರಾದರೂ ಇದರ ಔಷಧೀಯ ಗುಣಗಳ ಪರಿಚಯ ಅನೇಕರಿಗಿಲ್ಲ.
ಸಸ್ಯವರ್ಣನೆ
ಬದಲಾಯಿಸಿನೆರಲೆಕುಡಿ ಅಂತಲೂ ಹೆಸರಿರುವ ಈ ಕ್ಯಾಕ್ಟಸ್ ಜಾತಿಯ ಬಳ್ಳಿ ಹಪ್ಪಳದ ಖಾರಕ್ಕೆ ಅತೀ ಅವಶ್ಯ. ನಾಲ್ಕು ಮೂಲೆಗಳ ಹಸುರು ಬಣ್ಣದ ಕಾಂಡ ಇದರ ಲಕ್ಷಣ. ಕಾಂಡವು ಮೃದುವಾಗಿದ್ದು, ಬೇರೆ ಗಿಡಗಳನ್ನು ಆಶ್ರಯಿಸಿ ಹದಿನೈದರಿಂದ ಇಪ್ಪತ್ತು ಅಡಿ ಉದ್ದ ಬೆಳೆಯುವುದು. ಮೇಲ್ಮೈ ನಯವಾಗಿದೆ, ರೋಮವಿಲ್ಲ. ಕಾಂಡವು ರಸಭರಿತವಾಗಿದ್ದು, ಚಪ್ಪಟೆಯಾಗಿ ಇರುವುದು. ಕಾಂಡದ ಮೇಲೆ ಎರಡು ಅಂಗುಲ ಅಂತರದಲ್ಲಿ ಒಂದೊಂದು ಗಿಣ್ಣು ಇರುವುದು. ಪ್ರತಿ ಗಿಣ್ಣಿನಲ್ಲಿ ಒಂದು ಚಿಕ್ಕದಾದ ಹಸಿರೆಲೆ ಇರುವುದು. ಜುಲೈ ತಿಂಗಳಲ್ಲಿ ಹೂವು ಕಂಡುಬರುತ್ತದೆ. ಇದರಲ್ಲಿ ೩ ಮೂಲೆಯ ಮಂಗರವಳ್ಳಿ ಸಹ ಕಂಡುಬರುತ್ತದೆ. ಸಿಸ್ಸಸ್ ಕ್ವಾಡ್ರಾಂಗ್ಯುಲ್ಯಾರಿಸ್ ಎಂಬ ವೈಜ್ಞಾನಿಕ ಹೆಸರುಳ್ಳ ಈ ಸಸ್ಯವು ವೈಟೇಸಿ ಎಂಬ ಕುಟುಂಬಕ್ಕೆ ಸೇರಿದೆ.
ಎಲೆಗಳು ಸರಳ, ಪರ್ಯಾಯ ರೀತಿಯಲ್ಲಿ ಜೋಡಣೆಗೊಂಡಿವೆ. ಎಲೆಯಂಚು ದಂತಿತ. ಪ್ರತಿಯೊಂದು ಎಲೆಗೆ ಅಭಿಮುಖವಾಗಿ ತಂತುಕುಡಿಯುಂಟು. ವಾಸ್ತವವಾಗಿ ತಂತುಕುಡಿ ಪರಿವರ್ತಿತ ತುದಿಮೊಗ್ಗು. ಬೆಳೆವಣಿಗೆಯ ಕಾಲದಲ್ಲಿ ಕಾಂಡದ ತುದಿಮೊಗ್ಗು ಒಂದು ಗೆಣ್ಣಿನಷ್ಟು ಉದ್ದಕ್ಕೆ ಬೆಳೆದು ತುದಿಯಲ್ಲಿ ಒಂದು ಎಲೆಯನ್ನು ಉತ್ಪಾದಿಸಿ ತಂತುಕುಡಿಯಾಗಿ ಮಾರ್ಪಾಟಾಗುತ್ತದೆ. ತರುವಾಯ ಎಲೆಯ ಕಕ್ಷದಲ್ಲಿರುವ ದ್ವಿತೀಯಕ ಮೊಗ್ಗು ತುದಿಮೊಗ್ಗಿನ ಕಾರ್ಯವಹಿಸಿಕೊಂಡು ಮತ್ತೆ ಒಂದು ಗೆಣ್ಣಿನಷ್ಟು ಬೆಳೆದು, ಮತ್ತೊಂದು ಎಲೆ ಉತ್ಪಾದಿಸಿ ತಂತುಕುಡಿಯಾಗುತ್ತದೆ. ಈ ತೆರನಾಗಿ ಬೆಳೆವಣಿಗೆ ಮುಂದುವರಿಯುತ್ತ ಹೋಗುತ್ತದೆ. ಇಂಥ ಬೆಳೆವಣಿಗೆಗೆ ಸಿಂಪೋಡಿಯಲ್ ರೀತಿ ಎಂದು ಹೆಸರು. ಇದರಿಂದಾಗಿ ಇಡೀ ಬಳ್ಳಿ ಸೊಟ್ಟಂಬಟ್ಟವಾಗಿ ಬೆಳೆಯುತ್ತದೆ. ಹೂಗಳು ದ್ವಿಲಿಂಗಗಳು, ಅನಾಕರ್ಷಕ ಹಳದಿ ಬಣ್ಣದವು. ಸೈಮೋಸ್ ರೀತಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಪ್ರತಿಯೊಂದು ಹೂವಿನಲ್ಲಿ 4 ಪತ್ರಗಳು, 4 ದಳಗಳು, 4 ಕೇಸರಗಳು, ಎರಡು ಕಾರ್ಪೆಲುಗಳ ಉಚ್ಚ ಅಂಡಾಶಯ ಇವೆ. ಫಲ ಬೆರಿ ಮಾದರಿಯದು.
ಬೇಸಾಯ
ಬದಲಾಯಿಸಿಇದು ಹೆಚ್ಚಿನ ಸಾವಯವ ಅಂಶವುಳ್ಳ ಮಣ್ಣು ಅಥವಾ ಕೆಂಪು ಗೋಡು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ.
ಇದನ್ನು ಮೃದುಕಾಂಡದ ತುಂಡುಗಳಿಂದ ಸಸ್ಯಾಭಿವೃದ್ಧಿ ಮಾಡಬಹುದು. ೩ರಿಂದ ೪ ಗಿಣ್ಣುಗಳಿರುವ ಕಾಂಡವನ್ನು ಉಪಯೋಗಿಸಬಹುದು. ಕಾಂಡವು ಚಿಗುರಲು ೭ರಿಂದ ೧೦ ದಿನಗಳು ತೆಗೆದುಕೊಳ್ಳುತ್ತದೆ. ಹಿತ್ತಲಲ್ಲಿರುವ ಯಾವುದಾದರೂ ಮರಕ್ಕೆ ಹಬ್ಬಿಸಬಹುದು ಅಥವಾ ತೂಗು ಕುಂಡುಗಳಲ್ಲೂ ಬೆಳೆಯಬಹುದು.
ಒಂದು ಚ.ಮೀಟರ್ ನಷ್ಟು ಜಾಗವನ್ನು ಚೆನ್ನಾಗಿ ಹದಮಾಡಿ, ಬೇರುಬಿಟ್ಟ ಕಾಂಡದ ತುಂಡುಗಳನ್ನು ೬೦ ಸೆಂ.ಮೀ ಅಂತರದಲ್ಲಿ ನೆಡಬೇಕು. ನಾಟಿ ಮಾಡಿದ ನಂತರ ಒಂದು ವಾರ ಪ್ರತಿದಿನವೂ ನೀರು ಕೊಡಬೇಕು. ನಂತರದ ದಿನಗಳಲ್ಲಿ ವಾರಕ್ಕೊಮ್ಮೆ ನೀರು ಹಾಕಿದರೆ ಸಾಕು. ಪ್ರತಿಗಿಡಕ್ಕೆ ೨ ಕೆ.ಜಿ ಯಷ್ಟು ಕೊಟ್ಟಿಗೆ ಗೊಬ್ಬರವನ್ನು ಒದಗಿಸಬೇಕು. ಹಾಗೆಯೇ ಗಿಡವನ್ನು ಹಬ್ಬಿಸಲು ಆಧಾರವನ್ನು ಕೊಡಬೇಕು.
ಒಂದು ಚ.ಮೀಟರ್ ಪ್ರದೇಶದಿಂದ ಸುಮಾರು ಒಂದು ಕೆ.ಜಿ ಯಷ್ಟು ಕಾಂಡದ ಇಳುವರಿಯನ್ನು ಪಡೆಯಬಹುದು.ಇದಕ್ಕೆ ಯಾವುದೇ ರೀತಿಯ ಕೀಟ ಅಥವಾ ರೋಗಬಾಧೆ ಕಂಡುಬರುವುದಿಲ್ಲ.
ಉಪಯುಕ್ತ ಭಾಗಗಳು
ಬದಲಾಯಿಸಿಕಾಂಡ, ಟ್ರೈಟರ್ಪಿನಾಯ್ಡ್ಸ್, ಟ್ರಾಕ್ಸೆರಾಲ್, ಸಿಟೊಸ್ಟೆರಾಲ್.
ಔಷಧೀಯ ಗುಣಗಳು
ಬದಲಾಯಿಸಿ- ಮೂಳೆ ಮುರಿದಾಗ ಮಂಗರವಳ್ಳಿಯ ಕಾಂಡವನ್ನು ಜಜ್ಜಿ ಮುರಿದ ಸ್ಥಳದಲ್ಲಿ ಪಟ್ಟು ಹಾಕಬೇಕು. ನಾಟಿವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಮೂಳೆ ಮುರಿದಾಗ ಈ ಬಳ್ಳಿಯನ್ನು ಚಿಕಿತ್ಸೆಗೆ ಉಪಯೋಗಿಸುತ್ತಾರೆ.[೨]
- ಮೂಲವ್ಯಾಧಿಯಿಂದ ಬಳಲುವವರು ಮಂಗರವಳ್ಳಿಯನ್ನು ಜಜ್ಜಿ ರಸ ತೆಗೆದು ಜೇನಿನೊಂದಿಗೆ ಬೆರೆಸಿ ಕುಡಿಯಬೇಕು ಮತ್ತು ಮೂಲವ್ಯಾಧಿಯ ಮೊಳಕೆಗೆ ಲೇಪಿಸಬೇಕು.
- ಗಾಯಗಳಾಗಿರುವಾಗ ಮಂಗರವಳ್ಳಿ ಜಜ್ಜಿ ಲೇಪಿಸಿದಲ್ಲಿ ಬೇಗನೇ ಮಾಯುತ್ತದೆ.
- ಚರ್ಮರೋಗಗಳಿಂದ ಬಳಲುವವರು ಮಂಗರವಳ್ಳಿ ಜಜ್ಜಿ ರಸ ತೆಗೆದು ಎರಡು ಚಮಚ ರಸವನ್ನು ಸೇವಿಸುವುದಲ್ಲದೇ ಮೇಲೆ ಲೇಪಿಸಬೇಕು.
- ಮೂತ್ರ ಕಟ್ಟಿದಲ್ಲಿ ಒಣಗಿದ ಕಾಂಡದ ಪುಡಿಯಿಂದ ಕಷಾಯ ತಯಾರಿಸಿ ಕುಡಿಯಬೇಕು.[೩]
- ಕಾಂಡದ ಪುಡಿ ಜೀರ್ಣಕಾರಿ.
- ಕಾಂಡವನ್ನು ಅರೆದು ತಯಾರಿಸಲಾಗುವ ಲೇಪ ಉಬ್ಬಸಕ್ಕೆ ಒಳ್ಳೆಯ ಔಷಧಿ ಎನಿಸಿದೆ.
ಅಡುಗೆ
ಬದಲಾಯಿಸಿಮಂಗರವಳ್ಳಿಯ ಎಲೆ ಮತ್ತು ಕಾಂಡಗಳನ್ನು ತರಕಾರಿಯಾಗಿ ಬಳಸುವುದಿದೆ.
ಚಟ್ನಿ
ಬದಲಾಯಿಸಿಮಂಗರವಳ್ಳಿಯ ಕಾಂಡವನ್ನು ಕತ್ತರಿಸಿ ಮೇಲಿನ ಸಿಪ್ಪೆ ತೆಗೆದು ತೊಳೆದು ಸ್ವಚ್ಛಗೊಳಿಸಿ ಸಣ್ಣಗೆ ಹೆಚ್ಚಿಕೊಳ್ಳಬೇಕು. ನಂತರ ಈರುಳ್ಳಿ, ಹಸಿಮೆಣಸಿನಕಾಯಿಯೊಂದಿಗೆ ಬಾಣಲೆಯಲ್ಲಿ ಎಣ್ಣೆ ಹಾಕಿ ಬಾಡಿಸಿ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ತೆಂಗಿನತುರಿಯೊಡನೆ ರುಬ್ಬಿಕೊಳ್ಳಬೇಕು. ಈ ಚಟ್ನಿ ಕೆಮ್ಮು, ನೆಗಡಿಯಿಂದ ಬಳಲುವವರಿಗೆ ಉತ್ತಮವಾದುದು.[೪]
ಇತರ ಭಾಷೆಗಳಲ್ಲಿ
ಬದಲಾಯಿಸಿ- ಸಂಸ್ಕೃತ - ಅಸ್ಥಿಸಂಹಾರಕ, ಅಸ್ಥಿಶೃಂಖಲ, ವಜ್ರವಲ್ಲಿ
- ಹಿಂದಿ - ಹಡ್ಜೋಡ್
- ಮರಾಠಿ - ನಾದೇನ
- ತಮಿಳು - ಪಿಂಡೈ
- ತೆಲುಗು - ನಲ್ಲೇರು
- ಇಂಗ್ಲೀಷ್ - edible stemmed vine; bone setter[೫]
- ವೈಜ್ಞಾನಿಕ ಹೆಸರು - cissus quadrangularis L
ಉಲ್ಲೇಖಗಳು
ಬದಲಾಯಿಸಿ- ↑ "The Plant List: A Working List of All Plant Species". Archived from the original on 5 ಜೂನ್ 2019. Retrieved 9 July 2015.
- ↑ Vibha, Singh (Jan–Jun 2017). "Medicinal plants and bone healing". National Journal of Maxillofacial Surgery. 8 (1): 4–11. doi:10.4103/0975-5950.208972. PMC 5512407. PMID 28761270.
{{cite journal}}
: CS1 maint: unflagged free DOI (link) - ↑ ಮನೆಯಂಗಳದಲ್ಲಿ ಔಷಧಿವನ,ಡಾ.ಎಂ.ವಸುಂಧರ ೭ನೇ ಮುದ್ರಣ,ಪುಟ ಸಂಖ್ಯೆ ೧೬೭
- ↑ http://kannada.oneindia.com/column/gv/2007/210707kitchen-medicine-garden.html
- ↑ http://www.toxicologycentre.com/English/plants/English/changalamparanda.html
ಹೊರಗಿನ ಕೊಂಡಿಗಳು
ಬದಲಾಯಿಸಿ- Austin, A. Jegadeesan, M. Gowrishankar, R. (2004) "Helicobactericidal Activity of Cissus quadrangularis L. Variant I"; Natural Product Sciences 10 (5): 217–219. Korean Society of Pharmacognosy.
- Chopra SS, Patel MR, Awadhiya R (1976). "Studies of Cissus quadrangularis in experimental fracture repair: a histopathological study". Indian Journal of Medical Research. 64 (9): 1365–1368. PMID 1010630.
- Jainu, Mallika; Devi, Shyamala (2003). "Tent antiulcerogenic activity of methanolic extract of Cissus quadrangularis by antioxidative mechanism". Journal of Clinical Biochemistry and Nutrition. 34 (2): 43–47. doi:10.3164/jcbn.34.43.
- Kashikar, ND; Indu, George (2006). "Antibacterial activity of Cissus quadrangularis Linn". Indian Journal of Pharmaceutical Sciences. 68 (2): 245–247. doi:10.4103/0250-474X.25727.
{{cite journal}}
: CS1 maint: unflagged free DOI (link)