ಭಾರತೀಯ ಕಾಲಗಣನೆ

ಹಗಲು+ರಾತ್ರಿ=ಒಂದು ದಿನ

ಕುಲ ಭಾಷೆ ಕನ್ನಡ ಸಾಹಿತ್ಯ ಮತ್ತು ಇತರ ಕ್ರಿಯೆಗಳೂ ಅವನು ತನ್ನ ಸ್ವಂತ ಮನೆಯಲ್ಲಿ ಕೆಲ್ಸ ಇದ್ದೇ ಸುಸಂಗತವಾದ ಐತಿಹಾಸಿಕ ನಿರೂಪಣೆಗೆ ಆಧಾರವಾದ್ದು ಕಾಲಗಣನೆ. ಕ್ರಮಬದ್ಧವಾದ ಸಾರ್ವತ್ರಿಕ ಕಾಲಗಣನೆಯ ಪದ್ಧತಿ ಪ್ರಾಚೀನ ಭಾರತದಲ್ಲಿ ರೂಢಿಯಲ್ಲಿ ಇತ್ತೆನ್ನಲು ಸಾಕಷ್ಟು ಆಧಾರಗಳಿಲ್ಲ. ಪ್ರಾಚೀನ ವೇದಸಾಹಿತ್ಯದ ಅನಂತರ ಮಹಾಭಾರತಾದಿ ಇತಿಹಾಸ ಮತ್ತು ಪುರಾಣಗಳಲ್ಲಿ ಮನ್ವಂತರ ಮತ್ತು ಯುಗಗಳಿಗೆ ಸಂಬಂಧಿಸಿದ ಕೆಲವು ಕಾಲಪರಿಮಾಣಗಳು ಉಕ್ತವಾಗಿವೆ. ಬ್ರಹ್ಮನ ಒಂದು ದಿನ ಒಂದು ಕಲ್ಪಕ್ಕೆ ಸಮಾನ. ಒಂದು ಕಲ್ಪವೆಂದರೆ ಹದಿನಾಲ್ಕು ಮನ್ವಂತರಗಳು ಮತ್ತು ಆರು ಮಹಾಯುಗಗಳು ಅಥವಾ ಒಂದು ಸಾವಿರ ಮಹಾಯುಗಗಳು. ಹೀಗೆ ಒಂದು ಕಲ್ಪವೆಂದರೆ 4,32,00,00,000 ವರ್ಷಗಳು. ಒಂದು ಮಹಾಯುಗದಲ್ಲಿ ಕೃತ, ತ್ರೇತಾ, ದ್ವಾಪರ, ಕಲಿ-ಈ ನಾಲ್ಕು ಯುಗಗಳು ಸೇರಿರುತ್ತವೆ. ಕಲಿಯುಗದ ವರ್ಷಗಳು 4,32,000 ಎಂದೂ ಅದರ ಹಿಂದಿನ ಯುಗಗಳಲ್ಲಿ ಕ್ರಮಶಃ ಅಧಿಕಾಧಿಕ ವರ್ಷಗಳಿರುತ್ತವೆಯೆಂದೂ ವಿವರಿಸಲಾಗಿದೆ. ಇಂಥ ಸಾಂಪ್ರದಾಯಿಕ ನಿರೂಪಣೆಯಲ್ಲಿ ಐತಿಹಾಸಿಕತೆ ಇರುವುದಿಲ್ಲ.[]

ಮಹಾಭಾರತ ಯುದ್ಧ ದ್ವಾಪರಯುಗದ ಅಂತ್ಯ

ಬದಲಾಯಿಸಿ

ಭಾರತೀಯ ಪ್ರಾಚೀನ ಜ್ಯೋತಿಷಿಗಳು ಮಹಾಭಾರತ ಯುದ್ಧ ದ್ವಾಪರಯುಗದ ಅಂತ್ಯದಲ್ಲಿ ಮತ್ತು ಕಲಿಯುಗದ ಆರಂಭದಲ್ಲಿ ಸಂಭವಿಸಿತು ಎಂದು ಹೇಳಿದ್ದಾರೆ. ಈ ಘಟನೆಯಿಂದ ಕಲಿಯುಗ ಸಂವತ್ ಅಥವಾ ಯುಧಿಷ್ಠಿರ ಸಂವತ್ ಎಂಬ ಕಾಲಗಣನೆ ಪ್ರಾರಂಭವಾಗುತ್ತದೆ. ಸಂವತ್ ಎಂಬುದು ಸಂವತ್ಸರದ ಸಂಕ್ಷಿಪ್ತ ರೂಪ. ಕಲಿಯುಗದ ಆರಂಭ ಕ್ರಿ.ಪೂ. 3102ರಲ್ಲಿ ಎಂದು ಹೇಳಲಾಗಿದೆ. ಇದೇ ಆರ್ಯಭಟ್ಟನ ಪ್ರಕಾರ ಮಹಾಭಾರತ ಯುದ್ಧದ ಕಾಲ. ವರಾಹಮಿಹಿರ, ಕಲ್ಹಣ-ಇವರ ರೀತ್ಯಾ ಈ ಯುದ್ಧದ ಕಾಲ ಕಲಿಯುಗ ಸಂವತ್‍ನ 653 ಅಥವಾ ಕ್ರಿ. ಪೂ. 2449. ಪರ್ಗಿಟರ್ ಎಂಬ ವಿದ್ವಾಂಸ ಪುರಾಣಗಳಲ್ಲಿ ಹೇಳಿದ ಅರಸರ ಪೀಳಿಗೆಗಳನ್ನು ಲೆಕ್ಕಮಾಡಿ ಭಾರತ ಯುದ್ಧದ ಕಾಲ ಕ್ರಿ. ಪೂ. 950 ಎಂದು ಪ್ರತಿಪಾದಿಸಿದ. ಇಂಥ ಹೇಳಿಕೆಗಳನ್ನು ಇನ್ನೊಂದು ರೀತಿಯಲ್ಲಿ ಗುಣಿಸಿ ಈ ಕಾಲ ಕ್ರಿ. ಪೂ. 1392 ಎಂದು ಮತ್ತೆ ಕೆಲವರು ವಾದಿಸಿದ್ದಾರೆ. ಈ ವಿಷಯವನ್ನು ಕೂಲಂಕಷವಾಗಿ ಮತ್ತು ಆಧುನಿಕ ಪದ್ಧತಿಯಂತೆ ಅನ್ವೇಷಿಸಿ, ಪ್ರಾಚೀನ ಭಾರತೀಯರಿಗೆ ಐತಿಹಾಸಿಕ ಕಾಲಜ್ಞಾನ ಇರಲಿಲ್ಲವೆಂದು ಆಧುನಿಕ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.[]

ಮೌರ್ಯ ಸಾಮ್ರಾಜ್ಯ

ಬದಲಾಯಿಸಿ

ಮೌರ್ಯ ಸಾಮ್ರಾಜ್ಯ ಸ್ಥಾಪನೆಯಂಥ ಪ್ರಮುಖ ಐತಿಹಾಸಿಕ ಘಟನೆಯ ಕಾಲವನ್ನು ಆನುಷಂಗಿಕ ಆಧಾರಗಳಿಂದ ನಿರ್ಧರಿಸಬೇಕಾಗಿದೆ. ಇಂಥ ಆಧಾರಗಳಲ್ಲಿ ಅಲೆಕ್ಸಾಂಡರನ ದಂಡಯಾತ್ರೆ ಮುಖ್ಯವಾದ್ದು. ಅಶೋಕ ಚಕ್ರವರ್ತಿ ತನ್ನ ಶಾಸನಗಳಲ್ಲಿ ಅಲ್ಲಲ್ಲಿ ತನ್ನ ರಾಜ್ಯಾಭಿಷೇಕದ ಸಂವತ್ಸರವನ್ನು ಮಾತ್ರ ನಿರ್ದೇಶಿಸಿದ್ದಾನೆ. ಅವುಗಳಲ್ಲಿ ಕ್ರಮಬದ್ಧ ಕಾಲಗಣನೆಯ ಸೂಚನೆಯಿಲ್ಲ.ಅನಂತರ ಕಾಲದಲ್ಲಿ ಕೆಲವು ಕಾಲಗಣನೆಗಳು ಪರಿಮಿತ ಪ್ರದೇಶಗಳಲ್ಲಿ, ಮತ್ತು ವಲಯಗಳಲ್ಲಿ ಪ್ರಚಾರಕ್ಕೆ ಬಂದರೂ ಸಾರ್ವತ್ರಿಕವಾಗದೆ ಕೆಲಕಾಲಾನಂತರ ಮೂಲೆಗುಂಪಾದವು. ಅವುಗಳಿಂದ ಐತಿಹಾಸಿಕ ಕಾಲನಿರ್ಧಾರಕ್ಕೆ ಅಂಶತಃ ಮಾತ್ರ ಸಹಾಯ ದೊರಕಿದೆ.  ಅವುಗಳಲ್ಲಿ ಮುಖ್ಯವಾದವನ್ನು ಇಲ್ಲಿ ವಿವೇಚಿಸಲಾಗಿದೆ.

ಸಪ್ತರ್ಷಿ ಸಂವತ್

ಬದಲಾಯಿಸಿ

ಇದಕ್ಕೆ ಲೌಕಿಕ ಸಂವತ್, ಶಾಸ್ತ್ರ ಸಂವತ್ ಮುಂತಾದ ಹೆಸರುಗಳಿವೆ. ಸಪ್ತರ್ಷಿ ಗ್ರಹಮಂಡಲ ಇಪ್ಪತ್ತೇಳು ನಕ್ಷತ್ರಗಳಲ್ಲಿ ಒಂದೊಂದು ನಕ್ರತ್ರ ಸ್ಥಾನದಲ್ಲೂ ನೂರು ವರ್ಷ ನಿಲ್ಲುತ್ತ, 2,700 ವರ್ಷಗಳಲ್ಲಿ ತನ್ನ ಪರ್ಯಟನ ವನ್ನು ಪೂರ್ತಿಗೊಳಿಸುತ್ತದೆ ಎಂಬುದೇ ಇದರ ಆಧಾರ. ನೂರರ ಅಂಕವನ್ನು ತಳ್ಳಿಹಾಕಿ ಮುಂದಿನ ಮಿಕ್ಕ ಸಂಖ್ಯೆಯಿಂದ ಈ ಕಾಲಗಣನೆಯನ್ನು ನಿರ್ದೇಶಿಸುವ ಕ್ರಮವನ್ನು ಇದರಲ್ಲಿ ಅನುಸರಿಸುತ್ತಾರೆ. ಪಂಜಾಬ್, ಕಾಶ್ಮೀರ ಪ್ರದೇಶಗಳಲ್ಲಿ ಈ ಕಾಲಗಣನೆ ಪ್ರಚಾರದಲ್ಲಿ ಇತ್ತು.

ವೀರನಿರ್ವಾಣ ಸಂವತ್

ಬದಲಾಯಿಸಿ

ಜೈನಮತಸ್ಥರು ಆ ಮತಸ್ಥಾಪಕ ವರ್ಧಮಾನ ಮಹಾವೀರನ ನಿಧನದಿಂದ ಕಾಲಗಣನೆ ಮಾಡುತ್ತಾರೆ. ಕ್ರಿ. ಪೂ. 527ರಿಂದ ಆರಂಭವಾದ ಇದಕ್ಕೆ ಜಿನಕಾಲ ಅಥವಾ ವೀರನಿರ್ವಾಣ ಸಂವತ್ ಎಂದು ಹೆಸರು. ಕ್ರಿ. ಶ. 11ನೆಯ ಶತಮಾನದಿಂದ ಈ ಕಾಲಗಣನೆ ಪದ್ಧತಿ ರೂಢಿಯಲ್ಲಿದ್ದಂತೆ ತಿಳಿದುಬರುತ್ತದೆ. ಇದರ ವಿಷಯವಾಗಿ ಜೈನವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಮಹಾವೀರನ ಮರಣ ಸಂಭವಿಸಿದ್ದು ಕ್ರಿ. ಪೂ. 468ರಲ್ಲಿ ಎಂಬ ವಾದವುಂಟು.

ಬುದ್ಧನಿರ್ವಾಣ ಸಂವತ್

ಬದಲಾಯಿಸಿ

ಬುದ್ಧನ ನಿಧನದಿಂದ ಇದು ಪ್ರಾರಂಭವಾಗುತ್ತದೆ. ಈ ವಿಚಾರದಲ್ಲೂ ಒಮ್ಮತವಿಲ್ಲ. ಚೀನದ ಸಂಪ್ರದಾಯದಂತೆ ಈ ಘಟನೆ ಕ್ರಿ. ಪೂ. 486ರಲ್ಲಿ ಸಂಭವಿಸಿತು. ಸಿಂಹಳ, ಬ್ರಹ್ಮದೇಶ, ಸೈಯಾಂ ದೇಶಗಳಲ್ಲಿ ನಡೆದು ಬಂದ ಸಂಪ್ರದಾಯದಂತೆ ಇದು ಕ್ರಿ. ಪೂ. 544ರಲ್ಲಿ ಸಂಭವಿಸಿತು. ಈಚಿನ ಸಂಶೋಧನೆಗಳಿಂದ ಕ್ರಿ. ಪೂ. 483ರಲ್ಲಿ ಗೌತಮಬುದ್ಧ ನಿಧನ ಹೊಂದಿದನೆಂದು ವಿದ್ವಾಂಸರು ನಿರ್ಧರಿಸಿದ್ದಾರೆ. ಬೌದ್ಧಮತದ ಪ್ರಭಾವ ಮತ್ತು ಪ್ರಸಾರದ ಮೂಲಕ ಈ ಕಾಲಗಣನೆ ಹೆಚ್ಚು ಕಾಲ ಹೆಚ್ಚು ವ್ಯಾಪಕವಾಗಿತ್ತು.

ಕಲಚುರಿ ಅಥವಾ ಚೇದಿ ಸಂವತ್

ಬದಲಾಯಿಸಿ

ಇದು ಪಶ್ಚಿಮ ಭಾಗದಲ್ಲಿ ಕೆಲಕಾಲ ಬಳಕೆಯಲ್ಲಿತ್ತು.  ಇದರ ಆರಂಭದ ವರ್ಷ ಕ್ರಿ. ಶ. 249. ತ್ರೈಕೂಟಕರು ಶಕರ ಆಳಿಕೆಯಿಂದ ಸ್ವಾತಂತ್ರ್ಯ ಪಡೆದುದರ ಸ್ಮರಣಾರ್ಥವಾಗಿ ಈ ಕಾಲಗಣನೆಯನ್ನು ಪ್ರಾರಂಭಿಸಿದರೆಂದು ಊಹಿಸಲಾಗಿದೆ.

ಗುಪ್ತ ಅಥವಾ ವಲ್ಲಭೀ ಸಂವತ್

ಬದಲಾಯಿಸಿ

ಇದು ಕ್ರಿ. ಶ. 319ರಲ್ಲಿ ಗುಪ್ತ ಸಾಮ್ರಾಜ್ಯ ಸ್ಥಾಪಕ 1ನೆಯ ಚಂದ್ರಗುಪ್ತನ ಆಳ್ವಿಕೆಯ ಮೊದಲ ವರ್ಷದಿಂದ ಆರಂಭವಾಯಿತು. ಮೊದಲಿಗೆ ಗುಪ್ತಸಂವತ್ ಎಂದು ಹೆಸರಾಗಿದ್ದು, ಗುಪ್ತರ ಆಧಿಪತ್ಯ ಮುಗಿದ ಬಳಿಕ ಅವರ ಮಾಂಡಲಿಕರಾದ ಮೈತ್ರಕರು ಈ ಎಣಿಕೆಯನ್ನು ಮುಂದುವರಿಸಿದ್ದರಿಂದಲೂ ಅವರು ಕಾಠಿಯಾವಾಡದ ವಲ್ಲಭೀನಗರಿಯಲ್ಲಿ ಆಳುತ್ತಿದ್ದುದರಿಂದಲೂ ಇದಕ್ಕೆ ವಲ್ಲಭೀ ಸಂವತ್ ಎಂಬ ಹೆಸರೂ ಬಂತು. ಈ ಸಂವತ್ ಗುಪ್ತಸಾಮ್ರಾಜ್ಯದ ಮೂಲಕ ಅಸ್ಸಾಂ, ಬಂಗಾಳ, ಒರಿಸ್ಸ ಪ್ರದೇಶಗಳಲ್ಲಿ ರೂಢಿಯಲ್ಲಿತ್ತು. 13ನೆಯ ಶತಮಾನದವರೆಗೆ ಇದನ್ನು ಬಳಸುತ್ತಿದ್ದಂತೆ ತಿಳಿದುಬಂದಿದೆ.

ಗಂಗ ಅಥವಾ ಗಾಂಗೇಯ ಸಂವತ್

ಬದಲಾಯಿಸಿ

ಕಳಿಂಗ ಅಥವಾ ಒರಿಸ್ಸದಲ್ಲಿ ಆಳಿದ ಪೂರ್ವ ಗಂಗರು ಈ ಕಾಲಗಣನೆಯನ್ನು ತಮ್ಮ ಶಾಸನಗಳಲ್ಲಿ ಉಪಯೋಗಿಸಿದರು. ಇದು 5ನೆಯ ಶತಮಾನದಿಂದ 11ನೆಯ ಶತಮಾನದ ವರೆಗೆ ಪ್ರಚಾರದಲ್ಲಿತ್ತು.

ಹರ್ಷ ಸಂವತ್

ಬದಲಾಯಿಸಿ

ಕನೌಜಿನ ಹರ್ಷವರ್ಧನನ ಆಳ್ವಿಕೆಯಿಂದ ಪ್ರಾರಂಭವಾದ ಈ ಪದ್ಧತಿ 2 ಶತಮಾನಗಳ ಕಾಲ ಆತನ ಸಾಮ್ರಾಜ್ಯದ ಕೆಲವು ಪ್ರದೇಶಗಳಲ್ಲಿ ಪ್ರಚಲಿತವಾಗಿತ್ತು. ಇದರ ಆರಂಭ ವರ್ಷ ಕ್ರಿ. ಶ. 606.

ಚಾಳುಕ್ಯ ವಿಕ್ರಮ ಕಾಲ

ಬದಲಾಯಿಸಿ

ಕಲ್ಯಾಣ ಚಾಳುಕ್ಯ ವಂಶದ 6ನೆಯ ವಿಕ್ರಮಾದಿತ್ಯ ತನ್ನ ರಾಜ್ಯಾರೋಹಣದಿಂದ (1076-77) ಈ ಕಾಲಗಣನೆಯನ್ನು ಪ್ರಾರಂಭಿಸಿದ.  ಆ ವರೆಗೆ ಪ್ರಚಲಿತವಿದ್ದ ಶಕರಾಜರ ಕಾಲಗಣನೆಯನ್ನು ತೊಡೆದುಹಾಕಿದುದಾಗಿ ಆತ ಶಾಸನಗಳಲ್ಲಿ ಘೋಷಿಸಿದ್ದಾನೆ. ಆದರೆ ಈ ಕಾಲಗಣನೆ ಸಾರ್ವತ್ರಿಕ ಮನ್ನಣೆ ಪಡೆಯಲಿಲ್ಲ, ಕನ್ನಡ ನಾಡಿನಲ್ಲಿಯೇ ಬಹುಕಾಲ ಪ್ರಚಾರಗೊಳ್ಳಲಿಲ್ಲ.ಲಕ್ಷ್ಮಣಸೇನ ಸಂವತ್ : ಬಂಗಾಲ ಮತ್ತು ಬಿಹಾರ ಪ್ರದೇಶದಲ್ಲಿ ಕರ್ಣಾಟಕದಿಂದ ವಲಸೆ ಹೋದ ವಂಶದವನಾದ ಲಕ್ಷ್ಮಣಸೇನನ ಆಳ್ವಿಕೆಯ ಆರಂಭದಿಂದ (1179) ಈ ಕಾಲಗಣನೆ ಪ್ರಚಲಿತವಾಗಿ, ಅವನ ಅನಂತರದಲ್ಲೂ ಪ್ರಾದೇಶಿಕವಾಗಿ ಬಹುಕಾಲ ಮುಂದುವರಿಯಿತು. ಇದು ಈಗಲೂ ಉತ್ತರ ಬಿಹಾರದಲ್ಲಿ ಕೆಲವೆಡೆ ಬಳಕೆಯಲ್ಲಿದೆ.ರಾಜ್ಯಾಭಿಷೇಕ ಶಕ : ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿ ತನ್ನ ರಾಜ್ಯಾರೋಹಣ ಕಾಲದಿಂದ 1634ರಲ್ಲಿ ಇದನ್ನು ಪ್ರಾರಂಭಿಸಿದ. ಇದರ ಸಂಕ್ಷಿಪ್ತರೂಪ ರಾಜಶಕ. ಇದು ಸ್ವಲ್ಪ ಕಾಲ ಮಾತ್ರ ಬಳಕೆಯಲ್ಲಿತ್ತು.

ಇದರ ಎಣಿಕೆ ಮಹಮ್ಮದ್ ಪೈಗಂಬರ್ ಮಕ್ಕಾದಿಂದ ಮದಿನಾಕ್ಕೆ ಪ್ರಯಾಣಮಾಡಿದ ಕಾಲದಿಂದ, 622ರಿಂದ ಆರಂಭವಾಗುತ್ತದೆ. ಇದು ಶುದ್ಧ ಚಾಂದ್ರಮಾನದ ಗಣನೆಯಾಗಿದೆ. ಇದರ ವರ್ಷ ಸೌರಮಾನದ ವರ್ಷಕ್ಕಿಂತ ಸುಮಾರು ಹನ್ನೊಂದು ದಿನಗಳಷ್ಟು ಕಡಿಮೆ. ಇದರಲ್ಲಿ ಮುಹರ್ರಮ್, ಸಫರ್, ಮೊದಲಾದ ಅರಬ್ಬೀ ಹೆಸರಿನ ಹನ್ನೆರಡು ಮಾಸಗಳೂ ಇವೆ. ಹೈದರಾಬಾದ್ ಸಂಸ್ಥಾನದ ವಿಲೀನೀಕರಣವಾಗುವವರೆಗೆ ಅಲ್ಲಿ ಉಪಯೋಗದಲ್ಲಿತ್ತು.

ಮೊಗಲ್ ಚಕ್ರವರ್ತಿ ಅಕ್ಬರ್ ಚಾಂದ್ರಸೌರಮಾನಗಳೆರಡಕ್ಕೂ ಹೊಂದಿಕೆಯಾಗುವಂಥ ಫಸಲಿ ಎಂಬ ಕಾಲಗಣನೆಯನ್ನು 1563ರಲ್ಲಿ ಪ್ರಾರಂಭಿಸಿ. ಈ ಹೆಸರಿನ ಮೂಲ ಫಸಲ್-ಭೂಮಿಯ ಫಸಲು, ಬೆಳೆ.ಪ್ರಾಚೀನ ಕಾಲದಲ್ಲಿ ಪ್ರಚಲಿತವಾಗಿ ಅತ್ರುಟಿತ ಪರಂಪರೆಯಿಂದ ವರ್ತಮಾನ ಕಾಲದವರೆಗೆ ಬಳಕೆಯಾಗುತ್ತಿರುವ ಕೆಲವು ಮುಖ್ಯ ಗಣನೆಗಳನ್ನು ಮುಂದೆ ವಿವರಿಸಲಾಗಿದೆ:

ಬೃಹಸ್ಪತಿ ಸಂವತ್ಸರ ಚಕ್ರ

ಬದಲಾಯಿಸಿ

ಈ ಹೆಸರಿನ ಚಕ್ರದಲ್ಲಿ ಅರುವತ್ತು ಸಂವತ್ಸರಗಳಿವೆ. ಈ ಚಕ್ರ ಒಂದು ಸುತ್ತನ್ನು ಮುಗಿಸಿದ ಬಳಿಕ ಮತ್ತೆ ಅದೇ ಕ್ರಮದಿಂದ ಆರಂಭವಾಗುತ್ತದೆ. ಆ ಸಂವತ್ಸರಗಳ ಹೆಸರುಗಳು ಇಂತಿವೆ: 1 ಪ್ರಭವ, 2 ವಿಭವ, 3 ಶುಕ್ಲ, 4 ಪ್ರಮೋದ (ಪ್ರಮೋದೂತ), 5 ಪ್ರಜೋತ್ಪತ್ತಿ, 6 ಆಂಗಿರಸ, 7 ಶ್ರೀಮುಖ 8 ಭಾವ, 9 ಯುವ, 10 ಧಾತು, 11 ಈಶ್ವರ, 12 ಬಹುಧಾನ್ಯ, 13 ಪ್ರಮಾಥಿ, 14 ವಿಕ್ರಮ, 15 ವೃಷ (ವಿಷು), 16 ಚಿತ್ರಭಾನು, 17 ಸುಭಾನು, 18 ತಾರಣ, 19 ಪಾರ್ಥಿವ, 20 ವ್ಯಯ, 21 ಸರ್ವಜಿತ್, 22 ಸರ್ವಧಾರಿ, 23 ವಿರೋಧಿ, 24 ವಿಕೃತಿ, 25 ಖರ, 26 ನಂದನ, 27 ವಿಜಯ, 28 ಜಯ, 29 ಮನ್ಮಥ, 30 ದುರ್ಮುಖ, 31 ಹೇಮಲಂಬ (ಹೇಮಲಂಬಿ), 32 ವಿಲಂಬಿ, 33 ವಿಕಾರಿ, 34 ಶಾರ್ವರಿ, 35 ಪ್ಲವ, 36 ಶುಭಕೃತ್ (ಶೋಭಕೃತ್), 37 ಶೋಭನ, 38 ಕ್ರೋಧಿ, 39 ವಿಶ್ವಾವಸು, 40 ಪರಾಭವ, 41 ಪ್ಲವಂಗ, 42 ಕೀಲಕ, 43 ಸೌಮ್ಯ, 44 ಸಾಧಾರಣ, 45 ವಿರೋಧಕೃತ್, 46 ಪರಿಧಾವಿ, 47 ಪ್ರಮಾದಿ (ಪ್ರಮಾಧಿ), 48 ಆನಂದ, 49 ರಾಕ್ಷಸ, 50 ನಲ (ಅನಲ), 51 ಪಿಂಗಲ, 52 ಕಾಲಯುಕ್ತ, 53 ಸಿದ್ಧಾರ್ಥಿ (ಸಿದ್ಧಾರ್ಥ), 54 ರೌದ್ರ, 55 ದುರ್ಮತಿ, 56 ದುಂದುಭಿ, 57 ರುಧಿರೋದ್ಗಾರಿ, 58 ರಕ್ತಾಕ್ಷ (ರಕ್ತಾಕ್ಷಿ), 59 ಕ್ರೋಧನ, 60 ಕ್ಷಯ (ಅಕ್ಷಯ).ದಕ್ಷಿಣ ಭಾರತದಲ್ಲಿ ಈ ಚಕ್ರ ಪ್ರಭವ ಸಂವತ್ಸರದಿಂದ ಆರಂಭವಾದರೆ ಉತ್ತರ ಭಾರತದಲ್ಲಿ ಇದರ ಕ್ರಮ ಭಿನ್ನವಾಗಿದೆ. ಕಲಿಯುಗದ ಸಂವತ್, ಶಕ ಸಂವತ್, ಮೊದಲಾಗ ಗಣನೆಗಳೊಂದಿಗೆ ಈ ಎಣಿಕೆ ಹೊಂದಿಕೊಂಡು ಬರುತ್ತದೆ. ವರಾಹಮಿಹಿರ ಕಲಿಯುಗದ ಆರಂಭ ವರ್ಷವನ್ನು ಈ ಚಕ್ರದ ವಿಜಯ ಸಂವತ್ಸರಕ್ಕೆ ಸಮೀಕರಿಸಿದ್ದಾನೆ. ಇನ್ನೊಬ್ಬ ಗ್ರಂಥಕಾರ ಅದನ್ನು ಪ್ರಭವ ಸಂವತ್ಸರಕ್ಕೆ ಜೊತೆಗೂಡಿಸಿದ್ದಾನೆ. ಈ ಸಂವತ್ಸರಗಳ ಪರಿಮಿತಿ ಚಾಂದ್ರ-ಸೌರಮಾನ ವರ್ಷಗಳ ಪರಿಮಿತಿಗೆ ಸಮನಾಗಿದೆ. ಉತ್ತರ ಭಾರತದ ಶಾಸನಾದಿ ಅಭಿಲೇಖನಗಳಲ್ಲಿ ಈ ಸಂವತ್ಸರಗಳ ಬಳಕೆ ಹೆಚ್ಚಿಲ್ಲ. ದಕ್ಷಿಣ ಭಾರತದಲ್ಲಿ ಮಾತ್ರ ಇದು ಹೆಚ್ಚು ವ್ಯಾಪಕವಾಗಿದೆ. ಈ ಚಕ್ರದ ವಿಜಯ ಸಂವತ್ಸರದ ಪ್ರಥಮ ನಿರ್ದೇಶ 3ನೆಯ ಶತಮಾನದ ಇಕ್ಷ್ವಾಕು ವಂಶದ ವೀರಪುರುಷ ದತ್ತರಾಜನ ಶಾಸನದಲ್ಲಿ ದೊರೆತಿದೆ. ಇದರಿಂದ ಅದಕ್ಕೂ ಪೂರ್ವದಿಂದ ಈ ಸಂವತ್ಸರ ಚಕ್ರ ಪ್ರಚಾರಕ್ಕೆ ಬಂದಿತ್ತು ಎಂದು ಭಾವಿಸಬಹುದು.

ವಿಕ್ರಮ ಸಂವತ್

ಬದಲಾಯಿಸಿ

ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದಲ್ಲಿ ಇದರ ಬಳಕೆ ವಿಶೇಷವಾಗಿದೆ. ಇದರ ಆರಂಭ ವರ್ಷ ಕ್ರಿ. ಪೂ. 57. ಈ ಸಂವತ್ಸರದ ಎಣಿಕೆಯನ್ನು ದಕ್ಷಿಣದಲ್ಲಿ ಕಾರ್ತಿಕ ಮಾಸದಿಂದ, ಉತ್ತರದಲ್ಲಿ ಚೈತ್ರಮಾಸದಿಂದ ಪ್ರಾರಂಭಿಸುವರು. ಇದರ ಮಾಸಗಳು ಪೌರ್ಣಿಮಾಂತ. ಈ ಕಾಲಗಣನೆಯನ್ನು ಎಲ್ಲಿ, ಯಾರು ಆರಂಭಿಸಿದರು, ಎಂಬ ವಿಚಾರದಲ್ಲಿ ಭಿನ್ನಾಭಿಪ್ರಾಯ ಇದೆ. ಉಜ್ಜಯಿನಿಯ ವಿಕ್ರಮಾದಿತ್ಯ ಪರಕೀಯ ಶಕರನ್ನು ಸೋಲಿಸಿದುದರ ಸ್ಮಾರಕವಾಗಿ ಈ ಗಣನೆಯನ್ನು ಪ್ರಾರಂಭಿಸಿದನೆಂಬುದು ಹಲವು ವಿದ್ವಾಂಸರ ಅಭಿಪ್ರಾಯ. ಆದರೆ ಇದಕ್ಕೆ ಇತಿಹಾಸದ ಆಧಾರವಿಲ್ಲ. ಕ್ರಿ. ಪೂ. 1ನೆಯ ಶತಮಾನದಲ್ಲಿ ವಿಕ್ರಮಾದಿತ್ಯ ಆಳುತ್ತಿದ್ದುದಕ್ಕೆ ಆಧಾರವಿಲ್ಲ. ಇದು ಮೊದಲು ಕೃತಸಂವತ್ ಎಂದೂ ಅನಂತರ ಮಾಲವ ಸಂವತ್ ಎಂದೂ ಹೆಸರಾಗಿದ್ದು ಬಳಿಕ 8ನೆಯ ಶತಮಾನದಲ್ಲಿ ವಿಕ್ರಮಸಂವತ್ ಎಂದು ಹೆಸರು ಪಡೆದಂತೆ ಕಾಣುತ್ತದೆ. ಕೃತಪದದ ಮೂಲ ಸಂದಿಗ್ಧವಾಗಿದೆ, ಇದು ಒಬ್ಬ ನಾಯಕನಿರಬಹುದು. ಮಾಲವರು ಪುರಾತನ ಕಾಲದ ಒಂದು ಗಣರಾಣ್ಯಕ್ಕೆ ಸೇರಿದ್ದವರು. ಗುಪ್ತ ಚಕ್ರವರ್ತಿ ಇಮ್ಮಡಿ ಚಂದ್ರಗುಪ್ತ ವಿಕ್ರಮಾದಿತ್ಯ 5ನೆಯ ಶತಮಾನದಲ್ಲಿ ಶಕರನ್ನು ಮಾಳವದಿಂದ ಓಡಿಸಿದ ಮೇಲೆ ಬಹು ಪ್ರಖ್ಯಾತಿ ಪಡೆದ. ಕಾಲಾಂತರದಲ್ಲಿ ಮಾಲವ ಸಂವತ್ ಎಂಬ ಕಾಲಗಣನೆಯೊಂದಿಗೆ ವಿಕ್ರಮಾದಿತ್ಯನ ಹೆಸರನ್ನು ಸಂಯೋಗಗೊಳಿಸಿದುದರ ಫಲವಾಗಿ ಈ ವಿಕ್ರಮ ಸಂವತ್ 8-9ನೆಯ ಶತಮಾನದಿಂದೀಚೆಗೆ ಸರ್ವತ್ರ ಪ್ರಸಾರ ಹೊಂದಿ ಮನ್ನಣೆ ಪಡೆಯಿತು. ಆದರೂ ಇದರ ಮೂಲ ಇನ್ನೂ ಸಮಸ್ಯೆಯಾಗಿದೆ. ಕ್ರಿ. ಪೂ. 1ನೆಯ ಶತಮಾನದಲ್ಲಿ ಪೊನೊನೆಸ್ ಪೂರ್ವ ಇರಾನ್ ಪ್ರದೇಶದಲ್ಲಿ ರಾಜಾಧಿರಾಜನೆಂಬ ಬಿರುದಿನೊಂದಿಗೆ ಸ್ವತಂತ್ರ್ಯ ರಾಜ್ಯ ಸ್ಥಾಪಿಸಿದುದಾಗಿ ಈತನ ನಾಣ್ಯಗಳಿಂದ ವ್ಯಕ್ತವಾಗುತ್ತದೆ. ಈತನ ಆಳ್ವಿಕೆ ಈ ಕಾಲಗಣನೆಗೆ ನಾಂದಿಯಾಗಿರಬಹುದು. ಇವನ ಮಾಂಡಲಿಕರಾದ ಶಕರು, ಸಿಂಧ್-ಪಂಜಾಬಿನಲ್ಲಿ ನೆಲಸಿದ್ದ ಮಾಲವ ಜನಾಂಗದವರು ಈ ಗಣನೆಯನ್ನು ಬಳಸುತ್ತ, ರಾಜಸ್ಥಾನ ಮಧ್ಯಭಾರತ ಪ್ರದೇಶಗಳಿಗೆ ಸ್ಥಳಾಂತರ ಹೊಂದಿ ಈ ಸಂವತ್ತಿನ ಪ್ರಚಾರಕ್ಕೆ ಸಹಾಯಕರಾಗಿರಬಹುದು.

ಶಕ ಸಂವತ್

ಬದಲಾಯಿಸಿ

ಇದು ದಕ್ಷಿಣ ಭಾರತದಲ್ಲಿ ಸಾರ್ವತ್ರಿಕವಾಗಿ ಕ್ರಿ. ಶ. 78ರಿಂದ ಪ್ರಚಾರದಲ್ಲಿದ್ದ ಕಾಲಗಣನೆ. ಇದನ್ನು ಬೃಹಸ್ಪತಿ ಚಕ್ರದ ಪ್ರಭವಾದಿ ಸಂವತ್ಸರಗಳಿಗೆ ಹೊಂದಿಸಿ ಚೈತ್ರ ಶುಕ್ಲ ಪ್ರತಿಪದೆಯಿಂದ (ಯುಗಾದಿ) ಎಣಿಸುತ್ತಾರೆ. ಕುಫಾಣ ವಂಶದ  1ನೆಯ ಕನಿಷ್ಕ ಕ್ರಿ. ಶ. 78ರಿಂದ 102ರ ವರೆಗೆ ಆಳಿದನೆಂಬುದು ಬಹು ಮತಾಭಿಪ್ರಾಯ. ಕನಿಷ್ಕನ ಆಳ್ವಿಕೆಯ ಎಣಿಕೆಯ ವರ್ಷವನ್ನು ಆತನ ಸಾಮಂತರು, ಪಶ್ಚಿಮ ಭಾರತ ಪ್ರದೇಶದಲ್ಲಿ ಅಧೀನ ಅಧಿಕಾರಿಗಳಾಗಿದ್ದ ಶಕಕುಲದ ಕ್ಷತ್ರಪರು ಮುಂದುವರಿಸಿದರು.  ಈ ಗಣನೆ ಶಾಸನಗಳಲ್ಲಿ ಸಂವತ್ ಎಂಬ ನಿರ್ದೇಶನದಿಂದ 1 ರಿಂದ 4ನೆಯ ಶತಮಾನದ ವರೆಗೆ ಪ್ರಚಾರದಲ್ಲಿದ್ದಂತೆ ಕಂಡುಬರುತ್ತದೆ. ಮುಂದೆ ಇದನ್ನು ಶಕ 380 ಎಂದು ಸಿಂಹಸೂರಿಯ ಲೋಕವಿಭಾಗ ಗ್ರಂಥದಲ್ಲಿ ಮೊದಲ ಬಾರಿಗೆ ಉಲ್ಲೇಖಿಸಿದೆ. ಅನಂತರ ಬಾದಾಮಿಯ ಚಾಳುಕ್ಯವಂಶದ 1ನೆಯ ಪುಲಿಕೇಶಿಯ ಬಾದಾಮಿ ಶಾಸನದಲ್ಲಿ ಶಕ ವರ್ಷ 465 ಎಂದಿದೆ. ಇಮ್ಮಡಿ ಪುಲಿಕೇಶಿಯು ಐಹೊಳೆ ಶಾಸನದಲ್ಲಿ ಶಕವರ್ಷ 556ರ ಸ್ಪಷ್ಟ ನಿರ್ದೇಶವಿದೆ. ಉಜ್ಜಯಿನಿಯಲ್ಲಿ 6ನೆಯ ಶತಮಾನದ ವರಾಹಮಿಹಿರ 427 ಎಂಬ ಶಕಕಾಲವನ್ನು ನಿರೂಪಿಸಿದ್ದಾನೆ. ಗುಜರಾತ್, ಕಾಠಿಯಾವಾಡ ಮೊದಲಾದ ಶಕ ಅರಸರ ಅಧೀನದ ಪ್ರದೇಶಗಳಲ್ಲಿ ಪೋಷಣೆ ಪಡೆದ ಜೈನ ಪಂಡಿತರ ಮೂಲಕ ಪಶ್ಚಿಮ ಭಾರತದಿಂದ ಈ ಕಾಲಗಣನೆ ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಪ್ರಚಾರ ಹೊಂದಿರಬೇಕು.ಈ ಪಂಡಿತರಿಗೆ ಮತ್ತು ಮುಂದಿನವರಿಗೆ ಪರಕೀಯ ಶಾಸಕರಾದ ಕುಷಾಣ, ಪಾರ್ಥಿಯನ್, ಶಕ ಮುಂತಾದ ಭಿನ್ನ ಜಾತಿ ಪಂಗಡಗಳ ವ್ಯತ್ಯಾಸ ಪರಿಜ್ಞಾನವಿರಲಿಲ್ಲವಾದುದರಿಂದ ಅವರೆಲ್ಲರನ್ನೂ ಶಕರು ಎಂಬ ಸಾಮಾನ್ಯ ಹೆಸರಿನಿಂದ ನಿರ್ದೇಶಿಸಿದರು. 6ನೆಯ ಶತಮಾನದಿಂದೀಚೆಗೆ ಆಳಿದ ಕನ್ನಡ ನಾಡಿನ ಚಾಳುಕ್ಯ ಮೊದಲಾದ ಅರಸರ ಶಾಸನಗಳಲ್ಲಿ ಇದನ್ನು ಶಕವರ್ಷ, ಶಕನೃಪವರ್ಷ, ಶಕನೃಪರಾಜ್ಯಾಭಿಷೇಕ, ಸಂವತ್ಸರ ಮುಂತಾದ ಪದಗಳಿಂದ ಹೆಸರಿಸಿದೆ.  ಆದರೆ 12ನೆಯ ಶತಮಾನದ ಹೊತ್ತಿಗೆ ಇದು ಶಾಲಿವಾಹನ ಸ್ಥಾಪಿಸಿದ ಕಾಲಗಣನೆ ಎಂಬ ವಿಚಾರ ರೂಢಿಗೆ ಬಂದುದರಿಂದ ಶಾಲಿವಾಹನ ಶಕ ಎಂಬ ಹೊಸ ಹೆಸರು ಪ್ರಚಲಿತವಾಯಿತು. ಶಾಲಿವಾಹನ ಪದ ಸಾತವಾಹನದ ರೂಪಾಂತರ. ಸಾತವಾಹನ ಅರಸರಲ್ಲಿ ಗೌತಮೀಪುತ್ರ ಸಾತಕರ್ಣಿ, 2ನೆಯ ಶತಮಾನದಲ್ಲಿ ಶಕರನ್ನು ಸೋಲಿಸಿ ಶಕಧ್ವಂಸಕ ಎಂದು ಪ್ರಸಿದ್ಧಿಪಡೆದ. ಈ ಘಟನೆಯ ಅಸ್ಫುಟ ಪ್ರಭಾವ ಈ ಗಣನೆಯ ಮೇಲೆ ಮೂಡಿರಬೇಕು. ಕ್ರಮೇಣ ಶಕ ಎಂದರೆ ಕಾಲಗಣನೆ ಎಂಬ ಸಾಮಾನ್ಯ ಅರ್ಥ ರೂಢಿಗೆ ಬಂತು. ದಕ್ಷಿಣ ಭಾರತದಲ್ಲಿ ಕರ್ಣಾಟಕದಲ್ಲಿ ಶಕಸಂವತ್ತಿಗೆ ಪ್ರಾಧಾನ್ಯ ದೊರಕಿತು. ಕರ್ಣಾಟಕದಿಂದ ಬಂಗಾಳಕ್ಕೆ ಹೋಗಿ ರಾಜ್ಯಸ್ಥಾಪನೆ ಮಾಡಿದ ಸೇನವಂಶದ ಅರಸರು ಈ ಕಾಲಗಣನೆಯನ್ನು ಅಲ್ಲಿ ಪ್ರಚುರಪಡಿಸಿದರು. ಅದೇ ವಿಧದಲ್ಲಿ ಉತ್ತರ ಬಿಹಾರದಲ್ಲಿ ಆಳಿದ ಕರ್ಣಾಟಕದ ನಾನ್ಯದೇವನ ವಂಶದ ರಾಜರು ಈ ಗಣನೆಯನ್ನು ಆ ಭಾಗದಲ್ಲಿ ಪ್ರಸ್ತುತ ಪಡಿಸಿದರು. ಬಂಗಾಳ, ಬಿಹಾರಗಳಿಂದ ಇದು ಮುಂದೆ ನೇಪಾಳ ಮತ್ತು ಅಸ್ಸಾಂ ವರೆಗೂ ಹರಡಿತು.

 

ನೇವಾರಿ ಸಂವತ್

ಬದಲಾಯಿಸಿ

ಇದು ನೇಪಾಳದಲ್ಲಿ ಪ್ರಚಾರದಲ್ಲಿದ್ದ ಕಾಲಗಣನೆ; ಇದರ ಆರಂಭ ವರ್ಷ 879; ಇದರ ಸ್ಥಾಪಕ ಜಯದೇವಮಲ್ಲರಾಜ.  ಇದಕ್ಕೂ ಮುಂಚೆ ಅಲ್ಲಿ ಶಕಸಂವತ್ ಬಳಕೆಯಲ್ಲಿತ್ತು.  18ನೆಯ ಶತಮಾನದಲ್ಲಿ ಗೋರಖನಾಥ ಅಲ್ಲಿಗೆ ಹೋದಂದಿನಿಂದ ಪುನಃ ರೂಢಿಗೆ ಬಂತು.

ಕೊಲ್ಲಂ ವರ್ಷ

ಬದಲಾಯಿಸಿ

ಇದರ ಸಂಸ್ಕೃತ ಹೆಸರು ಕೊಲಂಬ ಸಂವತ್. ಕೊಲ್ಲಂ (ಈಗಿನ ಕ್ವಿಲಾನ್) ಪಟ್ಟಣದಲ್ಲಿ ಸಂಭವಿಸಿದ ಘಟನೆಯೊಂದು ಇದಕ್ಕೆ ಮೂಲವಿರಬೇಕು. ಇದರ ಪ್ರಾರಂಭ 1144-45ರಲ್ಲಿ. ಕೇರಳ ರಾಜ್ಯದಲ್ಲಿ ಮತ್ತು ನೆರೆಯ ತಮಿಳುನಾಡಿನ ತರುನೆಲ್‍ವೇಲಿ, ಕನ್ಯಾಕುಮಾರಿ ಪ್ರದೇಶಗಳಲ್ಲಿ ಇದು ಪ್ರಚಾರದಲ್ಲಿದೆ. ಇದರ ಮಾಸಗಳನ್ನು ಮೇಷಾದಿರಾಶಿಗಳಿಂದ ಗಣಿಸುತ್ತಾರೆ. ವರ್ಷಾರಂಭ ಕೆಲವೆಡೆ ಕನ್ಯಾರಾಶಿಯಿಂದ, ಕೆಲವೆಡೆ ಸಿಂಹರಾಶಿಯಿಂದ ಆಗುತ್ತದೆ.

ಕ್ರಿಸ್ತಶಕ

ಬದಲಾಯಿಸಿ

ಯೇಸು ಕ್ರಿಸ್ತ ಹುಟ್ಟಿದ ವರ್ಷದಿಂದ ಇದರ ಎಣಿಕೆ ಆರಂಭವಾಗುತ್ತದೆ. ರೋಮಿನ ಡೈಯೊನಿಷಿಯಸ್ ಎಗ್ಸಿಗ್ಯುಮಸ್ 532ರಲ್ಲಿ ಇದನ್ನು ಪ್ರಸ್ತುತಗೊಳಿಸಿದ. 1582ರಲ್ಲಿ 13ನೆಯ ಗ್ರೆಗರಿಯಿಂದ (ಪೋಪ್) ಇದು ಪರಿಷ್ಕೃತವಾಯಿತು. ಬ್ರಿಟಿಷರ ಪ್ರಭುತ್ವದೊಂದಿಗೆ ಈ ಗಣನೆ ಭಾರತದಲ್ಲಿ ಪ್ರಚಲಿತವಾಗಿ ಸಾರ್ವತ್ರಿಕ ಮನ್ನಣೆ ಪಡೆಯಿತು.

ಸ್ವತಂತ್ರ ಭಾರತದ ರಾಷ್ಟ್ರೀಯ ಸಂವತ್

ಬದಲಾಯಿಸಿ

1947ರಲ್ಲಿ ಭಾರತ ಸ್ವತಂತ್ರವಾದರೂ ರಾಜಕೀಯ ವ್ಯವಹಾರಗಳಲ್ಲಿ ಕ್ರಿಸ್ತಶಕದ ಉಪಯೋಗ ಮುಂದುವರಿಯಿತು. ಸ್ವತಂತ್ರ ಭಾರತಕ್ಕೆ ತನ್ನದೇ ಆದ ರಾಷ್ಟ್ರೀಯ ಕಾಲಗಣನೆಬೇಕೆಂಬ ಉದ್ದೇಶದಿಂದ 1952ರಲ್ಲಿ ಒಂದು ಸಮಿತಿಯನ್ನು ನೇಮಿಸಲಾಯಿತು. ಈ ಸಮಿತಿ 1955ರಲ್ಲಿ ಸಲ್ಲಿಸಿದ ವರದಿಯ ಪ್ರಕಾರ ಭಾರತ ಸರ್ಕಾರ ಕ್ರಿಸ್ತಶಕದ ಜೊತೆಗೆ ಭಾರತದ ರಾಷ್ಟ್ರೀಯ ಪಂಚಾಂಗವನ್ನೂ ಪ್ರಸ್ತುತಗೊಳಿಸಿತು. ಭಾರತದ ಈ ಹೊಸ ಕಾಲ ಗಣನೆಯ ಪದ್ಧತಿ 1957ರ ಮಾರ್ಚ್ 22ರಂದು (ಶಕ 1879, ಚೈತ್ರ ಶುಕ್ಲ ಪ್ರತಿಪದೆ) ಆಚರಣೆಗೆ ಬಂತು. ಒಂದು ವರ್ಷದಲ್ಲಿ ಚೈತ್ರಾದಿ ಹನ್ನೆರಡು ತಿಂಗಳುಗಳೂ ಇವುಗಳಲ್ಲಿ ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಬಾದ್ರಪದ ಈ ಐದು ತಿಂಗಳುಗಳಲ್ಲಿ ಒಂದೊಂದಕ್ಕೆ 31ದಿನಗಳೂ ಇರುತ್ತವೆ.  ಉಳಿದ ಏಳು ತಿಂಗಳುಗಳಲ್ಲಿ 30 ದಿನಗಳು. ಪ್ರತಿ ನಾಲ್ಕನೆಯ ವರ್ಷವನ್ನು ಅಧಿಕ ದಿನದ ವರ್ಷವೆಂದು (ಲೀಪ್ ಇಯರ್) ಗಣಿಸಲಾಗುತ್ತದೆ. ಆ ವರ್ಷದಲ್ಲಿ ಚೈತ್ರದಲ್ಲಿ 31 ದಿನಗಳಿರುತ್ತವೆ.

ಉಲ್ಲೇಖಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: