ಬೂಕನ ಬೆಟ್ಟ
ಬೂಕನ ಬೆಟ್ಟ ಒಂದು ಐತಿಹಾಸಿಕ ಕ್ಷೇತ್ರ. ಇದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಹೋಬಳಿಯ ಬೂಕ ಎಂಬ ಹಳ್ಳಿಯ ಸಮೀಪದಲ್ಲಿ ಇದೆ. ಇದೊಂದು ಬೆಟ್ಟವಾಗಿದ್ದು ಬೂಕ ಎಂಬ ಹಳ್ಳಿಯ ಸಮೀಪದಲ್ಲೇ ಇರುವುದರಿಂದ ಇದಕ್ಕೆ ಬೂಕನ ಬೆಟ್ಟ ಎಂಬ ಹೆಸರು ಬಂದಿದೆ. ಬೆಟ್ಟದ ಮೇಲೆ ರಂಗನಾಥ ಸ್ವಾಮಿ ದೇವಾಲಯವಿದೆ. ಬೆಟ್ಟದ ಮೇಲೆಯೇ ಒಂದು ಪುಟ್ಟ ಕಲ್ಯಾಣಿ ಇದ್ದು ಈ ಕಲ್ಯಾಣಿ ಶ್ರವಣಬೆಳದಲ್ಲಿರುವ ಕಲ್ಯಾಣಿ ಜತೆಗೆ ಭೂಮಿಯಾಳದಲ್ಲಿ ಸಂಪರ್ಕವಿದೆ ಎಂಬುದು ಸ್ಥಳೀಯರ ನಂಬಿಕೆ. ಬೂಕನಬೆಟ್ಟದಿಂದ ಶ್ರವಣಬೆಳಗೊಳ ಬೆಟ್ಟಕ್ಕೆ ಸುಮಾರು ೧೫ ಕಿಲೋಮೀಟರ್ ದೂರವಿದೆ. ಪ್ರತಿ ವರ್ಷ ಭಾರಿ ದನಗಳ ಜಾತ್ರೆ ನಡೆಸಿ ಜಾತ್ರೆಯ ಕೊನೆಯಲ್ಲಿ ರಥೋತ್ಸವ ನಡೆಸಲಾಗುತ್ತದೆ. ರಂಗನಾಥಸ್ವಾಮಿ ದೇವರ ಅಡ್ಡಪಲ್ಲಕ್ಕಿ ಉತ್ಸವ ನಡೆಸಲಾಗುತ್ತದೆ[೧].
ವಿಶೇಷತೆ
ಬದಲಾಯಿಸಿಪ್ರತಿ ವರ್ಷವೂ ವರ್ಷದ ಆರಂಭದಲ್ಲೇ ಭಾರೀ ದನಗಳ ಜಾತ್ರೆ ನಡೆಯುವುದು ಈ ಸ್ಥಳದ ವಿಶೇಷ[೨]. ಪ್ರತಿ ವರ್ಷ ಜನವರಿ ಮೊದಲ ವಾರದಲ್ಲಿ ಜಾತ್ರೆ ಆರಂಭವಾಗುತ್ತದೆ. ಸಂಕ್ರಾಂತಿ ಹಬ್ಬ ಮುಗಿದ ನಂತರ ರಥೋತ್ಸವ ನಡೆಯುತ್ತದೆ. ಸುಮಾರು ೧೫ ದಿನಗಳ ಕಾಲ ಜಾತ್ರೆ ನಡೆಯುತ್ತದೆ. ಈ ಸಂದರ್ಭದಲ್ಲಿ ಸುತ್ತಲಿನ ಹತ್ತಾರು ಹಳ್ಳಿಗಳ ರೈತರು ತಾವು ಸಾಕಿದ ದೇಸೀ ತಳಿಗಳ[೩] ಹಸುಗಳನ್ನು ಜಾತ್ರೆಯಲ್ಲಿ ಕಟ್ಟಿ ಪ್ರದಶಿಸುವುದೆಂದರೆ ದೊಡ್ಡಸ್ತಿಕೆಯ ಸಂಕೇತ. ರೈತರೆಲ್ಲರು ತಾವು ಸೇಕಿದ ಹೋರಿಗಳು, ಎತ್ತುಗಳು ಹಾಗೂ ಹಸುಗಳನ್ನು ಮೈತೊಳೆದು ಸಿಂಗರಿಸಿಕೊಂಡು ತಮಟೆ ವಾದ್ಯಗಳ ಮೂಲಕ ಮೆರವಣಿಗೆ ಮಾಡಿಕೊಂಡು ಜಾತ್ರೆಗೆ ಕರೆತರುತ್ತಾರೆ. ಆದರೆ ಒಂದೇ ಒಂದು ಸೀಮೆ ಹಸು ಅಥವಾ ಹೈಬ್ರಿಡ್ ಹಸುಗಳನ್ನು ಈ ಜಾತ್ರೆಯಲ್ಲಿ ಕಟ್ಟುವುದಿಲ್ಲ. ಕೇವಲ ನಾಟಿ ತಳಿಯ ಹಸುಗಳಿಗೆ ಮಾತ್ರ ಇಲ್ಲಿ ಅವಕಾಶ. ಇದಲ್ಲದೆ ಜಾತ್ರೆಯಲ್ಲಿ ರಂಗೋಲಿ ಸ್ಪರ್ಧೆ, ಗುಂಡು ಎತ್ತುವ ಸ್ಪರ್ಧೆ ಮುಂತಾದ ಗ್ರಾಮೀಣ ಕ್ರೀಡಾ ಕೂಟಗಳನ್ನು ಏರ್ಪಡಿಸಿ ಪ್ರಶಸ್ತಿ ನೀಡಲಾಗುತ್ತದೆ[೪].
ಹಸುಗಳಿಗೆ ಪ್ರಶಸ್ತಿ
ಬದಲಾಯಿಸಿದೇವಸ್ಥಾನ ಸಮಿತಿಯ ಸದಸ್ಯರು ಸುಮಾರು ಹದಿನೈದು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಎಲ್ಲ ಹಸುಗಳನ್ನೂ ಸಮೀಕ್ಷೆ ನಡೆಸಿ ಉತ್ತಮ ಹೋರಿ ಅಥವಾ ಎತ್ತುಗಳ ಜೋಡಿಗೆ ಬಹುಮಾನ ಘೋಷಿಸುತ್ತಾರೆ. ಸ್ಥಳೀಯ ಎಂಎಲ್ಎ ಒಳಗೊಂಡಂತೆ ಸ್ಥಳೀಯ ಮುಖಂಡರನ್ನು ಸೇರಿಸಿ ಒಂದು ಕಾರ್ಯಕ್ರಮ ಮಾಡಿ ಉತ್ತಮ ಹೋರಿಗಳನ್ನು ಅಥವಾ ಎತ್ತುಗಳನ್ನು ಸಾಕಿದ ರೈತರಿಗೆ ಪ್ರಶಸ್ತಿ ಹಣವನ್ನು ನೀಡಿ ಪ್ರೋತ್ಸಾಹಿಸಲಾಗುತ್ತದೆ.
ಪುರಾಣ ಕಥೆ
ಬದಲಾಯಿಸಿಬೆಟ್ಟದ ಮೇಲಿರುವ ದೇವಸ್ಥಾನದ ಪ್ರವೇಶ ದ್ವಾರದ ಹೊಸ್ತಿಲ ಬಳಿಯೇ ಬಾಲಕನೊಬ್ಬ ಕೈಮುಗಿದು ಮಲಗಿರುವ ಶಿಲ್ಪವೊಂದಿದೆ. ಈ ಶಿಲ್ಪದಲ್ಲಿರುವ ಬಾಲಕನ ಕುರಿತಂತೆ ಸುತ್ತಲಿನ ಹಳ್ಳಿಯುಲ್ಲಿ ಪುರಾಣ ಕಥೆಯೊಂದು ಚಾಲ್ತಿಯಲ್ಲಿದೆ. ಅದೆಂದರೆ ಬೆಟ್ದದ ಬಳಿಯೇ ಚನ್ನಹಳ್ಳಿ ಎಂಬ ಊರಿತ್ತಂತೆ. ಆ ಊರಿನ ಒಬ್ಬ ಪುಟ್ಟ ಬಾಲಕ ಊರು ತೊರೆದು ಹೋಗಿಬಿಡುತ್ತಾನೆ. ಇತ್ತ ಬರ ಮತ್ತು ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಊರಿನವರೆಲ್ಲರೂ ಚನ್ನಹಳ್ಳಿಯನ್ನು ತೊರೆಯುತ್ತಾರೆ. ಹತ್ತಿಪ್ಪತ್ತು ವಷಗಳ ನಂತರ ಮನೆಗಳೆಲ್ಲ ಮುರಿದು ಹಾಳುಗೋಡೆಗಳಷ್ಟೇ ನಿಂತಿರುತ್ತವೆ. ಊರುಬಿಟ್ಟು ಹೋಗಿದ್ದ ಬಾಲಕ ಪ್ರಾಯಕ್ಕೆ ಬಂದಿರುತ್ತಾನೆ. ಊರಿನ ನೆನಪಾಗಿ ಮರಳುತ್ತಾನೆ. ಆದರೆ ಊರಿನಲ್ಲಿ ಯಾರೊಬ್ಬರೂ ಇಲ್ಲದ್ದನ್ನು ಕಂಡು ಗಾಬರಿಯಾಗುತ್ತಾನೆ. ಅಳುತ್ತಾ ಎಲ್ಲ ಮನೆಗಳ ಒಳಗೂ ಹೋಗಿ ಯಾರಾದರೂ ಇದ್ದಾರೆಯೇ ಎಂದು ಹುಡುಕುತ್ತಿರುತ್ತಾರೆ. ಒಂದು ಮನೆಯ ಒಳಗೆ ಹೋದಾಗ ಕೊಳ್ಳಿದೆವ್ವವನ್ನು ಕಂಡು ಬೆಚ್ಚಿ ಬಿದ್ದು ಓಡತೊಡಗುತ್ತಾನೆ. ಕೊಳ್ಳಿದೆವ್ವವೂ ಕೂಡ ಈತನನ್ನ ಹಿಂಬಾಲಿಸುತ್ತಾ ಓಡುತ್ತದೆ. ಸನಿಹದಲ್ಲೇ ಇದ್ದ ಬೆಟ್ಟವನ್ನು ಏರಿ ಬಾಗಿಲ ಬಳಿ ಬಂದು 'ಕಾಪಾಡು ರಂಗನಾಥ' ಎಂದು ಚೀರುತ್ತಾ ಬೀಳುತ್ತಾನೆ. ಓಡಿ ಉಸಿರು ಕಟ್ಟಿದ್ದರ ಪರಿಣಾಮ ಆತ ಅಲ್ಲಿಯೇ ಮರಣ ಹೊಂದುತ್ತಾನೆ. ಇದಕ್ಕಾಗಿ ಬಾಗಿಲ ಬಳಿಯೇ ಆ ಬಾಲಕನ ಶಿಲೆಯನ್ನು ಕೆತ್ತಿದ್ದಾರೆ. ಬಾಲನ ಊರಿದ್ದ ಸ್ಥಳಕ್ಕೆ ಈಗಲೂ ಹಾಳುಚನ್ನಹಳ್ಳಿ ಎಂದೇ ಕರೆಯಲಾಗುತ್ತಿದೆ.
ಉಲ್ಲೇಖಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ https://vijaykarnataka.indiatimes.com/topic/%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF%E0%B2%AF
- ↑ https://vijaykarnataka.indiatimes.com/district/hasana/channarayapattana-bookanabetta-exhibition-inaguration/articleshow/67456780.cms
- ↑ https://www.vijayavani.net/desi-cow/
- ↑ https://vijaykarnataka.indiatimes.com/district/hasana/hassan-channarayapattana-bookanabetta-fair-festival/articleshow/67489024.cms