ಬಿಹು
ಬಿಹು (Assamese: বিহু,ಹಿಂದಿ:बिहू)ಅಸ್ಸಾಂ ರಾಜ್ಯದ ಮೂರು ವಿವಿಧ ಸಾಂಸ್ಕೃತಿಕ ಹಬ್ಬಗಳನ್ನು ಪ್ರತಿನಿಧಿಸುತ್ತದೆ. ಪ್ರಾಚೀನ ರೀತಿ ರಿವಾಜುಗಳು ಇದರ ಮೂಲವಾಗಿದ್ದರೂ ಕೂಡ ಇದು ನಗರ ಪ್ರದೇಶ ನಿರ್ದಿಷ್ಟ ಗುಣಗಳನ್ನು ಸೇರಿಸಕೊಂಡಿವೆ. ಹೀಗಾಗಿ ಇದು ಇತ್ತೀಚಿನ ದಶಕಗಳಲ್ಲಿ ನಗರಪ್ರದೇಶ ಮತ್ತು ವಾಣಿಜ್ಯ ಕೇಂದ್ರಗಳಲ್ಲಿ ಅತ್ಯಂತ ಜನಪ್ರಿಯ ಹಬ್ಬವಾಗಿ ರೂಪಗೊಂಡಿದೆ. ಬಿಹು ಅನ್ನು ಬಿಹು ನೃತ್ಯ ಮತ್ತು ಬಿಹು ಜನಪದ ಹಾಡುಗಳನ್ನು ಸೂಚಿಸಲು ಕೂಡ ಬಳಸಲಾಗುತ್ತದೆ.
ಬಿಹು ಎಂಬ ಪದವನ್ನು ವಿಸುವನ್ ಎನ್ನುವುದರಿಂದ ಪಡೆಯಲಾಗಿದೆ. ಇದು ಭಾರತದಲ್ಲಿ ಮಾರ್ಚಿನ ಈಕ್ವಿನಾಕ್ಸ್ (ಸೂರ್ಯ ಸಮಭಾಜಕ ವೃತ್ತವನ್ನು ದಾಟುವ ಕಾಲ, ಮಾರ್ಚಿ 21) ಜೊತೆಯಲ್ಲಿ ಸಂಬಂಧ ಹೊಂದಿರುವ ಅನೇಕ ಹಬ್ಬಗಳನ್ನು ಸೂಚಿಸಲು ವಿಸುವನ್ ಅನ್ನು ಬಳಸಲಾಗುತ್ತದೆ.[೧] ಅಸ್ಸಾಂನಿಲ್ಲಿ, ರೊಂಗಾಳಿ ಬಿಹು ಅನೇಕ ವಿವಿಧ ಸಂಪ್ರದಾಯಗಳಾದ-ಆಸ್ಟ್ರೋ-ಏಷಿಯಾಟಿಕ್, ಸಿನೋ-ಬರ್ಮಿಸ್ ಮತ್ತು ಇಂಡೋ-ಆರ್ಯನ್ ಸಂಪ್ರದಾಯಗಳ ಅಂಶಗಳನ್ನು ಪಡೆದಿರುವ ಈ ಹಬ್ಬವನ್ನು ವಿಶಿಷ್ಟ ಭಾವನೆಯಿಂದ ಆಚರಿಸಲಾಗುತ್ತದೆ. ಹಬ್ಬದ ಆಚರಣೆಯು ಏಪ್ರಿಲ್ ಮಧ್ಯ ಭಾಗದಲ್ಲಿ ಪ್ರಾರಂಭವಾಗಿ ಸಾಮಾನ್ಯವಾಗಿ ಒಂದು ತಿಂಗಳುಗಳ ಕಾಲ ಮುಂದುವರೆಯುತ್ತದೆ. ಇದಲ್ಲದೆ ಇನ್ನೂ ಎರಡು ಬೇರೆ ಬಿಹುಗಳುಂಟು ಅವು: ಆಕ್ಟೋಬರ್ ನಲ್ಲಿ ಆಚರಿಸುವ ಕೊಂಗಾಳಿ ಬಿಹು (ಸೆಪ್ಟೆಂಬರ್ ಈಕ್ವಿನಾಕ್ಸ್ ಜೊತೆಯಲ್ಲಿ ಸಂಬಂಧಿಸಿದೆ), ಮತ್ತು ಜನವರಿಯಲ್ಲಿ ಆಚರಿಸುವ ಭೋಗಾಳಿ ಬಿಹು (ಜನವರಿ ಸಾಲ್‌ಸ್ಟಿಸ್/ಆಯನ ಸಂಕ್ರಾಂತಿ). ಸಾಂಪ್ರದಾಯಿಕ ಆಸ್ಸಾಂ ಸಮಾಜ ಪ್ರಮುಖವಾಗಿ ಕೃಷಿಯ ಮೇಲೆ ಅವಲಂಬಿತವಾಗಿದೆ, ಹಾಗು ಅನೇಕ ಭಾರತೀಯ ಹಬ್ಬಗಳಂತೆ ಬಿಹು(ಎಲ್ಲಾ ಮೂರು) ಕೂಡ ಕೃಷಿ ಚಟುವಟಿಕೆಯೊಂದಿಗೆ ಸಂಬಂಧವನ್ನು ಹೊಂದಿದೆ. ವಸ್ತುತಃ ಇದೇ ರೀತಿಯ ಹಬ್ಬಗಳನ್ನು ಭಾರತದಾದ್ಯಂತ ಸುಮಾರು ಇದೇ ಸಮಯದಲ್ಲಿ ಆಚರಿಸಲಾಗುತ್ತದೆ.
ರೊಂಗಾಳಿ ಬಿಹು
ಬದಲಾಯಿಸಿರೊಂಗಾಳಿ ಬಿಹು(ಏಪ್ರಿಲ್‌ನ ಮಧ್ಯ ಭಾಗ, ಬೋಹಗ್ ಬಿಹು ಎಂದು ಕೂಡ ಕರೆಯಲಾಗುತ್ತದೆ), ಇದು ಅತ್ಯಂತ ಜನಪ್ರಿಯ ಬಿಹುವಾಗಿದ್ದು, ಇದನ್ನು ಅಸ್ಸಾಂ ಹೊಸ ವರ್ಷದ (ಸುಮಾರು ಏಪ್ರಿಲ್ 15 ರ ವೇಳೆಗೆ) ಶುರುವಿಗೆ ಮತ್ತು ವಸಂತ ಋತು ಪ್ರಾರಂಭವಾದುದರ ಸಂಕೇತವಾಗಿ ಆಚರಿಸಲಾಗುತ್ತದೆ. ಇದು ಹಿಂದು ಸೌರಮಾನ ಪದ್ಧತಿಯ ಪ್ರಕಾರ ವರ್ಷದ ಮೊದಲ ದಿನವಾಗಿರುತ್ತದೆ; ಇದನ್ನು ಬೆಂಗಾಳ, ಮಣಿಪುರ, ನೇಪಾಳ, ಓರಿಸ್ಸಾ, ಪಂಜಾಬ್, ಕೇರಳ ಮತ್ತು ತಮಿಳು ನಾಡಿನಲ್ಲಿ ಬೇರೆ ಬೇರೆ ಹೆಸರುಗಳಿಂದ ಆಚರಿಸಲಾಗುತ್ತದೆ. ಇದು ಸಂತೋಷ ಮತ್ತು ಉಲ್ಲಾಸದ ಸಮಯವಾಗಿದ್ದು, ಸಾಮಾನ್ಯವಾಗಿ ಹಬ್ಬದ ಈ ಆಚರಣೆಯು ಏಳು ದಿನಗಳ ಕಾಲ ನಡೆಯುತ್ತದೆ. ರೈತರು ಭತ್ತ ಕೃಷಿ ಮಾಡಲು ಭೂಮಿಯನ್ನು ಸಿದ್ದಪಡಿಸುತ್ತಾರೆ; ಒಂದು ರೀತಿಯ ಸಂತೋಷದ ವಾತಾವರಣವು ಎಲ್ಲಾ ಕಡೆ ವ್ಯಾಪಿಸಿರುತ್ತದೆ. ಹೆಂಗಸರು ಪಿಥಾ (ಹಿಟ್ಟಿನ ಆಹಾರ),ಲಾರಸ್ (ಅಕ್ಕಿ ಮತ್ತು ತೆಂಗಿನಕಾಯಿಂದ ಮಾಡಿದ ಸಂಪ್ರದಾಯಿಕ ತಿನಿಸು) ಮತ್ತು ಜೊಲ್ಪನ್ ಅನ್ನು ತಯಾರಿಸುತ್ತಾರೆ; ಇದು ಈ ಋತುವಿನ ನಿಜ ಮೂಲತತ್ವವನ್ನು ಪ್ರತಿಬಿಂಬಿಸುತ್ತದೆ. ಬಿಹುವಿನ ಮೊದಲ ದಿನವನ್ನು ಗೋರು ಬಿಹು ಅಥವಾ ಹಸು ಬಿಹು ಎಂದು ಕರೆಯಲಾಗುತ್ತದೆ, ಅಂದು ಹಸುಗಳನ್ನು ಶುಭ್ರಗೊಳಿಸಿ ಪೂಚಿಸಲಾಗುತ್ತದೆ ಇದು ಹಿಂದಿನ ವರ್ಷದ ಕೊನೆಯ ದಿನದಂದು ಇರುತ್ತದೆ, ಸಾಮಾನ್ಯವಾಗಿ ಏಪ್ರಿಲ್ 14 ರಂದು ಇದನ್ನು ಆಚರಿಸಲಾಗುತ್ತದೆ. ಇದರ ನಂತರ, ಏಪ್ರಿಲ್ 15ರಂದು ಹೊಸ ವರ್ಷದ ಅರಂಭವನ್ನು ಮನುಹ (ಮನುಷ್ಯ) ಬಿಹು ವನ್ನಾಗಿ ಆಚರಿಸಲಾಗುತ್ತದೆ. ಈ ದಿನ ಎಲ್ಲರೂ ಶುಭ್ರವಾಗಿ, ಹೊಸ ಬಟ್ಟೆಗಳನ್ನು ಧರಿಸಿ ಹೊಸ ವರ್ಷವನ್ನು ಹೊಸ ಹುಮ್ಮಸು ಚೈತನ್ಯದೊಂದಿಗೆ ಬರಮಾಡಿಕೊಳ್ಳುವುದರಿಂದ ಹಬ್ಬದ ಆಚರಣೆಯು ಪ್ರಾರಂಭವಾಗುತ್ತದೆ. ಮೂರನೇ ದಿನದಂದು ಗೋಸಾಯಿ ಬಿಹು; ಎಲ್ಲರ ಮನೆಯಲ್ಲಿ ಪೂಜಿಸಲಾಗುವ ದೇವತೆಗಳ ವಿಗ್ರಹಗಳನ್ನು ಶುಭ್ರಗೊಳಿಸಿ, ಹೊಸ ವರ್ಷ ಸುಗಮವಾಗಿರಲೆಂದು ಪ್ರಾರ್ಥನೆ ಸಲ್ಲಿಸಲಾಗುತ್ತದೆ.
ಬೋಹಗ್ ಬಿಹುವಿನೊಂದಿಗೆ ಸಂಬಂಧಿಸಿದ ಜನಪದ ಹಾಡುಗಳನ್ನು ಬಿಹುಗೀತ್ ಅಥವಾ ಬಿಹು ಗೀತೆಗಳೆಂದು(ಹಾಡು) ಕರೆಯಲಾಗುತ್ತದೆ. ಹಬ್ಬವನ್ನು ಆಚರಿಸುವ ರೀತಿ ಮತ್ತು ಸಂಪ್ರದಾಯಗಳು ವಿವಿಧ ಜನಾಂಗಗಳಲ್ಲಿ ಬೇರೆಬೇರೆ ರೀತಿಯಲ್ಲಿದೆ. '
- ಗೋರು ಬಿಹು
- ಗೋರು ಬಿಹು ಅಥವಾ ಹಸುಗಳನ್ನು ಪೂಜಿಸುವ ಆಚರಣೆಯನ್ನು ವರ್ಷದ ಕೊನೆಯ ದಿನದಂದು ಆಚರಿಸಲಾಗುತ್ತದೆ. ದನಕರುಗಳನ್ನು ಶುಭ್ರಗೊಳಿಸಿ, ಅರಿಸಿನ, ಗಂಧ ಮತ್ತಿತರ ದ್ರವ್ಯಗಳಿಂದ ಲೇಪಿಸಲಾಗುತ್ತದೆ, ಡಿಗ್‌ಹಲಟಿ ಮತ್ತು ಮಕಿಯತಿಯಿಂದ ಹಣೆದ ಬಟ್ಟೆಗಳನ್ನು ಹೊದ್ದಿಸಲಾಗುತ್ತದೆ; ಅರೋಗ್ಯಕರವಾಗಿ ಮತ್ತು ಉಪಯುಕ್ತವಾಗಿರುವಂತೆ ಅಕ್ಕರೆಯಿಂದ ನೋಡಿಕೊಳ್ಳಲಾಗುತ್ತದೆ (ಲಾವ್ ಕಾ, ಬಂಗೀನಾ ಕಾ , ಬೊಸೊರ್ ಬೊಸರ್ ಬರೀ ಜಾ/ಮಾರ್ ಸೋರು, ಬೇಪರ್ ಸೋರು, ತೊ ಹೊಬಿ ಬೊರ್ ಬೊರ್ ಗೋರು — ಗೋಅರ್ಡ್(ಕುಂಬಳ, ಸೋರೆ, ಮೊದಲಾದ ದೊಡ್ಡ ಕಾಯಿ) ತಿನ್ನಿ, ಬದನೆಕಾಯಿ ತಿನ್ನಿ, ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಹೊಂದು/ನಿನ್ನ ತಾಯಿ ಚಿಕ್ಕವಳು, ನಿನ್ನ ತಂದೆ ಕೂಡ ಚಿಕ್ಕವನ್ನು, ಆದರೆ ನೀನು ಅದಕ್ಕಿಂತ ದೊಡ್ದವನಾಗು).
ಹಸುಗಳ ಹಳೆಯ ಹಗ್ಗಗಳನ್ನು ಕಾಲಿನ ಮೂಲಕ ತೆಗೆದು ಹಾಕಲಾಗುತ್ತದೆ. ಅಲ್ಲದೇ ಹಸುಗಳಿಗೆ ಹೊಸ ಹಗ್ಗಗಳನ್ನು ಕಟ್ಟಿಹಾಕಲಾಗುತ್ತದೆ. ಆ ಹಸುಗಳನ್ನು ಆ ದಿನದ ಪೂರ್ತಿ ಅವುಗಳಿಗೆ ಇಷ್ಟ ಬಂದ ಕಡೆ ಅಡ್ಡಾಡಲು ಬಿಡಲಾಗುತ್ತದೆ.[೨]
- ಮನುಹ ಬಿಹು
- ಹೊಸ ವರ್ಷದ ದಿನ, ಗೋರು ಬಿಹು ನಂತರದ ದಿನವನ್ನು ಮನುಹ ಬಿಹು ಎಂದು ಕರೆಯಲಾಗುತ್ತದೆ. ಹಿರಿಯರಿಗೆ ಬಿಹುವಾನ್ ಕೊಡುಗೆಗಳನ್ನು (ಗಮೋಸ), ಹಚೊಟಿ (ಕರವಸ್ತ್ರ), ಚೆಲೆಂಗ್ ಇತ್ಯಾದಿ ವಸ್ತುಗಳನ್ನು ದಾನವಾಗಿ ಆರ್ಪಿಸಿ, ಗೌರವಾದರಗಳ ತೋರಿಸಿ, ಅವರಿಂದ ಆಶೀರ್ವಾದವನ್ನು ಪಡೆಯುತ್ತಾರೆ. ಮಕ್ಕಳಿಗೆ ಹೊಸ ಬಟ್ಟೆಗಳನ್ನು ಕೊಡಿಸಲಾಗುತ್ತದೆ. ಈ ದಿನದಂದು ಹುಸೊರಿಯನ್ನು ಹಾಡಲು ಶುರು ಮಾಡಲಾಗುತ್ತದೆ, ಹಾಗು ಸಂಬಂಧಿಕರು ಮತ್ತು ಸ್ನೇಹಿತರನ್ನು ಭೇಟಿಮಾಡಲಾಗುತ್ತದೆ.[೩]
- ಹುಸೊರಿ
- ಹಳ್ಳಿಯ ಹಿರಿಯರು ಬಿಹು ಗೀತೆಗಳ ಶೈಲಿಯ ಮಾದರಿಯ ಗೀತೆಗಳನ್ನು ಹಾಡಿಕೊಂಡು ಮನೆಯಿಂದ ಮನೆಗೆ ಹೋಗುತ್ತಾರೆ, ಈ ಗೀತೆಗಳನ್ನು ಹುಸೊರಿ ಎಂದು ಕರೆಯಲಾಗುತ್ತದೆ. ಈ ಪದವು ಬಹುಶಃ ಡಿಮಸಾ ಕಾಚರಿ ಯ ಪದವಾದ ಹ (ಭೂಮಿ) ಮತ್ತು ಚಾರ್ (ಮೇಲ್ಮೈ,ಮೂವ್ ಒವರ್): ಹಚಾರಿ ಎನ್ನುವ ಪದದಿಂದ ಉತ್ಪತ್ತಿಯಾಗಿರಬಹುದು.[೪] ಹಳ್ಳಿಗಳಲ್ಲಿ ಒಂದಕ್ಕಿಂತ ಹೆಚ್ಚಿನ ಹುಸೊರಿಯ ತಂಡಗಳಿರಬಹುದು; ಇವರುಗಳು ನಾಮ್‌ಗರ್ ನಿಂದ ಹಾಡಲು ಶುರುಮಾಡಿ ಒಂದು ಹಳ್ಳಿಯಲ್ಲಿ ಮನೆಯಿಂದ ಮನೆಗೆ ಹೋಗುತ್ತಾರೆ. ಹುಸೊರಿ ಗಾಯಕರು ನಂತರ ಪ್ರತಿಯೊಂದು ಮನೆಗೂ ಭೇಟಿ ನೀಡುತ್ತಾರೆ, ಇವರುಗಳು ಮೊದಲು ಅವರ ಬಂದಿರುವ ವಿಷಯವನ್ನು ದ್ವಾರದಲ್ಲಿ/ಗೇಟ್ (ಪೊಡುಲಿಮುಖ್ ) ನಿಂತು ಡ್ರಮ್‌ಗಳನ್ನು ನುಡಿಸಿ ಘೋಷಿಸುತ್ತಾರೆ. ಈ ಹಾಡುಗಾರರನ್ನು ಸಂಪ್ರದಾಯಿಕವಾಗಿ ಮನೆಯಂಗಳಕ್ಕೆ ಸ್ವಾಗತಿಸಲಾಗುತ್ತದೆ, ಇಲ್ಲಿ ಅವರುಗಳು ಹುಸೊರಿ ಗೀತೆಗಳನ್ನು ಹಾಡಿ ರಿಂಗ್(ವೃಂದ) ನೃತ್ಯವನ್ನು ಪ್ರದರ್ಶಿಸುತ್ತಾರೆ. ಈ ಪ್ರದರ್ಶನದ ಕೊನೆಯಲ್ಲಿ ಈ ಹಾಡುಗಾರರನ್ನು ಸೋರೈ ಅಲ್ಲಿ ಟಾಮುಲ್ ನೀಡಿ ಆಭಿನಂದಿಸಲಾಗುತ್ತದೆ. ಇದಾದ ನಂತರ ಹಾಡುಗಾರರು ಹೊಸ ವರ್ಷ ಮನೆಮಂದಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತಾರೆ. ಒಂದು ಮನೆಯಲ್ಲಿ ಸಾವು ಘಟಿಸಿದ್ದರೆ ಅಥವಾ ಯಾವುದಾದರೂ ಕಾಯಿಲೆಯಿದ್ದರೆ ಆ ಮನೆಯವರು ಹುಸೊರಿ ಹಾಡುಗಾರರನ್ನು ಆಹ್ವಾನಿಸುವುದಿಲ್ಲ, ಹಾಗು ಹುಸೊರಿ ತಂಡವು ಪೊಡುಲಿಮುಖ್ ನಿಂದಲೇ ಹಾರೈಸಿ ಮುಂದೆ ಹೋಗುತ್ತಾರೆ. ಸಾಮಾನ್ಯವಾಗಿ ಎಲ್ಲಾ ಹುಸೊರಿಯ ಎಲ್ಲ ಗಾಯಕರು ಪುರುಷರಾಗಿರುತ್ತಾರೆ.[೫]
- ಫಾಟ್ ಬಿಹು
- ಇದು ಬಿಹುವಿನ ಹಳೆಯ ಪದ್ದತಿಯಾಗಿದ್ದು,ಇದರಲ್ಲಿ ಸಹಜತೆಯ ಗುಣ ಜಾಸ್ತಿಯಿದೆ, ಇದು ಆಸ್ಸಾಂನ ಲಕೀಮ್‌ಪುರ್ ಪ್ರದೇಶದಲ್ಲಿ ಹೆಚ್ಚು ಜನಪ್ರಿಯ. ಕಥೆಯೊಂದರ ಪ್ರಕಾರ, 13ನೇ ಶತಮಾನದ ಪ್ರಾರಂಭದಲ್ಲಿ ಮೊದಲ ಅಹೊಮ್ ರಾಜನಾದ ಸುಕಪಹಾ, ಈ ಪ್ರದೇಶಕ್ಕೆ ಇದನ್ನು ನೋಡಲು ಸಲುವಾಗಿಯೇ ಭೇಟಿಯಿತ್ತನೆಂದು ಹೇಳಲಾಗುತ್ತದೆ.[೬]
- ಮುಕೊಳಿ ಬಿಹು
- ಮದುವೆಯಾಗದ ಯುವಕರು ಮತ್ತು ಹೆಂಗಸರು ಸಂಪ್ರದಾಯಿಕ ಚಿನ್ನದ ಮುಗಾ ರೇಷ್ಮೆ ಉಡುಗೆಗಳನ್ನು ತೊಟ್ಟು ಮೈದಾನಗಳಲ್ಲಿ ಬಿಹು ನೃತ್ಯ ಮತ್ತು ಬಿಹು ಹಾಡುಗಳನ್ನು ಪ್ರದರ್ಶಿಸುತ್ತಾರೆ. ಈ ಹಾಡುಗಳಲ್ಲಿ ಪ್ರೇಮ, ಕಾಮದ ವಿಷಯಗಳನ್ನು ಹೊಂದಿರುತ್ತದೆ. ಕೆಲವೊಮ್ಮೆ ಈ ಹಾಡುಗಳು ದುಃಖಕರ ಘಟನೆಗಳನ್ನು ಕೂಡ ವರ್ಣಿಸತ್ತದೆ, ಆದರೆ ಮನಸ್ಸಿಗೆ ಹಗುರವಾಗುವ ಹಾಗೆ ನಿರೂಪಿಸಲಾಗುತ್ತದೆ. ನೃತ್ಯವು ಹೆಂಗಸರ ಸೌಂದರ್ಯವನ್ನು ಕೊಂಡಾಡುತ್ತದೆ.
- ಜೇಂಗ್ ಬಿಹು
- ಇದು ಮಹಿಳೆಯರಿಂದ ಮಹಿಳೆಯರಿಗಾಗಿ ಮಾತ್ರವೇ ಪ್ರದರ್ಶಿಸುವ ಬಿಹು ನೃತ್ಯ ಮತ್ತು ಬಿಹು ಹಾಡುಗಳು. ಹಿಂದೆ ಹಳ್ಳಿಗಳಲ್ಲಿ ಮಹಿಳೆಯರು ಅವರು ಪ್ರದರ್ಶನ ಮಾಡುತ್ತಿದ ಪ್ರದೇಶದ ಸುತ್ತಲೂ ಅಸ್ಸಾಂಮೀಸ್ ಭಾಷೆಯಲ್ಲಿ ಜೇಂಗ್ ಎಂದು ಕರೆಯಲಾಗುವ ಕೋಲುಗಳನ್ನು ಭೂಮಿಯಲ್ಲಿ ನೆಡುತ್ತಿದ್ದರು, ಹೀಗಾಗಿ ಇದಕ್ಕೆ "ಜೇಂಗ್" ಎಂಬ ಹೆಸರು ಬಂದಿದೆ.
- ಬೈಸಾಗೊ
- ಬೊಡೊ-ಕಚಾರಿ ಜನಾಂಗದವು ಏಳು ದಿನಗಳವರೆಗೆ ಆಚರಿಸುತ್ತಾರೆ-ಮೊದಲ ದಿನವು ಹಸುಗಳಿಗಾಗಿ (ಮಗೊ ), ಎರಡನೆಯ ದಿನ ಮನುಷ್ಯರಿಗಾಗಿ (ಮನಸೋ ) ಮತ್ತು ಪೂರ್ವಜರನ್ನು ಪೂಜಿಸುವ, ಭಾರಿ ಸವಿಯೂಟ, ಹಾಡುಗಳು ಮತ್ತು ಮನರಂಜನೆಗಳಿಂದ ಆಚರಣೆಗಳು ತುಂಬಿರುತ್ತದೆ. ಈ ಹಾಡುಗಳು ಕೂಡ ಬಿಹು ಹಾಡುಗಳ ವಿಷಯಗಳನ್ನೇ ಒಳಗೊಂಡಿರುತ್ತದೆ.[೭]
- ಬಿಹುಟೊಲಿ ಬಿಹು
- ಪ್ರಮುಖವಾಗಿ ಗ್ರಾಮ ಹಬ್ಬವಾಗಿದ್ದ ಇದು ಕ್ರಮೇಣವಾಗಿ ನಗರ ಪ್ರದೇಶದ ಹಬ್ಬವಾಗಿ ಮಾರ್ಪಡಾಗತೊಡಗಿತು. ಇದನ್ನು ಮೊದಲ ಬಾರಿಗೆ 1962ರಲ್ಲಿ ಗುವಹಟಿಯ ಲಾಟಾಕ್ಸಿಲ್ ಮೈದಾನದಲ್ಲಿ ರಾಧ ಗೋವಿಂದ ಬರುವ ಮತ್ತಿತ್ತರ ಪ್ರಮುಖರು ಆಯೋಜಿಸಿದ ಗುವಹಟಿ ಬಿಹು ಸನ್‌ಮಿಲನಿ ದಲ್ಲಿ ಪ್ರದರ್ಶಿಸಲಾಯಿತು. ಆದರೆ ಅದರ ಗ್ರಾಮೀಣ ಆವೃತ್ತಿಯ ಹಾಗಿರದೆ, ಇಲ್ಲಿ ನೃತ್ಯಗಾರರು ಒಂದು ದೊಡ್ಡ ಮೈದಾನದಲ್ಲಿ(ಪ್ರದೇಶ) ಬಿಹುಟೊಳಿ ಎಂದು ಕರೆಯಲಾಗುವ ಎತ್ತರವಾಗಿ ಹಾಕಲಾದ ರಂಗದ ಮೇಲೆ ಪ್ರದರ್ಶನಗಳನ್ನು ಕೊಡತೊಡಗಿದರು. ಇಂತಹ ಅನೇಕ ಬಿಹುಟೊಳಿಗಳು(ತಂಡಗಳು) ಗುವಹಟಿ ಮತ್ತಿತ್ತರ ನಗರ ಪ್ರದೇಶಗಳಲ್ಲಿ ಎದ್ದಿವೆ. ಈ ಪ್ರದರ್ಶನಗಳು ಕೇವಲ ಬಿಹಯ ನೃತ್ಯ ಶೈಲಿಗೆ ಮಾತ್ರ ಸೀಮಿತವಾಗಿರುವುದಿಲ್ಲ, ಬದಲಿಗೆ ಇದು ರಂಗಭೂಮಿಯ ಎಲ್ಲ ಪ್ರಕಾರಗಳನ್ನು ಅಳವಡಿಸಿಕೊಂಡು, ಪ್ರೇಕ್ಷಕರನ್ನು ನಸುಕಿನ ವೇಳೆಯ ತನಕ ಮನರಂಜಿಸುತ್ತವೆ. ಈ ಪ್ರದರ್ಶನಗಳು ಸ್ಟಾಂಡ್‌ಅಪ್ ಕಾಮಿಡಿ (ಹಾಸ್ಯೋಕ್ತಿಗಳನ್ನು ನಡೆಸಿಕೊಡುವ), ಹಾಡುಗರರಿಂದ ಗೋಷ್ಟಿಗಳನ್ನು ಒಳಗೊಂಡಿರುತ್ತದೆ. ಬಿಹುವಿನ ರಂಗ ಪ್ರದರ್ಶನವು ಬಹಳ ಜನಪ್ರಿಯವಾಗುತ್ತಿದೆ, ಹೀಗಾಗಿ ಆಯೋಜಕರು ಈ ಆಚರಣೆಗಳನ್ನು ಬೋಹಗಿ ಬಿದಾಯಿ ಅಥವಾ ಬೋಹಗ್ ತಿಂಗಳಿಗೆ ವಿದಾಯ ತಿಳಿಸುವುದಕ್ಕೂ ಕೂಡ ಮುಂದುವರಿಸಿದ್ದಾರೆ, ಇದೂ ಕೂಡ ಅದೇ ರೀತಿಯ ಪ್ರದರ್ಶನಗಳಾಗಿದ್ದು ಒಂದು ತಿಂಗಳ ನಂತರ ನಡೆಯುತ್ತದೆ.
ರೊಂಗಾಳಿ ಬಿಹು ಫಲವಂತಿಕೆಯನ್ನು ಕೊಂಡಾಡುವ ಹಬ್ಬ ಕೂಡ ಹೌದು. ಇಲ್ಲಿ ಯುವತಿಯರು ಬಿಹು ನೃತ್ಯದ ಮೂಲಕ ಸೊಂಟ, ಬಾಹು ಇತ್ಯಾದಿಗಳನ್ನು ಬಳಸಿ ಅಪ್ಯಾಯಮಾನವಾದ(ಅಕರ್ಷಕ) ಚಲನವಲನಗಳಿಂದ ಅವರ ಫಲವಂತಿಕೆಯನ್ನು (ಸೌಂದರ್ಯ) ಪ್ರದರ್ಶಿಸಿ ಶ್ಲಾಘಿಸುವಂತೆ ಕರೆ ನೀಡುತ್ತಾರೆ. ಈ ದೃಷ್ಟಿಯಲ್ಲಿ ಬಿಹು ನೃತ್ಯವನ್ನು, ಯುವಕ ಯುವತಿಯರು ಕೂಡುವ ಕ್ರಮವೆಂದು ಕೂಡ ಪರಿಗಣಿಸಬಹುದು.
ಕೊಂಗಾಳಿ ಬಿಹು
ಬದಲಾಯಿಸಿಕೊಂಗಾಳಿ ಬಿಹು(ಮಧ್ಯ ಆಕ್ಟೋಬರ್, ಕಟಿ ಬಿಹು ಎಂದು ಕೂಡ ಕರೆಯಲಾಗುತ್ತದೆ), ಈ ಬಿಹುವಿಗೆ ಬೇರೆಯ ವಿಶಿಷ್ಟ ಗುಣವಿರುತ್ತದೆ, ಇದರಲ್ಲಿ ಮೋಜಿನ ಆಂಶವು ಸ್ವಲ್ಪ ಕಡಿಮೆಯಿರುತ್ತದೆ, ಹಾಗು ವಾತಾವರಣದಲ್ಲಿ ಗಾಂಭೀರ್ಯ ಮತ್ತು ಬಿಗುವಿನಿಂದ ಕೂಡಿರುವ ಭಾವನೆಯನ್ನು ತರುತ್ತದೆ. ವರ್ಷದ ಈ ಸಮಯದಲ್ಲಿ, ಹೊಲ-ಗದ್ದೆಗಳಲ್ಲಿ ಭತ್ತ ಬೆಳೆವಣಿಗೆಯ ಹಂತದಲ್ಲಿರುತ್ತದೆ ಹಾಗು ರೈತರ ಕಣಜಗಳು ಬಹಳಷ್ಟು ಮಟ್ಟಿಗೆ ಖಾಲಿಯಾಗಿರುತ್ತದೆ. ಈ ದಿನದಂದು ಮನೆಯಂಗಳದಲ್ಲಿರುವ ತುಳಸಿ ಗಿಡದ ಮುಂದೆ, ಕಣಜದ ಮುಂದೆ, ತೋಟ (ಬರಿ ) ಮತ್ತು ಭತ್ತದ ಗದ್ದೆಗಳಲ್ಲಿ ಮಣ್ಣಿನ ದೀಪಗಳನ್ನು (ಸಾಕಿ ) ಬೆಳಗಿಸಲಾಗುತ್ತದೆ. ಬೆಳೆದಿರುವ ಭತ್ತವನ್ನು ಸಂರಕ್ಷಿಸುವ ಸಲುವಾಗಿ, ರೈತರು ಬೊಂಬಿನ (ಬಿದಿರಿನ) ಒಂದು ತುಂಡನ್ನು ವೃತ್ತಾಕಾರವಾಗಿ ತಿರುಗಿಸುತ್ತಾರೆ. ಹುಳಹುಪ್ಪಟೆ ಮತ್ತು ಕೆಟ್ಟದೃಷ್ಟಿಗಳಿಂದ ದೂರವಿಡುವ ಸಲುವಾಗಿ ರೋವಾ-ಕೋವಾ ಮಂತ್ರಗಳನ್ನು ಉದ್ಘೋಷಿಸುತ್ತಾರೆ. ಬೋಡೋ ಜನರು ಸಿಜು (ಯುಫೋರ್ಬಿಯ ) (ಸೊನೆದಂಟಿನ ವಿವಿಧ ಕಳ್ಳಿಗಳನ್ನೊಳಗೊಂಡ ಒಂದು ಸಸ್ಯಕುಲ) ಮರದ ಕೆಳಗೆ ದೀಪಗಳನ್ನು ಬೆಳಗುತ್ತಾರೆ. ಈ ಬಿಹುವನ್ನು ಅಕಸಿ ಗೊಂಗಾ ಅಥವಾ ಅಕಸ್‌ಬೊಂಟಿ ಯಲ್ಲಿ ದೀಪವನ್ನು ಬೆಳಗಿಸುವುದರೊಂದಿಗೆ ಕೂಡ ಸಂಬಂಧಿಸಲಾಗಿದೆ. ಈ ಪದ್ಧತಿಯಲ್ಲಿ ಸತ್ತ ಆತ್ಮಗಳಿಗೆ ಸ್ವರ್ಗಕ್ಕೆ ದಾರಿಯನ್ನು ತೋರಿಸುವ ಸಲುವಾಗಿ ದೊಡ್ದ ಬೊಂಬಿನ (ಬಿದರಿ) ಕೋಲಿನ ತುದಿಯಲ್ಲಿ ದೀಪವನ್ನು ಬೆಳಗಿಸಿಲಾಗುತ್ತದೆ, ಈ ಆಚರಣೆಯು ಏಷ್ಯಾ ಮತ್ತು ಯೂರೋಪಿನ ಅನೇಕ ಜನಾಂಗಳ ಜೊತೆ ಸಾಮ್ಯತೆಯನ್ನು ಹೊಂದಿದೆ.[೮]
ಭೋಗಾಳಿ ಬಿಹು
ಬದಲಾಯಿಸಿಭೋಗಾಳಿ ಬಿಹು (ಜನವರಿಯ ಮಧ್ಯಭಾಗ, ಮಾಗ್ ಬಿಹು ಎಂದು ಕೂಡ ಕರೆಯಲಾಗುತ್ತದೆ), ಈ ಪದವು ಭೋಗ್ - ಭಾರಿ ಭೋಜನ ಮಾಡುವುದು ಮತ್ತು ಸಂತೋಷ ಪಡುವುದು - ಪದದಿಂದ ಉತ್ಪತ್ತಿಯಾಗಿದೆ. ಇದು ಸುಗ್ಗಿಯ ಹಬ್ಬವಾಗಿದ್ದು, ಇದು ಕೊಯ್ಲು ಕಾಲವು ಮುಕ್ತಾಯವಾದುದನ್ನು ಸೂಚಿಸುತ್ತದೆ. ಕಣಜಗಳು ತುಂಬಿರುವ ಕಾರಣದಿಂದ ಈ ಅವಧಿಯಲ್ಲಿ ಭಾರಿ ಭೋಜನಗಳನ್ನು ತಯಾರಿಸಿ ಆಸ್ವಾದಿಸಲಾಗುತ್ತದೆ. ಉರುಕ ಎನ್ನುವ ದಿನದ ಹಿಂದಿನ ದಿನದಂದು ಅಂದರೆ ಪೌಸ ದ ಕೊನೆಯ ದಿನದಂದು, ಪುರುಷರು ಪ್ರಮುಖವಾಗಿ ಯುವಕರು ನದಿಯ ಹತ್ತಿರವಿರುವ ಹೊಲ-ಗದ್ದೆಗಳನ್ನು ಆಯ್ದು ಕೊಂಡು ಹೋಗುತ್ತಾರೆ, ಅಲ್ಲಿ ಅವರು ಕೊಯ್ಲು ಮಾಡಿದ ಹುಲ್ಲಿನಿಂದ ಭೇಳಗರ್ ಎಂದು ಕರೆಯಲ್ಪಡುವ ಗುಡಿಸಲೊಂದನ್ನು ನಿರ್ಮಿಸುತ್ತಾರೆ, ಹಾಗು ಆ ರಾತ್ರಿಯ ಅತ್ಯಂತ ಮುಖ್ಯವಾದ ವಸ್ತು ಮೆಜಿ. ಆ ರಾತ್ರಿಯಂದು, ಅವರು ಅಡುಗೆಯನ್ನು ತಯಾರಿಸುತ್ತಾರೆ, ಹಾಗು ಸಾಮೂಹಿಕ ಭಾರಿ ಭೋಜನವು ಎಲ್ಲಾ ಕಡೆಯಲ್ಲಿ ಇರುತ್ತದೆ. ಸಿಹಿತಿಂಡಿ ಮತ್ತು ಶುಭಹಾರೈಕೆಗಳನ್ನು ಈ ಸಂದರ್ಭದಲ್ಲಿ ಹಂಚಿಕೊಳ್ಳಲಾಗುತ್ತದೆ. ಸಂಪೂರ್ಣ ರಾತ್ರಿಯನ್ನು (ಉರುಕ ಎಂದು ಕರೆಯಲಾಗುವ) ಮೆಜಿಯ ಸುತ್ತ, ಜನರು ಬಿಹು ಗೀತೆಗಳನ್ನು ಹಾಡುತ್ತಾ, ವಿಶಿಷ್ಷವಾದ ಡ್ರಮ್ ಆದ ಡೋಲ್ ಅನ್ನು ಬಾರಿಸುತ್ತಾ ಅಥವಾ ಆಟಗಳನ್ನು ಆಡುತ್ತಾ ಕಳೆಯುತ್ತಾರೆ. ಹುಡುಗರು ಮೋಜಿಗಾಗಿ ಕತ್ತಲೆಯಲ್ಲಿ ಸೌದೆ ಮತ್ತು ತರಕಾರಿಗಳನ್ನು ಕದಿಯುತ್ತಾ ಅಡ್ಡಾಡುತ್ತಾರೆ. ಮಾರನೆಯ ಬೆಳಗ್ಗೆ ಎಲ್ಲರು ಸ್ನಾನ ಮಾಡಿ, ಮುಖ್ಯವಾದ ಮೆಜಿ ಯನ್ನು ಸುಡುತ್ತಾರೆ. ಎಲ್ಲ ಜನರು(ಬಿದಿರುಗಳಿಂದ ನಿರ್ಮಿಸಿದ ಗುಡಿಸಲು)ಮೆಜಿಯ ಸುತ್ತಲೂ ಸೇರಿಕೊಂಡು, ಮೆಜಿಯನ್ನು ಬೆಂಕಿಯಿಂದ ಉರಿಸುತಿದ್ದಂತೆಯೆ ಅದಕ್ಕೆ ಪಿತಾ (ಅಕ್ಕಿಯಿಂದ ತಯಾರಿಸಲಾದ ತಿನಿಸು) ಮತ್ತು ಅಡಿಕೆಯನ್ನು ಅರ್ಪಿಸುತ್ತಾರೆ. ಅವರುಆಗ್ನಿ ದೇವತೆಗೆ ಪ್ರಾರ್ಥನೆ ಸಲ್ಲಿಸಿ ಸುಗ್ಗಿಯ ಕಾಲ ಮುಗಿಯಿತೆಂದು ಸಂಕೇತಿಸುತ್ತದೆ. ಇದಾದ ನಂತರ, ಇವರು ಒಳ್ಳೆಯದಾಗಲಿ ಎನ್ನುವ ನಂಬಿಕೆಯೊಂದಿಗೆ ಹಣ್ಣುಗಳ ಮರಗಳ ನಡುವೆ ಎಸೆಯಲ್ಪಟ್ಟ ಅರ್ಧ ಸುಟ್ಟ ಸೌದೆಯನ್ನು ತೆಗೆದುಕೊಂಡು ಮನೆಗೆ ಹಿಂದಿರುಗುತ್ತಾರೆ. ಬೇಲಿಯ ಸುತ್ತಲೂ ಇರುವ ಎಲ್ಲಾ ಮರಗಳಿಗೆ ಬೊಂಬಿನ(ಬಿದಿರು)ಪಟ್ಟಿಗಳಿಂದ ಅಥವಾ ಭತ್ತದ ಕಣಿಕೆಗಳಿಂದ ಕಟ್ಟಲಾಗುತ್ತದೆ. ಕೋಣಗಳ ಕಾದಾಟ , ಮೊಟ್ಟೆಯ ಜಗಳ, ಕೋಳಿ ಕಾಳಗ , ಕೋಗಿಲೆ ಕದನ ಇತ್ಯಾದಿ ವಿವಿಧ ರೀತಿಯ ಕ್ರೀಡೆಗಳನ್ನು ದಿನಪೂರ್ತಿ ನಡೆಸಲಾಗುತ್ತದೆ. ಇದಲ್ಲದೆ ವಿವಿಧ ಸಂಪ್ರದಾಯಗಳ ಸಾಂಸ್ಕೃತಿಕ ತಂಡಗಳು ಅನೇಕ ಸಾಂಪ್ರದಾಯಿಕ ಹಬ್ಬಗಳನ್ನು ಆಚರಿಸುತ್ತವೆ. ಇವುಗಳಲ್ಲಿ ಕೆಲವು: ಮೀ-ಡಾಮ್-ಮೀ-ಫಿ, ಅಲಿ-ಅಯಿ-ಲಿಯಾಂಗ್, ಪೊರಾಗ್, ಗಾರ್ಜ, ಹಾಪ್ಸ ಹಟರನೈ, ಖೇರೈ. [೧]
ಬಿಹುವಿನಲ್ಲಿ ಬಳಸಲಾಗುವ ವಾದ್ಯಗಳು
ಬದಲಾಯಿಸಿಇತರೆ
ಬದಲಾಯಿಸಿಕಡಿ -ಖೇಲ್ (ಇವತ್ತಿನ ಲುಡೊವಿನ ಮಾದರಿಯ ಆಟ) ಆಟವು ಎಲ್ಲಾ ರೀತಿಯ ಬಿಹುವಿನ ಜೊತೆಯಲ್ಲಿ ನಿಕಟ ಸಂಬಂಧಹೊಂದಿದೆ. ಹಿಂದಿನ ದಿನಗಳಲ್ಲಿ, ಈ ಆಟವನ್ನು ಮುಖ್ಯವಾಗಿ ಬಿಹುವಿನ ದಿನಗಳಲ್ಲಿ, ಮಧ್ಯಾಹ್ನದಲ್ಲಿ ಆಡಲಾಗುತ್ತಿತ್ತು. ಈ ಆಟವನ್ನು ಗಂಡಸರು ಮತ್ತು ಹೆಂಗಸರು ಬೇರೆಬೇರೆಯಾಗಿ ಆಡುತ್ತಾರೆ; ಚಿಕ್ಕ ಬಸವನ ಹುಳುವಿನ ಶಂಖದಿಂದ ತಯಾರಿಸಿದ ತಾತ್ಕಾಲಿಕ ದಾಳವನ್ನು(ಡೈಸ್) ನೆಲದ ಮೇಲೆ ಹಾಕಿ ಆಡಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಆಟವೂ ಬಹುಮಟ್ಟಿಗೆ ನಶಿಸಿಹೋಗಿದೆ.
ಇತರ ಕಡೆಯಲ್ಲಿ ಬಿಹು
ಬದಲಾಯಿಸಿಬಿಹುವನ್ನು ಹೊರದೇಶಗಳಲ್ಲಿ ಕೂಡ ಆಚರಿಸಲಾಗುತ್ತದೆ ಎನ್ನುವುದನ್ನು ಕಾಣಬಹುದಾಗಿದೆ. ಅನೇಕ ಬಿಹು ಸಂಘಟನೆಗಳು/ಸಮಿತಿಗಳು ಅನೇಕ ಜಾಗಗಳಲ್ಲಿದ್ದು, ಈ ಹಬ್ಬವನ್ನು ಉತ್ಸಾಹ, ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಇಂತಹ ಅನೇಕ ಸಂಘಟನೆಗಳ ಪೈಕಿ ಲಂಡನ್ ಬಿಹು ಕಮಿಟಿ(ಸಮಿತಿ) (LBC), UK ಕೂಡ ಒಂದು.
ಮೇಲಿನ ಚಿತ್ರದಲ್ಲಿ ಲಂಡನ್ ಬಿಹು ಸಮಿತಿ(LBC),UK ಯ ಸದಸ್ಯರಿದ್ದಾರೆ. ಇವರು ವಾರ್ಷಿಕ ರೊಂಗಾಳಿ ಬಿಹುವನ್ನು ಭಾನುವಾರ, ಮೇ 3, 2009 ರಂದು ಆಚರಿಸಿದರು. ಇದನ್ನು ಈಸ್ಟ್ ಲಂಡನ್ನಿನ ಹಾರ್ನ್‌ಚರ್ಚಿನಲ್ಲಿ ಆಚರಿಸಲಾಯಿತು.
ಟಿಪ್ಪಣಿಗಳು ಮತ್ತು ಉಲ್ಲೇಖಗಳು
ಬದಲಾಯಿಸಿ- ↑ ಗೋಸ್ವಾಮಿ 1988, p5
- ↑ ಗೋಸ್ವಾಮಿ 1988, p12-14
- ↑ ಗೋಸ್ವಾಮಿ 1988, p14
- ↑ ಗೋಸ್ವಾಮಿ 1988, p34.
- ↑ ತಮುಳಿ, ಬಾಬುಲ್ ಹುಚೊರಿ: ಎ ಮಸ್ಟ್ ಫಾರ್ ದ ಮಾಸಸ್, ದ ಅಸ್ಸಾಂ ಟ್ರಿಬ್ಯೂನ್, 2002
- ↑ ರಹಮಾನ್, ದೌಲತ್ ಆಸ್ಸಾಂ ಇನ್‌ಷಿಯೇಟ್ಸ್ ಪ್ರಾಜೆಕ್ಟ್ ಟು ರಿವೈವ್ & ಪಾಪುಲೈರಸ್ ದ ಫೆಸ್ಟಿವಲ್ಸ್ ಓಲ್ಡೆಸ್ಟ್ ಫಾರ್ಮ್ Archived 2011-05-26 ವೇಬ್ಯಾಕ್ ಮೆಷಿನ್ ನಲ್ಲಿ., ದ ಟೆಲಿಗ್ರಾಫ್, ಜೂನ್ 23, 2007
- ↑ ಗೋಸ್ವಾಮಿ 1988, pp26-27.
- ↑ ಗೋಸ್ವಾಮಿ 1988, pp7-8
- ದಾಸ್, ದೇಬೆಂದ್ರ ಪ್ರಸಾದ್Rongali Bihu through the ages , ದ ಅಸ್ಸಾಂ ಟ್ರಿಬ್ಯೂನ್, ಏಪ್ರಿಲ್ 14, 2007.
- ದೊವೆರಾಹ್, ಸ್ವಪನ್Rongali Bihu-the spring festival of Assam , ದ ಆಸ್ಸಾಂ ಟ್ರಿಬ್ಯೂನ್, ಏಪ್ರಿಲ್ 14, 2007.
- ಗೋಸ್ವಾಮಿ, ಪ್ರಫುಲ್ಲಾದತ್ತ(1988) ಬೋಹಗ್ ಬಿಹು ಆಫ್ ಆಸ್ಸಾಂ ಅಂಡ್ ಬಿಹು ಸಾಂಗ್ಸ್ , ಪಬ್ಲಿಕೇಷನ್ ಬೋರ್ಡ್, ಆಸ್ಸಾಂ.
ಬಾಹ್ಯಕೊಂಡಿಗಳು
ಬದಲಾಯಿಸಿ- ಬಿಹು ಫೋಟೋಸ್ Archived 2008-04-20 ವೇಬ್ಯಾಕ್ ಮೆಷಿನ್ ನಲ್ಲಿ.
- ಬಿಹು ಅಸ್ಟ್ರಾಲಜಿ Archived 2010-04-10 ವೇಬ್ಯಾಕ್ ಮೆಷಿನ್ ನಲ್ಲಿ.