ಒಂದನೆಯ ಮಹಾಯುದ್ಧ

(ಪ್ರಥಮ ವಿಶ್ವ ಯುದ್ಧ ಇಂದ ಪುನರ್ನಿರ್ದೇಶಿತ)


ಇಪ್ಪತನೆಯ ಶತಮಾನದ ಮೊದಲ ಭಾಗದಲ್ಲಿ ಅಂದರೆ 1914 ರಿಂದ 1918 ರವರೆಗೆ ಸಂಭವಿಸಿದ ಮೊದಲನೇ ವಿಶ್ವಯುದ್ದ ಮಾನವನ ಇತಿಹಾಸದಲ್ಲೇ ಒಂದು ಪ್ರಮುಖ ಘಟನೆಯಾಗಿದೆ. ಇದು ಮೂಲತಃ ಯುರೋಪಿನಲ್ಲೆ ಸಂಭವಿಸಿದರೂ ಕೂಡ ಕ್ರಮೇಣ ಇಡೀ ವಿಶ್ವವ್ಯಾಪಿಯಾಗಿ ಆಸ್ಫೋಟಿಸಿತು. ಇದು ಜರ್ಮನಿ ಮುಖಂಡತ್ವದ ಶತ್ರು ಪಕ್ಷ ಮತ್ತು ಇಂಗ್ಲಂಡ್ ನೇತೃತ್ವದ ಮಿತ್ರ ಪಕ್ಷಗಳ ನಡುವೆ ಸುಮಾರು 4 ವರ್ಷಗಳು ಸಂಭವಿಸಿ ಜರ್ಮನಿಯ ಸೋಲಿನೊಂದಿಗೆ 1918ರಲ್ಲಿ ಮುಕ್ತಾಯಗೊಂಡಿತು.ಈ ಯುದ್ಧದಲ್ಲಿ ಹಿಂದೆಂದೂ ಕಂಡರಿಯದ ಹೊಸ ಶಸ್ತ್ರಾಸ್ತ್ರಗಳು, ಯುದ್ಧ ವಿಮಾನಗಳು, ನವೀನ ಯುದ್ಧ ನೌಕೆಗಳು, ಟ್ಯಾಂಕರ್ಗಳು, ಜಲಾಂತರ್ಗಾಮಿಗಳು, ಸ್ಪೋಟಕಗಳು, ವಿಷಾನಿಲಗಳು ಬಳಕೆಯಾದವು. ಅದರಿಂದುಂಟಾದ ಸಾವು, ನೋವು, ನಷ್ಟ ಅಪಾರ.

ಮೊದಲನೇ ವಿಶ್ವಯುದ್ಧ

ಮೇಲಿನಿಂದ ಬಲಮುಖ ಪ್ರದಕ್ಷಣೆಯಲ್ಲಿ:: "Trench warfare
ಕಾಲ: ಜುಲೈ ೨೮,೧೯೧೪ನವೆಂಬರ್ ೧೧,೧೯೧೮
ಸ್ಥಳ: ಯೂರೋಪ್ ಮತ್ತು ಪಶ್ಚಿಮ ಏಷ್ಯಾ
ಪರಿಣಾಮ: ಮೈತ್ರಿಕೂಟಕ್ಕೆ ಜಯ. ಜರ್ಮನಿ ಸಾಮ್ರಾಜ್ಯ, ರಷ್ಯಾ ಸಾಮ್ರಾಜ್ಯ, ಆಟ್ಟೊಮಾನ್ ಸಾಮ್ರಾಜ್ಯ ಮತ್ತು ಆಷ್ಟ್ರಿಯ-ಹಂಗೇರಿಗಳ ಸಮಾಪ್ತಿ. ಪೂರ್ವ ಯೂರೋಪ್ನಲ್ಲಿ ಹೊಸ ರಾಷ್ಟ್ರಗಳ ಸೃಷ್ಟಿ.
ಕಾರಣ(ಗಳು): ಆರ್ಚುಡ್ಕೆ ಫ್ರಾಂಜ್ ಫರ್ಡಿನಾಂಡ್ ಹತ್ಯೆ, ಯೂರೋಪ್ನಲ್ಲಿ ಅಸಮತೋಲನೆ.
ಕದನಕಾರರು
Allies of World War I =Allied Powers :
ಬ್ರಿಟಿಷ್ ಸಾಮ್ರಾಜ್ಯ
ಫ್ರಾನ್ಸ್
ಕೆನಡ
ಇಟಲಿ
ರಷ್ಯಾ ಸಾಮ್ರಾಜ್ಯ
ಅಮೇರಿಕ ದೇಶ
ಮತ್ತಿತರರು
Central Powers:
ಆಷ್ಟ್ರಿಯ-ಹಂಗೇರಿ
ಬಲ್ಗೇರಿಯ
ಜರ್ಮನ್ ಸಾಮ್ರಾಜ್ಯ
ಆಟ್ಟೊಮಾನ್ ಸಾಮ್ರಾಜ್ಯ
ಸೇನಾಧಿಪತಿಗಳು
ಡೊಗ್ಲಸ್ ಹೈಗ್
ಜಾನ್ ಜೆಲ್ಲಿಕೋ
ಫೆರ್ಡಿನೆಂಡ್ ಫೋಚ್
ಸರ್ ಆರ್ಥರ್ ವಿಲಿಯಂ ಕರ್ರಿ
ಎರಡನೆ ನಿಕೊಲಸ್
ವುಡ್ರೂ ವಿಲ್ಸನ್
ಜಾನ್ ಪೆರ್ಷಿಂಗ್
ಎರಡನೆ ವಿಲ್ಹೆಲ್ಮ್
ರೈನ್ಹಾರ್ಡ್ ಶೀರ್
ಮೊದಲನೆ ಫ್ರಾನ್ಜ್ ಜೋಸೆಫ್
ಆಸ್ಕರ್ ಪೊಟಿಯೊರೆಕ್
ಇಸ್ಮಾಯಿಲ್ ಎನ್ವರ್
ಮೊದಲನೆ ಫರ್ಡಿನೆಂಡ್
ಮೃತರು ಮತ್ತು ಗಾಯಾಳುಗಳು
ಮೃತ ಸೈನಿಕರು:
5,520,000
ಗಾಯಾಳು ಸೈನಿಕರು: 12,831,000
ಕಾಣೆಯಾದ ಸೈನಿಕರು: 4,121,000[]
ಮೃತ ಸೈನಿಕರು:
3,386,000
ಗಾಯಾಳು ಸೈನಿಕರು: 8,388,000
ಕಾಣೆಯಾದೆ ಸೈನಿಕರು: 3,629,000[]
ಆಸ್ಟ್ರೋ-ಹಂಗೇರಿಯನ್ ರಾಜಕುಮಾರ ಆರ್ಚುಡ್ಕೆ ಫ್ರಾಂಜ್ ಫರ್ಡಿನಾಂಡ್
ಮೊದಲ ಮಹಾಯುದ್ಧಕ್ಕಾಗಿ ಅಮೇರಿಕಾ ಯೋಧರ ಸಿದ್ದತೆಯ ಜಾಥಾ
೧೯೧೪ ರಲ್ಲಿ ಸರಕು ಸಾಗಣೆ ರೈಲಿನಲ್ಲಿ(ಗೂಡ್ಸ್ ರೈಲು) ಯುದ್ಧ ಭೂಮಿಗೆ ಹೋರಾಡುತ್ತಿರುವ ಜರ್ಮನ್ ಸೈನಿಕರು

ಹಿನ್ನೆಲೆ

ಬದಲಾಯಿಸಿ

ಮೊದಲನೇ ಮಹಾಯುದ್ದ ಅಥವಾ ವಿಶ್ವ ಸಮರಕ್ಕೆ ಹಲವು ಅಂಶಗಳು ಕಾರಣವಾಗಿವೆ. ಈ ಯುದ್ಧ 1914 ಜೂನ್ 28ರಂದು ಸರಾಜಿವೂ ಎಂಬಲ್ಲಿ ಆಸ್ಟ್ರಿಯಾದ ಯುವರಾಜ ಆರ್ಚ್ಡ್ಯೂಕ್ ಫರ್ಡಿನಾಂಡ್ ನ ಕೊಲೆ ಈ ವಿಶ್ವಯುದ್ಢಕ್ಕೆ ನಾಂದಿ . ಕೊಲೆ ಮಾಡಿದವನು ಸರ್ಬಿಯಾ ಜನಾಂಗದ ವಿದ್ಯಾರ್ಥಿ. ಅವನು ತನ್ನ ದೇಶದ ಸ್ವಾತಂತ್ರ್ಯ ಅಪಹರಣ ಮಾಡಿದ ಅಸ್ಟ್ರಿಯಾದ ವಿರೋಧಿ.ಸ್ಥಳೀಯ ಘಟನೆಯಾಗಬೇಕಿದ್ದ ಘಟನೆ ವಿಶ್ವವ್ಯಾಪಿಯಾಯಿತು. ದಿನಕಳೆದಂತೆ ಹಲವು ಆಸಕ್ತಿಯುಳ್ಳ ರಾಜಕೀಯ ಶಕ್ತಿಗಳ ಪರಸ್ಪರ ವೈಷಮ್ಯ, ಅಸೂಯೆ, ಹಳೆಯ ಮತ್ಸರ, ಪ್ರತಿಷ್ಠೆ ಅತಿಯಾದ ರಾಷ್ಟ್ರೀಯತೆಯ ದುರಭಿಮಾನ ಮೊದಲಾದ ಕಾರಣಗಳ ಹಿನ್ನೆಲೆಯಲ್ಲಿ ಇಡೀ ವಿಶ್ವವೇ ಎರಡು ಪ್ರತಿಸ್ಪರ್ದಿ ಬಣಗಳಾಗಿ ಮಾರ್ಪಟ್ಟವು.(ಮೊದಲನೆಯ ಮಹಾಯುದ್ಧದಿಂದ ಸೇರಿಸಿದ ಭಾಗ)[]

  • ನಾಗರಿಕ ಪ್ರಪಂಚದ ಬಹುಭಾಗವನ್ನೊಳಗೊಂಡ ಪ್ರಪ್ರಥಮ ಮಹಾಸಂಗ್ರಾಮ, 1914 ಜುಲೈ 28-1918 ನವೆಂಬರ್ 11ರವರೆಗೆ ನಡೆದ ಈ ಯುದ್ಧದಲ್ಲಿ ಜರ್ಮನಿ ಮತ್ತು ಆಸ್ಟ್ರಿಯ-ಹಂಗರಿಗಳು ಒಂದು ಕಡೆಯೂ ಫ್ರಾನ್ಸ್‌ ಮತ್ತು ಗ್ರೇಟ್ ಬ್ರಿಟನ್ಗಳೂ(ಮಿತ್ರ ಪಕ್ಷ) ಇನ್ನೊಂದು ಕಡೆಯೂ ಪ್ರಧಾನವಾಗಿ ಕಾದಿದುವು. 1917-18ರಲ್ಲಿ ಮಿತ್ರಪಕ್ಷದೊಂದಿಗೆ ಅಮೆರಿಕ ಸಂಯುಕ್ತಸಂಸ್ಥಾನವೂ ಸೇರಿಕೊಂಡಿತು. 19ನೆಯ ಶತಮಾನದ ದೃಷ್ಟಿ ಪ್ರವೃತ್ತಿಗಳಿಗೆ ಭರತವಾಕ್ಯ ಹಾಡಿ ಹೊಸದೊಂದು ವಿಶ್ವದ ನಿರ್ಮಾಣಕ್ಕೆ ಕಾರಣವಾಗಿ ಪರಿಣಮಿಸಿ ಇದು ವಿಶ್ವೇತಿಹಾಸದ ಒಂದು ಮಹಾಫಟ್ಟವೆನಿಸಿದೆ.
  • ಈ ಲೇಖನವನ್ನು ಸ್ಥೂಲವಾಗಿ ಹೀಗೆ ವಿಂಗಡಿಸಲಾಗಿದೆ; 1. ಕಾರಣಗಳು, 2. ಭೂಯುದ್ಧ, 3. ಜಲವಾಯು ಯುದ್ಧಗಳು, 4. ಅಮೆರಿಕದ ಪ್ರವೇಶ, 5. ಏಷ್ಯದಲ್ಲಿ ಜಪಾನ್ ನಡೆಸಿದ ಯುದ್ಧ, 6. ಚೀನ-ಭಾರತ, 7. ಜರ್ಮನಿಯ ವಸಾಹತುಗಳಲ್ಲಿ ಯುದ್ಧ, 8. ಯುದ್ಧದ ಅಂತಿಮ ಘಟ್ಟ, 9. ಪರಿಣಾಮಗಳು, 10. ಶಾಂತಿ ಕೌಲುಗಳು. ಲೇಖನದ ಕೊನೆಯಲ್ಲಿ ಮಹಾಯುದ್ಧದ ಮುಖ್ಯ ಘಟನೆಗಳ ಪಟ್ಟಿಯೊಂದನ್ನು ಕೊಡಲಾಗಿದೆ.

ಕಾರಣಗಳು

ಬದಲಾಯಿಸಿ
  • ಒಂದನೆಯ ಮಹಾಯುದ್ಧಕ್ಕೆ ಅನೇಕ ಕಾರಣಗಳನ್ನು ಕೊಡುವುದು ಸಾಧ್ಯ. ಆಸ್ಟ್ರಿಯ-ಹಂಗೆರಿಗೂ ಸರ್ಬಿಯಕ್ಕೂ ನಡುವಣ ವಿರಸದಿಂದಾಗಿ ಆರಂಭವಾದ ಈ ಯುದ್ಧಕ್ಕೆ ಇದೇ ತತ್ಕ್ಷಣದ ಕಾರಣವಾದರೂ ಇಷ್ಟರಿಂದಲೇ ವಿಶ್ವದ ಅನೇಕ ರಾಷ್ಟ್ರಗಳು ಯುದ್ಧದ ಸುಳಿಯೊಳಕ್ಕೆ ಸಿಲುಕಿದುವೆನ್ನಲಾಗುವುದಿಲ್ಲ. ಇದರ ಹಿಂದೆ ಎರಡು ಮಹಾಬಣಗಳೇ ನಿರ್ಮಾಣವಾಗಿ ಬಲು ಹಿಂದಿನಿಂದಲೂ ಅವು ತಂತಮ್ಮಲ್ಲೆ ಮಸೆದಾಟಕ್ಕೆ ಆರಂಭಿಸಿದ್ದುವು. ದೀರ್ಘಕಾಲದ ಸ್ಪರ್ಧೆ, ಅಸೂಯೆ ಮತ್ತು ದ್ವೇಷಗಳ ಫಲವೇ ಒಂದನೆಯ ಮಹಾಯುದ್ಧ.
  • ಯುದ್ಧದ ದೀರ್ಘಕಾಲಿಕ ಕಾರಣಗಳಲ್ಲಿ ಬಹಳ ಮುಖ್ಯವಾದದ್ದೆಂದರೆ 1870ರ ಅನಂತರ ಯುರೋಪಿನಲ್ಲಿ ಬಲಿಷ್ಠವಾದ ಮಹಾರಾಷ್ಟ್ರಗಳ ಮದೋನ್ಮತ್ತತೆ ಮತ್ತು ಆಕ್ರಮಣ ಮನೋಭಾವ. 1871ರಲ್ಲಿ ಜರ್ಮನ್ ಸಾಮ್ರಾಜ್ಯದ ನಿರ್ಮಾಣವಾದಾಗಲೇ ಒಂದನೆಯ ಮಹಾಯುದ್ಧದ ಮೊದಲ ಭೇರೀನಾದವಾಯಿತೆನ್ನಬೇಕು. ಉತ್ತರ ಮಧ್ಯ ಯುರೋಪಿನಲ್ಲಿ ಈ ಮಹಾಶಕ್ತಿಯ ನಿರ್ಮಾಣವಾದೊಡನೆಯೇ ಇದರ ನೆರೆಹೊರೆಯ ರಾಷ್ಟ್ರಗಳಾದ ಫ್ರಾನ್ಸ್‌, ರಷ್ಯ, ಆಸ್ಟ್ರಿಯ-ಹಂಗರಿಗಳ ಗಡಿ ರೇಖೆಗಳುದ್ದಕ್ಕೂ ಬಿಸಿ ತಟ್ಟಿತು.
  • 1871ರಲ್ಲಿ ಜರ್ಮಿನಿಯ ಛಾನ್ಸಲರ್ ಆದ ರಾಜಕುಮಾರ ಆಟೋ ಫಾನ್ ಬಿಸ್óಮಾರ್ಕ್ ಮಹಾ ಪ್ರತಿಭಾವಂತ (ನೋಡಿ: ಬಿಸ್óಮಾರ್ಕ್, ಆಟೋ ಫಾನ್). ಆತನಿಗೆ ನೆರೆರಾಷ್ಟ್ರಗಳೊಂದಿಗೆ ಯುದ್ಧಮಾಡುವ ಇಚ್ಛೆಯಿರಲಿಲ್ಲ. ರಷ್ಯ, ಆಸ್ಟ್ರಿಯ, ಬ್ರಿಟನ್ ಮತ್ತು ಇಟಲಿಗಳು ಜರ್ಮನಿಯ ವಿರುದ್ಧ ಒಂದಾಗುವಂತೆ ಮಾಡುವ ಉದ್ದೇಶದಿಂದ ಅವುಗಳ ಸ್ನೇಹ ಬಯಸಿದ. ಆದರೆ ಇಂಥ ಸ್ನೇಹದ ಒಡಂಬಡಿಕೆಗಳು ವಿಷಮ ಪರಿಸ್ಥಿತಿಯ ಸೂಚನೆಗಳೆಂದೇ ಹೇಳಬೇಕು. ಫ್ರಾನ್ಸಿಗೆ ಸೇರಿದ್ದ ಆಲ್ಸೇಸ್ ಮತ್ತು ಪುರ್ವ ಲೊರೀನ್ ಪ್ರದೇಶಗಳನ್ನು ಜರ್ಮನಿ ವಶಪಡಿಸಿಕೊಂಡಿದ್ದರಿಂದ (1871) ಫ್ರಾನ್ಸಿಗೆ ಮುಖಭಂಗವಾಗಿತ್ತು. ಈ ಪ್ರದೇಶಗಳಲ್ಲಿರುವ ಬಹುಮಂದಿ ಜರ್ಮನ್ ಜನಾಂಗದವರೆಂಬುದೂ ಸ್ವರಕ್ಷಣೆಯ ದೃಷ್ಟಿಯಿಂದ ಇದು ಜರ್ಮನಿಗೆ ಸೇರಬೇಕೆಂಬುದೂ ಈ ಆಕ್ರಮಣಕ್ಕೆ ಕಾರಣ. ಫ್ರಾನ್ಸ್‌ ಒಂಟಿ ಯಾಗಿದ್ದರೂ ಸುಮ್ಮನಿರಲಿಲ್ಲ. ತನ್ನ ಭದ್ರತೆಗಾಗಿ ಅದು ಇತರ ರಾಷ್ಟ್ರಗಳ ಸ್ನೇಹಕ್ಕಾಗಿ ಕೈಚಾಚಿತು. ಬಿಸ್óಮಾರ್ಕ್ ನ ಅನಂತರ 1894ರಲ್ಲಿ, ಫ್ರಾನ್ಸ್‌-ರಷ್ಯಗಳ ನಡುವೆ ಮೈತ್ರಿ ಏರ್ಪಟ್ಟಾಗ ಜರ್ಮನ್ ವಿರುದ್ಧ ಪಕ್ಷ ಬಲಗೊಂಡಿತೆನ್ನಬಹುದು. ಬಲಿಷ್ಠ ಜರ್ಮನಿಯಿಂದ ನೆರೆಹೊರೆಯ ರಾಷ್ಟ್ರಗಳ ನೆಮ್ಮದಿ ಭಂಗವಾಗಿದ್ದದೂ ನಿಜ. ಯುರೋಪಿನ ಪ್ರತಿಯೊಂದು ರಾಷ್ಟ್ರವೂ ಶಸ್ತ್ರಾಸ್ತ್ರ ಸಂಗ್ರಹಣೆಗೆ ತೊಡಗಿತು. ಇದರಿಂದ ರಾಷ್ಟ್ರಗಳ ನಡುವೆ ಭೀತಿ ಹೆಚ್ಚಲು ಕಾರಣವಾಯಿತೇ ಹೊರತು ಭದ್ರತೆ ಬೆಳೆಯಲಿಲ್ಲ. ಪ್ರತಿಯೊಂದು ರಾಷ್ಟ್ರವೂ ತನ್ನ ತರುಣರನ್ನು ಜಮಾಯಿಸಿ ಅವರಿಗೆ ಖಾಕಿ ತೊಡಿಸಿ ಕವಾಯತು ಮಾಡಿಸುತ್ತಿತ್ತು. ಯುದ್ಧ ಈಗಲೋ ಆಗಲೋ ಎಂಬ ಭಾವನೆ 19ನೆಯ ಶತಮಾನದ ಅಂತ್ಯದ ವೇಳೆಗೆ ಉದ್ಭವವಾಗಿತ್ತು.
  • ಇದೇ ಕಾಲಕ್ಕೆ ಯುರೋಪಿನ ಆರ್ಥಿಕ ಸಾಮಾಜಿಕ ಕ್ಷೇತ್ರಗಳಲ್ಲಿ ಆಗಿದ್ದ ಬದಲಾವಣೆಗಳು ಅಗಾಧ. ಸಾರ್ವತ್ರಿಕ ವಿದ್ಯಾಭ್ಯಾಸ, ಪತ್ರಿಕಾ ಪ್ರಸಾರ ಮತ್ತು ಸಂಚಾರಸೌಲಭ್ಯ ವಿಸ್ತರಣೆಗಳಿಂದ ಜನರಲ್ಲಿ ರಾಷ್ಟ್ರಾಭಿಮಾನ ಬೆಳೆದಿತ್ತು. ಕೈಗಾರಿಕಾ ಕ್ರಾಂತಿಯ (ನೋಡಿ) ಫಲವಾಗಿ ಸಂಪತ್ತಿನ ಹೆಚ್ಚಳವೂ ಕಾರ್ಮಿಕರ ಬಲವೂ ಹೆಚ್ಚಿದ್ದುವು. ನೂತನವಾಗಿ ನಿರ್ಮಿತವಾದ ನಗರಗಳಿಂದ ಉದ್ಭವವಾದ ಸಮಸ್ಯೆಗಳೂ ಅನೇಕ. ಇವೆಲ್ಲ ಕಾರಣಗಳಿಂದಾಗಿ ಅಲ್ಲಿನ ಜನಜೀವನದಲ್ಲೂ ಒಂದು ಬಗೆಯ ನೆಮ್ಮದಿ ಭಂಗವೂ ಅಲ್ಲೋಲಕಲ್ಲೋಲವೂ ಆಗಿದ್ದುವು.
  • ಆಗ ಯುರೋಪಿನ ಯಾವ ರಾಷ್ಟ್ರವೇ ಆಗಲಿ ನೆರೆ ರಾಜ್ಯಗಳನ್ನು ಗೆದ್ದು ಯುರೋಪಿನ ಸಾರ್ವಭೌಮತ್ವ ಸ್ಥಾಪಿಸಬೇಕೆಂಬ ಇಚ್ಛೆ ಹೊಂದಿತ್ತೆನ್ನಲು ಆಧಾರಗಳಿಲ್ಲ. ಆದರೆ ಅಲ್ಲಿನ ಜನರಲ್ಲಿ ರಾಷ್ಟ್ರಾಭಿಮಾನ ಬೆಳೆದಿದ್ದುದಂತೂ ನಿಜ. ಇದರಿಂದಾಗಿ ರಾಷ್ಟ್ರಗಳ ನಡುವೆ ಪರಸ್ಪರ ಕೊಡು-ಕೊಳ್ಳುವ ಮನೋಭಾವ ಬೆಳೆಯಲವಕಾಶವಾಗಲಿಲ್ಲ. ಮೈತ್ರಿಯ ಧೋರಣೆಯಿಂದ ತಮ್ಮ ಅಭಿಮಾನಕ್ಕೆ ಕುಂದಾದೀತೇನೋ-ಎಂಬುದೇ ಅವುಗಳ ಅಂಜಿಕೆ.
  • ಯುದ್ಧ ಪುರ್ವದ ಐರೋಪ್ಯ ರಾಷ್ಟ್ರಗಳ ಆರ್ಥಿಕ ಸಾಮ್ರಾಜ್ಯವಾದವನ್ನು ಈ ದೃಷ್ಟಿಯಿಂದ ನೋಡುವುದು ಅವಶ್ಯ. ವಸಾಹತುಗಳಿಂದ ತಮಗೆ ಲಾಭವೆಂಬುದನ್ನರಿತ ಐರೋಪ್ಯ ರಾಷ್ಟ್ರಗಳು ಇವುಗಳ ಸಂಪಾದನೆಗಾಗಿ 1881ರಿಂದ ಮುಂದೆ ತಂತಮ್ಮಲ್ಲೇ ಸ್ಪರ್ಧಿಸಿದುವೆಂಬುದು ನಿಜವಾದರೂ ಈ ಸ್ಪರ್ಧೆಯ ಹಿಂದೆ ಅವುಗಳ ಅಭಿಮಾನವೂ ಇತ್ತು. ಅವುಗಳಿಗೆ ಯುರೋಪಿನಲ್ಲಿ ತಮ್ಮ ಪ್ರತಿಷ್ಠೆ ಉಳಿಸಿಕೊಳ್ಳಲು ವಸಾಹತುಗಳು ಸಾಧನಗಳಾದುವು. ಯುರೋಪಿನ ರಾಷ್ಟ್ರಗಳಿಗೆ ತಂತಮ್ಮ ವ್ಯಾಜ್ಯಗಳ ಪರಿಹಾರಕ್ಕೆ ಪಣವಾಗಿ ವಸಾಹತುಗಳು ಒದಗಿಬಂದುವು. ಇವಿಲ್ಲದಿದ್ದರೆ ಐರೋಪ್ಯ ರಾಷ್ಟ್ರಗಳ ನಡುವೆಯೇ ಪರಸ್ಪರ ಆಕ್ರಮಣ ಪ್ರಬಲವಾಗಿ 1914ಕ್ಕೂ ಮುಂಚೆಯೇ ಯುದ್ಧ ಸಂಭವಿಸಬಹುದಾಗಿತ್ತು. ಅಂತೂ ವಸಾಹತುಗಳ ಸ್ಪರ್ಧೆಯೂ ಐರೋಪ್ಯ ರಾಷ್ಟ್ರಗಳಲ್ಲಿ ಎರಡು ಬಣಗಳು ವೃದ್ಧಿಯಾಗಲು ಒಂದು ಮುಖ್ಯ ಕಾರಣ.
  • ಯುದ್ಧಪುರ್ವ ಯುರೋಪಿನ ದ್ವೇಷ-ಭೀತಿಗಳಿಗೆ ಬಹುಮಟ್ಟಿಗೆ ಜರ್ಮನಿಯೇ ಕಾರಣ. 1866ರಲ್ಲೂ 1870ರಲ್ಲೂ ಅದು ಗಳಿಸಿದ ವಿಜಯಗಳೂ ಅದರ ಸೈನಿಕ ಶಕ್ತಿಯೂ ಯುದ್ಧದ ಬೆದರಿಕೆ ಹಾಕಿ ಅನ್ಯರಾಷ್ಟ್ರಗಳನ್ನು ತನ್ನ ಷರತ್ತಿಗೆ ಒಪ್ಪಿಸಿಕೊಳ್ಳುತ್ತಿದ್ದ ವಿಧಾನವೂ ಅದರ ನೌಕಾಬಲವೃದ್ಧಿಯೂ ಜರ್ಮನ್ ಚಕ್ರವರ್ತಿ ಕೈಸ್ತರ ಉದ್ರೇಕಪುರಿತ ಭಾಷಣಗಳೂ ಆ ದೇಶದ ಉದ್ದೇಶಗಳ ಬಗ್ಗೆ ಇತರ ರಾಷ್ಟ್ರಗಳಲ್ಲಿ ಸಂದೇಹೋತ್ಪನ್ನ ಮಾಡಿದುವು. ಜರ್ಮನಿಯನ್ನು ತನ್ನ ಮಿತ್ರರಾಷ್ಟ್ರವೆಂದು ಪರಿಗಣಿಸಿದ್ದ ಬ್ರಿಟನ್ ಕೂಡ ಈ ಕಾರಣದಿಂದಾಗಿ 1904ರ ಅನಂತರ ಫ್ರಾನ್ಸ್‌-ರಷ್ಯಗಳ ಸಖ್ಯ ಬೆಳೆಸಿಕೊಂಡಿತು.
  • ಆರ್ಥಿಕ ದೃಷ್ಟಿಯಿಂದಲೂ ಪ್ರತಿಷ್ಠೆಯ ದೃಷ್ಟಿಯಿಂದಲೂ ಆಲ್ಸೇಸ್-ಲೊರೇನ್ ಪ್ರದೇಶಗಳನ್ನು ಮತ್ತೆ ಜರ್ಮನಿಯಿಂದ ಪಡೆದುಕೊಳ್ಳಲು ಫ್ರಾನ್ಸ್‌ ಹಾತೊರೆಯುತ್ತಿತ್ತು. ಈ ಪ್ರಾಂತ್ಯಗಳಲ್ಲಿ ದೊರಕುತ್ತಿದ್ದ ಖನಿಜಗಳಿಂದ ಜರ್ಮನಿಯ ಕೈಗಾರಿಕೆಗಳ ಬೆಳೆವಣಿಗೆಯಾಗುವುದು ಫ್ರಾನ್ಸಿನ ಕೈಗಾರಿಕಾ ಪ್ರಭೃತಿಗಳಿಗೆ ಹಿತವಾಗಿ ಕಾಣಲಿಲ್ಲ.
  • ಏಡ್ರಿಯಾಟಿಕ್ ಸಮುದ್ರಕ್ಕೆ ಪುರ್ವದಲ್ಲಿನ ಬಾಸ್ನಿಯ ಮತ್ತು ಹರ್ಸಗೋವಿನ ಪ್ರಾಂತ್ಯಗಳು ಆಸ್ಟ್ರಿಯ-ಹಂಗರಿ ಮತ್ತು ಸರ್ಬಿಯಗಳ ನಡುವೆ ಪೈಪೋಟಿ ಮತ್ತು ವೈಮನಸ್ಯವನ್ನು ತಂದುವು. ಜರ್ಮನಿಯ ನೆರೆ ರಾಷ್ಟ್ರವಾಗಿದ್ದ ಆಸ್ಟ್ರಿಯ-ಹಂಗರಿ ಸಾಮ್ರಾಜ್ಯವೊಂದು ಕಲಸುಮೇಲೋಗರ. ನಾನಾ ಜಾತಿಗಳ ನಾನಾ ಪ್ರದೇಶಗಳ ಸಮೂಹ. ಅಲ್ಲಿಯ ರಾಜ ನಿರಂಕುಶನಾಗಿದ್ದ. ಆತನ ಪ್ರಜೆಗಳಲ್ಲಿ ಜರ್ಮನ್ನರಲ್ಲದೆ ಮಗ್ಯಾರರೂ ಸ್ಲಾವರೂ ಇದ್ದರು. ಸ್ಲಾವ್ ಜನಾಂಗದವರೆಲ್ಲ ಒಂದುಗೂಡಬೇಕೆಂಬ ಚಳವಳಿ ಆ ರಾಜನ ಪ್ರಭುತ್ವಕ್ಕೆ ತೊಂದರೆ ಕೊಡತಕ್ಕುದಾಗಿತ್ತು. ಈ ಚಳವಳಿಗೆ ಸರ್ಬಿಯ ರಾಜ್ಯವೇ ಕೇಂದ್ರ. ಈ ರಾಜ್ಯ ಸ್ವತಂತ್ರವಾಗಿದ್ದುದು ಆಸ್ಟ್ರಿಯದ ಪ್ರಭುವಿಗೆ ಸರಿಬೀಳಲಿಲ್ಲ. ಸರ್ಬಿಯ ರಾಜ್ಯಕ್ಕೆ ಸುಮುದ್ರ ತೀರ ಬೇಕೆನಿಸಿತ್ತು; ಆದರೆ ಅದನ್ನು ಆಸ್ಟ್ರಿಯ ಬಿಟ್ಟುಕೊಟ್ಟ ಹೊರತು ಸಿಕ್ಕುವಂತಿರಲಿಲ್ಲ. ಹೀಗೆ ಆಸ್ಟ್ರಿಯ-ಸರ್ಬಿಯಗಳಿಗೆ ವೈಷಮ್ಯವಿದ್ದಾಗ ಆಸ್ಟ್ರಿಯದ ಪ್ರಭುವೇ ಮೊದಲು ಜಗಳಕ್ಕೆ ಸಿದ್ಧನಾಗಿ, ಅದಕ್ಕೆ ರಷ್ಯನ್ನರು ಸಹಾಯ ನೀಡುವುದಕ್ಕೆ ಮೊದಲೇ ಸರ್ಬಿಯನ್ನರನ್ನು ಅಡಗಿಸಲು ಮನಸ್ಸು ಮಾಡಿ ಹೊಂಚುಹಾಕುತ್ತಿದ್ದ. ಇದಲ್ಲದೆ ಬಾಸ್ನಿಯ ಮತ್ತು ಹರ್ಸಗೋವಿನ ಪ್ರಾಂತ್ಯದ ಸ್ಲಾವ್ ಜನಾಂಗಕ್ಕೆ ಸೇರಿದ ಜನರೂ ಸಾಧ್ಯವಾದರೆ ಆಸ್ಟ್ರಿಯ-ಹಂಗರಿ ಸಾಮ್ರಾಜ್ಯದ ಹಿಡಿತದಿಂದ ಬಿಡಿಸಿಕೊಂಡು ಸರ್ಬಿಯದಲ್ಲಿ ನಡೆಯುತ್ತಿದ್ದ ಅಖಿಲ ಸ್ಲಾವ್ ಚಳವಳಿಗೆ ಸೇರಿಕೊಳ್ಳಬೇಕೆಂದು ಹವಣಿಸುತ್ತಿದ್ದರು. ಹೀಗೆ ಆಸ್ಟ್ರಿಯ-ಹಂಗೆರಿ ಸಾಮ್ರಾಜ್ಯದಲ್ಲಿದ್ದ ಉಗ್ರ ರಾಷ್ಟ್ರೀಯತಾ ಭಾವನೆಗಳು ಆ ಸಾಮ್ರಾಜ್ಯಕ್ಕೆ ಸೇರಿದ ವಿವಿಧ ಜನಾಂಗಗಳನ್ನು ಕೆಣಕಿದುವು.
  • 1870ರಲ್ಲಿ ಇಟಲಿಯ ದೊರೆಯಾಗಿದ್ದ ಎರಡನೆಯ ವಿಕ್ಟರ್ ಎಮ್ಯಾನ್ಯುಯೆಲ್ ರೋಮ್ ನಗರ ಪ್ರವೇಶ ಮಾಡಿದಾಗ ಇಟಲಿಯ ಐಕ್ಯ ಸಂಪೂರ್ಣವಾಗಿ ಮುಗಿದಿರಲಿಲ್ಲ. ಆಸ್ಟ್ರಿಯ-ಹಂಗರಿ ಸಾಮ್ರಾಜ್ಯಕ್ಕೆ ಸೇರಿದ ಕೆಲವು ಪ್ರದೇಶಗಳನ್ನು ವಶಪಡಿಸಿಕೊಳ್ಳಬೇಕೆಂದು ಅದು ಹವಣಿಕೆ ನಡೆಸಿತ್ತು. ಆ ಪ್ರದೇಶಗಳಲ್ಲಿ ಇಟಾಲಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇದಲ್ಲದೆ ಇಟಲಿ ಏಡ್ರಿಯಾಟಿಕ್ ಸಮುದ್ರದ ಮೇಲೆ ತನ್ನ ಹತೋಟಿಯನ್ನು ಸ್ಥಾಪಿಸುವ ಪ್ರಯತ್ನದಲ್ಲಿ ಆಸ್ಟ್ರಿಯದೊಡನೆ ಪೈಪೋಟಿ ನಡೆಸಿತ್ತು.
  • 1908ರಲ್ಲಿ ತುರ್ಕಿಯಲ್ಲಿ ಒಂದು ಪಲ್ಲಟ ನಡೆಯಿತು. ಅಬ್ದುಲ್ ಹಮೀದ್ ಸುಲ್ತಾನನ ಆಳ್ವಿಕೆಯನ್ನು ತರುಣ ತುರ್ಕಿ ಪಕ್ಷದವರು ಕೊನೆಗಾಣಿಸಿ ಕ್ರಮಬದ್ಧ ಆಡಳಿತವನ್ನು ಕಟ್ಟಲು ಉದ್ಯಮಿಸಿದರು. ಇವರ ಸೈನ್ಯಕ್ಕೆ ತರಬೇತಿ ಕೊಡಲು ಮುಂದೆ ಬಂದವರು ಜರ್ಮನರು. ಅಲ್ಲಿ ಸ್ವಲ್ಪ ಕಾಲ ಅವ್ಯವಸ್ಥೆ ತೋರಿದಂತಿದ್ದಾಗ ಆಸ್ಟ್ರಿಯದ ಪ್ರಭು ಆತುರಪಟ್ಟು ಹಿಂದೆ ತನಗೆ ಸೇರಿದ್ದ ಬಾಸ್ನಿಯ-ಹರ್ಸಗೋವಿನ ಪ್ರಾಂತ್ಯಗಳನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡ. ಇದರಿಂದ ರಷ್ಯನ್ ಚಕ್ರವರ್ತಿಗೆ ಅಸಮಾಧಾನವಾಯಿತು. ತುರ್ಕಿಯ ಮೇಲೆ ಬಿದ್ದು ಸಿಕ್ಕಿದಷ್ಟನ್ನು ದಕ್ಕಿಸಿಕೊಳ್ಳುವುದು ಜಾಣತನವೆಂದು ಐರೋಪ್ಯರಾಷ್ಟ್ರಗಳು ಭಾವಿಸಿದುವು. 1911ರಲ್ಲಿ ಇಟಲಿಯವರು ತುರ್ಕಿಯೊಡನೆ ಜಗಳ ತೆಗೆದು ಉತ್ತರ ಆಫ್ರಿಕದಲ್ಲಿ ಟ್ರಿಪೋಲಿ ಪ್ರದೇಶವನ್ನಾಕ್ರಮಿಸಿಕೊಂಡರು. ಅದೇ ಒಳ್ಳೆಯ ಸಮಯವೆಂದು ಗ್ರೀಸಿನ ನಾಯಕ ವೆನಿಜೆಲಸ್ ಬಲೇರಿಯ, ಸರ್ಬಿಯ ಮತ್ತು ಮಾಂಟೆ ನೀಗ್ರೊಗಳೊಂದಿಗೆ ಸೇರಿ ತುರ್ಕಿಯ ವಿರುದ್ಧವಾಗಿ ಬಾಲ್ಕನ್ ಲೀಗ್ ಎಂಬ ವ್ಯೂಹ ಕಟ್ಟಿದ. 1912ರಲ್ಲಿ ಇದು ತುರ್ಕಿಯನ್ನು ಸೋಲಿಸಿತು. ಯುರೋಪಿ ನಲ್ಲಿ ಸೇರಿದ್ದ ಭೂಭಾಗಗಳೆಲ್ಲವನ್ನೂ ತುರ್ಕಿ ಕಳೆದುಕೊಂಡಿತು. ಆದರೆ ವಿಜಯೀ ಬಾಲ್ಕನ್ ರಾಷ್ಟ್ರಗಳು 1913ರಲ್ಲಿ ತಂತಮ್ಮಲ್ಲೇ ಕಲಹವನ್ನಾರಂಭಿಸಿದುವು. ಆಗ ಬ್ರಿಟನ್, ರಷ್ಯ, ಜರ್ಮನಿಗಳ ಮಂತ್ರಿಪ್ರಮುಖರು ಸಂಧಾನ ನಡೆಸಿ ಆ ಜಗಳಗಳನ್ನು ಒಂದು ರೀತಿ ಪರಿಹರಿಸಿದರು. ಆದರೆ ಆಸ್ಟ್ರಿಯದ ಪ್ರಭು ಮಾತ್ರ ತನ್ನ ಆಸೆ ಆಕಾಂಕ್ಷೆಗಳನ್ನು ಬೆಳೆಸಿಕೊಳ್ಳುತ್ತಲೇ ಇದ್ದ.
  • 19ನೆಯ ಶತಮಾನದ ಯುರೋಪಿನ ಚರಿತ್ರೆಯಲ್ಲಿ ಜರ್ಮನಿ, ಇಟಲಿ ದೇಶಗಳು ಐಕ್ಯವನ್ನೂ ಸ್ವಾತಂತ್ರ್ಯವನ್ನೂ ಪಡೆದದ್ದು ದೊಡ್ಡ ಘಟನೆಗಳು. ಫ್ರಾನ್ಸಿಗೆ ಸೇರಿದ್ದ ಆಲ್ಸೇಸ್-ಲೊರೋನ್ ಪ್ರಾಂತ್ಯಗಳನ್ನು ಪದೆದುಕೊಂಡ ಬಿಸ್óಮಾರ್ಕ್ ಫ್ರೆಂಚರ ವಿರುದ್ಧವಾಗಿ ಆಸ್ಟ್ರಿಯ ಮತ್ತು ಇಟಲಿಗಳೊಡನೆ ಸೇರಿ ಮಾಡಿಕೊಂಡಿದ್ದ ತ್ರಿಪಕ್ಷ ಮೈತ್ರಿಯೂ (ಟ್ರಿಪಲ್ ಅಲಯನ್ಸ್‌, 1882) ರಷ್ಯದೊಂದಿಗೆ ಹೊಂದಿದ್ದ ಎಚ್ಚರದ ಸ್ನೇಹಪರತೆಯೂ ಆತನ ಚಾಣಾಕ್ಷತನದ ದ್ಯೋತಕಗಳಾಗಿದ್ದುವು. ಆದರೆ ಅವನ ಅನಂತರ ಅಧಿಕಾರಕ್ಕೆ ಬಂದ ಜರ್ಮನ್ ಪ್ರಭುಗಳು ಆಸ್ಟ್ರಿಯದೊಂದಿಗೆ ಆಪ್ತತೆ ಕಾಪಾಡಿಕೊಂಡು ಬಂದರಾದರೂ ರಷ್ಯದ ವಿಚಾರದಲ್ಲಿ ಉಪೇಕ್ಷೆ ತಳೆದರು. ಬಾಲ್ಟಿಕ್ ಮತ್ತು ಕಪ್ಪು ಸಮುದ್ರಗಳ ಪ್ರದೇಶವನ್ನೂ ಪೆಸಿಫಿಕ್ ತೀರಗಳನ್ನೂ ಒಟ್ಟುಗೂಡಿಸುವ ರೈಲುದಾರಿ ಹಾಕಿಕೊಳ್ಳುವುದು ರಷ್ಯನ್ನರ ಇಷ್ಟವಾಗಿತ್ತು. ಫ್ರೆಂಚರು ಆ ಉದ್ಯಮದಲ್ಲಿ ಸಹಕರಿಸಿ ರಷ್ಯದವರ ಮೈತ್ರಿಯನ್ನು ಕಟ್ಟಿದರು. ಜರ್ಮನಿಯ ತ್ರಿಪಕ್ಷ ಮೈತ್ರಿಗೆ ವಿರುದ್ಧವಾಗಿ ಫ್ರಾನ್ಸ್‌-ರಷ್ಯಗಳ ದ್ವಿಪಕ್ಷ ಮೈತ್ರಿ (ಡ್ಯೂಯಲ್ ಅಲಯನ್ಸ್‌) ಏರ್ಪಟ್ಟಾಗ ಯುದ್ಧ ಮನೋಭಾವ ಬೆಳೆಯಲು ಕಾರಣವಾಯಿತು. ಎರಡೂ ಕಡೆಗಳವರೂ ತಮ್ಮ ಯುದ್ಧಸನ್ನಾಹಗಳಿಗೆ ಹೆಚ್ಚು ಹೆಚ್ಚು ಗಮನ ಕೊಟ್ಟು ದೊಡ್ಡ ದೊಡ್ಡ ಸೈನ್ಯ ಕಟ್ಟಲು ತೊಡಗಿದರು.
  • 19ನೆಯ ಶತಮಾನದ ಅಂತ್ಯದಲ್ಲಿ ಆಫ್ರಿಕ-ಏಷ್ಯಗಳಲ್ಲಿ ಸಾಮ್ರಾಜ್ಯ ಸಂಪಾದನೆಗೂ ವ್ಯಾಪಾರದ ಸವಲತ್ತುಗಳಿಗಾಗಿಯೂ ಐರೋಪ್ಯ ರಾಷ್ಟ್ರಗಳ ನಡುವೆ ತೀವ್ರ ಸ್ವರ್ಧೆ ನಡೆದಿತ್ತು. ಇಂಗ್ಲಿಷರಿಗೂ ಫ್ರೆಂಚರಿಗೂ ನಡುವೆ ವಿರಸ ಬೆಳೆಯಿತು. ಸೂಡಾನ್ ಪ್ರದೇಶದಲ್ಲಿ ಬ್ರಿಟಿಷರು ನುಗ್ಗಿದಾಗ ಪಶ್ಚಿಮದ ಕಡೆಯಿಂದ ಫ್ರೆಂಚರು ಅಲ್ಲಿಗೆ ನುಗ್ಗಿಬಂದು ಆ ಪ್ರದೇಶ ತಮ್ಮದಾಗಬೇಕೆಂದು ಹಟಹೂಡಿದರು. ಆದರೆ ಆಫ್ರಿಕ-ಏಷ್ಯಗಳಲ್ಲಿ ಐರೋಪ್ಯರು ಪರಸ್ಪರವಾಗಿ ಹೊಡೆದಾಟ ನಡೆಸದೆ ಕೇವಲ ಸಂಧಾನಗಳಿಂದಲೇ ತಮ್ಮ ತಮ್ಮ ಸಾಮ್ರಾಜ್ಯ ವಿಸ್ತಾರಗಳನ್ನು ಗೊತ್ತುಮಾಡಿಕೊಂಡರು.
  • ಜರ್ಮನಿಯನ್ನು ಒಟ್ಟುಗೂಡಿಸಿದ ತರುವಾಯ ಬಿಸ್óಮಾರ್ಕ್ ದೂರಾಲೋಚನೆಯಿಂದ ಶಾಂತಿ ನೆಲೆಗೊಳಿಸಿ ಜರ್ಮನಿಯ ರೈಲುದಾರಿಗಳೂ ಕೈಗಾರಿಕೆಗಳೂ ಸ್ಥಲಜಲ ಸೈನ್ಯಗಳೂ ಅಭಿವೃದ್ಧಿಯಾಗಲು ಆಸ್ಪದವನ್ನು ಕಲ್ಪಿಸಿಕೊಟ್ಟ. 1884ರ ವರೆಗೂ ಹೊರಗಿನ ಸಾಮ್ರಾಜ್ಯಕ್ಕಾಗಿ ಜರ್ಮನ್ನರು ಉದ್ಯಮಿಸಲಿಲ್ಲ. ಆಫ್ರಿಕ-ಏಷ್ಯಗಳಲ್ಲಿ ಸಾಮ್ರಾಜ್ಯ ಪ್ರಯತ್ನವನ್ನು ಜರ್ಮನ್ನರು ಕೈಗೊಂಡದ್ದು ಸಾವಕಾಶವಾಯಿತು. ಆ ವೇಳೆಗೆ ಆಫ್ರಿಕದ ಉತ್ತಮ ಭಾಗಗಳು ಇತರರ ಪಾಲಾಗಿದ್ದುವು. ಆಫ್ರಿಕದ ವಾಯವ್ಯಭಾಗವೆಲ್ಲವೂ ಫ್ರ್ರೆಂಚರದಾಗಿತ್ತು. ಆದ್ದರಿಂದ ಜರ್ಮನ್ನರಿಗೆ ಫ್ರೆಂಚರಲ್ಲಿ ಅಸಮಾಧಾನ ಬೆಳೆದದ್ದು ಅನಿರೀಕ್ಷಿತವಲ್ಲ. ಆ ಸಮಯದಲ್ಲಿ ಬ್ರಿಟನ್-ಜರ್ಮನಿಗಳು ಫ್ರೆಂಚರಿಗೆ ವಿರೋಧವಾಗಿ ಒಟ್ಟುಗೂಡಬಹುದಾಗಿತ್ತು. ಆದರೆ ವ್ಯಾಪಾರ ಪ್ರಪಂಚದಲ್ಲಿ ಬ್ರಿಟಿಷರಿಗೂ ಜರ್ಮನ್ನರಿಗೂ ಪೈಪೋಟಿ ಬೆಳೆಯುತ್ತಲೇ ಇತ್ತು. ಬ್ರಿಟಿಷರ ನೌಕಾಪ್ರಾಬಲ್ಯ ತಮ್ಮ ಅಭಿವೃದ್ಧಿಗೆ ಅಡ್ಡಿಯೆಂದು ಜರ್ಮನರು ಭಾವಿಸಿಕೊಂಡು ತಾವೂ ಹಡಗುಪಡೆಯನ್ನು ಬಲಪಡಿಸಿಕೊಳ್ಳುತ್ತಿದ್ದರು. 19ನೆಯ ಶತಮಾನದ ಕಡೆಕಡೆಗೆ ಬ್ರಿಟಿಷರೂ ಜರ್ಮನ್ನರೂ ಪೈಪೋಟಿಯ ಮೇಲೆ ಹಡಗುಗಳನ್ನು ಕಟ್ಟಿಕೊಳ್ಳುತ್ತಿದ್ದರು. 1904ರಲ್ಲಿ ಬ್ರಿಟಿಷರು ತಮ್ಮ ಪ್ರಧಾನ ನೌಕಾಬಲವನ್ನು ಭೂಮಧ್ಯಸಮುದ್ರದಿಂದ ಸಾಗಿಸಿ ಜರ್ಮನಿಗೆದುರಾಗಿ ಉತ್ತರ ಸಮುದ್ರದಲ್ಲಿಟ್ಟುಕೊಂಡರು.
  • ದೂರಪ್ರಾಚ್ಯದಲ್ಲಿ ಜಪಾನಿಗೂ ರಷ್ಯಕ್ಕೂ ವಿರಸ ಉಂಟಾಯಿತು. ಜಪಾನಿನೊಡನೆ ಯುದ್ಧಮಾಡುತ್ತ ರಷ್ಯದವರು ಪುರ್ವಕ್ಕೆ ಮುಖಮಾಡಿಕೊಂಡಿದ್ದಾಗ ಜರ್ಮನ್ನರು ತಮ್ಮೊಡನೆ ಜಗಳ ತೆಗೆಯಬಹುದೆಂದು ಫ್ರೆಂಚರಿಗೆ ಭಯ. ಆದ್ದರಿಂದ ಫ್ರೆಂಚರು ಬ್ರಿಟಿಷರೊಂದಿಗೆ ಮೈತ್ರಿ ಬೆಳೆಸಿದರು. ಸಾಮ್ರಾಜ್ಯ ಸಂಪಾದನೆಯ ಪೈಪೋಟಿಯಲ್ಲಿ ಫ್ರೆಂಚರು ಬ್ರಿಟಿಷರಿಗೆ ಅನುಕೂಲರಾಗಿಯೇ ವರ್ತಿಸಿದ್ದರು. ಇವರ ನಡುವೆ ಸ್ನೇಹ ಬೆಳೆಯಿತು. ಮೊರಾಕೋ ಪ್ರಾಂತ್ಯದಲ್ಲಿ ಫ್ರೆಂಚರ ಪ್ರಾಬಲ್ಯವನ್ನೂ ಈಜಿಪ್ಟಿನಲ್ಲಿ ಬ್ರಿಟಿಷರ ಪ್ರಾಬಲ್ಯವನ್ನೂ ಆ ರಾಷ್ಟ್ರಗಳೂ ಪರಸ್ಪರವಾಗಿ ಒಪ್ಪಿದವು. 1907ರಲ್ಲಿ ರಷ್ಯದವರು ಕೂಡ ಬ್ರಿಟಿಷರೊಂದಿಗೆ ಮೈತ್ರಿ ಬೆಳೆಸಿದರು. ಹೀಗೆ ಬ್ರಿಟನ್, ಫ್ರಾನ್ಸ್‌ ಮತ್ತು ರಷ್ಯಗಳದು ಒಂದು ವ್ಯೂಹವಾಯಿತು.
  • ಜರ್ಮನ್ ಚಕ್ರವರ್ತಿ 2ನೆಯ ವಿಲಿಯಂ ಮಹತ್ವಾಕಾಂಕ್ಷಿ. ಆ ರಾಷ್ಟ್ರದಲ್ಲಿ ಸೈನ್ಯಮುಖ್ಯಸ್ಥರು ಅತ್ಯಂತ ಪ್ರಬಲರಾಗಿದ್ದರು. ಆಲ್ಸೇಸ್-ಲೊರೋನ್ ವಿಷಯದಲ್ಲಿ ಮಾತ್ರವಲ್ಲದೆ ಆಫ್ರಿಕದಲ್ಲೂ ಜರ್ಮನಿಗೆ ಫ್ರಾನ್ಸಿನ ಹಗೆತನವಿತ್ತು. ಸಾಮ್ರಾಜ್ಯ ಕಟ್ಟುವ ಆಸೆ ಹೆಚ್ಚಾಗಿಯೇ ಇತ್ತು. ಜರ್ಮನಿಯ ಕೈಸóರ್ ತುರ್ಕಿಯ ಸುಲ್ತಾನನ ಸ್ನೇಹ ಕಟ್ಟಿಕೊಂಡು ಬರ್ಲಿನ್ ನಗರದಿಂದ ತುರ್ಕಿಯ ಮೂಲಕ ಬಾಗ್ದಾದಿನವರೆಗೆ ರೈಲುದಾರಿ ಹಾಕಿಸುವ ಸಂಧಾನದಲ್ಲಿ ತೊಡಗಿದ್ದ. ಜರ್ಮನ್ ವಶದಲ್ಲಿರುವ ಈ ರೈಲುದಾರಿಯಿಂದ ಅದು ಸಮುದ್ರಮಾರ್ಗಗಳನ್ನು ತಪ್ಪಿಸಿಕೊಂಡು ಭೂಮಾರ್ಗಗಳ ಮೂಲಕವೆ ವ್ಯಾಪಾರ ನಡೆಸಬಹುದೆಂಬುದು ಕೈಸóರನ ಆಲೋಚನೆ. ತುರ್ಕಿಯಲ್ಲಿ ಜರ್ಮನ್ನರ ಪ್ರವೇಶ ಬ್ರಿಟಿಷರಿಗೆ ಸರಿಬೀಳಲಿಲ್ಲ. ಹಿಂದೆ ರಷ್ಯದವರು ಪ್ರಬಲರಾಗಿ ತುರ್ಕಿಯನ್ನು ವಶಪಡಿಸಿಕೊಂಡಿದ್ದಿದ್ದರೆ ಯಾವ ಅಪಾಯ ತೋರಬಹುದಾಗಿತ್ತೋ ಅದೇ ಅಪಾಯ ಜರ್ಮನ್ನರಿಂದ ಸಂಭವಿಸುವಂತೆ ಆಯಿತು. ತುರ್ಕಿಯಲ್ಲಿ ಜರ್ಮನ್ನರು ಪ್ರಬಲರಾಗುವ ಅಂಶ ರಷ್ಯದವರಿಗೂ ಅನಿಷ್ಟವಾಗಿತ್ತು.
  • 20ನೆಯ ಶತಮಾನದ ಆದಿಯಲ್ಲಿ ಈ ರೀತಿ ಐರೋಪ್ಯ ರಾಷ್ಟ್ರಗಳಲ್ಲಿ ಎರಡು ಭಾರಿ ವ್ಯೂಹಗಳಾಗಿದ್ದು ಪ್ರತಿ ರಾಷ್ಟ್ರದವರೂ ತಮ್ಮ ಯೋಗ್ಯತೆ ಮೀರಿ ಯುದ್ಧಕ್ಕೆ ಅಣಿಮಾಡಿಕೊಳ್ಳುತ್ತಿದ್ದರು. ಒಬ್ಬರ ಮೇಲೊಬ್ಬರಿಗೆ ಅತೀವ ಸಂಶಯ, ಭಯ, ಜಗಳಕ್ಕೆ ಕಾರಣ ತೋರಿದೊಡನೆ ಎಲ್ಲರೂ ಸಭೆ ಸೇರಿ ಇತ್ಯರ್ಥ ಮಾಡಿಕೊಳ್ಳುವ ಪ್ರಯತ್ನ ನಡೆದರೂ ಅದು ಫಲದಾಯಕವಾಗಿ ಮುಗಿಯುತ್ತಿರಲಿಲ್ಲ. ಬಾಲ್ಕನ್ ಕ್ಷೇತ್ರಗಳ ವಿಷಯದಲ್ಲಿ ಆಸ್ಟ್ರಿಯಕ್ಕೂ ರಷ್ಯಕ್ಕೂ ಹಗೆತನವಿತ್ತು. ಆಲ್ಸೇಸ್-ಲೊರೇನ್ ಮತ್ತು ಉತ್ತರ ಆಫ್ರಿಕಗಳ ವಿಚಾರದಲ್ಲಿ ಜರ್ಮನಿಯೂ ಫ್ರಾನ್ಸೂ ವೈರಿಗಳು, ಕೈಗಾರಿಕೆ ವ್ಯಾಪಾರಗಳಲ್ಲಿಯೂ ನೌಕಾಬಲ ರಚನೆಯಲ್ಲಿಯೂ ಜರ್ಮನಿಯೂ ಬ್ರಿಟನ್ನೂ ವಿರೋಧಿಗಳು. ಹೀಗಿರುವಲ್ಲಿ ಯಾವ ಘಟನೆಯಿಂದಲೂ ಕದನ ಉದ್ಭವಿಸುವ ಪರಿಸ್ಥಿತಿಯಿತ್ತು. 20ನೆಯ ಶತಮಾನದ ಆದಿ ಭಾಗವೆಲ್ಲವೂ ಯುದ್ಧ ಪ್ರಾರಂಭವಾಗುವ ಮೊದಲು ಪ್ರತಿಕಕ್ಷಿಗಳು ನಡೆಸಬಹುದಾದ ದೃಷ್ಟಿ ಯುದ್ಧದಂತಿತ್ತು.
  • 1904ರಲ್ಲಿ ಬ್ರಿಟನ್ ಮತ್ತು ಫ್ರಾನ್ಸ್‌ಗಳ ನಡುವೆ ಮೈತ್ರಿ ಏರ್ಪಟ್ಟಾಗ ಫ್ರೆಂಚರಿಗೆ ಮೊರಾಕೋ ಸೇರಬಹುದೆಂದು ಬ್ರಿಟಿಷರೊಪ್ಪಿದರಷ್ಟೆ. ಆದರೆ ಆ ಪ್ರಾಂತ್ಯದಲ್ಲಿ ಸ್ಪೇನಿಗೂ ಜರ್ಮನಿಗೂ ಆಸೆಯಿತ್ತು. ಟಾಂಜಿಯಾರಿನಲ್ಲಿ ಜರ್ಮನ್ ಕೈಸóರ್ ಸ್ವತಃ ಬಂದಿದ್ದು ಜರ್ಮನ್ನರಿಗೆ ಅಲ್ಲಿ ಪ್ರದೇಶ ಲಾಭವಾಗಬೇಕೆಂಬುದನ್ನು ಸ್ಪಷ್ಟಪಡಿಸಿದ. ಮೊರಾಕೋ ಪ್ರಾಂತ್ಯದ ಇತ್ಯರ್ಥಕ್ಕಾಗಿ ಐರೋಪ್ಯರ ಸಮ್ಮೇಳನ ನಡೆಯಲೆಂಬುದು ಅವನ ಸೂಚನೆ. 1906ರಲ್ಲಿ ಅಲ್ಲಿಗೆ ಫ್ರಾನ್ಸು ಸೈನ್ಯ ಕಳುಹಿಸಿತು. ಆಗ ಕೈಸóರನೂ ಅಲ್ಲಿಗೆ ಜರ್ಮನ್ ಯುದ್ಧದ ಹಡಗೊಂದನ್ನು ಕಳುಹಿಸಿದ. ಇವುಗಳ ನಡುವೆ ಯುದ್ಧ ಸಂಭವಿಸುವ ಪರಿಸ್ಥಿತಿ ಏರ್ಪಟ್ಟಿತು. ಆದರೆ ಫ್ರೆಂಚರು ಕಾಂಗೋಪ್ರದೇಶದಲ್ಲಿ ಜರ್ಮನ್ನರಿಗೆ ಸ್ವಲ್ಪ ಭಾಗ ಬಿಟ್ಟುಕೊಟ್ಟದ್ದರಿಂದ ಹೊಡೆದಾಟವಾಗುವುದು ತಪ್ಪಿತು.
  • ಯುರೋಪಿನ ರಾಜ್ಯಗಳಲ್ಲಿ ವಸಾಹತುಗಳಿಗಾಗಿ ನಡೆದ ಈ ಪೈಪೋಟಿಗೆ ಆರ್ಥಿಕ ಕ್ಷೇತ್ರದಲ್ಲಾದ ಕ್ರಾಂತಿಯೆ ಮುಖ್ಯವಾದ ಕಾರಣ. 19ನೆಯ ಶತಮಾನದ ಕೊನೆಯ ಮತ್ತು 20ನೆಯ ಶತಮಾನದ ಆದಿಭಾಗದ ಇತಿಹಾಸವೆಲ್ಲ ಐರೋಪ್ಯ ರಾಷ್ಟ್ರಗಳು ಮಾರುಕಟ್ಟೆಗಳಿಗಾಗಿ, ಕಚ್ಚಾಪದಾರ್ಥಗಳ ಪುರೈಕೆಗಾಗಿ, ಹೆಚ್ಚಿನ ಬಂಡವಾಳವನ್ನು ರೂಢಿಸುವ ಸಲುವಾಗಿ, ಹೆಚ್ಚಿನ ಜನಸಂಖ್ಯೆಯನ್ನು ರವಾನಿಸುವುದಕ್ಕಾಗಿ ವಸಾಹತುಗಳನ್ನು ಕಟ್ಟುವುದರಲ್ಲಿ ನಡೆಸಿದ ಪೈಪೋಟಿಗಳಿಂದ ತುಂಬಿದೆ. ಐರೋಪ್ಯ ರಾಷ್ಟ್ರಗಳು ಆಫ್ರಿಕವನ್ನು ತಮ್ಮತಮ್ಮಲ್ಲೆ ಹಂಚಿಕೊಂಡವು. ಏಷ್ಯ ಮತ್ತು ಮಧ್ಯಪೂರ್ವದ ರಾಷ್ಟ್ರಗಳಿಗೂ ಐರೋಪ್ಯರ ವಸಾಹತು ಪೈಪೋಟಿ ಹಬ್ಬಿತು. ಇಂಥ ಹತೋಟಿಯಿಂದ ರಾಷ್ಟ್ರ-ರಾಷ್ಟ್ರಗಳಲ್ಲಿ ತಿಕ್ಕಾಟ ಹೆಚ್ಚಾಯಿತು. ಇಂಗ್ಲೆಂಡ್ ಮತ್ತು ಜರ್ಮನಿಗಳ ಮಧ್ಯೆ ವೈಮನಸ್ಯ ಬೆಳೆಯಲು ಈ ಪೈಪೋಟಿಯೂ ಒಂದು ಮುಖ್ಯ ಕಾರಣ. ಆಸ್ಟ್ರಿಯ-ಹಂಗರಿ ಮತ್ತು ರಷ್ಯಗಳ ನಡುವಣ ವಾಣಿಜ್ಯ ಪೈಪೋಟಿಯೂ ರಾಜಕೀಯ ದ್ವೇಷವಾಗಿ ಪರಿವರ್ತನೆಗೊಂಡಿತು. ಇಟಲಿ ಮತ್ತು ಆಸ್ಟ್ರಿಯಗಳ ನಡುವೆ ಇದೇ ಕಾರಣದಿಂದ ಮನಸ್ತಾಪ ಬೆಳೆಯಿತು.
  • 1980ರ ತರುವಾಯ ಪ್ರತಿವರ್ಷವೂ ಇಂಗ್ಲೆಂಡಿನಲ್ಲಿ ಜರ್ಮನಿಯ ವಿರುದ್ಧ ಭಯ ಹೆಚ್ಚಾಯಿತು. ಜರ್ಮನಿ ಪ್ರಪಂಚದ ವಾಣಿಜ್ಯ ಮತ್ತು ವ್ಯಾಪಾರಕ್ಷೇತ್ರಗಳಲ್ಲಿ ತನ್ನನ್ನು ಹಿಂದೆ ಹಾಕಬಹುದೆಂಬ ಭಯ ಇಂಗ್ಲೆಂಡಿಗೆ ಇತ್ತು. 1900 ರಿಂದ 1914ರ ವರೆಗಿನ ಕಾಲದಲ್ಲಿ ಬ್ರಿಟನಿನಲ್ಲಿ ಜರ್ಮನಿಯ ಬಗ್ಗೆ ಹೊರಡಿಸಿದ ಅನೇಕ ಹೇಳಿಕೆಗಳಲ್ಲಿ ಈ ಭಯ ಎದ್ದು ಕಾಣುತ್ತದೆ. ಬ್ರಿಟನಿನ ವ್ಯಾಪಾರಿವರ್ಗದವರೂ ಕೈಗಾರಿಕೋದ್ಯಮಿಗಳೂ ಜರ್ಮನಿಯ ಪ್ರಭಾವವನ್ನು ಕುಗ್ಗಿಸುವ ದಿಸೆಯಲ್ಲಿ ತಮ್ಮ ಸರ್ಕಾರ ಯಾವ ಕ್ರಮ ಕೈಗೊಂಡರೂ ಬೆಂಬಲ ನೀಡಲು ಸಿದ್ಧರಿದ್ದರು.
  • ಶಸ್ತ್ರಾಸ್ತ್ರಗಳ ಪೈಪೋಟಿಯೂ ಮಹಾಯುದ್ಧಕ್ಕೆ ಒಂದು ಪ್ರಬಲ ಕಾರಣವೆನ್ನಬಹುದು. ಯುರೋಪಿನ ರಾಷ್ಟ್ರಗಳಲ್ಲಿ ಏರ್ಪಟ್ಟಿದ್ದ ಪರಸ್ಪರ ವೈಷಮ್ಯ ಮತ್ತು ಸಂಶಯಗಳು. ಯುದ್ಧಸನ್ನಾಹಕ್ಕೆ ಎಡೆಮಾಡಿಕೊಟ್ಟು ಶಸ್ತ್ರಾಸ್ತ್ರಗಳ ಪೈಪೋಟಿಗೆ ಕಾರಣವಾಗಿದ್ದುವು. ಇದರಿಂದ ಪ್ರತಿಯೊಂದು ರಾಷ್ಟ್ರವೂ ಸೇನಾಸಿದ್ಧತೆಯಲ್ಲಿ ಮತ್ತು ವಿನಾಶಕಾರಕ ಶಸ್ತ್ರಾಸ್ತ್ರಗಳನ್ನು ತಯಾರಿಸುವುದರಲ್ಲಿ ತೊಡಗುವಂತಾಯಿತು. 1868 ರಿಂದ 1913ರವರೆಗೆ 45 ವರ್ಷಗಳ ಅವಧಿಯಲ್ಲಿ ಪ್ರಪಂಚದ ರಾಷ್ಟ್ರಗಳು ಶಸ್ತ್ರಾಸ್ತ್ರಗಳಿಗಾಗಿ ಮಾಡುತ್ತಿದ್ದ ವೆಚ್ಚ 460 ಮಿಲಿಯನ್ ಡಾಲರುಗಳಿಂದ 2,531 ಡಾಲರುಗಳಿಗೆ ಏರಿತು. 20ನೆಯ ಶತಮಾನದ ಆದಿ ಭಾಗದಲ್ಲಿ ಇಡೀ ಯುರೋಪೇ ಅಪರಿಮಿತ ಸೇನೆಯ ಬೀಡಾಗಿ ಮಾರ್ಪಟ್ಟಿತೆನ್ನಬಹುದು.
  • ಅಂತಾರಾಷ್ಟ್ರೀಯ ಪ್ರಶ್ನೆಗಳನ್ನು ಶಾಂತಿಯುತವಾಗಿ, ಸಂಧಾನದ ಮೂಲಕ ಬಗೆಹರಿಸಲು ಶಕ್ತವಾದ ಅಂತಾರಾಷ್ಟ್ರೀಯ ಸಂಸ್ಥೆಯೊಂದು ಇಲ್ಲದೆ ಹೋದುದು ಕೂಡ ಒಂದನೆಯ ಮಹಾಯುದ್ಧ ಪ್ರಾರಂಭವಾಗಲು ಒಂದು ಕಾರಣ. ಗುಟ್ಟಿನ ರಾಜತಾಂತ್ರಿಕ ಒಡಂಬಡಿಕೆಗಳಿಗೆ ಆಗಿನ ಅನಿಶ್ಚಿತತೆಯೆ ಮೂಲ. ಒಂದು ದೇಶಕ್ಕೂ ಇನ್ನೊಂದು ದೇಶಕ್ಕೂ ನಡುವೆ ಜಾರಿಯಲ್ಲಿದ್ದ ಒಪ್ಪಂದಗಳ ಅರಿವು ಆ ದೇಶಗಳ ಮಂತ್ರಿಗಳಲ್ಲೇ ಅನೇಕರಿಗೆ ಗೊತ್ತಿರುತ್ತಿರಲಿಲ್ಲ; ಶಾಸನ ಸಭೆಗಳಿಗೂ ಅವುಗಳ ಅರಿವಿರುತ್ತಿರಲಿಲ್ಲ. ಕಳ್ಳತನ, ಮೋಸ, ಲಂಚಗುಳಿತನ, ಕಳ್ಳಕೈಬರಹ ಮೊದಲಾದವೇ ಪ್ರಪಂಚದ ಪ್ರತಿಯೊಂದು ವಿದೇಶಾಂಗ ಖಾತೆಯನ್ನೂ ತುಂಬಿದ್ದುವು.
  • 1914ರಲ್ಲಿ ಯುದ್ಧದ ಮುನ್ನಾದಿನಗಳಲ್ಲಿ ಯುರೋಪಿನಲ್ಲಿದ್ದ ಪರಿಸ್ಥಿತಿ ಇದು. ಇಡೀ ಖಂಡವೇ ಮದ್ದಿನ ಮನೆಯಾಗಿತ್ತು. ಯಾವುದೇ ಘಟನೆಯ ಒಂದು ಕಿಡಿ ಬಿದ್ದರೂ ಸಾಕು. ಅದು ಸ್ಫೋಟಿಸುವಂತಿತ್ತು.

ಭೂ ಯುದ್ಧ

ಬದಲಾಯಿಸಿ
  • 1914 ಜೂನ್ 28ರಂದು ಆಸ್ಟ್ರಿಯದ ರಾಜಕುಮಾರ ಫ್ರಾನ್ಸಿಸ್ ಫರ್ಡಿನೆಂಡ್ ಸರ್ಬಿಯದ ಸಾರಾಯೆವೂ ಪಟ್ಟಣದಲ್ಲಿ ಕೊಲೆಗೀಡಾದಾಗ ಆಸ್ಟ್ರಿಯ-ಹಂಗರಿ ಸರ್ಕಾರ ಸರ್ಬಿಯಕ್ಕೆ ಪ್ರತಿಭಟನೆ ಸಲ್ಲಿಸಿದ್ದಲ್ಲದೆ ಕೊಲೆಗೆ ಪರಿಹಾರವಾಗಿ ಅನೇಕ ಷರತ್ತುಗಳನ್ನು ಹಾಕಿತು. ರಷ್ಯದ ಸಲಹೆಯ ಮೇರೆಗೆ ಸರ್ಬಿಯ ಅವುಗಳಲ್ಲಿ ಎರಡನ್ನು ಬಿಟ್ಟು ಉಳಿದವನ್ನೆಲ್ಲ ಒಪ್ಪಿಕೊಂಡಿತು. ಇದರಿಂದ ಆಸ್ಟ್ರಿಯ-ಹಂಗರಿಗೆ ತೃಪ್ತಿಯಾಗಲಿಲ್ಲ. ಅದು ಸರ್ಬಿಯದ ಆಕ್ರಮಣವನ್ನಾರಂಭಿಸಿತು. ಸರ್ಬಿಯದ ಪಕ್ಷಕ್ಕೆ ರಷ್ಯವೂ ಫ್ರಾನ್ಸೂ ಆಸ್ಟ್ರಿಯದ ಕಡೆಗೆ ಜರ್ಮನಿಯೂ ಸೇರಿ ಯುದ್ಧದಲ್ಲಿ ತೊಡಗಿದುವು. ಪೂರ್ವ-ಪಶ್ಚಿಮ ಗಳೆರಡರಲ್ಲೂ ಯುದ್ಧ ನಡೆಸುವ ಉದ್ದೇಶದಿಂದ ಜರ್ಮನ್ ಸೈನ್ಯ ಗಡಿ ದಾಟಿತು.
  • ಫ್ರಾನ್ಸಿನೊಡನೆ ಯುದ್ಧ ಎಂದಾದರೂ ಒದಗುವುದೆಂದು ತಿಳಿದಿದ್ದ ಜರ್ಮನಿಯ ಸೇನಾ ನಾಯಕರು ಯುದ್ಧದ ಪ್ರಾರಂಭದಲ್ಲೇ ಬೆಲ್ಜಿಯಂ ಮೂಲಕ ತಮ್ಮ ಸೈನ್ಯ ಕಳಿಸಿ ಉತ್ತರದಿಂದ ಮುತ್ತುವ ಯೋಜನೆ ಮಾಡಿಕೊಂಡಿದ್ದರು. ಅದರಂತೆ ಜರ್ಮನ್ ಸೈನ್ಯಗಳು ಬೆಲ್ಜಿಯಂ ದೇಶದಲ್ಲಿ ನುಗ್ಗಿದುವು. ಫ್ರೆಂಚರ ಸಹಾಯಕ್ಕೆ ಹೊರಡುವುದು ಕರ್ತವ್ಯವಾಗಿದ್ದರೂ ಬ್ರಿಟಿಷರು ನಿಧಾನಿಸಿದ್ದರು. ಬೆಲ್ಜಿಯಂ ರಾಜ್ಯ ಜರ್ಮನಿಯ ಪಾದಾಕ್ರಾಂತವಾದಾಗ ಬೆಲ್ಜಿಯಂ ಸಮುದ್ರತೀರ ಜರ್ಮನಿಗೆ ವಶವಾಗುವ ಸಂಭವ ಕಂಡಿತು. ಹಿಂದಿನಿಂದಲೂ ಆ ತೀರಪ್ರದೇಶ ಯಾವ ಪ್ರಬಲ ಐರೋಪ್ಯ ರಾಷ್ಟ್ರಕ್ಕೂ ಸೇರದಿರಬೇಕೆಂದು ಬ್ರಿಟಿಷರ ಉದ್ದೇಶ. ಬೆಲ್ಜಿಯಂ ರಾಜ್ಯದ ತಾಟಸ್ಥ್ಯವನ್ನೆಲ್ಲರೂ ಗೌರವಿಸುವುದಾಗಿ ನಾಲ್ಕನೆಯ ವಿಲಿಯಂ ದೊರೆಯ ಕಾಲದಲ್ಲಿ ವಾಗ್ದಾನವಾಗಿತ್ತು. ಜರ್ಮನ್ನರು ಆ ವಾಗ್ದಾನವನ್ನು ಮುರಿದರೆಂದು ಬ್ರಿಟಿಷರು ಆಗಸ್ಟ್‌ ತಿಂಗಳಲ್ಲಿ ಯುದ್ಧಕ್ಕೆ ಸೇರಿದರು. ರಾಜಕಾರಣಿ ಸರ್ ಎಡ್ವರ್ಡ್ ಗ್ರೇ ಕಾಮನ್ಸ್‌ ಸಭೆಯಲ್ಲಿ ಭಾಷಣಮಾಡಿ ಆಗಿನ ಪರಿಸ್ಥಿತಿಯನ್ನು ವಿವರಿಸಿ ಯುದ್ಧಕ್ಕೆ ಪಾರ್ಲಿಮೆಂಟಿನ ಒಪ್ಪಿಗೆ ಪಡೆದ.
  • ಯುದ್ಧ ಮುಂದುವರಿದಂತೆ ಅನೇಕ ರಾಷ್ಟ್ರಗಳು ಇದರ ಸುಳಿಯಲ್ಲಿ ಸಿಲುಕಿದುವು. ಬ್ರಿಟನ್ ಯುದ್ಧಕ್ಕೆ ಕಾಲಿಟ್ಟ ಸ್ವಲ್ಪ ಕಾಲದಲ್ಲೇ ಜಪಾನು ಜರ್ಮನಿಗೆದುರಾಗಿ ಯುದ್ಧದಲ್ಲಿ ತೊಡಗಿತು. 1915ರಲ್ಲಿ ಇಟಲಿಯೂ ಜರ್ಮನಿಗೆ ವಿರೋಧವಾಗಿ ಯುದ್ಧವನ್ನಾರಂಭಿಸಿತು. 1916ರಲ್ಲಿ ಪೋರ್ಚುಗಲ್, ರೊಮೇನಿಯ, ಗ್ರೀಸ್ಗಳೂ 1917ರಲ್ಲಿ ಅಮೆರಿಕದ ಸಂಯುಕ್ತಸಂಸ್ಥಾನವೂ ಜರ್ಮನಿಗೆ ಹಗೆಗಳಾಗಿ ಯುದ್ಧದಲ್ಲಿ ಸೇರಿದುವು. ತರುವಾಯ ಮಿತ್ರರಾಷ್ಟ್ರಗಳ ಗುಂಪಿಗೆ (ಬ್ರಿಟನ್ ಮತ್ತು ಫ್ರಾನ್ಸ್‌) ಅಮೆರಿಕದ ಇನ್ನೂ ಹಲವಾರು ರಾಷ್ಟ್ರಗಳೂ ಸೇರಿದುವು. ಜರ್ಮನಿಯ ಪಕ್ಷವನ್ನು 1914ರಲ್ಲಿ ತುರ್ಕಿಯೂ 1915ರಲ್ಲಿ ಬಲ್ಗೇರಿಯವೂ ಸೇರಿಕೊಂಡುವು. ಕ್ಯೂಬ ಮತ್ತು ಪನಾಮಗಳು ಜರ್ಮನಿಯ ಮೇಲೆ 7 ಏಪ್ರಿಲ್ 1917ರಲ್ಲಿ ಯುದ್ಧ ಘೋಷಿಸಿದುವು. ಲ್ಯಾಟಿನ್ ಅಮೆರಿಕದಲ್ಲಿ ಮೊದಲು ಯುದ್ಧಕ್ಕೆ ಸೇರಿದ ದೇಶವೆಂದರೆ ಪನಾಮ. ಸಂಯುಕ್ತ ಸಂಸ್ಥಾನ ಯುದ್ಧ ಘೋಷಿಸಿದ ಮಾರನೆಯ ದಿವಸವೇ ಯುದ್ಧ ಘೋಷಿಸಿತು. ಗ್ರೀಸ್, ಸಯಾಂ (ಈಗಿನ ಥೈಲೆಂಡ್), ಲೈಬೀರಿಯ, ಚೀನ ಮತ್ತು ಬ್ರೆಜಿ಼ಲ್ ದೇಶಗಳು ಜರ್ಮನಿ ಮತ್ತು ಅದರ ಮಿತ್ರರಾಷ್ಟ್ರಗಳ ಮೇಲೆ 1917ರಲ್ಲಿ ಯುದ್ಧ ಘೋಷಿಸಿದುವು. 1918ರಲ್ಲಿ ಗ್ವಾಟೆಮಾಲ, ನಿಕರಾಗ್ವ, ಕಾಸ್ಟರೀಕ, ಹೇಟಿ ಮತ್ತು ಹಾಂಡುರಾಸ್ ದೇಶಗಳು ಮಿತ್ರರಾಷ್ಟ್ರಗಳ ಗುಂಪಿಗೆ ಸೇರಿದುವು. ಒಟ್ಟು ಜರ್ಮನಿ ಮತ್ತು ಅದರ ಮಿತ್ರರಾಷ್ಟ್ರಗಳ ಎದುರಿಗೆ ಮಹಾಯುದ್ಧದಲ್ಲಿ ನಿಂತ ರಾಷ್ಟ್ರಗಳ ಸಂಖ್ಯೆ 23ಕ್ಕೆ ಏರಿತು. ಇವುಗಳ ವಿರುದ್ಧವಾಗಿದ್ದವು 4 ರಾಷ್ಟ್ರಗಳು ಮಾತ್ರ. ಇಂಥ ಯುದ್ಧ ಇತಿಹಾಸದಲ್ಲಿ ಹಿಂದೆಂದೂ ಆಗಿರಲಿಲ್ಲ. ಇಷ್ಟೊಂದು ರಾಷ್ಟ್ರಗಳು ಒಂದೇ ಯುದ್ಧದಲ್ಲಿ ಭಾಗವಹಿಸಿದ್ದು ಅದೇ ಮೊದಲು. ಸಂಖ್ಯೆಯ ದೃಷ್ಟಿಯಿಂದಲೂ ಪಕ್ಷಗಳ ಬಲಾಬಲಗಳ ದೃಷ್ಟಿಯಿಂದಲೂ ಇದೊಂದು ಮಹಾಯುದ್ಧ. ಇದರ ಪರಿಣಾಮಗಳಂತೂ ಈ ಶತಮಾನದ ವಿಶ್ವದ ಇತಿಹಾಸದಲ್ಲಿ ವೈವಿಧ್ಯಪುರ್ಣವಾಗಿವೆ; ಭೀಕರವಾಗಿವೆ. ಈ ಯುದ್ಧ ಹಲವು ವಿಧದಲ್ಲಿ ಮಾನವ ಸಂತತಿಗೆ ಪಾಠ ಕಲಿಸುವ ಉದಾಹರಣೆಯಾಗಿದೆ.
  • ಒಂದನೆಯ ಮಹಾಯುದ್ಧದ ರೀತಿಗೂ ಹಳೆಯ ಕಾಲದ ಯುದ್ಧಗಳ ರೀತಿಗೂ ಬಹಳ ವ್ಯತ್ಯಾಸಗಳಿದ್ದುವು. ಯುದ್ಧವೆಂಬುದು ಹಲಕೆಲವು ಸೈನ್ಯಗಳು ಎದುರು ಬದುರಾಗಿ ಹೋರಾಡುವುದಲ್ಲ; ರಾಷ್ಟ್ರ-ರಾಷ್ಟ್ರಗಳು ಸರ್ವ ವಿಧಗಳಲ್ಲೂ ಹಗೆತನ ಸಾಧಿಸುತ್ತ ಪರಸ್ಪರವಾಗಿ ನಾಶಗೊಳಿಸುವುದಾಯಿತು. ಯುದ್ಧದ ವೆಚ್ಚ ಅಪರಿಮಿತ. ಆದ್ದರಿಂದ ಯುದ್ದಕ್ಕೆ ತೊಡಗಿದ ರಾಷ್ಟದಲ್ಲಿ ತೆರಿಗೆಗಳು ಮಾತ್ರವಲ್ಲದೆ ಅವುಗಳ ಸಾಲಗಳೂ ಏರುತ್ತ ಹೋದುವು. ಆಯುಧ ಪ್ರಯೋಗದಲ್ಲಿಯೂ ದೊಡ್ಡ ವ್ಯತ್ಯಾಸ ತೋರಿತು. ಶಾಸ್ತ್ರಜ್ಞಾನ ಹೆಚ್ಚಿದಂತೆ ಬಂದ ಯಂತ್ರಾಯುಧಗಳು ಭಯಂಕರವಾದುವು. 20ನೆಯ ಶತಮಾನದ ಅದಿಯಲ್ಲಿ ವಿರಾಡ್ರೂಪದಿಂದ ಪ್ರಜ್ವಲಿಸಿದ ಒಂದನೆಯ ಮಹಾಯುದ್ಧದಲ್ಲಿ ಭಯಂಕರವಾದ ಅಸ್ತ್ರಗಳು ಮೊಟ್ಟಮೊದಲ ಬಾರಿಗೆ ಪ್ರಯೋಗಿಸಲ್ಪಟ್ಟವು. ಈ ಯುದ್ಧದಲ್ಲಿ ಆಕಾಶಗಾಮಿಗಳೂ ಜಲಾಂತರ್ಗಾಮಿಗಳೂ ಆದ ಯಂತ್ರಗಳಲ್ಲದೆ ಬಾಂಬು, ವಿಷವಾಯು, ಕೃತ್ರಿಮಮೋಡ, ಜಲಜ್ವಾಲೆ, ಟ್ಯಾಂಕು ಮುಂತಾದ ಅನೇಕಾನೇಕ ರಾಕ್ಷಸ ವಿಧಾನಗಳು ಪ್ರಯೋಗವಾದವು. ಒಂದನೆಯ ಮಹಾಯುದ್ಧ ಪ್ರಪಂಚದ ಇತಿಹಾಸದಲ್ಲಿ ಮತ್ತೊಂದು ಯುಗವನ್ನೇ ಪ್ರಾರಂಭಿಸಿತು ಎಂದು ಹೇಳಬಹುದು. ಯುದ್ಧದ ರೀತಿನೀತಿಗಳಲ್ಲೇ ಕ್ರಾಂತಿಕಾರಕ ಬದಲಾವಣೆಗಳಾದುವು.
  • 1914ರಲ್ಲಿ ಯುದ್ಧ ಪ್ರಾರಂಭವಾದಾಗ ಜರ್ಮನ್ನರು ಕೆಲವು ತಿಂಗಳುಗಳಲ್ಲಿ ಜಯ ಲಭಿಸಬಹುದೆಂದು ನಿರೀಕ್ಷಿಸಿದರು. ರಷ್ಯದ ಸೇನೆಗಳು ಒಟ್ಟುಗೂಡಿ ಓಡಾಡುವುದು ನಿಧಾನವಾದುದರಿಂದ ಜರ್ಮನ್ನರು ತಮಗೆ ಪೂರ್ವದ ಕಡೆಯಿಂದ ಆಪತ್ತು ತೋರಬಹುದೆಂದು ಚಿಂತಿಸುವ ಹಾಗಿರಲಿಲ್ಲ. ಫ್ರೆಂಚರು ರೋಷದಿಂದ ಯುದ್ಧ ನಡೆಸತಕ್ಕವರು. ಅದರೆ ಬೆಲ್ಜಿಯಂ ಮೂಲಕ ಫ್ರಾನ್ಸಿನ ವಾಯವ್ಯ ದಿಕ್ಕಿನಲ್ಲಿ ಮುತ್ತಿದರೆ ಫ್ರೆಂಚರು ಬೇಗನೆ ಸೋತರೆಂದು ಜರ್ಮನ್ನರು ಭಾವಿಸಲು ಕಾರಣವಿತ್ತು. ಜರ್ಮನ್ನರ ಯುದ್ಧ ಸನ್ನಾಹ ವಾಸ್ತವವಾಗಿ. ಅದ್ಭುತವಾಗಿತ್ತು. ರಷ್ಯದ ಸೈನ್ಯಗಳು ಒಟ್ಟುಗೂಡುವುದರೊಳಗಾಗಿ ಫ್ರಾನ್ಸಿನಲ್ಲಿ ವೇಗದಿಂದ ಮುತ್ತಿಗೆ ನಡೆಸಿ ಫ್ರೆಂಚರನ್ನು ಸೋಲಿಸಿ ತರುವಾಯ ರಷ್ಯವನ್ನು ಸೋಲಿಸುವ ಕ್ರಮವನ್ನು ಅವರು ಇಟ್ಟುಕೊಂಡರು. ಬ್ರಿಟಿಷರಿಗೆ ಐರ್ಲೆಂಡಿನಲ್ಲಿ ಅಂತರ್ಯುದ್ಧವೊದಗುವಂತಿದ್ದುದರಿಂದಲೂ ನೌಕಾಬಲವೇ ವಿಶೇಷವಾಗಿದ್ದುದರಿಂದಲೂ ಜರ್ಮನ್ನರಿಗೆ ಈ ಕಾರ್ಯಕ್ರಮವೂ ಬೇಗನೆ ಮುಗಿದೀತೆಂದು ತೋರಿತು.
  • ಜರ್ಮನ್ ಸೈನ್ಯಗಳು ಬೆಲ್ಜಿಯಂಗೆ ನುಗ್ಗಿ ಅಲ್ಲಿಂದ ಹೊರಟು ಲಿಯೇಷ್ ಮುಂತಾದ ಪಟ್ಟಣಗಳನ್ನು ಒಂದೊಂದಾಗಿ ಹಿಡಿದುವು. ಬೆಲ್ಜಿಯಂ ರಾಜ್ಯವನ್ನು ದಾಟಿ ಫ್ರಾನ್ಸಿನೊಳಗೆ ಜರ್ಮನ್ನರು ಪ್ರವೇಶಿಸುವ ವೇಳೆಗೆ ಫ್ರೆಂಚರು ಅತಿಕ್ಷಿಪ್ರವಾಗಿ ಸಿದ್ಧರಾಗಿ ಅವರನ್ನೆದುರಿಸಿದರು. ಬ್ರಿಟಿಷರು ಬೇಗನೆ ಯುದ್ಧಭೂಮಿಗೆ ಸೈನ್ಯ ಕಳುಹಿಸಿದರು. ಜರ್ಮನ್ನರು ನಿರೀಕ್ಷಿಸಿದಷ್ಟು ವೇಗದಲ್ಲಿ ಜಯಲಾಭವಾಗಿಲಿಲ್ಲ. ಅತ್ತ ರಷ್ಯನ್ನರೂ ಪುರ್ವ ಪ್ರಷ್ಯವನ್ನೂ ಮುತ್ತಲು ಎರಡು ದೊಡ್ಡ ಸೈನ್ಯಗಳನ್ನು ಕಳುಹಿಸಿದರು. ಆಗ ಜರ್ಮನರು ಫ್ರಾನ್ಸಿನಲ್ಲಿದ್ದ ತಮ್ಮ ಸೈನ್ಯಗಳಲ್ಲಿ ಎರಡು ಭಾಗಗಳನ್ನು ಅಲ್ಲಿಂದೆತ್ತಿ ಪೂರ್ವಕ್ಕೆ ಕಳುಹಿಸಬೇಕಾಯಿತು. ಈ ಕಾರಣದಿಂದ ಜರ್ಮನ್ ಸೈನ್ಯಗಳು ದುರ್ಬಲಗೊಂಡಿದ್ದಾಗ್ಯೂ ಅವು ಫ್ರಾನ್ಸಿನಲ್ಲಿ ನುಗ್ಗಿ ಪ್ಯಾರಿಸ್ ಕಡೆಗೆ ಹೊರಡುತ್ತಿದ್ದುವು. ಫ್ರೆಂಚ್ ಸರ್ಕಾರ ಪ್ಯಾರಿಸ್ ಬಿಟ್ಟು ಬಾರ್ಡೋ ಪಟ್ಟಣಕ್ಕೆ ಹೊರಟಿತು. ಮಾರ್ನ್ ನದಿಯ ಬಳಿ ಫ್ರೆಂಚರೂ ಬ್ರಿಟಿಷರೂ ಸೇರಿ ಜರ್ಮನ್ನರನ್ನು ತಡೆದು ಹಿಮ್ಮೆಟ್ಟಿಸಿದರು. ಹಿನ್ನಡೆದ ಜರ್ಮನ್ ಸೇನೆ ಏನ್ ನದಿಯ ಬಳಿ ನಿಂತು ಸಮುದ್ರತೀರದವರೆಗೂ ವ್ಯಾಪಿಸಿ, ಫ್ರಾನ್ಸಿಗೆ ಉತ್ತರದಲ್ಲಿ ಬೃಹದ್ರೂಪದ ಕೋಟೆ ಕಟ್ಟಿದಂತೆ ಕಂದಕಗಳನ್ನು ತೋಡಿ ಬೇಲಿ ಕಟ್ಟಿ ಬತ್ತೇರಿಗಳನ್ನಿಟ್ಟು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಬ್ರಿಟಿಷರೂ ಫ್ರೆಂಚರೂ ಜರ್ಮನ್ನರ ಎದುರಿಗೆ ತಾವೂ ಕಂದಕಗಳನ್ನು ತೋಡಿಕೊಂಡರು. ಎದುರುಬದುರಾಗಿ ಭಾರೀ ಸೈನ್ಯಗಳು ಈ ರೀತಿಯಾಗಿ ಹಳ್ಳಗಳನ್ನು ತೋಡಿಕೊಂಡು ದೀರ್ಘಕಾಲ ಕಳೆಯಬೇಕಾಗಿ ಬಂತು.
  • ಪೂರ್ವದಲ್ಲಿ ಪ್ರಷ್ಯವನ್ನು ಮುತ್ತಿದ ರಷ್ಯದ ಸೈನ್ಯವನ್ನು ಜರ್ಮನ್ ದಂಡನಾಯಕರಲ್ಲಿ ಪ್ರಸಿದ್ಧರಾದ ಹಿಂಡನ್ಬರ್ಗ್ ಮತ್ತು ಲೂಡೆನ್ಡಾರ್ಫ್ ಎದುರಿಸಿದರು. ಟಾನೆನ್ಬರ್ಗ ಕದನದಲ್ಲೂ ಮಸುರಿಯನ್ ಸರೋವರಗಳ ಬಳಿಯ ಹೋರಾಟದಲ್ಲೂ ರಷ್ಯ ಸೋತಿತು. ಇತರೆಡೆಗಳಲ್ಲಿ ರಷ್ಯನ್ನರು ಹಿಮ್ಮೆಟ್ಟಬೇಕಾಯಿತು. ಜರ್ಮನ್ನರು ಮುನ್ನಡೆದು ರಷ್ಯನ್ ಸಾಮ್ರಾಜ್ಯದೊಳಕ್ಕೆ ತಮ್ಮ ಸೈನ್ಯಗಳನ್ನು ನುಗ್ಗಿಸಿದರು. ಬಾಲ್ಟಿಕ್ ತೀರದಿಂದ ಕಾರ್ಪೇಥಿಯನ್ ಶ್ರೇಣಿಯವರೆಗಿರುವ ವಿಶಾಲ ಭೂಭಾಗದಲ್ಲಿ ಜರ್ಮನ್-ರಷ್ಯನ್ ಸೈನ್ಯಗಳು ಎದುರುಬದುರಾಗಿ ಹೊಂಚುತ್ತ ಹೋರಾಡುತ್ತಿರಬೇಕಾಯಿತು.
  • ಯುದ್ಧದ ಮೊದಲನೆಯ ವರ್ಷದಲ್ಲೇ ತುರ್ಕಿಯ ಸುಲ್ತಾನ ಜರ್ಮನಿಯ ಕಡೆ ಸೇರಿದ. ಆಗ ಬ್ರಿಟಿಷರು ತುರ್ಕಿಯನ್ನು ಎಲ್ಲಾದರೂ ಮುತ್ತುವ ಯೋಚನೆ ನಡೆಸಿದರು. ಡಾರ್ಡ್ನೆಲ್ಸ್‌ ಮಾರ್ಗವನ್ನು ವಶಪಡಿಸಿಕೊಂಡು ರಷ್ಯದೊಡನೆ ಸೇರಿಕೊಳ್ಳುವ ಉದ್ದೇಶದಿಂದ ಸಣ್ಣ ಪರ್ಯಾಯದ್ವೀಪವಾದ ಗ್ಯಾಲಿಪೋಲಿಯನ್ನು ಮುತ್ತುವುದು ಅವರ ಯೋಚನೆಯಾಗಿತ್ತು. ಭೂ ಜಲಸೇನೆಗಳು ಒಟ್ಟುಗೂಡಿ ಆ ಪ್ರದೇಶವನ್ನು ಮುತ್ತಿದುವು. ಆದರೆ ಜಯ ಲಭಿಸಲಿಲ್ಲ. ಸಲೋನಿಕ್ ಒಂದು ಮಾತ್ರ ವಶವಾಯಿತು. ಅದೇ ವೇಳೆಗೆ ರಷ್ಯನ್ನರು ಪೋಲೆಂಡನ್ನು ಜರ್ಮನ್ನರಿಗೊಪ್ಪಿಸಿ ಹಿಮ್ಮೆಟ್ಟಿದರು. ಜರ್ಮನ್ ಪಕ್ಷ ಸೇರಿಕೊಂಡ ಬಲ್ಗೇರಿಯ ರಾಷ್ಟ್ರ ಸರ್ಬಿಯನ್ನರ ಮೇಲೆ ಯುದ್ಧ ಹೂಡಿತು. ಸರ್ಬಿಯನ್ನರು ಜರ್ಮನಿ, ಆಸ್ಟ್ರಿಯ ಮತ್ತು ಬಲ್ಗೇರಿಯಗಳನ್ನು ಎದುರಿಸಲಾರದೆ ಅಡಗಿಹೋದರು.
  • 1915ರಲ್ಲಿ ಗ್ಯಾಲಿಪೋಲಿ ಮತ್ತು ಸರ್ಬಿಯಗಳಲ್ಲಿ ಬ್ರಿಟಿಷರ ಪಕ್ಷಕ್ಕೆ ಜಯವೊದಗಲಿಲ್ಲ. ಫ್ರಾನ್ಸಿನ ಉತ್ತರ ಭಾಗದಲ್ಲಿ ಕಂದಕಗಳ ಹೋರಾಟ ನಡೆಯುತ್ತಲೇ ಇತ್ತು. ಅತ್ತಕಡೆ ವೇಗದಿಂದ ಜಯ ಪಡೆಯಬೇಕೆಂದಿದ್ದ ಜರ್ಮನ್ನರ ಕಾರ್ಯಕ್ರಮಕ್ಕೆ ಅಡ್ಡಿಯೇನೋ ಆಯಿತು. ಆಯಿನ್ ನದಿಯ ಪಕ್ಕದಲ್ಲಿ ಜರ್ಮನ್ನರು ವ್ಯೂಹರಚನೆ ಮಾಡಿಕೊಂಡ ತರುವಾಯ ಸಮುದ್ರ ತೀರವನ್ನು ವಶಪಡಿಸಿಕೊಳ್ಳಲು ಯತ್ನಿಸಿ ಇಪ್ರೆಸ್ ಬಳಿ ಬ್ರಿಟಿಷರೊಡನೆ ಹೋರಾಟ ನಡೆಸಿದರು. ಬ್ರಿಟಿಷರು ಮುಂದೆ ನುಗ್ಗಿ ನವ್ಷಾಪೆಲ್ ಮತ್ತು ಲೂಸ್ಗಳಲ್ಲಿ ಜರ್ಮನ್ನರ ಮೇಲೆರಗಿದರು. ಫ್ರೆಂಚರು ಅದೇ ಸಮಯದಲ್ಲಿ ಷ್ಯಾಂಪೇನ್ ಮತ್ತು ಅರ್ಟ್ವಾ ಪ್ರದೇಶಗಳಲ್ಲಿ ಮುಂದೆ ನುಗ್ಗಿ ಆಕ್ರಮಿಸಲು ಪ್ರಯತ್ನಿಸಿದರು. ಉತ್ತರ ಸಮುದ್ರದಿಂದ ಸ್ವಿಟ್ಜರ್ಲೆಂಡ್ವರೆಗೆ ನೂರಾರು ಮೈಲಿಗಳ ಉದ್ದದ ಎದುರುಬದುರು ಕಂದಕಗಳಲ್ಲಿದ್ದ ಸೈನ್ಯಗಳು ಲಕ್ಷಗಟ್ಟಲೆ. ಪ್ರತಿಯೊಂದು ಗಜ ಮುಂದುವರಿಯಬೇಕಾದರೂ ಅನೇಕ ಪ್ರಾಣಗಳು ನಷ್ಟವಾಗುತ್ತಿದ್ದುವು. ಇಪ್ರೆಸ್ ಬಳಿ ಎರಡನೆಯ ಹೋರಾಟವಾದಾಗ ಜರ್ಮನ್ನರು ವಿಷವಾಯು ಪ್ರಯೋಗಿಸಿದರು.
  • 1915ರಲ್ಲಿ ಬ್ರಿಟಿಷ್-ಫ್ರೆಂಚ್ ಪಕ್ಷಕ್ಕೆ ದೊಡ್ಡ ಜಯವಾವುದೂ ಲಭಿಸಲಿಲ್ಲ. ಜರ್ಮನ್ನರಾದರೋ ಪುರ್ವದಲ್ಲಿ ರಷ್ಯದಲ್ಲೂ ಅಗ್ನೇಯದಲ್ಲಿ ಬಾಲ್ಕನ್ ಕ್ಷೇತ್ರದಲ್ಲೂ ಜಯಶಾಲಿಗಳಾಗಿದ್ದರು. ಆದರೆ ಅದೇ ವರ್ಷ ಇಟಲಿಯವರು ಬ್ರಿಟಿಷರ ಕಡೆ ಸೇರಿ ಆಸ್ಟ್ರಿಯದ ಮೇಲೆ ಯುದ್ಧಕ್ಕೆ ಹೊರಟರು. ಬ್ರಿಟನಿನಲ್ಲಿ ಮಂತ್ರಿಮಂಡಲ ಪುನರ್ ವ್ಯವಸ್ಥೆಗೊಳಗಾಗಿ ಸರ್ವ ಪಕ್ಷಗಳ ಸರ್ಕಾರ ರಚಿತವಾಯಿತು.
  • ಬ್ರಿಟಿಷರೇ ತಮ್ಮ ಮುಖ್ಯ ಶತ್ರುಗಳೆಂದು ಜರ್ಮನ್ನರ ಭಾವನೆ. ಬ್ರಿಟಿಷರು ಬೆಲ್ಜಿಯಂ ಮತ್ತು ಫ್ರಾನ್ಸ್‌ಗಳಿಗೆ ಸೈನ್ಯದ ನೆರವು ನೀಡಿದ್ದಲ್ಲದೆ ಜರ್ಮನಿಯ ಶತ್ರುಗಳಿಗೆಲ್ಲರಿಗೂ ಸಾಲ ಕೊಡುತ್ತ ವ್ಯಾಪಾರ ಸರಕುಗಳನ್ನು ಸಮುದ್ರದ ಮೇಲೊಯ್ದು ಒದಗಿಸುತ್ತಲಿದ್ದರು. 1916ರಲ್ಲಿ ಜರ್ಮನ್ನರು ಮೊದಲು ಫ್ರೆಂಚರನ್ನು ರಭಸದಿಂದ ತಾಗಿ ಸೋಲಿಸಬೇಕೆಂದು ವರ್ದನ್ನಲ್ಲಿ ಫ್ರಾನ್ಸನ್ನು ಆಕ್ರಮಿಸಿದರು. ಎರಡು ಕಡೆಗಳಿಗೂ ಅಪಾರ ನಷ್ಟ ಸಂಭವಿಸಿತು. ಆದರೆ ಫ್ರೆಂಚರು ಶರಣೆನ್ನಲಿಲ್ಲ. ಅ ವೇಳೆಗೆ ಬ್ರಿಟಿಷರೂ ತಮ್ಮ ಸೈನ್ಯಗಳನ್ನು ಹೆಚ್ಚಿಸಿಕೊಂಡಿದ್ದರು. ಸಾಮ್ ನದಿಯ ಬಳಿ ಬ್ರಿಟಿಷರು ಫ್ರೆಂಚರೂ ಸೇರಿ ಜರ್ಮನರನ್ನು ಆಕ್ರಮಿಸಿದರು, ಮತ್ತೆ ಅಪಾರ ಪ್ರಾಣ ನಷ್ಟವಾಯಿತು. ಜಯಾಪಜಯಗಳು ನಿರ್ಧಾರವಾಗಲಿಲ್ಲ.
  • ಪೋಲೆಂಡಿನಲ್ಲಿ ಪರಾಜಯ ಹೊಂದಿದ ಬಳಿಕ ರಷ್ಯನ್ನರು ಚೇತರಿಸಿಕೊಂಡು ಪುನಃ ಸನ್ನಾಹ ಮಾಡಿ ಆಸ್ಟ್ರಿಯ-ಹಂಗೆರಿ ರಾಷ್ಟ್ರವನ್ನು ಮುತ್ತಿದರು. ಇಟಲಿಯೂ ಆ ರಾಷ್ಟ್ರವನ್ನು ತೆಂಕಲಿಂದ ಮುತ್ತಿ ಇಸಾಂಟ್ಸೊ ನದಿಯ ಬಳಿ ಗೆಲವು ಪಡೆಯಿತು. ರಷ್ಯನ್ನರು ಜಯಶಾಲಿಗಳಾಗಬಹುದೆಂದು ಭಾವಿಸಿ ರೊಮೇನಿಯ ರಷ್ಯದ ಪಕ್ಷ ಸೇರಿ ಯುದ್ಧಪ್ರವೇಶ ಮಾಡಿತು. ಆಗ ಆಸ್ಟ್ರಿಯ-ಹಂಗರಿಯ ಸಹಾಯಕ್ಕಾಗಿ ಜರ್ಮನ್ನರು ಬಾಲ್ಕನ್ ಕ್ಷೇತ್ರಗಳ ಕಡೆಗೆ ತಮ್ಮ ಸೈನ್ಯ ಕಳಿಸಬೇಕಾಯಿತು. ವೇಗದಿಂದ ನುಗ್ಗಿಬಂದ ಜರ್ಮನ್ನರು ರಷ್ಯದವರನ್ನೋಡಿಸಿದ್ದಲ್ಲದೆ ರೊಮೇನಿಯವನ್ನು ಮುತ್ತಿ ಆ ರಾಷ್ಟ್ರದ ಅರ್ಧಭಾಗವನ್ನು ವಶಪಡಿಸಿಕೊಂಡರು.
  • ದೂರ ಪ್ರಾಚ್ಯದಲ್ಲಿ ಜಪಾನ್ 1914 ಆಗಸ್ಟ್‌ ತಿಂಗಳಲ್ಲೇ ಬ್ರಿಟಿಷರ ಪಕ್ಷ ಸೇರಿ ಚೀನ ತೀರದಲ್ಲಿ ಜರ್ಮನ್ನರು ಸಂಪಾದಿಸಿಕೊಂಡಿದ್ದ ರೆಯಾಟಾವನ್ನಾಕ್ರಿಮಿಸಿ ಕೊಂಡಿದ್ದರು. ಪೆಸಿಫಿಕ್ ಸಾಗರದಲ್ಲಿ ಜರ್ಮನ್ನರಿಗೆ ನೆಲೆಯೇ ಇಲ್ಲವಾಗಿತ್ತು. ಜರ್ಮನ್ನರು ದೊಡ್ಡ ಹಡಗುಪಡೆ ಕಟ್ಟಿಕೊಂಡಿದ್ದಾಗ್ಯೂ ಬ್ರಿಟಿಷರ ಬಲಕ್ಕೆ ಸಮನಾದ ಬಲ ಪಡೆದಿರಲಿಲ್ಲ. ಯುದ್ಧದ ಪ್ರಾರಂಭದಲ್ಲೇ ಯುದ್ಧ ನೌಕೆಗಳು ಜರ್ಮನ್ ಬಂದರುಗಳನ್ನು ಬಿಟ್ಟು ಹೊರಡದಂತೆ ಬ್ರಿಟಿಷ್ ನೌಕಾಬಲ ಅತಿಜಾಗೃತಿಯಿಂದ ದಿಗ್ಬಂಧನ ಹಾಕಿತ್ತು. ಅದು ಶತ್ರುಬಲವನ್ನು ಬಂಧನದಲ್ಲಿಡುವುದಲ್ಲದೆ ಬೇರೆ ಕಾರ್ಯಗಳನ್ನೂ ನಿರ್ವಹಿಸುತ್ತಿತ್ತು. ಬ್ರಿಟಿಷ್ ದ್ವೀಪಗಳ ಸುತ್ತಲೂ ಕೋಟೆ ಕಟ್ಟಿಕೊಂಡಂತೆ ಇದ್ದು ಸ್ವದೇಶ ರಕ್ಷಣೆಯನ್ನು ನಿರ್ವಹಿಸಿತು. ಬ್ರಿಟಿನಿನಿಂದ ಫ್ರಾನ್ಸಿಗೆ ಹಡಗುಗಳಲ್ಲಿ ಲಕ್ಷಾಂತರ ಸೈನಿಕರನ್ನು ಸಾಗಿಸಿಕೊಡುತ್ತಿತ್ತು. ಶತ್ರುಗಳ ವ್ಯಾಪಾರದ ಹಡಗುಗಳು ಯಾವ ಸಮುದ್ರದಲ್ಲೇ ಸಾಗುತ್ತಿರಲಿ ಅವನ್ನು ಬ್ರಿಟಿಷ್ ನೌಕಾಪಡೆ ತಡೆಯುತ್ತಿದ್ದುದರಿಂದ ಜರ್ಮನರ ಸಾಗರೋತ್ತರ ವ್ಯಾಪಾರವೇ ಸ್ಥಗಿತವಾಗಿತ್ತು. ಬ್ರಿಟನಿನ ಮಿತ್ರ ರಾಷ್ಟ್ರಗಳ ವ್ಯಾಪಾರ ಹಡಗುಗಳಿಗೆ ರಕ್ಷಣೆ ದೊರಕಿತ್ತು. ಎಲ್ಲಕ್ಕೂ ಮೇಲಾಗಿ ಸಮುದ್ರಮಾರ್ಗ

ಜಲ, ವಾಯು ಯುದ್ಧಗಳು

ಬದಲಾಯಿಸಿ
  • ಜಗದ್ವ್ಯಾಪಿಯಾಗಿ ಬಲವತ್ತಮವಾಗಿದ್ದ ಬ್ರಿಟಿಷ್ ನೌಕಾಬಲಕ್ಕೆದುರಾಗಿ ಮೊದಮೊದಲು ಜರ್ಮನ್ ಯುದ್ಧದ ಹಡಗುಗಳು ಸೋಲಲಿಲ್ಲ. 1914ರಲ್ಲಿ ಭೂಮಧ್ಯಸುಮುದ್ರದಲ್ಲಿ ಕಾಣಿಸಿದ ಎರಡೂ ಜರ್ಮನ್ ಹಡಗುಗಳು ಹೇಗೋ ತಪ್ಪಿಸಿಕೊಂಡು ಸುಳಿದಾಡುತ್ತಿದ್ದು ಕಡೆಗೆ ದಕ್ಷಿಣ ಅಮೆರಿಕದ ಬಳಿ ಫಾಕ್ಲೆಂಡ್ ದ್ವೀಪಗಳ ಒತ್ತಿನಲ್ಲಿ ಬ್ರಿಟಿಷರಿಗೆ ಸಿಕ್ಕಿ ಧ್ವಂಸವಾದುವು. 1905ರಲ್ಲಿ ಜರ್ಮನ್ ಹಡಗುಗಳು ಬ್ರಿಟನಿಗೆ ಉತ್ತರದಲ್ಲಿ ಅಲ್ಲಲ್ಲಿ ಗುಪ್ತವಾಗಿ ಸಂಚರಿಸುತ್ತಿದ್ದುವು. 1916ರಲ್ಲಿ ಡೆನ್ಮಾರ್ಕಿನ ಉತ್ತರದಲ್ಲಿ ಜಟ್ಲೆಂಡ್ ಬಳಿ ನೌಕಬಲಗಳ ಎದುರುಬದುರು ಹೋರಾಟ ನಡೆಯಿತು. ಎರಡೂ ಪಕ್ಷಗಳು ತಮಗೆ ಜಯವಾಯಿತೆಂದು ಭಾವಿಸಿದರೂ ಆ ಬಳಿಕ ಜರ್ಮನ್ ಹಡಗುಗಳು ಹೊರಗೆ ಕಾಣಿಸಿಕೊಳ್ಳದೇ ಇರಬೇಕಾಯಿತು.
  • ಸಮುದ್ರದ ಮೇಲೆ ಬ್ರಿಟಿಷರೊಂದಿಗೆ ಹೋರಾಡಲು ಜರ್ಮನಿಗಾಗಲಿಲ್ಲ. ಆದರೆ ಜರ್ಮನ್ನರು ಜಲಾಂತರ್ಗಾಮಿಗಳನ್ನು ನಿರ್ಮಿಸಿಕೊಂಡಿದ್ದುದಲ್ಲದೆ ಟಾರ್ಪಿಡೊ, ಮೈನ್ ಮುಂತಾದ ಅನೇಕ ಪ್ರಯೋಗಸಾಧನಗಳನ್ನು ಪಡೆದಿದ್ದರು. 1917ರಲ್ಲಿ ಜರ್ಮನ್ನರು ಬ್ರಿಟಿಷರ ವ್ಯಾಪಾರವನ್ನು ನಾಶಗೊಳಿಸಬೇಕೆಂದು ಉದ್ದೇಶಿಸಿದರು. ಬ್ರಿಟನಿಗೆ ಸರಕು ಹೊತ್ತು ತರುತ್ತಿದ್ದ ಹಡಗುಗಳನ್ನು ಸಮುದ್ರದಲ್ಲಿ ತಮ್ಮ ಜಲಾಂತರ್ಗಾಮಿಗಳಿಂದ ಮುಳುಗಿಸಲು ತೊಡಗಿದರು. ಬ್ರಿಟಿಷರ ಹಡಗುಗಳನ್ನಲ್ಲದೆ ಬ್ರಿಟನಿನೊಂದಿಗೆ ಮೈತ್ರಿಯಿಂದಿದ್ದ ದೇಶಗಳ ಹಡಗುಗಳಿಗೂ ಈ ಅಪಾಯ ತಟ್ಟಿತು. ಬ್ರಿಟನಿಗೆ ಸಾಮಾನು ಹೊರುತ್ತಿದ್ದ ಯಾವ ಹಡಗನ್ನಾದರೂ ಎಚ್ಚರಿಕೆ ಕೊಡದೆ ಧ್ವಂಸಗೊಳಿಸುವುದಾಗಿ ಜರ್ಮನ್ನರು ಪ್ರಕಟಿಸಿದರು. ಆ ಪ್ರಕಟನೆಯಿಂದ ಅಮೆರಿಕದವರಿಗೆ ಮೊದಲೇ ಇದ್ದ ಅಸಮಾಧಾನ ಹೆಚ್ಚಿತು. 1915ರಲ್ಲಿ ಲೂಸಿಟಾನಿಯ ಎಂಬ ಬ್ರಿಟಿಷ್ ಹಡಗು ಮುಳುಗಿದಾಗ ಅದರಲ್ಲಿದ್ದ ಅಮೆರಿಕನ್ನರು ಪ್ರಾಣ ಕಳೆದುಕೊಂಡಿದ್ದರು. ತಮ್ಮ ಜಲಾಂತರ್ಗಾಮಿಗಳನ್ನು ಸರ್ವತ್ರ ಉಪಯೋಗಿಸುವುದಾಗಿ ಜರ್ಮನಿ ಘೋಷಿಸಿದ್ದರಿಂದ ಆಗಿನ ಅಮೆರಿಕದ ಅಧ್ಯಕ್ಷ ವಿಲ್ಸನ್ ಜರ್ಮನಿಯ ಮೇಲೆ ಯುದ್ಧ ಹೂಡಿದ. ಅಮೆರಿಕನ್ ಸೈನ್ಯ ಅಟ್ಲಾಂಟಿಕ್ ದಾಟಿಬರುವುದರೊಳಗಾಗಿ ಬ್ರಿಟನಿನಲ್ಲಿ ಜನರಿಗೆ ಆಹಾರವಿಲ್ಲದಂತೆ ಮಾಡಬಹುದೆಂಬುದಾಗಿ ಜರ್ಮನಿ ಭಾವಿಸಿತ್ತು. ವಾಸ್ತವವಾಗಿ ಜರ್ಮನಿಯ ವ್ಯಾಪಾರವೂ ಬಂಧಿತವಾಗಿತ್ತು. ಜಲಾಂತರ್ಗಾಮಿಗಳ ಹಾವಳಿಯಿಂದ ಬ್ರಿಟನಿಗೂ ಕಷ್ಟಕಾಲವೊದಗಿತು. 1917ರಲ್ಲಿ ಬ್ರಿಟನಿನಿಂದ ಹೊರಟ ಪ್ರತಿ ನಾಲ್ಕು ಹಡಗುಗಳಲ್ಲಿ ಒಂದು ಧ್ವಂಸವಾಗುತ್ತಿತ್ತು. ಆಹಾರಾಭಾವ ದಿಂದಾಗಿ ಪಡಿತರ ವ್ಯವಸ್ಥೆ ಏರ್ಪಡಿಸಿ ಬ್ರಿಟನ್ ಕಾಲಯಾಪನೆ ಮಾಡಬೇಕಾಯಿತು. ಆದರೆ ಅಮೆರಿಕನ್ನರು ಯುದ್ಧದಲ್ಲಿ ಸೇರಿಕೊಂಡು ತಮ್ಮ ಸಮಸ್ತ ಹಡಗುಗಳನ್ನು ಮಿತ್ರರಾಷ್ಟ್ರಗಳ ಉಪಯೋಗಕ್ಕೆ ಬಿಟ್ಟುಕೊಡಲು ಸಿದ್ಧರಾದರು. ಬ್ರಿಟಿಷರೂ ಅಮೆರಿಕನ್ನರೂ ಜಲಾಂತರ್ಗಾಮಿ ಗಳನ್ನು ಅಡಗಿಸುವ ಉಪಾಯ ಸಾಧಿಸಿದ್ದಲ್ಲದೆ ಬೇಗ ಬೇಗ ಹೊಸ ಹಡಗುಗಳನ್ನು ಕಟ್ಟಿಕೊಂಡು ತಮ್ಮ ವ್ಯಾಪಾರ ರಕ್ಷಣೆಗೆ ಹೊಸ ಏರ್ಪಾಟು ಮಾಡಿಕೊಂಡಿದ್ದರಿಂದ ಜರ್ಮನಿಯ ಆಸೆ ಸಂಪುರ್ಣ ಫಲಿಸಲಿಲ್ಲ.
  • ತಮ್ಮ ಜಲಾಂತರ್ಗಾಮಿಗಳಲ್ಲಿ ಹೆಚ್ಚಿನ ಭರವಸೆ ಇಟ್ಟಿದ್ದ ಜರ್ಮನ್ನರು 1917ರಲ್ಲಿ ಪಶ್ಚಿಮ ರಣರಂಗದಲ್ಲಿ ಹೊಸ ಆಕ್ರಮಣ ಪ್ರಯತ್ನವನ್ನು ನಡೆಸದೆ ಹಿಂಡನ್ಬರ್ಗ್ ಮೇರೆಯನ್ನು ಭದ್ರಪಡಿಸಿಕೊಂಡು ಕಾಲನಿರೀಕ್ಷೆಯಲ್ಲಿದ್ದರು. ಬ್ರಿಟಿಷರೂ ಫ್ರೆಂಚರೂ ಆಗ ಜರ್ಮನ್ನರು ಬಿಟ್ಟ ಪಾಳುನೆಲವನ್ನು ವಶಪಡಿಸಿಕೊಂಡಿದ್ದಲ್ಲದೆ ಆಗಾಗ್ಗೆ ಜರ್ಮನ್ನರ ಸೇನಾ ನೆಲೆಗಳನ್ನು ಮುತ್ತುವುದಕ್ಕೂ ತೊಡಗಿದರು.
  • 1916 ಮೇ 31- ಜೂನ್ 1ರ ವರೆಗೆ ನಡೆದ ಜಟ್ಲೆಂಡ್ ನೌಕಾಯುದ್ಧವೇ ಒಂದನೆಯ ಮಹಾಯುದ್ಧದ ದೊಡ್ಡ ಜಲಯುದ್ಧವೆಂದು ಹೇಳಬಹುದು. ಇದರಲ್ಲಿ ಬ್ರಿಟನ್ ಮತ್ತು ಜರ್ಮನಿಗಳು ಭಾಗವಹಿಸಿದುವು. ಒಟ್ಟು ನೌಕಾಬಲಗಳ ಸಂಖ್ಯೆ, ತೂಕ ಮತ್ತು ಅಸ್ತ್ರಗಳ ಮೌಲ್ಯದಿಂದ ಇದು ಅಂದಿನ ವರೆಗಿನ ಇತಿಹಾಸದಲ್ಲೇ ಹೊಸ ದಾಖಲೆ ಸ್ಥಾಪಿಸಿತು. ಬ್ರಿಟಿಷರು ಈ ಕದನದಲ್ಲಿ 151 ಹಡÀಗುಗಳನ್ನು ತೊಡಗಿಸಿದ್ದರು. ಇದರಲ್ಲಿ 37 ವಾಣಿಜ್ಯ ಹಡಗುಗಳಿದ್ದವು. ಶತ್ರುಗಳ ಬಳಿ ಇದ್ದ ನೌಕೆಗಳ ಸಂಖ್ಯೆ 101. ಅವುಗಳಲ್ಲಿ 27 ವಾಣಿಜ್ಯ ಹಡಗುಗಳು. ಜರ್ಮನ್ ನೌಕಾಬಲಕ್ಕೆ ಶೇರ್ ನಾಯಕ. ಈ ಕದನದಲ್ಲಿ ಜರ್ಮನ್ನರ ಕಡೆ 11 ಹಡಗುಗಳು ನಷ್ಟವಾದುವು; ಮಡಿದವರ ಸಂಖ್ಯೆ 2545, ಬ್ರಿಟಿಷರು 14 ಹಡಗುಗಳನ್ನೂ 6097 ಜನರನ್ನೂ ಕಳೆದುಕೊಂಡರು. ಆದರೂ ಕೊನೆಯವರೆಗೂ ಬ್ರಿಟನ್ ಸಮುದ್ರದ ಮೇಲೆ ತನ್ನ ಹತೋಟಿ ಬಿಟ್ಟುಕೊಡಲಿಲ್ಲ. ಈ ಕದನದಲ್ಲಿ ಜಲಾಂತರ್ಗಾಮಿ ಗಳನ್ನು ಧಾರಾಳವಾಗಿ ಬಳಸಲಾಯಿತು. ಜರ್ಮನ್ನರು ಸೈನಿಕರೆನ್ನದೆ, ನಾಗರಿಕರೆನ್ನದೆ ನಿರ್ದಾಕ್ಷಿಣ್ಯವಾಗಿ ಶತ್ರುಹಡಗುಗಳ ಮೇಲೆ ಇವುಗಳಿಂದ ಧಾಳಿ ನಡೆಸುತ್ತಿದ್ದರು. 1917ರ ವರೆಗೆ ತಟಸ್ಥ ನೀತಿಯನ್ನು ಅನುಸರಿಸುತ್ತಿದ್ದ ಅಮೆರಿಕ ಈ ಧಾಳಿಗಳಿಂದ ಕೋಪಗೊಂಡು ಯುದ್ಧದಲ್ಲಿ ಭಾಗವಹಿಸಲು ನಿರ್ಧರಿಸಿತು. ಒಟ್ಟಿನಲ್ಲಿ ನೌಕಾಬಲದಲ್ಲಿ ಬ್ರಿಟನ್ ಜರ್ಮನಿಗಿಂತ ಮುಂದಿತ್ತು. ಜರ್ಮನ್ನರ ನೌಕಾಪಡೆ ಶಸ್ತ್ರಾಸ್ತ್ರಸಜ್ಜಿತವಾಗಿ, ಒಳ್ಳೆಯ ಗುರಿ ಹೊಂದಿದ್ದರೂ ಬ್ರಿಟಿಷ್ ಪಡೆಗಳ ಮುಂದೆ ಅಂಥ ಶ್ರೇಷ್ಠ ಮಟ್ಟದ ಕಾರ್ಯಾಚರಣೆ ತೋರಿಸಲಾಗಲಿಲ್ಲ. ಒಂದನೆಯ ಮಹಾಯುದ್ಧದ ಸಮಯದಲ್ಲಿ ಮೊತ್ತಮೊದಲ ಬಾರಿಗೆ ವಿಮಾನಗಳನ್ನು ಬಳಸಲಾಯಿತು. ಅನೇಕ ಕಾಳಗಗಳು ನಡೆದುವು. ಜರ್ಮನ್ನರು ಮೊದಲು ಶತ್ರುಸೇನೆಗಳ ವಿರುದ್ಧ ಇಂಥ ವಿಮಾನಪಡೆಗಳನ್ನು ಬಳಸಿದರು. 1915ರ ಮೊದಲ ಭಾಗದಲ್ಲಿ ಅವರು ಬೆಲೂನುಗಳ (ಜೆóಪ್ಲಿನ್ಗಳು) ಮೂಲಕ ಇಂಗ್ಲೆಂಡಿನ ತೀರಪ್ರದೇಶಗಳ ಮೇಲೆ ಬಾಂಬು ಗಳನ್ನು ಸುರಿಸಲಾರಂಭಿಸಿದರು. 1916ರ ಕೊನೆಯವರೆಗೆ ಇಂಥ ಧಾಳಿಗಳು ನಡೆದುವು. ಅನಂತರ ಇವು ಕಡಿಮೆಯಾದುವು. ಏಕೆಂದರೆ ಬೆಲೂನುಗಳು ತಮ್ಮ ಬೃಹದ್ ಗಾತ್ರದಿಂದಾಗಿ ಸುಲಭವಾಗಿ ಶತ್ರುಗಳ ಬಂದೂಕುಗಳಿಗೆ ತುತ್ತಾಗುತ್ತಿದ್ದುವು. ಅನಂತರ ಕಂಡುಹಿಡಿದ ಸಿಡಿಗುಂಡುಗಳು ಇಂಥ ಬೆಲೂನುಗಳ ವಿರುದ್ಧ ದಾಳಿ ನಡೆಸಲು ಸಹಾಯಮಾಡಿದುವು.
  • ಜೆóಪ್ಲಿನ್ಗಳ ಉಪಯೋಗ ತಗ್ಗಿದ ಮೇಲೆ ಚಿಕ್ಕದಾದ, ಸುಲಭ ಬೆಲೆಯ, ವೇಗವಾಗಿ ಚಲಿಸಬಲ್ಲ. ಗಾಳಿಗಿಂತ ಭಾರವಾದ ವಿಮಾನಗಳು ಬಳಕೆಗೆ ಬಂದುವು. 1917ರ ಮೊದಲ ಭಾಗದಿಂದ ಇಂಥ ವಿಮಾನಗಳನ್ನು ಜರ್ಮನ್ನರು ಬಳಸಿಕೊಂಡು ಇಂಗ್ಲೆಂಡಿನ ಮೇಲೆ, ಅದರಲ್ಲೂ ಲಂಡನ್ನಿನ ಮೇಲೆ ದಾಳಿ ನಡೆಸಲು ಆರಂಭಿಸಿದರು. ಇವುಗಳ ರಚನೆಯ ವಿಧಾನವನ್ನು ಮಿತ್ರರಾಷ್ಟ್ರಗಳು ಕಂಡುಹಿಡಿದುಕೊಂಡ ಮೇಲೆ ಎರಡು ಪಕ್ಷಗಳ ಸೇನಾಬಲಗಳಿಗೂ ಇವು ಕಣ್ಣುಗಳೆಂದೆನಿಸಿದುವು. ಶತ್ರುಬಲದ ಮೇಲೆ ಹಾರಾಟ ನಡೆಸಿ ಸೈನ್ಯದ ಚಟುವಟಿಕೆಗಳನ್ನು ವೀಕ್ಷಿಸಲೂ ಷೆಲ್ ದಾಳಿಯನ್ನು ಮುಂದಾಗಿ ತಿಳಿಸಲೂ ಶತ್ರುಸೈನ್ಯದ ಚಟುವಟಿಕೆಗಳ ಬಗ್ಗೆ ಚಿತ್ರ ತೆಗೆಯಲೂ ಶತ್ರುಗಳ ಮೇಲೆ ಮತ್ತು ನಗರಗಳ ಮೇಲೆ ಪ್ರಚಾರ ಚೀಟಿಗಳನ್ನು ಎರಚಲೂ ಇಂಥ ವಿಮಾನಗಳನ್ನು ಬಳಸುತ್ತಿದ್ದರು. ಮೊದಮೊದಲು ವಿಮಾನಗಳಿಗೆ ಚಿಕ್ಕ ಕೋವಿಯನ್ನೂ ಚಿಕ್ಕ ಬಂದೂಕಗಳನ್ನೂ ಅಳವಡಿಸುತ್ತಿದ್ದರು. ಆದರೆ ಶೀಘ್ರದಲ್ಲೇ ಹಗುರವಾದ ಮೆಷಿನ್ಗನ್ನುಗಳನ್ನು ಅಳವಡಿಸಿದರು. ಮೇ 1915ರಲ್ಲಿ 25 ವರ್ಷದ ನೆದರ್ಲೆಂಡಿನ ಯುವಕ ಆಂಥೋನಿ ಪೊಕರ್ ಅವರೋಧಕÀಗಿಯರ್ (ಇಂಟರಪ್ಟರ್ ಗಿಯರ್) ಕಂಡುಹಿಡಿದ. ವಿಮಾನದ ಗಿಯರುಗಳಿಗೆ ಅಪಾಯವಾಗದಂತೆ ಮೆಷಿನ್ಗನ್ನುಗಳನ್ನು ಉಪಯೋಗಿಸಲು ಇದರಿಂದ ಸಹಾಯ ವಾಯಿತು. ಇಂಥ ಸಾಧನದಿಂದ ಕೆಲವು ಕಾಲ ಜರ್ಮನ್ನರಿಗೆ ಮಿತ್ರರಾಷ್ಟ್ರಗಳ ಮೇಲೆ ಹೆಚ್ಚಿನ ಬಲ ಸಿಕ್ಕಂತಿತ್ತು. ಮೊದಮೊದಲು ವಿಮಾನಕಾಳಗಗಳು ಆಕಾಶದಲ್ಲಿ ಇಬ್ಬರು ಚಾಲಕರ ನಡುವೆ ನಡೆಯುತ್ತಿದ್ದವು. ವ್ಯಕ್ತಿಕಾಳಗಗಳು ಗುಂಪುಕಾಳಗಗಳಿಗೆ ಎಡೆಕೊಟ್ಟುವು. 10 ರಿಂದ 50 ವಿಮಾನಗಳ ದಳಗಳು ವಾಯುಕಾಳಗಗಳಲ್ಲಿ ಭಾಗವಹಿಸುತ್ತಿದ್ದವು. ಪ್ರತಿಯೊಂದು ವಿಮಾನ ತಂಡಕ್ಕೂ ಒಬ್ಬ ನಾಯಕನಿರುತ್ತಿದ್ದ. ಅವನು ತನಗೆ ಸೂಕ್ತವೆನಿಸಿದ ವಿಮಾನ ಚಾಲಕರನ್ನು ಆರಿಸಿಕೊಳ್ಳುತ್ತಿದ್ದ. ಅದಲ್ಲದೆ ತಾನೇ ಮುಂದಾಗಿ ಹೋಗಿ ಹೋರಾಡಿ ತನ್ನ ಹಿಂಬಾಲಕರಿಗೆ ಮಾದರಿಯಾಗಿರುತ್ತಿದ್ದ. ಶತ್ರುಗಳು ಹಿಮ್ಮೆಟ್ಟಿ ಓಡಿಹೋಗುತ್ತಿದ್ದಾಗ ಹಿಂಸಿಸಲೂ ತಮ್ಮ ಭೂಸೈನ್ಯಗಳು ಮುಂದಾಗಿ ಹೋಗಿ ಆಕ್ರಮಿಸಿಕೊಳ್ಳಲೂ ಈ ವಿಮಾನಗಳು ಸಹಾಯ ಮಾಡುತ್ತಿದ್ದುವು.
  • ಒಂದನೆಯ ಮಹಾಯುದ್ಧದಲ್ಲಿ ಜರ್ಮನ್ನರು ಮೊದಲು ವಿಷ ವಾಯುವನ್ನು ಒಂದು ಮಾರಕಾಸ್ತ್ರದಂತೆ ಬಳಸಿದರು. ಅನಂತರ ಎಲ್ಲ ಪಕ್ಷಗಳವರೂ ಇದನ್ನು ಪ್ರಯೋಗಿಸಿದರು. ಇವನ್ನು ಬಂದೂಕುಗಳ ಮೂಲಕವೋ ಕೈಬಾಂಬಿನ ಮೂಲಕವೋ ವಿಷಜ್ವಾಲೆ ಅಥವಾ ಹೊಗೆಕಾರುವ ಕಂದೀಲುಗಳ ಮೂಲಕವೋ ಶೆಲ್ಲುಗಳ ಮೂಲಕವೋ ವಿಮಾನದಿಂದ ಬಾಂಬಿನ ಮುಖಾಂತರವೋ ಬಳಸಲಾಗುತ್ತಿತ್ತು. ಇದರಿಂದ ಮರಣ ಹೊಂದಿದವರ ಸಂಖ್ಯೆ ನಿರ್ದಿಷ್ಟವಾಗಿ ಗೊತ್ತಿಲ್ಲ. ಅನೇಕರು ಇದರಿಂದ ತತ್ಕ್ಷಣ ಮಡಿಯದೆ ಇದ್ದರೂ ಅನಂತರ ಇದರ ಪ್ರಭಾವದಿಂದ ತೊಂದರೆಗೀಡಾದರು. ಅಮೆರಿಕನ್ನರೇ ಹೆಚ್ಚಾಗಿ ಈ ಬಾಧೆಗೆ ತುತ್ತಾದರು.
  • ಪ್ರತಿಯೊಂದು ದೇಶದಲ್ಲೂ ಸರ್ಕಾರದ ಪ್ರಚಾರ ಸಮಿತಿಯೊಂದು ಸ್ಥಾಪಿತವಾಯಿತು. ಶತ್ರುಕಾರ್ಯದ ಬಗ್ಗೆ ಉತ್ಪ್ರೇಕ್ಷೆಯಿಂದ ಕೂಡಿದ ಕಥೆಗಳೂ ಚಿತ್ರಗಳೂ ಪ್ರಚಾರವಾದುವು. ಇವು ಜನರನ್ನು ರೊಚ್ಚಿಗೆಬ್ಬಿಸಿದುವಲ್ಲದೆ ಅವರಲ್ಲಿ ದೇಶಪ್ರೇಮವನ್ನು ಕುದುರಿಸಿದುವು. ಇಂಥ ಪ್ರಚಾರ ಅನೇಕ ವೇಳೆ ಹಿಂಸಾಕೃತ್ಯಗಳನ್ನು ಪ್ರಚೋದಿಸುತ್ತಿದ್ದುದೂ ಉಂಟು. ಶತ್ರುವಿನ ಪಕ್ಷದವನೆಂದು ಸಂದೇಹಪಟ್ಟು, ಹಿಡಿದುಕೊಂಡು ಹೋಗಿ ತಪ್ಪಿತಸ್ಥರಲ್ಲದವರನ್ನು ಅನೇಕ ವೇಳೆ ಕ್ರೂರವಾಗಿ ದಂಡಿಸುತ್ತಿದ್ದುದುಂಟು.
  • ಒಂದನೆಯ ಮಹಾಯುದ್ಧ ಪ್ರಾರಂಭವಾದಾಗ ಅಮೆರಿಕ ಸಂಯುಕ್ತಸಂಸ್ಥಾನ ಐರೋಪ್ಯರ ಗೋಜೇ ಬೇಡ ಎಂಬ ತನ್ನ ನೀತಿಗೆ ಅನುಗುಣವಾಗಿ ತಾಟಸ್ಥ್ಯವನ್ನು ಸಾರಿಕೊಂಡಿತ್ತು. ಪ್ರಾರಂಭದಲ್ಲಿ ಜರ್ಮನ್ನರ ಕೈಯೇ ಮೇಲಾಗಿತ್ತು. ಅಸಹಾಯಕವಾದ ಸಣ್ಣ ಬೆಲ್ಜಿಯಂ ದೇಶವನ್ನು ನಿಪಾತಮಾಡಿ ಪ್ಯಾರಿಸಿನ ಬಾಗಿಲ ವರೆಗೆ ಬರುವ ತನಕ ಜರ್ಮನ್ನರು ಪ್ರಬಲರಾಗೇ ಇದ್ದರೂ ಜರ್ಮನ್ನರ ಮುನ್ನಡೆಗೆ ತಡೆ ಒದಗಿದ್ದು ಅಲ್ಲಿ. ಕೈಸóರ್ ವಿಲಿಯಂ ನಿರ್ಮಿಸಿದ್ದ ಪ್ರಚಂಡ ಸೇನಾಯಂತ್ರದ ವಿರುದ್ಧ ವೀರ ಹೋರಾಟ ಹೂಡಿದ್ದುದರ ಸುದ್ಧಿಯನ್ನು ಪತ್ರಿಕೆಗಳಲ್ಲಿ ಓದುತ್ತ ಬಹುಮಂದಿ ಅಮೆರಿಕನರು ಫ್ರೆಂಚ್ ಮತ್ತು ಬ್ರಿಟಿಷ್ ರಾಷ್ಟ್ರಗಳಿಗೆ ತಮ್ಮ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತಿದ್ದರು. ಮುಂಚಿನಿಂದ ಈ ದೇಶಗಳವರೊಡನೆ ಅಮೆರಿಕನರಿಗೆ ಋಣಾನುಬಂಧದ ವಾಂಛೆಯಿತ್ತು.
  • ನೆಪೋಲಿಯನನ ಯುದ್ಧಗಳ ಕಾಲದಲ್ಲಿ ಆದಂತೆ, ಯುದ್ಧ ನಿಂತರೂ ಪರಸ್ಪರವಾಗಿ ಇತರರ ಬಂದರುಗಳ ಮೇಲೆ ಬಹಿಷ್ಕಾರ ಹೂಡಿ, ಯುದ್ಧಕ್ಷೇತ್ರಗಳಿಗೆ ಆಹಾರವನ್ನೂ ಶಸ್ತ್ರಾಸ್ತ್ರಗಳನ್ನೂ ಹೊತ್ತು ತರುತ್ತಿದ್ದ ನೌಕೆಗಳನ್ನು ತಡೆಯುತ್ತಿದ್ದರು. ಬ್ರಿಟಿಷ್ ನಾವೆ ಸಮುದ್ರದ ಹತೋಟಿ ಹೊಂದಿ ತನ್ನ ಶತ್ರುವಿಗಾಗಿ ಉದ್ದಿಷ್ಟವಾದ ನೌಕೆಗಳನ್ನು ನಾಶಪಡಿಸದೆ ವಶಪಡಿಸಿಕೊಂಡರೆ, ಜರ್ಮನಿಯ ಜಲಾಂತರ್ಗಾಮಿಗಳು ನಿಶ್ಯಬ್ದವಾಗಿ ಸಾಗರದಾಳದಿಂದ ಮೇಲೆದ್ದು ನೌಕೆಗಳಿಗೆ ಟಾರ್ಪಿಡೊ ಬಾರಿಸಿ ನಾವಿಕರನ್ನೂ ಪ್ರಯಾಣಿಕರನ್ನೂ ಸಾಯಗೊಡುತ್ತಿದ್ದುವು.
  • ಇಂಗ್ಲೆಂಡಿನ ಲೂಸಿಟಾನಿಯ ಪ್ರಯಾಣಿಕ ಹಡಗಿನ ಮುಳುಗಡೆಯಲ್ಲಿ ಅಮೆರಿಕನ್ನರ ಪ್ರಾಣ ನಷ್ಟವಾದಾಗ ಆ ಪ್ರಸಂಗವೇ ಅಮೆರಿಕನ್ನರು ಯುದ್ಧಪ್ರವೇಶ ಮಾಡಲು ತತ್ಕ್ಷಣದ ಕಾರಣವಾಯಿತು. ಜಲಸಮಾಧಿಯಾದ 250 ಪ್ರಯಾಣಿಕರ ಪೈಕಿ 144 ಮಂದಿ ಅಮೆರಿಕನ್ನರು. ಈ ಮುಳಗಡೆಗಾಗಿ ಜರ್ಮನ್ನರು ವಿಷಾದವನ್ನೇನೋ ವ್ಯಕ್ತಪಡಿಸಿದರು. ಆದರೆ ಆ ಹಡಗಿನಲ್ಲಿ ಪ್ರಯಾಣಿಕರ ಜೊತೆಗೆ ಮದ್ದುಗುಂಡುಗಳೂ ಇದ್ದುವೆಂದು ಜರ್ಮನಿಯ ವಾದ.
  • ಜಲಾಂತರ್ಗಾಮಿ ಸಮರದ ವಿರುದ್ಧ ಜರ್ಮನಿಗೆ ಅಮೆರಿಕನ್ ಅಧ್ಯಕ್ಷ ವಿಲ್ಸನ್ ಪ್ರತಿಭಟನೆ ಕಳಿಸಿದರೂ ಜರ್ಮನಿಯಿಂದ ಅಸ್ಪಷ್ಟವಾದ ಕ್ಷಮಾಪಣೆಗಳೋ ಇನ್ನಷ್ಟು ಕೆಣಕುತ್ತರಗಳೋ ಲಭ್ಯವಾಗುತ್ತಿದ್ದುವು. ಅಮೆರಿಕನ್ನರು ಮಿತ್ರರಾಷ್ಟ್ರಗಳಿಗೆ ಸಾಲ ಸೋಲ ಕೊಟ್ಟು ಆಹಾರ ವಸ್ತುಗಳನ್ನೂ ಶಸ್ತ್ರಾಸ್ತ್ರಗಳನ್ನೂ ಕೊಳ್ಳಲು ನೆರವು ನೀಡುತ್ತಿದ್ದಾರೆಂಬುದೇ ಜರ್ಮನಿಗೆ ಅಮೆರಿಕದ ಮೇಲಿದ್ದ ಆಗ್ರಹ. ಜರ್ಮನಿಯ ಪ್ರಹಾರಗಳಿಂದಾಗಿ ಅದರ ವಿರುದ್ಧ ಅಮೆರಿಕದಲ್ಲಿ ಸಾರ್ವಜನಿಕ ಅಭಿಪ್ರಾಯ ಉದ್ರೇಕಗೊಂಡಿತು. ಎಂಥ ಉದ್ರಿಕ್ತ ಪರಿಸ್ಥಿತಿಯಲ್ಲೂ ನಮ್ಮನ್ನು ಯುದ್ಧದಿಂದ ದೂರವಿಟ್ಟಿದ್ದಾನೆ-ಎಂಬ ಕಾರಣದಿಂದಾಗಿ ವಿಲ್ಸನ್ ಮತ್ತೆ 1916ರಲ್ಲಿ ಅಧ್ಯಕ್ಷನಾಗಿ ಆಯ್ಕೆಯಾದ.

ಅಮೆರಿಕ ಪ್ರವೇಶ

ಬದಲಾಯಿಸಿ
  • ಆದರೆ ಹೆಚ್ಚು ಕಾಲ ಅಮೆರಿಕ ಯುದ್ಧದಿಂದ ಹೊರನಿಲ್ಲು ವಂತಿರಲಿಲ್ಲ. ಅಮೆರಿಕ ಯುದ್ಧಪ್ರವೇಶ ಮಾಡಿದರೆ ಮೆಕ್ಸಿಕೋ ಜಪಾನುಗಳು ಅದನ್ನು ಘಾತಿಸಬೇಕು ಎಂದು ಜರ್ಮನಿ ಚಿತಾವಣೆ ಮಾಡುತ್ತಿದ್ದುದೂ ಅಮೆರಿಕದ ಯುದ್ಧಕೈಗಾರಿಕೆಗಳನ್ನು ನಿಪಾತಮಾಡಲು ಪಿತೂರಿ ನಡೆಸುತ್ತಿದ್ದುದೂ ಗೂಢಚಾರರಿಂದ ಬಯಲಾದುವು. ಜರ್ಮನ್ನರು ತಮ್ಮ ಜಲಾಂತರ್ಗಾಮಿ ಯುದ್ಧವನ್ನು ಹೆಚ್ಚು ಮಾಡಿ ಇಂಗ್ಲೆಂಡನ್ನು ಸೋಲಿಸುವ ನಿಶ್ಚಯವನ್ನು ಘೋಷಿಸುತ್ತಲೇ ಅಧ್ಯಕ್ಷ ವಿಲ್ಸನ್ ಕಾಂಗ್ರೆಸಿಗೆ ಸಂದೇಶ ಕಳಿಸಿದ. 1917 ಏಪ್ರಿಲ್ 6ರಂದು ಅಮೆರಿಕದ ಕಾಂಗ್ರೆಸ್ ಯುದ್ಧ ಘೋಷಿಸಿತು.
  • ಅಮೆರಿಕ ಯುದ್ಧಪ್ರವೇಶ ಮಾಡಲು ಇದು ತತ್ಕ್ಷಣದ ಕಾರಣವಾದರೂ ಈ ಯುದ್ಧ ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳ ಉಳಿವು-ಅಳಿವಿನ ಹೋರಾಟವೆಂಬ ನಂಬಿಕೆ ಅಧ್ಯಕ್ಷ ವಿಲ್ಸನ್ನಲ್ಲಿ ಬಲಗೊಳ್ಳತೊಡಗಿತ್ತು. ಪ್ರಜಾಪ್ರಭುತ್ವಗಳ ವಿರುದ್ಧವಾಗಿ ನಿರಂಕುಶ ಪ್ರಭುತ್ವಗಳು ಸಂಘಟಿಸಿ ಹೋರಾಡುತ್ತಿದ್ದುವು. ವಿಶ್ವವ್ಯವಹಾರಗಳಲ್ಲಿ ಅಮೆರಿಕದ ಪಾತ್ರ ಈ ಪ್ರಜಾಪ್ರಭುತ್ವಗಳನ್ನು ಜಯಗೊಳ್ಳುವಂತೆ ಪುಷ್ಟೀಕರಿಸುವುದೇ ಎಂದೂ ಈ ಕಾರ್ಯವನ್ನು ಯಾರ ಮೇಲೂ ದ್ವೇಷ ಸಾಧಿಸದೆ ನೆರವೇರಿಸಿ, ವಿಜೇತ ಪರಾಜಿತ ರಾಷ್ಟ್ರಗಳನ್ನೆಲ್ಲ ರಾಷ್ಟ್ರಗಳ ಕೂಟದಲ್ಲಿ (ಲೀಗ್ ಆಫ್ ನೇಷನ್ಸ್‌) ಪ್ರಜಾಸತ್ತಾತ್ಮಕ ಲೋಕಸೌಭ್ರಾತೃತ್ವವನ್ನಾಗಿ ಒಟ್ಟುಗೂಡಿಸಬೇಕೆಂದೂ ವಿಲ್ಸನ್ ನಿಶ್ಚಯಿಸಿದ. ಇಂಥದೊಂದು ಕೂಟದಲ್ಲಿ ಎಲ್ಲ ಯುದ್ಧಗಳ ಮೂಲಕಾರಣಗಳಾದ ರಾಷ್ಟ್ರೀಯವಾದ, ಸಾಮ್ರಾಜ್ಯವಾದ, ಕರಾರುಗಳ ಮೂಲಕ ಸ್ಥಾಪಿತವಾದ ರಾಷ್ಟ್ರವ್ಯೂಹಗಳ ಸಮತೂಕ-ಮುಂತಾದ ಪ್ರವೃತ್ತಿಗಳನ್ನು ನಿವಾರಿಸಬೇಕು. ಈ ರೀತಿ ವಿಲ್ಸನ್ ಸೂಚಿಸಿದ ಹದಿನಾಲ್ಕು ಅಂಶಗಳ ಆಧಾರದ ಮೇಲೆ ಯುದ್ಧಾನಂತರದಲ್ಲಿ ಶಾಂತಿ ಕೌಲನ್ನು ಮಾಡಿಕೊಳ್ಳಲು ಸಾಧ್ಯ ಎಂದು ಆತ ಪ್ರತಿಪಾದಿಸಿದ.
  • ಈ ಉನ್ನತ ಧ್ಯೇಯಗಳಿಂದ ಪ್ರೇರಿತವಾಗಿ ಸಂಯುಕ್ತಸಂಸ್ಥಾನ ಮಹಾಯುದ್ಧವನ್ನು ಪ್ರವೇಶಿಸಿತು. ರಷ್ಯ ಸೋತು ಹಿಮ್ಮೆಟ್ಟಿದ್ದ ಕಾರಣ ಮಿತ್ರರಾಷ್ಟ್ರಗಳು ಕಷ್ಟಕ್ಕೆ ಸಿಕ್ಕಿಬಿದ್ದಿದ್ದುವು. ಸರ್ವಪ್ರಕಾರಗಳಲ್ಲೂ ಉತ್ಪಾದನೆ ಹೆಚ್ಚಿಸಲು, ಕೈಗಾರಿಕೆಗಳನ್ನು ಸ್ಥಾಪಿಸಲು ಅಧ್ಯಕ್ಷ ವಿಲ್ಸನ್ನಿಗೆ ಅಧಿಕಾರ ಕೊಡಲಾಯಿತು, ಕಾರ್ಮಿಕ, ಬಂಡವಾಳಿಗ-ಹೀಗೆ ಉಭಯತ್ರರೂ ಸಹಕರಿಸಿದರು, ತಯಾರಕರು ಬೆಲೆ ನಿಯಂತ್ರಣಕ್ಕೆ ಒಪ್ಪಿದರು. ಕಾರ್ಮಿಕ ಸಂಸ್ಥೆಗಳು ಮುಷ್ಕರ ಹೂಡುವ ಅಧಿಕಾರವನ್ನು ತ್ಯಜಿಸಿದುವು.
  • ಅಮೆರಿಕ ತನ್ನ ಮಿತ್ರರಾಷ್ಟ್ರಗಳಿಗೆ ಕೋಟ್ಯಂತರ ಡಾಲರುಗಳಷ್ಟು ಸಾಲಗಳನ್ನೂ ಹಲವು ಹಡಗುಗಳ ತುಂಬ ಸರಬರಾಜನ್ನೂ ಮುಖ್ಯವಾಗಿ ಆಹಾರ ವಸ್ತುಗಳನ್ನೂ ನೀಡಬಹುದಾಗಿದ್ದರೂ ಸೈನಿಕರನ್ನು ಕಳಿಸುವುದೇ ದೊಡ್ಡ ಸಮಸ್ಯೆಯಾಗಿ ಕುಳಿತಿತ್ತು. ಇದ್ದ ಸೈನ್ಯ ಚಿಕ್ಕದು. ಸಾಕಷ್ಟು ಸೇನೆಯನ್ನು ಜಮಾಯಿಸಿ, ತರಬೇತು ಮಾಡಿ 4828 ಕಿಮೀಗಳಾಚೆಯ ರಣರಂಗಗಳಿಗೆ ರವಾನಿಸುವ ಕಾರ್ಯವನ್ನು ಚಕಿತಗೊಳಿಸುವಷ್ಟು ತ್ವರೆಯಿಂದ ನಿರ್ವಹಿಸಲಾಯಿತು. ಇತರ ಪೌರರಂತೆ ಜರ್ಮನ್ ಮತ್ತು ಆಸ್ಟ್ರಿಯ-ಹಂಗರಿಯ ಮೂಲಕ್ಕೆ ಸೇರಿದ ಅಮೆರಿಕನ್ ಪೌರರೂ ಸೇನಾ ಜಮಾವಣೆಗೆ ನಮ್ರತೆಯಿಂದ ಬದ್ಧರಾದರು. ಒಂದೇ ವರ್ಷದ ಅವಧಿಯೊಳಗೆ ಫ್ರಾನ್ಸಿನಲ್ಲಿ ಜನರಲ್ ಜಾನ್ ಜೆ. ಪರ್ಷಿಂಗ್ ಕೈಕೆಳಗೆ 7 ಲಕ್ಷ ಸೈನಿಕರು ಸಿದ್ಧವಾಗಿದ್ದರು. ಮುಂದಿನ ಆರು ತಿಂಗಳೊಳಗೆ ಸೈನಿಕರ ಸಂಖ್ಯೆ 20 ಲಕ್ಷಕ್ಕೆ ಏರಿತು.
  • ಅಮೆರಿಕ ರಣಕ್ಕೆ ಸಿದ್ಧತೆಗೊಳ್ಳುತ್ತಿದ್ದ ವೇಗವನ್ನು ಕಂಡು ದಂಗುಬಡಿದ ಮಧ್ಯೈರೋಪ್ಯ ರಾಷ್ಟ್ರಗಳು 1918ರ ವಸಂತದಲ್ಲಿ ದೊಡ್ಡ ಆಘಾತ ಹೂಡಿ ಯುದ್ಧವನ್ನು ಮುಕ್ತಾಯಪಡಿಸಲು ಯತ್ನಿಸಿದುವು. ಮಿತ್ರಸೇನೆಗಳ ಉಚ್ಚಸೇನಾನಿ ಫ್ರಾನ್ಸಿನ ಮಾರ್ಷಲ್ ಫಾಕ್ ಅಗತ್ಯವಾದ ಕಡೆಯೆಲ್ಲ ಅಮೆರಿಕನ್ ಸೈನಿಕರನ್ನು ರಕ್ಷಣಾ ವ್ಯವಸ್ಥೆಗೆ ಬಳಸಿಕೊಂಡ. ಅಮೆರಿಕನ್ ಸೇನೆಗಳು ಶೌರ್ಯದಿಂದ ಹೋರಾಡಿ ಎಲ್ಲರ ಮೆಚ್ಚುಗೆ ಗಳಿಸಿದುವು.
  • ಜರ್ಮನ್ನರ ಅಘಾತವನ್ನು ತಡೆಗಟ್ಟಿದ ಕೂಡಲೆ ಅಮೆರಿಕನರು ಒಂದು ಪ್ರತ್ಯೇಕ ಸೇನೆಯಾಗಿ ಸಂಗ್ರಹಗೊಂಡು ತಮ್ಮ ಪಾಲಿಗೊಂದು ರಣರಂಗವನ್ನು ವಹಿಸಿಕೊಂಡರು. ಅಮೆರಿಕನ್ನರು ಸೇಂಟ್ ಮಿಹೀಲ್ ವಿಭಾಗದಲ್ಲಿ ಜರ್ಮನ್ ರಕ್ಷಣಾ ವ್ಯವಸ್ಥೆಯೊಳಕ್ಕೆ ನುಗ್ಗಿ ಮೆಷಿನ್ಗನ್ ನಿಬಿಡವಾದ ಮ್ಯುಕ್ ಆರ್ಗನ್ ವಿಭಾಗದ ಮೂಲಕ 12 ಲಕ್ಷ ಸೇನೆಯೊಡನೆ ಮುನ್ನುಗ್ಗಿದರು. ಜರ್ಮನ್ನರು ಹಿಮ್ಮೆಟ್ಟಿ ಇಡೀ ರಂಗದ ಉದ್ದಕ್ಕೂ ಪರಾಜಿತರಾದರು. 1918ನೆಯ ನವೆಂಬರ್ 11ರಂದು ಯುದ್ಧಸ್ತಂಭನ ಏರ್ಪಟ್ಟಿತು. ಸಂಯುಕ್ತಸಂಸ್ಥಾನ ಯುದ್ಧಕ್ಕೆ ತಡವಾಗಿ ಬಂದು ಇತರರಿಗಿಂತ ಕಡಿಮೆ ಕಷ್ಟನಷ್ಟಗಳಿಗೆ ಒಳಗಾದರೂ ಅದು ಇಡೀ ಯುದ್ಧದ ತಕ್ಕಡಿಯನ್ನೇ ಏರುಪೇರು ಮಾಡಿತು. ಆಗಿನ ಕಾಲದ ಜನರು ನಂಬಿಕೊಂಡಂತೆ, ಪ್ರಜಾಪ್ರಭುತ್ವ ಲೋಕದಲ್ಲಿ ಕ್ಷೇಮವಾಗಿ ಉಳಿಯುವಂತೆ ಮಾಡಿದ ಕೀರ್ತಿ ಅಮೆರಿಕಕ್ಕೆ ಸಲ್ಲಬೇಕು.

ಏಷ್ಯದಲ್ಲಿ ಜಪಾನ್ ನಡೆಸಿದ ಯುದ್ಧ

ಬದಲಾಯಿಸಿ

ಆಗಸ್ಟ್‌ 1914ರಲ್ಲಿ ಜಪಾನ್ ಜರ್ಮನಿಯ ಮೇಲೆ ಯುದ್ಧ ಘೋಷಿಸಿತು. ಚೀನದಲ್ಲಿ ಜರ್ಮನ್ನರಿಗೆ ಸೇರಿದ್ದ ಪ್ರದೇಶವನ್ನು ಆಕ್ರಮಿಸಿಕೊಂಡಿತು. ಇದನ್ನು 1898ರಲ್ಲಿ ಚೀನ ಜರ್ಮನಿಗೆ ಗುತ್ತಿಗೆಯ ಮೇಲೆ ಕೊಟ್ಟಿತ್ತು. ಮೊದಲನೆಯ ಮಹಾಯುದ್ಧ ಪ್ರಾರಂಭವಾದದ್ದು ಜಪಾನಿಗೆ ಅನುಕೂಲವೇ ಆಯಿತೆನ್ನಬಹುದು. ಅದು ಮಿತ್ರರಾಷ್ಟ್ರಗಳ ಪರ ಸೇರಿ ಪೂರ್ವ ಪ್ರಾಚ್ಯದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಿತು. ಜರ್ಮನ್ ಸೈನ್ಯ ಈ ಭಾಗದಲ್ಲಿ ಸ್ವಲ್ಪ ಸಂಖ್ಯೆಯಲ್ಲಿದ್ದುದರಿಂದ ಅಂಥ ದೊಡ್ಡ ಕಾಳಗವೇನೂ ನಡೆಯಲಿಲ್ಲ. ಜರ್ಮನ್ನರು ಬೇಗ ಜಪಾನಿಗೆ ಶರಣಾಗತರಾದರು. ಜಪಾನು ಪಡೆದುಕೊಂಡ ಪ್ರದೇಶಗಳನ್ನು ಚೀನಕ್ಕೆ ವಾಪಸು ಮಾಡದೆ ತನ್ನ ಅಧೀನದಲ್ಲೇ ಉಳಿಸಿಕೊಂಡಿತು. ಅದಲ್ಲದೆ, ಐರೋಪ್ಯ ರಾಷ್ಟ್ರಗಳು ತಂತಮ್ಮ ಬದುಕಿಗಾಗಿ ಹೋರಾಟ ನಡೆಸುತ್ತಿದ್ದ ಇಂಥ ಕಠಿಣ ಸಂದರ್ಭಗಳನ್ನು ಉಪಯೋಗಿಸಿಕೊಂಡ, ಜಪಾನ್ ಚೀನದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಿತು. ಫೆಬ್ರುವರಿ 1917ರಲ್ಲಿ ಜಪಾನ್ ಮತ್ತು ಬ್ರಿಟನ್ ಒಂದು ರಹಸ್ಯ ಒಪ್ಪಂದ ಮಾಡಿಕೊಂಡುವು. ಇದರ ಪ್ರಕಾರ ಜಪಾನ್ ಮೆಡಿಟರೇನಿಯನ್ ಸಮುದ್ರಕ್ಕೆ ಕೆಲವು ಯುದ್ಧದ ಹಡಗುಗಳನ್ನು ಕಳುಹಿಸಬೇಕೆಂದೂ ಇದಕ್ಕೆ ಪ್ರತಿಯಾಗಿ ಬ್ರಿಟನ್ ಜರ್ಮನ್ನರಿಂದ ವಶಪಡಿಸಿಕೊಂಡಿದ್ದ ಷಾಂಟುಂಗಿನ ಮತ್ತು ಪೆಸಿಫಿಕ್ ಸಾಗರದಲ್ಲಿ ಜರ್ಮನರಿಗೆ ಸೇರಿದ್ದ ಕೆಲವು ದ್ವೀಪಗಳ ಮೇಲೆ ಅಧಿಕಾರ ಬಿಟ್ಟುಕೊಡಬೇಕೆಂಬ ಸೂಚನೆಗೆ ಶಾಂತಿ ಕೌಲಿನ ಸಮಯದಲ್ಲಿ ಬೆಂಬಲ ಸೂಚಿಸುವುದಾಗಿಯೂ ಬ್ರಿಟನ್ ಒಪ್ಪಿತು. ಫ್ರಾನ್ಸ್‌ ಮಾರ್ಚ್ 1917ರಲ್ಲಿ ಇಂಥದೇ ಕರಾರುಗಳಿಗೆ ಒಪ್ಪಿಗೆ ಕೊಟ್ಟಿತು. ಇದಕ್ಕೆ ಬದಲು ಜಪಾನು ಚೀನವನ್ನು ಮಹಾಯುದ್ಧದಲ್ಲಿ ತೊಡಗುವಂತೆ ಮಾಡಬೇಕೆಂದು ಒಡಂಬಡಿಕೆಯಾಯಿತು. ಕೆಲವು ದಿನಗಳ ತರುವಾಯ ರಷ್ಯವೂ ಅನಂತರ ಇಟಲಿಯೂ ಇದಕ್ಕೆ ತಮ್ಮ ಒಪ್ಪಿಗೆ ನೀಡಿದುವು.

ಈ ರೀತಿಯ ಲಾಭಗಳನ್ನು ಐರೋಪ್ಯ ರಾಷ್ಟ್ರಗಳಿಂದ ಪಡೆದ ಮೇಲೆ ಜಪಾನ್ ಚೀನವನ್ನು ಜರ್ಮನಿಯಿಂದ ಎಲ್ಲ ಸಂಪರ್ಕಗಳನ್ನೂ ಕಡಿದುಕೊಳ್ಳುವಂತೆ ಪ್ರೇರೇಪಿಸಿತು. ಅಮೆರಿಕ ಯುದ್ಧ ಪ್ರವೇಶಿಸಿಸಿದ ಮೇಲೆ ಏಪ್ರಿಲ್ ತಿಂಗಳಿನಲ್ಲಿ ಚೀನಕ್ಕೆ ಇಂಥದೇ ಸಲಹೆಯನ್ನು ನೀಡಿತು. ಒಟ್ಟಿನಲ್ಲಿ ಜಪಾನ್ ಯುದ್ಧದಿಂದ ಲಾಭ ಗಳಿಸಿತು. 1917ರಲ್ಲಿ ಯುದ್ಧ ಮಾಡುತ್ತಿದ್ದ ಮಿತ್ರರಾಷ್ಟ್ರಗಳ ಪರಿಸ್ಥಿತಿ ಹದಗೆಟ್ಟಿತ್ತು. ಆದ್ದರಿಂದ ಅವು ಅಮೆರಿಕದಿಂದ ಮಾತ್ರವಲ್ಲದೆ, ಏಷ್ಯದ ದೇಶಗಳಿಂದಲೂ ಸಹಾಯ ನಿರೀಕ್ಷಿಸುತ್ತಿದ್ದುವು. ಪುರ್ವದ ರಾಷ್ಟ್ರಗಳು ಅಲ್ಲಿಯವರೆಗೆ ಅಂಥ ಹೆಚ್ಚಿನ ಸಹಾಯವನ್ನೇನೂ ಮಾಡಿರಲಿಲ್ಲ. ಚೀನ ತಟಸ್ಥ ನೀತಿ ಅನುಸರಿಸಿತ್ತು. ಜಪಾನು ಜರ್ಮನ್ನರಿಗೆ ಸೇರಿದ ಪ್ರದೇಶಗಳನ್ನು ವಶಪಡಿಸಿಕೊಂಡು, ಮಿತ್ರರಾಷ್ಟ್ರಗಳಿಗೆ ಯುದ್ಧಕ್ಕೆ ಬೇಕಾದ ಶಸ್ತ್ರಾಸ್ತ್ರಗಳನ್ನು ಮಾರುವುದರಲ್ಲಿ ಮಾತ್ರ ಸಹಾಯ ನೀಡಿತ್ತು. ಇಂಥ ಕಠಿಣ ಪರಿಸ್ಥಿತಿಯಲ್ಲಿ ಜಪಾನಿನ ಕೋರಿಕೆಗಳನ್ನೊಪ್ಪಿ ಅದರಿಂದ ಯುದ್ಧಕ್ಕೆ ಹೆಚ್ಚಿನ ಸಹಾಯ ಪಡೆಯಲು ಮಿತ್ರರಾಷ್ಟ್ರಗಳು ನಿರ್ಧರಿಸಿದುವು. ಆದ್ದರಿಂದ ಈ ಯುದ್ಧ, ಜಪಾನಿಗೆ ಒಂದು ಸುಯೋಗವೆಂದೇ ಹೇಳಬಹುದು.

ಚೀನ, ಭಾರತ

ಬದಲಾಯಿಸಿ

ಯುದ್ಧ ಪ್ರಾರಂಭವಾಗುವ ಮೊದಲು, ಚೀನ ಯುದ್ಧದಲ್ಲಿ ಭಾಗವಹಿಸುವ ನಿಶ್ಚಯ ಹೊಂದಿತ್ತು. ಜಪಾನು ಯುದ್ಧವನ್ನು ನೆವವಾಗಿ ಉಪಯೋಗಿಸಿಕೊಂಡು ಚೀನದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಬಹುದೆಂಬ ಭೀತಿ ಅದಕ್ಕಿತ್ತು. 1914 ಮತ್ತು 1915ರಲ್ಲಿ ಚೀನ ಮಿತ್ರರಾಷ್ಟ್ರಗಳ ಪರವಾಗಿ ಯುದ್ಧದಲ್ಲಿ ಭಾಗವಹಿಸುವುದು ಬೇಕಾಗಿರಲಿಲ್ಲ. ಇದಕ್ಕೆ ಕಾರಣವೇನೆಂದರೆ ಯುದ್ಧಕ್ಕೆ ಚೀನ ಇಳಿದು, ತನ್ನ ಸೈನ್ಯವನ್ನು ಬಲಪಡಿಸಿಕೊಂಡು ಸಂಪತ್ತನ್ನು ವೃದ್ಧಿಸಿಕೊಂಡು, ಶಾಂತಿ ಸಂಧಾನಗಳಲ್ಲಿ ಭಾಗವಹಿಸುವುದು ಜಪಾನಿಗೆ ಇಷ್ಟವಾಗಿರಲಿಲ್ಲ. ಆದ್ದರಿಂದ 1917ರ ತನಕ ಜಪಾನ್ ಚೀನವನ್ನು ಯುದ್ಧ ಪ್ರವೇಶಿಸದಂತೆ ತಡಿಹಿಡಿದಿತ್ತು. ಆದರೆ 1917ರಲ್ಲಿ ಜಪಾನ್ ತನ್ನ ನೀತಿಯನ್ನು ಬದಲಾಯಿಸಿ, ಮೇಲೆ ತಿಳಿಸಿದ ಕಾರಣಗಳಿಂದಾಗಿ ಚೀನವನ್ನು ಯುದ್ಧದಲ್ಲಿ ಭಾಗವಹಿಸಲು ಪ್ರೇರೇಪಿಸಿತು. 1917ರ ಆಗಸ್ಟ್‌ 14ರಂದು ಜರ್ಮನಿ ಮತ್ತು ಆಸ್ಟ್ರಿಯ-ಹಂಗರಿಗಳ ಮೇಲೆ ಚೀನ ಯುದ್ಧ ಘೋಷಿಸಿತು. ಆಗ ಚೀನದಲ್ಲಿ ಎರಡು ಸರ್ಕಾರಗಳಿದ್ದುವು. ಒಂದು ಉತ್ತರದ ಪೀಕಿಂಗ್ನಲ್ಲಿ, ಮತ್ತೊಂದು ದಕ್ಷಿಣದ ಕ್ಯಾಂಟನ್ನಲ್ಲಿ. ಎರಡೂ ಸರ್ಕಾರಗಳು ಪ್ರತ್ಯೇಕವಾಗಿ ಯುದ್ಧ ಘೋಷಿಸಿದುವು.

ಚೀನ ಒಂದನೆಯ ಮಹಾಯುದ್ಧದಲ್ಲಿ ಭಾಗವಹಿಸಿದ್ದರಿಂದ ಒಟ್ಟಿನಲ್ಲಿ ಅಂಥ ಹೆಚ್ಚಿನ ಪರಿಣಾಮ ಕಂಡುಬರಲಿಲ್ಲ. ಜರ್ಮನಿಗೆ ಸೇರಿದ್ದ ಯುದ್ಧನೌಕೆಗಳನ್ನು ಚೀನ ತನ್ನ ಬಂದರುಗಳಲ್ಲಿ ತಡೆಹಿಡಿದಿತ್ತು. ಅನಂತರ ಅವುಗಳನ್ನು ಮಿತ್ರರಾಷ್ಟ್ರಗಳಿಗೆ ಒಪ್ಪಿಸಿತು. ಚೀನದಿಂದ ಕೂಲಿಗಳೂ ಹೋಗಿ ಯುದ್ಧದ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಕಾರ್ಖಾನೆಗಳಲ್ಲಿ ದುಡಿದರು. ಯುದ್ಧದಿಂದ ಜಪಾನಿಗೆ ತನ್ನ ದೇಶದಲ್ಲಿ ಹೆಚ್ಚಿನ ಪ್ರದೇಶಗಳನ್ನು ಬಿಟ್ಟುಕೊಡಬೇಕಾಯಿತು. ಯುದ್ಧ ಮುಗಿದ ಅನಂತರ ಚೀನಕ್ಕೆ ಪ್ಯಾರಿಸ್ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ದೊರೆಯಿತು. ಅಲ್ಲಿ ಚೀನ ಜಪಾನ್ಗಳ ಚಕಮಕಿ ನಡೆಯಿತು. ಜಪಾನು ಜರ್ಮನಿಗೆ ಸೇರಿದ್ದ ಷಾಂಟುಂಗ್ ಪ್ರದೇಶಗಳು ತನಗೆ ಸೇರಬೇಕೆಂದು ಕೇಳಿತು. ಚೀನ ಇದನ್ನು ವಿರೋಧಿಸಿತು. ಯುದ್ಧದ ಸಮಯದಲ್ಲಿ ನಡೆದ ಗುಟ್ಟಾದ ಒಪ್ಪಂದಗಳ ಪ್ರಕಾರ, ಫ್ರಾನ್ಸ್‌ ಮತ್ತು ಇಂಗ್ಲೆಂಡ್ ಜಪಾನಿಗೆ ಬೆಂಬಲ ಕೊಡಬೇಕಾಯಿತು. ಕೊನೆಗೆ ಜಪಾನ್ ಷಾಂಟುಂಗ್ ಪ್ರದೇಶವನ್ನು ಆಕ್ರಮಿಸಿಕೊಂಡಿತು. ಉಳಿದ ಜರ್ಮನ್ ವಸಾಹತುಗಳ ಮೇಲೆ ಹತೋಟಿ ಪಡೆದುಕೊಂಡಿತು. ಆದುದರಿಂದ ಚೀನ ನಿರಾಶೆಗೊಂಡು ವರ್ಸೇಲ್ಸ್‌ ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಲಿಲ್ಲ. ಅನಂತರ ಜರ್ಮನಿಯೊಡನೆ ಪ್ರತ್ಯೇಕ ಒಪ್ಪಂದ ಮಾಡಿಕೊಂಡಿತು. ಚೀನ ರಾಷ್ಟ್ರಗಳ ಕೂಟದ ಸದಸ್ಯರಾಷ್ಟ್ರವಾಯಿತು.

ಒಂದನೆಯ ಮಹಾಯುದ್ಧ ಆರಂಭವಾದ ಮೂರು ತಿಂಗಳಲ್ಲೇ ಭಾರತೀಯ ಸೈನಿಕರು ಪಶ್ಚಿಮ ರಣಕ್ಷೇತ್ರದಲ್ಲಿ ಕಾದಾಡುತ್ತಿದ್ದರು. ಭಾರತ ಉಳಿದ ಬ್ರಿಟಿಷ್ ವಸಾಹತುಗಳಂತೆ, ಯುದ್ಧದ ಸಮಯದಲ್ಲಿ ಇಂಗ್ಲೆಂಡಿಗೆ ಅಧೀನವಾಗಿ ನಡೆದುಕೊಂಡಿತು. ಯುದ್ಧಕ್ಕಾಗಿ ಭಾರತ ಒದಗಿಸಿದ ಸೈನಿಕರ ಮತ್ತು ಭಾರತೀಯ ಕಾರ್ಮಿಕರ ಸಂಖ್ಯೆ 13,00,000, ಈಜಿಪ್ಟ್‌, ಚೀನ, ಆಫ್ರಿಕ, ಅರೇಬಿಯ, ಬಾಲ್ಕನ್ ಪ್ರದೇಶ ಮತ್ತು ಫ್ರಾನ್ಸಿನಲ್ಲಿ ಭಾರತೀಯರು ಸೇವೆ ಸಲ್ಲಿಸಿದರು. ಭಾರತ ಸರ್ಕಾರ ಇದಲ್ಲದೆ ಬ್ರಿಟನಿಗೆ 50,00,00,000 ಡಾಲರ್ಗಳನ್ನು ಒಪ್ಪಿಸಿತು. ಯುದ್ಧನಿಧಿಗಾಗಿ ನೂರಾರು ರಾಜಮಹಾರಾಜರು ನೀಡಿದ ಕಾಣಿಕೆ 2,50,00,000 ಡಾಲರ್ಗಳು, ಯುದ್ಧ ಮುಗಿದ ಅನಂತರ ಬ್ರಿಟನ್ ಮಾಂಟೆಗು-ಚಮ್ಸಫರ್ಡ್ ಸುಧಾರಣೆಗಳ ಮೂಲಕ ಭಾರತೀಯರಿಗೆ ಕೆಲವು ರಾಜಕೀಯ ಹಕ್ಕುಗಳನ್ನು ನೀಡಿತು.

ಜರ್ಮನಿಯ ವಸಾಹತುಗಳಲ್ಲಿ ಯುದ್ಧ: ಫ್ರಾನ್ಸ್‌ ಮತ್ತು ಇಂಗ್ಲೆಂಡ್ಗಳಂತೆ ಜರ್ಮನಿಗೂ ಏಷ್ಯ-ಆಫ್ರಿಕಗಳಲ್ಲಿ ಅನೇಕ ವಸಾಹತುಗಳಿದ್ದುವು. ಇವು ಜರ್ಮನಿಯ ಕೈಗಾರಿಕಾಭಿವೃದ್ಧಿಗೆ ಸಹಾಯಕವಾಗಿದ್ದುವು. ಜರ್ಮನಿಯ ಕೈಗಾರಿಕೆಗಳಿಗೆ ಬೇಕಾದ ಕಚ್ಚಾಮಾಲುಗಳನ್ನು ಪುರೈಸುತ್ತಿದ್ದುದು ಈ ವಸಾಹತುಗಳೇ, ಅಷ್ಟೇ ಅಲ್ಲದೆ ಇವು ಜರ್ಮನಿಯಲ್ಲಿ ತಯಾರಾದ ಸಿದ್ಧವಸ್ತುಗಳಿಗೆ ಮಾರುಕಟ್ಟೆಗಳು ಕೂಡ, ಮಹಾಯುದ್ಧ ಪ್ರಾರಂಭವಾದಾಗ ಮಿತ್ರರಾಷ್ಟ್ರಗಳು ಇವನ್ನು ವಶಪಡಿಸಿಕೊಳ್ಳಲು ಸಂಚು ಹೂಡಿದವು. ಇವುಗಳಿಂದ ದೊರಕುತ್ತಿದ್ದ ಅಮೂಲ್ಯವಾದ ಕಚ್ಚಾ ಸಾಮಗ್ರಿ ಜರ್ಮನಿಗೆ ರವಾನೆಯಾಗುವುದು ತಪ್ಪಿದರೆ ಆ ದೇಶದ ಆರ್ಥಿಕ ಸ್ಥಿತಿ ಕುಂಠಿತಗೊಂಡು ತಾವು ಯುದ್ಧದಲ್ಲಿ ಗೆಲ್ಲಲು ಸಹಾಯವಾಗುವುದೆಂಬುದು ಮಿತ್ರ ರಾಷ್ಟ್ರಗಳ ಆಲೋಚನೆ. ಈ ಯೋಚನೆಯ ಫಲವೇ ಜರ್ಮನಿಯ ವಸಾಹತುಗಳಲ್ಲಿ ನಡೆದ ಯುದ್ಧದ ರೂಪ ತಳೆಯಿತು.

ಪುರ್ವ ಆಫ್ರಿಕದಲ್ಲಿ ಜರ್ಮನಿಗೆ ಸೇರಿದ ಅನೇಕ ವಸಾಹತುಗಳಿದ್ದುವು. ಇಲ್ಲಿ ನಡೆದ ಯುದ್ಧ ಸ್ವಲ್ಪ ದೀರ್ಘಕಾಲದ್ದಾಗಿದೆ. ಉಳಿದ ಜರ್ಮನ್ ವಸಾಹತುಗಳಲ್ಲಿ ಯುದ್ಧ ಬಹು ಶೀಘ್ರವೇ ಕೊನೆಗೊಂಡಿತು. ಚೀನದಲ್ಲಿ ಜರ್ಮನಿಗೆ ಸೇರಿದ ಪ್ರದೇಶಗಳನ್ನು ಜಪಾನ್ ಯುದ್ಧ ಘೋಷಿಸಿದ ತತ್ಕ್ಷಣ ಆಕ್ರಮಿಸಿಕೊಂಡಿತು. ಇಲ್ಲಿ ಜರ್ಮನ್ನರ ಸೇನಾಬಲ ಸ್ವಲ್ಪವೇ ಇದ್ದುದರಿಂದ ಜಪಾನೀಯರು ಬಹು ಸುಲಭವಾಗಿ ಜರ್ಮನ್ನರನ್ನು ಸೋಲಿಸಿದರು. ಅದಲ್ಲದೆ ದೂರದ ಯುರೋಪಿನಿಂದ ಚೀನಕ್ಕೆ ಬೇಕಾದ ಶಸ್ತ್ರಾಸ್ತ್ರಗಳನ್ನು ಸಾಗಿಸುವುದು ಅಸಾಧ್ಯವಾಗಿತ್ತು. ಜಪಾನೀಯರಾದರೂ ಹತ್ತಿರವೇ ಇದ್ದ ತಮ್ಮ ದೇಶದಿಂದ ಬೇಕಾದ ಶಸ್ತ್ರಾಸ್ತ್ರಗಳನ್ನು ಸುಲಭವಾಗಿ ಸಾಗಿಸಬಹುದಾಗಿತ್ತು.

ಜರ್ಮನಿಗೆ ಸೇರಿದ ಅನೇಕ ದ್ವೀಪಗಳು ಪೆಸಿಫಿಕ್ ಮಹಾಸಾಗರದಲ್ಲಿದ್ದುವು 1914ರಲ್ಲಿ ಜಪಾನ್, ಆಸ್ಟ್ರೇಲಿಯ ಮತ್ತು ನ್ಯೂಜಿ಼ಲೆಂಡ್ಗಳ ಸಹಾಯದಿಂದ ಬ್ರಿಟಿಷ್ ಯುದ್ಧನೌಕೆಗಳು ಜರ್ಮನಿಗೆ ಸೇರಿದ ಎಲ್ಲ ದ್ವೀಪಗಳನ್ನೂ ಆಕ್ರಮಿಸಿಕೊಳ್ಳುವುದೇನೂ ಕಷ್ಟವಾಗಲಿಲ್ಲ.

ಆಫ್ರಿಕದಲ್ಲಿ ಜರ್ಮನ್ನರಿಗೆ ಸೇರಿದ್ದ ವಸಾಹತುಗಳು ಮಿತ್ರರಾಷ್ಟ್ರಗಳ ವಶವಾದುವು. 1914ರಲ್ಲಿ ಫ್ರೆಂಚ್ ಮತ್ತು ಬ್ರಿಟಿಷ್ ವಸಾಹತು ಸೈನ್ಯಗಳಿಗೂ ಜರ್ಮನ್ ಸೈನ್ಯಗಳಿಗೂ ಆಫ್ರಿಕದ ಟೋಗೋಲ್ಯಾಂಡಿನಲ್ಲಿ ಯುದ್ಧ ನಡೆಯಿತು. ಯುದ್ಧದಲ್ಲಿ ಸೋತ ಜರ್ಮನಿ ಟೋಗೋಲ್ಯಾಂಡನ್ನು ಫ್ರೆಂಚ್ ಮತ್ತು ಬ್ರಿಟಿಷ್ ಸೇನೆಗಳಿಗೆ ಬಿಟ್ಟುಕೊಟ್ಟಿತು. ಇದೇ ರೀತಿ ಕ್ಯಾಮರೂನ್ಸ್‌ ಬ್ರಿಟಿಷ್ ಮತ್ತು ಫ್ರೆಂಚರ ವಶವಾದದ್ದು 1916ರಲ್ಲಿ, ಜರ್ಮನ್ ಪುರ್ವ ಆಫ್ರಿಕದಲ್ಲಿ 1915ರಲ್ಲಿ ಯುದ್ಧ ನಡೆಸಿತು. ಜನರಲ್ ಜಾನ್ ಸಿ.ಸ್ಮಟ್ಸ್‌ ಬ್ರಿಟಿಷರ ಸೇನಾಧಿಪತಿಯಾಗಿ ಜರ್ಮನ್ನರ ವಿರುದ್ಧ ಧೈರ್ಯ ಸಾಹಸಗಳಿಂದ ಹೋರಾಡಿದ. ದಕ್ಷಿಣ ಆಫ್ರಿಕ, ಬೆಲ್ಜಿಯಂ ಕಾಂಗೋ, ಬ್ರಿಟಿಷ್ ಪುರ್ವ ಆಫ್ರಿಕ, ರೊಡೀಷಿóಯ ಮತ್ತು ಪೋರ್ಚುಗೀಸ್ ಪುರ್ವ ಆಫ್ರಿಕದ ಸೈನ್ಯಗಳಿಗೂ ಜರ್ಮನ್ನರಿಗೂ ನಡುವೆ 1918ರ ನವೆಂಬರ್ 14ರ ವರೆಗೆ ಎಂದರೆ (ಮಹಾಯುದ್ಧ ಕೊನೆಗೊಂಡ ಮೇಲೂ ಮೂರು ದಿನ) ಯುದ್ಧ ನಡೆಯಿತು.

ಯುದ್ಧದ ಅಂತಿಮ ಘಟ್ಟ

ಬದಲಾಯಿಸಿ

1917ರಲ್ಲಿ ಯುದ್ಧ ಅಂತಿಮ ಘಟ್ಟ ಮುಟ್ಟಿತು. ರಷ್ಯದಲ್ಲಿನ ಮಹಾಕ್ರಾಂತಿ ಒಂದು ಮಹಾಘಟನೆಯಾಗಿ ಪರಿಣಮಿಸಿ ಅಲ್ಲಿ ಬಾಲ್ಷೆವಿಕ್ ರಾಷ್ಟ್ರ ಸ್ಥಾಪನೆಯಾಯಿತು. ಅದನ್ನು ಕಟ್ಟಿದ ಲೆನಿನ್ ಜರ್ಮನಿಯೊಡನೆ ಯುದ್ಧ ನಿಲ್ಲಿಸಿದ. 1918ರಲ್ಲಿ ರಷ್ಯನ್ನರು ಜರ್ಮನಿಯೊಡನೆ ಬ್ರೆಸ್ಬ್‌ಲಿಟಾಫ್ಸ್‌್ಯನಲ್ಲಿ ಒಪ್ಪಂದ ಮಾಡಿಕೊಂಡು ಹೋರಾಟದಿಂದ ದೂರವಾದರು. ಈ ಕಾರಣದಿಂದ ಜರ್ಮನ್ನರು ತಮ್ಮ ಸರ್ವಚೈತನ್ಯವನ್ನೂ ಪಶ್ಚಿಮದಲ್ಲಿ ಒಡ್ಡಲು ಸಾಧ್ಯವಾಯಿತು. ಕಾಪೊರೆಟ್ಟೊದಲ್ಲಿ ಜರ್ಮನ್ ಸೈನ್ಯಗಳು ಇಟಲಿಯನ್ನು ಸೋಲಿಸಿದುವು. ಬಾಲ್ಕನ್ ಕ್ಷೇತ್ರಕ್ಕೂ ಮೂಡಲಲ್ಲಿ ತುರ್ಕಿ ಆ ವೇಳೆಗೆ ಸೋತಿತ್ತು. ಬ್ರಿಟಿಷರು ಮೆಸೊಪೊಟೇಮಿಯದಲ್ಲೂ ಪ್ಯಾಲೆಸ್ಟೈನಿನಲ್ಲೂ ಜಯಗಳಿಸಿದರು. ಆದರೆ ಜರ್ಮನ್ ದಳಪತಿ ಲೂಡೆನ್ಡಾರ್ಫ್ ಪಶ್ಚಿಮ ರಣರಂಗದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಿದ. ಇದರಿಂದ ಮಿತ್ರರಾಷ್ಟ್ರಗಳಿಗೆ ಕಷ್ಟವಾಗಿದ್ದರೂ ಆಹಾರಾಭಾವದಿಂದ ಜರ್ಮನಿಯ ಸ್ಥಿತಿ ಹೆಚ್ಚು ಕಠಿಣವಾಗಿತ್ತು. ಆದ್ದರಿಂದ ಹೇಗಾದರೂ ಸಾಹಸಮಾಡದಿದ್ದರೆ ಅನಾಹುತ ಸಿದ್ಧವೆಂದು ತಿಳಿದು ಆ ದಳಪತಿ ಸರ್ವಶಕ್ತಿಯನ್ನೂ ವಿನಿಯೋಗಿಸಿ ಪಶ್ಚಿಮ ರಣರಂಗದಲ್ಲಿ ಬ್ರಿಟಷರನ್ನೂ ಫ್ರೆಂಚರನ್ನೂ ಗೆಲ್ಲಲು ಹವಣಿಸಿದ.

ಸಾಮ್ ನದಿಯ ಬಳಿಯಿದ್ದ ಬ್ರಿಟಿಷರ ಮೇಲೆ ಜರ್ಮನ್ನರು ಮೊದಲು ಬಿದ್ದು ಅವರನ್ನು ಹಿಮ್ಮೆಟ್ಟಿಸಿದರು. 1914ರಲ್ಲಿ ಜರ್ಮನ್ನರು ಆಕ್ರಮಿಸಿಕೊಂಡಿದ್ದ ಮಾರ್ನ್ನದೀ ದಡದವರೆಗೆ ಈ ಸಾರಿಯೂ ವೇಗದಿಂದಲೂ ರಭಸದಿಂದಲೂ ನುಗ್ಗಿದರು. ಜರ್ಮನ್ನರನ್ನು ಕುರಿತು ಸಾಕಷ್ಟು ಅನುಭವ ಪಡೆದಿದ್ದ ಬ್ರಿಟಿಷರೂ ಫ್ರೆಂಚರೂ ರಣಭೂಮಿಯಲ್ಲಿ ತಮಗೆ ಏಕದಂಡನಾಯಕನಿರಬೇಕೆಂದು ನಿಶ್ಚಯ ಮಾಡಿ ಮಾರ್ಷಲ್ ಫಾಕನನ್ನು ಅಧಿಪತಿಯಾಗಿ ಗೊತ್ತುಮಾಡಿಕೊಂಡರು. ಅಮೆರಿಕದ ಸೈನ್ಯಗಳೂ ಬಂದಿಳಿದುವು. ಜುಲೈ ತಿಂಗಳ ವೇಳೆಗೆ ಫಾಕ್ ಎಲ್ಲ ಬಲವನ್ನೂ ಒಟ್ಟುಗೂಡಿಸಿಕೊಂಡು ಆಕ್ರಮಣದಲ್ಲಿ ತೊಡಗಿ ಜರ್ಮನ್ನರನ್ನು ಪುನಃ ಹಿಂಡನ್ಬರ್ಗ್ ರೇಖೆಗೆ ಅಟ್ಟಿದ.

ಆ ವೇಳೆಗೆ ಮೂಡಲಲ್ಲಿ ಬಲ್ಗೇರಿಯ ಸೋತಿತ್ತು. ಆಸ್ಟ್ರಿಯವೂ ಇಟಲಿಯಿಂದ ವಿಟ್ಟಾರಿಯೊ ವೇನೆಟೊದಲ್ಲಿ ಸೋತಿತ್ತು. ಆಸ್ಟ್ರಿಯ-ಹಂಗರಿ ರಾಷ್ಟ್ರ ಧ್ವಂಸವೇ ಆಗಿತ್ತು. ಇನ್ನು ಮೂಡಲಿಗೆ ಪ್ಯಾಲೆಸ್ಟೈನಿನಲ್ಲಿ ದಳಪತಿ ಆಲೆನ್ಬಿ ತುರ್ಕಿ ಸೈನ್ಯಗಳನ್ನು ನಾಶಗೊಳಿಸಿ ಸಿರಿಯವನ್ನು ಮುತ್ತಿ ದಮಾಸ್ಕಸ್ ನಗರವನ್ನು ಹಿಡಿದುಕೊಂಡಿದ್ದ. ಈ ರೀತಿ ಎಲ್ಲೆಲ್ಲೊ ಪರಾಜಯಗಳೇ ಸಂಭವಿಸಿದ್ದರಿಂದ ಜರ್ಮನ್ ಸೈನ್ಯಮುಖ್ಯರಲ್ಲಿ ನಿರಾಶೆ ಮೂಡಿತು. ಲೂಡೆನ್ ಡಾರ್ಫ್ ರಾಜೀನಾಮೆ ಕೊಟ್ಟ. ಜರ್ಮನಿಯ ಒಳನಾಡಿನಲ್ಲಿ ಅಲ್ಲೋಲಕಲ್ಲೋಲವಾಯಿತು. ಚಕ್ರವರ್ತಿ ರಾಜಧಾನಿ ಬಿಟ್ಟು ಓಡಿದ. ಕೀಲ್ ಕಾಲುವೆಯಲ್ಲಿದ್ದ ಜರ್ಮನ್ ಹಡಗುಗಳ ನೌಕರರು ದಂಗೆಯೆದ್ದರು. ಮಿತ್ರರಾಷ್ಟ್ರಗಳು ತಾತ್ಕಾಲಿಕವಾಗಿ ಸ್ಥಾಪಿತವಾಗಿದ್ದ ಹೊಸ ಜರ್ಮನ್ ರಾಷ್ಟ್ರದೊಡನೆ ಹೋರಾಟ ನಿಲ್ಲಿಸಲೊಪ್ಪಿದುವು.

1918 ನವೆಂಬರ್ 11 ರಂದು ಯುದ್ಧ ಮುಕ್ತಾಯಮಾಡಲು ಗೊತ್ತುಮಾಡಿಕೊಂಡಾಗಲೇ ಜರ್ಮನ್ನರು ತಮ್ಮ ಯುದ್ಧದ ಹಡಗುಗಳನ್ನೂ ವಿಮಾನಗಳನ್ನೂ ಫಿರಂಗಿಗಳನ್ನೂ ಒಪ್ಪಿಸಬೇಕೆಂದು ನಿಶ್ಚಯವಾಗಿತ್ತು. ತಮ್ಮ ಯುದ್ಧದ ಹಡಗುಗಳನ್ನು ಜರ್ಮನ್ನರು ತಾವಾಗಿಯೇ ನಾಶಮಾಡಿಬಿಟ್ಟರು. ಆದ್ದರಿಂದ ಆ ಹಡಗುಗಳ ಹಂಚಿಕೆ ಹೇಗೆಂಬ ವ್ಯಾಜ್ಯಗಳಿಗೆ ಆಸ್ಪದವಿಲ್ಲವಾಯಿತು. ತಾವು ಯುದ್ಧ ಮಾಡಿದ್ದು ಮಹಾಪರಾಧ; ಇನ್ನುಮೇಲೆ ಯುದ್ಧಸನ್ನಾಹ ಮಾಡುವುದಿಲ್ಲ-ಎಂದು ಜರ್ಮನಿಯ ತಾತ್ಕಾಲಿಕ ಸರ್ಕಾರ ಪ್ರಮಾಣ ಮಾಡಿತಲ್ಲದೆ ಯುದ್ಧದಲ್ಲಿ ಗೆದ್ದಿದ್ದ ರಾಷ್ಟ್ರಗಳಿಗೆ ಪರಿಹಾರ ಕೊಡುವುದಕ್ಕೂ ಒಪ್ಪಿಕೊಂಡಿತು. ಮಿತ್ರರಾಷ್ಟ್ರಗಳಿಗೆ ಆಗಿದ್ದ ವ್ಯಾಪಾರನಷ್ಟಕ್ಕಾಗಿ ತನ್ನ ವ್ಯಾಪಾರ ಹಡಗುಗಳನ್ನೂ ಒಪ್ಪಿಸಬೇಕಾಯಿತು.

ಪರಿಣಾಮಗಳು

ಬದಲಾಯಿಸಿ
  • ಒಂದನೆಯ ಮಹಾಯುದ್ಧ 1565 ದಿನಗಳ ಕಾಲ ನಡೆಯಿತು. ಈ ಯುದ್ಧ ನಡೆಸಲು ಆದ ವೆಚ್ಚ ಅಗಾಧ. ಇದನ್ನು ನಡೆಸಲು ನಿಯೋಜಿತರಾದ ಜನರ ಸಂಖ್ಯೆ 6.5 ಕೋಟಿ 1.3 ಕೋಟಿ ಜನ ಯುದ್ಧದಲ್ಲೋ ಯುದ್ದದಿಂದ ಗಾಯಗೊಂಡೋ ಮರಣಕ್ಕೀಡಾದರು. ಸುಮಾರು 2,20,00,000 ಜನ (ಮೂವರಲ್ಲಿ ಒಬ್ಬರಂತೆ) ಗಾಯಗೊಂಡರು. ಇವರ ಪೈಕಿ 70,00,000 ಜನ ಸಂಪುರ್ಣವಾಗಿ ದೇಹದ ಸ್ವಾಸ್ಥ್ಯ ಕಳೆದುಕೊಂಡರು. ಗಾಯಗೊಂಡ ಅನೇಕರು ಕೆಲವೇ ವರ್ಷಗಳಲ್ಲಿ, ದೇಹದ ಗಾಯಗಳಿಂದಾಗಿ ಮಡಿದರು. ಷೆಲ್ ದಾಳಿಗೆ ಒಳಗಾದ ಮತ್ತು ವಿಷವಾಯು ಪ್ರಯೋಗಕ್ಕೆ ತುತ್ತಾದ ಅನೇಕರು ಹೇಗೋ ಜೀವಚ್ಛವಗಳಾಗಿ ಬದುಕಿದರು.
1790 - 1913ರ ವರೆಗೆ ನಡೆದ ನೆಪೋಲಿಯನಿಕ್ ಯುದ್ಧಗಳೂ, ಕ್ರಿಮಿಯನ್ ಯುದ್ಧ, ಡೇನಿಷ್ ಯುದ್ಧ, ಆಸ್ಟ್ರೋ-ಪ್ರಷ್ಯನ್ ಯುದ್ಧ, ಅಮೆರಿಕನ್ ಅಂತರ್ಯುದ್ಧ, ಫ್ರಾಂಕೊ-ಪ್ರಷ್ಯನ್ ಯುದ್ಧ, ಬೋಯರ್ ಯುದ್ಧ, ರಷ್ಯ ಜಪಾನ್ ಯುದ್ಧ ಮತ್ತು ಬಾಲ್ಕನ್ ಯುದ್ಧಗಳೇ ಮೊದಲಾದ ಎಲ್ಲ ಯುದ್ಧಗಳಲ್ಲೂ ಮಡಿದವರ ಸಂಖ್ಯೆಯ ಎರಡರಷ್ಟು ಮಂದಿ ಈ ಯುದ್ಧದಲ್ಲಿ ಮಡಿದರು. ಅಲ್ಲದೆ ಅವೆಲ್ಲಕ್ಕಿಂತ ಇದು ಹೆಚ್ಚು ಉಗ್ರ, ಯುದ್ಧದಲ್ಲಿ ಮಡಿದ ನಾಗರಿಕರ ಸಂಖ್ಯೆ ಸೈನಿಕರ ಸಂಖ್ಯೆಗಿಂತ ಹೆಚ್ಚು. ಯುದ್ಧದಲ್ಲಿ ನೇರವಾಗಿ ಭಾಗವಹಿಸದೆ ಇದ್ದವರನೇಕರು ಹಸಿವು, ರೋಗರುಜಿನ ಸಾಮೂಹಿಕ ಕೊಲೆ, ಸಾಂಕ್ರಾಮಿಕ ರೋಗ ಮತ್ತು ಧಾಳಿಗಳಿಗೆ ತುತ್ತಾಗಿ ಮರಣಹೊಂದಿದರು. ಅನೇಕ ದೇಶಗಳಲ್ಲಿ ಜನಸಂಖ್ಯೆಯ ಏರಿಕೆಯ ವೇಗ ಕಡಿಮೆಯಾಯಿತು.
ಪ್ರಾಣಹಾನಿಗಳು ಇಷ್ಟು ಅಪಾರವಾಗಿದ್ದರೆ, ಯುದ್ಧಕ್ಕೆ ಮಾಡಿದ ವೆಚ್ಚದ ಮೊತ್ತ ಭಾರಿಯ ಗಾತ್ರದ್ದು. ಸಮುದ್ರದ ಮೇಲೂ ಭೂಮಿಯ ಮೇಲೂ ಅಪಾರ ಐಶ್ವರ್ಯ ನಷ್ಟವಾಯಿತು. ಯುದ್ಧದ ಮೊದಲ ಮೂರು ವರ್ಷಗಳಲ್ಲಿ ಯುದ್ಧದಲ್ಲಿ ಭಾಗವಹಿಸಿದ ಎಲ್ಲ ಪಕ್ಷ-ವಿಪಕ್ಷಗಳ ದೈನಂದಿನ ವೆಚ್ಚ 12,30,00,000 ಡಾಲರ್ಗಳು, 1918ರ ವೇಳೆಗೆ ಇದು 24,40,00,000 ಡಾಲರ್ಗಳಿಗೆ ಏರಿತು. ಅಂದರೆ ಒಂದು ಗಂಟೆಗೆ ಸು.1,00,00,000 ಡಾಲರ್. ಯುದ್ಧ ನಡೆಸಲು ಖರ್ಚು ಮಾಡಿದ ಒಟ್ಟು ಹಣ 18,600,00,00,000 ಡಾಲರ್ಗಳು. ಇದರಲ್ಲಿ ಮಿತ್ರರಾಷ್ಟ್ರಗಳು 12,600,00,00,000 ಡಾಲರ್ಗಳನ್ನೂ ಮಧ್ಯರಾಷ್ಟ್ರಗಳು 600,00,00,000 ಡಾಲರ್ಗಳನ್ನೂ ಖರ್ಚು ಮಾಡಿದುವು. ಭೂಮಿಯ ಮತ್ತು ಸಮುದ್ರದ ಮೇಲೆ ಕ್ರಮವಾಗಿ 3,000,00,00,000 ಡಾಲರ್ ಮತ್ತು 700,00,00,000 ಡಾಲರ್ ಮೌಲ್ಯದ ಆಸ್ತಿಗಳ ನಷ್ಟ ಸಂಭವಿಸಿತು. ಉತ್ಪತ್ತಿಯಲ್ಲಿ ಆದ ನಷ್ಟ ಸುಮಾರು 4,500,00,00,000 ಡಾಲರ್. ಯುದ್ಧದಲ್ಲಿ ನೀಡಿದ ನೆರವೂ ತಟಸ್ಥ ರಾಷ್ಟ್ರಗಳಿಗೆ ಸಂಭವಿಸಿದ ನಷ್ಟಕ್ಕೆ ನೀಡಿದ ಪರಿಹಾರವೂ 200,00,00,000 ಡಾಲರ್ಗಳಿಗಿಂತ ಹೆಚ್ಚಾಗಿದ್ದಿತು. ಒಟ್ಟು ಆರ್ಥಿಕ ನಾಶ 270,00,00,000 ಡಾಲರ್ಗಳು.
ಈ ಮೊತ್ತಕ್ಕೆ ಯುದ್ಧದಲ್ಲಿ ಸತ್ತವರ 67,00,00,000 ಡಾಲರ್ಗಳನ್ನು ಸೇರಿಸಿದರೆ, ಒಟ್ಟು 3,370,00,00,000 ಡಾಲರ್ಗಳಷ್ಟಾಗುತ್ತದೆ. ಈ ಎಣಿಕೆಯಲ್ಲಿ ಅಂಗವಿಕಲರಾದ ಸೈನಿಕರು ಮತ್ತು ನಾಗರಿಕರ ಲೆಕ್ಕ ಸೇರಿಲ್ಲ. ಯುದ್ಧಭಾಗಿ ರಾಷ್ಟ್ರಗಳು ಕೋಟ್ಯಂತರ ಡಾಲರ್ಗಳಷ್ಟು ಬಡ್ಡಿ ಹಣ ಕೊಡಬೇಕಾಗಿತ್ತು. ಇದೂ ಈ ಎಣಿಕೆಯಲ್ಲಿ ಸೇರಿಲ್ಲ. ಅನೇಕ ತಲೆಮಾರುಗಳವರೆಗೆ ಈ ಹಣ ತೆರಬೇಕಾಯಿತು. ಯುದ್ಧ ಮುಗಿದ ತರುವಾಯ ನಡೆದ ಶಾಂತಿಸಂಧಾನಗಳಲ್ಲಿ. ವಿವಿಧ ದೇಶಗಳ ನಾಯಕರ ಮೇಲೆ ಅಮಿತವಾದ ಜವಾಬ್ದಾರಿ ಬಿದ್ದಿತ್ತು. ಲಕ್ಷಾಂತರ ಜನಗಳನ್ನು ಬಲಿಕೊಟ್ಟು, ಕೋಟ್ಯಂತರ ಡಾಲರ್ಗಳಷ್ಟು ಹಣದ ವೆಚ್ಚದಲ್ಲಿ ಇಂಥ ಘೋರ ಯುದ್ಧ ನಡೆಸಿದ್ದಕ್ಕೆ ಪ್ರತಿಯಾಗಿ ಸರಿಯಾದ ಶಾಂತಿ ಒಪ್ಪಂದವನ್ನು ನಡೆಸುವುದೇ ನಾನಾ ದೇಶಗಳ ನಾಯಕರ ಮೇಲೆ ಆಗ ಬಿದ್ದ ಜವಾಬ್ದಾರಿ. ಅಪಾರ ನಷ್ಟ ಅನುಭವಿಸಿದ ರಾಷ್ಟ್ರಗಳೂ ಶಾಂತಿಯನ್ನು ಲಘುವಾಗಿ ಸ್ಥಾಪಿಸಲು ಇಷ್ಟಪಡಲಿಲ್ಲ. ಆದರೂ ತಮ್ಮ ತಮ್ಮ ದೇಶದ ಸ್ವಾರ್ಥಗಳನ್ನು ಮುಂದು ಮಾಡಿಕೊಂಡ ಶಾಂತಿ ಸಮ್ಮೇಳನದ ನಾಯಕರು ಅನೇಕ ವೇಳೆ ಆದರ್ಶವನ್ನೇ ಬಲಿಗೊಟ್ಟರು.

ಶಾಂತಿ ಕೌಲುಗಳು

ಬದಲಾಯಿಸಿ

ಹೋರಾಟ ನಿಲ್ಲಿಸಿದ ತರುವಾಯ ಮಿತ್ರರಾಷ್ಟ್ರಗಳ ಪ್ರತಿನಿಧಿಗಳು ಪ್ಯಾರಿಸ್ ನಗರದಲ್ಲಿ ಸೇರಿ ಶಾಂತಿಯ ಕೌಲುಗಳ ವಿಚಾರ ಪರ್ಯಾಲೋಚಿಸಲು ಮೊದಲಿಟ್ಟರು. ಮಿತ್ರರಾಷ್ಟ್ರಗಳಲ್ಲಿ ಸೇರಿದ್ದ ಪ್ರತಿರಾಷ್ಟ್ರದ ಪ್ರತಿನಿಧಿಯೂ ಅಲ್ಲಿಗೆ ಬಂದಿದ್ದ. ಅಮೆರಿಕನ್ ಅಧ್ಯಕ್ಷ ವಿಲ್ಸನ್, ಬ್ರಿಟಿಷ್ ಪ್ರಧಾನಿ ಲಾಯ್ಡ್‌ ಜಾರ್ಜ್, ಫ್ರೆಂಚ್ ಪ್ರಧಾನಿ ಕ್ಲೇಮೊನ್ನಸೋ, ಇಟಲಿಯ ಪ್ರಧಾನ ಮಂತ್ರಿ ಆರ್ಲಾಂಡೋ ಇವರು ಈ ಮಾತುಕತೆಗಳಲ್ಲಿ ಭಾಗವಹಿಸಿದವರಲ್ಲಿ ಪ್ರಧಾನರು. ಪ್ಯಾರಿಸ್ ನಗರದಲ್ಲಿ ಸೇರಿದ ಮಿತ್ರಮಂಡಲಿಯ ಪ್ರಮುಖರು ಜಗತ್ತನ್ನೇ ಪುನಃ ಕಟ್ಟುವ ಕೆಲಸ ನಿರ್ವಹಿಸಬೇಕಾಗಿತ್ತು. ಅಧ್ಯಕ್ಷ ವಿಲ್ಸನ್ ಅಮೆರಿಕವನ್ನು ಯುದ್ಧದಲ್ಲಿ ಸೇರಿಸುವ ಮೊದಲು ತನ್ನ ಉದ್ದೇಶಗಳನ್ನು ಎಲ್ಲರಿಗೂ ತಿಳಿಯಪಡಿಸಿದ್ದ. ಇಷ್ಟು ಪ್ರಳಯಕಾರಕ ಯುದ್ಧ ಪುನಃ ಸಂಭವಿಸದಂಥ ವ್ಯವಸ್ಥೆ ಏರ್ಪಡಬೇಕೆಂಬುದು ಎಲ್ಲರ ಮನಸ್ಸಿನಲ್ಲೂ ಇತ್ತು. ವಿಲ್ಸನ್ ದೂರದೃಷ್ಟಿಯುಳ್ಳವ, ರಾಷ್ಟ್ರಗಳು ಜಾತಿ ಬಂಧುಗಳಂತಿದ್ದು ಅನ್ಯೋನ್ಯತೆಯಿಂದಿರಬೇಕು. ಮನಸ್ತಾಪಗಳು ತೋರಿದಾಗ ಅವು ನ್ಯಾಯ ರೀತಿಯಲ್ಲಿ ಪರಿಹಾರವಾಗಬೇಕು. ಮತ್ತು ಯುದ್ಧವೇ ಆಗಬಾರದು. ಇದು ಆತನ ಆಶಯ. ನಾನಾ ರಾಷ್ಟ್ರಗಳ ಮಧ್ಯೆ ಪಂಚಾಯಿತಿ ನಡೆಸಿ, ಜಗತ್ತಿನಲ್ಲಿ ನ್ಯಾಯ, ಶಾಂತಿಗಳನ್ನು ಕಾಪಾಡಬಲ್ಲ ಸಮಸ್ತ ರಾಷ್ಟ್ರಗಳ ಕೂಟವೊಂದು ಸ್ಥಾಪನೆಯಾಗಬೇಕೆಂಬುದಾಗಿ ಆತ ಹೇಳುತ್ತಿದ್ದ.

ಅಲ್ಲೋಲಕಲ್ಲೋಲವಾಗಿದ್ದ ಯುರೋಪಿನಲ್ಲಿ ಒಂದೊಂದು ಕುಲವೂ ಜಾತಿಯೂ ಪ್ರತ್ಯೇಕವಾಗಿ ಸ್ವತಂತ್ರ್ಯ ರಾಷ್ಟ್ರನಿರ್ಮಾಣ ಮಾಡಿಕೊಳ್ಳವುದಾದರೆ ಸ್ವಾತಂತ್ರ್ಯ ಸಾಧನೆಯ ಯುದ್ಧಗಳಿಗೆ ಅವಕಾಶವಿಲ್ಲದಂತಾದೀತೆಂದು ವಿಲ್ಸನ್ ಭಾವಿಸಿದ್ದ. ಆದ್ದರಿಂದ ಆತ ಮಧ್ಯ ಯುರೋಪಿನಲ್ಲಿ ಒಂದೊಂದು ಪಂಗಡವೂ ಪ್ರತ್ಯೇಕವಾಗಿ ಒಂದು ರಾಷ್ಟ್ರ ಕಟ್ಟಿಕೊಳ್ಳಲೆಂದು ವಾದಿಸಿದ. ಫ್ರೆಂಚರಿಗೆ ಆಲ್ಸೇಸ್-ಲೊರೇನ್ ಹಿಂತಿರುಗಿ ಬರಬೇಕಾಗಿತ್ತಲ್ಲದೆ ತಮಗಾದ ಅಪಾರ ನಷ್ಟವನ್ನು ಶತ್ರುಗಳಿಂದ ಕಟ್ಟಿಸಿಕೊಳ್ಳುವ ಉದ್ದೇಶವಿತ್ತು. ಬ್ರಿಟಿಷರಿಗೆ ಯುರೋಪಿನಲ್ಲಿ ಭೂಮಿಯ ಆಸೆಯಿರಲಿಲ್ಲ. ಆದರೆ ಜಲಾಂತರ್ಗಾಮಿಗಳ ಹಾವಳಿ ಅನುಭವಿಸಿದ್ದುದರಿಂದ ಶತ್ರುಗಳು ನಡೆಸಿದ ದೌಷ್ಟ್ಯವನ್ನೆಲ್ಲ ಕ್ಷಮಿಸಿ ಮರೆಯುವುದು ಸಾಧ್ಯವಿರಲಿಲ್ಲ. ಜರ್ಮನ್ನರನ್ನು ದಂಡಿಸಿ ಅವರಿಂದ ತಮ್ಮ ನಷ್ಟಕ್ಕೆ ತಕ್ಕ ಪರಿಹಾರದ್ರವ್ಯ ಪಡೆಯಬೇಕೆಂದು ಫ್ರೆಂಚರಂತೆ ಬ್ರಿಟಿಷರೂ ಭಾವಿಸಿದರು. ಇತರ ಗಣ್ಯ ರಾಷ್ಟ್ರಗಳೂ ಜಯದಿಂದ ಲಾಭಗಿಟ್ಟಿಸುವ ಆಸೆ ಹೊಂದಿದ್ದುವು. ಯುದ್ಧದ ವೇಳೆಯಲ್ಲಿ ಪರಸ್ಪರವಾಗಿ ನೀಡಿದ ರಹಸ್ಯ ವಾಗ್ದಾನಗಳ ವಿಚಾರವನ್ನು ಬೇರೆ ಪರಿಶೀಲಿಸಬೇಕಾಗಿತ್ತು. ಸರ್ವರಿಗೂ ನ್ಯಾಯವೂ ಕ್ಷೇಮವೂ ಆಗಿರುವಂತೆ ಸಂಧಾನ ನೆರವೇರಿಸಬೇಕೆಂದಿದ್ದ ವಿಲ್ಸನ್ನ ಬಳಿಗೆ ಪ್ರತಿಯೊಂದು ದೇಶವೂ ನಿಯೋಗಗಳನ್ನು ಕಳುಹಿಸಿಕೊಟ್ಟಿತು. ಆತನಿಗೂ ಇತರರಿಗೂ ಬರಬರುತ್ತಾ ಹೊಂದಿಕೆ ಕಡಿಮೆಯಾಯಿತು. ಆದರೆ ಯಾರೂ ತಮ್ಮ ಆಸೆಗಳನ್ನೆಲ್ಲ ಸಾಧಿಸಿಕೊಳ್ಳುವ ಹಾಗಾಗಲಿಲ್ಲ. ಎಷ್ಟೋ ಗೋಷ್ಠಿಗಳೂ ಚರ್ಚೆಗಳೂ ನಡೆದ ಬಳಿಕ ಪ್ಯಾರಿಸಿನಲ್ಲೇ ಈ ಬಗ್ಗೆ ಕೌಲುಗಳಾದುವು. ಈ ಎಲ್ಲ ಕರಾರುಗಳನ್ನೂ ವರ್ಸೇಲ್ಸ್‌ ಕೌಲುಗಳೆಂದು ಕರೆಯುವುದು ವಾಡಿಕೆಯಾದರೂ ಜರ್ಮನಿಯೊಂದಿಗೆ ಮಾಡಿಕೊಂಡ ಕೌಲಿಗೆ ಮಾತ್ರ ಈ ಹೆಸರು ಅನ್ವರ್ಥವಾದದ್ದು. ಅದು ಆದದ್ದು ಪ್ಯಾರಿಸಿನ ಬಳಿಯ ವರ್ಸೇಲ್ಸ್‌ ನಗರದಲ್ಲಿ, ಆಸ್ಟ್ರಿಯ, ಬಲ್ಗೇರಿಯ, ತುರ್ಕಿ, ಹಂಗರಿಗಳೊಡನೆ ಬೇರೆಬೇರೆಯಾದ ಕೌಲುಗಳೇ ಆದವು.

ವರ್ಸೇಲ್ಸ್‌ ಕೌಲು

ಬದಲಾಯಿಸಿ

1919 ಜೂನ್ 28ರಂದು ಮಿತ್ರರಾಷ್ಟ್ರಗಳು ಜರ್ಮನಿಯೊಡನೆ ವರ್ಸೇಲ್ಸ್‌ನಲ್ಲಿ ಕೌಲು ಮಾಡಿಕೊಂಡುವು. ಇದರ ಉದ್ದೇಶ ಅದರ ಪೀಠಿಕೆಯಲ್ಲಿ ಹೇಳಿರುವಂತೆ ಯುದ್ಧವಾತಾವರಣವನ್ನು ಕೊನೆಗಾಣಿಸಿ ಶಾಶ್ವತವಾದ ಶಾಂತಿ ಸ್ಥಾಪಿಸುವುದು. ಈ ಒಪ್ಪಂದ 15 ಭಾಗಗಳನ್ನು ಒಳಗೊಂಡಿದ್ದಿತು. ಇವಲ್ಲದೆ 140ರಷ್ಟು ಬೇರೆ ಬೇರೆ ಷರತ್ತುಗಳೂ ಅನೇಕ ಅನುಬಂಧಗಳೂ ಸೇರಿದ್ದುವು.

ಆಲ್ಸೇಸ್-ಲೊರೇನ್ ಪ್ರದೇಶವನ್ನು ಫ್ರಾನ್ಸಿಗೆ ಹಿಂದಿರುಗಿಸಲಾಯಿತು. ಬೆಲ್ಜಿಯಂ ಸರಕಾರ ನಡಿಸಿದ ಜನಮತಗಣನೆಯ ಆಧಾರದ ಮೇಲೆ ಆ ದೇಶಕ್ಕೆ 70,000 ಜನಸಂಖ್ಯೆಯುಳ್ಳ ಯೂಪೇನ್, ಮಾಲ್ಮೇಡೀ ಮತ್ತು ಮಾರ್ಸೆನಟ್ಗಳನ್ನು ಕೊಡಲಾಯಿತು. ಮತ್ತೊಂದು ಜನಮತಗಣನೆಯ ಆಧಾರದ ಮೇಲೆ ಡೆನ್ಮಾರ್ಕಿಗೆ ಉತ್ತರ ಷೆಲ್ಸ್‌ವಿಗೆ ಪ್ರಾಂತ್ಯ ಕೊಡಲಾಯಿತು. ಪ್ರಷ್ಯ ಮತ್ತು ಆಸ್ಟ್ರಿಯ ಈ ಪ್ರಾಂತ್ಯವನ್ನು 1864ರಲ್ಲಿ ಡೆನ್ಮಾರ್ಕಿನಿಂದ ಕಸಿದುಕೊಂಡಿದ್ದುವು. ದಕ್ಷಿಣ ಷೆಲ್ಸ್‌ವಿಗ್ ಮಾತ್ರ ಜರ್ಮನಿಯಲ್ಲೇ ಉಳಿಯಿತು. ಉತ್ತರ ಸೈಲೀಷಿಯ ಪ್ರಾಂತ್ಯದ ಒಂದು ಸಣ್ಣ ಭಾಗ ಹೋದದ್ದು ಚೆಕೊಸ್ಲೊವಾಕಿಯಕ್ಕೆ, ಹೊಸದಾಗಿ ಸ್ವಾತಂತ್ರ್ಯ ಪಡೆದ ಪೋಲೆಂಡಿಗೆ ಜರ್ಮನಿಯ ಪೋಸೆನ್ ಪ್ರಾಂತ್ಯದ ಹಲವು ಭಾಗಗಳು ಮತ್ತು ಪೋಲಿಷ್ ಜನಾಂಗದವರು ವಾಸಿಸುತ್ತಿದ್ದ 4038 ಕಿಮೀಗಳಷ್ಟು ಉದ್ದ 194ಕಿಮೀ. ಅಗಲವಿದ್ದ ಪಶ್ಚಿಮ ಪ್ರಷ್ಯವನ್ನು ಕೊಡಲಾಯಿತು. ಜರ್ಮನ್ ಜನಾಂಗದವರೇ ಹೆಚ್ಚಾಗಿದ್ದ ಡ್ಯಾನ್ಸಿಗ್ ಪಟ್ಟಣವನ್ನು ರಾಷ್ಟ್ರಗಳ ಕೂಟದ ಕೈಕೆಳಗೆ ಸ್ವತಂತ್ರ ಪಟ್ಟಣವೆಂದು ಘೋಷಿಸಲಾಯಿತು. ಆದರೆ ಪೋಲೆಂಡಿಗೆ ಈ ನಗರದ ಮೇಲೆ ಹಲವು ತಾಂತ್ರಿಕ ಹಾಗೂ ಆರ್ಥಿಕ ಹಕ್ಕುಗಳು ದೊರಕಿದುವು. ಜರ್ಮನ್ನರು ಯುದ್ಧಪೂರ್ವದಲ್ಲಿ ತಮಗೆ ಸೇರಿದ್ಧ ವಸಾಹತುಗಳನ್ನು ಮಿತ್ರ ರಾಷ್ಟ್ರಗಳ ಸ್ವಾಧೀನಕ್ಕೆ ಒಪ್ಪಿಸಿದರು. ಇವು ರಾಷ್ಟ್ರಗಳ ಕೂಟದ ನಿಯುಕ್ತ ಪ್ರದೇಶಗಳಾಗಿ ಗ್ರೇಟ್ಬ್ರಿಟನ್, ಫ್ರಾನ್ಸ್‌, ಬೆಲ್ಜಿಯಂ, ಜಪಾನ್, ದಕ್ಷಿಣ ಆಫ್ರಿಕ ಒಕ್ಕೂಟ, ಆಸ್ಟ್ರೇಲಿಯ ಮತ್ತು ನ್ಯೂಜಿ಼ಲೆಂಡ್ಗಳ ವಶಕ್ಕೆ ಬಂದುವು. ಜರ್ಮನಿ ಚೀನದ ಕ್ವೇಚಾವ್ ಪ್ರಾಂತ್ಯದಲ್ಲಿ ಅನುಭವಿಸುತ್ತಿದ್ದ ವಿಶೇಷ ಹಕ್ಕು ಸೌಲಭ್ಯಗಳನ್ನು ಜಪಾನಿಗೆ ಬಿಟ್ಟುಕೊಡ ಬೇಕಾಯಿತು. ಚೀನ, ಥೈಲೆಂಡ್, ಲೈಬೀರಿಯ, ಮೊರಾಕೋ ಮತ್ತು ಈಜಿಪ್ಟ್‌ಗಳಲ್ಲಿ ಜರ್ಮನಿ ಹೊಂದಿದ್ದ ಎಲ್ಲ ವಿಶೇಷ ಹಕ್ಕುಗಳನ್ನೂ ಕಿತ್ತುಕೊಳ್ಳಲಾಯಿತು. ಜರ್ಮನ್ನರಿಗೆ ತುರ್ಕಿ ಮತ್ತು ಬಲ್ಗೇರಿಯಗಳಲ್ಲಿ ಸೇರಿದ್ದ ಆಸ್ತಿಪಾಸ್ತಿಗಳೂ ಮುಟ್ಟುಗೋಲಾದುವು.

ಲಕ್ಸೆಂಬರ್ಗನ್ನು ಜರ್ಮನ್ ಒಕ್ಕೂಟದಿಂದ ಬೇರ್ಪಡಿಸಲಾಯಿತು. ಅಲ್ಲಿಯ ರೈಲ್ವೆಗಳನ್ನು ಬಳಸಿಕೊಳ್ಳುವ ಹಕ್ಕೂ ಮೊಟಕುಗೊಂಡಿತು. ಜರ್ಮನಿ ರ್ಹೈನ್ ನದಿಯ ಎಡದಂಡೆಯಲ್ಲಾಗಲಿ ಬಲದಂಡೆಯಲ್ಲಾಗಲಿ ಯಾವುದೇ ವಿಧವಾದ ರಕ್ಷಣೆಗೆ. ಸೈನ್ಯಕಾರ್ಯಾಚರಣೆಗೆ ಸಂಬಂಧ ಪಟ್ಟಂಥ ಕಟ್ಟಡಗಳನ್ನು ಕೋಟೆ ಕೊತ್ತಲಗಳನ್ನು ಕಟ್ಟಕೂಡದೆಂದು ತೀರ್ಮಾನಿಸಲಾಯಿತು. ಜರ್ಮನಿಯಿಂದ ಫ್ರಾನ್ಸಿಗೆ ಸಾóರ್ ಕಲ್ಲಿದ್ದಲು ಗಣಿ ಪ್ರದೇಶ ವರ್ಗವಾಯಿತು. ಒಂದನೆಯ ಮಹಾಯುದ್ಧ ಕಾಲದಲ್ಲಿ ಅದು ಫ್ರಾನ್ಸಿನ ಉತ್ತರ ಭಾಗದ ಅನೇಕ ಕಲ್ಲಿದ್ದಲು ಗಣಿಗಳನ್ನು ನಾಶಮಾಡಿದ್ದಕ್ಕೆ ಇದು ಪರಿಹಾರ; ಅಲ್ಲದೆ ಯುದ್ಧ ವೆಚ್ಚದ, ಒಂದು ಭಾಗಕ್ಕೆ ಇದು ಉತ್ತರ. ಇದಲ್ಲದೆ 15 ವರ್ಷಗಳ ಕಾಲ ಸಾóರ್ ಆಡಳಿತವನ್ನು ರಾಷ್ಟ್ರಗಳ ಕೂಟದ ಒಂದು ಸಮಿತಿಯ ಕೈಗೆ ಒಪ್ಪಿಸಬೇಕೆಂದು ತೀರ್ಮಾನವಾಯಿತು. ಜರ್ಮನಿ ಆಸ್ಟ್ರಿಯದ ಸ್ವಾತಂತ್ರ್ಯವನ್ನು ಒಪ್ಪಿಕೊಳ್ಳಬೇಕಾಯಿತು.

ವರ್ಸೇಲ್ಸ್‌ ಒಪ್ಪಂದದ 5ನೆಯ ಭಾಗದಲ್ಲಿ ಸೈನ್ಯ, ಜಲನೌಕೆ ಮತ್ತು ವಿಮಾನ ದಳಗಳಿಗೆ ಸಂಬಂಧಪಟ್ಟಂಥ ಕಾನೂನುಗಳಿವೆ. ಜರ್ಮನ್ ಸೈನ್ಯಬಲ 400 ಸೇನಾನಾಯಕರೂ ಸೇರಿ 1,00,000ಕ್ಕಿಂತ ಮೀರಬಾರದೆಂದಾಯಿತು. ಒಳನಾಡಿನ ಶಾಂತಿಸ್ಥಾಪನೆಯಲ್ಲಿ ನೆರವು ನೀಡುವುದೂ ದೇಶದ ಮೇರೆಗಳನ್ನು ಕಾಪಾಡಿಕೊಂಡು ಬರುವುದೂ ಮಾತ್ರವೇ ಇದರ ಕರ್ತವ್ಯ. ಸೈನ್ಯಕ್ಕೆ ಬೇಕಾದ ಶಸ್ತ್ರಾಸ್ತ್ರ, ಮದ್ದು ಗುಂಡುಗಳ ತಯಾರಿಕೆಯನ್ನೂ ಒಂದು ಮಿತಿಗಿಂತ ಹೆಚ್ಚಿಸುವಂತಿರಲಿಲ್ಲ. ಇವನ್ನು ಮಿತ್ರ ರಾಷ್ಟ್ರಗಳು ಸೂಚಿಸಿದ ಸ್ಥಳಗಳಲ್ಲಿ ಮಾತ್ರ ದಾಸ್ತಾನು ಮಾಡಬೇಕೆಂಬುದೂ ಒಂದು ಷರತ್ತು. ಯುದ್ಧಕ್ಕೆ ಸಂಬಂಧಪಟ್ಟ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವುದೂ, ವಿಷವಾಯುಗಳು ಶಸ್ತ್ರಾಸ್ತ್ರ ಸಜ್ಜಿತವಾದ ವಾಹನಗಳು ಮತ್ತು ಟ್ಯಾಂಕುಗಳನ್ನು ತಯಾರಿಸುವುದೂ ಕೊಳ್ಳುವುದೂ ನಿಷಿದ್ಧವೆನಿಸಿದುವು. ಬಲವಂತದಿಂದ ಸೈನ್ಯಕ್ಕೆ ಸೇರಿಸಿಕೊಳ್ಳುವ ಕಾನೂನನ್ನು ತೆಗೆದುಹಾಕಿ ಸ್ವಂತ ಇಚ್ಛೆಯಿಂದ ಬರುವವರಿಗೆ ಮಾತ್ರ ಅವಕಾಶ ಕಲ್ಪಿಸಲಾಯಿತು. ವಿದ್ಯಾಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು, ನಿವೃತ್ತರಾದ ಸೈನಿಕರ ಸಂಘಗಳು, ಷೂಟಿಂಗ್ ಕ್ಲಬ್ಗಳು ಪ್ರವಾಸಿ ಸಂಘಗಳೇ ಮೊದಲಾದ ಎಲ್ಲ ಬಗೆಯ ಸಂಘ ಸಂಸ್ಥೆಗಳು ಸೈನ್ಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ಚರ್ಚಿಸುವುದನ್ನಾಗಲಿ, ಆ ವಿಷಯಗಳ ಬಗ್ಗೆ ಗಮನ ಹರಿಸುವುದನ್ನಾಗಲಿ ನಿಷೇಧಿಸಲಾಯಿತು.

ನೌಕಾದಳಕ್ಕೆ ಸಂಬಂಧಪಟ್ಟ ಷರತ್ತುಗಳು ಅಷ್ಟೇ ಕಠಿಣ. ಆರು ಯುದ್ಧ ನೌಕೆಗಳನ್ನು ಮಾತ್ರ ಅದು ಇಟ್ಟುಕೊಳ್ಳಬಹುದಾಗಿತ್ತು; ಜಲಾಂತರ್ಗಾಮಿಗಳನ್ನಿಟ್ಟುಕೊಳ್ಳುವಂತಿರಲಿಲ್ಲ. ಹೊಸದಾಗಿ ಯುದ್ಧನೌಕೆಗಳನ್ನು ಕಟ್ಟಬಾರದೆಂಬುದೂ ಒಂದು ವಿಧಿ, ನೌಕಾಬಲದ ಗಾತ್ರವನ್ನು 15,000ಕ್ಕೆ ಮಿತಿಗೊಳಿಸಲಾಯಿತು. ಈ ಸಂಖ್ಯೆಯಲ್ಲಿ 1500 ಜನ ಅಧಿಕಾರಿಗಳು. ವಾಣಿಜ್ಯನೌಕೆಯಲ್ಲಿ ಕೆಲಸ ಮಾಡುವ ಯಾವ ಜರ್ಮನನೂ ಯುದ್ಧನೌಕಾದಳದ ತರಬೇತಿ ತೆಗೆದುಕೊಳ್ಳುವಂತಿರಲಿಲ್ಲ. ಅನುಮತಿ ನೀಡಲಾದ ಸಂಖ್ಯೆಗಿಂತ ಹೆಚ್ಚಿಗೆ ಇದ್ದ ಎಲ್ಲ ನೌಕೆಗಳನ್ನೂ ಜರ್ಮನಿ ನಾಶಮಾಡಬೇಕಾಯಿತು. ಅದು ವಿಮಾನದಳ ಹೊಂದುವುದಕ್ಕೂ ಅವಕಾಶವಿರಲಿಲ್ಲ. ವಾಯುದಳಕ್ಕೆ ಸಂಬಂಧಪಟ್ಟ ಎಲ್ಲ ವಸ್ತುಗಳನ್ನೂ ಮಿತ್ರರಾಷ್ಟ್ರಗಳಿಗೆ ಹಿಂತಿರುಗಿಸಬೇಕಾಯಿತು.

ಜರ್ಮನಿ ಮತ್ತು ಅದರ ಮಿತ್ರರು ಮಹಾಯುದ್ಧಕ್ಕೆ ಕಾರಣರೆಂದು, ಆಕ್ರಮಣಕಾರರೆಂದು ಮತ್ತು ವಿನಾಶಕಾರಣರಾದವರೆಂದು ಘೋಷಿಸಲಾಯಿತು. ಯುದ್ಧದ ಸಾಮಾನ್ಯ ಕಾನೂನುಗಳನ್ನು ಮೀರಿ ಕ್ರೂರವಾಗಿ ವರ್ತಿಸಿದ ಎಲ್ಲರನ್ನೂ ಲೈಪ್ಜಿ಼ಗ್ನಲ್ಲಿ ವಿಚಾರಿಸಿ ಶಿಕ್ಷಿಸಬೇಕೆಂಬುದೂ ಈ ಒಪ್ಪಂದದ ಒಂದು ಅಂಶ. ಜರ್ಮನ್ ಚಕ್ರವರ್ತಿ ಎರಡನೆಯ ವಿಲಿಯಂನನ್ನು ಸಾರ್ವಜನಿಕವಾಗಿ ವಿಮರ್ಶಿಸಿ, ಅವನು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ನೈತಿಕ ಪತನವನ್ನುಂಟುಮಾಡಿದ ವ್ಯಕ್ತಿ ಎಂದು ಪರಿಗಣಿಸಲಾಯಿತು. ವಿಶೇಷ ಸಮಿತಿಯೊಂದನ್ನು ಸ್ಥಾಪಿಸಿ ಅವನನ್ನು ವಿಚಾರಣೆಗೆ ಗುರಿಮಾಡಬೇಕೆಂಬುದೂ ಇಲ್ಲಿ ಆದ ಒಂದು ನಿರ್ಣಯ.

ಜರ್ಮನಿ ಮಿತ್ರರಾಷ್ಟ್ರಗಳಿಗೆ ಚಿನ್ನ, ಹಡಗುಗಳು, ಸೆಕ್ಯೂರಿಟಿಗಳು ಮತ್ತು ಪದಾರ್ಥಗಳ ಮೂಲಕ ಸುಮಾರು 500,00,000 ಡಾಲರ್ಗಳಷ್ಟು ಪರಿಹಾರ ಕೊಡಬೇಕೆಂದು ತೀರ್ಮಾನಿಸಲಾಯಿತು.

ಇಷ್ಟು ಪರಿಹಾರಧನವನ್ನು ಪೂರ್ಣ ಹಣದ ರೂಪದಲ್ಲಿ ಕೊಡಲು ಜರ್ಮನಿ ಅಶಕ್ತವಾಗಿದ್ದುದರಿಂದ, ಅದು ಒಂದು ಭಾಗವನ್ನು ಮಿತ್ರರಾಷ್ಟ್ರಗಳು ಸೂಚಿಸುವ ಪದಾರ್ಥ ರೂಪದಲ್ಲಿ ಕೊಡಬಹುದಾಗಿತ್ತು. ಮಿತ್ರರಾಷ್ಟ್ರಗಳು ಕಳೆದುಕೊಂಡಿದ್ದ ನೌಕೆಗಳ ಬದಲಾಗಿ ಜರ್ಮನಿ ಕೊಡಬೇಕಾಗಿಬಂದ ವಾಣಿಜ್ಯನೌಕೆಗಳ ಸಂಖ್ಯೆ 1600.

ಜರ್ಮನಿ ಪ್ರತಿವರ್ಷ ಈ ಕೆಳಕಂಡಂತೆ ಕಲ್ಲಿದ್ದಲನ್ನು 10 ವರ್ಷಗಳ ಕಾಲ ಕೊಡಬೇಕು: ಫ್ರಾನ್ಸಿಗೆ 70,00,000 ಟನ್ನುಗಳು; ಬೆಲ್ಜಿಯಂಗೆ 80,00,000 ಟನ್ನುಗಳು; ಇಟಲಿಗೆ 77,00,000 ಟನ್ನುಗಳು. ಇದಲ್ಲದೆ ಫ್ರಾನ್ಸಿಗೆ ಜರ್ಮನಿ ಮೂರು ವರ್ಷಗಳ ಕಾಲ 35,000 ಟನ್ ಬೆಂಜಾ಼ಲ್, 50,000 ಟನ್ ಕೋಲ್ ಟಾರ್ ಮತ್ತು 30,000 ಟನ್ ಅಮೋನಿಯಂ ಸಲ್ಫೇಟನ್ನೂ ಕೊಡಬೇಕೆಂದು ವಿಧಿಸಲಾಯಿತು.

ಒಟ್ಟಿನಲ್ಲಿ ವರ್ಸೇಲ್ಸ್‌ ಕೌಲಿನಿಂದ ಜರ್ಮನಿಯ ವಿಸ್ತೀರ್ಣ ಯುರೋಪಿನಲ್ಲಿ ಮೊಟಕಾಯಿತು. ಕಡಿಮೆಯಾದ ಜನಸಂಖ್ಯೆ 6,00,000. ಜರ್ಮನಿಯ ಎಲ್ಲ ವಸಾಹತುಗಳೂ ನಷ್ಟವಾದುವಲ್ಲದೆ ಹೊರದೇಶಗಳಲ್ಲಿ ತೊಡಗಿಸಿದ್ದ ಬಂಡವಾಳ, ಆಸ್ತಿಪಾಸ್ತಿಗಳಿಗೆ ಮುಟ್ಟುಗೋಲು ಹಾಕಲಾಯಿತು. ಶೇ. 15.5 ವ್ಯವಸಾಯದ ಭೂಮಿಯನ್ನು, ಶೇ. 12 ಜಾನುವಾರುಗಳನ್ನು ಮತ್ತು ಶೇ. 10 ಕಾರ್ಖಾನೆಗಳನ್ನು ಜರ್ಮನಿ ಕಳೆದುಕೊಂಡಿತು. ಜರ್ಮನಿಯ ವಾಣಿಜ್ಯ ಹಡಗುಗಳನ್ನು 57,00,000 ಟನ್ನುಗಳಿಂದ 5,00,000 ಟನ್ನುಗಳಿಗೆ ಇಳಿಸಲಾಯಿತು. ಹಡಗುಬಲದಲ್ಲಿ ಅದು ಪಡೆದಿದ್ದ ಎರಡನೆಯ ಸ್ಥಾನ ನಷ್ಟವಾಯಿತು. ಜರ್ಮನಿಯ ಸೈನ್ಯ ಬೆಲ್ಜಿಯಂ ದೇಶದ ಸೈನ್ಯಕ್ಕಿಂತ ಸ್ವಲ್ಪ ಹೆಚ್ಚಾಗಿತ್ತಷ್ಟೆ. ಕೌಲಿನ ಪ್ರಕಾರ ಅದು ಐರೋಪ್ಯ ರಾಷ್ಟ್ರಗಳಿಗೆ ಪೊಟಾಷ್, ಕಬ್ಬಿಣ, ಕಲ್ಲಿದ್ದಲು, ಸತು, ಸೀಸ ಮುಂತಾದವನ್ನು ಕೊಡಬೇಕಾಗಿ ಬಂದದ್ದರಿಂದ ಅದು ಕೈಗಾರಿಕಾ ರಾಷ್ಟ್ರವಾಗಿ ತಲೆ ಎತ್ತುವುದು ಕಷ್ಟವಾಯಿತು. ವಸಾಹತುಗಳನ್ನು ಕಳೆದುಕೊಂಡಿದ್ದರಿಂದ ರಬ್ಬರ್, ಎಣ್ಣೆ ಮತ್ತು ಹತ್ತಿಗಳ ಪುರೈಕೆಯೂ ತಪ್ಪಿತು. ಕೊನೆಯದಾಗಿ ಜರ್ಮನಿ ಖಾಲಿ ಚೆಕ್ಕನ್ನು ಕೊಟ್ಟು ಮಿತ್ರರಾಷ್ಟ್ರಗಳು, ನಿರ್ಧರಿಸಿದಷ್ಟು ಪರಿಹಾರವನ್ನು ಕೊಡುವುದಕ್ಕೆ ಒಪ್ಪಿಕೊಳ್ಳಬೇಕಾದ್ದೊಂದು ದೊಡ್ಡ ನಷ್ಟ.

ಆಸ್ಟ್ರಿಯದೊಡನೆ ಸೆಂಟ್-ಜರ್ಮೇನ್ ಕೌಲು

ಬದಲಾಯಿಸಿ

ಅಮೆರಿಕ, ಬ್ರಿಟನ್, ಫ್ರಾನ್ಸ್‌ ಮತ್ತು ಇಟಲಿಗಳು ಆಸ್ಟ್ರಿಯದೊಡನೆ ಸೆಂಟ್-ಜರ್ಮೇನ್ ಒಪ್ಪಂದ ಮಾಡಿಕೊಂಡುವು. ಇದು ಮೂಲತಃ ವರ್ಸೇಲ್ಸ್‌ ಒಪ್ಪಂದವನ್ನೆ ಹೋಲುತ್ತಿತ್ತು. ಆಸ್ಟ್ರಿಯ ಇಟಲಿಗೆ ದಕ್ಷಿಣ ಟೆರೊಲುಟ್ರೆಂಟೀನೋ, ಟ್ರೀಯಸ್ಟ್‌, ಐಸ್ಟ್ರಿಯ ಮತ್ತು ಡಾಲ್ಮೀಷಿಯಕ್ಕೆ ಆಚೆ ಇದ್ದ ಕೆಲವು ದ್ವೀಪಗಳನ್ನು ಬಿಟ್ಟುಕೊಟ್ಟಿತು. ಯುದ್ಧಕ್ಕೆ ಪುರ್ವದಲ್ಲಿ ಆಸ್ಟ್ರಿಯಕ್ಕೆ ಸೇರಿದ್ದ ಬೊಹಿಮಿಯ, ಮೊರಾವಿಯ, ದಕ್ಷಿಣ ಆಸ್ಟ್ರಿಯದ ಕೆಲವು ಭಾಗಗಳು ಆಸ್ಟ್ರಿಯನ್ ಸೈಲೀಷಿಯದ ಮುಕ್ಕಾಲು ಭಾಗ ಈ ಪ್ರದೇಶಗಳನ್ನು ಸೇರಿಸಿ ಚೆಕೊಸ್ಲೊವಾಕಿಯದ ಒಂದು ಭಾಗವನ್ನಾಗಿ ಮಾಡಲಾಯಿತು. ಹೆಚ್ಚಾಗಿ ಕೈಗಾರಿಕೆಗಳಿಂದ ಆವೃತವಾಗಿದ್ದ ಟಿಷೇನ್ ಡಿಸ್ಟ್ರಿಕ್ಟನ್ನು ಪೋಲೆಂಡ್ ಮತ್ತು, ಚೆಕೊಸ್ಲೊವಾಕಿಯಗಳಿಗೆ ಹಂಚಿಕೊಡಲಾಯಿತು. ಬುಕೋವಿನವನ್ನು ರೊಮೇನಿಯಕ್ಕೆ ಕೊಡಲಾಯಿತು. ಬಾಸ್ಲಿಯ, ಹರ್ಸಗೋವಿನ ಮತ್ತು ಡಾಲ್ಮೀಷಿಯನ್ ತೀರಪ್ರದೇಶ ಮತ್ತು ದ್ವೀಪಗಳು ಯುಗೊಸ್ಲಾವಿಯಕ್ಕೆ ದೊರಕಿದುವು. ಒಟ್ಟಿನಲ್ಲಿ ಮೊದಲಿದ್ದುದಕ್ಕಿಂತ ಜನಸಂಖ್ಯೆಯಲ್ಲಿ ಮತ್ತು ವಿಸ್ತೀರ್ಣದಲ್ಲಿ ¾ರಷ್ಟು ಕಡಿಮೆಯಾಯಿತು. ಆಸ್ಟ್ರಿಯ ಸಂಪುರ್ಣವಾಗಿ ತನ್ನ ನೌಕಾಬಲವನ್ನು ಕಳೆದುಕೊಂಡಿತು. ಉಳಿದದ್ದೆಂದರೆ ಡ್ಯಾನ್ಯೂಬ್ ನದಿಯ ಮೇಲೆ 3 ಪೊಲೀಸ್ ದೋಣಿಗಳು ಮಾತ್ರ. ಅದು ಇಟ್ಟುಕೊಳ್ಳಬಹುದಾಗಿದ್ದ ಸೈನ್ಯ 30,000.

ಬಲ್ಗೇರಿಯದೊಡನೆ ನ್ಯೂಯಿಲಿ ಕೌಲು

ಬದಲಾಯಿಸಿ

ಬಲ್ಗೇರಿಯದೊಡನೆ ನ್ಯೂಯಿಲಿ ಒಪ್ಪಂದವಾದದ್ದು 1919ರ ನವೆಂಬರ್ 27ರಂದು. ರಕ್ಷಣೆ, ರೈಲ್ವೆ ಮೊದಲಾದ ಕಾರಣಗಳಿಂದ ಪಶ್ಚಿಮ ಬಲ್ಗೇರಿಯದ ನಾಲ್ಕು ಚಿಕ್ಕಪ್ರದೇಶಗಳು ಯುಗೊಸ್ಲಾವಿಯಕ್ಕೂ ಪಶ್ಚಿಮ ಥ್ರೇಸ್ ಗ್ರೀಸಿಗೂ ಸೇರಿದುವು. ಗ್ರೀಸ್-ಬಲ್ಗೇರಿಯ ಮೇರೆಗಳಲ್ಲಿ ಸೂಕ್ತವಾದ ಬದಲಾವಣೆಗಳೂ ಆದುವು. ಇದರಿಂದ ಬಲ್ಗೇರಿಯಕ್ಕೆ ಈಜಿಯನ್ ಸಮುದ್ರತೀರ ನಷ್ಟವಾಯಿತು. ಆರ್ಥಿಕ ಪ್ರಗತಿಗಾಗಿ ಮಾತ್ರ ಬಲ್ಗೇರಿಯಕ್ಕೆ ತೀರಪ್ರದೇಶಕ್ಕೆ ಪ್ರವೇಶ ದೊರಕಿಸಿಕೊಡಲು ಮಿತ್ರರಾಷ್ಟ್ರಗಳು ಒಪ್ಪಿಗೆ ಇತ್ತುವು.

ಬಲ್ಗೇರಿಯದ ಸೈನ್ಯದ ಸಂಖ್ಯೆಯನ್ನು 20,000ಕ್ಕೆ ಇಳಿಸಲಾಯಿತು. ಇದರ ಜೊತೆಗೆ ಅದು 13,000 ದಷ್ಟು ಸೈನ್ಯಾಧಿಕಾರಿಗಳನ್ನು ಇಟ್ಟುಕೊಳ್ಳಬಹುದಾಗಿತ್ತು. 33,000ಕ್ಕಿಂತ ಹೆಚ್ಚಿನ ಬಂದೂಕಗಳನ್ನು ಬಲ್ಗೇರಿಯ ಇಟ್ಟುಕೊಳ್ಳುವಂತಿರಲಿಲ್ಲ. ವಿಸ್ತೀರ್ಣ ಮತ್ತು ಜನಸಂಖ್ಯೆಯ ದೃಷ್ಟಿಯಿಂದ ಬಲ್ಗೇರಿಯಕ್ಕೆ ಆದ ನಷ್ಟ ಅಂಥ ಹೆಚ್ಚಿನದೇನಲ್ಲ. ಆದರೆ ಬಲ್ಗೇರಿಯ ಸಮುದ್ರತೀರವನ್ನು ಹೊಂದದ ರಾಷ್ಟ್ರವಾಗಿ ಬದಲಾವಣೆಗೊಂಡದ್ದರಿಂದ, ಆ ದೇಶ ಬಾಲ್ಕನ್ ರಾಷ್ಟ್ರಗಳಲ್ಲೆಲ್ಲ ಬಹು ಆಶಕ್ತ ರಾಷ್ಟ್ರವಾಗಿ ಪರಿಣಮಿಸಿತು.

ಹಂಗರಿಯೊಂದಿಗೆ ಟ್ರಿಯಾನಾನ್ ಕೌಲು: ವರ್ಸೇಲ್ಸಿನ ಟ್ರಿಯಾನಾನ್ ಅರಮನೆಯಲ್ಲಿ 1920ರ ಜೂನ್ 4ರಂದು ಹಂಗರಿಯೊಡನೆ ಮಿತ್ರರಾಷ್ಟ್ರಗಳು ಒಪ್ಪಂದ ಮಾಡಿಕೊಂಡುವು. ಹಂಗರಿಯ ಸುತ್ತಮುತ್ತ ಇದ್ದ ರಾಜ್ಯಗಳಿಗೆ ಕೆಲವು ಸಣ್ಣಪುಟ್ಟ ಪ್ರದೇಶಗಳನ್ನು ಹಂಚಿಕೊಡ ಲಾಯಿತು. ಟ್ರಾನ್ಸಿಲ್ವೇನಿಯ ಮತ್ತು ಸುಮಾರು 15ಲಕ್ಷ ಮಗ್ಯಾರರನ್ನು ರೊಮೇನಿಯಕ್ಕೂ ತ್ರೋಷಿಯ-ಸ್ಲವೋನಿಯ ಪ್ರದೇಶಗಳನ್ನೂ 5ಲಕ್ಷ ಮಗ್ಯಾರರನ್ನೂ ಯುಗೋಸ್ಲಾವಿಯಕ್ಕೂ ಸೇರಿಸಲಾಯಿತು. ಸ್ಲೊವಾಕಿಯ ಹೊಸದಾಗಿ ಸ್ಥಾಪಿಸಲ್ಪಟ್ಟ ಚೆಕೊಸ್ಲಾವಾಕಿಯ ಗಣರಾಜ್ಯದ ಭಾಗವಾಯಿತು. ಕಾರ್ಪೇಥಿಯನ್ ಪರ್ವತಗಳ ಪುರ್ವ ಮತ್ತು ದಕ್ಷಿಣಕ್ಕಿದ್ದ ಕೆಲವು ಪ್ರದೇಶಗಳು ಸೇರಿದ್ದೂ ಚೆಕೊಸ್ಲಾವಾಕಿಯಕ್ಕೆ. ಸುಮಾರು 5ಲಕ್ಷ ಮಗ್ಯಾರರೂ 5ಲಕ್ಷ ರೂಥೇನಿಯನ್ ಜನರೂ ಈ ರೀತಿಯಾಗಿ ಚೆಕೊಸ್ಲಾವಾಕಿಯ ಗಣರಾಜ್ಯಕ್ಕೆ ಸೇರಿಹೋದರು. ಆಸ್ಟ್ರಿಯ ಪಶ್ಚಿಮ ಹಂಗರಿಯನ್ನು ಪಡೆಯಿತು. ಉಳಿದ ವಿಚಾರಗಳಲ್ಲಿ ಇದೂ ಆಸ್ಟ್ರಿಯ ಮತ್ತು ಬಲ್ಗೇರಿಯಗಳೊಡನೆ ಮಾಡಿಕೊಂಡ ಕೌಲುಗಳಂತೆಯೇ ಇದೆ. ಹಂಗರಿಯ ಸೈನ್ಯ ನಿಗದಿಯಾದದ್ದು 35,000ಕ್ಕೆ. ಹಂಗೆರಿಯ ನೌಕಾಬಲವನ್ನು ಕೆಲವು ದೋಣಿಗಳಿಗೆ ಮಾತ್ರ ಸೀಮಿತಗೊಳಿಸಲಾಯಿತು. ಹಂಗರಿಯೂ ಪರಿಹಾರಧನ ಕೊಡಬೇಕಾಯಿತು.

ಪರಿಣಾಮಗಳು

ಬದಲಾಯಿಸಿ
  • ಒಂದನೆಯ ಮಹಾಯುದ್ಧ ಮತ್ತು ಪ್ಯಾರಿಸ್ ಶಾಂತಿಕೌಲುಗಳ ಪರಿಣಾಮಗಳಿವು:
  • 1. ಜರ್ಮನಿ, ಆಸ್ಟ್ರಿಯ-ಹಂಗರಿ, ರಷ್ಯ ಮತ್ತು ತುರ್ಕಿಯ ಸಾಮ್ರಾಜ್ಯಗಳು ನಾಶವಾದುವು.
  • 2. ರಾಜ-ಮಹಾರಾಜರುಗಳ ಆಡಳಿತ ಅಳಿಸಿಹೋಗಿ ಗಣರಾಜ್ಯಗಳ ಅಲೆಯೊಂದು ಯುರೋಪಿನ ಮೇಲೆ ಹಾದುಹೋಯಿತು. 1914ರಲ್ಲಿ ಯುರೋಪಿನಲ್ಲಿ, ಐದು ಗಣರಾಜ್ಯಗಳಿದ್ದುವು. ಆದರೆ ಯುದ್ಧದ ತರುವಾಯ 16 ಗಣರಾಜ್ಯಗಳು ಯುರೋಪ್ ಖಂಡದಲ್ಲಿ ಜನ್ಮತಳೆದುವು.
  • 3. ಇದರ ಜೊತೆಗೆ ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆಯೂ ಸಡಿಲಗೊಂಡಿತು. ಇದಕ್ಕೆ ಕಾರಣ ಯುದ್ಧಾನಂತರ ಹೊಸ ಸರ್ಕಾರಗಳಲ್ಲಿ ಉದ್ಭವಿಸಿದ ಕಠಿಣ ಸಮಸ್ಯೆಗಳು. ಇದರಿಂದ ಯುರೋಪಿನಲ್ಲಿ ಮುಂದೆ ಅನೇಕ ಸರ್ವಾಧಿಕಾರಿಗಳು ನಿರಂಕುಶ ಆಡಳಿತ ನಡೆಸಿ ತಮ್ಮ ಜನರನ್ನು ಕಾಪಾಡುವ ಯತ್ನದಲ್ಲಿ ವಿನಾಶಕಾರಣರಾದರು.
  • 4. ಬಾಲ್ಷೆವಿಸಂ, ಫ್ಯಾಸಿಸಂ, ನಾಟ್ಸಿಸಂ ಇವು ಆ ಕಾಲದಲ್ಲಿ ನಡೆದ ಮೂರು ದೊಡ್ಡ ರಾಜಕೀಯ-ಆರ್ಥಿಕ ಪ್ರಯೋಗಗಳು.
  • 5. ಐರೋಪ್ಯ ರಾಷ್ಟ್ರಗಳಲ್ಲಿ ಪರಸ್ಪರ ಅಂತರವೇರ್ಪಟ್ಟು ಹೊಸ ರಾಷ್ಟ್ರಗಳು ಉದ್ಭವಿಸಿದವು. ಆಸ್ಟ್ರಿಯ-ಹಂಗೆರಿ ಸಾಮ್ರಾಜ್ಯ ನಾಶವಾಯಿತು. ಜರ್ಮನಿ ಮತ್ತು ರಷ್ಯಗಳ ಮೇರೆಗಳಲ್ಲಿ ಬದಲಾವಣೆಗಳಾದುವು. ಹೊಸ ಹೊಸ ದೇಶಗಳು ಉದ್ಭವವಾದವು. ಹೊಸ ರಾಷ್ಟ್ರಗಳಾದ ಪೋಲೆಂಡು. ಚೆಕೊಸ್ಲಾವಾಕಿಯ ಮತ್ತು ಯುಗೊಸ್ಲಾವಿಯಗಳು ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಹೆಚ್ಚಿನ ಪಾತ್ರ ಪಡೆದುವು. ಒಂದನೆಯ ಮಹಾಯುದ್ಧಕ್ಕೆ ಮುಂಚೆ ಆರು ದೊಡ್ಡ ರಾಷ್ಟ್ರಗಳು ಯುರೋಪಿನ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಪ್ರಾಮುಖ್ಯ ಪಡೆದಿದ್ದುವು. ಜರ್ಮನಿಯ ತಾತ್ಕಾಲಿಕ ಗ್ರಹಣದಿಂದಾಗಿ ಮತ್ತು ರಷ್ಯ ಮತ್ತು ಆಸ್ಟ್ರಿಯ-ಹಂಗೆರಿಗಳ ಅವನತಿಯಿಂದಾಗಿ ಯುರೋಪಿನ ಅಂತಾರಾಷ್ಟ್ರೀಯ ವ್ಯವಹಾರದಲ್ಲಿ ಹೆಚ್ಚಿನ ಸಂಖ್ಯೆಯ (ಹೊಸ ರಾಷ್ಟ್ರಗಳು ಸೇರಿದಂತೆ) ರಾಷ್ಟ್ರಗಳು ಭಾಗವಹಿಸಲು ಸಾಧ್ಯವಾಯಿತು. ಇದರಿಂದ ಅಂತಾರಾಷ್ಟ್ರೀಯ ವ್ಯವಹಾರದಲ್ಲಿ ಗಡಸುತ್ ಹೆಚ್ಚಿತು. ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯುವುದು ಒಂದು ಕಷ್ಟದ ಕೆಲಸವಾಯಿತು. ಜರ್ಮನಿಯ ಸುತ್ತಮುತ್ತ ಉದ್ಭವಿಸಿದ್ದ ಚಿಕ್ಕಪುಟ್ಟ ರಾಷ್ಟ್ರಗಳು ಆಕ್ರಮಣಕಾರಿ ನಾಟ್ಸಿಗಳ ಬಲೆಗೆ ಬಿದ್ದುವು.
  • 6. ಒಂದನೆಯ ಮಹಾಯುದ್ಧ ರಾಷ್ಟ್ರೀಯತೆಯ ಭಾವನೆಗಳನ್ನು ಕೆರಳಿಸಿತೆನ್ನಬಹುದು. ವಿವಿಧ ಜನಾಂಗದವರು ಪ್ರತ್ಯೇಕವಾಗಿ ತಾವೊಂದು ರಾಷ್ಟ್ರವಾಗಿ ಸೇರಲು ಹಕ್ಕಿದೆ ಎಂದು ತಿಳಿದು ಹೊಸ ರಾಷ್ಟ್ರಗಳನ್ನು ಕಟ್ಟಿದರು. ಈ ಉಗ್ರರೀತಿಯ, ಸ್ವಾರ್ಥಮನೋಭಾವದ ರಾಷ್ಟ್ರೀಯ ಭಾವನೆಗಳಿಂದ ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ, ಹೆಚ್ಚಾಗಿ ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಉದ್ಭವಿಸಿದ ಸಮಸ್ಯೆಗಳು ಅನೇಕ, ಆರ್ಥಿಕ ಪೈಪೋಟಿ, ದ್ವೇಷ, ಅಸೂಯೆಗಳಿಂದಾಗಿ ಯುರೋಪಿನಲ್ಲಿ ಒಂದು ಹೊಸ ರೀತಿಯ ಮಾನಸಿಕ ಕಾಯಿಲೆ ಉಂಟಾಯಿತು.
  • 7. ಒಂದನೆಯ ಮಹಾಯುದ್ಧ ಬಿತ್ತರಿಸಿದ ರಾಷ್ಟ್ರೀಯತೆಯ ಭಾವನೆಗಳು ಮತ್ತು ಒಂದು ಜನಾಂಗದವರು ಸರ್ಕಾರವನ್ನು ತಾವೇ ರಚಿಸಿಕೊಳ್ಳುವ ಹಕ್ಕು ಇದೆಯೆಂಬ ತತ್ತ್ವ ವಸಾಹತುಗಳಿಗೂ ಹಬ್ಬಿತು.
  • 8. ಅನೇಕರು ಮುಂದೆ ಯುದ್ಧ ಸಂಭವಿಸುವುದಿಲ್ಲವೆಂದು ನಂಬಿದ್ದರೂ ಶಾಂತಿ ಒಪ್ಪಂದಗಳು ಹಳೆಯ ಗಾಯಗಳನ್ನು ವಾಸಿಮಾಡುವ ಬದಲು ಹೊಸ ಗಾಯಗಳನ್ನು ಸೃಷ್ಟಿಸಿದುವು. ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಸಂದೇಹ ಮತ್ತು ಭಯಗಳು ಸಂಪುರ್ಣವಾಗಿ ನಿವಾರಣೆಯಾಗಲಿಲ್ಲ.
  • 9. ಅಂತಾರಾಷ್ಟ್ರೀಯ ಸಮಸ್ಯೆಗಳನ್ನು ಶಾಂತಿಯುತವಾಗಿ ಬಗೆಹರಿಸಲು ಮತ್ತು ರಾಷ್ಟ್ರ-ರಾಷ್ಟ್ರಗಳ ನಡುವೆ ಸಹಕಾರ ಮನೋಭಾವವನ್ನು ಹೆಚ್ಚಿಸಲು ರಾಷ್ಟ್ರಗಳಕೂಟ ಮತ್ತು ವಿಶ್ವನ್ಯಾಯಾಲಯಗಳನ್ನು ಸ್ಥಾಪಿಸಲಾಯಿತು. ಆದರೆ ಇಂಥ ಸಂಸ್ಥೆಗಳು ಅನೇಕ ವೇಳೆ ಅವುಗಳಿಗೆ ಅಗತ್ಯವಾದ ಬೆಂಬಲವನ್ನು ಪಡೆಯಲು ಆಗಲಿಲ್ಲ.
  • 10. ಮಹಾಯುದ್ಧದ ಸಮಯದಲ್ಲಿ ಹೆಚ್ಚಿನ ತೊಂದರೆಗೆ ಒಳಗಾದದ್ದೆಂದರೆ ಶಿಕ್ಷಣ ವ್ಯವಸ್ಥೆ. ಈ ಪರಿಸ್ಥಿತಿ ಯುದ್ಧ ಮುಗಿದ ಅನಂತರವೂ ಮುಂದುವರಿಯಿತು. ಆದರೆ ಯುವಕರಿಗೆ ಸರಿಯಾದ ಶಿಕ್ಷಣ ಕೊಟ್ಟಲ್ಲಿ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಬಹುದೆಂಬ ಸಾಮಾನ್ಯ ಅಭಿಪ್ರಾಯ ಮೂಡಿತ್ತು. ಆದುದರಿಂದ ಮಕ್ಕಳ ಮತ್ತು ಯುವಕರ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನ ಕೊಡಲಾಯಿತು, ವಿದ್ಯಾಭ್ಯಾಸಕ್ಕೆ ಹೆಚ್ಚಿನ ಧನಸಹಾಯ ನೀಡಲಾಯಿತು.
  • 11. ಚೀನ, ಜರ್ಮನಿ, ಇಟಲಿ ಮತ್ತು ಸೋವಿಯತ್ ರಷ್ಯಗಳಲ್ಲಿ ಯುವಕರ ಚಳವಳಿಗಳಿಗೆ ಹೆಚ್ಚಿನ ಪ್ರಾಧಾನ್ಯ ದೊರೆಯಿತು. ಮಹಾಯುದ್ಧದಿಂದ ಹದಗೆಟ್ಟಿದ್ದ ಆರ್ಥಿಕ ಮತ್ತು ರಾಜಕೀಯ ಸ್ಥಿತಿಗಳಿಂದ ಪ್ರಭಾವಿತರಾಗಿ, ಪ್ರಪಂಚದ ಯುವಕ-ಯುವತಿಯರು ಸಮಸ್ಯೆಗಳ ಅಧ್ಯಯನಕ್ಕೆ ಹೆಚ್ಚಿನ ಗಮನ ಕೊಡಲು ಪ್ರಾರಂಭಿಸಿದರಲ್ಲದೆ ತಮ್ಮ ತಮ್ಮ ಜನಾಂಗಗಳಿಗೆ ಪ್ರತ್ಯೇಕ ರಾಷ್ಟ್ರಗಳನ್ನು ಕಟ್ಟಬೇಕೆಂದು ಆಶಿಸಿದರು.
  • 12. ಒಂದನೆಯ ಮಹಾಯುದ್ಧ ರಾಷ್ಟ್ರಗಳಿಗೆ ಸಹಕಾರ ಮನೋಭಾವ ಮತ್ತು ಒಟ್ಟಾಗಿ ಕೆಲಸಮಾಡುವ ಗುಣಗಳನ್ನು ಕಲಿಸಿಕೊಟ್ಟಿತೆನ್ನಬಹುದು. ಈ ಮೌಲ್ಯಗಳು ಯುದ್ಧ ಮುಗಿದು ಶಾಂತಿ ಬಂದ ಮೇಲೂ ನಾಶವಾಗಲಿಲ್ಲ. ಅನೇಕ ಅಂತಾರಾಷ್ಟ್ರೀಯ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯುದ್ಧಕಾಲದಲ್ಲಿ ಒಡಮೂಡಿದ್ದ ಸಹಕಾರ ಮನೋಭಾವವನ್ನು ಬಳಸಿಕೊಳ್ಳುವ ಪ್ರಯತ್ನ ಮಾಡಲಾಯಿತು. ವಿಶ್ವ ಸಮ್ಮೇಳನಗಳೂ ಸಾಮಾನ್ಯವಾದುವು. ಆದರೆ ಇಂಥ ವಿಶ್ವಸಮ್ಮೇಳನಗಳು ಯಾವಾಗಲೂ ಜಯಪ್ರದವಾಗುತ್ತಿದ್ದುವೆಂದು ಹೇಳಲಾಗದು.
  • 13. ಒಂದನೆಯ ಮಹಾಯುದ್ಧದಿಂದ ವೈಜ್ಞಾನಿಕ ಹಾಗೂ ವಾಣಿಜ್ಯ ಬೆಳೆವಣಿಗೆಗಳಿಗೆ ದೊರಕಿದ ಉತ್ತೇಜನ ಅಗಾಧ. ಹೊಸ ಹೊಸ ಯಂತ್ರಗಳ ಬಳಕೆ, ಮಾರಕಾಸ್ತ್ರಗಳ ಪ್ರಯೋಗ. ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಪರಿಶೋಧನೆ. ಹಡಗು ನಿರ್ಮಾಣ, ವಿಮಾನಗಳ ರಚನೆ ಮತ್ತು ವಿನ್ಯಾಸಗಳಲ್ಲಿ ಬದಲಾವಣೆ, ಹೊಸ ಹೊಸ ಕೈಗಾರಿಕೆಗಳ ಸ್ಥಾಪನೆ-ಇವು ಇನ್ನು ಕೆಲವು ಪರಿಣಾಮಗಳು, ಯುದ್ಧದ ದೆಸೆಯಿಂದಾಗಿ ಹೊರದೇಶಗಳಿಂದ ಬರುತ್ತಿದ್ದ ಪದಾರ್ಥಗಳು ನಿಂತುಹೋದದ್ದರಿಂದ ಅನೇಕ ದೇಶಗಳು ತಾವೇ ತಮಗೆ ಬೇಕಾದ ಪದಾರ್ಥಗಳನ್ನು ತಯಾರಿಸಿಕೊಳ್ಳಲಾರಂಭಿಸಿದುವು.
  • 14. ಮಹಾಯುದ್ಧ ತಟಸ್ಥರಾಷ್ಟ್ರಗಳನ್ನು ಒಳಗೊಂಡಂತೆ ಎಲ್ಲ ದೇಶಗಳ ಆರ್ಥಿಕ ಪರಿಸ್ಥಿತಿಗಳನ್ನು ಹದಗೆಡಿಸಿತ್ತು. ಇದರಿಂದಾಗಿ ಪ್ರಪಂಚದಾದ್ಯಂತ ಆರ್ಥಿಕ ಪುನಾರಚನೆಯ ಆವಶ್ಯಕತೆ ಕಂಡುಬಂತು. ಒಂದನೆಯ ಮಹಾಯುದ್ಧದ ಪ್ರಭಾವದಿಂದ 1929ರ ಕೊನೆಯ ಭಾಗದಲ್ಲಿ ಒಂದು ದೊಡ್ಡ ಆರ್ಥಿಕ ಕುಸಿತ ಉಂಟಾಯಿತು.

1939ರ ಹೊತ್ತಿಗೆ ಮತ್ತೆ ಇನ್ನೊಂದು ಮೊದಲನೆಯ, ಮಹಾಯುದ್ಧಕ್ಕೆ ಸನ್ನಾಹ ನಡೆದಿತ್ತು. ಇಂಥ ಭೀಕರ ಯುದ್ಧದಲ್ಲಿ ಉಂಟಾದ ಅಪಾರ ಸಾವುನೋವುಗಳನ್ನು ಮನಗಂಡ ರಾಷ್ಟ್ರಗಳು ಮತ್ತೊಂದು ಅಂಥ ಯುದ್ಧವಾಗದಂತೆ ಮಾಡಿ ಜಗತ್ತಿನಲ್ಲಿ ಶಾಂತಿ ಸ್ಥಾಪಿಸಲು ಪ್ರಯತ್ನ ನಡೆಸಿದುವು. ಯುರೋಪಿನ ನಾಯಕರು, ರಾಜಕಾರಣಿಗಳು ಮತ್ತು ದಾರ್ಶನಿಕರು ಒಂದುಗೂಡಿ ಶಾಂತಿಸೌಹಾರ್ದಗಳ ಆಧಾರದ ಮೇಲೆ ಒಂದು ನೂತನ ಸಮಾಜವನ್ನು ರೂಪಿಸಲು ಯತ್ನಿಸಿದರು. ಒಂದನೆಯ ಮಹಾಯುದ್ಧವಾದ ಸ್ವಲ್ಪ ಕಾಲ ಈ ಕಾರ್ಯದಲ್ಲಿ ವಿಶ್ವದ ಎಲ್ಲ ರಾಷ್ಟ್ರಗಳೂ ಮಗ್ನವಾಗಿದ್ದುವು. ಆದರೆ ಈ ಧ್ಯೇಯಸಾಧನೆಯಲ್ಲಿ ಏಕಮುಖತೆ ಕಂಡು ಬರಲಿಲ್ಲ. ಯುರೋಪಿನ ರಾಷ್ಟ್ರಗಳ ಮುಖಂಡರು ಸಂಕುಚಿತ ಮನೋಭಾವ ತಳೆದರು. ತಮ್ಮ ತಮ್ಮ ದೇಶದ ಹಿತವೇ ಅವರಿಗೆ ಹೆಚ್ಚಾಯಿತು. ತಮ್ಮ ತಮ್ಮ ರಾಷ್ಟ್ರಗಳ ಪ್ರತಿಷ್ಠೆಯನ್ನು ಯಾವ ರೀತಿಯಲ್ಲಿ ಹೆಚ್ಚಿಸಬೇಕೆಂಬುದರ ಕಡೆ ಅವರ ಗಮನ ಹರಿದಿತ್ತೇ ವಿನಃ ಸುಭದ್ರ ಶಾಂತಿಯುತ ಸಮಾಜರಚನೆಯಲ್ಲಿ ಯಾವ ಬಗೆಯ ಆಸಕ್ತಿಯನ್ನೂ ಉತ್ಸಾಹವನ್ನೂ ಅವರು ತೋರಿಸಲಿಲ್ಲ. ಈ ಸಂಕುಚಿತ ಮನೋಭಾವ ಪ್ರದರ್ಶನದಿಂದಲೇ ಇವರು ಕೈಗೊಂಡ ಕಾರ್ಯಕ್ರಮಗಳು ಫಲ ಕೊಡದೆ ಮತ್ತೊಂದು ಮಹಾಯುದ್ಧ ಅನಿವಾರ್ಯವಾಯಿತೆನ್ನಬಹುದು.

ಒಂದನೆಯ ಮಹಾಯುದ್ಧದ ಘಟನೆಗಳು:

ಬದಲಾಯಿಸಿ
  • 28-6-1914 : ಸರ್ಬಿಯದ ಸಾರಾಯೆವೊದಲ್ಲಿ ಆಸ್ಟ್ರಿಯದ ರಾಜಕುಮಾರ ಫ್ರಾನ್ಸಿಸ್ ಫರ್ಡಿನೆಂಡನ ಕೊಲೆ. ಇದೇ ಒಂದನೆಯ ಮಹಾಯುದ್ಧಕ್ಕೆ ತತ್ಕ್ಷಣದ ಕಾರಣ.
  • 5-7-1914 : ಆಸ್ಟ್ರಿಯ-ಹಂಗರಿಗೆ ಸಹಾಯ ಮಾಡುವುದಾಗಿ ಜರ್ಮನಿಯ ಭರವಸೆ.
  • 23-7-1914 : ಸರ್ಬಿಯದಿಂದ ಆಸ್ಟ್ರಿಯದ 48 ಗಂಟೆಗಳ ಕಾಲದ ಕೊನೆ ಎಚ್ಚರಿಕೆಯ ಸ್ವೀಕಾರ.
  • 28-7-1914 : ಸರ್ಬಿಯದ ಮೇಲೆ ಆಸ್ಟ್ರಿಯ-ಹಂಗರಿ ಯುದ್ದಘೋಷಣೆ.
  • 30-7-1914 : ಯುದ್ಧಸಿದ್ಧತೆ ನಡೆಸಲು ರಷ್ಯದ ಆಜ್ಞೆ.
  • 1-8-1914 : ಜರ್ಮನಿಯಿಂದ ಯುದ್ಧಘೋಷಣೆ.
  • 4-8-1914 : ಜರ್ಮನಿಯಿಂದ ಬೆಲ್ಜಿಯಂ ಪ್ರವೇಶ. ಜರ್ಮನಿಯ ವಿರುದ್ಧ ಗ್ರೇಟ್ಬ್ರಿಟನ್ ಮತ್ತು ಫ್ರಾನ್ಸುಗಳಿಂದ ಯುದ್ಧ ಘೋಷಣೆ.
  • 7-8-1914 : ಯುದ್ಧದಲ್ಲಿ ಸರ್ಬಿಯದೊಂದಿಗೆ ಮಾಂಟೆನಿಗ್ರೊ ಜೊತೆಗೂಡಿಕೆ.
  • 23-8-1914 : ಜರ್ಮನಿಯ ವಿರುದ್ಧ ಜಪಾನಿನ ಯುದ್ಧ ಘೋಷಣೆ.
  • 26 ರಿಂದ : ಟ್ಯಾನೆನ್ಬರ್ಗಿನಲ್ಲಿ ರಷ್ಯದ ವಿರುದ್ಧ ಜರ್ಮನ್ ಪ್ರಥಮ ವಿಜಯ
  • 6 ರಿಂದ  : ಜರ್ಮನಿಯ ಮತ್ತು ಫ್ರಾನ್ಸುಗಳ ನಡುವೆ ಒಂದನೆಯ ಮಾರ್ನ್‌
  • 10-9-1914 : ಯುದ್ಧ, ಜರ್ಮನಿಯನ್ನು ತಡೆಯಲು ಮಿತ್ರರಾಷ್ಟ್ರಗಳು ಮಾಡಿದ ಮೊದಲನೆಯ ಮಹಾ ಪ್ರಯತ್ನ, ಯುದ್ಧದ ಒಂದು ಮುಖ್ಯ ತಿರುಗುಬಿಂದು.
  • 3-11-1914 : ತುರ್ಕಿಯ ವಿರುದ್ಧ ರಷ್ಯದ ಯುದ್ಧಘೋಷಣೆ. ಎರಡು ದಿವಸಗಳ ಅನಂತರ ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸುಗಳೂ ತುರ್ಕಿಯ ವಿರುದ್ಧ ಯುದ್ಧ ಘೋಷಿಸಿದುವು.
  • 22-4-1915 : ಎರಡನೆಯ ಈಪ್ರ ಕದನ, ಇದರಲ್ಲಿ ಜರ್ಮನ್ನರಿಂದ ವಿಷವಾಯು ಪ್ರಯೋಗ.
  • 7-5-1915 : ಜರ್ಮನಿಯಿಂದ ಲ್ಯೂಸಿಟ್ಯಾನಿಯ ಹಡಗಿನ ಮುಳುಗಡೆ.ಹನ್ನೆರಡು ಸಾವಿರ ಜನ ಮುಳುಗಿದರು. ನೂರಕ್ಕಿಂತ ಹೆಚ್ಚು ಅಮೆರಿಕನ್ನರ ಮರಣ.
  • 9-3-1916 : ಪೋರ್ಚುಗಲ್ನ ವಿರುದ್ಧ ಜರ್ಮನಿಯ ಯುದ್ಧಘೋಷಣೆ.
  • ಜೂನ್ 1916 : ವರ್ದನ್ ಕದನ: ಫ್ರಾನ್ಸ್‌ ಮತ್ತು ಜರ್ಮನಿಗಳು ಸೇಡಿನಿಂದ ಕಾದಿದ್ದುವು. ಪೇಟ್ಯಾನನ ನೇತೃತ್ವದಲ್ಲಿ ಫ್ರೆಂಚರು ವೀರಾವೇಶದಿಂದ ಹೋರಾಡಿ ಕೊನೆಗೂ ವರ್ದನ್ ನಗರವನ್ನು ರಕ್ಷಿಸಿದರು. ಎರಡು ಪಕ್ಷಗಳಲ್ಲೂ ಸತ್ತವರ ಸಂಖ್ಯೆ 10 ಲಕ್ಷ.
  • 6-4-1917 : ಜರ್ಮನಿಯ ಮೇಲೆ ಅಮೆರಿಕನ್ ಯುದ್ಧ ಘೋಷಣೆ. ಮರುದಿವಸ ಕ್ಯೂಬ ಮತ್ತು ಪನಾಮಗಳೂ ಜರ್ಮನಿಯ ವಿರುದ್ಧ ಯುದ್ಧ ಘೋಷಿಸಿದುವು.
  • 8-1-1918 : ಅಮೆರಿಕನ್ ಕಾಂಗ್ರೆಸಿನ ಮುಂದೆ ಅಧ್ಯಕ್ಷ ವುಡ್ರೊವಿಲ್ಸನ್ನಿಂದ ಶಾಂತಿಕೌಲಿನ ಚತುರ್ದಶ ಸೂತ್ರ ಮಂಡನೆ.
  • ಮಾರ್ಚ್ 1918  : ಎರಡನೆಯ ಮಾರ್ನ್‌ ಕದನ. ಹಿಂಡನ್ಬರ್ಗ್ ಸಾಲು ಎಂದು ಪ್ರಖ್ಯಾತವಾಗಿದ್ದ ಕುಂದಕಗಳ ಸಾಲನ್ನು ಮಿತ್ರರಾಷ್ಟ್ರಗಳು ಮುರಿದುವು. 1914ರಿಂದ ಜರ್ಮನ್ನರು ಇವನ್ನು ಹಿಡಿದಿದ್ದರು.
  • 29-9-1918 : 1915ರಿಂದ ಗ್ರೀಸಿನಲ್ಲಿದ್ದ ಮಿತ್ರರಾಷ್ಟ್ರಗಳ ಸೈನ್ಯದಿಂದ ಬಲ್ಗೇರಿಯದ ಮುತ್ತಿಗೆ; ಜರ್ಮನ್ನರ ಸೋಲು. ಜರ್ಮನ್ ಸೇನಾನಿ ಲೂಡೆನ್ಡಾರ್ಫನ ನಿರಾಶೆ. ವಿಲ್ಸನನ ಸೂತ್ರಗಳ ಆಧಾರದ ಮೇಲೆ ಶಾಂತಿಸಂಧಾನಕ್ಕೆ ಒಡಂಬಡಬೇಕೆಂದು ಬರ್ಲಿನಿಗೆ ಸೂಚನೆ.
  • 2-10-1918 : ಶಾಂತಿ ಬಯಸಿ ಜರ್ಮನಿಯಿಂದ ಅಧ್ಯಕ್ಷ ವಿಲ್ಸನನಿಗೆ ಕೋರಿಕೆ.
  • 3-10-1918 : ತುರ್ಕಿ, ಬಲ್ಗೇರಿಯ, ಆಸ್ಟ್ರಿಯ-ಹÀಂಗರಿಗಳ ಶರಣಾಗತಿ.
  • 11-11-1918 : ಜರ್ಮನಿಯಿಂದ ನೆದರ್ಲೆಂಡ್ಸಿಗೆ ಕೈಸóರನ ಪಲಾಯನ. ಮಿತ್ರ ರಾಷ್ಟ್ರಗಳೊಡನೆ ಯುದ್ಧ ನಿಲ್ಲಿಸುವ ಒಪ್ಪಂದಕ್ಕೆ ಜರ್ಮನ್ನರ ಸಹಿ.
  • 29-6-1919 : ವರ್ಸೇಲ್ಸ್‌ ಕೌಲಿಗೆ ಜರ್ಮನಿಯ ಸಹಿ.
  • 10-9-1919 : ಆಸ್ಟ್ರಿಯದೊಡನೆ ಸೆಂಟ್-ಜರ್ಮನಿ ಕೌಲು.
  • 27-11-1919 : ಬಲ್ಗೇರಿಯದೊಡನೆ ನ್ಯೂಯಿಲಿ ಕೌಲು.
  • 4-6-1919 : ಹಂಗೆರಿಯೊಡನೆ ಟ್ರಿಯನಾನ್ ಕೌಲು.
  • 10-8-1920 : ತುರ್ಕಿಯೊಡನೆ ಸೇವ್ರ್‌ ಕೌಲು.

[]

ಉಲ್ಲೇಖ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ Evans, David. Teach yourself, the First World War, Hodder Arnold, 2004.p.188
  2. ಆಧುನಿಕ ಯುರೋಪಿನ ಇತಿಹಾಸ ಲೇಖಕರು : ಪಾಲಕ್ಷ
  3. (ಎಸ್.ಕೆ.ಎಸ್.):ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಒಂದನೆಯ ಮಹಾಯುದ್ಧ