ಡಾರ್ಡ್ನೆಲ್ಸ್‌

ಡಾರ್ಡ್‍ನೆಲ್ಸ್ -ಮಾರ್ಮರಾ ಮತ್ತು ಇಜೀಯನ್ ಸಮುದ್ರಗಳನ್ನು ಕೂಡಿಸುವ ಜಲಸಂಧಿ. ಪ್ರಾಚೀನಕಾಲದಲ್ಲಿ ಇದಕ್ಕೆ ಹೆಲಸ್‍ಪಾಂಟ್ ಎಂಬ ಹೆಸರಿತ್ತು.

ಇತಿಹಾಸಸಂಪಾದಿಸಿ

ಇಜೀಯನ್ ತೀರದ ಉದ್ದಕ್ಕೂ ಇದ್ದ ಟ್ರೋಆಡ್ ಪ್ರದೇಶದ ಡಾರ್ಡನಸ್ ನಗರದಿಂದಾಗಿ ಈ ಜಲಸಂಧಿಗೆ ಡಾರ್ಡನೆಲ್ಸ್ ಎಂಬ ಹೆಸರು ಬಂತು. ಪಾರ್ತಿಯನ್ ದೊರೆ 6ನೆಯ ಮಿತ್ರಡೇಟಸ್ (ಕ್ರಿ.ಪೂ. ಸು.132-ಕ್ರಿ.ಪೂ.63) ರೋಮಿನ ವಿರುದ್ಧ ನಡೆಸಿದ ಮೊದಲನೆಯ ಯುದ್ಧದಲ್ಲಿ ಸೋತು ರೋಮನ್ ಸೇನಾನಿ ಸುಲ್ಲನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು (ಕ್ರಿ.ಪೂ.85) ಡಾರ್ಡನಸ್ ನಗರದಲ್ಲಿ. ದೋಣಿಗಳನ್ನು ಜೋಡಿಸಿ ರಚಿಸಿದ ಸೇತುವೆಯ ಮೂಲಕ ಈ ಜಲಸಂಧಿಯನ್ನು ಜಕ್ರ್ಸೀ ಸನ ಸೈನ್ಯ ದಾಟಿದಾಗಿನಿಂದ ಈ ಜಲಸಂಧಿ ಐತಿಹಾಸಿಕ ಪ್ರಾಮುಖ್ಯ ಗಳಿಸಿದೆ. ಮೆಡಿಟರೇನಿಯನಿನಿಂದ ಇಸ್ತಾಂಬುಲ್ ಹಾಗೂ ಕಪ್ಪು ಸಮುದ್ರಕ್ಕೆ ಇದು ಮಹಾದ್ವಾರದಂತಿರುವುದರಿಂದ ಆಯಕಟ್ಟಿನ ದೃಷ್ಟಿಯಿಂದ ಇದಕ್ಕೆ ಅಂತರರಾಷ್ಟ್ರೀಯ ಪ್ರಾಮುಖ್ಯವುಂಟು. ಒಂದನೆಯ ಮಹಾಯುದ್ಧದಲ್ಲೂ ಇದು ಪ್ರಾಮುಖ್ಯ ಗಳಿಸಿತ್ತು. ಆಗ ಬ್ರಿಟಿಷ್ ಜಲಾಂತರ್ಗಾಮಿಯೊಂದು ತುರ್ಕಿಯ ಮೈನ್ ಕ್ಷೇತ್ರವನ್ನು ಭೇದಿಸಿಕೊಂಡು ಮುನ್ನುಗ್ಗಿ ಬಾಸ್ಪರಸ್ ಜಲಸಂಧಿಯ ಗೋಲ್ಡನ್ ಹಾರ್ನ್‍ನ ಬಳಿಯಲ್ಲಿದ್ದ ತುರ್ಕಿ ಸಮರ ನೌಕೆಯನ್ನು ಮುಳುಗಿಸಿತು.

ಇತರ ಮಾಹಿತಿಸಂಪಾದಿಸಿ

ಯೂರೋಪಿನ ಗಲಿಪಲೀ ಪರ್ಯಾಯದ್ವೀಪ ಈ ಜಲಸಂಧಿಯ ವಾಯುವ್ಯ ದಡ; ಏಷ್ಯ ಮೈನರ್ ಇದರ ಆಗ್ನೇಯ ದಡ. ಇದರ ಉದ್ದ 61 ಕಿ.ಮೀ. ಅಗಲ 7 ಕಿ.ಮೀ.; ಸರಾಸರಿ ಆಳ 30 ಫ್ಯಾದಮ್. ಇಜೀಯನ್ ಸಮುದ್ರದ ಕಡೆಗೆ ಮಾರ್ಮರಾ ಸಮುದ್ರದ ಕಡೆಯಿಂದ ಬಿರುಸಾದ ಮೇಲ್ಮೈ ಪ್ರವಾಹ ಹರಿದುಬರುತ್ತದೆ. ಇದಕ್ಕೆ ವಿರುದ್ಧವಾಗಿ ಕಡಲಿನಾಳದಲ್ಲಿ ಇನ್ನೊಂದು ಪ್ರವಾಹ ಹರಿಯುತ್ತದೆ. ಜಲಸಂಧಿಯಲ್ಲಿ ನಾನಾ ಬಗೆಯ ಮೀನುಗಳುಂಟು. ಇವನ್ನು ಹಿಡಿದು ಡಬ್ಬೀಕರಿಸುವುದು ತೀರದ ಚಾನಕಲೇ ಮತ್ತು ಗಲಿಪಲೀ ಪಟ್ಟಣಗಳ ಜನರ ಮುಖ್ಯ ಕಸುಬು. ಜಲಸಂಧಿಗೆ ಸಂಬಂಧಿಸಿದಂತೆ ಇಜೀಯನ್ ಸಮುದ್ರದ ಯೂರೋಪಿಯನ್ ತೀರದಲ್ಲಿ ಸೆಡುಲ್‍ಬಾಹೀರ್ ದುರ್ಗವೂ ಏಷ್ಯನ್ ತೀರದಲ್ಲಿ ಕುಮ್‍ಕಾಲೇ ದುರ್ಗವೂ ಇವೆ; ಮಾರ್ಮರಾ ಸಮುದ್ರದ ಉತ್ತರದ ಅಂಚಿನಲ್ಲಿ ಗಲಿಪಲೀ ಮತ್ತು ದಕ್ಷಿಣ ಅಂಚಿನಲ್ಲಿ ಲ್ಯಾಪ್ಸ್‍ಕೀ ಪಟ್ಟಣಗಳಿವೆ.ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: