ಪಿ.ಶೇಷಾದ್ರಿ

ಭಾರತೀಯ ಚಲನಚಿತ್ರ ನಿರ್ದೇಶಕ
ಪಿ.ಶೇಷಾದ್ರಿ
ಪಿ.ಶೇಷಾದ್ರಿ
ಪಿ.ಶೇಷಾದ್ರಿ
ಜನನ
ಶೇಷಾದ್ರಿ

ನವೆಂಬರ್ ೨೩, ೧೯೬೩
ದಂಡಿನಶಿವರ, ತುರುವೇಕೆರೆ ತಾ, ತುಮಕೂರು ಜಿಲ್ಲೆ, ಕರ್ನಾಟಕ
Nationalityಭಾರತೀಯ
ಉದ್ಯೋಗಚಲನಚಿತ್ರ ನಿರ್ದೇಶಕ, ನಿರ್ಮಾಪಕ ಮತ್ತು ಬರಹಗಾರ
Known forಸದಭಿರುಚಿಯ ಚಿತ್ರ ನಿರ್ದೇಶನ

ಚಿತ್ರನಿರ್ದೇಶಕಸಂಪಾದಿಸಿ

ಪಿ.ಶೇಷಾದ್ರಿ ಕನ್ನಡದ ಸದಭಿರುಚಿಯ ಚಲನಚಿತ್ರಗಳ ಪ್ರಮುಖ ನಿರ್ದೇಶಕರು. ಸತತ ಏಳು ಬಾರಿ ರಾಷ್ಟ್ರಪ್ರಶಸ್ತಿ ಪಡೆದ ಭಾರತದ ಏಕೈಕ ನಿರ್ದೇಶಕ ಎಂಬ ಅಪರೂಪದ ಸಾಧನೆ ಇವರದ್ದು.

ಶೇಷಾದ್ರಿಯ ಮೊದಲ ಚಿತ್ರ ‘ಮುನ್ನುಡಿ’. ೨೦೦೦ ಇಸವಿಯಲ್ಲಿ ತೆರೆಗೆ ಬಂದ ಈ ಚಿತ್ರ ಅವರಿಗೆ ಮೊದಲ ರಾಷ್ಟ್ರಪ್ರಶಸ್ತಿಯನ್ನು ದೊರಕಿಸಿಕೊಟ್ಟಿತು. ನಂತರ ‘ಅತಿಥಿ’(೨೦೦೧), ‘ಬೇರು’(೨೦೦೪), ‘ತುತ್ತೂರಿ’(೨೦೦೫), ‘ವಿಮುಕ್ತಿ’ (೨೦೦೮) ಮತ್ತು ‘ಬೆಟ್ಟದ ಜೀವ (೨೦೧೦). ಇದೀಗ ಮತ್ತೆ ‘ಭಾರತ್ ಸ್ಟೋರ್ಸ್’ (೨೦೧೨)

ಆರಂಭಿಕ ಹೆಜ್ಜೆಸಂಪಾದಿಸಿ

ಶೇಷಾದ್ರಿ ಹುಟ್ಟಿ ಬೆಳೆದದ್ದು ದಂಡಿನಶಿವರ ಎಂಬ ಗ್ರಾಮದಲ್ಲಿ. ತಂದೆ ಪಟ್ಟಾಭಿರಾಮಯ್ಯ ಪ್ರಾಥಮಿಕ ಶಾಲೆಯ ಉಪಾಧ್ಯಾಯರಾಗಿದ್ದವರು. ತಾಯಿ ಕಮಲಮ್ಮ. ಈ ದಂಪತಿಗಳ ನಾಲ್ವರು ಮಕ್ಕಳಲ್ಲಿ ಇವರೇ ಕೊನೆಯವರು. ಮೇಷ್ಟ್ರ ಕೆಲಸ ಒಂದೇ ಸಾಕಾಗದೆ, ಉಪವೃತ್ತಿಯಾಗಿ ಹಬ್ಬ-ಹರಿದಿನಗಳಲ್ಲಿ ಹೊಲಿಗೆ ಯಂತ್ರ ತುಳಿದು, ಬಟ್ಟೆ ಹೊಲೆದು ಬದುಕನ್ನು ನಡೆಸುತ್ತಿದ್ದರು. ತಂದೆ ಬಟ್ಟೆ ಕತ್ತರಿಸಲು ಉಪಯೋಗಿಸುತ್ತಿದ್ದ ಕತ್ತರಿ ಶೇಷಾದ್ರಿಯ ಪ್ರಮುಖ ಆಟದ ವಸ್ತುವಾಗಿತ್ತು. ಆಗಿನ ಕಾಲದಲ್ಲಿ ಲಗ್ನಪತ್ರಿಕೆಗಳಲ್ಲಿ ಮುದ್ರಣವಾಗುತ್ತಿದ್ದ ವಿವಿಧ ದೇವತೆಗಳ ಚಿತ್ರಗಳನ್ನು ಸೂಕ್ಷ್ಮವಾಗಿ ಕತ್ತರಿಸಿ ತನ್ನ ಶಾಲಾಪುಸ್ತಕಗಳಿಗೆ ಅಂಟಿಸಿಕೊಳ್ಳುತ್ತಿದ್ದ ಇವರ ಕಲೆಗಾರಿಕೆಯನ್ನು ಕಂಡು ಎಲ್ಲರೂ ಹೊಗಳುತ್ತಿದ್ದರು. ‘ಪ್ರಾಯಶಃ ಇದೇ ನನಗೆ ಮುಂದೆ ಚಿತ್ರಕಲೆ ಕಲಿಯಲು ಪ್ರೇರಣೆ ನೀಡಿತು’ ಎಂದು ಶೇಷಾದ್ರಿ ಹೇಳುತ್ತಾರೆ. ಜೊತೆಗೆ ದೊಡ್ಡಣ್ಣ ಎಂ.ಎ. ಓದುತ್ತಿದ್ದರು. ಅವರಿಗೆ ಪಠ್ಯವಾಗಿದ್ದ ಶಿವರಾಮಕಾರಂತ, ಕುವೆಂಪು, ಭೈರಪ್ಪ ಮುಂತಾದವರ ಕಾದಂಬರಿಗಳು ಇವರಿಗೆ ಕಥಾಸಾಹಿತ್ಯದ ಪರಿಚಯವನ್ನು ಮಾಡಿಸಿದವು. ಹೈಸ್ಕೂಲು ದಿನಗಳಿಂದಲೇ ಪತ್ರಿಕೆಯ ವಾಚಕರವಾಣಿಗೆ ಪತ್ರ ಬರೆಯುವ ಹವ್ಯಾಸ ಬೆಳೆದಿತ್ತು.

ಪ್ರೌಢಶಾಲೆಯಲ್ಲಿ ಕಲಿಯುವಾಗಲೇ ನಾಡಿನ ಪ್ರಖ್ಯಾತ ಕಲಾವಿದರಾಗಿದ್ದ ಎಂಟಿವಿ ಆಚಾರ್ಯರ (ಚಂದಮಾಮ ಆಚಾರ್ಯ ಎಂದೇ ಖ್ಯಾತರು) ಬಳಿ ಕಮರ್ಷಿಯಲ್ ಚಿತ್ರಕಲೆಯನ್ನು ಅಂಚೆ ಮೂಲಕ ಕಲಿಯುವ ಪ್ರಯತ್ನವನ್ನೂ ಶೇಷಾದ್ರಿ ಮಾಡಿದರು. ಆಚಾರ್ಯರೊಂದಿಗಿನ ನನ್ನ ಒಡನಾಟ ನನ್ನ ಬದುಕಿನ ಮೊದಲ ತಿರುವು ಎನ್ನುತ್ತಾರೆ ಶೇಷಾದ್ರಿ. ಈ ಸಂಪರ್ಕವೇ ಇವರನ್ನು ೧೯೮೫ ರಲ್ಲಿ ಬೆಂಗಳೂರಿಗೆ ಕರೆತಂದು ನವಕರ್ನಾಟಕ ಪಬ್ಲಿಕೇಷನ್ಸ್‌ನಲ್ಲಿ ಬುಕ್ ಡಿಸೈನಿಂಗ್ ಕೆಲಸಕ್ಕೆ ಸೇರಿಸಿತು.

ವಿದ್ಯಾಭ್ಯಾಸಸಂಪಾದಿಸಿ

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಲೇ ಕನ್ನಡಭಾಷೆಯಲ್ಲಿ ಎಂ.ಎ. ಪದವಿಯನ್ನು ಇವರು ಮುಗಿಸಿದರು. ಜೊತೆಗೆ ಬರವಣಿಗೆಯಲ್ಲಿ ಆಸಕ್ತಿ ಇದ್ದುದರಿಂದ ಪತ್ರಕರ್ತನಾಗುವ ಬಯಕೆಯಿಂದ ಮೈಸೂರು ವಿಶ್ವವಿದ್ಯಾಲಯದಿಂದ ಜರ್ನಲಿಸಂನಲ್ಲಿ ಡಿಪ್ಲೊಮ ಕೂಡ ಪಡೆದರು.

ವೃತ್ತಿಸಂಪಾದಿಸಿ

ಮೊದಲಿಗೆ ‘ಸುದ್ದಿ ಸಂಗಾತಿ’ ವಾರಪತ್ರಿಕೆಯಲ್ಲಿ ಪತ್ರಕರ್ತನಾಗಿ ವೃತ್ತಿ ಆರಂಭಿಸಿದರು. ಅಲ್ಲಿ ಉಪ-ಸಂಪಾದಕನಾಗಿ, ಜೊತೆಗೆ ಪತ್ರಿಕೆಗೆ ಬೇಕಾದ ಕಥಾಚಿತ್ರಗಳನ್ನೂ ರಚಿಸುತ್ತ ಕಾರ್ಯನಿರ್ವಹಿಸುತ್ತಿದ್ದಾಗ ಅನಿವಾರ್ಯವಾಗಿ ಸಿನಿಮಾ ಪುಟಗಳ ಜವಾಬ್ದಾರಿ ಕೂಡ ಹೆಗಲಿಗೇರಿತು.

ಚಿತ್ರಕಥೆ-ಸಂಭಾಷಣೆಗಾರನಾಗಿ ತೊಂಬತ್ತರ ದಶಕದ ಆರಂಭದಲ್ಲಿ ಚಿತ್ರರಂಗ ಪ್ರವೇಶ. ಬಿ.ಸುರೇಶ್ ಜೊತೆಗೂಡಿ ಬರವಣಿಗೆ. ಒಂದೆರಡು ವರ್ಷದಲ್ಲೇ ದೃಶ್ಯಮಾಧ್ಯಮದಲ್ಲಿ ತನಗೆ ಅನ್ನಿಸಿದ್ದನ್ನು ನೇರವಾಗಿ ಹೇಳಲು ನಿರ್ದೇಶಕನಿಗೆ ಮಾತ್ರ ಸಾಧ್ಯ ಎಂಬುದನ್ನು ಅರ್ಥಮಾಡಿಕೊಂಡು ಕೆಲವು ವರ್ಷ ನಿರ್ದೇಶನ ವಿಭಾಗದಲ್ಲಿ ನಾಗಾಭರಣರ ಬಳಿ ಕೆಲಸ ಮಾಡಿದರು. ನಿರ್ದೇಶನ ವಿಭಾಗದಲ್ಲಿ ದುಡಿಯುತ್ತಾ ‘ಚಿನ್ನಾರಿಮುತ್ತ’, ‘ಆಕಸ್ಮಿಕ’, ‘ಸಾಗರದೀಪ’, ‘ಸಮರ’ ಮುಂತಾದ ಚಿತ್ರಗಳ ಮೂಲಕ ಕನ್ನಡಚಿತ್ರರಂಗದ ಕಮರ್ಷಿಯಲ್ ವಿಭಾಗದ ಪರಿಚಯವೂ ಆಯಿತು.

೧೯೮೫ ರಿಂದ ಸ್ವತಂತ್ರವಾಗಿ ದೂರದರ್ಶನ ಧಾರಾವಾಹಿ ಹಾಗೂ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಲು ಆರಂಭಿಸಿದರು. ಆ ಸಂದರ್ಭದಲ್ಲಿ ಟಿ.ಎನ್.ಸೀತಾರಾಮ್ ಹಾಗೂ ನಾಗೇಂದ್ರ ಶಾ ಜೊತೆಗೂಡಿ ನಿರ್ದೇಶಿಸಿದ ‘ಕತೆಗಾರ’ ಧಾರಾವಾಹಿ ಕನ್ನಡದ ಸಣ್ಣಕತೆಗಳ ಇತಿಹಾಸವನ್ನು ಹೇಳುವ ಒಂದು ಮಹತ್ವದ ದೃಶ್ಯಮಾಲಿಕೆಯಾಗಿ ಹೊರಹೊಮ್ಮಿತು. ಆ ನಂತರ ೧೯೮೮ರಲ್ಲಿ ಇದೇ ತಂಡ ತಯಾರಿಸಿದ ‘‘ಮಾಯಾಮೃಗ’’ ಕನ್ನಡ ಧಾರಾವಾಹಿಗಳ ಮಟ್ಟಿಗೆ ಹೊಸ ದಾಖಲೆಯನ್ನೇ ಬರೆಯಿತು.

ಚಿತ್ರನಿರ್ದೇಶಕಸಂಪಾದಿಸಿ

ಚಲನಚಿತ್ರಗಳ ವಿಚಾರಕ್ಕೆ ಬಂದರೆ, ಶೇಷಾದ್ರಿಯ ಒಲವು ವಾಲಿದ್ದು ಪರ್ಯಾಯ ಸಿನಿಮಾ ಕಡೆಗೆ. ಆದರೆ ಈ ಹಾದಿ ಅಷ್ಟು ಸುಗಮವಾಗಿರಲಿಲ್ಲ. ಇಂಥ ಚಿತ್ರಗಳಿಗೆ ಹಣ ಹೂಡಲು ಯಾವ ನಿರ್ಮಾಪಕನೂ ಮುಂದೆ ಬರುತ್ತಿರಲಿಲ್ಲ. ಈ ಕಟು ವಾಸ್ತವ ಶೇಷಾದ್ರಿಗೆ ತಿಳಿದಿತ್ತು. ಹಾಗಾಗಿ ಅವರು ಹುಡುಕಿದ್ದು ಹೊಸ ಮಾರ್ಗವೊಂದನ್ನು. ಅದೇ ಸಹಕಾರಿ ತತ್ವ. ಚಿತ್ರರಂಗದ ಇತಿಹಾಸದಲ್ಲಿ ಹಿಂದೆ ಸಹಕಾರಿ ತತ್ವದಡಿ ಕೆಲವೊಂದು ಚಿತ್ರಗಳು ನಿರ್ಮಾಣವಾಗಿದ್ದವು. ಆದರೆ ಈ ವ್ಯವಸ್ಥೆಯಲ್ಲಿ ಚಿತ್ರಗಳು ನಿರ್ಮಾಣವಾಗಿದ್ದು ಕಡಿಮೆ. ಸಹಕಾರಿ ವ್ಯವಸ್ಥೆಯಲ್ಲಿ ಹಲವು ತಲೆಗಳು ಒಟ್ಟಿಗೆ ಸೇರಿರುತ್ತವೆ. ಒಬ್ಬರು ಯೋಚನೆ ಇದ್ದಂತೆ ಇನ್ನೊಬ್ಬರದ್ದು ಇರುವುದಿಲ್ಲ. ಹಾಗಾಗಿ ಅನೇಕ ಸಮಸ್ಯೆಗಳು ಉದ್ಭವವಾಗುತ್ತವೆ. ಇದರ ಬಗ್ಗೆ ಚನ್ನಾಗಿ ಅರಿವಿದ್ದ ಶೇಷಾದ್ರಿ ಮುಕ್ತ ಮನಸ್ಥಿತಿಯ ಒಂಬತ್ತು ಸ್ನೇಹಿತರನ್ನು ಒಟ್ಟುಗೂಡಿಸಿದರು. ತಲಾ ಒಂದೊಂದು ಲಕ್ಷದ ಬಂಡವಾಳದಲ್ಲಿ ‘ನವಚಿತ್ರ’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಇದು ಆರಂಭವಾದದ್ದು ೨೦೦೦ ದಲ್ಲಿ. ಇಲ್ಲಿ ನಿರ್ದೇಶಕನನ್ನೊಳಗೊಂಡಂತೆ ಎಲ್ಲ ಪ್ರಮುಖ ತಂತ್ರಜ್ಞರೂ ಹಣ ಹೂಡಲೇಬೇಕು. ತಮ್ಮ ತಮ್ಮ ವಿಭಾಗದ ಖರ್ಚು ವೆಚ್ಚಗಳ ಹೊಣೆಗಾರಿಕೆ ಅವರದವರದ್ದೇ.

ಕ್ಯಾಪ್ಟನ್ ಜಾಗದಲ್ಲಿ ಕುಳಿತ ಶೇಷಾದ್ರಿ ಕಡಿಮೆ ಬಂಡವಾಳದಲ್ಲಿ ಚಿತ್ರ ಮಾಡುವ ಹೊಸ ಕನಸನ್ನು ಬಿತ್ತಿದರು. ಈ ಯೋಜನೆ ಆರಂಭವಾದದ್ದು ಹದಿನೈದು ಲಕ್ಷದಲ್ಲಿ! ಮೊದಲ ಚಿತ್ರ ‘ಮುನ್ನುಡಿ’. ಮುಸ್ಲಿಂ ಸಂವೇದನೆಯ ಪ್ರಮುಖ ಕತೆಗಾರ ಬೊಳುವಾರು ಮಹಮದ್ ಕುಂಇ‘ ಕತೆಯಾಧರಿಸಿದ ‘ಮುತ್ತುಚ್ಚೇರ’ ಕಥಾವಸ್ತು. ಹೀಗೆ ತಮ್ಮ ಚಿತ್ರವೃತ್ತಿಗೆ ‘ಮುನ್ನುಡಿ’ಯನ್ನು ತಾವೇ ಬರೆದುಕೊಂಡ ಶೇಷಾದ್ರಿ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದರು. ಚಿತ್ರ ನಿರ್ಮಾಣ ಅಷ್ಟೇ ಅಲ್ಲದೆ ತಮ್ಮ ಚಿತ್ರದ ಬಿಡುಗಡೆಯನ್ನೂ ಈ ತಂಡವೇ ಮಾಡಿತು. ಅಲ್ಲಿಯವರೆಗೆ ಕನ್ನಡಚಿತ್ರವೊಂದು ಬೆಂಗಳೂರಿನಲ್ಲಿ ಅದೂ ಕೆಂಪೇಗೌಡ ರಸ್ತೆಯಲ್ಲಿ ಬಿಡುಗಡೆಯಾಗಲೇ ಬೇಕು ಎಂಬಂತಿದ್ದ ಅಲಿಖಿತ ನಿಯಮವನ್ನು ಮುರಿದ ಈ ಮಿತ್ರರು, ಕರಾವಳಿ ಹಿನ್ನೆಲೆಯ ಕಥಾವಸ್ತು ಹೊಂದಿದ್ದ ತಮ್ಮ ‘ಮುನ್ನುಡಿ’ಯನ್ನು ಒಂದೇ ಒಂದು ಪ್ರಿಂಟ್ ಹಾಕಿಸಿ ಮೊದಲು ಮಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಅದು ಅಕ್ಟೋಬರ್ ೧೭, ೨೦೦೦.

ಚಿತ್ರನಾಯಕಿ ತಾರ ಬಿಟ್ಟು ಉಳಿದಂತೆ ಅಪರಿಚಿತ ಮುಖಗಳೇ ಇದ್ದ ಚಿತ್ರ ಮಗಳೂರಿನಲ್ಲಿ ಜನಮನ ಗೆಲ್ಲುವುದರೊಂದಿಗೆ ಒಂದಿಷ್ಟು ಹಣವನ್ನೂ ಇವರಿಗೆ ತಂದುಕೊಟ್ಟಿತು. ಈ ಯಶಸ್ಸಿನಿಂದ ಉತ್ತೇಜಿತರಾದ ಇವರು ಇನ್ನೆರಡು ಪ್ರಿಂಟ್ ಹಾಕಿಸಿ ‘ಮುನ್ನುಡಿ’ಯನ್ನು ಬೆಂಗಳೂರಿನಲ್ಲೂ ಬಿಡುಗಡೆ ಮಾಡಿದರು. ಕನ್ನಡಚಿತ್ರರಂಗ ಈ ವಿಶಿಷ್ಟ ಪ್ರಯತ್ನವನ್ನು ಕುತೂಹಲದಿಂದ ಗಮನಿಸಿತು.

೨೦೦೧, ಕೇರಳದ ‘ಅರವಿಂದನ್ ಪುರಸ್ಕಾರ’ ಶೇಷಾದ್ರಿಯನ್ನು ಹುಡುಕಿಕೊಂಡು ಬಂದಿತು. ಹಿಂದೆಯೇ ರಾಷ್ಟ್ರಪ್ರಶಸ್ತಿ ಕೂಡ ಪ್ರಕಟವಾಯಿತು. ‘ಮುನ್ನುಡಿ’ ಅತ್ಯುತ್ತಮ ಸಾಮಾಜಿಕ ಕಳಕಳಿ ಹೊಂದಿರುವ ಚಿತ್ರ ಎಂಬ ಪ್ರಶಸ್ತಿ ಪಡೆಯುವುದರೊಂದಿಗೆ ಇದರ ನಟ ಹೆಚ್.ಜಿ.ದತ್ತಾತ್ರೇಯ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪೋಷಕನಟ ಪ್ರಶಸ್ತಿಗೆ ಭಾಜನರಾದರು!

ಇದೇ ಸಹಕಾರಿ ತತ್ವದಲ್ಲಿ ‘ಮಿತ್ರಚಿತ್ರ’ ಹುಟ್ಟಿತು. ಅಮೆರಿಕದ ಅವಳಿ ಕಟ್ಟಡಗಳ ಮೇಲೆ ಉಗ್ರಗಾಮಿಗಳಿಂದ ಆದ ಆಕ್ರಮಣ ಇಡಿ ಜಗತ್ತನ್ನು ತಲ್ಲಣಗೊಳಿಸಿತು. ಈ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಚಿತ್ರವೇ ‘ಅತಿಥಿ’. ಇದರಲ್ಲಿ ದಕ್ಷಿಣಭಾರತದ ಖ್ಯಾತನಟ ಪ್ರಕಾಶ್ ರೈ ಕೇವಲ ಒಂದು ರೂಪಾಯಿ ಸಂಭಾವನೆಗೆ ನಟಿಸಿದ್ದು ಕನ್ನಡಚಿತ್ರಜಗತ್ತಿನಲ್ಲಿ ಸಂಚಲನ ಉಂಟುಮಾಡಿತು. ಮರುವರ್ಷವೇ ‘ಅತಿಥಿ’ಗೆ ಬಂದ ರಾಷ್ಟ್ರಪ್ರಶಸ್ತಿ ಗೌರವ ಮೊದಲ ಯಶಸ್ಸು ಆಕಸ್ಮಿಕವಲ್ಲ ಎಂಬುದನ್ನು ಸಾರಿತು. ೨೦೦೪ ರಲ್ಲಿ ಮತ್ತದೇ ಸಹಕಾರಿ ತತ್ವದಲ್ಲಿ ತಯಾರಾದ ಚಿತ್ರ ‘ಬೇರು’. ಇದೂ ಕೂಡ ರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆದು ಶೇಷಾದ್ರಿಯನ್ನು ಹ್ಯಾಟ್ರಿಕ್ ನಿರ್ದೇಶಕ ಎಂಬ ಪಟ್ಟಕ್ಕೆ ಕೂರಿಸಿತು.

ಆನಂತರ, ಕನ್ನಡದ ಪ್ರಖ್ಯಾತ ನಟಿ ಜಯಮಾಲ ಹಣ ಹೂಡಲು ಮುಂದಾದರು. ಆ ಫಲವೇ ‘ತುತ್ತೂರಿ’ ಎಂಬ ಮಕ್ಕಳ ಚಿತ್ರ. ಇದೂ ಕೂಡ ರಾಷ್ಟ್ರಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯದ ಅತ್ಯುತ್ತಮ ಮಕ್ಕಳ ಚಿತ್ರ ಎಂಬ ಗೌರವಕ್ಕೆ ಪಾತ್ರವಾಯಿತು. ಇನ್ನೆರಡು ವರ್ಷಬಿಟ್ಟು ಮತ್ತೆ ಸಹಕಾರಿ ತತ್ವದಲ್ಲಿ ಶೇಷಾದ್ರಿ ತಯಾರಿಸಿದ್ದು ‘ವಿಮುಕ್ತಿ’ ಚಿತ್ರವನ್ನು. ಇದು ಅವರಿಗೆ ಐದನೇ ರಾಷ್ಟ್ರಪ್ರಶಸ್ತಿಯನ್ನು ತಂದುಕೊಟ್ಟಿತು. ಜೊತೆಗೆ ಸಹಕಾರಿ ತತ್ವದಲ್ಲಿ ನಿರ್ಮಾಣವಾದ ನಾಲ್ಕನೇಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಬಹುಶಃ ಭಾರತದಲ್ಲೇ ಇದು ವಿನೂತನ ಪ್ರಯೋಗ ಎನ್ನಬಹುದು.

ಕನ್ನಡದಲ್ಲಿ ಅತಿಹೆಚ್ಚು ಕಲಾತ್ಮಕ ಚಿತ್ರಗಳನ್ನು ನಿರ್ಮಿಸಿದ ಖ್ಯಾತಿಗೆ ಒಳಗಾದ ಬಸಂತ ಕುಮಾರ ಪಾಟೀಲ್ ಶೇಷಾದ್ರಿಯಿಂದ ‘ಬೆಟ್ಟದ ಜೀವ’ (೨೦೧೦) ಮಾಡಿಸಿದರು. ಇದು ಡಾ.ಕೆ.ಶಿವರಾಮಕಾರಂತರ ಅದೇ ಹೆಸರಿನ ಕಾದಂಬರಿಯಾಧಾರಿತ ಚಿತ್ರ. ಇದು ಗಲ್ಲಾಪೆಟ್ಟಿಗೆಯಲ್ಲೂ ಗೆದ್ದಿತು. ಪ್ರಶಸ್ತಿಯ ಸರಣಿ ಮುಂದುವರಿದು ಶೇಷಾದ್ರಿಗೆ ಆರನೇ ರಾಷ್ಟ್ರಪ್ರಶಸ್ತಿಯನ್ನು ಈ ಚಿತ್ರ ತಂದುಕೊಟ್ಟಿತು. ಕೇಂದ್ರ ಸರ್ಕಾರ ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಬಂಡವಾಳಕ್ಕೆ ಅನುಮತಿ ಇತ್ತದ್ದೇ ‘ಭಾರತ್ ಸ್ಟೋರ್ಸ್’ ಹುಟ್ಟಲು ಕಾರಣ. ಇದು ಶೇಷಾದ್ರಿಯ ಏಳನೇ ಚಿತ್ರ. ಮತ್ತೆ ಬಸಂತಕುಮಾರ ಪಾಟೀಲ್ ಇದನ್ನು ನಿರ್ಮಿಸಿದ್ದರು. ಇತ್ತೀಚೆಗೆ ಪ್ರಕಟವಾದ ಅರವತ್ತನೇ ಭಾರತೀಯ ಚಲನಚಿತ್ರ ಪ್ರಶಸ್ತಿಯಲ್ಲಿ (೨೦೧೨) ‘ಭಾರತ್ ಸ್ಟೋರ್ಸ್’ ಮತ್ತೆ ರಾಷ್ಟ್ರಪ್ರಶಸ್ತಿ ಪಡೆದು ಶೇಷಾದ್ರಿ ಏಳನೇ ರಾಷ್ಟ್ರಪ್ರಶಸ್ತಿಯ ದಾಖಲೆಗೆ ನೆರವಾಯಿತು. ಈಗ ಶೇಷಾದ್ರಿ ತಮ್ಮ ಸಹಕಾರಿ ತತ್ವದಲ್ಲಿ ಎಂಟನೇ ಚಿತ್ರದ ಯೋಚನೆಯಲ್ಲಿದ್ದಾರೆ

ವೈಯಕ್ತಿಕ ಬದುಕುಸಂಪಾದಿಸಿ

ಪತ್ನಿ ಅನುಪಮ ಸಂಸಾರದಲ್ಲಷ್ಟೇ ಅಲ್ಲ ಶೇಷಾದ್ರಿಯ ಚಿತ್ರಗಳು ಮತ್ತು ಧಾರಾವಾಹಿಯ ಚುಕ್ಕಾಣಿ ಹಿಡಿದಿದ್ದಾರೆ. ಚಿತ್ರಗಳಲ್ಲಿ ವಸ್ತ್ರವಿನ್ಯಾಸಕಿಯಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಮುನ್ನುಡಿ’ ಚಿತ್ರದ ವಸ್ತ್ರವಿನ್ಯಾಸಕ್ಕಾಗಿ ಇವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಕೂಡ ಬಂದಿದೆ. ಒಬ್ಬನೇ ಮಗ ಪ್ರಥಮ ಬಾಲನಟನಾಗಿ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾನೆ (ತುತ್ತೂರಿ ಮತ್ತು ಗುಬ್ಬಚ್ಚಿಗಳು). ಇದೀಗ ಪಿಯುಸಿಯಲ್ಲಿ ಓದುತ್ತಿದ್ದಾನೆ.

ಚಿತ್ರಗಳುಸಂಪಾದಿಸಿ

ಟಿವಿ ಸೀರಿಯಲ್ಸಂಪಾದಿಸಿ

 • 1. ಇಂಚರ (೧೯೯೫)
 • 2. ಕಾಮನಬಿಲ್ಲು (1996)
 • 3. ಕಥೆಗಾರ (1996-1997)
 • 4. ಮಾಯಮೃಗ (1999-2000)
 • 5. ನಿಕ್ಷೇಪ (2000-2001)
 • 6. ಕಣ್ಣಾಮುಚ್ಚಾಲೆ (2001-2002)
 • 7. ಉಯ್ಯಾಲೆ (2003)
 • 8. ಸುಬ್ಬಣ್ಣ (2003-2004)
 • 9. ಮೌನರಾಗ (2005-2006)
 • 10. ಸುಪ್ರಭಾತ (2008-2009)
 • 11. ಚಕ್ರತೀರ್ಥ (2012)

ಬಾಹ್ಯ ಕೊಂಡಿಸಂಪಾದಿಸಿ

ಶೇಷಾದ್ರಿಯವರ ಜಾಲತಾಣ.