ಕನಾಟಕ ಇತಿಹಾಸ, ಸಾಹಿತ್ಯ, ಸಂಸ್ಕೃತಿಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದು ಪಾಂಡುರಂಗ, ಭೀಮರಾವ್ ದೇಸಾಯಿಯವರು ಹುಟ್ಟಿದ್ದು ರಾಯಚೂರು ಜಿಲ್ಲೆಯ ಕೊಪ್ಪಳ ತಾಲ್ಲೂಕಿನ (ಈಗ ಕೊಪ್ಪಳ ಜಿಲ್ಲಾ ಕೇಂದ್ರ) ಕಿನ್ನಾಳದಲ್ಲಿ. ೧೯೧೦ರ ಡಿಸೆಂಬರ್ ೨೪ ರಂದು. ತಂದೆ ಭೀಮರಾವ್, ತಾಯಿ ಭಾಗೀರಥಿ ಬಾಯಿ. ಪ್ರಾಥಮಿಕ ಶಿಕ್ಷಣ ಸೇಡಂನಲ್ಲಿ. ಸೆಕೆಂಡರಿ ಶಿಕ್ಷಣ ಗುಲಬರ್ಗಾದಲ್ಲಿ. ಮುಂಬಯಿ ವಿಶ್ವವಿದ್ಯಾಲಯದ ಎಂಟ್ರೆನ್ಸ್ ಪರೀಕ್ಷೆಯ ನಂತರ ಅನಾರೋಗ್ಯಕ್ಕೆ ತುತ್ತಾಗಿ ಆರು ವರ್ಷ ಕಾಲ ವಿದ್ಯಾಭ್ಯಾಸಕ್ಕೆ ಧಕ್ಕೆ. ೧೯೩೫ ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಿಂದ ಸಂಸ್ಕೃತ ಆನರ‍್ಸ್ ಪದವಿ, ೧೯೩೭ ರಲ್ಲಿ ಸಂಸ್ಕೃತ ಹಾಗೂ ಕನ್ನಡದಲ್ಲಿ ಎಂ.ಎ. ಪದವಿ. ಬೆಳೆಸಿಕೊಂಡದ್ದು ಊರಿನ ಸುತ್ತಮುತ್ತ ಇದ್ದ ಶಾಸನಗಳನ್ನು ಓದುವ ಹವ್ಯಾಸ. ದೊರೆತದ್ದು ಕೇಂದ್ರ ಸರಕಾರದ ಪುರಾತತ್ತ್ವ ಇಲಾಖೆಯಲ್ಲಿ ಶಾಸನ ಸಹಾಯಕ ಸಂಶೋಧಕರ ಹುದ್ದೆ. ಉದಕಮಂಡಲದಲ್ಲಿ ಶಾಸನ ಶಾಸ್ತ್ರವನ್ನು ಆಳವಾಗಿ ಅಭ್ಯಸಿಸಿ ೧೭ ವರ್ಷ ಇಲಾಖೆಗಾಗಿ ದುಡಿದರು.

ವಿಜಯನಗರದ ಆರನೆಯ ಶತಮಾನೋತ್ಸವ ಸಂದರ್ಭದಲ್ಲಿ ಇವರು ರಚಿಸಿದ ಗ್ರಂಥ ‘ವಿಜಯನಗರ ಸಾಮ್ರಾಜ್ಯ’. ದಕ್ಷಿಣ ಭಾರತದ ಶಾಸನ ಸಂಪುಟಗಳ ಪೈಕಿ ೧೧ನೆಯ ಸಂಪುಟದ ಮೊದಲಭಾಗ ಮತ್ತು ೧೫ನೆಯ ಸಂಪುಟವನ್ನು ಸಂಪಾದಿಸಿದರು. ಶಾಸನಗಳಿಗೆ ಸಂಬಂಧಿಸಿದಂತೆ ರಚಿಸಿದ ಗ್ರಂಥ ‘ಶಾಸನ ಪರಿಚಯ’. ಇದಕ್ಕೆ ಮೈಸೂರು ಸರಕಾರದ ಪುರಸ್ಕಾರವೂ ದೊರೆಯಿತು.

ಹೈದರಾಬಾದ್ ಸರಕಾರಕ್ಕಗಿ ಸಂಪಾದಿಸಿದ ಗ್ರಂಥಗಳು ‘ಎ ಕಾರ್ಪಸ್ ಆಫ್ ಕನ್ನಡ ಇನ್‌ಸ್ಕ್ರಿಪ್‌ಷನ್ಸ್ ಇನ್ ಹೈದರಾಬಾದ್’ ಮತ್ತು ‘ಕನ್ನಡ ಇನ್‌ಸ್ಕ್ರಿಪ್‌ಷನ್ಸ್ ಆಫ್ ಆಂಧ್ರ ಪ್ರದೇಶ್ ಮತ್ತು ಸೆಲೆಕ್ಟ್ ಇನ್‌ಸ್ಕ್ರಿಪ್‌ಷನ್ಸ್ ಆಫ್ ಆಂಧ್ರ ಪ್ರದೇಶ್‌’ ಎಂಬ ಗ್ರಂಥಗಳು.

ಸಂಶೋಧನ ಸಂಸ್ಥೆಯ ನಿರ್ದೇಶಕರಾದ ನಂತರ ಪುರಾತತ್ವ ಗ್ರಂಥಾಲಯವನ್ನು ರೂಪಿಸಿದರು. ವಿದ್ವಾಂಸರಿಂದ ವಿದ್ವತ್‌ಪೂರ್ಣ ಉಪನ್ಯಾಸಗಳನ್ನೇರ್ಪಡಿಸಿದರು. ಹಸ್ತಪ್ರತಿಗಳ ವಿವರಣಾತ್ಮಕ ಪಟ್ಟಿಯನ್ನು (ಡಿಸ್‌ಕ್ರಿಪ್‌ಟಿವ್ ಕ್ಯಾಟಲಾಗ್ಸ್ ಆಫ್ ಮ್ಯಾನ್‌ಸ್ಕ್ರಿಪ್ಟ್‌ಸ್ ಇನ್ ದಿ ಕನ್ನಡ ರಿಸರ್ಚ್ ಇನ್‌ಸ್ಟಿಟ್ಯೂಟ್) ಪ್ರಕಟಿಸಿದರು.

ಶಿಕ್ಷಣ

ಬದಲಾಯಿಸಿ

ಪಿ.ಬಿ.ದೇಸಾಯಿಯವರು ಧಾರವಾಡ ಕರ್ನಾಟಕ ಕಾಲೇಜಿನಿಂದ ೧೯೩೫ರಲ್ಲಿ ಬಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಮುಂಬಯಿ ವಿಶ್ವವಿದ್ಯಾಲಯದಿಂದ ೧೯೩೭ರಲ್ಲಿ ಎಮ್.ಎ. ಪದವಿ ಪಡೆದರು.

ವೃತ್ತಿ ಹಾಗು ಸಾಧನೆ

ಬದಲಾಯಿಸಿ
  • ಪಿ.ಬಿ.ದೇಸಾಯಿಯವರು ೧೯೩೯ರಲ್ಲಿ ಭಾರತ ಸರಕಾರದ ಪುರಾತತ್ವ ಇಲಾಖೆಯಲ್ಲಿ ಶಾಸನಶಾಸ್ತ್ರ ವಿಭಾಗದಲ್ಲಿ ಸೇವೆ ಪ್ರಾರಂಭಿಸಿದರು.
  • ಮುಂಬಯಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಮತ್ತು ತಮಿಳು ನಾಡುಗಳಲ್ಲಿ ಸಂಚರಿಸಿ ಸಾವಿರಾರು ಶಾಸನಗಳನ್ನು , ತಾಮ್ರಪಟಗಳನ್ನು ಬೆಳಕಿಗೆ ತಂದು ವಿಮರ್ಶಾತ್ಮಕವಾಗಿ ಪರಿಶೀಲಿಸಿದರು. ಇತಿಹಾಸ, ಶಾಸನಶಾಸ್ತ್ರ, ಕನ್ನಡ ಸಾಹಿತ್ಯ ಹಾಗು ಭಾಷೆಗೆ ಸಂಬಂಧಿಸಿದಂತೆ ಅನೇಕ ಪ್ರಬಂಧಗಳನ್ನು ಪ್ರಕಟಿಸಿದರು.
  • ಶಿವಾಜಿ ಜೀವನಕ್ಕೆ ಸಂಬಂಧಿಸಿದ ‘ಶಿವ ಚರಿತ್ರವೃತ್ತ’ ಎಂಬ ಮರಾಠಿ ಗ್ರಂಥ ಮತ್ತೊಂದು ಪ್ರಮುಖ ಗ್ರಂಥ. ಇದಲ್ಲದೆ ಇಂಗ್ಲಿಷ್‌ನಲ್ಲಿ ೧೦೫, ಕನ್ನಡದಲ್ಲಿ ೨೩೦, ಮರಾಠಿಯಲ್ಲಿ ೪೦ ಲೇಖನಗಳನ್ನು ಬರೆದಿದ್ದಾರೆ.
  • ೧೯೫೭‍ರಲ್ಲಿಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿ ಉಪಪ್ರಾಧ್ಯಾಪಕರಾಗಿ ಸೇರಿ,ಬಳಿಕ ಕನ್ನಡ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ, ಪ್ರಾಚೀನ ಭಾರತ ಇತಿಹಾಸ ಹಾಗು ಸಂಸ್ಕೃತಿ ವಿಭಾಗದ ಮುಖ್ಯಸ್ಥರಾಗಿ, ೧೯೬೭ರಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.
  • ೧೯೬೧ರಲ್ಲಿ ಇವರ ಜೈನಿಸಮ್ ಇನ್ ಸೌಥ್ ಇಂಡಿಯಾ ಎನ್ನುವ ಮಹಾಪ್ರಬಂಧವು ಇವರಿಗೆ ಡಿ.ಲಿಟ್ ಗೌರವವನ್ನು ದೊರಕಿಸಿತು.
  • ೪೨೦ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಹಾಗು ಕೃತಿಗಳನ್ನು ಪಿ.ಬಿ.ದೇಸಾಯಿಯವರು ರಚಿಸಿದ್ದಾರೆ.ಇವರ ಸಂಶೋಧನ ಗ್ರಂಥಗಳಲ್ಲಿ ಪ್ರಮುಖವಾದವುಗಳೆಂದರೆ ‘ಬಸವೇಶ್ವರ ಅಂಡ್ ಹಿಸ್ ಟೈಮ್ಸ್’, ಕರ್ನಾಟಕ ಇತಿಹಾಸದ ‘ಎ ಹಿಸ್ಟರಿ ಆಫ್ ಕರ್ನಾಟಕ’ (ಇತರರೊಡನೆ), ‘ಮಿಂಚಿದ ಮಹಿಳೆಯರು’, ‘ಕುಂತಲೇಶ್ವರ’ ‘ಮದಗಜಮಲ್ಲ’, ‘ಕರ್ನಾಟಕದ ಕಲಚುರಿಗಳು’ ಮತ್ತು ‘ಕನ್ನಡ ನಾಡಿನ ಶಾಸನಗಳು’ ಮುಂತಾದವುಗಳು.


ಪುರಸ್ಕಾರ

ಬದಲಾಯಿಸಿ
  • ೧೯೫೯ರಲ್ಲಿ ಕರ್ನಾಟಕ ರಾಜ್ಯ ಸರಕಾರವು ಪಿ.ಬಿ.ದೇಸಾಯಿಯವರಿಗೆ ವಿಶೇಷ ಗೌರವ ನೀಡಿ ಸನ್ಮಾನಿಸಿತು.
  • ೧೯೭೧ ರಲ್ಲಿ ನಿವೃತ್ತರಾದ ನಂತರವೂ ಧನದಾನ ಆಯೋಗದ ಪ್ರಾಧ್ಯಾಪಕರಾಗಿದ್ದರು. ೧೯೭೩ ರಲ್ಲಿ ನಡೆದ ಅಖಿಲ ಭಾರತ ಇತಿಹಾಸ ಸಮ್ಮೇಳನದ ಶಾಸನ ಶಾಸ್ತ್ರ ವಿಭಾಗದ ಅಧ್ಯಕ್ಷತೆ ವಹಿಸಿದರು.


ಸಂಶೋಧಕರು, ಶಾಸ್ತ್ರಜ್ಞರು, ಸಂಸ್ಕೃತಿಯ ಆಳವಾದ ಜ್ಞಾನವುಳ್ಳವರೂ ಆಗಿದ್ದ ದೇಸಾಯಿಯವರು ೧೯೭೪ರ ಮಾರ್ಚ್ ೫ ರಂದು ನಿಧನರಾದರು.