ಪರ್‌ಡೈಸಲ್ಫ್ಯೂರಿಕ್ ಆಮ್ಲ

ಪರ್‌ಡೈಸಲ್ಫ್ಯೂರಿಕ್ ಆಮ್ಲವು (H2S2O8) ಒಂದು ಅಕಾರ್ಬನಿಕ ಸಂಯುಕ್ತ. ಪರ್‌ಡೈಸಲ್ಫ್ಯೂರಿಕ್ ಆಮ್ಲವನ್ನು ಪರ್‌ಸಲ್ಫ್ಯೂರಿಕ್ ಆಮ್ಲ ಎಂದೇ ಕರೆಯುವುದು ರೂಢಿ. ಈ ಆಮ್ಲವನ್ನು ಪತ್ತೆಹಚ್ಚಿದವನ ಗೌರವಾರ್ಥ ಇದಕ್ಕೆ ಮಾರ್ಷಲ್ಲರ (1891) ಆಮ್ಲವೆಂದು ಹೆಸರಿಸಿದ್ದಾರೆ.[]

ಪರ್‌ಡೈಸಲ್ಫ್ಯೂರಿಕ್ ಆಮ್ಲದ ರಚನಾ ಸೂತ್ರ

ತಯಾರಿಕೆ

ಬದಲಾಯಿಸಿ

ಬರ್ಫದ ಶೈತ್ಯದಲ್ಲಿರುವ 50%-60% ಸಾರತೆಯ ಸಲ್ಫ್ಯೂರಿಕ್ ಆಮ್ಲವನ್ನು ವಿದ್ಯುದ್ವಿಭಜನೆಗೆ ಗುರಿಪಡಿಸಿದಾಗ ಪರ್‌ಸಲ್ಫ್ಯೂರಿಕ್ ಆಮ್ಲ ಉಂಟಾಗುತ್ತವೆ. ಸಾರರಿಕ್ತ ಸಲ್ಫ್ಯೂರಿಕ್ ಆಮ್ಲವನ್ನು ವಿದ್ಯುದ್ವಿಭಜಿಸಿದಾಗ ಅದರೊಡನಿರುವ ನೀರು ವಿಭಜಿತವಾಗಿ ಕ್ಯಾಥೋಡಿನಲ್ಲಿ ಹೈಡ್ರೊಜನ್ನು ಆನೋಡಿನಲ್ಲಿ ಆಕ್ಸಿಜನ್ನೂ 2:1 ಗಾತ್ರ ಪ್ರಮಾಣದಲ್ಲಿ ಬಿಡುಗಡೆಯಾಗುವುವಷ್ಟೆ. ಆದರೆ ದ್ರಾವಣದಲ್ಲಿ ಸಲ್ಫ್ಯೂರಿಕ್ ಆಮ್ಲದ ಅಂಶ ಹೆಚ್ಚಿಸಿದಂತೆ ಆನೋಡಿನಲ್ಲಿ ಹೊರಬೀಳುವ ಆಕ್ಸಿಜನ್ನಿನ ಪರಿಮಾಣ ಕಡಿಮೆಯಾಗುತ್ತ ಹೋಗಿ 50% ಸಲ್ಫ್ಯೂರಿಕ್ ಆಮ್ಲವನ್ನು ಬಳಸಿದಾಗ ಆಕ್ಸಿಜನ್ ಬಿಡುಗಡೆಯಾಗುವಂತೆ ತೋರುವುದೇ ಇಲ್ಲ. ಇದು ನಮ್ಮ ಅನುಭವ. ಹೀಗಾಗಲು ಈ ಸಾರತೆಯ ಸಲ್ಫ್ಯೂರಿಕ್ ಆಮ್ಲ ದ್ರಾವಣದಲ್ಲಿ ಈ ಕೆಳಗಿನಂತೆ ಅಯಾನೀಭವಿಸಿರುವುದೇ ಕಾರಣ:

H2SO4 → H+ + HSO4-

ನಯವಾದ ಪ್ಲ್ಯಾಟಿನಂ ಆನೋಡನ್ನು ಬಳಸಿ ಉನ್ನತ ವಿದ್ಯುತ್‌ಸಾಂದ್ರತೆಯನ್ನು ಪ್ರಯೋಗಿಸಿದರೆ ದ್ರಾವಣದಲ್ಲಿರುವ ಬೈಸಲ್ಫೇಟಿನ ಅಯಾನುಗಳು ಜೊತೆಗೂಡಿ ಪರ್‌ಸಲ್ಫ್ಯೂರಿಕ್ ಆಮ್ಲವನ್ನು ಕೊಡುತ್ತದೆ.

2HSO4- → H2S2O8 + 2e-

ಕ್ಯಾಥೋಡಿನಲ್ಲಿ ಬಿಡುಗಡೆಯಾಗುವ ಹೈಡ್ರೊಜನ್ ಪರ್‌ಸಲ್ಫ್ಯೂರಿಕ್ ಆಮ್ಲವನ್ನು ಅಪಕರ್ಷಿಸಿ ಬಿಡುವ ಸಾಧ್ಯತೆ ಉಂಟು. ಆದ್ದರಿಂದ ಆನೋಡ್ ಮತ್ತು ಕ್ಯಾಥೋಡ್ ಅಂಕಣಗಳನ್ನು ಒಂದು ಗಾಜಿನ ಸಿಲಿಂಡರಿನಿಂದ ಬೇರ್ಪಡಿಸುತ್ತಾರೆ. ಸಿಲಿಂಡರಿಗೆ ಸುತ್ತಿರುವ ತಾಮ್ರದ ಸುರುಳಿಯೇ ಕ್ಯಾಥೋಡಿನಂತೆ ವರ್ತಿಸುವುದು.

ಗುಣಗಳು

ಬದಲಾಯಿಸಿ

ಪರ್‌ಸಲ್ಫ್ಯೂರಿಕ್ ಆಮ್ಲ ಸ್ಥಿರವೆನ್ನಬಹುದಾದ ಹರಳು ರೂಪದ ವಸ್ತು. ದ್ರವನ ಬಿಂದು 600 ಸೆಂ. ಬಿಸಿಮಾಡಿದಾಗ ಆಕ್ಸಿಜನ್ನನ್ನು ಕಳೆದುಕೊಳ್ಳುವುದರಿಂದ ಇದು ಉತ್ಕರ್ಷಣಕಾರಿ. ಅಯೊಡೈಡುಗಳಿಂದ ಅಯೊಡೀನನ್ನು ಬಿಡುಗಡೆ ಮಾಡುವುದು. ಇಂಡಿಗೋ ಬಣ್ಣವನ್ನು ಚಲುವೆ ಮಾಡಬಲ್ಲದು. ಅನಿಲೀನನ್ನು ಅನಿಲಿನ್ ಕಪ್ಪಾಗಿ (aniline black) ಉತ್ಕರ್ಷಿಸುತ್ತದೆ. ಆದರೆ ಈ ಕ್ರಿಯೆಗಳು ಜರುಗುವುದು ನಿಧಾನ. ಇದರ ದ್ರಾವಣ ಕ್ರಮೇಣವಾಗಿ ಸಲ್ಫ್ಯೂರಿಕ್ ಮತ್ತು ಪರ್‌ಮಾನೋಸಲ್ಫ್ಯೂರಿಕ್ ಆಮ್ಲಗಳ ಮಿಶ್ರಣವಾಗಿ ಬಿಡುವುದು. ಇದು ಜಲವಿಭಜನೆಯ ಪರಿಣಾಮ.

H2S2O8 + H2O → H2SO4 + H2SO5

ಉಪಯೋಗಗಳು

ಬದಲಾಯಿಸಿ

50% ಸಾರತೆಯ ಸಲ್ಫ್ಯೂರಿಕ್ ಆಮ್ಲದಲ್ಲಿ ಪೊಟ್ಯಾಸಿಯಂ ಸಲ್ಫೇಟ್ ಅಥವಾ ಅಮೋನಿಯಂ ಲವಣಗಳು ಸ್ಫಟಿಕೀಕರಿಸುತ್ತವೆ.[][] ಮೂಲ ಆಮ್ಲದಂತೆ ಇವು ಕೂಡ ಪ್ರಬಲ ಉತ್ಕರ್ಷಣಕಾರಿಗಳು.[] ರಾಸಾಯನಿಕ ವಿಶ್ಲೇಷಣೆಯಲ್ಲಿ ಇವುಗಳಿಗೆ ಪ್ರಾಶಸ್ತ್ಯ ಉಂಟು. ಹೈಡ್ರೊಜನ್ ಪೆರಾಕ್ಸೈಡಿನ ಉತ್ಪಾದನೆಯಲ್ಲಿ ಅಮೋನಿಯಂ ಪರ್‌ಸಲ್ಫೇಟಿನ ಪಾತ್ರವಿದೆ.

ಉಲ್ಲೇಖಗಳು

ಬದಲಾಯಿಸಿ
  1. Senning, Alexander (2006-10-30). Elsevier's Dictionary of Chemoetymology: The Whys and Whences of Chemical Nomenclature and Terminology. ISBN 9780080488813.
  2. Shafiee, Saiful Arifin; Aarons, Jolyon; Hamzah, Hairul Hisham (2018). "Electroreduction of Peroxodisulfate: A Review of a Complicated Reaction". Journal of the Electrochemical Society. 165 (13): H785–H798. doi:10.1149/2.1161811jes. S2CID 106396614.
  3. F. Feher, "Potassium Peroxydisulfate" in Handbook of Preparative Inorganic Chemistry, 2nd Ed. Edited by G. Brauer, Academic Press, 1963, NY. Vol. 1. p. 390.
  4. Encyclopedia of Reagents for Organic Synthesis, vol. 1, pp. 193–197(1995)