ಕುಮಾರ ಗಂಧರ್ವ
(ಪಂಡಿತ್ ಕುಮಾರ ಗಂಧರ್ವ ಇಂದ ಪುನರ್ನಿರ್ದೇಶಿತ)
ಕುಮಾರ ಗಂಧರ್ವ (ಏಪ್ರಿಲ್ ೮,೧೯೨೪ - ಜನವರಿ ೧೨,೧೯೯೨) ಖ್ಯಾತ ಹಿಂದುಸ್ತಾನಿ ಗಾಯಕರು.
ಕುಮಾರ ಗಂಧರ್ವ | |
---|---|
ಜನನ | ಶಿವಪುತ್ರ ಸಿದ್ದರಾಮಯ್ಯ ಕೋಂಕಾಳಿಮಠ ಏಪ್ರಿಲ್ ೮, ೧೯೨೪ ಬೆಳಗಾವಿ ಜಿಲ್ಲೆಯ ಸುಳೇಭಾವಿ |
ಮರಣ | ಜನವರಿ ೧೨, ೧೯೯೨ |
ವೃತ್ತಿ | ಗಾಯಕರು |
ಇವರ ನೆನಪಿನಲ್ಲಿ ಬೆಳಗಾವಿ ಜಿಲ್ಲಾಡಳಿತ ಕುಮಾರ ಗಂಧರ್ವ ರಂಗ ಮಂದಿರ ವನ್ನು ನಿರ್ಮಿಸಿದೆ.
ಜೀವನ
ಬದಲಾಯಿಸಿ- ಕುಮಾರ ಗಂಧರ್ವರ ಜನ್ಮನಾಮ ಶಿವಪುತ್ರ ಕೊಂಕಾಳಿಮಠ. ಇವರು ಏಪ್ರಿಲ್ ೮, ೧೯೨೪ರಂದು ಬೆಳಗಾವಿ ಜಿಲ್ಲೆಯ ಸೂಳಿಭಾವಿಯಲ್ಲಿ ಜನಿಸಿದರು. ಇವರದ್ದು ಬಾಲಪ್ರತಿಭೆ. ಇನ್ನೂ ದಟ್ಟಡಿ ಇಡುವಾಗ ಒಂದು ದಿನ 'ನನಗೆ ಹಾಡಲು ಬರುತ್ತದೆ' ಎಂದ ಬಾಲಕನಿಗೆ ಹಾಡಲು ಬಂದೇ ಬಿಟ್ಟಿತ್ತು. ತಂದೆ ಸಿದ್ಧರಾಮಯ್ಯ ಸ್ವತಃ ಸಂಗೀತಗಾರರಾಗಿದ್ದರು. ಸೋದರಮಾವ ಕಲ್ಲಯ್ಯಸ್ವಾಮಿ ಸಂಬರಗಿಮಠ ಶಿರಹಟ್ಟಿ ವೆಂಕೋಬರಾಯರ ನಾಟಕ ಕಂಪನಿ, ವಾಮನರಾವ ಮಾಸ್ತರರ ನಾಟಕ ಕಂಪನಿ ಮತ್ತು ಸೀಮೀಕೇರಿ ನಾಟಕ ಕಂಪನಿಗಳಲ್ಲಿ ಗಾಯಕ ನಟರಾಗಿದ್ದರು. ಅವರು ಕುಮಾರ ಗಂಧರ್ವರಿಗೆ ನಾಲ್ಕು ವರ್ಷದವರಿದ್ದಾಗಲೆ ಸಂಗೀತದೀಕ್ಷೆ ನೀಡಿದರು. ಆ ಮೇಲೆ, ತಂದೆ ಜವಾಬ್ದಾರಿ ವಹಿಸಿಕೊಂಡರು.
- ಐದು ವರ್ಷದ ಬಾಲಕನಾಗಿದ್ದಾಗ ದಾವಣಗೆರೆಯಲ್ಲಿ ಪ್ರಥಮ ಕಚೇರಿ ನೀಡಿದರು. ಅದೊಂದು ದಾಖಲೆ. ಆರು ವರ್ಷದವನಿದ್ದಾಗ ಅವನ ಗಾಯನ ಕೇಳಿ ಗುಲ್ಬರ್ಗಾ ಜಿಲ್ಲೆಯ ಗುರುಕಲ್ಮಠದ ಶಾಂತವೀರ ಸ್ವಾಮಿಗಳು “ಓಹೋ! ಇವನು ಕುಮಾರ ಗಂಧರ್ವ” ಎಂದು ಉದ್ಗರಿಸಿದರು. ಆ ಹೆಸರೇ ಸ್ಥಿರವಾಯಿತು. ಅದೇ ಅವರ ಕಾಯಂ ಹೆಸರಾಯಿತು. ತಂದೆ ಮತ್ತು ಮಗ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ ಮುಂತಾದೆಡೆ ಕಾರ್ಯಕ್ರಮ ನೀಡಿದರು. ಕುಮಾರ ಗಂಧರ್ವನ ಸಂಗೀತಯಾತ್ರೆ ಕಲಕತ್ತಾ, ಆಗ್ರಾ, ಕರಾಚಿ, ನಾಗಪುರ ಮೂಲಕ ಮುಂಬಯಿಗೆ ಕೊಂಡೊ ಯ್ದಿತು.
- ಮಗನ ಪ್ರತಿಭೆಗೆ ಸಂಸ್ಕಾರದ ಅಗತ್ಯವನ್ನು ಮನಗಂಡ ಸಿದ್ಧರಾಮಯ್ಯನವರು ಕುಮಾರ ಗಂಧರ್ವನನ್ನು ಮುಂಬಯಿಯ ಪ್ರೊ. ಬಿ.ಆರ್. ದೇವಧರ ಅವರಲ್ಲಿ ಕರೆದೊಯ್ದರು. ದೇವಧರರು ಕುಮಾರಗಂಧರ್ವನಿಗೆ ತನ್ನದೇ ಪ್ರತಿಭೆಯನ್ನು ವಿಕಸಿಸಿಕೊಳ್ಳಲು ಪ್ರೋತ್ಸಾಹಿಸಿದರು. ಕುಮಾರ ಗಂಧರ್ವನಿಗೆ ರಾಗಗಳನ್ನು ಆಲಿಸಿ ಗೊತ್ತಿತ್ತು. ಕಲಿತು ಅಲ್ಲ, ದೇವಧರರು ಈ ಕೊರತೆಯನ್ನು ತುಂಬಿದರು. ಕುಮಾರ ಗಂಧರ್ವ 1933 ರಿಂದ 1943ರ ವರೆಗೆ ದೇವಧರರಲ್ಲಿ ಅಭ್ಯಾಸ ಮಾಡಿದರು.
- ಮುಂದೆ ಅಂಜನಿಬಾಯಿ ಮಾಲ್ಪೆಕರರು ಕುಮಾರ ಗಂಧರ್ವರಿಗೆ ಸಂಗೀತ ದೃಷ್ಟಿ ನೀಡಿದರು. ದೇವಧರರಲ್ಲಿ ಸಹಪಾಠಿಯಾಗಿದ್ದ ಮಂಗಳೂರಿನ ಭಾನುಮತಿ ಕಂಸರನ್ನು ಕುಮಾರ ಗಂಧರ್ವರು ಮದುವೆಯಾದರು. ಭಾನುಮತಿ ಕುಮಾರ ಗಂಧರ್ವರಲ್ಲಿ ತಮ್ಮ ಸಂಗೀತಾಭ್ಯಾಸ ಮುಂದುವರಿಸಿದರು.
ಎರಗಿದ ದುರಂತ
ಬದಲಾಯಿಸಿ- 1947ರಲ್ಲಿ ದುರಂತ ಎರಗಿತು. ಕುಮಾರ ಗಂಧರ್ವರಿಗೆ ಗಂಭೀರ ಪುಪ್ಪುಸ ಕ್ಷಯರೋಗ ತಗಲಿತು. ಇಂದಿನಂತೆ ಅಂದು ಕ್ಷಯರೋಗಕ್ಕೆ ಸಮರ್ಥ ಔಷಧೋಪಚಾರ ಇರಲಿಲ್ಲ.
- ಕುಮಾರ ಗಂಧರ್ವರ ಒಂದು ಪಪ್ಪುಸವನ್ನೆ ತೆಗೆಯಬೇಕಾಯಿತು. ಒಂದು ದಿನ ಪತ್ನಿ ಧೈರ್ಯ ಕಳೆದುಕೊಂಡು ಅತ್ತುಬಿಟ್ಟರು. ಎದೆಗುಂದದೆ ಕುಮಾರ ಗಂಧರ್ವ ಭರವಸೆ ನೀಡಿದರು: “ಚಿಂತಿಸದಿರು. ನಾನು ಹಾಡದ ವಿನಾ ಸಾಯುವುದಿಲ್ಲ.”
ಜಾನಪದ ಸಂಗ್ರಹ
ಬದಲಾಯಿಸಿ- ಕುಮಾರ ಗಂಧರ್ವ ಅವರಿಗೆ ಅನಾರೋಗ್ಯದ ಸಂದರ್ಭದಲ್ಲಿ ಹಾಡಲು ನಿಷೇಧವಿದ್ದರೂ ಸದಾಕಾಲ ಅವರ ಮನ ಸಂಗೀತವನ್ನೇ ಚಿಂತಿಸುತ್ತಿತ್ತು. ಮಾಳವಾ ಪ್ರದೇಶದ ಜಾನಪದ ಸಂಗೀತವನ್ನು ಅರಗಿಸಿಕೊಳ್ಳತೊಡಗಿದರು.
- ಇದಕ್ಕಾಗಿ ಬಹಳಷ್ಟು ಲೋಕಗೀತೆಗಳನ್ನು ಸಂಗ್ರಹಿಸಿದರು. ಅನೇಕ ಬೀಜಗಳು ಅಸ್ತಿತ್ವದಲ್ಲಿದ್ದ ರಾಗಗಳಿಗೆ ಸರಿಹೊಂದುತ್ತಿದ್ದವು. ಇನ್ನು ಕೆಲವಕ್ಕೆ ಹೊಸ ರಾಗರೂಪಗಳನ್ನು ಸೃಷ್ಟಿಸಿದರು. ಲೋಕಸಂಗೀತ ಮತ್ತು ಶಾಸ್ತ್ರೀಯ ಸಂಗೀತಗಳ ಬೆಸುಗೆ ಕುಮಾರ ಗಂಧರ್ವರ ವಿಶಿಷ್ಟ ಕೊಡುಗೆ.
ಅನಾರೋಗ್ಯ ಒಂದು ವರವಾಯಿತು
ಬದಲಾಯಿಸಿಅನಾರೋಗ್ಯ ಒಂದು ರೀತಿಯಲ್ಲಿ ವರವೇ ಆಯಿತು. “ಅನಾರೋಗ್ಯಕ್ಕಿಂತ ಮೊದಲು ನಾನು ಸಂಗೀತವನ್ನು ಗಿಳಿಪಾಠದಂತೆ ಪುನರುಕ್ತಿಸುತ್ತಿದ್ದೆ. ಅನಾರೋಗ್ಯ ನನ್ನ ಆಂತರ್ಯದ ಬಾಗಿಲನ್ನು ತೆರೆಯಿತು” ಎಂದರು ಕುಮಾರ ಗಂಧರ್ವ. ಹಾಗಾಗಿಯೆ, ಅವರ ಸಂಗೀತಕ್ಕೆ ದಾರ್ಶನಿಕ ಮತ್ತು ಧ್ಯಾನಾತ್ಮಕ ಗಂಧವಿದೆ.
ಸಂಗೀತದಲ್ಲಿ ಮರುಹುಟ್ಟು
ಬದಲಾಯಿಸಿ- ಕುಮಾರ ಗಂಧರ್ವರು ಇನ್ನೇನು ಕಚೇರಿಗಳನ್ನು ಪುನರಾರಂಭಿಸಬೇಕು ಎನ್ನುವಷ್ಟರಲ್ಲಿ ಕುಮಾರ ಗಂಧರ್ವರು ಮಡದಿ ಭಾನುಮತಿಯನ್ನು ಕಳೆದುಕೊಂಡರು. ಶಿಷ್ಯಳಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ವಸುಂಧರಾ ಶ್ರೀಖಂಡೆ ಕೈಹಿಡಿದರು. ಜನವರಿ ೧೨, ೧೯೫೪. ಅಲಹಾಬಾದಿನ ಪ್ಯಾಲೆಸ್ ಥಿಯೇಟರ್ ಸಜ್ಜಾಗಿ ನಿಂತಿತ್ತು. ಏಳು ವರ್ಷದ ಮೌನದ ನಂತರ ಕುಮಾರ ಗಂಧರ್ವರ ಪ್ರಥಮ ಕಚೇರಿ. ಅವರ ಸಂಗೀತಯಾತ್ರೆಯಲ್ಲಿ ಅಲಹಾಬಾದದ್ದೂ ಮಹತ್ವದ ಪಾತ್ರ.
- ಹನ್ನೊಂದು ವರ್ಷದವರಿದ್ದಾಗ ಅಖಿಲ ಭಾರತ ಸಂಗೀತ ಸಮ್ಮೇಳನದಲ್ಲಿ ಹಾಡಿ ಹೆಸರು ಮಾಡಿದ್ದೂ ಈ ಅಲಹಾಬಾದಿನಲ್ಲೇ! ಈಗ ಮಧುರ ನಿರೀಕ್ಷೆಯ ವಾತಾವರಣ. ಕುಮರ ಗಂಧರ್ವರ ಧ್ವನಿ ಬದಲಾಗಿತ್ತು. ಅವರ ಶೈಲಿ ಮಂದ ಮಾರುತದಂತಿತ್ತು. ಅವರ ಭಿನ್ನ ಗಾಯನಶೈಲಿ ಸ್ವೀಕೃತವಾಯಿತು. ಅಭಿನಂದಿತವಾಯಿತು. ಕುಮಾರ ಗಂಧರ್ವ ಸಂಗೀತಾತ್ಮಕವಾಗಿ ಮರುಹುಟ್ಟು ಪಡೆದರು. ಹಲವು ಘರಾಣೆಗಳ ಉತ್ತಮಾಂಶಗಳನ್ನು ಹೀರಿಕೊಂಡಿದ್ದರೂ ಕುಮಾರ ಗಂಧರ್ವರ ಸೃಜನಶೀಲ ಚೇತನ ಘರಾಣೆ ಗಡಿಗಳನ್ನು ಮೀರಿತ್ತು.
- ಪ್ರಚಲಿತ ರಾಗಗಳನ್ನು ಪ್ರಸ್ತುಪಡಿಸುವಲ್ಲಿಯೆ ತೃಪ್ತಿ ಕಾಣದ ಕುಮಾರ ಗಂಧರ್ವ ಲೋಕಸಂಗೀತದ ಆದಿಮಲೋಕಕ್ಕೆ ಹೊರಳಿದರು. ಅಲ್ಲಿಂದ ಪುಟಿದೆದ್ದವು ಕುಮಾರ ಗಂಧರ್ವರ ಧುನ್ ಉಗಮ ರಾಗಗಳು. ಅವರು ೧೨ ರಾಗಗಳನ್ನು ಸೃಷ್ಟಿಸಿದ್ದಾರೆ: ಲಗನ ಗಾಂಧಾರ, ಮಾಲವತಿ, ಭಾವಮತ ಭೈರವ, ಸಾಂಜರಿ, ಮಘವಾ, ಸಹೇಲಿ ತೋಡಿ, ಮಧು ಸೂರಜ, ರಾಹಿ, ಅಹಿರಮೋಹಿನಿ, ಸೋಹನಿ ಭಟಿಯಾರ, ನಿಂದಿಯಾರಿ ಮತ್ತು ಗಾಂಧಿ ಮಲ್ಹಾರ. ಅನೇಕ ಸೃಷ್ಟಿಕರ್ತರು ತಾವು ಸೃಷ್ಟಿಸಿದ ರಾಗಗಳನ್ನು ಜನಪ್ರಿಯಗೊಳಿಸುವಲ್ಲಿ, ನೆಲೆಗೊಳಿಸುವಲ್ಲಿ ವಿಫಲರಾಗಿದ್ದಿದೆ. *ಆದರೆ, ಕುಮಾರ ಗಂಧರ್ವ ತಮ್ಮ ಎಲ್ಲ ರಚನೆಗಳನ್ನು ಕಚೇರಿಗಳಲ್ಲಿ ಹಾಡಿ ಶ್ರೋತೃಗಳನ್ನು ತಲೆದೂಗಿಸುತ್ತಿದ್ದರು. ಅದೇ ಮಾತನ್ನು ಗಾಂಧಿ ಮಲ್ಹಾರ ರಾಗದ ಬಗೆಗೆ ಹೇಳುವಂತಿಲ್ಲ. ಕುಮಾರ ಗಂಧರ್ವರ ಜೋಡು ರಾಗಗಳು ವಿರಳ ನವಿರನ್ನು ಹೊಂದಿವೆ. ಇದೂ ಅಲ್ಲದೆ, ಕುಮಾರ ಗಂಧರ್ವರು ಅಸ್ತಿತ್ವದಲ್ಲಿದ್ದ ರಾಗಗಳನ್ನು ಮತ್ತು ತಮ್ಮವೇ ರಾಗಗಳನ್ನು ಋತುಮಾನಕ್ಕನುಗುಣವಾಗಿ ವರ್ಗೀಕರಿಸಿ ಹಾಡುತ್ತಿದ್ದರು: ಗೀತ ವರ್ಷಾ (ಮಳೆಗಾಲ), ಗೀತ ಹೇಮಂತ (ಚಳಿಗಾಲ), ಗೀತ ವಸಂತ (ವಸಂತ ಕಾಲ), “ತ್ರಿವೇಣಿ”ಯು ಸೂರದಾಸ, ಕಬೀರ ಮತ್ತು ಮೀರಾ ಭಜನಗಳ ಗುಚ್ಛ.
- ಈ ಸಂತಕವಿಗಳ ಕೃತಿಗಳು, ಅವರ ಕಾಲ ಮತ್ತು ಪರಿಸರ, ಘಟನೆಗಳ ಸ್ಥಳ ಮೊದಲಾದವುಗಳ ವ್ಯಾಪಕ ಅಧ್ಯಯನದ ಫಲ ಈ ಗುಚ್ಛ. ಆದುದರಿಂದ, ಕುಮಾರ ಗಂಧರ್ವ ಈ ಭಜನೆಗಳಿಗೆ ಅವುಗಳ ರಚನೆಕಾರರ ವ್ಯಕ್ತಿತ್ವಕ್ಕೆ ತಕ್ಕಂಥ ರಾಗಗಳನ್ನು ಆಯ್ಕೆ ಮಾಡಲು ಸಾಧ್ಯವಾಯಿತು. ಈ ಸಂತರ ಆತ್ಮವನ್ನೇ ಪ್ರವೇಶಿಸಿರುವರೊ ಎನ್ನವಂತೆ ಈ ಭಜನಗಳನ್ನು ಅಷ್ಟೊಂದು ಭಾವನಾತ್ಮಕವಾಗಿ ಹಾಡುತ್ತಿದ್ದರು. ಭಜನೆಗಳು ಶಾಸ್ತ್ರೀಯ ಸಂಗೀತ ಕಚೇರಿಯ ಒಪ್ಪಿತ ಅಂಗವಾಗಿರುವುದಕ್ಕೆ ಕುಮಾರ ಗಂಧರ್ವರೆ ಬಹುಮಟ್ಟಿನ ಕಾರಣ. ಭಾರಿ ಯಶಸ್ಸು ಪಡೆದ ಅವರ “ಸುನತಾ ಹೈ ಗುರು ಗ್ಯಾನಿ” ಭಜನ ಇದೆಲ್ಲದಕ್ಕೆ ನಾಂದಿ ಹಾಡಿತು.
ವಾಗ್ಗೇಯಕಾರ
ಬದಲಾಯಿಸಿ- ಕುಮಾರ ಗಂಧರ್ವರು ೧೯೬೫ರಲ್ಲಿ ಅನೂಪ ರಾಗ ವಿಲಾಸ ಎಂಬ ಪುಸ್ತಕ ಪ್ರಕಟಿಸಿದರು. ಅದು ಅವರ ಹತ್ತು ವರ್ಷಗಳ ಸಂಶೋಧನೆಯ ಫಲ. ಅದರಲ್ಲಿ, ಪರಂಪರಾಗತ ರಾಗಗಳಿಗೆ ೧೦೭, ತಮ್ಮವೇ ರಾಗಗಳಿಗೆ ೧೭ ಮತ್ತು ಮಿಶ್ರ ರಾಗಗಳಿಗೆ ೧೨, ಹೀಗೆ ಒಟ್ಟು ೧೩೬ ಚೀಜು ಗಳಿವೆ.
- ತನ್ಮೂಲಕ ಕುಮಾರ ಗಂಧರ್ವರು ೧೮ನೆಯ ಶತಮಾನದ ಸದಾರಂಗ, ಅದಾರಂಗ, ಮನರಂಗ, ಹರರಂಗ ಮತ್ತು ೨೦ನೆಯ ಶತಮಾನದ ಅಲ್ಲಾದಿಯಾ ಖಾನ, ಫೈಯಾಜ ಖಾನ (ಪ್ರೇಮಪ್ರಿಯಾ), ವಿಲಾಯತ ಹುಸೇನ ಖಾನ್ ಅಗ್ರಾವಾಲೆ (ಪ್ರಾಣಪ್ರಿಯಾ), ಜಗನ್ನಾಥ ಬುವಾ ಪುರೋಹಿತ (ಗುಣಿದಾಸ), ಪಂಡಿತ ಎಸ್.ಎನ್. ರತನ್‌ಜನಕರ (ಸುಜನ), ಮಾಸ್ಟರ ಕೃಷ್ಣ ಮೊದಲಾದ ವಾಗ್ಗೇಯಕಾರರ ಮಾಲಿಕೆಗೆ ಸೇರಿದರು.
ಧ್ಯಾನಾತ್ಮಕ ಅಭಿವ್ಯಕ್ತಿ
ಬದಲಾಯಿಸಿ- ಕುಮಾರ ಗಂಧರ್ವರಿಗೆ ರಾಗಗಳು ಸ್ವರಗಳ ಸಂಯೋಜನೆ ಮತ್ತು ಪರಿವರ್ತನೆ ಮಾತ್ರವಾಗಿರಲಿಲ್ಲ. ಸಜೀವವಾಗಿದ್ದವು. ಹಾಗಾಗಿ, ಅವರ ಗಾಯನವೆಂದರೆ ತೀವ್ರ ಧ್ಯಾನಾತ್ಮಕ ಅಭಿವ್ಯಕ್ತಿಯಾಗಿದ್ದವು.
- ಚಿರಪರಿಚಿತ ಪರಂಪರಾಗತ ರಾಗಗಳೂ ಅವರ ಹಾಡಿಕೆಯಲ್ಲಿ ಹೊಸ ರೂಪ ತಳೆಯುತ್ತಿದ್ದವು. ಅನಿರೀಕ್ಷಿತ ಕೋನಗಳಿಂದ ತೋರ್ಪಡುತ್ತಿದ್ದವು. ಸೂಕ್ಷ್ಮದರ್ಶಕದಲ್ಲಿ ನೋಡುತ್ತಿರುವ ಅನುಭವವಾಗುತ್ತಿತ್ತು.
ಗೌರವ, ಪ್ರಶಸ್ತಿಗಳು
ಬದಲಾಯಿಸಿಕುಮಾರ ಗಂಧರ್ವರಿಗೆ ಸಂದ ಕೆಲವು ಗೌರವಗಳು ಇಂತಿವೆ:
- ಉಜ್ಜನಿಯ ವಿಕ್ರಮ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್,
- ೧೯೭೩ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ,
- ೧೯೯೦ ಪದ್ಮವಿಭೂಷಣ, ಕಾಳಿದಾಸ ಸಮ್ಮಾನ ೧೯೮೪.
ಪರಿವಾರ
ಬದಲಾಯಿಸಿಕುಮಾರ ಗಂಧರ್ವರ ಮಡದಿ ವಸುಂಧರಾ, ಮಗಳು ಕಲಾಪಿನಿ ಕೋಂಕಾಳಿ ಹಾಗು ಮಗ ಮುಕುಲ ಶಿವಪುತ್ರ ಸಹ ಹಿಂದುಸ್ತಾನಿ ಸಂಗೀತಗಾರರು. ಸತ್ಯಶೀಲ ದೇಶಪಾಂಡೆ ಇವರ ಪ್ರಮುಖ ಶಿಷ್ಯರು.
ವಿದಾಯ
ಬದಲಾಯಿಸಿಬಾಹ್ಯ ಸಂಪರ್ಕಗಳು
ಬದಲಾಯಿಸಿ- ಕುಮಾರ ಗಂಧರ್ವ
- ಮ್ಯೂಸಿಕ್ ಇಂಡಿಯ ಆನ್ಲೈನ್ನಲ್ಲಿ ಕುಮಾರ ಗಂಧರ್ವ Archived 2005-12-30 ವೇಬ್ಯಾಕ್ ಮೆಷಿನ್ ನಲ್ಲಿ.
ಮಾಹಿತಿ ಕೃಪೆ
ಬದಲಾಯಿಸಿಸದಾನಂದ ಕನವಳ್ಳಿ ಅವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಗ್ರಂಥ ‘ಕಲಾಚೇತನದಲ್ಲಿ ಮೂಡಿಸಿರುವ ಲೇಖನ