ನುಡಿಗಟ್ಟು ಒಂದು ಭಾಷೆಯನ್ನಾಡುವ ಜನ ತಮ್ಮ ನಿತ್ಯೋಪಯೋಗದಲ್ಲಿ ಹಿಂದೆ ತಾವು ಹೇಳಿರದ, ಇನ್ನೊಬ್ಬ ಹೇಳಿದುದನ್ನು ಕೇಳಿರದ ಎಷ್ಟೋ ಹೊಸ ಮಾತುಗಳನ್ನು ಪ್ರಯೋಗಿಸಲು ಶಕ್ತರು. ಆದರೂ, ಆ ಮಾತುಗಳು ಕೇಳುವವನಿಗೆ ಅರ್ಥವಾಗುತ್ತದೆ. ಆ ಮಾತಿನ ಸಂದರ್ಭ ಮತ್ತು ಆ ಭಾಷೆಯ ಮೂಲಭೂತವಾದ ಕೆಲವು ಸಾಮಾನ್ಯ ನಿಯಮ, ಇದರ ಮೂಲಕ ಮಾತಾಡುವವನಿಗೂ ಕೇಳುವವನಿಗೂ ಇರುವ ಅನುಭವ ಸಾಮ್ಯದಿಂದ-ಹಿಂದೆ ಹೇಳದ, ಕೇಳದ ಮಾತುಗಳ ಅರ್ಥ ವೇದ್ಯವಾಗುತ್ತದೆ. ಇರುವ ಮೂಲಸಾಮಗ್ರಿಯನ್ನೇ ಉಪಯೋಗಿಸಿ-ಒಂದು ಹೊಸ ರೂಪವನ್ನು ಸೃಷ್ಟಿ ಮಾಡಲು ಅಥವಾ ಇರುವ ರೂಪಕ್ಕೆ ಹೊಸ ಅರ್ಥವನ್ನು ತಾತ್ಕಾಲಿಕವಾಗಿ ಹೊಂದಿಸಿ ಪ್ರಯೋಗಿಸಲು-ಒಂದು ಭಾಷೆಯನ್ನಾಡುವ ಜನ ಶಕ್ತರಾಗುತ್ತಾರೆ. ಅಂಥ ಪ್ರಯೋಗಗಳನ್ನು ನುಡಿಗಟ್ಟುಗಳೆಂದು (ಈಡಿಯಮ್ಸ್) ಗುರುತಿಸುವುದು ವಾಡಿಕೆ. ಕನ್ನಡದ ಪೂರ್ವ ಕವಿಗಳು ಇದನ್ನೇ ದೇಸೆ, ದೇಶಿ ಎಂದೆಲ್ಲ ಕರೆದಿರುವುದು.[೧]

ನುಡಿಗಟ್ಟುಗಳ ಬಳಕೆ ಬದಲಾಯಿಸಿ

ತದ್ಧಿತ ರೂಪಗಳೂ ನುಡಿಗಟ್ಟುಗಳನ್ನು ರಚನಾ ಸಾಮ್ಯದಿಂದ ಹೋಲುತ್ತವಾದರೂ ಎರಡಕ್ಕೂ ವ್ಯತ್ಯಾಸ ಉಂಟು. ಮೂಲ ಸಾಮಗ್ರಿಯಿಂದ ಹೊಸತೊಂದನ್ನು ಸೃಷ್ಟಿ ಮಾಡುವ ಗುಣ ಎರಡಕ್ಕೂ ಸಾಮಾನ್ಯವಾಗಿದೆ. ಆದರೂ ತದ್ಧಿತಗಳೂ ನುಡಿಗಟ್ಟುಗಳೂ ಬೇರೆ ಬೇರೆ. ತದ್ಧಿತ ಪ್ರತ್ಯಯಗಳಿಂದ ಹಲವು ಪದಗಳನ್ನು ರಚಿಸಬಹುದು. ಅವೆಲ್ಲ ನಿಶ್ಚಯವಾಗಿ ವ್ಯಾಕರಣದ ಪೂರ್ವನಿಯಮವನ್ನನುಸರಿಸಿರುವುವು. ಬಹುರೂಪ ರಚನಾ ಸಾಮರ್ಥ್ಯ ನುಡಿಗಟ್ಟುಗಳಿಗಿಲ್ಲ. ಅವುಗಳ ಸಂದರ್ಭ ವಿಶಿಷ್ಟವಾದದು. ನುಡಿಗಟ್ಟುಗಳಿಗೆ ಶೀಘ್ರ ಜನನ ಮತ್ತು ಮರಣ ಎರಡೂ ಇರುವುದರಿಂದ, ಬಹುಮಟ್ಟಿಗೆ ಅವು ಅಲ್ಪಾಯುಗಳಾದರೂ ಕೆಲವು ಆಕರ್ಷಕವಾಗಿ ಇರುವುದರಿಂದ ಬಹು ಕಾಲ ಬಳಕೆಯಲ್ಲಿ ನಿಲ್ಲಬಹುದು. ಯಾವುದಾದರೂ ವಿಶಿಷ್ಟ ಸಂದರ್ಭದಲ್ಲಿ ಅದು ಉಂಟಾಗಿ ಅದೇ ಸಂಧರ್ಭ ಬರುವಲ್ಲೆಲ್ಲ ಅದೇ ಪ್ರಯೋಗವಾಗುವುದೇ ಅದು ನುಡಿಗಟ್ಟು.ಉದಾಹರಣೆ: ಕಣ್ಣಿಗೆ ಬೀಳು, ಕಣ್ಣು ಬಂತು, ಎಕ್ಕಹುಟ್ಟಿಹೋಯಿತು, ಬಾಲಬಿಚ್ಚು, ಮೂಗು ಹಾಕು, ನಿದ್ದೆಕೊರೆ, ಹೊಟ್ಟುಕುಟ್ಟು, ಸತ್ತು ಸುಣ್ಣವಾಗು, ತೋಟದೂರ, ಮೀಸೆ ಮಣ್ಣಾಗು, ಬೇಳೆಬೇಯೊಲ್ಲ, ಕಿವಿಕಚ್ಚು, ಹರಟೆಕೊಚ್ಚು, ಬೆಟ್ಟುಮಡಿಸು, ಟೋಪಿ ಹಾಕು, ಹುಬ್ಬು ಹಾರಿಸು, ತಾರಮ್ಮಯ್ಯ ಆಡು- ಮೊದಲಾದವು ಹೊಸಗನ್ನಡದಲ್ಲಿ ಬೆಳಕಿಗೆ ಬಂದಿರುವ ನುಡಿಗಟ್ಟುಗಳು.[೨]

ನುಡಿಗಟ್ಟುಗಳ ರಚನೆ ಬದಲಾಯಿಸಿ

ಒಂದು ಭಾಷೆಯ ನುಡಿಗಟ್ಟಿನ ರಚನೆಗೂ, ಮತ್ತೊಂದು ಭಾಷೆಯ ನುಡಿಗಟ್ಟಿಗೂ ವ್ಯತ್ಯಾಸ ಸಹಜ. ಹೀಗಾಗಿ, ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಭಾಷಾಂತರ ಮಾಡುವ ಕಾರ್ಯ ಬಿರುಸಿನದಾಗುತ್ತದೆ. ಆ ಭಾಷೆಯ ದೇಸಿಯ ಅರಿವಿಲ್ಲದೆ ಪದ ಪದಗಳ ಕೋಶಾರ್ಥದ ಅನುವಾದ ಮಾಡಿದರೆ, ವಿಷಯದ ರೂಪವೇ ಕೆಟ್ಟು ಸ್ವಾರಸ್ಯವಳಿಯುವ ಸಂದರ್ಭವೇ ಹೆಚ್ಚು. ಅರ್ಧಚಂದ್ರ ನುಡಿಗಟ್ಟು [[ಹಳಗನ್ನಡ]ಲ್ಲಿ ಸಾಹಿತ್ಯ ರೂಪದಲ್ಲಿ ಬಂದಿಲ್ಲವಾದರೂ ಕೇಶಿರಾಜ ತನ್ನ ಶಬ್ದಮಣಿದರ್ಪಣದಲ್ಲಿ ಹೇಳಿರುವನೆಂಬುದರಿಂದ ಈ ನುಡಿಗಟ್ಟಿಗೆ ಏಳು ನೂರು ವರ್ಷಗಳ ಇತಿಹಾಸವಿದೆ ಎಂದು ಹೇಳಬಹುದು.[೩]

ನುಡಿಗಟ್ಟುವಿನ ಅರ್ಥ ಬದಲಾಯಿಸಿ

ಪದಕೋಶದ ಮೂಲಕ ಈ ವಾಕ್ಯದ ಪದ ಪದಗಳಿಗೆ ಅರ್ಥವನ್ನು ಹೊಂದಿಸಿ, ಅದರ ಒಟ್ಟಾರೆ ಅರ್ಥವನ್ನು ತಿಳಿಯಲು ಸಾಧ್ಯವಿಲ್ಲ. ಆದುದರಿಂದ ರೂಪಪರಿವರ್ತನಾ ಸೃಜನಾತ್ಮಕ ವ್ಯಾಕರಣ ಪದ್ಧತಿ ಇಂಥ ನುಡಿಗಟ್ಟುಗಳನ್ನು ವಿವರಿಸುವುದರಲ್ಲಿ ಯಶಸ್ವಿಯಾಗುವುದಿಲ್ಲ. ರಚನಾತ್ಮಕ ಪದ್ಧತಿಯೂ ಅಷ್ಟೇ. ಹೀಗೆ ನುಡಿಗಟ್ಟುಗಳು ವ್ಯಾಕರಣ ನಿಯಮದ ಕಟ್ಟಿಗೆ ಒಳಗಾಗದೆ, ಒಂದು ಭಾಷೆಯನ್ನಾಡುವ ಜನರ ಅನುಭವ, ಅಗತ್ಯ ಹಾಗೂ ಸಂದರ್ಭಕ್ಕೆ ಸರಿಯಾಗಿ, ರೂಪುಗೊಳ್ಳುತ್ತವೆ. ಆಕರ್ಷಕವಾಗಿ, ಸಶಕ್ತವಾಗಿದ್ದಲ್ಲಿ ಬಹುಕಾಲ ನೆಲೆ ನಿಲ್ಲುತ್ತವೆ. ಇಲ್ಲದಿದ್ದರೆ ಅಳಿಸಿ ಹೋಗುತ್ತ, ಮರು ಹುಟ್ಟು-ಪಡೆಯುತ್ತವೆ. ಭಾಷೆಯ ಜೀವಾಳ, ಭಾಷೆಯ ಜಾಯಮಾನಕ್ಕೆ ತಕ್ಕಂತೆ ಎಂದೆಲ್ಲ ಅನಿರ್ದಿಷ್ಟ ಮಾತುಗಳನ್ನು ನಾವು ಅನೇಕ ಸಲ ಹೇಳುತ್ತೇವೆ. ಆದರೆ ಅದು ಯಾವುದು ಎಂದರೆ ಇಂಥದೇ ಎಂದು ತೋರಿಸಲು ಯಾರಿಂದಲೂ ಸಂಪೂರ್ಣ ಸಾಧ್ಯವಾಗದು. [೪]

ಉಲ್ಲೇಖಗಳು ಬದಲಾಯಿಸಿ

  1. "ನುಡಿಗಟ್ಟು". Archived from the original on 27 ಜನವರಿ 2020. Retrieved 11 January 2020.
  2. "'ನೀರು' ತುಂಬಿದ ಗಾದೆ, ಒಗಟು ನುಡಿಗಟ್ಟು..." 5 April 2002. Retrieved 11 January 2020. {{cite news}}: Cite has empty unknown parameters: |1= and |2= (help)
  3. "ನುಡಿಗಟ್ಟು". Retrieved 11 January 2020.
  4. ದೀವಿಗೆ, ಮಹೇಶ ಎಸ್ ಕನ್ನಡ. "ಕನ್ನಡ ದೀವಿಗೆ: ೩೧) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಪ-ಫ)". ಕನ್ನಡ ದೀವಿಗೆ. Retrieved 11 January 2020. {{cite news}}: Cite has empty unknown parameter: |1= (help)