ನಂದಾದೇವಿ ಭಾರತದ ಎರಡನೆಯ ಅತಿ ಎತ್ತರದ ಪರ್ವತಶಿಖರ. ಆದರೆ ಸಂಪೂರ್ಣವಾಗಿ ಭಾರತದ ಒಳಗೇ ಇರುವ ಪರ್ವತಗಳಲ್ಲಿ ಅತ್ಯುನ್ನತ. ಇದು ಉತ್ತರಾಖಂಡ ರಾಜ್ಯದ ಗಢ್ವಾಲ್ ಹಿಮಾಲಯದಲ್ಲಿ ರಿಷಿಗಂಗಾ ಮತ್ತು ಗೋರಿಗಂಗಾ ಕಣಿವೆಗಳ ಮಧ್ಯೆ ಇದೆ. ನಂದಾದೇವಿ ಎರಡು ಶಿಖರಗಳುಳ್ಳ ಪರ್ವತ. ೭೮೬೧ ಮೀ. ( ೨೫,೬೪೩ ಅಡಿ) ಎತ್ತರವಾಗಿರುವ ಪಶ್ಚಿಮದ ಶಿಖರವು ಇವುಗಳ ಪೈಕಿ ಮೇಲ್ಮಟ್ಟದಲ್ಲಿದೆ. ೭೪೩೪ ಮೀ. (೨೪,೩೯೦ ಅಡಿ) ಎತ್ತರವುಳ್ಳ ಪೂರ್ವದ ಶಿಖರವನ್ನು ನಂದಾದೇವಿ ಈಸ್ಟ್ ಎಂದೂ ಕರೆಯುವರು. ಇವೆರಡನ್ನೂ ಒಟ್ಟಾಗಿ ನಂದಾ ದೇವತೆಯ ಅವಳಿ ಶಿಖರಗಳೆಂದು ಹೇಳುವರು. ವಿಶ್ವದ ೨೩ನೆಯ ಅತಿ ಎತ್ತರದ ಸ್ವತಂತ್ರ ಶಿಖರವಾಗಿರುವ ನಂದಾದೇವಿಯು ತನ್ನ ಅತಿ ಕಡಿದಾದ ಮೇಲ್ಮೈಗೆ ಹೆಸರಾಗಿದೆ. ಪರ್ವತದ ಉತ್ತರಕ್ಕೆ ಉತ್ತರಿ ನಂದಾದೇವಿ ಹಿಮನದಿಯಿದೆ. ಈ ಹಿಮನದಿ ಮುಂದೆ ಉತ್ತರಿ ರಿಷಿ ಹಿಮನದಿಯನ್ನು ಕೂಡಿಕೊಳ್ಳುವುದು. ಪರ್ವತದ ದಕ್ಷಿಣಕ್ಕೆ ದಖ್ಖನಿ ನಂದಾದೇವಿ ಹಿಮನದಿಯಿದೆ. ಈ ಹಿಮನದಿ ಮುಂದೆ ದಖ್ಖನಿ ರಿಷಿ ಹಿಮನದಿಯನ್ನು ಕೂಡಿಕೊಳ್ಳುವುದು. ಈ ಹಿಮನದಿಗಳೆರಡೂ ಒಟ್ಟಾಗಿ ರಿಷಿಗಂಗಾ ನದಿಯ ಉಗಮಸ್ಥಾನವೆನಿಸಿಕೊಳ್ಳುವುವು. ಪರ್ವತದ ಪೂರ್ವಕ್ಕೆ ಪಾಚು ಹಿಮನದಿ ಮತ್ತು ಆಗ್ನೇಯಕ್ಕೆ ನಂದಾಘುಂಟಿ ಹಾಗೂ ಲವನ್ ಹಿಮನದಿಗಳಿವೆ. ನಂದಾದೇವಿ ಪರ್ವತದ ದಕ್ಷಿಣಕ್ಕೆ ಪಿಂಡಾರ್ ನದಿಯ ಉಗಮಸ್ಥಾನವಾದ ಪಿಂಡಾರಿ ಹಿಮನದಿಯಿದೆ. ಈ ಪರಿಸರವೆಲ್ಲಾ ಒಟ್ಟಾಗಿ ನಂದಾದೇವಿ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯೊಳಗಿದೆ. ೧೯೩೬ರಲ್ಲಿ ಬ್ರಿಟಿಷ್-ಅಮೆರಿಕನ್ ಪರ್ವತಾರೋಹಿಗಳ ತಂಡವೊಂದು ಮೊದಲಬಾರಿಗೆ ನಂದಾದೇವಿ ಶಿಖರವನ್ನು ತಲುಪುವಲ್ಲಿ ಯಶಸ್ವಿಯಾಯಿತು.

ನಂದಾದೇವಿ ಶಿಖರದ ನೋಟ

ಬಾಹ್ಯ ಸಂಪರ್ಕಕೊಂಡಿಗಳು

ಬದಲಾಯಿಸಿ