ಡಿ.ಲಿಂಗಯ್ಯ
ಡಿ.ಲಿಂಗಯ್ಯ | |
---|---|
ಜನನ | ೧೬ ಡಿಸೆಂಬರ್, ೧೯೩೯ ಶ್ರೀರಂಗಪಟ್ಟಣ ತಾಲೂಕಿನ ಪೀ ಹಳ್ಳಿ |
ಮರಣ | ನಿಧನ: ಸೆಪ್ಟಂಬರ್ ೧೩, 2012(72) |
ಇತರೆ ಹೆಸರು | ಪ್ರೊ.ಡಿ.ಲಿಂಗಯ್ಯ |
ಗಮನಾರ್ಹ ಕೆಲಸಗಳು | ಸಾಹಿತಿ, ಜಾನಪದ ಸಂಗ್ರಹ, ಜಾನಪದ ಸಂಶೋಧನೆ |
ಜನನ ಮತ್ತು ಊರು
ಬದಲಾಯಿಸಿ- ಪ್ರೊ.ಡಿ.ಲಿಂಗಯ್ಯನವರು (ಜನನ- -೧೬-೧೨-೧೯೩೯.) ಶ್ರೀರಂಗಪಟ್ಟಣ ತಾಲೂಕಿನ ಪೀ ಹಳ್ಳಿಯಲ್ಲಿ ರೈತ ಕುಟುಂಬದಲ್ಲಿ ಜನಿಸಿದರು. ತಂದೆ ದೇವೆಗೌಡ ಚಿಕ್ಕ ರೈತರು. ತಾಯಿ ಸಿದ್ದಮ್ಮ. ಅವರದು ಬಡ ಕೃಷಿಕುಟುಂಬ. ಪ್ರೊ.ಡಿ.ಲಿಂಗಯ್ಯನವರು ಪ್ರಸಿದ್ಧ ಜಾನಪದ ತಜ್ಞರು, ಪ್ರಾಧ್ಯಾಪಕರು, ಕವಿಗಳು, ಸಾಹಿತಿಗಳು.[೧][೨]
ಶಿಕ್ಷಣ
ಬದಲಾಯಿಸಿ- ಆರಂಭಿಕ ಶಿಕ್ಷಣ ಮಂಡ್ಯ ಜಿಲ್ಲೆಯ ಕೊತ್ತತ್ತಿ, ಮೈ ಷುಗರ್ ಹೈಸ್ಕೂಲ್‍ನಲ್ಲಿ ಆಯಿತು. ೧೯೬೮ ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ ಎ. ಪದವಿ ಪಡೆದರು. ಅದೇ ಸಮಯದಲ್ಲಿ ಕವಿತಾರೊಂದಿಗೆ ಮದುವೆ. ಅವರದು ಎರಡು ಹೆಣ್ಣು ಮತ್ತು ಒಬ್ಬ ಗಂಡು ಮಗನನ್ನು ಹೊಂದಿದ ಚಿಕ್ಕ ಸಂಸಾರ.
ವೃತ್ತಿ ಮತ್ತು ಸೇವೆ
ಬದಲಾಯಿಸಿ- ಅವರ ವೃತ್ತಿ ಪ್ರಾಂಭವಾದುದು ವಿಶ್ವೇಶ್ವರಯ್ಯ ಪದವಿ ಕಾಲೇಜಿನಲ್ಲಿ. ಮೊದಲು ಉಪನ್ಯಾಸಕರಾಗಿ ಹಂತ ಹಂತವಾಗಿ ಮೇಲೇರಿ ಪ್ರಾಧ್ಯಾಪಕ ನಂತರ ಪ್ರಾಚಾರ್ಯರಾಗಿ ಸೇವೆ. ೧೯೯೭ರಲ್ಲಿ ನಿವೃತ್ತಿಯಾದುದೂ ಅಲ್ಲಿಯೆ. ಸಾವಿರಾರು ವಿದ್ಯಾರ್ಥಿಗಳಿಗೆ ನೆಚ್ಚಿನ ಕನ್ನಡ ಮೇಷ್ಟ್ರು. ನೂರಾರು ಸಹೋದ್ಯೋಗಿಗಳಿಗೆ ಆತ್ಮೀಯ ಒಡನಾಡಿ.
- ರಾಷ್ಟ್ರೀಯ ಸೇವಾ ಯೋಜನಾಕಾರಿಯಾಗಿ, ಬೆಂಗಳೂರು ವಿಶ್ವವಿದ್ಯಾಲಯ ಅಕೆಡಮಿಕ್ ಕೌನ್ಸಿಲ್, ಸ್ನಾತಕ ಅಧ್ಯಯನ ಮಂಡಲಿಯ ಸದಸ್ಯರಾಗಿ ಸಲ್ಲಿಸಿದ ಸೇವೆ. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ‍್ಯದರ್ಶಿಯಾಗಿ, ಕರ್ನಾಟಕ ಲೇಖಕರ ಸಂಘದ ಅಧ್ಯಕ್ಷ ಪದವಿ, ಬಿ.ಎಂ.ಶ್ರೀ ಪ್ರತಿಷ್ಠಾನದ ವ್ಯವಸ್ಥಾಪಕ ಕಾರ‍್ಯದರ್ಶಿ, ಕೋಶಾಕಾರಿಯಾಗಿ, ಪರಿಷತ್ತಿನ ಗ್ರಂಥ ಪ್ರಕಟನಾ ಸಲಹಾ ಸಮಿತಿ ಸದಸ್ಯ, ಹಲವಾರು ಸಂಘ ಸಂಸ್ಥೆಗಳ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ ಸೇವೆಸಲ್ಲಿಸಿದರು.
ಸಾಹಿತಿ ಸಂಶೋಧಕರಾಗಿ ಸಾಹಿತ್ಯ ಸೇವೆ
ಬದಲಾಯಿಸಿ- ಅನೇಕ ಸಂಘ ಸಂಸ್ಥೆಗಳೊಡನೆ ಒಡನಾಟ. ಲಕ್ಷಾಂತರ ಓದುಗರ ಮನೆಯಲ್ಲಿ ಮನದಲ್ಲಿ ನೆಚ್ಚಿನ ಸಾಹಿತಿ. ವೃತ್ತಿ ಮತ್ತು ಪ್ರವೃತ್ತಿಗಳು ಪರಸ್ಪರ ಪೂರಕವಾದ ಸೌಭಾಗ್ಯ ಅವರದು. ಹಳ್ಳಿಗಾಡಿನಿಂದ ಬಂದ ಅವರಿಗೆ ಜಾನಪದ ಸಂಸ್ಕೃತಿ ರಕ್ತಗತ. ಹಳ್ಳಿಯ ಜನ ಹೃದಯಕ್ಕೆ ಹತ್ತಿರ. ಅಂತೆಯೆ ತಮ್ಮ ಸಮಯವನ್ನು ಗ್ರಾಮೀಣ ಸೊಗಡಿನ ಅನಾವರಣಕ್ಕೆ ಮೀಸಲಿರಿಸಿದರು. ಅವಿರತ ಕ್ಷೇತ್ರ ಕಾರ್ಯ ಮಾಡಿ, ಜನಪದ ಗೀತೆಗಳು, ಜನಪದ ಕಾವ್ಯಗಳು, ಪ್ರಾಣಿ ಕಥೆಗಳು ಹೀಗೆ ಸುಮಾರು ೨೧ ಪುಸ್ತಕಗಳನ್ನು ಪ್ರಕಟಿಸಿರುವ ಹಿರಿಮೆ ಇವರದು. ಲಿಂಗಯ್ಯನವರು ಕೃಷಿ ಮಾಡದ ಸಾಹಿತ್ಯ ಕ್ಷೇತ್ರವನ್ನು ಕನ್ನಡದಲ್ಲಿ ಹುಡುಕುವುದು ಕಷ್ಟ, ಎನ್ನುವುದು ಕ್ಲೀಷೆಯಲ್ಲ. ನಾಟಕ, ಕಥೆ, ಕವನ, ಜೀವನ ಚರಿತ್ರೆ,ವ್ಯಕ್ತಿಚಿತ್ರಗಳು, ಪ್ರಬಂಧ ಮತ್ತು ಗ್ರಂಥ ಸಂಪಾದನಾ ಕ್ಷೇತ್ರದಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿರುವರು.
ಗ್ರಂಥರಚನೆ
ಬದಲಾಯಿಸಿ- ಕಥಾಸಂಕಲನಗಳು-ಆಟಿಕೆ, ಕನಸಿನ ರಾಣಿ, ರಣಕಾಟಿಗಳು.
- ಕವನನ ಸಂಗ್ರಹ-ಅಂತರಂಗದ ಹಾಡು, ವಿಕ್ಷಕ, ಕಲಬೆರಕೆ, ಭಗ್ನ ಪ್ರತಿಮೆ, ಮಹಾತ್ಮಗಾಂಜಿ, ವಚನ ರಚನ, ಚುಟುಕಾಂಜಲಿ, ವಚನ ದವನ, ಚೇತನ ಚಿಲುಮೆ, ಗಂಧವತಿ.
- ನಾಟಕ-ದಡ್ಡಡ ಶಿಖಾಮಣಿ, ಬಡತನದ ಬಾಳು, ಬ್ರಹ್ಮಚಾರಿ, ಬ್ರಹ್ಮ ಬರಹ. ವಿಮರ್ಶೆ-ಕಾವ್ಯಾಸ್ವಾದನ, ಕಾವ್ಯಚಿಂತನ, ಕಾವ್ಯಾನುಭವ, ವ್ಯಕ್ತಿಚಿತ್ರ-ಕನ್ನಡ ರಥಿಕರು, ದೊಡ್ಡವರು. ಪ್ರಬಂಧ-ಶಿಲಾಪದ್ಮ, ಶಿಕ್ಷಣದಲ್ಲಿ ಕನ್ನಡ, ಚಿಂತನ ಸಿಂಧು, ಕಣ್ಣಳತೆ. ಜಾನಪದ-ಕೊಂತಿ ಪೂಜೆ, ಮಣ್ಣಿನ ಮಿಡಿತ, ಪಡಿನೆರಳು, ಬಯಲು ಸೀಮೆಯ ಜನಪದ ಗೀತೆಗಳು ಮೊದಲ್ಗೊಂಡು ೬೫ಕ್ಕೂ ಹೆಚ್ಚು ಕೃತಿ ಪ್ರಕಟಿತವಾಗಿವೆ.
- ಅವರ ಕಾಣಿಕೆ ಬರಿ ಸಾಹಿತ್ಯಕ್ಕೆ ಸೀಮಿತವಾಗದೆ ಜನಪರ ಚಳುವಳಿಗಳಲ್ಲೂ ವ್ಯಕ್ತವಾಗಿದೆ. ಕನ್ನಡಪರ ಚಳುವಳಿಯಲ್ಲಿ ಅವರದು ಸದಾ ಎದ್ದು ಕಾಣುತಿದ್ದರು. ಅವರು ಬರಿ ಪತ್ರಿಕಾ ಹೇಳಿಕೆ ನೀಡಿ ಪ್ರತಿಭಟಿಸುವ ಕಾಗದದ ಹುಲಿಯಲ್ಲ. ೧೯೬೭ ರಿಂದ ೨೦೦೭ ರ ವರೆಗೆನ ಹಲವಾರು ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗಿಗಳು.೧೯೮೨ ರಲ್ಲಿ ಗೋಕಾಕ ಚಳುವಳಿಯಲ್ಲಿ ಸರಕಾರದ ವಿಳಂಬ ನೀತಿ ಪ್ರತಿಭಟಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌ. ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆನೀಡಿದ್ದರು. ಜನಪರ ನಿಲುವಿನಿಂದಾಗಿ ಅವರು ಜನಪ್ರಿಯರೂ ಆಗಿದ್ದರು ಹಾಗಾಗಿ ಅನೇಕ ಸಾಹಿತ್ಯ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಕೊನೆಯುಸಿರು ಇರುವವರೆಗೆ ಶ್ರಮಿಸಿದರು.
ಪ್ರಶಸ್ತಿಗಳು
ಬದಲಾಯಿಸಿ- ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ,
- ಕರ್ನಾಟಕ ರಾಜ್ಯ ಪ್ರಶಸ್ತಿ,
- ಚುಟುಕ ಭೂಷಣ ಪ್ರಶಸ್ತಿ,
- ಡಾ. ಸಿಂಪಿಲಿಂಗಣ್ಣ ಪ್ರಶಸ್ತಿ,
- ಡಾ. ಜೀಶಂಪ ಪ್ರಶಸ್ತಿ,
- ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ,
- ಜಾನಪದ ರತ್ನ ಪ್ರಶಸ್ತಿ,
- ಚುಂಚಶ್ರೀ ಪ್ರಶಸ್ತಿ. [೩]
ಜಾನಪದ ಕೃತಿಗಳು
ಬದಲಾಯಿಸಿ- ಕೊಂತಿ ಪೊಜೆ
- ಮಣ್ಣಿನ ಮಿಡಿತ
- ಪಡಿನೆರಳು
- ಬಯಲು ಸೀಮೆಯ ಜನಪದ ಗೀತೆಗಳು.
ಸಂಪಾದನೆ
ಬದಲಾಯಿಸಿಮರಣ
ಬದಲಾಯಿಸಿ- ಕನ್ನಡದ ಹಿರಿಯ ಸಂಶೋಧಕರನ್ನು ಸನ್ಮಾನಿಸುತ್ತಿರುವ ವೇದಿಕೆಯಲ್ಲೇ ಕುಸಿದ ಬಿದ್ದು ಹಿರಿಯ ಜಾನಪದ ತಜ್ಞರಾದ ಪ್ರೊ.ಡಿ.ಲಿಂಗಯ್ಯನವರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಬುಧವಾರ ಸೆಪ್ಟಂಬರ್ 13, 2012 ರಂದು ಮೃತಪಟ್ಟರು.
- ಬೆಂಗಳೂರು ನಗರದ ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನ ಟ್ರಸ್ಟ್‌ನ ಹಿರಿಯ ಸದಸ್ಯರಾದ ಪ್ರೊ.ಜಿ. ವೆಂಕಟಸುಬ್ಬಯ್ಯ, ಪ್ರೊ. ಎಲ್. ಎಸ್. ಶೇಷಗಿರಿ ರಾವ್, ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ , ಡಾ.ಚಿದಾನಂದ ಮೂರ್ತಿ ಅವರಿಗೆ ಸನ್ಮಾನ ಮತ್ತು ಕತೆಗಾರ ಕೆ. ಸತ್ಯನಾರಾಯಣ ಅವರಿಗೆ ಡಾ.ಎಂ.ವಿ.ಸೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿತ್ತು.
- ಹಿರಿಯ ಸಂಶೋಧಕರಿಗೂ ಸನ್ಮಾನ ಮಾಡಿ ಎಂಬ ಮಾಧ್ಯಮದವರ ಬೇಡಿಕೆಯನ್ನು ಒಪ್ಪಿ, ಮೂವರಿಗೆ ಸನ್ಮಾನ ಮಾಡಲಾಯಿತು. ಚಿದಾನಂದ ಮೂರ್ತಿ ಅವರಿಗೆ ಸನ್ಮಾನ ನಡೆಯುತ್ತಿದ್ದಾಗಲೇ ಡಿ.ಲಿಂಗಯ್ಯ ಹೃದಯಾಘಾತದಿಂದ ವೇದಿಕೆಯಲ್ಲಿ ಕುಸಿದರು. ಸಮೀಪದಲ್ಲೇ ಇದ್ದ ಭಾರತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷಿಸಿದ ವೈದ್ಯರು ಅವರು ನಿಧನರಾಗಿದ್ದಾರೆ ಎಂದು ತಿಳಿಸಿದರು.[೪]
ಕೊನೆಯ ಮಾತು
ಬದಲಾಯಿಸಿ- ನಾವೇ ಭಾಗ್ಯವಂತರು. (ಉಲ್ಲೇಖ-೬)
- ಮಂಡ್ಯ ಜಿಲ್ಲೆಯವರಾದ ಲಿಂಗಯ್ಯನವರು ಒಂದೂವರೆ ವರ್ಷದಿಂದ ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದರು. ಅವರು ಸನ್ಮಾನ ಮಾಡುವಾಗ,'ಮಾಧ್ಯಮದವರ ಕೋರಿಕೆ ಮೇರೆಗೆ ನಿಗದಿತ ಸಮಯಕ್ಕೆ ಮುನ್ನವೇ ಸನ್ಮಾನ ಮಾಡುತ್ತಿದ್ದೇವೆ. 80 ರಿಂದ 100 ವರ್ಷ ವಯಸ್ಸಿನ ನಾಲ್ವರು ಹಿರಿಯ ಸದಸ್ಯರನ್ನು ಗೌರವಿಸುತ್ತಿದ್ದೇವೆ. ಇಂತಹ ಸಂಭ್ರಮದಲ್ಲಿ ಪಾಲ್ಗೊಂಡ ನಾವೇ ಭಾಗ್ಯವಂತರು. ಇದು ಬಿಎಂಶ್ರೀ ಪ್ರತಿಷ್ಠಾನದ ಇತಿಹಾಸದಲ್ಲೇ ಮರೆಯಲಾಗದ ದಿನ' ಎಂಬುದು ಲಿಂಗಯ್ಯ ಅವರ ಕೊನೆಯ ಮಾತಾಯಿತು.[೫]
ಉಲ್ಲೇಖ
ಬದಲಾಯಿಸಿ- ↑ ಕನ್ನಡದ ಪ್ರಸಿದ್ಧ ಕವಿಗಳು ಮತ್ತು ಕಲಾವಿದರ ಜನ್ಮ ದಿನಾಂಕದ ಮಾಹಿತಿ
- ↑ ಡಿಜಿಟಲ್ ಲೈಬ್ರರಿ - ಕಣಜ
- ↑ "ಕಣಜ". Archived from the original on 2020-11-30. Retrieved 2020-03-02.
- ↑ Folklore scholar Lingaiah collapses on stage, dies SEP 13 2012,
- ↑ ವೇದಿಕೆಯಲ್ಲೇ ಕುಸಿದು ಮೃತಪಟ್ಟ ಪ್ರೊ.ಲಿಂಗಯ್ಯ ವಿಕ ಸುದ್ದಿಲೋಕ |d:Sep 13, 2012