ಠಕ್ಕರು

ಭಾರತೀಯ ದರೋಡೆಕೋರರು ಮತ್ತು ಕೊಲೆಗಾರರ ​​ಗುಂಪುಗಳು (14ನೇ-19ನೇ ಶತಮಾನಗಳು)

ಠಕ್ಕರು ಅಸಹಾಯಕರಾದ ಪ್ರಯಾಣಿಕರನ್ನು ಕೊಂದು ಅವರಲ್ಲಿದ್ದ ಹಣವೇ ಮೊದಲಾದವನ್ನು ದೋಚುತ್ತಿದ್ದ ಪಾತಕಿಗಳು. ಇವರು ಸುಸಂಘಟಿತರಾಗಿ ಭಾರತದ ವಿವಿಧ ಭಾಗಗಳಲ್ಲಿ ಹರಡಿಕೊಂಡಿದ್ದರು. ಅವಕಾಶ ದೊರೆತಾಗ ದಾರಿಗರೊಂದಿಗೆ ಬೆರೆತು ಅವರನ್ನು ನಂಬಿಸಿ ಕೃತ್ರಿಮದಿಂದ ಹತ್ಯೆ ಮಾಡುತ್ತಿದ್ದರು.

ಧರ್ಮ ಮತ್ತು ನಂಬಿಕೆಗಳು

ಬದಲಾಯಿಸಿ

ಆವರಲ್ಲಿ ಮತಭೇದಗಳಿದ್ದಂತಿಲ್ಲ. ಹಿಂದೂಗಳೂ ಮುಸಲ್ಮಾನರೂ ಈ ವೃತ್ತಿಯಲ್ಲಿ ತೊಡಗಿದ್ದರು. ಅವರು ಹತ್ಯೆಗೆ ಹೊರಡುವ ಮುನ್ನ ದೇವತಾರಾಧನೆ ನಡೆಸುತ್ತಿದ್ದರು. ತಮ್ಮ ಆರಾಧ್ಯ ದೇವತೆಯನ್ನು ಕಾಳಿ, ದುರ್ಗಾ, ದೇವಿ, ಭವಾನಿ ಎಂಬುದಾಗಿ ಕರೆಯುತ್ತಿದ್ದರು. ತೊಡಗಿದ ಕಾರ್ಯದಲ್ಲಿ ಜಯ ಗಳಿಸಲು ದೇವಿಯ ಅನುಗ್ರಹ ಬೇಕೆಂದು ಅವರು ನಂಬಿದ್ದರು. ತಮ್ಮ ಆಯುಧಗಳಾದ ಹಗ್ಗ, ಬಟ್ಟೆಯ ತುಂಡು, ಶವವನ್ನು ಹೂಳಲು ಉಪಯೋಗಿಸುತ್ತಿದ್ದ ಪಿಕಾಸಿ ಮೊದಲಾದವನ್ನೂ ಪೂಜೆಯಲ್ಲಿ ಇಡುತ್ತಿದ್ದರು. ಸಕ್ಕರೆಯ ನೈವೇದ್ಯ ಅವರ ದೇವತೆಗೆ ಪರಮ ಪ್ರಿಯವೆಂದು ಅವರ ನಂಬಿಕೆ.

ಹತ್ಯಾಕ್ರಮ

ಬದಲಾಯಿಸಿ

ಇವರ ವೃತ್ತಿ ಮೂಲತಃ ವ್ಯವಸಾಯ. ವಾಸಸ್ಥಳಗಳನ್ನು ಬಿಟ್ಟು ನೂರಾರು ಮೈಲಿ ಪ್ರಯಾಣಮಾಡಿ ತಿಂಗಳುಗಟ್ಟಲೆ ಸಂಸಾರಗಳಿಂದ ದೂರವಿದ್ದು ಅಲೆದಾಡುತ್ತಿದ್ದರು. ಠಕ್ಕರ ಕಾರ್ಯ ಚಟುವಟಿಕೆಗಳು ಅವರು ತಂಗಿರುತ್ತಿದ್ದ ಸ್ಥಳದಿಂದ ಕನಿಷ್ಠಪಕ್ಷ ಮೂವತ್ತು ನಲವತ್ತು ಮೈಲಿಗಳಾಚೆಗೆ ಸೀಮಿತವಾಗಿರುತ್ತಿತ್ತು. ಜನರಿಗೆ ಸಂಶಯ ಬಾರದಂತೆ ತಮ್ಮ ಎಂಟು-ಹತ್ತುವರ್ಷದ ಮಕ್ಕಳನ್ನು ತಮ್ಮೊಂದಿಗೆ ಕರೆದೊಯ್ಯುತ್ತಿದ್ದರು. ಗುಂಪುಗಳಾಗಿ ಹರಡಿಕೊಂಡಿದ್ದರೂ ಪ್ರತಿಯೊಬ್ಬನ ಸ್ಥಾನಮಾನವನ್ನೂ ನಿರ್ಧರಿಸಲಾಗಿತ್ತು. ನಾಯಕನಾದವನು ಕುದುರೆಯ ಮೇಲೇರಿ ಎಲ್ಲರಿಗೂ ಆಗಿಂದಾಗ್ಗೆ ಸೂಕ್ತ ಸೂಚನೆಗಳನ್ನು ಕೊಡುತ್ತಿದ್ದ. ಕೆಲವು ಪ್ರದೇಶಗಳನ್ನು ಇವರ ದುಷ್ಕೃತ್ಯಗಳಿಗೆ ಪಾಳೆಯಗಾರರೂ ಜಮೀನ್ದಾರರೂ ವರ್ತಕರೂ ಬೆಂಬಲ ನೀಡುತ್ತಿದ್ದರು. ಠಕ್ಕರು ಗಳಿಸಿದ ಆಸ್ತಿಯಲ್ಲಿ ಪಾಳೆಯಗಾರರಿಗೂ ಸಂಸ್ಥಾನಿಕರಿಗೂ ಸ್ವಲ್ಪ ಭಾಗವನ್ನು ಕೊಟ್ಟು ದೇವತಾರಾಧನೆಗೂ ಸ್ವಲ್ಪವನ್ನು ಮೀಸಲಿಟ್ಟು, ಮಿಕ್ಕದ್ದರಲ್ಲಿ ಎರಡು ಪಾಲುಗಳನ್ನು ಹಂತಕನಿಗೆ ಕೊಟ್ಟು ಉಳಿದದ್ದನ್ನು ಗುಂಪಿನಲ್ಲಿದ್ದವರೆಲ್ಲ ಹಂಚಿಕೊಳ್ಳುತ್ತಿದ್ದರು.

ಇವರು ಅನುಸರಿಸುತ್ತಿದ್ದ ಹತ್ಯಾಕ್ರಮ ಗಮನಾರ್ಹವಾದ್ದು. ತಾವು ಬಲಿಗೊಳ್ಳಲಿದ್ದ ವ್ಯಕ್ತಿಯನ್ನು ಪೇಟೆಯಲ್ಲೋ ಪಟ್ಟಣದಲ್ಲೋ ಕಂಡುಕೊಳ್ಳುತ್ತಿದ್ದರು. ಅವನ ಪ್ರಯಾಣದ ವಿವರಗಳನ್ನು ತಿಳಿದುಕೊಂಡು ಒಬ್ಬ ಠಕ್ಕ ಅವನ್ನು ಹಿಂಬಾಲಿಸುತ್ತಿದ್ದ. ಪ್ರಯಾಣಿಕ ನಿರ್ದಿಷ್ಟ ಸ್ಥಳಕ್ಕೆ ಬಂದಾಗ ಮಿಕ್ಕ ಠಕ್ಕರೂ ಸೇರಿ ಅವನ ಮೇಲೆ ಹಟಾತ್ತನೆ ಎರಗುತ್ತಿದ್ದರು. ಮೊದಲು ಒಬ್ಬ ಒಂದು ಹಗ್ಗವನ್ನೋ ಉದ್ದನೆಯ ಬಟ್ಟೆಯ ತುಂಡನ್ನೋ ಅವನ ಕೊರಳಿಗೆ ಉರುಲು ಸುತ್ತಿಕೊಳ್ಳುವಂತೆ ಎಸೆದು ಅದನ್ನು ಬಿಗಿಯಾಗಿ ಎಳೆದು ಕೆಳಕ್ಕೆ ಉರುಳಿಸುತ್ತಿದ್ದ. ಅನಂತರ ಅವನ ಮರ್ಮಸ್ಥಾನಗಳಿಗೆ ಪೆಟ್ಟು ಕೊಟ್ಟು ಅವನನ್ನು ಸಾಯಿಸುತ್ತಿದ್ದರು. ವ್ಯಕ್ತಿಯಲ್ಲಿದ್ದ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚಿಕೊಳ್ಳುತ್ತಿದ್ದರು. ಶವವನ್ನು ದಟ್ಟವಾದ ಕಾಡಿನೊಳಗೆ ಅಥವಾ ಕಣಿವೆಯೊಳಗೆ ಎಳೆದು ಹಾಕುತ್ತಿದ್ದರು.

ಬ್ರಿಟಿಷರಿಂದ ಠಕ್ಕರ ಹಾವಳಿಯ ನಿರ್ಮೂಲನ

ಬದಲಾಯಿಸಿ

ಈ ವೃತ್ತಿ ಹಿಂದಿನಿಂದಲೂ ವಂಶಪಾರಂಪರ್ಯವಾಗಿ ನಡೆದುಬಂದಿತ್ತು. ಆದರೆ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯವರು ಶ್ರೀರಂಗಪಟ್ಟಣವನ್ನು 1799ರಲ್ಲಿ ವಶಪಡಿಸಿಕೊಂಡ ಅನಂತರ ಠಕ್ಕರ ಕಾರ್ಯಚಟುವಟಿಕೆಗಳು ಮೊದಲ ಬಾರಿಗೆ ಅವರ ಗಮನಕ್ಕೆ ಬಂದುವು. ಮೈಸೂರು ಸಂಸ್ಥಾನದಲ್ಲಿ ಅನೇಕ ಠಕ್ಕರನ್ನು ಸೆರೆಹಿಡಿಯಲಾಯಿತು. ಅನಂತರ ಮದರಾಸ್ ಪ್ರಾಂತ್ಯದ (ತಮಿಳುನಾಡು) ಆರ್ಕಾಟ್ ಜಿಲ್ಲೆಯಲ್ಲಿ ಅನೇಕರು ಸೆರೆಯಾದರು. ಸೆರೆಸಿಕ್ಕಿದವರಿಂದ ಠಕ್ಕರ ಸಂಸ್ಥೆಯ ಬಗ್ಗೆ ಉಪಯುಕ್ತ ವಿವರಗಳು ದೊರೆತುವು.

ಕಂಪನಿಯ ಸರ್ಕಾರ ಇವರನ್ನು ನಾಶಪಡಿಸಲು ಕೆಲವು ಕ್ರಮಗಳನ್ನು ಅನುಸರಿಸಿತು. ಲಾರ್ಡ್ ಹೇಸ್ಟಿಂಗ್ಸ್ ಹಾಗೂ ಲಾರ್ಡ್ ಆಮ್‍ಹಸ್ರ್ಟರು ಇವರನ್ನು ಅಡಗಿಸಲು ಯತ್ನಿಸಿದರು. ಆದರೆ ಆಗಿನ ಕಾನೂನಿನಲ್ಲಿ ನೇರವಾದ ಸಾಕ್ಷ್ಯವಿಲ್ಲದಿದ್ದರೆ ಶಿಕ್ಷೆ ವಿಧಿಸಲು ಸಾಧ್ಯವಿರಲಿಲ್ಲ. ನ್ಯಾಯಾಲಯಗಳಲ್ಲಿ ಹೂಡಿದ ಆರೋಪಗಳನ್ನು ಸರಿಯಾದ ಪುರಾವೆಗಳಿಲ್ಲವೆಂಬ ಕಾರಣದಿಂದ ತಳ್ಳಿಹಾಕಿ ಆರೋಪಿಗಳನ್ನು ಬಿಡುಗಡೆ ಮಾಡಲಾಗುತ್ತಿತ್ತು. ಈ ತೊಡಕುಗಳನ್ನು ಗಮನದಲ್ಲಿಟ್ಟುಕೊಂಡು 1836ರಲ್ಲಿ ಠಕ್ಕರ ಬಗ್ಗೆ ಸಮಗ್ರ ತನಿಖೆ ನಡೆಸಲು ನರ್ಮದಾ ಪ್ರದೇಶದಲ್ಲಿ ಗವರ್ನರ್-ಜನರಲನ ಏಜೆಂಟನಾಗಿದ್ದ ಎಫ್.ಸಿ. ಸ್ಮಿತ್ತನ ನೇತೃತ್ವವದಲ್ಲಿ ಒಂದು ಸಮಿತಿಯನ್ನು ನೇಮಿಸಲಾಯಿತು. ಅವನ ಸಹಾಯಕನಾಗಿ ವಿಲಿಯಂ ಸ್ಲೀಮನ್ ನೇಮಕವಾದ. ಲಾರ್ಡ್ ವಿಲಿಯಂ ಬೆಂಟಿಂಕ್ ಗವರ್ನರ್-ಜನರಲ್‍ನಾಗಿ ಅಧಿಕಾರದಲ್ಲಿದ್ದ ಕಾಲದಲ್ಲಿ (1828-1833) ನಡೆದ ಸುಧಾರಣೆ ಬಹು ಮುಖ್ಯವಾದ್ದು. ಠಕ್ಕರನ್ನು ಕುರಿತ ಎಲ್ಲ ವಿವರಗಳ ವರದಿಯನ್ನು ಸ್ಲೀಮನನಿಗೆ ಕಳುಹಿಸಬೇಕೆಂದು ಭಾರತಾದ್ಯಂತವೂ ಕಂಪನಿಯ ಅಧಿಕಾರಿಗಳಿಗೆ ಸೂಚನೆ ಹೋಯಿತು. ಮೈಸೂರಿನಲ್ಲೇ ಠಕ್ಕರಿಂದ ನೂರಾರು ಜನರು ಸಾವಿಗೀಡಾಗಿದ್ದರೆಂದು ಈ ವರದಿಗಳ ಕೂಲಂಕಷ ಅಧ್ಯಯನದಿಂದ ತಿಳಿಯಿತು. ಬುಂದೇಲ್ ಖಂಡದಲ್ಲೂ ಗ್ವಾಲಿಯರ್ ಮತ್ತಿತರ ಪ್ರದೇಶಗಳಲ್ಲೂ ಜಮೀನ್ದಾರರೇ ಠಕ್ಕರಿಗೆ ರಕ್ಷಣೆ ನೀಡಿ ಅವರಿಂದ ಕಾಣಿಕೆ ಪಡೆಯುತ್ತಿದ್ದ ಅಂಶವೂ ಬೆಳಕಿಗೆ ಬಂತು.

ಸೆರೆಸಿಕ್ಕಿದ ಠಕ್ಕರ ಮನವೊಲಿಸಿ ಅವರನ್ನು ಮಾಫಿ ಸಾಕ್ಷಿಗಳೆಂದು ಪರಿಗಣಿಸಿ ಅವರಿಂದ ವಿವರಗಳನ್ನು ಹೊರಡಿಸಲಾಯಿತು. ಗ್ವಾಲಿಯರ್ ಹಾಗೂ ಬುಂದೇಲ್‍ಖಂಡದಲ್ಲಿ ಠಕ್ಕರ ಮನೆಗಳ ಮೇಲೆ ಜಮೀನ್ದಾರರು ಕಂದಾಯ ಹೇರಿದ್ದರು. ಠಕ್ಕರಲ್ಲೇ ಒಬ್ಬ ಅದನ್ನು ಸಂಗ್ರಹಿಸಿ, ಅಧಿಕಾರಿಗಳಿಗೆ ಕೊಡಬೇಕಾಗಿತ್ತು. ಹೊರಗೆ ವೃತ್ತಿ ನಡೆಸಲು ಹೋಗಿ ಹಿಂದಿರುಗಿದವರು ಅಧಿಕಾರಿಗಳಿಗೆ ಹಾಗೂ ಅವನ ಒಡೆಯರಿಗೆ ಉಡುಗೊರೆಗಳನ್ನು ಸಲ್ಲಿಸಬೇಕಾಗಿತ್ತು. ಈ ಕಾರಣಗಳಿಂದ ಠಕ್ಕರನ್ನು ಅಡಗಿಸುವುದು ಕಠಿಣವಾಗಿ ಕಂಡಿತು. ಕಾನೂನು ಸಡಿಲವಾಗಿದ್ದುದರಿಂದ ತೊಡಕನ್ನು ನಿವಾರಿಸಲು 1836ರಲ್ಲಿ ಒಂದು ವಿಶೇಷ ಶಾಸನವನ್ನು ಮಾಡಲಾಯಿತು. ಯಾರೇ ಆಗಲಿ ಠಕ್ಕನೆನಿಸಿಕೊಂಡು ಶಿಕ್ಷೆಗೆ ಗುರಿಯಾಗಿದ್ದರೆ ಅಥವಾ ಠಕ್ಕರ ಗುಂಪಿಗೆ ಸೇರಿದವನೆಂದು ತೋರಿದರೆ ಅವನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗುವುದೆಂದು ಅದರಲ್ಲಿ ವಿಧಿಸಲಾಯಿತು. ಇದರಿಂದ ಕೇವಲ ಠಕ್ಕರೊಂದಿಗೆ ಸಂಪರ್ಕ ಹೊಂದಿದ್ದವರೂ ಅದು ರುಜುವಾತಾದರೆ ಶಿಕ್ಷೆಗೆ ಗುರಿಯಾಗುತ್ತಿದ್ದರು. ಅನೇಕ ಠಕ್ಕರನ್ನು ಸೆರೆಹಿಡಿಯಲು ವಿಲಿಯಂ ಸ್ಲೀಮನ್ ಹಾಗೂ ಅವನ ಸಹೋದ್ಯೋಗಿಗಳು ಸತತವಾಗಿ ದುಡಿದರು. ತಮ್ಮ ದುಷ್ಷ್ಕೃತ್ಯವನ್ನೊಪ್ಪಿಕೊಂಡು ಶರಣಾದವರಿಗೆ ಕ್ಷಮಾದಾನ ನೀಡಿ ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಸರ್ಕಾರ ಅನುವು ಮಾಡಿಕೊಟ್ಟಿತು. ಸಾವಿರಾರು ಠಕ್ಕರು ಸಾವಿಗೀಡಾದರು. ನೂರಾರು ಜನ ಸೆರೆಸಿಕ್ಕಿ ದ್ವೀಪಾಂತರ ಶಿಕ್ಷೆಗೆ ಗುರಿಯಾದರು. ನೂರಾರು ಮಂದಿಯನ್ನು ಜಬ್ಬಲ್‍ಪುರದಲ್ಲಿ ಸ್ಥಾಪಿಸಲಾಗಿದ್ದ ಸುಧಾರಣಾ ಶಾಲೆಯಲ್ಲಿಡಲಾಯಿತು. ಠಕ್ಕರ ಹಾವಳಿ ಬಹುಮಟ್ಟಿಗೆ ಅಡಗಿತು.


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಠಕ್ಕರು&oldid=1064552" ಇಂದ ಪಡೆಯಲ್ಪಟ್ಟಿದೆ