ಬುಂದೇಲ್ ಖಂಡವು ಉತ್ತರದಲ್ಲಿ ಯಮುನಾ, ದಕ್ಷಿಣದಲ್ಲಿ ವಿಂಧ್ಯಪರ್ವತಶ್ರೇಣಿ, ಪೂರ್ವದಲ್ಲಿ ಬೆತ್ವಾ ಮತ್ತು ಪಶ್ಚಿಮದಲ್ಲಿ ತಮಸಾ ನದಿಗಳ ನಡುವೆ ಇದ್ದ ಭಾರತದ ಒಂದು ಐತಿಹಾಸಿಕ ಪ್ರದೇಶ. ಇದರ ವಾಯವ್ಯಕ್ಕೆ ಚಂಬಲ ನದಿ ಮತ್ತು ಆಗ್ನೇಯಕ್ಕೆ ಪನ್ನಾ-ಅಜಯಘರ್ ಪರ್ವತಶ್ರೇಣಿಗಳಿವೆ. ಉತ್ತರ ಅಕ್ಷಾಂಶ 24º ಯಿಂದ 26º 30' ಮತ್ತು ಪೂರ್ವ ರೇಖಾಂಶ 78º 10 ಯಿಂದ 81º 30'. ಬುಂದೇಲ್‍ಖಂಡ ಇಂದಿನ ಉತ್ತರ ಪ್ರದೇಶದ ಜಾಲಾಂವ್, ಝಾನ್ಸಿ, ಹಮೀರಪುರ ಮತ್ತು ಬಾಚಿದಾ ಜಿಲ್ಲೆಗಳನ್ನೂ ಮಧ್ಯಪ್ರದೇಶದ ದಾತಿಯಾ ತಿಕಮಘರ್ ಛತ್ತರಪುರ ಮತ್ತು ಪನ್ನಾ ಜಿಲ್ಲೆಗಳನ್ನೂ ಭಿಂದ್ ಜಿಲ್ಲೆಯ ಲಹರ್ ಮತ್ತು ಗ್ವಾಲಿಯರ್ ಜಿಲ್ಲೆಯ ಬಂದೆರ್ ತಹಶೀಲುಗಳನ್ನೂ ಒಳಗೊಂಡಿದ್ದು 54,560 ಚದರ ಕಿಮೀ ವಿಸ್ತೀರ್ಣ ಪಡೆದಿತ್ತು.

ಬುಂದೇಲ್‍ಖಂಡದ ಪನ್ನಾ ಜಿಲ್ಲೆಯಲ್ಲಿ ವಜ್ರದ ಗಣಿಗಳಿವೆ. ಅಗೇಟ್ ಎಂಬ ಪ್ರಶಸ್ತ ಶಿಲೆ ಕೇನ್ ನದಿಯ ಪ್ರದೇಶದಲ್ಲಿ ದೊರೆಯುತ್ತದೆ. ಬೆಣಚುಕಲ್ಲು ಮತ್ತು ಮರಳುಗಲ್ಲು ಮುಂತಾದ ಶಿಳೆಗಳೂ ಹೇರಳವಾಗಿವೆ. ಬುಂದೇಲ್‍ಖಂಡದಲ್ಲಿ ಬೆಟ್ಟಗಾಡಿನ ಪ್ರದೇಶವೇ ಹೆಚ್ಚು. ಕೈಗಾರಿಕೆಗಳ ದೃಷ್ಟಿಯಿಂದ ಹಿಂದುಳಿದಿರುವ ಈ ಭಾಗದ ಪ್ರಧಾನ ಉದ್ಯಮಗಳೆಂದರೆ ಕೈಮಗ್ಗದ ಬಟ್ಟೆ ತಯಾರಿಕೆ, ಚರ್ಮ, ಮರಗೆಲಸ ಇತ್ಯಾದಿ. ಇಲ್ಲಿ ಬೇತ್ವಾ, ಧಸಾನ್, ವೀರಮಾ, ಕೇನ್, ವಾಗ ಮುಂತಾದ ನದಿಗಳಿವೆ.

ಖಹುರಾಹೊ, ಕಾಲಂಜರ್ ಹಾಗೂ ಮಹೋಬಾ ಬುಂದೇಲ್‍ಖಂಡ ಪ್ರದೇಶದ ಪ್ರಮುಖ ಸ್ಥಳಗಳು.

ಇತಿಹಾಸ

ಬದಲಾಯಿಸಿ

ಬುಂದೇಲ್‍ಖಂಡದ ಪ್ರಾಚೀನ ಇತಿಹಾಸವನ್ನು ಇಲ್ಲಿಯ ಶಾಸನಗಳಿಂದ, ಪ್ರಾಚೀನ ಮತ್ತು ಮಧ್ಯ ಕಾಲೀನ ಲೇಖಕರ ಬರಹ ಇತ್ಯಾದಿಗಳಿಂದ ತಿಳಿಯಬಹುದಾಗಿದೆ. ಮೊದಲು ಇಲ್ಲಿ ನೆಲಸಿದವರು ಗೊಂಡ ಜನರು. ಕ್ರಿ.ಪೂ. 6ನೆಯ ಶತಮಾನದಲ್ಲಿ ಷೋಡಶ ಮಹಾಜನಪದಗಳಲ್ಲೊಂದೆನಿಸಿದ ಚೇದಿಗೆ ಈ ದೇಶದ ಬಲುಭಾಗ ಸೇರಿದ್ದಿತ್ತು. ಮುಂದೆ ನಂದ, ಮೌರ್ಯ ಮತ್ತು ಶುಂಗರ ಆಡಳಿತಕ್ಕೊಳಪಟ್ಟ ಈ ಭಾಗದಲ್ಲಿ ನಾಗಾ ಜನರು ಬೇತ್ವಾ ತೀರದ ಪದ್ಮಾವತಿಯನ್ನು (ಪಾವೈಯಾ) ರಾಜಧಾನಿಯಾಗಿ ಮಾಡಿ ಕೊಂಡರು. ಈ ಪ್ರದೇಶವನ್ನು ಆಳುತ್ತಿದ್ದನೆನ್ನಲಾದ ಮಹಾಕಾಂತಾರದ ವ್ಯಾಘ್ರಿರಾಜನನ್ನು ಸಮುದ್ರ ಗುಪ್ತ ಸೋಲಿಸಿದ. ಕ್ರಿ.ಶ. 9ನೆಯ ಶತಮಾನದ ಅನಂತರ ಈ ಪ್ರದೇಶ ಗೂರ್ಜರ-ಪ್ರತಿಹಾರರ ಮತ್ತು ಅವರ ತರುವಾಯ ಚಂದೇಲರ (ನೋಡಿ- ಚಂದೇಲರು) ಆಳ್ವಿಕೆಗೆ ಸೇರಿತು. ಉತ್ತಮ ಯೋಧರೂ ಒಳ್ಳೆಯ ಆಡಳಿತಗಾರರೂ ಆಗಿದ್ದ ಚಂದೇಲರ ಕಾಲದಲ್ಲಿ ಅಜಯಘರ್ ಮತ್ತು ಕಾಲಂಜರ್ ಕೋಟೆಗಳ ಖಜುರಾಹೊ ದೇಗುಲಗಳೂ ಅನೇಕ ಸರೋವರಗಳೂ ನಿರ್ಮಿತವಾದುವು. ಈ ಪ್ರದೇಶಕ್ಕೆ ಜೇಜುಭುಕ್ತಿ ಅಥವಾ ಜೇಜಕ ಭುಕ್ತಿ ಎಂಬ ಹೆಸರಿತ್ತು. ಚಂದೇಲ ರಾಜ್ಯ ಮುಸ್ಲಿಮ್ ಆಕ್ರಮಣಗಳಿಗೆ ಸಿಕ್ಕಿ ಪತನದ ಹಾದಿ ಹಿಡಿಯಿತು.

ವಾಸ್ತವವಾಗಿ ಬುಂದೇಲರು ಕಾಣಿಸಿಕೊಳ್ಳುವುದು 14ನೆಯ ಶತಮಾನದ ಅನಂತರ. ಇವರಿಂದಾಗಿಯೇ ಈ ಪ್ರದೇಶಕ್ಕೆ ಬುಂದೇಲ್ ಖಂಡವೆಂಬ ಹೆಸರು. ಇವರು ಗಾಹದ್ವಾಲ ಶಾಖೆಗೆ ಸೇರಿದವರೆನ್ನಲಾಗಿದೆ. ಬಾಂದಾ ಜಿಲ್ಲೆಯ ಮಾವ್ ಎಂಬಲ್ಲಿ ಆರಂಭವಾದ ಇವರ ಆಳ್ವಿಕೆ ಕ್ರಮೇಣ ಕಾಲಂಜರ್ ಮತ್ತು ಕಾಲ್ಪೀಗಳಿಗೆ ವಿಸ್ತøತವಾಯಿತು. ಮನೋನಿ ಇವರ ಮೊದಲ ರಾಜಧಾನಿ. 1507ರ ಸುಮಾರಿಗೆ ಪಟ್ಟಕ್ಕೆ ಬಂದ ರಾಜಾ ರುದ್ರಪ್ರತಾಪ ಸಿಂಹ ಓರ್ಛಾ ರಾಜಧಾನಿ ಕಟ್ಟಿದ. 1545ರಲ್ಲಿ ಕಾಲಂಜರ್ ಕೋಟೆ ಮುತ್ತಿಗೆಯಲ್ಲಿ ಷೇರ್ ಶಾಹ ಮೃತನಾದ. 1569ರಲ್ಲಿ ಅಕ್ಬರ್ ಕಾಲಂಜರವನ್ನು ವಶಪಡಿಸಿಕೊಂಡ. ಓರ್ಛಾದ ದೊರೆ ವೀರಸಿಂಹದೇವ ಅಬುಲ್‍ಫಜಲನ ಹತ್ಯೆಯ ಪಿತೂರಿಯಲ್ಲಿ ಭಾಗಿಯಾಗಿ ಅಕ್ಬರನ ಕೋಪಕ್ಕೆ ತುತ್ತಾದ. ಇನ್ನೊಬ್ಬ ಬುಂದೇಲ ಪ್ರಭು ಚಂಪಕರಾಯ ಮುಗಲರ ವಿರುದ್ಧ ಗೆರಿಲ್ಲಾ ಹೋರಾಟ ನಡೆಸಿದ. ಚಂಪಕರಾಯನ ಮಗ ಪರಾಕ್ರಮಿ ಛತ್ರಸಾಲ ರಾಜ್ಯವನ್ನು ವಿಸ್ತರಿಸಿದ. ಆದರೆ 1723ರಲ್ಲಿ ಮಹಮದ್ ಖಾನ್ ಬಂಗಶನ ಧಾಳಿಯ ಅನಂತರ ಈತ ಸ್ವರಕ್ಷಣೆಗೆ ಮರಾಠ ಪೇಷ್ವೆಗಳ ಸಹಾಯವನ್ನು ಕೋರಬೇಕಾಗಿ ಅವರಿಗೆ ಕೆಲವು ಪ್ರದೇಶಗಳನ್ನು ಒಪ್ಪಿಸಿದ. ಝಾನ್ಸಿಯಲ್ಲಿ ಪೇಷ್ವೆ ನೇಮಿಸಿದ ಸುಬೇದಾರನೊಬ್ಬ ಆಡಳಿತ ನಡೆಸಿದ. 1776ರಲ್ಲಿ ಬ್ರಿಟಿಷ್ ಸೇನೆ ಈ ಪ್ರದೇಶಕ್ಕೆ ಕಾಲಿಟ್ಟು ಕ್ರಮೇಣ ಬ್ರಟಿಷ್ ಸಾರ್ವಭೌಮತ್ವ ಸ್ಥಾಪಿತವಾಯಿತು. ದಕ್ಷಿಣ ಬುಂದೇಲಖಂಡದ ಚಂದೇಲರು ಸಣ್ಣ ಪುಟ್ಟ ಅಧಿಪರಾಗಿ ಸೆಂಟ್ರಲ್ ಇಂಡಿಯಾ ಏಜನ್ಸಿಯ ಕೈಕೆಳಗೆ ಇರಬೇಕಾಯಿತು. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಬುಂದೇಲ್‍ಖಂಡ ಪ್ರದೇಶ, ಉತ್ತರಪ್ರದೇಶ ಹಾಗೂ ಮಧ್ಯ ಪ್ರದೇಶ ಗಳಿಗೆ ಹಂಚಿಹೋಯಿತು.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: