ಟಹೀಟಿ
ಟಹೀಟಿ ಎಂಬುದು ದಕ್ಷಿಣ ಶಾಂತ ಸಾಗರದಲ್ಲಿರುವ ಒಂದು ದ್ವೀಪ. ಇದು ಸೊಸೈಟಿ ಐಲೆಂಡ್ಸ್ ದ್ವೀಪಸಮೂಹದಲ್ಲಿರುವ ಫ್ರೆಂಚ್ ಪಾಲಿನೇಷ್ಯಾದ ವಿಂಡ್ವಾರ್ಡ್ ಗುಂಪಿನ ಅತಿದೊಡ್ಡ ದ್ವೀಪ. ಇದು ಫ್ರೆಂಚ್ ಪಾಲಿನೇಷ್ಯಾದ ಆರ್ಥಿಕ, ಸಾಂಸ್ಕೃತಿ ಮತ್ತು ರಾಜಕೀಯ ಕೇಂದ್ರವಾಗಿದೆ. ಸಕ್ರಿಯ ಜ್ವಾಲಾಮುಖಿಯೊಂದರಿಂದ ಈ ದ್ವೀಪವು ರಚನೆಯಾಯಿತು. ಇದು ಎತ್ತರವಿದ್ದು, ಪರ್ವತಮಯವಾಗಿದೆ. ಇದರ ಸುತ್ತಲ ಹವಳಗಳ ಸಮೂಹವಿದೆ. 2007ರ ಜನಗಣತಿಯ ಪ್ರಕಾರ ಜನಸಂಖ್ಯೆಯು 178,133ರಷ್ಟಿದೆ.[೧] ಇದು ಫ್ರೆಂಚ್ ಪಾಲಿನೇಷ್ಯಾದ ಅತಿ ಜನನಿಬಿಡ ದ್ವೀಪವಾಗಿದೆ. ದ್ವೀಪಸಮೂಹದ ಒಟ್ಟು ಜನಸಂಖ್ಯೆಯ 68.6%ರಷ್ಟು ಈ ದ್ವೀಪದಲ್ಲಿದೆ.
Geography | |
---|---|
Location | Pacific Ocean |
Archipelago | Society Islands |
Major islands | tahiti |
ವಿಸ್ತೀರ್ಣ | ೧,೦೪೫ km೨ (೪೦೩.೫ sq mi) |
ಸಮುದ್ರ ಮಟ್ಟದಿಂದ ಎತ್ತರ | ೨,೨೪೧ m (೭,೩೫೨ ft) |
ಸಮುದ್ರ ಮಟ್ಟದಿಂದ ಎತ್ತರದ ಸ್ಥಳ | Mont Orohena |
Country | |
Overseas collectivity | French Polynesia |
Largest city | Papeete (pop. 131,695 urban) |
Demographics | |
Population | 178,133[೧] (as of August 2007 census) |
ಸಾಂದ್ರತೆ | ೧೭೦ /km೨ (೪೪೦ /sq mi) |
ಟಹೀಟಿಯ ರಾಜಧಾನಿ ಪಪೀಟ್ ವಾಯುವ್ಯ ಕಡಲತೀರದಲ್ಲಿದೆ. ಈ ವಲಯದ ಏಕೈಕ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಇಲ್ಲಿದೆ. ಫಾ'ಆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ನಗರದ ಮಧ್ಯದಿಂದ 5 km (3.11 mi) ದೂರದಲ್ಲಿದೆ. ಮೂಲತಃ ಪಾಲಿನೇಷ್ಯನ್ನರು ಕ್ರಿಸ್ತ ಶಕ 300ರಿಂದ 800ರ ವರೆಗೆ ಟಹೀಟಿಯಲ್ಲಿ ನೆಲೆಸಿದರು. ಪಾಲಿನೇಷ್ಯನ್ನರು ಈ ದ್ವೀಪದ ಜನಸಂಖ್ಯೆಯ 70%ರಷ್ಟಿದ್ದಾರೆ. ಜನಸಂಖ್ಯೆಯಲ್ಲಿ ಉಳಿದವರು ಯುರೋಪಿಯನ್ನರು, ಚೀನೀಯರು ಮತ್ತು ಮಿಶ್ರಿತ ಜನಾಂಗದವರು ಇಲ್ಲಿ ವಾಸಿಸುತ್ತಿದ್ದಾರೆ. 1880ರಲ್ಲಿ ಈ ದ್ವೀಪವನ್ನು ಫ್ರ್ಯಾನ್ಸ್‌ನ ಒಂದು ವಸಾಹತು ಎಂದು ಘೋಷಿಸಲಾಯಿತು. ಆದರೂ, 1946ರಲ್ಲಿ ಸ್ಥಳೀಯ ಟಹೀಟಿಯನ್ನರು ಫ್ರೆಂಚ್ ನಾಗರಿರಾಗಲು ಅನುಮತಿ ನೀಡಲಾಯಿತು. ಟಹೀಟಿಯಲ್ಲಿ ಫ್ರೆಂಚ್ ಏಕೈಕ ಅಧಿಕೃತ ಭಾಷೆಯಾಗಿದೆ. ಆದರೂ ಇಲ್ಲಿ ಬಹಳಷ್ಟು ಜನರು ರಿಯೊ ಟಹೀಟಿ ಎಂಬ ಟಹೀಟಿಯನ್ ಭಾಷೆ ಮಾತನಾಡುವರು.
ಭೂಗೋಳ
ಬದಲಾಯಿಸಿಟಹೀಟಿ ಫ್ರೆಂಚ್ ಪಾಲಿನೇಷ್ಯಾದಲ್ಲಿನ ಅತಿ ದೊಡ್ಡ ಹಾಗೂ ಅತಿ ಎತ್ತರದ ದ್ವೀಪ. ಇದು ಹವಾಯಿ ದ್ವೀಪಗಳಿಂದ ಸುಮಾರು 4,400 km (2,734.03 mi) ದಕ್ಷಿಣಕ್ಕೆ, ಚಿಲಿಯಿಂದ 7,900 km (4,908.83 mi) ಹಾಗೂ ಆಸ್ಟ್ರೇಲಿಯಾದಿಂದ 5,700 km (3,541.82 mi) ದೂರವಿದೆ.
ಟಹೀಟಿ ದ್ವೀಪವು ತನ್ನ ಅತ್ಯಗಲ ಸ್ಥಳದಲ್ಲಿ 45 km (27.96 mi) ಅಗಲವಿದೆ ಹಾಗೂ ಇದರ ವಿಸ್ತೀರ್ಣವು 1,045 ಕಿಮೀ2 ಇದೆ. 2,241 ಮೀಟರ್ ಎತ್ತರವಿರುವ ಮೌಂಟ್ ಒರೊಹೆನಾ ಟಹೀಟಿಯ ಅತ್ಯೆತ್ತರದ ಪರ್ವತ ಶಿಖರ. ಅಗ್ನೇಯದಲ್ಲಿರುವ ಮೌಂಟ್ ರೊನುಯಿ 1,332 ಮೀಟರ್ ಎತ್ತರದಲ್ಲಿದೆ. ಟಹೀಟಿ ದ್ವೀಪದಲ್ಲಿ ಜ್ವಾಲಾಮುಖಿ ಪರ್ವತದ ಮಧ್ಯದ ಮೇಲೆ ನಿಂತಿರುವ ಎರಡು ದುಂಡಗಿನ ಭೂಭಾಗಗಳಿವೆ. ಟರವಾವೊ ಎಂಬ ಸಣ್ಣ ಪಟ್ಟಣದಲ್ಲಿರುವ ಭೂಸಂಧಿ ಇವೆರಡೂ ಬೂಭಾಗಗಳ ನಡುವಿನ ಸಂಪರ್ಕವಾಗಿದೆ. ಈ ಭೂಸಂಧಿಗೆ ಟರವಾವೊ ಭೂಸಂಧಿ ಎನ್ನಲಾಗಿದೆ.
ವಾಯವ್ಯ ಭಾಗವನ್ನು ಟಹೀಟಿ ನುಯಿ (ದೊಡ್ಡ ಟಹೀಟಿ) ಹಾಗೂ ಅಗ್ನೇಯ ಭಾಗವನ್ನು ಟಹೀಟಿ ಇಟಿ (ಚಿಕ್ಕ ಟಹೀಟಿ) ಅಥವಾ ಟಯಾರಾಪು ಎನ್ನಲಾಗಿದೆ. ಟಹೀಟಿ ನುಯಿ ಕಡಲತೀರದುದ್ದಕ್ಕೂ ಅದರಲ್ಲೂ ವಿಶಿಷ್ಟವಾಗಿ ಪಪೀಟ್‌ನಲ್ಲಿ ಹೆಚ್ಚು ಜನಸಾಂದ್ರತೆಯಿರುತ್ತದೆ.
ಟಹೀಟಿ ನುಯಿ ಯ ಒಳನಾಡು ವಲಯದಲ್ಲಿ, ಜನಸಂಖ್ಯೆಯು ಯಾರೂ ಇಲ್ಲವೇನೋ ಎನ್ನುವಷ್ಟು ಕಡಿಮೆ. ಇದರ ಅಗ್ನೇಯ ಅರ್ಧಭಾಗ ಟೆ ಪರಿ ಗೆ ದೋಣಿಯಲ್ಲಿ ಹೋಲು ಅಥವಾ ಪಾದಚಾರಿಗಳಾಗಿ ಹೋಗಲು ಸಾಧ್ಯವಿರುವುದರಿಂದ, ಟಹೀಟಿ ಇಟಿ ಒಂದು ರೀತಿಯಲ್ಲಿ ಪ್ರತ್ಯೇಕವಾಗಿದೆ. ಸಮುದ್ರ ಮತ್ತು ಪರ್ವತಗಳ ನಡುವೆ ಸಾಗುವ ಮುಖ್ಯ ರಸ್ತೆಯೊಂದು ದ್ವೀಪದ ಉಳಿದ ಭಾಗವನ್ನು ಸುತ್ತುವರೆದಿದೆ.
ಒಳನಾಡಿನಲ್ಲಿ ಸಾಗುವ ರಸ್ತೆಯು ಹಾಲು ಉತ್ಪಾದನಾ ಹೊಲಗಳು ಮತ್ತು ನಿಂಬೆ ತೋಪುಗಳ ಮೂಲಕ ಹಾದುಹೋಗುತ್ತದೆ. ಈ ರಸ್ತೆಯಲ್ಲಿ ಪ್ರಯಾಣಿಸುವವರು ಬಹಳ ರಮಣೀಯ ಭೂಚಿತ್ರಣ ನೋಡಬಹುದು. ಟಹೀಟಿಯ ಭೂಚಿತ್ರಣದಲ್ಲಿ ಹಚ್ಚಾಹಸಿರು ಮಳೆಕಾಡುಗಳು ಹಾಗೂ ಉತ್ತರದಲ್ಲಿ ಹರಿಯುವ ಪಪೆನೂ ನದಿ ಹಲವು ಝರಿಗಳಿವೆ.
ಹವಾಗುಣ
ಬದಲಾಯಿಸಿನವೆಂಬರ್ರಿಂದ ಏಪ್ರಿಲ್ ತನಕ ಆರ್ದ್ರತೆಯ ಋತುವಿರುತ್ತದೆ. ಜನವರಿ ತಿಂಗಳಲ್ಲಿ ಆರ್ದ್ರತೆ ಅತ್ಯಧಿಕವಿದ್ದು, ಪಪೀಟ್‌ನಲ್ಲಿ 13.2 ಅಂಗುಲ(335ಮಿಮೀ.)ದಷ್ಟು ಮಳೆಯಾಗುವುದು. ಅಗಸ್ಟ್ ತಿಂಗಳಲ್ಲಿ ಆರ್ದ್ರತೆ ಅತಿ ಕಡಿಮೆಯಿದ್ದು ಕೇವಲ 1.9 ಅಂಗುಲ(48 ಮಿಮೀ.)ದಷ್ಟು ಮಳೆಯಾಗುವುದು.
ಸರಾಸರಿ ಉಷ್ಣಾಂಶಗಳು 70 °F (21 °C) ಹಾಗೂ 88 °F (31 °C) ನಡುವಿನ ಶ್ರೇಣಿಯಲ್ಲಿರುತ್ತದೆ. ಉಷ್ಣಾಂಶದಲ್ಲಿ ಋತುವಾರು ಬದಲಾವಣೆ ಬಹಳ ಕಡಿಮೆ. ದ್ವೀಪದ ಬಿಬಿಸ್ ಎಂಬ ಸ್ಥಳದಲ್ಲಿ ದಾಖಲೆಯಾದ ಕನಿಷ್ಠ ಉಷ್ಣಾಂಶ 61 °F (16 °C) ಮತ್ತು ಗರಿಷ್ಠ ಉಷ್ಣಾಂಶ 93 °F (34 °C).[೨]
ಇತಿಹಾಸ
ಬದಲಾಯಿಸಿಟಹೀಟಿಯನ್ನರು
ಬದಲಾಯಿಸಿಪಾಲಿನೇಷ್ಯನ್ನರು ಕ್ರಿಸ್ತಶಕ 300ರಿಂದ 800ರ ವರೆಗಿನ ಕಾಲದಲ್ಲಿ ಟಹೀಟಿಗೆ ಬಂದು ನೆಲೆಸಿದ್ದರೆಂದು ಅಂದಾಜು ಮಾಡಲಾಗಿದೆ. ಆದರೂ ಕೆಲವು ಅಂದಾಜುಗಳ ಪ್ರಕಾರ ಅವರ ಆಗಮನ ಮತ್ತು ನೆಲೆಸುವಿಕೆಯು ಇನ್ನೂ ಮುಂಚೆಯೇ ಸಂಭವಿಸಿತ್ತು. ಮೊದಲ ವಸಾಹತುದಾರರು ಪಶ್ಚಿಮದಲ್ಲಿರುವ ದ್ವೀಪಸಮೂಹಗಳಾದ ಫಿಜಿ, ಸಮೊವಾ ಅಥವಾ ಟೊಂಗಾದಿಂದ ಹೊರಟು ಪಾಲಿನೇಷ್ಯನ್ ಸಾಗರ ಯಾನದಲ್ಲಿ ಸಾಗರದ ಮೂಲಕ ಸಾವಿರಾರು ಮೈಲ್‌ಗಳು ದೂರ ಕ್ರಮಿಸಿ ಟಹೀಟಿ ತಲುಪಿದರೆಂದು ನಂಬಲಾಗಿದೆ.
1770ರ ಇಸವಿಯಲ್ಲಿ ಜೇಮ್ಸ್ ಕುಕ್ ಟಹೀಟಿಯಲ್ಲಿ 33 ಮೀಟರ್ ಉದ್ದನೆಯ ಬೃಹತ್ ಸಾಂಪ್ರದಾಯಿಕ ಹಡಗು ವಾ'ಆ ಎಂಬದನ್ನು ಗಮನಿಸಿದ.[೩]
ಟಹೀಟಿಯನ್ ಸಮಾಜದಲ್ಲಿ ಬಾಂಧವ್ಯ ಆಧಾರಿತ ನಾಯಕತ್ವ ಮತ್ತು ಪ್ರಾಂತ್ಯಗಳು ಹಾಗೂ ವಿವಿಧ ವಂಶಗಳ ಸೇನಾ ಪಡೆಗಳಿದ್ದವು. ಒಂದು ವಂಶದ ನಾಯಕತ್ವವನ್ನು ಮುಖ್ಯಸ್ಥ ಅರಿಈ ರಾಹಿ , ಕುಲೀನ ಅರಿಈ ಹಾಗೂ ಕೆಳಮಟ್ಟದ ನಾಯಕರಿದ್ದರು. ಅರಿಈ ಗಳು ಮಾನಾ ಎಂಬ ಅತಿಮಾನುಷ ಶಕ್ತಿ ಹೊಂದಿದ ಪಾಲಿನೇಷ್ಯನ್ ದೇವತೆಗಳ ವಂಶಸ್ಥರು ಎಂದು ನಂಬಲಾಗಿತ್ತು. ಕೆಂಪು ಗರಿಗಳಿಂದ ಮಾಡಲಾದ ಪಟ್ಟಿ ಧಾರಣೆಯಿಂದ ಇವರ ಸ್ಥಾನಮಾನವನ್ನು ಸೂಚಿಸುತ್ತಿತ್ತು. ಆಧರೂ, ವಂಶದ ನಾಯಕರು ಯಾವುದೇ ಸಂಫೂರ್ಣ ಅಧಿಕಾರ ಹೊಂದಿರಲಿಲ್ಲ. ಅವರು ಮಹಾಸಭೆಗಳು ಅಥವಾ ಪರಿಷತ್ತುಗಳೊಂದಿಗೆ ಸಮಾಲೋಚನೆ ನಡೆಸಿ, ಸದಸ್ಯರ ಅಭಿಪ್ರಾಯ ಪಡೆಯುತ್ತಿದ್ದರು. ಯುದ್ಧಕಾಲದಲ್ಲಿ ಇದು ಬಹಳಷ್ಟು ಮುಖ್ಯವಾಗಿತ್ತು. ಮಾರೇ ಎಂಬುದು ಬಯಲು ಪ್ರದೇಶದಲ್ಲಿ ಎತ್ತರದ ಕಲ್ಲಿನ ಅಡಿಪಾಯಗಳ ಮೇಲೆ ನಿರ್ಮಿಸಲಾದ ಪವಿತ್ರ ಪೂಜಾಮಂದಿರವಾಗಿತ್ತು. ಇತರೆ ಪಾಲಿನೇಷ್ಯನ್ ಸಮುದಾಯಗಳಲ್ಲಿನ ತತ್ಸಮ ರಚನೆಗಳಲ್ಲಿ ನಡೆಸಲಾದ ಸಾಂಸ್ಕೃತಿಕ ಸಮಾರಂಭಗಳು ಇಲ್ಲೂ ನಡೆಯುತ್ತಿದ್ದವು. ಮಾರೇಗಳು ವಂಶದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಜೀವನದ ಕೇಂದ್ರಬಿಂದುವಾಗಿದ್ದವು. ಇಲ್ಲಿ ದೇವತೆಗಳನ್ನು ಪೂಜಿಸಿ, ನಾಯಕರಿಗೆ ನಾಯಕಪಟ್ಟ ನೀಡಲಾಗುತ್ತಿತ್ತು. ಯುದ್ಧಕ್ಕಾಗಿ ಸಿದ್ಧತೆ, ಹುಟ್ಟುಹಬ್ಬಗಳ ಆಚರಣೆ ಹಾಗೂ ಸತ್ತವರನ್ನು ಹೂಳುವ ಕಾರ್ಯಗಳೆಲ್ಲವೂ ಇಲ್ಲಿ ನಡೆಯುತ್ತಿದ್ದವು. ಮಾರೇ ಗಳ ರೀತಿಗಳಲ್ಲಿ ಸರಳ ಕೌಟುಂಬಿಕ ವೇದಿಕೆಗಳಿಂದ ಹಿಡಿದು, ಉನ್ನತ ಸ್ಥಾನಮಾನದ ನಾಯಕರಿಗಾಗಿ ದೊಡ್ಡ ದೇವಾಲಯಗಳ ವರೆಗಿನ ಶ್ರೇಣಿಯಿತ್ತು. ಆದರು ಇವೆಲ್ಲವನ್ನೂ ಟಾಪೂ ಎಂದು ಪರಿಗಣಿಸಲಾಗುತ್ತಿತ್ತು. ಯುರೋಪಿನನ್ನರೊಂದಿಗಿನ ಆರಂಭಿಕ ಸಂಪರ್ಕವೆಂದರೆ, 1797ರಲ್ಲಿ ಲಂಡನ್ ಧರ್ಮಪ್ರಚಾರಕ ಮಂಡಳಿ ಆಗಮಿಸಿ, ಕ್ರಿಶ್ಚಿಯನ್ ಧರ್ಮವನ್ನು ಪರಿಚಯಿಸಿ, ಟಹೀಟಿಯನ್ ಭಾಷೆ(ರಿಯೊ ಟಹೀಟಿ )ಗೆ ಲಿಖಿತ ರೂಪ ನೀಡಿತು.
ಯುರೋಪ್‌ನೊಂದಿಗಿನ ಸಂಪರ್ಕ
ಬದಲಾಯಿಸಿ1700ರ ದಶಕದ ಕಾಲಾವಧಿ
ಬದಲಾಯಿಸಿಇಂಗ್ಲಿಷ್ ನಾವಿಕ ಸ್ಯಾಮುಯಲ್ ವಾಲಿಸ್ 1767ರ ಜೂನ್ 18ರಂದು ಟಹೀಟಿಯನ್ನು ಪರಿಶೋಧಿಸಿದ. ಈತನನ್ನು ಮೊಟ್ಟಮೊದಲ ಯುರೋಪಿಯನ್ ಸಂದರ್ಶಕ ಎನ್ನಲಾಗಿದೆ. ಆನಂತರ ಪ್ರಕಟವಾದ ವರದಿಯಲ್ಲಿ, ಸ್ಪ್ಯಾನಿಷ್ ನಾವಿಕ ಪೀಡ್ರೊ ಫರ್ನಾಂಡೆಸ್ ಡಿ ಕ್ವೇರೊಸ್ 1606ರಲ್ಲಿ ಪರಿಶೋಧಿಸಿದ್ದು ಟಹೀಟಿಯನ್ನಲ್ಲ, ಬದಲಿಗೆ ಟಹೀಟಿಯ ಅಗ್ನೇಯದಲ್ಲಿರುವ ಲಾ ಸಗಿಟೆರಿಯಾ ದ್ವೀಪವನ್ನು ಎಂದು ಸ್ಪಷ್ಟಪಡಿಸಲಾಯಿತು.[೪]
ಇಲ್ಲಿಯ ಜನರ ವಿರಮಿತ ಹಾಗೂ ಸಂತೃಪ್ತಿಯ ಸ್ವಭಾವ ಹಾಗೂ ಸ್ವರ್ಗ ಎಂದು ಚಿತ್ರಿಸಲಾಗಿರುವ ದ್ವೀಪದಿಂದ ಹಲವು ಯುರೋಪಿಯನ್ನರು ಆಕರ್ಷಿತರಾದರು. ಪಾಶ್ಚಾತ್ಯ ಜಗತ್ತು ಇಲ್ಲಿಗೆ ತಂದ ರಮ್ಯತೆ ಇಂದಿಗೂ ಉಳಿದುಕೊಂಡಿದೆ.
ವಾಲಿಸ್ ನಂತರ 1768ರ ಏಪ್ರಿಲ್ ತಿಂಗಳಲ್ಲಿ ಲೂಯಿ-ಆಂಟನ್ ಡಿ ಬೊಗೆನ್ವಿಲ್ ಟಹೀಟಿಗೆ ಆಗಮಿಸಿ, ಸಾಗರದ ಮೂಲಕ ಇಡೀ ಪ್ರಪಂಚ ಸುತ್ತಿದ ಮೊಟ್ಟಮೊದಲ ಫ್ರೆಂಚಿಗನಾದ. ವಾಯೇಜ್ ಆಟೊ ಡು ಮಾಂಡ್ ಎಂಬ ಕೃತಿ ಪ್ರಕಟಿಸಿ ಬೊಗೇನ್ವಿಲ್ ಟಹೀಟಿಯ ಬಗ್ಗೆ ಯುರೋಪ್‌ನಲ್ಲಿ ಪರಿಚಯಿಸಿದ. ಈ ದ್ವೀಪವು ಭೂಮಿ ಮೇಲಿನ ಸ್ವರ್ಗ, ಇಲ್ಲಿಯ ಪುರುಷರು-ಸ್ತ್ರೀಯರು ಸಂತುಷ್ಟ ಜೀವನ ನಡೆಸುತ್ತಿದ್ದಾರೆ, ನಾಗರಿಕತೆಯೊಂದಿಗಿನ ಭ್ರಷ್ಟಾಚಾರವು ಇಲ್ಲಿ ತಗಲಿಲ್ಲ ಎಂದು ಆತನು ತನ್ನ ಕೃತಿಯಲ್ಲಿ ನಮೂದಿಸಿದ್ದ.
ಈತನ ಕೃತಿಯಲ್ಲಿ ಕುಲೀನ savage ಪರಿಕಲ್ಪನೆಯನ್ನು ತಿಳಿಸಲಾಯಿತು.ಫ್ರೆಂಚ್ ಕ್ರಾಂತಿಯ ಮುಂಚೆ ಜೀನ್ ಜಾಕ್ಸ್ ರೊಸೊರಂತಹ ತತ್ತ್ವವಾದಿಗಳ ಆದರ್ಶರಾಜ್ಯದ ಕಲ್ಪನೆಗಳ ಮೇಲೆ ಪ್ರಭಾವ ಬೀರಿತು.
1769ರ ಏಪ್ರಿಲ್ ತಿಂಗಳಲ್ಲಿ, ಲಾರ್ಡ್ಸ್ ಆಫ್ ದಿ ಅಡ್ಮಿರಲ್ಟಿಯಿಂದ ರಹಸ್ಯ ಆದೇಶಗಳ ಮೇರೆಗೆ ಕ್ಯಾಪ್ಟನ್ ಜೇಮ್ಸ್ ಕುಕ್ ಟಹೀಟಿ ದ್ವೀಪಕ್ಕೆ ಆಗಮಿಸಿದ. ಅದೇ ವರ್ಷ ಜೂನ್ 2ರಂದು ಟ್ರ್ಯಾನ್ಸಿಟ್ ಆಫ್ ವೀನಸ್ ವೀಕ್ಷಿಸುವುದು ಈತನ ಅಧಿಕೃತ ಕಾರ್ಯವಾಗಿತ್ತು. ಮಟವಾಯ್ ಬೇಯಲ್ಲಿ ಠಿಕಾಣಿ ಹೂಡಿ, ಆಗಸ್ಟ್ 9ರ ತನಕ ಅಲ್ಲಿಯೇ ಇದ್ದ. ಈ ದ್ವೀಪಸಮೂಹದಲ್ಲಿರುವ ಸುತ್ತಮುತ್ತಲ ಎಲ್ಲಾ ದ್ವೀಪಗಳು ಸೇರಿದಂತೆ, ಜನಸಂಖ್ಯೆಯು 50,000 ಎಂದು ಅಂದಾಜಿಸಲಾಗಿತ್ತು. ಯುರೋಪಿಯನ್ ಹಡಗುಗಳು ಬಹಳಷ್ಟು ಬಾರಿ ಟಹೀಟಿಗೆ ಆಗಮಿಸುತ್ತಿದ್ದವು. ಇವುಗಳಲ್ಲಿ ಹೆಚ್ಎಂಎಸ್ ಬೌಂಟಿ ಹೆಚ್ಚು ಚಿರಪರಿಚಿತ. 1789ರಲ್ಲಿ ಟಹೀಟಿಯಿಂದ ಹೊರಟ ಈ ಹಡಗಿನ ಸಿಬ್ಬಂದಿಯು ದಂಗೆಯೆದ್ದಿತ್ತು. ಯುರೋಪಿಯನ್ ಪ್ರಭಾವವು ವೇಶ್ಯಾವೃತ್ತಿ, ಗುಹ್ಯರೋಗ, ಮದ್ಯ, ಕ್ರಿಶ್ಚಿಯನ್ ಧರ್ಮವನ್ನು ಟಹೀಟಿಗೆ ತಂದು, ಅಲ್ಲಿನ ನಿಷ್ಕಳಂಕ ಸಾಂಪ್ರದಾಯಿಕ ಸಮಾಜವನ್ನು ಕದಡಿ ಗಬ್ಬೆಬ್ಬಿಸಿತು. 1795ರಲ್ಲಿ ಸಂಸ್ಥಾಪಿಸಲಾದ ಲಂಡನ್ ಮಿಷನರಿ ಸೊಸೈಟಿ, ಅಲ್ಲಿನ ಕಳಪೆ ಸ್ಥಿತಿಗಳು ಮತ್ತು ಕೆಟ್ಟ ಪ್ರಭಾವವನ್ನು ನೀಗಿಸಲು ಮಧ್ಯಪ್ರವೇಶಿಸಿರೆಂದು ತನ್ನ ಟಹೀಟಿಯನ್ ಧರ್ಮಪ್ರಚಾರಕರಿಗೆ ಸೂಚನೆ ನೀಡಿತು.[೫] ಟೈಫಸ್, ಫ್ಲೂ ಜ್ವರ ಮತ್ತು ಸಿಡುಬಿನಂತಹ ಪರಿಚಯಿಸಲಾದ ರೋಗಗಳಿಗೆ ತುತ್ತಾದ ಹಲವು ಟಹೀಟಿಯನ್ನರು ಮೃತರಾದರು. 1979ರಲ್ಲಿ ಟಹೀಟಿಯ ಜನಸಂಖ್ಯೆ ಕೇವಲ 16,000ಕ್ಕೆ ಇಳಿದಿತ್ತು. ಆನಂತರ ಇದು 6,000ದಷ್ಟು ಕೆಳಕ್ಕಿಳಿಯಿತು.[೬]
ಸ್ಪ್ಯಾನಿಷ್ ರಾಜಮನೆತನದ ನಿಯಮಗಳನ್ನು ಅನುಸರಿಸಿದ ಪೆರುವಿನಲ್ಲಿ ರಾಜ-ರಾಣಿ ಪರ ಅಧಿಕಾರ ನಡೆಸುತ್ತಿದ್ದ ಅಧಿಕಾರಿ (ವೈಸ್ರಾಯ್) ಮ್ಯಾನುಯಲ್ ಡಿ ಅಮ್ಯಾಟ್ ವೈ ಜುನಿಯಟ್, 1772ರಲ್ಲಿ ದ್ವೀಪವನ್ನು ಸುಪರ್ದಿಗೆ ತೆಗೆದುಕೊಳ್ಳಲು ನಿರ್ಧರಿಸಿದ. ಇತರೆ ದೇಶಗಳು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುವುದನ್ನು ತಡೆಗಟ್ಟಲು ಹಾಗೂ ಕ್ರೈಸ್ತ ಮತಾಂತರ ಮಾಡುವುದು ಪ್ರಧಾನ ಉದ್ದೇಶವಾಗಿತ್ತು. ಆದ್ದರಿಂದ, 1772-1775ರ ಕಾಲಾವಧಿಯಲ್ಲಿ ಆತನು ನಾಲ್ಕು ದಂಡಯಾತ್ರೆಗಳನ್ನು ನಡೆಸಿದ. ಆದರೆ ಸ್ಪೇನ್‌ನ ರಾಜ ಮೂರನೆಯ ಚಾರ್ಲ್ಸ್ ತನ್ನ ಜಾತ್ಯಾತೀತ ನೀತಿಯನ್ನು ಜಾರಿಗೊಳಿಸಿದ್ದ ಕಾರಣ, ದಂಡಯಾತ್ರೆಯನ್ನು ಸ್ಥಗಿತಗೊಳಿಸಲಾಯಿತು. ಈ ದಂಡಯಾತ್ರೆಗಳಲ್ಲಿ ಬಹಳಷ್ಟು ಗಮನಾರ್ಹವಾದದ್ದು, ಹಡಗಿನ ಸೈನಿಕ ಮ್ಯಾಕ್ಸಿಮೊ ರಾಡ್ರಿಗ್ಸ್ ಎಂಬಾತನು ತನ್ನ ದಿನಚರಿಯಲ್ಲಿ ಬರೆದಿಟ್ಟ ವೃತ್ತಾಂತ. ಇದು 12 ತಿಂಗಳುಗಳ ಅವಧಿಯದ್ದಾಗಿತ್ತು ಹಾಗೂ 18ನೆಯ ಶತಮಾನದ ಟಹೀಟಿಯನ್ನರ ಜನಾಂಗೀಯತಾ ವಿವರಗಳನ್ನು ಒಳಗೊಂಡಿತ್ತು.
1800ರ ದಶಕದ ಕಾಲಾವಧಿ
ಬದಲಾಯಿಸಿಸಾಗರ ಯಾನ ಹೆಚ್‌ಎಂಎಸ್ ಬೀಗಲ್ ಎಂಬ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಚಾರ್ಲ್ಸ್ ಡಾರ್ವಿನ್ 1835ರ ನವೆಂಬರ್‌ನಲ್ಲಿ ಟಹೀಟಿಗೆ ಭೇಟಿ ನೀಡಿದರು. ಈ ಹಡಗಿ ನಾಯಕ ರಾಬರ್ಟ್ ಫಿಟ್ಜ್‌ರಾಯ್. ಅಲ್ಲಿರುವ ಸ್ಥಳೀಯರ ಚರಿತ್ರೆಯ ಮೇಲೆ ಧರ್ಮಪ್ರಚಾರಕರು ಬೀರಿದ್ದ ಸಕಾರಾತ್ಮಕ ಎನ್ನಲಾದ ಪ್ರಭಾವವನ್ನು ಮೆಚ್ಚಿದ್ದರು. ಡಾರ್ವಿನ್ ಟಹೀಟಿಯ ಭೂಚಿತ್ರಣವನ್ನು ಪ್ರಶಂಶಿಸಿದರು. ಆದರೆ ಟಹೀಟಿಯ ರಾಣಿ ನಾಲ್ಕನೆಯ ಪೊಮರೆಯ ಬಗ್ಗೆ ಅಷ್ಟೂ ಸಕಾರಾತ್ಮಕ ಅಭಿಪ್ರಾಯವಿರಲಿಲ್ಲ. 1833ರಲ್ಲಿ ಟಹೀಟಿಯನ್ನರು ಇಂಗ್ಲಿಷ್ ಹಡಗಿನ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಪರಿಹಾರದ ಮಾತುಕತೆಗಳಲ್ಲಿ ಕ್ಯಾಪ್ಟನ್ ಫಿಟ್ಜ್‌ರಾಯ್ ಮಾತುಕತೆ ನಡೆಸಿದರು.[೭]
ಅಮೆರಿಕಾ ಸಂಯುಕ್ತ ಸಂಸ್ಥಾನದ ಪರಿಶೋಧನಾ ಯಾತ್ರೆಯು 1839ರಲ್ಲಿ ಹೈಟಿಗೆ ಆಗಮಿಸಿತು. 1839ರಲ್ಲಿ ಟಹೀಟಿ ದ್ವೀಪಕ್ಕೆ ಆಗಮಿಸಿತು. ಇದರ ಸದಸ್ಯರ ಪೈಕಿ ಅಲ್ಫ್ರೆಡ್ ಥಾಮಸ್ ಅಗೆಟ್ ಟಹೀಟಿಯನ್ ಜೀವನದ ಹಲವು ಚಿತ್ರಣಗಳನ್ನು ಮಾಡಿದ. ಇವುಗಳಲ್ಲಿ ಕೆಲವು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಆನಂತರ ಪ್ರಕಟಿಸಲಾದವು.
1842ರಲ್ಲಿ, ಮೊರೊಕೊ ದೇಶವನ್ನು ಒಳಗೊಂಡ ಯುರೋಪಿಯನ್ ಬಿಕ್ಕಟ್ಟು ಫ್ರ್ಯಾನ್ಸ್ ಮತ್ತು ಗ್ರೇಟ್ ಬ್ರಿಟನ್ ನಡುವೆ ಹೆಚ್ಚಾಯಿತು. ಏಕೆಂದರೆ, ನೌಕಾಸೇನಾ ಪಡೆಯ ಮುಖ್ಯಸ್ಥ ಡುಪಿಟಿಟ್ ಥೂವರ್ಸ್ ತನ್ನ ಫ್ರೆಂಚ್ ಸರ್ಕಾರವನ್ನು ಲೆಕ್ಕಿಸದೆ, ಫ್ರೆಂಚ್ ಆಧೀನತೆಯನ್ನು ಸ್ವೀಕರಿಸಲು ಟಹೀಟಿಯ ರಾಣಿ ನಾಲ್ಕನೆಯ ಪೊಮರೆಗೆ ಮನವೊಲಿಸಿದ. ಆ ಸಮಯ, ಬರ್ಮಿಂಗ್ಹ್ಯಾಮ್ ಸಂಜಾತ ಧರ್ಮಪ್ರಚಾರಕ ಹಾಗೂ ತಾತ್ಕಾಲಿಕ ಬ್ರಿಟಿಷ್ ರಾಯಭಾರಿ ಮುಖ್ಯಸ್ಥ ಜಾರ್ಜ್ ಪೃಚರ್ಡ್ ತಮ್ಮ ಸ್ಥಳದಲ್ಲಿರಲಿಲ್ಲ. ಆತ ವಾಪಸಾದ ನಂತರ ಸ್ಥಳೀಯರನ್ನು ರೋಮನ್ ಕ್ಯಾತೊಲಿಕ್ ಫ್ರೆಂಚರ ವಿರುದ್ಧ ಎತ್ತಿಕಟ್ಟಿದ. 1843ರ ನವೆಂಬರ್ ತಿಂಗಳಲ್ಲಿ, ಡುಪೆಟಿಟ್ ಥೂವರ್ಸ್ ಪುನಃ ತನ್ನ ಸ್ವಂಥ ಅಧಿಕಾರದಲ್ಲೇ ನಾವಿಕರನ್ನು ಟಹೀಟಿಗೆ ಕರೆತಂದು, ಫ್ರ್ಯಾನ್ಸ್‌ನ ಭಾಗವನ್ನಾಗಿ ಮಾಡಿದ. ಆತನು ಪೃಚರ್ಡ್‌ನನ್ನು ಸೆರೆಮನೆಗೆ ಅಟ್ಟಿ, ಕ್ರಮೇಣ ಬ್ರಿಟನ್‌ಗೆ ವಾಪಸ್ ಕಳುಹಿಸಿದ.
1844ರ ಆರಂಭದಲ್ಲಿ ಟಹೀಟಿಯ ಸಮಾಚಾರವು ಯುರೋಪ್ ತಲುಪಿತು. ಫ್ರೆಂಚ್ ರಾಜ ಲೂಯಿ ಫಿಲಿಪ್ ಮತ್ತು ರಾಜ್ಯನೀತಿಜ್ಞ ಫ್ರಾಂಕೊಯ್ ಗುಯಿಜ್ ದ್ವೀಪದ ಸೇರ್ಪಡೆಯನ್ನು ಖಂಡಿಸಿದರು. ಇದಾದರೂ, ಟಹೀಟಿಯನ್ನರು ಮತ್ತು ಫ್ರೆಂಚರ ನಡುವಿನ ಯುದ್ಧವು 1847ರ ತನಕ ಮುಂದುವರೆಯಿತು. 1880ರ ಜೂನ್ 29ರ ತನಕ ಈ ದ್ವೀಪವು ಫ್ರೆಂಚ್‌ನ ಅಂಗವಾಗಿತ್ತು. ಆ ದಿನ ರಾಜ ಐದನೆಯ ಪೊಮರೆ ಟಹೀಟಿಯ ಆಧಿಪಥ್ಯ ಹಾಗೂ ಫ್ರೆಂಚ್‌ಗಾಗಿ ಅದರ ಆಧೀನತೆಯನ್ನು ತೊರೆಯಬೇಕಾಯಿತು. ಆತನಿಗೆ Officer of the Orders of the Legion of Honour ಹಾಗೂ Agricultural Merit of France ಎಂಬ ನಾಮಕಾವಸ್ಥೆಯ ಬಿರುದು ನೀಡಲಾಯಿತು.
20ನೆಯ ಶತಮಾನ
ಬದಲಾಯಿಸಿ1946ರಲ್ಲಿ, ಟಹೀಟಿ ಮತ್ತು ಇಡೀ ಫ್ರೆಂಚ್ ಪಾಲಿನೇಷ್ಯಾ Territoire d'outre-mer (ಫ್ರೆಂಚ್‌ನ ಗಡಿಯಾಚೆಗಿನ ಪ್ರಾಂತ್ಯ) ಆಯಿತು. ಟಹೀಟಿಯನ್ನರಿಗೆ ಫ್ರೆಂಚ್ ಪೌರತ್ವ ಲಭಿಸಿತು. ಟಹೀಟಿಯ ರಾಷ್ಟ್ರೀಯತಾವಾದಿ ಮಾರ್ಸೆಲ್ ಪೊವನಾಆ ಆ ಊಪಾ ಇದಕ್ಕಾಗಿಯೇ ಹಲವು ವರ್ಷಗಳ ಕಾಲ ಹೋರಾಟ ನಡೆಸಿದ್ದರು.[೮] 2003ರಲ್ಲಿ, ಫ್ರೆಂಚ್ ಪಾಲಿನೇಷ್ಯಾದ ಸ್ಥಾನಮಾನವನ್ನು Collectivité d'outre-mer (ಫ್ರೆಂಚ್ ಗಡಿಯಾಚೆಗಿನ ಸಮುದಾಯ) ಎನ್ನಲಾಯಿತು.
ಫ್ರೆಂಚ್ ಚಿತ್ರಕಲಾವಿದ ಪಾಲ್ ಗಾಗ್ವಿನ್ 1890ರ ದಶಕದಲ್ಲಿ ಟಹೀಟಿಯಲ್ಲಿ ವಾಸಿಸಿ, ಹಲವು ಟಹೀಟಿಯನ್ ಪ್ರಜೆಗಳ ಚಿತ್ರ ರಚಿಸಿದ. ಗಾಗ್ವಿನ್‌ನ ಚಿತ್ರಕಲೆಗಳ ಚಿಕ್ಕ ಪ್ರದರ್ಶನಾಲಯವು ಪಪೆಯಾರಿಯಲ್ಲಿದೆ.
ಮೊದಲ ವಿಶ್ವಯುದ್ಧದಲ್ಲಿ, ಜರ್ಮನಿಯ ಎರಡು ಯುದ್ಧಹಡಗುಗಳು ದ್ವೀಪದ ಪಪೀಟ್ ವಲಯದ ಮೇಲೆ ಆಕ್ರಮಣ ನಡೆಸಿದವು. ಫ್ರೆಂಚ್ ಬಂದೂಕುದೋಣಿ ಹಾಗೂ ಮುತ್ತಿಗೆ ಹಾಕಿ ಹಿಡಿಯಲಾದ ಜರ್ಮನ್ ಸರಕು ಹಡಗು ಸಹ ಬಂದರಿನಲ್ಲಿ ಮುಳುಗಿಸಲಾಯಿತು. ಜರ್ಮನಿಯ ಎರಡು ಯುದ್ಧ ಹಡಗುಗಳು ಈ ವಸಾಹತಿನ ಮೇಲೆ ಗುಂಡು ಹಾರಿಸಿದವು. 1966ರಿಂದ 1996ರ ತನಕ, ಫ್ರೆಂಚ್ ಸರ್ಕಾರವು ಮೊರುರೊವಾ ಮತ್ತು ಫಂಗಟಾವುಫಾ ಅಡಲುಗಳ ಮೇಲೆ ಹಾಗೂ ಕೆಳಗೆ 193 ಪರಮಾಣು ಬಾಂಬ್ ಪರೀಕ್ಷೆಗಳನ್ನು ನಡೆಸಿತು. 1996ರ ಜನವರಿ 27ರಂದು ಕೊನೆಯ ಪರೀಕ್ಷೆ ನಡೆಸಲಾಯಿತು.[೯]
ರಾಜಕೀಯ
ಬದಲಾಯಿಸಿಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(August 2010) |
ಟಹೀಟಿಯನ್ನರು ಫ್ರೆಂಚ್ ನಾಗರಿಕರಾಗಿದ್ದು, ಎಲ್ಲಾ ನಾಗರಿಕ ಮತ್ತು ರಾಜಕೀಯ ಹಕ್ಕು ಹೊಂದಿದ್ದಾರೆ. ಫ್ರೆಂಚ್ ಅಧಿಕೃತ ಭಾಷೆಯಾಗಿದ್ದರೂ, ಟಹೀಟಿಯನ್ ಭಾಷೆ ಮತ್ತು ಫ್ರೆಂಚ್ ಭಾಷೆಯೂ ಸಹ ಚಾಲ್ತಿಯಲ್ಲಿದೆ. ಆದರೂ, 1960ರ ಹಾಗೂ 1970ರ ದಶಕಗಳ ಕಾಲದಲ್ಲಿ ಶಾಲೆಗಳಲ್ಲಿ ಟಹೀಟಿಯನ್ ಭಾಷೆ ಮಾತನಾಡುವುದರ ಮೇಲೆ ನಿರ್ಬಂಧ ಹೇರಲಾಗಿತ್ತು. ಈಗ ಮನೋಭಾವವು ಬದಲಾಗಿದ್ದು, ಟಹೀಟಿಯನ್ ಭಾಷೆಯನ್ನು ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಅಲ್ಲಿ ಉದ್ಯೋಗ ಅರಸುವವರಿಗೆ ಇದು ಅಗತ್ಯವಾಗಿದೆ.
ಟಹೀಟಿ ಫ್ರೆಂಚ್ ಪಾಲಿನೇಷ್ಯಾದ ಅಂಗವಾಗಿದೆ. ಫ್ರೆಂಚ್ ಪಾಲಿನೇಷ್ಯಾ ಫ್ರ್ಯಾನ್ಸ್‌ನ ಅರೆ-ಸ್ವಯಮಾಧಿಕಾರದ ಪ್ರಾಂತ್ಯವಾಗಿದ್ದು, ತನ್ನದೇ ಆದ ವಿಧಾನ ಸಭೆ, ರಾಷ್ಟ್ರಾಧ್ಯಕ್ಷ, ಮುಂಗಡ ಪತ್ರಗಳು ಮತ್ತು ಕಾನೂನುಗಳಿವೆ. ಫ್ರ್ಯಾನ್ಸ್‌ನ ಪ್ರಭಾವವು ಕೇವಲ ಅನುದಾನಗಳು, ಶಿಕ್ಷಣ ಹಾಗೂ ಭದ್ರತಾ ಕ್ಷೇತ್ರಗಳಿಗೆ ಸೀಮಿತವಾಗಿದೆ. ಫ್ರ್ಯಾನ್ಸ್‌ನಿಂದ ಸಂಪೂರ್ಣ ಸ್ವಾತಂತ್ರ್ಯ ಪಡೆಯಬೇಕೆಂದು ಫ್ರೆಂಚ್ ಪಾಲಿನೇಷ್ಯಾದ ಮಾಜಿ ರಾಷ್ಟ್ರಾಧ್ಯಕ್ಷ ಆಸ್ಕರ್ ಟೆಮಾರೂ ಬಯಸುತ್ತಾರೆ. ಆದರೆ ಕೇವಲ 20%ರಷ್ಟು ಜನರು ಮಾತ್ರ ಇದರ ಪರವಾಗಿ ನಿಂತಿದ್ದಾರೆ.
ಎರಡನೆಯ ಫ್ರ್ಯಾನ್ಸ್-ಒಷೀನ್ಯಾ ಶೃಂಗಸಭೆಯ ಅಂಗವಾಗಿ, 2006ರ ಜೂನ್ 26ರಂದು ನಡೆದ ಸುದ್ದಿಗೋಷ್ಠಿಯಲ್ಲಿ, ಟಹೀಟಿಯನ್ನರಲ್ಲಿ ಬಹಳಷ್ಟು ಜನರು ಸ್ವಾತಂತ್ರ್ಯ ಬಯಸುವರು ಎಂದು ತಮಗನಿಸುತ್ತಿಲ್ಲ ಎಂದು ಅಂದಿನ ಫ್ರೆಂಚ್ ರಾಷ್ಟ್ರಾಧ್ಯಕ್ಷ ಜಾಕ್ಸ್ ಚಿರಾಕ್ ಹೇಳಿದರು. ಇನ್ನು ಮುಂದೆ ಇದಕ್ಕೆ ಸಂಬಂಧಿತ ಜನಮತಸಂಗ್ರಹಕ್ಕೂ ಅವಕಾಶವಿದೆ ಎಂದರು.
2004ರ ಮೇ 23ರಂದು ಫ್ರೆಂಚ್ ಪಾಲಿನೇಷ್ಯಾ ಶಾಸನಸಭೆ ಹಾಗೂ ಫ್ರೆಂಚ್ ಪಾಲಿನೇಷ್ಯಾದ ಪ್ರಾಂತೀಯ ಶಾಸನಸಭೆಗಾಗಿ ಚುನಾಚಣೆಗಳು ನಡೆದವು (ಫ್ರೆಂಚ್ ಪಾಲಿನೇಷ್ಯನ್ ಶಾಸನಸಭಾ ಚುನಾವಣೆ, 2004 ನೋಡಿ). ಬಹಳಷ್ಟು ಚಕಿತಗೊಳಿಸುವ ಫಲಿತಾಂಶದಲ್ಲಿ, ಆಸ್ಕರ್ ಟೆಮರೂ ಮುಂದಾಳುತ್ವದ, ಸ್ವಾತಂತ್ರ್ಯಪರ ಪ್ರಗತಿಪರ ಸಮ್ಮಿಶ್ರ ಕೂಟವು ಸರ್ಕಾರ ರಚಿಸಿತು. 57 ಸ್ಥಾನಗಳುಳ್ಳ ಸಂಸತ್ತಿನಲ್ಲಿ, ಗ್ಯಾಸ್ಟನ್ ಫ್ಲಾಸ್ ಮುಂದಾಳುತ್ವದ ಸಂಪ್ರದಾಯವಾದಿ ಪಕ್ಷವನ್ನು ಹಿಂದಿಕ್ಕಿ, ಒಂದು ಸ್ಥಾನದ ಬಹುಮತ ಗಳಿಸಿತು (ಫ್ರೆಂಚ್ ಪಾಲಿನೇಷ್ಯಾದ ರಾಜಕೀಯ ಪಕ್ಷಗಳ ಪಟ್ಟಿ ನೋಡಿ. 2004ರ ಅಕ್ಟೊಬರ್ 8ರಂದು, ವಿರೋಧ ಪಕ್ಷದ ಫ್ಲಾಸ್ ಸರ್ಕಾರದ ವಿರುದ್ಧ ಅನಂಗೀಕಾರ ಪ್ರಸ್ತಾಪ ಸಲ್ಲಿಸುವಲ್ಲಿ ಸಫಲರಾದರು. ಇದರಿಂದಾಗಿ ಬಿಕ್ಕಟ್ಟು ಉಂಟಾಯಿತು. ರಾಜಕೀಯ ಬಿಕ್ಕಟ್ಟಿನಲ್ಲಿ, ಫ್ರ್ಯಾನ್ಸ್‌ನ ರಾಷ್ಟ್ರೀಯ ಸರ್ಕಾರವು ತಮ್ಮ ಆಧಿಕಾರಗಳನ್ನು ಬಳಸಿ, ಸ್ಥಳೀಯ ಆಡಳಿತದಲ್ಲಿ ಹೊಸದಾಗಿ ಚುನಾವಣೆಗಳನ್ನು ಘೋಷಿಸಬೇಕೇ ಎಂಬುದು ವಿವಾದವನ್ನುಂಟು ಮಾಡಿದೆ.
ಜನಸಂಖ್ಯಾ ವಿವರಣೆ
ಬದಲಾಯಿಸಿಸ್ಥಳೀಯ ಟಹೀಟಿಯನ್ನರು ಪಾಲಿನೇಷ್ಯನ್ ವಂಶಸ್ಥರಾಗಿದ್ದಾರೆ. ಜನಸಂಖ್ಯೆಯಲ್ಲಿ ಯುರೋಪಿಯನ್ನರೊಂದಿಗೆ ಇವರು 70%ರಷ್ಟಿದ್ದಾರೆ. ಪೂರ್ವ ಏಷ್ಯನ್ನರು (ಬಹಳಷ್ಟು ಚೀನೀಯರು ಮತ್ತು ಕೆಲವೊಮ್ಮೆ ಡೆಮಿಸ್ ಎನ್ನಲಾದ ಮಿಶ್ರಿತ ಜನಾಂಗದವರು ಇದರಲ್ಲಿ ಸೇರಿದ್ದಾರೆ. ಫ್ರೆಂಚ್ ಪಾಲಿನೇಷ್ಯಾದ ಜನಸಂಖ್ಯೆಯಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿರುವವರು ಇವರೇ. ಫ್ರ್ಯಾನ್ಸ್ ನಗರವಲಯ ಮೂಲದ ಜನರು ಪಪೀಟ್ ಹಾಗೂ ಅದರ ಹೊರವಲಯಗಳಲ್ಲಿ ವಾಸಿಸುವರು. ಪುನಾವುಯಿಯಾದ ಜನಸಂಖ್ಯೆಯ 20%ರಷ್ಟು ಪಾಲು ಇವರದ್ದೇ ಆಗಿದೆ. [ಸೂಕ್ತ ಉಲ್ಲೇಖನ ಬೇಕು]
ಐತಿಹಾಸಿಕ ಜನಸಂಖ್ಯೆಗಳು
ಬದಲಾಯಿಸಿ1767 | 1797 | 1848 | 1897 | ೧೯೧೧ | 1921 | 1926 | 1931 | 1936 | 1941 | |||
---|---|---|---|---|---|---|---|---|---|---|---|---|
50,000[೧೦] to 200,000[೧೧] |
16,000[೧೦] | | $1,600 | 10,750 | 11,800 | 11,700 | 14,200 | 16,800 | 19,000 | 23,100 | |||
1951 | 1956 | 1962 | 1971 | 1977 | 1983 | 1988 | 1996 | 2002 | 2007 | |||
30,500 | 38,100 | 45,400 | 79,494 | 95,604 | 115,820 | 131,309 | 150,721 | 169,674 | 178,133 | |||
ಹಿಂದಿನ ಜನಗಣತಿಗಳಿಂದ ಪ್ರಾಪ್ತ ಅಧಿಕೃತ ಅಂಕಿಗಳು.[೧][೧೨][೧೩][೧೪][೧೫][೧೬] |
ಆರ್ಥಿಕ ಸ್ಥಿತಿ
ಬದಲಾಯಿಸಿಟಹೀಟಿಯಲ್ಲಿ, ಅದರಲ್ಲೂ ವಿಶಿಷ್ಟವಾಗಿ ಬೊರಾ ಬೊರಾ ಮತ್ತು ಮೂರಿಯಾ ದ್ವೀಪಗಳಲ್ಲಿ ಪ್ರವಾಸೋದ್ಯಮವು ಅತಿಗಮನಾರ್ಹ ಉದ್ದಿಮೆಯಾಗಿದೆ.
ಜುಲೈ ತಿಂಗಳಲ್ಲಿ ಪಪೀಟ್‌ನಲ್ಲಿ ನಡೆಯುವ ಹೇಯ್ವಾ ಉತ್ಸವದಲ್ಲಿ ಪಾಲಿನೇಷ್ಯನ್ ಸಂಸ್ಕೃತಿಯನ್ನು ನಿರೂಪಿಸಲಾಗುತ್ತದೆ, ಹಾಗೂ ಪ್ಯಾರಿಸ್‌ನ ಬ್ಯಾಸ್ಟಿಲ್ ಮುತ್ತಿಗೆಯನ್ನೂ ಸಹ ಸ್ಮರಿಸಲಾಗುತ್ತದೆ.
1963ರಲ್ಲಿ ಸಿಇಪಿ (ಸೆಂಟ್ರ್ ಡಿ'ಎಕ್ಸ್‌ಪೆರಿಮೆಂಟೆಷನ್ ಡು ಪೆಸಿಫಿಕ್) ಸ್ಥಾಪನೆಯ ನಂತರ, ಫ್ರೆಂಚ್ ಪಾಲಿನೇಷ್ಯಾದಲ್ಲಿ ಜೀವನದ ಗುಣಮಟ್ಟವು ಗಮನಾರ್ಹವಾಗಿ ಉತ್ತಮವಾಯಿತು. ಹಲವು ಪಾಲಿನೇಷ್ಯನ್ನರು ಸಾಂಪ್ರಾಯಿಕ ಚಟುವಟಿಕೆಗಳನ್ನು ಕೈಬಿಟ್ಟು, ಪಪೀಟ್ ನಗರವಲಯಕ್ಕೆ ವಲಸೆ ಹೋದರು. ಫ್ರ್ಯಾನ್ಸ್ ದೇಶದ ನೇರ ವಿದೇಶಿ ಬಂಡವಾಳ(ಎಫ್‌ಡಿಐ)ದ ಕಾರಣ ಟಹೀಟಿಯನ್ನರ ಜೀವನದ ಗುಣಮಟ್ಟವು ಉನ್ನತವಾದರೂ, ಇದರ ಆರ್ಥಿಕತೆಯು ಆಮುದುಗಳನ್ನು ಅವಲಂಬಿಸಿದೆ. ಸಿಇಪಿ ಚಟುವಟಿಕೆಗಳು ಸ್ಥಗಿತಗೊಂಡ ನಂತರ, ಹಣಕಾಸಿನ ಸಂಪನ್ಮೂಲಗಳ ನಷ್ಟವನ್ನು ಬಗೆಹರಿಸಲು, ಫ್ರ್ಯಾನ್ಸ್ ಟಹೀಟಿಯೊಂದಿಗೆ ಪ್ರಗತಿ ಕರಾರಿಗೆ ಸಹಿ ಹಾಕಿತು. ಇದರಂತೆ, ಶಿಕ್ಷಣ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ನೆರವು, ಜೊತೆಗೆ 2006ರ ಆರಂಭಿಸಿ, ಪ್ರತ ವರ್ಷ 150 ದಶಲಕ್ಷ ಅಮೆರಿಕನ್ ಡಾಲರ್‌ಗಳಷ್ಟು ಬಂಡವಾಳವನ್ನು ಟಹೀಟಿಯಲ್ಲಿ ಹೂಡುವ ಯೋಜನೆಯಿದೆ.
ಟಹೀಟಿಯ ಮುಖ್ಯ ವ್ಯವಹಾರ ಪಾಲುದಾರರೆಂದರೆ ಫ್ರ್ಯಾನ್ಸ್ (ಸುಮಾರು 40%ರಷ್ಟು ಆಮುದುಗಳು ಹಾಗೂ 25%ರಷ್ಟು ರಫ್ತುಗಳು). ಇತರೆ ದೇಶಗಳೆಂದರೆ ಅಮೆರಿಕಾ ಸಂಯುಕ್ತ ಸಂಸ್ಥಾನಗಳು, ಜಪಾನ್, ಆಸ್ಟ್ರೇಲಿಯಾ ಹಾಗೂ ನ್ಯೂಜೀಲೆಂಡ್.
ಕಪ್ಪು ಮುತ್ತು ಕೃಷಿಯೂ ಸಹ ಆದಾಯದ ಗಮನಾರ್ಹ ಮೂಲವಾಗಿದೆ. ಬಹಳಷ್ಟು ಮುತ್ತುಗಳು ಜಪಾನ್, ಯುರೋಪ್ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳಿಗೆ ರಫ್ತಾಗುತ್ತವೆ. ವೆನಿಲ, ಹಣ್ಣುಗಳು, ಹೂವುಗಳು, ಮೊನೊಯಿ, ಮೀನುಗಳು, ಕೊಬ್ಬರಿ ಎಣ್ಣೆ ಹಾಗೂ ನೊನಿ ಟಹೀಟಿಯಿಂದ ರಫ್ತಾಗುತ್ತವೆ.
ನಿರುದ್ಯೋಗಿತನದಿಂದಾಗಿ 13%ರಷ್ಟು ಸಕ್ರಿಯ ಜನಸಂಖ್ಯೆ, ಇದರಲ್ಲಿ ವಿಶಿಷ್ಟವಾಗಿ ಮಹಿಳೆಯರು ಹಾಗೂ ಅರ್ಹತೆ ಗಳಿಸಿರದ ಯುವಜನರು ಸಮಸ್ಯೆ ಎದುರಿಸುತ್ತಿದ್ದಾರೆ.
ಟಹೀಟಿಯ ಹಣಕಾಸು ವ್ಯವಸ್ಥೆ(ಕರೆನ್ಸಿ)ಯನ್ನು ಫ್ರೆಂಚ್ ಪೆಸಿಫೀಕ್ ಫ್ರ್ಯಾಂಕ್ (ಸಿಎಫ್‌ಪಿ, ಇದನ್ನು ಎಕ್ಸ್‌ಪಿಎಫ್ ಎಂದೂ ಕರೆಯಲಾಗಿದೆ). ಒಂದು ಸಿಎಫ್‌ಪಿ ಎಂದರೆ ಸರಿಸುಮಾರು 0.00838 ಯುರೋಗಳಷ್ಟಕ್ಕೆ ಸಮಾನವಾಗಿದೆ.
2008ರ ಜನವರ ತಿಂಗಳಲ್ಲಿ ಒಂದು ಅಮೆರಿಕನ್ ಡಾಲರ್ 81 ಸಿಎಫ್‌ಪಿಗಳಿಗೆ ಸಮಾನವಾಗಿತ್ತು. ಹೋಟೆಲ್‌ಗಳು ಮತ್ತು ಹಣಕಾಸು ಸಂಸ್ಥೆಗಳು ವಿನಿಮಯ ಸೇವೆಗಳನ್ನು ಒದಗಿಸುತ್ತವೆ.
ಟಹೀಟಿಯಲ್ಲಿ ಮಾರಾಟ ತೆರಿಗೆಯನ್ನು ಇಂಗ್ಲಿಷ್ ಭಾಷೆಯಲ್ಲಿ ಟಿವಿಎ ಅಥವಾ ವಿ.ಎ.ಟಿ. ಎನ್ನಲಾಗುತ್ತದೆ. 2009ರಲ್ಲಿ, ಪ್ರವಾಸಿ ಸೇವೆಗಳ ಮೇಲೆ 10% ಹಾಗೂ ಹೋಟೆಲ್‌ಗಳು, ಸಣ್ಣಪ್ರಮಾಣದ ವಿಶ್ರಾಂತಿ ಮನೆಗಳು, ಆಹಾರ ಮತ್ತು ಪಾನೀಯಗಳ ಮೇಲೆ 6%ರಷ್ಟು ವಿ.ಎ.ಟಿ. ವಿಧಿಸಲಾಗಿದೆ. ಸರಕು ಮತ್ತು ಉತ್ಪನ್ನಗಳ ಖರೀದಿಯ ಮೆಲೆ 16% ವಿ.ಎ.ಟಿ. ಉಂಟು.
ಸಂಸ್ಕೃತಿ
ಬದಲಾಯಿಸಿಟಹೀಟಿಯನ್ ಸಂಸ್ಕೃತಿಗಳಲ್ಲಿ, ವಿವಿಧ ದೇವತೆಗಳ ಪುರಾಣ ಕಥೆಗಳು ಮತ್ತು ನಂಬಿಕೆಗಳನ್ನು ತಿಳಿಸುವ ಮೌಖಿಕ ಕಥೆಗಳ ಪರಂಪರೆಗಳು ಹಾಗೂ, ಹಚ್ಚೆ ಹಾಕುವುದು ಹಾಗೂ ಮಾರ್ಗಸೂಚಿಸುವಿಕೆಯಂತಹ ಪ್ರಾಚೀನ ಸಂಪ್ರದಾಯಗಳನ್ನು ಒಳಗೊಂಡಿದೆ. ಜುಲೈ ತಿಂಗಳಲ್ಲಿ ನಡೆಯುವ ಹೇಯ್ವಾ ಉತ್ಸವವು ಸಾಂಪ್ರದಾಯಿಕ ಸಂಸ್ಕೃತಿ, ನೃತ್ಯ, ಸಂಗೀತ ಹಾಗೂ ಕ್ರೀಡೆಗಳನ್ನು ಒಳಗೊಳ್ಳುವ ಉತ್ಸವವಾಗಿದೆ. ಕ್ರೀಡೆಗಳಲ್ಲಿ, ಬಂಕವುಳ್ಳ ಆಧುನಿಕ ಓಡುದೋಣಿ(ವಾ'ಆ)ಗಳಲ್ಲಿ, ಫ್ರೆಂಚ್ ಪಾಲಿನೇಷ್ಯಾ ದ್ವೀಪಗಳ ನಡುವೆ, ಹೆಚ್ಚುದೂರದ ಓಟ ಸ್ಪರ್ಧೆ ಸೇರಿದೆ.
ಫ್ರೆಂಚ್ ಕಲಾವಿದ ಪಾಲ್ ಗಾಗ್ವಿನ್ (1848-1903)ನ ಚಿತ್ರಕಾಲೃತಿಗಳನ್ನು ಟಹೀಟಿಯಲ್ಲಿರುವ ಪಾಲ್ ಗಾಗ್ವಿನ್ ವಸ್ತು ಪ್ರದರ್ಶನಾಲಯದಲ್ಲಿಡಲಾಗಿದೆ. ಈತನ ಚಿತ್ರಕಲಾಕೃತಿಗಳಲ್ಲಿ ಟಹೀಟಿಯನ್ ವಿಮೆನ್ ಆನ್ ದಿ ಬೀಚ್ ' ಹಾಗೂ ವೇರ್ ಡು ವಿ ಕಮ್ ಫ್ರಮ್? ' ಬಹಳ ಪ್ರಸಿದ್ಧವಾಗಿವೆ. ವಾಟ್ ಆರ್ ವಿ? ವೇರ್ ಆರ್ ವಿ ಗೊಯಿಂಗ್? ಇವು ಸಹ ಪ್ರಸಿದ್ಧವಾಗಿವೆ.
ಕೇವಲ ಮುತ್ತುಗಳ ಪ್ರದರ್ಶನಕ್ಕಾಗಿ ವಿಶಿಷ್ಟವಾಗಿರುವ ರಾಬರ್ಟ್ ವಾನ್ ಪರ್ಲ್ ವಸ್ತು ಪ್ರದರ್ಶನಾಲಯವು ವಿಶ್ವದ ಏಕೈಕ ವಸ್ತು ಪ್ರದರ್ಶನಾಲಯವಾಗಿದೆ. ಸ್ಥಳೀಯ ಕಲೆಗಳು ಮತ್ತು ಕೃತಿಗಳು ಪಪೀಟ್ ಮಾರುಕಟ್ಟೆಯಲ್ಲಿ ಲಭ್ಯ.
ನೃತ್ಯ
ಬದಲಾಯಿಸಿವಿಶ್ವ-ಪ್ರಸಿದ್ಧ ಟಹೀಟಿಯನ್ ನೃತ್ಯವು ಈ ದ್ವೀಪದ ಬಹಳಷ್ಟು ಚಿರಪರಿಚಿತ ಚಿತ್ರಣವಾಗಿದೆ. ʻōteʻa (ಒಟಿಯಾ) ಕೆಲವೊಮ್ಮೆ otea ಎನ್ನಲಾದ ಟಹೀಟಿಯನ್ ಸಾಂಪ್ರದಾಯಿಕ ನೃತ್ಯದಲ್ಲಿ, ನೃತ್ಯ ಕಲಾವಿದರು ಹಲವು ಪಂಕ್ತಿಗಳಲ್ಲಿ ನಿಂತು ವಿವಿಧ ಭಂಗಿ ನೀಡುವರು. ಹುಲ್ಲಿನ ಲಂಗ ಧರಿಸಿ ನಡುವನ್ನು ವೇಗವಾಗಿ ಅಲುಗಾಡಿಸುವುದು ಈ ನೃತ್ಯದ ಗಮನಾರ್ಹ ವೈಶಿಷ್ಟ್ಯ. ಈ ನೃತ್ಯವನ್ನು ಹವಾಯಿ ಜನರ ಹುಲಾದೊಂದಿಗೆ ಹೋಲಿಸಿ ಗೊಂದಲವಾಗುವುದುಂಟು. ಹವಾಯಿಯನ್ ನೃತ್ಯದಲ್ಲಿ ಇನ್ನಷ್ಟು ನಿಧಾನಗತಿ ಹಾಗೂ ಆಕರ್ಷಕವಾಗಿ ಕುಣಿದು, ನಡುವಿನ ಬದಲು ಕೈಗಳು ಮತ್ತು ಕಥೆ ಹೇಳುವುದರ ಮೂಲಕ ಗಮನ ಸೆಳೆಯಲಾಗುತ್ತದೆ.
ಒಟಿಯಾ ಎಂಬುದು ಯುರೋಪೀಯ ಪೂರ್ವ ಕಾಲದಲ್ಲಿಯೂ ಸಹ, ಪುರುಷರ ನೃತ್ಯ ರೂಪದಲ್ಲಿ ಚಾಲ್ತಿಯಲ್ಲಿತ್ತು. ಇನ್ನೊಂದೆಡೆ, ಹುರಾ (ಹುಲಾದ ಟಹೀಟಿಯನ್ ಸ್ಥಳೀಯ ಭಾಷಾ ಅರ್ಥ) ಎಂಬ ಸ್ತ್ರೀಯರ ನೃತ್ಯಕಲೆಯು ಮಾಯವಾಗಿದೆ. ಜೋಡಿಗಳ ನೃತ್ಯ 'ಉಪಾ'ಉಪಾ ಸಹ ಮಾಯವಾಗಿದೆ, ಆದರೆ ಇದು ಟಾಮೂರೇ ಎಂಬ ನೃತ್ಯದ ಮೂಲಕ ಪುನಃ ಆರಂಭಗೊಂಡಿದೆ. ಆದರೂ, ಈ ನಡುವೆ, ಒಟಿಯಾದ ನೃತ್ಯವು ಎರಡು ವಿಭಿನ್ನ ರೂಪಗಳಲ್ಲಿವೆ. ಪುರುಷರು ಒಟಿಯಾ ಟಾನೆ ನೃತ್ಯ ಹಾಗೂ ಸ್ತ್ರೀಯರು ಒಟಿಯಾ ವಹಿನೆ ನೃತ್ಯ ಮಾಡುವರು. ಇಬ್ಬರೂ ಒಟ್ಟಿಗೆ ಮಾಡುವ ನೃತ್ಯವನ್ನು ಒಟಿಯಾ ಆಮುಯಿ (ಸಂಯುಕ್ತ) ಎನ್ನಲಾಗುತ್ತದೆ. ಈ ನೃತ್ಯದಲ್ಲಿ ಕೇವಲ ಡ್ರಮ್ಸ್ ಸಹಿತದ ಸಂಗೀತ ಮಾತ್ರ, ಹಾಡುಗಾರಿಕೆಯಿರುವುದಿಲ್ಲ. ಡ್ರಮ್ ವಾದ್ಯವು ಟೊಎರೆ ಎಂಬ ಮರದ ವಿವಿಧ ರೀತಿಗಳಲ್ಲಿ ಒಂದು ಎನ್ನಲಾಗಿದೆ. ಅಕ್ಷೀಯ ಸೀಳು ಹೊಂದಿರುವ ಮರದ ತುಂಡಿನ ಮೇಲೆ ಒಂದು ಅಥವಾ ಎರಡು ಕೋಲುಗಳಿಂದ ಲಯಬದ್ಧವಾಗಿ ಹೊಡೆದು ನುಡಿಸಲಾಗುವುದು. ಅಥವಾ, ಇದು ಪಹು - ಪ್ರಾಚೀನ ಕಾಲದ ನಿಲ್ಲುವಿಕೆಯ ಟಹೀಟಿಯನ್ ಡ್ರಮ್ ವಾದ್ಯವಾಗಿದ್ದು. ಇದಕ್ಕೆ ಷಾರ್ಕ್ ಮೀನಿನ ಚರ್ಮದ ಹೊದಿಕೆಯ ಕವಚವಿರುತ್ತದೆ. ಈ ಡ್ರಮ್‌ಗಳನ್ನು ಕೈಯಿಂದಲೋ ಅಥವಾ ಕೋಲುಗಳಿಂದಲೋ ಲಯಬದ್ಧವಾಗಿ ಹೊಡೆಯಬಹುದು. ಟೊಎರೆಯ ಲಯವು ವೇಗವಾಗಿರುತ್ತದೆ, ಪಹುವಿನ ಲಯವು ನಿಧಾನವಾಗಿರುತ್ತದೆ. ಫಾಆಟೆಟೆ ಎಂಬ ಇನ್ನೂ ಸಣ್ಣ ಪ್ರಮಾಣದ ಡ್ರಮ್ ವಾದ್ಯವನ್ನೂ ಸಹ ಬಳಸಬಹುದಾಗಿದೆ.
ನೃತ್ಯ ಕಲಾವಿದರು ದೈನಿಕ ಜೀವನದ ಕಸುಬುಗಳನ್ನು ಸನ್ನೆಗಳ ಮೂಲಕ ನಿರೂಪಿಸುವರು. ಪುರುಷರಿಗಾಗಿ ಯುದ್ಧ ಅಥವಾ ಸಾಗರಯಾನದಂತಹ ವಿಷಯಗಳನ್ನು ಆಯ್ದುಕೊಳ್ಳಲಾಗುತ್ತದೆ. ಆಗ ಅವರು ಈಟಿ ಮತ್ತು ದೋಣಿ ಚಲಾಯಿಸುವ ಮೋಟು ಹುಟ್ಟುಗಳನ್ನು ಬಳಸಬಹುದು.
ಸ್ತ್ರೀಯರಿಗಾಗಿ, ವಿಷಯಗಳು ಗೃಹಕ್ಕೆ ಅಥವಾ ಪ್ರಕೃತಿಗೆ ಸನಿಹದ ವಿಷಯಗಳನ್ನು ಆಯ್ದುಕೊಳ್ಳಲಾಗುತ್ತದೆ. ತಲೆಗೂದಲು ಬಾಚಿಕೊಳ್ಳುವುದು, ಅಥವಾ ಚಿಟ್ಟೆಯ ಹಾರಾಟವನ್ನು ನಿರೂಪಿಸಬಹುದು. ಆದರೂ, ಇನ್ನಷ್ಟು ವಿವರಣಾತ್ಮಕ ವಿಷಯಗಳನ್ನು ಸಹ ಆಯ್ದುಕೊಳ್ಳಬಹುದು. ಉದಾಹರಣೆಗೆ, ನೃತ್ಯ ಕಲಾವಿದರು ಟಹೀಟಿಯ ನಕ್ಷೆಯಲ್ಲಿ ಕುಣಿದು, ಪ್ರಮುಖ ಸ್ಥಳಗಳನ್ನು ನಿರೂಪಿಸಬಹುದು. ಸರಿಯಾದ ರೀತಿಯಲ್ಲಿ ನರ್ತಿಸಲಾದ ಒಟಿಯಾ ನೃತ್ಯದಲ್ಲಿ, ವಿಷಯದ ಕಥೆಯು ಇಡೀ ನೃತ್ಯದುದ್ದಕ್ಕೂ ನಡೆಯಬೇಕು.
ನೌಕಾಯಾನದಲ್ಲಿನ ಬಳಕೆ
ಬದಲಾಯಿಸಿಸ್ಥಳೀಯ ಟಹೀಟಿಯನ್ನರು ಪಾಲಿನೇಷ್ಯನ್ನರಾಗಿರುವುದರಿಂದ, ಇವು ಒಷೀನ್ಯಾ ಜನಾಂಗದವರಾಗಿರುತ್ತಾರೆ. ಅವರ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ನೌಕಾಯಾನ ಕುಶಲತೆಯೂ ಸೇರಿದೆ. ತಮ್ಮ ಕಡಲ ಪರಿಸರದಲ್ಲಿ ಇದು ವಾಣಿಜ್ಯ ವ್ಯವಹಾರ ಮತ್ತು ಸಂವಹನದಲ್ಲಿ ಬಹಳಷ್ಟು ಮುಖ್ಯವಾಗಿದೆ.
ಪಾಲಿನೇಷ್ಯನ್ ನೌಕಾಯಾನದಲ್ಲಿ, ರಾತ್ರಿಯ ವೇಳೆ ಆಕಾಶದಲ್ಲಿ ಟಹೀಟಿಯ ಮೇಲಿನ ಸಿರಿಯಸ್ ನಕ್ಷತ್ರವನ್ನು, ಮುಕ್ತ ಸಾಗರ ಯಾನಗಳಲ್ಲಿ ಸಾಂಪ್ರದಾಯಿಕ ಪಧಶೋಧನಾ ಮಾರ್ಗದರ್ಶಕ ಎನ್ನಲಾಗಿದೆ.
ಶಿಕ್ಷಣ
ಬದಲಾಯಿಸಿಫ್ರೆಂಚ್ ಪಾಲಿನೇಷ್ಯಾ ವಿಶ್ವವಿದ್ಯಾನಿಲಯವು ಟಹೀಟಿಯಲ್ಲಿನ ಫ್ರೆಂಚ್ ವಿಶ್ವವಿದ್ಯಾನಿಲಯವಾಗಿದೆ.
ಇದು ಬೆಳೆಯುತ್ತಿರುವ ವಿಶ್ವವಿದ್ಯಾನಿಲಯವಾಗಿದ್ದು, 2,000 ವಿದ್ಯಾರ್ಥಿಗಳು ಹಾಗೂ 60 ಸಂಶೋಧಕರು ಇಲ್ಲಿದ್ದಾರೆ. ಕಾನೂನು, ವಾಣಿಜ್ಯ, ವಿಜ್ಞಾನ ಮತ್ತು ಸಾಹಿತ್ಯದಂತ ಪಠ್ಯಕ್ರಮಗಳು ಇಲ್ಲಿ ಲಭ್ಯ.
ಸಾರಿಗೆ
ಬದಲಾಯಿಸಿಫಾ'ಆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಟಹೀಟಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಏರ್ ಟಹೀಟಿ ನುಯಿ ರಾಷ್ಟ್ರೀಯ ವಿಮಾನಯಾನ ಸೇವಾ ಸಂಸ್ಥೆಯಾಗಿದ್ದು, ಏರ್ ಟಹೀಟಿ ಅಂತರ-ದ್ವೀಪ ವಿಮಾನಯಾನಗಳಿಗೆ ಮುಖ್ಯ ವಿಮಾನಯಾನ ಸೇವಾ ಸಂಸ್ಥೆಯಾಗಿದೆ. ಮೂರಿಯಾ ಫೆರಿ ಪಪೀಟ್‌ನಿಂದ ಸಾಗರಯಾನ ಸೇವೆ ಒದಗಿಸುವ ಪ್ರಮುಖ ಹಡಗು. ಜನರು ಮತ್ತು ಸರಕು ಸಾಗಿಸಲು ದ್ವೀಪಗಳಾದ್ಯಂತ ಹಲವು ದೋಣಿಗಳಿವೆ.
ಕ್ರೀಡೆ
ಬದಲಾಯಿಸಿರಗ್ಬಿ ಯೂನಿಯನ್ ಟಹೀಟಿಯಲ್ಲಿ ಜನಪ್ರಿಯ ಕ್ರೀಡೆಯಾಗಿದೆ.
ಚಿತ್ರ ಸಂಪುಟ
ಬದಲಾಯಿಸಿ-
ಟಹೀಟಿಯ ಉಪಗ್ರಹ ಚಿತ್ರಣ
-
ರಾಹುರಾಹು ಮರೇಯಲ್ಲಿ ಕೆತ್ತನೆಯ ಆಕೃತಿಗಳು
-
ವಾರ್ಷಿಕ ಹೇವಾ ಉತ್ಸವದ ಅಂಗವಾಗಿ ಈಟಿ ಎಸೆತ
-
ಟಹೀಟಿಯ ಮುಖ್ಯ ದೇವತೆಯಾದ 'ಒರೊ ಪವಿತ್ರವಾದ ನೂತ ಕವಚ
-
ಮತಪ್ರಚಾರಕ ಉಡುಪಿನಲ್ಲಿ ಟಹೀಟಿಯನ್ ಯುವತಿಯರು
-
ಅಲ್ಫ್ರೆಡ್ ಥಾಮಸ್ ಅಗೇಟ್ ಕೆತ್ತನೆ ಮಾಡಿದ ಹಾವೂ ಧರಿಸಿರುವ ಟಹೀಟಿಯನ್ ಬಾಲಕಿ
-
1774ರ ಕಾಲದ ಟಹೀಟಿಯನ್ ಯುದ್ಧದ ತೋಡುದೋಣಿ
-
ಟರವಾವರ್
-
ಏರ್ ಟಹೀಟಿ ನುಯಿ, ರಾಷ್ಟ್ರೀಯ ವಿಮಾನಯಾನ ಸೇವಾ ಸಂಸ್ಥೆ
-
ಪಾಪಾ-ಒವಾದಲ್ಲಿರುವ 1842ರ ಕಾಲದ ಎರಡನೆಯ ಪೊಮರೆಯ ಗೋರಿ
ಇವನ್ನೂ ಗಮನಿಸಿ
ಬದಲಾಯಿಸಿ- ದತ್ತು ತೆಗೆದುಕೊಳ್ಳುವಿಕೆಯಲ್ಲಿ ಸಾಂಸ್ಕೃತಿಕ ವಿಭಿನ್ನತೆಗಳು#ಪಾಲಿನೇಷ್ಯಾ
- ಪಾಲಿನೇಷ್ಯಾದ ಜ್ವಾಲಾಮುಖಿಗಳ ಪಟ್ಟಿ
- ಟಹೀಟಿಯ ಸಂಗೀತ
- ಪರಮಾಣು-ಮುಕ್ತ ವಲಯ
- ಫ್ರೆಂಚ್ ಪಾಲಿನೇಷ್ಯಾದ ಅಂಚೆ ಚೀಟಿಗಳು ಮತ್ತು ಅಂಚೆ ಇತಿಹಾಸ
- ಟಹೀಟಿಯನ್ ಭಾಷೆ
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ ೧.೨ (French) Institut Statistique de Polynésie Française (ISPF). "Recensement de la population 2007" (PDF). Archived from the original (PDF) on 2007-12-03. Retrieved 2007-12-02.
- ↑ ಫ್ರೆಂಚ್ ಪಾಲಿನೇಷ್ಯಾದ ಪಪೀಟ್ Archived 2012-01-11 ವೇಬ್ಯಾಕ್ ಮೆಷಿನ್ ನಲ್ಲಿ.. Weatherbase.com. ಕೊನೆಯದಾಗಿ ಮರುಪಡೆದದ್ದು 2007-09-26.
- ↑ Laneyrie-Dagen, Nadeije (1996). Larousse (ed.). Les grands explorateurs, sous la direction de Nadeije Laneyrie-Dagen. p. 148. ISBN 2-03-505305-6.
{{cite book}}
:|access-date=
requires|url=
(help) - ↑ "ಆರ್ಕೈವ್ ನಕಲು". Archived from the original on 2016-12-28. Retrieved 2010-10-25.
- ↑ ಅಲ್ಯಾನ್ ಮೂರ್ಹೆಡ್, ದಿ ಫೇಟಲ್ ಇಂಪ್ಯಾಕ್ಟ್ (1966)
- ↑ 19ನೆಯ ಶತಮಾನದಲ್ಲಿ ಹೊಸದಾಗಿ ಹರಡುತ್ತಿರುವ ಸಾಂಕ್ರಾಮಿಕ ರೋಗಗಳು ಮತ್ತು ಫ್ರೆಂಚ್ ಪಾಲಿನೇಷ್ಯಾದ ಜನಸಂಖ್ಯೆ ಇಳಿಕೆ
- ↑ [೧] ಬೀಗಲ್ ಹಡಗಿನ ಯಾನ
- ↑ ದಿ ಪೆಸಿಫಿಕ್ ಐಲೆಂಡ್ಸ್: ಆನ್ ಎಂಸೈಕ್ಲೊಪೀಡಿಯಾ
- ↑ "ಆರ್ಕೈವ್ ನಕಲು". Archived from the original on 2008-02-20. Retrieved 2010-10-25.
- ↑ ೧೦.೦ ೧೦.೧ ರಾಬರ್ಟ್ ಸಿ. ಷ್ಮಿತ್: ಪಾಪುಲೇಷನ್ ಟ್ರೆಂಡ್ಸ್ ಇನ್ ಹವಾಯ್ ಅಂಡ್ ಫ್ರೆಂಚ್ ಪಾಲಿನೇಷ್ಯಾ
- ↑ ಜೇಮ್ಸ್ ಕುಕ್ ಇಂದ ಅಂದಾಜು
- ↑ 2002 ಜನಗಣತಿ Archived 2009-04-15 ವೇಬ್ಯಾಕ್ ಮೆಷಿನ್ ನಲ್ಲಿ.
- ↑ 1971, 1977, 1983, 1988 ಹಾಗೂ 1996 ಜನಗಣತಿಗಳು
- ↑ ಐಎನ್‌ಇಡಿ ಪ್ರಕಟಿಸಿದ ಸೆನ್ಸಸೆಸ್ ಫ್ರಮ್ 1911 ಟು 1962 ಇನ್ ಪಾಪುಲೇಷನ್, 1972, #4-5, ಪೇಜ್ 720
- ↑ 1897 ಜನಗಣತಿಗಾಗಿ ಲಾ ಗ್ರ್ಯಾನ್ ಎನ್ಸೈಕ್ಲೊಪೀಡೀ
- ↑ "1848 ಜನಗಣತಿ". Archived from the original on 2007-06-05. Retrieved 2010-10-25.
ಬಾಹ್ಯ ಕೊಂಡಿಗಳು
ಬದಲಾಯಿಸಿ- ಯುನೈಟೆಡ್ ಕಿಂಗ್ಡಮ್ ಮತ್ತು ಐರ್ಲೆಂಡ್ ಗಣರಾಜ್ಯದ ನಾಗರಿಕರಿಗಾಗಿ ಟಹೀಟಿ ಪ್ರವಾಸೋದ್ಯಮ ಮಂಡಳಿಯ ಅಧಿಕೃತ ಅಂತರಜಾಲತಾಣ Archived 2010-06-08 ವೇಬ್ಯಾಕ್ ಮೆಷಿನ್ ನಲ್ಲಿ.
- ಉತ್ತರ ಅಮೆರಿಕಾದ ನಾಗರಿಕರಿಗಾಗಿ ಟಹೀಟಿ ಪ್ರವಾಸೋದ್ಯಮ ಮಂಡಳಿಯ ಅಧಿಕೃತ ಅಂತರಜಾಲತಾಣ Archived 2014-03-10 ವೇಬ್ಯಾಕ್ ಮೆಷಿನ್ ನಲ್ಲಿ.
- ಸಿಐಎ ಮಾಹಿತಿಸಂಗ್ರಹದಲ್ಲಿ ನಮೂದನೆ Archived 2016-05-15 ವೇಬ್ಯಾಕ್ ಮೆಷಿನ್ ನಲ್ಲಿ.
- ಫ್ರೆಂಚ್ ಪಾಲಿನೇಷ್ಯಾ ವಿಶ್ವವಿದ್ಯಾನಿಲಯ
- (French) ಗೂಗಲ್ ನಕ್ಷೆಗಳೊಂದಿಗೆ ಟಹೀಟಿಯನ್ ಪರಂಪರೆ
- ಟಹೀಟಿ 17°38′S 149°27′W / 17.633°S 149.450°W ಈ ನಿರ್ದೇಶಾಂಕದಲ್ಲಿದೆ