ಜನಪದ ಕೈಗಾರಿಕೆಗಳು

ಜನಪದ ಕೈಗಾರಿಕೆಗಳು ಮುಖ್ಯವಾಗಿ ಎಲ್ಲ ಬಗೆಯ ಜನಪದ ವೃತ್ತಿಗಳಿಗೂ ಅನ್ವಯವಾಗುತ್ತವೆ. ಜನಪದರು ತಮ್ಮ ನಿತ್ಯ ಬದುಕಿಗೆ ಎಲ್ಲ ಬಗೆಯ ವಸ್ತುಗಳನ್ನೂ ಆಯಾ ಕಸಬಿನಲ್ಲಿ ಪರಿಣತರಾದರಿಂದ ಪಡೆದುಕೊಳ್ಳುತ್ತಿದ್ದರು. ಇಂಥ ಪರಿಣತರು ವಂಶಪಾರಂಪರ್ಯವಾಗಿ ತಮ್ಮ ಕಸಬನ್ನು ರೂಢಿಸಿಕೊಂಡು ಬರುತ್ತಿದ್ದರು. ಸಾಮಾನ್ಯವಾಗಿ ಒಂದೊಂದು ಹಳ್ಳಿಯಲ್ಲೂ ಎಲ್ಲ ಕಸಬುಗಳನ್ನೂ ಬಲ್ಲ ಕುಟುಂಬಗಳಿರುತ್ತಿದ್ದುವು. ಒಂದೇ ಎಡೆಯಲ್ಲಿ ಅಂಥ ಜನ ಸಿಕ್ಕದಿದ್ದಾಗ ಅಕ್ಕಪಕ್ಕದ ಹಳ್ಳಿಗಳಿಂದ ಅಂಥವರ ಸಹಾಯವನ್ನು ಪಡೆಯುತ್ತಿದ್ದರು. ಮೊದಲಿನ ಸ್ಥಾನಮಾನ ಇಂಥ ವೃತ್ತಿಗಳಿಗೆ ಈಗ ಇಲ್ಲವಾದರೂ ಅವುಗಳ ಮಹತ್ತ್ವ ಸಂಪೂರ್ಣವಾಗಿ ಕಳೆಗುಂದಿಲ್ಲ. ಸಮಾಜದಲ್ಲಿ ಮೈತಳೆದ ಹಲವಾರು ಬಗೆಯ ಜಾತಿಗಳಿಗೂ ಈ ಬಗೆಯ ವೃತ್ತಿಗಳೇ ಕಾರಣವೆನ್ನಬಹುದು. ಪ್ರತಿಯೊಂದು ಸಮಾಜದಲ್ಲಿಯೂ ಇಂಥ ಕೈಗಾರಿಕೆಗಳು ಇದ್ದೇ ಇರುತ್ತವೆ.

ಜನಪದ ಕೈಗಾರಿಕೆ ಅಪಾರವಾಗಿದ್ದು, ವೈವಿಧ್ಯಮಯವಾಗಿದೆ. ಈ ನಿಟ್ಟಿನಲ್ಲಿ ಅನೇಕ ಜನಪದ ಕೈಗಾರಿಕೆಯ ಕಸಬಿನವರನ್ನು ಹೆಸರಿಸಬಹುದು. ಈ ಹೆಸರುಗಳೆಲ್ಲ ಆ ವೃತ್ತಿಯವರ ಜಾತಿಯ ಹೆಸರಿನಂತೆ ಭಾಸವಾದರೂ ಅವು ಅವರವರ ವೃತ್ತಿ ಎಂಥದೆಂಬುದನ್ನು ಸೂಚಿಸುತ್ತವೆ. ಅವರು ಮಾಡುವ ಕಸಬಿನಿಂದಾಗಿಯೇ ಅವರಿಗೆ ಆ ಹೆಸರು ಬಂದಿವೆ. ಬಡಗಿ, ಕುಂಬಾರ, ಕಮ್ಮಾರ, ಕೊರಮ, ಬೇಡ, ಬೆಸ್ತ, ಮಗ್ಗದವ, ಕಂಬಳಿ ನೇಯ್ಗೆಯವ, ಅಕ್ಕಸಾಲಿಗ, ಚಮ್ಮಾರ, ಗಾಣಿಗ, ಒಡ್ಡ, ಈಡಿಗ, ಮೇದ, ಹಗ್ಗ ಹೊಸೆಯುವವ-ಹೀಗೆ ಹಲವಾರು ಬಗೆಯ ಜನಪದ ವೃತ್ತಿಗಾರರನ್ನು ಇಂದಿಗೂ ಕಾಣಬಹುದಾಗಿದೆ. ಇವುಗಳೇ ಅಲ್ಲದೆ, ಇಂಥ ಅನೇಕ ಸಣ್ಣಪುಟ್ಟ ಜನಪದ ಕೈಗಾರಿಕೆಗಳು ಗ್ರಾಮಾಂತರಗಳಲ್ಲಿ ಇಂದಿಗೂ ವಿಶೇಷವಾಗಿ ಉಳಿದುಕೊಂಡಿದೆ. ನಾರಿನಿಂದ ಹಗ್ಗ, ಕಣ್ಣಿ ಮೊದಲಾದವನ್ನು ಮಾಡುವುದು, ಊಟದ ಎಲೆಗಳನ್ನು ಹಚ್ಚುವುದು, ತೆಂಗಿನಗರಿಗಳಿಂದ ಕಡ್ಡಿಯನ್ನು ಬಿಡಿಸಿ ಬರಲು ಮಾಡುವುದು, ಹಂಚಿಕಡ್ಡಿಯಿಂದ ಪೊರಕೆ ಮಾಡುವುದು ಇಂಥ ಅನೇಕ ಕೈಕಸಬುಗಳು ಕಾಣಬರುತ್ತವೆ. ಈ ಎಲ್ಲ ಜನಪದ ಕೈಗಾರಿಕೆಗಳೂ ಜನಪದದ ಜೀವನದ ಉಸಿರಾಗಿದ್ದ ಕಾಲವೊಂದಿತ್ತು ; ಆದರೆ ಈಗ ಕಾಲದ ಸ್ಥಿತ್ಯಂತರದಿಂದಾಗಿ ಅವುಗಳ ಮಹತ್ತ್ವ ಸ್ವಲ್ಪಮಟ್ಟಿಗೆ ಮಸುಕಾಗಿದೆ ಅಷ್ಟೆ.

ಬಡಗಿಗಳು

ಬದಲಾಯಿಸಿ

ವ್ಯವಸಾಯಕ್ಕೆ ಅಗತ್ಯವಾಗಿ ಬೇಕಾದ ಹಲವು ಬಗೆಯ ಉಪಕರಣಗಳನ್ನು ಮಾಡಿಕೊಡುವುದರ ಜೊತೆಗೆ, ಮನೆ ಕಟ್ಟಲು ಬೇಕಾದ ಮರದ ಸಾಮಾನುಗಳು, ಗಾಡಿ, ಅದಕ್ಕೆ ಅಗತ್ಯವಾದ ನೊಗ ಮುಂತಾದುವನ್ನೂ ಮಾಡುತ್ತಾರೆ. ಅಲ್ಲದೆ, ಇತರ ಕುಶಲ ಕೆತ್ತನೆಯ ಕೆಲಸದಲ್ಲಿಯೂ ಇವರು ಹೆಸರಾದವರು. ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ಬಳಸುವ ಹಸೆಮಣೆ, ತೇವಟಿಗೆ, ಮರದ ದೀಪದ ಕಂಬ, ಮೊಸರು ಕಡೆಯುವ ಮಂತು, ಮತ್ತು ಮರದ ಗೊಂಬೆ ಮುಂತಾದುವನ್ನೂ ಇವರು ಅಂದವಾಗಿ ಕೆತ್ತಿ ಮಾರಾಟ ಮಾಡುತ್ತಾರೆ. ಯಕ್ಷಗಾನ ಕಲೆಗೆ ಬೇಕಾದ ಹಲವು ಬಗೆಯ ಮರದ ಆಭರಣ ವಿಶೇಷಗಳನ್ನು ಮಾಡಿಕೊಡುವವರೂ ಇವರೇ. ಈ ದೃಷ್ಟಿಯಿಂದ ಮರಗೆಲಸ ಲಾಭದಾಯಕವಾದ ಸಣ್ಣ ಪ್ರಮಾಣದ ಕೈಗಾರಿಕೆಯೇ ಆಗಿದೆ.

ಕುಂಬಾರರು

ಬದಲಾಯಿಸಿ

ಹಳ್ಳಿಯಲ್ಲಿ ದಿನನಿತ್ಯದ ಮನೆಬಳಕೆಗೆ ಬೇಕಾಗುವ ನಾನಾ ಬಗೆಯ ಮಡಕೆ ಕುಡಿಕೆಗಳನ್ನು ಹೆಂಚುಗಳನ್ನು ಮಣ್ಣಿನ ದೀಪಗಳನ್ನು ದೊಡ್ಡ ಪ್ರಮಾಣದ ಗುಡಾಣಗಳನ್ನು ಇವರು ಅಂದವಾಗಿ ತಯಾರಿಸುತ್ತಾರೆ. ಇವುಗಳಿಗೆ ಪರ್ಯಾಯವಾಗಿ ಬೇರಾವುದನ್ನೂ ಬಳಸುವ ಸಾಧ್ಯತೆಯಿಲ್ಲದೆ ಇದ್ದ ಒಂದು ಕಾಲದಲ್ಲಿ ಈ ಉದ್ಯಮ ಅತ್ಯಂತ ಲಾಭದಾಯಕವಾದುವೇ ಆಗಿತ್ತು.[]

ಕಮ್ಮಾರರು

ಬದಲಾಯಿಸಿ

ಉಳುವ ನೇಗಿಲಿಗೆ ಬೇಕಾದ ಕುಳ, ಜಿಗಣಿ, ಗಾಡಿಗೆ ಬೇಕಾದ ಕಬ್ಬಿಣದ ಸಾಮಾನುಗಳು, ಇತರ ವ್ಯವಸಾಯೋಪಕರಣಗಳಾದ ಕಳೆಕುಡ್ಲು, ಕುಂಟೆತಾಳು, ಹೊಲ ಕುಯ್ಯುವ ಕುಡ್ಲು, ಗುದ್ದಲಿ, ಕೊಡಲಿ, ಕೈಬಾಚಿ, ಕೈ ಕೊಡಲಿ ಹಾಗೂ ಮನೆಯ ಬಾಗಿಲಿಗೆ ಬೇಕಾಗುವ ಕಬ್ಬಿಣದ ಸಾಮಾನು-ಇವೆಲ್ಲವನ್ನೂ ಇವರು ಮಾಡುತ್ತಾರೆ. ಈ ಯಂತ್ರಯುಗದಲ್ಲಿಯೂ ಕುಲುಮೆಯ ಕೆಲಸ ಕಣ್ಮರೆಯಾಗಿಲ್ಲ.[]

ಕೊರಮರು

ಬದಲಾಯಿಸಿ

ವಿವಿಧೋಪಯೋಗಗಳಿಗೆ ಬೇಕಾಗುವ ಬುಟ್ಟಿ, ಕುಕ್ಕೆ, ಕುಂದಲಿಗೆ, ಮೊರ, ತೊಟ್ಟಿಲು, ಬೀಸಣಿಗೆ, ಭತ್ತ ರಾಗಿ ತುಂಬುವ ಪೆಟ್ಟೆ, ರೇಷ್ಮೆ ಹುಳುಗಳನ್ನು ಸಾಕಲು ಬಳಸುವ ತಟ್ಟೆ-ಇವನ್ನು ಈಚಲ ಕಡ್ಡಿಗಳಿಂದ ಹೆಣೆಯುವ ವೃತ್ತಿಯವರು. ಇವರು ತಯಾರಿಸುವ ಎಲ್ಲ ಬಗೆಯ ವಸ್ತುಗಳಿಗೂ ಹೆಚ್ಚಿನ ಬೇಡಿಕೆ ಇದೆ. ಕಾಡಿನಲ್ಲಿ ಬೆಳೆಯುವ ಒಂದು ಬಗೆಯ ಹುಲ್ಲಿನಿಂದ ಇವರು ಗುಡಿಸುವ ಹಿಡಿ, ಪಾತ್ರೆಗಳನ್ನಿಡುವ ಸಿಂಬಿ ಮೊದಲಾದುವನ್ನೂ ಮಾಡುತ್ತಾರೆ.ಈ ಜನಪದ ಕೈಗಾರಿಕೆ ಹೆಚ್ಚು ಲಾಭದಾಯಕವಾಗಿದೆ. ಹೆಚ್ಚಾಗಿ ಹಣಕ್ಕೇ ಇವುಗಳನ್ನು ಮಾರುತ್ತಾರೆಯಾದರೂ ಮೊರ, ಕುಕ್ಕೆ-ಮುಂತಾದ ಸಣ್ಣಪುಟ್ಟ ವಸ್ತುಗಳನ್ನು ದವಸಧಾನ್ಯಗಳಿಗೆ ಪ್ರತಿಯಾಗಿ ಕೊಡುವುದೂ ಉಂಟು. ಸಣ್ಣಸಣ್ಣ ವಸ್ತುಗಳನ್ನು ಮನೆಮನೆಗೆ ಹೊತ್ತು ಮಾರುವುದರ ಜೊತೆಗೆ, ಸಂತೆ, ಜಾತ್ರೆಗಳಲ್ಲಿ ಈ ವಸ್ತುಗಳ ಮಾರಾಟವನ್ನು ಕಾಣಬಹುದು. ಈ ಕೈಗಾರಿಕೆ ಇಂದಿಗೂ ಜೀವಂತವಾಗಿ ಉಳಿದಿವೆ.

ಜನಪದ ಕೈಗಾರಿಕೆಗಳಲ್ಲಿ ಮಗ್ಗದ ಕಸಬು ಹೆಚ್ಚು ಲಾಭದಾಯಕವಾದ ಉದ್ದಿಮೆಯಾಗಿತ್ತು. ಯಂತ್ರಯುಗದ ಆರಂಭಕ್ಕೆ ಮುನ್ನ ಬಟ್ಟೆಯ ಬೇಡಿಕೆಯನ್ನು ಪೂರೈಸುವ ಪೂರ್ಣ ಜವಾಬ್ದಾರಿ ಇವರದ್ದಾಗಿತ್ತು. ಈ ವೃತ್ತಿಯನ್ನು ಮಾಡುವವರು ಮಗ್ಗದ ಶೆಟ್ಟರು. ಇವರನ್ನು ನೇಯ್ಗೆಯವರು, ಕೈಮಗ್ಗದವರು ಎಂದೂ ಕರೆಯುತ್ತಾರೆ. ಮಗ್ಗವನ್ನು ಸಾಮಾನ್ಯವಾಗಿ ಮನೆಯ ಒಳಗೇ ಹಾಕಿಕೊಂಡಿರುತ್ತಾರೆ. ನೇಯುವುದಕ್ಕೆ ಪೂರ್ವಭಾವಿಯಾಗಿ ದಾರಕ್ಕೆ ಬಣ್ಣ ಕಟ್ಟುವ, ಅದನ್ನು ಒಣಗಿಸಲು ಅನುಕೂಲವಾಗುವ ರೀತಿಯಲ್ಲಿ ಮನೆಯ ಮುಂದೆ ವ್ಯವಸ್ಥೆಗೊಳಿಸಿಕೊಂಡಿರುತ್ತಾರೆ. ಇವರು ನೇಯುವ ಸೀರೆಗಳು ಇಂದಿಗೂ ಜನಪದರಲ್ಲಿ ಹೆಚ್ಚು ಬಳಕೆಯಲ್ಲಿವೆ. ಅವರು ಅವುಗಳಲ್ಲದೆ ಬೇರೆ ಸೀರೆಗಳನ್ನು ಉಡುವುದಿಲ್ಲ. ಆದ್ದರಿಂದ ಇಂದಿಗೂ ಈ ಕೈಗಾರಿಕೆ ಲಾಭದಾಯಕವಾದ ಉದ್ದಿಮೆ ಎನಿಸಿಕೊಂಡಿದೆ.

ಕಂಬಳಿ ಮಗ್ಗ

ಬದಲಾಯಿಸಿ

ಮಗ್ಗದವರಂತೆಯೇ ಕಂಬಳಿ ನೇಯ್ಗೆಯವರದ್ದು ಮತ್ತೊಂದು ಬಗೆಯ ಲಾಭದಾಯಕ ಉದ್ಯಮ. ಈ ಜನಪದ ಕೈಗಾರಿಕೆಗೆ ಈಗಂತೂ ಸರ್ಕಾರದ ನೆರವಿದೆಯಾಗಿ ಹಲವು ಸಹಕಾರಿ ಸಂಘಗಳು ಸ್ಥಾಪನೆಯಾಗಿ ಸಾಕಷ್ಟು ಮುಂದುವರಿದಿದೆ. ಕಂಬಳಿಯ ನೇಯ್ಗೆಗೆ ಬೇಕಾದ ಕುರಿಯ ತುಪ್ಪಟವನ್ನು ಊರೂರಿನ ಮೇಲೆ ಹೋಗಿ ಕೊಂಡು ತರುತ್ತಾರೆ. ಹೆಚ್ಚಾಗಿ ಕುರಿಗಳನ್ನು ಸಾಕಿರುವವರಿಂದ ತುಪ್ಪಟವನ್ನು ತಂದು ಅವರಿಗೆ ವರ್ಷಕ್ಕೆ ಇಷ್ಟು ಕಂಬಳಿಯನ್ನು ಕೊಡುವಂತೆ ನಿಗದಿ ಮಾಡಿಕೊಳ್ಳುವುದೂ ಉಂಟು. ಈಚೆಗೆ ತಯಾರಾದ ಕಂಬಳಿಗಳ ಮಾರಾಟ ಒಂದು ವ್ಯವಸ್ಥಿತವಾದ ರೀತಿಯಲ್ಲಿ ನಡೆಯುತ್ತಿದೆ. ಇವರು ಕಂಬಳಿಯನ್ನು ಮಾಡುವ ವಿಧಾನ ವಿಶಿಷ್ಟವಾದುದು. ಬಾಳಿಕೆಯ ದೃಷ್ಟಿಯಿಂದ ಹಾಗೂ ಉಪಯುಕ್ತತೆಯ ದೃಷ್ಟಿಯಿಂದ ಈ ಕೈಗಾರಿಕೆ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡಿದೆ.

ಅಕ್ಕಸಾಲಿಗರು

ಬದಲಾಯಿಸಿ

ಅಕ್ಕಸಾಲಿಗರು ಅತ್ಯಂತ ಆಕರ್ಷಕವಾಗಿ ಚಿನ್ನ-ಬೆಳ್ಳಿಯ ಒಡವೆಗಳನ್ನು ಮಾಡುವುದರಲ್ಲಿ ; ಹಿತ್ತಾಳೆ, ತಾಮ್ರ, ಕಂಚು ಮುಂತಾದ ಲೋಹಗಳಿಂದ ಚಲುವಾದ ವಿಗ್ರಹಗಳನ್ನು ಮಾಡುವುದರಲ್ಲಿ ; ಹಾಗೂ ಮಣ್ಣು ಮತ್ತು ಮರದಿಂದಲೂ ಅಂದವಾದ ಮೂರ್ತಿಗಳನ್ನು ಮಾಡುವಲ್ಲಿ ನಿಪುಣರು. ಕಿವಿ, ಮೂಗುಗಳಿಗೆ ಭೂಷಣವಾದ ಆಭರಣ ವಿಶೇಷಗಳನ್ನು ಇವರು ಮಾಡುವರಷ್ಟೇ ಅಲ್ಲದೆ, ಕಿವಿ, ಮೂಗನ್ನು ಚುಚ್ಚುವುದರಲ್ಲಿಯೂ ಹೆಸರಾದವರು. ಅಕ್ಕಸಾಲಿಗ ಚುಚ್ಚಿದರೆ ನೊಚ್ಚಗಾಗುತ್ತದೆ ಎಂಬ ಒಂದು ಗಾದೆಯೂ ಇದೆ.

ಗಾಣಿಗಳು

ಬದಲಾಯಿಸಿ

ಜನಪದ ಕೈಗಾರಿಕೆಯಲ್ಲಿ ಮತ್ತೊಂದು ಪ್ರಮುಖವಾದ ವೃತ್ತಿ ಇವರು. ಮರದ ಗಾಣ ಬಹು ಕಾಲದಿಂದ ಬಳಕೆಯಲ್ಲಿವೆ. ಈಗ ಕಬ್ಬಿಣದ ಗಾಣಗಳು ಬಂದಿವೆ. ಬೀಜಗಳನ್ನು ಅರೆದು ಎಣ್ಣೆ ತೆಗೆಯುವ ಎಲ್ಲ ಸಂದರ್ಭಗಳಲ್ಲೂ ಈ ಗಾಣಗಳನ್ನು ಉಪಯೋಗಿಸಬಹುದು. ಕೆಲವರು ಎಣ್ಣೆ ಬೀಜವನ್ನು ತಂದು ಕೂಲಿ ಕೊಟ್ಟು ಎಣ್ಣೆಯನ್ನು ತೆಗೆಸಿಕೊಂಡು ಹೋಗುತ್ತಾರೆ. ಮತ್ತೆ ಕೆಲವರು ಇಷ್ಟು ಸೇರು ಎಣ್ಣೆಬೀಜಕ್ಕೆ ಇಷ್ಟು ಸೇರು ಎಣ್ಣೆ ಎಂದು ಪಡೆದುಕೊಂಡು ಹೋಗುತ್ತಾರೆ. ಅಲ್ಲದೆ ಗಾಣಿಗರೇ ಎಣ್ಣೆಬೀಜವನ್ನು ಕೊಂಡು ತಂದು, ಗಾಣವನ್ನು ಆಡಿಸುವುದುಂಟು. ಎಣ್ಣೆಯನ್ನು ತೆಗೆದುಕೊಂಡು ಆದಮೇಲೆ ಬರುವ ಹಿಂಡಿಯಿಂದಲೂ ಸಾಕಷ್ಟು ಹಣ ಬರುತ್ತದೆ. ತೀರ ಹಳ್ಳಿಗಾಡಿನಲ್ಲಿ ಮಾತ್ರ ಈ ಕೈಗಾರಿಕೆ ಇನ್ನೂ ಜೀವ ಹಿಡಿದು ನಿಂತಿದೆ. 9 ಆಲೆ : ಎಣ್ಣೆ ತೆಗೆಯುವ ಗಾಣದಂತೆಯೇ ಕಬ್ಬಿನ ಗಾಣವೂ ಒಂದು ಉತ್ತಮ ಕೈಗಾರಿಕೆಯಾಗಿದೆ. ಈ ಉದ್ಯಮಕ್ಕೆ ಹೆಚ್ಚು ಜನ ಬೇಕಾಗುತ್ತದೆ. ಹೆಚ್ಚು ಕಬ್ಬು ಬೆಳೆಯುವ ಪ್ರದೇಶ ಒಂದೇ ಕಡೆ ಇದ್ದಾಗ ಅವರೆಲ್ಲ ಒಟ್ಟುಗೂಡಿ ಹೋಗಿ ಆಲೆ ಇಟ್ಟಿರುವ ಮಾಲೀಕರಿಂದ, ಆಲೆಯ ಎಲ್ಲ ಉಪಕರಣಗಳನ್ನೂ ತಂದು ಆಲೆ ಕಟ್ಟುತ್ತಾರೆ. ಕಬ್ಬು ಮುಗಿಯುವವರೆಗೂ ಹಗಲು ರಾತ್ರಿ ನಡೆಯುವ ಈ ಕೆಲಸಕ್ಕೆ ಕೂಲಿ ಆಳುಗಳನ್ನು ಸದಾ ಇವರು ಆಶ್ರಯಿಸಲೇಬೇಕಾಗುತ್ತದೆ. ಅಂತೂ ಈ ಉದ್ಯಮಕ್ಕೆ ಸಾಕಷ್ಟು ಜನ ಬೇಕಾಗಿರುವುದರಿಂದ, ಕೆಲಸಗಾರನ ದೃಷ್ಟಿಯಿಂದಲೂ ಇದು ಹೆಚ್ಚು ಲಾಭದಾಯಕವಾದ ಕೈಗಾರಿಕೆಯಾಗಿದೆ.ಮೊದಲು ಮರದ ಆಲೆ ಬಳಕೆಯಲ್ಲಿತ್ತು. ಅನಂತರ ಲೋಹದ ಆಲೆ ರೂಢಿಗೆ ಬಂತು. ಈಗ ವಿದ್ಯುತ್ ಚಾಲಿತ ಆಲೆಗಳು ಬಳಕೆಗೆ ಬರುತ್ತಿವೆ. ಸಕ್ಕರೆ ಎಷ್ಟೇ ಬಳಕೆಗೆ ಬಂದಿದ್ದರೂ ಆಲೆಯಾಡಿ ತಯಾರಿಸಿದ ಬೆಲ್ಲಕ್ಕೆ ಸಾಕಷ್ಟು ಮಾರುಕಟ್ಟೆ ಇದ್ದೇ ಇದೆ.

ಹಗ್ಗ ಹೊಸೆಯುವುದು

ಬದಲಾಯಿಸಿ

ಹಗ್ಗ ಹೊಸೆಯುವುದು ಮೊದಮೊದಲು ಗೃಹಕೈಕಸಬಾಗಿ, ಜನಪದ ಕೈಗಾರಿಕೆಯೆನಿಸಿಕೊಂಡು, ಈಗ ಇವುಗಳೆಲ್ಲದರ ವ್ಯಾಪ್ತಿಗೂ ಮೀರಿ ಬೆಳೆದಿದೆ. ವ್ಯವಸಾಯವನ್ನು ಕಸಬಾಗಿ ಉಳ್ಳ ಪ್ರತಿಯೊಬ್ಬನ ಮನೆಯಲ್ಲಿಯೂ ಹಿಂದೆ ಈ ಒಂದು ಕಸಬೂ ಮೂಲವೃತ್ತಿ ಎಂಬಂತೆ ಕಂಡುಬರುತ್ತಿತ್ತು. ಈಗಲೂ ಇಲ್ಲವೆಂದಲ್ಲ. ಇದನ್ನೇ ವೃತ್ತಿಯಾಗಿ ಕೈಗೊಂಡು ಜೀವಿಸುವವರೂ ಇದ್ದಾರೆ. ದನಗಳನ್ನು ಕಟ್ಟುವ ಹಗ್ಗ, ನೇಗಿಲ ಹಗ್ಗ, ನೊಗದ ಹಗ್ಗ, ಗಾಡಿ ಬಿಗಿಯುವ ಹಗ್ಗ, ಗಾಡಿ ಜೊತ್ತಿಗೆ, ನೀರು ಸೇದುವ ಹಗ್ಗ-ಹೀಗೆ ನಾನಾ ಬಗೆಯ ಹಗ್ಗಗಳನ್ನು ಹಾಗೂ ದನಗಳಿಗೆ ಬೇಕಾಗುವ ಮೂಗುದಾರ, ಮುಖವಾಡ, ಕೊರಳ ಹಗ್ಗ, ಬಾಯಿಕುಕ್ಕೆ ಮೊದಲಾದುವನ್ನು ಕೈಯಿಂದಲೇ ತಯಾರಿಸಿ ಸಂತೆ, ಜಾತ್ರೆಗಳಲ್ಲಿ ತಂದು ಮಾರುವ ಈ ಉದ್ಯಮ ಒಂದು ಕೈಗಾರಿಕೆಯೇ ಆಗಿದೆ. ಯಂತ್ರಗಳ ಸಹಾಯದಿಂದಲೂ ಹಗ್ಗವನ್ನು ತಯಾರಿಸುವ ವಿಧಾನ ಬೆಳಕಿಗೆ ಬಂದ ಮೇಲೆ ಇವರ ವೃತ್ತಿಗೆ ಸ್ವಲ್ಪ ಧಕ್ಕೆ ತಗುಲಿದಂತಾಗಿದೆ.

ಚಮ್ಮಾರರು

ಬದಲಾಯಿಸಿ

ಚರ್ಮದ ಕೆಲಸ ಮಾಡುವ ಇವರು ಸಾಮಾನ್ಯವಾಗಿ ಹರಿಜನ ಗುಂಪಿಗೆ ಸೇರಿದವರು. ತಾವೇ ಚರ್ಮವನ್ನು ಹದಗೊಳಿಸಿಕೊಂಡು, ಚಪ್ಪಲಿಗಳ ಜೊತೆಗೆ ಕೆಲವು ಬಗೆಯ ವಾದ್ಯವಿಶೇಷಗಳನ್ನೂ ತಯಾರಿಸುತ್ತಾರೆ. ನಾನಾ ಕಾರಣಗಳಿಂದಾಗಿ ಈ ಕಸಬು ಇಂದಿಗೂ ಜನಪ್ರಿಯವಾಗಿದೆ. ಯಂತ್ರಗಳಿಂದ ತಯಾರಾದ ವಸ್ತುಗಳ ಬೆಲೆ ಮಿತಿಮೀರಿ ಏರುತ್ತಿರುವುದೂ ಇದರ ಅಭಿವೃದ್ಧಿಗೆ ಮುಖ್ಯ ಕಾರಣ.

ಬೆಸ್ತರು

ಬದಲಾಯಿಸಿ

ಮೀನು ಹಿಡಿಯುವ ಈ ಜನ ಮೀನುಬಲೆಗಳನ್ನೂ ಹೆಣೆಯುತ್ತಾರೆ. ಅದಕ್ಕೆ ಬೇಕಾದ ನೂಲನ್ನೂ ಹೆಚ್ಚು ಕಡಿಮೆ ಇವರೇ ತಯಾರಿಸಿಕೊಳ್ಳುತ್ತಾರೆ. ಇವರಲ್ಲಿ ಬುರುಡೆ ಬೆಸ್ತರು ಎಂಬ ಒಂದು ಗುಂಪು ಉಂಟು.

ಒಡ್ಡರು

ಬದಲಾಯಿಸಿ

ಮನೆ ಕಟ್ಟಲು ತಳಪಾಯಕ್ಕೆ ಬೇಕಾದ ಕಲ್ಲು, ನೆಲಕ್ಕೆ ಹಾಸಲು ಬೇಕಾದ ಕಲ್ಲುಚಪ್ಪಡಿ, ದೊಡ್ಡ ದೊಡ್ಡ ಕಲ್ಲುಕಂಬ, ಮನೆಯಲ್ಲಿ ಆಡಿಸಲು ಬೇಕಾಗುವ ಒರಳುಕಲ್ಲು-ಇವನ್ನೆಲ್ಲ ಇವರು ಕಡೆದು ಕೊಡುತ್ತಾರೆ.ಇಷ್ಟೇ ಅಲ್ಲದೆ ಬಳಪದ ಕಲ್ಲಿನಲ್ಲಿ ಇವರು ಮಾಡುವ ವಿವಿಧ ಬಗೆಯ ನಿತ್ಯೋಪಯೋಗಿ ವಸ್ತುಗಳು ಆಕರ್ಷಕವಾಗಿರುತ್ತವೆ. ಅವುಗಳಿಗೆ ಹೆಚ್ಚು ಬೇಡಿಕೆಯೂ ಇದೆ. ಅವರು ಮಾಡುವ ಮರಿಗೆ, ದೀಪ, ಹಾಗೂ ದೀಪದ ಕಂಬ, ಇಡ್ಲಿ ಮಾಡುವ ತಟ್ಟೆ ಮತ್ತು ಹೆಂಚು-ಇವೆಲ್ಲ ಸಾಕಷ್ಟು ಬಳಕೆಯಲ್ಲಿದ್ದು ಇದೊಂದು ಲಾಭದಾಯಕ ಕೈಗಾರಿಕೆಯೇ ಆಗಿದೆ. ಇಷ್ಟೆಲ್ಲ ಯಂತ್ರಯುಗದ ಪ್ರಭಾವ ಇದ್ದರೂ ಈ ಕೈಗಾರಿಕೆ ಇಂದಿಗೂ ಉಳಿದು ಬಂದಿದೆ.[]

ಈಡಿಗರು

ಬದಲಾಯಿಸಿ

ಮರದಿಂದ ಹೆಂಡವನ್ನು ಇಳಿಸಿ, ಅದನ್ನು ಸುವ್ಯವಸ್ಥಿತ ರೀತಿಯಲ್ಲಿ ಬೇಕಾದ ಕಡೆಗೆ ಹಂಚುವ ವ್ಯವಸ್ಥೆ ಮಾಡುವುದು ಇವರ ಕೆಲಸ. ಇದಕ್ಕೂ ಸಾಕಷ್ಟು ಜನ ಕೆಲಸಗಾರರು ಬೇಕಾಗುತ್ತದೆ. ಪಾನನಿರೋಧ ಜಾರಿಗೆ ಬಂದು ಇವರಿಗೆ ಕೆಲವು ಕಾಲ ಕೆಲಸವಿಲ್ಲದಂತಾಗಿತ್ತು. ಈಗ ಇವರ ಸ್ಥಿತಿಗತಿ ಸುಧಾರಿಸಿದೆ.[]

ಜನಬಳಕೆಯ ನಿತ್ಯೋಪಯೋಗಿ ವಸ್ತುಗಳಾದ ಬುಟ್ಟಿ, ತೊಟ್ಟಿಲು, ಮೊರ, ಮುತ್ತಲು, ಗೆರಸಿ, ಜರಡಿ, ಹೂಬುಟ್ಟಿಗಳು, ಬೀಸಣಿಗೆ, ತಡಿಕೆಗಳು ಮುಂತಾದವನ್ನು ತಯಾರಿಸುವ ಜನ. ಬಿದಿರು ಮತ್ತು ದಪ್ಪಜೊಂಡುಗಳನ್ನು ಈ ಕೆಲಸಕ್ಕೆ ಉಪಯೋಗಿಸುತ್ತಾರೆ. ಕರ್ನಾಟಕದ ಎಲ್ಲ ಊರುಗಳಲ್ಲೂ ಕಂಡುಬರುವ ಈ ಜನ ಈ ವೃತ್ತಿಯನ್ನು ಇಂದಿಗೂ ಲಾಭದಾಯಕವಾಗಿ ನಡೆಸುತ್ತ ಬದಲಾಗುತ್ತಿರುವ ಸನ್ನಿವೇಶದೊಂದಿಗೆ ಹೊಂದಿ ಬಾಳುತ್ತಿದ್ದಾರೆ.[]

ಉಲ್ಲೇಖ

ಬದಲಾಯಿಸಿ
  1. http://www.kanaja.in/%E0%B2%9C%E0%B2%A8%E0%B2%B8%E0%B2%AE%E0%B3%81%E0%B2%A6%E0%B2%BE%E0%B2%AF-%E0%B2%B8%E0%B2%82%E0%B2%AA%E0%B3%81%E0%B2%9F-%E0%B2%95%E0%B3%81%E0%B2%82%E0%B2%AC%E0%B2%BE%E0%B2%B0/[permanent dead link]
  2. http://vijaykarnataka.indiatimes.com/topics/%E0%B2%95%E0%B2%AE%E0%B3%8D%E0%B2%AE%E0%B2%BE%E0%B2%B0%E0%B2%B0%E0%B3%81
  3. http://www.kanaja.in/%E0%B2%92%E0%B2%A1%E0%B3%8D%E0%B2%A1%E0%B2%B0%E0%B3%81-%E0%B2%AD%E0%B3%8B%E0%B2%B5%E0%B2%BF-%E0%B2%9C%E0%B2%A8%E0%B2%BE%E0%B2%82%E0%B2%97-%E0%B2%AE%E0%B3%87%E0%B2%A8%E0%B3%86%E0%B2%AF%E0%B2%B5/[permanent dead link]
  4. http://jaatijyothi.blogspot.in/2012/02/blog-post_718.html
  5. http://www.kanaja.in/%E0%B2%9C%E0%B2%A8%E0%B2%B8%E0%B2%AE%E0%B3%81%E0%B2%A6%E0%B2%BE%E0%B2%AF-%E0%B2%B8%E0%B2%82%E0%B2%AA%E0%B3%81%E0%B2%9F-%E0%B2%AE%E0%B3%87%E0%B2%A6/[permanent dead link]