ವೈಜ್ಞಾನಿಕ ಹೆಸರು : ಟಗೆಟಿಸ್ ಇರೆಕ್ಟ ( Tagetes erecta L. )[]

  • ಸಸ್ಯದ ಕುಟುಂಬ : ಆಸ್ಟಿರೇಸಿ ( Asteraceae )[]
  • ಕನ್ನಡದ ಇತರ ಹೆಸರುಗಳು : ಗೊಂಡೆಗಿಡ, ಚೆಂಡುಮಲ್ಲಿಗೆ, ಸೀಮೆಶ್ಯಾವಂತಿ
ಚೆಂಡು ಹೂ
ಚೆಂಡು ಹೂ

ಇತರ ಭಾಷೆಯ ಹೆಸರುಗಳು ;

ಮೆಕ್ಸಿಕನ್ ಮೂಲದ ಈ ಮೂಲಿಕೆಯ ಆಗಮನ ಭಾರತಕ್ಕೆ ಎಂದಾಯಿತೆಂದು ಖಚಿತವಾಗಿ ಹೇಳಲಾಗದಿದ್ದರೂ ಪ್ರೊ. ಬಿ.ಜಿ.ಎಲ್.ಸ್ವಾಮಿಯವರು, ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಭಾರತಕ್ಕೆ ಬಂದಂತೆ ತೋರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಗಿಡವು ಪೊದೆಯಂತೆ ಬೆಳೆಯುತ್ತದೆ. ಸರಳವಾದ ಎಲೆಗಳು ಪರ್ಯಾಯವಾಗಿ ಜೋಡಣೆಯಾಗಿರುತ್ತವೆ. ಎಲೆಗಳಿಗೆ ವಾಸನೆಯಿರುತ್ತದೆ. ಸರಳವಾದ ಎಲೆಗಳು ಸೀಳುವುದರಿಂದ ಸಂಯುಕ್ತ ಎಲೆಯಂತೆ ಕಾಣುತ್ತದೆ. ಎಲೆಯ ಸೀಳುಗಳ ಉದ್ದ ೧-೫ ಸೆ.ಮೀ. ಇರುತ್ತದೆ. ಹಳದಿ ಅಥವಾ ಕಿತ್ತಳೆ ಬಣ್ಣದ ಹೂಗಳು ಚೆಂಡು ಪುಷ್ಪಮಂಜರಿಯಲ್ಲಿ ಒತ್ತಗಿ ಜೋಡಣೆಯಾಗಿರುತ್ತವೆ. ಚೆಂಡು ಪುಷ್ಪಮಂಜರಿ ಅಗಲ ಸಾಧಾರಣವಾಗಿ ೫-೧೦ ಸೆ.ಮೀ. ಇರುತ್ತದೆ.

ಉಪಯೋಗಗಳು

ಬದಲಾಯಿಸಿ
  • ಹೂದಳದ ರಸ ಕುಡಿಸುವುದರಿಂದ ರಕ್ತ ಶುದ್ಧಿಯಾಗುತ್ತದೆ.
  • ಹೂದಳಗಳ ರಸ, ಕಬ್ಬಿಣದ ಅದಿರು ಮತ್ತು ಎಳ್ಳೆಣ್ಣೆ ಸೆರಿಸಿ ಕಬ್ಬಿಣದ ಪಾತ್ರೆಯಲ್ಲಿಟ್ಟು ಬಾಯಿ ಸೀಲು ಮಾಡಿ ಭೂಮಿಯಲ್ಲಿ ಒಂದು ತಿಂಗಳು ಕಾಲ ಹುಗಿದಿಟ್ಟು ನಂತರ ತೆಗೆದು ಈ ಮಿಶ್ರಣವನ್ನು ಚೆನ್ನಾಗಿ ಅರೆದು ಸೋಸಿ ಬಿಸಿಲಿನಲ್ಲಿಟ್ಟು ನೀರನ್ನು ಹಿಂಗಿಸಿ ಬರಿತೈಲವನ್ನು ಉಳಿಸಿಕೊಂಡು ಬಟಲ್ನಲ್ಲಿ ಸಂಗ್ರಹಿಸಿಟ್ಟುಕೊಂಡು ಕೂದಲಿಗೆ ಹಚ್ಚುವುದು ಕೂದಲಿಗೆ ವರ್ಣವುಂಟಾಗುತ್ತದೆ.
  • ಉದ್ಯಾನಗಳಲ್ಲಿ ಅಲಂಕಾರಕ್ಕಾಗಿ ಮತ್ತು ಔಷಧೀಯ ಉದ್ದೇಶಗಳಿಗಾಗಿ ಬೆಳೆಸುವ ಈ ಹೂವನ್ನು ಹಾರಕ್ಕಾಗಿ, ವೇದಿಕೆ ಅಲಂಕರಣ, ಬಣ್ಣ ತಯಾರಿಕೆ ಮತ್ತಿತರ ಉದ್ದೇಶಗಳಿಗೆ ಕೂಡ ಬಳಸುತ್ತಾರೆ.

ಬೇಸಾಯ ಕ್ರಮ

ಬದಲಾಯಿಸಿ

ಒಂದು ಹೆಕ್ಟೇರ್ ಪ್ರದೇಶಕ್ಕೆ ಬೇಕಾಗುವ ಸಸಿಗಳನ್ನು ತಯಾರಿಸಲು 6 ಮೀ ಉದ್ದ, 1.2 ಮೀ ಅಗಲ ಹಾಗೂ 10 ಸೆಂ.ಮೀ ಎತ್ತರದ 4 ಏರು ಮಡಿಗಳನ್ನು ಸಿದ್ಧ ಮಾಡಿಕೊಳ್ಳಬೇಕು.ಪ್ರತಿ ಮಡಿಗೆ 30 ಕಿಲೊ ಕೊಟ್ಟಿಗೆ ಗೊಬ್ಬರ ಹಾಗೂ ಅರ್ಧ ಕಿಲೊ ಎನ್‌ಪಿಕೆ 15:15:15 ಸಂಯುಕ್ತ ರಾಸಾಯನಿಕ ಗೊಬ್ಬರವನ್ನು ಹಾಕಿ ಮಣ್ಣಿನ ಸಾಲುಗಳಲ್ಲಿ ಚೆನ್ನಾಗಿ ಬೆರೆಸಬೇಕು. ಬೀಜಗಳನ್ನು 7.5 ಸೆ.ಮೀ ಅಂತರದ ಸಾಲುಗಳಲ್ಲಿ ಬಿತ್ತನೆ ಮಾಡಿ ಅದರ ಮೇಲೆ ತೆಳುವಾದ ಕೊಟ್ಟಿಗೆ ಗೊಬ್ಬರ ಹಾಕಿ ನಿಯಮಿತವಾಗಿ ನೀರು ಒದಗಿಸಿದರೆ ನಾಲ್ಕು ವಾರಗಳಲ್ಲಿ ಸಸಿಗಳು ನಾಟಿಗೆ ಸಿದ್ಧಗೊಳ್ಳುತ್ತವೆ.ನಾಟಿ ಮಾಡುವ ಪ್ರದೇಶವನ್ನು ಚೆನ್ನಾಗಿ ಉಳುಮೆ ಮಾಡಿ ಸ್ವಚ್ಛಗೊಳಿಸಿ ಪ್ರತಿ ಹೆಕ್ಟೇರ್‌ಗೆ 20 ಟನ್ ಕೊಟ್ಟಿಗೆ ಗೊಬ್ಬರವನ್ನು ಹಾಕಿ ಹದ ಮಾಡಬೇಕು. ನಂತರ 60 ಸೆ.ಮೀ. ಅಂತರದಲ್ಲಿ ಬೋದುಗಳನ್ನು ತಯಾರಿಸಿ ಅವುಗಳ ಒಂದು ಬದಿಯಲ್ಲಿ 45 ಸೆ.ಮೀ. ಅಂತರದಲ್ಲಿ ಸಸಿಗಳನ್ನು ನಾಟಿ ಮಾಡಬೇಕು. ಸಾಯಂಕಾಲದ ವೇಳೆ ನಾಟಿ ಮಾಡುವುದು ತುಂಬಾ ಯೋಗ್ಯ.ನಾಟಿ ಸಮಯದಲ್ಲಿ ಪ್ರತಿ ಹೆಕ್ಟೇರ್‌ಗೆ ಸಾರಜನಕ, ರಂಜಕ ಮತ್ತು ಪೊಟಾಷ್ ಗೊಬ್ಬರಗಳನ್ನು ಕ್ರಮವಾಗಿ 113;60;60 ಕಿಲೊದಂತೆ ಒದಗಿಸಬೇಕು. ನಾಟಿ ಮಾಡಿದ 30 ರಿಂದ 45 ದಿನಗಳ ನಂತರ ಗಿಡಗಳ ತುದಿ ಚಿವುಟಿ ಉಳಿದ 112 ಕಿಲೋ ಸಾರಜನಕವನ್ನು ಮೇಲು ಗೊಬ್ಬರವಾಗಿ ಒದಗಿಸಿ ಸಸಿಗಳಿಗೆ ಮಣ್ಣು ಏರಿಸಬೇಕು.ಚೆಂಡು ಹೂವಿನ ಬೆಳೆಗೆ ಬಾಧಿಸುವ ಮುಖ್ಯ ಕೀಟವೆಂದರೆ ಜಿಗಿಹುಳು. ಇದು ಎಲೆಗಳ ರಸ ಹೀರುವುದರಿಂದ ಹಳದಿ ಚುಕ್ಕೆಗಳಾಗಿ ಕ್ರಮೇಣ ಒಣಗಲು ಪ್ರಾರಂಭವಾಗಿ ಇಳುವರಿಯಲ್ಲಿ ತೀವ್ರ ಕುಸಿತವಾಗುತ್ತದೆ. ಇದನ್ನು ನಿಯಂತ್ರಿಸಲು 1 ಲೀ. ನೀರಿಗೆ 1.5 ಮಿ.ಲೀ. ಮಾನೋಕ್ರೊಟೋಪಾಸ್ ಅಥವಾ ಮೀಥೈಲ್ ಪ್ಯಾರಾಥಿಯಾನ್ ಔಷಧಿಯನ್ನು ಬೆರೆಸಿ ಸಿಂಪರಿಸಬೇಕು.ರೋಗಗಳಲ್ಲಿ ಮುಖ್ಯವಾಗಿ ಬರುವುದು ಬುಡ ಕೊಳೆ ರೋಗ. ಇದಕ್ಕೆ ತುತ್ತಾದ ಗಿಡವು ಹಳದಿಯಾಗಿ ನಂತರ ಕೆಂಪು ಕಂದು ಬಣ್ಣ ಕೊನೆಗೆ ಕಪ್ಪು ಬಣ್ಣಕ್ಕೆ ತಿರುಗಿ ಸಾಯುತ್ತದೆ. ಇದರ ಹತೋಟಿಗೆ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಅಥವಾ 2 ಗ್ರಾಂ ಮ್ಯೋಂಕೋಜೆಬ್ ಅಥವಾ 1 ಗ್ರಾಂ. ಕಾರ್ಬನ್‌ಡೈಜಿಮ್ ಶಿಲೀಂದ್ರನಾಶಕವನ್ನು ಸಿಂಪರಣೆ ಮಾಡಬೇಕಲ್ಲದೆ ಗಿಡದ ಬುಡಕ್ಕೂ ಸ್ವಲ್ಪ ಸುರಿಯುವುದು ಪರಿಣಾಮಕಾರಿ ವಿಧಾನ.ಇನ್ನು ಎಲೆಚುಕ್ಕೆ ಮತ್ತು ಅಂಗಮಾರಿ ಕೂಡ ಮುಖ್ಯವಾದ ರೋಗ. ಇದರ ಚಿಹ್ನೆಗಳೆಂದರೆ ಎಲೆಗಳ ಮೇಲೆ ಚುಕ್ಕೆಗಳಾಗಿ ಹೂವಿನ ಮೊಗ್ಗು ಮತ್ತು ದಳಗಳನ್ನು ಆವರಿಸಿಕೊಳ್ಳುತ್ತದೆ. ಇದರ ಬಾಧೆ ತೀವ್ರವಾದಾಗ ಗಿಡಗಳು ಬಿದ್ದು ಸಾಯುತ್ತವೆ.ಅಂತಹ ಗಿಡಗಳನ್ನು ದೂರ ಎಸೆದು ನಾಶ ಪಡಿಸಬೇಕಲ್ಲದೆ ಬೆಳೆಗೆ ಮೇಲೆ ತಿಳಿಸಿದ ಶಿಲೀಂದ್ರ ನಾಶಕಗಳನ್ನು ಬಳಸಿ ನಿಯಂತ್ರಿಸಬಹುದಾಗಿದೆ. ಎಲೆ ಮುಟುರು ನಂಜು ರೋಗಕ್ಕೆ ತುತ್ತಾದ ಗಿಡಗಳನ್ನು ನಾಶಪಡಿಸಿ ರೋಗ ಹರಡುವುದನ್ನು ತಡೆಗಟ್ಟಬಹುದು.ನಾಟಿ ಮಾಡಿದ ಎರಡರಿಂದ ಎರಡೂವರೆ ತಿಂಗಳ ನಂತರ ಹೂಗಳ ಕೊಯ್ಲು ಆರಂಭವಾಗಿ ಮುಂದೆ ಸುಮಾರು ಎರಡೂವರೆ ತಿಂಗಳವರೆಗೂ ನಿರಂತರವಾಗಿ ಮುಂದುವರಿಯುತ್ತದೆ. ಯಾವಾಗಲೂ ಸಂಜೆ ವೇಳೆಯಲ್ಲಿಯೇ ಕೊಯ್ಲು ಮಾಡುವುದು ಸೂಕ್ತ. ಕೊಯ್ಲು ಮಾಡುವಾಗ ಹೂಗಳಲ್ಲಿ ಸ್ವಲ್ಪ ತೊಟ್ಟು ಉಳಿಯುವಂತೆ ನೋಡಿಕೊಳ್ಳಬೇಕು. ಪ್ರತಿ ಹೆಕ್ಟೇರಿಗೆ 8 ರಿಂದ 10 ಟನ್ ಇಳುವರಿ ನಿರೀಕ್ಷಿಸಬಹುದು.

ಉಲ್ಲೇಖ

ಬದಲಾಯಿಸಿ
  1. http://www.prota4u.org/protav8.asp?en=1&p=Tagetes+erecta+L[ಶಾಶ್ವತವಾಗಿ ಮಡಿದ ಕೊಂಡಿ].
  2. http://www.britannica.com/plant/Asteraceae

ಕರ್ನಾಟಕದ ಔಷಧಿಯ ಸಸ್ಯಗಳು. ಡಾ. ಮಾಗಡಿ.ಆರ್.ಗುರದೇವ. ಪುಟ : ೧೩೭