ಚರ್ಚೆಪುಟ:ಕನ್ನಡ ಚಿತ್ರರಂಗ

ಮೂಕಿಯಿಂದ ಟಾಕಿಯವರೆಗೆ ಬದಲಾಯಿಸಿ

ಮುಂಬಯಿನ ವಾಟ್ಸನ್ ಹೋಟೆಲಿನಲ್ಲಿ 1896 ಜುಲೈ 7ರಂದು ಒಂದು ಅಪೂರ್ವ ಪ್ರದರ್ಶನ ನಡೆಯಿತು. ‘ಈ ಶತಮಾನದ ಪವಾಡ ವಿಸ್ಮಯ. ಆಳೆತ್ತರದ ಜೀವಂತ ಚಿತ್ರಗಳ ಪ್ರದರ್ಶನ’. ಲ್ಯುಮಿಯೇರ್ ಸೋದರರ ಆವಿಷ್ಕಾರವಾದ `ಸಿನಿಮಾಟೊಗ್ರಾಫಿಯ’ ಆರು ಕಿರುಚಿತ್ರಗಳು. ಮನರಂಜನೆಯ ಹೊಸ ಮಾಧ್ಯಮವನ್ನು ಅನಾವರಣಗೊಳಿಸಿದವು. ಈ ಮಾಧ್ಯಮದ ಜನಪ್ರಿಯತೆಯಿಂದ ಅದರಲ್ಲಿ ಮೊದಲು ಆಸಕ್ತಿ ತೋರಿದ್ದು ಸಾಕ್ಷ್ಯ, ಸುದ್ದಿಚಿತ್ರಗಾರು. ಅನಂತರ ಪ್ರದರ್ಶನಕಾರರು, ಅವರನ್ನು ಹಿಂಬಾಲಿಸಿ ಚಿತ್ರ ತಯಾರಕ ಪ್ರದರ್ಶಕರ ನಡುವಣ ಮಧ್ಯವರ್ತಿಗಳೆನಿಸಿದ ಹಂಚಿಕೆದಾರರು.

ಆಮದಾದ ಚಿತ್ರರೂಪಕಗಳ ಪ್ರದರ್ಶನಕ್ಕೆ ಚಿತ್ರಮಂದಿರಗಳು ಸಿದ್ಧವಾದವು. ಭಾರತದಲ್ಲಿ ಮೂಕ ಚಿತ್ರಗಳ ಪ್ರದರ್ಶನವಾದ ಒಂಬತ್ತು ವರ್ಷಗಳ ನಂತರ ಬೆಂಗಳೂರಿನಲ್ಲಿ ಸ್ಥಳೀಯ ಉದ್ಯಮಿಗಳು ಬಂಡವಾಳ ಹೂಡಿ ಆರಂಭಿಸಿದ ಮೊದಲ ಚಿತ್ರಮಂದಿರ ‘ಪ್ಯಾರಾಮೌಂಟ್’. ಬೆಂಗಳೂರು ಕೃಷ್ಣರಾಜೇಂದ್ರ ಮಾರುಕಟ್ಟೆಯ ಎದುರಿನಲ್ಲೇ ಇದ್ದ ಎಸ್.ಎಲ್.ಎನ್. ಛಾರಿಟೀಸ್ನ ವಿದ್ಯಾ ಸಂಸ್ಥೆಗೆ ಸೇರಿದ ದೊಡ್ಡಣ್ಣ ಹಾಲ್ನ ಒಂದು ಭಾಗದಲ್ಲಿ ಪ್ರ.ಶ. 1905ರಲ್ಲಿ ಆರಂಭವಾದ ಪ್ಯಾರಾಮೌಂಟ್ ಟಾಕೀಸ್, ಚಿತ್ರೋದ್ಯಮದೊಡನೆ ಬೆಳೆದ ಮೊದಲ ಬಾಂಧವ್ಯ. 70 ವರ್ಷಕಾಲ ಅಸ್ತಿತ್ವದಲ್ಲಿತ್ತು. ಅಲ್ಲಿ ಈಗ ಅವಳಿ ಚಿತ್ರಮಂದಿರಗಳು ತಲೆ ಎತ್ತಿವೆ. ಕನ್ನಡದ ಮೊದಲ ವಾಕ್ಚಿತ್ರ ತೆರೆಕಂಡದ್ದೂ ಇದೇ ಚಿತ್ರಮಂದಿರದಲ್ಲಿ.ಗುಬ್ಬಿ ನಾಟಕ ಕಂಪನಿ ಮಾಲಿಕರಾದ ಜಿ.ಎಚ್.ವೀರಣ್ಣನವರು ಪ್ರಯೋಗಶೀಲರು. ಸಿನಿಮಾಕ್ಕೆ ಇದ್ದ ಜನಪ್ರಿಯತೆಯನ್ನು ಮನಗಂಡು ತಾವು ಅಭಿನಯಿಸುತ್ತಿದ್ದ ‘ಭಕ್ತ ಕಬೀರ್’ ನಾಟಕವನ್ನೇ ಚಿತ್ರಿಸಲು ಸಿದ್ಧತೆ ನಡೆಸಿದರು. 1924ರಲ್ಲಿ ತರೀಕೆರೆಯಲ್ಲಿ ಕಂಪನಿ ವಾಸ್ತವ್ಯಹೂಡಿದ್ದಾಗ ನಾಟಕದ ಚಿತ್ರಣ ನಡೆಸಲು ವ್ಯವಸ್ಥೆ ಮಾಡಿದರು. ನಾಟಕದಲ್ಲಿ ಅಭಿನಯಿಸುತ್ತಿದ್ದ ನಟರೇ ಚಿತ್ರದಲ್ಲೂ ಅಭಿನಯಿಸುವ ಏರ್ಪಾಟು. ಕಬೀರ ದಾಸನ ಪಾತ್ರವನ್ನು ಖ್ಯಾತರಂಗ ನಟ ಸಿ.ಬಿ.ಮಲ್ಲಪ್ಪ ಅಭಿನಯಿಸುತ್ತಿದ್ದರು. ಹಗಲು ಹೊತ್ತಿನಲ್ಲಿ ಹೊರಾಂಗಣದಲ್ಲಿ ಚಿತ್ರಣ. ಸಂಜೆ ಥಿಯೇಟರಿನಲ್ಲಿ ನಾಟಕ. ಭಾರಿ ಮಳೆ ಬಿದ್ದು ರಂಗಮಂದಿರ ಕೊಚ್ಚಿ ಹೋಯಿತು. ಚಿತ್ರೀಕರಣವಾದ ಫಿಲ್ಮ್‌ ಕೂಡ ನೀರು ಪಾಲಾಯಿತು. ಅಲ್ಲಿಗೆ ಚಿತ್ರೀಕರಣ ಯತ್ನ ನಿಷ್ಫಲವಾಯಿತು.

ಹೊರದೇಶಗಳಿಂದ ಬಂದ ಮೂಕಿ ಚಿತ್ರಗಳ ಜೊತೆಗೆ ಮುಂಬಯಿ, ಪುಣೆ, ಕೊಲ್ಹಾಪುರ, ಕಲ್ಕತ್ತೆ ಮೊದಲಾದ ಕಡೆಗಳಲ್ಲಿ ಮೂಕ ಚಿತ್ರಗಳ ತಯಾರಿಕೆ ಚುರುಕುಗೊಂಡಾಗ ಬೆಂಗಳೂರಿನಲ್ಲಿ ಚಲನಚಿತ್ರಕ್ಕೆ ಸಂಬಂಧಪಟ್ಟಂತೆ ವಾಣಿಜ್ಯ ಚಟುವಟಿಕೆಗಳೂ ಚುರುಕುಗೊಂಡವು. ಚಲನಚಿತ್ರಗಳ ವಿತರಣೆಯಲ್ಲಿ ದಕ್ಷಿಣ ಭಾರತಕ್ಕೆ ಕೇಂದ್ರವಾಗಿ ಬೆಂಗಳೂರು ಬೆಳೆಯ ತೊಡಗಿತು. ಮದರಾಸು, ವಿಜಯವಾಡ, ತಿರುಚಿನಾಪಳ್ಳಿ ಮುಂತಾದ ಪ್ರದೇಶಗಳಲ್ಲದೆ, ಸಿಂಹಳಕ್ಕೆ ಕೂಡ ಬೆಂಗಳೂರಿನಿಂದಲೇ ಚಲನಚಿತ್ರಗಳನ್ನು ಪುರೈಸಲಾಗುತ್ತಿತ್ತು. ಈ ಚಲನಚಿತ್ರ ವಿತರಣ ಸಂಸ್ಥೆಗಳಲ್ಲಿ ಹಣ ಹೂಡಿದವರು, ಮುಂಬಯಿ ಗುಜರಾತಿನ ಮೂಲದ ಪಟೇಲರು, ದೇಸಾಯಿಗಳು.

ಮುಂಬಯಿನ ಲಕ್ಷ್ಮಿ ಫಿಲಂ ಕಂಪನಿಯ ಪಾಲುದಾರರಾಗಿದ್ದ ಹರಿಭಾಯಿ ದೇಸಾಯಿ ಮತ್ತು ಗೆಳೆಯರು ಬೆಂಗಳೂರಿಗೆ ಬಂದಿದ್ದಾಗ, ಇಲ್ಲಿನ ಹಿತಕರವಾದ ಹವಾಮಾನ ಹಾಗೂ ನಿಸರ್ಗ ಸೌಂದರ್ಯದಿಂದ ಆಕರ್ಷಿತರಾದರು. ಬೆಂಗಳೂರಿನ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿದ್ದ ದಿವಾನ್ ಮಿರ್ಜಾರವರಿಗೆ ಸೇರಿದ ಬಂಗಲೆಯಲ್ಲಿ ಸ್ಟುಡಿಯೋ ಆರಂಭಿಸಿ, 1929ರಿಂದ 1931ರವರೆಗೆ 39 ಮೂಕ ಚಿತ್ರಗಳನ್ನು ನಿರ್ಮಿಸಿದರು. ವಿದೇಶದಲ್ಲಿ ತರಬೇತಿ ಪಡೆದು ಬಂದಿದ್ದ ಹರಿಭಾಯಿ ದೇಸಾಯಿಯವರ ಸೂರ್ಯ ಫಿಲಂ ಕಂಪನಿ ಇತರ ಕಂಪೆನಿಗಳಿಗಿಂತ ವ್ಯವಸ್ಥಿತವಾಗಿತ್ತು. ಉತ್ತಮ ತಂತ್ರಜ್ಞರಿಂದ ಕೂಡಿತ್ತು. ಚಿತ್ರಗಳ ಗುಣಮಟ್ಟವೂ ಉತ್ತಮವಾಗಿತ್ತು. ಬೇಡಿಕೆ ಕೂಡ ಇತ್ತು. ಮುಂಬಯಿನಿಂದ ಕರೆಸಿಕೊಂಡಿದ್ದ ಕಲಾವಿದರ ಜೊತೆಗೆ ಸ್ಥಳಿಯ ಪ್ರತಿಭೆಗಳಿಗೂ ಅವಕಾಶ ನೀಡಿದರು. ಹಾಗೆ ತಾರಾ ಪಟ್ಟಕ್ಕೇರಿದವರು, ಲಕ್ಷ್ಮೀಬಾಯಿ, ಕಮಲಾಬಾಯಿ, ಅನ್ನಪುರ್ಣಮ್ಮ, ಸುಂದರರಾವ್ ನಾಡಕರ್ಣಿ ಮೊದಲಾದವರು.

ಬೆಂಗಳೂರಿನಲ್ಲಿ ಸಿನಿಮಾ ಚಟುವಟಿಕೆ ಬದಲಾಯಿಸಿ

,

ಏಕೀಕರಣದ ಅನಂತರ ಬದಲಾಯಿಸಿ

1956ರಲ್ಲಿ ಕರ್ನಾಟಕ ಏಕೀಕರಣದಿಂದಾಗಿ, ಹೈದರಾಬಾದು, ಮುಂಬಯಿ, ಹಾಗೂ ಮದರಾಸು ಪ್ರಾಂತ್ಯಗಳಿಂದ, ಕನ್ನಡ ಭಾಷೆಯೇ ಪ್ರಚಲಿತದಲ್ಲಿದ್ದ ಭಾಗಗಳು ಹಳೆಯ ಮೈಸೂರಿನೊಂದಿಗೆ ವಿಲೀನವಾಗಿ ಕರ್ನಾಟಕ ರಾಜ್ಯವಾಯಿತು. ಕನ್ನಡಿಗರ ಬಹುದಿನದ ಆಸೆ ಇದರಿಂದಾಗಿ ನನಸಾಯಿತಾದರೂ, ಅನೇಕ ಕಾರಣಗಳಿಂದಾಗಿ ಭಾವನಾತ್ಮಕವಾಗಿ ಕನ್ನಡಿಗರ ಮನಸ್ಸುಗಳು, ರಾಜಕೀಯ, ಶಿಕ್ಷಣ, ವಾಣಿಜ್ಯ, ವ್ಯವಹಾರ, ಸಾಹಿತ್ಯ, ಸಂಸ್ಕೃತಿ, ಹಾಗೂ ಇತರ ಕ್ಷೇತ್ರಗಳಲ್ಲಿ ವಿಲೀನವಾಗಲು ಸಾಕಷ್ಟು ಸಮಯ ಬೇಕಾಯಿತು. ಚಲನಚಿತ್ರರಂಗವೂ ಇದಕ್ಕೆ ಹೊರತೇನಲ್ಲ. ಆದರೆ, ಸಾಹಿತ್ಯ, ಕಲೆ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಚಲನಚಿತ್ರ ಮಾಧ್ಯಮದ ಮೂಲಕ, ಸಮಗ್ರ ಕನ್ನಡಿಗರಲ್ಲಿ, ಅಂದರೆ, ಹಳೇ ಮೈಸೂರಿನವರ ಹಾಗೂ ಹೊಸದಾಗಿ ವಿಲೀನಗೊಂಡಿರುವ ಉತ್ತರಕರ್ನಾಟಕದ ಪ್ರದೇಶದ ಜನರ ಮಧ್ಯೆ, ಆರ್ಥಿಕ ಹಾಗೂ ಸಾಮಾಜಿಕ ಅಂತರಗಳನ್ನು ಬದಿಗಿಟ್ಟು, ಭಾವೈಕ್ಯತೆಯನ್ನು ವೃದ್ಧಿಗೊಳಿಸಲು ಸಾಧ್ಯವಾಯಿತು. ಭಾರತದಲ್ಲಿ, ಜನಸಾಮಾನ್ಯರ ಮೇಲೆ ಚಲನಚಿತ್ರದ ಪ್ರಭಾವ ಎಷ್ಟರ ಮಟ್ಟಿಗೆ ಇದೆ ಎಂಬುದು ಇದರಿಂದ ಅರಿವಾಗುತ್ತದೆ. ನೆರೆ ರಾಜ್ಯಗಳಲ್ಲಿ ಕೂಡ ಚಲನಚಿತ್ರರಂಗ ರಾಜಕೀಯ ಕ್ಷೇತ್ರದಲ್ಲಿ ಕೂಡ ಹಲವಾರು ವರ್ಷಗಳಿಂದ ತನ್ನ ಪ್ರಭಾವವನ್ನು ಬೀರುತ್ತಲೇ ಬಂದಿದೆ.

1950ರ ದಶಕ ಪ್ರಾರಂಭವಾಗುವ ವೇಳೆಗೆ, ಕನ್ನಡ ಚಲನಚಿತ್ರರಂಗ ತನ್ನದೇ ಆದ ಬುನಾದಿಯಮೇಲೆ ತನ್ನ ಅಸ್ತಿತ್ವವನ್ನು ಕಟ್ಟಿ ಬೆಳೆಸಿಕೊಂಡಿರಲಿಲ್ಲ. ಎಲ್ಲವೂ ಪಕ್ಕದ ರಾಜ್ಯ ಮದರಾಸಿನಲ್ಲೇ ಆಗಬೇಕಾಗಿತ್ತು. ಇದುವರೆಗೆ ತಯಾರಾದ ಚಿತ್ರಗಳ ಸಂಖ್ಯೆ ಕೂಡ ಬಹು ಕಮ್ಮಿ. 1934 ರಿಂದ 1950ರವರೆಗೆ ತಯಾರಾದ ವಾಕ್ಚಿತ್ರಗಳ ಸಂಖ್ಯೆ ಕೇವಲ 28 ಮಾತ್ರ. ತಮಿಳು ಹಾಗೂ ತೆಲುಗು ಚಿತ್ರಗಳ ತಯಾರಿಕೆಗೆ ಕೇಂದ್ರವಾಗಿದ್ದ ಮದರಾಸಿನಲ್ಲಿ ಚಲನಚಿತ್ರ ನಿರ್ಮಾಣ ಚಟುವಟಿಕೆಗಳು ಬಿರುಸಿನಿಂದ ನಡೆಯತಿತ್ತು. ಅವುಗಳ ಭರಾಟೆಯ ಮಧ್ಯದಲ್ಲಿ ನುಸುಳಿಕೊಂಡು, ಆಗೊಂದು, ಈಗೊಂದು, ಕನ್ನಡ ಚಿತ್ರಗಳು ಹೊರಬರುತ್ತ್ತಿದ್ದವು. ಕನ್ನಡಿಗರು ಇಷ್ಟಕ್ಕೇ ತೃಪ್ತಿ ಪಟ್ಟುಕೊಳ್ಳಬೇಕಿತ್ತು. 1950ರ ದಶಕ ಈ ಒಂದು ಜಡತ್ವದಿಂದ ಪ್ರಾರಂಭವಾದರೂ, ಮೊದಲ ವರ್ಷದಲ್ಲೇ, ಅಂದರೆ 1951ರಲ್ಲಿಯೇ, ಎರಡು ಚಿತ್ರಗಳು, ರಾಜಾ ವಿಕ್ರಮ, ಮತ್ತು ಜಗನ್ಮೋಹಿನಿ, ತೆರೆಕಂಡು ಕನ್ನಡಿಗರ ಮನಸ್ಸನ್ನು ಸೂರೆಗೊಂಡದ್ದೇ ಅಲ್ಲದೆ, ಚಲನಚಿತ್ರರಂಗದಲ್ಲಿ ಹೊಸ ಹುರುಪನ್ನು ಮೂಡಿಸಿತು. ಕೆಂಪರಾಜ ಅರಸರು ತಯಾರಿಸಿದ, ರಾಜಾ ವಿಕ್ರಮ, ಕನ್ನಡ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲು. ಅದುವರೆಗೆ ತಯಾರಾದ ಯಾವಚಿತ್ರವೂ ಗಳಿಸದಷ್ಟು ಯಶಸ್ಸನ್ನು ಗಳಿಸಿ ಹೊಸ ದಾಖಲೆ ನಿರ್ಮಿಸಿ, ಕನ್ನಡ ಚಿತ್ರಗಳ ನಿರ್ಮಾಣದಲ್ಲಿ ಹಣತೊಡಗಿಸಲು ಹಿಂಜರಿಯತ್ತಿದ್ದ ಅನೇಕ ನಿರ್ಮಾಪಕರಲ್ಲಿ ಮನೆಮಾಡಿದ್ದ ಅನಿಶ್ಚತೆಯನ್ನು ಹೋಗಲಾಡಿಸಿ ಹೊಸ ಲವಲವಿಕೆ ಉಂಟು ಮಾಡಲು ಕಾರಣವಾಯಿತು. ರಾಜಾವಿಕ್ರಮದ ಕಥಾವಸ್ತುವೇನು ಹೊಸದಲ್ಲ. ಅನೇಕ ಬಾರಿ ನಮ್ಮ ಹಳ್ಳಿಗಳಲ್ಲಿ ನಡೆಯುತ್ತಿದ್ದ ಬಂiÀÄಲು ನಾಟಕಗಳಲ್ಲಿ, ಹಾಗೂ ವೃತ್ತಿಪರ ರಂಗಭೂಮಿಗಳಲ್ಲಿ ಪ್ರತಿವರ್ಷವೂ ತಪ್ಪದೇ ಆಡುತ್ತಿದ್ದ ಶನಿಮಹಾತ್ಮೆ ಪೌರಾಣಿಕ ನಾಟಕದ ಕಥೆಯೇ ಇದರ ಮೂಲ ಕೂಡ. ನಮಗೆ ಗೊತ್ತಿದ್ದಂತೆ, ನಮ್ಮ ಹಳ್ಳಿಗಳಲ್ಲಿ ಅಂದಿನ ದಿನಗಳಲ್ಲಿ ಶನಿಯ ಕಾಟಗಳನ್ನು ಅನುಭವಿಸಿದ ರಾಜಾವಿಕ್ರಮ ಹಾಗೂ ವಿಶ್ವಾಮಿತ್ರನ ಕಾಟಗಳನ್ನು ಅನುಭವಿಸಿದ ಹರಿಶ್ಚಂದ್ರ, ಈ ಇಬ್ಬರ ಬಗ್ಗೆ ಹಳ್ಳಿಯ ಜನರಲ್ಲಿ ಅಪಾರ ಭಕ್ತಿ. ಇವರ ಕಥೆಗಳನ್ನು ಕೇಳಿದರೆ, ಪುಣ್ಯ ಸಿಗುವುದೆಂಬುದು ಜನರಲ್ಲಿ ಇದ್ದ ಗಾಢನಂಬಿಕೆ. ಈ ಕಥೆ ಬೆಳ್ಳಿತೆರೆಯಮೇಲೆ ಬಂದದ್ದೇ ತಡ ಜನರಿಗೆ ಸುಗ್ಗಿ ಬಂದ ಹಾಗಾಯಿತು. ಟೆಂಟ್ ಚಿತ್ರ ಮಂದಿರಗಳಲ್ಲಿ ಚಿತ್ರ ಪ್ರಾರಂಭಕ್ಕೆ ಮುಂಚೆ ಅನೇಕರು ತೆಂಗಿನಕಾಯಿ ಒಡೆದು ಮಂಗಳಾರತಿ ಮಾಡುತ್ತಿದ್ದರು. ಒಬ್ಬರಿಂದೊಬ್ಬರಿಗೆ ಈ ಚಿತ್ರದ ಬಗ್ಗೆ ಮಾಹಿತಿಗಳು ಜನರಿಗೆ ತಲುಪಿ ಹಳ್ಳಿಗಳಿಂದ ತಮ್ಮ ಕುಟುಂಬಗಳೊಂದಿಗೆ, ಎತ್ತಿನಗಾಡಿಗಳಲ್ಲಿ, ಅನೇಕರು ಪಟ್ಟಣಗಳಿಗೆ ಬಂದು ಚಿತ್ರವನ್ನು ನೋಡುತ್ತಿದ್ದರು. ಗಲ್ಲಾಪೆಟ್ಟಿಗೆ ಹಿಂದೆಂದೂ ತುಂಬದಷ್ಟು ತುಂಬಿತು. ರಾಜಾವಿಕ್ರಮನ ಪಾತ್ರದಲ್ಲಿ ಮಿಂಚಿದ ಕೆಂಪರಾಜ ಅರಸರು, ತಾವೇ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದರು. ಇದೇ ಸಮಯದಲ್ಲಿ, ಅಂದರೆ 1951ರಲ್ಲಿ, ಮತ್ತೊಂದು ಯಶಸ್ವೀ ಚಿತ್ರ ಜಗನ್ಮೋಹಿನಿ ಕೂಡ ತೆರೆ ಕಂಡಿತು. ಶಂಕರಸಿಂಗ್, ವಿಠಲಾಚಾರ್ಯ, ಹುಣಸೂರು ಕೃಷ್ಣಮೂರ್ತಿ, ಪಿ. ಶಾಮಣ್ಣ ಮುಂತಾದವರು ಕೈಗೂಡಿಸಿ ತಯಾರಿಸಿದ ಈ ಚಿತ್ರ ಅನೇಕ ಕಡೆ, 25 ವಾರಗಳ ಪ್ರದರ್ಶನಗೊಂಡು ರಜತೋತ್ಸವ ಆಚರಿಸಿತು. ಶಂಕರ ಸಿಂಗ್ ಮತ್ತು ವಿಠಲಾಚಾರ್ಯರ ಜೋಡಿ ಮಹಾತ್ಮ ಪಿಕ್ಚರ್ಸ್‌ ಲಾಂಛನದಲ್ಲಿ 1952ರಲ್ಲಿ ಶ್ರೀನಿವಾಸಕಲ್ಯಾಣ, ಚಂಚಲಕುಮಾರಿ, ಮತ್ತು ಸಾಮಾಜಿಕ ಚಿತ್ರ ದಳ್ಳಾಳಿ, ಈ ಮೂರು ಚಿತ್ರಗಳನ್ನು ತಯಾರಿಸಿ ಕನ್ನಡ ಚಿತ್ರ ರಂಗಕ್ಕೆ ತನ್ನದೇ ಆದ ಸ್ಥಾನವನ್ನು ಗಳಿಸಿಕೊಡುವಲ್ಲಿ ಮಹತ್ತರ ಸಾಧನೆ ಮಾಡಿದರು. ಇವರ ಆಶ್ರಯದಿಂದಾಗಿ, ಹರಿಣಿ, ಪ್ರತಿಮಾ ದೇವಿ, ಜಯಶ್ರಿ, ಲಕ್ಷ್ಮಿದೇವಿ, ವೀರಭದ್ರಪ್ಪ, ಮರಿರಾವ್, ಬಾಲಕೃಷ್ಣ, ಮಹಾಬಲರಾವ್ ಮುಂತಾದ ಅನೇಕ ಕಲಾವಿದರು ಹೆಚ್ಚಾಗಿ ರಂಗಭೂಮಿಯಿಂದ ಬೆಳ್ಳಿ ತೆರೆಗೆ ಪದಾರ್ಪಣ ಮಾಡುವ ಅವಕಾಶ ದೊರಕಿತು. ಪಿ. ಶಾಮಣ್ಣ ಸಂಗೀತ ನಿರ್ದೇಶಕರಾಗಿ, ಎಮ್.ಎಸ್. ಮಣಿ ಮತ್ತು ಜಿ. ದೊರೈ ಛಾಯಾಗ್ರಾಹಕರಾಗಿ, ಹುಣಸೂರು ಕೃಷ್ಣ ಮೂರ್ತಿಗಳು ಚಿತ್ರಕಥಾಕಾರರಾಗಿ ಚಲನಚಿತ್ರ ಜಗತ್ತಿಗೆ ಪ್ರವೇಶ ಮಾಡಿ ಮುಂದಿನ ದಿನಗಳಲ್ಲಿ ದೊಡ್ಡಹೆಸರು ಮಾಡಿದ ವ್ಯಕ್ತಿಗಳಾದರು. ದಳ್ಳಾಳಿ ಚಿತ್ರವು, ಬಡ್ಡಿ ಗೋಪಾಲರಾಯರ ಹಗರಣವನ್ನು ಆಧರಿಸಿ, ಹುಣಸೂರು ಕೃಷ್ಣಮೂರ್ತಿಯವರು ರಚಿಸಿದ ಧರ್ಮರತ್ನಾಕರ ಜನಪ್ರಿಯ ಸಾಮಾಜಿಕ ನಾಟಕಕ್ಕೆ ಮಾಡಿದ ಸ್ವಲ್ಪ ಬದಲಾವಣೆಗಳೊಂದಿಗೆ ತೆರೆಕಂಡಿತು. ಅಂದಿನ ಕಾಲದಲ್ಲಿ ಇದೊಂದು ನವ್ಯ ಪ್ರಯೋಗವೆಂದೇ ಹೇಳಬೇಕು. ಈ ಚಿತ್ರ ಕೂಡ ಅಪಾರ ಯಶಸ್ಸು ಗಳಿಸಿತು.

ಈ ಒಂದು ಆಶಾದಾಯಕ ಬೆಳೆವಣಿಗೆಯಿಂದ, ಅನೇಕರು ಸ್ಫೂರ್ತಿಗೊಂಡರು. ಪ್ರಮುಖವಾಗಿ ಕನ್ನಡ ರಂಗಭೂಮಿಯಲ್ಲಿ ಹಾಗೂ ಮದರಾಸಿನಲ್ಲಿ ತಮಿಳು ಚಿತ್ರ ರಂಗದ ಘಟಾನುಘಟಿಗಳೊಂದಿಗೆ ಕೆಲಸ ಮಾಡಿ ನುರಿತಿದ್ದ ಆರ್. ನಾಗೇಂದ್ರರಾಯರು, ತಾವೇ ನಿರ್ಮಾಪಕರಾಗಿ, ಆರ್.ಎನ್.ಆರ್.ಪಿಕ್ಚರ್ಸ್‌ ಲಾಂಛನದಲ್ಲಿ ಸಾಮಾಜಿಕ, ಹಾಸ್ಯಪ್ರಧಾನವಾದ ಜಾತಕಫಲ ಚಿತ್ರವನ್ನು ಕನ್ನಡ, ತಮಿಳು ಮತ್ತು ತೆಲುಗು, ಮೂರುಭಾಷೆಗಳಲ್ಲಿ ತಯಾರಿಸಿದರು. ಇದರಿಂದಾಗಿ ಸೂರ್ಯಕಲಾ, ಕಮಲಾಬಾಯಿ, ಟಿ.ಕೆ. ಬಾಲಚಂದ್ರನ್ ಮುಂತಾದ ಅನೇಕ ಹೊಸ ನಟ ನಟಿಯರು, ಪಿ.ಬಿ.ಶ್ರೀನಿವಾಸ್, ಜಿ.ಕೆ.ವೆಂಕಟೇಶ್ ಹಿನ್ನೆಲೆ ಗಾಯಕರಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಮಾಡಿದರು. ಈ ಚಿತ್ರವನ್ನು ರಾಯರು ಎ.ವಿ.ಎಂ ಸ್ಟುಡಿಯೋದಲ್ಲಿ ತಯಾರಿಸಿದರು.ಈ ದಶಕದಲ್ಲಿ, 1953ರಲ್ಲಿ ತೆರೆಕಂಡ ಬಿ.ವಿಠಲಾಚಾರ್ಯರ ಸೌಭಾಗ್ಯಲಕ್ಷ್ಮಿ ಚಿತ್ರದ ಮೂಲಕ ಕನ್ನಡಚಿತ್ರ ರಂಗದಲ್ಲಿ ಅಪಾರ ಯಶಸ್ಸುಗಳಿಸಿದ ರಾಜನ್-ನಾಗೇಂದ್ರ ಸೋದರರು ಸಂಗೀತ ನಿರ್ದೇಶಕರಾಗಿ ತಮ್ಮ ಕಲಾ ಪ್ರತಿಭೆಯುನ್ನು ಚಿತ್ರ ಪ್ರೇಮಿಗಳಿಗೆ ಮೊದಲ ಬಾರಿಗೆ ಪರಿಚಯಮಾಡಿಕೊಟ್ಟರು. ಇದೇ ಸಮಯದಲ್ಲಿ, ಗುಬ್ಬಿ ವೀರಣ್ಣನವರು ತಮ್ಮ ಹಿಂದಿನ ಸಂಸ್ಥೆಯಾದ ಕರ್ನಾಟಕ ಫಿಲಂಸ್ ಸಂಸ್ಥೆಯನ್ನು ಗುಬ್ಬಿ ಕರ್ನಾಟಕ ಫಿಲಂಸ್ ಎಂದು ಮರು ನಾಮಕರಣ ಮಾಡಿ, ಮತ್ತೆ ಚಿತ್ರರಂಗಕ್ಕೆ ಹೆಚ್ಚು ಉತ್ಸಾಹದಿಂದ ಧುಮುಕಿ ಗುಣಸಾಗರಿ ಚಿತ್ರವನ್ನು ತಯಾರಿಸಿದರು. ಹಿಂದೆ ಸಂಸಾರ ನೌಕ ಚಿತ್ರ ನಿರ್ದೇಶಿಸಿದ್ದ ಹೆಚ್.ಎಲ್.ಎನ್.ಸಿಂಹರವರು ಈ ಚಿತ್ರವನ್ನು ನಿರ್ದೇಶಿಸಿದರು. ಹೊನ್ನಪ್ಪ ಭಾಗವತರು, ಗುಬ್ಬಿ ವೀರಣ್ಣನವರು, ಬಿ.ಜಯಮ್ಮ, ಟಿ.ಎಸ್.ಕರಿಬಸವಯ್ಯ, ಪಂಢರಿಬಾಯಿ, ಕೃಷ್ಣಕುಮಾರಿ, ಮುಂತಾದವರು ತಾರಾಗಣದಲ್ಲಿದ್ದರು. 1954ರಲ್ಲಿ ನಡೆದ ಸಂತಸದ ಸಂಗತಿಯೆಂದರೆ ಸುಬ್ಬಯ್ಯನಾಯ್ಡು ಅವರ ನಾಟಕ ಕಂಪೆನಿಯಲ್ಲಿ ಕೆಲಸಮಾಡುತ್ತಿದ್ದ ಯುವಕ ಎಸ್.ಪಿ.ಮುತ್ತುರಾಜ್ ಎಂಬುವರನ್ನು ಗುಬ್ಬಿ ವೀರಣ್ಣನವರ ಮುಂದಿನ ಚಿತ್ರ ಬೇಡರಕಣ್ಣಪ್ಪ ಚಿತ್ರದಲ್ಲಿ ಕಣ್ಣಪ್ಪನ ಪ್ರಮುಖ ಪಾತ್ರದಲ್ಲಿ ನಟಿಸಲು ಆಯ್ಕೆಯಾದದ್ದು. ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ಪುತ್ರರಾದ ಈ ವ್ಯಕ್ತಿಯೇ ಮುಂದೆ ರಾಜಕುಮಾರ್ ಹೆಸರಿನಿಂದ ಕನ್ನಡಿಗರ ಹೆಮ್ಮೆಯ, ಪ್ರೀತಿಯ ಡಾ|| ರಾಜಕುಮಾರ್ ಆಗಿ ರಾರಾಜಿಸಿದರು. ಇದೇ ಹೆಸರಿನ ನಾಟಕದಲ್ಲಿ ಪಾತ್ರವಹಿಸುತ್ತಿದ್ದ ಜಿ.ವಿ.ಅಯ್ಯರ್, ನರಸಿಂಹರಾಜು ಅವರು ಚಿತ್ರದಲ್ಲಿಯೂ ಅದೇ ಪಾತ್ರಗಳನ್ನು ವಹಿಸಿದರು. ಬೇಡರ ಕಣ್ಣಪ್ಪ ಚಿತ್ರ ಚಿತ್ರಮಂದಿರಗಳಲ್ಲಿ ತೆರೆಕಂಡ ಮೇಲೆ, ಕನ್ನಡನಾಡಿನ ಎಲ್ಲ ಭಾಗಗಳಿಂದ ಪ್ರಶಂಸೆಗಳ ಸುರಿಮಳೆ ಧಾರಾಕಾರವಾಗಿ ಬರಲಾರಂಭಿಸಿತು. ಎಲ್ಲರ ಬಾಯಿಯಲ್ಲೂ ಚಿತ್ರದ ಗೀತೆಗಳೇ. ಗೀತೆಗಳಿಗೆ ರಾಗ ಸಂಯೋಜನೆ ಮಾಡಿದ ಸುದರ್ಶನ್ರವರು, ನಾಟಕ ರಂಗದಿಂದ ಚಿತ್ರ ರಂಗಕ್ಕೆ ಪ್ರವೇಶ ಮಾಡಿ ವಿಜೃಂಭಿಸಿದ ಮುತ್ತುರಾಜ್, ಜಿ.ವಿ.ಅಯ್ಯರ್ ಮತ್ತು ನರಸಿಂಹರಾಜು, ನಿರ್ದೇಶಕರಾಗಿ ಹೆಚ್.ಎಲ್.ಎನ್.ಸಿಂಹರವರು, ನಿರ್ಮಾಪಕರಾಗಿ ಗುಬ್ಬಿ ವೀರಣ್ಣನವರು ಈ ಚಿತ್ರದ ಮೂಲಕ ಕನ್ನಡಿಗರು ಹೆಮ್ಮೆ ಪಟ್ಟುಕೊಳ್ಳಬಹುದಾದಂತಹ ಕಾರ್ಯ ಮಾಡಿದರು. ಅಪಾರ ಯಶಸ್ಸುಗಳಿಸಿದ್ದೇ ಅಲ್ಲದೆ, ರಾಷ್ಟ್ರಮಟ್ಟದಲ್ಲಿ ಅರ್ಹತಾ ಪತ್ರ ಗಳಿಸುವ ಮೂಲಕ ರಾಷ್ಟ್ರಪ್ರಶಸ್ತಿಗೆ ಪಾತ್ರವಾದ ಮೊದಲ ಕನ್ನಡ ಚಿತ್ರವಾಯಿತು. 1954ರಲ್ಲಿ ತೆರೆಕಂಡ ಇತರ ಚಿತ್ರಗಳಲ್ಲಿ, ಬಿ. ವಿಠಲಾಚಾರ್ಯರು ತಮ್ಮದೇ ಆದ ವಿಠಲ್ ಪ್ರೊಡಕ್ಷನ್ ಲಾಂಛನದಲ್ಲಿ ಮಾಡಿದ ಕನ್ಯಾದಾನ. ಕಪ್ಪು ಬಣ್ಣದ ಹೆಣ್ಣು ಮಗಳ ಮದುವೆಯ ವಸ್ತುವನ್ನು ಅಧಾರಮಾಡಿಕೊಂಡು ತಯಾರಿಸಿದ ಈ ಚಿತ್ರ ಅತ್ಯಂತ ಯಶಸ್ವಿಯಾಗಿ, ಈ ಚಿತ್ರದಲ್ಲಿ ಅತ್ಯಂತ ಪ್ರಮುಖ ಪಾತ್ರವಾದ ದಳ್ಳಾಳಿ ಸೀತಾರಾಮಯ್ಯನ ಪಾತ್ರದಲ್ಲಿ ಟಿ.ಎನ್. ಬಾಲಕೃಷ್ಣ ರವರು ಒಳ್ಳೆಯ ಅಭಿನಯ ನೀಡಿ ಕನ್ನಡ ಚಿತ್ರಪ್ರೇಮಿಗಳ ಹೃದಯದಲ್ಲಿ ತಮ್ಮ ಸ್ಥಾನವನ್ನು ದಾಖಲಿಸಿದರು. ಮತ್ತೊಂದು ವಿಶೇಷವೆಂದರೆ, ಇದೇ ವರ್ಷದಲ್ಲಿ ನಟಶೇಖರ ಚಿತ್ರದ ಮೂಲಕ ಚೊಕ್ಕಣ್ಣ ಎಂಬ ಯುವಕನ ನಟನೆ ಜನಪ್ರಿಯತೆಗಳಿಸಿದ್ದು. ಇದೇ ಚೊಕ್ಕಣ್ಣ ಮುಂದೆ ತನ್ನ ಹೆಸರನ್ನು ಕಲ್ಯಾಣ್ ಕುಮಾರ್ ಎಂದು ಬದಲಾವಣೆ ಮಾಡಿಕೊಂಡು, ಕನ್ನಡ ಹಾಗೂ ತಮಿಳು ಚಿತ್ರಗಳಲ್ಲಿ ಖ್ಯಾತ ನಟನಾಗಿ ಹೆಸರು ಮಾಡಿದರು.

1955ರಲ್ಲಿ, ಇದುವರೆಗೆ ಚಿತ್ರಗಳಲ್ಲಿ ಅಭಿನಯ, ಸಂಗೀತ, ಹಾಗೂ ತಮ್ಮ ಸುಶ್ರಾವ್ಯ ಗಾಯನಗಳ ಮೂಲಕ ಪರಿಚಿತರಾಗಿದ್ದ ಹೊನ್ನಪ್ಪಭಾಗವತರು, ಲಲಿತಕಲಾ ಫಿಲಂ ಸಂಸ್ಥೆಯನ್ನು ಸ್ಥಾಪಿಸಿ ಮಹಾಕವಿ ಕಾಳಿದಾಸ ಚಿತ್ರವನ್ನು ಕನ್ನಡದಲ್ಲಿ ತಯಾರಿಸಿದರು. ವಿಶೇಷವೆಂದರೆ, ಹೆಸರಾಂತ ನಟಿ ಸರೋಜಾದೇವಿ ಈ ಚಿತ್ರದಲ್ಲಿ ಮೊದಲಬಾರಿಗೆ ಮುಖ್ಯ ಪಾತ್ರವಹಿಸಿದ್ದು. ಇಷ್ಟು ಹೊತ್ತಿಗಾಗಲೇ ಕೆಲವು ಚಿತ್ರಗಳಿಗೆ ಸಾಹಿತ್ಯ ಒದಗಿಸಿದ್ದ ಕು.ರಾ.ಸೀತಾರಾಮಶಾಸ್ತ್ರೀಯವರು ಈ ಚಿತ್ರಕ್ಕೆ ಸಾಹಿತ್ಯ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ನಿರ್ವಹಿಸಿದರು. ಜನಪ್ರಿಯವಾದ ಹಾಡುಗಳಿಂದ, ಹಾಗೂ ರಾಷ್ಟ್ರಪತಿಗಳಿಂದ ಅರ್ಹತಾಪತ್ರ ಗಳಿಸಿದ ಖ್ಯಾತಿಯಿಂದ ಈ ಚಿತ್ರ ಒಂದು ಮಹತ್ವದ ಚಿತ್ರವಾಯಿತು.

ಈ ದಶಕದಲ್ಲಿ ಸುದ್ದಿಗೆ ಗ್ರಾಸವಾದ ಮತ್ತೊಂದು ಚಿತ್ರ ಮೊದಲತೇದಿ. 1955ರಲ್ಲಿ, ಪದ್ಮಿನಿ ಪಿಕ್ಚರ್ಸ್‌ ಲಾಂಛನದಲ್ಲಿ, ಬಿ.ಆರ್.ಪಂತುಲು ಅವರು, ಪಿ.ನೀಲಕಂಠನ್ ನಿರ್ದೇಶನದಲ್ಲಿ ತಯಾರಿಸಿದ ಈ ಚಿತ್ರದಲ್ಲಿ, ಪಂತುಲು ಮತ್ತು ರಾಜಮ್ಮ ನವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡು, ಮುಂಬರುವ ಈ ತಂಡದ ಚಿತ್ರಗಳಿಗೆ ಈ ಜೋಡಿಯು ನಾಂದಿಯಾಯಿತು. ಈ ಚಿತ್ರದ ಸಂಗೀತ ನಿರ್ದೇಶಕರಾದ ಟಿ.ಜಿ.ಲಿಂಗಪ್ಪನವರು ಮುಂದಿನ ಅನೇಕ ಪಂತುಲು ತಂಡದ ಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು ಮತ್ತು ಕನ್ನಡ ಚಿತ್ರ ರಂಗದಲ್ಲಿ ಅಸಂಖ್ಯಾತ ಜನಪ್ರಿಯ ಹಾಡುಗಳನ್ನು ಸಂಯೋಜಿಸಿ ಖ್ಯಾತಿಗಳಿಸಿದರು. ಪಂಢರೀಬಾಯಿಯವರ ಸಂತಸಖು, ಟಿ.ವಿ.ಸಿಂಗ್ ಠಾಕೂರ್ ಮತ್ತು ಜಿ.ಕೆ.ವಿಶ್ವನಾಥ ಶೆಟ್ಟಿ ತಯಾರಿಸಿದ ಸೋದರಿ, ಮೈಸೂರಿನಲ್ಲಿ ಪ್ರೀಮಿಯರ್ ಸ್ಟುಡಿಯೊ ಸ್ಥಾಪಿಸಿದ ಎಂ.ಎನ್. ಬಸವರಾಜಯ್ಯನವರು ತಮ್ಮ ಸ್ಟುಡಿಯೊದಲ್ಲಿ ತಾವೇ ತಯಾರಿಸಿದ ಚೊಚ್ಚಲ ಚಿತ್ರ ಸ್ತ್ರೀೕರತ್ನ, ಶಂಕರ ಸಿಂಗ್ ಮತ್ತು ಬಿ.ಆರ್.ಪಂತುಲು ಅವರು ಪ್ರತ್ಯೇಕವಾಗಿ ನಿರ್ಮಿಸಿದ, ಒಂದೇ ಕಥಾವಸ್ತುವಿನ ಶಿವಶರಣೆ ನಂಬಿಯಕ್ಕ, ಬಿ.ಆರ್. ಕೃಷ್ಣಮೂರ್ತಿ ಅವರ ಶ್ರೀ ರಾಮ ಪೂಜ, ಎಸ್. ಎಸ್. ವೈದ್ಯ ಅವರ ವಿಚಿತ್ರ ಪ್ರಪಂಚ ಈ ಚಿತ್ರಗಳು 1955ರಲ್ಲಿ ಕನ್ನಡಿಗರನ್ನು ತಲುಪಿದ ಉಳಿದ ಚಿತ್ರಗಳು. ಸ್ತ್ರೀರತ್ನ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರಾಂತ ನಟನಾಗಿ ಅನೇಕ ವರ್ಷಗಳ ಸೇವೆ ಸಲ್ಲಿಸಿರುವ ಕೆ.ಎಸ್.ಅಶ್ವತ್ ಅವರು ಮೊದಲಬಾರಿಗೆ ತೆರೆಯಮೇಲೆ ಕಾಣಿಸಿಕೊಂಡದ್ದು ವಿಶೇಷ ಸಂಗತಿ. ಸ್ತ್ರೀರತ್ನ ಭಾಗಶಃ ವರ್ಣದಲ್ಲಿ ತಯಾರಾದ ಚಿತ್ರ. 1950 ರದಶಕದ ಪ್ರಾರಂಭದವರೆಗೆ, ಕನ್ನಡ ಚಿತ್ರರಂಗ ಮಂದಗತಿಯಲ್ಲೇ ಚಲಿಸುತ್ತ ಬಂದರೂ, 1956ರಲ್ಲಿ ಕರ್ನಾಟಕ ಏಕೀಕರಣವಾಗುವ ಹೊತ್ತಿಗೆ, ಈ ಐದು ವರ್ಷಗಳ ಅವಧಿಯಲ್ಲಿ ಹಲವಾರು ಆರೋಗ್ಯಕರ ಬೆಳೆವಣಿಗೆಗಳಿಂದ ಆಶಾದಾಯಕ ಸ್ಥಿತಿ ತಲುಪಿತ್ತು. 1956 ರ ಒಳ್ಳೆಯ ಸುದ್ದಿಯೆಂದರೆ, ಅರೂರು ಪಟ್ಟಾಭಿ ನಿರ್ದೇಶನದಲ್ಲಿ ತಯಾರಾದ ಹರಿಭಕ್ತ ಚಿತ್ರಕ್ಕೆ ಅರ್ಹತಾ ಪತ್ರದ ಮೂಲಕ ರಾಷ್ಟ್ರ ಪ್ರಶಸ್ತಿ ಲಭಿಸಿತು. 1957ರಲ್ಲಿ ಆರ್.ಎನ್.ಆರ್. ಲಾಂಛನದಲ್ಲಿ, ಆರ್.ನಾಗೇಂದ್ರ ರಾಯರ ನಿರ್ದೇಶನದಲ್ಲಿ ರೂಪುಗೊಂಡ ಚಿತ್ರ ಪ್ರೇಮದಪುತ್ರಿ, ವಿಮರ್ಶಕರಿಂದ, ಚಿತ್ರಪ್ರೇಮಿಗಳಿಂದ, ಹಾಗೂ ರಾಷ್ಟ್ರ ಮಟ್ಟದಲ್ಲಿ ರಜತ ಪದಕ ಗಳಿಸಿ, ಒಂದು ಉತ್ತಮ ಚಿತ್ರವೆನಿಸಿಕೊಂಡಿತು. ರಾಯರ ಪುತ್ರ ಆರ್.ಎನ್. ಜಯಗೋಪಾಲ್ ಈ ಚಿತ್ರದಲ್ಲಿ ಸಾಹಿತಿಯಾಗಿ, ಮತ್ತು ಎಸ್.ಜೆ.ಪಾಲಿಟೆಕ್ನಿಕ್ನಲ್ಲಿ ಛಾಯಾಗ್ರಹಣದಲ್ಲಿ ಪದವಿ ಪಡೆದಿದ್ದ ಮತ್ತೊಬ್ಬ ಪುತ್ರ ಆರ್.ಎನ್. ಕೃಷ್ಣಪ್ರಸಾದ್ ರವರು ಛಾಯಾಗ್ರಾಹಕರಾಗಿ ಕೆಲಸ ಮಾಡಿದರು. ಅಂದಿನ ದಿನಗಳ ಹಿಂದಿ, ತಮಿಳು, ತೆಲುಗು ಚಿತ್ರಗಳ ಪ್ರಭಾವ ಕನ್ನಡಿಗರ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತಿದ್ದ ಕಾಲ. ಅನೇಕ ಹಾಡುಗಳು ಇತರ ಭಾಷೆಗಳ ಜನಪ್ರಿಯ ಹಾಡುಗಳ ಅನುಕರಣೆಯಾಗುತ್ತಿದ್ದವು. ತಮಿಳಿನಲ್ಲಿ ಮಲೈಕಳ್ಳನ್, ಹಿಂದಿಯಲ್ಲಿ ಆಜಾದ್, ಹೆಸರಿನಲ್ಲಿ ಪಕ್ಷಿರಾಜ ಸ್ಟುಡಿಯೊ ಮಾಲೀಕರಾದ ಎಸ್.ಎಂ.ಎಸ್ ನಾಯ್ಡು ಅವರು ಚಿತ್ರಗಳನ್ನು ತಯಾರು ಮಾಡಿ ಅಪಾರ ಯಶಸ್ಸು ಗಳಿಸಿದ್ದರು. 1957ರಲ್ಲಿ ಅವರು ಅದೇ ಚಿತ್ರವನ್ನು ಕನ್ನಡದಲ್ಲಿ ಬೆಟ್ಟದ ಕಳ್ಳ ಹೆಸರಿನಲ್ಲಿ ಮತ್ತೆ ಮಾಡಿದರು. ಈ ಚಿತ್ರದಲ್ಲಿ ತಾರಾಪಟ್ಟವೇರಿದ ಕಲ್ಯಾಣ್ ಕುಮಾರ್ ರವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು, ಮತ್ತು ಚಿತ್ರ ಒಳ್ಳೆಯ ಲಾಭಗಳಿಸಿತು. ಅದೇ ವರ್ಷದಲ್ಲಿ ಪದ್ಮಿನಿ ಪಿಕ್ಚರ್ಸ್‌ ಲಾಂಛನದಲ್ಲಿ, ಪಂತುಲು ರವರ ನಿರ್ದೇಶನದಲ್ಲಿ ಕನ್ನಡ ಮತ್ತು ತಮಿಳು ಎರಡೂ ಭಾಷೆಗಳಲ್ಲಿ ತಯಾರಾದ ಚಿತ್ರ ರತ್ನಗಿರಿ ರಹಸ್ಯ. ಉದಯಕುಮಾರ್, ಸಾಹುಕಾರ್ ಜಾನಕಿ, ಜಮುನಾ, ಎಂ.ವಿ. ರಾಜಮ್ಮ, ಡಿಕ್ಕಿ ಮಾಧವ ರಾವ್ ಮುಂತಾದವರು ನಟಿಸಿದ ಈ ಚಿತ್ರ ಜಾನಪದ ಕಥೆಯ ಆಧಾರದಮೇಲೆ ರಚನೆಗೊಂಡು, ಸಾಹಸಮಯ ದೃಶ್ಯಗಳನ್ನು ಅದ್ದೂರಿಯಾಗಿ ಚಿತ್ರಿಸಿದ ಚಿತ್ರ. ಕಣಗಾಲ್ ಪ್ರಭಾಕರ ಶಾಸ್ತ್ರಿಯವರ ಲೇಖನಿ ಹಾಗೂ ಟಿ.ಜಿ.ಲಿಂಗಪ್ಪ ನವರ ರಾಗ ಸಂಯೋಜನೆಯ ಫಲವಾಗಿ ಮೂಡಿಬಂದ ಸುಂದರ ಹಾಡುಗಳಿಂದ, ಮನಮೋಹಕ ನೃತ್ಯಗಳಿಂದ, ಜನಪ್ರಿಯವಾಯಿತು. ಪಂಢರಿಬಾಯಿಯವರು ತಯಾರಿಸಿದ ರಾಯರಸೊಸೆ ಚಿತ್ರದಲ್ಲಿ ರಾಜ್ಕುಮಾರ್ ರವರು ಪ್ರಥಮಬಾರಿಗೆ ಸಾಮಾಜಿಕ ಚಿತ್ರದಲ್ಲಿ ಅಭಿನಯಿಸುವಂತಾಯಿತು.

1958ರ ಮತ್ತೊಂದು ವಿಶೇಷ: ಸ್ಕೂಲ್ ಮಾಸ್ಟರ್ ಚಿತ್ರದ ಆಗಮನ. ರತ್ನಗಿರಿ ರಹಸ್ಯ ಚಿತ್ರದ ಯಶಸ್ಸಿನಿಂದ ಸ್ಫೂರ್ತಿ ಗೊಂಡ ಪಂತುಲು ಈ ಚಿತ್ರವನ್ನು ಕಲಾತ್ಮಕವಾಗಿ ನಿರ್ದೇಶಿಸಿದರು. ತಾವೇ ಸ್ವತಃ ಮುಖ್ಯ ಪಾತ್ರವಾದ ಸ್ಕೂಲ್ ಮಾಸ್ಟರ್ ಆಗಿ ಅಭಿನಯ ನೀಡಿ ಕನ್ನಡದ ಮನೆ ಮಂದಿಗಳಿಗೆ ಆದರ್ಶ ವ್ಯಕ್ತಿಯಾದರು. ಈ ಸಾಮಾಜಿಕ ಚಿತ್ರ 25 ವಾರಗಳು ಸತತವಾಗಿ ಪ್ರದರ್ಶನಗೊಂಡು ಒಂದು ದಾಖಲೆಯನ್ನೇ ಸ್ಥಾಪಿಸಿತು. ಎಲ್ಲ ವರ್ಗದ ಜನರಿಂದ ನೋಡಲ್ಪಟ್ಟು, ಅತಿಶಯವಾದ ಮೆಚ್ಚುಗೆಯನ್ನು ಪಡೆಯಿತು. ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರಪತಿಗಳ ರಜತಪದಕ ಹಾಗೂ ಅರ್ಹತಾ ಪತ್ರ ಎರಡೂ ಲಭಿಸಿದವು. 1950ರ ದಶಕದಲ್ಲಿ, ಕನ್ನಡ ಚಿತ್ರ ರಂಗದಲ್ಲಿ ಜರುಗಿದ ಪ್ರಗತಿಪಥದಲ್ಲಿ, ಇದು ಮಹತ್ವದ ಸಾಧನೆ. ಎ.ವಿ.ಎಂ ಪ್ರೊಡಕ್ಷನ್ ಲಾಂಛನದಲ್ಲಿ, ದುಬಾರಿಯ ವೆಚ್ಚದಲ್ಲಿ ತಯಾರಾದ ಭೂಕೈಲಾಸ, ಸುಬ್ಬಯ್ಯನಾಯ್ದು ಅವರ ಭಕ್ತ ಪ್ರಹ್ಲಾದ, ಗಿರಿಜಾ ಪ್ರೊಡಕ್ಷನ್ ಆಶ್ರಯದಲ್ಲಿ ತಯಾರಾದ ಅಣ್ಣ ತಂಗಿ, ಬಿ.ಎಸ್.ರಂಗಾ ಅವರ ಮಹಿಷಾಸುರಮರ್ದಿನಿ, ಎಮ್.ವಿ.ರಾಜಮ್ಮ ಅವರ ಮಕ್ಕಳ ರಾಜ್ಯ, ಡಿ.ಆರ್.ನಾಯ್ಡು ಅವರ ಭಕ್ತ ಕನಕದಾಸ, ಶಶಿಕಲಾಚಿತ್ರ ರವರ ಜಗಜ್ಯೋತಿ ಬಸವೇಶ್ವರ ಮತ್ತು ಕನ್ನಡ ಚಲನಚಿತ್ರ ಕಲಾವಿದರ ಸಂಘದಿಂದ ತಯಾರಾದ ರಣಧೀರ ಕಂಠೀರವ, ಈ ಚಿತ್ರಗಳು ಈ ದಶಕದ ಇತರ ಪ್ರಮುಖ ಚಿತ್ರಗಳೆಂದು ಪರಿಗಣಿಸಬಹುದು. ಭಕ್ತ ಕನಕದಾಸ ಮತ್ತು ಜಗಜ್ಯೋತಿ ಬಸವೇಶ್ವರ ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿಯೂ ಲಭಿಸಿತು.

ಕು.ರಾ.ಸೀತಾರಾಮಶಾಸ್ತ್ರೀಯವರು ನಿರ್ದೇಶಿಸಿದ ಅಣ್ಣತಂಗಿ ಚಿತ್ರಕ್ಕೆ ಅವರೇ ಸಾಹಿತ್ಯವನ್ನೂ ಬರೆದರು. ಈ ಚಿತ್ರದಲ್ಲಿ ರಾಜಕುಮಾರ್ ಮತ್ತು ಸರೋಜಾದೇವಿಯವರ ಅಭಿನಯ ಕನ್ನಡಿಗರ ಮನಸ್ಸಿನಲ್ಲಿ ಚಿರಸ್ಮರಣೀಯವಾಗಿ ಉಳಿದಿದೆ. ಹಳ್ಳಿಯಲ್ಲಿ ಬಳಸುವ ಅಚ್ಚ ಗ್ರಾಮೀಣ ಭಾಷೆಯ ಸಂಭಾಷಣೆ, ನಿಷ್ಕಲ್ಮಷವಾದ, ಮುಗ್ಧತೆಯ ಹೃದಯಗಳು, ಮರೆಯಲಾಗದಂತಹ ಹಾಡುಗಳು ಈ ಚಿತ್ರದ ಆಕರ್ಷಣೆ. ಇಂದಿಗೂ ನೋಡಿ ಆನಂದಿಸಬಹುದಾದಂತಹ ಚಿತ್ರ. ಭಕ್ತ ಕನಕದಾಸ ಚಿತ್ರದ ಮುಖ್ಯ ಪಾತ್ರದಲ್ಲಿ ರಾಜಕುಮಾರ್ ಅವರ ಅಚ್ಚುಕಟ್ಟಾದ ಅಭಿನಯ, ಪಂತುಲು ನಿರ್ದೇಶನದ ಮಕ್ಕಳರಾಜ್ಯ ದಲ್ಲಿ ಮೊದಲಬಾರಿಗೆ ಮಕ್ಕಳಿಂದಲೇ ಅಭಿನಯ, ಇವು ಸ್ಮರಿಸುವಂತಹ ವಿಶೇಷಗಳು. ರಣಧೀರ ಕಂಠೀರವ ಚಿತ್ರದ ಪ್ರಮುಖ ಪಾತ್ರದಲ್ಲಿ ರಾಜಕುಮಾರ್ ರವರು ಅತ್ಯದ್ಭುತವಾದ ಅಭಿನಯನೀಡಿ, ತಮ್ಮ ಚಿತ್ರ ರಂಗದಲ್ಲಿನ ಕೇವಲ ಆರು ವರ್ಷಗಳ ಅನುಭವದಲ್ಲಿ 18 ಚಿತ್ರಗಳಲ್ಲಿ ಅಭಿನಯಿಸಿ, ಕರ್ನಾಟಕದ ಆತ್ಯಂತ ಜನಪ್ರಿಯ ನಟರಾದರು.

1950 ರದಶಕದಲ್ಲಿ ತಯಾರಾದ ಒಟ್ಟು ಕನ್ನಡ ಚಿತ್ರಗಳ ಸಂಖ್ಯೆ ಸು. 75, ವಾಕ್ಚಿತ್ರಗಳ ಯುಗ ಪ್ರಾರಂಭವಾದ ವರ್ಷ 1934 ರಿಂದ 1950ರವರೆಗೆ ತಯಾರಾದ ಕೇವಲ 30 ಚಿತ್ರಗಳಿಗೆ ಹೋಲಿಸಿದಾಗ ಇದೊಂದು ದೊಡ್ಡ ಸಾಧನೆ ಎನ್ನಲೇ ಬೇಕು. ಕೇವಲ ಸಂಖ್ಯೆಯಲ್ಲಿ ಮಾತ್ರವಲ್ಲ, ಕನ್ನಡಚಿತ್ರಗಳ ನಿರ್ಮಾಣದಲ್ಲಿ ತೊಡಗಿದ್ದ ನಿರ್ಮಾಪಕರುಗಳು, ನಿರ್ದೇಶಕರುಗಳು, ತಾಂತ್ರಿಕವರ್ಗದವರುಗಳು, ವಿತರಕರು, ಪ್ರದರ್ಶಕರು, ಹಾಗೂ ವೀಕ್ಷಕರಲ್ಲಿ ಕೂಡ ಕನ್ನಡಚಿತ್ರಗಳ ಬಗ್ಗೆ, ಕನ್ನಡದ ಬಗ್ಗೆ, ಅಭಿಮಾನ, ಸ್ವಾಭಿಮಾನ, ಬೆಳೆಸಿಕೊಳ್ಳಬೇಕೆಂಬ ಒಂದು ಜಾಗೃತಿ ಈ ದಶಕದಲ್ಲಿ ಅಂಕುರವಾಯಿತು ಎಂಬುದು ಎಲ್ಲರಿಗೂ ಮನವರಿಕೆಯಾದ ಅಂಶ. ಬೇಡರ ಕಣ್ಣಪ್ಪ, ಮಹಾಕವಿ ಕಾಳಿದಾಸ, ಭಕ್ತ ವಿಜಯ, ಪ್ರೇಮದ ಪುತ್ರಿ, ಸ್ಕೂಲ್ ಮಾಸ್ಟರ್, ಜಗಜ್ಯೋತಿ ಬಸವೇಶ್ವರ, ಮತ್ತು ಭಕ್ತ ಕನಕದಾಸ ಈ ಚಿತ್ರಗಳಿಗೆ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳೂ ದೊರಕಿದವು. ಎಲ್ಲಕ್ಕಿಂತ ಹೆಚ್ಚಾಗಿ, ಶಂಕರ್ ಸಿಂಗ್, ವಿಠಲಾಚಾರ್ಯ, ಕೆಂಪರಾಜ ಅರಸ್, ಆರ್. ನಾಗೇಂದ್ರ ರಾವ್, ಗುಬ್ಬಿ ವೀರಣ್ಣ, ಬಿ.ಆರ್. ಪಂತುಲು ಹೆಚ್.ಎಲ್.ಎನ್.ಸಿಂಹ, ಹೊನ್ನಪ್ಪ ಭಾಗವತರ್, ಬಿ.ಎಸ್.ರಂಗಾ, ಎಂ.ಎನ್.ಬಸವರಾಜಯ್ಯ, ಸುಬ್ಬಯ್ಯ ನಾಯ್ಡು, ಮುಂತಾದವರು ಕನ್ನಡ ಚಿತ್ರಗಳ ನಿರ್ಮಾಣಕ್ಕೆ ಕೈಹಾಕಿದ್ದು, ಚಿತ್ರೋದ್ಯಮಕ್ಕೆ ಭದ್ರವಾದ ಅಸ್ತಿಭಾರವಾಯಿತು, ಮತ್ತು ಹೊಸ ಹುರುಪು ಕೊಟ್ಟಿತು. 1960ರ ದಶಕಕ್ಕೆ ಪದಾರ್ಪಣೆ ಮಾಡುವ ಸಮಯದಲ್ಲಿ ಕನ್ನಡ ಚಿತ್ರರಂಗ, ಅನೇಕ ಸಮಸ್ಯೆಗಳನ್ನು ಎದುರಿಸಬೇಕಿತ್ತು. ಕನ್ನಡಚಿತ್ರರಂಗಕ್ಕೆ ತನ್ನದೇ ಆದ ನೆಲೆಯನ್ನು ಕಂಡುಕೊಳ್ಳಬೇಕು, ಇದಾಗಬೇಕಾದರೆ ಚಿತ್ರಗಳನ್ನು ನಿರ್ಮಿಸಲು ಬೇಕಾದ ಸ್ಟುಡಿಯೋಗಳು, ಮತ್ತು ಇತರ ಸಲಕರಣೆಗಳನ್ನು ನಮ್ಮ ರಾಜ್ಯದಲ್ಲಿಯೇ ಸಜ್ಜುಗೊಳಿಸಬೇಕು. ತಯಾರಾದ ಚಿತ್ರಗಳನ್ನು ವಿತರಣೆಮಾಡುವುದು ಮತ್ತೊಂದು ಸಮಸ್ಯೆ. ಕನ್ನಡ ಚಿತ್ರಗಳಿಗೆ ಪ್ರದರ್ಶನಾವಕಾಶ ಸಿಗುವುದೇ ಕಷ್ಟವಿದ್ದಕಾಲವಾದ್ದರಿಂದ ವಿತರಕರು ಚಿತ್ರಗಳನ್ನು ಕೊಳ್ಳಲು ಹಿಂಜರಿಯುತ್ತಿದ್ದರು. ರಾಜಧಾನಿಯಾದ ಬೆಂಗಳೂರಿನಲ್ಲಿ ಹಾಗೂ ಮತ್ತಿತರ ಕಡೆಗಳಲ್ಲೂ ಅನ್ಯಭಾಷಾಚಿತ್ರಗಳಿಗೇ ಹೆಚ್ಚು ಅವಕಾಶಸಿಕ್ಕುತ್ತಿದ್ದ ಕಾಲ ಅದು, ಇದರ ಜೊತೆಗೆ ಡಬ್ಬಿಂಗ್ ಚಿತ್ರಗಳ ಹಾವಳಿ ಬೇರೆ. ಅನಂತರದ ಸಮಸ್ಯೆಯೆಂದರೆ, ಇಂತಹ ಪರಿಸ್ಥಿತಿಯಲ್ಲಿ ಚಿತ್ರತಯಾರಿಕೆಯಲ್ಲಿ ಹಣತೊಡಗಿಸಿ, ಕನ್ನಡ ಚಿತ್ರಮಾಡಬೇಕೆಂಬ ಮೊಂಡುಧೈರ್ಯ ಉಳ್ಳ ನಿರ್ಮಾಪಕರು ಮುಂದೆಬರುವುದೂ ದುರ್ಲಭವಾಗಿತ್ತು. ಕನ್ನಡ ಚಿತ್ರದ ನಟ ನಟಿಯರು, ತಾಂತ್ರಿಕವರ್ಗದವರು ಮತ್ತು ನಿರ್ಮಾಪಕರು ಕೂಡ ಆಗಿನ ದಿನಗಳಲ್ಲಿ ಮದರಾಸಿನಲ್ಲೇ ನೆಲೆಸಿದ್ದರು. ಕೆಲವರನ್ನು ಬಿಟ್ಟರೆ, ಕನ್ನಡದ ಕಲಾವಿದರ ಆರ್ಥಿಕ ಪರಿಸ್ಥಿತಿ ಕೂಡ ಚಿಂತಾಜನಕವಾಗಿಯೇ ಇತ್ತು. ಇಂತಹ ಸಮಸ್ಯೆಗಳ ಹಂದರದಲ್ಲಿಯೇ ಮುಳುಗಿದ್ದರೂ, ಕನ್ನಡಿಗರ ಚೇತನಶಕ್ತಿಯನ್ನು ಬಡಿದೆಬ್ಬಿಸಿ ಜಾಗೃತಗೊಳಿಸಬೇಕೆಂಬ ಹಂಬಲ ಮತ್ತು ಆ ದಿಶೆಯಲ್ಲಿ ಕಾರ್ಯೋನ್ಮುಖ ವಾಗಬೇಕೆಂಬ ದಿಟ್ಟತನ ಅನೇಕರಲ್ಲಿ ಉದ್ಭವವಾಗಿತ್ತು. ಇಂತಹ ಅವಕಾಶ ಈ ದಶಕದಲ್ಲಿ ಒದಗಿಬಂದದ್ದು ಕರ್ನಾಟಕದ ಒಂದು ಸುಯೋಗ.

1960-70ರ ದಶಕದ, ಪ್ರಾರಂಭದ ದಿವಸಗಳಲ್ಲಿ ಕೆಲವು ಘಟನೆಗಳು ನಡೆದವು. ಕನ್ನಡ ಚಿತ್ರಕಲಾವಿದರುಗಳು ಅನೇಕರು ವೃತ್ತಿರಂಗ ಭೂಮಿಯಿಂದ ಬಂದವರಾದ್ದರಿಂದ, ಚಿತ್ರತಯಾರಿಕೆಯ ಅಭಾವದಿಂದಾಗಿ ಅವರುಗಳಿಗೆ ಜೀವನ ನಡೆಸುವುದೇ ದುರ್ಭರ ವಾಗಿದ್ದರಿಂದ, ಚಲನಚಿತ್ರ ಕಲಾವಿದರ ಸಂಘ ಮಾಡಿಕೊಂಡು ಕರ್ನಾಟಕದಾದ್ಯಂತ ನಾಟಕಗಳನ್ನು ಪ್ರದರ್ಶಿಸಿ ಬಂದ ಹಣದಿಂದ ಕಲಾವಿದರಿಗೆ ರಕ್ಷಣೆಕೊಡಬೇಕೆಂಬ ಒಂದು ಯೋಜನೆಹಾಕಿಕೊಂಡು ಕಾರ್ಯೋನ್ಮುಖರಾದರು. ಈ ಪ್ರಯತ್ನ ಯಶಸ್ವಿಯೂ ಆಗಿ ಕನ್ನಡದಕಲಾವಿದರು ಸ್ವಲ್ಪ ಉಸಿರಾಡುವಂತಾಯಿತು, ಮತ್ತು ಸ್ವಲ್ಪ ಹಣವೂ ಉಳಿಯಿತು. ಉಳಿದ ಹಣದಿಂದ ಕಲಾವಿದರ ಸಂಘದವತಿಯಿಂದ ತಯಾರಾದ ರಣಧೀರ ಕಂಠೀರವ ಚಿತ್ರವನ್ನು ತಯಾರುಮಾಡಿದರು. ಕನ್ನಡಿಗರ ದೌರ್ಭಾಗ್ಯವೆಂದರೆ, ಈ ಚಿತ್ರವನ್ನು ಪ್ರದರ್ಶನಮಾಡಲು ಚಿತ್ರಮಂದಿರಗಳೇ ಸಿಗದೆ, ಡಬ್ಬದಲ್ಲಿಟ್ಟುಕೊಂಡು ಪರದಾಡಬೇಕಾಗಿ ಬಂದ ಶೋಚನೀಯ ಪರಿಸ್ಥಿತಿ. ಇಂತಹ ದುಸ್ಥಿತಿ ಬಂದದ್ದನ್ನು ಅರಿತ ಅನೇಕ ಕನ್ನಡಿಗರು ನಾವು ಎಚ್ಚತ್ತು ಕೊಳ್ಳದಿದ್ದರೆ ನಮಗೆ ನಮ್ಮ ರಾಜ್ಯದಲ್ಲಿಯೇ ಉಳಿಗಾಲವಿಲ್ಲವೆಂಬ ಸತ್ಯ ಮನವರಿಕೆಯಾಯಿತು.

ಇದೇ ಸಮಯದಲ್ಲಿ ರಾಜ್ಯದಲ್ಲಿ ನಾನಾಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಆಗುತ್ತಿದ್ದ ಅನ್ಯಾಯವನ್ನು ಪ್ರತಿಭಟಿಸಬೇಕೆಂದು ಖ್ಯಾತ ಕನ್ನಡ ಸಾಹಿತಿಗಳು, ಬುದ್ಧಿಜೀವಿಗಳು, ಜನಸಾಮಾನ್ಯರು, ಯುವಕರು ಎಲ್ಲರೂ ಅರಿತುಕೊಂಡರು. ಈ ಪ್ರತಿಭಟನೆಯನ್ನು ಚಳವಳಿ ರೂಪಕ್ಕೆ ತರಬೇಕೆಂದು ಮನಸ್ಸು ಮಾಡಿ ಮುಖಂಡತ್ವವನ್ನು ಕನ್ನಡದ ಖ್ಯಾತ ಲೇಖಕರಾಗಿದ್ದ, ಹಾಗೂ ಧೀಮಂತ ವ್ಯಕ್ತಿಯಾಗಿದ್ದ, ಅ.ನ.ಕೃಷ್ಣರಾಯರು ವಹಿಸಿಕೊಂಡದ್ದು ಒಂದು ಸುದೈವ. ಅಂದು ಅವರು, ಮ.ರಾಮಮೂರ್ತಿ, ಮತ್ತು ಅವರ ಸಂಗಡಿಗರುಗಳು ಬೆಂಗಳೂರಿನ ಬೀದಿಬೀದಿಗಳಲ್ಲಿ ಮಾಡಿದ ಭಾಷಣಗಳಿಗೆ ಜನ ಕಿಕ್ಕಿರಿದು ಪ್ರಚಂಡ ಕರತಾಡನಗಳೊಂದಿಗೆ ಪ್ರೋತ್ಸಾಹಿಸುತ್ತಿದ್ದದ್ದನ್ನು ನೆನೆಸಿಕೊಂಡರೆ ಇಂದಿಗೂ ರೋಮಾಂಚನವಾಗುತ್ತದೆ. ಈ ಒಂದು ಕನ್ನಡ ಚಳವಳಿಯನ್ನು ಪ್ರಾರಂಭಿಸಿದವರು ಅ.ನ.ಕೃ. ಅವರಾದರೂ, ಕೆಲವೇ ದಿನಗಳಲ್ಲಿ ಕಾರಣಾಂತರಗಳಿಂದ ಅವರು ಅದರಿಂದ ದೂರ ಸರಿದರು. ಅನಂತರದ ದಿನಗಳಲ್ಲಿ ಇದನ್ನು ಅನೇಕ ರೀತಿಗಳಲ್ಲಿ ಮುಂದುವರೆಸಿಕೊಂಡು ಬಂದವರು ವಾಟಾಳ್ ನಾಗರಾಜ್ ಮತ್ತು ಸಂಗಡಿಗರು. ಈ ಒಂದು ಚಳುವಳಿಯು ಕನ್ನಡ ಚಲನಚಿತ್ರಗಳ ಮೇಲೂ ತನ್ನ ಪ್ರಭಾವ ಬೀರಿತು.

ಈ ಘಟನೆಗಳ ಜೊತೆಗೆ, 1950ರಲ್ಲಿ ಭೀಕರ ಪ್ರವಾಹದಿಂದಾಗಿ ನಷ್ಟ ಅನುಭವಿಸಿದ ರಾಜ್ಯದ ಲಕ್ಷಾಂತರ ಜನರಿಗೆ ನೆರವು ನೀಡುವ ಸಲುವಾಗಿ ಚಿತ್ರಕಲಾವಿದರು ರಾಜ್ಯದಾದ್ಯಂತ ಕನ್ನಡ ಪತ್ರಿಕೆಗಳ ನೆರವಿನಿಂದ ಮತ್ತು ಪ್ರವಾಸ ಕೈಕೊಂಡು, ನಿಧಿಸಂಗ್ರಹಿಸಿಕೊಟ್ಟದ್ದು, ಕನ್ನಡ ಚಲನಚಿತ್ರಕ್ಕೆ ಒಂದು ವರಪ್ರದಾನವಾದ ಸಂಗತಿಯಾಯಿತು. ಇದರಿಂದಾಗಿ ಕನ್ನಡದ ಚಲನಚಿತ್ರಕಲಾವಿದರು, ಹಾಗೂ ಉದ್ಯಮಕ್ಕೆ ಸಂಬಂಧಪಟ್ಟ ಅನೇಕ ಗಣ್ಯರುಗಳು, ಕನ್ನಡಿಗರ ಅಭಿಮಾನವನ್ನು ಸಂಪಾದಿಸುವಲ್ಲಿ ಯಶಸ್ಸುಗಳಿಸಿದರು. ಈ ಒಂದು ಯಾತ್ರೆಯಲ್ಲಿ ಕನ್ನಡಿಗರ ಮಮತೆಯನ್ನು ಅಚ್ಚಳಿಯದೆ ಗಳಿಸಿ ಅವರ ಮನಸ್ಸಿನಲ್ಲಿ ತಮ್ಮ ಛಾಯೆಯನ್ನು ಖಾಯಂ ಆಗಿ ನೋಂದಣಿಸಿದ ವ್ಯಕ್ತಿ ರಾಜಕುಮಾರ್. ಕನ್ನಡ ಚಲನಚಿತ್ರರಂಗದ ಅನೇಕ ಗಣ್ಯರ ಪ್ರಕಾರ ಈ ಒಂದು ಯಾತ್ರೆ ಮರೆಯಲಾಗದ ಅನುಭವ ಎಂದು ಜ್ಞಾಪಿಸಿಕೊಳ್ಳುತ್ತಾರೆ.

ಈ ಎಲ್ಲ ಸಂಗತಿಗಳು 1960-70ರ ದಶಕದ ಆದಿಯಲ್ಲಿ ನಡೆದದ್ದರಿಂದ, ಕನ್ನಡಿಗರಲ್ಲಿ, ಹಾಗೂ ಚಲನಚಿತ್ರರಂಗದಲ್ಲಿ ಒಂದು ಹೊಸ ಜಾಗೃತಿ ಮೂಡಲು ಕಾರಣವಾಯಿತು.

ಈ ದಶಕದ ಮತ್ತೊಂದು ಶ್ಲಾಘನೀಯ ಸಂಗತಿಯೆಂದರೆ, ಚಲನಚಿತ್ರಗಳು ನಿರ್ಮಾಣಗೊಂಡ ಸಂಖ್ಯೆಯಲ್ಲಿ ಕೂಡ ಸಾಕಷ್ಟು ಪ್ರಗತಿ ಹೊಂದಿ, ಪ್ರತಿಭಾವಂತ ನಿದ್ಙೇಶಕರುಗಳಿಂದ ತಯಾರಾದ ನೂತನ ಶೈಲಿಯ ಉತ್ತಮಚಿತ್ರಗಳು ತರೆ ಕಂಡು ಹೊಸ ಮೈಲುಗಲ್ಲುಗಳನ್ನು ಸ್ಥಾಪಿಸಿದ್ದು. ಕನ್ನಡ ಚಲನಚಿತ್ರಗಳನ್ನು ತಯಾರುಮಾಡಲು ಬೇಕಾದ ಎಲ್ಲ ಸೌಕರ್ಯಗಳನ್ನೂ ನಮ್ಮ ರಾಜ್ಯದಲ್ಲಿಯೇ ಸ್ಥಾಪಿಸಲು ನೆರವಾಗಲು ಸರ್ಕಾರ ಯೋಜಿಸಿದೆ ಎಂಬ ತನ್ನ ಇಂಗಿತವನ್ನು ಸರ್ಕಾರವೂ ಬಹಿರಂಗಪಡಿಸಿತು. ಇದರಿಂದಾಗಿ ಚಿತ್ರರಂಗದಲ್ಲಿ ಅನೇಕ ಸಮಸ್ಯೆಗಳಿದ್ದರೂ, ಅವುಗಳನ್ನು ಪರಿಹರಿಸಲು ಕಾರ್ಯೋನ್ಮುಖರಾಗಬೇಕೆಂಬ ಆಶಯ ಎಲ್ಲ ವರ್ತುಲಗಳಿಂದ ಬಂದದ್ದು ಒಂದು ಆಶಾದಾಯಕ ಬೆಳೆವಣಿಗೆ ಎನ್ನಬಹುದು.

ಈ ಒಂದು ಅವಧಿಯಲ್ಲಿ ತಯಾರಾದ ಚಿತ್ರಗಳಲ್ಲಿ ಸಾಕಷ್ಟು ಹೆಸರು ಮಾಡಿ ವಿವಾದಗಳನ್ನೂ ಸೃಷ್ಟಿಸಿದ ಚಿತ್ರವೆಂದರೆ ನಂತರದ ದಿನಗಳಲ್ಲಿ ಖ್ಯಾತ ನಿರ್ದೇಶಕರಾಗಿ ಜನಪ್ರಿಯರಾದ ಎನ್.ಲಕ್ಷ್ಮೀನಾರಾಯಣ್ರವರ ನಾಂದಿ ಚಿತ್ರ. ಈ ಚಿತ್ರ ಅನೇಕ ಕಾರಣಗಳಿಗಾಗಿ ಒಂದು ಮೈಲುಗಲ್ಲು ಚಿತ್ರವಾಯಿತು. ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಗದೆ ಇದ್ದದ್ದು ಒಂದು ದೊಡ್ಡ ವಿವಾದವೇ ಆಯಿತು. ಆದರೂ ಗುಣಮಟ್ಟದವತಿಯಿಂದ ಈ ಚಿತ್ರಕ್ಕೆ ಹೆಸರಾಂತ ವಿಮರ್ಶಕರಿಂದ ಒಳ್ಳೆಯ ಪ್ರಶಂಸೆ ಸಿಕ್ಕಿತು. ಈ ಚಿತ್ರದ ವಸ್ತುವೂ ಕೂಡ ಹೊಸಹಾದಿಯನ್ನೇ ಹಿಡಿದಿತ್ತು. ಕಿವುಡು ಮತ್ತು ಮೂಕ ವ್ಯಕ್ತಿಗಳ ಬಾಳಿಗೆ ಬೆಳಕು ತರುವ ಉದ್ದೇಶವನ್ನು ವಸ್ತುವನ್ನಾಗಿ ಬಳಸಿಕೊಂಡು ಮಾಡಿದ ಚಿತ್ರ ನಾಂದಿ. ಇಂತಹ ಪ್ರಾಯೋಗಿಕ ಚಿತ್ರಕ್ಕೆ ಸರಿಯಾದ ಪುರಸ್ಕಾರ ಸಿಗಲಿಲ್ಲವೆಂಬ ಕೊರಗು ಇಂದಿಗೂ ಅನೇಕರಲ್ಲಿ ಹಾಗಿಯೇ ಮಾಯದೆ ಉಳಿದಿದೆ. ನಾಂದಿ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಲಿಲ್ಲವೆಂಬ ಅಸಮಾಧಾನವಿದ್ದರೂ ಈ ಚಿತ್ರ ಕನ್ನಡ ಚಲನಚಿತ್ರ ರಂಗಕ್ಕೆ ಸಂಭಾವಿತ ಕೊಡುಗೆಯಾಗಿ ಉಳಿಯಿತು. ರಾಜಕುಮಾರರ ಮನಮುಟ್ಟುವ ಅಭಿನಯ, ನಟ ಬಾಲಕೃಷ್ಣರವರ ಹಾಸ್ಯಪಾತ್ರಾಭಿನಯ, ವಿಜಯಭಾಸ್ಕರ್ ರವರ ಸಂಗೀತವಂತೂ ಮಧುರತೆಯಲ್ಲಿ ಮಿಂದು ತೇಲಿಸುವಂತಹ ಅನುಭವವನ್ನು ಕೊಟ್ಟಿತು. ಈ ಚಿತ್ರದ ಎಲ್ಲ ಹಾಡುಗಳೂ, ಅವುಗಳ ಅರ್ಥಪೂರ್ಣ ಸಾಹಿತ್ಯ ಮತ್ತು ಅಪೂರ್ವ ರಾಗ ಸಂಯೋಜನೆಗಳಿಂದಾಗಿ ಇಂದಿಗೂ ಎಲ್ಲರ ಮನೆಗಳಲ್ಲಿ ಜನ ಕೂತು ಕೇಳುವಂತಹ ಕೃತಿಗಳಾಗಿ ರಾರಾಜಿಸುತ್ತಿವೆ. ಹರಿಣಿ ಅವರು ಅನೇಕ ಚಿತ್ರಗಳಲ್ಲಿ ನಟಿಸಿ ನುರಿತ ಅನುಭವವಿದ್ದದ್ದರಿಂದ, ಮೂಕಿಯಾಗಿ ಅಭಿನಯಿಸಬೇಕಾದ ಕ್ಲಿಷ್ಟಕರ ಪಾತ್ರವನ್ನು ಮನೋಜ್ಞಕರ ರೀತಿಯಲ್ಲಿ ಅಭಿನಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಎನ್.ಲಕ್ಷ್ಮೀನಾರಾಯಣ್ ರವರು ಕಲ್ಪನಾರವರ ಪ್ರತಿಭೆಯನ್ನು ಜನರಿಗೆ ಈ ಚಿತ್ರದ ಮೂಲಕ ಪರಿಚಯ ಮಾಡಿಕೊಟ್ಟರು. ಲಂಡನ್ನಿನ ನ್ಯಾಷನಲ್ ಫಿಲಂಥಿಯೇಟರಿನಲ್ಲಿ ಪ್ರದರ್ಶನಾವಕಾಶ ಸಿಕ್ಕಿ ವಿದೇಶದಲ್ಲಿ ಪ್ರದರ್ಶಿತಗೊಂಡ ಪ್ರಥಮ ಕನ್ನಡ ಚಿತ್ರವಾಯಿತು. ನಾಂದಿ ಕನ್ನಡದಲ್ಲಿ ಸದಭಿರುಚಿ ಬೆಳಸುವಂತಹ ಚಿತ್ರಗಳಿಗೆ ನಾಂದಿಯಾಯಿತು. ವಾದಿರಾಜ್-ಜವಾಹರ್ ಜೊತೆಗೂಡಿ ನಿರ್ಮಾಪಕರಾಗಿ ಸಾಹಸ ಮಾಡಿದ ಸಫಲ ಪ್ರಯತ್ನವಿದು.

1961ರಲ್ಲಿ ತೆರೆಕಂಡ ಕಿತ್ತೂರು ಚೆನ್ನಮ್ಮ ಕನ್ನಡಿಗರು ಕನ್ನಡದ ಬಗ್ಗೆ ಚಳವಳಿ ಮಾಡುತ್ತಿದ್ದ ವೇಳೆಯಲ್ಲಿ ಮತ್ತಷ್ಟು ಸ್ಫೂರ್ತಿ ಕೊಡುವ ಚಿತ್ರವಾಯಿತು. ಕನ್ನಡಚಿತ್ರರಂಗದಲ್ಲಿ ಯಶಸ್ವಿಚಿತ್ರಗಳನ್ನು ನಿರ್ಮಿಸಿ ಮನೆಮಂದಿಗೆಲ್ಲಾ ಪರಿಚಿತ ವ್ಯಕಿಯಾಗಿದ್ದ ಅನುಭವಿ ನಿರ್ದೇಶಕರಾದ ಪಂತುಲುರವರು, ಬ್ರಿಟಿಷರ ವಿರುದ್ಧ ಏಕಾಂಗಿಯಾಗಿ ಹೋರಾಡಿ ಮಡಿದ ವೀರ ವನಿತೆಯ ಐತಿಹಾಸಿಕ ಕಥೆಯನ್ನು ಚಿತ್ರೀಕರಣ ಮಾಡಿ, ಕನ್ನಡಿಗರಿಗೆ ಚರಿತ್ರೆಯ ಆ ಯುಗದ ಘಟನೆಗಳನ್ನು e್ಞÁಪಿಸಿಕೊಟ್ಟ ಬಳುವಳಿ ಈ ಚಿತ್ರ. ಅಂದಿನ ದಿನಗಳಲ್ಲಿ ಬರುತ್ತಿದ್ದ ಚಿತ್ರಗಳಿಗೆ ಹೋಲಿಸಿದಾಗ ಇದೊಂದು ಅದ್ಭುತ ಮತ್ತು ಅದ್ದೂರಿ ಚಿತ್ರ. ಸಾಹಸಮಯ ಸನ್ನಿವೇಶಗಳು, ರೋಮಾಂಚನಗೊಳಿಸುವ ಸಂಭಾಷಣೆಗಳು, ಕಿತ್ತೂರು ಚೆನ್ನಮ್ಮನ ಪಾತ್ರದಲ್ಲಿ ಬಿ.ಸರೋಜಾದೇವಿಯವರು ನೀಡಿದ ಉತ್ತಮ ಅಭಿನಯ, ಅಂದಿನಕಾಲಕ್ಕೆ ಅತಿ ಭವ್ಯ ಎನಿಸಿಕೊಂಡ ಅಪೂರ್ವ ಯುದ್ಧ ದೃಶ್ಯಗಳು, ವಚನ ಸಾಹಿತ್ಯದಲ್ಲಿನ ಶ್ರೀಮಂತಿಕೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ರೀತಿ, ಇವೆಲ್ಲ ಗುಣಗಳಿಂದ ಕಿತ್ತೂರು ಚೆನ್ನಮ್ಮ ಕನ್ನಡಿಗರಿಗೆ ಹರ್ಷತಂದದ್ದೇ ಅಲ್ಲದ್ದೆ ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕಿದ್ದು ಮತ್ತೊಂದು ಸಂತೋಷದ ಸಂಗತಿ.

ಕಿತ್ತೂರು ಚೆನ್ನಮ್ಮ ತೆರೆಕಂಡ ವರ್ಷದಲ್ಲಿಯೇ, ಕನ್ನಡದ ಇತಿಹಾಸದ ಬಗ್ಗೆ ಕನ್ನಡಿಗರಿಗೆ ಪರಿಚಯ ಮಾಡಿಕೊಡುವ ಮತ್ತೊಂದು, ಚಿತ್ರ್ರವನ್ನು ತಯಾರಿಸುವ ಸಾಹಸಮಾಡಿದವರು ಆರ್. ನಾಗೇಂದ್ರ ರಾಯರು ಮತ್ತು ಅವರ ಮಕ್ಕಳು. ನಾಗೇಂದ್ರ ರಾಯರು, ಅಂದಿನ ಕಾಲಕ್ಕೆ ರಂಗ ಭೂಮಿ ಹಾಗೂ ಚಲನಚಿತ್ರ ಕ್ಷೇತ್ರಗಳಲ್ಲಿ ಸಾಕಷ್ಟು ಅನುಭವ ಪಡೆದು ನುರಿತ ಕಲಾವಿದರಾಗಿದ್ದರು. ಕನ್ನಡದ ಇತಿಹಾಸದಲ್ಲಿ ಕೃಷ್ಣದೇವರಾಯ ದೊರೆಯ ರಾಜ್ಯಭಾರಕ್ಕೆ ಹೆಚ್ಚು ಪ್ರಶಂಸೆ ಸಿಕ್ಕಿದೆ. ಅದೊಂದು ಸ್ವರ್ಣಯುಗವೆಂದೂ ಕರೆಯುತ್ತಾರೆ. ಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ ನಡೆದ ಘಟನೆ ಆಧರಿಸಿ ‘ವಿಜಯನಗರದ ವೀರಪುತ್ರ’ ಚಿತ್ರಿಸಲು ರಾಯರು ಮನಸ್ಸುಮಾಡಿದ್ದು ಒಂದು ಸಾಹಸವೇ ಸರಿ. ಐತಿಹಾಸಿಕ ಚಿತ್ರಗಳನ್ನು ಮಾಡಿ ಸೈ ಎನಿಸಿಕೊಳ್ಳುವಂತಹ ಆರ್ಥಿಕ ಚೈತನ್ಯ ರಾಯರಲ್ಲಿರಲಿಲ್ಲವೆಂಬುದು ಎಲ್ಲರಿಗೂ ತಿಳಿದ ವಿಷಯವೇ. ಆದರೂ ಅವರು ಚಿತ್ರೀಕರಣ ಪ್ರಾರಂಭಿಸಿಯೇ ಬಿಟ್ಟರು. ನಿರೀಕ್ಷಿಸಿದಂತೆ ಹಣಕಾಸಿನ ಮುಗ್ಗಟ್ಟಿನಿಂದ ಚಿತ್ರೀಕರಣ ನಿಂತುಹೋಯಿತು. ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಾಗಿ ಜಾರಿಗೆ ಬಂದಿದ್ದ ಫಿಲಂ ಫೈನಾನ್ಸ್‌ ಕಾರ್ಪೊರೇಷನ್ ಸಂಸ್ಥೆಯು ಮುಂದೆ ಬಂದು ಆರ್ಥಿಕ ಸಹಾಯ ನೀಡಿದ್ದರಿಂದ ಚಿತ್ರ ಪೂರ್ಣವಾಗಿ ತೆರೆಕಾಣಲು ಸಾಧ್ಯವಾಯಿತು. ಆದರೆ ರಾಯರ ದುರದೃಷ್ಟವೋ ಏನೋ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ದಯನೀಯ ಸೋಲನ್ನಪ್ಪಿತು. ಈ ಚಿತ್ರದ ವಿಶೇಷವೆಂದರೆ, ನಾಗೇಂದ್ರರಾಯರು ನಿರ್ದೇಶಿಸಿದ್ದಲ್ಲದೆ, ಅವರೇ ಒಂದು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದು ಮತ್ತು ಅವರಿಗೆ ಸಹಾಯಕ ನಿರ್ದೇಶಕರಾಗಿ ಎನ್.ಲಕ್ಷ್ಮೀನಾರಾಯಣ್ ಕೆಲಸಮಾಡಿದ್ದು, ಇಷ್ಟಲ್ಲದೆ ಆವರ ಮಕ್ಕಳಾದ ಆರ್.ಎನ್.ಕೃಷ್ಣಪ್ರಸಾದ್ರವರು ಛಾಯಾಗ್ರಾಹಕರಾಗಿ, ಆರ್.ಎನ್.ಜಯಗೋಪಾಲ್ ರವರು ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ಬರೆದು, ಮತ್ತು ಮತ್ತೊಬ್ಬ ಮಗ ಆರ್.ಎನ್. ಸುದರ್ಶನ್ ನಾಯಕನಟನಾಗಿ ಪಾತ್ರವಹಿಸಿದ್ದು ಒಂದು ವಿಶೇಷವೆನ್ನಬೇಕು.

ಸುದ್ದಿಮಾಡಿದ ಮತ್ತೊಂದು ಚಿತ್ರವೆಂದರೆ ನಂದಾದೀಪ. ಕನ್ನಡ ಚಿತ್ರ ರಂಗದಲ್ಲಿ ಉತ್ತಮ ಚಿತ್ರಗಳನ್ನು ಮಾಡಬೇಕೆಂಬ ಹಂಬಲದಿಂದ ನಿರ್ಮಾಪಕರಾಗಿ ಜೊತೆಗೂಡಿದ ವಾದಿರಾಜ್ ಮತ್ತು ಜವಾಹರ್ ರವರು, ಎಂ. ಆರ್. ವಿಠಲ್ರವರ ನಿರ್ದೇಶನದಲ್ಲಿ ತಯಾರುಮಾಡಿದ ಈ ಚಿತ್ರಕ್ಕೂ ರಾಷ್ಟ್ರಪ್ರಶಸ್ತಿ ಲಭಿಸಿತು. ಈ ಚಿತ್ರದ ಕಥೆಯಲ್ಲಿ ಎದ್ದುಕಾಣುವಂತಹ ಹೊಸದೇನೂ ಇಲ್ಲದಿದ್ದರೂ, ಚಿತ್ರೀಕರಣ ನೈಜತೆಗೆ ತೀರ ಸಮೀಪವಾಗಿ, ಸಾಕಷ್ಟು ಹಾಸ್ಯವನ್ನು ಅಳವಡಿಸಿ ಮಕ್ಕಳೊಂದಿಗೆ ತಂದೆ ತಾಯಿಗಳು, ಚಿತ್ರಮಂದಿರದಲ್ಲಿ ಕೂತು, ಇಂಪಾದ ಹಾಡುಗಳು, ಆಚ್ಚುಕಟ್ಟಾದ ಸಂಭಾಷಣೆ, ಉತ್ತಮ ಅಭಿನಯ ಇವುಗಳನ್ನು ಸವಿದು ತೃಪ್ತಿಯಿಂದ ಮನೆಗೆ ಬರಬಹುದಾದಂತಹ ಚಿತ್ರ. ಆದರೂ ನಾಂದಿ ಚಿತ್ರದಂತೆ ಈ ಚಿತ್ರ ಕೂಡ ಜನಸಾಮಾನ್ಯರಿಗೆ ತಲುಪುವಲ್ಲಿ ವಿಫಲಗೊಂಡಿತು.

ನಂದಾದೀಪಕ್ಕೆ (1963) ಸಿಕ್ಕಿದ ರಾಷ್ಟ್ರ ಪ್ರಶಸ್ತಿ ಪುರಸ್ಕಾರದಿಂದ ಪಡೆದ ಯಶಸ್ಸನ್ನು ಹಿಂಬಾಲಿಸಿ, ಈ ನಿರ್ಮಾಪಕ ದ್ವಯರಾದ, ವಾದಿರಾಜ್ ಮತ್ತು ಜವಾಹರ್ ರವರು ನವಜೀವನ ಎಂಬ ಮತ್ತೊಂದು ಉತ್ತಮ ಚಿತ್ರವನ್ನು ಕನ್ನಡ ಚಿತ್ರಪ್ರೇಮಿಗಳಿಗೆ ಅರ್ಪಿಸಿದರು. ಅಂದಿಗೆ ಇದೊಂದು ವಿನೂತನ ಶೈಲಿಯಚಿತ್ರವೆನ್ನಬಹುದು. ಬಸ್ಸಿನಲ್ಲಿ ಪ್ರಯಾಣಮಾಡುತ್ತಿದ್ದ ಅಪರಿಚಿತ ಪ್ರಯಾಣಿಕರು, ಕಾರಣಾಂತರದಿಂದ ಒಂದು ಅತಿಥಿಗೃಹದಲ್ಲಿ ಸೇರಿದಾಗ, ಪರಸ್ಪರ ಸಹಾನುಭೂತಿಯಿಂದ ವಿವಿಧ ಮತಸ್ಥರು ಒಂದುಕುಟುಂದವರಂತೆ ಬೆರೆತದ್ದು ಈ ಚಿತ್ರದ ಕಥಾ ವಸ್ತು. ಭಾವೈಕ್ಯತೆಯನ್ನು ಸಾರಿದ ಹೆಗ್ಗಳಿಕೆಯ ಕನ್ನಡ ಚಿತ್ರ ಇದಾಯಿತು.

ಈ ದಶಕದಲ್ಲಿ ಚಿತ್ರ ನಿರ್ಮಾಪಕರು, ಹೆಚ್ಚು ಹೆಚ್ಚು ಸಾಮಾಜಿಕ ಕಥಾವಸ್ತುಗಳನ್ನು ಆರಿಸಿಕೊಂಡದ್ದು ಒಂದು ವಿಶೇಷ. ಕೆಲವರು ಹೆಸರಾಂತ ಸಾಹಿತಿಗಳ ಕಾದಂಬರಿಗಳನ್ನೂ ಚಿತ್ರರೂಪಕ್ಕೆ ಇಳಿಸಿದರು. ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿ ಆಧಾರಿತ ಕರುಣೆಯೇ ಕುಟುಂಬದ ಕಣ್ಣು, ತ.ರಾ.ಸು ಅವರ ಚಂದವಳ್ಳಿಯ ತೋಟ, ಚಕ್ರತೀರ್ಥ, ಅ.ನ.ಕೃ.ರವರ ಸಂಧ್ಯಾ ರಾಗ, ಕೊರಟಿ ಶ್ರೀನಿವಾಸರಾಯರ ಮಿಸ್. ಲೀಲಾವತಿ, ಎ.ಎನ್.ಮೂರ್ತಿರಾಯರ ನಾಟಕ ಆಶಾಢಭೂತಿ ಆಧರಿಸಿದ ಸುಬ್ಬಾಶಾಸ್ತ್ರೀ, ತ್ರಿವೇಣಿಯವರ, ಬೆಳ್ಳಿಮೋಡ, ಹಣ್ಣೆಲೆ ಚಿಗುರಿದಾಗ, ಚದರಂಗರ ಸರ್ವ ಮಂಗಳಾ ಮತ್ತು ಉಯ್ಯಾಲೆ, ಮತ್ತು ಎಂ.ಕೆ ಇಂದಿರಾ ರವರ ಗೆಜ್ಜೆಪೂಜೆ, ಹೀಗೆ ಅನೇಕ ಚಿತ್ರಗಳು ಕನ್ನಡ ಕಾದಂಬರಿಗಳನ್ನು ಆಧರಿಸಿ ಚಿತ್ರಿತಗೊಂಡವು. ಇದೊಂದು ಉತ್ತಮ ಬೆಳೆವಣಿಗೆ. ಇದಕ್ಕೆ ಕಾರಣವೂ ಇತ್ತು. ಕನ್ನಡದ ಬಗ್ಗೆ ಅಭಿಮಾನ ಮೂಡಿಸಲು ಚಲನೆಯಲ್ಲಿದ್ದ ಚಳುವಳಿ ಕೂಡ ಇದಕ್ಕೆ ಉತ್ತೇಜಕಕಾರಿ ಯಾಗಿತ್ತು. ಈ ದಶಕದ ಮತ್ತೊಂದು ಬೆಳೆವಣಿಗೆಯೆಂದರೆ ಸಂಗೀತ ನಿರ್ದೇಶಕರುಗಳು, ಕನ್ನಡದ ಖ್ಯಾತ ಕವಿಗಳಾದ ಕುವೆಂಪು, ಕೆ.ಎಸ್.ನರಸಿಂಹಸ್ವಾಮಿ, ಮುಂತಾದವರುಗಳ ಕವನಗಳನ್ನು ಅಳವಡಿಸಿಕೊಂಡು ಹಾಡುಗಳಿಗೆ ರಾಗ ಸಂಯೋಜನೆ ಮಾಡಿ ಕನ್ನಡದ ಅಭಿಮಾನಿಗಳ ಮನಸ್ಸಿಗೆ ತೃಪ್ತಿ ಕೊಟ್ಟದ್ದು. ಗೌರಿ ಚಿತ್ರದಲ್ಲಿ ಕುವೆಂಪು ರವರ ಯಾವ ಜನ್ಮದ ಮೈತ್ರಿ, ನರಸಿಂಹ ಸ್ವಾಮಿಯವರ ಇವಳು ಯಾರು ಬಲ್ಲೆಯೇನೊ ಗೀತೆಗಳನ್ನು ಅಳವಡಿಸಿ ಹಾಡುಗಳನ್ನು ರಚಿಸಲಾಗಿದೆ. ಈ ದಶಕದಲ್ಲಿನ ಮತ್ತೊಂದು ಪ್ರಗತಿಪರ ಹೆಜ್ಜೆಯೆಂದರೆ ಕನ್ನಡದಲ್ಲಿ ಮೊದಲಬಾರಿಗೆ ಬಣ್ಣದ (ಕಲರ್) ಚಿತ್ರವನ್ನು ತಯಾರಿಸಿದ್ದು. ಬಿ.ಸ್.ರಂಗಾರವರು ತಯಾರಿಸಿದ ಚಿತ್ರ ಅಮರಶಿಲ್ಪಿ ಜಕಣಾಚಾರಿ ಚಿತ್ರದಲ್ಲಿ ಕಲ್ಯಾಣ್ಕುಮಾರ್ ಹಾಗೂ ಸರೋಜಾ ದೇವಿಯವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.

ಈ ದಶಕದಲ್ಲಿ ತಯಾರಾದ ಸಾಕಷ್ಟು ಚಿತ್ರಗಳಲ್ಲಿ, ಆ ಚಿತ್ರದ ವಸ್ತು ಸಾಮಾಜಿಕವಾಗಿರಲಿ, ಪೌರಾಣಿಕವಾಗಿರಲಿ, ಸಂತರ ಕಥೆ ಯಾಗಿರಲಿ, ಅಥವಾ ಜೇಡರ ಬಲೆ, ಆಪರೇಷನ್ ಜಾಕ್ಪಾಟ್ ಅಂತಹ ಬಾಂಡ್ ಮಾದರಿಯ ಸ್ಟಂಟ್ಗಳಾಗಲಿ, ಎಲ್ಲ ಚಿತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಹೃದಯವನ್ನು ಗೆದ್ದ, ಅಚ್ಚು ಮೆಚ್ಚಿನ ವ್ಯಕ್ತಿಯೆಂದರೆ ರಾಜಕುಮಾರ್ ರವರು. 1963ರಲ್ಲಿ ತಯಾರಾದ ಚಿತ್ರ ಸಂತ ತುಕಾರಾಂ ನಲ್ಲಿ ರಾಜಕುಮಾರ್ರವರ ಅದ್ಭುತ ಅಭಿನಯದ ಪ್ರಾಧಾನ್ಯತೆಯಿಂದಲೇ ಆ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತು. ಅಂದಿನ ಕನ್ನಡ ಚಿತ್ರ ರಂಗದಲ್ಲಿ ಜನಪ್ರಿಯರಾಗಿದ್ದ ರಾಜಕುಮಾರ್, ಕಲ್ಯಾಣಕುಮಾರ್, ಹಾಗೂ ಉದಯಕುಮಾರ್ ಮೂವರುಗಳು ಜಿ.ವಿ.ಅಯ್ಯರ್ರವರ ಭೂದಾನ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದು ಒಂದು ವಿಶೇಷ ಸಂಗತಿ. ಇದೇ ದಶಕದಲ್ಲಿ, 1968ರಲ್ಲಿ ರವಿ ಅವರ ನಿರ್ದೇಶನದಲ್ಲಿ ತಯಾರಾದ ಭಾಗ್ಯದಬಾಗಿಲು ಚಿತ್ರ ರಾಜಕುಮಾರ್ ರವರು ಅಭಿನಯಿಸಿದ ನೂರನೇ ಚಿತ್ರವಾಯಿತು. ಈ ಒಂದು ಘಟನೆಯನ್ನು ಸಂತೋಷ ಸಮಾರಂಭವಾಗಿ ಆಚರಿಸಲು, ಕಂಠೀರವ ಸ್ಟೇಡಿಯಂನಲ್ಲಿ ಅವರ ಸಹಸ್ರಾರು ಅಭಿಮಾನಿಗಳು ಅದ್ದೂರಿಯ ಸನ್ಮಾನವನ್ನು ನೀಡಿದರು.

ಹಿಂದಿನ ದಿನಗಳಲ್ಲಿ ಬಿ.ಆರ್. ಪಂತುಲು ಅವರಿಗೆ ಸಹಾಯಕ ನಿರ್ದೇಶಕರಾಗಿ ಚಲನಚಿತ್ರ ನಿರ್ಮಾಣದಲ್ಲಿ ಅನುಭವ ಪಡೆದಿದ್ದ ಪುಟ್ಟಣ್ಣ ರವರು 1967ರಲ್ಲಿ ತ್ರಿವೇಣಿ ಅವರ ಕಾದಂಬರಿ ಆಧಾರಿತ ಚಿತ್ರ ಬೆಳ್ಳಿಮೋಡ ಚಿತ್ರವನ್ನು ತಾವೇ ನಿರ್ದೇಶನದ ಪೂರ್ಣ ಜವಾಬ್ದಾರಿಯನ್ನು ಹೊತ್ತು ನಿರ್ಮಿಸಿದರು. ಈ ಚಿತ್ರದೊಂದಿಗೆ ಪುಟ್ಟಣ್ಣ ಕಣಗಾಲ್ ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಅಧ್ಯಾಯವನ್ನೇ ಪ್ರಾರಂಭಿಸಿದರು. ಪುಟ್ಟಣ್ಣ ಕಣಗಾಲ್ ರವರು ಚಿತ್ರನಿರ್ದೇಶನದ ಕುಶಲತೆಯನ್ನು ಕರತಲಾಮಲಕವಾಗಿ ಜೀರ್ಣಿಸಿಕೊಂಡಿದ್ದ ವ್ಯಕ್ತಿ. ಜನರಿಗೆ ಏನನ್ನು ಉಣಿಸಿದರೆ ಅವರಿಗೆ ತೃಪ್ತಿ ಸಿಗುತ್ತದೆ ಎಂಬ ಅಂಶವನ್ನು ಸಂಪೂರ್ಣವಾಗಿ ಮನದಟ್ಟು ಮಾಡಿಕೊಂಡಿದ್ದ ಚಾಣಾಕ್ಷ ಅವರು. ಅಂದಿನ ದಿನಗಳಲ್ಲಿ ಚಿತ್ರಮಂದಿರಗಳಿಗೆ ಪ್ರಯಾಣ ಬೆಳೆಸಿ, ಸಮಾಧಾನವಾಗಿ ಕೂತು ಚಿತ್ರಗಳನ್ನು ನೋಡುವ ಪರಿಪಾಠ ಹೆಚ್ಚಾಗಿ ಗೃಹಿಣಿಯರಿಗಿರುತ್ತದೆ ಎಂಬ ಅಂಶವನ್ನು ಅವರು ಅರಿತಿದ್ದರು. ನಮ್ಮ ಸಮಾಜದಲ್ಲಿನ ಸ್ತ್ರೀೕಯರು ಅನುಭವಿಸುವ ಕಷ್ಟ ಪರಂಪರೆಗಳನ್ನು, ಮನ ತಟ್ಟುವ ಹರಿತ ಸಂಭಾಷಣೆಗಳಿಂದ, ಕಂಬನಿತರಿಸುವ ಸನ್ನಿವೇಶಗಳನ್ನು ಸೃಷ್ಟಿಸಿ, ಸ್ತ್ರೀ ಪಾತ್ರಗಳಿಗೆ ಹೆಚ್ಚು ಪ್ರಾಧಾನ್ಯತೆ ಸಿಗುವಂತಹ ಕಥೆಗಳನ್ನು ಆಧರಿಸಿ ಅವರು ಚಿತ್ರಗಳನ್ನು ತಯಾರಿಸುತ್ತಿದ್ದರು. ಈ ಒಂದು ಹೊಸ ಪರಂಪರೆಯ ಚಿತ್ರಗಳಲ್ಲಿ ಬೆಳ್ಳಿಮೋಡ ಅವರ ಚೊಚ್ಚಲು ಕಾಣಿಕೆ. ತ್ರಿವೇಣಿಯವರ ಕಾದಂಬರಿಯಲ್ಲಿ, ಪುರುಷ ಪ್ರಾಬಲ್ಯವಿರುವ ಸಮಾಜದಲ್ಲಿ ಸ್ತ್ರೀ ಅನುಭವಿಸುವ ಯಾತನೆಗಳನ್ನು, ಪುರಷರ ಸ್ವಾರ್ಥ ಹಾಗೂ ಸಂಕುಚಿತ ಮನೋಭಾವಗಳು, ಎದ್ದು ಕಾಣುವಂತಹ ಕಥೆಯನ್ನು ಬಿತ್ತರಿಸಿದ್ದಾರೆ. ಸಾಮಾನ್ಯವಾಗಿ ಎಲ್ಲ ಚಿತ್ರಗಳಲ್ಲಿ ಪುರುಷ ಪಾತ್ರಗಳೇ ಕಥಾನಾಯಕನಾಗಿ ಮಿಂಚುತ್ತಿದ್ದ ಮಾದರಿಯನ್ನು ಬದಲಿಸಿ, ಕಥಾನಾಯಕಿಗೆ ಪ್ರಧಾನ ಪಟ್ಟವನ್ನು ಕಟ್ಟಿ ನೂತನ ಶೈಲಿಯನ್ನು ಅಳವಡಿಸಿದ ಹೆಗ್ಗಳಿಕೆಗೆ ಪಾತ್ರರಾದವರು ಪುಟ್ಟಣ್ಣ. ಇದು ಒಂದು ಯಶಸ್ವಿ ಪ್ರಯೋಗವೇ ಆಯಿತು. ಪುಟ್ಟಣ್ಣನವರ ಅನೇಕ ಚಿತ್ರಗಳಲ್ಲಿ ಕಥಾನಾಯಕಿಯ ಮುಂದೆ ಪುರುಷ ಪಾತ್ರಗಳು ಹಿಂದೆ ಸರಿದು ನಿಲ್ಲಬೇಕಾಯಿತು.

ಚಿತ್ರಪ್ರೇಮಿಗಳಿಗೆ ಬೆಳ್ಳಿ ಮೋಡದ ಮೂಲಕ ಹೊಸ ಶೈಲಿಯ ಚಿತ್ರಕೊಟ್ಟ ಪುಟ್ಟಣ್ಣನವರು, 1970ರಲ್ಲಿ ಗೆಜ್ಜೆ ಪೂಜೆ ಎಂಬ ಅತಿಸುಂದರ ಚಿತ್ರವನ್ನು ನಿರ್ಮಿಸಿದರು. ಎಂ.ಕೆ. ಇಂದಿರಾ ರವರ ಕಾದಂಬರಿ ಆಧಾರಿತವಾದ ಈ ಚಿತ್ರವು, ಅಂದು ನೋಡಿದ ಅನೇಕ ವೀಕ್ಷಕರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೆ ನಿಂತಿದೆ. ಚಿತ್ರದಲ್ಲಿ ಹಾಡುಗಳನ್ನು ಪರಿಣಾಮಕಾರಿಯಾಗಿ ಬಳಸುವ ವಿಧಾನ, ಹಾಡುಗಳ ಸಾಹಿತ್ಯ, ರಾಗಸಂಯೋಜನೆ, ಹೊರಾಂಗಣ ದೃಶ್ಯಗಳ ಚಿತ್ರೀಕರಣ, ಹರಿತವಾದ ಸಂಭಾಷಣೆ, ಕಪ್ಪು ಬಿಳುಪು ಛಾಯಾಗ್ರಹಣದಲ್ಲಿ ನವ್ಯತೆ, ಎಲ್ಲದರಲ್ಲಿಯೂ ಪುಟ್ಟಣ್ಣನವರು ತಮ್ಮ ಛಾಪನ್ನು ಮುದ್ರಿಸುತ್ತಿದ್ದರು. ಬೆಳ್ಳಿಮೋಡ, ಹಾಗೂ ಗೆಜ್ಜೆಪೂಜೆ ಎರಡೂ ಚಿತ್ರಗಳಿಗೆ ರಾಷ್ಟ್ರಪ್ರಶಸ್ತಿ ಲಭಿಸಿತು. ಅವರು ತಯಾರಿಸಿದ ಮತ್ತೊಂದು ಚಿತ್ರ ಕಪ್ಪು ಬಿಳುಪು (1969) ಕೂಡ ಜನಪ್ರಿಯತೆಯಲ್ಲಿ ಯಶಸ್ಸುಗಳಿಸಿತು.

ಈ ದಶಕದಲ್ಲಿ ರಾಷ್ಟ್ರ ಪ್ರಶಸ್ತಿ ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ದಾಖಲು ಮಾಡಿಕೊಂಡು ಪ್ರಶಂಸೆ ಪಡೆದ ಚಿತ್ರಗಳೆಂದರೆ: ಬಿ.ಆರ್. ಪಂತುಲು ನಿರ್ದೇಶನದ ಕಿತ್ತೂರು ಚೆನ್ನಮ್ಮ (1961), ವೈ.ಆರ್. ಸ್ವಾಮಿ ನಿರ್ದೇಶನದ ಭಕ್ತ ಕನಕದಾಸ, ಸುಂದರ ರಾವ್ ನಾಡಕರ್ಣಿ ನಿರ್ದೇಶನದ ಸಂತ ತುಕಾರಾಮï, ಎಮ್.ಆರ್.ವಿಠ್ಠಲ್ ರವರ ನಿರ್ದೇಶನದ ಮಂಗಳಮುಹೂರ್ತ, ಟಿ.ವಿ.ಸಿಂಗ್ ಠಾಕೂರ್ ನಿರ್ದೇಶನದ ಚಂದವಳ್ಳಿಯ ತೋಟ, ಎಸ್.ಕೆ.ಎ.ಚಾರಿ ನಿರ್ದೇಶನದ ಮನೆಅಳಿಯ, ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ ಸತ್ಯ ಹರಿಶ್ಚಂದ್ರ, ಎಂ.ಆರ್. ವಿಠ್ಠಲ್ರವರ ಮಿಸ್.ಲೀಲಾವತಿ, ಎ.ಸಿ.ನರಸಿಂಹ ಮೂರ್ತಿರವರ ಸಂಧ್ಯಾರಾಗ, ಬಿ.ಎ. ಅರಸಕುಮಾರ್ ರವರ ಬಂಗಾರದ ಹೂವು, ಗೀತಪ್ರಿಯ ಅವರ ಮಣ್ಣಿನ ಮಗ, ಮತ್ತು ಪುಟ್ಟಣ್ಣ ಕಣಗಾಲ್ ಅವರ ಗೆಜ್ಜೆ ಪೂಜೆ. ಈ ಪಟ್ಟಿಯನ್ನು ಗಮನಿಸಿದಾಗ ನಮಗೆ ಮುಖ್ಯವಾಗಿ ಅರಿವಾಗುವ ವಿಷಯವೆಂದರೆ, ಸಾಮಾಜಿಕ ಕಥೆಗಳನ್ನುಳ್ಳ ಹಾಗೂ ಕನ್ನಡದ ಕಾದಂಬರಿಗಳನ್ನು ಆಧಾರಿತಗೊಂಡು ತಯಾರಾದ ಚಿತ್ರಗಳು ಹೆಚ್ಚು ಹೆಚ್ಚು ಪ್ರಾಧಾನ್ಯತೆ ಪಡೆದು ಗೊಂಡಿರುವುದು. ಇದೊಂದು ಉತ್ತಮ ಬೆಳೆವಣಿಗೆ ಎನ್ನಬಹುದು. ಮಣ್ಣಿನ ಮಗ ಚಿತ್ರದೊಂದಿಗೆ ಕನ್ನಡ ಚಲನಚಿತ್ರರಂಗಕ್ಕೆ ಪ್ರವೇಶಮಾಡಿದ ಗೀತಪ್ರಿಯರವರು ಚಿತ್ರಾಸಕ್ತರ ಮೆಚ್ಚುಗೆಗಳಿಸಿ ಮುಂದೆ ಅನೇಕ ಚಿತ್ರಗಳನ್ನು ನಿರ್ದೇಶಿಸಿ ಹೆಸರು ಮಾಡಿದ ವ್ಯಕ್ತಿಯಾದರು.

ಬೇರೆ ಉದ್ಯಮಗಳಿಗೆ ಕೊಡುವಂತೆ ಕನ್ನಡ ಚಲನಚಿತ್ರ ಉದ್ಯಮಕ್ಕೆ ಸರ್ಕಾರದಿಂದ ಸಹಾಯ ಧನ, ತೆರಿಗೆ ವಿನಾಯಿತಿ, ಉತ್ತಮ ಚಿತ್ರಗಳಿಗೆ ಪ್ರಶಸ್ತಿಗಳು, ಮತ್ತು ಇತರ ಸೌಕರ್ಯಗಳನ್ನು ಒದಗಿಸಿಬೇಕೆಂಬ ನಿರಂತರ ಬೇಡಿಕೆಗಳನ್ನು, ಚಿತ್ರರಂಗದ ಅನೇಕ ಗಣ್ಯರುಗಳು ಮಾಡುತ್ತಲೇ ಬಂದಿದ್ದರು. ಚಿತ್ರನಿರ್ಮಾಣಕ್ಕಾಗಿ ಮದರಾಸಿಗೆ ಹೋಗಬೇಕಾದ ಪ್ರಮೇಯವನ್ನು ತಪ್ಪಿಸಿ ಇಲ್ಲಿಯೇ ಸ್ಟುಡಿಯೋ ಮತ್ತು ಲ್ಯಾಬೊರೆಟರಿ ಸೌಕರ್ಯಗಳನ್ನು ಒದಗಿಸಿಕೊಂಡು ನಮ್ಮಕಾಲಿನ ಮೇಲೆ ನಾವು ನಿಲ್ಲಬೇಕು ಎಂಬ ಮಹದಾಶಯ ಚಿತ್ರರಂಗದ ಎಲ್ಲರಲ್ಲಿಯೂ ಉದ್ಭವಿಸಿದ್ದು ಈ ದಶಕದ ಅತ್ಯಂತ ಹೆಮ್ಮೆಯ ಬೆಳೆವಣಿಗೆ. ಚಿತ್ರಪ್ರೇಮಿಗಳ ಬಂiÀÄಕೆಗೆ ಸ್ಪಂದಿಸಿ, ಇಂತಹ ಒಂದು ನಿಟ್ಟಿನಲ್ಲಿ ಅಂದಿನ ಸರ್ಕಾರ ಕಾರ್ಯೋನ್ಮುಖವಾದದ್ದು ಕೂಡ ಒಂದು ಒಳ್ಳೆಯ ಬೆಳೆವಣಿಗೆ. ಕನ್ನಡ ಚಿತ್ರಗಳಿಗೆ ರೂ.50,000 /- ಸಬ್ಸಿಡಿ, ಉತ್ತಮ ಕನ್ನಡ ಚಿತ್ರಗಳಿಗೆ ಪ್ರಶಸ್ತಿ, ನಗರದ ಹೊರವಲಯದಲ್ಲಿ ನಿರ್ಮಿಸಿಲಾದ ಕಂಠೀರವ ಸ್ಟುಡಿಯೊ, ಆಸ್ತಿತ್ವಕ್ಕೆ ಬಂದ ಕರ್ನಾಟಕ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮ, ಇವುಗಳು ಸರ್ಕಾರದಿಂದ ದೊರೆತ ಪ್ರೋತ್ಸಾಹ. ಈ ದಶಕದಲ್ಲಿ ಒಟ್ಟು 229 ಕನ್ನಡ ಚಿತ್ರಗಳು ತಯಾರಾಗಿ ಅವುಗಳಲ್ಲಿ ಸಾಕಷ್ಟು ಚಿತ್ರಗಳು ಮೈಸೂರಿನ ಪ್ರೀಮಿಯರ್ ಹಾಗೂ ನವಜ್ಯೋತಿ ಸ್ಟುಡಿಯೋಗಳಲ್ಲಿ ತಯಾರಾದದ್ದು ಮೆಚ್ಚುವಂತಹ ಸಂಗತಿಯೆ.

ಉತ್ತಮ ಚಿತ್ರಗಳಿಗೆ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳನ್ನು ವಿತರಣೆ ಮಾಡಲು ಪ್ರಾರಂಭಿಸಿದ ವರ್ಷ 1954. 1966-67ರ ವರ್ಷದಿಂದ ಉತ್ತಮ ಕನ್ನಡ ಚಿತ್ರಗಳಿಗೆ ರಾಜ್ಯಪ್ರಶಸ್ತಿಗಳನ್ನು ಕೊಡುವ ಸಂಪ್ರದಾಯಕ್ಕೆ ರಾಜ್ಯಸರ್ಕಾರ ಚಾಲನೆ ನೀಡಿತು.

1970ರಲ್ಲಿ, ಕನ್ನಡದ ಅನೇಕ ಪ್ರತಿಭಾವಂತ ವ್ಯಕ್ತಿಗಳು, ಕೈಗೂಡಿಸಿ ನಿರ್ಮಿಸಿದ ಚಿತ್ರ, ಸಂಸ್ಕಾರ, ಕನ್ನಡದಲ್ಲಿ ವಾಸ್ತವವಾಗಿ ಒಂದು ಹೊಸ ಆಯಾಮ ಕೊಟ್ಟಂತಹ ಚಿತ್ರವಾಯಿತು. ತಲೆ ತಲಾಂತರದಿಂದ ಆಚರಣೆಯಲ್ಲಿದ್ದ ಮೂಢನಂಬಿಕೆಗಳ ಪ್ರಸ್ತುತತೆಯನ್ನು ಪ್ರಶ್ನಿಸುವಂತಹ ವಸ್ತುವನ್ನುಳ್ಳ, ಯು.ಆರ್.ಅನಂತಮೂರ್ತಿಯವರ ಕಥೆಯನ್ನು ಚಿತ್ರರೂಪಕ್ಕೆ ಅಳವಡಿಸಿಕೊಂಡು ಮಾಡಿದ ನವ್ಯ ಪ್ರಯೋಗ ಸಂಸ್ಕಾರ. ಮಾಮೂಲಿನಂತೆ ಅನೇಕ ಹಾಡುಗಳು, ಅಸಂಬದ್ಧ ನೃತ್ಯಗಳು, ಉದ್ಯಾನವನಗಳಲ್ಲಿ ನಾಯಕಿಯ ಹಿಂದೆ ನಾಯಕ ಓಡುವ ದೃಶ್ಯಗಳು, ಅನವಶ್ಯಕ ಹೊಡೆದಾಟಗಳು, ಕೊನೆಯಲ್ಲಿ ಎಲ್ಲವೂ ಸೌಖ್ಯ ಎಂಬ ಅಂತ್ಯ ಇವುಗಳಿಂದ ಪೂರ್ಣ ಮುಕ್ತಗೊಂಡು ಹೊಸ ಹಾದಿಯಲ್ಲಿ ಮಾಡಿದ ಕನ್ನಡದ ಮೊದಲ ಚಿತ್ರವಿದು. ಮೂಲತಃ ಆಂಧ್ರದವರಾಗಿ, ತೆಲುಗು ಸಾಹಿತ್ಯದಲ್ಲಿ ಹೆಸರು ಮಾಡಿದ್ದ ಪಟ್ಟಾಭಿರಾಮ ರೆಡ್ಡಿ ಯವರು, ಕನ್ನಡದಲ್ಲಿ ಚಲನಚಿತ್ರ ಮಾಡಬೇಕೆಂಬ ಅಭಿಲಾಷೆಯಿಂದ ಸಾಹಸ ಮಾಡಿ, ಗಿರೀಶ್ ಕಾರ್ನಾಡ್, ಪಿ.ಲಂಕೇಶ್, ಮತ್ತು ಹವ್ಯಾಸಿ ರಂಗ ಭೂಮಿಯಲ್ಲಿನ ಅನೇಕರ ಸಹಕಾರದಿಂದ ಮಾಡಿದ ಈ ಚಿತ್ರ ಸೆನ್ಸಾರ್ನಿಂದ ಬಿಡುಗಡೆಯಾಗಲು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದರೂ, ಕೊನೆಗೆ ರಾಷ್ಟ್ರಮಟ್ಟದಲ್ಲಿ ರಾಷ್ಟ್ರಾಧ್ಯಕ್ಷರ ಸ್ವರ್ಣಪದಕವನ್ನು ಪಡೆದು ಕನ್ನಡಚಿತ್ರರಂಗದಲ್ಲಿ ಹೊಸ ಅಲೆಯ ಚಿತ್ರಗಳಿಗೆ ನಾಂದಿಯಾಯಿತು. ಕನ್ನಡಚಿತ್ರರಂಗದಲ್ಲಿ ಸಂಸ್ಕಾರ ಸ್ವರ್ಣಪದಕಗಳಿಸಿದ ಮೊದಲ ಚಿತ್ರ, ಮತ್ತು ವಿದೇಶಗಳಲ್ಲಿ ಕೂಡ ಅನೇಕ ಚಿತ್ರೋತ್ಸವಗಳಲ್ಲಿ ಭಾಗವಹಿಸಿ ಪ್ರಶಂಸೆಗಳಿಸಿತು.

ಹಿಂದಿನ ದಶಕದಲ್ಲಿ ಸರ್ಕಾರ ಪ್ರಾರಂಭಿಸಿದ ವಿಶೇಷ ಯೋಜನೆಗಳಿಂದಾಗಿ, ಅದರಲ್ಲೂ ಸಹಾಯಧನ ಮತ್ತು ಪ್ರಶಸ್ತಿಗಳ ಆಕರ್ಷಣೆಯಿಂದ ಪ್ರೇರಣೆಗೊಂಡ ಅನೇಕರು ಚಿತ್ರ ನಿರ್ಮಾಣದ ಉದ್ಯಮಕ್ಕೆ ಧಾವಿಸಿದ್ದು 1970-80ರ ದಶಕದ ವಿಶೇಷ. ಬೆಂಗಳೂರಿನಲ್ಲಿ ಸ್ಟುಡಿಯೋಗಳ ಸ್ಥಾಪನೆ, ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ಹೆಚ್ಚು ಚಟುವಟಿಕೆಗಳು, ಮದರಾಸಿನಿಂದ ಬೆಂಗಳೂರಿಗೆ ಚಿತ್ರೋದ್ಯಮದ ಚಟುವಟಿಕೆಗಳ ವರ್ಗಾವಣೆ, ಹೊಸ ಅಲೆ ಚಿತ್ರಗಳನ್ನು ಮಾಡಬೇಕೆಂಬ ಹಂಬಲದಿಂದ ಚಿತ್ರ ನಿರ್ಮಾಣಕ್ಕೆ ಕೈಹಾಕಿದ ಅನೇಕ ಹೊಸಬರು, ಈ ಬೆಳೆವಣಿಗೆಗಳಿಂದಾಗಿ ಕನ್ನಡಚಿತ್ರಗಳು ತಯಾರಾಗುವ ಸಂಖ್ಯೆ ಈ ದಶಕದಲ್ಲಿ 350 ಕ್ಕೂ ಮೇಲೇರಿತು. ಪ್ರಶಸ್ತಿಗಳ ಬಗ್ಗೆ, ಸಹಾಯಧನದ ಬಗ್ಗೆ, ರೀಮೇಕ್ ಚಿತ್ರಗಳ ಬಗ್ಗೆ, ಹೀಗೆ ಅನೇಕ ವಿಷಯಗಳಲ್ಲಿ ಚಿತ್ರ ರಂಗದಲ್ಲಿ ಯಾವುದಾದರೊಂದು ವಿವಾದ ಸದಾಕಾಲ ಇದ್ದೇ ಇದೆ. ಅದು ಇಂದಿಗೂ ಇದೆ. ಸರ್ಕಾರ ಪ್ರಾರಂಭಿಸಿದ ಕರ್ನಾಟಕ ಚಲನಚಿತ್ರ ಅಭಿವೃದ್ಧಿ ನಿಗಮವಂತೂ ಸದಾಕಾಲ ವಿವಾದದಲ್ಲಿ ಮುಳುಗಿ, ನಿಶ್ಚಿತ ಧ್ಯೇಯೋದ್ದೇಶಗಳ ಕೊರತೆಯಿಂದಾಗಿ ಏನನ್ನೂ ಸಾಧಿಸದೆ ಕೇವಲ ಉಸಿರಾಡಿಕೊಂಡು ಉಳಿಯಿತು.

ಬೆಳ್ಳಿಮೋಡ ಹಾಗೂ ಗೆಜ್ಜೆ ಪೂಜೆ ಚಿತ್ರಗಳ ಮೂಲಕ ತನ್ನ ಸೃಜನಶೀಲತೆ, ಹಾಗೂ ನವ್ಯತೆಗಳನ್ನು ಚಿತ್ರಪ್ರೇಮಿಗಳಿಗೆ ಪರಿಚಯಮಾಡಿಕೊಟ್ಟ. ಪುಟ್ಟಣ್ಣನವರು ಅದೇ ಜಾಡಿನ ಮತ್ತೊಂದು ಯಶಸ್ವೀ ಚಿತ್ರ, ತ್ರಿವೇಣಿ ಕಾದಂಬರಿ ಆಧಾರಿತ ಶರಪಂಜರವನ್ನು ನಿರ್ದೇಶಿಸಿ, ಚಿತ್ರನಟಿ ಕಲ್ಪನಾರವರನ್ನು ಅಂದಿನ ಜನಪ್ರಿಯ ತಾರೆಯಾಗುವಂತೆ ಮಾಡಿದರು. ಈ ಚಿತ್ರಕ್ಕೆ ರಾಜ್ಯ ಹಾಗೂ ರಾಷ್ಟ್ರ ಎರಡೂ ಪ್ರಶಸ್ತಿಗಳು ಲಭಿಸಿದವು. ಪುಟ್ಟಣ್ಣನವರ ಶೈಲಿ ಹೊಸ ಅಲೆಚಿತ್ರಗಳ ಜಾಡನ್ನು ಬಳಸಿಕೊಳ್ಳಲಿಲ್ಲ. ಅವುಗಳಂತೆ ಮಂದಗತಿಯಲ್ಲಿ ಚಲಿಸಲಿಲ್ಲ. ಬದಲಾಗಿ ಹಾಡುಗಳನ್ನು ಅರ್ಥಪೂರ್ಣವಾಗಿ ಬಳಸಿದರು. ಸಾಕಷ್ಟು ಹಾಸ್ಯವನ್ನೂ ಅಳವಡಿಸುತ್ತ್ತಿದ್ದರು, ಆದರೆ ಗುಣಮಟ್ಟದಲ್ಲಿ ಯಾವ ಹೊಸ ಅಲೆ ಚಿತ್ರಕ್ಕೂ ಕಮ್ಮಿ ಎನಿಸಿಕೊಳ್ಳದಂತೆ ಕೌಶಲ್ಯ ತೋರಿಸಿ, ಮೈ ನವಿರೇಳಿಸುವ ಸನ್ನವೇಶಗಳನ್ನು ಸೃಷ್ಟಿಸಿ ಜನರನ್ನು ಆಕರ್ಷಿಸುತ್ತಿದ್ದರು. ಅವರ ಚಿತ್ರಗಳಿಗೆ ಜನ ಕಾದು ನಿರೀಕ್ಷಿಸುವಂತೆ ಮಾಡಿದರು. ತ.ರಾ.ಸು ರವರ ಕಾದಂಬರಿ ಆಧಾರಿತವಾಗಿ ಮಾಡಿದ ನಾಗರಹಾವು ಚಿತ್ರದಲ್ಲಿ ವಿಷ್ಣುವರ್ಧನ್ ಅವರನ್ನು ಕನ್ನಡಚಿತ್ರರಂಗಕ್ಕೆ ನಾಯಕನ ಪಾತ್ರದಲ್ಲಿ ಪರಿಚಯ ಮಾಡಿಸಿ, ಮುಂದೆ ಆತ ತಾರಾ ಪಟ್ಟಕ್ಕೇರಲು ನೆರವು ಮಾಡಿಕೊಟ್ಟರು. ಉತ್ತಮ ಚಿತ್ರಗಳಿಗೆ ಪ್ರಶಸ್ತಿಗಳು ದೊರಕಬೇಕು, ಪ್ರೋತ್ಸಾಹ ಸಿಗಬೇಕು, ಜನ ಅವುಗಳನ್ನು ನೋಡಬೇಕು ಎಂಬ ಕಾತರವುಳ್ಳ ಮತ್ತು ಕಾಳಜಿಯಿದ್ದ ಅನೇಕ ಪತ್ರಕರ್ತರು ಚಿತ್ರಗಳ ಬಗ್ಗೆ ಉತ್ತಮ ಲೇಖನಗಳನ್ನು ಬರೆಯುತ್ತಿದ್ದರು. ಇದಕ್ಕೆ ಪೂರಕವಾಗಿ ಚಲನಚಿತ್ರ ಸಮಾಜಗಳೂ ಹುಟ್ಟಿಕೊಂಡವು. ಸಾಮಾನ್ಯವಾಗಿ ಸಾರ್ವಜನಿಕ ಚಿತ್ರಮಂದಿರಗಳಲ್ಲಿ ಪ್ರದರ್ಶನಾವಕಾಶ ಸಿಕ್ಕದ ಅನೇಕ ಪ್ರಶಸ್ತಿವಿಜೇತ ಚಿತ್ರಗಳನ್ನು ಫಿಲಂ ಸೊಸೈಟಿಗಳು ಕಿಕ್ಕಿರಿದ ಸದಸ್ಯ ಪ್ರೇಕ್ಷಕರಿಗೆ ಪ್ರದರ್ಶನಮಾಡುತ್ತಿದ್ದರು. ಚಿತ್ರಗಳಲ್ಲಿ ಹೊಸತನ್ನು ಕಾಣುವ ಹಂಬಲ, ಗಂಭೀರ ವಿಷಯಗಳನ್ನು ಗಂಭೀರವಾಗಿ ಚಿತ್ರೀಕರಣ ಮಾಡುವುದನ್ನು ನಿರೀಕ್ಷಿಸುವುದು, ಈ ರೀತಿಯ ಪ್ರe್ಞೆಗಳನ್ನು ಜನರಲ್ಲಿ ಮೂಡಿಸುವ ಪ್ರಯತ್ನಗಳು ವ್ಯಾಪಕವಾಗಿ ಬೆಳೆಯಿತು. ಈ ಒಂದು ಪ್ರಗತಿಶೀಲ ಬೆಳೆವಣಿಗೆಯಿಂದಾಗಿ ಕರ್ನಾಟಕದಲ್ಲಿ ಒಂದು ಹೊಸ ಅಧ್ಯಾಯಯವೇ ಚಲನೆಗೊಂಡಿತು ಎನ್ನಬಹುದು. ಹೊಸ ಅಲೆಯ ಜಾಡನ್ನು ಅನುಸರಿಸಿ, ಎಸ್.ಎಲ್, ಭೈರಪ್ಪನವರ ಕಾದಂಬರಿ ವಂಶವೃಕ್ಷವನ್ನು ಚಿತ್ರೀಕರಿಸಬೇಕೆಂದು ನಿರ್ದೇಶನದ ಹೊಣೆಯನ್ನು ಜಿ.ವಿ.ಅಯ್ಯರ್ ರವರು, ಬಿ.ವಿ.ಕಾರಂತ್ ಮತ್ತು ಗಿರೀಶ್ ಕಾರ್ನಾಡ್ ಜೋಡಿಗೆ ವಹಿಸಿದರು. ವಂಶವೃಕ್ಷ ದಂತಹ ಬೃಹದಾಕಾರದ ಗ್ರಂಥವನ್ನು ಚಲನಚಿತ್ರಕ್ಕೆ ತರ್ಜುಮೆ ಮಾಡುವುದು ಒಂದು ಸಾಹಸವೇ. ಈ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿದ ಈ ನಿರ್ದೇಶಕ ಜೋಡಿ ಉತ್ತಮ ನಿರ್ದೇಶನಕ್ಕೆ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿಗಳಿಸಿದರು. ಈ ಚಿತ್ರದಲ್ಲಿ ಒಂದು ಪುಟ್ಟ ಪಾತ್ರದಲ್ಲಿ ಮೊದಲ ಬಾರಿಗೆ ವಿಷ್ಣುವರ್ಧನ್ ರವರು ಚಲನಚಿತ್ರದಲ್ಲಿ ಪದಾರ್ಪಣೆ ಮಾಡಿದರು. ಈ ಚಿತ್ರ 25 ವಾರಗಳು ನಡೆದು ಜನಪ್ರಿಯತೆಯನ್ನೂ ಗಳಿಸಿತು.

1972ರಲ್ಲಿ, ಜನಪ್ರಿಯತೆಯಲ್ಲಿ ದಾಖಲೆ ಮಾಡಿದ ಚಿತ್ರವೆಂದರೆ ಬಂಗಾರದ ಮನುಷ್ಯ. ಟಿ.ಕೆ.ರಾಮರಾಯರ ಕಾದಂಬರಿ ಆಧಾರಮಾಡಿಕೊಂದು ಚಿತ್ರ ನಿರ್ದೇಶಿಸಿದವರು ಸಿದ್ದಲಿಂಗಯ್ಯನವರು. ಹಳ್ಳಿಯ ಕುಟಂಬದಲ್ಲಿ ಹುಟ್ಟಿ, ಮನೆತನದ ಗೌರವಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗಮಾಡಿದ ಆದರ್ಶಪ್ರಾಯ ವ್ಯಕ್ತಿಯಾಗಿ ಮಾಡಿದ ರಾಜಕುಮಾರ್ರವರ ಅಭಿನಯ ಈ ಚಿತ್ರದ ವೈಶಿಷ್ಟ್ಯತೆ. ಈ ಚಿತ್ರ ಬೆಂಗಳೂರಿನ ಒಂದು ಚಿತ್ರ ಮಂದಿರದಲ್ಲಿ ಸು. 100 ವಾರಗಳಿಗೂ ಹೆಚ್ಚು ನಡೆದು ಹೆಸರು ಮಾಡಿತು. ಹಳ್ಳಿಯ ಚಿತ್ರಗಳನ್ನು ಮನಮುಟ್ಟುವಂತೆ ಚಿತ್ರಿಸುವಲ್ಲಿ ನಿಷ್ಣಾತರಾದ ಸಿದ್ದಲಿಂಗಯ್ಯನವರು, 1974ರಲ್ಲಿ ಖ್ಯಾತ ಸಾಹಿತಿ ಗೊರೂರು ರಾಮಸ್ವಾಮಿ ಐಯಂಗಾರ್ರವರ ಒಂದು ಕಿರು ಕಥೆಯನ್ನು ಅಳವಡಿಸಿಕೊಂಡು ಮಾಡಿದ ಬೂತಯ್ಯನ ಮಗ ಅಯ್ಯು ಚಿತ್ರ ಕೂಡ ಅಪಾರ ಜನಪ್ರಿಯತೆ ಗಳಿಸಿತಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ಕೂಡ ದಕ್ಕಿಸಿಕೊಂಡಿತು.

ಹೊಸ ಅಲೆಯ ಚಿತ್ರಗಳಲ್ಲಿ ಆಸಕ್ತಿ ತೋರಿಸಿ ಒಳ್ಳೆಯ ಚಿತ್ರಗಳನ್ನು ತಯಾರಿಸಬೇಕೆಂಬ ಉದ್ದೇಶದಿಂದ ಲಕ್ಷ್ಮೀಪತಿ ಮತ್ತು ನಾರಾಯಣ್, ಇಬ್ಬರೂ ಜೊತೆಗೂಡಿ ಕೆಲವು ಚಿತ್ರಗಳನ್ನು ನಿರ್ಮಿಸಿದರು. ಅವುಗಳಲ್ಲಿ ಗಿರೀಶ್ಕಾರ್ನಾಡ್ ಅವರಿಂದ ನಿರ್ದೇಶನಗೊಂಡ ಕಾಡು ಮೊದಲನೆಯದು ಮತ್ತು ಹಲವಾರು ಪ್ರಶಸ್ತಿಗಳಿಸಿದ ಕನ್ನಡ ಚಿತ್ರ. ಈ ಚಿತ್ರ ಅನೇಕ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಭಾಗವಹಿಸಿತು. ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನಗಳಿಸಿತು ಮತ್ತು ನಟಿ ನಂದಿನಿ ಅವರಿಗೆ ಶ್ರೇಷ್ಠ ಅಭಿನಯಕ್ಕಾಗಿ ಊರ್ವಶಿ ಪ್ರಶಸ್ತಿಯೂ ಲಭಿಸಿತು. ಕಾಡು, ಶ್ರಿ ಕೃಷ್ಣ ಆಲನಹಳ್ಳಿ ಅವರ ಕಥೆಯನ್ನು ಆಧಾರಿಸಿ ಮಾಡಿದ ಚಿತ್ರ. ಮತ್ತೊಮ್ಮೆ ಗ್ರಾಮೀಣ ಪ್ರದೇಶದ ಕಥೆ, ಎರಡುಹಳ್ಳಿಗಳ ಕ್ಷುಲ್ಲಕ ರಾಜಕೀಯದಲ್ಲಿ ನಡೆಯುವ ಘಟನೆಗಳನ್ನು ಒಬ್ಬಬಾಲಕನ ಕಣ್ಣಿನ ದೃಷ್ಟಿಯ ಮೂಲಕ ತೋರಿಸುವ ಈ ಚಿತ್ರ ವಿಷಯ ನಿರೂಪಣೆಯಲ್ಲಿ ವಿನೂತನ ಶೈಲಿಯನ್ನು ಅನುಸರಿಸಿತು. ಕಪ್ಪು ಬಿಳುಪು ಛಾಯಾಗ್ರಹಣ ಅತ್ಯಂತ ಪರಿಣಾಮಕಾರಿಯಾಗಿ ಹಳ್ಳಿಯ ವಾತಾವರಣ, ಕಾಡಿನ ಪರಿಸರ ಎಲ್ಲವನ್ನೂ ಸೆರೆ ಹಿಡಿಯಿತು. ಕನ್ನಡ ಚಿತ್ರ ರಂಗದಲ್ಲಿ ಇದೊಂದು ಪ್ರಮುಖ ಚಿತ್ರವೆನ್ನಬಹುದು.

ನಾಂದಿ, ಉಯ್ಯಾಲೆ, ಮುಕ್ತಿ ಚಿತ್ರಗಳನ್ನು ನಿರ್ದೇಶಿಸಿ ಉತ್ತಮಶ್ರೇಣಿಯ ನಿರ್ದೇಶಕರು ಎಂದು ಖ್ಯಾತಿ ಪಡೆದಿದ್ದ ಎನ್. ಲಕ್ಷ್ಮೀನಾರಾಯಣ್ರವರು ಅಬಚೂರಿನ ಪೋಸ್ಟ್‌ ಆಫೀಸು ಚಿತ್ರವನ್ನು ನಿರ್ದೇಶಿಸಿ, ರಾಷ್ಟ್ರ ಮಟ್ಟದಲ್ಲಿ ಪ್ರ್ರಶಸ್ತಿ ಗಳಿಸಿದರು. ಲಕ್ಷ್ಮೀನಾರಾಯಣ್ ರವರು ಅಬಚೂರಿನ ಪೋಸ್ಟ್‌ ಆಫೀಸು (1973), ಮುಯ್ಯಿ (1979) ಚಿತ್ರಗಳನ್ನು ಹೊಸ ಅಲೆಯ ಮಾದರಿಯಲ್ಲೇ ಮಾಡಿದರೂ, ಅವುಗಳು ನಿರೀಕ್ಷಿಸಿದಷ್ಟು ಪರಿಣಾಮ ಬೀರಲಿಲ್ಲ.

ಸಂಸ್ಕಾರ, ವಂಶವೃಕ್ಷ, ಕಾಡು ಚಿತ್ರಗಳಿಗೆ ದೊರಕಿದ ಉತ್ತಮ ವಿಮರ್ಶೆ ಮತ್ತು ಪ್ರಶಸ್ತಿಗಳ ಸುರಿಮಳೆಗಳಿಂದ ಸ್ಫೂರ್ತಿಗೊಂಡ ಅನೇಕರು,ಹವ್ಯಾಸಿ ರಂಗಕರ್ಮಿಗಳು, ಸಾಹಿತಿಗಳು, ಅಧ್ಯಾಪಕವೃತ್ತಿಯಲ್ಲಿದ್ದವರು, ಮತ್ತು ಚಿತ್ರೋದ್ಯಮದಲ್ಲಿದ್ದವರೂ ಕೂಡ ಹೊಸ ಅಲೆಯ ಚಿತ್ರಗಳನ್ನು ನಿರ್ಮಿಸಲು ಹುರುಪಿನಿಂದ ಉದ್ಯುಕ್ತರಾದರು.

1973ರಲ್ಲಿ ಪಿ.ವಿ. ನಂಜರಾಜ ಅರಸ್ರವರು ನಿರ್ದೇಶಿಸಿದ ಸಂಕಲ್ಪ, ಕೆ.ಎಮ್. ಶಂಕರಪ್ಪನವರ ಮಾಡಿ ಮಡಿದವರು, ಮಯೂರ ಫಿಲಂಸ್ರವರ ಕಂಕಣ, ಬಿ.ವಿ.ಕಾರಂತರ ಚೋಮನ ದುಡಿ ಜಿ.ವಿ.ಅಯ್ಯರ್ ರವರ ಹಂಸ ಗೀತೆ, ಪಿ.ಲಂಕೇಶ್ ರವರ ಪಲ್ಲವಿ, ಸಿ.ಆರ್.ಸಿಂಹ ರವರ ಕಾಕನ ಕೋಟೆ, ವಿ.ಆರ್.ಕೆ.ಪ್ರಸಾದ್ ರವರ ಋಷ್ಯಶೃಂಗ, ಎಮ್.ಎಸ್. ಸತ್ಯು ಅವರ ಕನ್ನೇಶ್ವರ ರಾಮ, ಗಿರೀಶ್ ಕಾರ್ನಾಡ್ ಮತ್ತು ಬಿ.ವಿ.ಕಾರಂತರ ತಬ್ಬಲಿಯು ನೀನಾದೆ ಮಗನೆ, ಗಿರೀಶ್ ಕಾಸರವಳ್ಳಿಯವರ ಘಟಶ್ರಾದ್ಧ, ಟಿ.ಎಸ್. ರಂಗಾರವರ ಗೀಜಗನಗೂಡು, ಎಮ್.ಎಸ್.ಸತ್ಯು ಅವರ ಚಿತೆಗೂ ಚಿಂತೆ, ಟಿ.ಎಸ್.ನಾಗಾಭರಣ ಅವರ ಗ್ರಹಣ, ಪಿ.ಲಂಕೇಶ್ ರವರ ಖಂಡವಿದೆಕೊ ಮಾಂಸವಿದೆಕೊ, ಕಟ್ಟೆ ರಾಮಚಂದ್ರ ಅವರ ಅರಿವು, ಗಿರೀಶ್ ಕಾಸರವಳ್ಳಿ ಅವರ ಆಕ್ರಮಣ, ಪಿ.ಲಂಕೇಶ್ ರವರ ಎಲ್ಲಿಂದಲೋ ಬಂದವರು, ಟಿ.ಎಸ್. ರಂಗಾರವರ ಸಾವಿತ್ರಿ, ಈ ಚಿತ್ರಗಳು ಈ ಹೊಸ ಅಲೆಯ ಪ್ರವಾಹದಲ್ಲಿ ತಯಾರಾದ ಪ್ರಮುಖ ಚಿತ್ರಗಳು. ಗಲ್ಲಾಪೆಟ್ಟಿಗೆಯ ದೃಷ್ಟಿಯಿಂದ ಈ ಚಿತ್ರಗಳಲ್ಲಿ ಅನೇಕವು ಸೋಲನ್ನು ಅನುಭವಿಸಿದರೂ ಪ್ರಶಸ್ತಿಗಳ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ದಾಖಲಿಸಿದವು.

1976ರಲ್ಲಿ ಚೋಮನದುಡಿ ಚಿತ್ರ, ರಾಷ್ಟ್ರ ಮಟ್ಟದಲ್ಲಿ ಅತ್ಯತ್ತಮ ಚಿತ್ರಕ್ಕಾಗಿ ಸ್ವರ್ಣಕಮಲ ಪಡೆಯಿತು. ಕನ್ನಡ ಚಿತ್ರಕ್ಕೆ ಸಂದ ಈ ಗೌರವ ಸಂಸ್ಕಾರದ ನಂತರ ಎರಡನೇಬಾರಿ. ಶಿವರಾಮ ಕಾರಂತರ ಕಾದಂಬರಿಯನ್ನು ಆಧರಿಸಿ, ಬಿ.ವಿ.ಕಾರಂತರು ಸ್ವಂತವಾಗಿ ನಿರ್ದೇಶಿಸಿದ ಈ ಚಿತ್ರದಲ್ಲಿ ಮುಖ್ಯ ಪಾತ್ರ ಚೋಮನಪಾತ್ರದಲ್ಲಿ ನಟಿಸಿದ ಎಂ.ವಿ.ವಾಸುದೇವರಾವ್ ರವರಿಗೆ ರಾಷ್ಟ್ರಮಟ್ಟದಲ್ಲಿ ಶ್ರೇಷ್ಠ ನಟ ಪ್ರಶಸ್ತಿ ಲಭಿಸಿತು. ಎಂ.ವಿ.ವಾಸುದೇವರಾವ್ ಅವರು ಮುಂದೆ ಅನೇಕ ಚಿತ್ರಗಳಲ್ಲಿ ನಟಿಸಿದರು, ಖ್ಯಾತ ಬಂಗಾಳಿ ಚಿತ್ರ ನಿರ್ದೇಶಕರಾದ ಮೃಣಾಲ್ಸೆನ್ರವರ ಚಿತ್ರದಲ್ಲಿಯೂ ಅವರಿಗೆ ಅವಕಾಶ ಸಿಕ್ಕಿತು. ಆದರೆ ಚೋಮನದುಡಿಯಲ್ಲಿನ ಅವರ ಅಭಿನಯಕ್ಕೆ ಯಾವುದೂ ಸರಿಗಟ್ಟಲಿಲ್ಲ. ಈ ದಶಕದಲ್ಲಿನ ಮತ್ತೊಂದು ಅಪೂರ್ವ ಕೊಡುಗೆಯೆಂದರೆ, ಜಿ.ವಿ.ಅಯ್ಯರ್ರವರ ಹಂಸಗೀತೆ (1975). ಹಂಸಗೀತೆ ತ.ರಾ.ಸು.ರವರ ಪ್ರಖ್ಯಾತ ಕಾದಂಬರಿ. ಅನೇಕ ರೋಮಾಂಚನಕರ ಸನ್ನಿವೇಶಗಳನ್ನೊಳಗೊಂಡು, ಪರಿಶುದ್ಧ ಕನ್ನಡದಲ್ಲಿ ಲಿಖಿತಗೊಂಡ ಸಾಹಿತ್ಯ ರತ್ನ ಹಂಸಗೀತೆ. ಜಿ.ವಿ. ಅಯ್ಯರ್ರವರು ಈ ಕಾದಂಬರಿಯಲ್ಲಿನ ಎಲ್ಲ ಸಂಭಾಷಣೆಗಳನ್ನೂ ವಿಸರ್ಜಿಸಿ ಒಂದು ಹೊಸ ಶೈಲಿಯಲ್ಲಿ ಈ ಚಿತ್ರವನ್ನು ನಿರ್ದೇಶಿಸಿದರು. ಇಡೀ ಚಿತ್ರದಲ್ಲಿ ಕೇವಲ 18 ನಿಮಿಷಗಳಷ್ಟು ಮಾತ್ರ ಸಂಭಾಷಣೆ. ಕಥಾ ನಿರೂಪಣೆಯನ್ನು, ಸಂಗೀತ ಪ್ರಾಧಾನ್ಯಚಿತ್ರವಾದ್ದರಿಂದ, ಬಿ.ವಿ.ಕಾರಂತ್, ಬಾಲಮುರಳಿಕೃಷ್ಣ ಹಾಗೂ ಟಿ.ಜಿ.ಲಿಂಗಪ್ಪ ನವರ ಸಂಗೀತ ಸಂಯೋಜನೆಯಿಂದ ರೂಪುಗೊಂಡ ಸಂಗೀತದ ಮೂಲಕ ಮತ್ತು ಸಾಂಕೇತಿಕವಾದ ದೃಶ್ಯಗಳನ್ನು ಛಾಯಾ ಗ್ರಾಹಕ ನಿಮಾಯ್ ಘೋಷ್ ರವರ ಕಲೆಗಾರಿಕೆಯಿಂದ, ಕಲಾನಿರ್ದೇಶಕ ಕೃಷ್ಣ ಮೂರ್ತಿಯವರ ಸೃಜನಶೀಲತೆಯಿಂದ ಪ್ರೇಕಕ್ಷರಿಗೆ ಮನವರಿಕೆಮಾಡಿಕೊಟ್ಟು ಯಶಸ್ವಿಯಾದರು.

ಈ ದಶಕದಲ್ಲಿ ಪುಟ್ಟಣ್ಣ ಕಣಗಾಲ್ ರವರು ಸಾಕಷ್ಟು ಚಿತ್ರಗಳನ್ನು ನಿರ್ದೇಶಿಸಿದ್ದಾಗ್ಯೂ, ಅವುಗಳಲ್ಲಿ ಹೊಸತನ್ನು ತೋರಿಸಿದ ಚಿತ್ರವೆಂದರೆ ಕಥಾಸಂಗಮ. ಕಥಾಸಂಗಮದ ಹಿರಿಮೆಯೆಂದರೆ, ಮೂರು ಕಥೆಗಳನ್ನು ಆಧರಿಸಿ, ಹಂಗು, ಮುನಿತಾಯಿ ಮತ್ತು ಅತಿಥಿ, ಈ ಮೂರು ಕಿರು ಚಿತ್ರಗಳನ್ನು ಒಂದಾದಮೇಲೊಂದರಂತೆ ಚಿತ್ರೀಕರಿಸಿ ಕಥಾಸಂಗಮ ಎಂಬ ನಾಮಾಂಕಿತದಿಂದ ತೆರೆಕಾಣಿಸಿದರು. ಕನ್ನಡದಲ್ಲಿ ಇದೊಂದು ಅಪೂರ್ವ ಪ್ರಯೋಗವಾಯಿತು. ಪುಟ್ಟಣ್ಣನವರು ಈ ಚಿತ್ರದಲ್ಲಿ ತೆರೆಯಮೇಲೆ ಕಾಣಿಸಿಕೊಂಡು ಚಿತ್ರದ ಬಗ್ಗೆ ಪರಿಚಯ ಮಾಡಿಕೊಡುವ ದೃಶ್ಯವೂ ಇದೆ. ಮೂರು ಪ್ರಸಂಗಗಳೂ ಪುಟ್ಟಣ್ಣನವರ ಜಾಣ್ಮೆಯಿಂದ ಪರಿಪಕ್ವತೆಯನ್ನು ಪಡೆದಿದ್ದರೂ, ಮುನಿತಾಯಿ ಪ್ರಸಂಗ ಇಂದಿಗೂ ಎಲ್ಲರ ಮನಸ್ಸಿನಲ್ಲಿ ಅಳಿಯದೆ ಉಳಿದಿದೆ.

ಈ ಒಂದು ದಶಕದಲ್ಲಿ ಅನೇಕ ಹವ್ಯಾಸಿ ರಂಗ ಕಲಾವಿದರ ತಂಡಗಳು ಕೂಡ ಲವಲವಿಕೆಯಿಂದ ಉತ್ತಮ ನಾಟಕಗಳನ್ನು ಕಿಕ್ಕಿರಿದ ಜನಸ್ತೋಮಕ್ಕೆ ಅಭಿನಯಿಸಿ ಚಟುವಟಿಕೆಯಿಂದ ಕಾರ್ಯನಿರತವಾಗಿದ್ದದ್ದು ಸಂತಸಕರ ಸಂಗತಿ. ಅಂದಿನ ದಿನಗಳಲ್ಲಿ ನಾಟಕಗಳಿಗೆ ಪ್ರವೇಶಸಿಕ್ಕುವುದೇ ಕಷ್ಟವಾಗಿತ್ತು. ಮಾಸ್ತಿವೆಂಕಟೇಶ ಅಯ್ಯಂಗಾರ್ರವರ ಕಾಕನಕೋಟೆ ನಾಟಕ ಒಂದು ಯಶಸ್ವಿ ಪ್ರಯೋೕಗವಾಗಿತ್ತು. ಈ ನಾಟಕವನ್ನೇ ರಂಗಭೂಮಿ ಹಿನ್ನಲೆಯ ವಾದಿರಾಜ್ ಮತ್ತು ಅವರ ಸೋದರರು ಕಾಕನಕೋಟೆ ನಾಟಕ ಅಭಿನಯಿಸುತ್ತಿದ್ದ ನಟರಂಗದ ನಟರನ್ನೇ ಬಳಸಿ ಸಿ.ಆರ್.ಸಿಂಹ ರವರ ನಿರ್ದೇಶನದಲ್ಲಿ ಚಲನಚಿತ್ರವನ್ನಾಗಿ ಮಾಡಿದ್ದು ಒಂದು ಗಮನಾರ್ಹ ವಿಷಯ.

1977ರಲ್ಲಿ ತಯಾರಾದ ಚಿತ್ರಗಳಲ್ಲಿ ಯು.ಆರ್.ಅನಂತಮೂರ್ತಿ ಅವರ ಕಥೆ ಆಧಾರಿತ ಘಟಶ್ರಾದ್ಧ ಕನ್ನಡ ಚಲನಚಿತ್ರರಂಗಕ್ಕೆ ಒಂದು ಹೊಸ ಪ್ರತಿಭೆಯನ್ನು ಕೊಟ್ಟಂತಹ ಚಿತ್ರ. ಈ ಚಿತ್ರದ ಮೂಲಕ ಅದರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರು ಕನ್ನಡದಲ್ಲಿ ತಮ್ಮ ಪ್ರಥಮ ಚಿತ್ರವನ್ನು ನಿರ್ದೇಶಿಸಿ, ರಾಷ್ಟ್ರಮಟ್ಟದಲ್ಲಿ ಶ್ರೇಷ್ಠ ಚಿತ್ರಕ್ಕಾಗಿ ಸ್ವರ್ಣಕಮಲವನ್ನು ಗಳಿಸಿದ ಹೆಮ್ಮೆಗೆ ಪಾತ್ರರಾದರು. ಕನ್ನಡ ಚಿತ್ರರಂಗಕ್ಕೆ ಈ ಗೌರವ ಲಭಿಸಿದ್ದು ಇದು ಮೂರನೆಯ ಬಾರಿ. ಎಲ್ಲಕ್ಕಿಂತ ಅತಿಶಯವಾದ ಸಂಗತಿಯೆಂದರೆ, ಪುಣೆ ಫಿಲಂ ಇನ್ಸ್‌ಟ್ಯೂಟ್ ನಲ್ಲಿ ಪದವಿ ಪಡೆದು ಅಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಅವಶೇಶ್ ಎಂಬ ಕಿರುಚಿತ್ರಮಾಡಿ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದ ಗಿರೀಶ್ರವರು ಕನ್ನಡ ಚಿತ್ರ ರಂಗಕ್ಕೆ ಪ್ರವೇಶಮಾಡಿದ್ದು ಮುಂದೆ ಕನ್ನಡಕ್ಕೆ ಕೀರ್ತಿ ತರುವಂತಹ ಚಿತ್ರಗಳನ್ನು ಮಾಡುವ ಶುಭ ಸಂಕೇತವಾಗಿ ಪರಿಣಮಿಸಿತು. ಇದಕ್ಕೆ ಮುಂಚೆ ಅನೇಕ ಹೊಸ ಅಲೆಯ ಚಿತ್ರಗಳು ಬಂದಿದ್ದಾಗ್ಯೂ ಈ ಚಿತ್ರದಲ್ಲಿ ಒಬ್ಬ ಕಲಾಕಾರನ ಅನುಕರಣವಲ್ಲದ ಸ್ವಂತ ಪ್ರತಿಭೆಯ ಎಲ್ಲ ಲಕ್ಷಣಗಳೂ ಮೈಗೂಡಿಕೊಂಡು ಕಾಣಿಸಿಕೊಂಡದ್ದು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನೂ ಹಾಗೂ ಹೆಸರಾಂತ ವಿಮರ್ಶಕರಿಂದ ಪ್ರಶಂಸೆಗಳನ್ನೂ ಗಳಿಸಿದ್ದು ಸ್ತುತ್ಯರ್ಹವಾದ ಸಂಗತಿ.

1978ರಲ್ಲಿ ತಯಾರಾದ ಚಿತ್ರಗಳಲ್ಲಿ ಕನ್ನಡಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದ ಚಿತ್ರವೆಂದರೆ ಒಂದಾನೊಂದು ಕಾಲದಲ್ಲಿ. ಗಿರೀಶ್ ಕಾರ್ನಾಡ್ ನಿರ್ದೇಶಿಸಿದ ಈ ಚಿತ್ರ ಶೈಲಿಯಲ್ಲಿ ಜಪಾನಿನ ಸಮುರಾಯ್ ಚಿತ್ರಗಳಿಂದ ಪ್ರೇರಿತವಾಗಿ, ಇಲ್ಲಿನ ಜಾನಪದ ಕಥೆಯನ್ನು ಅಳವಡಿಸಿಕೊಂಡು ಹೊಸ ಅಲೆಯ ಮಾದರಿಯಲ್ಲಿ ನಿರ್ಮಿಸಿದ ಚಿತ್ರ. 1979ರ ದೆಹಲಿಯ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದ ಶಂಕರ್ ನಾಗ್ರವರಿಗೆ ಅತ್ಯತ್ತಮನಟ ಪ್ರಶಸ್ತಿ ಲಭಿಸಿ, ಭಾರತದಲ್ಲಿ ಮೊದಲಬಾರಿಗೆ ಇಂತಹ ಗೌರವಕ್ಕೆ ಪಾತ್ರರಾದ ವ್ಯಕ್ತಿಯಾದರು.

ಈ ದಶಕದ ಅಂತ್ಯದಲ್ಲಿ, 1980-ರಲ್ಲಿ, ಪ್ರಥಮಬಾರಿಗೆ ಬೆಂಗಳೂರಿನಲ್ಲಿ ಫಿಲ್ಮೋತ್ಸವ, ಅಂದರೆ ರಾಷ್ಟ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಿಂದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜರುಗಿತು. ದೇಶ ವಿದೇಶಗಳಿಂದ ತರಿಸಿದ್ದ ಸು. ನೂರ ಐವತ್ತು ಚಿತ್ರಗಳನ್ನು, ಅಂದಿನ ದಿನಗಳಲ್ಲಿ ಚಾಲನೆಯಲ್ಲಿದ್ದ ಅದ್ದೂರಿ ಚಿತ್ರ ಮಂದಿರಗಳಲ್ಲಿ ಪ್ರದರ್ಶಿಸಲಾಯಿತು. ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಪ್ರತಿನಿಧಿಗಳು ಬೆಂಗಳೂರಿನ ಚಿತ್ರೋತ್ಸವನ್ನು ಮೆಚ್ಚಿ ಬಗೆಬಗೆಯಾಗಿ ವರ್ಣಿಸಿದರು. ವಿಶ್ವವಿಖ್ಯಾತ ಚಿತ್ರನಿರ್ದೇಶಕರಾದ ಸತ್ಯಜಿತ್ ರೇ ಅವರ ಸಮಗ್ರ ಚಿತ್ರಗಳ ಪ್ರದರ್ಶನ ಈ ಉತ್ಸವದ ವಿಶೇಷ. ಸುಚಿತ್ರದ ಸಂಸ್ಥಾಪಕ ಕಾರ್ಯದರ್ಶಿ ಹೆಚ್.ಎನ್.ನರಹರಿರಾವ್ ರವರು ರೇ ಅವರನ್ನು ಒಪ್ಪಿಸಿ, ಈ ಚಿತ್ರೋತ್ಸವದಲ್ಲಿ ಭಾಗವಹಿಸಲು ಬಂದಾಗ್ಗೆ ನಗರದ ಖ್ಯಾತ ಸುಚಿತ್ರಾ ಫಿಲಂ ಸೊಸೈಟಿಯ ಸಭಾಂಗಣದ ಶಂಖು ಸ್ಥಾಪನೆಯನ್ನು ಅವರ ಹಸ್ತದಿಂದ ನೆರವೇರಿಸಿದರು. ನಂತರದ ದಿನಗಳಲ್ಲಿ ಸುಚಿತ್ರದ ಪದಾಧಿಕಾರಿಗಳ ಪರಿಶ್ರಮದಿಂದ ಬನಶಂಕರಿ 2ನೇ ಹಂತದಲ್ಲಿ ಒಂದು ಚಿತ್ರಮಂದಿರ ಅಸ್ತಿತ್ವಕ್ಕೆ ಬಂದು ಇಂದಿಗೂ ಸಕ್ರಿಯವಾಗಿ ಉತ್ತಮ ಚಿತ್ರಗಳ ವೀಕ್ಷಣೆಗೆ ಅವಕಾಶಮಾಡಿಕೊಟ್ಟಿದೆ. 1971ರಲ್ಲಿ 35, 1972ರಲ್ಲಿ 24, 1973ರಲ್ಲಿ 23, 1974ರಲ್ಲಿ 23, 1975ರಲ್ಲಿ 30, 1976ರಲ್ಲಿ 35, 1977ರಲ್ಲಿ 51, 1978ರಲ್ಲಿ 48, 1979ರಲ್ಲಿ 42 ಮತ್ತು 1980ರಲ್ಲಿ 56, ಹೀಗೆ ಈ ದಶಕದಲ್ಲಿ ಒಟ್ಟು ತಯಾರಾದ ಚಿತ್ರಗಳ ಸಂಖ್ಯೆ 367. ಅಂದರೆ ಹಿಂದಿನ ದಶಕಕ್ಕಿಂತ 138 ಚಿತ್ರಗಳು ಹೆಚ್ಚು. ಸಂಖ್ಯೆಯ ದೃಷ್ಟಿಯಿಂದ ಇದೊಂದು ಉತ್ತಮ ಪ್ರಗತಿಯೆನ್ನಬೇಕು.

ಒಟ್ಟಿನಲ್ಲಿ ಹೇಳುವುದಾದರೆ, 1971 ರಿಂದ 80ನರವರೆಗಿನ ದಶಕ ಕನ್ನಡಚಿತ್ರರಂಗದಲ್ಲಿ ಒಂದು ಸ್ವರ್ಣ ಯುಗವೆನ್ನಬಹುದು. ಮೈಸೂರಿನ ಸ್ಟುಡಿಯೋಗಳಲ್ಲಿ ಬಿರುಸಿನ ಚಟುವಟಿಕೆ, ಬೆಂಗಳೂರಿನಲ್ಲಿ ಹೊಸ ಸ್ಟುಡಿಯೋಗಳ ಪ್ರಾರಂಭ, ಚಿತ್ರ ನಿರ್ಮಾಣ ಬಹುತೇಕ ಮದರಾಸಿನಿಂದ ಬೆಂಗಳೂರಿಗೆ ವರ್ಗಾವಣೆ, ಹಿಂದಿನ ದಶಕದಲ್ಲಿ ತಯಾರಾದ 229 ಚಿತ್ರಗಳಿಂದ ಈ ದಶಕದಲ್ಲಿ ಒಟ್ಟು 367 ಚಿತ್ರಗಳಿಗೆ ಏರಿದ್ದು ಇವು ಪ್ರಗತಿ ಪಥದ ಶುಭಸೂಚನೆಯಾಯಿತು. ಗುಣ ಮಟ್ಟದಲ್ಲಿ ಕೂಡ ಕನ್ನಡ ಚಿತ್ರಗಳು ಉನ್ನತ ಶ್ರೇಣಿಯಲ್ಲಿ ಮಿಂಚಿದವು. ಅನೇಕ ಹೊಸ ಅಲೆಯ ಚಿತ್ರಗಳು, ರಾಷ್ಟ್ರಮಟ್ಟದಲ್ಲಿ ಇದೇ ದಶಕದಲ್ಲಿ ಮೂರುಬಾರಿ ಅತ್ಯುತ್ತಮ ಚಿತ್ರಕ್ಕಾಗಿ ಸ್ವರ್ಣ ಪದಕ, ಇದಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಪ್ರಶಂಸೆ, ಹೀಗೆ ಸಾಕಷ್ಟು ಮಿಂಚಿದವು. ಉತ್ತಮ ಮಟ್ಟದ ಮನರಂಜನೆಯ ವಿಭಾಗದಲ್ಲಿ ಕೂಡ, ಗೀತಪ್ರಿಯ, ದೊರೆ-ಭಗವಾನ್, ಕೆ.ಎಸ್.ಎಲ್. ಸ್ವಾಮಿ (ರವಿ), ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಟಿ.ವಿ.ಸಿಂಗ್ ಠಾಕೂರ್, ಮತ್ತು ಇನ್ನೂ ಅನೇಕ ಮಹನೀಯರುಗಳು ಕನ್ನಡ ಚಿತ್ರಗಳಿಗೆ ಶ್ರೀಮಂತಿಕೆಯನ್ನು ತಂದರು.

ಅನಂತರದ ದಶಕ ಅಂದರೆ 1981-90ರ ವರೆಗಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗ ಸಂಖ್ಯಾ ದೃಷ್ಟಿಯಿಂದ ನೋಡಿದಾಗ ಮತ್ತಷ್ಟು ಪ್ರಗತಿಸಾಧಿಸಿತು. ಮತ್ತಿತರ ಪ್ರಾದೇಶಿಕ ಭಾಷೆಗಳಂತೆಯೇ ಅನೇಕ ಚಿತ್ರಗಳನ್ನು ಉತ್ಪಾದನೆ ಮಾಡುವ ಚೈತನ್ಯವನ್ನು ಬೆಳೆಸಿಕೊಂಡಿತು ಎನ್ನಬಹುದು ಮತ್ತು ಬರುತ್ತಿದ್ದ ಎಲ್ಲ ಚಿತ್ರಗಳೂ ಬಣ್ಣದಲ್ಲಿಯೇ ತಯಾರಾಗುತ್ತಿದ್ದವು. ಆದರೆ ಗುಣಮಟ್ಟದಲ್ಲಿ ಮಾತ್ರ ಹಿಂದಿನ ದಶಕದಲ್ಲಿ ವ್ಯಕ್ತಪಡಿಸಿದ್ದ ವಿಶ್ವಾಸವನ್ನು ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಉಳಿಸಿಕೊಳ್ಳಲು ಸಫಲತೆಯನ್ನು ಪಡೆಯಲಿಲ್ಲವೆನ್ನಬಹುದು. ಸಾಮಾನ್ಯವಾಗಿ ಬಹುತೇಕ ಚಿತ್ರಗಳು ವ್ಯಾಪಾರೀ ದೃಷ್ಟಿಯಿಂದಲೇ ತಯಾರಾಗುತ್ತಿದ್ದರಿಂದ ಗುಣಮಟ್ಟ ಕುಂದುತ್ತಾ ಬಂದಿತು. ಪುಟ್ಟಣ್ಣ ಕಣಗಾಲ್ ರಂಗ ಕಲಾವಿದರುಗಳ ಬಗ್ಗೆ ಅಶ್ವತ್ಥ್‌ ಅವರ ಕಾದಂಬರಿ ಆಧರಿಸಿ ನಿರ್ಮಿಸಿದ ಚಿತ್ರ ರಂಗನಾಯಕಿ. ವೃತ್ತಿ ರಂಗಭೂಮಿಯ ಒಳಹೊಕ್ಕು, ಅಲ್ಲಿನ ಆಗುಹೋಗುಗಳನ್ನು, ನಟರು ಮತ್ತು ವ್ಯವಸ್ಥಾಪಕ ವರ್ಗದವರುಗಳ ಅನುಭವಗಳು, ರಂಗದ ಮೇಲೆ ಮತ್ತು ಪರದೆಯ ಹಿಂದೆ ಅವರು ಪಡುತ್ತಿದ್ದ ಬವಣೆಗಳನ್ನು, 1981ರಲ್ಲಿ ನಿರ್ಮಿಸಿದ ಚಿತ್ರ ರಂಗನಾಯಕಿಯ ಮೂಲಕ ಜನರಿಗೆ ಪರಿಚಯ ಮಾಡಿಕೊಟ್ಟರು. ಚಿತ್ರ ನಿರ್ಮಾಣದಲ್ಲಿ ಅಪಾರವಾದ ಹಣ ವ್ಯಯವಾಗಿದ್ದರಿಂದ ಚಿತ್ರ ನಿರೀಕ್ಷಿಸಿದಷ್ಟು ಯಶಸ್ಸುಗಳಿಸಲಿಲ್ಲ. ಆದಾಗ್ಯೂ ವೃತ್ತಿ ರಂಗಭೂಮಿಯ ಬಗ್ಗೆ ಇದೊಂದು ಒಳ್ಳೆಯ ದಾಖಲೆ. ವೃತ್ತಿರಂಗಭೂಮಿಯ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ಕಲಾತ್ಮಕವಾಗಿ ಬಣ್ಣಿಸಿ ಚಿತ್ರೀಕರಣ ಮಾಡಲು, ಅಪಾರ ಪರಿಶ್ರಮದಿಂದ ಮಾಡಿದ ಸಫಲ ಪ್ರಯತ್ನವನ್ನು ಪ್ರೋತ್ಸಾಹಿಸುವ ಸಲುವಾಗಿ ಸರ್ಕಾರ ಈ ಚಿತ್ರಕ್ಕೆ ಸಂಪೂರ್ಣ ಮನೋರಂಜನ ತೆರಿಗೆ ವಿನಾಯಿತಿಯನ್ನು ಮಂಜೂರು ಮಾಡಿತ್ತು. ಈ ಚಿತ್ರ ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯೂ ಸೇರಿ ಅನೇಕ ಪ್ರಶಸ್ತಿಗಳನ್ನು ಕೂಡ ಪಡೆಯಿತು.

ಗ್ರೀಸ್ ದೇಶದ ಚಿತ್ರ ನಿರ್ದೇಶಕ ಕಾಸ್ಟಾ ಗವರಾಸ್ ಎಂಬ ವ್ಯಕ್ತಿ ತಯಾರಿಸಿದ ಜಡ್ (Z) ಎಂಬ ಒಂದು ವಿಶ್ವವಿಖ್ಯಾತ ಚಿತ್ರ ಭಾರತದಲ್ಲೂ 70ರ ದಶಕದಲ್ಲಿ ಹಲವಾರು ಚಿತ್ರೋತ್ಸವಗಳಲ್ಲಿ ತೆರೆ ಕಂಡಿತು. ಈ ಚಿತ್ರ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ರಾಜಕೀಯ ಚಿತ್ರ ನಿರ್ಮಾಣದಲ್ಲಿ ಒಂದು ಹೊಸ ಶೈಲಿಯನ್ನು ಹುಟ್ಟಿಹಾಕಿತು. ಈ ಶೈಲಿ ಭಾರತದಲ್ಲಿ, ಹಾಗೂ ಕನ್ನಡದಲ್ಲಿ ಕೂಡ ಪ್ರವೇಶಗೊಂಡಿತು. ಅಧಿಕಾರದಲ್ಲಿರುವ ವ್ಯಕ್ತಿಗಳು ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳನ್ನು ಮುಗಿಸಿಬಿಡುವ ಸಲುವಾಗಿ, ಅಧಿಕಾರ ದುರುಪಯೋಗ ಮಾಡಿಕೊಂಡು ಅವರ ಮೇಲೆ ಮಾಡುವ ಹಿಂಸೆ, ಹಲ್ಲೆಗಳನ್ನು ಚಿತ್ರೀಕರಿಸುವ ಶೈಲಿ ಇಂದಿಗೂ ರೂಢಿಯಲ್ಲಿದೆ. ಇದೇ ರೀತಿಯ ಕಥಾವಸ್ತುವನ್ನು ಆಧರಿಸಿ ಮಾಡಿದ ಮೊದಲ ಕನ್ನಡ ಚಿತ್ರ ಅಂತ 1981ರಲ್ಲಿ ಸಾಕಷ್ಟು ವಿವಾದವನ್ನು ಎಬ್ಬಿಸಿತು. ಈ ಚಿತ್ರದ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರು ಚಿತ್ರಗಳಲ್ಲಿ ಹಿಂದೆಂದೂ ಕಾಣದಷ್ಟು ಅತ್ಯಾಚಾರ, ವಿಕೃತ ಹಿಂಸೆಯನ್ನು ಅಳವಡಿಸಿ, ಚಿತ್ರವನ್ನು ಸೆನ್ಸಾರ್ ನಿಂದ ಬಿಡುಗಡೆ ಹೊಂದಲು ಸಾಕಷ್ಟು ತಾಪತ್ರಯಗಳನ್ನು ಅನುಭವಿಸಬೇಕಾಯಿತು. ಈ ಚಿತ್ರ ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಒಂದು ಹೊಸ ಶೈಲಿಯನ್ನು ಹುಟ್ಟುಹಾಕಿತು. 1982ರಲ್ಲಿ ಎಂ.ಎಸ್.ಸತ್ಯು ಅವರು ನಿರ್ದೇಶಿಸಿದ ಬರ ಎಂಬ ಚಿತ್ರ ಕೂಡ ರಾಜಕೀಯ ಚಿತ್ರವಾದರೂ, ವ್ಯವಸ್ಥೆಯೊಳಗಿನ ಸ್ವಾರ್ಥತೆ, ಹುಳುಕುಗಳಿಂದ ಜನರಿಗೆ ಆಗುವ ತೊಂದರೆಗಳನ್ನು ಕಲಾತ್ಮಕವಾಗಿ ನಿರೂಪಿಸುವ ಚಿತ್ರವಾಯಿತು. 70ರ ದಶಕದಲ್ಲಿ ಲವಲವಿಕೆಯಿಂದ ಪ್ರಾರಂಭಗೊಂಡ ಹೊಸ ಅಲೆಯ ಚಿತ್ರಗಳ ಪ್ರವಾಹ ಈ ದಶಕದಲ್ಲಿ ಕ್ಷೀಣಿಸುತ್ತಾ ಬಂದಿತು. ಅದರೂ ಅಲ್ಲೊಂದು, ಇಲ್ಲೊಂದು ಎಂಬಂತೆ ಕಾಣಿಸಿಕೊಳ್ಳುತ್ತಿದ್ದವು. ನಾಗಾಭರಣರ ಗ್ರಹಣ ಚಿತ್ರ ತೆರೆ ಕಂಡದ್ದು ಈ ದಶಕದಲ್ಲಿಯೇ. ನಾಗಾಭರಣ ಮತ್ತು ಟಿ.ಎಸ್.ರಂಗಾ ಅವರುಗಳ ಚಿತ್ರ ಕಥೆಯ ಮೂಲಕ ಕರ್ನಾಟಕದಲ್ಲಿ ಸಂಪ್ರದಾಯಿಕವಾಗಿ ಅನುಷ್ಠಾನದಲ್ಲಿದ್ದ ಧಾರ್ಮಿಕ ವಿಧಿ ನಿಯಮಗಳನ್ನು ಯಶಸ್ವಿಯಾಗಿ ದಾಖಲೆ ಮಾಡಿದ ಪ್ರಶಸ್ತಿ ವಿಜೇತ ಚಿತ್ರವಾಯಿತು. ಗಿರೀಶ್ ಕಾಸರವಳ್ಳಿಯವರ ಮೂರುದಾರಿಗಳು 1981ರಲ್ಲಿ ತೆರೆ ಕಂಡು ಹಲವು ಪ್ರಶಸ್ತಿಗಳನ್ನು ಗಳಿಸಿತು. ದೊರೆ ಭಗವಾನ್ ರವರು ಮುನಿಯನ ಮಾದರಿ (1981), ಸಿಂಗೀತಂ ಶ್ರಿನಿವಾಸರಾವ್ ರವರು ಹಾಲು ಜೇನು, ಕೆ.ವಿ ಜಯರಾಮ್ ರವರು ಬಾಡದ ಹೂವು, ಮತ್ತು ಹೊಸನೀರು, ಜಿ.ವಿ.ಅಯ್ಯರ್ರವರು ಮಧ್ವಾಚಾರ್ಯ, ಸುರೇಶ್ ಹೆಬ್ಳೀಕರ್ ರವರು ಕಾಡಿನ ಬೆಂಕಿ ಮತ್ತು ಪ್ರಥಮ ಉಷಾಕಿರಣ, ಸದಾನಂದ ಸುವರ್ಣರು ಕುಬಿ ಮತ್ತು ಇಯಾಲ, ನಾಗಾಭರಣರು ಆನ್ವೇಷಣೆ, ಆಸ್ಫೋಟ, ಬ್ಯಾಂಕರ್ ಮಾರ್ಗಯ್ಯ ಮತ್ತು ಸಂತ ಶಿಶುನಾಳ ಶರೀಫ, ಶಂಕರ್ನಾಗ್ ರವರು ಆಕ್ಸಿಡೆಂಟ್ ಮತ್ತು ನೋಡಿ ಸ್ವಾಮಿ ನಾವಿರೋದೆ ಹೀಗೆ, ಕೃಷ್ಣ ಮಾಸಡಿ ಅವರು ಅವಸ್ಥೆ, ಪ್ರೇಮಾ ಕಾರಂತರು ಫಣಿಯಮ್ಮ, ಇಂತಹ ಉತ್ತಮ ಚಿತ್ರಗಳನ್ನು ನಿರ್ದೇಶಿಸಿ ಪ್ರಶಸ್ತಿಗಳನ್ನು, ಜನಪ್ರಿಯತೆಯನ್ನೂ ಗಳಿಸಿ, ಗುಣಮಟ್ಟದ ಬಗ್ಗೆ ಕಾಳಜಿ ವಹಿಸುವ ನಿರ್ದೇಶಕರುಗಳ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ದಾಖಲಿಸಿದರು. ಬರಗೂರು ರಾಮಚಂದ್ರಪ್ಪನವರ ಬೆಂಕಿ ಮತ್ತು ಸೂರ್ಯ ಚಿತ್ರಗಳೂ ಪ್ರಶಸ್ತಿಗಳಿಸಿದ ಚಿತ್ರಗಳು.

ಉದ್ಯಮದ ಬೆಳೆವಣಿಗೆಯ ದೃಷ್ಟಿಯಿಂದ ನೋಡಿದಾಗ ಈ ದಶಕದಲ್ಲಿ ಹಲವಾರು ಪರಿಣಾಮಕಾರಿ ಬದಲಾವಣೆಗಳು ಕೂಡ ಜರುಗಿತು. ಅಂದಿನ ದಿನಗಳಲ್ಲಿ ಬೆಂಗಳೂರಿನ ಚಿತ್ರಮಂದಿರಗಳು ಇಡೀ ದೇಶದಲ್ಲಿಯೇ ಹೆಸರುವಾಸಿಯಾಗಿದ್ದವು. ಬೆಂಗಳೂರಿಗೆ ಬರುತ್ತಿದ್ದ ಪ್ರವಾಸಿಗರು ಚಿತ್ರಮಂದಿರಗಳ ಭವ್ಯತೆಯನ್ನು ನೋಡುವ ಸಲುವಾಗಿಯೇ ಚಿತ್ರಗಳನ್ನು ವೀಕ್ಷಿಸುತ್ತಿದ್ದರು. ಇಂತಹ ಚಿತ್ರಮಂದಿರಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರುಗಳು ಕೂಡ ತಮ್ಮ ಕುಂದು ಕೊರತೆಗಳನ್ನು, ಬೇಡಿಕೆಗಳನ್ನು ಆಡಳಿತವರ್ಗಕ್ಕೆ ಮನವರಿಕೆ ಮಾಡಿ ನಿವಾರಿಸಿಕೊಳ್ಳಲು ಸಂಘಟನೆ ಮಾಡಿಕೊಂಡು, ಮುಷ್ಕರ ಮಾಡುವ ಪ್ರವೃತ್ತಿಯೂ ಪ್ರಾರಂಭವಾಯಿತು. ಸರ್ಕಾರವೂ ಈ ಬೆಳೆವಣಿಗೆಯನ್ನು ಗಮನಕ್ಕೆ ತೆಗೆದುಕೊಂಡಿದ್ದರ ಪರಿಣಾಮವಾಗಿ, ಅವರ ವೇತನಗಳೂ ಪರಿಷ್ಕೃತ ಗೊಂಡವು. ನಗರದಲ್ಲಿ ಸಾಕಷ್ಟು ಚಿತ್ರಮಂದಿರಗಳಿದ್ದರೂ ಕನ್ನಡ ಚಿತ್ರಗಳಿಗೆ ಕೆಂಪೇಗೌಡ ರಸ್ತೆಯಲ್ಲಿದ್ದ ಭವ್ಯ ಚಿತ್ರ ಮಂದಿರಗಳಲ್ಲಿ ಪ್ರದರ್ಶನಾವಕಾಶ ದೊರೆಯುತ್ತಿರಲಿಲ್ಲ. ಅನೇಕ ಚಿತ್ರಮಂದಿರಗಳು ಹಿಂದಿ ಹಾಗೂ ಪರಭಾಷಾ ಚಿತ್ರಗಳಿಗೇ ಸೀಮಿತಗೊಂಡಿದ್ದವು. ಈ ಒಂದು ಪದ್ದತಿಯನ್ನು ಸಡಲಿಸಿ ಕನ್ನಡಕ್ಕೆ ಪ್ರಾಧಾನ್ಯತೆ ಗಳಿಸಲು ಸಾಕಷ್ಟು ಹೊರಾಟವನ್ನೇ ನಡೆಸಬೇಕಾಯಿತು. ನಂತರದ ದಿನಗಳಲ್ಲಿ ಚಿತ್ರಮಂದಿರಗಳನ್ನು ಕೆಡವಿ ಆ ನಿವೇಶನಗಳಲ್ಲಿ ಮಳಿಗೆ ಸಂಕೀರ್ಣಗಳನ್ನು ಕಟ್ಟುವ ಪ್ರಕ್ರಿಯೆಯೂ ಈ ದಶಕದಲ್ಲಿಯೇ ಪ್ರಾರಂಭವಾಯಿತು, ಹಲವಾರು ಚಿತ್ರಮಂದಿರಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡವು ಮತ್ತು ಇಂದಿಗೂ ಕಳೆದುಕೊಳ್ಳುತ್ತಿವೆ.

1981ರಲ್ಲಿ, ಭಾರತೀಯ ವಾಕ್ಚಿತ್ರದ ಸುವರ್ಣ ಮಹೋತ್ಸವದ ಪ್ರಯುಕ್ತ ದೇಶದ ನಾನಾಕಡೆಗಳಲ್ಲಿ ಸಮಾರಂಭಗಳು ಜರುಗಿದವು. ಇದರ ಅಂಗವಾಗಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಗುಂಡೂರಾಯರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಚಿತ್ರ ರಂಗದ ಅನೇಕ ಹಿರಿಯರನ್ನು ಸನ್ಮಾನಿಸಲಾಯಿತು. ಮತ್ತೆ 1984ರಲ್ಲಿ ಕನ್ನಡ ವಾಕ್ಚಿತ್ರದ ಸುವರ್ಣ ಮಹೋತ್ಸವವೂ ಜರುಗಿತು. ಇದರ ಅಂಗವಾಗಿ 1984ರ ನವೆಂಬರ್, 25 ರಂದು ನಗರದ ಕಂಠೀರವ ಸ್ಟೇಡಿಯಮ್ನಲ್ಲಿ, ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಹಾಗೂ ಪ್ರಖ್ಯಾತ ಚಿತ್ರನಿರ್ದೇಶಕ ವಿ.ಶಾಂತಾರಾಂ ರವರ ಉಪಸ್ಥಿತಿಯಲ್ಲಿ ಸಹಸ್ರಾರು ಮಂದಿ ಪ್ರೇಕ್ಷಕರ ಮಧ್ಯೆ ಸಂಭ್ರಮದಿಂದ ಆಚರಿಸಲಾಯಿತು. ರಾಜ್ಯಾದ್ಯಂತ ಅನೇಕ ಸ್ಥಳಗಳಲ್ಲಿ ಕನ್ನಡ ಚಿತ್ರಗಳ ಉತ್ಸವಗಳೂ ನಡೆದವು.

ಈ ದಶಕದಲ್ಲಿ ನಡೆದ ಘಟನೆಗಳಲ್ಲಿ ದಾಖಲೆಮಾಡಲು ಉಚಿತವಾದಂತಹವುಗಳಲ್ಲಿ ಗೋಕಾಕ್ ಚಳವಳಿಯೂ ಒಂದು.ಈ ಒಂದು ಚಳವಳಿ ರಾಜಕೀಯವಾಗಿ ಎಷ್ಟು ಪರಿಣಾಮಕಾರಿಯಾಯಿತೋ ಅಷ್ಟೇ ಪರಿಣಾಮಕಾರಿಯಾಗಿ ಕನ್ನಡಚಿತ್ರರಂಗದಲ್ಲಿಯೂ ಪ್ರಭಾವ ಬೀರಿತು. ಗೋಕಾಕ್ರವರು ಇತ್ತಿದ್ದ ವರದಿಯ ಸಂಪೂರ್ಣ ಅನುಷ್ಠಾನಕ್ಕಾಗಿ ಈ ಚಳವಳಿ ಪ್ರಾರಂಭವಾದದ್ದು 1982ರ ಆದಿ ಭಾಗದಲ್ಲಿ. ಅನೇಕ ಕ್ಷೇತ್ರಗಳಲ್ಲಿ ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಆಗುತ್ತಿದ್ದ ಅನ್ಯಾಯದ ಬಗ್ಗೆ ಪ್ರತಿಭಟನೆ ಮಾಡಲು ಪ್ರಾರಂಭವಾದ ಈ ಚಳವಳಿ ಚಿತ್ರ ರಂಗವನ್ನೂ ಪ್ರವೇಶಿಸಿತು. ಸಾಹಿತಿಗಳು, ಕನ್ನಡಾಭಿಮಾನಿಗಳು ಆರಂಭಿಸಿದ ಈ ಚಳವಳಿಯಲ್ಲಿ ಚಿತ್ರೋದ್ಯಮದ ಗಣ್ಯರು ಹಾಗೂ ಚಿತ್ರ ಕಲಾವಿದರ ಸೇರ್ಪಡೆಯಾದ ಮೇಲೆ ಅದು ಸಾಕಷ್ಟು ಕಾವೇರಿತು. ರಾಜಕೀಯವಾಗಿ ಇದರ ಪರಿಣಾಮ ಏನಾಯಿತು ಎಂಬುದು ಇತಿಹಾಸ. ಆದರೆ ಚಿತ್ರ ರಂಗದಲ್ಲಿ ಆದರಿಂದ ಉದ್ಭವಿಸಿದ ಬಿಸಿ ಇಂದಿಗೂ ಆರದೆ ಮತ್ತೆ ಮತ್ತೆ ವಿವಿಧ ರೂಪಗಳಲ್ಲಿ ತಲೆಯೆತ್ತುತ್ತಿದೆ. ಇತ್ತೀಚೆಗೆ ಅಂದರೆ 2004-05ರಲ್ಲಿ ನಡೆದ ಘಟನೆಗಳೇ ಅದಕ್ಕೆ ಸಾಕ್ಷಿ. ಕನ್ನಡದ ಚಿತ್ರ ರಂಗ ಬೆಳೆಯುತ್ತಾ ಬೆಳೆಯುತ್ತಾ ಸಮಸ್ಯೆಗಳೂ ಬೆಳೆಯುತ್ತಾ ಬಂದಿದೆ. ಈ ಕಾರಣಕ್ಕಾಗಿಯೇ ಈ ದಶಕದಲ್ಲಿ, ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಲಿಯು ಉದ್ಯಮದ ಸಮಗ್ರ ಹಿತಾಸಕ್ತಿಗಳನ್ನು ಕಾಪಾಡಲು ಅಸ್ತಿತ್ವದಲ್ಲಿದ್ದಾಗ್ಯೂ ಪ್ರತ್ಯೇಕವಾಗಿ ಚಿತ್ರ ನಿರ್ಮಾಪಕರ ಸಂಘ, ಚಿತ್ರ ನಿರ್ದೇಶಕರ ಸಂಘ, ಚಲನಚಿತ್ರ ಕಲಾವಿದರ ಸಂಘ, ಹೀಗೆ ಅನೇಕ ಸಂಸ್ಥೆಗಳು ಹುಟ್ಟಿಕೊಂಡವು. ಅನೇಕ ಕಾರಣಗಳಿಂದಾಗಿ ಈ ಬೆಳೆವಣಿಗೆ ಅನಿವಾರ್ಯ ಎಂಬುದು ಈಗ ಮನವರಿಕೆಯಾಗಿದೆ.

ಕನ್ನಡ ಚಿತ್ರಗಳು ವಿಪರೀತವಾದ ವ್ಯಾಪಾರೀ ದೃಷ್ಟಿಯಿಂದ ನಿರ್ಮಾಣಗೊಳ್ಳುತ್ತಿರುವುದ ರಿಂದ ಅವುಗಳಲ್ಲಿ ಗುಣಮಟ್ಟ ಇಳಿಯುತ್ತಿದೆ ಎಂಬ ವ್ಯಾಪಕ ಜನಾಭಿಪ್ರಾಯಗಳು ವೃತ್ತಪತ್ರಿಕೆಗಳಲ್ಲೂ ಬರಲು ಪ್ರಾರಂಭವಾಯಿತು. ಈ ಒಂದು ದೃಷ್ಟಿಯಲ್ಲಿ, ಹಿಂದಿನ ದಶಕಕ್ಕೆ ಹೋಲಿಸಿ ನೋಡಿದಾಗ ಈ ಅಭಿಪ್ರಾಯದಲ್ಲಿ ಹುರುಳಿದೆ ಎಂಬುದನ್ನು ಅನೇಕ ಅನುಭವಿ ಚಿತ್ರ ವಿಮರ್ಶಕರೂ ಒಪ್ಪಿಕೊಂಡಿದ್ದರು. ಒಟ್ಟಿನಲ್ಲಿ ಚಿತ್ರರಂಗದ ಬೆಳೆವಣಿಗೆ ಸಂಖ್ಯಾಬಲದಲ್ಲಿ ವೃದ್ಧಿಗೊಂಡಿದ್ದರೂ ಕನ್ನಡಚಿತ್ರ ರಂಗಕ್ಕೆ ಹೆಸರು ತರುವಂತಹ ಚಿತ್ರಗಳು ಬೆರೆಳೆಣಿಸುವಷ್ಟೂ ಇಲ್ಲವಲ್ಲ ಎಂಬ ಕೊರಗು ಅನೇಕರ ನೊಂದ ಮನಸ್ಸಿನಿಂದ ಹೊರ ಹೊಮ್ಮುತ್ತಿತ್ತು. ಇಂತಹ ನಿರಾಶಾದಾಯಕ ಪರಿಸ್ಥಿತಿಯಲ್ಲಿ ಕೂಡ ಆಗೊಂದು ಈಗೊಂದು ಒಳ್ಳೆಯ ಪ್ರಯತ್ನಗಳು ನಡೆಯುತ್ತಿತ್ತು. 1983ರಲ್ಲಿ ಖ್ಯಾತ ನಿರ್ದೇಶಕ ನಾಗಾಭರಣರು ಆನ್ವೇಷಣೆ ಎಂಬ ಉತ್ತಮ ಚಿತ್ರವನ್ನು ತಯಾರಿಸಿ ಅನೇಕರ ಮನಸ್ಸಿಗೆ ಸ್ವಲ್ಪ ಸಮಾಧಾನ ತಂದು ಕೊಟ್ಟರು. ಈ ಚಿತ್ರದಲ್ಲಿ ಗಿರೀಶ್ ಕಾರ್ನಾಡ್, ಸ್ಮಿತಾ ಪಾಟೀಲ್, ಮತ್ತು ಅನಂತನಾಗ್ ಉತ್ತಮ ಅಭಿನಯ ನೀಡಿ, ಚಿತ್ರ ಅತ್ಯುತ್ತಮ ಚಿತ್ರವೆಂದು ರಾಜ್ಯ ಪ್ರಶಸ್ತಿಗಳಿಸಿತು. ನಾಗಾಭರಣರು ತಮ್ಮ ಪ್ರಯತ್ನವನ್ನು ಈ ನಿಟ್ಟಿನಲ್ಲಿ ಶ್ರದ್ಧೆಯಿಂದ ಮುಂದುವರೆಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಸಾಹಿತಿ ಆರ್.ಕೆ. ನಾರಾಯಣ್ರವರ ಫೈನಾನ್ಸಿಯಲ್ ಎಕ್ಸ್‌ಪರ್ಟ್ ಎಂಬ ಕಾದಂಬರಿಯನ್ನು ಆಧರಿಸಿ ನಿರ್ಮಿಸಿದ ಬ್ಯಾಂಕರ್ ಮಾರ್ಗಯ್ಯ ಚಿತ್ರ ಕನ್ನಡ ಚಿತ್ರರಂಗ ಹಾಗೂ ನಾಗಾಭರಣ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸುವಂತಾಯಿತು.

ಸಾಮಾಜಿಕ ಕಥೆಗಳನ್ನು ಆಧರಿಸಿ ತಯಾರಿಸುತ್ತಿದ್ದ ಕನ್ನಡ ಚಿತ್ರಗಳಲ್ಲಿ ಅನೇಕ ಬಾರಿ ರಾಜಕೀಯ ವಸ್ತುಗಳನ್ನು ಒಳಗೊಂಡ ಘಟನೆಗಳನ್ನು ಚಿತ್ರೀಕರಣ ಮಾಡುವುದು ಸರ್ವೇಸಾಮಾನ್ಯವಾಯಿತು. ಬಹುತೇಕ ಚಿತ್ರಗಳಲ್ಲಿ ಹಿಂಸೆ, ಅಶ್ಲೀಲತೆ, ದ್ವಂದ್ವಾರ್ಥಗಳನ್ನು ಕಲ್ಪಿಸುವಂತಹ ಸಂಭಾಷಣೆಗಳು, ಹಾಡುಗಳು, ಅತಿಲೈಂಗಿಕತೆಯ ನೃತ್ಯಗಳು ಚಿತ್ರಗಳಲ್ಲಿ ವಿಪರೀತವಾಗಿವೆ ಎಂಬ ಕೂಗು ಜನರಿಂದ ಬರಲು ಪ್ರಾರಂಭವಾಯಿತು. ಅನೇಕ ಕನ್ನಡ ಚಿತ್ರಗಳು ಇಂತಹ ವಿವಾದಗಳಿಗೊಳಗಾಗಿ ಸೆನ್ಸಾರ್ ಮಂಡಳಿಯಿಂದ ಮುಕ್ತಿಹೊಂದಿ ಬಿಡುಗಡೆಯಾಗಲು ಕಷ್ಟವಾಗುತ್ತಿತ್ತು. ಸೆನ್ಸಾರ್ ಕಛೇರಿ ಅಂದಿನ ದಿನಗಳಲ್ಲಿ ಮದರಾಸಿನಲ್ಲಿದ್ದಿದ್ದರಿಂದ ಅಲ್ಲಿನ ಮಂಡಳಿ ಸದಸ್ಯರಿಗೆ ಕನ್ನಡ ಭಾಷೆಯ ಹಾಗೂ ಸಂಸ್ಕೃತಿಯ ಪರಿಣತೆ ಸಾಕಷ್ಟು ಇಲ್ಲದೆ ಇರುವುದರಿಂದ ಈ ವಿವಾದಗಳು ಹೆಚ್ಚುತ್ತಿವೆ ಎಂಬ ವರದಿಗಳೂ ಸರ್ಕಾರದ ಗಮನಕ್ಕೆ ಬಂದಿತು. ಕನ್ನಡ ಚಿತ್ರ ರಂಗದ ಬಹುದಿನದ ಬೇಡಿಕೆಗೆ ಭಾರತ ಸರ್ಕಾರ ಸ್ಪಂದಿಸಿ 1984ರ ಏಪ್ರಿಲ್ನಲ್ಲಿ, ಸೆನ್ಸಾರ್ ಮಂಡಳಿಯ ಬೆಂಗಳೂರಿನ ಘಟಕವನ್ನು ಪ್ರಾರಂಭಿಸಲಾಯಿತು. ಕನ್ನಡ ಚಿತ್ರೋದ್ಯಮದಲ್ಲಿ ಇದೊಂದು ಮುಖ್ಯ ಘಟನೆ. ಇದೇ ವರ್ಷದಲ್ಲಿ ಇದುವರೆಗೆ ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸೆನ್ಸಾರ್ ಎಂಬ ನಾಮಾಂಕಿತದಲ್ಲಿ ಕಾರ್ಯ ಮಾಡುತ್ತಿದ್ದ ಸಂಸ್ಥೆಯ ಹೆಸರನ್ನು ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಷನ್ ಎಂಬುದಾಗಿ ಪರವರ್ತನೆಗೊಂಡಿತು. ಪ್ರಪಂಚದ ಮುಂದುವರಿದ ರಾಷ್ಟ್ರಗಳಲ್ಲಿ ಕೂಡ ಇದೇ ರೀತಿಯ ನಾಮಕರಣವಿರುವುದರಿಂದ ಈ ರೀತಿ ಬದಲಾವಣೆ ಮಾಡಲಾಯಿತು.

ಈ ದಶಕದಲ್ಲಿ ಮತ್ತೊಂದು ಗಂಭೀರ ಸಮಸ್ಯೆ ಉದ್ಭವಿಸಿತು. ಇದು ಕೇವಲ ಕರ್ನಾಟಕಕ್ಕೆ ಸೀಮಿತವಾದದ್ದಲ್ಲ. ಎಲ್ಲೆಡೆಯೂ ಪ್ರಸರಿಸಿದ ಸಮಸ್ಯೆಯಿದು. ತಾಂತ್ರಿಕ ಬೆಳೆವಣಿಗೆಗಳಿಂದಾಗಿ ಚಿತ್ರಗಳನ್ನು ವಿಡಿಯೋ ಟೇಪುಗಳಲ್ಲಿ ನಕಲು ಮಾಡಿ ಅವುಗಳನ್ನು ಟಿ.ವಿ ಗಳಲ್ಲಿ ಖಾಸಗಿಯಾಗಿ ಹಾಗೂ ಮನೆಗಳಲ್ಲಿ ನೋಡುವ ಸಾಧನೆ ಜನಸಾಮಾನ್ಯರಿಗೆ ಸುಲಭವಾಗಿ ತಲುಪುವಂತಹ ಬೆಳೆವಣಿಗೆ ವ್ಯಾಪಕವಾಗಿ ಹರಡಲು ಪ್ರಾರಂಭವಾಯಿತು. ಅನೇಕ ವಿಡಿಯೋ ಪಾರ್ಲರ್ಗಳೂ ಚಾಲನೆಗೆ ಬಂದವು. ಇದರಿಂದಾಗಿ ಚಿತ್ರಮಂದಿರಗಳಿಗೆ ಬರುವವರ ಸಂಖ್ಯೆಯಲ್ಲೂ ಕುಂಠಿತವಾಯಿತು. ಈ ಸಮಸ್ಯೆ ಇಂದಿಗೂ ಕಾಡುತ್ತಿರುವ ಸಮಸ್ಯೆಯಾಗಿಯೇ ಇದೆ. ಇಂದಿನ ದಿನಗಳಲ್ಲಿ ವಿಡಿಯೊ ಟೇಪಿನಿಂದ ಡಿವಿಡಿಗಳಿಗೆ ಪರವರ್ತನೆಗೊಂಡು ಈ ಕಾರ್ಯಾಚರಣೆ ವ್ಯಾಪಕವಾಗಿ ಹರಡುತ್ತಿದೆ. ಎಲೆಕ್ಟ್ರಾನಿಕ್ ತಾಂತ್ರಿಕತೆ ದಿನೇದಿನೇ ಬೆಳೆಯುತ್ತಾಯಿರುವುದರಿಂದ ಚಿತ್ರಗಳನ್ನು ನಕಲು ಮಾಡುವ ವಿಧಾನ ಅತಿ ಸುಲಭವಾಗಿಹೋಗಿದೆ. ಲಕ್ಷಾಂತರ ಡಿವಿಡಿಗಳು ಇಂದು ಮಾರುಕಟ್ಟೆಯಲ್ಲಿ ಅತಿ ಸುಲಭವಾದ ಬೆಲೆಯಲ್ಲಿ ದೊರಕುವುದರಿಂದ ಯಾವುದು ಕದ್ದದ್ದೋ, ಯಾವುದು ಅಧಿಕೃತವೋ ಎಂಬದನ್ನು ಕಂಡುಹಿಡಿಯುವುದೇ ಕಷ್ಟವಾಗಿಹೋಗಿದೆ. ಈ ಪಿಡುಗಿನಿಂದ ಚಿತ್ರೋದ್ಯಮಿಗಳಿಗೆ ಅಪಾರ ನಷ್ಟವಾಗುತ್ತಿದೆ ಎಂಬುದಂತೂ ಕಟುಸತ್ಯ ಸಂಗತಿ. ಇದಕ್ಕೆ ಕಾನೂನಿನ ಮೂಲಕ ಹೇಗೆ ಪರಿಹಾರ ಕಂಡುಹಿಡಿಯುವುದು ಎಂಬುದು ಕಗ್ಗಟ್ಟಿನ ಸಮಸ್ಯೆಯಾಗಿದೆ.

1984ರಲ್ಲಿ ರಾಜೇಂದ್ರಸಿಂಗ್ ಬಾಬು ನಿರ್ದೇಶಿಸಿದ ಬಂಧನ ಚಿತ್ರ ಅಪಾರ ಯಶಸ್ಸು ಗಳಿಸಿದ ಚಿತ್ರವಾಯಿತು. ಈ ಚಿತ್ರ ಉತ್ತಮ ಕಥೆ, ವಿಷ್ಣುವರ್ಧನ್ರವರ ಶ್ರೇಷ್ಠ ಅಭಿನಯದಿಂದಾಗಿ ಅದರ ಜನಪ್ರಿಯತೆ ಕನ್ನಡಿಗರ ಮನೆಮಾತಾಯಿತು. ವಿಷ್ಣುವರ್ಧನ್ ಮೇರುನಟರಾಗಿ ಮಿಂಚಿ ರಾಜ್ಯಪ್ರಶಸ್ತಿ ಗಳಿಸಿದರು. ಇದೇ ವರ್ಷದಲ್ಲಿ ಶಂಕರ್ನಾಗ್ ನಿರ್ದೇಶನದಲ್ಲಿ ತಯಾರಾದ ಆಕ್ಸಿಡೆಂಟ್ ಚಿತ್ರ ಕೂಡ ಮಾದಕದ್ರವ್ಯದ ಅಮಲಿನಿಂದ ಮತ್ತು ನಿರ್ಭೀತ, ಸ್ವೇಚ್ಛ ವರ್ತನೆಗಳಿಂದ ಆಗಬಹುದಾದಂತಹ ದುಷ್ಪರಿಣಾಮಗಳನ್ನು, ಅದ್ಭುತ ದೃಶ್ಯಗಳನ್ನು ಸೆರೆಹಿಡಿಯುವುದರ ಮೂಲಕ ಪರಿಣಾಮಕಾರಿಯಾಗಿ ಜನರ ಮನಸ್ಸಿಗೆ ಮುಟ್ಟಿಸುವಲ್ಲಿ ಶಂಕರ್ ನಾಗ್, ಮತ್ತು ಅನಂತ ನಾಗ್ ಯಶಸ್ವಿಯಾದರು. ಈ ಚಿತ್ರ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ಗಳಿಸಿತು.

ಶಂಕರ್ನಾಗ್ ಪಾದರಸದಂತಹ ವ್ಯಕ್ತಿಯಾಗಿದ್ದರು. ಸದಾ ಕೆಲಸದಲ್ಲಿ ತೊಡಗಿಸಿಕೊಂಡು ಏನಾದರೊಂದು ಹೊಸತನ್ನು ರಂಗಭೂಮಿಯಲ್ಲಿ ಹಾಗೂ ಚಿತ್ರರಂಗದಲ್ಲಿ ಮಾಡಬೇಕೆಂಬ ಹಂಬಲದಿಂದ ದುಡಿಯುತ್ತಿದ್ದರು. ಇವರ ಸಾಹಸದಿಂದಾಗಿ 1985ರಲ್ಲಿ ಸಂಕೇತ್ ಸ್ಟುಡಿಯೋ ಕೂಡ ನಿರ್ಮಾಣವಾಯಿತು. ಎಲೆಕ್ಟ್ರಾನಿಕ್ ತಾಂತ್ರಿಕತೆಯಿಂದ ಧ್ವನಿ ಮುದ್ರಣ, ಸಂಕಲನ, ಡಬ್ಬಿಂಗ್ ಮುಂತಾದ ಕಾರ್ಯಗಳನ್ನು ಮಾಡಬಹುದಾದಂತಹ ಸುಸಜ್ಜಿತವಾದ ಕಾರ್ಯಾಗಾರ ಇದಾಯಿತು. ಇದೇ ವರ್ಷದಲ್ಲಿ ಭಾರತದ ಖ್ಯಾತ ಚಿತ್ರೋದ್ಯಮಿ ಎಲ್.ವಿ.ಪ್ರಸಾದ್ರವರು ತಮ್ಮ ಕಾರ್ಯಕ್ಷೇತ್ರವನ್ನು ಬೆಂಗಳೂರಿಗೂ ವಿಸ್ತರಿಸಿದರು. 16 ಎಂ.ಎಂ. ಹಾಗೂ 35 ಎಂ.ಎಂ. ಚಿತ್ರಗಳನ್ನು ಪ್ರೋಸೆಸ್ಸಿಂಗ್ ಮಾಡಬಹುದಾದಂತಹ ಒಂದು ಕಾರ್ಯಾಗಾರವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. ಈ ಬೆಳೆವಣಿಗೆಗಳು ಕನ್ನಡ ಚಿತ್ರರಂಗಕ್ಕೆ ಸ್ವಾವಲಂಬನೆ ಪಡೆಯುವ ದಿಟ್ಟಿನಲ್ಲಿ ಒಂದು ಮಹತ್ತರ ಹೆಜ್ಜೆಯಾಯಿತು.

ಎನ್. ಲಕ್ಷ್ಮೀನಾರಾಯಣ್ ನಿರ್ದೇಶಿಸಿದ ಬೆಟ್ಟದಹೂವು ರಾಷ್ಟ್ರಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿಗಳನ್ನು ಗಳಿಸಿ, ಭಾರತೀಯ ಪನೋರಮಾದಲ್ಲಿಯೂ ಭಾಗವಹಿಸಿ ಹೆಸರು ಮಾಡಿತು. ಸುಂದರ ಕಥೆ, ಬಾಲಕ ಪುನೀತ್ನ ಶ್ರೇಷ್ಠ ಅಭಿನಯಕ್ಕೆ ಪ್ರಶಸ್ತಿ, ಹಾಗೂ ರಷ್ಯಾ, ಇರಾನ್ ಮತ್ತಿತರ ದೇಶಗಳ ಚಿತ್ರೋತ್ಸವಗಳಲ್ಲಿ ಭಾಗವಹಿಸಿತು. ಪುಷ್ಟಕ ವಿಮಾನ ಹಾಗೂ ಪ್ರೇಮಲೋಕ ಈ ದಶಕದಲ್ಲಿ ಹೊಸಜಾಡನ್ನು ಸೃಷ್ಟಿಸಿ ಅಪಾರ ಜನಪ್ರಿಯಯತೆ ಗಳಿಸಿದ ಎರಡು ಚಿತ್ರಗಳು. ಪುಷ್ಪಕ ವಿಮಾನ, ಸಿಂಗೀತಂ ಶ್ರೀನಿವಾಸರಾವ್ ರವರು ನಿರ್ದೇಶಿಸಿದ ಮಾತಿಲ್ಲದ ಮೂಕ ಚಿತ್ರ. ಕಮಲಹಾಸನ್ ರವರ ಮನೋಜ್ಞ ಅಭಿನಯದಿಂದಾಗಿ, ರಾಷ್ಟ್ರದ ಪ್ರಾಯಶಃ ಎಲ್ಲ ರಾಜ್ಯಗಳಲ್ಲಿ ತೆರೆಕಂಡು ಅಪಾರ ಯಶಸ್ಸು ಗಳಿಸಿತು. ವಿದೇಶಗಳಲ್ಲಿ ಕೂಡ ಈ ಚಿತ್ರಕ್ಕೆ ಧನಲಾಭ ದೊರಕಿತು. ಪ್ರೇಮಲೋಕ ಮನೋರಂಜನೆಯಲ್ಲಿ ಒಂದು ಹೊಸ ಆಯಾಮವನ್ನು ಸೃಷ್ಟಿಸಿದ ಚಿತ್ರ. ವೆೃವಿಧ್ಯಮಯ ದೃಶ್ಯಗಳು, ನೂತನ ಶೈಲಿಯ ಗೀತೆಗಳು, ರಾಗ ಮತ್ತು ಸಾಹಿತ್ಯಗಳ ಮಧುರ ಸಮಾಗಮ, ಯುವ ಪೀಳಿಗೆಯನ್ನು ಹುಚ್ಚೆಬ್ಬಿಸಿ ಆಕರ್ಷಿಸುವಂತಹ ಹೊಸತುತನ ಈ ಚಿತ್ರದಲ್ಲಿ ಕಾಣಿಸಿಕೊಂಡಿತು. ಇದಕ್ಕೆ ಕಾರಣರಾದವರು ಸಂಗೀತ ನಿದ್ಙೇಶಕ ಹಂಸಲೇಖ ಹಾಗೂ ನಟ, ನಿರ್ದೇಶಕ ರವಿಚಂದ್ರನ್ ರವರು. ಇದೇ ದಶಕದಲ್ಲಿ ಸಿಂಗೀತಂ ಶ್ರೀನಿವಾಸರಾವ್ ರವರು ನಿರ್ದೇಶಿಸಿದ ಆನಂದ್ (1986) ಚಿತ್ರದ ಮೂಲಕ ರಾಜಕುಮಾರ್ ರವರ ಪುತ್ರ ಶಿವರಾಜ ಕುಮಾರ್ ಕೂಡ ಜನಪ್ರಿಯತೆ ಗಳಿಸಿದರು.

ಅಂದಿನ ದಿನಗಳಲ್ಲಿ ಮನಸ್ಸಿಗೆ ನೆಮ್ಮದಿ ತಂದ ಸುದ್ದಿಯೆಂದರೆ ಗಿರೀಶ್ ಕಾಸರವಳ್ಳಿ ನಿರ್ದೇಶನದ ತಬರನ ಕಥೆ ಚಿತ್ರಕ್ಕೆ 1987ರ ಅತ್ಯುತ್ತಮ ಚಿತ್ರವೆಂದು ಸ್ವರ್ಣಕಮಲ ಲಭಿಸಿದ್ದು. ಇದರೊಂದಿಗೆ ರಾಜ್ಯದಲ್ಲಿ ಪ್ರಥಮ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ ಚಾರುಹಾಸನ್, ಉತ್ತಮ ಕಥೆ ಮತ್ತು ಸಂಭಾಷಣೆಗಾಗಿ ಪೂರ್ಣಚಂದ್ರತೇಜಸ್ವಿ, ಉತ್ತಮ ಸಂಕಲನ ಎಂ.ಎನ್.ಸ್ವಾಮಿ, ಬಾಲ ನಟ ಸಂತೋಷ್ ಇವರುಗಳಿಗೂ ಪ್ರಶಸ್ತಿ ಲಭ್ಯವಾಯಿತು. ಒಬ್ಬ ಸರ್ಕಾರಿ ನೌಕರ ತನ್ನ ಪಿಂಚಣಿಯನ್ನು ಪಡೆಯಲು ಪಡುವ ಬವಣೆಯನ್ನು ಅರ್ಥಪೂರ್ಣವಾಗಿ ಚಿತ್ರೀಕರಿಸಿದ್ದ ಈ ಚಿತ್ರದಲ್ಲಿ ಚಾರುಹಾಸನ್ರವರು ತಬರನ ಪಾತ್ರದಲ್ಲಿ ಮನಮುಟ್ಟುವಂತೆ ಅಭಿನಯಿಸಿದರು.

ಸುರೇಶ್ ಹೆಬ್ಳೀಕರ್ ರವರ ಪ್ರಥಮ ಉಶಾಕಿರಣ, ರಾಜೇಂದ್ರಸಿಂಗ್ ಬಾಬು ರವರ ಅಪಾರವೆಚ್ಚದ ಯುದ್ಧದ ದುಷ್ಪರಿಣಾಮವನ್ನು ನಿರೂಪಿಸುವ ಚಿತ್ರ ಮುತ್ತಿನ ಹಾರ, ನಾಗಾಭರಣರ ಸಂತ ಶಿಶುನಾಳ ಶರೀಫ, ಪಿ.ಹೆಚ್. ವಿಶ್ವನಾಥ್ ರವರ ಪಂಚಮವೇದ, ಕೋಡ್ಲು ರಾಮಕೃಷ್ಣ ರವರ ಉದ್ಭವ, ಅಸ್ರಾರ್ ಅಬೀದ್ ರವರ ಕ್ರಮ, ಭಾರ್ಗವ ಅವರ ಕರುಣಾಮಯಿ, ಈ ಚಿತ್ರಗಳು ಗುಣಮಟ್ಟದಲ್ಲಿ ಪ್ರೇಕ್ಷಕರ ಮನ ಸೆಳೆದ ಚಿತ್ರಗಳೆನ್ನಬಹುದು. ಫಣಿರಾಮಚಂದ್ರರವರ ಹಾಸ್ಯಪ್ರಧಾನವಾದ ಸಂಭಾಷಣೆಗಳೊಂದಿಗೆ, ತಯಾರಿಸಿದ ಹೊಸ ಶೈಲಿಯ ಗಣೇಶನ ಮದುವೆ, ಗಣೇಶನ ಗಲಾಟೆ, ಮುಂತಾದ ಚಿತ್ರಗಳು ಮನೆಮಂದಿಗೆ ಮನರಂಜನೆ ಕೊಟ್ಟು ಸಾಕಷ್ಟು ಜನಪ್ರಿಯತೆ ಗಳಿಸಿದವು. ಈ ದಶಕದಲ್ಲಿ ತಯಾರಾದ ಕನ್ನಡ ಚಿತ್ರಗಳ ಸಂಖ್ಯೆಯನ್ನು ಗಮನಿಸಿದಾಗ, 1981ರಲ್ಲಿ 64, 1982ರಲ್ಲಿ 52. 1983ರಲ್ಲಿ 61, 1984ರಲ್ಲಿ 81, 1985ರಲ್ಲಿ 62, 1986ರಲ್ಲಿ 59, 1987ರಲ್ಲಿ 61, 1988ರಲ್ಲಿ 56, 1989ರಲ್ಲಿ 68, ಮತ್ತು 1990ರಲ್ಲಿ 69, ಒಟ್ಟು 633 ಚಿತ್ರಗಳು. ಹಿಂದಿನ ದಶಕದಲ್ಲಿನ 367 ಚಿತ್ರಗಳಿಗೆ ಹೋಲಿಸಿದಾಗ ಇದು ಉತ್ತಮ ಪ್ರಗತಿ ಎನ್ನಬಹುದು. ಆದರೆ ಗಮನಿಸಬೇಕಾದ ಅಂಶವೆಂದರೆ ಗುಣಮಟ್ಟದಲ್ಲಿ ಪ್ರಗತಿ ಸಾಕಷ್ಟು ಕುಂಠಿತವಾಯಿತೆನ್ನಬಹುದು.

1991-2000 ರ ದಶಕ : ಸಂಖ್ಯಾ ದೃಷ್ಟಿಯಿಂದ ಈ ದಶಕದಲ್ಲಿ ಚಿತ್ರಗಳು ಹಿಂದಿನಂತೆಯೇ ವೃದ್ಧಿಗೊಳ್ಳುತ್ತಲೇ ಬಂದಿತು. ಆದರೆ ಗುಣಮಟ್ಟದ ದೃಷ್ಟಿಯಿಂದ ಅಷ್ಟೇನೂ ಪ್ರಗತಿಕಾಣಲಿಲ್ಲ. ದಶಕದ ಪ್ರಾರಂಭದಲ್ಲಿ, ಅಂದರೆ 1992ರ ಜನವರಿಯಲ್ಲಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಜರುಗಿತು. ಕಾವೇರಿ ನೀರಿನ ವಿವಾದದಿಂದ ಉಂಟಾದ ಪ್ರಕ್ಷುಬ್ಧ ವಾತಾವರಣದ ಮಧ್ಯೆಯಲ್ಲಿಯೂ ಚಿತ್ರೋತ್ಸವ ಯಶಸ್ವಿಯಾಗಿಯೇ ನಡೆಯಿತು. ವಿದೇಶಗಳಿಂದ ಬಂದ ಅನೇಕ ಉತ್ತಮಚಿತ್ರಗಳು, ಹಾಗೂ ಭಾರತದಲ್ಲಿನ ಪ್ರಾದೇಶಿಕ ಭಾಷಾಚಿತ್ರಗಳು, ಅಪಾರಸಂಖ್ಯೆಯಲ್ಲಿ ಪ್ರದರ್ಶಿತಗೊಂಡು, ಸಹಸ್ರಾರು ಸಂಖ್ಯೆಯಲ್ಲಿ ದೇಶ ವಿದೇಶದಿಂದ ಆಗಮಿಸಿ, ನೆರೆದಿದ್ದ ಪ್ರತಿನಿಧಿಗಳನ್ನು ಬೆಂಗಳೂರು ಉತ್ಸವ ತೃಪ್ತಿಗೊಳಿಸಿತು.

ಕನ್ನಡದಲ್ಲಿನ ಉತ್ತಮ ಸಾಹಿತ್ಯ, ಉತ್ತಮ ಕಾದಂಬರಿಗಳನ್ನು ಆಧರಿಸಿ ತಯಾರಾಗುತ್ತಿದ್ದ ಒಂದು ಸಂಪ್ರದಾಯ ಕ್ರಮೇಣ ಕಮ್ಮಿಯಾಗುತ್ತಾ ಬಂದಿತು. ಚಿತ್ರ ವಿಚಿತ್ರ ಹೆಸರುಗಳಿಂದ, ದ್ವಂದ್ವಾರ್ಥ ಬರುವ ಅಶ್ಲೀಲ ಪದಗಳ ನಾಮಾಂಕಿತದ ಚಿತ್ರಗಳು ಒಂದರಮೇಲೊಂದರಂತೆ ಬರಲು ಪ್ರಾರಂಭವಾಯಿತು. ಚಿತ್ರಗಳಲ್ಲಿನ ಸಂಭಾಷಣೆಗಳೂ ಕೂಡ ಅಶ್ಲೀಲ ಪದಗಳಿಂದ, ದ್ವಂದ್ವಾರ್ಥ ಗಳಿಂದ ತುಂಬಿ ತುಳುಕಾಡುವಂತಹ ಪರಿಸ್ಥಿತಿ ಬಂದೊದಗಿತು. ಪತ್ರಿಕೆಗಳಲ್ಲಿ ಹಿರಿಯ ಪತ್ರಕರ್ತರುಗಳು, ಹಾಗೂ ಅನೇಕ ಸಾರ್ವಜನಿಕ ಕ್ಷೇತ್ರಗಳಿಂದ, ಮತ್ತು ಸರ್ಕಾರದ ವತಿಯಿಂದಲೂ ಇಂತಹ ಚಿತ್ರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಲೇಖನಗಳು ಬರತೊಡಗಿದವು. ಕನ್ನಡ ಚಿತ್ರಗಳ ಹಾಡುಗಳಂತೂ ಅಸಂಬದ್ಧ ಸಾಹಿತ್ಯಗಳಿಂದ ತುಂಬಿ ಗಾಂಭೀರ್ಯದ ಎಲ್ಲೆ ಮೀರಿತ್ತು. ವಿಧಾನ ಸಭೆ ಹಾಗೂ ವಿಧಾನ ಮಂಡಲಿಗಳಲ್ಲಿ ಕೂಡ ಇದರ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ಆದರೆ ಚಿತ್ರ ನಿರ್ಮಾಪಕರು ಮಾತ್ರ ಜನರಿಗೆ ಇಂತಹ ಚಿತ್ರಗಳೇ ಬೇಕಾಗಿರುವುದರಿಂದ ನಮಗೆ ಬೇರೆ ವಿಧಿಯಿಲ್ಲವೆಂದು ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುತ್ತಿದ್ದರು.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೂಡ 1991-92ರಲ್ಲಿ ಲೋಕೇಶ್ರವರ ಭುಜಂಗಯ್ಯನ ದಶಾವತಾರ, ಪ್ರೇಮಾಕಾರಂತರ ನಕ್ಕಳಾರಾಜಕುಮಾರಿ, ಗಿರೀಶ್ ಕಾಸರವಳ್ಳಿಯವರ ಮನೆ, ನಾಗಾಭರಣರ ಮೈಸೂರು ಮಲ್ಲಿಗೆ, ಸದಾನಂದ ಸುವರ್ಣರ ಕುಬಿ ಮತ್ತು ಇಯಾಲ, ರವಿ ಅವರ ಹರಕೆಯ ಕುರಿ, ಸುಂದರ ಕೃಷ್ಣ ಅರಸು ಅವರ ಸಂಗ್ಯಾ ಬಾಳ್ಯಾ, ಈ ಚಿತ್ರಗಳು ಮೆಚ್ಚಿಕೊಳ್ಳುವಂತಹ ಪ್ರಯತ್ನದಿಂದಾಗಿ ಉತ್ತಮಚಿತ್ರಗಳಾಗಿ ತೆರೆ ಕಂಡವು. ಆದರೆ ಈ ಎಲ್ಲ ಚಿತ್ರಗಳೂ ಆರ್ಥಿಕವಾಗಿ ಯಶಸ್ಸು ಗಳಿಸಲು ವಿಫಲಗೊಂಡವು. ಕನ್ನಡ ಚಿತ್ರೋದ್ಯಮದಲ್ಲಿ ಅತಿಯಾದ ನಿರೀಕ್ಷೆ ಹುಟ್ಟಿಸಿ ಹಿಂದೆಂದೂ, ಯಾರೂ ವ್ಯಯಮಾಡದಷ್ಟು ಅಪಾರ ಹಣವನ್ನು ತೊಡಗಿಸಿ ರವಿಚಂದ್ರನ್ರವರು ನಿರ್ಮಿಸಿದ ಶಾಂತಿ ಕ್ರಾಂತಿ ಚಿತ್ರ ಯಶಸ್ಸು ಗಳಿಸದೆ ನಷ್ಟ ಅನುಭವಿಸಿದ್ದು ಒಂದು ಗಂಭೀರ ಸುದ್ದಿಯಾಯಿತು. 1992ರಲ್ಲಿ ತಯಾರಾದ ಚಿತ್ರಗಳ ಸಂಖ್ಯೆ 90ನ್ನು ಮುಟ್ಟಿದ್ದು ಗಮನಾರ್ಹ ಸುದ್ದಿ.

ಈ ದಶಕದ ಮತ್ತೊಂದು ಪರಿಣಾಮಕಾರಿ ಬೆಳೆವಣಿಗೆಯೆಂದರೆ ವರ್ಣ ಟಿ.ವಿ. ಮತ್ತು ದೂರದರ್ಶನದ ಜೊತೆಗೆ ಖಾಸಗಿ ಚಾನೆಲ್ಗಳು ಹುಟ್ಟಿಕೊಂಡು, ಟಿ.ವಿ.ಮೂಲಕ ಚಿತ್ರಗಳನ್ನು ಪ್ರದರ್ಶನಮಾಡಲು ಪ್ರಾರಂಭವಾದದ್ದು. ಈ ಒಂದು ಬೆಳೆವಣಿಗೆ ಚಿತ್ರಮಂದಿರಗಳ ಮೇಲೆ ಸಾಕಷ್ಟುಪ್ರಭಾವ ಬೀರಿತು. ಇದರ ದುಷ್ಪರಿಣಾಮ ಎಷ್ಟರಮಟ್ಟಿಗೆ ಆಯಿತೆಂದರೆ, ಇಂದಿಗೂ ಚಿತ್ರೋದ್ಯಮ ಅದರಿಂದ ಚೇತರಿಸಿಕೊಳ್ಳಲು ದುಸ್ಸಾಧ್ಯವಾಗಿದೆ. ಸಾರ್ವಜನಿಕ ಚಿತ್ರಮಂದಿರಗಳ ಗತಿಯೇ ಬದಲಾಗಿ ಹೋಯಿತು. ಅನೇಕ ಚಿತ್ರಮಂದಿರಗಳು ಚೇತರಿಸಿಕೊಳ್ಳಲಾಗದೆ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಮಳಿಗೆ ಸಂಕೀರ್ಣಗಳಾಗಿ ಪರಿವರ್ತನೆಗೊಂಡವು.

ತಿಳಿಹಾಸ್ಯದ ಸಂಭಾಷಣೆಗಳೊಂದಿಗೆ, ಜನಸಾಮಾನ್ಯರ ಆಸೆ, ಆಕಾಂಕ್ಷತೆಗಳನ್ನು ವಸ್ತುವಾಗಿ ಬಳಸಿಕೊಂಡು ಉತ್ತಮ ನಿರ್ದೇಶನ, ಹಾಗೂ ಪ್ರತಿಭಾವಂತ ಕಲಾವಿದರುಗಳ ಅಭಿನಯದೊಂದಿಗೆ ಕೋಡ್ಲು ರಾಮಕೃಷ್ಣ ರವರು ಯಾರಿಗೂ ಹೇಳ್ಬೇಡಿ ಚಿತ್ರವನ್ನು ನಿರ್ದೇಶಿಸುವ ಮೂಲಕ, ಅಶ್ಲೀಲತೆಯಿಲ್ಲದೆ, ವಿನಾಕಾರಣ ಕ್ರೌರ್ಯತೆಯಿಲ್ಲದೆ, ಜನರ ಮನರಂಜಿಸಬಹುದು ಮತ್ತು ಪ್ರಶಂಸೆ, ಯಶಸ್ಸು, ಪ್ರಶಸ್ತಿಗಳನ್ನೂ ಗಳಿಸಬಹುದು ಎಂಬುದನ್ನು ಚಿತ್ರ ಜಗತ್ತಿಗೆ ತೋರಿಸಿಕೊಟ್ಟರು.

1993ರಲ್ಲಿ, ಕನ್ನಡ ವಾಕ್ಚಿತ್ರಕ್ಕೆ 60 ವರ್ಷ ತುಂಬಿದ ಹುಟ್ಟು ಹಬ್ಬವನ್ನು, ಕರ್ನಾಟಕ ಚಲನಚಿತ್ರ ಪತ್ರಕರ್ತರ ವೇದಿಕೆ ಸಂಭ್ರಮದಿಂದ ಆಚರಿಸಿತು. ಈ ಆಚರಣೆ ಸತತವಾಗಿ ಒಂದು ವರ್ಷದವರೆಗೆ ಅನೇಕ ಸಮಾರಂಭಗಳಿಗೆ ಎಡೆ ಮಾಡಿಕೊಟ್ಟು ಚಿತ್ರ ರಂಗದ ಅನೇಕ ಹಿರಿಯರು, ಗಣ್ಯರು ಸಕ್ರಿಯವಾಗಿ ಭಾಗವಹಿಸಿ ಚಿತ್ರರಂಗದಲ್ಲಿನ ಅನೇಕ ಸಮಸ್ಯೆಗಳನ್ನು ಸರ್ಕಾರದ ಅವಗಾಹನೆಗೆ ಮನವರಿಕೆ ಮಾಡಿಕೊಟ್ಟರು. ಇದಕ್ಕೆ ಪರಿಹಾರ ಕಂಡಕೊಳ್ಳುವ ಸಲುವಾಗಿ, ಕರ್ನಾಟಕ ಸರ್ಕಾರ ಸ್ಪಂದಿಸಿ, ಹಿರಿಯ ಪತ್ರಕರ್ತರೂ ಮತ್ತು ಚಿತ್ರರಂಗದ ಆಗುಹೋಗುಗಳ ಬಗ್ಗೆ ಸಾಕಷ್ಟು ಅನುಭವ ಹೊಂದಿರುವ ವಿ.ಎನ್. ಸುಬ್ಬರಾವ್ ಅವರ ಅಧ್ಯಕ್ಷತೆಯಲ್ಲಿ ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಿತು. ಚಿತ್ರ ರಂಗದ ಎಲ್ಲ ಕ್ಷೇತ್ರಗಳಿಂದ ಪ್ರತಿನಿಧಿಸಿದ್ದ ಗಣ್ಯವ್ಯಕ್ತಿಗಳ ಈ ಸಮಿತಿ, ಕನ್ನಡಚಿತ್ರರಂಗದ ಸಮಗ್ರ ಸಮಸ್ಯೆಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ತನ್ನ ವರದಿಯನ್ನು ಎಂಟು ತಿಂಗಳ ಅವಧಿಯಲ್ಲಿ ಸರ್ಕಾರಕ್ಕೆ ಮಂಡಿಸಿತು. ಚಲನಚಿತ್ರ ಪ್ರಶಸ್ತಿಗಳಿಗೆ ನೀಡುತ್ತಿರುವ ಹಣದ ಮೌಲ್ಯ ವನ್ನು ಹೆಚ್ಚಿಸುವುದು, ಸಹಾಯಧನವನ್ನು ಜಾಗ್ರತೆಯಾಗಿ ನೀಡುವುದು, ಚಿತ್ರನಗರಿಯ ನಿರ್ಮಾಣ, ಚಲನಚಿತ್ರ ಅಕಾಡೆಮಿಯನ್ನು ಸ್ಥಾಪಿಸುವುದು, ಮನರಂಜನೆ ತೆರಿಗೆಯನ್ನು ಮಾರ್ಪಡಿಸಿ ಸ್ಲ್ಯಾಬ್ ವ್ಯವಸ್ಥೆಗೆ ಪ್ರಾಯೋಗಿಕವಾಗಿ ಜಾರಿಗೆ ತರುವುದು, ಇವು ವರದಿಯ ಮುಖ್ಯ ಅಂಶಗಳು. ಸರ್ಕಾರ ಈ ವರದಿಯಲ್ಲಿದ್ದ ಕೆಲವು ಭಾಗಗಳನ್ನು ತಕ್ಷಣದಲ್ಲಿ ಜಾರಿಗೆ ತಂದಿತು. ಆದರೆ ತೆರಿಗೆಯ ಬಗ್ಗೆ ಅನೇಕ ಪ್ರತಿಭಟನೆಗಳು ನಿರ್ಮಾಪಕರಿಂದ ಬರಲು ಪ್ರಾರಂಭವಾಯಿತು. ಕನ್ನಡ ಚಿತ್ರಗಳು, ಕನ್ನಡೇತರ ಚಿತ್ರಗಳ ಬಗ್ಗೆ ಸಮಾಧಾನಕರವಾದ ತೆರಿಗೆ ನೀತಿಯನ್ನು ಜಾರಿಗೆ ತರುವುದು ಕಗ್ಗಂಟಿನ ಪ್ರಶ್ನೆಯಾಯಿತು. ಇಂದಿಗೂ ಈ ಸಮಸ್ಯೆಯು ಒಂದಲ್ಲ ಒಂದು ರೀತಿಯಲ್ಲಿ, ನಿರ್ಮಾಪಕರ ಕಡೆಯಿಂದ, ಇಲ್ಲವೇ ಪ್ರದರ್ಶಕರ ಕಡೆಯಿಂದ ಅತೃಪ್ತಿಯ ಹೊಗೆಯನ್ನು ಎಬ್ಬಿಸುತ್ತಲೇ ಇದೆ. ಕೇರಳದ ಮಾದರಿಯಲ್ಲಿ ಚಲನಚಿತ್ರ ಅಕಾಡೆಮಿ ಸ್ಥಾಪಿಸುವ ಕಾರ್ಯ ಕೂಡ ಮುಗಿಯದೆ ಹಾಗೆಯೇ ಉಳಿದಿದೆ. ಈಗ ಅಂದರೆ 2005-06ರಲ್ಲಿ ಸರ್ಕಾರ ಅದನ್ನು ಕಾರ್ಯಗತಮಾಡುವ ವರದಿಗಳು ಪತ್ರಿಕೆಗಳಲ್ಲಿ ಬರುತ್ತಿದೆ. ಕನ್ನಡ ಭಾಷೆ ಚಿತ್ರಗಳಿಗೆ ಪೂರ್ಣ ತೆರಿಗೆ ವಿನಾಯಿತಿಯಂತೂ ಒದಗಿತು.

1994ರಲ್ಲಿ ಮೇ ತಿಂಗಳಿನಲ್ಲಿ ಕೆ.ಎಸ್. ಅಶ್ವತ್ಥ್‌ರವರು, ಚಿತ್ರಗಳು ತೀರ ಅಶಿಸ್ತು, ಅಸಡ್ಡೆಯಿಂದ ತಯಾರಾಗುತ್ತಿರುವ ವಿಧಾನದಿಂದ ಬೇಸತ್ತು, ಇಂತಹ ಚಿತ್ರಗಳಲ್ಲಿ ನಟಿಸುವುದು ಮನಸ್ಸಿಗೆ ನೋವುಂಟುಮಾಡುವ ಪರಿಸ್ಥಿತಿ ಒದಗಿರುವುದರಿಂದ ತಾವು ನಟನೆಯಿಂದ ನಿವೃತ್ತಿ ಹೊಂದುವುದಾಗಿ ಪ್ರಕಟಿಸಿದರು. ಅವರ ನೊಂದ ಮನಸ್ಸಿನಿಂದ ಉಂಟಾದ ದುಗುಡ, ಅವರ ಕಳಕಳಿಯ ಅಭಿಪ್ರಾಯದಿಂದ ಕನ್ನಡದ ಚಿತ್ರ ನಿರ್ಮಾಣದಲ್ಲಿನ ದುಸ್ಥಿತಿ ಜನರಿಗೆ ಮನವರಿಕೆಯಾಯಿತು.

ಅನಂತರದ ದಿನಗಳಲ್ಲಿ ಕನ್ನಡ ಚಿತ್ರಗಳ ಗುಣಮಟ್ಟದ ಬಗ್ಗೆ ವ್ಯಾಪಕ ವಾದ ಚರ್ಚೆಗಳು ಎಲ್ಲ ವೇದಿಕೆಗಳಲ್ಲಿ, ಸಮಾರಂಭಗಳಲ್ಲಿ, ನಡೆಯುತ್ತಿದ್ದದ್ದು ಸಾಮಾನ್ಯವಾದ ವಿಷಯವಾಗಿತ್ತು. ಅಂದಿನ ವಾರ್ತಾ ಸಚಿವರು, ವಿಧಾನಸಭಾಧ್ಯಕ್ಷರು, ಹಿರಿಯ ಪತ್ರಕರ್ತರು ಅನೇಕ ವಿಚಾರ ಸಂಕೀರ್ಣಗಳಲ್ಲಿ ಭಾಗವಹಿಸಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದರು. ಅನೇಕ ಹೊಸ ಪ್ರತಿಭೆಗಳು ಬರುತ್ತಿದ್ದರು. ಆದರೆ ಹೊಸತು ತನವಾಗಲಿ, ಸೃಜನತೆಯಾಗಲಿ ಹುಡುಕಿದರೂ ಸಿಗುತ್ತಿರಲಿಲ್ಲ. ಈ ಕಾರಣದಿಂದಾಗಿ ಎಲ್ಲ ಕನ್ನಡ ಚಿತ್ರಗಳಿಗೂ ಸರ್ಕಾರ ಕೊಡುತ್ತಿದ್ದ ಧನಸಹಾಯವನ್ನು ರದ್ದು ಗೊಳಿಸಿ ಉತ್ತಮ ಚಿತ್ರಗಳಿಗೆ ಮಾತ್ರ 10ಲಕ್ಷ ರೂ. ಸಹಾಯ ಕೊಡುವ ಪದ್ದತಿ 1993 ರಿಂದ ಜಾರಿಗೆ ಬಂತು. ಇಂತಹ ಪರಿಸ್ಥಿತಿಯಲ್ಲಿ ನಾಗತಿಹಳ್ಳಿ ಚಂದ್ರಶೇಖರ್ರವರ ಕೊಟ್ರೇಶಿ ಕನಸು ಚಿತ್ರ ತಯಾರಾದದ್ದು ಒಂದು ಸಮಾಧಾನ ಕೊಡುವಂತಹ ವಿಷಯವಾಯಿತು. ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದೊರಕಿದ್ದಲ್ಲದೆ, ಈ ಚಿತ್ರದಲ್ಲಿ ದಲಿತ ಬಾಲಕನ ಪಾತ್ರದಲ್ಲಿ ಅಭಿನಯಿಸಿದ ವಿಜಯ ರಾಘವೇಂದ್ರ, ಪ್ರಶಸ್ತಿಯನ್ನು ಗಳಿಸಿ, ಮತ್ತೂ ಕೆಲವು ಚಿತ್ರಗಳಲ್ಲಿ ಅಭಿನಯಿಸಿ ಮೆಚ್ಚುಗೆ ಪಡೆದ ಬಾಲನಟನಾದದ್ದು ಒಂದು ಹೇಳಿಕೊಳ್ಳಬಹುದಾದಂತಹ ಸುದ್ದಿಯಾಯಿತು. ನಿಷ್ಕರ್ಷ, ಆಕಸ್ಮಿಕ, ಶ್, ಚಿನ್ನಾರಿ ಮುತ್ತ, ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರಿ ಗವಾಯಿ, ಕ್ರೌರ್ಯ, ಬೆಳದಿಂಗಳ ಬಾಲೆ, ಅರಗಿಣಿ, ಯಾರಿಗೂ ಹೇಳ್ಬೇಡಿ, ಗಳಿಗೆ, ಈ ಚಿತ್ರಗಳು ಗುಣಮಟ್ಟದ ದೃಷ್ಟಿಯಿಂದ ನೋಡಿದಾಗ ಉತ್ತಮ ಚಿತ್ರಗಳಾಗಿ, ಪ್ರಶಸ್ತಿಗಳನ್ನೂ ಗಳಿಸಿದವು. ವಸಂತ ಮೊಕಾಶಿ ಅವರು ನಿರ್ದೇಶಿಸಿದ ಗಂಗವ್ವ ಗಂಗಾಮಾಯಿ ಮೊಕಾಶಿ ಅವರ ಕನ್ನಡದ ಕಾದಂಬರಿ ಆಧಾರಿತ ಚಿತ್ರ, ಶ್ರೇಷ್ಠ ಚಿತ್ರವೆಂಬ ಪುರಸ್ಕಾರವೂ ಲಭಿಸಿತು, ಚಿತ್ರವಿಮರ್ಶಕರಿಂದ ಒಳ್ಳೆಯ ಪ್ರಶಂಸೆ ಗಳಿಸಿತು. ಆದರೆ ಅಂತಹ ಚಿತ್ರಕ್ಕೆ ಪ್ರದರ್ಶನಾವಕಾಶವೇ ಸಿಕ್ಕಲಿಲ್ಲವೆಂಬುದು ಶೋಚನೀಯ ಸಂಗತಿ.

ಬೆಳದಿಂಗಳ ಬಾಲೆಯಲ್ಲಿ, ಯುವತಿಯನ್ನು ತೋರಿಸದೆಯೇ ಕೇವಲ ದೂರವಾಣಿ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ನವೀನ ಶೈಲಿಯಲ್ಲಿ ಚಿತ್ರ ನಿರ್ದೇಶಿಸಿದ ವ್ಯಕ್ತಿ ಸುನಿಲ್ ಕುಮಾರ್ ದೇಸಾಯಿ. ಈ ಚಿತ್ರ ಆರ್ಥಿಕವಾಗಿಯೂ ಯಶಸ್ಸು ಗಳಿಸಿತು. ಗಾನಯೋಗಿ ಪಂಚಾಕ್ಷರ ಗವಾಯಿಯಲ್ಲಿ ಲೋಕೇಶ್ರವರ ಅಭಿನಯ, ಬಾಲ ಗವಾಯಿಯ ಪಾತ್ರದಲ್ಲಿ ವಿಜಯ ರಾಘವೇಂದ್ರನ ಪಾತ್ರ, ಇವು ಮನಸ್ಸನಲ್ಲಿ ಅಳಿಯದೆ ಉಳಿಯುವಂತಹ ಅಭಿನಯಗಳು. ಕ್ರೌರ್ಯ, ಗಿರೀಶ್ ಕಾಸರವಳ್ಳಿಯವರ ಚಿತ್ರ, ಭಾರತೀಯ ಪನೋರಮಾದಲ್ಲಿ ಭಾಗವಹಿಸಿತು, ಉತ್ತಮ ಚಿತ್ರವೆಂಬ ಅಭಿಪ್ರಾಯವನ್ನು ಎಲ್ಲರಿಂದಲೂ ಪಡೆಯಿತು, ಆದರೆ ಪ್ರದರ್ಶನಾವಕಾಶ ಸಿಗುವುದೇ ಒಂದು ಭಗೀರಥ ಪ್ರಯತ್ನವಾಯಿತು, ಸಿಕ್ಕ ಮೇಲೆ ಯಶಸ್ಸುಗಳಿಸಲು ವಿಫಲಗೊಂಡಿತು.

1995-96ರಲ್ಲಿ, ಚಿಂದೋಡಿ ಬಂಗಾರೇಶ್ರವರ ಅತ್ಯಂತ ಪರಿಶ್ರಮದ ಚಿತ್ರ ಪಂಚಾಕ್ಷರಿ ಗವಾಯಿ. ಹೃದಯವನ್ನು ತಟ್ಟುವ ಹಂಸಲೇಖಾ ಸಂಗೀತ, ಮನಮುಟ್ಟುವ ಅಭಿನಯ, ಧ್ಯಾನ ಮತ್ತು ನಿರ್ಮಲ ಭಕ್ತಿ ಇವುಗಳ ಗಂಭೀರ ಚಿತ್ರಣ, ಗಿರೀಶ ಕಾಸರವಳ್ಳಿಯವರ ಸದಭಿರುಚಿ ಚಿತ್ರ ಕ್ರೌರ್ಯ, ಸುನಿಲ್ ಕುಮಾರ ದೇಸಾಯಿಯವರ ನೂತನ ಶೈಲಿಯ ಬೆಳದಿಂಗಳ ಬಾಲೆ, ಈ ಚಿತ್ರಗಳು ಪ್ರಶಸ್ತಿಗಳಿಸಿ, ಕನ್ನಡ ಚಿತ್ರ ರಂಗದ ನಿರಾಶಾವಾದಿ ವಾತಾವಾರಣವನ್ನು ಆಶಾದಾಯಕವನ್ನಾಗಿ ಮಾಡುವಲ್ಲಿ ಸಕ್ರಿಯ ಪ್ರಯತ್ನಗಳಾದವು. ಈ ದಶಕದಲ್ಲಿ ಪ್ರೇಕ್ಷಕರಿಂದ ಅಪಾರ ಯಶಸ್ಸುಗಳಿಸಿದ ಚಿತ್ರಗಳೆಂದರೆ ಜನುಮದ ಜೋಡಿ, ನಮ್ಮೂರ ಮಂದಾರ ಹೂವೆ ಮತ್ತು ಬೆಳದಿಂಗಳ ಬಾಲೆ, ಜನುಮದ ಜೋಡಿ ಪಡೆದ ಜನಪ್ರಿಯತೆ ಒಂದು ಹೊಸ ದಾಖಲೆಯೇ ಆಯಿತು. ಈ ಚಿತ್ರಕ್ಕೆ ಅತ್ಯುತ್ತಮ ನಟಿ, ಉತ್ತಮ ಸಂಭಾಷಣೆ, ಉತ್ತಮ ಸಂಗೀತ, ಉತ್ತಮ ಗೀತ ರಚನೆ, ಉತ್ತಮ ಹಿನ್ನೆಲೆ ಗಾಯನ, ಮತ್ತು ಸಾಮಾಜಿಕವಾಗಿ ಪ್ರಭಾವ ಬೀರುವ ಚಿತ್ರ ಎಂಬ ವಿಶೇಷ ಬಹುಮಾನ, ಹೀಗೆ ಆರು ರಾಜ್ಯ ಪ್ರಶಸ್ತಿಗಳು ಲಭಿಸಿ ಉತ್ತಮ ಚಿತ್ರಗಳಿಗೆ ಜನರು ಸ್ಪಂದಿಸುತ್ತಾರೆ ಎಂಬುದನ್ನು ಈ ಚಿತ್ರ ಮನವರಿಕೆ ಮಾಡಿಕೊಟ್ಟಿತು. ಇದೊಂದು ಅಪೂರ್ವ ದಾಖಲೆ.

ಕೊಟ್ರೇಶಿ ಕನಸು ಚಿತ್ರದಲ್ಲಿ ತಮ್ಮ ಪ್ರತಿಭೆಯನ್ನು ಪರಿಚಯಮಾಡಿ ಕೊಟ್ಟಿದ್ದ ನಾಗತಿಹಳ್ಳಿ ಚಂದ್ರಶೇಖರ್ ರವರು, ಅಮೆರಿಕಾ, ಅಮೆರಿಕಾ ಚಿತ್ರವನ್ನು, ಅಮೆರಿಕಾದಲ್ಲಿ ಚಿತ್ರೀಕರಿಸಿ, ತಮ್ಮ ಚುರುಕಾದ ಸಂಭಾಷಣೆಗಳನ್ನು ಫಲಪ್ರದವಾಗಿ ರಚಿಸಿ, ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಿರ್ದೇಶಕರುಗಳ ಪಟ್ಟಿಯಲ್ಲಿ ತಮ್ಮ ಹೆಸರನ್ನು ದಾಖಲಿಸಿದರು. ಈ ಚಿತ್ರಕ್ಕೆ ಪ್ರಶಸ್ತಿಗಳೂ ಬಂದಿತಲ್ಲದೆ, ಜನಪ್ರಿಯತೆಯೂ ದೊರೆಯಿತು. ನಾಗಾಭರಣರ ಮತ್ತೊಂದು ಯಶಸ್ವಿ ಚಿತ್ರ ನಾಗಮಂಡಲವೂ ಇದೇ ಸಮಯದಲ್ಲಿ ತೆರೆ ಕಂಡು, ರಾಜ್ಯ ಮಟ್ಟದಲ್ಲಿ ಪ್ರಶಸ್ತಿಗಳಿಸಿತು. ಗಿರೀಶ ಕಾರ್ನಾಡರಿಂದ ರಚಿತವಾದ ಈ ಕೃತಿ ಶಂಕರ್ ನಾಗ್ ರವರ ತಂಡದಿಂದ ಅನೇಕ ಬಾರಿ ರಂಗದಮೇಲೆ ಪ್ರದರ್ಶಿಸಲಾಗಿತ್ತು. ನಾಗಾಭರಣರು ಇದಕ್ಕೆ ತಮ್ಮದೇ ಆದ ವಿಭಿನ್ನ ರೀತಿಯ ಜಾನಪದ ಲೇಪನವನ್ನು ಕೊಟ್ಟು ತೆರೆಗೆ ತಂದು ಮೆಚ್ಚುಗೆ ಪಡೆದರು. ಈ ಚಿತ್ರದ ಛಾಯಾಗ್ರಹಕ ಜಿ.ಎಸ್. ಭಾಸ್ಕರ್, ಕಲಾನಿರ್ದೇಶಕ ಶಶಿಧರ್ ಅಡಪ, ಮತ್ತು ಪೋಷಕನಟ ಮಂಡ್ಯ ರಮೇಶ್, ಪೋಷಕನಟಿ ಜಯಶ್ರೀ, ಇವರುಗಳಿಗೂ ರಾಜ್ಯ ಪ್ರಶಸ್ತಿಗಳು ಲಭಿಸಿದವು. ಪ್ರಶಸ್ತಿ ಪಡೆದ ಮತ್ತೊಂದು ಚಿತ್ರವೆಂದರೆ ವೈ. ನಂಜುಂಡಪ್ಪ ಅವರ ನಿರ್ದೇಶನದ ನಾಗರಿಕ.

1998ರ ಆಕರ್ಷಣೆಯೆಂದರೆ, ಕನ್ನಡ ಚಿತ್ರ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಸ್ವರ್ಣ ಪದಕ ಪಡೆದದ್ದು. ಗಿರೀಶ ಕಾಸರವಳ್ಳಿಯವರ ಅತ್ಯಂತ ಶ್ರೇಷ್ಠ ಮಟ್ಟದ ನಿರ್ದೇಶನದ ಮೂಲಕ ತೆರೆ ಕಂಡ ಚಿತ್ರ ತಾಯಿಸಾಹೇಬ. ಕನ್ನಡ ಚಿತ್ರರಂಗದಲ್ಲಿ ಒಂದು ಮೇರು ಕೃತಿ, ಎಲ್ಲ ರೀತಿಯಲ್ಲೂ ಅದು ಎದ್ದು ನಿಲ್ಲವಂತಹ ಚಿತ್ರ. ಗಹನವಾದ, ಗಂಭೀರವಾದ, ವಿಷಯಗಳನ್ನು ತೆರೆಯಮೇಲೆ ಸೃಜನ ಶೀಲತೆಯಿಂದ ಪ್ರತಿಪಾದಿಸಿ, ಅನೇಕ ಚಿಂತನೆಗಳಿಗೆ ಗ್ರಾಸವಾಗುವ ಸನ್ನಿವೇಶಗಳನ್ನು ಸೃಷ್ಟಿಸಿ, ಮನಸ್ಸಿಗೆ ತೃಪ್ತಿಕೊಟ್ಟಂತಹ ಚಿತ್ರ. ಭಾರತಕ್ಕೆ ಸ್ವಾತಂತ್ರ್ಯ ಬಂದ ವರ್ಷಗಳ ಸಮಯದಲ್ಲಿನ ಕಥೆ, ಸ್ವಾತಂತ್ರ್ಯದ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಜೈಲುವಾಸ ಅನುಭವಿಸುವ ವ್ಯಕ್ತಿ, ತನ್ನ ಎಲ್ಲ ಜೀವಿತವನ್ನೂ ಮನೆಯಂಗಳದಲ್ಲಿ ಸವೆಸುವ ಆತನ ಪತ್ನಿ ತಾಯಿಸಾಹೇಬ. ಸ್ವಾತಂತ್ರ್ಯವೆಂದರೇನು, ಯಾವುದು ಸ್ವಾತಂತ್ರ್ಯ, ದೇಶಕ್ಕೆ ಸ್ವಾತಂತ್ರ್ಯ ಬಂದರೆ ವ್ಯಕ್ತಿಗಳಿಗೆ ಸ್ವಾತಂತ್ರ್ಯ ಬಂದಂತೆಯೇ? ಈ ಪ್ರಶ್ನೆಗಳನ್ನು ಹುಟ್ಟಿಸಿ ಮನ ಕಲಕುವಂತೆ ಮಾಡುವ ಒಂದು ಆಮೋಘ ಚಿತ್ರ. ರಾಜ್ಯ ಮಟ್ಟದಲ್ಲಿ ಕೂಡ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟಿಯಾಗಿ ಜಯಮಾಲ ಅವರಿಗೆ, ಅತ್ಯುತ್ತಮ ಪೋಷಕ ನಟನೆಗೆ ಶಿವರಾಂರಿಗೆ, ಅತ್ಯತ್ತಮ ಛಾಯಾಗ್ರಹಣಕ್ಕಾಗಿ ಹೆಚ್.ಎಂ. ರಾಮಚಂದ್ರರವರಿಗೆ, ಅತ್ಯುತ್ತಮ ಕಥಾ ಲೇಖನಕ್ಕಾಗಿ ರಂ.ಶಾ., ಅತ್ಯುತ್ತಮ ಕಲಾ ನಿರ್ದೇಶನಕ್ಕಾಗಿ ರಮೇಶ್ ದೇಸಾಯಿ ಹೀಗೆ ಪ್ರಶಸ್ತಿಗಳ ಸುರಿಮಳೆಯೇ ಆಯಿತೆನ್ನಬಹುದು. ಇದೇ ವರ್ಷದಲ್ಲಿ ಅಮೆರಿಕಾ, ಅಮೆರಿಕಾ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿಯೇ ನಾಗತಿಹಳ್ಳಿ ಹೂಮಳೆ ಚಿತ್ರ ನಿರ್ದೇಶಿಸಿದರು. ಉಗ್ರಗಾಮಿಗಳ ಕಾರ್ಯಾಚರಣೆಯಿಂದ ಉಂಟಾಗುವ ಪರಿಸ್ಥಿತಿ ಜನ ಸಾಮಾನ್ಯರ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಸಾಕಷ್ಟು ನೈಜ ಪರಿಸರದಲ್ಲಿ ಚಿತ್ರಿಸಲು, ಈ ಚಿತ್ರವನ್ನು ಅಸ್ಸಾಂನಲ್ಲಿ ಚಿತ್ರೀಕರಿಸಲಾಯಿತು, ಚಿತ್ರಕ್ಕೆ ಪ್ರಶಸ್ತಿಗಳು ಲಭಿಸಿದವು. ರಾಜೇಂದ್ರಸಿಂಗ್ ಬಾಬುರವರ ಮುಂಗಾರಿನ ಮಿಂಚು ರಾಷ್ಟ್ರಮಟ್ಟದಲ್ಲಿ (1997) ಅತ್ಯುತ್ತಮ ಪ್ರಾದೇಶಿಕ ಚಿತ್ರ ಹಾಗೂ ಭೂಮಿಗೀತ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಚಿತ್ರವೆಂದು ವಿಶೇಷ ಬಹುಮಾನ ಪಡೆದವು.

ವರಕವಿ ಕುವೆಂಪು ರವರ ಜನಪ್ರಿಯ ಕಾದಂಬರಿ ಕಾನೂರು ಹೆಗ್ಗಡತಿ ಯನ್ನು ತೆರೆಯಮೇಲೆ ಮೂಡಿಸಬೇಕೆಂಬ ಹಲವಾರು ಚಿತ್ರ ನಿರ್ದೇಶಕರ ಬಯಕೆ, ಮತ್ತು ಅದನ್ನು ತೆರೆಯ ಮೇಲೆ ನೋಡಬೇಕೆಂಬ ಕನ್ನಡಿಗರ ಆಸೆ ಬಹುದಿನಗಳಿಂದ ಮರುಕಳಿಸುತ್ತಲೇ ಬಂದಿತ್ತು. ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡರು ನಿರ್ದೇಶನದ ಹೊಣೆಯನ್ನು ಹೊತ್ತಮೇಲಂತೂ ಕನ್ನಡ ಪ್ರೇಮಿಗಳ ಕುತೂಹಲ ಇಮ್ಮಡಿಸಿತು. ಚಿತ್ರ ತೆರೆಯನ್ನು ಕಂಡಿತು, ಆದರೆ ಚಿತ್ರ ನಿರೀಕ್ಷಿಸಿದ್ದ ಮಟ್ಟವನ್ನು ಏರಲಿಲ್ಲ ಎಂಬ ಅಭಿಪ್ರಾಯವನ್ನು ಬಹು ಮಂದಿ ಖ್ಯಾತ ವಿಮರ್ಶಕರು ವ್ಯಕ್ತ ಪಡಿಸಿದರು. ರಾಜ್ಯ ಮಟ್ಟದಲ್ಲಿ ದ್ವಿತೀಯ ಅತ್ಯುತ್ತ್ತಮ ಚಿತ್ರ, ರಾಷ್ಟ್ರ ಮಟ್ಟದಲ್ಲಿ ಉತ್ತಮ ಪ್ರಾದೇಶಿಕ ಚಿತ್ರ, ಭಾರತೀಯ ಪನೋರಮದಲ್ಲಿ ಆಯ್ಕೆ, ಈ ಪುರಸ್ಕಾರಗಳಿಂದ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಇದೇ ವರ್ಷದ ಮತ್ತೊಂದು ಚಿತ್ರ ಚೈತ್ರದ ಚಿಗುರು ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ದೊರಕಿದ್ದನ್ನು ಇಲ್ಲಿ ಸ್ಮರಿಸಬಹುದು. ತೃತೀಯ ಅತ್ಯುತ್ತಮ ಚಿತ್ರವಾಗಿ ದೋಣಿಸಾಗಲಿ ಚಿತ್ರ ಆಯ್ಕೆಯಾಯಿತು. ಜನರ ಮನಸ್ಸಿನಲ್ಲಿ ಹೊಸ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಬೇಕೆಂಬ ತೀವ್ರ ವಾದ ಹಂಬಲ ಬೆಳೆಯುತ್ತಲೇ ಬಂದಿತ್ತು, ಅದು ಇಂದಿಗೂ ಇದೆ. ಇಂತಹ ನಿರೀಕ್ಷಣೆಯಲ್ಲಿದ್ದಾಗ, ಕವಿತಾ ಲಂಕೇಶ್ ರವರು ತಮ್ಮ ಚೊಚ್ಚಲ ಕಾಣಿಕೆ ದೇವೀರಿ ಚಿತ್ರದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಪದಾರ್ಪಣೇ ಮಾಡಿದ್ದೇ ಅಲ್ಲದೆ, ಮೊದಲ ಪ್ರಯತ್ನದಲ್ಲಿಯೇ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿಗಳಿಸಿದ್ದು ಒಂದು ಗಮನಾರ್ಹ ಸಂಗತಿಯಾಯಿತು. ಈ ಚಿತ್ರ ಲಂಡನ್ ಚಿತ್ರೋತ್ಸವದಲ್ಲಿ ಕೂಡ ಪ್ರದರ್ಶಿತವಾಯಿತು. ಖ್ಯಾತ ಬರಹಗಾರ ಲಂಕೇಶರ ಕಾದಂಬರಿ ಆಧರಿಸಿ ತಯಾರಾದ ಈ ಚಿತ್ರದಲ್ಲಿ, ಹಳ್ಳಿಯಿಂದ ಪಟ್ಟಣಕ್ಕೆ ಬಂದು ಶೋಷಣೆಗೊಳಗಾಗುವ ಸೋದರ ಸೋದರಿಯರ ಅನುಭವ, ಅವರುಗಳಲ್ಲಾಗುವ ಪರಿವರ್ತನೆ, ಮತ್ತು ಅನೇಕ ಸಾಮಾಜಿಕ ಸಮಸ್ಯೆಗಳನ್ನು ಒಮ್ಮೆಲೇ ತೆರೆಯಮೇಲೆ ತರುವ ಕುತೂಹಲ, ಇವುಗಳನ್ನೊಳಗೊಂಡ ಹೊಸತನದ ಚಿತ್ರವಾಯಿತು. ತೃತೀಯ ಅತ್ಯುತ್ತಮ ಚಿತ್ರವಾಗಿ ಚಂದ್ರಮುಖಿ ಪ್ರಾಣಸಖಿ ಪ್ರಶಸ್ತಿ ಗಳಿಸಿತು.

ಈ ದಶಕದ ಅಂತ್ಯದಲ್ಲಿ, ಅಂದರೆ, 2000 ದಲ್ಲಿ ವಿಷ್ಣುವರ್ಧನ್ ಒಬ್ಬ ತ್ಯಾಗಮಯಿ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ ಚಿತ್ರ ಯಜಮಾನ ಅಪಾರ ಯಶಸ್ಸು ಗಳಿಸಿತು. ಇದೇ ಸಮಯದಲ್ಲಿ, ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಹೊಸ ಪ್ರತಿಭೆ ಪಿ.ಶೇಷಾದ್ರಿ, ತಮ್ಮ ಮೊದಲ ಚಿತ್ರ ಮುನ್ನುಡಿ ಯೊಂದಿಗೆ ಕಾಲಿರಿಸಿದರು. ಸದಭಿರುಚಿ ಚಿತ್ರಗಳನ್ನು ಮಾಡಬೇಕೆಂಬ ಉದ್ದೇಶದಿಂದ, ತಮ್ಮ ಹವ್ಯಾಸಿ ಕಲಾವಿದರ ಮಿತ್ರರೊಂದಿಗೆ ಕೈಜೋಡಿಸಿ, ಮುನ್ನುಡಿ (2000), ಅತಿಥಿ (2001). ಬೇರು (2004), ಚಿತ್ರಗಳನ್ನು ತಯಾರುಮಾಡಿ, ಈ ಮೂರು ಚಿತ್ರಗಳೂ ಭಾರತೀಯ ಪನೋರಮಾದಲ್ಲಿ ಆಯ್ಕೆಗೊಂಡು, ಕನ್ನಡ ಚಿತ್ರ ರಂಗಕ್ಕೆ ಆಶಾಭಾವನೆ ಮೂಡಿಸಿರುವ ವ್ಯಕ್ತಿ ಪಿ.ಶೇಷಾದ್ರಿ. ಇವರಿಂದ ಬರುವ ದಿನಗಳಲ್ಲಿ ಉತ್ತಮ ಚಿತ್ರಗಳನ್ನು ನಿರೀಕ್ಷಿಸಬಹುದು. ಪಿ. ರಾಮದಾಸ ನಾಯ್ಡು ಅವರು ನಿರ್ದೇಶಿಸಿದ ಮುಸ್ಸಂಜೆ ಚಿತ್ರಕ್ಕೆ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ (2000-01) ಲಭಿಸಿತಲ್ಲದೆ, ಭಾರತೀಯ ಪನೋರಮಕ್ಕೂ ಆಯ್ಕೆಯಾಯಿತು. ರಾಮದಾಸ ನಾಯ್ಡು ಅವರ ಮತ್ತೊಂದು ಚಿತ್ರ ಪ್ರವಾಹ 2004ರ ಗೋವದಲ್ಲಿ ನಡೆದ ಚಿತ್ರೋತ್ಸವದಲ್ಲಿ ಭಾರತೀಯ ಪನೋರಮದಲ್ಲಿ ಪ್ರದರ್ಶನಗೊಂಡಿತು. ಕಿರುತೆರೆಯ ಮೇಲೆ ಶ್ರೇಷ್ಠಮಟ್ಟದ, ಅತ್ಯಂತ ಜನಪ್ರಿಯ ಧಾರಾವಾಹಿಗಳನ್ನು ಕನ್ನಡಿಗರಿಗೆ ಕೊಡುವಲ್ಲಿ ಸಿದ್ಧಹಸ್ತದ ವ್ಯಕ್ತಿ ಎಂದು ಜನಾನುರಾಗಿ ಯಾಗಿರುವ ಟಿ.ಎನ್.ಸೀತಾರಾಂ ರವರು, ಎಸ್.ಎಲ್.ಭೈರಪ್ಪನವರ ಕಾದಂಬರಿ ಆಧರಿಸಿ ನಿರ್ದೇಶಿಸಿದ ಚಿತ್ರ ಮತದಾನ ಕೂಡ ಭಾರತೀಯ ಪನೋರಮದಲ್ಲಿ ಭಾಗವಹಿಸಿತು. 2000 - 01 ರ ವರ್ಷದಲ್ಲಿ ಶಾಪ ಮತ್ತು ಕುರಿಗಳು ಸಾರ್ ಕುರಿಗಳು ಚಿತ್ರಗಳಿಗೆ ದ್ವಿತೀಯ ಹಾಗೂ ತೃತೀಯ ಅತ್ಯುತ್ತಮ ಚಿತ್ರಗಳ ಸ್ಥಾನ ರಾಜ್ಯಮಟ್ಟದಲ್ಲಿ ದೊರಕಿತು.

1991 ರಿಂದ 2000 ದವರೆಗಿನ ದಶಕದಲ್ಲಿ ನಿರ್ಮಾಣಗೊಂಡ ಚಿತ್ರಗಳ ಸಂಖ್ಯೆಯ ಬಗ್ಗೆ ವೀಕ್ಷಿಸಿದಾಗ : 1991ರಲ್ಲಿ 75, 1992ರಲ್ಲಿ 90, 1993ರಲ್ಲಿ 88, 1994ರಲ್ಲಿ 63, 1995ರಲ್ಲಿ 75, 1996ರಲ್ಲಿ 69, 1997ರಲ್ಲಿ 72, 1998ರಲ್ಲಿ 63, 1999ರಲ್ಲಿ 58, 2000ರಲ್ಲಿ 58 ಹೀಗೆ ಒಟ್ಟು 711 ಕನ್ನಡ ಚಿತ್ರಗಳು ತಯಾರಾದವು. ಸಂಖ್ಯೆಯ ದೃಷ್ಟಿಯಿಂದ ಇದೊಂದು ಉತ್ತಮ ಬೆಳವಣಿಗೆಯೇ ಎನ್ನಬಹುದು. 2001 ರಿಂದ ಈಚಿನ ಪರಿಸ್ಥಿತಿ : ನೂತನ ಸಹಸ್ರವರ್ಷದಲ್ಲಿ, 2001ರ ದಶಕದ ಆದಿಭಾಗದ ವರ್ಷಗಳಲ್ಲಿ, ಕನ್ನಡ ಚಿತ್ರ ರಂಗ, 2005 ರವರೆಗೂ, ಸರಾಸರಿ, ವರ್ಷದಲ್ಲಿ ಸು. 80 ಚಿತ್ರಗಳನ್ನು ತಯಾರು ಮಾಡುತ್ತಿದೆ. ಬೆಳೆವಣಿಗೆಯ ದೃಷ್ಟಿಯಿಂದ ನೋಡಿದಾಗ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರಗಳು ಆಧುನಿಕ ತಾಂತ್ರಿಕತೆಯನ್ನು ಅಳವಡಿಸಿಕೊಂಡು, ಸಾಮಾನ್ಯವಾಗಿ ಎಲ್ಲ ಚಿತ್ರಗಳೂ ಆದ್ದೂರಿಯಾಗಿ, ಶ್ರೀಮತಿಕೆಯಿಂದ ತಯಾರಾಗಿ ಪರದೆಯೇರುತ್ತಿವೆ. ಒಂದು ಶುಭ ಸಂಕೇತವೆಂದರೆ 2004 ಮತ್ತು 2005ರಿಂದೀಚೆಗೆ ತಯಾರಾದ ಕನ್ನಡಚಿತ್ರಗಳು ಸಾಕಷ್ಟು ಹಣವನ್ನೂ ಗಳಿಸುತ್ತಿವೆ. ಆಪ್ತಮಿತ್ರ, ಜೋಗಿ ಮುಂತಾದ ಹಲವಾರು ಚಿತ್ರಗಳು ಜನಪ್ರಿಯತೆಯಲ್ಲಿ ಅಪಾರ ಯಶಸ್ಸುಗಳಿಸಿ ಹೊಸ ವಿಕ್ರಮವನ್ನೇ ಸಾಧಿಸಿವೆ. ಗಿರೀಶ್ ಕಾಸರವಳ್ಳಿಯವರ ದ್ವೀಪ ಚಿತ್ರಕ್ಕೆ ರಾಷ್ಟ್ರ ಮಟ್ಟದಲ್ಲಿ, ಅತ್ಯುತ್ತಮ ಚಿತ್ರವಾಗಿ (2001) ಸ್ವರ್ಣ ಕಮಲ ಪುರಸ್ಕಾರ ದೊರಕಿತು. ಈ ಒಂದು ಪ್ರಶಸ್ತಿ ಅವರಿಗೆ ನಾಲ್ಕನೇ ಬಾರಿ ಲಭಿಸಿದ್ದು ಒಂದು ಹೆಮ್ಮೆಯ ವಿಷಯ. ದೇವೀರಿ ಚಿತ್ರದಿಂದ ಖ್ಯಾತಿ ಗಳಿಸಿದ ಕವಿತಾ ಲಂಕೇಶ್ ರವರು ಪ್ರೀತಿ ಪ್ರೇಮ ಪ್ರಣಯ ಚಿತ್ರ (1903) ಎಂಬ, ಮಾನವನ ಬಂiÀÄಕೆ ಮತ್ತು ಚಾಪಲ್ಯಗಳನ್ನು ರಸವತ್ತಾಗಿ, ಮಧುರ, ತಿಳಿಹಾಸ್ಯಗಳೊಂದಿಗೆ ಚಿತ್ರೀಕರಿಸುವುದರ ಮೂಲಕ ಈ ಬಾರಿ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿಗಳಿಸಿದರು. ಯು.ಆರ್.ಅನಂತಮೂರ್ತಿಯವರ ಕಥೆ ಅಧರಿಸಿ, ಕನ್ನಡದ ಮತ್ತೊಬ್ಬ ಯುವ ಪ್ರತಿಭೆ ಬಿ.ಎಸ್.ಲಿಂಗದೇವರು ಅವರು ತಯಾರಿಸಿದ ಚಿತ್ರ ಮೌನಿ, ಭಾರತೀಯ ಪನೋರಮಕ್ಕೆ (1903) ಆಯ್ಕೆಯಾಯಿತು. ಗಿರೀಶ್ ಕಾಸರವಳ್ಳಿ ಅವರ ತಾಯಿಸಾಹೇಬ, ದ್ವೀಪ ಮತ್ತು ಹಸೀನ, ಟಿ.ಎಸ್.ನಾಗಾಭರಣ ಅವರ ನೀಲ ಮತ್ತು ಸಿಂಗಾರವ್ವ, ಪಿ.ಶೇಷಾದ್ರಿ ಅವರ ಮುನ್ನುಡಿ, ಆಥಿತಿ ಮತ್ತು ಬೇರು, ರಾಮದಾಸ ನಾಯ್ಡು ಅವರ ಮುಸ್ಸಂಜೆ ಮತ್ತು ಪ್ರವಾಹ, ಈ ಚಿತ್ರಗಳು ಭಾರತೀಯ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಭಾಗವಹಿಸಿ ಕನ್ನಡ ಚಲನಚಿತ್ರರಂಗಕ್ಕೆ ಪ್ರಶಂಸೆಗಳಿಸಿಕೊಟ್ಟಿವೆ. ಈ ಮೇಲ್ಕಂಡ ಬಹುತೇಕ ಚಿತ್ರಗಳಿಗೆ ಪ್ರಮುಖವಾಗಿ, ಹೆಚ್.ಜಿ.ದತ್ತಾತ್ರೇಯ ಅವರು ತಮ್ಮ ಮನಮುಟ್ಟುವ, ಗಂಭೀರ ಅಭಿನಯದಿಂದ ಶ್ರೀಮಂತಿಕೆ ತಂದು ಕೊಟ್ಟಿದ್ದಾರೆ.

ಇತ್ತೀಚಿನ ಮತ್ತೊಂದು ಬೆಳೆವಣಿಗೆಯೆಂದರೆ, ಸುದೀಪ್, ಸುನಿಲ್, ದರ್ಶನ್, ಮುರಳಿ, ಪುನೀತ್ ಮುಂತಾದ, ಹೊಸ ಪೀಳಿಗೆಯ ಅನೇಕ ತರುಣ ನಟರು, ಕನ್ನಡ ಚಿತ್ರಗಳಲ್ಲಿ ನಾಯಕನ ಪಾತ್ರಗಳಲ್ಲಿ ಅಭಿನಯಿಸಿ, ಚಿತ್ರರಂಗಕ್ಕೆ ಹೊಸ ಮೆರುಗನ್ನು ಲೇಪಿಸಿದ್ದಾರೆ. ಬೆಂಗಳೂರಿನಲ್ಲಿ ಈಗ ಮಲ್ಟಿಪ್ಲೆಕ್ಸ್‌ ಸಂಸ್ಕೃತಿ ಬಂದು, ಕನ್ನಡ ಚಿತ್ರಗಳಿಗೆ ಪ್ರದರ್ಶನಾವಕಾಶ ಸಿಕ್ಕಿ, ಎಲ್ಲ ಉತ್ತಮ ಚಿತ್ರಗಳೂ ಯಶಸ್ಸು ಗಳಿಸುವ ಸೂಚನೆಗಳಿವೆ ಎಂಬುದು ಕನ್ನಡ ಚಲನಚಿತ್ರ ರಂಗದ ತಜ್ಞರ ಆಶಾದಾಯಕ ಭಾವನೆ. (ಎಚ್.ಎನ್.ಎನ್.ಆರ್)

ನವಪ್ರತಿಭೆ : ಕನ್ನಡ ಚಿತ್ರರಂಗ ಬೆಳೆವಣಿಗೆಯ ಗತಿಯಲ್ಲಿ ಹಲವಾರು ಮಜಲುಗಳನ್ನು ಏರಿ ಇಳಿದಿದೆ. ಹೊಸದಕ್ಕೆ ಮೈ ಒಡ್ಡಿಕೊಂಡಿದೆ. ಬದಲಾವಣೆಯ ಗಾಳಿಯಲ್ಲಿ ತೇಲಿ ಹೋಗಿದೆ. ಇದು ಇಡೀ ಭಾರತೀಯ ಚಿತ್ರಂಗದ ಒಂದು ನೋಟ. ಇಡೀ ಚಿತ್ರರಂಗವೇ ಹೊಸಬರಿಗೆ ದಾರಿ ಮಾಡಿಕೊಟ್ಟು ಹಳಬರು ದೂರ ಸರಿಯುವ ನಿರಂತರ ಕ್ರಿಯೆ ಇದೇ ಮೊದಲೇನಲ್ಲ. ಕಾಲಕ್ಕೆ ತಕ್ಕಂತೆ ಪರಿವರ್ತನೆ ಅನಿವಾರ್ಯ. ಚಿತ್ರರಂಗದ ಆರಂಭದ ಹಂತದಲ್ಲಿ ಸುಬ್ಬಯ್ಯನಾಯ್ಡು, ಕೆಂಪರಾಜ್, ಇಂದುಶೇಖರ್, ಹೊನ್ನಪ್ಪಭಾಗವತರ್ ನಾಯಕನಟರಾಗಿದ್ದ ಕಾಲ. 1954ರ ಚಿತ್ರರಂಗದಲ್ಲಿ ಹೊಸ ನಟನಟಿಯರ ಕಾಲ. ರಾಜ್ಕುಮಾರ್, ಕಲ್ಯಾಣಕುಮಾರ್, ಉದಯಕುಮಾರ್ ಕುಮಾರತ್ರಯರು ಉದಯಿಸಿ ಚಿತ್ರರಂಗದಲ್ಲಿ ಹೊಸತನವನ್ನು ತಂದರು. ಹೊಸ ಪ್ರೇಕ್ಷಕರನ್ನು ಸೃಷ್ಟಿಸಿಕೊಂಡರು. ನಂತರದ ದಿನಗಳಲ್ಲಿ ಗಂಗಾಧರ್, ರಾಜೇಶ್, ರಮೇಶ್ ಕಾಣಿಸಿಕೊಂಡರು. ಕಾಲಕ್ರಮೇಣ ವಿಷ್ಣುವರ್ಧನ್, ಶ್ರೀನಾಥ್, ಲೋಕೇಶ್, ಅನಂತನಾಗ್, ಅಂಬರೀಷ್, ಶಂಕರನಾಗ್, ಪ್ರಭಾಕರ್ ತೆರೆಯ ಮೇಲೆ ಹೊಸ ನಾಯಕರಾಗಿ ಮೂಡಿ ಬಂದರು. 1985ರ ನಂತರ ಶಿವರಾಜ್ ಕುಮಾರ್, ರವಿಚಂದ್ರನ್, ರಮೇಶ್, ದೇವರಾಜ್, ಶಶಿಕುಮಾರ್, ಸಾಯಿಕುಮಾರ್, ರಾಮ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಶ್ರೀಧರ್, ವಿನೋದ್ ರಾಜ್, ಕುಮಾರ್ ಬಂಗಾರಪ್ಪ, ಅಭಿಜಿತ್ ಮೊದಲಾದವರು ಚಿತ್ರರಂಗದ ಹೊಸ ಪೀಳಿಗೆಯಾಗಿ ಕಾಣಿಸಿಕೊಂಡರು. ಮತ್ತೆ 2000 ಇಸವಿಯ ನಂತರ ಇತಿಹಾಸ ಚಕ್ರ ತಿರುಗಿದೆ. ಚಿತ್ರರಂಗದಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿದ್ದೇ ಈ ವರ್ಷ ಎನ್ನಬಹುದು. ಮತ್ತೊಂದು ಹೊಸ ಪೀಳಿಗೆ ಕನ್ನಡ ಚಿತ್ರಂಗದಲ್ಲಿ ನೆಲೆಯೂರಿದೆ. ಕಾಲನ ಪ್ರಕ್ರಿಯೆಯಲ್ಲಿ ತಾರಾವರ್ಚಸ್ಸು ನಿಧಾನವಾಗಿ ಮಾಯವಾಗಿ ಕಥೆ, ತಂತ್ರಜ್ಞಾನ, ಗ್ರಾಫಿಕ್ಸ್‌, ಸಂಗೀತ ಇವೆಲ್ಲಾ ಚಿತ್ರಗಳಲ್ಲಿ ಪ್ರಧಾನ ಪಾತ್ರ ವಹಿಸುತ್ತಿದೆ.

ಕನ್ನಡದಲ್ಲಿ ಈ ಬೆಳೆವಣಿಗೆಯಾಗುವ ಮುನ್ನವೇ ನೆರೆ ರಾಜ್ಯದ ತಮಿಳು, ತೆಲುಗು ಚಿತ್ರರಂಗದಲ್ಲಿ ಅದಾಗಲೇ ಹೊಸ ಮುಖಗಳು ಚಿತ್ರರಂಗಕ್ಕೆ ಅವ್ಯಾಹತವಾಗಿ ಲಗ್ಗೆ ಇಟ್ಟಿದ್ದವು. ತಾಂತ್ರಿಕವಾಗಿ ಶ್ರೀಮಂತಿಕೆ ಮೆರೆಯುತ್ತಿದ್ದ ಚಿತ್ರಗಳು ಜನರಿಗೆ ಪ್ರಿಯವಾಗಿದ್ದವು. ದಕ್ಷಿಣ ಭಾರತದಾದ್ಯಂತ ಚಿತ್ರರಂಗದಲ್ಲಿ ಅದೇ ಹೊಸಗಾಳಿ ಬೀಸಲಾರಂಭಿಸಿದಾಗ ಕನ್ನಡ ಚಿತ್ರರಂಗವೂ ಅದಕ್ಕೆ ಮೈಯೊಡ್ಡಿತು. ಅದಕ್ಕೆ ಮುನ್ನವೇ ಉಪೇಂದ್ರ ಅವರಂತಹ ನಟ, ನಿರ್ದೇಶಕ, ಗುರುಕಿರಣ್, ಮನೋಹರ್ ಅವರಂತಹ ಸಂಗೀತ ನಿರ್ದೇಶಕರು ಕನ್ನಡ ಚಿತ್ರರಂಗದಲ್ಲಿ ಹೊಸತನದ ಸ್ಪರ್ಶ ನೀಡುತ್ತಿದ್ದರು. “ಓಂ”, “ಸ್ವಸ್ತಿಕ್”, “ಎ”, “ಉಪೇಂದ್ರ” ಮೊದಲಾದ ಚಿತ್ರಗಳು ಕನ್ನಡ ಚಿತ್ರರಂಗಕ್ಕೆ ಹೊಸ ದಿಕ್ಕನ್ನು ನೀಡಿತು. ಹೂವು ಚೆಲ್ಲಿದ ಹಾದಿಯಲ್ಲಿ ನಡೆಯುತ್ತಿದ್ದ ಚಿತ್ರರಂಗದಲ್ಲಿ ರಕ್ತದ ಓಕುಳಿಯಾಟ ಆರಂಭವಾಯಿತು. ಈ ಸಿನಿಮಾಗಳ ವಸ್ತುವಿನ ಬಗ್ಗೆ ಎಷ್ಟೇ ವಿವಾದವಿದ್ದರೂ ಹೊಸ ಪೀಳಿಗೆಯನ್ನು ಆಕರ್ಷಿಸಲು ಇದು ನೆರವಾಯಿತು ಎಂಬುದನ್ನು ಅಲ್ಲಗಳೆಯಲಾಗದು. ಈ ತುಡಿತ ಮತ್ತಷ್ಟು ಕೆನೆಗಟ್ಟಿದ್ದು 2000ರಲ್ಲಿ ಬಿಡುಗಡೆಯಾದ “ಪ್ರೀತ್ಸೆ” ಎಂಬ ಚಿತ್ರದಲ್ಲಿ ಶಿವರಾಜ್ಕುಮಾರ್ ಹಾಗೂ ಉಪೇಂದ್ರ ಇಬ್ಬರೂ ನಾಯಕರಾಗಿ ಅಭಿನಯಿಸಿದರು. ಚಿತ್ರ ಯಶಸ್ಸು, ಉಪೇಂದ್ರ ಅವರಿಗೆ ಜನಪ್ರಿಯತೆ ತಂದುಕೊಟ್ಟಿತು. ಹೊಸಬರ ಪ್ರವೇಶಕ್ಕೆ ಇದೇ ದಾರಿಯಾಯಿತು. ಅದುವರೆಗೆ ತಾಂಡವವಾಡುತ್ತಿದ್ದ ತಾರಾವರ್ಚಸ್ಸು ಇಳಿಮುಖವಾಯಿತು ಎಂಬುದು ಈ ಘಟ್ಟದ ಹೊಸ ಬೆಳೆವಣಿಗೆ.

ಚಿತ್ರರಂಗಕ್ಕೆ ಯುವ ನಟ-ನಟಿಯರೇ ಅಲ್ಲದೆ ನಿರ್ದೇಶಕರು, ಸಂಗೀತ ನಿರ್ದೇಶಕರು, ಯುವ ಸಾಹಿತಿಗಳ ಪ್ರವೇಶ ಈ ಹಂತದಲ್ಲಿ ಅವ್ಯಾಹತವಾಗಿ ನಡೆಯಿತು. “ದೇವೀರಿ” ಚಿತ್ರ ಮೂಲಕ ಕವಿತಾ ಲಂಕೇಶ್ ಯಶಸ್ವಿ ನಿದ್ಙೇಶಕಿಯಾಗಿ ಮೂಡಿಬಂದರು. ಅನಂತರದ ವರ್ಷಗಳಲ್ಲಿ ಅವರು ನಿದ್ಙೇಶಿಸಿದ “ಬಿಂಬ”, “ಪ್ರೀತಿ ಪ್ರೇಮ ಪ್ರಣಯ” ಚಿತ್ರಗಳೂ ಕೂಡ ಗಮನ ಸೆಳೆಯುವಂತೆಯೇ ಇದ್ದು, ಸದಭಿರುಚಿಯ ಚಿತ್ರ ನಿರ್ದೇಶಕಿಯಾಗಿದ್ದಾರೆ. ಇದೇ ವರ್ಷ “ಮುನ್ನುಡಿ” ಚಿತ್ರದ ಮೂಲಕ ಮತ್ತೊಬ್ಬ ಪ್ರತಿಭಾವಂತ ನಿರ್ದೇಶಕ ಪಿ. ಶೇಷಾದ್ರಿ ಅವರು ಚಲನಚಿತ್ರರಂಗ ಪ್ರವೇಶಿಸದರು. ಅತಿಥಿ, ಬೇರು, ಜಯಮಾಲಾ ಅವರ ತುತ್ತೂರಿ ಚಿತ್ರಗಳ ಮೂಲಕ ಅವರೂ ಗಮನ ಸೆಳೆದರು. `ಸ್ಪರ್ಶ’ ಚಿತ್ರದ ಮತ್ತೊಬ್ಬ ಯುವ ನಟ ಸುದೀಪ್, ರೇಖಾ ಬೆಳಕಿಗೆ ಬಂದರು. ಉತ್ತರಧ್ರುವದಿಂ. . ದಕ್ಷಿಣ ಧ್ರುವಕೂ . . ಚಿತ್ರ ಮೂಲಕ ಯೋಗೇಶ್ವರ್ ಬೆಳಕಿಗೆ ಬಂದರು.

ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಹೊಸ ಮುಖಗಳ ಅನಾವರಣಗೊಳಿಸುವ ಪರಂಪರೆ ಆರಂಭವಾದದ್ದು ನಾಗತಿಹಳ್ಳಿ ಚಂದ್ರಶೇಖರ್ ಅವರು ಹೊಸಮುಖಗಳನ್ನು ಹುಡುಕಿ ತೆಗೆದು, ನಿರ್ದೇಶಿಸಿದ “ನನ್ನ ಪ್ರೀತಿಯ ಹುಡುಗಿ” ಚಿತ್ರದಿಂದ ಎನ್ನಬಹುದು. ಯುವಜೋಡಿಗಳ ಈ ಪ್ರೇಮಕತೆಯಲ್ಲಿ ನವನಟ ಧ್ಯಾನ್, ದೀಪಾಲಿ ಗಮನ ಸೆಳೆಯುವ ಅಭಿನಯದ ಮೂಲಕ ಚಿತ್ರದ ಯಶಸ್ವಿಗೆ ಕಾರಣರಾದರು. ಚಿತ್ರಕ್ಕೆ ಮೊದಲಬಾರಿಗೆ ಸಂಗೀತ ನೀಡಿದ ಮನೋಮೂರ್ತಿ ಕೂಡ ಜನಪ್ರಿಯ ಹಾಡುಗಳ ಮೂಲಕ ಚಿತ್ರದ ಯಶಸ್ವಿಗೆ ಕಾರಣರಾದರು. ಈ ಮಾರ್ಗ ಸೂಚಿಯನ್ನು ಅನುಸರಿಸಿ ಕನ್ನಡ ಚಿತ್ರರಂಗದಲ್ಲಿ ಪ್ರೇಮಕತೆಗಳ ಪುರವೇ ಹರಿದು ಬಂತು. “ನಿನಗಾಗಿ”, “ಅಪ್ಪು” ಹಾಗೂ ತೆಲುಗಿನ “ಟ್ರೆಂಡ್ ಸೆಟ್ಟರ್” ಎನ್ನಲಾದ “ಚಿತ್ರಂ” ಚಿತ್ರದ ಅದೇ ಹೆಸರಿನ “ಚಿತ್ರ”(2002) ಚಿತ್ರಗಳು ಕನ್ನಡ ಚಿತ್ರರಂಗದ ಹೊಸ ಪ್ರವೃತ್ತಿ ಆದವು. “ನಿನಗಾಗಿ” ಮೂಲಕ ವಿಜಯ್ರಾಘವೇಂದ್ರ, “ಅಪು”್ಪ ಮೂಲಕ ಪುನೀತ್ ರಾಜ್ಕುಮಾರ್ ನವನಟರಾಗಿ ಮೂಡಿ ಬಂದರು. “ಚಿತ್ರ”ದಲ್ಲಿ ನಾಗೇಂದ್ರ ಪ್ರಸಾದ್, ರೇಖಾ ಗಮನ ಸೆಳೆದರು. ಅಪ್ಪು ನಂತರ ಪುನೀತ್ ಅಭಿನಯಿಸಿದ ಅಭಿ, ವೀರ ಕನ್ನಡಿಗ, ಮೌರ್ಯ, ಆಕಾಶ್, ನಮ್ಮ ಬಸವ ಎಲ್ಲ ಚಿತ್ರಗಳು ವ್ಯಾಪಾರಿ ದೃಷ್ಟಿಯಿಂದ ಯಶಸ್ವಿಯಾಗಿವೆ. ಇದೇ ಚಿತ್ರದಲ್ಲಿ ನಾಯಕಿಯಾಗಿ ಬೆಳಕಿಗೆ ಬಂದ ರಕ್ಷಿತಾ ಯಶಸ್ವಿ ನಾಯಕಿ ನಟಿ. 2002ರಲ್ಲೇ ಬೆಳ್ಳಿತೆರೆಗೆ ಪದಾರ್ಪಣ ಮಾಡಿದ ದರ್ಶನ್ ಕೂಡ ಜನಪ್ರಿಯ ನಟರಾಗಿದ್ದಾರೆ. ವಿಜಯ್ ರಾಘವೇಂದ್ರ ಹಾಗೂ ರಾಧಿಕಾ ಜೋಡಿ ಜನಪ್ರಿಯಗೊಂಡಿತು. ಇವರಿಬ್ಬರೂ ಸತತವಾಗಿ ಮೂರು ಚಿತ್ರಗಳಲ್ಲಿ ಅಭಿನಯಿಸಿದರು. “ನಿನಗಾಗಿ” ಮೂಲಕ ಆರಂಭವಾದ ಈ ಜೋಡಿ, ಒಂದೇ ವರ್ಷದಲ್ಲಿ ಪ್ರೇಮ ಖೈದಿ, ರೋಮಿಯೋ ಜ್ಯೂಲಿಯೆಟ್ ಚಿತ್ರಗಳಲ್ಲೂ ನಾಯಕ-ನಾಯಕಿಯಾದರು. ಒಂದೇ ವರ್ಷ ಐದು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ರಾಧಿಕಾ ಜನಪ್ರಿಯ ನಟಿಯಾದರು. ಪುನೀತ್ ರಾಜ್ಕುಮಾರ್ ಕನ್ನಡದ ಮೇರುನಟ ಡಾ. ರಾಜ್ಕುಮಾರ್ ಅವರ ಪುತ್ರ. ರಾಜ್ಕುಮಾರ್ ಚಿತ್ರರಂಗದ ಬೆಳೆವಣಿಗೆಯ ಉದ್ದಕ್ಕೂ ತಮ್ಮ ಛಾಪು ಮೂಡಿಸಿಕೊಂಡೇ ಬಂದಿದ್ದಾರೆ. ರಾಜ್ಕುಮಾರ್ ಅವರ ಮೂವರು ಪುತ್ರರೂ ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶಿವರಾಜ್ಕುಮಾರ್ ಅವರಂತೂ ಈಗ ಜನಪ್ರಿಯ ನಟ. ಯುವ ಪೀಳಿಗೆಯ ನಾಯಕರಾಗಿ ಪುನೀತ್ ಜನಪ್ರಿಯರಾಗಿದ್ದಾರೆ. ಬೆಟ್ಟದ ಜೀವ, ಭಕ್ತ ಪ್ರಹ್ಲಾದ, ಎರಡು ನಕ್ಷತ್ರಗಳು, ಭಾಗ್ಯವಂತರು ಮೊದಲಾದ ಚಿತ್ರಗಳಲ್ಲಿ ಬಾಲನಟನಾಗಿಯೂ ಅಭಿನಯಿಸಿರುವ ಪುನೀತ್, ಅತ್ಯುತ್ತಮ ಬಾಲನಟನೆಂದು ರಾಷ್ಟ್ರೀಯ ಪ್ರಶಸ್ತಿ ಕೂಡ ಪಡೆದಿದ್ದಾರೆ.

ಪುನೀತ್ ಅವರಂತೆಯೇ ಬಾಲನಟನಾಗಿದ್ದ ನಂತರದ ದಿನಗಳಲ್ಲಿ ನಾಯಕನಾಗಿ ಮಿಂಚಿದ ಪ್ರತಿಭೆ ವಿಜಯ್ರಾಘವೇಂದ್ರ. “ಚಿನ್ನಾರಿ ಮುತ್ತು”, “ಕೊಟ್ರೇಶಿ ಕನಸು”, ಚಿತ್ರಗಳ ಅಭಿನಯಕ್ಕಾಗಿ ಅತ್ಯುತ್ತಮ ಬಾಲನಟ ಪ್ರಶಸ್ತಿಯನ್ನೂ ಪಡೆದಿರುವ ವಿಜಯ್ರಾಘವೇಂದ್ರ, “ಶ್ರೀ” ಚಿತ್ರದವರೆಗೆ ಯಶಸ್ಸಿನ ನಡೆಯಲ್ಲೇ ಇದ್ದಾರೆ.

ಪುನೀತ್ ರಾಜ್ಕುಮಾರ್ ಹಾಗೂ ವಿಜಯ್ರಾಘವೇಂದ್ರ ಅವರು ಪ್ರೇಮಕಥಾನಕಗಳ ಮೂಲಕ ಬೆಳ್ಳಿತೆರೆ ಪ್ರವೇಶಿಸಿದರೆ, ಪೋಷಕನಟರಾಗಿದ್ದ ತೂಗುದೀಪ ಶ್ರೀನಿವಾಸ್ ಅವರ ಪುತ್ರ ದರ್ಶನ್ ಅವರು ಆ್ಯಕ್ಷನ್ ಚಿತ್ರಗಳ ಮೂಲಕ ಬೆಳ್ಳಿತೆರೆ ಪ್ರವೇಶಿಸಿದರು. ಪಿ. ಎನ್. ಸತ್ಯ ಅವರು ನಿದ್ಙೇಶಿಸಿದ “ಮೆಜೆಸ್ಟಿಕ್” ಚಿತ್ರ ಅಪಾರ ಯಶಸ್ಸಾದದ್ದು, ಬದಲಾದ ಪ್ರೇಕ್ಷಕರ ಅಭಿರುಚಿಗೆ ಸಾಕ್ಷಿಯಾಗಿತ್ತು. ಒಂದೇ ವರ್ಷದಲ್ಲಿ ದರ್ಶನ್ ನಾಲ್ಕು ಚಿತ್ರಗಳಲ್ಲಿ ನಾಯಕರಾದದ್ದು ಅವರನ್ನು ಖಾಯಂ ನಾಯಕ ಸ್ಥಾನಕ್ಕೆ ದೂಡಿತು. “ಧ್ರುವ” (2002) ಚಿತ್ರದ ಮೂಲಕ ಮತ್ತಷ್ಟು ಗಟ್ಟಿಯಾಗಿ, ನಿನಗೋಸ್ಕರ, ನನ್ನ ಪ್ರೀತಿಯ ರಾಮು, ಕಿಟ್ಟಿ, ಕರಿಯ, ಲಂಕೇಶ್ ಪತ್ರಿಕೆ, ಲಾಲಿಹಾಡು, ಸುಂಟರಗಾಳಿ, ಅಯ್ಯ, ಶಾಸ್ತ್ರಿ ಮೊದಲಾದ ಚಿತ್ರಗಳ ಮೂಲಕ `ಆ್ಯಕ್ಷನ್ ಹೀರೋ’ ಆದರು.

ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ “ಸ್ಪರ್ಶ” ಚಿತ್ರದ ಮೂಲಕ ಬೆಳಕಿಗೆ ಬಂದ ಸುದೀಪ್, “ಹುಚ್ಚ” ಚಿತ್ರದ ಭಾರೀ ಯಶಸ್ಸಿನ ಮೂಲಕ ಕನ್ನಡದ ಹೊಸ ಯುವ ನಟರಾಗಿ ನೆಲೆ ನಿಂತರು. ನಂತರದ ದಿನಗಳಲ್ಲಿ ವಾಲಿ, ಚಂದು, ಧಮ್, ನಮ್ಮಣ್ಣ, ಸ್ವಾತಿಮುತ್ತು, ಮೈ ಆಟೋಗ್ರಾಫ್ ಚಿತ್ರಗಳ ಮೂಲಕ ಪ್ರತಿಭಾವಂತ ನಟರಾಗಿ ಗಮನ ಸೆಳೆಯುತ್ತಿದ್ದಾರೆ. ನಾಟಯಕನಟರಾಗಿ ತೆರೆಗೆ ಬಂದು ಅದೃಷ್ಟ ಪರೀಕ್ಷಿಸುತ್ತಿರುವವರ ಸಂಖ್ಯೆ ಅಪಾರವಾಗಿದೆ. ಸೌರವ್ (ಬೂತಯ್ಯನ ಮಕ್ಕಳು), ರೇಖಾ, ಅನಿರುದ್ಧ (ಚಿತ್ರ), ಛಾಯಾಸಿಂಗ್(ಚಿಟ್ಟೆ), ನವೀನ್ ಮಯೂರ್ (ನಿನಗೋಸ್ಕರ), ಸಂದೀಪ್ (ಕಾರ್ಮುಗಿಲು, ರಮ್ಯಚೈತ್ರಕಾಲ), ವಿನೋದ್ಪ್ರಭಾಕರ್ (ದಿಲ್), ಶಿವಧ್ವಜ್(ನೀಲಾ), ಅಜಯ್, ಸುನಿಲ್ರಾವ್(ಎಕ್ಸ್‌ಕ್ಯೂಸ್ಮಿ), ಆದಿತ್ಯ (ಲವ್, ಆದಿ, ಡೆಡ್ಲಿ ಸೋಮ), ಬಾಲಾಜಿ (ತುಂಟಾಟ), ಮಯೂರ್ಪಟೇಲ್(ಗುನ್ನ, ಲವ್ಸ್ಟೋರಿ) ವಿಶಾಲ್ಹೆಗಡೆ, ಹರೀಶ್ ಪ್ರೇಮ್ (ನೆನಪಿರಲಿ), ದೀಪಕ್ (ಶಿಷ್ಯ) ಮೊದಲಾದವರು ನಾಯಕರಾಗಿ ಅದೃಷ್ಟ ಪರೀಕ್ಷೆ ಮಾಡುತ್ತಿದ್ದಾರೆ. “ಚಂದ್ರ ಚಕೋರಿ” ಚಿತ್ರದ ಮೂಲಕ ತೆರೆಗೆ ಬಂದ ಮುರಳಿ ಮತ್ತೊಬ್ಬ ಆ್ಯಕ್ಷನ್ ಹೀರೋ. ಶಂಭು, ಯಶವಂತ್, ಸಿದ್ದು, ಗೋಪಿ ಚಿತ್ರಗಳ ಮೂಲಕ ಅವರು ಭರವಸೆಯ ನಟರೆನಿಸಿದ್ದಾರೆ.

ನಿರ್ದೇಶಕರಾಗಿದ್ದ ಎಸ್. ನಾರಾಯಣ್, ಶಿವಮಣಿ, ಓಂಪ್ರಕಾಶ್ರಾವ್ ನಾಯಕರಾದರು. “ತುಂಟಾಟ” ಚಿತ್ರದ ಮೂಲಕ ಇಂದ್ರಜಿತ್ ನಿರ್ದೇಶಕರಾಗಿ ಸಿನಿಮಾ ರಂಗ ಪ್ರವೇಶಿಸಿದರು. ಅವರು ನಿರ್ದೇಶಿಸಿದ “ಮೊನಾಲಿಸಾ” ಕೂಡಾ ಯುವ ಪೀಳಿಗೆಯ ಸಿನಿಮಾವಾಗಿಯೇ ಗುರುತಿಸಲ್ಪಟ್ಟಿದೆ.

“ಕರಿಯ” ಚಿತ್ರ ಮೂಲಕ ಗಮನ ಸೆಳೆಯುವ ನಿರ್ದೇಶಕರಾಗಿ ಕಾಣಿಸಿಕೊಂಡ ಪ್ರೇಮ್, ಅವರ ಪ್ರತಿಭೆ ಮುಂದೆ “ಎಕ್ಸ್‌ಕ್ಯೂಸ್ಮಿ” ಚಿತ್ರದಲ್ಲಿ ಮತ್ತಷ್ಟು ಬೆಳೆಯಿತು. “ಜೋಗಿ”(2005) ಚಿತ್ರದ ಮೂಲಕ ಅವರೊಬ್ಬ ಪ್ರತಿಭಾವಂತ ನಿರ್ದೇಶಕರಾಗಿಯೇ ಕಾಣಿಸಿಕೊಂಡರು. “ಖುಷಿ”ಯ ಮೂಲಕ ಗಮನಾರ್ಹ ಸಾಧನೆ ಮಾಡಿದ ಪ್ರಕಾಶ್ ಅವರ “ರಿಷಿ” ಕೂಡಾ ಪ್ರತಿಭಾವಂತ ನಿರ್ದೇಶನ ಕಾಣಿಕೆಯಾಗಿದೆ. “ಉಲ್ಟಾಪಲ್ಟಾ”, “ರಾಂಗ್ನಂಬರ್” ಚಿತ್ರಗಳ ಮೂಲಕ ಎನ್.ಎಸ್. ಶಂಕರ್ ಗಮನ ಸೆಳೆಯುವ ನಿರ್ದೇಶಕರಾಗಿದ್ದಾರೆ. “ನಲ್ಲ” ಚಿತ್ರದ ಮೂಲಕ ಚಿತ್ರ ಸಾಹಿತಿ ನಾಗೇಂದ್ರಪ್ರಸಾದ್ ಅವರು ನಿರ್ದೇಶಕರಾದರು. ಶಂಭು ಚಿತ್ರದ ನಿರ್ದೇಶಕರಾಗಿ ದ್ವಾರಕಿ ಗಮನ ಸೆಳೆವ ನಿರ್ದೇಶಕ. ಓಕೆ ಸಾರ್ ಓಕೆ ಮೂಲಕ ನಿರ್ದೇಶಕರಾದ ದಯಾಳ್ ಯಶವಂತ್, ಬಾ ಬಾರೋ ರಸಿಕ, ಮಸಾಲ ಚಿತ್ರಗಳ ಮೂಲಕ ಗಮನ ಸೆಳೆದರು. ಕನ್ನಡ ಚಿತ್ರರಂಗ ಇಂದು ಹೊಸ ಪ್ರತಿಭೆಗಳನ್ನೇ ನಂಬಿಕೊಂಡಿದೆ. ಗುರುಕಿರಣ್ ಅವರು ಯಶಸ್ವಿ ಸಂಗೀತ ನಿರ್ದೇಶಕರಾಗಿದ್ದಾರೆ. ರಾಜೇಶ್ ರಾಮನಾಥನ್, ಕೋಕಿಲ ಸಾಧು, ಕೃಪಾಕರ್ ಅವರೂ ಕೂಡ ಸಂಗೀತ ನಿರ್ದೇಶಕರಾಗಿ ಹೆಸರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಬಿ. ಜಯಮ್ಮ, ಜಯಂತಿ, ಬಿ. ಸರೋಜಾದೇವಿ, ಭಾರತಿ, ಲೀಲಾವತಿ ಅವರೆಲ್ಲಾ ಅಚ್ಚ ಕನ್ನಡತಿಯರಾಗಿ ಮೆರೆದವರು. ಪಂಚಭಾಷಾ ತಾರೆಯರಾಗಿಯೂ ಇವರ ಖ್ಯಾತಿ ವಿಸ್ತರಿಸಿದೆ. ಇತರ ಭಾಷಾ ಚಿತ್ರಗಳಿಗೆ ನಟಿಯರು ಬೇಕಾದಾಗಲೆಲ್ಲಾ ಕನ್ನಡ ಚಿತ್ರರಂಗದತ್ತ ಎಲ್ಲರೂ ನೋಡುತ್ತಿದ್ದ ದಿನಗಳು ಅವು. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಪರಭಾಷಾ ತಾರೆಯರೇ ಆಕ್ರಮಿಸಿಕೊಂಡಿದ್ದಾರೆ. ಹಿಂದಿ ತಮಿಳು, ತೆಲುಗು ಭಾಷಾ ನಟಿಯರು ಆಮದಾಗುತ್ತಿದ್ದಾರೆ. ಆದರೂ ಕನ್ನಡದ ಪ್ರತಿಭೆಗಳು ಸ್ಪರ್ಧೆಯಲ್ಲಿ ಎದ್ದು ಬರುತ್ತಿವೆ. ಅಂತಹ ಕನ್ನಡದ ಪ್ರತಿಭೆಗಳ ಪೈಕಿ ಅನುಪ್ರಭಾಕರ್, ಭಾವನಾ, ಪ್ರೇಮ, ರಾಧಿಕಾ, ಶೃತಿ, ಸುಧಾರಾಣಿ, ತಾರಾ, ರಕ್ಷಿತಾ, ರಮ್ಯ ಗಟ್ಟಿಯಾಗಿ ಕನ್ನಡದ ಚಿತ್ರರಂಗದಲ್ಲಿ ಉಳಿದರು. ಹೊರನಾಡಿನಿಂದ ಬಂದ ತಾರೆಯರ ನಡುವೆಯೂ ರಮ್ಯ, ರಕ್ಷಿತಾ ಕನ್ನಡ ಚಿತ್ರರಂಗದಲ್ಲಿ ಮುಂಚೂಣಿಯಲ್ಲಿ ಮಿಂಚುತ್ತಿದ್ದಾರೆ. ಜಯಮಲಾ, ಆರತಿ, ತಾರಾ ಅವರು ನಿರ್ಮಾಪಕಿಯರಾಗಿಯೂ ಹೆಸರು ಗಳಿಸಿದ್ದಾರೆ. ತಾರಾ ಅವರು ನಿರ್ಮಿಸಿದ “ಹಸೀನಾ” ದ ಅಭಿನಯಕ್ಕಾಗಿ ಅವರು ರಾಷ್ಟ್ರೀಯ ಮಟ್ಟದ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ಆದರೂ ನಾಯಕಿಯರಾಗಲು ಇನ್ನೂ ಹಲವು ನಟಿಯರು ಶ್ರಮಿಸುತ್ತಲೇ ಇದ್ದಾರೆ. ಚೈತ್ರಾ ಹಳ್ಳಿಕೇರಿ, ದಾಮಿನಿ, ಆಶಿತಾ, ಡೈಸಿಬೋಪಣ್ಣ, ಅಶ್ವಿನಿ, ರಶ್ಮಿ ಕುಲಕರ್ಣಿ, ಶಿಲ್ಪಾ, ನೀತೂ ಹಲವಾರು ಚಿತ್ರಗಳಲ್ಲಿ ಅಭಿನಯಿಸಿಯೂ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ.

ವಾಣಿಜ್ಯಾತ್ಮಕ ಚಿತ್ರಗಳ ಭರಾಟೆಯ ನಡುವೆಯೂ ಹೊಸ ಅಲೆಯ ಚಿತ್ರಗಳು ಕನ್ನಡ ಚಿತ್ರರಂಗದ ಅಸ್ತಿತ್ವವನ್ನು ರಾಷ್ಟ್ರಮಟ್ಟದಲ್ಲಿ ಉಳಿಸಿವೆ. ಗಿರೀಶ್ಕಾಸರವಳ್ಳಿ, ಶೇಷಾದ್ರಿ, ನಾಗಾಭರಣ, ರಾಮದಾಸ್ನಾಯ್ಡು, ಬರಗೂರು ರಾಮಚಂದ್ರಪ್ಪ ಮೊದಲಾದವರು ಕಲಾತ್ಮಕ ಚಿತ್ರಗಳನ್ನು ತಯಾರಿಸುವ ಮೂಲಕ ಕನ್ನಡ ಚಿತ್ರರಂಗದ ಸಿನಿಮಾ ತುಡಿತವನ್ನು ಹಂಚಿಕೊಳ್ಳುತ್ತಿದ್ದಾರೆ. ಗಿರೀಶ್ ಕಾಸರವಳ್ಳಿ ಅವರ ದ್ವೀಪ, ಹಸೀನಾ ಚಿತ್ರಗಳು ರಾಷ್ಟ್ರಮಟ್ಟದಲ್ಲಿ ಕಲಾತ್ಮಕ ಚಿತ್ರಗಳ ನಿರ್ಮಾಣದಲ್ಲಿ ಕನ್ನಡ ಚಿತ್ರಗಳು ಹಿಂದೆ ಬಿದ್ದಿಲ್ಲ ಎಂಬುದನ್ನು ಎತ್ತಿ ಹಿಡಿಯುತ್ತಿವೆ. ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿದ “ಶಾಂತಿ” ಏಕಪಾತ್ರದ ಕಥಾ ಚಿತ್ರವಾಗಿ ಭಯೋತ್ಪಾದನೆಯ ವಿರುದ್ಧ ಎತ್ತಿದ ದನಿಯಾಗಿ ಗಮನ ಸೆಳೆಯಿತು. ಈ ರೀತಿಯ ಪ್ರಯತ್ನ ಕನ್ನಡದ ಮಟ್ಟಿಗೆ ಹೊಸದು. ಈ ಚಿತ್ರ ಗಿನ್ನೆಸ್ ದಾಖಲೆಯನ್ನೂ ಪ್ರವೇಶಿಸಿದೆ. ಹೊಸಗಾಳಿ, ಪರಿವರ್ತನೆಯ ಗಾಳಿ ಚಿತ್ರರಂಗದಲ್ಲಿ ಗಮನಾರ್ಹ ಸಾಧನೆಯತ್ತ ಹೆಜ್ಜೆಯನ್ನಿಟ್ಟಿದೆ. (ಜಿ.ಎಮ್)

ಕನ್ನಡ ಚಿತ್ರರಂಗದಲ್ಲಿ ಸಂಗೀತ, ಗೀತೆ ಮತ್ತು ಗಾಯನ : ಚಲನಚಿತ್ರಗಳಲ್ಲಿ, ಚಿತ್ರಗಳಿಗೆ ಧ್ವನಿ ಅಳವಡಿಸುವುದಕ್ಕೆ ಮುಂಚೆಯಿಂದಲೂ, ಅಂದರೆ ಮೂಕ ಚಿತ್ರಗಳ ಕಾಲದಿಂದಲೂ ಸಂಗೀತ ವನ್ನು, ಪಾಶ್ಚಾತ್ಯ ದೇಶಗಳಲ್ಲಿ ಚಿತ್ರ ಪ್ರದರ್ಶನವಾಗುತ್ತಿರುವಾಗಲೇ, ಚಿತ್ರ ಮಂದಿರದಲ್ಲಿ ವಾದ್ಯಗಳನ್ನು ನುಡಿಸುವುದರ ಮೂಲಕ ಹಿನ್ನೆಲೆ ಸಂಗೀತವನ್ನು ಒದಗಿಸುತ್ತಿದ್ದರು. ಅಂದ ಮೇಲೆ, ಮೊದಲಿನಿಂದಲೂ ಸಂಗೀತ ಸಿನಿಮಾದ ಅವಿಭಾಜ್ಯ ಅಂಗವಾಗಿ ಹೋಗಿದೆ. ಚಲನಚಿತ್ರಕ್ಕೆ ಧ್ವನಿ ಮತ್ತು ಮಾತು ಬಂದ ಮೇಲೆ, ನಮ್ಮ ಅಂದಿನ ನಾಟಕಗಳಲ್ಲಿ ಜನಪ್ರಿಯವಾಗಿದ್ದ ವಾದ್ಯಗಳು, ಗಾಯಕರು, ಅವುಗಳೇ ನಮ್ಮ ಚಿತ್ರಗಳಲ್ಲೂ ಮರುಕಳಿಸಲು ಪ್ರಾರಂಭವಾಯಿತು. ಚಿತ್ರ ಸಂಗೀತವೆಂದರೆ ಲೋಕಸಮ್ಮತವಾಗಿ ವಾಡಿಕೆಯಲ್ಲಿರುವುದು ಹಿನ್ನೆಲೆ ಸಂಗೀತ. ಆದರೆ ನಮ್ಮಲ್ಲಿ ಹೆಚ್ಚು ಮಂದಿಗೆ ಚಿತ್ರ ಸಂಗೀತವೆಂದರೆ ಚಿತ್ರಗಳಲ್ಲಿ ಬರುವ ಹಾಡುಗಳು. ಹಾಡುಗಳಿಲ್ಲದೆ ಚಿತ್ರ ನಿರ್ಮಾಣವಾಗುವುದೇ ಇಲ್ಲ. ಅದರೆ ಸಾಮನ್ಯವಾಗಿ ಪಾಶ್ಚಾತ್ಯ ದೇಶಗಳಲ್ಲಿ ಚಿತ್ರದ ಕಥೆಯಲ್ಲಿ ಹಾಡಿನ ಅವಶ್ಯಕತೆ ಇದ್ದರೆ ಮಾತ್ರ ಹಾಡುಗಳನ್ನು ಬಳಸಲಾಗುತ್ತದೆ. ಇಲ್ಲವಾದರೆ ಅದು ಇಲ್ಲ. ಭಾರತದಲ್ಲಿ ಎಲ್ಲ ಭಾಷೆಗಳ ಚಿತ್ರಗಳಲ್ಲಿ, ಯಾವ ದೃಶ್ಯದಲ್ಲಿಯಾಗಲಿ, ಯಾವ ಪಾತ್ರವೇ ಆಗಿರಲಿ ನಾವು ಹಾಡುಗಳನ್ನು ನಿರೀಕ್ಷಿಸಬಹುದು. ಇದನ್ನು ಸಾಮಾನ್ಯವಾಗಿ ನಮ್ಮ ಚಿತ್ರಪ್ರೇಮಿಗಳು ಒಪ್ಪಿಕೊಂಡಿರುವ ಅಂಶ. ನಮ್ಮ ಕನ್ನಡ ಚಿತ್ರಗಳಲ್ಲಿಯೂ ಹಾಗೆಯೇ, ನಾವೇನೂ ಅದಕ್ಕೆ ಹೊರತೇನಲ್ಲ.

ಕನ್ನಡದಲ್ಲಿ ವಾಕ್ಚಿತ್ರಗಳು ಬಂದ ಪ್ರಾರಂಭದ ದಿನಗಳಲ್ಲಿ, ಅಂದರೆ 1930ರ ದಶಕದಲ್ಲಿ, ಕಲಾವಿದರು ಸ್ವತಃ ತಾವೇ ಹಾಡಿಕೊಂಡು ಅಭಿನಯಿಸಬೇಕಿತ್ತು ಮತ್ತು ಅವರ ಜೊತೆಯಲ್ಲಿ ಪಕ್ಕವಾದ್ಯದವರು ತಮ್ಮ ವಾದ್ಯಗಳನ್ನು ಸ್ವಲ್ಪ ದೂರದಲ್ಲಿ ನುಡಿಸಿಕೊಂಡು ಅವರನ್ನು ಹಿಂಬಾಲಿಸಬೇಕಿತ್ತು. ಇವರುಗಳನ್ನು ಹಿಂಬಾಲಿಸಿ ಮೈಕ್ ಹಿಡಿದುಕೊಂಡು, ತಂತ್ರಜ್ಞರು ಧ್ವನಿಯನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಮೊಟ್ಟ ಮೊದಲ ಚಿತ್ರ ಸತಿಸುಲೋಚನ (1934)ಗೆ ಆರ್. ನಾಗೇಂದ್ರ ರಾಯರು ಸಂಗೀತ ನಿರ್ದೇಶನ ಮಾಡಿದರು. ಅನಂತರದಲ್ಲಿ ಬಂದ ಚಿತ್ರಗಳಿಗೆ ಎಚ್ ಕೆ. ಶೇಷಗಿರಿ ರಾಯರು (ಭಕ್ತ ಧ್ರುವ-1934), ವೆಂಕಟರಾಮಯ್ಯ ನವರು (ಸದಾರಮೆ-1935), ಎಂ. ನಾಗರಾಜ್ (ಸಂಸಾರ ನೌಕ-1936), ಪದ್ಮನಾಭ ಶಾಸ್ತ್ರೀಗಳು (ಸುಭದ್ರಾ-1941), ಮತ್ತು ಮತ್ತಿತರ ಚಿತ್ರಗಳಲ್ಲಿ, ಬಿ.ದೇವೇಂದ್ರಪ್ಪನವರು, ಮಲ್ಲಿಕಾರ್ಜುನ ಮನ್ಸೂರ್ರವರು, ಪಿ.ಕಾಳಿಂಗರಾವ್ರವರು ಹೀಗೆ ಅನೇಕ ವಿದ್ವಾಂಸರುಗಳು ಕಾರ್ಯ ನಿರ್ವಹಿಸಿದರು. ಗೀತರಚನೆಯನ್ನು, ಬೆಳ್ಳಾವೆ ನರಹರಿ ಶಾಸ್ತ್ರಿಗಳು, ಗಮಕಿ ರಾಮಕೃಷ್ಣ ಶಾಸ್ತ್ರಿಗಳು, ಬಿ. ಪುಟ್ಟಸ್ವಾಮಯ್ಯ ನವರು, ಕು.ರಾ.ಸೀತಾರಾಮಶಾಸ್ತ್ರಿಗಳು, ಮತ್ತು ರಂಗಭೂಮಿಯಲ್ಲಿ ನುರಿತ ಅನೇಕರು ರಚಿಸುತ್ತಿದ್ದರು. ಗಾಯನದಲ್ಲಿ ಕೂಡ, ರಂಗಭೂಮಿಯ ಕಲಾವಿದರುಗಳಾದ ಪಾತ್ರಧಾರಿಗಳು, ಮಳವಳ್ಳಿ ಸುಂದರಮ್ಮ, ಬಳ್ಳಾರಿ ಅಶ್ವತ್ತಮ್ಮ ನವರು, ಬಿ.ಎಸ್ ರಾಜಯ್ಯಂಗಾರ್ರವರು, ಆರ್.ನಾಗೇಂದ್ರರಾಯರು, ಬಸವರಾಜ್ ಮನ್ಸೂರ್, ಪಿ.ಕಾಳಿಂಗರಾಯರು, ಎಂ.ವಿ.ರಾಜಮ್ಮ, ಹೊನ್ನಪ್ಪ ಭಾಗವತರು, ನೀಲಮ್ಮ ಕಡಾಂಬಿ, ಬಿ.ಜಯಮ್ಮ, ಮೋಹನ್ ಕುಮಾರಿ, ಅಮೀರಬಾಯಿ ಕರ್ನಾಟಕಿ ಹೀಗೆ ಅನೇಕ ಕಲಾವಿದರುಗಳು ಹಾಡುತ್ತ್ತಿದ್ದರು.

ಅನೇಕ ದಾಖಲೆಗಳ ಪ್ರಕಾರ ಕನ್ನಡದಲ್ಲಿ ಮೊದಲ ಬಾರಿಗೆ ಆಕ್ಙೇಸ್ಟ್ರಾ ದೊಂದಿಗೆ ಸಂಗೀತ ನೀಡಿ, ಹಾಡುಗಳನ್ನು ರಚಿಸಿ, ಚಿತ್ರಗಳಲ್ಲಿ ಅಳವಡಿಸಿದವರು ಪಿ. ಕಾಳಿಂಗರಾಯರು. ಜಗನ್ಮೋಹಿನಿ ಚಿತ್ರ ಕನ್ನಡದಲ್ಲಿ ಒಂದು ಯಶಸ್ವಿ ಚಿತ್ರ, ಅದರಲ್ಲಿನ ಸಂಗೀತ ಮತ್ತು ಗೀತೆಗಳೂ ಅದರ ಯಶಸ್ಸಿಗೆ ಕಾರಣವಾದವು. ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ ವ್ಯಕ್ತಿ ಪಿ.ಶಾಮಣ್ಣನವರು, ಸು. ಮೂವತ್ತಕ್ಕೂ ಹೆಚ್ಚು ಕನ್ನಡ ಚಿತ್ರಗಳಿಗೆ ಸಂಗೀತ ನೀಡಿ, ಮುಂದಿನ ಪೀಳಿಗೆಗೆ ಅನೇಕ ಪ್ರತಿಭಾವಂತರನ್ನೂ ತಯಾರುಮಾಡಿದ ಖ್ಯಾತಿಯನ್ನೂ ಸಂಪಾದಿಸಿದರು. 1950 ದಶಕದಲ್ಲಿ ಕನ್ನಡ ಚಲನಚಿತ್ರ ರಂಗದಲ್ಲಿ ಸಂಗೀತ ನಿರ್ದೇಶಕರಾಗಿ ಪ್ರವೇಶಿಸಿದ, ವಿಜಯ ಭಾಸ್ಕರ್, ರಾಜನ್-ನಾಗೇಂದ್ರ, ಜಿ.ಕೆ.ವೆಂಕಟೇಶ್, ಟಿ.ಜಿ.ಲಿಂಗಪ್ಪ ಇವರುಗಳು ಸು. ವರ್ಷಗಳು ಅತ್ಯಂತ ಪ್ರತಿಭಾವಂತರಾಗಿ ಸೇವೆ ಸಲ್ಲಿಸಿದರು. ವಿಜಯ ಭಾಸ್ಕರ್ ರವರು ಸು. 500 ಕ್ಕೂ ಹೆಚ್ಚು ವಿವಿಧ ಭಾಷಾಚಿತ್ರಗಳಿಗೆ ಸಂಗೀತವನ್ನಿತ್ತು, ಸಹಸ್ರಾರು ಕನ್ನಡ ಗೀತೆಗಳನ್ನು ಸಂಯೋಜಿಸಿ, ಅನೇಕ ಬಾರಿ ಪ್ರಶಸ್ತಿಗಳ ಸುರಿಮಳೆಯನ್ನೇ ಅನುಭವಿಸಿದ ವ್ಯಕ್ತಿಯಾದರು. ಬೆಳ್ಳಿಮೋಡ, ಯಾವ ಜನ್ಮದ ಮೈತ್ರಿ, ನಾಂದಿ, ಸಂಕಲ್ಪ, ಗೆಜ್ಜೆ ಪೂಜೆ, ಶರಪಂಜರ, ಶುಭಮಂಗಳ, ನಾಗರಹಾವು, ಅಮೃತ ಘಳಿಗೆ, ಮುಂತಾದ ಅನೇಕ ಚಿತ್ರಗಳಲ್ಲಿನ ಸುಮಧುರ ಹಾಡುಗಳು ಇಂದಿಗೂ ಜನರ ಮನದಲ್ಲಿ ಹಸಿರಾಗಿ ಉಳಿದಿವೆ. ರಾಜನ್-ನಾಗೇಂದ್ರ ಅವರ ಜೋಡಿ, 1953ರಲ್ಲಿ ಸೌಭಾಗ್ಯಲಕ್ಷಿ ್ಮ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು, ರಾಜಲಕ್ಷ್ಮಿ, ಕನ್ಯಾದಾನ, ಮುತ್ತೈದೆ ಭಾಗ್ಯ, ಮಹಾತ್ಯಾಗ, ಅಪರಾಜಿತ, ಪಾತಾಳಮೋಹಿನಿ, ವೀರ ಸಂಕಲ್ಪ, ಮಂತ್ರಾಲಯ ಮಹಾತ್ಮೆ, ಇನ್ನೂ ಮುಂತಾದ ಅನೇಕ ಚಿತ್ರಗಳಲ್ಲಿ ಜನಪ್ರಿಯ ಹಾಡುಗಳನ್ನು ಸಂಯೋಜಿಸಿ, ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮೊದಲ ತೇದಿ (1955) ಚಿತ್ರದಲ್ಲಿ ಮೊದಲ ಬಾರಿಗೆ ಸಂಗೀತ ನೀಡಿದ ಟಿ.ಜಿ. ಲಿಂಗಪ್ಪನವರು, ರತ್ನಗಿರಿರಹಸ್ಯ, ಸ್ಕೂಲ್ ಮಾಸ್ಟರ್, ಸತಿ ಶಕ್ತಿ, ಶ್ರೀಕೃಷ್ಣ ದೇವರಾಯ, ಕಿತ್ತೂರು ಚೆನ್ನಮ್ಮ, ಚಕ್ರತೀರ್ಥ ಮುಂತಾದ ಅನೇಕ ಚಿತ್ರಗಳಿಗೆ ಸಂಗೀತ ನೀಡಿ ಹೆಸರು ಮಾಡಿದ್ದಾರೆ. ಇದೇ ಸಮಯದಲ್ಲಿ ಜಿ.ಕೆ. ವೆಂಕಟೇಶ್ ರವರು ಕೂಡ ತಮ್ಮ ಅಮೂಲ್ಯ ಸೇವೆಯನ್ನು ಕನ್ನಡಚಿತ್ರಗಳಲ್ಲಿ ಪ್ರಾರಂಭಿಸಿ, ಗೌರಿ, ಸಂಧ್ಯಾರಾಗ, ಭೂದಾನ, ಸನಾದಿ ಅಪ್ಪಣ್ಣ, ಮುಂತಾದ ಅನೇಕ ಚಿತ್ರಗಳಲ್ಲಿ ಸಂಗೀತ ಇತ್ತು ಜನರ ಮೆಚ್ಚುಗೆಗಳಿಸಿದ ವ್ಯಕ್ತಿ. ಇದೇ ಜಾಡಿನಲ್ಲಿ ಬೆಳಕಿಗೆ ಬಂದ ಎಂ. ರಂಗರಾವ್ ರವರು, ನಕ್ಕರೆ ಅದೇ ಸ್ವರ್ಗ, ಹಣ್ಣೆಲೆ ಚಿಗುರಿದಾಗ, ಕರುಳಿನ ಕರೆ, ಸಾಕ್ಷಾತ್ಕಾರ, ಎಡಕಲ್ಲು ಗುಡ್ಡದಮೇಲೆ ಮುಂತಾದ ಅನೇಕ ಚಿತ್ರಗಳಿಗೆ ಸಂಗೀತ ಒದಗಿಸಿ, ಪ್ರಶಸ್ತಿಗಳಿಸಿದ್ದಾರೆ.

ಅನಂತರದ ದಿನಗಳಲ್ಲಿ, ಹಲವಾರು ಚಿತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ಸಂಗೀತ ನಿರ್ದೇಶಕರುಗಳೆಂದರೆ, ಎಂ.ವೆಂಕಟರಾಜು, ಆರ್. ರತ್ನ, ಉಪೇಂದ್ರಕುಮಾರ್. ರಾಜೀವ್ ತಾರಾನಾಥ್, ಬಿ.ವಿ.ಕಾರಂತ್, ಎಲ್.ವೈದ್ಯನಾಥನ್, ಸಿ. ಅಶ್ವತ್, ಅವರುಗಳು, ಸಾಮಾನ್ಯವಾಗಿ ಹೊಸ ಶೈಲಿಯಲ್ಲಿ ಹೊಸ ಅಲೆಯ ಚಿತ್ರಗಳೊಂದಿಗೆ ಗುರುತಿಸಿ ಕೊಂಡ ಪ್ರತಿಭೆಗಳು. ಕನ್ನಡಕ್ಕೆ ಸಂಪೂರ್ಣ ಹೊಸತನ್ನು ನೀಡಬೇಕೆಂದು, ನವ್ಯ ಸಾಹಿತ್ಯದೊಂದಿಗೆ ನವ್ಯ ಶೈಲಿಯ ಹಾಡುಗಳನ್ನು ಸಂಯೋಜಿಸಿ ಅತ್ಯಂತ ಜನ ಪ್ರಿಯತೆಗಳಿಸಿರುವ ವ್ಯಕ್ತಿ ಹಂಸಲೇಖ. ಕಳೆದ ಒಂದು ದಶಕದಲ್ಲಿ ಅವರು ಅಸಂಖ್ಯಾತ ಚಿತ್ರಗಳಿಗೆ ತಮ್ಮ ಸೇವೆ ಸಲ್ಲಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ವಿ.ಮನೋಹರ್, ರಾಜೇಶ್ ರಾಮನಾಥ್, ಗುರುಕಿರಣ್, ಕೆ.ಕಲ್ಯಾಣ್, ಎಸ್.ಗೋವರ್ಧನ್ ಮುಂತಾದವರು ಬೆಳಕಿಗೆ ಬಂದಿದ್ದಾರೆ. ಮಲ್ಲಿಕಾರ್ಜುನ ಮನ್ಸೂರವರು ಚಂದ್ರಹಾಸ ಸೇರಿದಂತೆ ಕೆಲವು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ಕನ್ನಡಚಿತ್ರಗಳಿಗೆ ಹಿನ್ನೆಲೆ ಗಾಯನದಲ್ಲಿ ಪಿ.ಸುಶೀಲ, ಎಸ್.ಜಾನಕಿ, ಪಿ.ಬಿ.ಶ್ರೀನಿವಾಸ್, ಬಾಲಮುರಳಿ ಕೃಷ್ಣ, ಎಸ್.ಪಿ, ಬಾಲಸುಬ್ರಹ್ಮಣ್ಯಂ, ಭೀಮಸೇನಜೋಶಿ, ಡಾ.ರಾಜಕುಮಾರ್, ಕಸ್ತೂರಿ ಶಂಕರ್, ವಾಣಿ ಜಯರಾಂ, ಜೇಸುದಾಸ್, ಸಿ.ಅಶ್ವತ್, ಎಲ್. ಆರ್.ಈಶ್ವರಿ, ರಾಜಕುಮಾರ್ ಭಾರತಿ, ಶಿವಮೊಗ್ಗ ಸುಬ್ಬಣ್ಣ, ಮಂಜುಳಾ ಗುರುರಾಜ್, ಬಿ.ಕೆ.ಸುಮಿತ್ರ, ಬಿ.ಆರ್.ಛಾಯಾ, ಬಿ.ಜಯಶ್ರಿ, ಕಸ್ತೂರಿ ಶಂಕರ್ ಮತ್ತು ಇನ್ನೂ ಅನೇಕರು ತಮ್ಮ ಕಂಠದಾನವಿತ್ತು ಚಿತ್ರಸಂಗೀತ ವನ್ನು ಇಂಪುಗೊಳಿಸಿದ್ದಾರೆ.

ಫಿಲ್ಮ್‌ ಸ್ಟುಡಿಯೋಗಳು : ಮುಂಚಿನ ದಿನಗಳಲ್ಲಿ, ಸಾಮಾನ್ಯವಾಗಿ ಕನ್ನಡ ಚಿತ್ರಗಳನ್ನು ನಿರ್ಮಿಸಲು, ಸ್ಟುಡಿಯೋ ಸೌಲಭ್ಯಬೇಕಿದ್ದಲ್ಲಿ ಹೊರರಾಜ್ಯಗಳಿಗೆ, ಹೆಚ್ಚಾಗಿ ಮದ್ರಾಸಿಗೆ ಹೋಗಬೇಕಾಗಿತ್ತು. ಮೂಕ ಚಿತ್ರಗಳ ಕಾಲದಲ್ಲಿ 1930ರಲ್ಲಿ ಅಸ್ತಿತ್ವಕ್ಕೆ ಬಂದ ಸೂರ್ಯ ಫಿಲಂ ಕಂಪೆನಿ ಸು. 30-40 ಮೂಕ ಚಿತ್ರಗಳನ್ನು ತಯಾರಿಸಿ ವಾಕ್ಚಿತ್ರಗಳು ಬಂದ ಮೇಲೆ, ಅವುಗಳಿಗೆ ಬೇಕಾದ ಸಲಕರಣೆಗಳನ್ನು ಹೊಂದಿಸಲಾಗದೆ 1935ರ ಹೊತ್ತಿಗೆ ಮುಚ್ಚಬೇಕಾಯಿತು. ಭಾರತದ ಚಲನಚಿತ್ರ ಇತಿಹಾಸಕಾರರು ದಾಖಲೆ ಮಾಡಿರುವ ಎಲ್ಲ ಪುಸ್ತಕಗಳಲ್ಲಿ ಸೂರ್ಯ ಫಿಲಂ ಕಂಪೆನಿಯ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. 1936ರಲ್ಲಿ, ವಿ.ಆರ್.ತಿಮ್ಮಯ್ಯ, ಎಂಬ ಉದ್ದಿಮೆದಾರರು ಮೈಸೂರು ಸೌಂಡ್ ಸ್ಟುಡಿಯೊ ಎಂಬ ಹೆಸರಿನಲ್ಲಿ ಚಿತ್ರ ನಿರ್ಮಾಣಕ್ಕಾಗಿ ಬೆಂಗಳೂರಿನಲ್ಲಿ ಸ್ಟುಡಿಯೊ ಸ್ಥಾಪಿಸಿದರು. ಕೇವಲ ಎರಡು, ಮೂರು ಚಿತ್ರಗಳು ತಯಾರು ಮಾಡಲು ಚಟುವಟಿಕೆಗಳು ನಡೆದವು. ರಾಜಸೂಯಯಾಗ ಎಂಬ ಚಿತ್ರವು ಸಂಪೂರ್ಣವಾಗಿ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಇದೇ ಸ್ಟುಡಿಯೊದಲ್ಲಿ ತಯಾರಾದ ಚಿತ್ರವಾಯಿತು. ಕಾರಣಾಂತರಗಳಿಂದ ಈ ಸ್ಟುಡಿಯೊ ಕೂಡ ಬಹು ಬೇಗ ಮುಚ್ಚಿಹೋಯಿತು. ಮತ್ತೊಂದು ಸ್ಟುಡಿಯೊ ಮೈಸೂರು ಮೂವಿಟೋನ್, ಹೆಸರಿನಲ್ಲಿ 1942ರಲ್ಲಿ ಮತ್ತೆ ಮೈಸೂರಿನಲ್ಲಿ ಪ್ರಾರಂಭವಾಗಿ ಯಾವ ಚಿತ್ರವೂ ನಿರ್ಮಾಣವಾಗದೆ ಬಹುಬೇಗ ಸ್ಥಗಿತಗೊಂಡಿತು. ಮೈಸೂರಿನಲ್ಲಿ ಸ್ಟುಡಿಯೊ ಸ್ಥಾಪಿಸುವ ಈ ಸಾಹಸವನ್ನು ಮುಂದುವರಿಸಿದವರು ಜಿ.ಆರ್.ರಾಮಯ್ಯನವರು. ಸ್ವತಃ ಯಶಸ್ವಿ ವಾಣಿಜ್ಯೋದ್ಯಮಿಗಳಾಗಿದ್ದ, ವಾಣಿಚಿತ್ರ ನಿರ್ಮಾಣದ ತಂಡದಲ್ಲಿ ಒಬ್ಬರಾಗಿದ್ದ ರಾಮಯ್ಯನವರು 1946ರಲ್ಲಿ ಮೈಸೂರಿನಲ್ಲಿ ನವಜ್ಯೋತಿ ಸ್ಟುಡಿಯೊ ಸ್ಥಾಪಿಸಿದರು. ಕರ್ನಾಟಕದಲ್ಲಿ ಮೊದಲ ಬಾರಿಗೆ ಚಟವಟಿಕೆಯಿಂದ ಕಾರ್ಯನಿರತವಾಗಿ, ಸುಪ್ರಸಿದ್ಧ ಮಹಾತ್ಮಾ ಸಂಸ್ಥೆಯವರ ಕೃಷ್ಣ ಲೀಲಾ, ಭಾರತಿ, ಜಗನ್ಮೋಹಿನಿ, ನಾಗಕನ್ನಿಕಾ, ದಳ್ಳಾಳಿ, ಕನ್ಯಾದಾನ ಮುಂತಾದ ಚಿತ್ರಗಳೂ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಚಿತ್ರಗಳು ಈ ಸ್ಟುಡಿಯೊದಲ್ಲಿ ತಯಾರಾದವು. ಸ್ಟುಡಿಯೊ ಆಡಳಿತವರ್ಗದಲ್ಲಿನ ಆರ್ಥಿಕ ಮುಗ್ಗಟ್ಟಿನಿಂದಾಗಿ ಈ ಸ್ಟುಡಿಯೊ 1953ರ ಹೊತ್ತಿಗೆ ನಿಷ್ಕ್ರಿಯವಾಗಿ, 1960ರ ಹೊತ್ತಿಗೆ ಸಂಪೂರ್ಣವಾಗಿ ಸ್ಥಗಿತವಾಯಿತು. ಇದೇ ಸಮಯದಲ್ಲಿ ಅಂದರೆ 1954ರ ಹೊತ್ತಿಗೆ ಮೈಸೂರಿನಲ್ಲಿ ಎಂ.ಎನ್.ಬಸವರಾಜಯ್ಯನವರು ಪ್ರೀಮಿಯರ್ ಸ್ಟುಡಿಯೊ ಪ್ರಾರಂಭಿಸಿದರು. ಒಂದು ಫ್ಲೋರಿನ ಅಂತಸ್ತಿನಲ್ಲಿ ಪ್ರಾರಂಭವಾದ ಈ ಸ್ಟುಡಿಯೊ ಕ್ರಮೇಣ ಬೆಳೆಯತೊಡಗಿತು. 1966-67ರಲ್ಲಿ ಕರ್ನಾಟಕದಲ್ಲಿ ತಯರಾಗುವ ಚಿತ್ರಗಳಿಗೆ ಸರ್ಕಾರದಿಂದ ಸಹಾಯ ಧನದ ಯೋಜನೆ ಜಾರಿಗೆ ಬಂತು. ಈ ಪ್ರೋತ್ಸಾಹದಿಂದ ಉತ್ತೇಜಿತಗೊಂಡ ಹಲವಾರು ನಿರ್ಮಾಪಕರು ಚಿತ್ರನಿರ್ಮಾಣದಲ್ಲಿ ತೊಡಗಿಸಿಕೊಂಡರು ಮತ್ತು ಬಸವರಾಜಯ್ಯ ಅವರು ಕೂಡ ಮುಂಗಡ ಹಣ ಕೇಳದೆ ಸರ್ಕಾರದ ಸಹಾಯಧನ ಬರುವವರೆಗೂ ಕಾಯಲು ಒಪ್ಪಿ, ಸ್ಟುಡಿಯೊದಲ್ಲಿ ಚಿತ್ರವನ್ನು ಷೂಟಿಂಗ್ ಮಾಡಲು ಅವಕಾಶ ಮಾಡಿಕೊಡುತ್ತಿದ್ದರು. ಇಷ್ಟೊಂದು ಸೌಲಭ್ಯಗಳು ಚಿತ್ರ ನಿರ್ಮಾಪಕರಿಗೆ ಹಿಂದೆಂದೂ ಸಿಕ್ಕಿರಲಿಲ್ಲವಾಗಿ, ಪ್ರೀಮಿಯರ್ ಸ್ಟುಡಿಯೋದಲ್ಲಿ ಬಿಡುವಿಲ್ಲದಂತೆ ಕನ್ನಡ ಹಾಗೂ ಪರಭಾಷಾ ಚಿತ್ರಗಳು ತಯಾರಾಗುವುದು ಸಾಮಾನ್ಯವಾದ ಸಂಗತಿಯಾಗಿ ಹೋಯಿತು. ಒಂದರಿಂದ ಎರಡು, ಮೂರು, ನಾಲ್ಕು, ಐದು ಮತ್ತು ಆರನೇ ಫ್ಲೋರ್ ಕೂಡ ಕಟ್ಟಲಾಯಿತು. 1980ರಲ್ಲಿ ಸರ್ಕಾರ ಸಹಾಯಧನವನ್ನು ಕನ್ನಡ ಚಿತ್ರಗಳಿಗೆ ಮಾತ್ರ ಸೀಮಿತಗೊಳಿಸಿತು ಮತ್ತು ಚಿತ್ರಗಳು ಹೆಚ್ಚಾಗಿ ವರ್ಣದಲ್ಲಿ ಬರಲು ಪ್ರಾರಂಭವಾಯಿತು. ಈ ಕಾರಣಗಳಿಂದಾಗಿ ಪ್ರೀಮಿಯರ್ ಸ್ಟುಡಿಯೊದಲ್ಲಿ ಚಿತ್ರೋತ್ಪಾದನೆ ಕ್ರಮೇಣ ಕಡಿಮೆಯಾಗತೊಡಗಿತು. ಇದರ ಜೊತೆಗೆ 1989ರಲ್ಲಿ ಒಂದು ಭಾರೀ ಬೆಂಕಿ ಅನಾಹುತವೂ ಜರುಗಿತು. ಪ್ರೀಮಿಯರ್ ಸ್ಟುಡಿಯೊ ಮುಂಚಿನ ವಿಜೃಂಭಣೆಯನ್ನು ಕಳೆದುಕೊಂಡಿತು. ಕರ್ನಾಟಕದಲ್ಲಿ ಮೊದಲಬಾರಿಗೆ ಸತತವಾಗಿ ಸು. ಮುನ್ನೂರು ಚಿತ್ರಗಳನ್ನು ನಿರ್ಮಾಣಮಾಡಲು ಅವಕಾಶಮಾಡಿಕೊಟ್ಟ ಖ್ಯಾತಿ ಪ್ರೀಮಿಯರ್ ಸ್ಟುಡಿಯೊಗೆ ಸೇರಬೇಕು.

ಬೆಂಗಳೂರಿನಲ್ಲಿ ಸ್ಟುಡಿಯೊ ಸ್ಥಾಪಿಸಬೇಕೆಂಬ ಹಂಬಲ ಬಹು ಮಂದಿಗೆ ಮೊದಲಿನಿಂದಲೂ ಇತ್ತು, 1958ರಲ್ಲಿ ಈ ನಿಟ್ಟಿನಲ್ಲಿ ಡಾ.ಎಂ.ರಾಮದಾಸ್ ಎಂಬುವರು ಪ್ರಯತ್ನಮಾಡಿ 40 ಎಕರೆ ಜಮೀನಿನಲ್ಲಿ ಓಂಕಾರ್ ಸ್ಟುಡಿಯೊ ಸ್ಥಾಪಿಸಿ, ಹಲವು ಚಿತ್ರಗಳ ಷೂಟಿಂಗ್ ಕೂಡ ನಡೆದ ಮೇಲೆ ಮುಚ್ಚಬೇಕಾಯಿತು. 1966, ಮಾರ್ಚ್ನಲ್ಲಿ ಶ್ರೀ ಕಂಠೀರವ ಸ್ಟುಡಿಯೊ ಸ್ಥಾಪಿತವಾಯಿತು. ಎರಡು ಫ್ಲೋರ್ಗಳಿದ್ದ ಈ ಸಂಸ್ಥೆಯಲ್ಲಿ ಕರ್ನಾಟಕ ಸರ್ಕಾರ ಕೂಡ ಷೇರುಗಳಲ್ಲಿ ತನ್ನ ಬಂಡವಾಳವನ್ನು ಹೂಡಿತ್ತು. 1974ರ ಹೊತ್ತಿಗೆ ಕರ್ನಾಟಕ ಚಲನಚಿತ್ರ ಅಭಿವೃದ್ಧಿ ಅಸ್ತಿತ್ವಕ್ಕೆ ಬಂದಿದ್ದರಿಂದ ಕಂಠೀರವ ಸ್ಟುಡಿಯೊವಿನ ವಿಕಾಸಕ್ಕೆ ಹೆಚ್ಚು ಮುತುವರ್ಜಿ ವಹಿಸಿತು. 1980ರಲ್ಲಿ ಸರ್ಕಾರ ಈ ಸ್ಟುಡಿಯೊವಿನ ಸಂಪೂರ್ಣ ಅಧಿಕಾರವನ್ನು ವಹಿಸಿಕೊಂಡಿತು. ಅಲ್ಲಿಂದೀಚೆಗೆ ಈ ಸ್ಟುಡಿಯೊ ಸರ್ಕಾರದ ಆಡಳಿತದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

1969ರಲ್ಲಿ ಸ್ಥಾಪಿತವಾದ ಚಾಮುಂಡೇಶ್ವರಿ ಸ್ಟುಡಿಯೊ ಇಂದಿಗೂ ಕೆಲಸಮಾಡುತ್ತಿದೆ. ಮುಂಚಿನ ದಿನಗಳಲ್ಲಿ ಚಿತ್ರೀಕರಣವೂ ನಡೆಯುತ್ತಿತ್ತು. ಈಗ ಡಬ್ಬಿಂಗ್, ರೆಕಾರ್ಡಿಂಗ್, ರಿ-ರೆಕಾರ್ಡಿಂಗ್, ಸಂಸ್ಕರಣ, ಹವಾನಿಯಂತ್ರಿತ ಉಗ್ರಾಣ, ಈ ಸೌಲಭ್ಯಗಳನ್ನು ಒದಗಿಸಿ ಅಚ್ಚುಕಟ್ಟಾದ ಸೇವೆ ಕೊಡುತ್ತಾ ಬಂದಿದೆ. ತನ್ನ ಜೀವನದ ಗುರಿ, ಎಂದು ಸಾಹಸ ಮಾಡಿ, ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಟಿ.ಎನ್. ಬಾಲಕೃಷ್ಣರವರು ಕೆಂಗೇರಿಯ ಬಳಿ 1965ರಲ್ಲಿ ಪ್ರಾರಂಭಿಸಿದ ಅಭಿಮಾನ್ ಸ್ಟುಡಿಯೊ, ಹಲವಾರು ಕಾರಣಗಳಿಗೆ, ಆಗಾಗ್ಗೆ ಸುದ್ದಿ ಮಾಡಿ, ಇಂದಿಗೂ ಅಸ್ತಿತ್ವದಲ್ಲಿದೆ. ಈ ಮಧ್ಯೆ, ಸಾಗರ್ ಸುಜಾತಾ ಸ್ಟುಡಿಯೊ, ಬೆಂಗಳೂರು ಫಿಲಂ ಲ್ಯಾಬೊರೆಟರಿ, ಮಧು ಆರ್ಟ್ ಸ್ಟುಡಿಯೊ, ಇವುಗಳು ಅಸ್ತಿತ್ವಕ್ಕೆ ಬಂದು ಕೆಲಸ ಮಾಡಿದವು .

ವಸಂತ್ ಕಲರ್ ಲ್ಯಾಬ್, ಸಂಕೇತ್ ಎಲೆಕ್ಟ್ರಾನಿಕ್ಸ್‌, ಆಕಾಶ್ ಸ್ಟುಡಿಯೊ, ವಿಜಯ ಆಡಿಯೋಸ್ ಡಿಜಿಟಲ್ ರೆಕಾರ್ಡಿಂಗ್ ಸೆಂಟರ್, ರಾವ್ಕೊ ಎಫೆಕ್ಟ್‌್ಸ ಸರ್ವೀಸ್ ಲ್ಯಾಬೊರೆಟರಿ, ಅರುಣ ಡಿಜಿ ಆಡಿಯೊ, ಅರವಿಂದ್ ಸ್ಟುಡಿಯೊ, ಬಿ.ಸಿ.ಆರ್.ಸಿ. ಡಬ್ಬಿಂಗ್ ಥಿಯೇಟರ್, ಲಕ್ಷ್ಮಿ ಎಡಿಟಿಂಗ್ ರೂಂ, ಈ ಸಂಸ್ಥೆಗಳು ಸಂಕಲನ, ಧ್ವನಿ ಮುದ್ರಣ, ಸಂಸ್ಕರಣ ಮುಂತಾದ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮಾಡಿರುವ, ಮತ್ತು ಹಲವು ಮಾಡುತ್ತಿರುವ ಸಂಸ್ಥೆಗಳು. ಸಂಕೇತ್ ಎಲೆಕ್ಟ್ರಾನಿಕ್ಸ್‌ ಈಗ ಸ್ಥಗಿತವಾಗಿದೆ.

ಪ್ರಸಾದ್ ಫಿಲಂ ಲ್ಯಾಬೊರೆಟರಿ, ಬೆಂಗಳೂರಿನಲ್ಲಿ ಸ್ಥಾಪನೆಯಾದ ಮೇಲೆ, 16,35, 70 ಎಂ.ಎಂ. ಚಿತ್ರಗಳ ಸಂಸ್ಕರಣ, ಸಂಕಲನ, ವಿಡಿಯೊ ಚಿತ್ರಗಳ ನಿರ್ಮಾಣಕ್ಕೆ ಬೇಕಾದ ಎಲ್ಲ ಸುಸಜ್ಜಿತ ಸೌಕರ್ಯ, ಧ್ವನಿಗ್ರಹಣ, ಈ ಎಲ್ಲ ಕ್ಷೇತ್ರಗಳಲ್ಲೂ ಅತ್ಯಾಧುನಿಕ ತಂತ್ರe್ಞÁನದ ಅಳವಡಿಕೆಯಿಂದಾಗಿ ಪ್ರಸಾದ್ ಲ್ಯಾಬ್ ಒಂದು ಉತ್ತಮ ಸಂಸ್ಥೆ ಯಾಗಿ ಕಾರ್ಯ ನಿರ್ವಹಿಸುತ್ತಿದೆ.

ಕರ್ನಾಟಕದಲ್ಲಿ ಫಿಲಂ ಸೊಸೈಟಿಗಳು : ಉತ್ತಮ ಗುಣಮಟ್ಟದ, ಕಲಾತ್ಮಕ, ಸದಭಿರುಚಿ ಚಿತ್ರಗಳನ್ನು, ಪ್ರಪಂಚದ ಎಲ್ಲ ಭಾಗಗಳಿಂದ, ಫೆಡರೇಶನ್ ಆಫ್ ಫಿಲಂ ಸೊಸೈಟೀಸ್ ಆಫ್ ಇಂಡಿಯದ ಸಹಾಯದಿಂದ ಪಡೆದು ಸದಸ್ಯರುಗಳಿಗೆ ಪ್ರದರ್ಶಿಸುವುದು ಫಿಲಂ ಸೊಸೈಟಿಗಳ ಉದ್ದೇಶ.

ಭಾರತದಲ್ಲಿ ಚಲನಚಿತ್ರ ಸಮಾಜಗಳ ಹಿತಾಸಕ್ತಿಗಳನ್ನು ನೋಡಿಕೊಳ್ಳುವ ಸಂಸ್ಥೆಯಾದ ಫೆಡರೇಷನ್ ಆಫ್ ಫಿಲ್ಮ್‌ ಸೊಸೈಟೀಸ್ ಆಫ್ ಇಂಡಿಯಾ, 1959ರಲ್ಲಿ, ಖ್ಯಾತ ಚಿತ್ರನಿರ್ದೇಶಕ ಸತ್ಯಜಿತ್ ರಾಯ್ ರವರ ಅಧ್ಯಕ್ಷತೆಯಲ್ಲಿ ಸ್ಥಾಪಿತವಾಯಿತು. ಕಲ್ಕತ್ತ, ದೆಹಲಿ, ಮುಂಬಯಿ, ಮದರಾಸುಗಳಲ್ಲಿ 1950 ದಶಕದಲ್ಲಿಯೇ ಫಿಲಂಸೊಸೈಟಿಗಳು ಚಟುವಟಿಕೆಗಳನ್ನು ಪ್ರಾರಂಭಿಸಿದ್ದವು. ಆದರೆ ಕರ್ನಾಟಕಕ್ಕೆ ಈ ಒಂದು ಚಟುವಟಿಕೆ ಬಂದದ್ದು ಸ್ವಲ್ಪ ತಡವಾಯಿತು. 1964ರಲ್ಲಿ ಬೆಂಗಳೂರಿನಲ್ಲಿ ಫಿಲಂ ಸೊಸೈಟಿ ಆಫ್ ಬೆಂಗಳೂರು, ಎಂಬ ಸಂಸ್ಥೆ ಅಸ್ತಿತ್ವಕ್ಕೆ ಬಂತು. ವಿ.ಎನ್, ಸುಬ್ಬರಾವ್ ಮತ್ತು ಎಂ.ವಿ.ಕೃಷ್ಣಸ್ವಾಮಿ ಅವರು ಈ ಸಂಸ್ಥೆಯ ಕಾರ್ಯದರ್ಶಿಗಳಾಗಿದ್ದರು. ಈ ಸಂಸ್ಥೆಯ ಉದ್ಘಾಟನೆ ಸಂದರ್ಭದಲ್ಲಿ ಪತ್ರಕರ್ತ ಎಂ.ಬಿ.ಸಿಂಗ್ ಕನ್ನಡ ಹಾಗೂ ಭಾರತೀಯ ಚಲನಚಿತ್ರ ಇತಿಹಾಸ ನಿರೂಪಿಸುವ ಛಾಯಾಚಿತ್ರಗಳ ಪ್ರದರ್ಶನ ವ್ಯವಸ್ಥೆಗೊಳಿಸಿದ್ದರು. ಒಂದು ವರ್ಷದಲ್ಲಿ ಈ ಸಂಸ್ಥೆ ಸ್ಥಗಿತವಾಗಿ, ಮತ್ತೆ 1969ರಲ್ಲಿ ಮಯೂರ ಫಿಲಂ ಸೊಸೈಟಿ ಸ್ಥಾಪಿತವಾಯಿತು. ಕರ್ನಾಟಕದಲ್ಲಿ ಮೊದಲ ಬಾರಿಗೆ ಅತ್ಯಂತ ಉತ್ಸಾಹದಿಂದ ಚಟುವಟಿಕೆಗಳನ್ನು ನಿರ್ವಹಿಸಿದ ಈ ಸಂಸ್ಥೆ ಪ್ರಪಂಚದ ಅನೇಕ ದೇಶಗಳ ಚಿತ್ರಗಳನ್ನು ತನ್ನ ಸದಸ್ಯರಿಗೆ ಪ್ರದರ್ಶನ ಮಾಡಿ, ಹೆಸರು ಮಾಡಿತು. ಕರ್ನಾಕದಲ್ಲಿ ಚಲನಚಿತ್ರ ಸಮಾಜಗಳ ಬೆಳೆವಣಿಗೆಗೆ ಭದ್ರವಾದ ಬುನಾದಿ ಹಾಕಿದ ಹಿರಿಮೆ ಈ ಸೊಸೈಟಿಗೆ ಸೇರಬೇಕು. ಐದು ವರ್ಷಗಳು ಸತತವಾಗಿ ಕೆಲಸ ಮಾಡಿ ಕಾರಣಾಂತರಗಳಿಂದ ನಿಷ್ಕ್ರಿಯವಾಯಿತು. ಈ ಸಂಸ್ಥೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ ವ್ಯಕ್ತಿಗಳು, ಡಾ. ಎಂ.ಎನ್.ಶ್ರೀನಿವಾಸ್, ಎಂ.ಬಿ.ಎಸ್.ಪ್ರಸಾದ್, ಎಸ್.ರಾಮಮೂರ್ತಿ ಮತ್ತಿತರರು.

1971ರಲ್ಲಿ, ಹೆಚ್.ಎನ್.ನರಹರಿರಾವ್, ಮತ್ತು ಎಸ್.ರಾಘವೇಂದ್ರರಾವ್ ಎಂಬುವರು, ಬೆಂಗಳೂರಿನ ಚಾಮರಾಜಪೇಟೆಯ ಒಂದು ಕೊಠಡಿಯಲ್ಲಿ, ಬಿ.ಎನ್.ನಾರಾಯಣ್ (ಮೇಕಪ್ ನಾಣಿ) ರವರ ಅಧ್ಯಕ್ಷತೆಯಲ್ಲಿ ಸುಚಿತ್ರ ಫಿಲಂ ಸೊಸೈಟಿಯನ್ನು ಸ್ಥಾಪಿಸಿದರು. ಈ ಸಂಸ್ಥೆ, ವರ್ಷ ವರ್ಷಕ್ಕೆ ತನ್ನ ಚಟುವಟಿಕೆಗಳನ್ನು ವೃದ್ಧಿಸಿಕೊಂಡು ಭಾರತದಲ್ಲಿಯೇ ಒಂದು ಮಾದರಿ ಫಿಲಂ ಸೊಸೈಟಿಯಾಗಿ ಬೆಳೆಯಿತು. ಮೂವತ್ತೈದು ವರ್ಷಗಳು ಸತತವಾಗಿ ಸೇವೆ ಸಲ್ಲಿಸಿ, ಬೆಂಗಳೂರಿನಲ್ಲಿ, ಬನಶಂಕರಿ 2ನೇ ಹಂತದಲ್ಲಿ, ಸರ್ಕಾರ ಕೊಟ್ಟರುವ ನಿವೇಶನದಲ್ಲಿ ತನ್ನದೇ ಆದ ಕಿರು ಚಿತ್ರಮದಿರವನ್ನು ಕಟ್ಟಿ ಇಂದಿಗೂ ಒಂದು ಮಾದರಿ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ. ಮೂವತ್ತು ವರ್ಷಗಳು, ಸತತವಾಗಿ, ಮೊದಲು ಕಾರ್ಯದರ್ಶಿಯಾಗಿ, ನಂತರ ಉಪಾಧ್ಯಕ್ಷರಾಗಿ, ಮತ್ತು ಅಧ್ಯಕ್ಷರೂ ಆಗಿ, ಕಾರ್ಯ ನಿರ್ವಹಿಸಿ, ಈ ಸಂಸ್ಥೆಯ ಬೆಳವಣಿಗೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಹೆಚ್. ಎನ್. ನರಹರಿರಾವ್ ರವರು ಇಂದು ಫೆಡರೇಶನ್ ಆಫ್ ಫಿಲಂ ಸೊಸೈಟೀಸ್ ಆಫ್ ಇಂಡಿಯಾದ ದಕ್ಷಿಣ ವಿಭಾಗದ ಉಪಾಧ್ಯಕ್ಷರಾಗಿ, 2002 ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂದು ಭಾರತದಲ್ಲಿ ಫಿಲಂಸೊಸೈಟಿ ಕ್ಷೇತ್ರದಲ್ಲಿ ಅಪಾರ ಅನುಭವವುಳ್ಳ ಅತ್ಯಂತ ಹಿರಿಯ ವ್ಯಕ್ತಿಗಳಲ್ಲಿ ಒಬ್ಬರಾಗಿ ಇಂದಿಗೂ ಕಾರ್ಯ ನಿರತರಾಗಿದ್ದಾರೆ. ಫಿಲಂ ಸೊಸೈಟಿ ಕೈಪಿಡಿ (ಈiಟm Soಛಿieಣಥಿ ಊಚಿಟಿಜbooಞ), ಒಥಿ ಆಚಿಥಿs ತಿiಣh ಣhe ಈiಟm Soಛಿieಣಥಿ ಒovemeಟಿಣ, ಂ gಟimಠಿse oಜಿ ಏಚಿಟಿಟಿಚಿಜಚಿ ಛಿiಟಿemಚಿ (ಎಂ.ವಿ.ರಾಮಕೃಷ್ಣಯ್ಯನವರ ಸಹಯೊಗದೊಂದಿಗೆ), ಪುಸ್ತಕಗಳನ್ನು ರಚಿಸಿ, ಚಿತ್ರ ವಿಮರ್ಶಕರಾಗಿ, ಭಾರತೀಯ ಪನೋರಮ, ಮುಂಬಯಿ, ಪೂಸಾನ್ (ಕೊರಿಯ), ಬ್ಯಾಂಕಾಕ್ (ಥಾಯ್ಲೆಂಡ್), ಕಾರ್ಲೊವಿವಾರಿ (ಚೆಕ್), ಓಬರ್ ಹಾಸನ್ (ಜರ್ಮನಿ) ಅಂತರ ರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ಎರಡು ದಶಕಗಳಿಗೂ ಮೀರಿ ಕೆಲಸಮಾಡುತ್ತಿರುವ ಮತ್ತೊಂದು ಸೊಸೈಟಿ ಬೆಂಗಳೂರು ಫಿಲಂ ಸೊಸೈಟಿ. 1970 ಮತ್ತು 80ರ ದಶಕಗಳಲ್ಲಿ, ಕರ್ನಾಟಕದಲ್ಲಿ ಸು. 25 ಸೊಸೈಟಿಗಳು ಕಾರ್ಯನಿರತವಾಗಿದ್ದವು. ಕಾರಣಾಂತರಗಳಿಂದ ಕೆಲವನ್ನು ಬಿಟ್ಟು ಮಿಕ್ಕೆಲ್ಲವೂ ನಿಷ್ಕ್ರಿಯವಾದುವು. ಬೆಂಗಳೂರಿನಲ್ಲಿ ಹಲವಾರು ವರ್ಷಗಳು ಕೆಲಸ ಮಾಡಿ ಸ್ಥಗಿತಗೊಂಡ ಸೊಸೈಟಿಗಳೆಂದರೆ, ವೀಕ್ಷಕ, ಚೈತ್ರ, ಚಿತ್ರ ಸಮುದಾಯ, ಆರಾಧನ, ರಾಮನ್ ಇನ್ಸಿಟ್ಯೂಟ್ ಫಿಲಂ ಕ್ಲಬ್ ಮುಂತಾದವು. ಚಿತ್ರ ಫಿಲಂ ಸೊಸೈಟಿ ಧಾರವಾಡ, ಹಾಗೂ ಸಿ.ಎಫ್.ಟಿ.ಆರ್.ಐ. ಮೈಸೂರು ಫಿಲಂ ಸೊಸೈಟಿ, ಮೈಸೂರು, ಈ ಎರಡು ಸೊಸೈಟಿಗಳು 1970ರ ದಶಕದ ಆದಿಯಲ್ಲೇ ಪ್ರಾರಂಭವಾದವು. ಚಿತ್ರ ಫಿಲಂ ಸೊಸೈಟಿ ಕೆಲವು ವರ್ಷಗಳು ಸ್ಥಗಿತಗೊಂಡು, ಈಗ ಮತ್ತೆ ಕಾರ್ಯನಿರತವಾಗಿದೆ. ನೀನಾಸಂ ಚಿತ್ರ ಸಮಾಜ, ಹೆಗ್ಗೋಡು, ಪ್ರತಿಮಾ ಚಿತ್ರಕೂಟ, ದಾವಣಗೆರೆ, ಈ ಸೊಸೈಟಿಗಳು ಕೂಡ ಉತ್ತಮ ಸೇವೆ ಸಲ್ಲಿಸಿವೆ.

ಹಾಲಿ ಇಂದು, 2006ರಲ್ಲಿ, ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಸೊಸೈಟಿಗಳೆಂದರೆ, ಸುಚಿತ್ರ, ಬೆಂಗಳೂರು, ಬೆಂಗಳೂರು ಫಿಲಂ ಸೊಸೈಟಿ, ಬೆಂಗಳೂರು, ಕಲೆಕ್ಟಿವ್ ಖೇವೋಸ್, ಬೆಂಗಳೂರು, ಚಿತ್ರಾ, ಧಾರವಾಡ, ಅಜಂತಾ, ಬೆಳಗಾವಿ, ಮತ್ತು ಮೈಸೂರು ಫಿಲಂ ಸೊಸೈಟಿ, ಮೈಸೂರು. ಬೆಂಗಳೂರಿನಲ್ಲಿ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತರುವ, ಕಲೆಕ್ಟಿವ್ ಖೆವೋಸ್ ಸೊಸೈಟಿ, ಉತ್ತಮ ಚಿತ್ರಗಳ ಬಗ್ಗೆ ಅಪಾರ ಆಸಕ್ತಿ ಉಳ್ಳ ಯುವಕರುಗಳು ಹೊಸ ಮಾದರಿಯಲ್ಲಿ ನಡೆಸುತ್ತಿರುವ ಒಂದು ಮೆಚ್ಚಿಕೊಳ್ಳುವಂತಹ ಪ್ರಯೋಗ. ಡಿವಿಡಿ (ಆಗಿಆ), ವಿನ್ಯಾಸದಲ್ಲಿ ಬರುವ ಚಿತ್ರಗಳನ್ನು ಆಯ್ದು ಅವುಗಳನ್ನು ಪುಟ್ಟ ಎಲ್.ಸಿ.ಡಿ ಪ್ರೊಜೆಕ್ಚಟರುಗಳಲ್ಲಿ ದೊಡ್ಡ ಗಾತ್ರದ ಬಿಂಬಗಳನ್ನು ಪ್ರದರ್ಶಿಸುವ ಮೂಲಕ ಈ ಸೊಸೈಟಿ ಹೊಸ ಪೀಳಿಗೆಯ ಯುವಕರನ್ನು ಆಕರ್ಷಿಸಿ ಫಿಲಂ ಸೊಸೈಟಿ ಚಟುವಟಿಕೆಗೆ ಒಂದು ಹೊಸ ಆಯಾಮವನ್ನು ಕೊಡುವಲ್ಲಿ ಯಶಸ್ಸು ಗಳಿಸಿದ್ದಾರೆ.

ಚಲನಚಿತ್ರದಲ್ಲಿ ತರಬೇತಿ : ಕರ್ನಾಟಕದಲ್ಲಿ ಚಲನಚಿತ್ರದ ಬಗ್ಗೆ ತರಬೇತಿ ಪಡೆಯಲು ಕೆಲವು ಸೌಕರ್ಯಗಳಿವೆ. ಕರ್ನಾಟಕದಲ್ಲಿ 1940ರ ದಶಕದಲ್ಲಿ ವೃತ್ತಶಿಕ್ಷಣ ತರಬೇತಿಗಾಗಿ, ಶ್ರೀ ಜಯಚಾಮರಾಜೇಂದ್ರ ವೃತ್ತಿ ಶಿಕ್ಷಣ ಸಂಸ್ಥೆ (ಠಿoಟಥಿಣeಛಿhಟಿiಛಿ) ಪ್ರಾರಂಭವಾಯಿತು. 1944-45ರಲ್ಲಿ ಅನೇಕ ವೃತ್ತ್ತಿಗಳ ಜೊತೆ ಧ್ವನಿಗ್ರಹಣ ಮತ್ತು ಸಿನಿಮಟೊಗ್ರಫಿ ವಿಭಾಗಗಳನ್ನು ಸೇರಿಸಲಾಯಿತು. ಅಂದಿನ ದಿನಗಳಲ್ಲಿ ಸರ್ಕಾರದ ಆಡಳಿತದಲ್ಲಿದ್ದವರಿಗೆ ಎಷ್ಟರಮಟ್ಟಿಗೆ ದೂರದೃಷ್ಟಿ ಇತ್ತು ಎಂಬುದು ಅರಿವಾಗುತ್ತದೆ. ಈ ಒಂದು ಶಿಕ್ಷಣ ಸಂಸ್ಥೆಯಿಂದ ಇದುವರೆಗೆ ಅನೇಕರು ತರಬೇತಿ ಪಡೆದು ತಮ್ಮ ವೃತ್ತಿ ಜೀವನದಲ್ಲಿ ಹೆಸರು ಮಾಡಿದ್ದಾರೆ. ಇವರುಗಳಲ್ಲಿ ಪ್ರತಿಭಾವಂತರಾಗಿ ಚಲನ ಚಿತ್ರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳಲ್ಲಿ ಆರ್.ಎನ್.ಕೃಷ್ಣಪ್ರಸಾದ್, ಆರ್.ಎನ್.ಜಯಗೋಪಾಲ್, ಛಾಯಾಗ್ರಾಹಕರುಗಳಾದ ಲೋಕೇಶ್, ಬಿ.ಎಸ್. ಬಸವಾರಾಜು, ಕುಣಿಗಲ್ ನಾಗಭೂಷಣ್, ಬಿ.ಸಿ.ಗೌರಿಶಂಕರ್, ವಿ.ಕೆ.ಮೂರ್ತಿ, ಹೆಚ್.ಎಂ.ಕೆ.ಮೂರ್ತಿ, ಎಂ.ಬಿ.ಎಸ್.ಪ್ರಸಾದ್ ಮತ್ತು ಇನ್ನೂ ಅನೇಕರು. 1996ರಲ್ಲಿ ಈ ಸಂಸ್ಥೆ ವಿಶ್ವಬ್ಯಾಂಕ್ನ ಆರ್ಥಿಕ ನೆರವಿನೊಂದಿಗೆ, ಹೆಸರು ಘಟ್ಟದ ಬಳಿ ವಿಶಾಲವಾದ ಭೂಮಿಯಲ್ಲಿ ಗೌರ್ನಮೆಂಟ್ ಫಿಲಂ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಎಂಬ ಹೆಸರಿನಲ್ಲಿ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ನಿಂದ ಬೇರ್ಪಟ್ಟು, ಮರು ಸ್ಥಾಪಿತಗೊಂಡಿತು. ಈಗ ಈ ಸಂಸ್ಥೆ ಫಿಲಂ ಮತ್ತು ಟೆಲಿವಿಷನ್ ಕ್ಷೇತ್ರದಲ್ಲಿ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ತಾಂತ್ರಿಕ ತರಬೇತಿ ನೀಡಲಾಗುತ್ತ್ತಿದೆ. ಖಾಸಗಿ ಕ್ಷೇತ್ರದಲ್ಲಿ, 1973ರಲ್ಲಿ ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ಶಿಕ್ಷಣ ಸಂಸ್ಥೆ, ಚಲನಚಿತ್ರ ಅಭಿನಯ, ಹಿನ್ನೆಲೆ ಗಾಯನ, ಚಲನಚಿತ್ರ ನೃತ್ಯ ಇವುಗಳನ್ನು ಕುರಿತು ತರಬೇತಿ ಕೊಡುವ ಸಂಸ್ಥೆಯಾಗಿ ಸ್ಥಾಪಿಸಲಾಯಿತು. ಈ ಸಂಸ್ಥೆಯ ಸಂಸ್ಥಾಪಕರಾಗಿ ಬಿ.ಪಿ.ಆರ್. ಸ್ವಾಮಿ ಯವರು ಅಪಾರ ಸೇವೆಸಲ್ಲಿಸಿದ್ದಾರೆ. ಚಲನಚಿತ್ರ ನಿರ್ಮಾಣ ಕ್ಷೇತ್ರದಲ್ಲಿ ಚಿತ್ರ ತಯಾರಿಕೆಯಲ್ಲಿ ತೊಡಗಿಸಿಕೊಂಡು ಪ್ರತಿಭಾವಂತರಾದ ನಿರ್ದೇಶಕರುಗಳೇ ಈ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ ಇದುವರೆಗೆ ಸೇವೆಸಲ್ಲಿಸಿದ್ದಾರೆ. ಅನೇಕ ನುರಿತ ಪರಿಣಿತರು ತರಬೇತುದಾರರಾಗಿ ಕೆಲಸ ಮಾಡಿದ್ದಾರೆ. ಇಂದು ಈ ಸಂಸ್ಥೆ ಹೆಸರಘಟ್ಟದ ಬಳಿ ತನ್ನದೇ ಆದ ಜಮೀನಿನಲ್ಲಿ ಸ್ವಂತ ಕಟ್ಟಡವನ್ನು ಕಟ್ಟಿಸಿ, ಅಭಿನಯ, ಹಿನ್ನೆಲೆ ಗಾಯನ, ಶಾಸ್ತ್ರೀಯ ನೃತ್ಯ, ಚಲನಚಿತ್ರ ನೃತ್ಯ, ಈ ಕ್ಷೇತ್ರಗಳಲ್ಲಿ ತರಬೇತಿ ಕೊಡುತ್ತಿದೆ. ರಾಜ್ಯ ಸರ್ಕಾರದಿಂದ ಈ ಸಂಸ್ಥೆಗೆ ಅನುದಾನ ಸಿಗುತ್ತಿದೆ.

ರಾಜ್ಯದಲ್ಲಿ ಚಿತ್ರಮಂದಿರಗಳು : ಕರ್ನಾಟಕದಲ್ಲಿ ಖಾಯಂ ಚಿತ್ರಮಂದಿರಗಳು 1905 ರಿಂದ, ಸಂಚಾರಿ ಚಿತ್ರ ಮಂದಿರಗಳು 1930 ದಶಕದಿಂದಲೇ ಅಸ್ತಿತ್ವಕ್ಕೆ ಬಂದವು. 2000ದ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು 700 ಕ್ಕೂ ಹೆಚ್ಚು ಖಾಯಂ ಚಿತ್ರ ಮಂದಿರಗಳಿವೆ. ಅವುಗಳಲ್ಲಿ ಬೆಂಗಳೂರಿನಲ್ಲಿ ಸು. 130, ಮೈಸೂರಿನಲ್ಲಿ 60, ಧಾರವಾಡದಲ್ಲಿ 54, ಮಿಕ್ಕ ಜಿಲ್ಲಾ ಕೇಂದ್ರಗಳಲ್ಲಿ ಸರಾಸರಿ 20 ರಿಂದ 35 ರವರೆಗೆ ಇವೆ. ರಾಜ್ಯದಲ್ಲಿ ಒಟ್ಟು 750 ಕ್ಕೂ ಹೆಚ್ಚು ಸಂಚಾರಿ ಚಿತ್ರ ಮಂದಿರಗಳಿವೆ. ಬೆಂಗಳೂರಿನಲ್ಲಿ ಅನೇಕ ಚಿತ್ರ ಮಂದಿರಗಳು ಮುಚ್ಚಿಹೋಗಿವೆ. ಇಂದಿನ ದಿನಗಳಲ್ಲಿ ಅಂದರೆ, 2005-06 ವರ್ಷಗಳಲ್ಲಿ, ಭಾರತದ ಇನ್ನಿತರ ಮಹಾನಗರಗಳಲ್ಲಿ ಪರಿವರ್ತನೆಯಾಗುತ್ತಿರುವಂತೆ ಬೆಂಗಳೂರಿನಲ್ಲಿ, ಒಂದೇ ಮಳಿಗೆ ಸಂಕೀರ್ಣಗಳಲ್ಲಿ 4-5 ಚಿತ್ರಮಂದಿರಗಳಿರುವ ಮಲ್ಟಿಪ್ಲೆಕ್ಸ್‌ ಕಟ್ಟಡಗಳು ಅಸ್ತಿತ್ವಕ್ಕೆ ಬರುತ್ತಿವೆ.

ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಲಿ : ಚಲನಚಿತ್ರಗಳ ನಿರ್ಮಾಣವನ್ನು ಉದ್ಯಮದಂತೆ ಪರಿಗಣಿಸಿ ಕಾರ್ಖಾನೆಗಳಲ್ಲಿನ ಉತ್ಪಾದನೆಯಂತೆ, ತಯಾರುಮಾಡುವ ಪ್ರಕ್ರಿಯೆಯನ್ನು ಚಾಲತಿಗೆ ತಂದದ್ದು ಅಮೆರಿಕದ ಹಾಲಿವುಡ್. ಉದ್ಯಮವೆಂದಮೇಲೆ ಅದರಲ್ಲಿ ತೊಡಗಿರುವವರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದಕ್ಕೆ ಒಂದು ಸಂಸ್ಥೆ ಇರುವುದು ಸ್ವಾಭಾವಿಕ. ಕರ್ನಾಟಕದಲ್ಲಿ ಕೂಡ, ಚಲನ ಚಿತ್ರಗಳ ನಿರ್ಮಾಣ, ವಿತರಣೆ, ಮತ್ತು ಪ್ರದರ್ಶನ, ಈ ಕ್ಷೇತ್ರಗಳ ಹೊಂದಾಣಿಕೆ, ಅವರ ಕುಂದು ಕೊರತೆಗಳು, ಸಮಸ್ಯೆಗಳ ನಿವಾರಣೆ, ಸರ್ಕಾರದೊಂದಿಗೆ ಸಂಧಾನ, ಮುಂತಾದ ವಿಷಯಗಳಿಗೆ ಗಮನ ಕೊಟ್ಟು ಬೆಂಬಲಿಸುವ ಸಲುವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ, 1944ರಲ್ಲಿ ಸ್ಥಾಪಿತವಾಯಿತು. ಎಲ್ಲ ಸಂಸ್ಥೆಗಳಲ್ಲಿಯಂತೆ, ಈ ಸಂಸ್ಥೆಯಲ್ಲಿಯೂ, ಸದಸ್ಯತ್ವ ಶುಲ್ಕ ಕೊಟ್ಟು ಸದಸ್ಯತ್ವ ಪಡೆದು, ನಿಯಮಿತ ಕಾಲದಲ್ಲಿ ಚುನಾವಣೆಗಳನ್ನು ನಡೆಸಿ, ಪದಾಧಿಕಾರಗಳನ್ನು ಚುನಾಯಿಸಿ, ಆಯ್ಕೆಯಾದ ಪ್ರತಿನಿಧಿಗಳಿಂದ ಆಡಳಿತ ನಿರ್ವಹಣೆ ನಡೆಸುತ್ತದೆ. ಸರ್ಕಾರದಿಂದ ಲಭಿಸುವ ಸಹಾಯಧನ, ಪ್ರಶಸ್ತಿ ವಿತರಣೆ, ಚಿತ್ರೋತ್ಸವಗಳು, ಮುಂತಾದ ಕಾರ್ಯಗಳಲ್ಲಿ ಸರ್ಕಾರದೊಂದಿಗೆ ಸಹಕರಿಸುತ್ತದೆ. ರಾಜ್ಯಸರ್ಕಾರದ ಪ್ರೋತ್ಸಾಹ : ಕರ್ನಾಟಕ ಸರ್ಕಾರಕ್ಕೆ ಮನರಂಜನೆ ತೆರಿಗೆಯಮೂಲಕ ವರಮಾನವೂ ಉಂಟು. ಅಲ್ಲದೆ ಚಲನಚಿತ್ರ ಜನರ ಮೆಲೆ ಅಪಾರ ಪ್ರಭಾವ ಬೀರುವ ಸಂಪರ್ಕ ಮಾಧ್ಯಮ ಕೂಡ. ಇದರಿಂದಾಗಿ ಸರ್ಕಾರವೂ ಕೂಡ ಚಲನಚಿತ್ರದ ಉದ್ಯಮಕ್ಕೆ ಸಹಾನುಭೂತಿಯಿಂದ ಆನೇಕ ಸೌಲಭ್ಯಗಳನ್ನು ಕೊಡುತ್ತಾ ಬಂದಿದೆ. 1954 ರಿಂದ ರಾಷ್ಟ್ರ ಪ್ರಶಸ್ತಿ, 1966-67 ರಿಂದ ರಾಜ್ಯ ಪ್ರಶಸ್ತಿ ಗಳನ್ನು ಉತ್ತಮ ಚಲನಚಿತ್ರಗಳಿಗೆ ಕೊಡುತ್ತಿವೆ. ರಾಜ್ಯ ಪ್ರಶಸ್ತಿಗಳು ಚಲನಚಿತ್ರದ ವಿವಿಧ ಭಾಗಗಳಿಗೆ ಕೊಡಲ್ಪಡುತ್ತದೆ. ಮೂರು ಉತ್ತಮ ಚಿತ್ರಗಳು, ಶ್ರೇಷ್ಠ ನಟ, ನಟಿ, ಪೋಷಕ ವರ್ಗ, ತಾಂತ್ರಿಕ ವರ್ಗ, ಸಾಹಿತ್ಯ, ಕಥೆ, ಸಂಗೀತ, ಗಾಯಕ, ಗಾಯಕಿ, ಹೀಗೆ ಎಲ್ಲ ಭಾಗಗಳ ತಜ್ಞರಿಗೆ, ಪ್ರಶಸ್ತಿಗಳನ್ನು, ನಗದು ಬಹುಮಾನದೊಂದಿಗೆ ಕೊಟ್ಟು ಗೌರವಿಸುತ್ತದೆ. ಪ್ರಶಸ್ತಿಗಳನ್ನು ಪ್ರಾದೇಶಿಕ ಭಾಷೆಗಳಾದ ತುಳು, ಕೊಡವ ಮತ್ತು ಕೊಂಕಣಿ ಭಾಷೆಗಳ ಚಿತ್ರಗಳಿಗೂ ಕೊಡಲಾಗುತ್ತಿದೆ.

ಪ್ರಶಸ್ತಿಗಳ ವಿವರ : ಡಾ. ರಾಜಕುಮಾರ್ ಪ್ರಶಸ್ತಿ: ರೂ. ಒಂದು ಲಕ್ಷ, ನಗದು ಬಹುಮಾನ ಮತ್ತು ಪದಕ. ಕನ್ನಡ ಚಿತ್ರೋದ್ಯಮದ ಸರ್ವತೋಮುಖ ಅಭಿವೃದ್ಧಿಗೆ ಕಾರಣಕರ್ತರಾದ ಮಹನೀಯರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತಿದೆ. ಪುಟ್ಟಣ್ಣಕಣಗಾಲ್ ಪ್ರಶಸ್ತಿ: ರೂ. ಒಂದು ಲಕ್ಷ ನಗದು ಬಹುಮಾನ ಮತ್ತು ಪದಕ. ಕನ್ನಡದ ಪ್ರತಿಭಾವಂತ ನಿದ್ಙೇಶಕರೊಬ್ಬರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತಿದೆ.

ಚಲನಚಿತ್ರ ರಂಗಕ್ಕೆ ಜೀವನಾದ್ಯಂತ ವಿಶಿಷ್ಟ ಕೊಡುಗೆ ಪ್ರಶಸ್ತಿ : ರೂ.50,000 ಮತ್ತು ಪದಕ, ಅತ್ಯುತ್ತಮ ಚಿತ್ರಗಳಿಗೆ : ಪ್ರಥಮ : ರೂ. ಒಂದು ಲಕ್ಷ ಮತ್ತು ಪದಕ, ನಿರ್ದೇಶಕರಿಗೆ : ರೂ. 20,000 ಮತ್ತು ಪದಕ. ದ್ವಿತೀಯ : ರೂ. 75,000 ಮತ್ತು ಪದಕ. ನಿರ್ದೇಶಕರಿಗೆ : ರೂ.15,000 ಮತ್ತು ಪದಕ. ತೃತೀಯ : ರೂ. 50,000 ಮತ್ತು ಪದಕ, ನಿರ್ದೇಶಕರಿಗೆ : ರೂ. 10,000, ಮತ್ತು ಪದಕ ವಿಶೇಷ ಸಾಮಾಜಿಕ ಪರಿಣಾಮ ಬೀರುವ ಚಿತ್ರಗಳಿಗೆ ರೂ. 75,000 ಮತ್ತು ಪದಕ, ನಿರ್ದೇಶಕರಿಗೆ : ರೂ. 10,000 ಮತ್ತು ಪದಕ. ಅತ್ಯುತ್ತಮ ಮಕ್ಕಳ ಚಿತ್ರ : ರೂ.50,000 ಮತ್ತು ಪದಕ. ನಿರ್ದೇಶಕರಿಗೆ : ರೂ: 10,000. ಅತ್ಯುತ್ತಮ ನಟ (ಸುಬ್ಬಯ್ಯ ನಾಯ್ಡು ಪ್ರಶಸ್ತಿ) ರೂ. 20,000 ಮತ್ತು ಪದಕ. ಅತ್ಯುತ್ತಮ ನಟಿ : ರೂ. 20,000 ಮತ್ತು ಪದಕ. ಮಿಕ್ಕೆಲ್ಲ ಕ್ಷೇತ್ರಗಳಿಗೆ ರೂ. 10,000 ದಿಂದ ರೂ 5,000 ವರೆಗೆ ನಗದು ಬಹುಮಾನ ವಿತರಿಸಲ್ಪಡುತ್ತದೆ. ರಾಜ್ಯ ಸರ್ಕಾರ, ರಾಷ್ಟ್ರ ಪ್ರಶಸ್ತಿಗಳಿಸಿದ ಚಿತ್ರಗಳಿಗೆ ಕೂಡ ಪ್ರೋತ್ಸಾಹ ಧನವನ್ನು ಕೊಟ್ಟು ಪುರಸ್ಕರಿಸುತ್ತಿದೆ. ಸ್ವರ್ಣ ಕಮಲ ಗಳಿಸಿದ ಅತ್ಯುತ್ತಮ ಚಿತ್ರಕ್ಕೆ ರೂ. 15 ಲಕ್ಷ, ಅತ್ಯುತ್ತಮ ಪ್ರಾದೇಶಿಕ ಚಿತ್ರಕ್ಕೆ ರೂ. 2.5 ಲಕ್ಷ, ವಿಶೇಷ ಪ್ರಶಸ್ತಿಗಳಿಸಿದ ಚಿತ್ರಗಳಿಗೆ ರೂ. 3 ಲಕ್ಷ ವಿತರಿಸಲ್ಪಡುತ್ತಿದೆ.

ರಾಜ್ಯ ಸರ್ಕಾರ 1966-67 ರಿಂದ ಕನ್ನಡ ಚಿತ್ರಗಳಿಗೆ ಸಹಾಯ ಧನ, ಕನ್ನಡ ಚಿತ್ರಗಳಿಗೆ ಪೂರ್ಣ ತೆರಿಗೆ ವಿನಾಯಿತಿ ಹೀಗೆ ಅನೇಕ ರೀತಿಯ ಸೌಲಭ್ಯಗಳನ್ನು ಕೊಡುತ್ತಿದೆ. ಈಗ ಹಾಲಿ ಕೊಡುತ್ತಿರುವ ಸಹಾಯ ಧನ, ವರ್ಷದಲ್ಲಿ, 20 ಆಯ್ದ ಉತ್ತಮ ಚಿತ್ರಗಳಿಗೆ ತಲಾ ಹತ್ತು ಲಕ್ಷ ರೂಪಾಯಿಗಳನ್ನು ಕೊಡಲಾಗುತ್ತಿದೆ. ಮಕ್ಕಳ ಚಿತ್ರಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ವರ್ಷದಲ್ಲಿ ಎರಡು ಚಿತ್ರಗಳಿಗೆ ರೂ.25 ಲಕ್ಷ ಸಹಾಯ ಧನವನ್ನು ಕೊಡಲಾಗುತ್ತಿದೆ. ಸದ್ಯಕ್ಕೆ ರೀಮೇಕ್ ಚಿತ್ರಗಳಿಗೆ ಧನ ಸಹಾಯ ಕೊಡುತ್ತಿಲ್ಲ. ಆದರೆ ರೀಮೇಕ್ ಚಿತ್ರಗಳಿಗೆ ಕೊಡಬೇಕೊ, ಬೇಡವೋ ಎಂಬ ವಾದ, ವಿವಾದಗಳು ಇಂದಿಗೂ ನಡೆಯುತ್ತಲೇ ಇದೆ.

ಕನ್ನಡ ಚಲನಚಿತ್ರೋದ್ಯಮವನ್ನು ಅಭಿವೃದ್ಧಿಗೊಳಿಸಲು, ಕರ್ನಾಟಕ ಫಿಲಂ ಇಂಡಸ್ಟ್ರಿ ಡೆವೆಲಪ್ಮೆಂಟ್ ಕಾರ್ಪೊರೇಷನ್ ಸಂಸ್ಥೆಯನ್ನು ಸರ್ಕಾರ 1968ರಲ್ಲಿ ಸ್ಥಾಪಿಸಿದೆ. ಇದರ ಪೂರ್ಣ ಸ್ವಾಮ್ಯವನ್ನು ಸರ್ಕಾರವೇ ವಹಿಸಿಕೊಂಡು ಹಲವಾರು ಕ್ಷೇತ್ರಗಳಲ್ಲಿ, ಕಂಠೀರವ ಸ್ಟುಡಿಯೊವಿನ ಕಾರ್ಯನಿರ್ವಹಣೆ, ಆಧುನಿಕ ಉಪಕರಣಗಳನ್ನು ಚಲನಚಿತ್ರಗಳ ನಿರ್ಮಾಣಕ್ಕೆ ಬಾಡಿಗೆಗೆ ಕೊಡುವುದು, ಚಿತ್ರ ಮಂದಿರಗಳ ನಿರ್ಮಾಣಕ್ಕೆ ಸಹಕಾರ, ಸಹಾಯ ಧನ, ಮತ್ತು ಪ್ರೋತ್ಸಾಹ, ಹೀಗೆ ಹಲವಾರು ಕ್ಷೇತ್ರಗಳಲ್ಲಿ ಪ್ರ್ರೋತ್ಸಾಹ ನೀಡುತ್ತಿದೆ. ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆ ಅನೇಕ ಸಾಕ್ಷ ಚಿತ್ರ್ರಗಳನ್ನು ಕೂಡ ಮಾಡಿದೆ. ಪ್ರಸಿದ್ಧ ಸಾಹಿತಿಗಳು, ಗಣ್ಯವ್ಯಕ್ತಿಗಳು, ಹಲವಾರು ಚಾರಿತ್ರಿಕ ಸ್ಥಳಗಳು, ಪುಣ್ಯಕ್ಷೇತ್ರಗಳು, ಇವುಗಳನ್ನು ಕುರಿತು ಇದುವರೆಗೆ ಅನೇಕ ಉತ್ತಮ ಸಾಕ್ಷ್ಯ ಚಿತ್ರಗಳು ನಿರ್ಮಾಣವಾಗಿವೆ.

ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಒಂದು ಕನ್ನಡ ಫಿಲಂ ಆರ್ಕಿವ್ ಕೂಡ ಅಸ್ತಿತ್ವದಲ್ಲಿದೆ. ಈ ಸಂರಕ್ಷಣಾಗಾರದಲ್ಲಿ ನೂರ ಇಪ್ಪತ್ತಕ್ಕೂ ಹೆಚ್ಚು ಪ್ರಶಸ್ತಿ ಪಡೆದ ಹಾಗೂ ಪ್ರಮುಖವಾದ ಕನ್ನಡ ಚಿತ್ರಗಳು, ಮತ್ತು ಸಾಕ್ಷ್ಯ ಚಿತ್ರಗಳನ್ನು ಶೇಖರಿಸಲಾಗಿದೆ. ಹಲವು ವರ್ಷಗಳಿಂದೀಚೆಗೆ ಪ್ರಶಸ್ತಿ ವಿಜೇತ ಚಿತ್ರಗಳ ಮತ್ತು ಸಹಾಯಧನ ಸ್ವೀಕೃತ ಚಿತ್ರಗಳ ಸಿ.ಡಿ (ಅಆ) ಗಳನ್ನು ಪಡೆದು, ಸು. 300 ಕ್ಕೂ ಹೆಚ್ಚು ಚಿತ್ರಗಳ ಸಿ.ಡಿ.ಗಳನ್ನು ಶೇಖರಿಸಿದೆ. ಇದು ಕರ್ನಾಟಕ ಸರ್ಕಾರದ ಮೆಚ್ಚುವಂತಹ ಸಾಧನೆ. ಕೇಂದ್ರ ಸರ್ಕಾರದ ಇಲಾಖೆಗಳಾದ, ಫಿಲಂಸ್ ಡಿವಿಷನ್ ಶಾಖೆ, ಫಿಲ್ಮ್‌ ಆರ್ಕೈವ್ಸ್‌ ಶಾಖೆ, ಮತ್ತು ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಷನ್ ಶಾಖೆಗಳು ಕೂಡ ಬೆಂಗಳೂರಿನಲ್ಲಿ ಅಸ್ತಿತ್ವದಲ್ಲಿವೆ. ವಾರ್ತಾ ಮತ್ತು ಸಾಕ್ಷ್ಯ ಚಿತ್ರಗಳ ನಿರ್ಮಾಣ ಹಾಗೂ ಹಂಚಿಕೆಗಳನ್ನು ರಾಜ್ಯದಲ್ಲಿ ಮಾಡುವ ಕಾರ್ಯವನ್ನು ಫಿಲಂ ಡಿವಿಷನ್ ಮಾಡುತ್ತದೆ. ಫಿಲಂ ಆರ್ಕಿವ್ 16 ಎಂ.ಎಂ. ಹಾಗೂ 35 ಎಂ.ಎಂ.ಚಿತ್ರಗಳ ಲೈಬ್ರರಿ ಯಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳನ್ನು ಶೇಖರಿಸಿ ಫಿಲಂ ಸೊಸೈಟಿ ಹಾಗೂ ಮತ್ತಿತರ ಶಿಕ್ಷಣ ಸಂಸ್ಥೆಗಳಿಗೆ ಅಧ್ಯಯನಕ್ಕಾಗಿ ಎರವಲು ನೀಡುತ್ತದೆ. ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಷನ್ ಶಾಖೆ, ಚಲನಚಿತ್ರಗಳನ್ನು ತನ್ನ ಮಂಡಳಿಯ ಸದಸ್ಯರಿಂದ ಸೆನ್ಸಾರ್ ಮಾಡಲು ಸೌಲಭ್ಯ ಕಲ್ಪಿಸುತ್ತದೆ.[೧]

ಉಲ್ಲೇಖಗಳು ಬದಲಾಯಿಸಿ

Return to "ಕನ್ನಡ ಚಿತ್ರರಂಗ" page.