ಗಾಡ್ಹ್ಯೂ

ಫ್ರೆಂಚ್ ವಸಾಹತು ರಾಜ್ಯಪಾಲ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.


ಫ್ರೆಂಚ್ ಈಸ್ಟ್ ಇಂಡಿಯ ಕಂಪನಿಯ ನಿರ್ದೇಶಕರಲ್ಲೊಬ್ಬ.

ಭಾರತದಲ್ಲಿ ಫ್ರೆಂಚ್ ಗವರ್ನರ್-ಜನರಲ್ ಆಗಿದ್ದ ಡ್ಯುಪ್ಲೆಕ್ಸನನ್ನು ಅಧಿಕಾರದಿಂದ ತೆಗೆದುಹಾಕಲು ಮತ್ತು ಅಲ್ಲಿ ಫ್ರೆಂಚರ ಸ್ಥಿತಿಗತಿಗಳ ವಿಚಾರಣೆ ನಡೆಸಲು ಫ್ರೆಂಚ್ ಕಂಪನಿ ಇವನನ್ನು 1754ರಲ್ಲಿ ಭಾರತಕ್ಕೆ ಕಳುಹಿಸಿತು. ಇವನು 1754ರ ಆಗಸ್ಟ್ ತಿಂಗಳಲ್ಲಿ ಪಾಂಡಿಚೇರಿಯನ್ನು ತಲುಪಿದ. ಆ ವೇಳೆಗೆ ದಕ್ಷಿಣ ಭಾರತದಲ್ಲಿ ಫ್ರೆಂಚರ ಬಲ ಕುಂದುತ್ತಿತ್ತು. ಡ್ಯುಪ್ಲೆಕ್ಸ್ ಆ ಕಾಲದ ವಿವಾದಾಸ್ಪದ ವ್ಯಕ್ತಿಯಾಗಿದ್ದ. ಅವನ ರಾಷ್ಟ್ರ ಪ್ರೇಮ, ನಿಷ್ಠೆ, ಸಾಹಸ ಮತ್ತು ಗುರಿಗಳು ಫ್ರೆಂಚರ ದೃಷ್ಟಿಯಲ್ಲಿ ಸಂಶಯಾತೀತವಾಗಿದ್ದು ವಾದರೂ ಅವನು ತನ್ನ ಯೋಜನೆಗಳನ್ನು ಕಾರ್ಯಗತಮಾಡಿದ ವಿಧಾನ ಮಾತ್ರ ದೋಷಯುಕ್ತವಾಗಿದ್ದುವು. ಪರಿಸರದ ಪ್ರತಿಕೂಲತೆಯಿಂದಾಗಿ ವಿಫಲತೆಗೊಂಡಿದ್ದುವು. ಗಾಡ್ಹ್ಯೂ ಭಾರತಕ್ಕೆ ಬಂದದ್ದು ಇಂಥ ಹಿನ್ನೆಲೆಯಲ್ಲಿ.

ಗಾಡ್ಹ್ಯೂ ಭಾರತಕ್ಕೆ ಬಂದೊಡನೆಯೇ ಇಂಗ್ಲಿಷರೊಂದಿಗೆ ಯುದ್ಧ ನಿಲ್ಲಿಸಿದ. 1755ರ ಜನವರಿಯಲ್ಲಿ ಅವರೊಂದಿಗೆ ತಾತ್ಕಾಲಿಕ ಒಪ್ಪಂದ ಮಾಡಿಕೊಂಡ. ಭಾರತದ ರಾಜರ ವ್ಯವಹಾರಗಳಲ್ಲಿ ಕೈಹಾಕುವುದಿಲ್ಲವೆಂದು ಎರಡು ಪಕ್ಷಗಳೂ ಒಪ್ಪಿಕೊಂಡವು. ಇಂಗ್ಲಿಷರ ಅಧೀನ ಪ್ರದೇಶಗಳಿಗೆ ಫ್ರೆಂಚರೂ ಫ್ರೆಂಚರಿಗೆ ಸೇರಿದ್ದ ಪ್ರದೇಶಗಳಿಗೆ ಇಂಗ್ಲಿಷರೂ ಮನ್ನಣೆ ನೀಡಬೇಕೆಂಬುದು ಒಪ್ಪಂದದ ಷರತ್ತುಗಳಲ್ಲೊಂದು. ಈ ಒಪ್ಪಂದವನ್ನು ಎರಡು ಕಂಪನಿಗಳೂ ಅನುಮತಿಸಬೇಕಾಗಿತ್ತು. ಆದರೆ ಅಷ್ಟರಲ್ಲಿ (1756) ಯುರೋಪಿನಲ್ಲಿ ಏಳು ವರ್ಷಗಳ ಯುದ್ಧ ಪ್ರಾರಂಭವಾದ್ದರಿಂದ ಫ್ರಾನ್ಸ್ ಮತ್ತು ಬ್ರಿಟನ್ ಪುನಃ ಯುದ್ಧಕ್ಕೆ ಇಳಿದುವು. ತತ್ಫಲವಾಗಿ ಈ ಒಪ್ಪಂದ ಕಾರ್ಯಗತವಾಗಲೇ ಇಲ್ಲ.

ಗಾಡ್ಹ್ಯೂ ಮಾಡಿಕೊಂಡ ಒಪ್ಪಂದ ದೇಶದ ಅವನತಿಗೆ ಮತ್ತು ರಾಷ್ಟ್ರದ ಅವಮಾನಕ್ಕೆ ಮಾಡಿದ ರುಜು ಎಂದು ಡ್ಯುಪ್ಲೆಕ್ಸ್ ಟೀಕಿಸಿದ. ಈ ಪ್ರಸಂಗದ ಬಗ್ಗೆ ಇತಿಹಾಸಕಾರರ ಅಭಿಪ್ರಾಯ ವಿಭಿನ್ನವಾದ್ದು. ತನ್ನ ಅಸಮರ್ಥ ಸೈನ್ಯದಿಂದಾಗಲೀ ಭಾರತದಲ್ಲಿ ಫ್ರೆಂಚರ ಅಂದಿನ ಸ್ಥಿತಿಗತಿಗಳಿಂದಾಗಲೀ ಗಾಡ್ಹ್ಯೂ ಬ್ರಿಟಿಷರ ವಿರುದ್ಧ ಯುದ್ಧಹೂಡುವ ಸ್ಥಿತಿಯಲ್ಲಿರಲಿಲ್ಲವೆಂಬುದು ಕೆಲವು ಇತಿಹಾಸಕಾರರ ಅಭಿಪ್ರಾಯ. ಆರ್ಥಿಕವಾಗಿಯಾಗಲೀ ಸೈನ್ಯಬಲದಲ್ಲಿಯಾಗಲೀ ಫ್ರೆಂಚರು ಬ್ರಿಟಿಷರಿಗೆ ಸರಿಗಟ್ಟುವಂತಿರಲಿಲ್ಲ. ಭಾರತದಲ್ಲಿ ಫ್ರೆಂಚರ ವಸಾಹತು ನಿರ್ಮಿಸುವ ಆಶೆ ಕೊನೆಗೊಂಡದ್ದು ಏಳು ವರ್ಷಗಳ ಯುದ್ಧದಿಂದಲೇ ಹೊರತು ಗಾಡ್ಹ್ಯೂ ಮಾಡಿಕೊಂಡ ಒಪ್ಪಂದದಿಂದಲ್ಲವೆಂಬುದು ಕೆಲವು ಇತಿಹಾಸಕಾರರ ಅಭಿಪ್ರಾಯ. ಆದರೂ ಗಾಡ್ಹ್ಯೂ ಮಾಡಿಕೊಂಡ ಈ ಒಪ್ಪಂದ ಫ್ರೆಂಚರಿಗೆ ಯಾವ ರೀತಿಯಲ್ಲೂ ಅನುಕೂಲವಾಗುವಂತಿರಲಿಲ್ಲವೆಂಬುದು ನಿಜ.

ಗಾಡ್ಹ್ಯೂ ಡ್ಯುಪ್ಲೆಕ್ಸನನ್ನು ಹುದ್ದೆಯಿಂದ ತೆಗೆದುಹಾಕಿದ್ದು ಮತ್ತು ಅನಂತರ ಅವನ ಬಗ್ಗೆ ವ್ಯವಹರಿಸಿದ ರೀತಿ-ಇವು ಡ್ಯುಪ್ಲೆಕ್ಸನ ಕೊನೆಯ ಕಾಲದ ದುಃಸ್ಥಿತಿಗೆ ಕಾರಣವಾದುದೆಂದು ಒಂದು ವಾದವಿದೆ. ಆದರೆ ಡ್ಯುಪ್ಲೆಕ್ಸ ಸ್ವದೇಶಕ್ಕೆ ಮರಳಲು ಗಾಡ್ಹ್ಯೂ ಸಾಕಷ್ಟು ಸಹಾಯ ಮಾಡಿದ. ಫ್ರೆಂಚ್ ಕಂಪನಿ ಡ್ಯುಪ್ಲೆಕ್ಸನನ್ನು ಕಡೆಗಣಿಸಿದ್ದರಿಂದ ಅವನಿಗೆ ಆ ಗತಿ ಬಂತೇ ಹೊರತು ಗಾಡ್ಹ್ಯೂನಿಂದಲ್ಲವೆಂಬುದು ಹಲವು ಇತಿಹಾಸಕಾರರ ಅಭಿಮತ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: