ಕನ್ನಡದಲ್ಲಿ ಗಂಗ ಎಂಬ ಹೆಸರಿನ ಇಬ್ಬರು ಕವಿಗಳಿದ್ದಾರೆ.

ಮೊದಲನೆಯವನು

ಬದಲಾಯಿಸಿ

ಇವರಲ್ಲಿ ಮೊದಲನೆಯವ ಪಾಂಚಾಳರವನಾಗಿದ್ದು ಕುಮಟಿರಾಮನ ಕಥೆಯನ್ನು ಬರೆದಿರುವನೆಂದೂ ಇವನ ಕಾಲ ಸು. 1650 ಆಗಿರಬಹುದೆಂದೂ ಕವಿಚರಿತ್ರೆಕಾರರ ಅಭಿಪ್ರಾಯ. ಈತನನ್ನು ಪಾಂಚಾಳಗಂಗನೆಂದೇ ನಿರ್ದೇಶಿಸುವುದುಂಟು. ಇತ್ತೀಚೆಗೆ ಈ ವಿಚಾರವಾಗಿ ನಡೆದಿರುವ ಸಂಶೋಧನೆಗಳಿಂದ ಹೆಚ್ಚು ವಿಚಾರಗಳೇನೂ ತಿಳಿದುಬರದಿದ್ದರೂ ಈ ಕವಿಯಿಂದ ರಚಿತವಾಗಿರುವ ಕುಮಾರಾಮನ ಸಾಂಗತ್ಯ ತುಂಬ ಕುತೂಹಲಕಾರಿಯಾದುದೆಂದ ವಿದಿತವಾಗುತ್ತದೆ. ಕನ್ನಡದ ಕಡುಗಲಿಯಾದ ಕುಮಾರರಾಮನನ್ನು ಕುರಿತು ನಂಜುಂಡ, ಪಾಂಚಾಳಗಂಗ ಮತ್ತು ಮಹಲಿಂಗ ಸ್ವಾಮಿ ಎಂಬ ಮೂವರು ಕವಿಗಳು ಸಾಂಗತ್ಯಕೃತಿಗಳನ್ನು ರಚಿಸಿರುತ್ತಾರೆ.[][]

  1. ಇವುಗಳಲ್ಲಿ ನಂಜುಂಡನ ಕೃತಿ ಪ್ರೌಢವೆನ್ನಿಸಿದರೆ,
  2. ಪಾಂಚಾಳಗಂಗನ ಕೃತಿ ತುಂಬ ಸರಳವೂ ಸಂಕ್ಷಿಪ್ತವೂ ಎಲ್ಲಕ್ಕಿಂತ ಹೆಚ್ಚಾಗಿ ಹಲವು ಪಾಠ ಪ್ರಭೇಧಗಳನ್ನುಳ್ಳುದೂ ಆಗಿದೆ.
  3. ಮಹಲಿಂಗ ಸ್ವಾಮಿಯ ರಚನೆಯಲ್ಲಿ ಮುಖ್ಯಕಥೆಗಿಂತ ಉಪಕಥೆಗಳೇ ಹೆಚ್ಚು.

ಗಂಗ ತನ್ನನ್ನು ಕುರಿತು ಹೇಳಿಕೊಳ್ಳುವಾಗ

ಕನ್ನಡ ಕವಿ ಜಾಣ ರನ್ನದ ಪದಜಾತಿ ಮುನ್ನಿನ ಪಂಚಾಸ್ಯ ಚನ್ನಭುಜಂಗನ ಭೃತ್ಯ ಗಂಗಯ್ಯ

ಎಂದು ತಿಳಿಸುವುದರಿಂದ ಈತ ಶಿವಭಕ್ತನೆಂತಲೂ ಇವನಿಗೆ 'ಕನ್ನಡ ಕವಿಜಾಣ' ಎಂಬ ಬಿರುದೋ ಇಲ್ಲವೇ ಆಪ್ತವಾದ ಮತ್ತೊಂದು ಹೆಸರೋ ಇದ್ದಿರಬಹುದೆಂದೂ ಊಹಿಸಬಹುದು. ಪೂರ್ವಕವಿಗಳನ್ನು ಸ್ತುತಿಸಿರುವ ಒಂದು ಪದ್ಯವಿದ್ದರೂ ಅದು ಹಲವಾರು ಪಾಠಾಂತರಗಳಿಂದ ಕೂಡಿರುವುದರಿಂದ ಆ ಮೂಲಕ ಕವಿಯ ಕಾಲವನ್ನು ನಿರ್ಣಯಿಸಲು ಸಾಧ್ಯವಾಗುವುದಿಲ್ಲ. ಈತ ತನ್ನ ಇಷ್ಟದೇವತೆಯಾದ ನಂಜನಗೂಡಿನ ನಂಜುಂಡನನ್ನೂ, ತಗಡೂರಿನ ವಿನಾಯಕನನ್ನೂ ಸ್ತುತಿಸುವುದರಿಂದ ಈ ಕಡೆಯವನಿರಬಹುದೆಂದು ಭಾವಿಸಬಹುದು. ಇವನ ಕೃತಿಯನ್ನುಳ್ಳ ಹಸ್ತಪ್ರತಿಗಳು ಹೇರಳವಾಗಿ ದೊರೆತರೂ ಅವು ಭಿನ್ನ ಭಿನ್ನವಾದ ಪಾಠಾಂತರಗಳಿಂದ ನಿಬಿಡವಾಗಿದೆ. ಆದರೆ ಕುಮಾರರಾಮನ ಚಿಕ್ಕಮ್ಮನಾದ ರತ್ನಾಜಿಯನ್ನು ಕುರಿತ ಕಥಾಭಾಗ ಮಾತ್ರ ಎಲ್ಲ ಪ್ರತಿಗಳಲ್ಲಿಯೂ ಬಹುಮಟ್ಟಿಗೆ ಒಂದೇ ತೆರನಾಗಿರುವುದುರಿಂದ ಮೂಲಕೃತಿ ಇಷ್ಟೇ ಇದ್ದಿರಬಹುದೆಂದು ಊಹಿಸಲು ಅವಕಾಶವಿದೆ. ಈವರೆಗೆ ದೊರೆತಿರುವ ಹಸ್ತಪ್ರತಿಗಳಲ್ಲಿ ಸು. 1698ಕ್ಕೆ ಸೇರಿದುದೇ ಪ್ರಾಚೀನವಾಗಿರುವುದರಿಂದ ಕವಿಯ ಕಾಲವನ್ನು ಆರ್. ನರಸಿಂಹಾಚಾರ್ಯರು ಸೂಚಿಸಿರುವಂತೆ ಸು. 1650 ಎಂದು ಅಂಗೀಕರಿಸಬಹುದು. ನಂಜುಂಡನ ಕಾವ್ಯದ ಪ್ರಭಾವ ಇವನ ಕಾವ್ಯದ ಮೇಲೆ ಆಗದಿದ್ದರೂ ಈತನ ಕಾವ್ಯದ ಪ್ರಭಾವ ಮಹಾಲಿಂಗಸ್ವಾಮಿಯ ಕೃತಿಯ ಮೇಲೆ ಆಗಿದೆಯೆಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಈತನ ಕಥಾನಿರೂಪಣೆ, ಸರಳ ಶೈಲಿ ಘಟನಾ ಪ್ರಾಧಾನ್ಯಗಳನ್ನು ಗಮನಿಸಿದರೆ 'ಸಕ್ಕರೆ ಸವಿಯಂತೆ ಮಧುರ ಮಾವಿನ ಹಣ್ಣ ಉಕ್ಕುವ ತನಿರಸದಂತೆ, ೧ ಮಕ್ಕಳ ನಸುನಗೆಯಂತೆ ಗಂಗನ ಮಾತು ಸತ್ಕವಿಗಳು ಲಾಲಿಪುದು' ಎಂದು ಹೇಳಿಕೊಂಡಿರುವುದನ್ನು ಸ್ವಲ್ಪಮಟ್ಟಿಗಾದರೂ ಒಪ್ಪಿಕೊಳ್ಳಬಹುದು. ಸು. 2,000 ಪದ್ಯಗಳಿಂದ ಹಿಡಿದು ಸು. 5,000 ಪದ್ಯಗಳವರೆಗೆ ಇವನ ಹಸ್ತಪ್ರತಿಗಳಲ್ಲಿ ಅಂತರ ಕಂಡುಬರುವುದರಿಂದ ಈ ಕೃತಿಯ ಮೂಲ ಪಾಠವನ್ನು ನಿರ್ಣಯಿಸುವ ತನಕ ಸದ್ಯಕ್ಕೆ ಹೆಚ್ಚಾಗಿ ಏನೂ ಹೇಳುವಂತಿಲ್ಲ. ಈತನ ಕಾವ್ಯಭಾಗಗಳನ್ನು ಅಲ್ಲಲ್ಲಿಯೆ ಹಾಡುವ ಪದ್ಧತಿ ಈಗಲೂ ಕಂಡುಬರುವುದರಿಂದ ಕುಮಾರರಾಮನನ್ನು ಕುರಿತ ಸಾಂಗತ್ಯ ಕೃತಿಗಳಲ್ಲಿ ಇದು ಅತ್ಯಂತ ಜನಪ್ರಿಯವಾದುದು ಎಂದು ಹೇಳಬಹುದು.

ಎರಡನೆಯವನು

ಬದಲಾಯಿಸಿ

ಎರಡನೆಯವನಾದ ಗಂಗ ಗಿರಿಜಾಕಲ್ಯಾಣವೆಂಬ ಯಕ್ಷಗಾನವನ್ನು ಬರೆದಿದ್ದಾನೆ. ಈತ ಬ್ರಾಹ್ಮಣನಿರಬೇಕೆಂದೂ, ಸ್ಥಳ ಶಿವಗಂಗೆಯೆಂದೂ ಕಾಲ ಸು. 1750 ಆಗಿರಬಹುದೆಂದೂ ಕವಿಚರಿತೆಕಾರರು ತಿಳಿಸಿರುತ್ತಾರೆ.

ಉಲ್ಲೇಖಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗಂಗ_(ಕವಿ)&oldid=1234608" ಇಂದ ಪಡೆಯಲ್ಪಟ್ಟಿದೆ