ಖೋಂಡ ಒಂದು ಆದಿವಾಸಿ ಜನಾಂಗ. ಇದರ ವಾಸ್ತವ್ಯ ಒರಿಸ್ಸಾ ರಾಜ್ಯದ ಫುಲ್ಬಾನಿ, ಕೊರಾಪುಟ್ ಮತ್ತು ಕಲಹಂಡಿ ಜಿಲ್ಲೆಗಳ ಕಾಡು ಮತ್ತು ಪರ್ವತ ಪ್ರದೇಶಗಳಲ್ಲಿ. ಇವರಿಗೆ ಎಂಟು ರಾಜ್ಯಗಳಲ್ಲಿ ಸೂಚಿತ ಪರಿಶಿಷ್ಟ ವರ್ಗದ ಸ್ಥಾನಮಾನವಿದೆ: ಆಂಧ್ರ ಪ್ರದೇಶ, ಬಿಹಾರ, ಛತ್ತೀಸ್‌ಘಡ್, ಮಧ್ಯ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ಝಾರ್ಖಂಡ್ ಮತ್ತು ಪಶ್ಚಿಮ ಬಂಗಾಳ.[] ಜನಸಂಖ್ಯೆ 1.74 ದಶಲಕ್ಷ (2011). ಒರಿಸ್ಸದ ಆದಿವಾಸಿ ಜನಾಂಗಗಳಲ್ಲಿ ಹೆಚ್ಚಿನ ಸಂಖ್ಯೆಯವರಿವರು. ಈ ಜನರ ಭಾಷೆ ಕುಈ ಮತ್ತು ಕುವಿ. ಈ ಎರಡೂ ದ್ರಾವಿಡ ಮೂಲದವು. ಖೋಂಡರು ಹೆಚ್ಚಾಗಿ ವ್ಯವಸಾಯ ನಿರತರು. ಸಾಮಾನ್ಯವಾಗಿ ಉತ್ತು ಬಿತ್ತಿ ಬತ್ತ ಬೆಳೆಯುತ್ತಾರೆ. ಫುಲ್ಬಾನಿಯ ಕುಟ್ಟಿಯ ಖೋಂಡರು ಮೊದಲು ನೆಲಕ್ಕೆ ಬೆಂಕಿ ಇಟ್ಟು ಅಲ್ಲಿನ ಗಿಡಗೆಂಟೆಗಳನ್ನು ಸುಟ್ಟು ಹಾಗೆ ಬೆಂದ ನೆಲದಲ್ಲಿ ಬೀಜ ಎರಚಿ ಬೆಳೆ ತೆಗೆಯುತ್ತಾರೆ.

ಒಡಿಶಾದಲ್ಲಿ ಒಬ್ಬ ಖೋಂಡ ಮಹಿಳೆ

ಈ ಜನರಲ್ಲಿ ನರಬಲಿ ಕೊಡುವ ಪದ್ಧತಿ ಇತ್ತು.[] ಇದನ್ನು 1836ರಿಂದ 1850ರ ಕಾಲದಲ್ಲಿ ದಮನ ಮಾಡಲಾಯಿತು. ನಾಗರಿಕ ವ್ಯಾಪಾರಸ್ಥರು ಮತ್ತು ಸಾಹಸಿಗಳು ಮುಗ್ಧ ಖೋಂಡರನ್ನು ವಂಚಿಸದಿರಲೆಂದು ಈ ಜನರಿರುವ ವಿಭಾಗವನ್ನು ಈಚೆಗೆ ಒಂದು ಏಜೆನ್ಸಿಯಾಗಿ ಮಾರ್ಪಡಿಸಲಾಗಿದೆಯಲ್ಲದೇ ಇವರನ್ನು ಪರಿಶಿಷ್ಟ ವರ್ಗದಲ್ಲಿ ಸೇರಿಸಿ ಅವರಿಗೆ ಶಿಕ್ಷಣ ಮತ್ತು ನೌಕರಿಗಳಲ್ಲಿ ಅವಕಾಶವನ್ನೀಯಲಾಗಿದೆ.

ವಿವಾಹ ಕಾಲದಲ್ಲಿ ಕನ್ಯಾಶುಲ್ಕವಾಗಿ ಜಾನುವಾರುಗಳನ್ನು ಕೊಡುವ ಪದ್ಧತಿ ಇವರಲ್ಲುಂಟು.

ಖೋಂಡರಿಗೆ ಪಶ್ಚಿಮ, ಉತ್ತರ ಮತ್ತು ಪೂರ್ವದಲ್ಲಿ ಒರಿಯ ಭಾಷೆ ಮಾತಾಡುವ ಜನರ, ದಕ್ಷಿಣದಲ್ಲಿ ತೆಲುಗು ಮಾತಾಡುವ ಜನರ ಸಂಪರ್ಕ ಬಹು ಹಿಂದಿನಿಂದಲೂ ಇದೆ. ಇದರಿಂದಾದ ಪರಿಣಾಮಗಳನ್ನು ಇವರ ಭಾಷೆ ಹಾಗೂ ಜೀವನ ಕ್ರಮಗಳಲ್ಲಿ ಕಾಣಬಹುದು. 1960ರ ದಶಕದಲ್ಲಿ ಒರಿಸ್ಸಾ ಸರ್ಕಾರದ ಕ್ಷೇಮಾಭಿವೃದ್ಧಿ ಯೋಜನೆಗಳಿಂದ ಖೋಂಡ ಜನಾಂಗ ಮುಂದೆ ಬರಲು ಹೆಚ್ಚಿನ ಅವಕಾಶ ಒದಗಿದೆ.

ಉಲ್ಲೇಖಗಳು

ಬದಲಾಯಿಸಿ
  1. "List of notified Scheduled Tribes" (PDF). Census India. Archived from the original (PDF) on 7 November 2013. Retrieved 15 December 2013.
  2. Russell, Robert Vane (1916). pt. II. Descriptive articles on the principal castes and tribes of the Central Provinces (in ಇಂಗ್ಲಿಷ್). Macmillan and Company, limited.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಖೋಂಡ&oldid=1258465" ಇಂದ ಪಡೆಯಲ್ಪಟ್ಟಿದೆ