ಕ್ಷುದ್ರ ಗ್ರಹ

(ಕ್ಷುದ್ರಗ್ರಹ ಇಂದ ಪುನರ್ನಿರ್ದೇಶಿತ)

ಸೌರವ್ಯೂಹದಲ್ಲಿರುವ ಬಹಳ ಸಣ್ಣ ಗ್ರಹ. ಈಗ ಅವುಗಳನ್ನು ಕುಬ್ಜಗ್ರಹಗಳೆಂದು ಕರೆಯುವರು. ಮಂಗಳ ಹಾಗೂ ಗುರು ಗ್ರಹಗಳ ನಡುವಣ ಅಂತರದಲ್ಲಿ ಅಸಂಖ್ಯಾತ ಎಸ್ಟೆರೊಇಡ್(Asteroid)ಗಳು ಇವೆ.ಖಗೋಳ ವಿಜ್ಞಾನಿಗಳು ಇಲ್ಲಿ ಸುಮಾರು ೨೦೦೦ದಷ್ಟು ಗುರುತಿಸಿದ್ದಾರೆ.ಗುರುತಿಸಲಾಗದ ಇನ್ನೂ ಸಾವಿರಾರು ಇರಬಹುದು.ಇವುಗಳಲ್ಲಿ ಅತ್ಯಂತ ದೊಡ್ಡದಾದ 'ಸೆರೆಸ್'(ceres)ನ ವ್ಯಾಸ ಕೇವಲ ೬೮೭ ಕಿ.ಮೀ.ಗಳು (೪೨೫ ಮೈಲಿಗಳು).ಇವುಗಳ ಗಾತ್ರ ೧೬ ರಿಂದ ೮೦೦ ಕಿ.ಮೀ.(೧ ರಿಂದ ೫೦೦ ಮೈಲಿಗಳು).ಇವು ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕಲು ೬೪೩ ರಿಂದ ೫,೦೦೦ ದಿನಗಳನ್ನು ತೆಗೆದುಕೊಳ್ಳುತ್ತವೆ.

433 ಇರೊಸ್ ಎಸ್ಟೆರೊಇಡ್ನ ಛಾಯಚಿತ್ರ
2004 FH is the center dot being followed by the sequence; the object that flashes by during the clip is an artificial satellite.

ಕೆಲವು ಖಗೋಳ ವಿಜ್ಞಾನಿಗಳ ಪ್ರಕಾರ ಎಸ್ಟೆರೊಇಡ್ ಗಳ ಹುಟ್ಟು,ಮಿಲಿಯಾಂತರ ವರ್ಷಗಳ ಹಿಂದೆ ಚೂರುಚೂರಾದ ಗ್ರಹಗಳಿಂದ ಆಗಿದೆ.

ಮಂಗಳಗ್ರಹದ ಕಕ್ಷೆಗೂ ಗುರುಗ್ರಹದ ಕಕ್ಷೆಯ ಮೇಲೆ ಸೂರ್ಯನ ಸುತ್ತ ಪರಿಭ್ರಮಿಸುತ್ತಿರುವ ಅಸಂಖ್ಯಾತ ಆಕಾಶಕಾಯಗಳು (ಆಸ್ಟಿರಾಯಿಡ್ಸ್; ಮೈನರ್ ಪ್ಲಾನೆಟ್ಸ್). ಸೌರವ್ಯೂಹದ ಇತರ ಸದಸ್ಯರಂತೆ (ಉದಾಹರಣೆಗೆ ಭೂಮಿ, ಚಂದ್ರ ಇತ್ಯಾದಿ) ಕ್ಷುದ್ರಗ್ರಹಗಳು ಸಹ ಜಡವಸ್ತುಗಳೇ (ನಕ್ಷತ್ರಗಳಲ್ಲ ಎನ್ನುವ ಅರ್ಥದಲ್ಲಿ). ಮಂಗಳ ಮತ್ತು ಗುರುಕಕ್ಷೆಗಳ ನಡುವೆ ಒಂದು ಗ್ರಹ ಸೂರ್ಯನನ್ನು ಪರಿಭ್ರಮಿಸುತ್ತಿರಬಹುದು ಎಂಬ ಊಹೆಯನ್ನು ಮೊದಲು ಮಂಡಿಸಿದವ ಯೋಹಾನ್ ಕೆಪ್ಲರ್ (1571-1630). ಅಂದು ತಿಳಿದಿದ್ದ ಗ್ರಹಗಳು ಕೇವಲ ಆರು-ಬುಧ, ಶುಕ್ರ, ಭೂಮಿ, ಮಂಗಳ, ಗುರು ಮತ್ತು ಶನಿ. 1766ರಲ್ಲಿ ವಿಟ್ಟೆನ್‍ಬರ್ಗಿನ ಟಿಶಿಯಸ್ ಎಂಬಾತ ಈ ಗ್ರಹಗಳ ಸರಾಸರಿ ಸೌರದೂರಗಳನ್ನು ಸನ್ನಿಹಿತವಾಗಿ ಸೂಚಿಸುವ ಒಂದು ಅನುಭವಜನ್ಯ ನಿಯಮವನ್ನು ಪ್ರತಿಪಾದಿಸಿದ. ಇದನ್ನು ಗ್ರಹಿಸಿ ಬೆಳಕಿಗೆ ತಂದವ ಬರ್ಲಿನ್ ವೀಕ್ಷಣಾಲಯದ ನಿರ್ದೇಶಕನಾಗಿದ್ದ ಜೆ.ಇ. ಬೋಡ್ (1747-1826). ಇವನು ಟಿಶಿಯಸಿನ ನಿಯಮವನ್ನು ಪ್ರಸಿದ್ಧಿಸಿ (1772) ಅದರಲ್ಲಿರುವ ಖಾಲಿ ಜಾಗವನ್ನು ಭರ್ತಿಮಾಡುವ ಒಂದು ಗ್ರಹ ಸೌರವ್ಯೂಹದಲ್ಲಿರಬೇಕೆಂದು ಸೂಚಿಸಿದ. ಈ ಕಾರಣದಿಂದ ಟಿಶಿಯಸ್ ನಿಯಮಕ್ಕೆ ಬೋಡ್ ನಿಯಮವೆಂಬ (ಸರಿಯಲ್ಲದ) ಹೆಸರು ರೂಢಿಗೆ ಬಂದು ಉಳಿದು ಕೊಂಡಿದೆ. 1781ರಲ್ಲಿ ಯುರೇನಸ್ ಗ್ರಹದ (ನೋಡಿ- ಯುರೇನಸ್) ಶೋಧವಾಯಿತು. (ಇದು ದೃಗ್ಗೋಚರಗ್ರಹವಲ್ಲ). ಇದರ ಕಕ್ಷಾಧಾತುಗಳ ಗಣನೆ ಮಾಡಿ ಸೂರ್ಯನಿಂದ ಈ ಗ್ರಹದ ಸರಾಸರಿದೂರ 19,191 ಖ.ಮಾ. ಎಂದು ತಿಳಿದರು. ಈ ವಾಸ್ತವಿಕ ದೂರ ಟಿಶಿಯಸ್ ಶ್ರೇಣಿಯ ಅನುರೂಪ ಬೆಲೆಗೆ (19.6) ಸರಿಸುಮಾರಾಗಿ ಹೊಂದಿದೆ ಎಂಬುದನ್ನು ಗಮನಿಸಿದಾಗ ಶ್ರೇಣಿಯ ಖಾಲಿಸ್ಥಳಕ್ಕೆ (2.8) ಅಧಿಕ ಮಹತ್ತ್ವ ಬಂದಿತು.

ಸಂಶೋಧನೆಗಳು

ಬದಲಾಯಿಸಿ
 
Euler diagram showing the types of bodies in the Solar System. (see Small Solar System body)

ಸಿಸಿಲಿ ದೇಶದ ಖಗೋಳಜ್ಞ ಜುಸೆಪೀ ಪ್ಯಾಟ್ಸಿ (1746-1826) ಎಂಬಾತ ಆಕಾಶದ ವೃಷಭರಾಶಿವಲಯವನ್ನು ಚಿತ್ರಿಸುವುದರಲ್ಲಿ ಮಗ್ನನಾಗಿದ್ದ. 1801ರ ಜನವರಿ 1ರಂದು (19ನೆಯ ಶತಮಾನದ ಪ್ರಥಮರಾತ್ರಿ), ಆ ವರೆಗೆ ಗುರುತಿಸದಿದ್ದ, ಒಂದು ಹೊಸ ನಕ್ಷತ್ರವನ್ನು ಅವನು ಗಮನಿಸಿದ. ಇದರಿಂದ ಕುತೂಹಲಾವಿಷ್ಟನಾಗಿ ಪ್ಯಾಟ್ಸಿ ಮುಂದಿನ ಎರಡು ರಾತ್ರಿಗಳ ಕಾಲವೂ ಎಡೆಬಿಡದೆ ಈ ನಕ್ಷತ್ರದ ಸ್ಥಾನವನ್ನು ಅವಲೋಕಿಸಿದಾಗ ಅದು ಬದಲಾಗಿದ್ದುದನ್ನು ಕಂಡ. ನಕ್ಷತ್ರಗಳ ಸಾಪೇಕ್ಷಸ್ಥಾನಗಳು ಬದಲಾಗಲು ಯುಗಯುಗಗಳೇ ಬೇಕು. ಆದ್ದರಿಂದ ಈ ಹೊಸನಕ್ಷತ್ರ ನಿಜ ನಕ್ಷತ್ರವಲ್ಲ. ಸೌರವ್ಯೂಹದ ಒಂದು ವಸ್ತುವಾಗಿರಬೇಕು ಎಂದು ಪ್ಯಾಟ್ಸಿ ತರ್ಕಿಸಿ ಅದು ಪ್ರಾಯಶಃ ಒಂದು ಧೂಮಕೇತು ಇರಬಹುದು ಎಂದು ಅಂದಾಜು ಮಾಡಿದ. ಆದರೆ ಈ ಕಾಯದ ವರ್ತನೆ ಬಲುವಿಚಿತ್ರವಾಗಿತ್ತು-ಜನವರಿ 14ರಂದು ಅದು ತನ್ನ ದಿಶೆಯನ್ನು ಬದಲಾಯಿಸಿತು. ಆ ವರೆಗೆ ಸ್ಥಿರನಕ್ಷತ್ರಗಳ ಹಿನ್ನೆಲೆಯಲ್ಲಿ ಪಶ್ಚಿಮ-ಪೂರ್ವ ದಿಶೆಯ ಚಲನೆಯನ್ನು ಪ್ರದರ್ಶಿಸುತ್ತಿದ್ದ ಈ ಆಗಂತುಕ ಕಾಯ ಜನವರಿ 14ರ ತರುವಾಯ ಪೂರ್ವ-ಪಶ್ಚಿಮ ದಿಶೆಯ ಚಲನೆಯನ್ನು ಪ್ರದರ್ಶಿಸಲು ತೊಡಗಿತು. ಉಚ್ಚಗ್ರಹಗಳು (ಎಂದರೆ ಸೂರ್ಯ-ಭೂಮಿ ಅಂತರದಿಂದ ಹೊರಗೆ ಕಕ್ಷೆಗಳಿರುವ ಗ್ರಹಗಳು. ಮಂಗಳ, ಗುರು, ಶನಿ, ಇತ್ಯಾದಿ; ಬುಧ ಮತ್ತು ಶುಕ್ರ ನೀಚ ಗ್ರಹಗಳು) ವಿಶಿಷ್ಟವಾಗಿ ಪ್ರದರ್ಶಿಸುವ ವಕ್ರಚಲನೆಯ (ರಿಟ್ರೊಗ್ರೇಡ್ ಮೋಷನ್) ನಿದರ್ಶನವಿದು. ಮುಂದೆ ಫೆಬ್ರುವರಿ 11ರ ವರೆಗೂ ಪ್ಯಾಟ್ಸಿ ಈ ನೂತನ ವಿಸ್ಮಯಕರ ಆಕಾಶಕಾಯವನ್ನು ವೀಕ್ಷಿಸುತ್ತ ತನ್ನ ವರದಿಗಳನ್ನು ಪಟ್ಟಿಮಾಡುತ್ತಿದ್ದ. ಆದರೆ ಅನಾರೋಗ್ಯ ನಿಮಿತ್ತ ಇದನ್ನು ಮುಂದುವರಿಸಲು ಅವನಿಗೆ ಆಗಲಿಲ್ಲ. ಅಂದಿನ ದಿನಗಳಲ್ಲಿ ಅನುಸರಿಸುತ್ತಿದ್ದ ವೀಕ್ಷಣಕ್ರಮ ದೈಹಿಕವಾಗಿಯೂ ಮಾನಸಿಕವಾಗಿಯೂ ಬಲು ಪ್ರಯಾಸಕರವಾದದ್ದು. ದೂರ ದರ್ಶಕವನ್ನು ಆಕಾಶದ ನಿಶ್ಚಿತ ವಲಯಗಳಿಗೆ ನಾಭಿಸಿ ಅಲ್ಲಿ ಕಾಣುವ ನಕ್ಷತ್ರ ಚಿತ್ರದ ತಯಾರಿಕೆ; ಇದನ್ನು ಆ ಮೊದಲೇ ತಯಾರಿಸಿ ಶಿಷ್ಟೀಕರಿಸಲ್ಪಟ್ಟಿದ್ದ ನಕ್ಷತ್ರಪಟದೊಡನೆ ಹೋಲಿಸುವುದು; ಹೀಗೆ ಮಾಡಿದಾಗ ಕಂಡುಬರುವ ವ್ಯತ್ಯಾಸವೇನಾದರೂ ಇದ್ದರೆ ಅದರ ಮೇಲೆ ಲಕ್ಷ್ಯವನ್ನು ಸಾಂದ್ರೀಕರಿಸಿ ಅಭ್ಯಾಸದ ಮುಂದುವರಿಸಿಕೆ. ಪ್ಯಾಟ್ಸಿ ಮಾಡಿದ್ದು ಇದೇ ಕಾರ್ಯವನ್ನು. ಆದರೆ ತನ್ನ ವೀಕ್ಷಿತಾಂಶಗಳಿಗೆ ಗಣಿತವನ್ನು ಅನ್ವಯಿಸಿ ಒಂದು ಖಚಿತ ನಿರ್ಧಾರವನ್ನು ತಳೆಯುವುದು ಅವನಿಗೆ ಆಗಲಿಲ್ಲ. ಇದೊಂದು ಹೊಸಗ್ರಹವೆಂದೂ ಇದರ ವರ್ಷ (ಸೂರ್ಯನಿಗೆ ಒಂದು ಪರಿಭ್ರಮಣೆ ಮುಗಿಸಲು ಬೇಕಾಗುವ ಅವಧಿ) ಸುಮಾರು 4 ಭೂಮಿವರ್ಷಗಳೆಂದೂ ಪ್ಯಾಟ್ಸಿ ಅಂದಾಜು ಮಾಡಿದ್ದ. ಈ ಗ್ರಹಕ್ಕೆ ಸಿರಿಸ್ ಎಂದು ಅವನೇ ಹೆಸರಿಟ್ಟದ್ದು. ಪ್ಯಾಟ್ಸಿ ತನ್ನ ಸಮಗ್ರ ವರದಿಯನ್ನೂ ಬೋಡ್‍ನಿಗೆ ಆಗಲೇ (ಜನವರಿ) ಬರೆದು ಕಳಿಸಿದ (ಇಟಲಿ ದೇಶದಿಂದ ಜರ್ಮನಿ ದೇಶಕ್ಕೆ). ಇದು ಬೋಡ್‍ನ ಹಸ್ತ ಸೇರಿದ್ದು ಮಾತ್ರ ಮಾರ್ಚ್ 20ರ ಸುಮಾರಿಗೆ. ಆ ವೇಳೆಗೆ ಈ ಆಗಂತುಕ ಕಾಯ ಸೂರ್ಯನಿಗೆ ತೀರ ಸಮೀಪವಾಗಿದ್ದು ಇದರ ವೀಕ್ಷಣೆ ಅಸಾಧ್ಯವಾಗಿತ್ತು. ರಾಜಗಣಿತಜ್ಞನೆಂದು ಹೆಸರು ಪಡೆದ ಗೌಸನ (1777-1855) ಲಕ್ಷ್ಯವನ್ನು ಆಗಂತುಕ ಕಾಯದ ಜಾರಿಕೆಯ ಚಲನೆ ವಿಶೇಷವಾಗಿ ಆಕರ್ಷಿಸಿತು. ಈಗ ನಡೆಯಬೇಕಾದ ಕೆಲಸಗಳು ಪ್ರಧಾನವಾಗಿ ಮೂರು: ಕಾಯದ ವೀಕ್ಷಿತಾಂಶಗಳ ಯಾದಿ ತಯಾರಿಕೆ; ಈ ಅಂಶಗಳಿಗೆ ಗಣಿತಸೂತ್ರಗಳನ್ನು ಅನ್ವಯಿಸಿ ಕಾಯದ ಕಕ್ಷೆಯ ಹಾಗೂ ವರ್ತನೆಯ ಸೈದ್ಧಾಂತಿಕ ತೀರ್ಮಾನ; ಈ ತೀರ್ಮಾನವನ್ನು ಅದೇ ಕಾಯಕ್ಕೆ ಅನ್ವಯಿಸಿ ಅದರ ಭವಿಷ್ಯ ಸ್ಥಾನ ನಿರ್ಣಯ (ಅಂದರೆ ಎಲ್ಲಿ ಯಾವಾಗ ಇರುವುದು ಇವೇ ಮುಂತಾದ ನಿರ್ಣಯ). ಪ್ಯಾಟ್ಸಿಯ ವೀಕ್ಷಣೆಗಳಿಂದ ತನಗೆ ದೊರೆತ ವೀಕ್ಷಣಾಂಶಗಳ ಆಧಾರದ ಮೇಲೆ ನ್ಯೂಟನ್ ಸೂತ್ರಗಳ ಚೌಕಟ್ಟಿನಲ್ಲಿ ಗೌಸ್ ಗ್ರಹಗಳ ಕಕ್ಷೆಗಳನ್ನು ನಿರ್ಧರಿಸುವ ನವಗಣಿತ ವಿಧಾನವನ್ನೇ ರೂಪಿಸಿದ. ಇದರ ಪ್ರಕಾರ ಸಿರಿಸ್ ಗ್ರಹದ ಜಾತಕವನ್ನು ಬರೆದು ಅದರ ಭವಿಷ್ಯವನ್ನು ಖಚಿತವಾಗಿ ಹೇಳಿದ. ಮುಂದೆ ವೀಕ್ಷಣೆ ಇದನ್ನು ಸ್ಥಿರೀಕರಿಸಿತು. ಆ ತರುವಾಯ ಶೋಧಿಸಲಾದ ಇತರ ಮೂರು ಗ್ರಹಗಳು ಸಹ ಗೌಸ್ ಗಣಿತವಿಧಾನದ ಪ್ರಾಯೋಗಿಕ ಕೌಶಲವನ್ನು ಸಮರ್ಥಿಸಿದುವು. ಇವೆಲ್ಲ ಗ್ರಹಗಳೂ ಟಿಶಿಯಸ್ ಶ್ರೇಣಿಯ ಖಾಲಿಸ್ಥಳವನ್ನು ಸೇರಿದಾಗ ಖಗೋಳಾನ್ವೇಷಕರಿಗೆ ಮೂಡಿದ ಸಮಸ್ಯೆ ಹೊಸತೇ-ಒಂದನ್ನು ಅರಸಿದಾಗ ಎರಡು ದೊರೆತವು; ಮುಂದೆ ಇದು ಮೂರಾಯಿತು; ಹಾಗಾದರೆ ಇದೇ ವಲಯದಲ್ಲಿ ಇನ್ನೂ ಹಲವಾರು ಗ್ರಹಗಳು ಇರಬಹುದೇ ಎಂಬುದು ಅದರ ಪ್ರಶ್ನೆ. ಉದ್ದೇಶಪೂರ್ವಕ ಶೋಧ ಮುಂದುವರಿದುದರ ಪರಿಣಾಮವಾಗಿ ಆವಿಷ್ಕರಣಗೊಂಡ ಕ್ಷುದ್ರಗ್ರಹಗಳ ವಿವರ ಹೀಗಿದೆ:

ಆವಿಷ್ಕರಣ ಕ್ರಮಸಂಖ್ಯೆ ಕ್ಷುದ್ರಗ್ರಹದ ಹೆಸರು ಆವಿಷ್ಕರಣದ ವರ್ಷ 1 ಸಿರಿಸ್ಜ ಜನವರಿ 1801 2 ಪಲ್ಲಾಸ್ಮಾ ಮಾರ್ಚ್ 1802 3 ಜೂನೋ 1804 4 ವೆಸ್ಟ್ 1807

ಐದನೆಯದರ ಶೋಧವಾದದ್ದು 1845ರಲ್ಲಿ. 1890ರ ವೇಳೆಗೆ 300ಕ್ಕೂ ಮಿಕ್ಕಿ ಭಿನ್ನ ಕ್ಷುದ್ರಗ್ರಹಗಳನ್ನು ಆವಿಷ್ಕರಿಸಲಾಗಿತ್ತು. ಇಂದಿನ (2004) ವರೆಗೆ ಸುಮಾರು 60,000 ಕ್ಷುದ್ರಗ್ರಹಗಳ ಒಂದು ಯಾದಿಯೇ ಸಿದ್ಧವಾಗಿದೆ. ಅವುಗಳ ಪೈಕಿ 1,500 ಕ್ಷುದ್ರಗ್ರಹಗಳ ಕಕ್ಷೆಗಳ ಖಚಿತ ನಿರ್ಧಾರವನ್ನು 1940ರ ವೇಳೆಗೆ ಮಾಡಲಾಗಿತ್ತು. ಇದು ಹೇಗೂ ಇರಲಿ-ಈ ವಸ್ತುಗಳ ಅನ್ವೇಷಣೆ ಇಂದು ಅಷ್ಟೇನೂ ಕುತೂಹಲಕಾರೀ ಹವ್ಯಾಸವಾಗಿ ಉಳಿದಿಲ್ಲ. ಗಾತ್ರ: ನಾಲ್ಕು ಪ್ರಕಾಶತಮ, ಪ್ರಾಯಶಃ ಅತಿದೊಡ್ಡ, ಕ್ಷುದ್ರಗ್ರಹಗಳ ವ್ಯಾಸಗಳು ಹೀಗಿವೆ; ಸಿರಿಸ್ 785 ಕಿ.ಮೀ. (488 ಮೈ.); ಪಲ್ಲಾಸ್ 489 ಕಿಮೀ. (304 ಮೈ.); ವೆಸ್ಟ 399 ಕಿಮೀ. (248 ಮೈ.); ಜೂನೋ 190 ಕಿಮೀ. (118 ಮೈ.). ಇನ್ನೂ ದೊಡ್ಡ ಗಾತ್ರದವು ಇಲ್ಲವೆಂದು ಖಚಿತವಾಗಿ ಹೇಳುವಂತಿಲ್ಲ. ಆದರೆ ಇದುವರೆಗೆ ನಿರ್ಧಾರವಾದ ಗಾತ್ರಗಳು ಮೇಲಿನವು.

ದ್ರವ್ಯರಾಶಿ

ಬದಲಾಯಿಸಿ
 
Artist’s impression shows how an asteroid is torn apart by the strong gravity of a white dwarf.[]

ಕ್ಷುದ್ರಗ್ರಹಗಳ ಸಮಗ್ರ ದ್ರವ್ಯರಾಶಿ ಖಚಿತವಾಗಿ ತಿಳಿದಿಲ್ಲ. ಅದು ಸುಮಾರಾಗಿ ಚಂದ್ರನ 1/20ರಷ್ಟು ಅಥವಾ ಭೂಮಿಯ 1/1600ರಷ್ಟು ಇರಬಹುದೆಂದು ಅಂದಾಜು. ಈ ದೃಷ್ಟಿಯಲ್ಲಿ ಕ್ಷುದ್ರಗ್ರಹಗಳೆಲ್ಲವನ್ನು ಒಂದುಗೂಡಿಸಿ ಒಂದೇ ಗ್ರಹವನ್ನಾಗಿ ಮಾಡಿದರೂ ಅದೊಂದು ಪ್ರಥಮ ದರ್ಜೆಯ ಗ್ರಹವಾಗಲಾರದು. ಆದ್ದರಿಂದ ಸೌರವ್ಯೂಹದ ರಚನೆಯ ಕಾಲದಲ್ಲೇ ಭೂಮಿ, ಮಂಗಳ ಇವೇ ಮೊದಲಾದ ಗ್ರಹಗಳ ಗಾತ್ರದಲ್ಲೇ ಒಂದು ಗ್ರಹ ಮಂಗಳ ಹಾಗೂ ಗುರು ಕಕ್ಷೆಗಳ ನಡುವೆಯೂ ರಚಿತವಾಗಿದ್ದು ಮುಂದೆ ಅದೇ ಒಡೆದುಹೋಗಿ ಕ್ಷುದ್ರ ಗ್ರಹಗಳಾದುವೆನ್ನುವ ಊಹೆಗೆ ಸರಿಯಾದ ಸಮರ್ಥನೆ ದೊರೆಯುವುದಿಲ್ಲ. ಸೌರವ್ಯೂಹದ ರಚನೆಯ ಕಾಲದ ಅವಶೇಷಗಳೇ ಈ ಭಿನ್ನ ಆಕಾರಗಳ ದ್ರವ್ಯರಾಶಿಗಳ ತುಣುಕುಗಳ ಸಮುದಾಯವಾಗಿರಬೇಕು ಎಂದು ನಂಬಲಾಗಿದೆ.

ಕಕ್ಷೆಗಳು

ಬದಲಾಯಿಸಿ
 
The asteroid belt (white) and Jupiter's trojan asteroids (green)

ಎಲ್ಲ ಕ್ಷುದ್ರಗ್ರಹಗಳೂ ಸೂರ್ಯನ ಸುತ್ತ ಇತರ ಗ್ರಹಗಳಂತೆಯೇ (ಪಶ್ಚಿಮದಿಂದ ಪೂರ್ವಕ್ಕೆ) ಪರಿಭ್ರಮಿಸುತ್ತವೆ. ಇವುಗಳಲ್ಲಿ ಹೆಚ್ಚಿನವು ಸುಮಾರಾಗಿ ಭೂಕಕ್ಷೆಯ (ಎಂದರೆ ಕ್ರಾಂತಿವೃತ್ತದ) ತಲದ ಮೇಲೆಯೇ ಇವೆ. ಕ್ರಾಂತಿ ವೃತ್ತಕ್ಕೆ ಕ್ಷುದ್ರಗ್ರಹಗಳ ಕಕ್ಷೆಗಳ ಸರಾಸರಿ ಬಾಗು 9.50. ಸುಮಾರು 12 ಕ್ಷುದ್ರಗ್ರಹಗಳ ಕಕ್ಷೆಗಳ ಬಾಗು 250ಗಿಂತಲೂ ಹೆಚ್ಚು. ಬೆಟೂಲಿಯ ಎಂಬ ಹೆಸರಿನ ಕ್ಷುದ್ರಗ್ರಹದ ಕಕ್ಷೆ ಕ್ರಾಂತಿವೃತ್ತಕ್ಕೆ 520ಗಳಷ್ಟು ಮಾಲಿಕೊಂಡಿದೆ. ಹೆಚ್ಚಿನ ಕ್ಷುದ್ರಗ್ರಹಗಳ ಕಕ್ಷೆಗಳ ಅರ್ಧದೀರ್ಘಾಕ್ಷಗಳು (ಸೆಮಿಮೇಜರ್ ಏಕ್ಸಸ್) 2.3ರಿಂದ 3.3 ಖ.ಮಾ.ಗಳ ವ್ಯಾಪ್ತಿಯಲ್ಲಿವೆ. ಈ ಗ್ರಹಗಳ ನಾಕ್ಷತ್ರಿಕ ವರ್ಷಗಳು (ಸ್ಥಿರನಕ್ಷತ್ರಗಳನ್ನು ಕುರಿತು ಸೂರ್ಯನ ಸುತ್ತ ಒಂದು ಪರಿಭ್ರಮಣೆ ಮುಗಿಸಲು ಬೇಕಾಗುವ ಅವಧಿ) 3.5ರಿಂದ 6 ವರ್ಷಗಳು. ಇಕಾರಸ್ (ನೋಡಿ) ಕ್ಷುದ್ರಗ್ರಹದ ಕಕ್ಷೆ ಅತ್ಯಂತ ಕಿರಿದು. ಇದರ ಅರ್ಧದೀರ್ಘಾಕ್ಷ 1.0777 ಖ.ಮಾ. ಅಲ್ಲದೇ ಈ ಕಕ್ಷೆಯ ಉತ್ಕೇಂದ್ರತೆಯೂ (ಗೊತ್ತಿರುವ ಕಕ್ಷೆಗಳ ಪೈಕಿ) ಗರಿಷ್ಠವಾಗಿದೆ (0.83). ಸೌರವ್ಯೂಹದಲ್ಲಿ ಬುಧಸೂರ್ಯನಿಗೆ ಸಮೀಪತಮ ಗ್ರಹ. ಇದರ ಕಕ್ಷೆಯನ್ನು ಸಹ ಅಡ್ಡದಾಟಿ ಸೂರ್ಯನಿಗೆ ಬುಧನಿಗೆ ಸಮೀಪವಾಗಿ ಹಾದುಹೋಗುವ ಇಕಾರಸ್ (ಧೂಮಕೇತುಗಳೂ ಉಲ್ಕೆಗಳೂ ಅಪವಾದ) ನಂತಹ ಅನೇಕ ಕ್ಷುದ್ರಗ್ರಹಗಳಿವೆ. ಹಿಲ್ಡಗೊ ಎಂಬ ಹೆಸರಿನ ಕ್ಷುದ್ರಗ್ರಹದ ಕಕ್ಷೆ ಅತ್ಯಂತ ದೊಡ್ಡದು. ದೀರ್ಘಾಕ್ಷ 5.79 ಖ.ಮಾ. ಮತ್ತು ಉತ್ಕೇಂದ್ರತೆ 0.66. ಸೂರೋಚ್ಚ ಬಿಂದುವಿಗೆ (ಆಪ್-ಹೀಲಿಯನ್) ಈ ಗ್ರಹ ಬಂದಾಗ ಇದು ಗುರುಗ್ರಹದ ಕಕ್ಷೆಯನ್ನೂ ದಾಟಿ ಸೂರ್ಯನಿಂದ ದೂರವಾಗಿರುತ್ತದೆ.

ಕ್ಷುದ್ರಗ್ರಹಗಳ ಕಕ್ಷೆಗಳ ಈ ವೈಚಿತ್ರ್ಯಗಳಿಂದಾಗಿ ಕೆಲವು ಗ್ರಹಗಳು ಅಪರೂಪವಾಗಿ ಭೂಮಿಗೆ ಅತಿ ಸಮೀಪ ಬರುವುದು ಉಂಟು. 1932ರಲ್ಲಿ ಅಪೋಲೋ, 1936ರಲ್ಲಿ ಅಡೋನಿಸ್, 1937ರಲ್ಲಿ ಹರ್ಮಿಸ್ ಭೂಮಿಗೆ 3,000,000 ಮೈಲಿಗಳಷ್ಟು ಹತ್ತಿರ ಬಂದು ಹೋದುವು. 1968ರಲ್ಲಿ ಇಕಾರಸ್ 4,000,000ಮೈಲಿಗಳಷ್ಟು ಸಮೀಪವೂ 1969ರಲ್ಲಿ ಇನ್ರ್ನೆಂದು 6,000,000 ಮೈಲಿಗಳಷ್ಟು ಸಮೀಪವೂ ಬಂದಿದ್ದವು. ಮುಂದೆಂದಾದರೂ ಭೂಮಿಗೂ ಒಂದು ಗಣನೀಯ ಗಾತ್ರದ ಕ್ಷುದ್ರ ಗ್ರಹಕ್ಕೂ ಡಿಕ್ಕಿ ಸಂಭವಿಸಬಹುದು. ಇಂಥ ಘಟನೆಯನ್ನು ಅಸಂಭಾವ್ಯ ಎನ್ನಲುಬಾರದು. ಅಗಣನೀಯ ಗಾತ್ರದ ಕ್ಷುದ್ರಗ್ರಹಗಳು ಭೂಮಿಯ ಗುರುತ್ವವಲಯವನ್ನು ಪ್ರವೇಶಿಸಿದೊಡನೆ ಭೂತಲದೆಡೆಗೆ ಆಕರ್ಷಿಸಲ್ಪಟ್ಟು ಆಗ ವಾಯುಮಂಡಲದೊಡನೆ ಒದಗುವ ಘರ್ಷಣೆಯಿಂದ ಕಾದು ಉರಿದು ಬೂದಿಯಾಗಿ ನಾಶವಾಗಿ ಹೋಗುತ್ತವೆ. ಉಲ್ಕೆಗಳ ಮೂಲವನ್ನು ಕ್ಷುದ್ರಗ್ರಹಗಳಲ್ಲಿ ಕಾಣುವುದುಂಟು. ಇಂತಹ ಕ್ಷುದ್ರಗ್ರಹಗಳಿಗೆ ನಿಯರ್ ಅರ್ತ್ ಆಸೈರ್ಯಾಡ್ಸ್ ಎಂಬ ಹೆಸರಿದೆ. ಕರ್ಕ್‍ವುಡ್ ತೆರಪುಗಳು: ಕ್ಷುದ್ರಗ್ರಹಗಳ ಕಕ್ಷೆಗಳ ವಿತರಣೆಯಲ್ಲಿ ಒಂದು ಕುತೂಹಲಕಾರೀ ಅಂಶವುಂಟು. ಈ ಕಕ್ಷೆಗಳು ಕೆಲವು ಕಡೆ ಬಲು ನಿಬಿಡವಾಗಿ ಸೇರಿಕೊಂಡಿವೆ; ಇನ್ನು ಕೆಲವು ಕಡೆ ವಿರಳವಾಗಿ ಹರಡಿಹೋಗಿವೆ. ಇದರಿಂದಾಗಿ ಕಕ್ಷೆಗಳ ಗುಂಪುಗಳ ನಡುವೆ ತೆರಪು(ಗ್ಯಾಪ್) ತಲೆದೋರಿದೆ. ಶನಿಗ್ರಹದ ಬಳೆಗಳಲ್ಲಿ ಕಂಡುಬರುವಂಥÀ ದೃಶ್ಯವಿದು. ಡೇನಿಯಲ್ ಕರ್ಕ್‍ವುಡ್ ಎಂಬಾತ 1866ರಲ್ಲಿ ಈ ತೆರಪುಗಳ ಅಸ್ತಿತ್ವಕ್ಕೆ ವಿವರಣೆ ನೀಡಿದ. ಹೀಗಾಗಿ ಕರ್ಕ್‍ವುಡ್ ತೆರಪುಗಳೆಂದೇ ಇವುಗಳಿಗೆ ಹೆಸರು ಬಂದಿದೆ. ಗುರುಗ್ರಹ ಕ್ಷುದ್ರಗ್ರಹಗಳ ಮೇಲೆ ಬೀರುವ ಗುರುತ್ವಾಕರ್ಷಣೆಯ ಪರಿಣಾಮವಾಗಿ ಈ ತೆರಪುಗಳು ತಲೆದೋರಿವೆ ಎಂದು ಕರ್ಕ್‍ವುಡ್ ವಿವರಿಸಿದ. ಉದಾಹರಣೆಗೆ ಸೂರ್ಯನಿಂದ ಗುರುವಿನ ದೂರದ ಸುಮಾರು 5/8 ರಷ್ಟು ದೂರದಲ್ಲಿರುವ ಒಂದು ಕ್ಷುದ್ರಗ್ರಹದ ಅವಧಿ (ಎಂದರೆ ವರ್ಷ) ಗುರುವಿನ ಅವಧಿಯ ಅರ್ಧದಷ್ಟು ಇರುವುದು. ಆದ್ದರಿಂದ ಕ್ಷುದ್ರಗ್ರಹ ಸೂರ್ಯನ ಸುತ್ತ ಪ್ರತಿ ಎರಡು ಸಲ ಪರಿಭ್ರಮಿಸುವಾಗ ಒಂದು ಸಲ ಗುರುವಿನ ಸಮೀಪ ಬರುವುದು ಮತ್ತು ಗುರುವಿನ ಪ್ರಬಲ ಆಕರ್ಷಣೆಗೆ ಒಳಗಾಗುವುದು. ಇಂಥ ವಿದ್ಯಮಾನದ ಒಂದೇ ದಿಶೆಯ ಪುನರಾವರ್ತನೆಯ ಪರಿಣಾಮವಾಗಿ ಆ ಕ್ಷುದ್ರಗ್ರಹ ತನ್ನ ಸ್ಥಾನದಿಂದ ಹೊರಗೆ ಚಲಿಸಿ ಅದು ಇರಬೇಕಾಗಿದ್ದಲ್ಲಿ ತೆರಪು ಉಂಟಾಗುತ್ತದೆ. ಗುರು ಗ್ರಹದ ವರ್ಷದ 1/3, 2/5, 3/5 ಮುಂತಾದ ಅವಧಿಗಳಿರುವ ಕ್ಷುದ್ರಗ್ರಹಗಳಿರುವಲ್ಲೆಲ್ಲ ಕರ್ಕ್‍ವುಡ್ ತೆರಪುಗಳಾಗಿವೆ.

ಟ್ರೋಜನ್ ಕ್ಷುದ್ರಗ್ರಹಗಳು

ಬದಲಾಯಿಸಿ

ತ್ರಿಕಾಯ ಸಮಸ್ಯೆಗೆ (ಪ್ರಾಬ್ಲೆಮ್ ಆಫ್ ತ್ರೀ ಬಾಡಿಸ್) (ನೋಡಿ- ತ್ರಿಕಾಯ-ಸಮಸ್ಯೆ) 1772ರಲ್ಲಿ ಜೋಸೆಫ್ ಲೂಯಿ ಲ್ಯಾಗ್ರಾಂಜ್ ಎಂಬಾತ ಒಂದು ನಿರ್ದಿಷ್ಟ ಪರಿಹಾರವನ್ನು ಸೂಚಿಸಿದ. ಇದರ ಪ್ರಕಾರ ಯಾವುದೇ ಕಕ್ಷೆಯ ಮೇಲೆ ಎರಡು ನಿರ್ದಿಷ್ಟ ಬಿಂದುಗಳಿರಬೇಕು, ಅಲ್ಲಿ ಅಥವಾ ಅವುಗಳ ಸಮೀಪ ಯಾವುದೇ ಕ್ಷುದ್ರಗ್ರಹ ಬಂದುದಾದರೆ ಅಲ್ಲೇ ಅನಿರ್ದಿಷ್ಟ ಕಾಲದ ವರೆಗೆ ಇರಬೇಕು ಎಂಬುದಾಗಿ ತಿಳಿಯಿತು. ಸೂರ್ಯನೂ ಗುರುವೂ ಗುರುಕಕ್ಷೆಯ ಮೇಲೆ ಸಮಭುಜತ್ರಿಭುಜವನ್ನು ರಚಿಸುವ ಎರಡು ಬಿಂದುಗಳೇ ಇವು. ಈ ಬಿಂದುಗಳಲ್ಲಿರಬಹುದಾದ ಕ್ಷುದ್ರಗ್ರಹಗಳು ಗುರುಕಕ್ಷೆಯ ಮೇಲೆ ಸೂರ್ಯನ ಸುತ್ತ ಗುರುವಿನ ಅವಧಿಯನ್ನೇ ನಿರಂತರವಾಗಿ ಪರಿಭ್ರಮಿಸುತ್ತಿರುವುದರಿಂದ ಗುರು-ಸೂರ್ಯ ಸಾಪೇಕ್ಷವಾಗಿ ಇವುಗಳ ಸ್ಥಾನ ಬದಲಾಗುವುದಿಲ್ಲ. ಇಂಥ ಗ್ರಹಗಳ ಅಸ್ತಿತ್ವವನ್ನು ಕುರಿತು ನಡೆಸಿದ ವೀಕ್ಷಣೆಗಳ ಫಲವಾಗಿ 1906ರಿಂದ 1908ರ ವರೆಗಿನ ಅವಧಿಯಲ್ಲಿ 4 ಕ್ಷುದ್ರಗ್ರಹಗಳನ್ನು ಶೋಧಿಸಲಾಯಿತು. ಈಗ ಸಾವಿರಗಟ್ಟಲೆ ಇವೆ ಎಂದು ತಿಳಿದಿದ್ದೇವೆ. ಗ್ರೀಕ್ ಪುರಾಣಗಳ ವೀರರಾದ ಟ್ರೋಜನ್ನರ ಹೆಸರುಗಳಿಂದ ಈ ಕಾರ್ಯಗಳನ್ನು ಟ್ರೋಜನ್ ಕ್ಷುದ್ರಗ್ರಹಗಳೆಂದು ಕರೆದಿದ್ದಾರೆ.

ಸೌರವ್ಯೂಹದ ಉಗಮ, ವಿಕಾಸನಗಳನ್ನು ಚರ್ಚಿಸುವಾಗ, ಸೌರವ್ಯೂಹದ ಪ್ರಾಚಲಗಳ ಮತ್ತು ಸ್ಥಿರಾಂಕಗಳ ನಿರ್ಧಾರವನ್ನು ಮಾಡುವಾಗ, ಸೌರವ್ಯೂಹದ ವೈಚಿತ್ರ್ಯವನ್ನು ಮತ್ತು ವೈಶಿಷ್ಟ್ಯವನ್ನು ಅಭ್ಯಸಿಸುವಾಗ ಕ್ಷುದ್ರಗ್ರಹಗಳ ಪಾತ್ರ ಮಹತ್ತ್ವ ಪೂರ್ಣವಾದದ್ದು.

ಉಲ್ಲೇಖಗಳು

ಬದಲಾಯಿಸಿ
  1. "The Glowing Halo of a Zombie Star".

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
[[:wikisource:kn:

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಷುದ್ರಗ್ರಹಗಳು|

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಷುದ್ರಗ್ರಹಗಳು]]