ಕೃಷಿ ವಿಸ್ತರಣಕಾರ್ಯ
ರೈತರು ಸ್ವಸಹಾಯದಿಂದ ಪ್ರಗತಿಪರರಾಗುವಂತೆ ಸರ್ಕಾರದ ಕೃಷಿ ಇಲಾಖೆ ನೀಡುವ ನೆರವು. ಇದರ ಮೂಲೋದ್ದೇಶ ಸಾಂಸ್ಕøತಿಕ ವಿನಿಮಯ. ಕೃಷಿ ವಿಸ್ತರಣ ಸೇವೆಯ ಪ್ರಧಾನ ಲಕ್ಷ್ಯ ವ್ಯಕ್ತಿವಿಕಾಸ. ಆದ್ದರಿಂದ ಇಂಥ ವಿಸ್ತರಣಕಾರ್ಯ ರೈತರೊಂದಿಗೆ ನಿಕಟ ಒಡನಾಟದಿಂದ ನಡೆಯಬೇಕಾದದ್ದು. ವಿಸ್ತರಣಕಾರ್ಯಗಳು ರೈತರು ಇರುವಲ್ಲಿಯೇ ನಡೆಯುವ ಚಟುವಟಿಕೆಗಳು. ಇವು ಮುಖ್ಯವಾಗಿ ವ್ಶೆಜ್ಞಾನಿಕ ಪದ್ಧತಿಗಳ ಕಡೆಗೆ ರೈತವರ್ಗದ ಲಕ್ಷ್ಯವನ್ನು ಆಕರ್ಷಿಸಿ ಅವರಲ್ಲಿ ಕುತೂಹಲವನ್ನು ಪ್ರಚೋದಿಸಿ ಅನುಷ್ಠಾನಕ್ಕೆ ತರುವಂತೆ ಪ್ರೋತ್ಸಾಹಿಸುತ್ತವೆ ಮತ್ತು ಪ್ರತ್ಯಕ್ಷಾನುಭವಗಳ ಮೌಲ್ಯಮಾಪನ ಮಾಡುತ್ತವೆ. ಇಲ್ಲೆಲ್ಲ ಸ್ಥಳೀಯ ರೈತ ಧುರೀಣತ್ವವನ್ನು ವರ್ಧಿಸುವುದು ಅತ್ಯಾವಶ್ಯಕ. ಆದ್ದರಿಂದ ವಿಸ್ತರಣ ಕಾರ್ಯಕರ್ತ ಶಿಕ್ಷಕನಾಗಿ ಸಲಹೆಗಾರನಾಗಿ, ವಿಶ್ಲೇಷಣಕಾರನಾಗಿ ಮತ್ತು ವ್ಯವಸ್ಥಾಪಕನಾಗಿ ವಿವಿಧ ಪಾತ್ರಗಳನ್ನು ಹೊಣೆ ನಿರ್ವಹಿಸಬೇಕಾಗುತ್ತದೆ. ರೈತವರ್ಗದವರು ತಮ್ಮ ಪ್ರದೇಶದ ಸಾಧನಸಂಪತ್ತಿನ ಪೂರ್ಣ ಪ್ರಯೋಜನ ಪಡೆದು ಅಧಿಕ ಉತ್ಪನ್ನವನ್ನು ಸಾಧಿಸುವಂತೆ ಮಾಡಲು ಕೃಷಿ ವಿಸ್ತರಣಕಾರ್ಯಕರ್ತ ಶ್ರಮಿಸುತ್ತಾನೆ.
ಕೃಷಿ ವಿಸ್ತರಣ ಕಾರ್ಯವಿಧಾನಗಳು
ಬದಲಾಯಿಸಿರೈತನ ಮನೋವಿಕಾಸವೇ ಕೃಷಿ ಅಭಿವೃದ್ಧಿಗೆ ಮೂಲ. ಇದಕ್ಕೆ ಪೂರಕವಾಗುವಂತೆ ಸನ್ನಿವೇಶಗಳನ್ನು ಕಲ್ಪಿಸುವುದು ಕೃಷಿ ವಿಸ್ತರಣಾಧಿಕಾರಿಗಳ ಕರ್ತವ್ಯ. ಇದನ್ನು ಎರಡು ರೀತಿಗಳಲ್ಲಿ ಮಾಡುತ್ತಾರೆ. ವೈಯಕ್ತಿಕ ವಿಧಾನ, ಸಾಮೂಹಿಕ ವಿಧಾನ. ವೈಯಕ್ತಿಕ ವಿಧಾನದಲ್ಲಿ ಕಾರ್ಯಕರ್ತ ಒಂದೊಂದು ರೈತ ಕುಟುಂಬಕ್ಕೂ ಭೇಟಿ ನೀಡಿ ಅಥವಾ ಅವರೊಡನೆ ಪತ್ರ ವ್ಯವಹಾರ ನಡೆಸಿ ಅವರ ಸಮಸ್ಯೆಗಳಿಗೆ ವೈಯಕ್ತಿಕ ಗಮನ ನೀಡುತ್ತಾನೆ. ಅಲ್ಲದೆ ವಿಸ್ತರಣ ಕಚೇರಿಗೆ ರೈತರು ಆಗಾಗ ಭೇಟಿ ಕೊಡುವಂತೆ ಪ್ರೋತ್ಸಾಹಿಸುತ್ತಾನೆ. ಸಾಮೂಹಿಕ ವಿಧಾನದಲ್ಲಿ ವಿಚಾರಗೋಷ್ಠಿಗಳು, ತಜ್ಞರಿಂದ ಪ್ರಯೋಗಸಹಿತ ವಿವರಣೆಗಳು, ಚಿತ್ರ ಪ್ರದರ್ಶನಗಳು, ರೇಡಿಯೋ ಗೋಷ್ಠಿಗಳು ಮುಂತಾದವು ಸೇರುತ್ತವೆ. ಕಾರ್ಯವಿಧಾನದ ಇವೆರಡು ರೀತಿಗಳ ಉದ್ದೇಶವೆಂದರೆ ರೈತನಲ್ಲಿ ಜಾಗೃತ ಮನೋಭಾವದ ಪ್ರೇರಣೆ ಮತ್ತು ತನ್ಮೂಲಕ ತನ್ನ ವೃತ್ತಿಯಲ್ಲಿ ಅರ್ಥಪೂರ್ಣ ಕಾರ್ಯಭಾಗಿತ್ವ. ಗೃಹಿಣಿಯರಿಗಾಗಿ ವಿಸ್ತರಣಕಾರ್ಯ: ಆರೋಗ್ಯ, ನೈರ್ಮಲ್ಯ, ಪೌಷ್ಠಿಕ ಆಹಾರಗಳ ಉಪಯೋಗ, ಮಿತವ್ಯಯ, ಶಿಶುಸಂಗೋಪನ, ಕುಟುಂಬ ಯೋಜನೆ, ಸಂಸ್ಕøತಿಯ ರಕ್ಷಣೆ ಇವೇ ಮುಂತಾದ ದೈನಂದಿನ ಜೀವನದ ನೂರೆಂಟು ಚಿಕ್ಕ ದೊಡ್ಡ ಸಮಸ್ಯೆಗಳನ್ನು ಸಮರ್ಪಕವಾಗಿ ಪರಿಹರಿಸಲು ಗೃಹಿಣಿಯರಿಗೆ ಯೋಗ್ಯ ಜ್ಞಾನ ಇರಬೇಕಾದದ್ದು ಅಗತ್ಯ. ಈ ದಿಶೆಯಲ್ಲಿ ಮಹಿಳೆಯರಿಗೆ ಸಮರ್ಪಕ ತಿಳುವಳಿಕೆ ನೀಡುವುದು ವಿಸ್ತರಣಕಾರ್ಯದ ಇನ್ನೊಂದು ಪ್ರಧಾನ ಹೊಣೆಗಾರಿಕೆ. ಮಹಿಳಾ ಕಾರ್ಯಕರ್ತರು ಇಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.ಗ್ರಾಮಾಂತರ ಯುವಜನರಿಗಾಗಿ ವಿಸ್ತರಣಕಾರ್ಯ: ಸಾಧಾರಣವಾಗಿ 10-20 ವರ್ಷ ವಯಸ್ಸಿನ ಬಾಲಕ ಬಾಲಕಿಯರನ್ನು ಲಕ್ಷ್ಯದಲ್ಲಿರಿಸಿ ಈ ಕಾರ್ಯವನ್ನು ಕೈಗೊಳ್ಳಲಾಗುತ್ತದೆ. ರೈತಾಪಿ ಜನಾಂಗದಲ್ಲಿ ಇಂದಿಗೂ ಅಂಥ ಬಹುಮಂದಿ ಆಕಡೆ ವಿದ್ಯಾವಂತರೂ ಆಗದೆ ಈಕಡೆ ವ್ಯವಸಾಯಕ್ಕೂ ಇಳಿಯದೇ ನಿರುತ್ಸಾಹಿಗಳಾಗಿರುವುದುಂಟು. ಅಂಥವರಿಗೆ ತಕ್ಕುದಾದ ರಚನಾತ್ಮಕ ಕಾರ್ಯಕಲಾಪಗಳನ್ನು ರೂಪಿಸಿ ಅವರು ಅವುಗಳಲ್ಲಿ ಭಾಗವಹಿಸುವಂತೆ ಮಾಡಿ ಅವರ ಜೀವನದಲ್ಲಿ ಆಸೆ, ಆಕಾಂಕ್ಷೆ, ಉತ್ಸಾಹ ತುಂಬುವುದು ವಿಸ್ತರಣ ಕಾರ್ಯದ ಇನ್ನೊಂದು ಮುಖ್ಯ ಹೊಣೆಗಾರಿಕೆ. ಯುವಜನ ಯೋಜನೆಯಿಂದ ವಿಜ್ಞಾನ ಪ್ರಸಾರ ಶೀಘ್ರಗತಿಯಿಂದ ಆಗುವುದು.[೧]
ಜಾಗತಿಕ ವಿಸ್ತರಣಕಾರ್ಯ
ಬದಲಾಯಿಸಿಸಂಯುಕ್ತ ರಾಷ್ಟ್ರಸಂಘದ ಆಹಾರ ಮತ್ತು ಕೃಷಿ ಸಂಸ್ಥೆ (ಫುಡ್ ಅಂಡ್ ಅಗ್ರಿಕಲ್ಚರಲ್ ಆರ್ಗನೈಸೇಷನ್, ಎಫ್‍ಎಓ) 1951ರಲ್ಲಿ ನಡೆಸಿದ ಒಂದು ಸಮ್ಮೇಳನದಲ್ಲಿ 66 ರಾಷ್ಟ್ರಗಳು ಭಾಗವಹಿಸಿದ್ದವು. ಪ್ರತಿ ರಾಷ್ಟ್ರದಲ್ಲಿಯೂ ಕೃಷಿವಿಸ್ತರಣ ಮತ್ತು ಪ್ರಾತ್ಯಕ್ಷಿಕೆ ವ್ಯವಸ್ಥೆಯ ಏರ್ಪಾಡಾಗಬೇಕು ಎಂದು ಆ ಸಮ್ಮೇಳನದಲ್ಲಿ ನಿರ್ಧರಿಸಲಾಯಿತು. ಇಂಥ ಒಂದು ಏರ್ಪಾಡಿನಿಂದ ಮಾತ್ರ ರೈತರ ಅಭಿವೃದ್ಧಿ ಸಾಧ್ಯ ಎಂದು ಸಮ್ಮೇಳನ ಮನಗಂಡಿತು. ಅಲ್ಲಿಂದ ಈಚೆಗೆ ಪ್ರಪಂಚದ ಬಹುಭಾಗವನ್ನು ಕೃಷಿವಿಸ್ತರಣ ಕಾರ್ಯ ವ್ಯಾಪಿಸಿದೆ. ಕೆಲವು ಪ್ರಮುಖ ರಾಷ್ಟ್ರಗಳಲ್ಲಿ ಇದು ಹೇಗೆ ಪ್ರಗತಿಹೊಂದಿದೆ ಎಂಬುದನ್ನು ಮುಂದೆ ನೋಡಬಹುದು.[೨]
ಅಮೆರಿಕ ಸಂಯುಕ್ತಸಂಸ್ಥಾನ
ಬದಲಾಯಿಸಿಏಬ್ರಹಾಂಲಿಂಕನನ ಕಾಲದಲ್ಲಿಯೇ ಸ್ಥಾಪಿತವಾದ (1862) ವಿಸ್ತರಣ ಕಾರ್ಯದ ಯೋಜನೆ ಇಂದು ಅಮೆರಿಕದಲ್ಲಿ ಸರ್ವವ್ಯಾಪಿಯಾಗಿದೆ. ಆ ರಾಷ್ಟ್ರದ ಕೃಷಿಯ ಸರ್ವಾಂಗೀಣಾಭಿವೃದ್ಧಿಯಲ್ಲಿ ವಿಸ್ತರಣಕಾರ್ಯದ ಪಾತ್ರ ಮಹತ್ತ್ವಪೂರ್ಣವಾದದ್ದು. ಅಲ್ಲಿನ ವೈಶಿಷ್ಟ್ಯವೆಂದರೆ ವಿಶ್ವವಿದ್ಯಾಲಯಗಳು, ಸ್ಥಳೀಯ ಕೌಂಟಿ ಸರ್ಕಾರಗಳು (ನಮ್ಮ ತಾಲ್ಲೂಕು ಬೋರ್ಡುಗಳಂತೆ) ಮತ್ತು ರೈತ ಸಂಘ ಸಂಸ್ಥೆಗಳು ವಿಸ್ತರಣಕಾರ್ಯದ ಜವಾಬ್ದಾರಿಯನ್ನು ಸಮನಾಗಿ ಹೊತ್ತಿರುತ್ತವೆ. ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಹಣದ ಸಹಾಯ ಮತ್ತು ತಾಂತ್ರಿಕ ನೆರವು ಮಾತ್ರ ನೀಡುವುವು. ವಿಸ್ತರಣಕಾರ್ಯಕರ್ತರು ವಿಶ್ವವಿದ್ಯಾಲಯಗಳೊಡನೆ ನೇರ ಸಂಪರ್ಕ ಹೊಂದಿದ್ದು ರೈತಜೀವನದಲ್ಲಿ ಬೆರೆತು ಕೆಲಸ ಮಾಡುತ್ತಾರೆ. ಇದರಿಂದ ವಿಶ್ವವಿದ್ಯಾಲಯ-ರೈತರಲ್ಲಿ ಅಭಿಪ್ರಾಯಗಳ ಮತ್ತು ಅನುಭವಗಳ ನೇರ ವಿನಿಮಯ ಆಗಲು ತುಂಬ ಅನುಕೂಲ ಉಂಟು. ವಾಯವ್ಯ ಯೂರೋಪಿನ ರಾಷ್ಟ್ರಗಳು: ನೆದರ್‍ಲ್ಯಾಂಡ್ಸ್, ಡೆನ್‍ಮಾರ್ಕ್, ಜರ್ಮನಿ, ಫ್ರಾನ್ಸ್, ಬೆಲ್ಜಿಯಂ ಮತ್ತು ಸ್ವಿಟ್ಸರ್‍ಲೆಂಡ್ ರಾಷ್ಟ್ರಗಳಲ್ಲಿ 18ನೆಯ ಶತಮಾನದಲ್ಲಿ ಕೃಷಿಕ್ರಾಂತಿ ಮೊದಲು ಪ್ರಾರಂಭವಾಯ್ತು. ಗ್ರಾಮಾಂತರ, ಪ್ರಾಥಮಿಕ ವಿದ್ಯಾಭ್ಯಾಸ ಪದ್ಧತಿಯಲ್ಲಿ ಕೃಷಿವಿಜ್ಞಾನಕ್ಕೆ ಪ್ರಾಮುಖ್ಯ ಕೊಡುವುದರ ಮೂಲಕವೂ ಶಾಲೆಗಳಿಂದ ಹೊರಬರುವ ಯುವಕ ಯುವತಿಯರಿಗೆ ಕೃಷಿ ವಿದ್ಯಾಭ್ಯಾಸದ ಏರ್ಪಾಡು ಮುಂದುವರಿಯಲು ಅವಕಾಶ ಮಾಡಿಕೊಡುವುದರ ಮೂಲಕವೂ ಕೃಷಿ ವಿಸ್ತರಣಕಾರ್ಯ ಈ ರಾಷ್ಟ್ರಗಳಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿದೆ. ಜನತಾ ಪ್ರೌಢಶಾಲೆಗಳು ಇಲ್ಲಿನ ವೈಶಿಷ್ಟ್ಯ. ನೆದರ್‍ಲೆಂಡ್ಸಿನಲ್ಲಿ ಶಾಲಾ ಉಪಾಧ್ಯಾಯರು ಕೃಷಿ ವಿಸ್ತರಣಕಾರ್ಯಕ್ಕೆ ಬಹಳ ನೆರವು ನೀಡುತ್ತಾರೆ. ಯುನೈಟೆಡ್ ಕಿಂಗ್‍ಡಮ್: 1889ರಲ್ಲಿಯೇ ಕೃಷಿಮಂಡಳಿ ಸ್ಥಾಪನೆಗೊಂಡಿದ್ದರೂ 1946ರವರೆಗೂ ಸಮರ್ಪಕವಾದ ಕೃಷಿ ವಿಸ್ತರಣ ವ್ಯವಸ್ಥೆ ರೂಪ ತಳೆದಿರಲಿಲ್ಲ. ಆ ವರ್ಷ ರಾಷ್ಟ್ರೀಯ ಕೃಷಿ ಸಲಹಾ ವ್ಯವಸ್ಥೆಯನ್ನು ಪ್ರಾರಂಭಿಸಿದ ಮೇಲೆ ಕೃಷಿ ವಿಸ್ತರಣಕಾರ್ಯ ಚೆನ್ನಾಗಿ ನಡೆಯುತ್ತಿದೆ.
ಬಾಲ್ಕನ್ ರಾಷ್ಟ್ರಗಳು
ಬದಲಾಯಿಸಿಹಂಗೇರಿ, ರುಮೇನಿಯ, ಯುಗೋಸ್ಲಾವಿಯ, ಬಲ್ಗೇರಿಯ, ಗ್ರೀಸ್ ಮತ್ತು ಅಲ್ಬೇನಿಯ ಇತ್ಯಾದಿ ರಾಷ್ಟ್ರಗಳಲ್ಲಿ ಕೃಷಿ ಸಂಶೋಧನೆ ತೃಪ್ತಿದಾಯಕವಾಗಿದ್ದರೂ ಅದರ ಫಲ ರೈತರಿಗೆ ಸಾಕಷ್ಟು ಆಗಲಿಲ್ಲ. ಇವುಗಳಲ್ಲಿ ಸರ್ಕಾರ ಮತ್ತು ಸಹಕಾರಿ ಸಂಸ್ಥೆಗಳೇ ಕೃಷಿ ವಿಸ್ತರಣಕಾರ್ಯದ ಜವಾಬ್ದಾರಿ ಹೊತ್ತಿವೆ. ಪ್ರತಿ ಕೌಂಟಿಗೂ ವಿಸ್ತರಣಕಾರ್ಯಕರ್ತ ಇದ್ದಾನೆ. ಕಾರ್ಯಕರ್ತರ ಬೆಂಬಲಕ್ಕೆ ತಜ್ಞರ ಮಂಡಳಿ ಉಂಟು. ಸ್ಥಳೀಯ ಮುಂದಾಳುಗಳ ಸಹಕಾರದಿಂದ ವಿಸ್ತರಣ ಯೋಜನೆಗಳು ರೂಪಗೊಳ್ಳುವ ಮನೋಭಾವನೆ ಇನ್ನೂ ಬೆಳೆದಿಲ್ಲ.
ಅರಬ್ ರಾಷ್ಟ್ರಗಳು
ಬದಲಾಯಿಸಿಪಾಶ್ಚಾತ್ಯ ರಾಷ್ಟ್ರಗಳೊಡನೆ ನಿಕಟ ಸಂಬಂಧ ಹೊಂದಿ ಕೆಲವು ಬದಲಾವಣೆಗಳಾಗಿದ್ದರೂ ಕೃಷಿ ವಿಸ್ತರಣಕಾರ್ಯ ಸಾಕಷ್ಟು ನಡೆದಿಲ್ಲ. ಪ್ರತಿ ರಾಷ್ಟ್ರದಲ್ಲಿಯೂ ಕೇಂದ್ರ ಕೃಷಿ ಇಲಾಖೆ ಇದೆ. ಒಂದೆರಡು ಸಂಶೋಧನ ಕೇಂದ್ರಗಳೂ ಕೆಲಸಮಾಡುತ್ತಿವೆ. ಕೆಲವು ವಿಸ್ತರಣ ಕೆಲಸಗಾರರೂ ಇದ್ದಾರೆ. ಪ್ರಕಟಣೆಗಳು ಕೆಲವು ಹೊರಬಿದ್ದಿವೆ. ಆದರೆ ರೈತ ಈ ಅಲ್ಪಸ್ವಲ್ಪ ಕೆಲಸದ ಲಾಭ ಪಡೆಯಲು ಅವಕಾಶ ಸಾಲದು. ವಿದ್ಯಾಭ್ಯಾಸದ ಮಟ್ಟ ಅತಿ ಕಡಿಮೆ. ಈಜಿಪ್ಟಿನಲ್ಲಿ 19ನೆಯ ಶತಮಾನದ ಎರಡನೆಯ ಅರ್ಧಭಾಗದಿಂದಲೂ ಕೃಷಿ ವಿಸ್ತರಣಕಾರ್ಯದ ಪ್ರಯತ್ನ ನಡೆದಿದೆ.
ಲ್ಯಾಟಿನ್ ಅಮೆರಿಕ
ಬದಲಾಯಿಸಿಅಮೆರಿಕ ಸಂಯುಕ್ತಸಂಸ್ಥಾನಗಳ ಪ್ರಭಾವವಿದ್ದ ಪೋರ್ಟರೀಕೋ, ಕ್ಯೂಬ, ವೆನಿಜ್ವೀಲಗಳಲ್ಲಿ ಕೃಷಿವಿಸ್ತರಣಕಾರ್ಯ ಇಲ್ಲವೆಂದೇ ಹೇಳಬಹುದು. ಆದರೆ ವಿವಿಧ ರೀತಿಯ ವಿಸ್ತರಣಕಾರ್ಯದ ಅಲ್ಪಸ್ವಲ್ಪ ಪ್ರಯತ್ನ ಎಲ್ಲ ರಾಷ್ಟ್ರಗಳಲ್ಲಿಯೂ ನಡೆದಿದೆ. ಸಾಮಾನ್ಯವಾಗಿ ಪಶುವೈದ್ಯರು ಮತ್ತು ಕೃಷಿತಜ್ಞರು ಎಲ್ಲ ಪ್ರಾಂತ್ಯಗಳಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಆಗಿಂದಾಗ್ಗೆ ನಿರ್ದಿಷ್ಟ ತೀವ್ರ ಪ್ರಸಾರ ಕಾರ್ಯಗಳನೇಕವು ಅರ್ಜೆಂಟೈನ, ಬ್ರೆಜಿಲ್ ಮತ್ತು ಕೊಲಂಬಿಯಗಳಲ್ಲಿ ನಡೆದಿದ್ದರೂ ಅವು ಸ್ಥಳೀಯ ಗ್ರಾಮಜೀವನಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ನಡೆಯಲಿಲ್ಲ. ಮೆಕ್ಸಿಕೊ, ಚಿಲಿ, ಕೊಲಂಬಿಯ, ಅರ್ಜೆಂಟೈನ ಮತ್ತು ಪೆರುಗಳಲ್ಲಿ ಶಾಲಾವಿದ್ಯಾರ್ಥಿಗಳು ಸಣ್ಣ ಯೋಜನೆಗಳ ಮೂಲಕ ಕೃಷಿವಿಸ್ತರಣಕಾರ್ಯ ನಡೆಸಿದ್ದಾರೆ. ಗ್ರಾಮಾಂತರ ಶಾಲೆಗಳ ಕೃಷಿವೃತ್ತಿ ಶಿಕ್ಷಣದ ಶಾಖೆಗಳ ಮೂಲಕವೂ ಕೃಷಿ ವಿಸ್ತರಣಕಾರ್ಯ ನಡೆದಿದೆ. ಮೆಕ್ಸಿಕೊ ದೇಶದ ಗ್ರಾಮಾಂತರ ವಿದ್ಯಾಮಿಷನ್‍ಗಳು ಕೃಷಿವಿಸ್ತರಣ ಕಾರ್ಯಕ್ಕೆ ಉತ್ತೇಜನ ನೀಡಿವೆ. ಪ್ರತಿ ಮಿಷನ್ನಿನಲ್ಲಿಯೂ ತರಬೇತಿ ಪಡೆದ ಕಾರ್ಯಕರ್ತರಿದ್ದು ಅವರು ಸ್ಥಳೀಯ ಮುಂದಾಳುಗಳ ಸಹಕಾರದಿಂದ ಯೋಜನೆಗಳನ್ನು ತಯಾರು ಮಾಡಿ ಕಾರ್ಯಗತ ಮಾಡಲು ಪ್ರಯತ್ನಿಸುತ್ತಾರೆ. ಒಂದೆರಡು ವರ್ಷ ಒಂದು ಜಿಲ್ಲೆಯಲ್ಲಿ ಕೆಲಸ ಮಾಡಿದ ಅನಂತರ ಇನ್ನೊಂದು ಜಿಲ್ಲೆಯನ್ನು ಕಾರ್ಯವ್ಯಾಪ್ತಿಗೆ ಆರಿಸುತ್ತ ಹೋಗುತ್ತಾರೆ. ಇಂಥ 25 ಮಿಷನ್‍ಗಳು ಕೆಲಸ ಮಾಡುತ್ತಿವೆ.
ಆಸ್ಟ್ರೇಲಿಯ
ಬದಲಾಯಿಸಿ1880ರಲ್ಲಿಯೇ ಕೃಷಿ ಕಾಲೇಜುಗಳು ಸ್ಥಾಪಿತವಾದರೂ ಕೃಷಿ ಇಲಾಖೆಗಳು ಪ್ರಾಂತ್ಯಗಳಲ್ಲಿ ರೂಪುಗೊಂಡಿದ್ದು 1900-1925ರಲ್ಲಿ, ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನ ಕೌನ್ಸಿಲ್ 1926ರಲ್ಲಿ ಪ್ರಾರಂಭವಾಗಿ ಇದರ ಮೂಲಕ ಗ್ರಾಮಾಂತರ ಉತ್ಪಾದನ ಕಾರ್ಯಕ್ಕೆ ನೆರವಾಗಲು ಅವಕಾಶವಾಯಿತು. ಪ್ರಿಕ್ಲಿಪಿಯರ್ ಕಳೆ ಹತೋಟಿ. ಪ್ರಾಣಿಗಳ ರೋಗ ನಿವಾರಣೆ-ಇವು ಯಶಸ್ವಿಯಾದದ್ದು ತೀವ್ರ ಪ್ರಚಾರ ಕಾರ್ಯದಿಂದಲೇ. ಇತ್ತೀಚಿನ ವರ್ಷಗಳಲ್ಲಿ ಎಂದರೆ 1945ರಿಂದ ಈಚೆಗೆ ಪ್ರಾಂತ್ಯ ಸರ್ಕಾರಗಳು ತಾಂತ್ರಿಕ ಸಲಹಾ ವ್ಯವಸ್ಥೆ ಏರ್ಪಡಿಸಿ ಅವುಗಳ ಮೂಲಕ ಸಂಶೋಧನೆ ಮತ್ತು ವಿಸ್ತರಣಕಾರ್ಯಕ್ಕೆ ನೆರವಾಗುವಂತೆ ಅವಕಾಶ ಕಲ್ಪಿಸಿದ್ದಾರೆ. ಫಾರ್ಮ ಮ್ಯಾನೇಜ್‍ಮೆಂಟ್ ಕ್ಲಬ್‍ಗಳಿಂದ ಮತ್ತು ಖಾಸಗೀ ಸಲಹಾಗಾರರಿಂದ ಕೃಷಿ ವಿಸ್ತರಣಕಾರ್ಯಕ್ಕೆ ಬೆಂಬಲ ಸಿಕ್ಕುತ್ತಿದೆ.ಫೆಸಿಫಿಕ್ ದ್ವೀಪಗಳು (ನ್ಯೂಗಿನಿಯಿಂದ ಮಲೇಷ್ಯವರೆಗಿನ) ದ್ವೀಪಗಳು: ಈ ದ್ವೀಪಗಳು ವಸಾಹತುಗಳಾಗಿದ್ದುದರಿಂದ ವಿಸ್ತರಣಕಾರ್ಯ ಸರ್ಕಾರ, ಪ್ಲಾಂಟರ್ಸ್ ಸಂಘಗಳು ಮತ್ತು ಮಿಷನರಿ ಸಂಸ್ಥೆಗಳ ಮೂಲಕ ನಡೆಯಿತು. ಮಾದರಿ ಪ್ಲಾಂಟೇಷನ್‍ಗಳು ಮತ್ತು ಸಂಶೋಧನಕೇಂದ್ರಗಳು ಸ್ಥಾಪಿಸಲ್ಪಟ್ಟು ಅಲ್ಲಿಯ ಕಾರ್ಯಕರ್ತರು ವಿಸ್ತರಣಕಾರ್ಯ ನಡೆಸಿದರು. 1930ರವರೆಗೂ ಈ ಕಾರ್ಯ ಭರದಿಂದ ಸಾಗಿ ಆರ್ಥಿಕ ಮುಗ್ಗಟ್ಟಿನ ಕಾಲದಲ್ಲಿ ಹಿಂದುಳಿಯಿತು. ಇಲ್ಲಿಯ ರೈತ ಸಂಸಾರಗಳು ಅನಕ್ಷರಸ್ಥರೂ ಗುಳೇ ಸ್ವಭಾವದವರೂ ಆದ್ದರಿಂದ ಅವರನ್ನು ನಿರ್ದಿಷ್ಟ ಕೃಷಿ ಕಸುಬಿನಲ್ಲಿ ನೆಲೆಸುವಂತೆ ಮಾಡುವುದು ಸುಲಭ ಸಾಧ್ಯವಾಗಿಲ್ಲ.
ಜಪಾನ್
ಬದಲಾಯಿಸಿ1899ರಲ್ಲಿಯೇ ಕೃಷಿ ವಿಸ್ತರಣಕಾರ್ಯ ಪ್ರಾರಂಭವಾಯಿತು. ಸಂಶೋಧನ ಕೇಂದ್ರಗಳು ಸ್ಥಾಪಿತವಾಗಿ ಅಲ್ಲಿ ಕೃಷಿ ವಿಸ್ತರಣಕಾರ್ಯಕರ್ತರ ತರಬೇತಿ ಕೊಡಲಾಗುತ್ತಿತ್ತು. ಕೃಷಿಸಂಘಗಳು ಕೈಗಾರಿಕಾ ಸಹಕಾರ ಸಂಘಗಳು ಮತ್ತು ರೇಷ್ಮೆ ನೂಲಿನ ಸಂಘಗಳು ರೂಪಗೊಂಡು ಅವು ವಿಸ್ತರಣಕಾರ್ಯದ ಹೊಣೆ ಹೊತ್ತಿದ್ದುವು. 1943ರಲ್ಲಿ ಈ ಮೂರೂ ಸಂಘಗಳು ಒಂದೇ ವ್ಯವಸ್ಥೆಯಲ್ಲಿ ಸೇರಿದವು. ನೊಗ್ಯಕಾಯಿ ಸಂಘ ಎಂಬ ಹೆಸರಿನಿಂದ ಸರ್ಕಾರದ ನೇತೃತ್ವದಲ್ಲಿ ಕೃಷಿ ವಿಸ್ತರಣಕಾರ್ಯ ಮುಂದುವರಿಯಿತು. ಆದರೆ ಇದು ಸಮರ್ಪಕವಾಗಿ ನಡೆಯಲಿಲ್ಲ. ರೈತ ಜನತೆ ಸಮವಾಗಿ ಕಾರ್ಯಯೋಜನೆಯಲ್ಲಿ ಭಾಗವಹಿಸದೇ ಧನಸಹಾಯದ ಆಸೆಯ ಆಧಾರದ ಮೇಲೆ ನಡೆಯುವಂಥ ಕಾರ್ಯ ಯಶಸ್ವಿ ಆಗಲಾರದು ಎಂಬ ಅರಿವು ಉಂಟಾಯಿತು. ರೈತರ ಮನವೊಲಿಸುವಂಥ ಮತ್ತು ಮನೋವಿಕಾಸಕ್ಕೆ ಅವಕಾಶ ಉಂಟಾಗುವಂಥ ಯೋಜನೆಗಳು ಪರಿಣಾಮಕಾರಿಯಾಗುತ್ತವೆ ಎಂದು ಅರಿತು 1948ರಲ್ಲಿ ಕೃಷಿವಿಸ್ತರಣ ವ್ಯವಸ್ಥೆಯನ್ನು ಹೊಸ ರೂಪಕ್ಕೆ ತಂದರು. ಈಗಿನ ವಿಸ್ತರಣ ವ್ಯವಸ್ಥೆ ತಾಂತ್ರಿಕ ಜ್ಞಾನ ಬೆಳೆಯಲು ಕಲಿಯುವ ಸನ್ನಿವೇಶಗಳನ್ನು ಕಲ್ಪಿಸುತ್ತದೆ. ಪ್ರತಿ ರೈತ ಸಂಸಾರಕ್ಕೂ ಸಂಪರ್ಕ ಇಟ್ಟುಕೊಂಡು ವಿಜ್ಞಾನದ ಪ್ರಯೋಗ ಮಾಡುವಂತೆ ಉತ್ತೇಜನ ನೀಡುತ್ತದೆ. ಧನಸಹಾಯ ಮುಂತಾದ ಆಮಿಷಗಳನ್ನು ಉಪಯೋಗಿಸುವುದಿಲ್ಲ. ಈಗ ಜಪಾನಿನಲ್ಲಿ ಬಹಳ ಉತ್ತಮ ಕೃಷಿ ವಿಸ್ತರಣ ವ್ಯವಸ್ಥೆ ರೂಪುಗೊಂಡಿದೆ. ಪ್ರತಿ 10 ಸಾವಿರ ಸಂಸಾರವಿರುವ ಒಂದು ಪ್ರದೇಶದಲ್ಲಿ ತರಬೇತಿ ಪಡೆದ ಇಪ್ಪತ್ತೈದು ಕಾರ್ಯಕರ್ತರು ಇರುತ್ತಾರೆ. (400:1). ಗ್ರಾಮ, ಜಿಲ್ಲಾ ಮತ್ತು ಪ್ರಾದೇಶಿಕ ಮಟ್ಟಗಳಲ್ಲಿ ಕೃಷಿ ಅಭಿವೃದ್ಧಿ ಸಮಿತಿಗಳು, ಕೃಷಿವಸ್ತು ಮಾರಾಟ ಸಮಿತಿಗಳು ಕಾರ್ಯ ಮಾಡುತ್ತಿವೆ. ಗೃಹವಿಜ್ಞಾನ ವಿಸ್ತರಣ ಕಾರ್ಯ ಪ್ರಾರಂಭವಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಜಪಾನ್ ಸರ್ಕಾರ ತೀವ್ರಗತಿ ಕೃಷಿ ವಿಸ್ತರಣಕಾರ್ಯಕ್ಕೆ ಅವಕಾಶ ಕಲ್ಪಿಸಿದೆ. ಸಂಶೋಧನಕೇಂದ್ರಗಳೂ ವಿಸ್ತರಣಕಾರ್ಯಕರ್ತರೂ ನೇರಸಂಬಂಧ ಹೊಂದಿರುವುದಲ್ಲದೆ ರೈತಪ್ರತಿನಿಧಿಗಳು ವಿಸ್ತರಣಕಾರ್ಯ ಜವಾಬ್ದಾರಿಯನ್ನು ಸಲಹಾ ಸಮಿತಿಗಳ ಮೂಲಕ ವಹಿಸಿದ್ದಾರೆ.
ಭಾರತ
ಬದಲಾಯಿಸಿಹತ್ತಿ ಬೆಳೆ ಅಭಿವೃದ್ಧಿಯ ಪ್ರಯತ್ನ ಮೊಟ್ಟಮೊದಲ ಕೃಷಿ ವಿಸ್ತರಣಕಾರ್ಯ ಎನ್ನಬಹುದು. ಈಸ್ಟ್ ಇಂಡಿಯಾ ಕಂಪನಿಯವರ ಆದೇಶದ ಮೇಲೆ 1839ರಲ್ಲಿ ಅಮೇರಿಕದ ಹನ್ನೆರಡು ಹತ್ತಿ ಬೆಳೆಗಾರರು ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ರೈತರಿಗೆ ಸುಧಾರಿಸಿದ ಹತ್ತಿ ಬೆಳೆ ತೆಗೆಯುವ ಮತ್ತು ಕಲ್ಮಷವಿಲ್ಲದ ಹತ್ತಿ ಮಾರಾಟ ಮಾಡುವ ಪದ್ಧತಿಗಳನ್ನು ತೋರಿಸಿಕೊಡಲು ಭಾರತಕ್ಕೆ ಬಂದು ಕೆಲಸ ಮಾಡಿದರು. ಅಂತರರಾಷ್ಟ್ರೀಯ ಸಹಕಾರದ ಮೂಲಕವೇ ಭಾರತದ ಕೃಷಿ ವಿಸ್ತರಣೆ ಪ್ರಾರಂಭವಾಗಿರುವುದು ಗಮನಾರ್ಹ. 1880, 1898 ಮತ್ತು 1901 ಈ ವರ್ಷಗಳ ಕ್ಷಾಮ ಕಮಿಷನ್‍ಗಳ ವರದಿಗಳು 1903ರ ನೀರಾವರಿ ಕಮಿಷನ್ ವರದಿ 1915ರ ಸಹಕಾರ ಸಮಿತಿ ವರದಿ ಮತ್ತು 1928ರ ರಾಯಲ್ ಕಮಿಷನ್ ಆಫ್ ಅಗ್ರಿಕಲ್ಚರ್ ಮಾಡಿದ ಶಿಫಾರಸ್ಸುಗಳು ಭಾರತ ಸರ್ಕಾರದ ಮತ್ತು ರಾಜ್ಯ ಸರ್ಕಾರಗಳ ಕೃಷಿವಿಸ್ತರಣ ಪ್ರಯತ್ನಗಳಿಗೆ ಮಾರ್ಗದರ್ಶನ ನೀಡಿವೆ. ಕ್ಷಾಮ ಕಮಿಷನ್‍ಗಳ ವರದಿಗಳು ಕೃಷಿವಿಸ್ತರಣದ ಅವಶ್ಯಕತೆಯನ್ನು ತೋರಿಸಿ ಕೊಟ್ಟಿದ್ದರಿಂದ ರಾಜ್ಯ ಸರ್ಕಾರಗಳಲ್ಲಿ ಕೃಷಿ ಇಲಾಖೆಗಳು ಅಸ್ತಿತ್ವಕ್ಕೆ ಬಂದುವು. 1906ರಲ್ಲಿ ಕೇಂದ್ರ ಕೃಷಿ ಸೇವಾ ವ್ಯವಸ್ಥೆ ರೂಪುಗೊಂಡಿತು. ಆದರೆ 1919ರ ಮಾಂಟೆಗ್ಯೂ ಚೆಲ್ಮ್ಸ್‍ಫರ್ಡ ವರದಿ ಪ್ರಕಾರ ಕೃಷಿ ಅಭಿವೃದ್ಧಿಯ ಹೆಚ್ಚಿನ ಜವಾಬ್ಧಾರಿ ರಾಜ್ಯಸರ್ಕಾರಗಳಿಗೆ ಬಂದದ್ದರಿಂದ ಈ ಸಿಬ್ಬಂದಿಯನ್ನು 1924ರ ನಂತರ ಮುಂದುವರಿಸಲಿಲ್ಲ. ಆದರೂ ಕೇಂದ್ರ ಸರ್ಕಾರ ಕೃಷಿ ಅಭಿವೃದ್ಧಿಗಾಗಿ ಹಣ ಸಹಾಯ, ತಾಂತ್ರಿಕ ಸಲಹೆ ಮತ್ತು ಇತರ ರೀತಿಯ ಮಾರ್ಗದರ್ಶನದ ಹೊಣೆಯನ್ನು ಸ್ವಲ್ಪಮಟ್ಟಿಗೆ ನಿರ್ವಹಿಸುತ್ತ ಬಂದಿದೆ. 1903ರಲ್ಲಿ ಭಾರತ ಸರ್ಕಾರ ಬಿಹಾರಿನ ಪೂಸಾ ಎಂಬಲ್ಲಿ ರಾಷ್ಟ್ರೀಯ ಕೃಷಿ ಸಂಶೋಧನ ಕೇಂದ್ರವನ್ನು ಸ್ಥಾಪಿಸಿತು. ಅಮೆರಿಕದ ಹೆನ್ರಿ ಫಿಪ್ಸ್ ಎಂಬಾತನ 3,000 ಡಾಲರ್ ದಾನವನ್ನು ಇದರ ಸ್ಥಾಪನೆಗೆ ಉಪಯೋಗಿಸಲಾಯಿತು. ಈ ಕೇಂದ್ರ ಬಿಹಾರಿನಲ್ಲಿ ನಡೆದ ಭಾರಿ ಭೂಕಂಪದ ಪರಿಣಾಮವಾಗಿ 1936ರಲ್ಲಿ ದೆಹಲಿಗೆ ವರ್ಗಾಯಿಸಲ್ಪಟ್ಟಿತು.
19ನೆಯ ಶತಮಾನದಲ್ಲಿಯೇ ಕೃಷಿ ವಿಸ್ತರಣಕಾರ್ಯಕ್ಕೆ ಅನುಕೂಲವಾಗುವಂಥ ಹಲ ಕೆಲವು ಪ್ರಯತ್ನಗಳು ನಡೆದಿದ್ದವು. ಅವುಗಳಲ್ಲಿ ಅತಿಮುಖ್ಯವಾದವನ್ನು ಇಲ್ಲಿ ನಮೂದಿಸಲಾಗಿದೆ.
ಬದಲಾಯಿಸಿ1862-ನಾಗಪುರದಲ್ಲಿ ಕೃಷಿ ಮತ್ತು ತೋಟಗಾರಿಕೆ ಸಂಘ ಸ್ಥಾಪನೆ. 1864-ಮದ್ರಾಸ್ ಪ್ರಾಂತ್ಯದ ಸೈದಾಪೇಟೆಯಲ್ಲಿ ಮಾದರೀ ಫಾರ್ಮ್ ಸ್ಥಾಪನೆ ಮತ್ತು ಅದರ ಮೂಲಕ ಯಾಂತ್ರಿಕ ಬೇಸಾಯದ ಪ್ರಾತ್ಯಕ್ಷಿಕ ಪ್ರದರ್ಶನ ಮತ್ತು ಪ್ರಸಾರದ ಏರ್ಪಾಡು. 1866-ಮಧ್ಯ ಪ್ರದೇಶದಲ್ಲಿ ಹತ್ತಿ ಅಭಿವೃದ್ಧಿ ಕಮಿಷನರ್ ನೇಮಕ. 1871-ಬಂಗಾಳದಲ್ಲಿ ಏಳು ಮಾದರಿ ಫಾರ್ಮುಗಳ ಸ್ಥಾಪನೆ. 1875-ಉತ್ತರ ಪ್ರದೇಶದಲ್ಲಿ ಕೃಷಿ ಇಲಾಖೆ ಡೈರೆಕ್ಟರರ ನೇಮಕ; ರೇಷ್ಮೆ ಗೃಹಕೈಗಾರಿಕೆಗೆ, ತಂಬಾಕು ಬೆಳೆ ಮತ್ತು ಹೈನುರಾಸುಗಳ ಅಭಿವೃದ್ಧಿ ಕಾರ್ಯಗಳಿಗೆ ಉತ್ತೇಜನ. 1876-1900 - ಮದ್ರಾಸ್ ಪ್ರಾಂತ್ಯದ ಸೈದಾಪೇಟೆಯಲ್ಲಿ ಕೃಷಿ ಕಾಲೇಜು ಸ್ಥಾಪನೆ (1876), ಗೋದಾವರೀ ಜಿಲ್ಲೆಯಲ್ಲಿ ಕಬ್ಬಿನ ರೋಗ ನಿರೋಧಕ ತಳಿಸಂವರ್ಧನೆ ಮತ್ತು ವಿಸ್ತರಣ, ನೆಲಗಡಲೆ ಬೆಳೆ ವಿಸ್ತರಣೆ, ಬಳ್ಳಾರಿ ಮತ್ತು ತಿರುನೆಲ್ವೇಲಿಗಳಲ್ಲಿ ಹತ್ತಿ ಬೆಳೆ ಅಭಿವೃದ್ಧಿ ಕಾರ್ಯ. 1879-ಪುಣೆಯ ವಿಜ್ಞಾನ ಕಾಲೇಜಿನಲ್ಲಿ ಕೃಷಿಶಾಖೆ ಸ್ಥಾಪನೆ. 1880-ಪಂಜಾಬಿನಲ್ಲಿ ಲ್ಯಾಂಡ್ ರಿಕಾರ್ಡ್ ಮತ್ತು ಕೃಷಿ ಇಲಾಖೆಯ ಸ್ಥಾಪನೆ. 1882-ಅಸ್ಸಾಮಿನಲ್ಲಿ ಕೃಷಿ ಇಲಾಖೆ ಸ್ಥಾಪನೆ, ಪಶುಪಾಲನೆ ಮತ್ತು ಆಲೂಗೆಡ್ಡೆ ಬೆಳೆ ಅಭಿವೃದ್ಧಿ ಕಾರ್ಯ, ಷಿಲಾಂಗನಲ್ಲಿ ಸಂಶೋಧನಕೇಂದ್ರ ಸ್ಥಾಪನೆ. 1883-ಮಧ್ಯಪ್ರದೇಶ ಮತ್ತು ಮುಂಬಯಿ ಪ್ರಾಂತ್ಯಗಳಲ್ಲಿ ಕೃಷಿ ಇಲಾಖೆ ಸ್ಥಾಪನೆ. 1886- ಮೈಸೂರು ಸಂಸ್ಥಾನದಲ್ಲಿ ಕೃಷಿ ಮತ್ತು ಅಂಕಿ ಅಂಶಗಳ ಇಲಾಖೆ ಸ್ಥಾಪನೆ. ಪ್ರತಿ ಜಿಲ್ಲೆಗೂ ತರಬೇತಿ ಹೊಂದಿದ ತಜ್ಞರ ನೇಮಕ. 1888-ಮೈಸೂರಿನಲ್ಲಿ ಪ್ರಥಮ ಕೃಷಿ ಪ್ರದರ್ಶನ. 1890-ಪುಣೆಯಲ್ಲಿ ಕೃಷಿ ಡಿಪ್ಲೊಮ ಪ್ರಾರಂಭ. 1899-ಮೈಸೂರು ಸಂಸ್ಥಾನದಲ್ಲಿ ವಿಸ್ತರಣಕಾರ್ಯಕ್ಕೆ, ಕಾಫಿ ಬೆಳೆಗಾರರಿಗೆ ಸಲಹೆ ನೀಡಲು ಮತ್ತು ಮಣ್ಣು ಪರಿಶೀಲನೆಗಾಗಿ ರಸಾಯನಶಾಸ್ತ್ರಜ್ಞರ ನೇಮನ.
ಇತಿಹಾಸ
ಬದಲಾಯಿಸಿಈ ಶತಮಾನದ ಮೊದಲ ಮೂರು ದಶಕಗಳಲ್ಲಿ ಗಮನಾರ್ಹ ರೀತಿಯಲ್ಲಿ ವಿಸ್ತರಣಕಾರ್ಯ ನಡೆದಿದೆ ಎಂದು ರಾಯಲ್ ಕಮಿಷನ್ ವರದಿ ಶ್ಲಾಘಿಸಿದೆ. ಕೆಲವು ನಿರ್ದಿಷ್ಟ ಉದಾಹರಣೆಗಳನ್ನು ಉಲ್ಲೇಖಿಸಲಾಗಿದೆ. ಪ್ರಕಟಣೆಗಳ ಮೂಲಕ ವಿಸ್ತರಣ ಪ್ರಯತ್ನ ಮದ್ರಾಸ್ ಪ್ರಾಂತ್ಯದಲ್ಲಿ ನಡೆದಿದೆ. ಭತ್ತದ ಬೆಳೆಗೆ ಒಂದೇ ಸಸಿ ನೆಡಿ (1,20,000 ಪ್ರತಿಗಳು) ಮತ್ತು ದನಗಳ ಕಸಿ ಮಾಡುವುದು (6,000 ಪ್ರತಿಗಳು) ಎಂಬ ಪುಸ್ತಿಕೆಗಳನ್ನು ಹಂಚಲಾಯಿತು. ವಿಸ್ತರಣಕಾರ್ಯದ ಪ್ರಗತಿಯನ್ನು ಡೈಜೆಸ್ಟ್ ಎಂಬ ಮಾಸಿಕದಲ್ಲಿ ಪ್ರಕಟಿಸಲಾಗುತ್ತಿತ್ತು (7,520 ಪ್ರತಿಗಳು). ಗ್ರಾಮಸ್ಥರಿಗಾಗಿ ವಾರ್ಷಿಕ ಪಂಚಾಂಗ ಮತ್ತು ಇತರ ರೀತಿಯ ಬುಲೆಟಿನ್‍ಗಳು ಪ್ರಕಟವಾಗುತ್ತಿದ್ದುವು. ಮೈಸೂರು ಮತ್ತು ಇತರ ರಾಜ್ಯಗಳಲ್ಲಿಯೂ ಮಾಸಿಕಗಳು ಮತ್ತು ಪ್ರಕಟಣೆಗಳು ಪ್ರಾರಂಭವಾಗಿದ್ದುವು. ಧಾರವಾಡ ಜಿಲ್ಲಾ ವ್ಯವಸಾಯ ಪತ್ರಿಕೆ ಕನ್ನಡದಲ್ಲಿ ಪ್ರಕಟವಾಗುತ್ತಿತ್ತು. ಬಂಗಾಳ ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳು ಪ್ರದರ್ಶನ ರೈಲುಗಳಲ್ಲಿ ಪ್ರಚಾರ ಕೈಗೊಂಡವು. ಕೃಷಿ ವಿಭಾಗವನ್ನು ಈ ಪ್ರದರ್ಶನ ರೈಲಿನಲ್ಲಿ ಸೇರಿಸಲಾಗಿತ್ತು. ಮುಂಬಯಿ, ಮಧ್ಯಪ್ರದೇಶ, ಬಂಗಾಳ ಮತ್ತು ಮದ್ರಾಸ್ ರಾಜ್ಯಗಳಲ್ಲಿ ಕೃಷಿಸಂಘಗಳು ಪ್ರಾರಂಭವಾದವು. ಮುಂಬಯಿ ಪ್ರಾಂತ್ಯದಲ್ಲಿ ಮಾತ್ರ ಇವು ಯಶಸ್ವೀ ಕಾರ್ಯ ನಡೆಸಿದುವು. ಮೈಸೂರು ಸಂಸ್ಥಾನದಲ್ಲಿಯೂ ಬಹಳ ಪರಿಣಾಮಕಾರಿ ಕಾರ್ಯ ನಡೆಯಿತು.ಇದೇ ಕಾಲದಲ್ಲಿ ಕೇರಳ ರಾಜ್ಯದಲ್ಲಿ ಕ್ರಿಶ್ಚಿಯನ್ ಯುವಕ ಸಂಘದ (ವೈ.ಎಂ.ಸಿ.ಎ.) ಆಶ್ರಯದಲ್ಲಿ ಗ್ರಾಮಾಭಿವೃದ್ಧಿ ಪ್ರಯತ್ನ ಸುಮಾರು 20 ವರ್ಷಗಳ ಕಾಲ ನಡೆಯಿತು. ಇದರ ವ್ಯಾಪ್ತಿ ಮಾರ್ತಾಂಡನ ಸುತ್ತಮುತ್ತಣ ಹಳ್ಳಿಗಳಿಗೆ ಮಾತ್ರ ಸೀಮಿತವಾಗಿದ್ದರೂ ಪ್ರಯತ್ನದ ಮುಖ್ಯ ಚಾಲಕರಾದ ಸ್ಪೆನ್ಸರ್ ಹ್ಯಾಟ್ರು ವಿಸ್ತರಣ ತತ್ವಾಧಾರದ ಮೇಲೆ ಮಾರ್ಗದರ್ಶನ ನೀಡಿದ್ದರಿಂದ ಬಹಳ ಯಶಸ್ಸು ಸಾಧಿಸಲಾಯಿತು. ಅದರ ಕಾರ್ಯಸ್ವರೂಪ ಪ್ರಾತ್ಯಕ್ಷಿಕ ಕೇಂದ್ರ, ಸ್ಥಳೀಯ ಮುಖಂಡರ ತರಬೇತಿ, ಕೃಷಿಪ್ರದರ್ಶನ ಮತ್ತು ಸ್ಥಳೀಯ ಪ್ರಸಾರ ನಾಳಗಳ ಮೂಲಕವೂ ವಿಸ್ತರಣೆ ಮುಂತಾದವುಗಳ ಮೂಲಕವೂ ಆಗಿತ್ತು. ಹಿಂದುಳಿದ ಅನಕ್ಷರಸ್ಥ ಮತ್ತು ಹೀನ ಆರ್ಥಿಕ ಸ್ಥಿತಿಯಲ್ಲಿದ್ದ ಜನಾಂಗಗಳಲ್ಲಿಯೂ ಸ್ವಸಹಾಯದಿಂದಲೇ ಪ್ರಗತಿ ಸಾಧಿಸಲು ಸಾಧ್ಯ ಎಂದು ತೋರಿಸಿದರು.
ಎರಡನೆಯ ಮಹಾಯುದ್ಧ ಪ್ರಾರಂಭ
ಬದಲಾಯಿಸಿ1930ರಿಂದ ಎರಡನೆಯ ಮಹಾಯುದ್ಧ ಪ್ರಾರಂಭವಾಗುವವರೆಗೆ ರಾಯಲ್ ಕಮಿಷನ್ ವರದಿಯ ಸಲಹೆಗಳ ಆಧಾರದ ಮೇಲೆ ಕೃಷಿವಿಸ್ತರಣಕಾರ್ಯ ರೂಪುಗೊಳ್ಳಲು ಮೊದಲಾಯಿತು. ಆದರೆ ಆರ್ಥಿಕ ಮುಗ್ಗಟ್ಟಿನ ಪರಿಣಾಮವಾಗಿ ಹೆಚ್ಚಿನ ಪ್ರಗತಿಗೆ ಅವಕಾಶವಾಗಲಿಲ್ಲ. ಆದರೂ ಸುಧಾರಿಸಿದ ತಳಿಗಳ ಉಪಯೋಗ, ನೀರಾವರಿ ಆಸರೆಯಿಂದ ಬೆಳೆಸುವ ಮತ್ತು ಕೆಲವು ಆರ್ಥಿಕ ಬೆಳೆಗಳಿಗೆ ರಸಗೊಬ್ಬರಗಳ ಉಪಯೋಗ, ಕಾಂಪೋಸ್ಟ್ ತಯಾರಿಕೆ ಮತ್ತು ಹಸಿರು ಎಲೆಗೊಬ್ಬರಗಳ ರೂಢಿ. ಕಬ್ಬಿಣದ ನೇಗಿಲು ಮತ್ತು ಇತರ ಸುಧಾರಿಸಿದ ಮುಟ್ಟುಗಳ ಬಳಕೆ, ಹೊಲಗಳಲ್ಲಿ ಸಮಪಾತಳಿ ಒಡ್ಡು ನಿರ್ಮಿಸುವುದು, ನೀರಾವರೀ ಬಾವಿಗಳಿಗೆ ನೀರೆತ್ತುವ ಯಂತ್ರಗಳ ಜೋಡಣೆ, ಸಸ್ಯರಕ್ಷಣೆಯ ಕೆಲವು ಕ್ರಮಗಳ ಅನುಸರಣೆ ಮುಂತಾದ ಕಾರ್ಯಕ್ರಮಗಳು ಕೃಷಿ ವಿಸ್ತರಣಕಾರ್ಯದ ವಿಷಯಗಳಾಗಿದ್ದವು. ಪ್ರತಿ ತಾಲ್ಲೂಕಿನಲ್ಲಿಯೂ ಹಲಕೆಲವು ಹಣವಂತ ವಿದ್ಯಾವಂತ ರೈತರು ಈ ಪದ್ಧತಿಗಳನ್ನು ರೂಢಿಗೆ ತಂದು ನಮ್ಮ ದೇಶದ ಕೃಷಿಯೂ ವಿಜ್ಞಾನದ ಆಧಾರದ ಮೇಲೆ ಅಭಿವೃದ್ಧಿಯಾಗಲು ಸಾಧ್ಯವಿದೆ ಎಂದು ತೋರಿಸಿಕೊಟ್ಟರು. ಸಾಮಾನ್ಯ ರೈತನ ಮತ್ತು ಸರ್ಕಾರದ ಆರ್ಥಿಕ ನಿರ್ಬಲತೆ ಹೆಚ್ಚಿನ ಪ್ರಗತಿಗೆ ಅಡಚಣೆಯಾಯಿತು. ಈ ದಶಕದಲ್ಲಿ ಎಲ್ಲ ರಾಜ್ಯಗಳಲ್ಲಿಯೂ ಕೃಷಿ ವಿಸ್ತರಣಕಾರ್ಯವನ್ನೊಳಗೊಂಡ ಗ್ರಾಮಾಭಿವೃದ್ಧಿ ಕಾರ್ಯ ತೀವ್ರಗತಿಯಲ್ಲಿ ನಡೆಯಲು ಪ್ರಯತ್ನಿಸಿದಾಗ್ಯೂ ಸರ್ಕಾರದ ಆರ್ಥಿಕ ಸ್ಥಿತಿ ಹೆಚ್ಚಿನ ರೀತಿಯ ಅಭಿವೃದ್ಧಿಗೆ ಉತ್ತೇಜನ ಕೊಡುವಂತಿರಲಿಲ್ಲ. ಆದರೆ ರೈತಜನತೆಯ ಮನಸ್ಸು ವಿಜ್ಞಾನದ ಕಡೆಗೆ ಕುತೂಹಲದಿಂದ ನೋಡುವ ರೀತಿಯಲ್ಲಿ ಬದಲಾವಣೆಯಾಗಲು ಪ್ರಾರಂಭವಾಯಿತು ಎನ್ನಬಹುದು.ಎರಡನೆಯ ಮಹಾಯುದ್ಧ ಕಾಲದಲ್ಲಿ ಕೃಷಿ ಉತ್ಪಾದನೆಗೆ ಹೆಚ್ಚಿನ ಗಮನ ಕೊಡಬೇಕಾದ ಅಗತ್ಯ ಉಂಟಾಯಿತು. ಕೃಷಿ ವಿಸ್ತರಣಕಾರ್ಯಗಳಿಗೆ ಹೆಚ್ಚು ಪ್ರೋತ್ಸಾಹ ಹಣದ ಸಹಾಯ ಮತ್ತು ಪ್ರಾಮುಖ್ಯ ಕೊಡಲು ಪ್ರಾರಂಭವಾಯಿತು. ರೈತನಿಗೆ ಹೊಸ ಪದ್ಧತಿಯನ್ನು ಜಾರಿಗೆ ತರಲು ತಾಂತ್ರಿಕ ನೆರವಿನೊಂದಿಗೆ ಆರ್ಥಿಕ ನೆರವನ್ನು ಸಹ ನೀಡಲಾಯಿತು. ಸುಲಭ ಬೆಲೆಯಲ್ಲಿ ರಸಗೊಬ್ಬರ, ನೇಗಿಲು, ಬೀಜ, ಔಷಧಿ ಮತ್ತು ಕೃಷಿಯಂತ್ರಗಳನ್ನು ರೈತನಿಗೆ ಒದಗಿಸುವ ಕಾರ್ಯಕ್ರಮ ರೂಪುಗೊಂಡಿತು. ಹೆಚ್ಚು ಆಹಾರ ಬೆಳೆಸಿರಿ ಎಂಬ ಪ್ರಚಾರ ವಿವಿಧ ರೀತಿಯಲ್ಲಿ ಕಾರ್ಯಗತವಾಗತೊಡಗಿತು.
ಗ್ರಾಮಾಭಿವೃದ್ಧಿ
ಬದಲಾಯಿಸಿ1947ರ ಅನಂತರ ಗ್ರಾಮಾಭಿವೃದ್ಧಿಗೆ ತೀವ್ರ ಪ್ರಯತ್ನಗಳು ಪ್ರಾರಂಭವಾದುವು. ಸಮಾಜವಿಕಾಸಯೋಜನೆ, ಅದರ ಅಂಗವಾಗಿ ರಾಷ್ಟ್ರೀಯ ವಿಸ್ತರಣ ವ್ಯವಸ್ಥೆ ರೂಪುಗೊಂಡವು. ಕೃಷಿ ವಿಸ್ತರಣಕಾರ್ಯಕ್ಕೆ ಅತಿ ಮುಖ್ಯ ಸ್ಥಾನ ದೊರೆಯಿತು. ಈ ವ್ಯವಸ್ಥೆಯಿಂದ ತಾಲ್ಲೂಕು ಮತ್ತು ಗ್ರಾಮಾಂತರಗಳಲ್ಲಿ ಕೆಲಸ ಮಾಡುವ ಕಾರ್ಯಕರ್ತರ ಸಂಖ್ಯೆ 1964ರಲ್ಲಿ ಈ ರೀತಿಯಾಗಿತ್ತು : 49,628 ಗ್ರಾಮಸೇವಕರು, 6,726 ಗ್ರಾಮಸೇವಿಕೆಯರು, 2,726 ಮುಖ್ಯ ಸೇವಿಕೆಯರು, 5,117 ಕೃಷಿ ವಿಸ್ತರಣ ಅಧಿಕಾರಿಗಳು, 6,028ಸಮಾಜ ವಿಕಾಸ ಅಧಿಕಾರಿಗಳು, 4,641 ಸಹಕಾರೀ ವಿಸ್ತರಣ ಅಧಿಕಾರಿಗಳು, 4,087 ಪಶುಪಾಲನ ವಿಸ್ತರಣ ಅಧಿಕಾರಿಗಳು. ಸಮಾಜ ವಿಕಾಸ ಯೋಜನೆಯ ಕಾರ್ಯಕ್ರಮದಲ್ಲಿ ಬ್ಲಾಕುಗಳನ್ನು ಒಂದು ಏಕಮಾನವಾಗಿ ಪರಿಗಣಿಸಿ ಕೆಲಸ ಸಾಗುತ್ತಿದೆ. ಕೃಷಿ ವಿಸ್ತರಣೆಯ ಕೆಲ ಸಾಧನೆಗಳು ಹೀಗಿವೆ.
ಪ್ರತಿ ಬ್ಲಾಕಿಗೆ | 1ನೆಯ ಯೋಜನೆಯಲ್ಲಿ | 2ನೆಯ ಯೋಜನೆಯಲ್ಲಿ | 3ನೆಯ ಯೋಜನೆಯಲ್ಲಿ |
ಪ್ರಾತ್ಯಕ್ಷಿಕಗಳು | 800 | 713 | 265 |
ಸುಧಾರಿಸಿದ ಮುಟ್ಟುಗಳ ಸರಬರಾಜು | 130 | - | 172 |
ಉತ್ತಮ ತಳಿ ಹೋರಿ | 8.4 | 7.3 | - |
ಸುಧಾರಿಸಿದ ಕೋಳಿಗಳು | 135 | 105 | - |
ಕೃಷಿ ವಿಸ್ತರಣ
ಬದಲಾಯಿಸಿಈ ಸಂಖ್ಯೆಗಳನ್ನು ನೋಡಿದರೆ ಕಾಲಕ್ರಮೇಣ ಕೃಷಿ ವಿಸ್ತರಣ ಕೆಲಸ ಪ್ರಾರಂಭದಲ್ಲಿದ್ದಷ್ಟು ತೀವ್ರವಾಗಿಲ್ಲ ಎಂದು ತೋರುತ್ತದೆ. ಸರ್ಕಾರ ನೇಮಿಸಿದ ಮೌಲ್ಯಮಾಪನ ವಿಭಾಗದವರು ಕೂಡ ಆಗಿಂದಾಗ್ಯೆ ಈ ಬಗ್ಗೆ ಗಮನ ಸೆಳೆದು ಯೋಜನೆಯ ರೂಪ ಬದಲಾಯಿಸಲು ಪ್ರಯತ್ನಪಟ್ಟಿದ್ದಾರೆ. 1960ರಿಂದ ಕೃಷಿ ಇಲಾಖೆಗಳು ಸಮಾಜ ವಿಕಾಸ ಕಾರ್ಯಕ್ರಮದ ಮೂಲಕ ನಡೆಯುವ ಕೃಷಿ ವಿಸ್ತರಣಕ್ಕೆ ತೃಪ್ತಿಗೊಳ್ಳದೆ ತೀವ್ರ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಆ ಮೂಲಕ ರೈತನಿಗೆ ಕೃಷಿ ವಿಜ್ಞಾನದ ಲಾಭ ದೊರಕಿಸಿಕೊಡುತ್ತಿದ್ದಾರೆ. ಕೆಲವು ವಿಶಿಪ್ಟ ರೀತಿಯ ಕೃಷಿ ವಿಸ್ತರಣಕಾರ್ಯ ರೂಪುಗೊಳ್ಳುತ್ತಿದೆ. ತೀವ್ರ ಬೆಳೆ ಅಭಿವೃದ್ಧಿ ಸಸ್ಯರಕ್ಷಣಕಾರ್ಯ, ಮಣ್ಣು ಪರೀಕ್ಷಾಸೌಲಭ್ಯ, ಹೆಚ್ಚು ಇಳುವರಿ ಬೆಳೆ ಪ್ರಚಾರಕಾರ್ಯ, ಹೊಲಗಳಲ್ಲಿ ಒಡ್ಡು ಹಾಕುವ ಕಾರ್ಯಕ್ರಮ ಮುಂತಾದವು ಇವುಗಳಲ್ಲಿ ಮುಖ್ಯವಾದವು. ಕೇಂದ್ರ ಸರ್ಕಾರದ ನೆರವು ಮತ್ತು ಮಾರ್ಗದರ್ಶನ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ಮೂಲಕ ಈ ಕಾರ್ಯಗಳಿಗೆ ದೊರೆಯುತ್ತಿದೆ. ಈ ಎರಡು ದಶಕಗಳಲ್ಲಿ ಐ.ಸಿ.ಎ.ಆರ್. ಅನೇಕ ಕೃಷಿ ವಿಸ್ತರಣಕಾರ್ಯಗಳಿಗೆ ಉತ್ತೇಜನ ನೀಡಿರುವುದಲ್ಲದೆ ನಿರ್ದಿಷ್ಟ ಬೆಳೆ ಅಭಿವೃದ್ಧಿ ಸಮಿತಿಗಳ ಮೂಲಕವೂ-ಎಂದರೆ ಹತ್ತಿ ಎಣ್ಣೆಕಾಳುಗಳು ತಂಬಾಕು ಅಡಕೆ ತೆಂಗು ಮುಂತಾದ ಬೆಳೆಗಳ ಅಭಿವೃದ್ಧಿ ಕಾರ್ಯ-ಕೆಲಸ ಮಾಡಿದೆ. ಇನ್ನೊಂದು ಗಮನಾರ್ಹ ಬೆಳವಣಿಗೆ ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಕೃಷಿ ವಿಶ್ವವಿದ್ಯಾಲಯಗಳ ಸ್ಥಾಪನೆ. ಭಾರತದ ರೈತಜನತೆಯ ಗಮನ ಕೃಷಿ ವಿಜ್ಞಾನದತ್ತ ಹೊರಳಿದೆ. ಅನಕ್ಷರಸ್ಥರಾಗಿದ್ದರೂ ಸೂಕ್ತ ರೀತಿಯಲ್ಲಿ ಕೃಷಿ ವಿಸ್ತರಣಕಾರ್ಯ ನಡೆದದ್ದೇ ಆದರೆ ಅವರು ವಿಜ್ಞಾನ ಪದ್ಧತಿಗಳನ್ನು ಅನುಸರಿಸುವುದರಲ್ಲಿ ಇತರ ಮುಂದುವರಿದ ದೇಶದವರಿಗಿಂತ ಹಿಂದಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಎರಡು ದಶಕಗಳಲ್ಲಿ ಗ್ರಾಮಜೀವನ ತೀವ್ರ ಬದಲಾವಣೆಯಾಗಿದೆ. ವಿದ್ಯಾಭ್ಯಾಸದ ಪ್ರಗತಿಯಿಂದ ಯುವಕರನೇಕರು ಶಾಲೆಗಳಿಂದ ಹೊರಬಂದಿದ್ದಾರೆ. ಗ್ರಾಮಾಂತರ ರಸ್ತೆಗಳು ಮತ್ತು ಇತರ ಅಭಿವೃದ್ಧಿಗೆ ಅವಶ್ಯಕ ಮಾರ್ಪಾಡುಗಳು ರೂಪುಗೊಂಡಿವೆ. ಕೃಷಿ ಉತ್ಪಾದನೆ ಅತಿ ಹೆಚ್ಚು ಪರಿಮಾಣದಲ್ಲಿ ಆಗಲು ಸಂಶೋಧನೆ ಮತ್ತು ವಿಸ್ತರಣದ ತೀವ್ರತೆ ಕಾಣುತ್ತಿದೆ. ಮುಂದಿನ ಕೃಷಿ ಅಭಿವೃದ್ಧಿ ಕಾರ್ಯಕ್ಕೆ ಮಾರ್ಗದರ್ಶನ ನೀಡಲು ಭಾರತ ಸರ್ಕಾರ ಒಂದು ಕೃಷಿ ಕಮಿಷನನ್ನು ನೇಮಕ ಮಾಡಿದೆ.
ಕರ್ನಾಟಕದಲ್ಲಿ ಕೃಷಿ ವಿಸ್ತರಣಕಾರ್ಯ
ಬದಲಾಯಿಸಿಹಳೆಯ ಮೈಸೂರು ಸಂಸ್ಥಾನದಲ್ಲಿ ಕೃಷಿ ಮತ್ತು ಅಂಕಿಅಂಶಗಳ ಇಲಾಖೆ 1886ರಲ್ಲಿ ಸ್ಥಾಪಿತವಾಯಿತು. ಮದ್ರಾಸ್ ಪ್ರಾಂತ್ಯದ ಸೈದಾಪೇಟೆಯ ಕೃಷಿ ಕಾಲೇಜಿನಲ್ಲಿ ತರಬೇತಿ ಪಡೆದ ತಜ್ಞರನ್ನು ಪ್ರತಿ ಜಿಲ್ಲೆಗೂ ನೇಮಕ ಮಾಡಲಾಯಿತು. 1888ರಲ್ಲಿಯೇ ಒಂದು ಕೃಷಿಪ್ರದರ್ಶನವು ಏರ್ಪಟ್ಟಿತು. ಮಣ್ಣು ಪರಿಶೀಲನೆಗೆ, ಸುಧಾರಿಸಿದ ಕೃಷಿ ಪದ್ಧತಿಗಳನ್ನು ರೈತರಿಗೆ ತಿಳಿಸಿಕೊಡುವುದಕ್ಕೆ ಮತ್ತು ಕಾಫಿ ಬೆಳೆಗಾರರಿಗೆ ಸಲಹೆ ನೀಡುವುದಕ್ಕೆ ಕೃಷಿ ರಸಾಯನಶಾಸ್ತ್ರಜ್ಞರ ನೇಮಕ 1899ರಲ್ಲಿ ಆಯಿತು. 1905-06ನೆಯ ಸಾಲಿನಲ್ಲಿ ಹೆಬ್ಬಾಳಿನಲ್ಲಿ ಕೃಷಿ ಸಂಶೋಧನಕೇಂದ್ರ ಸ್ಥಾಪನೆಯಾಗಿ ಕ್ರಮೇಣ 1913ರಲ್ಲಿ ಕೃಷಿ ಶಾಲೆ ರೂಪುಗೊಂಡಿತು. ಆಗಿನ ಕೃಷಿ ವಿಸ್ತರಣಕಾರ್ಯದಿಂದ ಅಡಿಕೆ ಕೊಳೆರೋಗದ ಹತೋಟಿ, ಹೊಲದ ಬೆಳೆಗಳಿಗೆ ಬೀಳುವ ಕಂಬಳಿಹುಳದ ಹತೋಟಿ, ಉತ್ತಮ ಕಬ್ಬಿನ ಬೆಳೆ ತೆಗೆಯುವುದು, ಸುಧಾರಿಸಿದ ರೀತಿಯಲ್ಲಿ ಬೆಲ್ಲ ತಯಾರಿಸುವುದು ಮುಂತಾದವನ್ನು ಸಾಧಿಸಲಾಯಿತು. ಸ್ವಪ್ರಯತ್ನಕ್ಕೆ ಸರ್ಕಾರದ ನೆರವು ನೀಡಿಕೆ ಎಂಬುದು ಕೃಷಿ ವಿಸ್ತರಣಕಾರ್ಯದ ತತ್ತ್ವವಾಗಿತ್ತು. ಇತರ ಗಮನಾರ್ಹ ಕೃಷಿ ಅಭಿವೃದ್ಧಿ ಕಾರ್ಯಗಳೆಂದರೆ 1916ರಲ್ಲಿ ಚಿಕ್ಕನಹಳ್ಳಿಯಲ್ಲಿ ಶ್ರೀ ಉಗ್ರೇಗೌಡರ ದಾನದ ಫಲವಾಗಿ (ರೂ.25,000) ರೈತಮಕ್ಕಳಿಗಾಗಿ ಕೃಷಿಶಾಲೆಯ ಪ್ರಾರಂಭ; ಮತ್ತು ಸಂಸ್ಥಾನದ ಗ್ರಾಮಾಂತರ ಶಾಲೆಗಳಲ್ಲಿ ಗ್ರಾಮವಿಜ್ಞಾನ ಬೋಧನೆಗೆ ಅವಕಾಶ ಏರ್ಪಟ್ಟಿದ್ದು. 1914ರಲ್ಲಿ ಕೃಷಿ ಇಲಾಖೆಯಲ್ಲಿ ಪ್ರಾತ್ಯಕ್ಷಿಕ ವಿಭಾಗ ರೂಪಗೊಂಡು ಕೃಷಿ ವಿಸ್ತರಣೆ ತೀವ್ರಗತಿಯಲ್ಲಿ ಸಾಗತೊಡಗಿತು. ಪ್ರಜೆಗಳು ಮತ್ತು ಸರ್ಕಾರಿ ಅಧಿಕಾರಿಗಳು ಸಹಕರಿಸಿ ದೇಶದ ಆರ್ಥಿಕ ಪ್ರಗತಿ ಸಾಧಿಸಲು ಆರ್ಥಿಕ ಸಮ್ಮೇಳನ ರೂಪುಗೊಂಡಿತು. ಇದರ ಅಂಗವಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟಗಳಲ್ಲಿ ಪ್ರಜಾಪ್ರತಿನಿಧಿಗಳೂ ಪ್ರಗತಿಪರ ರೈತರೂ ಸರ್ಕಾರಿ ಅಧಿಕಾರಿಗಳೂ ಸೇರಿ ಅಭಿವೃದ್ಧಿ ಯೋಜನೆಗಳನ್ನು ತಯಾರಿಸಿ ಕಾರ್ಯಗತಮಾಡಲು ಸಹಕರಿಸುತ್ತಿದ್ದರು. ಗ್ರಾಮಾಭಿವೃದ್ಧಿ ಮಂಡಳಿಗಳು ಗ್ರಾಮಮಟ್ಟದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದುವು. ಜನಗಳ ಮನೋವಿಕಾಸ ಮತ್ತು ಆರ್ಥಿಕ ಪ್ರಗತಿಗೆ ಅನುವಾಗುವಂತೆ ವಿಸ್ತರಣಭಾಷಣಗಳು, ಪ್ರಾತ್ಯಕ್ಷಿಕೆಗಳು, ಪ್ರದರ್ಶನಗಳು ಮುಂತಾದವನ್ನು ಏರ್ಪಡಿಸುವ ಜವಾಬ್ದಾರಿ ಈ ಗ್ರಾಮಾಭಿವೃದ್ಧಿ ಮಂಡಳಿಗೆ ಇತ್ತು. ಈ ರೀತಿ ತೀವ್ರಗತಿಯಲ್ಲಿ ಕೃಷಿ ವಿಸ್ತರಣ ಸಾಗಿದ್ದು 1929ರ ಹೊತ್ತಿಗೆ ಕೃಷಿ ಇಲಾಖೆ ರೈತರೊಂದಿಗೆ ನೇರ ಸಂಪರ್ಕ ಹೊಂದಿ ಅವರ ಹಿಡುವಳಿಗಳಲ್ಲಿಯೇ ಸುಧಾರಿಸಿದ ಕ್ರಮಗಳನ್ನು ತೋರಿಸಿ ಸೂಕ್ತ ಸಲಹೆ ಕೊಡುತ್ತಿತ್ತು. ಇಲಾಖೆಯ ಸುದ್ದಿ ಸಮಾಚಾರ ಶಾಖೆ ಹೊರದೇಶಗಳೊಡನೆ ಸಂಪರ್ಕ ಏರ್ಪಡಿಸಿಕೊಂಡು ವಿಜ್ಞಾನ ಪ್ರಗತಿಯ ಲಾಭವನ್ನು ತನ್ನ ಕಾರ್ಯಕರ್ತರುಗಳಿಗೆ ಮತ್ತು ಪ್ರಗತಿಪರ ರೈತರಿಗೆ ಮಾಡಿಕೊಡುತ್ತಿತ್ತು. ಪುಸ್ತಕಭಂಡಾರದಲ್ಲಿ 3,000 ಪುಸ್ತಕಗಳು 6,000 ಪ್ರಕಟಣೆಗಳು, 1,000 ವರದಿಗಳು ಇದ್ದು 84 ನಿಯತಕಾಲಿಕಗಳು ಬರುತ್ತಿದ್ದುವು. ಮೈಸೂರು ವ್ಯವಸಾಯ ಪತ್ರಿಕೆ ಮತ್ತು ಮೈಸೂರು ಕೃಷಿ ಸಂಶೊಧನ ಪತ್ರಿಕೆಗಳು ಸಹ ಪ್ರಕಟವಾಗುತ್ತಿದ್ದುವು. 1930ರಿಂದ 1940ರವರೆಗೆ ಇದೇ ರೀತಿ ಕಾರ್ಯ ಚಟುವಟಿಕೆಗಳು ಮುಂದುವರಿದುವಾದರೂ ಆರ್ಥಿಕ ಮುಗ್ಗಟ್ಟಿನ ಪರಿಣಾಮವಾಗಿ ಸರ್ಕಾರ ವಿಸ್ತರಣ ಸಂಶೋಧನೆ ಮತ್ತು ಕೃಷಿ ಶಿಕ್ಷಣದ ಬಗ್ಗೆ ತೀವ್ರತರ ಯೋಜನೆ ರೂಪಿಸಲು ಸಾಧ್ಯವಾಗಲಿಲ್ಲ. ಎರಡನೆಯ ಮಹಾಯುದ್ಧದ ಪರಿಣಾಮವಾಗಿ ದೇಶದ ಆಹಾರ ಮತ್ತು ಕೃಷಿ ಉತ್ಪನ್ನದ ಕಡೆ ಗಮನ ಕೊಡುವ ಅವಶ್ಯಕತೆ ಉಂಟಾಗಿ, ಹೆಚ್ಚು ಆಹಾರ ಬೆಳೆಸಿರಿ ಎಂಬ ಯೋಜನೆಗಳು ಕಾರ್ಯಗತವಾಗತೊಡಗಿದುವು. ಉದಾಹರಣೆಗೆ 1943-44ನೆಯ ಸಾಲಿನಲ್ಲಿ 2,291 ಪ್ರಾತ್ಯಕ್ಷಿಕೆಗಳು, 895 ರೈತಹಿಡುವಳಿಯಲ್ಲಿಯೇ ಬೀಜೋತ್ಪಾದನಾ ತಾಕುಗಳು, 31,313 ನೇಗಿಲುಗಳು, 6,942 ಸುಧಾರಿಸಿದ ಕಬ್ಬಿಣ ಗಾಣಗಳು 546 ವಿದ್ಯುತ್ ನೀರೆತ್ತುವ ಸಾಧನಗಳು, 197 ಎಣ್ಣೆ ಯಂತ್ರದಿಂದ ನೀರೆತ್ತುವ ಸಾಧನಗಳು, 11 ಟ್ರಾಕ್ಟರುಗಳು ಇದ್ದುವು. ರಾಸಾಯನಿಕ ಗೊಬ್ಬರದ ಬಳಕೆ ಸುಮಾರು 1,000 ಟನ್‍ಗಳು. 1946ನೆಯ ಸಾಲಿನಲ್ಲಿ ಹೆಬ್ಬಾಳ್ ಕೃಷಿಸಂಶೋಧನ ಕೇಂದ್ರದಲ್ಲಿ ಕೃಷಿ ಕಾಲೇಜು ಸ್ಥಾಪಿತವಾಯಿತು.
ಕೃಷಿ ವಿಸ್ತರಣಕಾರ್ಯಚಟುವಟಿಕೆಗಳು
ಬದಲಾಯಿಸಿಇನ್ನೊಂದು ದಶಕದ ಅನಂತರ ಕೃಷಿ ವಿಸ್ತರಣಕಾರ್ಯಚಟುವಟಿಕೆಗಳು ಇನ್ನೂ ಹೆಚ್ಚಾದುವು. 1953-54ನೆಯ ಸಾಲಿನಲ್ಲಿ ಪ್ರಾತ್ಯಕ್ಷಿಕಗಳ ಸಂಖ್ಯೆ ಹೀಗಿತ್ತು ; ಉಳುಮೆ 4,282, ನಾಟಿ 6,094, ಸಸ್ಯರಕ್ಷಣೆ 3,364, ಹಸುರುಗೊಬ್ಬರ 3,108, ಕಾಂಪೋಸ್ಟ 7,800, ಬೆಲ್ಲ ತಯಾರಿಕೆ 358, ಉತ್ತಮ ತಳಿ 1,589. ಅಲ್ಲದೆ 49 ಪ್ರದರ್ಶನಗಳು ಏರ್ಪಟ್ಟಿದ್ದುವು. ವ್ಯವಸಾಯದ ಯೂನಿಯನ್‍ನಲ್ಲಿ 12,000 ರೈತರು ಸದಸ್ಯರಾಗಿದ್ದರು. ಅವರು 877 ಗ್ರಾಮಸಭೆಗಳಲ್ಲಿ 197 ತಾಲ್ಲೂಕು ಸಭೆಗಳಲ್ಲಿ ಭಾಗವಹಿಸಿದ್ದರು. 26,704 ಕಬ್ಬಿಣದ ನೇಗಿಲುಗಳು, 767 ಕಲ್ಟಿವೇಟರುಗಳು, 775 ಟ್ರಾಕ್ಟರುಗಳು ಗ್ರಾಮಾಂತರದಲ್ಲಿ ಕೆಲಸ ಮಾಡುತ್ತಿದ್ದವು. 17,000 ಟನ್ ರಸಗೊಬ್ಬರಗಳು ಉಪಯೋಗಿಸಲ್ಪಟ್ಟವು. ಕ್ರಮೇಣ ಕೃಷಿ ವಿಸ್ತರಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ದೊರೆತದ್ದರಿಂದ ಮತ್ತು ಸಮಾಜ ವಿಕಾಸಯೋಜನೆ ರೂಪುಗೊಳ್ಳಲು ಪ್ರಾರಂಭವಾದದ್ದರಿಂದ ಕೃಷಿ ವಿಸ್ತರಣಕಾರ್ಯದ ಸ್ವರೂಪ ಬದಲಾಗತೊಡಗಿತು. ಈ ಪರ್ವ ಕಾಲದಲ್ಲಿ ಎಂದರೆ 1952-54 ರಲ್ಲಿ ತೀವ್ರತರ ವಿಸ್ತರಣ ಯೋಜನೆಯೊಂದು ಪ್ರಯೋಗಾತ್ಮಕವಾಗಿ ನಡೆಯಿತು. ಇದಕ್ಕೆ ಫೋರ್ಡ ಫೌಂಡೇಶನ್‍ನ ಉತ್ತೇಜನ ಮತ್ತು ಕೇಂದ್ರ ಸರ್ಕಾರದ ಮುಂದಾಳುತನ ಒದಗಿದ್ದುವು. ಮಳವಳ್ಳಿ ತಾಲ್ಲೂಕಿನಲ್ಲಿ ಈ ಪ್ರಯತ್ನ ಯಶಸ್ವಿಯಾಗಿ ನಡೆಯಿತು. ತಾಲ್ಲೂಕು ಮಟ್ಟದಲ್ಲಿ ಕೆಲಸ ಮಾಡುತ್ತಿದ್ದ ಕೃಷಿ ಇನ್ಸ್‍ಪೆಕ್ಟರುಗಳು-ಕೃಷಿ ವಿಜ್ಞಾನ ಪದವೀಧರರು ಮತ್ತು ಡಿಪ್ಲೊಮ ಪಡೆದ ತಜ್ಞರು-ಗ್ರಾಮಾಂತರಗಳಲ್ಲಿ ನೆಲೆಸಿ ತೀವ್ರ ಕೃಷಿ ವಿಸ್ತರಣಕಾರ್ಯ ಕೈಗೊಂಡರು. ಮೊದಲ 18 ತಿಂಗಳುಗಳಲ್ಲಿ 100 ಗ್ರಾಮಗಳಲ್ಲಿ ಸಾಧಿಸಿದ ಕೆಲಸ ಗಮನಾರ್ಹ. 1,658 ಸಭೆಗಳು, 4,046 ಪ್ರಾತ್ಯಕ್ಷಿಕೆಗಳು, 140 ಪ್ರಾತ್ಯಕ್ಷಿಕೆ ತಾಕುಗಳು, 6,580 ಎಕರೆಗಳಲ್ಲಿ ಜಪಾನ್ ಮಾದರೀ ಬತ್ತ, 256 ಹೊಸ ಬೆಳೆಗಳನ್ನು ರೂಢಿಗೆ ತಂದ ರೈತರು, 299 ಸುಧಾರಿಸಿದ ದನದ ಕೊಟ್ಟಿಗೆಗಳು, 1,083 ಕಾಂಪೋಸ್ಟ್ ಗುಂಡಿಗಳು, 244 ಮಣ್ಣು ಪರೀಕ್ಷೆ ಮತ್ತು ಸಲಹೆ ಇವಿಷ್ಟು ನಡೆದವು. ಪಶು ಸಂವರ್ಧನೆ ಕಾರ್ಯಕ್ರಮಗಳೂ ಸೇರಿದ್ದವು. ಈ ಪ್ರಯತ್ನದಿಂದ ಒಂದು ಮಹತ್ತರ ಪಾಠ ಕಲಿತಂತೆ ಆಯಿತು. ಗ್ರಾಮಾಂತರ ಪ್ರದೇಶದಲ್ಲಿ ಕೃಷಿತಜ್ಞರು ತೀವ್ರತರ ಕೃಷಿ ವಿಸ್ತರಣಕಾರ್ಯ ನಡೆಸಿದರೆ ರೈತರು ಸಹಕರಿಸುತ್ತಾರೆ, ಮಾತ್ರವಲ್ಲ ಜನತಾ ವಿಕಾಸ ಸ್ವಯಂ ಸೇವಾತತ್ತ್ವದ ಮೂಲಕ ಸಾಧಿಸಲು ಸಾಧ್ಯ ಎಂದು ತಿಳಿಯಿತು. ಸಾಕಷ್ಟು ತರಬೇತಿ ಪಡೆದ ತಜ್ಞರು ಈ ಕಾರ್ಯದ ಹೊಣೆ ಹೊರಬೇಕು ಮಾತ್ರ. 1954ರಿಂದ ಈಚೆಗೆ ರಾಷ್ಟ್ರೀಯ ವಿಸ್ತರಣ ಯೋಜನೆ ಸಮಾಜ ವಿಕಾಸ ಯೋಜನೆ ಮತ್ತು ಇತರ ಅಭಿವೃದ್ಧಿ ಯೋಜನೆಗಳು ಇತರ ರಾಜ್ಯಗಳಲ್ಲಿ ಕಾರ್ಯಗತವಾದಂತೆ ಕರ್ನಾಟಕದಲ್ಲಿಯೂ ಕಾರ್ಯಗತವಾಗುತ್ತಿವೆ. ಕೃಷಿ ಇಲಾಖೆ ಇತರ ಯೋಜನೆಗಳನ್ನು ಅದರಲ್ಲಿಯೂ ಮುಖ್ಯವಾಗಿ ಮಣ್ಣುಪಾಲನೆ ಸಸ್ಯರಕ್ಷಣೆ ಬೆಳೆ ಅಭಿವೃದ್ಧಿ ವಿಸ್ತರಣಕಾರ್ಯ ರೂಪಿಸಿತು.
ಸಾಂದ್ರ ವ್ಯವಸಾಯ ಯೋಜನೆ
ಬದಲಾಯಿಸಿಸಾಂದ್ರ ವ್ಯವಸಾಯ ಯೋಜನೆಗಳ ಮೂಲಕ ಗ್ರಾಮಮಟ್ಟದಲ್ಲಿ ಕೃಷಿ ವಿಸ್ತರಣಕ್ಕಾಗಿಯೇ ಮೀಸಲಾದ ಗ್ರಾಮಸೇವಕರು ಅವರ ಮೇಲ್ವಿಚಾರಣೆಗೆ ಮತ್ತು ಮಾರ್ಗದರ್ಶನಕ್ಕೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟಗಳಲ್ಲಿ ಕೃಷಿತಜ್ಞರು ಕೆಲಸಮಾಡುತ್ತಿದ್ದಾರೆ. ತುಂಗಭದ್ರಾ ನೀರಾವರಿ ಪ್ರದೇಶದಲ್ಲಿ ಮತ್ತು ಭದ್ರಾ ನೀರಾವರಿ ಪ್ರದೇಶದಲ್ಲಿ ನೀರಾವರಿ ಗದ್ದೆಗಳನ್ನಾಗಿ ಪರಿವರ್ತಿಸಿ ಲಾಭದಾಯಕ ಬೆಳೆ ತೆಗೆಯಲು ಅನುಕೂಲವಾಗುವಂತೆ ವಿಶಿಷ್ಟ ಸಿಬ್ಬಂದಿ ಕೆಲಸ ಮಾಡುತ್ತಲಿದೆ. 1965ರಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯಾಯಿತು. ಸಂಶೋಧನೆ, ಕೃಷಿ ವಿದ್ಯಾಭ್ಯಾಸ ಮತ್ತು ವಿಸ್ತರಣ ಮೂರು ಜವಾಬ್ದಾರಿಗಳು ಒಂದು ಸಂಯೋಜಿತ ವ್ಯವಸ್ಥೆ. ಇದು ಕೃಷಿ ಅಭಿವೃದ್ಧಿಗೆ ಪರಿಣಾಮಕಾರಿಯಲ್ಲದೆ ಜನತಾ ವಿಕಾಸಕ್ಕೆ ಸೂಕ್ತ ವ್ಯವಸ್ಥೆಯೆಂದು ನೂರು ವರ್ಷಗಳ ಅನುಭವದಿಂದ ತೋರಿಸಿಕೊಟ್ಟ ಅಮೆರಿಕ ಲ್ಯಾಂಡ್ ಗ್ರಾಂಟ್ ಸಂಸ್ಥೆಗಳ ಮಾದರಿಯನ್ನು ಅನುಸರಿಸಲು ಪ್ರಯತ್ನ ಮಾಡಲಾಗುತ್ತಿದೆ. ಮೈಸೂರು ಸರ್ಕಾರ ಕೃಷಿ ಮತ್ತು ವೆಟರ್‍ನರಿ ಕಾಲೇಜುಗಳನ್ನು, ಕೃಷಿ ಸಂಶೋಧನಾ ಕ್ಷೇತ್ರಗಳನ್ನು ವಿಶ್ವವಿದ್ಯಾಲಯಕ್ಕೆ ವರ್ಗಾಯಿಸಿದೆ.