ಕುಲಶೇಖರ ಆಳ್ವಾರ್ ನಮ್ಮಾಳ್ವಾರ್ ಅವರ ಅನಂತರ ಸ್ವಲ್ಪಕಾಲದ ಮೇಲೆ ಉದಿಸಿದ ಆಳ್ವಾರರು ಕೇರಳ ದೇಶದ ಕೋಳ ಪಟ್ಟಣದ ರಾಜನಾದ ದೃಢವೃತನೆಂಬ ರಾಜನ ಪುತ್ರ. ಕುಂಭಮಾಸದ ಪುನರ್ವಸು ನಕ್ಷತ್ರದಲ್ಲಿ ಶ್ರೀಮನ್ಮಹಾವಿಷ್ಣುವಿನ ಕೌಸ್ತುಭಾಂಶರಾಗಿ ಇವರು ಜನಿಸಿದರೆಂದು ಸಂಪ್ರದಾಯಗ್ರಂಥ ತಿಳಿಸುತ್ತದೆ. ಅರಸಾಗಿ ಹುಟ್ಟಿದ್ದರೂ ಇವರಿಗೆ ಭೋಗತೃಷ್ಣೆಯಿರಲಿಲ್ಲ; ಅಸದೃಶವಾದ ದೈವತೃಷ್ಣೆಯಿತ್ತು. ಬಾನನ್ನಾಳುವ ಚಂದ್ರನಂತೆ ಬಿಳಿದಾಗಿರುವ ಈ ಛತ್ರಿಯ ಕೆಳಗೆ ಅಟ್ಟಹಾಸದಿಂದ ಕುಳಿತು ಅರಸರ ಅರಸಾಗಿ ಆಳುವವನ ಸಂಪತ್ತನ್ನು ಸಂಪತ್ತೆಂದು ಒಂದು ಕ್ಷಣಮಾತ್ರವೂ ಭಾವಿಸಲಾರೆ. ಎಲ್ಲರೂ ಕೊಂಡಾಡುವ ಈ ಸಿರಿ ನನಗೆ ಬೆಲೆಯಿಲ್ಲದ್ದು. ಇದಕ್ಕಿಂತಲೂ ತಿರುವೇಂಗಡದ ಬೆಟ್ಟಗಳಲ್ಲಿ ಸ್ವೇಚ್ಛೆಯಾಗಿ ಹರಿದಾಡುವ ಕಾಡುಹೊಳೆಯಾಗಿರುವುದು ಲೇಸು. ಈ ವರವನ್ನು ಭಗವಂತ ನನಗೀಯಲಿ (ಶ್ರೀ ಎಂ. ಯಾಮುನಾಚಾರ್ಯರ ಅನುವಾದ)-ಎಂದು ಒಂದು ಪದ್ಯದಲ್ಲಿ ಇವರು ಮೊರೆಯಿಟ್ಟಿದ್ದಾರೆ. ಇವರು ವಿದ್ಯಾಸಂಪನ್ನರು. ರಾಮಾಯಣ ಭಾಗವತಗಳಲ್ಲಿ ಆಯಾ ಕತೆಗಳ ಪಾತ್ರಗಳಲ್ಲಿ ಲೀನವಾಗುವಷ್ಟು ಇವರಿಗೆ ಉನ್ಮತ್ತ ಪ್ರೀತಿ. ಸಾಧು ಸಂತರ ಸಂತರ್ಪಣೆಯಲ್ಲಿ ತುಂಬ ಶ್ರದ್ದೆ, ತೀರ್ಥಯಾತ್ರೆಗಳಲ್ಲಿ ವಿಶೇಷವಾದ ಆಸಕ್ತಿ. ಇವರು ಅಧಿಕಾರಕ್ಕಾಗಲಿ ಅಂತಸ್ತಿಗಾಗಲಿ ಎಂದಿಗೂ ಆಸೆ ಪಟ್ಟವರಲ್ಲ. ವಯಸ್ಸಿನ್ನೂ ಮೀರಿರದಾಗಲೇ ಈ ಮಹಾನುಭಾವರು ಮಗನಿಗೆ ಪಟ್ಟಗಟ್ಟಿ ಶ್ರೀರಂಗಕ್ಷೇತ್ರದಲ್ಲಿ ಅಕಿಂಚನರಾಗಿದ್ದುಬಿಟ್ಟರು. ಇವರ ತಿರುಮೊಳಿ ಎಂಬ 105 ಬಿಡಿ ಪದ್ಯಗಳುಳ್ಳ ಪ್ರಬಂಧವೊಂದು ನಮಗೆ ಲಭಿಸಿದೆ. ‘ಹೊರೆವ ಒಡೆಯಾ, ಎಷ್ಟು ಕಷ್ಟಗಳನ್ನಾದರೂ ಕೊಡು, ಅದನ್ನು ಹೋಗಿಸುವವನು ನೀನೇ. ಮುನಿಸಿನಿಂದ ತನ್ನನ್ನು ಕಡೆಗಣಿಸಿರುವ ತಾಯನ್ನು ನೆಚ್ಚಳಿಯದೆ ನೆನೆನೆನೆದು ಮಗು ಅಳುವಂತೆ ನಿನ್ನನ್ನು ನೆನೆದು ನೆನೆದೇ ನಾನು ರೋದಿಸುತ್ತೇನೆ.’ ಈ ತರದ ಮಾತುಗಳು ಇವರ ಕವಿತೆಯ ತುಂಬ ಇವೆ. ತಮಿಳಿನ ಈ ಪ್ರಬಂಧವೊಂದನ್ನು ಅಲ್ಲದೆ ಸಂಸ್ಕೃತದಲ್ಲಿ ಸರ್ವಾದರಣೀಯವೂ ಶೋಭನವೂ ಪ್ರಶಮನಕರವೂ ಆದ ಮುಕುಂದಮಾಲಾ ಎಂಬ ಸ್ತೋತ್ರವನ್ನು ಈತ ರಚಿಸಿದ್ದಾರೆ.

ಕುಲಶೇಖರ ಆಳ್ವಾರ್
ಕುಲಶೇಖರ ಆಳ್ವಾರ್
ಜನನ3075 BCE[][]
Alwarthirunagiri
ಗೌರವಗಳುAlvar saint
ತತ್ವಶಾಸ್ತ್ರವೈಷ್ಣವ ಭಕ್ತಿ
ಪ್ರಮುಖ ಕೃತಿಗಳುಮುಕುಂದಮಾಲಾ, ಪೆರುಮಾಳ್ ತಿರುಮೊಳಿ
Also a king of Later Chera Kingdom

ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. L. Annapoorna (2000). Music and temples, a ritualistic approach. p. 23. ISBN 9788175740907.
  2. Sakkottai Krishnaswami Aiyangar (1911). Ancient India: Collected Essays on the Literary and Political History of Southern India. pp. 403–404. ISBN 9788120618503.


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: