ಕುಂಜನ್ ನಂಬಿಯಾರ್

ಭಾರತೀಯ ಲೇಖಕ

ಕುಂಜನ್ ನಂಬಿಯಾರ್ ಪ್ರಸಿದ್ಧ ಮಲೆಯಾಳಮ್ ಸಾಹಿತಿ.ಇವನು ಕವಿ,ವಿಡಂಬನಕಾರ ಮಾತ್ರವಲ್ಲದೆ ಒಟ್ಟಮ್‍ತುಳ್ಳಲ್ ಎಂಬ ಸ್ಥಳೀಯ ಕಲಾಪ್ರಾಕಾರದ ಸಂಶೋಧಕನೆಂದು ಹೇಳಲಾಗಿದೆ.

ಕುಂಜನ್ ನಂಬಿಯಾರ್
ಜನನc1700
ಮರಣc.1770
ವೃತ್ತಿಕವಿ, performer
ಭಾಷೆಮಲೆಯಾಳಮ್
ರಾಷ್ಟ್ರೀಯತೆಭಾರತೀಯ
Kalakkathu Bhavanam - House of Kunchan Nambiar

ಕಾಲ ಸು. ಹದಿನೆಂಟನೆಯ ಶತಮಾನ.ಕುಂಜನ್ ನಂಬಿಯಾರ್ ಕಿಳ್ಳಿಕುರುಶ್‍ಮಂಗಲಂ ಕ್ಷೇತ್ರದ ಸಮೀಪದಲ್ಲಿರುವ ಕಲಕ್ಕತ್ತು ಭವನದಲ್ಲಿ 1705ರಲ್ಲಿ ಹುಟ್ಟಿದ. ಅಂಬಲಪ್ಪು ರಾಜನ ಅಶ್ರಯದಲ್ಲಿದ್ದು ತನ್ನ ಕೃತಿಗಳನ್ನು ರಚಿಸಿದ.

ಪ್ರತಿಭೆ

ಬದಲಾಯಿಸಿ

ಸುಮಾರು ಅರುವತ್ತನಾಲ್ಕು ತುಳ್ಳಲ್ ಕಾವ್ಯಗಳನ್ನೂ ಸಂಸ್ಕೃತದಲ್ಲಿ ಕೆಲವು ಕಾವ್ಯಗಳನ್ನೂ ರಚಿಸಿ ಮಲಯಾಳ ಸಾಹಿತ್ಯದಲ್ಲಿ ಹೆಸರುವಾಸಿಯಾಗಿರುವ ಒಬ್ಬ ಕವಿ. ಚಂಪೂ ಗ್ರಂಥಗಳಲ್ಲಿನ ಗದ್ಯ ಕುಂಜನ್ ನಂಬಿಯಾರನೇ ಮೊದಲಾದ ಕವಿಗಳಿಗೆ ಸ್ಛೂರ್ತಿದಾಯಕವಾಗಿ ಪರಿಣಮಿಸಿತು. ನಂಬಿಯಾರ್ ನಿರ್ಮಿಸಿದ ಓಟ್ಟಂ ತುಳ್ಳಲ್ (ಕನ್ನಡದ ಬಯಲಾಟಕ್ಕೆ ಇದನ್ನು ಹೋಲಿಸಬಹುದು) ಎಂಬ ಕಾವ್ಯಪ್ರಕಾರದಲ್ಲಿ ಬಳಸಲಾದ ವೃತ್ತಗಳು ಆ ಗದ್ಯದ ಪ್ರಭಾವದಿಂದಲೇ ಮೂಡುಬಂದುವು. ಮಲೆಯಾಳ ಸಾಹಿತ್ಯ ಪ್ರಪಂಚದಲ್ಲಿ ಮೊಟ್ಟಮೊದಲು ಹಾಸ್ಯಪ್ರವೃತ್ತಿಯನ್ನು ವಿಪುಲವಾಗಿ ಬಳಕೆಗೆ ತಂದವನೆಂದು ಕುಂಜನ್ ನಂಬಿಯಾರ್ ಪ್ರಸಿದ್ಧನಾಗಿದ್ದಾನೆ.

ಸಾಹಿತ್ಯ

ಬದಲಾಯಿಸಿ

ಅಸಾಧಾರಣ ಸಾಮರ್ಥ್ಯ ಅತುಲ್ಯವಾದ ಪ್ರತಿಭಾಶಕ್ತಿಗಳನ್ನೊಳಗೊಂಡ ಉತ್ತಮ ಕವಿಯೀತ. ಸಾಮಾಜಿಕ ಪ್ರಜ್ಞೆಯುಳ್ಳ ಕವಿಗಳಲ್ಲಿ ಈತ ಬಹು ಮುಖ್ಯನಾದವ. ಈತನ ಕಾವ್ಯ ಅದ್ಯಂತವಾಗಿ ಸಾಮಾಜಿಕ ವಿಮರ್ಶನಪ್ರಧಾನವಾದುದು. ಆ ವಿಮರ್ಶೆಯಾದರೋ ಸಂಪೂರ್ಣವಾಗಿ ಹಾಸ್ಯರಸಲಿಪ್ತವಾದುದು. ಕೇರಳದ ಸಾಮಾಜಿಕ ಪರಿಸ್ಥಿತಿ ತೀರ ಹದಗೆಟ್ಟ ಕಾಲದಲ್ಲಿ ನಂಬಿಯಾರ್ ತನ್ನ ಕೃತಿಗಳನ್ನು ರಚಿಸಿದ. ಕೇರಳದ ರಾಜರು ತಮ್ಮ ತಮ್ಮಲ್ಲೇ ಕಚ್ಚಾಡುತ್ತಿರಬೇಕಾದರೆ ಜನಜೀವನ ಹದಗೆಟ್ಟು ಹೋಗಿತ್ತು. ನಾಡಿನಾದ್ಯಂತ ನೀತಿಮಾರ್ಗ ಕುಸಿದು ಕೆಳಕ್ಕಿಳಿದಿತ್ತು. ಈ ಪರಿಸ್ಥಿತಿ ನಂಬಿಯಾರನ ಸಾಮಾಜಿಕ ವಿಡಂಬನೆಯ ಹಾಸ್ಯಕೃತಿಗಳಿಗೆ ಯಥೇಚ್ಛವಾಗಿ ನೀರನ್ನೆರೆಯಿತು. ಜಾನಪದ ಗೀತೆಗಳ ಧಾಡಿಯನ್ನನುಸರಿಸಿ, ಅದನ್ನು ಪರಿಸ್ಕರಿಸಿ ಈತ ಒಂದು ಹೊಸ ಕಾವ್ಯರಚಿಸುತ್ತಿರುವುದಾಗಿ ನಂಬಿಯಾರ್ ತಾನೇ ಮುಕ್ತಕಂಠದಿಂದ ಹೇಳಿಕೊಂಡಿದ್ದಾನೆ. ಸಂಸ್ಕೃತಕ್ಕಿಂತಲೂ ಚಾರು ಕೇರಳ ಭಾಷೆಯನ್ನೇ ತಾನು ಒಲಿದಿರುವುದಾಗಿ ಈತನ ಬಣ್ಣನೆ:

ಭಟಸಮೂಹದ ನಡುವಿನೊಳಗಡಗಿರುವ ಪಡೆಯೊಡೆನೆ ತಾ ಸೇರಲು

ಗಾಡಿಯಿಂದೆಸೆವ ಚಾರು ಕೇರಳ ಭಾಷೆಯೇ ಸಮುಚಿತ ಸುಂದರ; ಟಾಠಡಾಢಣ ಕಠಿಣ ಸಂಸ್ಕೃತ ವಿಕಟಕವಿಯೇ ನಾನು ಮಲ್ಲಿಗೆ ಹೋಗಲು

ಭಟಜನರೆಂದೂ ಸಹಿಸಲಾರರು; ಕೇಳಿ ಮೆತ್ತನೆ ಹೊರಟೇ ಬಿಡುವರು.

ಪುರಾಣ ಕಥೆಗಳನ್ನು ಜಾನಪದ ಕಥೆಗಳಂತೆ ಸುಲಲಿತವಾಗೆ ನಂಬಿಯಾರ್ ಹೇಳಿದ್ದಾನೆ. ಸುಮಾರು ಅರುವತ್ತನಾಲ್ಕು ತುಳ್ಳಲ್ ಕಾವ್ಯಗಳನ್ನು ಈತ ರಚಿಸಿದ್ದಾನೆಂದು ಪ್ರತೀತಿ. ಇವಲ್ಲದೆ ಕಿಳಿಪಾಟ್ಟುಗಳ್, ಅಟ್ಟಕಥಗಳ್ ಮತ್ತು ಇತರ ಅನೇಕ ಕವಿತೆಗಳನ್ನೂ ಈತ ರಚಿಸಿದ್ದಾನೆ. ಸಂಸ್ಕೃತದಲ್ಲಿ ರಾಘವೀಯಂ ಮಹಾ ಕಾವ್ಯಂ, ಸೀತಾರಾಘವ ನಾಟಕಂ, ಚಂದ್ರಿಕಾವೀಥಿ, ಲೀಲಾವತಿ ವೀಥಿ-ಮೊದಲಾದ ಕೃತಿಗಳ ರಚನೆಯೂ ಈತನಿಂದ ಅಗಿದೆಯೆಂದು ಅನೇಕ ವಿದ್ವಾಂಸರು ಊಹಿಸಿದ್ದಾರೆ.

 
Mizhavu used by Kunchan Nambiar at Ambalapuzha Sri Krishna temple

ಹುಚ್ಚುನಾಯಿ ಕಚ್ಚಿದುದರ ಪರಿಣಾಮವಾಗಿ ಹುಚ್ಚುಹಿಡಿದು ನಂಬಿಯಾರ್ ಸತ್ತನೆಂದು ಹೇಳುವವರಿದ್ದಾರೆ.

ಉಲ್ಲೇಖಗಳು

ಬದಲಾಯಿಸಿ

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: