ಕವಿಪರಮೇಷ್ಠಿ
ಕವಿಪರಮೇಷ್ಠಿ : ಒಬ್ಬ ಜೈನಕವಿ. ಹೆಸರಾಂತ ಕನ್ನಡ ಕವಿಗಳನೇಕರು ಇವನನ್ನು ತಮ್ಮ ಗ್ರಂಥಾದಿಯಲ್ಲಿ ಸ್ಮರಿಸುತ್ತಾರೆ. ಹೀಗೆ ಬೇರೆ ಬೇರೆ ಕವಿಗಳ ಉಲ್ಲೇಖಗಳನ್ನು ಬಿಟ್ಟರೆ ಈತ ರಚಿಸಿದ ಗ್ರಂಥಗಳಾಗಲೀ ಜೀವನವಿಚಾರವಾಗಲೀ ನಮಗೆ ದೊರೆಯುವುದಿಲ್ಲ. ಹುಮ್ಚದ ಶಾಸನವೊಂದರಲ್ಲಿ ಜೈನಮುನಿಗಳ ಜೊತೆಯಲ್ಲಿ ಇವನ ಹೆಸರೂ ಇರುವುದರಿಂದ, ಈತನೊಬ್ಬ ಯತಿಯೋ ಧಾರ್ಮಿಕ ಪೂಜ್ಯವ್ಯಕ್ತಿಯೋ ಆಗಿದ್ದಿರಬೇಕೆಂದು ಊಹಿಸಲು ಅವಕಾಶವಿದೆ. ಈತ ಕನ್ನಡದಲ್ಲಿ ಗ್ರಂಥರಚನೆ ಮಾಡಿರುವ ಬಗ್ಗೆ ಯಾವ ಆಧಾರಗಳೂ ದೊರೆಯುವುದಿಲ್ಲ. ಉದ್ಧಾಮ ಕವಿಗಳಾದ ಪಂಪ, ಅಭಿನವಪಂಪ, ನಯಸೇನ, ಅಗ್ಗಳ, ಕಮಲಭವ ಮೊದಲಾದ ಕವಿಗಳು ತಮ್ಮ ಗ್ರಂಥಗಳಲ್ಲಿ ಕವಿಪರಮೇಷ್ಠಿಯನ್ನು ತಾರ್ಕಿಕ ಕವಿಯಾದ ಸಮಂತಭದ್ರ ಮತ್ತು ವೈಯಾಕರಣಿಯಾದ ಪೂಜ್ಯಪಾದನೊಡನೆ ಗೌರವ ಭಾವದಿಂದ ಉಲ್ಲೇಖಿಸಿದ್ದಾರೆ. ವಿಶೇಷ ಸಂಗತಿಯೆಂದರೆ ಕನ್ನಡದ ಆದಿಕವಿಯಾದ ಪಂಪ ಕವಿಪರಮೇಷ್ಠಿಯನ್ನು ಜಗತ್ಪ್ರಸಿದ್ಧನೆಂದಿದ್ದಾನೆ. ಎರಡನೆಯ ಗುಣವರ್ಮ (ಸು. ೧೨೩೫) ಪುಷ್ಪದಂತಪುರಾಣದಲ್ಲಿ ಕವಿಪರಮೇಷ್ಠಿಯ ಕೆಲವು ವೈಯಕ್ತಿಕ ವಿಚಾರಗಳನ್ನು ಹೇಳುತ್ತಾನೆ. ಈತನ ಮುಖ ಅನ್ಯಾದೃಶವಾದ ವಾಕ್ಚಾತುರ್ಯದಿಂದ ಸುಂದರವಾಗಿತ್ತು. ಈತ ಪಂಡಿತರೆಲ್ಲರ ಸ್ತುತಿಗೆ ಪಾತ್ರನಾಗಿದ್ದ; ಆ ಒಬ್ಬ ಪುರಾಣಪುರುಷನಾಗಿದ್ದನಲ್ಲದೆ ಸಾಕ್ಷಾತ್ ಬ್ರಹ್ಮನಾಗಿದ್ದ_ಎಂಬುದು ಅವನ ಬಗ್ಗೆ ಇರುವ ಪದ್ಯಗಳ ಸಾರ. ಪಾರ್ಶ್ವಪಂಡಿತತನ್ನ ಪಾರ್ಶ್ವಪುರಾಣದಲ್ಲಿ (ಪ್ರ.ಶ. ೧೨೦೫) ಈತನನ್ನು ಗುಣಜೇಷ್ಠ ಅಥವಾ ಸದ್ಗುಣಗಳಲ್ಲಿ ಅಗ್ರಗಣ್ಯ ಎಂದು ಹೇಳಿದ್ದಾನೆ. ಕವಿಪರಮೇಷ್ಠಿಯ ಬಗ್ಗೆ ಹೆಚ್ಚು ನಿಖರವಾದ ವಿವರಗಳು ದೊರೆಯುವುದು ಚಾವುಂಡರಾಯನ (ಪ್ರ.ಶ. ೯೭೮) ಚಾವುಂಡರಾಯಪುರಾಣದಲ್ಲಿ. ಕವಿಪರಮೇಷ್ಠಿ ತ್ರಿಷಷ್ಟಿ ( ಅರವತ್ತ್ಮೂರು) ಶಲಾಕಾ ಪುರುಷರ ಪುರಾಣವನ್ನು ಬರೆದನೆಂದು ಈತ ಸ್ಪಷ್ಟವಾಗಿ ಹೇಳಿದ್ದಾನೆ. ತನ್ನ ಪುರಾಣವನ್ನು ಕವಿಪರಮೇಶ್ವರ, ಜಿನಸೇನ, [[ಗುಣಭದ್ರ ಇವರ ಕೃತಿಗಳನ್ನು ಅನುಸರಿಸಿ ಬರೆದುದಾಗಿ ಚಾವುಂಡರಾಯ ಹೇಳಿಕೊಂಡಿದ್ದಾನೆ. ಕವಿಪರಮೇಷ್ಠಿಯ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿದ್ದಾನೆ. ನೇಮಿಚಂದ್ರ (ಸು. ೧೧೭೦) ತನ್ನ ನೇಮಿನಾಥಪುರಾಣದಲ್ಲಿ ಕವಿಪರಮೇಶ್ವರ ಇಪ್ಪತ್ತುನಾಲ್ಕು ತೀರ್ಥಂಕರರ ಚರಿತ್ರೆಯನ್ನು ಪುರಾಣವಾಗಿ ಬರೆದನೆಂದು ಹೇಳಿದ್ದಾನೆ. ಗುಣಭದ್ರ ತನ್ನ ಉತ್ತರಪುರಾಣದ (೯ನೆಯ ಶತಮಾನದ ಮಧ್ಯಭಾಗ) ಉಪಸಂಹಾರದ ಭಾಗದಲ್ಲಿ ತನ್ನ ಗುರುವಾದ ಜಿನಸೇನನಿಂದ ರಚಿತವಾದ ಆದಿಪುರಾಣ ಕವಿಪರಮೇಷ್ಠಿಯ ಗದ್ಯಕಥಾವನ್ನು ಅನುಸರಿಸಿ ಬರೆದದ್ದೆಂದು ಹೇಳಿದ್ದಾನೆ. ಜಿನಸೇನನೂ ಕವಿಪರಮೇಷ್ಠಿ ಪೂರ್ವಪುರಾಣದ ಸಂಗ್ರಹಕಾರನೆಂದು ಹೇಳಿ, ಬಹುಶಃ ವಾಗರ್ಥಸಂಗ್ರಹ ಎಂಬ ಹೆಸರಿನಿಂದ ರಚಿಸಿರಬಹುದಾದ ಆ ಕೃತಿಯನ್ನು ಬಹು ಗೌರವಭಾವದಿಂದ ಉಲ್ಲೇಖಿಸಿದ್ದಾನೆ. ಹೀಗೆ ಒಂಬತ್ತನೆಯ ಶತಮಾನದ ಆದಿಭಾಗದಿಂದ ಹದಿಮೂರನೆಯ ಶತಮಾನದವರೆವಿಗೂ ಅನೇಕ ಕವಿಗಳು, ಕವಿಪರಮೇಷ್ಠಿಯನ್ನು ಗೌರವದಿಂದ ಸ್ಮರಿಸಿರುವುದು ಕಂಡುಬರುತ್ತದೆ. ಈತ ಹೀಗೆ ಸುಪ್ರಸಿದ್ಧನೂ ಭಾಷೆಯ ಮೇಲೆ ಅಪಾರ ಹಿಡಿತವುಳ್ಳವನೂ ಅರವತ್ತು ಮೂರು ಶಲಾಕಾಪುರುಷರನ್ನು ಕುರಿತು ಪುರಾಣವೊಂದನ್ನು ಬರೆದ ಕವಿಯೂ ಎನಿಸಿ ಪ್ರಸಿದ್ಧನಾಗಿದ್ದಾನೆ. ಈತನ ಕಾಲ ಯಾವುದೆಂದು ಸ್ಪಷ್ಟವಾಗಿ ತಿಳಿಯದು. ಉತ್ತರಪುರಾಣವನ್ನು ಬರೆದ ಗುಣಭದ್ರನೂ ಕವಿಪರಮೇಶ್ವರನ ಗದ್ಯಗ್ರಂಥದ ಆಧಾರದಿಂದ ಆದಿಪುರಾಣ ಬರೆಯಲ್ಪಟ್ಟಿದೆ ಎಂದು ಹೇಳಿದ್ದಾನೆ. ಆದಿಪಂಪ ಇವನನ್ನು ಸ್ತುತಿಸಿರುವುದರಿಂದ ಕವಿಪರಮೇಷ್ಠಿ ಪಂಪನಿಗಿಂತ ಹಿಂದಿನವರು ಎಂಬುದು ಸ್ಪಷ್ಟವಾಗುತ್ತದೆ. ಈ ಕವಿ ಪರಮೇಶ್ವರನ ತ್ರಿಷಷ್ಟಿಶಲಾಕಾಪುರುಷಪುರಾಣದ ಆಧಾರದಿಂದ ಜಿನಸೇನ (೭೮೩) ಆದಿಪುರಾಣವನ್ನು ಬರೆದಿರುವುದಾಗಿ ಚಾವುಂಡರಾಯ ಹೇಳುವುದರಿಂದ ಇವನು ಜಿನಸೇನನಿಗಿಂತ ಪೂರ್ವದವನಾಗುತ್ತಾನೆ. ಈತನ ಹೆಸರು ಜೈನ ಗ್ರಂಥಗಳಲ್ಲಿ ಪ್ರಾಯಶಃ ಸಮಂತಭದ್ರನಿಗಿಂತ ಮುಂದೆಯೂ ಪೂಜ್ಯಪಾದನಿಗಿಂತ ಹಿಂದೆಯೂ ಬರುವುದರಿಂದ ಸಮಂತಭದ್ರ (ಸು. ೬೦೦) ಮತ್ತು ಪೂಜ್ಯಪಾದರ ಮಧ್ಯಕಾಲದಲ್ಲಿ ಅಂದರೆ ಸು. ೫೫೦ರಲ್ಲಿ ಈತ ಇದ್ದಿರಬಹುದೆಂದು ಕವಿಚರಿತ್ರಕಾರರು ಊಹಿಸುತ್ತಾರೆ. ಪ್ರ.ಶ. ೮೩೭ರಲ್ಲಿ ಜಯಧವಳವನ್ನು ರಚಿಸಿದ ಜಿನಸೇನನಿಗಿಂತ ಮೊದಲನೆಯವನೆಂದು ನಿರ್ಧಾರವಾಗಿ ಹೇಳಬಹುದು_ ಎಂಬುದು [[ಆ. ನೆ. ಉಪಾಧ್ಯೆ ಅವರ ಅಭಿಮತ. ಸಮಂತಭದ್ರ ಮತ್ತು ಪೂಜ್ಯಪಾದರ ಕೃತಿಗಳು ನಮಗೆ ದೊರೆತಿವೆ. ಕವಿಪರಮೇಷ್ಠಿ ಇವರಿಗೆ ಸರಿಸಮಾನನಾಗಿ, ಅವರ ಪಂಕ್ತಿಯಲ್ಲಿ ಸೇರಿದುದು ಇವನ ಪಾಂಡಿತ್ಯ ಮತ್ತು ಪ್ರತಿಭೆಗೆ ಒಂದು ಸಾಕ್ಷಿ ಎಂದು ಹೇಳಬಹುದು. ಇವನ ವ್ಯಕ್ತಿತ್ವದ ವಿಚಾರವಾಗಿ ಬೇರೆ ಬೇರೆ ಕವಿಗಳ ಆಕಸ್ಮಿಕ ಉಲ್ಲೇಖಗಳಿಂದ, ಅವರಲ್ಲಿ ಕೆಲವರಾದರೂ ಇವನ ಗ್ರಂಥವನ್ನು ಪ್ರತ್ಯಕ್ಷವಾಗಿ ನೋಡಿ ಬಳಸಿಕೊಂಡಿರಬಹುದು. ಕನ್ನಡದ ಕವಿಗಳಿಗೆ ಇಷ್ಟೊಂದು ಪೂಜ್ಯನೂ ಪ್ರಿಯನೂ ಆದ ಕವಿಪರಮೇಷ್ಠಿ ಕನ್ನಡದಲ್ಲಿ ಏಕೆ ಕೃತಿರಚನೆ ಮಾಡಲಿಲ್ಲವೆಂಬ ಪ್ರಶ್ನೆಗೆ ಸಮರ್ಪಕವಾದ ಉತ್ತರ ದೊರೆಯುವುದಿಲ್ಲ. ಚಾವುಂಡರಾಯ ತನ್ನ ಪುರಾಣದಲ್ಲಿ ಕವಿಪರಮೇಶ್ವರನವು ಎಂದು, ಅವನ ಹೆಸರು ಹೇಳಿ ಉಲ್ಲೇಖಿಸಿರುವ, ಉದಾಹರಣೆಗಳನ್ನು ಬಿಟ್ಟರೆ ಅವನ ಸಂಸ್ಕೃತ ಗ್ರಂಥವೂ ಉಪಲಬ್ಧವಿಲ್ಲ. ಚಾವುಂಡರಾಯ ತಾನು ಕವಿಪರಮೇಷ್ಠಿಯ ಗ್ರಂಥವನ್ನು ಉಪಯೋಗಿಸಿಕೊಂಡಿದ್ದೇನೆಂದು ಹೇಳಿಕೊಂಡಿದ್ದಾನೆ. ಕವಿಯ ಹೆಸರನ್ನು ಹೇಳಿ, ಅವನ ಪದ್ಯಗಳನ್ನು ಉದಾಹರಿಸಿ ಚಾವುಂಡರಾಯ ಸಾಹಿತ್ಯ ಪ್ರಪಂಚಕ್ಕೆ ಮಹದುಪಕಾರ ಮಾಡಿದ್ದಾನೆ. ಎಂದಾದರೊಂದು ದಿನ ಕವಿಪರಮೇಷ್ಠಿಯ ಪೂರ್ಣಗ್ರಂಥ ದೊರೆತರೆ ಭಾರತೀಯ ಸಾಹಿತ್ಯಭಂಡಾರ ಇನ್ನೂ ಐಶ್ವರ್ಯಯುತವಾಗುತ್ತದೆ. (ಎಚ್.ಕೆ.ಆರ್.ಜಿ.)