ಕರ್ಕಅಥವಾ ಕಕ್ಕ2 : ಕರ್ನಾಟಕವನ್ನು ಆಳಿದ ರಾಷ್ಟ್ರಕೂಟ ರಾಜ್ಯರಲ್ಲಿ ಕೊನೆಯವ.ರಾಷ್ಟ್ರಕೂಟ ದೊರೆಯಾದ ನಾಲ್ಕನೆಯ ಗೋವಿಂದನಿಗೆ (930-934/35) ಮೂರನೆಯ ಕೃಷ್ಣ (939-66), ಕೊಟ್ಟಿಗ (967-72) ಮತ್ತು ನಿರುಪಮ ಎಂಬ ಮೂವರು ಮಕ್ಕಳಿದ್ದರು. ಕಕ್ಕ ನಿರುಪಮನ ಮಗ. ಮೂರನೆಯ ಕೃಷ್ಣ ಮಕ್ಕಳಿಲ್ಲದೆ ತೀರಿಕೊಂಡಾಗ ಅವನ ತಮ್ಮ ಕೊಟ್ಟಿಗ ಸಿಂಹಾಸನವನ್ನೇರಿದ. ಆ ವೇಳೆಗಾಗಲೇ ಕೊಟ್ಟಿಗನಿಗೆ ಮುಪ್ಪಡರಿತ್ತಾದ್ದರಿಂದ ಆತ ಬಹುಕಾಲ ಆಳಲಿಲ್ಲ. ಆತನ ಅನಂತರ ಆಳಿದವನೇ ಕಕ್ಕ.

ರಾಷ್ಟ್ರಕೂಟ ಅರಸರು (753-982)
ದಂತಿದುರ್ಗ (735 - 756)
ಮೊದಲನೇ ಕೃಷ್ಣ (756 - 774)
ಇಮ್ಮಡಿ ಗೋವಿಂದ (774 - 780)
ದ್ರುವ ಧಾರಾವರ್ಷ (780 - 793)
ಗೋವಿಂದ III (793 - 814)
ಅಮೋಘವರ್ಷ (814 - 878)
ಕೃಷ್ಣ II (878 - 914)
ಇಂದ್ರ III (914 -929)
ಅಮೋಘವರ್ಷ II (929 - 930)
ಗೋವಿಂದ IV (930 – 936)
ಅಮೋಘವರ್ಷ III (936 – 939)
ಕೃಷ್ಣ III (939 – 967)
ಕೊಟ್ಟಿಗ ಅಮೋಘವರ್ಷ (967 – 972)
ಕರ್ಕ II (972 – 973)
ಇಂದ್ರ IV (973 – 982)
Tailapa II
(Western Chalukyas)
(973-997)

ರಾಜ್ಯಭಾರ

ಬದಲಾಯಿಸಿ

ಕೊಟ್ಟಿಗನ ಕಾಲದಲ್ಲೇ ರಾಷ್ಟ್ರಕೂಟರ ಅವನತಿ ತುತ್ತತುದಿ ಮುಟ್ಟುವುದರಲ್ಲಿತ್ತು. ಆತ ಮೊದಲೇ ಅಸಮರ್ಥ, ಜೊತೆಗೆ ಮುದುಕ. ಆದ್ದರಿಂದ ತನ್ನ ರಾಜ್ಯವನ್ನು ರಕ್ಷಿಸಲಾರದೆ ಹೋದ. ಹಳೆಯ ವೈರ ಸಾಧಿಸುತ್ತಿದ್ದ ಪರಮಾರ ದೊರೆ ಶಿಯಕ ಆತನ ಮೇಲೆ ದಂಡೆತ್ತಿ ಬಂದು ರಾಜಧಾನಿಯನ್ನು ಹಿಡಿದುಕೊಂಡು ಕೊಳ್ಳೆಹೊಡೆದ. ಕೊಟ್ಟಿಗ ಎದೆಯೊಡೆದು ಸತ್ತ. ಇಂಥ ಸಮಯದಲ್ಲಿ ಅಧಿಕಾರಕ್ಕೆ ಬಂದ ಕಕ್ಕನಾದರೂ ದಕ್ಷನಾಗಿದ್ದಿದ್ದರೆ ಪರಿಸ್ಥಿತಿ ಸುಧಾರಿಸುತ್ತಿತ್ತು. ಆದರೆ ಇವನಿಗೂ ಆಡಳಿತ ಗೊತ್ತಿರಲಿಲ್ಲ. ಈತ ದುಷ್ಟ ಮಂತ್ರಿಗಳಿಬ್ಬರ ಕೈಗೊಂಬೆಯಾಗಿದ್ದ. ಈ ದೌರ್ಬಲ್ಯದಿಂದಾಗಿ ಇವನ ಸಾಮಂತರಾಜರಲ್ಲಿ ದುರಾಸೆ ಬೆಳೆಯಿತು. ಪಟ್ಟಕ್ಕೆ ಬಂದ ಹದಿನೆಂಟೇ ತಿಂಗಳಲ್ಲಿ ಕಕ್ಕ ರಾಜ್ಯ ಕಳೆದುಕೊಂಡ.

ದುಸ್ಥಿತಿ

ಬದಲಾಯಿಸಿ

ರಾಷ್ಟ್ರಕೂಟ ಸಾಮ್ರಾಜ್ಯದ ದುಃಸ್ಥಿತಿಯ ದುರುಪಯೋಗಪಡಿಸಿಕೊಳ್ಳುವುದರಲ್ಲಿ ಪ್ರತಿಹಾರ ವಂಶದವರು ಮೊದಲಿಗರಾದರು. ಉತ್ತರ ಭಾರತದ ಹಲಕೆಲವು ಪಾಳೆಯಪಟ್ಟುಗಳೊಡನೆ ಸಂಚು ನಡೆಸಿ ರಾಷ್ಟ್ರಕೂಟ ಸಾಮ್ರಾಜ್ಯಕ್ಕೆ ಮುತ್ತಿಗೆ ಹಾಕಲು ಇವರು ಪ್ರಯತ್ನಿಸಿದರು. ಈ ಪ್ರಯತ್ನದಲ್ಲಿ ಇವರು ಎಷ್ಟರ ಮಟ್ಟಿಗೆ ಜಯಶಾಲಿಗಳಾದರು ಎಂಬುದರ ಬಗ್ಗೆ ಖಚಿತವಾಗಿ ಹೇಳುವುದು ಸಾಧ್ಯವಿಲ್ಲ. 972ರಲ್ಲಿ ಬರೆಯಲಾದ ಕಾರ್ಡದ ಶಾಸನವನ್ನು ನಂಬುವುದಾದರೆ ಈತ ಪ್ರತಿಹಾರರ ದಾಳಿಯನ್ನು ಹಿಮ್ಮೆಟ್ಟಿಸಲು ಸಮರ್ಥನಾದನೆಂದು ಹೇಳಬಹುದು. ಆದರೂ ಕಕ್ಕನ ರಾಜ್ಯ ಉಳಿಯಲಿಲ್ಲ. ಬಾದಾಮಿಚಾಳುಕ್ಯ ವಂಶದ ಎರಡನೆಯ ತೈಲಪ ದಂಡೆತ್ತಿ ಬಂದ. ಮೂರನೆಯ ಗೋವಿಂದನಿಂದ ತರದವಾಡಿ ಪ್ರಾಂತ್ಯದಲ್ಲಿ ಮಾಂಡಲಿಕನಾದಾಗಿನಿಂದಲೂ ಆತ ರಾಷ್ಟ್ರಕೂಟರನ್ನು ನಾಶಮಾಡುವ ಹಂಚಿಕೆ ಹೂಡಿದ್ದ. ಬಾದಾಮಿಯ ಚಳುಕ್ಯರ ವಂಶಜನೆಂದು ಭಾವಿಸಿದ್ದ ತೈಲಪನಿಗೆ ತನ್ನ ಹಿರಿಯರಿಂದ ರಾಷ್ಟ್ರಕೂಟರು ಕಿತ್ತುಕೊಂಡಿದ್ದ ಸಾಮ್ರಾಜ್ಯವನ್ನು ಮತ್ತೆ ಸಂಪಾದಿಸಬೇಕೆಂಬ ಆಕಾಂಕ್ಷೆಯಿತ್ತು. ಎರಡನೆಯ ಕಕ್ಕನ ಕಾಲದಲ್ಲಿ ಆತನಿಗೆ ಈ ಅವಕಾಶ ದೊರೆಯಿತು. ಕಕ್ಕನ ವಿರುದ್ಧವಾಗಿ ಎದ್ದ ತೈಲಪನನ್ನು ಅಡಗಿಸುವ ಉದ್ದೇಶದಿಂದ ದಂಡೆತ್ತಿಹೋದ ಕಕ್ಕನಿಗೆ ಸೋಲು ಕಾದಿತ್ತು (973). ಕಕ್ಕನ ಮಂತ್ರಿಗಳು ಕಾಳಗದಲ್ಲಿ ಕೊನೆಗೊಂಡರು. ಕಕ್ಕ ಮಾತ್ರ ಹೇಗೋ ತಲೆ ತಪ್ಪಿಸಿಕೊಂಡು ಹೋಗಿ, ಮೈಸೂರು ರಾಜ್ಯದ ಸೊರಬ ತಾಲ್ಲೂಕಿನಲ್ಲಿ ಒಂದಿಷ್ಟು ನೆಲ ಗಿಟ್ಟಿಸಿಕೊಂಡು ಅಲ್ಲಿ 991ರ ವರೆಗೂ ಆಳ್ವಿಕೆ ನಡೆಸಿದ. ರಾಷ್ಟ್ರಕೂಟ ಸಾಮ್ರಾಜ್ಯವನ್ನು ಮತ್ತೆ ಸಂಪಾದಿಸುವ ಆಸೆಯನ್ನು ಕಕ್ಕ ಕೈಬಿಟ್ಟನಾದರೂ ಮೂರನೆಯ ಕೃಷ್ಣನ ಮಗನಾದ ನಾಲ್ಕನೆಯ ಇಂದ್ರನನ್ನು ಸಿಂಹಾಸನಕ್ಕೆ ತರಲು ಗಂಗವಂಶದ ದೊರೆ ಎರಡನೆಯ ಮಾರಸಿಂಹ ಪ್ರಯತ್ನಪಟ್ಟ. ಆದರೆ ಅದು ಫಲಿಸಲಿಲ್ಲ.

ಪೂರ್ವಾಧಿಕಾರಿ
ಕೊಟ್ಟಿಗ ಅಮೋಘವರ್ಷ
ರಾಷ್ಟ್ರಕೂಟ ಸಾಮ್ರಾಜ್ಯ
972–973
ಉತ್ತರಾಧಿಕಾರಿ
ನಾಲ್ಮಡಿ ಇಂದ್ರ

ಬಾಹ್ಯ ಸಂಪರ್ಕಗಳು

ಬದಲಾಯಿಸಿ
"https://kn.wikipedia.org/w/index.php?title=ಕರ್ಕ&oldid=1205519" ಇಂದ ಪಡೆಯಲ್ಪಟ್ಟಿದೆ