ಕರಡಿಗೆ
ಕರಡಿಗೆ : ಲಿಂಗಾಯತರು ಇಷ್ಟಲಿಂಗವನ್ನು ಇಡುವ ಸಂಪುಟ. ಲಿಂಗಸಜ್ಜಿಕೆ ಎಂದೂ ಹೆಸರು. ಇದನ್ನು ಕರಡಿಗೆ ಎಂದು ಕರೆಯಲಾಗಿದೆ. ಇದನ್ನು ಚಿನ್ನ, ಬೆಳ್ಳಿ, ಹಿತ್ತಾಳೆ, ತಾಮ್ರ ಅಥವಾ ಶ್ರೀಗಂಧದ ಮರದಿಂದಲೂ ಮಾಡುತ್ತಾರೆ. ನೂಲಿನ ಹಣಿಕೆಯ ಸಂಪುಟಕ್ಕೆ ಕಾಂತಿಕೂಡಿಸಿರುವ ಪುರಾತನ ಕರಡಿಗೆಗಳೂ ಉಂಟು. ಕಂಚು, ಕಬ್ಬಿಣಗಳಲ್ಲಿ ಕರಡಿಗೆಯನ್ನು ಮಾಡಬಾರದೆಂಬ ನಿಷೇಧವಿದೆ. ಲಿಂಗಾಯತರು ಕರಡಿಗೆಗೆ ದಾರವನ್ನು ಪೋಣಿಸಿ ಧರಿಸುತ್ತಾರೆ. ಈ ದಾರಕ್ಕೆ ಶಿವಸೂತ್ರ. ಶಿವದಾರ ಮುಂತಾದ ಹೆಸರುಗಳಿವೆ. ದಾರವನ್ನು ರೇಷ್ಮೆ, ಹತ್ತಿನೂಲು ಮೊದಲಾದವುಗಳಿಂದ ಮಾಡುತ್ತಾರೆ. ಶಿವದಾರವನ್ನು 36 ಅಥವಾ 63 ಎಳೆಗಳಿಂದ ಸಿದ್ಧಪಡಿಸಬೇಕು. ಜ್ಞಾನ ಮತ್ತು ಕರ್ಮಗಳಿಂದ ಕೂಡಿದ ಗುರು-ಲಿಂಗ-ಜಂಗಮ ತತ್ತ್ವಗಳನ್ನು ಷಟ್ಸ್ಥಳಗಳಿಂದ ಗುಣಿಸಿದಲ್ಲಿ 36 ತತ್ತ್ವಗಳಾಗುತ್ತವೆ. ಈ ಮೂವತ್ತಾರು ಎಂಬ ಸಂಖ್ಯೆ ಶಿವತತ್ತ್ವಮೊದಲು ಪೃಥಿವೀ ತತ್ತ್ವದವರೆಗಿನ 36 ತತ್ತ್ವಗಳಿಗೂ ಸಂಕೇತ. 63 ಎಳೆಗಳು ಎಂಬುದು ಲಿಂಗಾಯತರಿಗೆ ಪುಜ್ಯರಾದ 63 ಮುಂದಿ ಪುರಾತನ ಲಿಂಗಭಕ್ತರ ಸವಿನೆನಪಿಗಾಗಿ.