ಕಥಕಳಿ
ಕಥಕಳಿ ಈಗಿನ ಕೇರಳ ಪ್ರದೇಶದಲ್ಲಿ ಬಹು ಹಿಂದಿನಿಂದಲೂ ಪ್ರಚಾರದಲ್ಲಿರುವ ಒಂದು ಬಗೆಯ ಪ್ರದರ್ಶನದ ನಾಟಕ ಪದ್ಧತಿ. ಇದರಲ್ಲಿ ನೃತ್ಯ, ಸಂಗೀತ, ಅಭಿನಯಾದಿಗಳು ವಿಶಿಷ್ಟ ರೀತಿಯಲ್ಲಿ ಹೆಣೆದುಕೊಂಡಿರುತ್ತವೆ.[೧]
ಇಂದು ನಾವು ನೋಡುತ್ತಿರುವ ಕಥಕಳಿ 300-400 ವರ್ಷಗಳಿಂದ ನಡೆದು ಬಂದಿದ್ದರೂ ಅದರ ನಿಜವಾದ ಮೂಲ ಸು. 1,500 ವರ್ಷಗಳಷ್ಟು ಹಿಂದೆ ಹೋಗುತ್ತದೆ. ಕಥಕಳಿಯಲ್ಲಿ ಆರ್ಯ ದ್ರಾವಿಡ ಸಂಸ್ಕೃತಿ ಮಿಲನವನ್ನೂ ಕಾಣಬಹುದಷ್ಟೆ. ಈ ಎರಡು ಸಂಸ್ಕೃತಿಗಳ ನರ್ತನಗಳನ್ನೂ ನಾಟಕಗಳನ್ನೂ ಕರ್ಮನಿಷ್ಠ, ಸಾಮಾಜಿಕ ಪ್ರದರ್ಶನಗಳನ್ನೂ ಕೇರಳದ ಆಯಾ ಸ್ಥಳಗಳಿಂದ ಕಥಕಳಿ ಯಥೇಷ್ಟವಾಗಿ ಉಪಯೋಗಿಸಿ ಕೊಂಡಂತಿದೆ. ಕೇರಳದ ಈ ಸಂಸ್ಕೃತಿಯ ಸಮ್ಮಿಲನದಲ್ಲಿ ಉದ್ಭವಿಸಿದ ಚೌಕಿಯಾರ್ ಕೂತ್ತು, ಕುಡಿಯಾಟ್ಟಂ ಎಂಬ ವಿಶಿಷ್ಟ ನೃತ್ಯಗಳೂ ನಾಟಕಗಳೂ ಭಗವತಿಯ ಉಪಾಸನೆಗೆ ಸೇರಿದ ಧಾರ್ಮಿಕ ನೃತ್ಯಗಳಾದ ಮುಟಿಯೆಟ್ಟು, ತೀರ್ಯಾಟ್ಟಂ ಮತ್ತು ತೀಯಾಟ್ಟಂ, ಸಾಮಾಜಿಕ ಪದ್ಧತಿಗೆ ಸೇರಿದ ಶಸ್ತ್ರಕಳಿ ಮತ್ತು ಎಝಮಟ್ಟು ಕಳಿ ಮುಂತಾದ ವೀರನೃತ್ಯಗಳೂ ಒರಟು ಜಾನಪದ ನಾಟಕಗಳಾದ ಕಂಸನಾಟಕಂ ಮತ್ತು ಮೀನಾಕ್ಷಿ ನಾಟಕಂಗಳಲ್ಲದೆ ಇತ್ತೀಚೆಗೆ ವಿಕಸಿತವಾಗಿ ಸಂಪ್ರದಾಯಕ್ಕೆ ಬಂದ ಕೃಷ್ಣಾಟ್ಟಂ ಮತು ರಾಮನಾಟ್ಯಂ ಎಂಬ ನೃತ್ಯನಾಟಕಗಳೂ ಕಥಕಳಿಯ ಮೇಲೆ ಒಂದಿಲ್ಲ ಒಂದು ರೀತಿಯಲ್ಲಿ ತಮ್ಮ ಪ್ರಭಾವವನ್ನು ಬೀರಿವೆ.
ಚೌಕಿಯಾರ್ ಕೂತ್ತು
ಬದಲಾಯಿಸಿಚೌಕಿಯಾರ್ ಕೂತ್ತು ಎಂಬುದು ಚೌಕಿಯಾರ್ ಕುಲದವರು ಮಾತ್ರ ಪ್ರದರ್ಶಿಸಬೇಕಾದ ನೃತ್ಯ.[೨] ಇದು ಬಹಳ ಧಾರ್ಮಿಕವೂ ಶಾಸ್ತ್ರಸಮ್ಮತವೂ ಆದ ಮನೋರಂಜನೆ. ದೇವಾಲಯಗಳಲ್ಲಿ ನೃತ್ಯಕ್ಕಾಗಿಯೇ ಮೀಸಲಾಗಿದ್ದ ಕೂತಂಬಳಂ ಎಂಬ ಚಿಕ್ಕ ರಂಗಸ್ಥಳದಲ್ಲಿ ಮಾತ್ರ ಈ ಪ್ರದರ್ಶನ ನಡೆಯುತ್ತಿತ್ತು. ಪ್ರದರ್ಶನಕಾರನಾದ ಚೌಕಿಯಾರ್ ಒಬ್ಬ ದೊಡ್ಡ ಕಥೆಗಾರ, ಚತುರ, ವಿವೇಕಿ, ರಸಿಕ, ಹಾಸ್ಯರಸದಿಂದ ಪ್ರೇಕ್ಷಕರನ್ನು ರಂಜಿಸಬಲ್ಲವ. ಅಖ್ಯಾನ ಮುಂದುವರಿದಂತೆ ಕಥೆಯಲ್ಲಿ ಬರುವ ಬೇರೆ ಬೇರೆ ಪಾತ್ರಗಳನ್ನು ಅನನ್ಯಭಾವದಿಂದ ಆತ ವಿಕಟವಾಗಿ ವಿನೋದವಾಗಿ ನಟಿಸುತ್ತಾನೆ. ನಂಬಿಯಾರ್ ಜಾತಿಗೆ ಸೇರಿದವನೊಬ್ಬ ಪ್ರದರ್ಶನದ ಮಧ್ಯೆ ಮಧ್ಯೆ, ಬೇಕಾದ ಸಮಯದಲ್ಲಿ ಮಿಝವು ಎಂಬ ಒಂದು ದೊಡ್ಡ ತಾಮ್ರದ ನಗಾರಿಯನ್ನೂ ತಾಳಗಳನ್ನೂ ಬಾರಿಸುತ್ತಾನೆ.
ಕುಡಿಯಾಟ್ಟಂ ಎಂಬುದು ಅದರ ಹೆಸರೇ ತಿಳಿಸುವಂತೆ ಅನೇಕರು ಸೇರಿ ಪ್ರದರ್ಶಿಸುವ ನೃತ್ಯನಾಟಕ. ಇದರಲ್ಲಿ ಪುರುಷರಲ್ಲದೆ ನಂಗಿಯಾರ್ ಸ್ತ್ರೀಯರೂ ಪಾತ್ರವಹಿಸುತ್ತಾರೆ. ಇಲ್ಲಿ ಅಭಿನಯ ಮುಖ್ಯವಾಗಿದ್ದು ಉನ್ನತ ಮಟ್ಟದಲ್ಲಿರುತ್ತದೆ. ಅನೇಕ ವರ್ಷಗಳ ಅನಂತರ ಪ್ರಚಾರಕ್ಕೆ ಬಂದ ಕಥಕಳಿ ಈ ಸಂಪ್ರದಾಯದಿಂದ ಮುಖಾಭಿನಯವನ್ನೂ ಹಸ್ತಾಭಿನಯವನ್ನೂ ರಾತ್ರಿಯೆಲ್ಲ ಪ್ರದರ್ಶಿಸುವ ರೂಢಿಯನ್ನೂ ಕಲಿತಿತು. ಭಗವತಿಯ ಉಪಾಸನೆಗಾಗಿ ಮಾಡುವ ಧಾರ್ಮಿಕ, ಸಾಮಾಜಿಕ ನೃತ್ಯಗಳು ಕೇರಳದಲ್ಲಿ ಹೇರಳವಾಗಿವೆ. ಅವುಗಳಲ್ಲಿ ಮುಟಿಯೆಟ್ಟು, ತೀರ್ಯಾಟ್ಟಂ ಮತ್ತು ತೀಯಾಟ್ಟಂ ಎಂಬ ಕೆಲವು ನೃತ್ಯಗಳು ಮುಖ್ಯ. ಇಲ್ಲಿ ಭಗವತಿಯ ದಿವ್ಯಗುಣಗಳು ವರ್ಣಿತವಾಗಿರುತ್ತವೆ. ಈ ಪ್ರದರ್ಶನಗಳಲ್ಲಿ ದೇವಾಧಿದೇವತೆಗಳ ಪಾತ್ರಗಳನ್ನೂ ರಕ್ಕಸರಕ್ಕಸಿಯರ ಪಾತ್ರಗಳನ್ನೂ ಮಾಡುವವರು ಪಾತ್ರಕ್ಕನುಸಾರವಾಗಿ ದೇದೀಪ್ಯಮಾನವಾದ, ಸಕಲಾಭರಣಯುಕ್ತ ವೇಷಭೂಷಣಗಳನ್ನೂ ಇಲ್ಲವೆ ಭಯಂಕರವಾದ ಅಸಹ್ಯವಾದ ವೇಷಭೂಷಣಗಳನ್ನೂ ಧರಿಸುತ್ತಾರೆ. ಮುಖವಾಡಗಳ ಉಪಯೋಗ, ಮುಖಕ್ಕೆ ವಿಚಿತ್ರವಾಗಿ ಬಣ್ಣ ಬಳಿದುಕೊಳ್ಳುವುದು. ರಂಗು ರಂಗುಗಳಿಂದ ಕೂಡಿರುವ ಉಡುಪುಗಳು, ಹೊಳೆಯುವ ಕಿರೀಟಗಳು ಇವು ಈ ಕಲೆಯ ಗಮನಾರ್ಹ ವಿಷಯಗಳು. ಇವನ್ನೇ ಮುಂದಕ್ಕೆ ಕೃಷ್ಣಾಟ್ಟಂನಲ್ಲಿ ಅಳವಡಿಸಿಕೊಂಡರು.
ಮಧ್ಯಕಾಲದಲ್ಲಿ ಕಥಕಳಿ ಧಾರ್ಮಿಕ, ಸಾಮಾಜಿಕ ಮತ್ತು ವೀರನೃತ್ಯಗಳಿಂದ ಕೆಲವು ಅಂಶಗಳನ್ನು ಪಡೆಯಿತು. ಧಾರ್ಮಿಕ, ಸಾಮಾಜಿಕ ನೃತ್ಯಗಳಾದ ಯಾತ್ರಕಳಿ, ಶಸ್ತ್ರಕಳಿ, ಸಂಫಕಳಿ ಮತು ಎಝಮತ್ತುಕಳಿ ಇವೆಲ್ಲವೂ ಒಂದಕ್ಕೆ ಇನ್ನೊಂದು ಸಂಬಂಧವಿರುವ ನೃತ್ಯಗಳು. ಇವನ್ನು ಸ್ವೇಚ್ಛೆಯಾಗಿ ಅರ್ಪಿಸುವುದೇ ರೂಢಿ. ಆದ್ದರಿಂದ ಅನೇಕ ಜನ ಒಟ್ಟುಗೂಡಿ ತಮ್ಮ ವಿನೋದಕ್ಕೋಸ್ಕರ ಖಡ್ಗ ಪ್ರಯೋಗ ಪ್ರದರ್ಶನದಲ್ಲೋ ಮೂಕನಾಟಕ ಗಳಲ್ಲೋ ಭಾಗವಹಿಸುತ್ತಾರೆ. ಇವು ಹಾಸ್ಯಯುಕ್ತವಾಗಿರುವಂತೆ ದುಃಖಮಯವಾಗಿಯೂ ಇರುತ್ತದೆ. ಜಾನಪದ ನೃತ್ಯಗಳಾದ ಕಂಸನಾಟಕಂ, ಮೀನಾಕ್ಷಿ ನಾಟಕಗಳಿಂದ ಕಥಕಳಿ ಕೆಲವು ಅಂಶಗಳನ್ನು ಪಡೆದಿದೆ. ಕೃಷ್ಣಾಟ್ಟಂ ಮತ್ತು ರಾಮನಾಟ್ಟಂ ಕಲೆಗಳ ಮುಂದೆ ಈ ವಿಧದ ನೃತ್ಯಗಳು ಪಾಲ್ಘಾಟಿನಲ್ಲೂ ಸುತ್ತುಮುತ್ತಲಿನ ತಾಲ್ಲೂಕುಗಳಲ್ಲೂ ಪ್ರಚಾರದಲ್ಲಿದ್ದುವು.
ಓಟಂ ತುಳ್ಳಲ್
ಬದಲಾಯಿಸಿಕೇರಳದಲ್ಲಿ ಜನಪ್ರಿಯವಾಗಿರುವ ಓಟಂ ತುಳ್ಳಲ್, ಪರಯನ್ ಮತ್ತು ಸೀತಂಕನ್ತುಳ್ಳಲ್ಗಳನ್ನು ಕುಂಜನ್ ನಂಬಿಯಾರಿ ಎಂಬ ಒಬ್ಬ ಮಹಾವ್ಯಕ್ತಿ ನಿರ್ಮಿಸಿದ. ಅಂಬಲಪುಝದ ರಾಜನ ಆಡಳಿತದಲ್ಲಿದ್ದ ಈ ಕುಂಜನ್ ನಂಬಿಯಾರಿ ಒಬ್ಬ ದೊಡ್ಡ ಕವಿಯಾಗಿದ್ದು ಮಲಯಾಳಂ ಕವಿತಾ ಸಾಹಿತ್ಯದ ಮೇಲೆ ವಿಶೇಷ ಪ್ರಭಾವ ಬೀರಿದ. ಸರಳ ಮಲಯಾಳಿಯಲ್ಲಿ ಈತ ನಟಿಸಲೆಂದು ಬರೆದ ಸಾಹಿತ್ಯ ಅಂದಿನ ಧಾರ್ಮಿಕ, ಸಾಮಾಜಿಕ ಸಮಸ್ಯೆಗಳನ್ನು ಚೆನ್ನಾಗಿ ವಿಶ್ಲೇಷಿಸುತ್ತದೆ.
ತುಳ್ಳಲ್ ಏಕವ್ಯಕ್ತಿನೃತ್ಯವಾಗಿದ್ದು ದೇವಾಲಯಗಳಲ್ಲಿ ಮದುವೆ ಸಂದರ್ಭಗಳಲ್ಲಿ ಇಲ್ಲವೇ ಖಾಸಗಿ ಸಂದರ್ಭಗಳಲ್ಲಿ ಪ್ರದರ್ಶಿತವಾಗುತ್ತದೆ. ನೃತ್ಯಗಾರ ಅಪುರ್ವ ಕಲ್ಪನಾಶಕ್ತಿಯುಳ್ಳವನೂ ಮನಸೂರೆಗೊಳ್ಳುವವನೂ ಆಗಿರುತ್ತಾನೆ. ವೇಷಭೂಷಣಗಳೂ ಮುಖಬಣ್ಣಗಳೂ ಕಥಕಳಿಯಿಂದ ಬೇರೆಯಾಗಿರುತ್ತವೆ. ಪಕ್ಕವಾದ್ಯಕ್ಕೆ ಒಂದು ಚಿಕ್ಕ ಮದ್ದಳೆಯೂ ಒಂದು ಜೊತೆ ತಾಳಗಳೂ ಇರುತ್ತವೆ. ನೃತ್ಯಗಾರ ಸಾಮಾನ್ಯವಾಗಿ ತಾನೇ ಹಾಡಿ ಕುಣಿಯುತ್ತಾನೆ. ಪ್ರದರ್ಶನದ ಮಧ್ಯೆ ನೃತ್ಯಗಾರ ಕೆಲವು ತೀವ್ರಗತಿಯ ಕಾಲ್ಚಲನೆಯನ್ನೂ ನೃತ್ಯವಿಧಾನಗಳನ್ನೂ ಮಾಡಿ ವಿರಾಮ ಪಡೆಯುತ್ತಾನೆ. ಪಕ್ಕವಾದ್ಯದವರು ಮಾತ್ರ ಸತತವಾಗಿ ಹಿನ್ನೆಲೆ ಸಂಗೀತ ಒದಗಿಸುತ್ತಾರೆ.
17ನೆಯ ಶತಮಾನದ ಮಧ್ಯದಲ್ಲಿ ಕಲ್ಲೀಕೋಟೆಯ ಸಾóಮೊರಿನ್ ಆದ ಮನವೇದ ನಿರ್ಮಿಸಿದ ಕೃಷ್ಣಾಟ್ಟಂ ಇಂದಿನತನಕ ತನ್ನ ಹಳೆಯ ರೂಪದಲ್ಲೇ ಉಳಿದುಬಂದಿದೆ. ಇದರ ಸಾಹಿತ್ಯ ಸಂಸ್ಕೃತ ಭಾಷೆಯಲ್ಲಿ ಕೃಷ್ಣಪದಿ ಅಥವಾ ಕೃಷ್ಣ ಗೀತೆಯೆಂಬ ಹೆಸರಿನಲ್ಲಿದೆ. ಇದು ಜಯದೇವನ ಗೀತಗೋವಿಂದದ ಚತುರ ಅನುಕರಣೆಯೆಂಬುದು ಸುಸ್ಪಷ್ಟವಾಗಿದೆ. ಕೃಷ್ಣಾಟ್ಟಂ ನಾಟಕ 8 ರಾತ್ರಿಗಳಲ್ಲಿ ಪ್ರದರ್ಶಿತವಾಗುತ್ತದೆ. ಈ ಪ್ರದರ್ಶನ ಶ್ರೀಕೃಷ್ಣಪರಮಾತ್ಮನ ಜನನದಿಂದ ಆರಂಭವಾಗಿ ಅವನ ಲೀಲಾಪ್ರಸಂಗಗಳನ್ನೆಲ್ಲ ಆವರಿಸಿಕೊಂಡು ಕೊನೆಗೆ ಸ್ವರ್ಗಾರೋಹಣದಲ್ಲಿ ಮುಕ್ತಾಯವಾಗುತ್ತದೆ. ಈ ನಾಟಕ ನೃತ್ಯನಾಟಕದ ರೂಪದಲ್ಲಿದ್ದು ಕಥಕಳಿಯ ವೇಷಭೂಷಣಗಳಿಗೂ ಬಣ್ಣ ವೈವಿಧ್ಯಕ್ಕೂ ಹೊಂದುತ್ತದೆ. ಕೆಲವು ಪಾತ್ರಗಳಿಗೆ ಬಣ್ಣ ಬಳಿದು ಮರದ ಮುಖವಾಡಗಳನ್ನು ಉಪಯೋಗಿಸುತ್ತಾರೆ. ಅಭಿನಯ ಮತ್ತು ಹಸ್ತವಿನ್ಯಾಸಗಳು ಕಥಕಳಿಯಲ್ಲಿನಷ್ಟು ವಿಕಾಸಗೊಂಡಿಲ್ಲ.
ರಾಮನಾಟ್ಟಂ ಎಂಬ ಇನ್ನೊಂದು ವಿಧದ ನೃತ್ಯನಾಟಕದ ನಿರ್ಮಾಣಕ್ಕೆ ಕೃಷ್ಣಾಟ್ಟಂ ಸ್ಫೂರ್ತಿಯಿತ್ತಿತು. 17ನೆಯ ಶತಮಾನದ ಕೊನೆಯಲ್ಲಿ ಕೊಟ್ಟರಕರ ಎಂಬ ಒಂದು ಚಿಕ್ಕ ಪ್ರದೇಶವನ್ನು ಆಳುತ್ತಿದ್ದ ತಂಪುರನ್ ಎಂಬಾತ ನೆರೆ ಪ್ರದೇಶವಾಗಿದ್ದ ಕಲ್ಲೀಕೊಟೆಯ ಸಾóಮೊರಿನ್ ಆದ ಮನವೇದನಲ್ಲಿ ಅವನ ಕೃಷ್ಣಾಟ್ಟಂ ನೃತ್ಯಗಾರನ ಪಂಗಡವನ್ನು ಅಪೇಕ್ಷಿಸಿ ಕರೆಕಳುಹಿಸಿದನಂತೆ. ಆದರೆ ಮನವೇದ ಇದಕ್ಕೆ ಒಪ್ಪಲಿಲ್ಲ. ಈ ಆಚರಣೆಯಿಂದ ಕುಪಿತನಾದ ತಂಪುರನ್ ಒಡನೆಯೇ ಆವೇಶ ಉತ್ಸಾಹಗಳಿಂದ ಹೊಸ ತರಹದ ನೃತ್ಯನಾಟಕವನ್ನು ನಿರ್ಮಿಸಲು ಅಣಿ ಮಾಡಿದ. ಕ್ರಮೇಣ ಆತ ಕಲ್ಪಿಸಿದ ಕಲೆ ರಾಮನಾಟ್ಟಂ ಎಂಬ ಹೆಸರಿನಿಂದ ಮೆರೆಯಿತು. ರಾಮಾಯಣವೇ ರಾಮನಾಟ್ಟಂ ನಾಟಕದ ಕಥಾವಸ್ತು. ದಶರಥ ಮಾಡಿದ ಯಾಗದಿಂದ ಆರಂಭವಾಗಿ, ಪುತ್ರೋತ್ಸವ ಮುಂತಾದ ಸನ್ನಿವೇಶಗಳಿಂದ ಸಾಗಿ ಕೊನೆಗೆ ಶ್ರೀರಾಮ ಲಂಕೆಯನ್ನು ಗೆಲ್ಲುವುದರಲ್ಲಿ ಕಥೆ ಮುಗಿಯುತ್ತದೆ. ರಾಮನಾಟ್ಟಂನಲ್ಲಿ ಮುಖಭಾವಗಳಿಗೂ ಹಸ್ತಮುದ್ರೆಗಳಿಗೂ ಹೆಚ್ಚಾದ ಪ್ರಾಧಾನ್ಯವಿದೆ. ಮುಖವಾಡಗಳನ್ನು ಬಿಟ್ಟು ಮುಖಕ್ಕೆ ಪರಿಷ್ಕಾರವಾದ ಬಣ್ಣವೈವಿಧ್ಯದ ಲೇಪನ ಮಾಡುವುದು ಇಲ್ಲಿ ಕಾಣಬಹುದು. ಉತ್ತಮ ಸಾಹಿತ್ಯವೇ ಈ ನೃತ್ಯನಾಟಕದ ವೈಶಿಷ್ಟ್ಯ. ಸಂಸ್ಕೃತ ಭಾಷೆಯ ಪ್ರಭಾವಕ್ಕೊಳಗಾಗಿದ್ದ ಮಲಯಾಳಂ ಭಾಷೆಯಲ್ಲಿಯೇ ಇದರ ಸಾಹಿತ್ಯ ನಿರ್ಮಾಣವಾಗಿದೆ. ಕೃಷ್ಣಾಟ್ಟಂ ಕೃಷ್ಣಲೀಲೆಗಳನ್ನು ವಿವರಿಸುತ್ತಿತ್ತು. ರಾಮನಾಟ್ಯಂ ರಾಮಲೀಲೆಗಳನ್ನು ವಿವರಿಸುತ್ತಿತ್ತು. ಕಾಲ ಸರಿದಂತೆ ಅದೇ ವಿಧದ ಇನ್ನೂ ಇತರ ನಾಟಕಗಳು ಪ್ರಚಾರಕ್ಕೆ ಬಂದುವು. ನಿರೂಪಣೆಗೆ ಮಹಾಭಾರತದ ಕಥೆಗಳನ್ನೋ ಭಾಗವತದಲ್ಲಿನ ಪ್ರಸಂಗಗಳನ್ನೋ ಶಿವಪುರಾಣದ ಸಂದರ್ಭಗಳನ್ನೋ ಅಳವಡಿಸಿಕೊಂಡರು. ಈ ವ್ಯವಹಾರದ ಹಾದಿಯಲ್ಲಿ ರಾಮನಾಟ್ಯಂ ಕಲೆ ಬಹುಮುಖ್ಯವಾಗಿ ಅಭಿವೃದ್ದಿಯಾಗಿ ಕಥಕಳಿಯ ಹುಟ್ಟನ್ನು ಕಂಡಿತು.
ಕಥಕಳಿ ಸಾಹಿತ್ಯ
ಬದಲಾಯಿಸಿಕಥಕಳಿ ಶಾಸ್ತ್ರದ ವಿಚಾರವಾಗಿ ಮಲಯಾಳಿ ಭಾಷೆಯಲ್ಲಿ ಬರೆದ ಹಸ್ತಲಕ್ಷಣದೀಪಿಕಾ ಎಂಬ ಒಂದು ದೊಡ್ಡ ಗ್ರಂಥದಲ್ಲಿ ಮುದ್ರೆಗಳನ್ನೂ ಅವುಗಳ ಉಪಯೋಗಗಳನ್ನೂ ಕೂಲಂಕಷವಾಗಿ ವರ್ಣಿಸಲಾಗಿದೆ.
ಕಥಕಳಿ ನಾಟಕಗಳಲ್ಲಿ ಪ್ರಖ್ಯಾತವಾದ ಕೃತಿಗಳನ್ನು ಅರಸರು ಬರೆದರು. ಇವರಲ್ಲಿ ಕೆಲವು ಬರಹಗಾರರು ನೃತ್ಯಕಲಾ ಪ್ರವೀಣರಾಗಿದ್ದು ಕಥಕಳಿ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದರು. 1665-1743ರ ಅವಧಿಯಲ್ಲಿ ಆಳಿದ ಕೊಟ್ಟಾಯಂ ರಾಜನಾದ ತಂಪುರನ್ ಈ ಸಾಹಿತ್ಯ ನಿರ್ಮಾಪಕರಲ್ಲಿ ಮೊದಲಿಗ. ಸ್ವಯಂ ನಟನೂ ನೃತ್ಯಗಾರನೂ ಆದ ಈತ ಬಕವಧ, ಕಾಲ್ಕೀಯವಧ, ತ್ರಿಮಿರವಧ ಮತ್ತು ಕಲ್ಯಾಣ ಸೌಗಂಧಿಕಂ ಎಂಬ ನಾಲ್ಕು ಅಟ್ಟಕಥೆಗಳನ್ನು ಬರೆದ. ಇವೆಲ್ಲವೂ ಮಹಾಭಾರತದ ಸನ್ನಿವೇಶಗಳಿಗೆ ಸಂಬಂಧಿಸಿದವು. 1724-28ರಲ್ಲಿ ತಿರುವಾಂಕೂರಿನ ಮಹಾರಾಜನಾಗಿದ್ದ ಕಾರ್ತಿಕ ತಿರುನಾಳ್ ಇನ್ನೊಬ್ಬ ಕವಿ. ಹೆಸರಾಂತ ಯೋಧನೂ ಆಡಳಿತಗಾರನೂ ಆಗಿದ್ದಂತೆ ಈತ ಘನವಿದ್ವಾಂಸನೂ ಬರಹಗಾರನೂ ಆಗಿದ್ದ. ಈತನ ನಿಜವಾದ ಹೆಸರು ಬಲರಾಮ ವರ್ಮ. ಈ ಹೆಸರಿನಲ್ಲಿ ಈತ ಸಂಸ್ಕೃತ ಭಾಷೆಯಲ್ಲಿ ನಾಟ್ಯದ ಮೇಲೆ ಬಲರಾಮ ಭಾರತ ಎಂಬ ಒಂದು ದೊಡ್ಡ ಗ್ರಂಥವನ್ನು ಬರೆದ. ಅಲ್ಲದೆ ಸುಭದ್ರಾಹರಣ, ನರಕಾಸುರವಧ, ಗಂಧರ್ವವಿಜಯಂ, ರಾಜ ಸೂಯಂ, ಬಕವಧ, ಪಾಂಚಾಲಿ ಸ್ವಯಂವರಂ ಮತ್ತು ಕಲ್ಯಾಣಸೌಗಂಧಿಕಂ ಎಂಬ ಬೇರೆ 7 ನಾಟಕಗಳನ್ನೂ ಈತ ಬರೆದಿದ್ದಾನೆ. ಇವನ ಸಂಬಂಧಿಕನಾದ ರಾಜಕುಮಾರ ಅಸ್ಪತೀ ತಿರುನಾಳನೂ ಅದ್ವಿತೀಯ ಕವಿ. ಈತ ಪುತನ ಮೋಕ್ಷಂ, ಅಂಬರೀಷ ಚರಿತಂ, ಪುಂಡರೀಕವಧ ಮತ್ತು ರುಕ್ಷ್ಮಿಣೀ ಸ್ವಯಂವರ ಎಂಬ ನಾಲ್ಕು ಕಥಕಳಿ ನಾಟಕಗಳನ್ನು ಬರೆದಿದ್ದಾನೆ. 1813-47ರ ಅವಧಿಯಲ್ಲಿ ಸ್ವಾತಿ ತಿರುನಾಳ್ ರಾಮವರ್ಮ ತಿರುವಾಂಕೂರಿನ ಮಾಹಾರಾಜನಾಗಿದ್ದ. ಈ ವ್ಯಕ್ತಿ ಸಂಗೀತಪ್ರಿಯನೂ ಕಲಾಪ್ರೇಮಿಯೂ ಆಗಿದ್ದು ತನ್ನ ಅರಮನೆಯ ಆಸ್ಥಾನಕ್ಕೆ ದೇಶದಾದ್ಯಂತದ ನೃತ್ಯಗಾರರನ್ನೂ ಸಂಗೀತ ವಿದ್ವಾಂಸರನ್ನೂ ಇತರ ಕಲಾವಿದರನ್ನೂ ಆಹ್ವಾನಿಸಿ, ಪ್ರೋತ್ಸಾಹಿಸಿ ಗೌರವಿಸುತ್ತಿದ್ದ. ಕಥಕಳಿ ಕಲೆಗೋಸ್ಕರ ಈತ ಸು. 75 ಹಾಡುಗಳನ್ನು ರಚಿಸಿದ್ದಾನೆ. ಈತನ ಕಾಲದಲ್ಲಿದ್ದ (1783-1863) ಇರಯಿಮ್ಮನ್ ತಂಪಿ ಎಂಬ ಇನ್ನೊಬ್ಬ ಶ್ರೇಷ್ಠ ಕವಿ ಕೀಚಕವಧ, ದಕ್ಷಯಾಗಂ ಮತ್ತು ಉತ್ತರಾ ಸ್ವಯಂವರಂ ಎಂಬ ಮೂರು ಅಮೋಘ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾನೆ.
ಇರಯಿಮ್ಮನ್ ತಂಪಿಯ ಮಗಳಾದ ತಂಕ್ಕಚೀಯಾ ತಂದೆಯ ಸಾಹಿತ್ಯಾಭಿರುಚಿಯನ್ನು ಪಡೆದು ಶ್ರೀಮತಿ ಸ್ವಯಂವರಂ, ಪಾರ್ವತೀ ಸ್ವಯಂವರಂ ಮತ್ತು ಮಿತ್ರಸಹ ಮೋಕ್ಷಂ ಎಂಬ ಮೂರು ನಾಟಕಗಳನ್ನು ರಚಿಸಿದ್ದಾಳೆ.
ಕೇರಳದ ಅರಸರ ಆಡಳಿತದಲ್ಲಿ ಮತ್ತು ಅವರ ಆಶ್ರಯದಲ್ಲಿ ಕಥಕಳಿ ಬೆಳೆದು ಅಭಿವೃದ್ಧಿ ಪಡೆಯಿತು. ಸು. 19ನೆಯ ಶತಮಾನದ ನಡುಗಾಲದವರೆಗೆ ಈ ಸಂಪ್ರದಾಯ ಉತ್ತಮ ಸ್ಥಿತಿಯಲ್ಲಿತ್ತು. ಅನಂತರ ಸಾಮಾನ್ಯವಾಗಿ ದೇಶೀಯ ಕಲೆಗಳಿಗಿದ್ದ ಪ್ರೋತ್ಸಾಹ ಕಡಿಮೆಯಾಯಿತಾಗಿ ಈ ಕಲೆಯೂ ಅವನತಿ ಹೊಂದಿತು.
ಸು. ಒಂದು ಶತಮಾನದವರೆಗೆ ಕಥಕಳಿ ಕಾತರತೆಯ ಸ್ಥಿತಿಯಲ್ಲಿ ಉಳಿದುಕೊಂಡು ಬಂದಿತೆನ್ನಬಹುದು. ಅಂದು ಯಾವ ಕಲಾವಿದನಿಗೂ ಯಾವ ಕಲಾ ಪೋಷಕನಿಗೂ ಭವಿಷ್ಯದಲ್ಲಿ ಭರವಸೆ ಇರಲಿಲ್ಲ. ಹೀಗೆ ಕಲೆ ಪುರ್ಣ ಅಳಿಯುವ ಸ್ಥಿತಿಗೆ ಬಂದಾಗ ಮಹಾಕವಿ ವಲ್ಲತ್ತೋಳ್ ನಾರಾಯಣ ಮೇನನ್ ಎಂಬ ಧೀರ ಕಲೆಯ ರಕ್ಷಕನಾಗಿ ಮುಂದೆ ಬಂದ. ತನ್ನ ತಂದೆಗಿದ್ದ ಕಲಾಭಿರುಚಿಯ ದೆಸೆಯಿಂದಾಗಿ ವಲ್ಲತ್ತೋಳ್ ಕಥಕಳಿ ಕಲೆಯ ಅಂದವನ್ನು ಕಂಡ. ಯಾರನ್ನೂ ಸಹಾಯಕ್ಕಾಗಿ ಕೈಯೊಡ್ಡಿ ಬೇಡದೆ, ಲಾಟರಿ ಮೊದಲಾದವನ್ನು ನಡೆಸಿ ಸು. 75,000 ರೂಪಾಯಿಗಳನ್ನು ಶೇಖರಿಸಿ ಆ ನಿಧಿಯಿಂದ ಆತ ಕಥಕಳಿ ಕಲೆಗೆ ಕೇರಳ ಕಲಾಮಂಡಲಂ ಎಂಬ ಒಂದು ನೆಲೆಯನ್ನು ಸ್ಥಾಪಿಸಿದ (1930) ಅಳಿಯುತ್ತಿದ್ದ ಕಲೆಗಳ ಶೋಧನೆ ಮಾಡಿ ಅವಕ್ಕೆ ಹೊಸ ಜೀವಕೊಟ್ಟು ಅಭಿವೃದ್ಧಿ ಮಾಡುವುದೇ ಈ ಮಂಡಲದ ಧ್ಯೇಯ. ಈ ಧ್ಯೇಯ ಫಲಿಸಿ ಕಥಕಳಿ, ಮೋಹಿನೀ ಅಟ್ಟಂ, ಓಟಂ ತುಳ್ಳಲ್ ಮೊದಲಾದ ಸಂಪ್ರದಾಯಗಳು ಪುನರುಜ್ಜೀವಿತವಾಗಿ ಹೊಸ ಕಳೆಯನ್ನು ಪಡೆದುವು, ಕಥಕಳಿ ಕಲೆಯ ಶ್ರೇಷ್ಠ ಗುರುಗಳೆಲ್ಲರನ್ನೂ ಆಹ್ವಾನಿಸಿ ಅಧ್ಯಾಪಕರನ್ನಾಗಿ ಆರಿಸಲಾಯಿತು. ಇವರಲ್ಲಿ ತಕಾಝ ಕುಂಜು ಕುರುಪ್, ಕವಲಪ್ರನಾರಾಯಣ ನಾಯರ್ ಮತ್ತು ಪಟ್ಟಿಕಂತೋಟಿ ರಾವುಣ್ಣಿ ಮೇನನ್ ಇವರು ಪ್ರಖ್ಯಾತರು.
ಸ್ಥಾಪಿತವಾದ ದಿನದಿಂದ ಕೇರಳ ಕಲಾಮಂಡಲ ಕಥಕಳಿ ಕಲೆಗೆ ಹೇರಳವಾಗಿ ದುಡಿದು ಸೇವೆ ಸಲ್ಲಿಸುತ್ತಿದೆ. ಇವರ ಸತತ ಸೇವೆಯ ಫಲವಾಗಿ ಈ ಸಂಘಕ್ಕೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯಿಂದ ಧನಸಹಾಯ ಒದಗಿದೆ; ಅಲ್ಲದೆ ಪಂಡಿತ ಜವಹರಲಾಲ್ ನೆಹರು ಈ ಸಂಘದ ಯೋಗ್ಯತೆಯನ್ನು ಮನಗಂಡು 50,000 ರೂಪಾಯಿಗಳ ಧನಸಹಾಯವನ್ನು ನೀಡಿದ್ದರು.
ಕಥಕಳಿ ಅಭ್ಯಾಸ
ಬದಲಾಯಿಸಿಕಥಕಳಿಯ ಸಾಧನೆ ಒಂದು ಯೋಗಾಭ್ಯಾಸವೇ. ಸುಂದರವಾದ ಹಾಗೂ ಜಟಿಲವಾದ ಈ ಕಲೆಯನ್ನು ಕರಗತ ಮಾಡಿಕೊಳ್ಳಬೇಕಾದರೆ ಒಬ್ಬ ವಿದ್ಯಾರ್ಥಿ ತನ್ನ ಸುಖ ದುಃಖಗಳನ್ನು ಮರೆತು, ಒಂದು ವಿಧದ ಹಠಯೋಗವನ್ನೇ ಮಾಡಬೇಕಾಗುತ್ತದೆ. ವಿದ್ಯಾರ್ಥಿಯೊಬ್ಬ ಸಾಮಾನ್ಯವಾಗಿ ತನ್ನ 7ನೆಯ ಅಥವಾ 8ನೆಯ ವಯಸ್ಸಿನಲ್ಲಿಯೇ ಗುರುಗಳೊಬ್ಬರಲ್ಲಿ ಪಾಠವನ್ನು ಆರಂಭಿಸುತ್ತಾನೆ. ಈ ಸಂಪ್ರದಾಯ ನಮಗೆ ಪ್ರಾಚೀನದ ಗುರುಕುಲವಾಸದ ನೆನಪನ್ನು ತರುತ್ತದೆ. ಇಲ್ಲಿ ಗುರುಗಳ ಅನುಗ್ರಹಕ್ಕೆ ಪಾತ್ರನಾಗಲು ವಿದ್ಯಾರ್ಥಿ ಎಲ್ಲ ವಿಧದಿಂದಲೂ ಅವರ ಸೇವೆಯನ್ನು ಮಾಡಬೇಕಾಗುತ್ತದೆ. ಗುರುಗಳ ಕಟಾಕ್ಷ ಬಿದ್ದು ಎಷ್ಟು ವಿದ್ಯೆಯನ್ನು ಅವರು ದಾನ ಮಾಡುವರೋ ಅಷ್ಟನ್ನು ಸ್ವೀಕರಿಸುವುದು ವಿದ್ಯಾರ್ಥಿಯ ಕರ್ತವ್ಯ.
ಮೈಸಾಧಕರಂ
ಬದಲಾಯಿಸಿಕಥಕಳಿ ನೃತ್ಯಗಾರನಿಗೆ ಅವಯವಗಳೂ ಮೈಕಟ್ಟೂ ತುಂಬ ಮೆದುವಾಗಿರಬೇಕು. ಅದಕ್ಕಾಗಿ ಅವನು ಕಸರತ್ತು ಮಾಡಿ ಮೊದಲು ತನ್ನ ಮೈಯನ್ನು ಮೆದು ಮಾಡಿಕೊಳ್ಳುತ್ತಾನೆ. ಆಮೇಲೆ ಕಲೆಯ ಮೊದಲ ಭಂಗಿಯನ್ನೂ ಕಥಕಳಿಗೆ ಸೇರಿದ ಕೆಲವು ಕಸರತ್ತುಗಳನ್ನೂ ಕಲಿಯುತ್ತಾನೆ. ಅನಂತರ ಮುಖ್ಯವಾದ 5 ನಮಸ್ಕಾರಗಳ ಅಭ್ಯಾಸವಾಗುತ್ತದೆ. ಇಷ್ಟು ಮಾಡಿದಲ್ಲಿ ವಿದ್ಯಾರ್ಥಿಯ ಅಂಗಾಂಗಗಳು ಬೇಕಾದ ರೀತಿಯಲ್ಲಿ ಬಳುಕಿ ಬಾಗುವಂತಾಗುತ್ತದೆ. ಈಗ ಅವನ ಸೊಂಟಕ್ಕೆ ಒಲವೂ ಶಕ್ತಿಯೂ ಬರುವಂತೆ ಮತ್ತು ಕಥಕಳಿಯ ಮುಖ್ಯ ಸ್ಥಾನಕಗಳಿಗೆ ಅನುಕೂಲವಾಗುವಂತೆ ಒಂದು ವಿಶೇಷ ರೀತಿಯ ಅಂಗಮರ್ದನವನ್ನು ಮಾಡುತ್ತಾರೆ. ಈ ಮರ್ದನ ತುಂಬ ನೋವನ್ನುಂಟು ಮಾಡುತ್ತದಾದರೂ ಇದಿಲ್ಲದಿದ್ದರೆ ನೃತ್ಯಕ್ಕೆ ಬೇಕಾಗುವ ಬಳುಕು ಬಾಗುಗಳು ಬರುವುದು ಅಸಾಧ್ಯ. ಮೊದಲು ವಿದ್ಯಾರ್ಥಿಯನ್ನು ಕಪ್ಪೆಯಾಕಾರದಲ್ಲಿ ಮಲಗಿಸಿ ಅಂಗಮರ್ದಕ ಮೇಲೆ ಕಟ್ಟಿದ ಒಂದು ಅಡ್ಡ ಮರವನ್ನು ಕೈಗಳಿಂದ ಹಿಡಿದುಕೊಂಡು ತನ್ನ ಕಾಲಿನಿಂದ ವಿದ್ಯಾರ್ಥಿಯ ತೊಡೆಗಳನ್ನೂ ಕಾಲುಗಳನ್ನೂ ಮರ್ದಿಸುತ್ತಾನೆ. ಹೊತ್ತು ಹೋದಂತೆ ಮರ್ದನದ ಒತ್ತಡವನ್ನು ಹೆಚ್ಚಿಸುತ್ತಲೇ ಇರುತ್ತಾನೆ. ಈ ಮರ್ದನ ಬೆನ್ನಕಡೆಯಿಂದಲೂ ಎದೆಯ ಕಡೆಯಿಂದಲೂ ನಡೆಯುತ್ತದೆ. ಈ ಕ್ರಿಯೆ ಪುರ್ಣವಾದಾಗ ವಿದ್ಯಾರ್ಥಿಯ ಅಂಗಾಂಗಗಳು ಸೊಂಟ ಮುಂತಾದವು ಹೇಳಿದಂತೆ ಬಾಗುತ್ತವೆ.
ಕಾಲಸಾಧಕಂ
ಬದಲಾಯಿಸಿಈ ಮೈಸಾಧನೆ ಮುಗಿದ ಮೇಲೆ ಕಾಲ್ಚಲನೆಗಳ ಅಭ್ಯಾಸವನ್ನೂ ಜೊತೆಗೆ ಬೇರೆ ಬೇರೆ ವಿಧದ ಬಾಗುವಿಕೆಗಳನ್ನೂ ಹೇಳಿಕೊಡುತ್ತಾರೆ. ಈ ಕಾಲ್ಚಲನೆಗಳು ಮೊದಲಲ್ಲಿ ಒಂದನೆಯ ಕಾಲದಲ್ಲಿ ಆರಂಭವಾಗಿ ಕ್ರಮೇಣ 4ನೆಯ ಕಾಲದವರೆಗೆ ಸಾಗಿ ಪುನಃ ಒಂದನೆಯ ಕಾಲಕ್ಕೆ ಬರುತ್ತವೆ. ಈ ಅಭ್ಯಾಸದಿಂದ ವಿದ್ಯಾರ್ಥಿಗೆ ತಾಳ ಲಯಜ್ಞಾನ ಖಚಿತವಾಗುತ್ತದೆ. ಇದಾದ ಮೇಲೆ ಕಷ್ಟತರವಾದ ಕಾಲ್ಚಲನೆಗಳನ್ನೂ ಅವುಗಳ ಸಮ್ಮಿಲನವನ್ನೂ ಕಲಿಯಬೇಕು. ಇವಕ್ಕೆ ಕಲಾಶಂ ಎಂದು ಹೆಸರು. ಇದರಲ್ಲಿ ವಟ್ಟಮಿಟ್ಟ ಕಲಾಶಂ, ಅಷ್ಟಕಲಾಶಂ, ಎಡಕಲಾಶಂ, ಎರಟ್ಟಿಕಲಾಶಂ ಮತ್ತು ಎಡುತ್ತು ಕಲಾಶಂ ಎಂಬ ಕೆಲವು ವಿಧಗಳಿವೆ. ಇವು ಭರತನಾಟ್ಯದಲ್ಲಿನ ಜತಿಗಳಂತೆ. ಇಂಥ ಕಲಾಶಂಗಳನ್ನು ಕಾಳಗ ಸನ್ನಿವೇಶಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸುತ್ತಾರೆ.
ಮುದ್ರಸಾಧಕಂ
ಬದಲಾಯಿಸಿಆಮೇಲೆ ಹಸ್ತಗಳ ಅಥವಾ ಮುದ್ರೆಗಳ ಅಭ್ಯಾಸ ನಡೆಯುತ್ತದೆ. ಈ ಹಸ್ತಗಳು ಭರತನಾಟ್ಯದ ಹಸ್ತ ಮುದ್ರೆಗಳಿಂದ ಬೇರೆಯಾಗಿವೆ. ಭರತನಾಟ್ಯ ಮುದ್ರೆಗಳ ಹೆಸರುಗಳಲ್ಲೇ ಕಥಕಳಿಯಲ್ಲಿ 24 ಮುದ್ರೆಗಳಿವೆ. ಈ 24 ಮುದ್ರೆಗಳಿಂದ ಒಂದು ಸಾಹಿತ್ಯವನ್ನೇ ಸೃಷ್ಟಿಸಬಹುದು. ಇವನ್ನು ಮತ್ತೆ ಮೂರು ವಿಭಾಗಗಳನ್ನಾಗಿ ವಿಂಗಡಿಸಿದ್ದಾರೆ. 1. ಪ್ರಾಕೃತಿಕ ಮುದ್ರೆಗಳು : ಕಲಾವಿದ ನಟಿಸುವಾಗ ಭಾವಪರವಶನಾಗಿ ತೋರುವ ಸಹಜ ರೀತಿಯವು. 2. ಪ್ರತಿರೂಪಿ ಮುದ್ರೆಗಳು : ಯಾವುದಾದರೂ ಒಂದು ವಸ್ತುವನ್ನು ತೋರಿಸಲು ಅಥವಾ ವ್ಯಕ್ತಪಡಿಸಲು ಉಪಯೋಗಿಸುವಂಥವು. 3. ಪ್ರಸಾರಿತ ಮುದ್ರೆಗಳು: ಧರ್ಮಾನುಸಾರವಾಗಿ ತಾಂತ್ರಿಕ ಸಂಜ್ಞೆಗಳಿಗೆ ಉಪಯೋಗಿಸುವ ವಿಶಿಷ್ಟ ಬಗೆಯವು. ಉದಾಹರಣೆಗೆ ಪುಜೆ, ದಾನ, ವರದ ಮುಂತಾದುವನ್ನು ಅಭಿನಯಿಸಲು ಅನುಕೂಲವಾಗುವಂಥವು. ಚಲನೆಗಳನ್ನು ಹಸ್ತಮುದ್ರಗಳಿಂದಲೂ ತಲೆ, ಕತ್ತು, ಕಣ್ಣು ಹುಬ್ಬು, ಕಣ್ಣಾಲಿ, ತುಟಿ, ಮೂಗು, ಕದಪು ಮುಂತಾದುವುಗಳಿಂದಲೂ ಅಂಗಾಂಗಗಳಿಂದಲೂ ಅಭಿನಯಿಸಿ ತೋರಬೇಕಾಗುತ್ತದೆ.
ಅಭಿನಯ ಸಾಧಕಂ
ಬದಲಾಯಿಸಿ2-3 ವರ್ಷಗಳ ಅಭ್ಯಾಸ ಮುಗಿದ ಮೇಲೆ ವಿದ್ಯಾರ್ಥಿಗೆ ಕಣ್ಣು, ಕಣ್ಣಾಲಿ, ಹುಬ್ಬು ಕೆನ್ನೆ, ಕದಪುಗಳ ಚಲನೆಯ ಪಾಠವಾಗುತ್ತದೆ. ಇವೆಲ್ಲವನ್ನೂ ನಾಟ್ಯಶಾಸ್ತ್ರದಲ್ಲಿ ವರ್ಣಿಸಿದ್ದಾರೆ. ಈ ಪರಿಷ್ಕಾರವಾದ ಹಾಗೂ ಕಠಿಣವಾದ ಸಾಧನೆಯ ಫಲವಾಗಿ ಒಬ್ಬ ಕಥಕಳಿ ಕಲಾವಿದನ ಮುಖ ಭರತನಾಟ್ಯ ಕಲಾವಿದನ ಮುಖಕ್ಕಿಂತ ಹೆಚ್ಚು ಸೂಚಕವಾಗಿಯೂ ಭಾವಭರಿತವಾಗಿಯೂ ಚಂಚಲವಾಗಿಯೂ ಇರಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಕಣ್ಣಿನ ಸಾಧನೆ ಪ್ರಾತಃಕಾಲ 4 ಗಂಟೆಗೆ ಆರಂಭವಾಗುತ್ತದೆ. ಆ ಸಮಯದಲ್ಲಿ ಸುತ್ತುಮುತ್ತಲಿನ ವಾತಾವರಣ ರಾತ್ರಿಯ ಕತ್ತಲೆಯಲ್ಲಿ ಅಡಗಿರುತ್ತದೆ. ಆದ್ದರಿಂದ ಕಣ್ಣಿನ ದೃಷ್ಟಿಯನ್ನು ಏಕಾಗ್ರತೆಯಿಂದ ನೆಲೆ ನಿಲ್ಲಿಸಲು ಅನುಕೂಲವಾಗುತ್ತದೆ. 4 ರಿಂದ 6 ಗಂಟೆಗಳ ತನಕ ಗುರುವೂ ಶಿಷ್ಯನೂ ಪದ್ಮಾಸನದಲ್ಲಿರುತ್ತಾರೆ. ಇಬ್ಬರ ಮಧ್ಯ 7-8 ಅಡಿಗಳ ಅಂತರವಿರುತ್ತದೆ. ಗುರುಕೋಲಿನ ಆಧಾರದಿಂದ ಕಣ್ಣು ಚಲನೆಗಳ ರೀತಿಯನ್ನು ಹೇಳಿಕೊಡುತ್ತಾನೆ. ತೆರೆದ ಕಣ್ಣಿನಿಂದ ಶಿಷ್ಯ ಕೋಲಿನ ತುದಿಯನ್ನೇ ನೋಡಬೇಕು. ಗುರುಶಿಷ್ಯರ ಮಧ್ಯೆ ಒಂದು ಎಣ್ಣೆ ದೀಪವಿದ್ದು ಮಿಕ್ಕ ಕಡೆಯೆಲ್ಲ ಕಗ್ಗತ್ತಲೆ ಕವಿದಿರುತ್ತದೆ. ಈ ಕಗ್ಗತ್ತಲೆಯಿಂದಾಗಿ ಶಿಷ್ಯ ದಿಗಂತದವರೆಗೂ ದೃಷ್ಟಿಯನ್ನು ಬೀರಬಲ್ಲ. ಕಣ್ಣಿಗೆ ಉರಿಬಾರದಂತೆ ಹಸುವಿನ ತುಪ್ಪವನ್ನು ಹಚ್ಚಿಕೊಂಡು, ಬೆರಳುಗಳಿಂದ ಎರಡೂ ರೆಪ್ಪೆಗಳನ್ನು ಬಿಡಿಸಿ ಹಿಡಿದು, ನೆಟ್ಟ ದೃಷ್ಟಿಯಿಂದ ಕಣ್ಣು ಚಲನೆಗಳನ್ನು ಮಾಡುವುದು ಅತಿ ಕಠಿಣ ಸಾಧನೆ.
ಈ ಸಾಧನೆಯ ಜೊತೆಗೆ ನವರಸಗಳನ್ನು ತೋರಿಸುವ ಅಭಿನಯದ ಅಭ್ಯಾಸ ನಡೆಯುತ್ತದೆ. ರಸನಿರೂಪಣೆಯಲ್ಲಿ ವಿದ್ಯಾರ್ಥಿ ಸಿದ್ದಹಸ್ತನಾಗುವವರೆಗೂ ಪಾಠ ನಡೆಯುತ್ತದೆ.
ಹೀಗೆ 4 ವಿಧವಾದ ಸಾಧನೆಗಳನ್ನು ಹಲವು ವರ್ಷ ಅಭ್ಯಾಸ ಮಾಡಿದ ಮೇಲೆ ಕಲಾವಿದ ಕಥಕಳಿ ಕಲೆಯಲ್ಲಿ ಸ್ವಲ್ಪಮಟ್ಟಿಗೆ ಪಾಂಡಿತ್ಯ ಪಡೆದು ರಂಗಸ್ಥಳದ ಮೇಲೆ ಬರಲು ಯೋಗ್ಯನಾಗುತ್ತಾನೆ. ತನ್ನ ತನ್ನ ಯೋಗ್ಯತೆ ಮತ್ತು ಅಭಿರುಚಿಗೆ ತಕ್ಕ ಪಾತ್ರವನ್ನು (ಸ್ತ್ರಿ, ನಾಯಕ, ಖಳ, ಉಗ್ರ, ಸೌಮ್ಯ-ಹೀಗೆ) ಆರಿಸಿಕೊಂಡು ಅಭ್ಯಾಸ ಮಾಡುವುದು ರೂಢಿ. ಕಥಕಳಿ ನೃತ್ಯನಾಟಕಗಳಲ್ಲಿ ಸಾಮಾನ್ಯವಾಗಿ ಸಾತ್ತ್ವಿಕ, ರಾಜಸ, ತಾಮಸ ಎಂಬ ಮೂರು ವಿಧದ ಪಾತ್ರಗಳೂ ಇರುತ್ತವೆ.
ವೇಷಭೂಷಣಗಳು, ಬಣ್ಣಲೇಪನ
ಬದಲಾಯಿಸಿವೇಷಭೂಷಣಗಳೂ ಬಣ್ಣಗಳೂ ವಿಶಿಷ್ಟವಾಗಿರುವುದರಿಂದ ಈ ಕಲೆ ವಿಶ್ವದ ಗಮನವನ್ನು ಸೆಳೆದಿದೆ. ಇಲ್ಲಿನ ಬಣ್ಣಲೇಪನ ಒಂದು ಅಸಾಧಾರಣವಾದ ಕಲೆ. ಈ ವಿಷಯದಲ್ಲಿ ಯಕ್ಷಗಾನ ಕಲೆಗಾರರಿಗೂ ಕಥಕಳಿ ಕಲಾವಿದರಿಗೂ ಹೋಲಿಕೆಯಿದೆ. ಈ ವಿಶಿಷ್ಟ ಬಣ್ಣಲೇಪನದಿಂದಲೂ ವೇಷ ಭೂಷಣಗಳಿಂದಲೂ ಕಲಾವಿದ ತನ್ನ ವ್ಯಕ್ತಿತ್ವವನ್ನು ತಾನು ಅಭಿನಯಿಸುವ ಪಾತ್ರದಲ್ಲಿ ವಿಲೀನಗೊಳಿಸಬಲ್ಲ. ಪಾತ್ರಧಾರಿಗಳು ಉಡುವ ಅಗಲವಾದ ಬಿಳಿ ಲಂಗ ಪಾಶ್ಚಾತ್ಯರ ಪ್ರಭಾವದ ಫಲವಿರಬಹುದು ಎನಿಸುತ್ತದೆ. ಅಗಲವಾದ ಈ ಲಂಗವಲ್ಲದೆ ಅನೇಕ ಮಣಿಗಳ ಸರಗಳನ್ನೂ ಭುಜಕೀರ್ತಿಗಳನ್ನೂ ತಲೆಗೆ ಧರಿಸುವ ವಿಧವಿಧದ ದೊಡ್ಡ ಕಿರೀಟಗಳನ್ನೂ ಎದೆಕವಚಗಳನ್ನೂ ಉದ್ದವಾದ ಕೇಶರಾಶಿಯನ್ನೂ ಉಪಯೋಗಿಸಿ ನಟರು ಅಮಾನುಷ ವ್ಯಕ್ತಿಗಳಂತೆ ಕಾಣುತ್ತಾರೆ. ಬಣ್ಣಗಳಲ್ಲಿ ಹೆಚ್ಚಾಗಿ ಕೆಂಪು, ಹಸಿರು, ಹಳದಿ, ಕಪ್ಪು ಮತ್ತು ಬಿಳಿ ಬಣ್ಣಗಳನ್ನು ಉಪಯೋಗಿಸುತ್ತಾರೆ. ಈ ಪ್ರಮುಖ ಬಣ್ಣಲೇಪನಗಳು ಶೋಭೆ, ಕಾಂತಿ, ದೀಪ್ತಿ ಮತ್ತು ಮಾಧುರ್ಯಗಳ ದ್ಯೋತಕಗಳಾಗಿವೆ. ಪ್ರೇಕ್ಷಕ ಪಾತ್ರದ ವೇಷಭೂಷಣಗಳನ್ನು ಒಮ್ಮೆ ನೋಡಿದ ಮಾತ್ರಕ್ಕೆ ಕಲಾವಿದ ಕಥೆಯ ಯಾವ ಪಾತ್ರವನ್ನು ಧರಿಸಿರುವನೆಂದು ತಿಳಿಯಬಲ್ಲ. ಬಣ್ಣಲೇಪನದಲ್ಲಿ 5 ವಿಧಗಳಿವೆ :
1. ಮಿಣುಕ್ಕು : ಮುಖಕ್ಕೆ ಕೆಂಪು ಮತ್ತು ಹಳದಿ ಬಣ್ಣಗಳನ್ನು ಉಪಯೋಗಿಸುವುದು. ಈ ಪಾತ್ರಗಳು ಋಷಿಗಳನ್ನೂ ಬ್ರಾಹ್ಮಣರನ್ನೂ ಸ್ತ್ರೀಪಾತ್ರಗಳನ್ನೂ ತಿಳಿಸುತ್ತವೆ.
2. ಪಚ್ಚ : ಮುಖಕ್ಕೆ ಹಸಿರು, ಕೆಳದವಡೆಯ ಸುತ್ತಲೂ ಬಿಳಿ ಚುಟ್ಟಿ (ಅಕ್ಕಿ ಹಿಟ್ಟಿನ ಬಣ್ಣ) ಇರುತ್ತದೆ. ಕಣ್ಣುಗಳಿಗೂ ಕಣ್ಣು ರೆಪ್ಪೆಗಳಿಗೂ ಕಪ್ಪು ಬಳಿದು ತುಟಿಗಳನ್ನು ಕೆಂಪು ಮಾಡಿಕೊಳ್ಳುತ್ತಾರೆ. ಈ ವಿಧದ ಬಣ್ಣ ಲೇಪನ ಸಾತ್ತ್ವಿಕ ಪಾತ್ರಗಳನ್ನೂ ಗಂಭೀರ ಪಾತ್ರಗಳನ್ನೂ ಸೂಚಿಸುತ್ತದೆ. ಉದಾಹರಣೆಗೆ ರಾಮ, ಕೃಷ್ಣ, ಅರ್ಜುನ, ನಳ ಇಂದ್ರ.
3. ಕತ್ತಿ : ಇದು ಪಚ್ಚ ಲೇಪನಕ್ಕಿಂತ ಸ್ವಲ್ಪ ಹೆಚ್ಚು ಪರಿಷ್ಕಾರವಾದುದು. ಇದರಲ್ಲಿ ಕೆಂಪು, ಹಸಿರು ಬಣ್ಣಗಳನ್ನು ಚಾತುರ್ಯದಿಂದ ಸೇರಿಸುತ್ತಾರೆ. ಚುಟ್ಟಿ ಮೂಗಿನ ಸುತ್ತಲಿಂದ ಹಣೆಯವರೆಗೂ ಇರುತ್ತದೆ. ಈ ಲೇಪನವನ್ನು ರಾವಣ, ಕೀಚಕ, ದುಶ್ಯಾಸನ ಮುಂತಾದ ಮುಖ್ಯರ ಪಾತ್ರಗಳಿಗೆ ಉಪಯೋಗಿಸುತ್ತಾರೆ.
4. ದಾಡಿ: ಈ ಲೇಪನದಲ್ಲಿ ಕೆಂಪು, ಬಿಳಿ ಮತ್ತು ಕಪ್ಪು ಬಣ್ಣಗಳಿದ್ದು ಒಳ್ಳೆಯ ಹಾಗೂ ಕೆಟ್ಟ ಗುಣಗಳುಳ್ಳ ವ್ಯಕ್ತಿಗಳನ್ನು ಸೂಚಿಸುತ್ತವೆ. ಅವುಗಳಲ್ಲೂ ಹಲವು ವಿಧಗಳಿವೆ. i. ವೆಳುಪ್ಪು ದಾಡಿ : ಬಿಳೀ ಗಡ್ಡವಿದ್ದು ಕಣ್ಣು ಮೂಗುಗಳ ಸುತ್ತಲೂ ತೆಳ್ಳಗಿನ ಚುಟ್ಟಿ ಇರುತ್ತದೆ. ಮುಖಕ್ಕೆ ಕಪ್ಪು ಮೈಗೆ ಒಂದು ರೀತಿಯ ಅಂಗಿ. ಈ ಲೇಪನ ಹನುಮಂತನಂಥ ಪಾತ್ರಗಳಿಗೆ ತಕ್ಕುದು. ii. ಚೊಕ್ಕಣ್ಣ ದಾಡಿ : ಈ ಪಾತ್ರಕ್ಕೆ ಕೆಂಪು ಗಡ್ಡವೂ ಕೆಂಪು ಅಂಗಿಯೂ ಇರುತ್ತದೆ. ಮುಖದ ಮೇಲ್ಬಾಗ ಕಪ್ಪಾಗಿದ್ದು ಕೆಳಭಾಗ ಕೆಂಪಾಗಿರುತ್ತದೆ. ಸಾಮಾನ್ಯವಾಗಿ ಈ ಲೇಪನಗಳು ಭಯಂಕರ ಹಾಗೂ ಆಕ್ರಮಣಕಾರಿ ಪಾತ್ರಗಳನ್ನು ಸೂಚಿಸುತ್ತವೆ. ಉದಾ-ಕಾಲಕೇಯ. ವೀರಭದ್ರ ಮುಂತಾದುವು. iii ಕರುಪ್ಪುದಾಡಿ : ಇದಕ್ಕೆ ಕಪ್ಪು ಗಡ್ಡವೂ ಕಪ್ಪು ಅಂಗಿಯೂ ಇರುತ್ತದೆ. ಕಿರಾತನ ಪಾತ್ರದಲ್ಲಿ ಶಿವ ಈ ಬಣ್ಣವನ್ನು ಧರಿಸಬೇಕು. iv. ಕರಿ: ಈ ಲೇಪನದಲ್ಲಿ ಮುಖವೆಲ್ಲ ಕಪ್ಪಗಿದ್ದು ಉದ್ದವಾದ ದವಡೆಗಳೂ ಮುಂದಕ್ಕೆ ಬಾಚಿರುವ ಕಪ್ಪುಸ್ತನಗಳೂ ಇರುತ್ತವೆ. ಪುತನಿ, ಶೂರ್ಪನಖಿ ಮುಂತಾದ ದುಷ್ಟ ಪಾತ್ರಗಳಿಗೆ ಇದು ತಕ್ಕ ವೇಷ.
ಒಟ್ಟಿನಲ್ಲಿ ಸಾತ್ತ್ವಿಕಕ್ಕೆ ಹಸಿರು, ರಾಜಸಕ್ಕೆ ಕೆಂಪು, ತಾಮಸಕ್ಕೆ ಕಪ್ಪು ಬಣ್ಣಗಳು; ಸಾತ್ತ್ವಿಕ ಮತ್ತು ರಾಜಸ ಗುಣಗಳೆರಡೂ ಇರುವಲ್ಲಿ ಹಳದಿ ಬಣ್ಣವಿರುತ್ತದೆ.
ಬಣ್ಣ ಲೇಪನದಲ್ಲಿ ಮಾತ್ರವಲ್ಲದೆ ವೇಷಧಾರಿಗಳು ಕಟ್ಟಿಕೊಳ್ಳುವ ಕಿರೀಟಗಳಲ್ಲಿಯೂ ಕರ್ಣಕುಂಡಲಗಳಲ್ಲಿಯೂ ಸೊಂಟದ ಪಟ್ಟಿಗಳಲ್ಲಿಯೂ ಪಾತ್ರಕ್ಕೆ ತಕ್ಕ ವಿಶಿಷ್ಟತೆ ಇರುತ್ತದೆ. ದೊಡ್ಡ ದೊಡ್ಡ ಕಿರೀಟಗಳನ್ನು ಧರಿಸಿಕೊಂಡು ವಿವಿಧ ಬಣ್ಣಗಳಿಂದ ಅಲಂಕೃತರಾದ ಈ ಪಾತ್ರಧಾರಿಗಳು ಪುರಾಣಗಳ ಕಾಲದಿಂದ ನೇರವಾಗಿ ರಂಗಸ್ಥಳಕ್ಕೆ ಇಳಿದು ಬಂದ ಮಹಾವ್ಯಕ್ತಿಗಳಂತೆ ಕಾಣುತ್ತಾರೆ. ಅವರ ವೇಷ ಮತ್ತು ಮಾತುಕಥೆಗಳಿಂದ ನಾಟಕದ ಸನ್ನಿವೇಶ ಸಹಜವಾಗಿ ಏರ್ಪಡುತ್ತದೆ.
ಕಥಕಳಿಯ ಕಾರ್ಯಕ್ರಮ
ಬದಲಾಯಿಸಿರಾತ್ರಿಯೆಲ್ಲ ನಡೆಯುವ ಕಥಕಳಿ ಕಾರ್ಯಕ್ರಮವನ್ನು ನೋಡುವುದು ಒಂದು ಬಗೆಯ ಮರೆಯಲಾಗದಂಥ ಅನುಭವ. ಸಾಯಂಕಾಲವಾಗುತ್ತಿದ್ದಂತೆ ಭೂಮಂಡಲವನ್ನೆಲ್ಲ ಆವರಿಸಿ ಪ್ರತಿಧ್ವನಿಸುವ ಚಂಡೆ ಮತ್ತು ಶುದ್ಧಮದ್ದಲೆಗಳ ಬಡಿತ ಕಥಕಳಿ ಪ್ರದರ್ಶನಕ್ಕೆ ಕರೆಗೊಡುತ್ತದೆ. ಸಾಮಾನ್ಯವಾಗಿ ಚಂಡೆ ಬಾರಿಸುವವನಿಗೂ ಶುದ್ದ ಮದ್ದಲೆ ಬಾರಿಸುವವನಿಗೂ ಒಂದು ವಿಧದ ಪೈಪೋಟಿ ಇರುತ್ತದೆ. ಕತ್ತಲಾದ ಮೇಲೆ ಪ್ರದರ್ಶನ ಆರಂಭವಾಗುತ್ತದೆ. ಮೊದಲು ನಡೆಯುವ ತೋಡಯಂ ನೃತ್ಯ ರಂಗಪುಜೆಯಾಗಿದ್ದು ಪ್ರಳಯವನ್ನೂ ಅನಂತರದ ಸೃಷ್ಟಿಯ ಮೂಲವನ್ನೂ ಸೂಚಿಸುತ್ತದೆ. ಚಪ್ಪರದ ಮೇಲ್ಬಾಗ ಆಕಾಶವನ್ನೂ ರಂಗಸ್ಥಳದ ನೆಲ ಭೂಮಿದೇವಿಯನ್ನೂ ಪರದೆಯ ಹಿಂದಿನ ಭಾಗ ಪ್ರಥಮ ಯುಗದ ಕರಾಳ ರಾತ್ರಿಯನ್ನೂ ಸೂಚಿಸುತ್ತವೆ. ಪರದೆಯ ಹಿಂದೆ ಇಬ್ಬರು ಸ್ತ್ರೀವೇಷಧಾರಿಗಳು ಸಂಗೀತಗಾರರ ಹಿಮ್ಮೇಳದ ಸಂಗೀತಕ್ಕೆ ಮತ್ತು ಶುದ್ದಮದ್ದಳೆಯ ಹೆಚ್ಚುತ್ತಿರುವ ತಾಳಗತಿಗೆ ಸಮನಾಗಿ ಕುಣಿಯುತ್ತಾರೆ. ಈ ಎರಡು ಸ್ತ್ರೀ ಪಾತ್ರಗಳು ಮಾಯಾದೇವಿಯನ್ನೂ ಶಕ್ತಿದೇವಿಯನ್ನೂ ಪ್ರತಿನಿಧಿಸುತ್ತವೆ. ಚಂಪಟ, ಚಂಪ, ಅಡತಾಳಂ ಅಥವಾ ಅಡಂದ ಮತ್ತು ಪಂಚರಿ ಎಂಬ 4 ಮುಖ್ಯ ತಾಳಗಳಲ್ಲಿ ತೋಡಯಂ ಮುಗಿಯುತ್ತದೆ. ತೋಡಯಂ ಪರದೆಯ ಹಿಂದೆ ಮಾಡತಕ್ಕ ನೃತ್ಯ. ಆದ್ದರಿಂದ ಇದು ಸಭಿಕರಿಗೆ ಕಾಣದು. ಕಾರ್ಯಕ್ರಮದ ಎರಡನೆಯ ನರ್ತನವಾದ ಪುರುಪ್ಪಾಡ್ (ಹೊರಡುವಿಕೆ) ಎಂಬುದು ವಿಶ್ವದಲ್ಲಿ ಸಾತ್ತ್ವಿಕ ಭಾವದ ಆಗಮನವನ್ನು ಸೂಚಿಸುತ್ತದೆ. ಈ ನೃತ್ಯದಿಂದ ಸಭಿಕರು ಪುರಾಣಗಳ ದೈವಿಕ ಮಹಾಪುರುಷರ ಸಾಹಸಕೃತ್ಯಗಳನ್ನೂ ಪರಾಕ್ರಮಗಳನ್ನೂ ನೋಡಲು ಉತ್ಸುಕರಾಗುತ್ತಾರೆ. ಕಥಾರಂಭಕ್ಕೆ ಸಿದ್ಧರಾಗುತ್ತಾರೆ. ಈ ನೃತ್ಯ ಪ್ರದರ್ಶನದ ಅನಂತರ ಸಂಗೀತಗಾರರಿಗೂ ಹಿಮ್ಮೇಳದವರಿಗೂ ತಮ್ಮ ವಿದ್ವತ್ತನ್ನು ಪ್ರಕಟಿಸಲು ಅವಕಾಶ ಏರ್ಪಡುತ್ತದೆ. ಇದಕ್ಕೆ ಮೇಲಪ್ಪಡಂ ಎಂಬ ಹೆಸರು ಇದೆ. ಪೊನ್ನಣೆ ಎಂದು ಕರೆಯಲ್ಪಡುವ ಮುಖ್ಯ ಹಾಡುಗಾರ ಪಾತ್ರಗಳ ಪರಿಚಯ ಮಾಡಿಕೊಡುತ್ತಿರುವಂತೆ ಕಥೆಯ ಪ್ರಮುಖ ವೇಷಧಾರಿಗಳು ಬಣ್ಣ ಬಣ್ಣದ ಪರದೆಯ ಹಿಂದಿನಿಂದ ಒಬ್ಬೊಬ್ಬರಾಗಿ ಬರುತ್ತಾರೆ. ಹಾಡುಗಾರ ಹಾಡಿನ ಸಾಹಿತ್ಯದಿಂದ ಕಥೆಯನ್ನು ನಿರೂಪಿಸುತ್ತಿರುವಂತೆ ಪಾತ್ರಗಳು ರಂಗಸ್ಥಳಕ್ಕೆ ಬಂದು ಕಥಕಳಿಯ ಹಸ್ತಾಭಿನಯದಿಂದಲೂ ಮುದ್ರೆಗಳ ಸಹಾಯದಿಂದಲೂ ಪುರಾಣಕಥೆಗಳನ್ನು ತಿಳಿಸಿ ಪ್ರಸಂಗವನ್ನು ಸಾಗಿಸುತ್ತಾರೆ. ಸತ್ಕಾರ್ಯಗಳಲ್ಲಿ ಪ್ರವೃತ್ತನಾಗಿ ದುಷ್ಟರನ್ನು ನಿಗ್ರಹಿಸಿದ ನಾಯಕ ತನಗೆ ಸಹಾಯವನ್ನೀಡಿದ ದೇವಾಧಿದೇವತೆಗಳನ್ನು ಕೃತಜ್ಞತೆಯಿಂದ ವಂದಿಸುವುದೇ ಪ್ರದರ್ಶನದ ಕೊನೆ. ಇಷ್ಟು ನಡೆಯುವಾಗ ರಾತ್ರಿಯೆಲ್ಲ ಕಳೆದು ಬೆಳಕು ಹರಿದು ಸೂರ್ಯೋದಯವಾಗಿರುತ್ತದೆ.
ಕಥಕಳಿಯ ಸಂಗೀತ
ಬದಲಾಯಿಸಿಕಥಕಳಿಯದು ಸಾಮಾನ್ಯವಾಗಿ ಕೇರಳದ ದೇಶೀಯ ಅಥವಾ ಸ್ಥಳೀಯ ಸಂಗೀತ. ಆದರೂ ಅದು ಕರ್ನಾಟಕ ಸಂಗೀತಕ್ಕೆ ಹತ್ತಿರದ್ದಾಗಿದೆ. ಕಥಕಳಿಯಲ್ಲಿರುವ ಮುಖ್ಯವಾದ 4 ತಾಳಗಳಿಗೆ ಸಂವಾದಿಯಾದುವು ಕರ್ನಾಟಕ ಸಂಗೀತದಲ್ಲೂ ಇವೆ. ಸ್ವಾರಸ್ಯವಾದ ವಿಷಯವೇನೆಂದರೆ ಕಥಕಳಿಯಲ್ಲಿ ಉಪಯೋಗಿಸುವ ಕೆಲವು ರಾಗಗಳು ಕರ್ನಾಟಕ ಸಂಗೀತದಲ್ಲಿ ಕಂಡುಬರುವುದಿಲ್ಲ. ಕೇರಳದ ಸಂಗೀತ ಕೌಶಲ ಒಂದು ನಿಶ್ಚಿತವಾದ ಶೈಲಿಯಲ್ಲಿ ಬೆಳೆದುಕೊಂಡು ಬಂದಿದೆ. ಅದನ್ನು ಸೋಪಾನಶೈಲಿ ಎನ್ನುತ್ತಾರೆ. ಈ ಶೈಲಿ ಅಭಿನಯಕ್ಕೆ ಅನುಕೂಲವಾಗಿರುವ ನಿಧಾನ ಲಯ ಗತಿಗಳಲ್ಲೂ ತೀವ್ರಗತಿಗಳಲ್ಲೂ ಬಳಸಲು ಯೋಗ್ಯವಾಗಿದೆ. ಇದರಲ್ಲಿ ನೆರವಲ್ ಸ್ವರವಿಸ್ತಾರಗಳೂ ರಾಗಾಲಾಪನೆಗಳೂ ಇಲ್ಲ. ಮುಖ್ಯ ಹಾಡುಗಾರನಾದ ಪೊನ್ನಣಿ ಮತ್ತು ಅವನ ಪಕ್ಕದಲ್ಲಿ ಸಹಾಯಕನಾಗಿ ಹಾಡುವ ದ್ವಿತೀಯ ಹಾಡುಗಾರ ಸಿಂಕಿಡಿ ಒಬ್ಬರಿಗೊಬ್ಬರು ನೆರವು ನೀಡಿ ಸಂಗೀತವನ್ನು ಪುರ್ಣಗೊಳಿಸುತ್ತಾರೆ.
ಸಂಗೀತಕ್ಕೆ ಒದಗುವ ಹಿಮ್ಮೇಳ ವಾದ್ಯಗಳು ವಿಚಿತ್ರವಾಗಿರುತ್ತವೆ. ಈ ವಾದ್ಯಗಳಲ್ಲಿ ತಂತಿ ವಾದ್ಯಗಳೂ ಊದುವ ವಾದ್ಯಗಳೂ ಇಲ್ಲದಿರುವುದನ್ನು ಗಮನಿಸಬಹುದು. ಅತಿ ಪ್ರಮುಖವಾಗಿರುವ ವಾದ್ಯಗಳು ಚಂಡೆ ಮತ್ತು ಶುದ್ದಮದ್ದಲೆ. ಒಂದೇ ಪಕ್ಕಕ್ಕೆ ಚರ್ಮವಿರುವ ದೊಡ್ಡ ವಾದ್ಯ ಚಂಡೆ. ಇದರ ಮೇಲೆ ಬಗ್ಗಿರುವ ತೆಳ್ಳನೆಯ ಕೋಲುಗಳಿಂದ ಹೊಡೆದರೆ ಗಂಭೀರವಾದ ಹಾಗೂ ಬಹು ದೂರಕ್ಕೂ ಕೇಳುವಂಥ ದೊಡ್ಡ ಶಬ್ದ ಹೊರಡುತ್ತದೆ. ಶುದ್ದಮದ್ದಳೆ ಕೂಡ ಕೇರಳದ ವಿಶಿಷ್ಟವಾದ್ಯ. ಈ ವಾದ್ಯಕ್ಕೆ ಎರಡೂ ಪಕ್ಕಗಳಿಗೆ ಚರ್ಮವಿದ್ದು ಇದನ್ನು ಕೈಗಳಿಂದ ಬಾರಿಸುತ್ತಾರೆ. ಪೊನ್ನಣಿ ಹಾಡುಗಾರ ಚೆಂಗಲ ಎಂಬ ಒಂದು ಲೋಹದ ಜಾಗಟೆಯ ಮೇಲೆ ಒಂದು ಚಿಕ್ಕ ಕೋಲಿನಿಂದ ತಾಳ ಹಿಡಿದು ಹಾಡುತ್ತಾನೆ. ಸಿಂಕಿಡಿ ಹಾಡುಗಾರ ಎಲತಾಳಂ ಎಂಬ ಒಂದು ಜೊತೆ ಲೋಹದ ತಾಳಗಳನ್ನು ಬಾರಿಸುತ್ತಾನೆ. ಎಡೈಕೆ, ತಮಿಲಾ ಮತ್ತು ಕುಡುಂತುಡಿ ಎಂಬ ವಾದ್ಯಗಳೂ ಪ್ರಚಾರದಲ್ಲಿದೆ.
ತಮಿಳುನಾಡಿನಲ್ಲಿ ಏಕವ್ಯಕ್ತಿ ನರ್ತಿಸುವ ಭರತನಾಟ್ಯ ಕಲೆ ಹೇಗೆ ಪ್ರಚಾರದಲ್ಲಿದೆಯೋ ಹಾಗೆಯೇ ಕೇರಳದಲ್ಲಿ ಮೋಹಿನಿ ಅಟ್ಟಂ ಎಂಬ ನೃತ್ಯಕಲೆ ಏಕವ್ಯಕ್ತಿ ಮಾಡುವ ವಿಶಿಷ್ಟ ಸಂಪ್ರದಾಯವಾಗಿದೆ. ಪ್ರಾಚೀನ ಕಾಲದಲ್ಲಿ ಪುರುಷರು ಈ ವಿಧದ ನೃತ್ಯವನ್ನು ಮಾಡುತ್ತಿದ್ದರಾದರೂ ಈಗ ಸಾಮಾನ್ಯವಾಗಿ ಈ ಕಲೆ ಕೇವಲ ಸ್ತ್ರೀಯರಿಗೇ ಮೀಸಲಾಗಿದೆ ಎನ್ನಬಹುದು. ಈ ನೃತ್ಯದಲ್ಲಿ ಹೆಚ್ಚಾಗಿ ಲಾಸ್ಯಭಾವವಿದ್ದು ಇಂದ್ರಿಯಗಳಿಗೆ ಹಿತವನ್ನುಂಟುಮಾಡುವುದರಿಂದ ಬಹುಶಃ ಇದನ್ನು ಮೋಹಿನಿ ಅಟ್ಟಂ ಎಂದು ಹೆಸರಿಸಿರಬಹುದು. ಭಸ್ಮಾಸುರನನ್ನು ತನ್ನ ನಾಟ್ಯದಿಂದ ಸಂಹರಿಸಿದ ಮೋಹಿನಿಯ ನೆನಪು ಈ ಹೆಸರಿನಲ್ಲಿರಬಹುದು.
ಈ ನೃತ್ಯಸಂಪ್ರದಾಯ ಸಾಮಾನ್ಯವಾಗಿ ಭರತನಾಟ್ಯದಲ್ಲಿದ್ದಂತೆಯೇ ಇದೆ. ಆದರೆ ಕಾಲ್ಚಲನೆ ಅಷ್ಟು ತೀವ್ರವಾಗಿಯೂ ಇಲ್ಲ; ಖಚಿತವಾಗಿಯೂ ಇಲ್ಲ. ಭರತನಾಟ್ಯದ ಹಸ್ತ ಲಕ್ಷಣಗಳೊಡನೆ ಕಥಕಳಿ ಅಭಿನಯ ಮುದ್ರೆಗಳ ಉಪಯೋಗವೂ ಇದೆ. ಕಥಕಳಿ ನೃತ್ಯವನ್ನು ಕಲಿತು ಉಪದೇಶಿಸುತ್ತಿದ್ದ ಗುರುಗಳ ಪರಂಪರೆ ವಿಪುಲವಾಗಿದೆ. ಹಿಂದಿನವರಲ್ಲಿ ಅಂಬು ಪಣಿಕ್ಕರ್, ಶೇಖರ ಮೆನನ್, ಕೇಶವ ಕುರುಪ್ ಮುಂತಾದವರೂ ಇಂದಿನವರಲ್ಲಿ ಕುಂಜು ಕುರುಪ್, ಕೃಷ್ಣನ್ ಕುಟ್ಟಿ, ರಾಮನ್ ಪಿಳೈ ಮೊದಲಾದವರೂ ಪ್ರಸಿದ್ದರು.
ಹೆಚ್ಚಿನ ವಿವರಕ್ಕೆ ನೋಡಿ
ಬದಲಾಯಿಸಿಉಲ್ಲೇಖ
ಬದಲಾಯಿಸಿ- ↑ Williams, Drid (2004). "In the Shadow of Hollywood Orientalism: Authentic East Indian Dancing" (PDF). Visual Anthropology. Routledge. 17 (1): 69–98. doi:10.1080/08949460490274013. S2CID 29065670.
- ↑ https://prepp.in/news/e-492-chakyar-koothu-indian-folk-dance-art-and-culture-notes