ಮಾನವ ಧ್ವನಿ
ಮಾನವ ಧ್ವನಿಯು ಧ್ವನಿವ್ಯೂಹವನ್ನು ಬಳಸಿ ಮಾನವನು ಮಾಡಿದ ಶಬ್ದವನ್ನು ಒಳಗೊಂಡಿರುತ್ತದೆ, ಉದಾಹರಣೆಗೆ ಮಾತು, ಗಾಯನ, ನಗೆ, ಅಳು, ಕಿರಿಚುವುದು, ಇತ್ಯಾದಿ. ಮಾನವ ಧ್ವನಿಯ ಆವರ್ತನವು ನಿರ್ದಿಷ್ಟವಾಗಿ ಮಾನವ ಶಬ್ದೋತ್ಪಾದನೆಯ ಭಾಗವಾಗಿದೆ. ಇದರಲ್ಲಿ ಧ್ವನಿತಂತುಗಳು ಪ್ರಧಾನ ಶಬ್ದ ಮೂಲಗಳಾಗಿವೆ. (ಶರೀರದ ಅದೇ ಸಾಮಾನ್ಯ ಪ್ರದೇಶದಿಂದ ಉತ್ಪತ್ತಿಯಾಗುವ ಇತರ ಶಬ್ದೋತ್ಪಾದನೆ ಕಾರ್ಯವಿಧಾನಗಳಲ್ಲಿ ಧ್ವನಿತಂತುಗಳನ್ನು ಉಪಯೋಗಿಸದ ವ್ಯಂಜನಗಳು, ಕ್ಲಿಕ್ ಶಬ್ದ, ಸೀಟಿ ಮತ್ತು ಪಿಸುಮಾತಿನ ಉತ್ಪಾದನೆ ಸೇರಿವೆ.)
ಸಾಮಾನ್ಯವಾಗಿ ಹೇಳುವುದಾದರೆ, ಮಾನವ ಧ್ವನಿಯನ್ನು ಉತ್ಪತ್ತಿ ಮಾಡುವ ಕಾರ್ಯವಿಧಾನವನ್ನು ಮೂರು ಭಾಗಗಳಾಗಿ ವಿಭಜಿಸಬಹುದು; ಶ್ವಾಸಕೋಶಗಳು, ಗಂಟಲಗೂಡಿನೊಳಗಿನ (ಧ್ವನಿಪೆಟ್ಟಿಗೆ) ಧ್ವನಿತಂತುಗಳು, ಮತ್ತು ಸ್ಪಷ್ಟಗೊಳಿಸುವ ಅಂಗಗಳು. ಶ್ವಾಸಕೋಶವು ಪಂಪ್‍ನಂತೆ ಕಾರ್ಯನಿರ್ವಹಿಸುತ್ತದೆ. ಇದು ಧ್ವನಿತಂತುಗಳನ್ನು ಕಂಪಿಸಲು ಸಾಕಷ್ಟು ಪ್ರಮಾಣದ ಗಾಳಿಹರಿವು ಮತ್ತು ಗಾಳಿ ಒತ್ತಡವನ್ನು ಉತ್ಪತ್ತಿ ಮಾಡಬೇಕು. ಧ್ವನಿತಂತುಗಳು ನಂತರ ಶ್ವಾಸಕೋಶಗಳಿಂದ ಬಿಡುಗಡೆಯಾದ ಗಾಳಿಹರಿವನ್ನು ಬಳಸಲು ಕಂಪಿಸುತ್ತವೆ. ಇದರಿಂದ ಶ್ರವ್ಯ ಕಂಪನಗಳ ಸೃಷ್ಟಿಯಾಗುತ್ತದೆ. ಇವು ಗಂಟಲಗೂಡು ಜನ್ಯ ಶಬ್ದ ಮೂಲವನ್ನು ರೂಪಿಸುತ್ತವೆ.[೧] ಗಂಟಲಗೂಡಿನ ಸ್ನಾಯುಗಳು ಸ್ಥಾಯಿ ಮತ್ತು ಉಚ್ಚಾರದ ಮಟ್ಟವನ್ನು ನಯವಾಗಿ ಶ್ರುತಿ ಮಾಡಲು ಧ್ವನಿತಂತುಗಳ ಉದ್ದ ಮತ್ತು ಬಿಗಿತವನ್ನು ಹೊಂದಾಣಿಕೆ ಮಾಡುತ್ತವೆ. ಸ್ಪಷ್ಟಗೊಳಿಸುವ ಅಂಗಗಳು (ನಾಲಿಗೆ, ಅಂಗುಳ, ಕೆನ್ನೆ, ತುಟಿಗಳು ಇತ್ಯಾದಿಗಳನ್ನು ಒಳಗೊಂಡಿರುವ ಗಂಟಲಗೂಡಿನ ಮೇಲಿನ ಧ್ವನಿವ್ಯೂಹದ ಭಾಗಗಳು) ಹೊರಹೊಮ್ಮಿದ ಶಬ್ದವನ್ನು ಸ್ಪಷ್ಟಗೊಳಿಸಿ ಶೋಧಿಸುತ್ತವೆ. ಇವುಗಳು ಸ್ವಲ್ಪಮಟ್ಟಿಗೆ ಗಂಟಲಗೂಡು ಜನ್ಯ (ಶಬ್ದಮೂಲವಾಗಿ ಅದನ್ನು ಬಲಗೊಳಿಸಲು ಅಥವಾ ದುರ್ಬಲಗೊಳಿಸಲು) ಗಾಳಿಹರಿವಿನೊಂದಿಗೆ ಪರಸ್ಪರ ಕ್ರಿಯೆ ನಡೆಸಬಲ್ಲವು.
ಧ್ವನಿತಂತುಗಳು, ಸ್ಪಷ್ಟಗೊಳಿಸುವ ಅಂಗಗಳ ಸಂಯೋಜನೆಯಲ್ಲಿ, ಅತಿ ಸಂಕೀರ್ಣ ಶಬ್ದ ಶ್ರೇಣಿಗಳನ್ನು ಉತ್ಪತ್ತಿ ಮಾಡುವಲ್ಲಿ ಸಮರ್ಥವಾಗಿವೆ. ಕೋಪ, ಆಶ್ಚರ್ಯ, ಭಯ, ಸುಖ ಅಥವಾ ದುಃಖದಂತಹ ಭಾವನೆಗಳನ್ನು ಸೂಚಿಸಲು ಧ್ವನಿಯ ಉಚ್ಚಾರದ ಮಟ್ಟವನ್ನು ಮಾರ್ಪಡಿಸಬಹುದು. ಮಾನವ ಧ್ವನಿಯನ್ನು ಭಾವನೆಯನ್ನು ವ್ಯಕ್ತಪಡಿಸಲು ಬಳಸಲಾಗುತ್ತದೆ. ಇದು ವಕ್ತೃನ ವಯಸ್ಸು ಮತ್ತು ಲಿಂಗವನ್ನು ಕೂಡ ಬಹಿರಂಗಗೊಳಿಸಬಹುದು. ಗಾಯಕರು ಸಂಗೀತವನ್ನು ಸೃಷ್ಟಿಸುವ ಸಾಧನವಾಗಿ ಮಾನವ ಧ್ವನಿಯನ್ನು ಬಳಸುತ್ತಾರೆ.
ವಯಸ್ಕ ಪುರುಷರು ಮತ್ತು ಮಹಿಳೆಯರು ಸಾಮಾನ್ಯವಾಗಿ ಧ್ವನಿತಂತುವಿನ ಭಿನ್ನ ಗಾತ್ರಗಳನ್ನು ಹೊಂದಿರುತ್ತಾರೆ. ಇದು ಗಂಡು-ಹೆಣ್ಣಿನ ಗಂಟಲಗೂಡಿನ ಗಾತ್ರದಲ್ಲಿನ ವ್ಯತ್ಯಾಸಗಳನ್ನು ಪ್ರತಿಬಿಂಬಿಸುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ "About the voice". www.lionsvoiceclinic.umn.edu. Retrieved 2018-02-08.