ಓಂಕಾರೇಶ್ವರ ದೇವಸ್ಥಾನ, ಮಡಿಕೇರಿ

ಓಂಕಾರೇಶ್ವರ ದೇವಸ್ಥಾನವು ದಕ್ಷಿಣ ಭಾರತಕರ್ನಾಟಕ ರಾಜ್ಯದ ನೈಋತ್ಯಕ್ಕಿರುವ ಕೊಡಗು ಜಿಲ್ಲೆಯ ಮುಖ್ಯ ಪಟ್ಟಣವಾದಮಡಿಕೇರಿಯಲ್ಲಿದೆ.

ಇತಿಹಾಸ ಮತ್ತು ವಾಸ್ತುಶಾಸ್ತ್ರಸಂಪಾದಿಸಿ

ಕೊಡಗಿನ ರಾಜನಾಗಿದ್ದ ಎರಡನೇ ಲಿಂಗರಾಜನು ಇದನ್ನು ೧೮೧೭-೧೮೨೦ರಲ್ಲಿ ಕಟ್ಟಿಸಿದನು. ಇದರಲ್ಲಿರುವ ಶಿವಲಿಂಗವನ್ನು ಕಾಶಿಯಿಂದ ತರಿಸಲಾಗಿದೆ. ಇಲ್ಲಿರುವ ನಂದಾದೀಪವನ್ನು ಲಿಂಗ ಪ್ರತಿಷ್ಠಾಪನೆಯ ದಿನದಲ್ಲಿ ಹಚ್ಚಲಾಗಿದ್ದು ಅಂದಿನಿಂದ ಇಂದಿನವರೆಗೂ ಉರಿಯುತ್ತಲಿದೆಯಂತೆ. ಇದು ಹೀಗಿರುವದಕ್ಕೆ ದೀಪದಲ್ಲಿರುವ ಎಣ್ಣೆ ಅಥವಾ ತುಪ್ಪದ ಪ್ರಮಾಣ, ಬತ್ತಿಯ ಗಾತ್ರ ಮತ್ತು ಉದ್ದ, ಗರ್ಭಗೃಹದಲ್ಲಿ ದೀಪವನ್ನಿಟ್ಟಿರುವ ಸ್ಥಳ, ಮುಂತಾದವುಗಳ ಬಗ್ಗೆ ಕೆಲವು ನಿಯಮಗಳಿದ್ದು, ಅವುಗಳನ್ನು ಅಕ್ಷರಶಃ ಪಾಲಿಸಲಾಗಿದೆ. ಮಹಮ್ಮದೀಯ ಶೈಲಿಯಲ್ಲಿರುವ ಈ ದೇವಸ್ಥಾನವು ಚೌಕಾಕಾರದಲ್ಲಿದೆ. ಮಧ್ಯದಲ್ಲಿ ಗಾರೆಯಲ್ಲಿ ಮಾಡಲಾಗಿರುವ ಗೋಳಾಕೃತಿಯ ಗುಮ್ಮಟದ ಶಿಖರದಲ್ಲಿ ಚಿನ್ನದ ಲೇಪವಿರುವ ತಗಡಿನ ಕಳಶವಿದೆ. ದೇವಸ್ಥಾನದ ನಾಲ್ಕು ದಿಕ್ಕುಗಳಲ್ಲಿ ಪ್ರಾಕಾರವಿದೆ. ಇದಕ್ಕೂ ಗರ್ಭಗೃಹಕ್ಕೂ ನಡುವೆ ಚಪ್ಪಡಿಕಲ್ಲು ಹಾಸಿದ ಅಂಗಣವಿದೆ. ದೇವಸ್ಥಾನದ ಎದುರಿನಲ್ಲಿ ಒಂದು ಪುಷ್ಕರಿಣಿಯಿದೆ. ಇದರ ನಡುಭಾಗದಲ್ಲೊಂದು ಮುಖಮಂಟಪವಿದೆ. ಇದನ್ನು ಸೇರಲು ದೇವಸ್ಥಾನದ ಮುಂಭಾಗದಿಂದ ಒಂದು ಕಿರಿದಾದ ಸೇತುಬಂಧವಿದೆ. ಪುಷ್ಕರಿಣಿಯ ಸುತ್ತಲೂ ಕಲ್ಲು ಹಾಸಿದ ಪ್ರಾಂಗಣವಿದೆ.

ನಿರ್ಮಾಣದ ಹಿಂದಿನ ಕಥೆಸಂಪಾದಿಸಿ

ಈ ದೇವಸ್ಥಾನದ ನಿರ್ಮಾಣದ ಹಿಂದೆ ಒಂದು ಕತೆಯಿದೆ. ಕೊಡಗನ್ನು ಆಳುತ್ತಿದ್ದ ಬಹುತೇಕ ಲಿಂಗಾಯತ ರಾಜರು ತಮ್ಮ ಕಣ್ಣಿಗೆ ಬಿದ್ದ ಸುಂದರ ಯುವತಿಯರನ್ನು ಯಾವ ಅಡೆತಡೆಯೂ ಇಲ್ಲದೆ ತಮ್ಮ ಅಂತಃಪುರಕ್ಕೆ ಸೇರಿಸಿಕೊಳ್ಳುತ್ತಿದ್ದರು. ಇದನ್ನು ವಿರೋಧಿಸಿದವರು ಯಾರಾದರೂ ಸರಿಯೇ, ಅವರು ತಮ್ಮ ಹಿತೈಷಿಗಳೇ ಇರಲಿ, ತಮ್ಮನ್ನು ಕಷ್ಟದಿಂದ ಪಾರುಮಾಡಿದವರೇ ಇರಲಿ, ಪುರುಷ-ಸ್ತ್ರೀಯೆಂಬ ಭೇದವೆಣಿಸದೆ, ಬಾಲಕ, ತರುಣ, ಮುದುಕರೆಂಬುದನ್ನು ಲೆಕ್ಕಿಸದೆ, ಅವರನ್ನು ನಿಷ್ಕಾರುಣ್ಯದಿಂದಲೂ ಕ್ರೌರ್ಯದಿಂದಲೂ ಕೊಲ್ಲುತ್ತಿದ್ದರು. ೧೮೧೧ರಿಂದ ೧೮೨೦ರವರೆಗೆ ಆಳಿದ ಎರಡನೇ ಲಿಂಗರಾಜನೂ ಇದಕ್ಕೆ ಅಪವಾದವಾಗಿರಲಿಲ್ಲ.

೧೮೧೭ನೇ ಇಸವಿಯ ವೈಶಾಖ ತಿಂಗಳ ಒಂದು ದಿನ ಮಂಗಳೂರಿನಿಂದ ಮಡಿಕೇರಿಗೆ ಬರುವ ಮಾರ್ಗದಲ್ಲಿ ಮಡಿಕೇರಿಯ ಸಮೀಪ ಕುಂದೂರು ಮೊಟ್ಟೆ ಎನ್ನುವಲ್ಲಿ ಒಬ್ಬ ವೃದ್ಧನು ಸುಂದರ ನವತರುಣಿಯೊಬ್ಬಳೊಡನೆ ನಡೆದುಕೊಂಡು ಬರುತ್ತಿದ್ದನು. ಅದೇ ಹೊತ್ತಿನಲ್ಲಿ ಅರಮನೆ ಜ್ಯೋತಿಷಿಯಾದ ನಡುವಯಸ್ಸಿನ ಸುಬ್ಬರಸೈಯ್ಯನು ರಾಜಾಸೀಟಿನ ಕೆಳಭಾಗದಲ್ಲಿ ತಾಳತ್ಮನೆಗೆ ಹೋಗುವ ಗುಡ್ಡವನ್ನಿಳಿದುಕೊಂಡು ಅವರಿಬ್ಬರ ಎದುರು ಬಂದ. ಅವರಿಬ್ಬರ ಉಡುಗೆ-ತೊಡುಗೆ, ವೃದ್ಧನ ಹಣೆಯ ಮೇಲಿದ್ದ ಗಂಧದ ಗೆರೆಗಳನ್ನು ಗಮನಿಸಿದ ಸುಬ್ಬರಸೈಯ್ಯನು ಇವರೂ ತನ್ನಂತೆಯೇ ಹವ್ಯಕ ಬ್ರಾಹ್ಮಣರೆಂದು ಅರಿತು, ಅವರೆಲ್ಲಿಂದ ಬರುತ್ತಿರುವರು ಮತ್ತು ಎಲ್ಲಿಗೆ ಹೋಗುತ್ತಿರುವರು ಎಂದು ಪ್ರಶ್ನಿಸಿದ. ಮುದುಕನು ತಾವು ಪುತ್ತೂರಿನಿಂದ ಬರುತ್ತಿದ್ದೇವೆ. ಕಿತ್ತು ತಿನ್ನುತ್ತಿರುವ ಬಡತನವನ್ನು ತಾಳಲಾರದೆ ತನ್ನ ಒಬ್ಬಳು ಮಗಳನ್ನು ರಾಜನ ಅಂತಃಪುರಕ್ಕೆ ಸೇರಿಸಿ, ಆ ಮೂಲಕ ರಾಜನಿಂದ ಹಣ-ಹೊನ್ನುಗಳನ್ನು ಪಡೆಯಲು ಇಚ್ಚಿಸಿರುವದಾಗಿ ತಿಳಿಸಿದ. ಇದನ್ನು ಕೇಳಿದ ಸುಬ್ಬರಸೈಯ್ಯನಿಗೆ ಅಪಾರವಾದ ದುಃಖವಾಯಿತು. ಅವರಿಬ್ಬರನ್ನೂ ತನ್ನ ಮನೆಗೆ ಕರೆದೊಯ್ದು, ಊಟೋಪಚಾರಗಳನ್ನು ಮಾಡಿಸಿ, ತಿಳಿಹೇಳಿ, ರಾಜನ ಕಾಮಪಿಪಾಸೆಗೆ ಹಣದಾಸೆಯಿಂದ ತನ್ನ ಮಗಳನ್ನು ಬಲಿಕೊಡದಿರಲು ಬುದ್ಧಿಹೇಳಿ, ಸ್ವಲ್ಪ ಹಣವನ್ನು ಕೊಟ್ಟು, ಅವರಿಬ್ಬರನ್ನೂ ಹಿಂದಕ್ಕೆ ಕಳುಹಿಸಿಬಿಟ್ಟನು.

ಈ ಸಮಯದಲ್ಲಿ ಲಿಂಗರಾಜನು ಮಡಿಕೇರಿಯ ಹೊರಗಿದ್ದು, ಒಂದೆರಡು ದಿನಗಳ ತರುವಾಯ ಹಿಂತಿರುಗಿದನು. ಮರುದಿನವೇ ಅವನ ಗುಪ್ತಚಾರರು ವೃದ್ಧ ಮತ್ತವನ ಸುಂದರಿಯಾದ ಮಗಳು ಬಂದಿದ್ದನ್ನೂ, ಅವರ ಉದ್ದೇಶವನ್ನೂ, ಅವರನ್ನು ಹಿಂತಿರುಗಿಸಿ ಅವರ ಊರಿಗೇ ಸುಬ್ಬರಸೈಯ್ಯನು ಕಳುಹಿಸಿಬಿಟ್ಟದ್ದನ್ನೂ ರಾಜನಿಗೆ ತಿಳಿಸಿದರು. ಕ್ರುದ್ಧನಾದ ರಾಜನು ತತ್ಕ್ಷಣವೇ ತನ್ನ ಸೇವಕರಲ್ಲಿ ಅತ್ಯಂತ ಕ್ರೂರಿಗಳೆಂದು ಕುಖ್ಯಾತರಾಗಿದ್ದ ಸಿದ್ಧಿಗಳನ್ನು ಓಡಿಸಿ ಸುಬ್ಬರಸೈಯ್ಯನನ್ನು ಎಳೆತರಿಸಿದನು. ರಾಜನು ಆ ಹುಡುಗಿಯನ್ನು ಕರೆತಂದು ಒಪ್ಪಿಸಲು ಆಜ್ಞಾಪಿಸಿದಾಗ ಸುಬ್ಬರಸೈಯ್ಯನು ಸಮ್ಮತಿಸದಿರಲು ಅವನನ್ನು ಚಿತ್ರಹಿಂಸೆಗೀಡುಮಾಡಿದನು. ಅದನ್ನು ತಾಳಲಾರದೆ ಆ ಬ್ರಾಹ್ಮಣನು ಸತ್ತುಹೋದನು. ರಾಜನಿಗಿದು ಅನಿರೀಕ್ಷಿತವಾಗಿತ್ತು. ಆ ಹುಡುಗಿ ತಪ್ಪಿಹೋದ ಅಸಹನೆ ಒಂದಾದರೆ ತನ್ನ ಆಜ್ಞೆಯನ್ನು ಲೆಕ್ಕಿಸದ ಆಸ್ಥಾನ ಜ್ಯೋತಿಷಿಯ ಮೇಲಿನ ಕೋಪವಿನ್ನೊಂದು ಕಡೆ. ಮೇಲಾಗಿ ಚಿತ್ರಹಿಂಸೆಗೆ ಜಗ್ಗುವನೆಂಬ ತನ್ನೆಣಿಕೆ ತಪ್ಪಿ ಪ್ರಾಣ ತೆತ್ತ ಬ್ರಾಹ್ಮಣ. ರಾಜನ ಬೆನ್ನು ಹುರಿಯಲ್ಲಿ ನಡುಕವುಂಟಾಯಿತು.

ಅಂದು ರಾತ್ರಿಯಿಂದ ರಾಜನಿಗೆ ಸುಬ್ಬರಸೈಯ್ಯನು ಭೂತವಾಗಿ ತನ್ನನ್ನು ಕಾಡುತ್ತಿರುವಂತೆ ಭಾಸವಾಗತೊಡಗಿತು. ಅನ್ನ-ನೀರು ಸೇರದಾಯಿತು; ರಾತ್ರಿ ನಿದ್ದೆ ಬಾರದಾಯಿತು. ಎಲ್ಲಾ ರೀತಿಯ ಭೂತೋಚ್ಚಾಟನೆಯ ಕ್ರಮಗಳೂ ನಿಷ್ಫಲವಾದವು. ಕೊನೆಗೆ ಕರಣಿಕ ಸುಬ್ಬಯ್ಯನೂ ಇತರ ಹಿತೈಷಿಗಳೂ ಸಲಹೆ ನೀಡಿದ ಹಾಗೆ ದಕ್ಷಿಣ ಕನ್ನಡದ ನೀಲೇಶ್ವರದಿಂದ ತಂತ್ರಿಗಳನ್ನು ಕರೆಸಲಾಯಿತು. ಅವರು ಸುಬ್ಬರಸೈಯ್ಯನು ಬ್ರಹ್ಮರಾಕ್ಷಸನಾಗಿದ್ದು ಅವನಿಗೆ ನೆಲೆ ಕಲ್ಪಿಸಲು, ಅವನಿದ್ದ ಮನೆಯ ಸ್ಥಳದಲ್ಲೇ ಒಂದು ಶಿವಾಲಯವನ್ನು ನಿರ್ಮಿಸಿ, ಕಾಶಿಯಿಂದ ಶಿವಲಿಂಗವನ್ನು ತಂದು ಪ್ರತಿಷ್ಠಾಪಿಸಿ, ಬ್ರಹ್ಮರಾಕ್ಷಸನ ನಿಶಾಸಂಚಾರಕ್ಕೆ ಮಾರ್ಗವನ್ನು ನಿಗದಿಪಡಿಸಬೇಕೆಂದು ಹೇಳಿದರು.

ಅದೇ ರೀತಿ ೧೮೧೭ನೇ ಮೇ ತಿಂಗಳ ಕೊನೆಯಲ್ಲಿ ಅರಮನೆಯ ಪೂರ್ವ ದಿಕ್ಕಿನ ತಗ್ಗಿನಲ್ಲಿ ಸುಬ್ಬರಸೈಯ್ಯನ ಮನೆಯಿದ್ದಲ್ಲಿ ಈಶ್ವರನ ದೇವಸ್ಥಾನವನ್ನು ಕಟ್ಟಿಸಲು ಪ್ರಾರಂಭಿಸಲಾಯಿತು. ೧೮೨೦ರ ಫೆಬ್ರವರಿಯಲ್ಲಿ ನಿರ್ಮಾಣ ಮುಗಿಯುವಷ್ಟರಲ್ಲಿ ಕಾಶಿಯಿಂದ ಶಿವಲಿಂಗವನ್ನು ತರಿಸಲಾಗಿ, ಅದನ್ನು ಆ ವರ್ಷದ ಮಾರ್ಚ್ ಇಪ್ಪತ್ತಾರರಂದು, ಅಂದರೆ ಕಲಿಸಂದ ೪೯೨೨ನೇ ವಿಕ್ರಮ ಸಂವತ್ಸರದ ಚೈತ್ರ ಶುದ್ಧ ದ್ವಾದಶಿಯಂದು ಓಂಕಾರಲಿಂಗವೆಂಬ ಹೆಸರಿನಲ್ಲಿ ಪ್ರತಿಷ್ಠಾಪಿಸಲಾಯಿತು. ಈ ಕುರಿತು ಒಂದು ತಾಮ್ರಶಾಸನವನ್ನು ಗರ್ಭಗುಡಿಯ ಬಾಗಿಲ ಮೇಲೆ ರಾಜನು ಇಡಿಸಿದನು.[೧]

ಉಲ್ಲೇಖಗಳುಸಂಪಾದಿಸಿ

  1. ಕೊಡಗಿನ ಇತಿಹಾಸ, ಡಿ ಎನ್ ಕೃಷ್ಣಯ್ಯ, ಮೈ ವಿ ವಿ , ೧೯೭೫