ಒಳಮಾಳಿಗೆ : ಮಾಳಿಗೆಯ ಒಳ ಭಾಗಕ್ಕೆ ಈ ಹೆಸರಿದೆ (ಸೀಲಿಂಗ್), ಒಳ ಎಂದರೆ ಮನೆಯ ಒಂದು ಕೊಠಡಿಯಲ್ಲಿ ನಿಂತು ಮೇಲೆ ನೋಡಿದರೆ ಕಾಣುವ ಸೂರಿನ ಒಳಭಾಗ ಎಂದರ್ಥ. ಎಂದರೆ ಪೂರ್ವಕಾಲದಲ್ಲಿ ಮರದ ತೀರುಗಳನ್ನೆಳೆದು ಅವುಗಳ ಮೇಲೆ ಮರದ ಮಾಡನ್ನು ಕಟ್ಟುತ್ತಿದ್ದಾಗ ತೀರುಗಳು ಒಳಗಿನಿಂದ ಕಾಣದ ಹಾಗೆ ಮುಚ್ಚುವುದಕ್ಕಾಗಿ ಒಳಮಾಳಿಗೆಗಳನ್ನು ಮಟ್ಟವಾಗಿ ಮರದ ಹಲಗೆಗಳಿಂದ ಮಾಡುತ್ತಿದ್ದರು. ಈಚೆಗೆ ಉಕ್ಕಿನ ಸರಕಟ್ಟುಗಳಿಂದ ಮಾಡಿದ ಮಾಡಿನ ಕೆಳಗೂ ಇಂಥ ಒಳಮಾಳಿಗೆಗಳು ಅವಶ್ಯವಾಗುತ್ತಿವೆ. ಇವು ಕೇವಲ ಉಪಯೋಗಕ್ಕಾಗಿ ಮಾಡಿದ ಸರಳವಾದ ಒಳಮಾಳಿಗೆಗಳು. ಪುರಾತನ ಕಾಲದಿಂದಲೂ ದೇವಾಲಯಗಳಲ್ಲಿಯೂ ಅರಮನೆಗಳಲ್ಲಿಯೂ ಒಳಮಾಳಿಗೆಗೆ ಬಣ್ಣ ಬಳಿದೋ ಇಲ್ಲವೆ ನಯವಾದ ಶಿಲ್ಪದ ಆಕೃತಿಗಳನ್ನು ಕಲ್ಲಿನಿಂದ ಕೊರೆದು ನಿಲ್ಲಿಸಿಯೋ ಬಗೆಬಗೆಯಾಗಿ ಅಲಂಕಾರ ಮಾಡುವ ವಾಡಿಕೆ ಇದೆ. ಈಜಿಪ್ಟಿನಲ್ಲಿ ಥೀಬ್ಸ್‌ ಮೊದಲಾದ ಕಡೆಗಳಲ್ಲಿ ಐಗುಪ್ತ ದೇವಾಲಯಗಳಲ್ಲಿಯೂ ಗೋರಿಗಳಲ್ಲಿಯೂ ಆಕಾಶದ ಪ್ರತೀಕವಾಗಿ (ಸಿಂಬಲ್) ಒಳಮಾಳಿಗೆಯನ್ನು ನಿರ್ಮಿಸಿದ್ದಾರೆ. ಯವನರು ಅಥೆನ್ಸಿನಲ್ಲಿ ದೇವಸ್ಥಾನಗಳ ಮುಖಮಂಟಪಗಳ ಮೇಲೆ ಅಮೃತಶಿಲೆಯ ಒಳಮಾಳಿಗೆಗಳಲ್ಲಿ ಗೋಡೆಗಳ ಅಂಚಿನಲ್ಲಿ ಗೋಲು ಕೆಲಸವನ್ನು ಮಾಡಿ, ನಡುವಿನಲ್ಲಿ ಎತ್ತರಿಸಿದ ಪುಟೀಪುಗಳಿಂದ ಅಲಂಕರಿಸುತ್ತಿದ್ದರು. ರೋಮನ್ನರ ಕಾಲದಲ್ಲಿ ಮನೆಗಳಲ್ಲಿಯೂ ಒಳಮಾಳಿಗೆಗಳಿಗೆ ಲಕ್ಷಣವಾಗಿ ಬಣ್ಣ ಹಾಕುತ್ತಿದ್ದರು.

ಒಳಮಾಳಿಗೆ
ಬೇಲೂರಿನ ಚನ್ನಕೇಶವ ದೇವಾಲಯ

ಭಾರತದ ಪುರಾತನ ದೇವಾಲಯಗಳಲ್ಲಿ ಎಲ್ಲೆಲ್ಲಿಯೂ ಕಾಣ ಬರುವ ಒಳಮಾಳಿಗೆಗಳು ಮೂರ್ತಿ ಹಾಗೂ ಚಿತ್ರ ಶಿಲ್ಪದಿಂದ ತುಂಬಿ ವಿಶಿಷ್ಟವಾದ ಕಲಾಕೃತಿಗಳಾಗಿವೆ. ಇಲ್ಲಿ ಯಾವ ಬಣ್ಣವನ್ನೂ ಉಪಯೋಗಿಸಿಲ್ಲ. ಹೊಯ್ಸಳ ಶೈಲಿಯ ದೇವಾಲಯಗಳಲ್ಲಿ ಹೊರಗೋಡೆಗಳ ಮೇಲೂ ಕಂಬಗಳ ಮೇಲೂ ಕಾಣಬರುವ ಅನ್ಯಾದೃಶವಾದ ಶಿಲ್ಪಕೌಶಲವೇ ಈ ಒಳಮಾಳಿಗೆಗಳ ಮೇಲೂ ಕಾಣಬರುತ್ತದೆ. ಚಿತ್ರವಿಚಿತ್ರವಾದ ಕಂಬಗಳ ಮೇಲೆ ಕೆತ್ತನೆಯ ಕೆಲಸ ಮಾಡಿದ ತೊಲೆಗಳು, ನಾಲ್ಕು ತೊಲೆಗಳ ನಡುವಣ ಅಂಕಣಗಳಲ್ಲಿ ಬಗೆಬಗೆಯ ಸಂವಿಧಾನಗಳು-ಹೀಗೆ ಒಳಮಾಡುಗಳ ಕೆಳಭಾಗದಲ್ಲಿ ಕಾಣುವ ಕಲೆಯ ವೈವಿಧ್ಯ ಆಶ್ಚರ್ಯಕರವಾಗಿದೆ. ಬೇಲೂರಿಚನ್ನಕೇಶವ ದೇವಾಲಯದ ಹಜಾರದ ಒಳಮಾಳಿಗೆಗಳಲ್ಲಿ ಒಂದೊಂದು ಅಂಕಣದಲ್ಲಿ ಒಂದೊಂದು ಬಗೆಯ ಶಿಲ್ಪಕಲೆಯ ವಿನ್ಯಾಸವನ್ನು ಕಾಣಬಹುದು. ಗರ್ಭಗುಡಿಯ ಮುಂದಿನ ನಡುವಣ ಅಂಕಣದ ಒಳಮಾಳಿಗೆಯಿಂದ ಕೆಳಕ್ಕೆ ಮಧ್ಯದಲ್ಲಿ ಕಲ್ಲಿನ ದಿಂಡನ್ನು ಇಳಿಯಬಿಟ್ಟು ಅದರ ಸುತ್ತಲೂ ಅಲ್ಲದೆ ನಡುವೆಯೂ ವಿಗ್ರಹಗಳನ್ನು ಕೊರೆದಿದ್ದಾರೆ. ಈ ಲಂಬಕದ ಕೆಳಮುಖದಲ್ಲಿ ನಯವಾಗಿ ದೇವತಾ ವಿಗ್ರಹಗಳನ್ನು ಬಿಡಿಸಿದ್ದಾರೆ. ಇದೇ ರೀತಿಯ ಅಲಂಕಾರವನ್ನು ಹಳೇಬೀಡು, ಸೋಮನಾಥಪುರ ಮೊದಲಾದ ಕಡೆಗಳಲ್ಲಿ ಇರುವ ದೇವಾಲಯಗಳ ಒಳಮಾಡುಗಳಲ್ಲೂ ಕಾಣಬಹುದು.

ಯುರೋಪಿನ ಗಾಥಿಕ್ ಚರ್ಚುಗಳಲ್ಲಿ ಅಡ್ಡತೊಲೆಗಳ ಕೆಳಗಡೆ ವರ್ಣರಂಜಿತವಾದ ನಯಗೆಲಸವನ್ನು ಮಾಡುತ್ತಿದ್ದರು. ಇಟಲಿಯ ಕಲೆಯ ಪುನರುಜ್ಜೀವನದ ಕಾಲದ ಶಿಲ್ಪಿಗಳು ನಯಗಾರೆಯಿಂದ ರಮಣೀಯವಾದ ಮಾದರಿಗಳಲ್ಲಿ ಒಳಮಾಳಿಗೆಗಳನ್ನು ಮಾಡಿ ಮನೋಹರವಾದ ಬಣ್ಣಗಳಿಂದ ಅಲಂಕರಿಸುತ್ತಿದ್ದರು. ಈ ಒಳಮಾಳಿಗೆಗಳಲ್ಲಿ ಮೂರು ನಮೂನೆಗಳನ್ನು ಕಾಣಬಹುದು. ಒಂದು ನಮೂನೆಯಲ್ಲಿ ಚೌಕವಾದ, ಎಂಟು ಮೂಲೆಗಳ, ಇಲ್ಲವೆ ಗುಂಡಾದ ಉಬ್ಬಾದ ಪುಟೀಪುಗಳನ್ನು ಮಾಡಿ ಅಂಚುಗಳಲ್ಲಿ ವಿಶೇಷವಾಗಿ ಅಲಂಕಾರ ಮಾಡುತ್ತಿದ್ದರು. ಎರಡನೆಯ ನಮೂನೆಯಲ್ಲಿ ಕಮಾನು ಚಾವಣಿಯನ್ನು (ವಾಲ್ಟ್‌) ಕಟ್ಟಿ ನಡುವೆ ಚಿತ್ರಗಳಿಂದ ತುಂಬುತ್ತಿದ್ದರು. ಮೂರನೆಯ ನಮೂನೆ ವೆನಿಸ್ ನಗರದ ವಿಶೇಷ ರಚನೆ. ಅಲ್ಲಿ ಒಳಮಾಳಿಗೆ ಒಂದು ಚೌಕಟ್ಟನ್ನು ಹಾಕಿದ ಚಿತ್ರದ ಹಾಗಿತ್ತು. ರ್ಯಾಫೆಲ್, ವೆರೋನೀಸ್ ಮೊದಲಾದ ಪ್ರಖ್ಯಾತ ಚಿತ್ರಗಾರರು ಅರಮನೆಗಳ ಒಳಮಾಳಿಗೆಗಳಲ್ಲಿ ಚಿತ್ರಗಳನ್ನು ಬರೆಯುತ್ತಿದ್ದರು. ಇಂಗ್ಲೆಂಡಿನಲ್ಲಿ ವೈಟ್ಹಾಲಿನ ಭೋಜನ ಶಾಲೆಯ ಮಾಳಿಗೆಗೆ ರ್ಯೂಬಿನ್ಸ್‌ ಈ ಬಗೆಯ ಅಲಂಕಾರವನ್ನು ಮಾಡಿದ. ಬಣ್ಣಬಣ್ಣದ ಎಲೆಗಳು ಮತ್ತು ಹೂಗಳಿಂದ ಅಲಂಕೃತವಾದ ನಯಗಾರೆಯ ಒಳಮಾಳಿಗೆಗಳು ಇಂಗ್ಲೆಂಡಿನಲ್ಲಿ ಸಾಮಾನ್ಯವಾಗಿದ್ದವು. ಅಮೆರಿಕದ ಸಂಯುಕ್ತ ಸಂಸ್ಥಾನದಲ್ಲಿ ನೆಬ್ರಾಸ್ಕ ಸಂಸ್ಥಾನದ ರಾಜಧಾನಿಯಲ್ಲಿ ಒಳಮಾಳಿಗೆಗಳಿಗೆ ಬಣ್ಣಗಳನ್ನು ಹಾಕಿ ಅಲಂಕಾರ ಮಾಡಿದ್ದಾರೆ.

ಆಧುನಿಕ ನಿರ್ಮಾಣ ಕಲೆಯಲ್ಲಿ ಒಳಮಾಳಿಗೆಗಳು ಬಹಳ ಸರಳವಾಗುತ್ತವೆ. ಪ್ರಬಲಿತ ಕಾಂಕ್ರೀಟಿನ ಮಟ್ಟವಾದ ಮಾಡು ಬಂದ ಮೇಲಂತೂ ಪ್ರತ್ಯೇಕವಾದ ಒಳಮಾಡೇ ಇಲ್ಲವಾಗಿದೆ. ಮಾಳಿಗೆಯ ಅಂಚಿನಲ್ಲಿ ತೆಳುವಾದ ಕಾರ್ನೀಸ್, ನಡುವೆ ಕೊಂಚ ಬಣ್ಣದ ವಿನ್ಯಾಸ ಇಷ್ಟರಲ್ಲಿ ಒಳಮಾಳಿಗೆಯ ಅಲಂಕಾರ ಮುಕ್ತಾಯವಾಗುತ್ತಿದೆ. ಇದಕ್ಕೆ ಬದಲಾಗಿ ಕೊಠಡಿಗಳ ಒಳಗೋಡೆಗಳ ಮೇಲೂ ಮನೆಯ ಹೊರಭಾಗದ ಗೋಡೆಯ ಮೇಲೂ ಬಣ್ಣಗಳಿಂದ ಮಾಡುವ ಅಲಂಕಾರ ರೂಢಿಗೆ ಬರುತ್ತಿದೆ. (ಎಚ್.ಸಿ.ಕೆ.; ಎಂ.ಜಿ.ಎಸ್.) [೧]

ಉಲ್ಲೇಖಗಳು ಬದಲಾಯಿಸಿ

  1. http://www.diynetwork.com/how-to/rooms-and-spaces/walls-and-ceilings/all-about-ceiling-and-wall-construction