ಹೆಚ್ಚು ಗಡುಸಲ್ಲದ ಈ ಶಿಲೆಯನ್ನು ಭೂಮಿಯಿಂದ ಹಲಗೆಗಳಾಗೂ ದಿಮ್ಮಿಗಳಾಗೂ ಸೀಳಿ ತೆಗೆಯಬಹುದು. ಗರಗಸದಿಂದ ಕೊಯ್ದು ಬೇಕಾದ ಅಳತೆಗಳನ್ನು ಪಡೆಯಬಹುದು. ಸಾಣೆ ಹಿಡಿದು ತುಂಬ ನಯವಾಗಿ ಹೊಳೆಯುವಂತೆ ಮಾಡಬಹುದು. ಇದು ಒಳ್ಳೆ ಅಲಂಕಾರದ ಕೆತ್ತನೆ ಕೆಲಸಕ್ಕೆ ಉಪಯುಕ್ತವಾದುದು.
ಶುದ್ಧ ಸುಣ್ಣಕಲ್ಲು ರೂಪಾಂತರಗೊಂಡು ಬಿಳಿಯ ಅಮೃತಶಿಲೆಯಾಗಿ ಮಾರ್ಪಡುತ್ತದೆ. ಅಶುದ್ಧ ಸುಣ್ಣಕಲ್ಲು ಮತ್ತು ಡಾಲೊಮೈಟುಗಳಿಂದ ಬಗೆಬಗೆಯ ಬಣ್ಣದ ಅಮೃತಶಿಲೆಗಳಾಗುತ್ತವೆ. ಬಣ್ಣದ ಹರಲು ಮತ್ತು ಸ್ವಭಾವ ಮೂಲ ಕಶ್ಮಲಗಳನ್ನು ಅನುಸರಿಸಿವೆ. ಬೂದು. ನೀಲಿಬೂದು, ಹಳದಿ, ಕಂದು ಬಣ್ಣ, ಕೆಂಪುಹಸಿರು, ಹಸಿರುಕಪ್ಪು ಈ ರೀತಿ ಬಣ್ಣಗಳು ಬಗೆಬಗೆಯಾಗಿವೆ. ಗಣನೀಯವಾದ ಅಮೃತಶಿಲಾಭೇದಗಳಾವುವೆಂದರೆ ವಿಗ್ರಹಗಳನ್ನು ಕಡೆಯಲು ಯೋಗ್ಯವಾದ ಅಮೃತಶಿಲೆ ಮತ್ತು ಸೂಕ್ಷ್ಮವಾದ ಹೆಣಿಗೆಯುಳ್ಳ ಶುದ್ಧಬಿಳಿಯ ಶಿಲೆ. ಕಟ್ಟಡಗಳಿಗೆ ಯೋಗ್ಯವಾದ ಬಣ್ಣ ಮತ್ತು ಬಲವನ್ನುಳ್ಳ ಅಮೃತಶಿಲೆಗಳು ಶಿಲ್ಪಾರ್ಹಶಿಲೆಗಳೆನಿಸಿಕೊಂಡಿವೆ. ಸರ್ಪೆಂಟೀನ್ ಯುಕ್ತ ಅಮೃತಶಿಲೆಗಳು ಹಳದಿ ಮತ್ತು ಕಪ್ಪು ಕಲೆಗಳಿಂದ ಕೂಡಿವೆ; ರೂಯಿನ್ ಎಂಬುದು ಅಸಮವಾಗಿರುವ ಮೂಲೆ ಮೂಲೆಯ ರೇಖಾವಿನ್ಯಾಸದಿಂದ ಕೂಡಿದೆ.
ಭಾರತದಲ್ಲಿ ಅಮೃತಶಿಲಾ ನಿಕ್ಷೇಪಗಳು ರಾಜಾಸ್ಥಾನ ಮತ್ತು ಮಧ್ಯ ಪ್ರದೇಶಗಳಲ್ಲಿವೆ. ಹಿಂದಿನ ಕಾಲದ ಅನೇಕ ಅರಮನೆಗಳು, ದೇವಾಲಯಗಳು, ವಿಗ್ರಹಗಳು ಮತ್ತು ಸಮಾಧಿಭವನಗಳು ಪೂರ್ಣವಾಗೋ ಸ್ವಲ್ಪವೋ ಅಮೃತಶಿಲೆಯಿಂದ ಕಟ್ಟಲ್ಪಟ್ಟಿವೆ. ತಾಜ್ ಮಹಲ್ ಇಂಥ ಶಿಲ್ಪಕ್ಕೆ ಪ್ರಸಿದ್ಧ ನಿದರ್ಶನ. ಯೂರೋಪು ಮತ್ತು ಅಮೆರಿಕಗಳಲ್ಲೂ ಉತ್ತಮ ನಿದರ್ಶನಗಳಿವೆ. ಈ ಶಿಲ್ಪಕಲೆ ಈಗಲೂ ಪ್ರಸಿದ್ಧವಾಗಿದೆ.