ಒತ್ತೆಕೋಲ

ಬದಲಾಯಿಸಿ

ಭೂತಾರಾಧನೆಯ ಭಾಗವಾಗಿ ಬರುವ ಒಂದು ವಿಶಿಷ್ಟ ಜನಪದ ಆಚರಣೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯವಾಗಿ 'ಭೂತಕೋಲ" ಅಥವಾ 'ಭೂತನೇಮ' ದಂದು ನಾಲ್ಕೈದು ದೈವಗಳ ಆರಾಧನೆಯಿರುತ್ತದೆ. ಆದರೆ 'ಒತ್ತೆಕೋಲದಲ್ಲಿ ಆರಾಧಿಸಲ್ಪಡುವುದು ವಿಷ್ಣುಮೂರ್ತಿ ದೈವ ಮಾತ್ರ. ಆದ್ದರಿಂದಲೇ ಈ ಆರಾಧನೆಗೆ ಒಂದೇ ಕೋಲ(ಕನ್ನಡ) ಅಥವಾ ಒತ್ತೆಕೋಲ(ತುಳು) ಎಂದು ಹೆಸರು ಬಂದಿದೆ.ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಹರಕೆಯ ರೂಪದಲ್ಲಿ ವಿಷ್ಣುವಿನ ಒತ್ತೆ ಕೋಲವನ್ನು ನಡೆಸುವ ಪದ್ಧತಿ ರೂಡಿಯಲ್ಲಿದೆ.ಇದು ಕೇರಳ ಮೂಲದಿಂದ ಬಂದದ್ದು. ಇದರ ವೇಷ ಕಟ್ಟುವವರು ಕೂಡ ಮಲಯಾಳಿಗಳು.ಈ ಆಚರಣೆಯಲ್ಲಿ ಭೂತದ ಪಾತ್ರಿ ಉರಿಯುವ ಕೊಂಡ ಹಾಯುವನು. ವಿಷ್ಣುವಿನ, ನರಸಿಂಹನ ಅವತಾರವನ್ನು ಸೂಚಿಸುವ, ತೆಂಗಿನ ಗರಿಗಳಿಂದ ತಯಾರಿಸಲ್ಪಟ್ಟ ಭೂತದ ವೇಷ ಭೂಷಣ ವಿಚಿತ್ರ ವಿನ್ಯಾಸಗಳಿಂದ ಕಂಗೊಳಿಸುತ್ತದೆ. ಒಂದು ಗಮನಾರ್ಹ ಸಂಗತಿ ಎಂದರೆ ಮಲವ ಜನಾಂಗದವರಿಗೆ ಇದು ಪರಂಪರಾಗತವಾಗಿ ಬಂದ ಕುಲಕಸುಬು.

ಇತಿಹಾಸ

ಬದಲಾಯಿಸಿ

ಪಂಜುರ್ಲಿ ದೈವವು ಹಿರಣ್ಯಾಕ್ಷನನ್ನು ಕೊಲ್ಲಲೋಸುಗ ವರಾಹಾವತಾರವಾದರೆ ವಿಷ್ಣುಮೂರ್ತಿ ದೈವವು ಪ್ರಿಯಭಕ್ತ ಪ್ರಹಲ್ಲಾದನನ್ನು ಉಳಿಸಿ, ಹಿರಣ್ಯಕಶಿಪುವನ್ನು ಕೊಲ್ಲಲು ತಾಳಿದ ನರಸಿಂಹಾವತಾರ. ನರಸಿಂಹಾವತಾರದ ರೌದ್ರಮೂರ್ತಿಯೇ ಒತ್ತೆಕೋಲದಲ್ಲಿ ಆರಾಧಿಸಲ್ಪಡುವ ವಿಷ್ಣುಮೂರ್ತಿ.

ಒತ್ತೆಕೋಲ ಆಗುವುದಕ್ಕೆ ಕೆಲವು ದಿನಗಳ ಮುಂಚೆಯೆ ವಿಷ್ಣುಮೂರ್ತಿ ದೈವದ ಪೂಜಾರಿಗೆ ದರ್ಶನ ಬರುತ್ತದೆ. ದರ್ಶನ ಬಂದುಪೂಜಾರಿ ಆದೇಶದ ಮೇರೆಗೆ ಊರಿನವರು ಐದು ಹಲಸಿಮರದ ಕೊಂಬೆಗಳನ್ನು ಕಡಿದು ವಿಶಾಲವಾದ ಬಯಲಲ್ಲಿ ಹಾಕಿ ಮಹೂರ್ತ ನಿಶ್ಚಯಿಸುತ್ತಾರೆ. ಮಹೂರ್ತ ತಿಳಿಸಿದ ನಂತರ ಭಕ್ತಾದಿಗಳು ಸೇವೆಯ ರೂಪದಲ್ಲಿ ಕೊಳ್ಳಿ(ಸೌದೆ) ತಂದು ಹಾಕಬಹುದು. ಕೇರಳದ ಮಲಯರು ವಿಷ್ಣಮೂರ್ತಿ ದೈವವನ್ನು ಕಟ್ಟುತ್ತಾರೆ. ಊರ ಜನರು ಕ್ರಿಯಾ ಭಾಗಗಳನ್ನು ನೀಡಿದ ನಂತರ ದೈವವೇಷಧಾರಿಗೆ ದರ್ಶನ(ಆವೇಶ) ಬರುತ್ತದೆ. ಈ ಸಮಯದಲ್ಲಿ ಬಿಲ್ಲವ. ಗಾಣಿಗ, ಬಂಟ, ಗೌಡ ಹಾಗೂ ಮಣಿಯಾಣಿ ಸಮುದಾಯದವರು ವಿಷ್ಣುಮೂರ್ತಿ ಬಳಿಯಿರುವ ಕತ್ತಿ ಹಿಡಿಯುತ್ತಾರೆ. ಈ ವೇಳೆ ವಿವಿಧ ಜಾತಿಯ ಪೂಜಾರರಿಗೆ ದರ್ಶನ ಬಂದು ಆರ್ಭಟ ಮಾಡುತ್ತಾ ಕತ್ತಿಯನ್ನು ಎದೆಗೆ ಬಡಿದುಕೊಳ್ಳುತ್ತಾರೆ. ಅಲ್ಲಿಗೆ ಆ ದಿವಸದ ಕಾರ್ಯಕ್ರಮ ಮುಗಿಯುತ್ತದೆ. ಒತ್ತೆಕೋಲದಲ್ಲಿ ಹಸಿ ಸೌದೆಯನ್ನು ಬಳಸಲಾಗುತ್ತದೆ. ಒಣಗಿದ ಸೌದೆ ಬೇಗ ಉರಿದು ಬೂದಿಯಾಗುವುದೇ ಕಾರಣ. ಹಸಿಸೌದೆ ರಾತ್ರಿಯೆಲ್ಲಾ ಉರಿದು ಬೆಳಗಿನ ಹೊತ್ತಿಗೆ ದೊಡ್ಡ ಕೆಂಡದ ರಾಶಿ ಸಿದ್ದವಾಗಿರುತ್ತದೆ. ಮಾರನೆಯದಿನ ವಿಷ್ಣು ಮೂರ್ತಿ ವೇಷ ನೂರ ಒಂದು ಬಾರಿ ವಿವಿಧ ಭಂಗಿಗಳಲ್ಲಿ ಕೆಂಡದ ಮೇಲೆ ಬೀಳುತ್ತದೆ. ವಿವಿಧ ಪೂಜಾರಿಗಳು 101 ಸಾರಿಯೂ ಕೆಂಡದ ರಾಶಿಯಿಂದ ಹೊರಗೆಳೆಯುತ್ತಾರೆ. ಆನಂತರ ಅಲ್ಲಿಂದ ವಿಷ್ನು ಮೂರ್ತಿ ವೇಷವು ದೈವದ ಭಂಡಾರಕ್ಕೆ ಬಂದು ಅರಿಶಿನ ಪುಡಿಯನ್ನು ಪ್ರಸಾದ ರೂಪದಲ್ಲಿ ವಿತರಣೆ ನಡೆಯುತ್ತದೆ.

ಮೇಲೆರಿ

ಬದಲಾಯಿಸಿ

ಒತ್ತೆಕೋಲ ನಡೆಸುವ ದಿನ ನಿರ್ಧರಿತವಾದ ಮೇಲೆ ಹಲಸು ಅಥವಾ ಹಾಲು ಒಸರುವ ಮರದ ಬಳಿ ಹೋಗಿ ಪೂಜಿಸಿ ಒಂದು ಕೊಂಬೆಯನ್ನು ಕಡಿದುಕೊಂಡು ಬಂದು ಕೋಲ ನಡೆಸುವ ಸ್ಥಳದಲ್ಲಿ ಹಾಕುವರು. ಹೀಗೆ ಒಂದು ತಿಂಗಳ ಕಾಲ ಸೌದೆ ಶೇಖರಣೆಯಾಗಿ ಕೋಲದ ಆರಂಭದ ದಿನ ಈ ಸೌದೆಯನ್ನು ಚೌಕಾಕಾರವಾಗಿ ಅಳೆತ್ತರಕ್ಕೆ ಜೋಡಿಸುವರು. ಇದೇ ಮಲೇರಿ. ಇದರ ಎದುರಿಗೇ 16 ಮೀಗಳ ಅಂತರದಲ್ಲಿ ಪೂರ್ವಾಬಿsಮುಖವಾಗಿ ತೆಂಗಿನ ಗರಿಗಳಿಂದ ಮಂಟಪ ರೂಪಿಸಿ ಅಲ್ಲಿ ತೆಂಗಿನಕಾಯಿ, ಹೊಂಬಾಳೆಯನ್ನು ಸೇರಿಸಿ ನೇತು ಹಾಕುವರು. ಬೆಳ್ಚೆಪಾಡರು ವಿಷ್ಣುಮೂರ್ತಿ ದೇವಾಲಯದಿಂದ ಭಂಡಾರವನ್ನು ತಂದು ಮಂಟಪದಲ್ಲಿಡುವರು. ಹದಿನಾರು ಬಾಳೆಎಲೆಗಳನ್ನು ಹಾಕಿ ಪ್ರತಿಯೊಂದರಲ್ಲಿ ಎರಡೆರಡು ಬಾಳೆಹಣ್ಣು, ತೆಂಗಿನಕಾಯಿ, ಅಡಕೆ ಹಾಗೂ ಹೊಂಬಾಳೆಗಳನ್ನು ನೈವೇದ್ಯಕ್ಕಿಟ್ಟು ಪೂಜೆ ಮಾಡುವರು. ಅನಂತರ ಮಲೇರಿಗೆ ಬೆಂಕಿ ಕೊಡುವರು.

ಕುಳಿಚ್ಚಾಟ್

ಬದಲಾಯಿಸಿ

ಮಧ್ಯರಾತ್ರಿ ವೇಳೆ ಕುಳಿಚ್ಚಾಟ್ ಆರಂಭವಾಗುತ್ತದೆ. ಇಲ್ಲಿ ದೈವವನ್ನು ಕಟ್ಟುವವ ಮಲಯ ಜಾತಿಯ ಪಾತ್ರಿ. ಮಡಿಯುಟ್ಚು ಕೆಂಪು ವಸ್ತ್ರ ಅಂಗೈಯಲ್ಲಿ ಹಿಡಿದು ಮಲೇರಿಗೆ ಮೂರು ಬಾರಿ ಪ್ರದಕ್ಷಿಣೆ ಮಾಡುವನು. ಇವನ ವೇಷ ಭೂಷಣಗಳು ವಿಶೇಷತೆಯಿಂದ ಕೂಡಿರುತ್ತವೆ. ಬಳಿಕ ಈತ ಮಂಟಪದಲ್ಲಿ ನಿಲ್ಲುವನು. ಈತನ ಸಹಾಯಕರು ಚಂಡೆಯನ್ನು ಬಾರಿಸುವರು. ಒಡನೆ ಪಾತ್ರಿಗೆ ದೈವದ ಆವಾಹನೆಯಾಗುವುದು. ವಿಷ್ಣು ನರಸಿಂಹಾವತಾರ ತಾಳಿ ಹಿರಣ್ಯಕಶಿಪುವನ್ನು ವದಿsಸಿ ಪ್ರಹ್ಲಾದನನ್ನು ರಕ್ಷಿಸಿದ ಕಥೆಯನ್ನು ಇಬ್ಬರು ಮಲಯಾಳಂ ಭಾಷೆಯಲ್ಲಿ ಪಾಡ್ದನವನ್ನು ಹಾಡುವರು. ಆಗ ಪಾತ್ರಿ ಹಾಡಿಗೆ ತಕ್ಕಂತೆ ಭಾವಾಬಿsನಯ ನೀಡುವನು. ಇದೇ ಕುಳಿಚ್ಚಾಟ್. ಈ ಕಾರ್ಯಕ್ರಮ ಮುಂಜಾನೆವರೆಗೂ ನಡೆಯುತ್ತದೆ. ಅನಂತರ ಪಾತ್ರಿ ಕುಳಿಚ್ಚಾಟ್ ವೇಷ ಕಳಚಿ ಬೇರೆ ವೇಷ ಹಾಕುವನು. ವಿಷ್ಣುಮೂರ್ತಿಯ ಕೊಂಡ ಹಾಯುವ ಮೊದಲಹಂತ ಆರಂಭವಾಗುವುದು. ಪಾತ್ರಿಯು ಮೈ ತುಂಬ ಬಾಳೆ ನಾರನ್ನು ಸುತ್ತಿ, ಸೊಂಟದ ಸುತ್ತ ತೆಂಗಿನಗರಿ ಬಿಗಿದು ಕೊಂಡ ಹಾಯಲು ಸಿದ್ಧನಾಗುವನು. ಇವನಿಗೂ ಮೊದಲು ಬೆಳ್ಚಪ್ಪಾಡರು ಕೆಂಡದ ರಾಶಿ ಮೇಲೆ ಮೂರು ಬಾರಿ ಓಡಾಡುವರು. ಅನಂತರ ವಿಷ್ಣುವೇಷದ ಪಾತ್ರಿ ಕೆಂಡದ ಮೇಲೆ ಪದೇ ಪದೇ ಬೀಳುವನು. ಈತ ಹೀಗೆ ಬೀಳುತ್ತಿದ್ದಂತೆ ಸಹಾಯಕರಿಬ್ಬರು ಸೊಂಟಕ್ಕೆ ಕಟ್ಟಿರುವ ತೆಂಗಿನ ಗರಿಗಳನ್ನು ಹಿಡಿದು ಎಳೆಯುವರು. ಈ ಕ್ರಿಯೆ ನಿರಂತರವಾಗಿ ಬೆಳಗಿನವರೆಗೂ ನಡೆಯುತ್ತದೆ. ಅನಂತರ ಒತ್ತೆಕೋಲಕ್ಕೆ ಹರಕೆಯಾಗಿ ತಂದ ಕೋಳಿಗಳನ್ನು ಬಲಿ ಕೊಡುವರು. ಈ ಸಂದರ್ಭದಲ್ಲಿ ಭಕ್ತಾದಿಗಳು ಪಾತ್ರಿಯೊಡನೆ ಭವಿಷ್ಯ ಅಥವಾ ಕಣಿ ಕೇಳುವುದೂ ಉಂಟು. ಅನಂತರ ವೇಷಧಾರಿ ಭೂತದ ಕಲ್ಲು ಇರುವಲ್ಲಿಗೆ ಹೋಗಿ ದೈವಕ್ಕೆ ಪ್ರಾರ್ಥನೆ ಸಲ್ಲಿಸುವಲ್ಲಿಗೆ ಕೋಲದ ಆಚರಣೆ ಮುುಗಿಯುತ್ತದೆ.

ವೇಷಭೂಷಣ

ಬದಲಾಯಿಸಿ

ಗೋಳಾಕಾರದಲ್ಲಿ ಕಟ್ಟಿದ ತೆಳುವಾದ ಬಿದಿರಿನಿಂದ ಮೈಕೈಕಾಲುಗಳನ್ನು ಮುಚ್ಚಿಕೊಂಡು ತೆಂಗಿನಗರಿಯಿಂದ ಕ್ರಮಬದ್ಧವಾಗಿ ಅಲಂಕರಿಸಿಕೊಳ್ಳುತ್ತಾರೆ. ತೆಂಗಿನ ಸಿರಿಯಲ್ಲೆ ಮಾಡಿದ ಉಡುಪುಗಳನ್ನೆ ಬಳಸಲಾಗುತ್ತದೆ. ತಲೆಗೆ ಹೂವಿನ ಹಾರದಿಂದ ಮಾಡಿದ ದಂಡೆ, ಬೆಳ್ಳಿಯಪಟ್ಟಿಯನ್ನು ಕಟ್ಟಿ ಕಾಲಿಗೆ ಗೆಜ್ಜೆ ಕಟ್ಟುತ್ತಾರೆ.

ಉಗಮಸ್ಥಾನ ಕೇರಳ ಜಿಲ್ಲೆಯ ಕುಂಬಳೆ ಹಾಗೂ ಮಂಜೇಶ್ವರದು ತಿಳಿದುಬರುತ್ತದೆ. ಈ ಸಮಯದಲ್ಲಿ ಹಾಡುವ ಪಾಡ್ದನಗಳು ಸಂಪೂರ್ಣ ಮಲೆಯಾಳಿ ಭಾಷೆಯಲ್ಲಿದೆ. ಇತರೆ ಭೂತಕೋಲಗಳ ಸಮಯದಲ್ಲಿ ಬಳಸುವ ವಾದ್ಯಗಳನ್ನೇ ಒತ್ತೆಕೋಲದ ಸಮಯದಲ್ಲೂ ಬಳಸುತ್ತಾರೆ. ಒತ್ತೆಕೋಲ ಕಲಾತಂಡದಲ್ಲಿ 15-20 ಮಂದಿ ಇರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮತ್ತು ಪುತ್ತೂರು ತಾಲ್ಲೂಕಿನಲ್ಲಿ ವಿಷ್ಣುಮೂರ್ತಿ ಆರಾಧನೆಯ ಒತ್ತೆಕೋಲ ಹೆಚ್ಚು ಪ್ರಚಲಿತದಲ್ಲಿದೆ. ಇತರ ಭೂತಾರಾಧನೆಗಳಂತೆ ಆಗಾಗ ಒತ್ತೆಕೋಲದ ಸಮಯದಲ್ಲಿ ಆಗುವ ಖರ್ಚು ಹೆಚ್ಚು. ಆದ್ದರಿಂದ ಒಬ್ಬರಿಬ್ಬರು ಆಚರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದಲೇ ಗ್ರಾಮದವರೆಲ್ಲರೂ ಈ ಆರಾಧನೆಯಲ್ಲಿ ಆಸಕ್ತಿ ವಹಿಸುತ್ತಾರೆ.

ಆಚರಣೆಯ ಕಾಲ

ಬದಲಾಯಿಸಿ

ಸಾಮಾನ್ಯವಾಗಿ ಒತ್ತೆಕೋಲ ನಡೆಯುವುದು ಬೇಸಿಗೆಕಾಲದಲ್ಲಿ. ಹಸಿ ಸೌದೆಯ ಕೆಂಡದ ರಾಶಿ ಮಳೆಗಾಲದಲ್ಲಿ ಮಳೆಯಿಂದಾಗಿಆರುವ ಸಂಭವವಿದೆ.

ಉಲ್ಲೇಖ

ಬದಲಾಯಿಸಿ
  1. ಗೋ.ರು ಚನ್ನಬಸವಪ್ಪ, ಕನಾ‍ಟಕ ಜನಪದ ಕಲೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು, ಪುಟ: ೧೫-೧೬