ಪರಿಚಯ ಬದಲಾಯಿಸಿ

ಭೂಮಾಲೀಕರಿಗೂ ಅವರ ಭೂಮಿಯನ್ನು ಸಾಗುವಳಿ ಮಾಡುವ ಭೂರಹಿತ ರೈತರಿಗೂ ನಡುವಣ ಸಂಬಂಧವನ್ನು ಸೂಚಿಸುವ ಶಬ್ದ (ಟೆನನ್ಸಿ). ಭೂ ಹಿಡುವಳಿ, ಕೃಷಿ ಎಂಬ ಅರ್ಥಗಳಲ್ಲೂ ಈ ಶಬ್ದವನ್ನು ಪರ್ಯಾಯವಾಗಿ ಬಳಸಲಾಗುತ್ತಿದೆ. ಪ್ರಪಂಚದ ಸುಮಾರು ಐದನೆಯ ಮೂರರಷ್ಟು ಜನಕ್ಕೆ ವ್ಯವಸಾಯವೇ ಜೀವನಾಧಾರ. ಇವರಲ್ಲಿ ಬಹುಸಂಖ್ಯಾತರು ಜಮೀನಿನ ಒಡೆಯರಲ್ಲ. ಇವರು ಭೂಮಾಲೀಕರಿಂದ ಸಾಗುವಳಿ ಮಾಡುವ ಹಕ್ಕು ಪಡೆದಂಥವರು. ಇದನ್ನು ಪಡೆಯಲು ಇವರು ಭೂಮಾಲೀಕರಿಗೊ ಅವರ ಮಧ್ಯವರ್ತಿಗಳಿಗೊ ಉತ್ಪನ್ನದ ಒಂದು ಭಾಗವನ್ನೊ ಒಂದು ನಿರ್ದಿಷ್ಟ ಪ್ರಮಾಣದ ಹಣವನ್ನೊ ಸೇವೆಯನ್ನೊ ಸಲ್ಲಿಸುತ್ತಾರೆ. ಈ ಕಟ್ಟುಪಾಡಿನಂತೆ ಸಾಗುವಳಿ ಮಾಡುವುದೇ ಒಕ್ಕಲು ಪದ್ಧತಿ. ಜಮೀನುದಾರನಿಂದ ಸಾಗುವಳಿ ಹಕ್ಕನ್ನು ಪ್ರತಿಫಲ ಕೊಟ್ಟು ಪಡೆಯುವಾತನೆ ಒಕ್ಕಲು.

ಇತಿಹಾಸ ಬದಲಾಯಿಸಿ

ಎಲ್ಲಿಯವರೆಗೆ ಜಮೀನಿನ ಹಂಚಿಕೆಯಲ್ಲಿ ಅಸಮಾನತೆ ಇರುತ್ತದೆಯೊ ಅಲ್ಲಿಯವರೆಗೆ ಒಕ್ಕಲುತನ ಇದ್ದೇ ಇರುತ್ತದೆ. ಹೀಗಾಗಿ ಒಕ್ಕಲುತನದಿಂದ ಜೀವಿಸುವವರ ಪ್ರಮಾಣ ಅನೇಕ ದೇಶಗಳಲ್ಲಿ ಸಾಕಷ್ಟು ಇದೆ. ಉದಾಹರಣೆಗೆ, ವ್ಯವಸಾಯವನ್ನೇ ಜೀವನಾಧಾರವಾಗಿಟ್ಟು ಕೊಂಡಿರುವವರಲ್ಲಿ ಒಕ್ಕಲುಗಳ ಶೇಕಡಾ ಪ್ರಮಾಣ ಇಂಗ್ಲೆಂಡಿನಲ್ಲಿ 65, ಸ್ಕಾಟ್ಲೆಂಡಿನಲ್ಲಿ 77 ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 20ಕ್ಕಿಂತ ಅಧಿಕ. ಭಾರತದಲ್ಲಿ ಮೊದಲನೆಯ ಪಂಚವಾರ್ಷಿಕ ಯೋಜನೆಯ ಆರಂಭದ ಹೊತ್ತಿಗೆ ಶೇ. 40 ರಷ್ಟು ಸಾಗುವಳಿ ಜಮೀನು ಮಧ್ಯವರ್ತಿ ಹಿಡುವಳಿ ಪದ್ಧತಿಯಲ್ಲೂ ಉಳಿದ ಜಮೀನು ರೈತವಾರಿ ಹಿಡುವಳಿ ಪದ್ಧತಿಯಲ್ಲೂ ಇತ್ತು. ಇದರ ಬಹುಪಾಲು ಜಮೀನನ್ನು ಒಕ್ಕಲು ಪದ್ಧತಿಯಲ್ಲಿ ಸಾಗುವಳಿ ಮಾಡಲಾಗುತ್ತಿತ್ತು. ಒಕ್ಕಲುತನದಿಂದ ಭೂಮಾಲೀಕ ಮತ್ತು ಒಕ್ಕಲು ಒಬ್ಬರಿಗೊಬ್ಬರು ಪುರಕವಾಗಿ ಕೆಲಸ ಮಾಡಿ ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳುವ ಅವಕಾಶ ಏರ್ಪಡುತ್ತವೆ. ಹೇಗೆಂದರೆ, ಬಂಡವಾಳ ಮತ್ತು ಕಾರ್ಯನಿರ್ವಾಹಕ ಸಾಮಥರ್ಯ್‌ವನ್ನು ಜಮೀನಿನ ಒಡೆಯ ಒದಗಿಸಬಹುದು. ಶ್ರಮವನ್ನೂ, ನಿಷ್ಠೆಯನ್ನೂ ತನ್ನ ಕೈಲಾದ ಬಂಡವಾಳವನ್ನೂ ಒಕ್ಕಲು ಒದಗಿಸಬಹುದು. ಹೀಗಾಗಿ, ಇಬ್ಬರ ಸಹಕಾರದಿಂದ ವ್ಯವಸಾಯದ ಕಾರ್ಯನಿರ್ವಹಣೆ ಅತಿ ದಕ್ಷತೆಯಿಂದ ನಡೆಯುವ ಸಾಧ್ಯತೆಯಿರುತ್ತದೆ. ಆದರೆ ವಾಸ್ತವದಲ್ಲಿ ಈ ಪದ್ಧತಿಯಲ್ಲಿ ಕೆಲ ಅನಿಷ್ಟ ಅಂಶಗಳಿವೆ.

  • 1. ಈ ಪದ್ಧತಿಯಲ್ಲಿ ಜಮೀನಿನ ಒಡೆತನವೂ ಸಾಗುವಳಿ ಕಾರ್ಯವೂ ಬೇರ್ಪಟ್ಟಿರುವ ಕಾರಣ ಸಾಗುವಳಿ ದಕ್ಷತೆಯಿಂದ ನಡೆಯುವುದು ಸಂದೇಹಾಸ್ಪದ. ಜಮೀನಿನ ಒಡೆತನ ತನ್ನದಲ್ಲದ ಕಾರಣ ಒಕ್ಕಲಿಗೆ ಸಾಗುವಳಿಯ ವಿಷಯದಲ್ಲಿ ಅಧಿಕ ಪ್ರಮಾಣದ ಆಸ್ಥೆ ಇರುವುದಿಲ್ಲ.
  • 2. ಒಕ್ಕಲುತನದ ಅಭದ್ರತೆ: ಭೂಮಾಲೀಕ ಯಾವಾಗ ಬೇಕಾದರೂ ಒಕ್ಕಲನ್ನು ಜಮೀನಿನಿಂದ ಹೊರಹಾಕಬಹುದು. ಈ ಭಯದ ಪರಿಣಾಮವಾಗಿ ಒಕ್ಕಲು ದಕ್ಷತೆಯಿಂದ ಕೆಲಸ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ.
  • 3.ನೆಲ ತನ್ನದಲ್ಲವಾದ್ದರಿಂದ ಒಕ್ಕಲಿಗೆ ತನ್ನಲ್ಲಿರುವ ಬಂಡವಾಳವನ್ನು ಜಮೀನಿನ ಅಭಿವೃದ್ದಿಗಾಗಿ ಹೂಡಲು ಪ್ರೇರಣೆ ಇರುವುದಿಲ್ಲ. ಆತ ಒಂದು ವೇಳೆ ಬಂಡವಾಳವನ್ನು ಹೂಡಿದರೂ ನೆಲದೊಡೆಯನಿಂದ ಇದಕ್ಕೆ ತಕ್ಕ ಪರಿಹಾರ ಸಿಗದಿರಬಹುದು.
  • 4. ಆರ್ಥಿಕ ದೃಷ್ಟಿಯಿಂದ ಜಮೀನಿನ ಒಡೆಯ ಅನುಕೂಲಸ್ಥನಾಗಿರುವ ಕಾರಣ ಒಕ್ಕಲಿನಿಂದ ಅಧಿಕ ಪ್ರಮಾಣದ ಗೇಣಿಯನ್ನು ಕಸಿದುಕೊಳ್ಳುತ್ತಾನೆ. ಈ ಕಾರಣದಿಂದ ಒಕ್ಕಲಿನಲ್ಲಿ ಹೆಚ್ಚಾಗಿ ಶ್ರಮವಹಿಸುವ ಪ್ರೇರಣೆ ಇಲ್ಲದಾಗುತ್ತದೆ.
  • 5. ಒಕ್ಕಲಿನ ಬಂಡವಾಳ ಕೊರತೆಯ ಕಾರಣ ಸಾಗುವಳಿ ವಿಧಾನ ಉತ್ತಮಗೊಳ್ಳುವ ಸಾಧ್ಯತೆ ಇಲ್ಲ. ತಾನು ಸಾಗುವಳಿ ಮಾಡುವ ಜಮೀನನ್ನು ಕೊಂಡುಕೊಳ್ಳಲು ಅಶಕ್ತನಾದ್ದರಿಂದ ಆತ ಎಂದೆಂದಿಗೂ ಒಕ್ಕಲಾಗಿಯೇ ಉಳಿಯುವ ಸಂಭವ ಹೆಚ್ಚು.

ಒಕ್ಕಲುತನದ ಸ್ಥಿತಿಯನ್ನು ಸುಧಾರಿಸುವ ಯಾವುದೇ ಕ್ರಮ ಒಕ್ಕಲಿನಲ್ಲಿ ಅಧಿಕ ಉತ್ಪನ್ನವನ್ನು ಪ್ರೇರೇಪಿಸುವಂತಿರಬೇಕು. ಈ ಧ್ಯೇಯ ಸಾಧನೆಯ ಎರಡು ಬಗೆಯ ಸುಧಾರಣೆಗಳನ್ನು ಇಲ್ಲಿ ಪ್ರಸ್ತಾಪಿಸಬಹುದು ಜಪಾನ್, ಅಮೆರಿಕ ಸಂಯುಕ್ತಸಂಸ್ಥಾನ ಮತ್ತು ಡೆನ್ಮಾರ್ಕ್ಗಳಂತೆ ಕಾಲಕ್ರಮದಲ್ಲಿ ಒಕ್ಕಲೇ ತಾನು ಸಾಗುವಳಿ ಮಾಡುವ ಜಮೀನಿನ ಮಾಲೀಕ ಆಗುವಂಥ ಧೋರಣೆಗಳನ್ನು ಜಾರಿಗೆ ತರತಕ್ಕದ್ದು ಒಂದು ಬಗೆ. ಇಂಗ್ಲೆಂಡ್ ಹಾಗೂ ಭಾರತದಲ್ಲಿ ಕೈಗೊಂಡಿರುವಂತೆ ಒಕ್ಕಲು ಪದ್ಧತಿಯನ್ನೇ ಉತ್ತಮಪಡಿಸುವಂಥ ಸುಧಾರಣೆ ಇನ್ನೊಂದು ಬಗೆ. ಇಲ್ಲಿ ಒಕ್ಕಲಿಗೆ ಕಾಯಿದೆಯ ಮೂಲಕ ಒಡೆತನದ ಹಕ್ಕನ್ನೂ ಒಕ್ಕಲುತನದ ಭದ್ರತೆಯನ್ನೂ ಗೇಣಿಯ ಕಡಿತಗಳನ್ನೂ ಮಂಜೂರು ಮಾಡುವ ಪ್ರಯತ್ನ ಸಾಗಿದೆ.

ಭಾರತದಲ್ಲಿ ಬದಲಾಯಿಸಿ

ಭಾರತದಲ್ಲಿ ಒಕ್ಕಲುತನ ಸುಧಾರಣೆಯ ಎರಡು ಧ್ಯೇಯಗಳಿವೆ:

  • 1. ಭೂಸ್ವಾಮ್ಯ ವ್ಯವಸ್ಥೆಯಲ್ಲಿನ ಅಡಚಣೆಗಳ ನಿರ್ಮೂಲನೆ.
  • 2. ಭೂಸ್ವಾಮ್ಯ ಸಂಬಂಧ ಅರ್ಥವ್ಯವಸ್ಥೆಯಲ್ಲಿ ಆಗುವ ಅನ್ಯಾಯಗಳ ಪರಿಹಾರ.

ಇವನ್ನು ಸಾಧಿಸಲು ಗೇಣಿ ಪಡೆಯುವ ಮಧ್ಯವರ್ತಿಗಳನ್ನು ನಿವಾರಿಸುವ ಮತ್ತು ಒಕ್ಕಲುತನವನ್ನು ಸುಧಾರಿಸುವ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪ್ರಥಮ ಪಂಚವಾರ್ಷಿಕ ಯೋಜನೆಯ ಉದ್ಘಾಟನೆಯಾದಾಗಿನಿಂದ ರಾಜ್ಯ ಸರ್ಕಾರ ಗಳು ಕಾನೂನಿನ ಮೂಲಕ ಜಮೀನ್ದಾರರು, ಜಹಗೀರುದಾರರು ಹಾಗೂ ಇನಾಂದಾರರು-ಇಂಥ ಮಧ್ಯವರ್ತಿಗಳ ನಿವಾರಣೆಯ ಕಾರ್ಯಕ್ರಮದಲ್ಲಿ ತೊಡಗಿದ್ದು ಈ ಕಾರ್ಯ ಈಗ ಪುರ್ಣವಾಗಿದೆ. ಇವರು ಸರ್ಕಾರಕ್ಕೆ ಒಂದು ನಿರ್ದಿಷ್ಟವಾದ ಸಲಿಕೆಯನ್ನು ಕೊಟ್ಟು ಜಮೀನಿನ ಒಡೆತನದ ಹಕ್ಕನ್ನು ಪಡೆದವರು. ಇವರು ಅಧಿಕ ಪ್ರಮಾಣದ ಗೇಣಿ ರೂಪದ ಪ್ರತಿಫಲಕ್ಕೆ ಜಮೀನಿನ ಸಾಗುವಳಿಯ ಹಕ್ಕನ್ನು ಒಕ್ಕಲಿಗೆ ಕೊಟ್ಟಿದ್ದರು. ಹೀಗಾಗಿ ರೈತರು ಮಧ್ಯವರ್ತಿಗಳೊಡನೆ ಸಂಬಂಧವನ್ನಿಟ್ಟುಕೊಂಡಿದ್ದರು. ಈ ಸುಧಾರಣೆಯಿಂದ ಸುಮಾರು ಎರಡು ಕೋಟಿ ರೈತರು ಈಗ ಸರ್ಕಾರದೊಡನೆ ನೇರ ಸಂಬಂಧವನ್ನು ಕಲ್ಪಿಸಿಕೊಂಡಿದ್ದಾರೆ. ಎಂದರೆ ಇವರು ನ್ಯಾಯಸಮ್ಮತವಾದ ಗೇಣಿಯನ್ನು ನೇರವಾಗಿ ಸರ್ಕಾರಕ್ಕೆ ಸಲ್ಲಿಸಿ ಜಮೀನನ್ನು ಸಾಗುವಳಿ ಮಾಡುತ್ತಿದ್ದಾರೆ.

ಮಧ್ಯವರ್ತಿಗಳ ನಿವಾರಣೆಯಿಂದ ರೈತರ ಸಮಸ್ಯೆಗಳು ಪರಿಹಾರವಾದಂತಾಗಲಿಲ್ಲ. ರೈತವಾರಿ ಪ್ರದೇಶದಲ್ಲಿ ಸ್ವತಃ ವ್ಯವಸಾಯ ಮಾಡದ ಸಣ್ಣಪುಟ್ಟ ಭೂಮಾಲೀಕರೊಡನೆ ನೇರ ಸಂಬಂಧವಿರುವ ರೈತರು ಗೇಣಿ, ಒಕ್ಕಲುತನ ಭದ್ರತೆ ಹಾಗೂ ಒಡೆತನದ ಹಕ್ಕಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಎದುರಿಸಲೇಬೇಕಿತ್ತು. ಇವನ್ನು ಪರಿಹರಿಸುವ ದೃಷ್ಟಿಯಿಂದ ಪ್ರತಿ ರಾಜ್ಯ ಸರ್ಕಾರವೂ ಒಕ್ಕಲು ಪದ್ಧತಿಯನ್ನು ಉತ್ತಮಗೊಳಿಸುವ ಕಾಯಿದೆ ಮಾಡಿದೆ.

ರಾಜ್ಯಸರ್ಕಾರಗಳ ಕಾಯಿದೆಗಳಿಗಿಂತ ಮೊದಲು ಒಕ್ಕಲುಗಳು ಉತ್ಪನ್ನದ ಅರ್ಧಕ್ಕಿಂತ ಅಧಿಕ ಪ್ರಮಾಣವನ್ನು ಗೇಣಿಯಾಗಿ ಕೊಡುತ್ತಿದ್ದರು. ಜೊತೆಗೆ, ಅನೇಕ ಸಲಿಕೆಗಳನ್ನು ಕೊಡುತ್ತಿದ್ದರು. ಈ ಪ್ರಮಾಣದ ಗೇಣಿ ನ್ಯಾಯಸಮ್ಮತವಾದುದಲ್ಲವೆಂದೂ ಗೇಣಿ ಉತ್ಪನ್ನದ 1/4 ಇಲ್ಲವೆ 1/5 ಭಾಗದಷ್ಟಿರಬೇಕೆಂದೂ ಪ್ರಥಮ ಯೋಜನೆ ಅಭಿಪ್ರಾಯಪಟ್ಟಿತು. ಅಲ್ಲಿಂದೀಚೆಗೆ ರಾಜ್ಯ ಸರ್ಕಾರಗಳು ಕಾಯಿದೆಯ ಮೂಲಕ ಗೇಣಿಯ ಪ್ರಮಾಣವನ್ನು ನಿರ್ಧರಿಸಿವೆ. ಗುಜರಾತ್, ಮಹಾರಾಷ್ಟ್ರ ಮತ್ತು ರಾಜಾಸ್ಥಾನಗಳಲ್ಲಿ ಗೇಣಿಯ ಪ್ರಮಾಣ ಗರಿಷ್ಟವಾಗಿ ಉತ್ಪನ್ನದ 1/6 ರಷ್ಟಿರಬೇಕೆಂದೂ ಅಸ್ಸಾಂ, ಕೇರಳ, ಒರಿಸ್ಸ ಮತ್ತು ಕೇಂದ್ರದ ಆಡಳಿತಕ್ಕೊಳಪಟ್ಟ ಪ್ರದೇಶಗಳಲ್ಲಿ 1/4 ಭಾಗ ಇಲ್ಲವೆ ಕಡಿಮೆಯಾಗಿರಬೇಕೆಂದೂ ಇನ್ನು ಕೆಲವು ರಾಜ್ಯಗಳಲ್ಲಿ 1/3 ರಷ್ಟು ಎಂದೂ ನಿರ್ಧಾರ ಮಾಡಲಾಗಿದೆ.

ಉಚ್ಚಾಟನೆಯನ್ನು ತಡೆಗಟ್ಟಲು ಒಕ್ಕಲುತನದ ಭದ್ರತೆಯನ್ನು ನಿಶ್ಚಿತಪಡಿಸುವ ಧ್ಯೇಯದ ಕಾಯಿದೆಗಳನ್ನು ಜಾರಿಗೊಳಿಸಲಾಯ್ತು. ಈ ಎಲ್ಲ ಕಾಯಿದೆಗಳಲ್ಲೂ ಮೂರು ಮುಖ್ಯ ಕಟ್ಟುಪಾಡುಗಳಿವೆ: 1. ಉಚ್ಚಾಟನೆ ಕಾನೂನಿನ ರೀತಿಯಲ್ಲಿ ಮಾತ್ರ ನಡೆಯತಕ್ಕದ್ದು. 2. ಸ್ವತಃ ಸಾಗುವಳಿ ಮಾಡುವ ಕಾರಣದಿಂದ ಮಾತ್ರ ಜಮೀನಿನ ಮಾಲೀಕ ಭೂಮಿಯನ್ನು ಒಕ್ಕಲಿನಿಂದ ವಾಪಸ್ಸು ಪಡೆಯಬಹುದು. 3. ಅಂಥ ಸಂದರ್ಭಗಳಲ್ಲಿ ಒಕ್ಕಲಿಗೆ ಕನಿಷ್ಠ ಪ್ರಮಾಣದ ನೆಲವನ್ನು ಗೇಣಿಯ ಆಧಾರದ ಮೇಲೆ ಸಾಗುವಳಿಗೆ ಬಿಟ್ಟುಕೊಡಬೇಕು. ಉತ್ತರಪ್ರದೇಶ, ದೆಹಲಿ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಒಕ್ಕಲಿನಿಂದ ಜಮೀನನ್ನು ಹಿಂದಕ್ಕೆ ಪಡೆಯುವ ಅವಕಾಶವಿಲ್ಲ. ಬಿಹಾರ, ಗುಜರಾತ್, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಒರಿಸ್ಸ, ರಾಜಾಸ್ಥಾನ ಮತ್ತು ಮಣಿಪುರ ರಾಜ್ಯಗಳಲ್ಲಿ ಜಮೀನನ್ನು ಹಿಂದಕ್ಕೆ ಪಡೆಯಬೇಕಾದ ಸಂದರ್ಭದಲ್ಲಿ ಒಕ್ಕಲಿಗೆ ಜಮೀನಿನ ಒಂದು ಭಾಗವನ್ನು ಸಾಗುವಳಿಗಾಗಿ ಬಿಟ್ಟುಕೊಡಬೇಕು ಎನ್ನುವ ಕರಾರಿನ ಮೇಲೆ ಈ ಅವಕಾಶವಿದೆ.

ಒಕ್ಕಲುತನದ ಭದ್ರತೆ ಹಾಗೂ ಗೇಣಿ ಕಡಿತ ಒಕ್ಕಲುತನದ ಸುಧಾರಣೆಯ ಮೊದಲ ಹಂತ. ಇದರ ಮುಖ್ಯ ಧ್ಯೇಯ ಭೂಮಿಯ ಒಡೆತನದ ಹಕ್ಕನ್ನು ಆದಷ್ಟು ಮಂದಿ ಒಕ್ಕಲುಗಳಿಗೆ ಕೊಡಿಸುವಂಥದು. ಮಾಲೀಕರೆ ಹಿಂದಕ್ಕೆ ಪಡೆದು ಸಾಗುವಳಿ ಮಾಡುವ ಸಾಧ್ಯತೆ ಇಲ್ಲದಿರುವ ಜಮೀನನ್ನು ಸಾಗುವಳಿದಾರನೇ ಕೊಂಡುಕೊಳ್ಳಬಹುದಾಗಿದ್ದೂ ಆತ ಈ ಅವಕಾಶವನ್ನು ಬಳಸಿಕೊಳ್ಳದಿರುವುದರ ಕಾರಣ, ಸರ್ಕಾರವೇ ಇಂಥ ಜಮೀನನ್ನು ವಶಪಡಿಸಿಕೊಂಡು ಅನಂತರ ಒಕ್ಕಲುಗಳೊಡನೆ ನೇರ ಸಂಬಂಧ ಕಲ್ಪಿಸಬೇಕೆಂದು ಎರಡನೆಯ ಯೋಜನೆ ಸಲಹೆ ನೀಡಿತು. ಆ ನಿಟ್ಟಿನಲ್ಲಿ ಕೆಲ ಮಟ್ಟಿನ ಪ್ರಗತಿಯಾಯ್ತು. ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಾಸ್ಥಾನಗಳಲ್ಲಿ ಅಂಥ ಜಮೀನಿನ ಸಾಗುವಳಿದಾರನೇ ಒಡೆಯನೆಂದೇ ಘೋಷಿಸಿ ಅವನೇ ಹಳೆಯ ಮಾಲೀಕನಿಗೆ ಪರಿಹಾರಧನ ಕೊಡುವಂತೆ ಕಾಯಿದೆ ಮಾಡಲಾಯಿತು. ದೆಹಲಿ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಸರ್ಕಾರವೇ ಪರಿಹಾರ ಕೊಟ್ಟು ಭೂಮಿಯ ಮಾಲೀಕರಿಂದ ಒಡೆತನದ ಹಕ್ಕನ್ನು ಪಡೆದುಕೊಂಡು ಸಾಗುವಳಿದಾರರಿಗೆ ಭೂಮಿಯನ್ನು ವಹಿಸಿಕೊಡುವಂತೆಯೂ ಅವರಿಂದ ಪರಿಹಾರಧನವನ್ನು ತಾನೇ ಕಂತುಗಳಲ್ಲಿ ವಸೂಲಿ ಮಾಡಿಕೊಳ್ಳುವಂತೆಯೂ ಕಾಯಿದೆ ಮಾಡಲಾಗಿದೆ. ಕೇರಳ ಮತ್ತು ಉತ್ತರ ಪ್ರದೇಶಗಳಲ್ಲಿ ಸರ್ಕಾರ ಮಾಲೀಕರಿಂದ ಜಮೀನಿನ ಒಡೆತನದ ಹಕ್ಕನ್ನು ಪಡೆದುಕೊಂಡಿದೆ. ಇಲ್ಲಿ ರೈತರು ನ್ಯಾಯಸಮ್ಮತವಾದ ಗೇಣಿಯನ್ನು ಸರ್ಕಾರಕ್ಕೆ ಕೊಟ್ಟು ಜಮೀನನ್ನು ಸರ್ಕಾರಿ ಒಕ್ಕಲಿನಂತೆ ಸಾಗುವಳಿ ಮಾಡಬಹುದು. ಇಲ್ಲವೆ ಇವರು ಪರಿಹಾರ “ಧನವನ್ನು ಕೊಟ್ಟು ಸರ್ಕಾರದಿಂದ ಜಮೀನಿನ ಒಡೆತನವನ್ನು ಪಡೆಯಬಹುದು. ಉಳಿದ ರಾಜ್ಯಗಳಲ್ಲಿ ಒಕ್ಕಲುಗಳೇ ಪರಿಹಾರಧನವನ್ನು ನೇರವಾಗಿ ಜಮೀನಿನ ಮಾಲೀಕರಿಗೆ ಕೊಟ್ಟು ಒಡೆತನದ ಹಕ್ಕನ್ನು ಪಡೆದುಕೊಳ್ಳುವಂತೆ ಅನುಕೂಲ ಕಾಯಿದೆಗಳನ್ನು ಮಾಡಲಾಗಿದೆ.http://www.prajavani.net/news//article/2016/08/25/433517.html

ಕಾಯಿದೆಯ ಮೂಲಕ ಸರ್ಕಾರ ಇಷ್ಟೆಲ್ಲ ಅನುಕೂಲಗಳನ್ನು ಮಾಡಿಕೊಟ್ಟಿದ್ದರೂ ನಿಜಾರ್ಥದಲ್ಲಿ ಒಕ್ಕಲಿನ ಪರಿಸ್ಥಿತಿ ಅಷ್ಟೇನೂ ಸುಧಾರಿಸಿಲ್ಲ. ಇದಕ್ಕೆ ಅನೇಕ ಕಾರಣಗಳಿವೆ. ಮೊದಲನೆಯದಾಗಿ, ರೈತನಿಗೆ ಕಾಯಿದೆಯ ನಿಯಮಗಳ ಅರಿವಿಲ್ಲದ ಕಾರಣ ಆತ ಕಾಯಿದೆಯಿಂದ ಪ್ರಯೋಜನ ಪಡೆಯಲು ಪ್ರಯತ್ನಿಸುತ್ತಿಲ್ಲ ಅರಿವಿದ್ದರೂ ಕಾಯಿದೆಯಿಂದ ಪ್ರಯೋಜನ ಹೊಂದಲು ಅಧಿಕ ವೆಚ್ಚ ತಗಲುತ್ತದೆ. ಕೋರ್ಟು ಕಛೇರಿಗಳಿಗೆ ಓಡಾಡುವ ಖರ್ಚು ಅವನ ಶಕ್ತಿ ಮೀರಿದ್ದು. ಅಲ್ಲದೇ ಎಲ್ಲಿಯವರೆಗೆ ಜಮೀನಿನ ಮೇಲೆ ಒತ್ತಡವಿರುತ್ತ ದೆಯೊ ಅಲ್ಲಿಯ ವರೆಗೆ ಯಾವ ರೀತಿಯ ಕಾಯಿದೆಯೂ ಪರಿಣಾಮಕಾರಿಯಾಗುವುದಿಲ್ಲ. ಕಾನೂನು ನಿಯಮಗಳಿಂದ ತಪ್ಪಿಸಿಕೊಳ್ಳಲು ಅನೇಕ ಜಮೀನು ಮಾಲೀಕರು ತಮ್ಮ ಸಾಗುವಳಿದಾರರೊಂದಿಗೆ ಸುಳ್ಳು ಒಪ್ಪಂದಗಳನ್ನು ಮಾಡಿಸಿಕೊಂಡಿರುತ್ತಾರೆ. ತಮ್ಮ ಜೀವನಕ್ಕೆ ಜಮೀನೇ ಆಧಾರವಾದ್ದರಿಂದ ಸಾಗುವಳಿದಾರರು ಇಂಥ ಒಪ್ಪಂದಗಳಿಗೆ ಬದ್ಧರಾಗುವುದು ಅನಿವಾರ್ಯ. ಉದಾಹರಣೆಗೆ, ಅನೇಕ ಜಮೀನು ಮಾಲೀಕರು ತಮ್ಮ ಸಾಗುವಳಿದಾರರಿಂದ ಅವರು ಕೇವಲ ಕೂಲಿಯಾಳುಗಳು ಎಂದು ಬರೆಸಿಕೊಳ್ಳುವುದುಂಟು. ಹಾಗೆಯೇ ಒಕ್ಕಲುತನದ ಭದ್ರತೆಯ ನಿಯಮದಿಂದ ತಪ್ಪಿಸಿಕೊಳ್ಳಲು ಜಮೀನು ಮಾಲೀಕರು ಸಾಗುವಳಿದಾರರೊಂದಿಗೆ ಒಪ್ಪಂದಕ್ಕೆ ಬಂದು ಅವರೇ ಸ್ವಪ್ರೇರಣೆಯಿಂದ ಜಮೀನನ್ನು ಬಿಟ್ಟುಕೊಟ್ಟಂತೆ ಮಾಡಿ ಅಧಿಕ ಪ್ರಮಾಣದ ಉಚ್ಚಾಟನೆ ನಡೆದಿವೆ. ಇದನ್ನು ತಪ್ಪಿಸಲು ಎರಡನೆಯ ಯೋಜನೆ ಎರಡು ಸಲಹೆಗಳನ್ನು ನೀಡಿತು: 1. ಸ್ವಪ್ರೇರಣೆಯಿಂದ ಜಮೀನನ್ನು ಬಿಟ್ಟುಕೊಡುವ ಹಾಗಿದ್ದರೆ ರೆವೆನ್ಯೂ ಅಧಿಕಾರಿಯ ಮುಂದೆ ರಿಜಿಸ್ಟರ್ ಆಗದ ಹೊರತು ಅಂತ ವ್ಯವಸ್ಥೆಯನ್ನು ಒಪ್ಪಕೂಡದು. 2. ಸ್ಪಪ್ರೇರಣೆಯಿಂದ ಬಿಡಲಾದ ಜಮೀನಿನ ಬಗ್ಗೆ, ಮಾಲೀಕ ತಾನು ಹಿಂದಕ್ಕೆ ಪಡೆದುಕೊಳ್ಳಬಹುದಾದ ಹಕ್ಕು ಎಷ್ಟಿದೆಯೊ ಅಷ್ಟು ಮಾತ್ರ ಜಮೀನನ್ನು ಸ್ವಯಂ ಸಾಗುವಳಿಗೆ ಪಡೆದುಕೊಳ್ಳಬೇಕು. ಆದರೆ ಕಾಯಿದೆಗಳು ಈ ಸಲಹೆಗಳನ್ನು ಗಮನಕ್ಕೆ ತೆಗೆದುಕೊಂಡ ಹಾಗೆ ಕಾಣಲಿಲ್ಲ.

ಹೀಗಾಗಿ ಕಾನೂನಿನ ಪ್ರಯೋಜನಗಳು ಅನೇಕ ಸಾಗುವಳಿದಾರರಿಗೆ ಸಿಗುತ್ತಿಲ್ಲ. ಪ್ರಾಯಶಃ ಕಾಯಿದೆಗಳ ನಿಯಮಗಳನ್ನು ಸರ್ಕಾರ ದಕ್ಷತೆಯಿಂದ ಕಾರ್ಯರೂಪಕ್ಕೆ ತಂದರೆ ಒಕ್ಕಲುಗಳ ಸ್ಥಿತಿಗತಿ ಉತ್ತಮಗೊಳ್ಳಬಹುದು. ಒಕ್ಕಲುತನ ಸುಧಾರಣೆಯ ನಿಯಮಗಳನ್ನು ಕಾರ್ಯರೂಪಕ್ಕೆ ತಂದ ಪಕ್ಷದಲ್ಲಿ ರೈತರು ಅಧಿಕ ಉತ್ಪನ್ನ ಬೆಳೆಯಲು ಉತ್ತೇಜನ ನೀಡಬಹುದು. ಆದರೆ ಉತ್ಪಾದನೆ ಹೆಚ್ಚಿಸಲು ಒಕ್ಕಲುತನದ ಸಮಸ್ಯೆಗಳ ಪರಿಹಾರ ಒಂದು ಕ್ರಮ ಮಾತ್ರ. ಸಣ್ಣ ಪ್ರಮಾಣದ ಹಿಡುವಳಿಗಳು, ಸಾಗುವಳಿಗೆ ಅಗತ್ಯ ಹಣಕಾಸಿನ ಕೊರತೆ, ಸಾಂಪ್ರದಾಯಿಕ ಬೇಸಾಯ ವಿಧಾನಗಳು-ಇವು ಇತರ ಸಮಸ್ಯೆಗಳು. ಈ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಿದರೆ ಮಾತ್ರ ಉತ್ಪನ್ನದ ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಇದಕ್ಕಾಗಿ ಸಹಕಾರಿ ಬೇಸಾಯ ಮುಂತಾದ ಕ್ರಮಗಳನ್ನು ಸರ್ಕಾರ ಪ್ರಯೋಗಿಸಬಹುದು. (ಎ.ಬಿ.ಎ.)

ಉಲ್ಲೇಖಗಳು ಬದಲಾಯಿಸಿ