ಎ.ಎನ್.ಮೂರ್ತಿರಾವ್

ಡಾ. ಎ.ಎನ್.ಮೂರ್ತಿ ರಾವ್ (ಅಕ್ಕಿಹೆಬ್ಬಾಳು ನರಸಿಂಹಮೂರ್ತಿರಾಯರು)[೧] (ಜೂನ್ ೧೬, ೧೯೦೦ - ೨೪ ಆಗಸ್ಟ್, ೨೦೦೩)- ಕನ್ನಡದ ಖ್ಯಾತ ವಿಮರ್ಶಕ ಮತ್ತು ಸಾಹಿತಿ. ಶತಾಯುಷಿಯಾಗಿ ಮೂರು ಶತಮಾನಗಳಲ್ಲಿ ( ೧೯,೨೦,೨೧ನೆಯ ಶತಮಾನಗಳು) ಬದುಕಿದ ವ್ಯಕ್ತಿ.

ಎ.ಎನ್.ಮೂರ್ತಿರಾವ್
ಚಿತ್ರ[[File:|200px]]
ಜನನದ ದಿನಾಂಕ೧೬ ಜೂನ್ 1900
ಹುಟ್ಟಿದ ಸ್ಥಳಮಂಡ್ಯ ಜಿಲ್ಲೆ
ಸಾವಿನ ದಿನಾಂಕ೨೩ ಆಗಸ್ಟ್ 2003
ವೃತ್ತಿಲೇಖಕ
ರಾಷ್ಟ್ರೀಯತೆಭಾರತ, ಬ್ರಿಟಿಷ್ ರಾಜ್
ಮಾತನಾಡುವ ಅಥವಾ ಬರೆಯುವ ಭಾಷೆಗಳುಕನ್ನಡ
ಪೌರತ್ವಭಾರತ, ಬ್ರಿಟಿಷ್ ರಾಜ್
ದೊರೆತ ಪ್ರಶಸ್ತಿಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಲಿಂಗಪುರುಷ

ಜನನ, ಕುಟುಂಬಸಂಪಾದಿಸಿ

ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು ಅವರ ಜನ್ಮಸ್ಥಳ. ತಂದೆ ಎ.ಸುಬ್ಬರಾವ್ ತಾಯಿ ಪುಟ್ಟಮ್ಮ, ಹೆಂಡತಿ ಜಯಲಕ್ಷ್ಮಿ. ಮಕ್ಕಳು: ಎ.ಎನ್. ಸುಬ್ಬರಾಮಯ್ಯ, ಎ.ಎನ್. ನಾಗರಾಜ್ ಮತ್ತು ಎ.ಎನ್ ರಾಮಚಂದ್ರರಾವ್,[೨].

ವಿದ್ಯಾಭ್ಯಾಸಸಂಪಾದಿಸಿ

 • 'ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲು'
 • ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಎಂ.ಎ. (ಇಂಗ್ಲೀಷ್ ಸಾಹಿತ್ಯ)

ವ್ಯಕ್ತಿತ್ವಸಂಪಾದಿಸಿ

ಪರಿಪಕ್ವತೆ ಎನ್ನುವ ಮಾತು ಲಕ್ಷ ಜನರಲ್ಲಿ ಒಬ್ಬರಿಗೆ ಸಾರ್ಥಕವಾಗಿ ಅನ್ವಯಿಸಬಹುದೇನೋ! ಅಂತಹ ಒಬ್ಬರು ಡಾಕ್ಟರ್ ಎ.ಎನ್.ಮೂರ್ತಿರಾಯರು. ಒಂದು ನೂರು ವರ್ಷಕ್ಕೆ ಕಾಲಿಟ್ಟಿರುವ ಅವರ ವಯಸ್ಸು ಕಾಣುವುದು ಅವರ ಬಿಳಿ ಕೂದಲಿನಲ್ಲಿ ಅವರ ವಿದ್ವತ್ತಿನಲ್ಲಿ, ಅವರ ಪರಿಪಕ್ವತೆ ಯಲ್ಲಿ. ಆದರೆ ನಡಿಗೆಯ ವೇಗದಲ್ಲಿ, ಜೀವನ ಶ್ರದ್ದೆಯಲ್ಲಿ, ಪುಸ್ತಕಗಳನ್ನು ಓದುವ ಉತ್ಸಾಹದಲ್ಲಿ ಅವರು ಇನ್ನು ಐವತ್ತು ವರ್ಷ ಚಿಕ್ಕವರು. ಇವತ್ತಿಗು ಬೆಳಗಾಗಿ ೫ ಗಂಟೆಗೆ ೫ ಮೈಲಿ ಸುತ್ತಾಟಕ್ಕೆ ಸಿದ್ಧರೆ. ಒಳ್ಲೆಯ ಸಂಗೀತ ಕಛೇರಿ ಇದೆ ಎಂದರೆ ಬೆಂಗಳೂರಿನಿಂದ ಮೈಸೂರಿಗೆ ಹೋಗುವವರೆ. ‘ಒಂದು ಒಳ್ಳೆಯ ಪುಸ್ತಕ ಓದಿದೆ’ ಅದನ್ನು ಪಡೆದು ಓದುವವರೆ, ನದಿಯಲ್ಲಿ ಸಾದ್ಯವಾದಷ್ಟು ದೂರ ನಡೆದು ಹೋಗಿ ಸ್ನಾನ ಮಾಡುವವರೆ. ಇತರರನ್ನು ತಮನ್ನೂ ಹಾಸ್ಯ ಮಾಡಿಕೊಳ್ಳುತ್ತ ಗಂಟೆಗಟ್ಟಲೆ ಕಳೆಯುವವರು. ಆ ಹಾಸ್ಯದಲ್ಲಿ ಕುಚೇಷ್ಟೆ ಇಲ್ಲ, ಹಗುರ ಮಾತಿಲ್ಲ. ಅವರ ಪರಿಪಕ್ವತೆ ಅವರ ಸಾಹಿತ್ಯದಲ್ಲಿ, ನಿತ್ಯಜೀವನದಲ್ಲಿ, ಇತರೊಡನೆ ನಡೆದುಕೊಳ್ಳುವ ರೀತಿಯಲ್ಲಿ ಕಾಣುತ್ತದೆ. ಜೀವನದ ಗಂಭೀರ ಅನುಭವಗಳು, ಸಾಮಾನ್ಯ ಅನುಭವಗಳು ಇವುಗಳಿಗೆ ಅವರು ತೋರಿಸುವ ಪ್ರತಿಕ್ರಿಯೆಯಲ್ಲಿ ಕಾಣುತ್ತದೆ. ಅವರು ಮೊದಲು ಪ್ರಸಿದ್ದರಾದದ್ದು ‘ಆಷಾಢಭೂತಿ’ ನಾಟಕದಿಂದ. ‘ಹಗಲು ಕನಸುಗಳು’, ‘ಅಲೆಯುವ ಮನ’ ಪ್ರಬಂಧ ಸಂಗ್ರಹಗಳಿಂದ ‘ಷೇಕ್ಸ್ ಪಿಯರ್’ ಪುಸ್ತಕದಿಂದ. ಪ್ರಾಯಶಃ ಅವರು ಸರ್ಕಾರಿ ಕೆಲಸದಿಂದ ನಿವೃತ್ತರಾಗುವ ಮೊದಲು ಬರೆದದ್ದಕ್ಕಿಂತ ಅನಂತರ ಬರೆದದ್ದೆ ಹೆಚ್ಚು. ‘ಹಗಲು ಕನಸುಗಳು’ ಪ್ರಕಟವಾದಾಗ ಅವರಿಗೆ ೩೭ ವರ್ಷ. ಅಲ್ಲಿಂದ ಪ್ರಾರಂಭವಾಗಿ ಅವರು ಇತ್ತೀಚೆಗೆ ಬರೆದ ‘ದೇವರು’ ಪುಸ್ತಕದವರೆಗೆ ಕಾಣುವುದು ಹೃದಯ ಬುದ್ಧಿಗಳೆರಡರ ಸಮತೋಲನ ಸಾಧಿಸಿದ ಪ್ರಕಾಶ ಮಾನವ ಮನಸ್ಸು. ಕಠಿಣ ವಾಸ್ತವಿಕತೆ, ಕ್ರಿಯಾಶಕ್ತಿಗಳ ಅಗತ್ಯವನ್ನು ಗುರುತಿಸುತ್ತಲೆ ಕನಸುಗಳ ಅಗತ್ಯವನ್ನು ಅರಿಯಬಲ್ಲ, ಬಾಳಿನ ದುಃಖ, ಅನ್ಯಾಯ, ರಹಸ್ಯಗಳ ಅರಿವಿರುವ, ಸುತ್ತಲಿನ ಮನುಷ್ಯರ ದೌರ್ಬಲ್ಯ, ಸಣ್ಣತನ, ಮಿತಿಗಳನ್ನು ಕಾಣಬಲ್ಲ, ಈ ಮಣ್ಣಿನ ದೇಹದಲ್ಲಿ ಎಂತಹ ಹಿರಿಮೆ ಬೆಳಗುತ್ತದೆ ಎಂದು ಕೃತಜ್ಞತೆಯಿಂದ ಸಂತೋಷಪಡಬಲ್ಲ ಮನಸ್ಸು. ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಾಗ ನಡೆದ ಒಂದು ಘಟನೆಯನ್ನು ಅಂದು ಅವರ ಜೊತೆಗಿದ್ದವರು ಹೇಳುತ್ತಾರೆ. ಆವತ್ತು ಮೈಸೂರಿನಲ್ಲಿ ಹಿರಿಯ ವಿದ್ವಾಂಸರೊಬ್ಬರು ಡಾಕ್ಟರ್ ರಾಮನಾಥನ್ ಅವರದು ಎಂದು ಕಾಣುತ್ತದೆ. ಸಂಗೀತ ಕಛೇರಿ, ಮೂರ್ತಿರಾಯರು ಸಂಗೀತಕ್ಕೆ ಹೋಗಿದ್ದರು. ಅವರಿಗೆ ಪ್ರಶಸ್ತಿ ಬಂದ ಸುದ್ದಿ ಆಗ ತಾನೆ ಪ್ರಕಟವಾಯಿತು. ಅವರ ಅಭಿಮಾನಿಗಳೊಬ್ಬರು ಆ ವಿಷಯ ಪ್ರಸ್ತಾಪಿಸಿದಾಗ ಮೂರ್ತಿರಾಯರು ಹೇಳಿದರು, “ಈ ದಿವ್ಯ ಸಂಗೀತ ಕಿವಿಯನ್ನು ತುಂಬಿರಬೇಕಾದರೆ ಆ ಮಾತು ಯಾಕೆ, ಬಿಡಿ”. ಮೂರ್ತಿರಾಯರು ಡಾ.ರಾಧಕೃಷ್ಣನ್ ಅವರ ಶಿಷ್ಯರು. ಅವರನ್ನು ಕುರಿತು ಒಂದೆಡೆ ಬರೆಯುತ್ತಾರೆ. “ಅವರ ಪಾಂಡಿತ್ಯ ಸದಾ ಅವರ ಹೆಕ್ಕತ್ತಿನ ಮೇಲೆ ಕುಳಿತಿರುವಂಥಾದಲ್ಲ, ಅದು ಅವರ ತೊತ್ತು, ಕರೆದಾಗ ಮಾತ್ರ ಬರುವಂಥದು”. ಇದೇ ಮಾತನ್ನು ರಾಯರಿಗೂ ಅನ್ವಯಿಸಿ ಹೇಳಬಹುದು. ಇಂಗ್ಲಿಷ್, ಕನ್ನಡ, ಭಾಷೆಗಳನ್ನೂ ಸಾಹಿತ್ಯವನ್ನೂ ಅಂಗೈಯ ನೆಲ್ಲಿಕಾಯಿ ಮಾಡಿಕೊಂಡಿರುವವರು. ಫ್ರೆಂಚ್ ಭಾಷೆ ಬಲ್ಲವರು. ಕಾಲೇಜಿನಲ್ಲಿ ತತ್ವಶಾಸ್ತವನ್ನು ಅಭ್ಯಾಸ ಮಾಡಿ ಇಂದಿನವರೆಗೂ ಪಾಶ್ಚಾತ್ಯ ಭಾರತೀಯ ತತ್ವಶಾಸ್ತ್ರಗಳಲ್ಲಿ ಜೀವಂತ ಆಸಕ್ತಿ ಉಳಿಸಿಕೊಂಡಿರುವವರು. ಉಪನಿಷತ್ತು, ವೇದ, ರಾಮಾಯಣ, ಮಹಾಭಾರತ ಅವು ಧರ್ಮ ಗ್ರಂಥಗಳೆಂಬ ದೃಷ್ಠಿಯಿಂದಲ್ಲ, ಮನುಷ್ಯನ ಪ್ರತಿಭೆ ಸೃಷ್ಟಿಸಿರುವ ಮೇರುಕೃತಿಗಳೆಂದು ಅಭ್ಯಾಸ ಮಾಡಿದ್ದಾರೆ. ವಿಜ್ಞಾನ, ಅರ್ಥಶಾಸ್ತ್ರ, ಸಮಾಜ ವಿಜ್ಞಾನ ಮೊದಲಾದವುಗಳಲ್ಲಿ ಆಸಕ್ತಿಯನ್ನು ಉಳಿಸಿಕೊಂಡು ಪುಸ್ತಕಗಳನ್ನೂ ಇಂದೂ ಓದುತ್ತಾರೆ. ಅವರಿಂದು ಬಾಹ್ಯವಾಗಿ ನಮ್ಮೊಡನಿಲ್ಲವಾದರೂ, ಅವರ ಸಾಹಿತ್ಯ ವೈಚಾರಿಕ ವಿಮರ್ಶೆ, ತಾತ್ವ್ತಿಕದೃಷ್ಠಿಕೋನದ ಮೂಲಕ ಸದಾ ಜೀವಂತವಾಗಿರುತ್ತಾರೆ.

ವೃತ್ತಿಸಂಪಾದಿಸಿ

 • ಮೈಸೂರಿನ ಮಹಾರಾಜಾ ಹೈಸ್ಕೂಲಿನಲ್ಲಿ ಉಪಾಧ್ಯಾಯರು, ೧೯೨೫-೧೯೨೭
 • ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರು, ೧೯೨೭-೧೯೪೦
 • ಶಿವಮೊಗ್ಗದ ಇಂಟರ್ಮೀಡಿಯೆಟ್ ಕಾಲೇಜಿನಲ್ಲಿ ಉಪಪ್ರಾಧ್ಯಾಪಕರು, ೧೯೪೦-೧೯೪೩

ಗೌರವ ಕೆಲಸಗಳುಸಂಪಾದಿಸಿ

 • ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು - ೧೯೫೪
 • ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು-೧೯೫೪-೫೬
 • ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹ ಸಮಿತಿಯ ಕನ್ವೀನರ್ ಛೇರ್ಮನ್
 • ದಕ್ಷಿಣ ಭಾಷಾ ಪುಸ್ತಕ ಟ್ರಸ್ಟ್ ನ ಕನ್ನಡ ಕನ್ವೀನರ್ - ಛೇರ್ಮನ್
 • ಭಾರತೀಯ ಆಕಾಶವಾಣಿಯ 'ಕೇಂದ್ರೀಯ ಕಾರ್ಯಕ್ರಮಗಳ ಸಲಹಾ ಕಮಿಟಿ'ಯ ಸದಸ್ಯರಾಗಿ ೪ ವರ್ಷಗಳ ಕಾಲ ಸೇವೆ.
 • ಮೈಸೂರು ಸರ್ಕಾರದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ನಿರ್ದೇಶಕ

ಕೃತಿಗಳು[೩]ಸಂಪಾದಿಸಿ

ಪ್ರಬಂಧಗಳ ಮೂಲಕ ಇವರು ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ೧೯೩೭ರಲ್ಲಿ ಇವರ ಮೊದಲ ಕೃತಿ ಹೂವುಗಳು(ಪ್ರಬಂಧ ಸಂಕಲನ) ಪ್ರಕಟವಾಯಿತು. ಎಂಟು ಪ್ರಬಂಧಗಳ ಬಿಡಿ ಲೇಖನಗಳನ್ನು ಈ ಸಂಕಲನವು ಒಳಗೊಂಡಿದೆ. ದೇವರು ಎಂಬ ವೈಚಾರಿಕ ಕೃತಿಗೆ ಪಂಪ ಪ್ರಶಸ್ತಿ ಲಭಿಸಿದೆ ಮತ್ತು ಆಂಗ್ಲ ಭಾಷೆಗೆ ತರ್ಜುಮೆಯಾಗಿ ಪ್ರಸಿದ್ಧವಾಗಿದೆ.

ಅನುವಾದಗಳುಸಂಪಾದಿಸಿ

 • 'ಸಾಕ್ರೆಟೀಸನ ಕೊನೆಯ ದಿನಗಳು' (ಪ್ಲೇಟೋನ 'Enthyphro', 'Crito', Apology', Phaedo' ಸಂವಾದಗಳ ಅನುವಾದ)
 • 'ಹವಳದ ದ್ವೀಪ (ಆರ.ಎಂ.ಬ್ಯಾಲಂಟಯಿನ್ ನ 'The Coral Island' ನ ಸಂಗ್ರಹಾನುವಾದ)
 • 'ಯೋಧನ ಪುನರಾಗಮನ'(ಅನುವಾದಿತ ಕಥೆಗಳು)
 • 'ಪಾಶ್ಚಾತ್ಯ ಸಣ್ಣ ಕಥೆಗಳು' (ಅನುವಾದಿತ ಕಥೆಗಳು)
 • 'ಅಮೆರಿಕನ್ ಸಾಹಿತ್ಯ ಚರಿತ್ರೆ'
 • 'ಇಂಡಿಯ, ಇಂದು ಮತ್ತು ನಾಳೆ' (ಜವಹರಲಾಲ್ ನೆಹರೂರ 'India Today and Tomorrow' ಪುಸ್ತಕದ ಅನುವಾದ)
 • 'ಚಂಡಮಾರುತ '(ಶೇಕ್ಸ್ ಪಿಯರ್' ನ ' The Tempest' ಅನುವಾದ)
 • "ಬೂರ್ಜಾ ಆಗಿದ್ದವನು ಮಹನೀಯನಾದದ್ದು"(ಮೋಲಿಯರನ ನಾಟಕ- Le Bourgeois Gentilhomme)

ಲಲಿತ ಪ್ರಬಂಧಗಳುಸಂಪಾದಿಸಿ

 • 'ಹಗಲುಗನಸುಗಳು'
 • 'ಮಿನುಗು ಮಿಂಚು'
 • 'ಅಲೆಯುವ ಮನ'
 • 'ಜನತಾ ಜನಾರ್ದನ'
 • 'ಸಮಗ್ರ ಲಲಿತ ಪ್ರಬಂಧಗಳು'
 • 'ಸಮಗ್ರ ಲಲಿತ ಪ್ರಬಂಧಗಳು '(ವಿಸ್ತೃತ ಆವೃತ್ತಿ)

ರೂಪಾಂತರಗಳುಸಂಪಾದಿಸಿ

 • 'ಆಷಾಢಭೂತಿ '(ಫ್ರೆಂಚ್ ನ ಮೋಲಿಯರನ 'ತಾರ್ತುಫ್'ನಾಟಕದ ರೂಪಾಂತರ). ಆಷಾಡಭೂತಿಯನ್ನು ಆಧರಿಸಿ ಎಂ.ವಿ.ಕೃಷ್ಣಸ್ವಾಮಿಯವರು ಸುಬ್ಬಾಶಾಸ್ತ್ರಿ ಎಂಬ ಸಿನಿಮಾವನ್ನು ನಿರ್ಮಿಸಿದ್ದಾರೆ.

ವಿಮರ್ಶೆಸಂಪಾದಿಸಿ

 • 'ಷೇಕ್ಸ್ ಪಿಯರ್'-ಪೂರ್ವಭಾಗ
 • 'ಮಾಸ್ತಿಯವರ ಕಥೆಗಳು'
 • 'ಪೂರ್ವ ಸೂರಿಗಳೊಡನೆ'
 • 'ಸಾಹಿತ್ಯ ಮತ್ತು ಸತ್ಯ'
 • 'ವಿಮರ್ಶಾತ್ಮಕ ಪ್ರಬಂಧಗಳು',

ಲೇಖನ ಗ್ರಂಥಗಳುಸಂಪಾದಿಸಿ

 • 'ಜನತಾ ಜನಾರ್ದನ'
 • 'ಗಾನ ವಿಹಾರ'

ಇತರೆಸಂಪಾದಿಸಿ

 • 'ಚಿತ್ರಗಳು ಪತ್ರಗಳು' (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ)
 • 'ಬಿ.ಎಂ.ಶ್ರೀಕಂಠಯ್ಯ' (ವಿಮರ್ಶಾತ್ಮಕ ಜೀವನ ಚರಿತ್ರೆ)
 • 'ಅಪರವಯಸ್ಕನ ಅಮೆರಿಕಾ ಯಾತ್ರೆ' (ಪ್ರವಾಸ ಕಥನ)
 • 'ಸಂಜೆಗಣ್ಣಿನ ಹಿನ್ನೋಟ' (ಆತ್ಮಚರಿತ್ರೆ)
 • 'ದೇವರು (ವಿಚಾರ)
 • 'ಮಹಾಭಾರತದಲ್ಲಿ ಕೇಡು ಎಂಬುದರ ಸಮಸ್ಯೆ'

ಪುರಸ್ಕಾರಗಳುಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

 1. "'ಕಣಕ'-ದಶಕದ ಕನ್ನಡ ಸಾಹಿತ್ಯ: ೬. ಲಲಿತ ಪ್ರಬಂಧ". Archived from the original on 2016-03-04. Retrieved 2014-10-28.
 2. "ಎ. ಎನ್. ಮೂರ್ತಿರಾವ್ ವ್ಯಕ್ತಿ ಪರಿಚಯ". sampada.net/. Archived from the original on 2016-03-16. Retrieved 6-2-2014. Check date values in: |accessdate= (help)
 3. "ದೇವರ ಪ್ರಶ್ನಿಸಿದ ಎ.ಎನ್‌.ಮೂರ್ತಿರಾವ್‌ 'ಹೆಬ್ಬಾಳು' ಪಕ್ಷಿನೋಟ". kannada.oneindia.in/. Retrieved 6-2-2014. Check date values in: |accessdate= (help)[permanent dead link]
 4. "ಎ ಎನ್ ಮೂರ್ತಿರಾವ್". navakarnataka.com/. Retrieved 6-2-2014. Check date values in: |accessdate= (help)