ಎಂ. ಎಸ್. ಕೆ. ಪ್ರಭು
ಮಂದಗೆರೆ ಸೀತಾರಾಮಯ್ಯ ಕೇಶವ ಪ್ರಭು (ಜುಲೈ ೧೫, ೧೯೩೮ - ಜನವರಿ ೨೫, ೨೦೦೦) ಕನ್ನಡ ಸಾಹಿತ್ಯ ಲೋಕದಲ್ಲಿ ಎಂ. ಎಸ್. ಕೆ. ಪ್ರಭು ಎಂದೇ ಚಿರಪರಿಚಿತರು. ಅವರು ಗ್ರೀಕ್ ನಾಟಕಗಳಿಂದ ಭಾರತದ ಜಾನಪದ ಸಾಹಿತ್ಯದವರೆಗೆ, ವಿಜ್ಞಾನ ಲೇಖನಗಳಿಂದ ಉಪನಿಷತ್ತಿನವರೆಗೆ, ಅಸಂಗತ ನಾಟಕಗಳಿಂದ ನವೋದಯ ಕಾವ್ಯದವರೆಗೆ ಬಹುವಿಸ್ತಾರವಾದ ವ್ಯಾಸಂಗದಿಂದ ಬಹುಶ್ರುತರೆನಿಸಿದ್ದವರು.
ಎಂ. ಎಸ್. ಕೆ. ಪ್ರಭು | |
---|---|
ಜನನ | ಮಂದಗೆರೆ ಸೀತಾರಾಮಯ್ಯ ಕೇಶವ ಪ್ರಭು ಜುಲೈ ೧೫, ೧೯೩೮ ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆ ತಾಲ್ಲೂಕಿನ ಮಂದಗೆರೆ |
ಮರಣ | ಜನವರಿ ೨೫, ೨೦೦೦ |
ವೃತ್ತಿ | ಸಾಹಿತಿ, ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಹಣಾ ಅಧಿಕಾರಿಗಳು |
ವಿಷಯ | ಕನ್ನಡ ಸಾಹಿತ್ಯ |
ಜೀವನ
ಬದಲಾಯಿಸಿಎಂ. ಎಸ್. ಕೆ. ಪ್ರಭು ಅವರು ೧೯೩೮ರ ಜುಲೈ ೧೫ರಂದು ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆ ತಾಲ್ಲೂಕಿನ ಮಂದಗೆರೆ ಎಂಬ ಗ್ರಾಮದಲ್ಲಿ ಜನಿಸಿದರು. ಅವರು ಸಾಹಿತ್ಯಲೋಕದಲ್ಲಿ ಎಂ. ಎಸ್. ಕೆ. ಪ್ರಭು ಎಂದೇ ಪ್ರಸಿದ್ಧರು. ತಂದೆ ಸೀತಾರಾಮಯ್ಯನವರು ಮತ್ತು ತಾಯಿ ಸೀತಮ್ಮನವರು. ಪ್ರಭು ಅವರ ಪ್ರಾಥಮಿಕ ಶಿಕ್ಷಣ ಮಂದಗೆರೆ ಹಾಗೂ ಹೊಳೆನರಸೀಪುರಗಳಲ್ಲಿ ನಡೆಯಿತು. ಪ್ರೌಢಶಿಕ್ಷಣವನ್ನು ಮೈಸೂರಿನಲ್ಲಿ ಪಡೆದ ಅವರು ಮುಂದೆ, ಮೈಸೂರು ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಮೊದಲ ದರ್ಜೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಪ್ರಭುರವರು ಮೊದಲು ಉದ್ಯೋಗಕ್ಕೆ ಸೇರಿದ್ದು ಬೆಂಗಳೂರಿನ ಅಕೌಂಟೆಂಟ್ ಜನರಲ್‌ರವರ ಕಚೇರಿಯಲ್ಲಿ. ಅಲ್ಲಿ 1961ರಿಂದ 1977ರ ವರ್ಷದವರೆಗೆ ಅಲ್ಲಿ ಕಾರ್ಯನಿರ್ವಹಿಸಿದ ಪ್ರಭು ಅವರು ಮುಂದೆ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಹಣಾ ಅಧಿಕಾರಿಗಳಾಗಿ ಆಗಿ ಆಯ್ಕೆಗೊಂಡು ಭದ್ರಾವತಿ, ಧಾರವಾಡ, ಬೆಂಗಳೂರು ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿ ೧೯೯೬ರ ವರ್ಷದಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದರು. ಪ್ರಭು ಅವರು ತಮ್ಮ ತಂದೆ, ತಾತ, ಮುತ್ತಾತಂದಿರಿಂದ ಸಾಹಿತ್ಯ ಪ್ರೇರಣೆ ಪಡೆದರು. ಅವರ ತಾತನವರು ಸ್ವತಃ ಹಾಡುಗಳನ್ನು ರಚಿಸುತ್ತಿದ್ದರು. ತಂದೆಯವರು ಕುಮಾರವ್ಯಾಸಭಾರತದ ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಇದೇ ಪ್ರವೃತ್ತಿಯನ್ನು ಮೈಗೂಡಿಕೊಂಡಿದ್ದ ಪ್ರಭು ಅವರು ಚಿಕ್ಕಂದಿನಿಂದಿನಲ್ಲಿ ಹಳ್ಳಿಯಲ್ಲಿ ಇಡೀ ರಾತ್ರಿ ನಡೆಯುತ್ತಿದ್ದ ನಾಟಕಗಳನ್ನು ನೋಡಿ ತದ್ವತ್ ಅದೇ ರೀತಿ ನಟಿಸಿ ತೋರಿಸುವ ಅಭಿನಯ ಚತುರತೆಯನ್ನು ಪಡೆದಿದ್ದರು. ಜೊತೆಗೆ ಅಗಾಧ ಸ್ಮರಣಶಕ್ತಿಯೂ ಅವರದ್ದಾಗಿತ್ತು.
ಭೈರಪ್ಪನವರ ಬರಹಗಳ ಪ್ರಥಮ ಓದುಗ
ಬದಲಾಯಿಸಿಪ್ರಸಿದ್ಧ ಕಾದಂಬರಿಕಾರರಾದ ಎಸ್.ಎಲ್. ಭೈರಪ್ಪನವರು ಕರ್ನಾಟಕದಿಂದ ಹೊರಗಿರುವಾಗ ಇವರಿಗೂ ಕರ್ನಾಟಕಕ್ಕೂ ಬೌದ್ಧಿಕ ಕೊಂಡಿಯಾಗಿದ್ದವರು ಎಂ..ಎಸ್.ಕೆ.ಪ್ರಭುರವರು. ಅವರು ಭೈರಪ್ಪನವರ ಬರಹಗಳ ಮೊದಲ ಓದುಗರಾಗಿದ್ದರು. ಕರ್ನಾಟಕದಲ್ಲಿ ನಡೆಯುತ್ತಿದ್ದ ಸಾಹಿತ್ಯ ಮತ್ತು ಸಾಂಸ್ಕೃತಿಕ ಬೆಳವಣಿಗೆಗಳನ್ನು ಭೈರಪ್ಪನವರಿಗೆ ತಿಳಿಸುತ್ತಿದ್ದರು. “ಗುಜರಾತು ಮತ್ತು ದಿಲ್ಲಿಯಲ್ಲಿದ್ದಾಗ ಕನ್ನಡ ಸಾಹಿತ್ಯವನ್ನು ಚರ್ಚಿಸಲು ನನಗೆ ಬೇರೆ ಯಾರೂ ಇರಲಿಲ್ಲ. ಕರ್ನಾಟಕಕ್ಕೆ ಬರುವುದೆಂದರೆ ಪ್ರಭುವಿನೊಡನೆ ಚರ್ಚಿಸುವುದು, ಕೆಲ ದಿನಗಳನ್ನು ಕಳೆಯುವುದು ಮುಖ್ಯ ಉದ್ದೇಶವಾಗಿರುತ್ತಿತ್ತು. ನನ್ನ ತಲೆಯಲ್ಲಿ ಮೊಳಕೆಯೊಡೆಯುತ್ತಿದ್ದ ವಸ್ತುಗಳನ್ನು ಹೇಳುವುದರಿಂದ ಹಿಡಿದು ಎಷ್ಟೋ ಸಾಹಿತ್ಯ ಸಮಸ್ಯೆಗಳನ್ನು ಅವರೊಡನೆ ಚರ್ಚಿಸುತ್ತಿದ್ದೆ. ಸ್ವತಃ ಸೃಜನಶೀಲ ಪ್ರತಿಭೆ ಇರುವ ಅವರು ನನ್ನ ಕಥೆಯ ವಸ್ತು, ಪಾತ್ರಗಳ ಅಂತರಂಗವನ್ನು ಹೊಕ್ಕು ಅರಿತು ಸಲಹೆ ಸೂಚನೆಗಳನ್ನೂ ಕೊಡುತ್ತಿದ್ದರು” ಎಂದು ಭೈರಪ್ಪನವರು ತಮ್ಮ ಆತ್ಮ ವೃತ್ತಾಂತದ ‘ಭಿತ್ತಿ’ಯಲ್ಲಿ ಬರೆದಿದ್ದಾರೆ.
ಆಕಾಶವಾಣಿಯಲ್ಲಿ
ಬದಲಾಯಿಸಿಆಕಾಶವಾಣಿಗೆ ಸೇರಿದ ನಂತರ ನಾಟಕ ಸ್ಪರ್ಧೆಯಲ್ಲಿ ಪ್ರಭು ಅವರ ‘ಕುರಿತೇಟು’ ನಾಟಕವು ‘ಸರ್ಟಿಫಿಕೇಟ್ ಆಫ್ ಮೆರಿಟ್’ ಗಳಿಸಿದ್ದರೆ, ಅವರು ಇಂಗ್ಲಿಷಿಗೆ ತರ್ಜುಮೆಗೊಳಿಸಿದ್ದ ಗಿರೀಶ್ ಕಾರ್ನಾಡರ ‘ಮಾನಿಷಾದ’ ನಾಟಕವು ಆಕಾಶವಾಣಿಯ ವಾರ್ಷಿಕ ಸ್ಪರ್ಧೆಯಲ್ಲಿ ಪ್ರವೇಶ ಪಡೆದಿತ್ತು. ಇದಲ್ಲದೆ ಅವರು ಹಲವಾರು ಶಬ್ಧ ಚಿತ್ರಗಳನ್ನೂ ನಿರ್ಮಿಸಿದ್ದು ಅವುಗಳಲ್ಲಿ ಐನ್‌ಸ್ಟೀನ್‌ರ ‘ಸಂಸಾರಾಲಯ’ ಮತ್ತು ‘ಅವತಾರ’ ಮುಖ್ಯವಾದವುಗಳು. ಸಂಸಾರಾಲಯದಲ್ಲಿ ‘ಕ್ವಾಂಟಮ್ ಫಿಸಿಕ್ಸ್’ನ ಮೂಲತತ್ವಗಳನ್ನು ಆಧಾರವಾಗಿಟ್ಟುಕೊಂಡು ನಾಲ್ಕನೆಯ ಆಯಾಮದ ಬಗೆಗೆ ಪರಿಶೋಧಿಸಿದರೆ, ಅವತಾರದಲ್ಲಿ ವಿಕಾಸವಾದದ ಭಾರತೀಯ ಕಲ್ಪನೆಯನ್ನು ಡಾರ್ವಿನ್ ಸಿದ್ಧಾಂತದೊಡನೆ ತೌಲನಿಕವಾಗಿ ವಿವೇಚಿಸುವ ಅಪರೂಪದ ಶಬ್ಧ ಚಿತ್ರಗಳನ್ನು ಅವರು ನಿರ್ಮಿಸಿದ್ದರು.
ಕಥೆಗಳು
ಬದಲಾಯಿಸಿಪ್ರಭು ಅವರು ಆಗಾಗ್ಗೆ ಬರೆದ ಕಥೆಗಳನ್ನು ಸಂಕಲಿಸಿ ಹೊರತಂದ ಸಂಕಲನಗಳೆಂದರೆ ಬೆತ್ತಲೆ ಅರಸನ ರಾಜ ರಹಸ್ಯ (೧೯೮೧), ಮುಖಾಬಲೆ (೧೯೯೧), ವಿದೇಶಿಕತೆಗಳು (೧೯೯೭), ಮತ್ತು ಕಾಣೆಯಾದ ಟೋಪಿ. ಮೊದಲ ಕಥಾ ಸಂಕಲನದಲ್ಲಿ ಆರು ಕತೆಗಳಿದ್ದು ಅವರ ಪ್ರಾರಂಭದ ದಿನಗಳ ಕತೆಯಾಗಿದ್ದರೂ ಸಮರ್ಥ ಕತೆಗಳೆನಿಸಿವೆ. ಎರಡನೆಯದರಲ್ಲಿ ಪ್ರಬುದ್ಧತೆಯಿಂದ ಕೂಡಿದ ಹೊಸಹಾದಿಯ ಆರು ಕತೆಗಳಿದ್ದರೆ ಮೂರು ಮತ್ತು ನಾಲ್ಕನೆಯದು ರಷ್ಯನ್, ಜರ್ಮನ್, ಇಟಾಲಿಯನ್, ಮೆಕ್ಸಿಕನ್, ಜಪಾನ್ ಭಾಷೆಗಳಿಂದ ಅನುವಾದಿಸಿದ ಕತೆಗಳ ಸಂಕಲನಗಳು.
ನಾಟಕಗಳು
ಬದಲಾಯಿಸಿನಾಟಕ ರಚನೆಯಲ್ಲಿ ವಿಶೇಷ ಒಲವಿನಿಂದ ಪ್ರಭು ಅವರು ಮೂಡಿಸಿದ ಮೂರು ನಾಟಕಗಳ ಸಂಕಲನ ‘ಬಕ’ ೧೯೭೭ರಲ್ಲಿ ಪ್ರಕಟಗೊಂಡಿತು. ಈ ಸಂಕಲನದಲ್ಲಿ ‘ಬಕ’ ನಾಟಕವೇ ಅಲ್ಲದೆ ಮತ್ತೆರಡು ನಾಟಕಗಳಾದ ‘ತಪ್ಪಿಸಿಕೊಂಡಿದ್ದಾರೆ’ ಮತ್ತು ‘ಕಡೇಗಲ್ಲಿ ಕಡೇಮನೆ’ ನಾಟಕಗಳಿವೆ. ಇವುಗಳಲ್ಲದೆ ಪ್ರಸಿದ್ಧ ನಾಟಕಕಾರ ಅಯನೆಸ್ಕೊವಿನ ‘ಲರ್ವಾಸ್‌ಮುರ್’ ನಾಟಕದ ರೂಪಾಂತರ ‘ಮಹಾಪ್ರಸ್ಥಾನ’ ೧೯೮೧ರಲ್ಲಿ ಮತ್ತು ರೋಮಿನ ದೊರೆ ಸಿಸಿರೋನ ಇತಿಹಾಸಕ್ಕೆ ಸಂಬಂಧಿಸಿದ ಘಟನೆಗಳ ಸುತ್ತ ರಚಿಸಿದ ನಾಟಕ ಸಿಸಿರೊ ೧೯೯೫ರಲ್ಲಿ ಪ್ರಕಟಗೊಂಡಿವೆ. ‘ಮುಸ್ಸಂಜೆಯಲ್ಲಿ ನಡೆದ ಘಟನೆಯು’ ಎಂಬ ನಾಟಕ ೧೯೭೪ರ ಕ್ಷಿತಿಜದ ಸಂಚಿಕೆಯಲ್ಲಿಯೂ ಮತ್ತು ‘ಶಬ್ದಕ್ಕಂಜಿದೊಡೆಂತಯ್ಯ’ ನಾಟಕವು ೧೯೭೭ರ ಕರ್ಮವೀರ ದೀಪಾವಳಿ ವಿಶೇಷಾಂಕದಲ್ಲಿಯೂ ಪ್ರಕಟಗೊಂಡಿದ್ದವು. ‘ಗುಲಾಮನ ಸ್ವಾತಂತ್ರ್ಯಯಾತ್ರೆ’, ಒಳ್ಳೆಯ ಸಮಯ ಮತ್ತು ಇತರ ನಾಟಕಗಳು ಪ್ರಭು ಅವರ ನಿಧನಾನಂತರದಲ್ಲಿ ೨೦೦೨ರ ವರ್ಷದಲ್ಲಿ ಪ್ರಕಟಗೊಂಡ ನಾಟಕಗಳು. ೧೯೮೫ರ ವರ್ಷದಲ್ಲಿ ಪ್ರಥಮ ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಪ್ರಕಟಗೊಂಡ ಸಾಹಿತ್ಯಮಾಲೆಯಲ್ಲಿ ಚಂದ್ರಕಾಂತ ಕುಸನೂರರು ಸಂಪಾದಿಸಿರುವ ‘ಏಕಾಂಕ ನಾಟಕಗಳು’ ಕೃತಿಯಲ್ಲಿ ಪ್ರಭು ಅವರ ‘ಸಾರ್ವಜನಿಕ ರಸ್ತೆ ಅಲ್ಲ’ ನಾಟಕವು ಸೇರ್ಪಡೆಗೊಂಡಿದೆ.
ಕಲ್ಪನಾ ಲೋಕ
ಬದಲಾಯಿಸಿಫ್ಯಾಂಟಸಿ ಕತೆಗಳು ಮತ್ತು ಪತ್ತೇದಾರಿ ಕಥೆಗಳ ಬಗ್ಗೆಯೂ ವಿಶೇಷ ಒಲವು ಹೊಂದಿದ್ದ ಪ್ರಭು ಅವರು ಹಲವಾರು ಫ್ಯಾಂಟಸಿ ಮತ್ತು ವಿರೋಧವಿಲಾಸ (ವಕ್ರೋಕ್ತಿವಿಲಾಸ) ಬರಹಗಳನ್ನು ೧೯೯೯ರಲ್ಲಿ ಪ್ರಕಟಿಸಿದ್ದಾರೆ. ‘ವಿರೋಧವಿಲಾಸ’ದಲ್ಲಿನ ಲೇಖನಗಳು ಹೆಸರಿಗಷ್ಟೇ ಹಾಸ್ಯಲೇಖನಗಳೆನ್ನಿಸಿದ್ದರೂ ಚಿಂತನಶೀಲ ಬರಹಗಳಾಗಿವೆ. ಇತರರೊಡನೆ ಸೇರಿ ಪ್ರಭು ಅವರು ಸಂಪಾದಿಸಿದ ಕೃತಿಗಳೆಂದರೆ ಎಲ್ಲರ ಮೂಗಿನ ಕತೆ (೧೯೯೮) ಮತ್ತು ಪತ್ತೆದಾರಿ ಕತೆಗಳ ಸಂಗ್ರಹ ಶೋಧ (೨೦೦೦). ಮಕ್ಕಳಿಗಾಗಿ ಪ್ರಭು ಅವರು ರಚಿಸಿದ ಕೃತಿ ‘ಪೋಕರಿಪಾಪಣ್ಣನ ಪರಾಕು’.
ಬಹುಮಾನ, ಪ್ರಶಸ್ತಿಗಳು
ಬದಲಾಯಿಸಿ‘ಬಕ’ ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿಪ್ರಶಸ್ತಿ (೧೯೭೯) ಮತ್ತು ವರ್ಧಮಾನ ಉದಯೋನ್ಮುಖ ಪ್ರಶಸ್ತಿ(1982); ಸಿಸಿರೊ ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ (೧೯೯೫) ಮತ್ತು ಸಮತೆಂತೋ ನಾಟಕ ರಚನಾ ಸ್ಫರ್ಧೆಯಲ್ಲಿ ಮೂರನೆಯ ಬಹುಮಾನ, ‘ಕುರಿತೇಟು’ ನಾಟಕಕ್ಕೆ ಆಕಾಶವಾಣಿಯ ವಾರ್ಷಿಕ ಪ್ರಶಸ್ತಿ ಮುಂತಾದ ಹಲವಾರು ಬಹುಮಾನ, ಪ್ರಶಸ್ತಿ, ಗೌರವಗಳು ಎಂ. ಎಸ್. ಕೆ. ಪ್ರಭು ಅವರಿಗೆ ಸಂದಿವೆ. ಉಚ್ಚಮಟ್ಟದ ಬೌದ್ಧಿಕ ಸ್ತರದ ಚಿಂತನೆ, ಬರಹಗಳಿಗೆ ಸಲ್ಲಬೇಕಿದ್ದ ಗೌರವ, ಪ್ರಶಸ್ತಿಗಳು ದೊರೆಯದಿದ್ದರೂ ಪ್ರಭು ಅವರು ಅದರ ಬಗ್ಗೆ ಎಂದೂ ತಲೆಕೆಡಿಸಿಕೊಂಡವರಲ್ಲ.
ವಿದಾಯ
ಬದಲಾಯಿಸಿಹೆಚ್ಚು ಮಾತನಾಡದ ಸೃಜನಶೀಲ ವ್ಯಕ್ತಿತ್ವದ ಪ್ರಭುರವರು ಸಾಹಿತ್ಯಲೋಕದಿಂದ ಕಣ್ಮರೆಯಾದದ್ದು 2000ದ ಜನವರಿ 25ರಂದು ಈ ಲೋಕವನ್ನಗಲಿದರು.
ಮಾಹಿತಿ ಕೃಪೆ
ಬದಲಾಯಿಸಿಕಣಜ Archived 2016-05-26 ವೇಬ್ಯಾಕ್ ಮೆಷಿನ್ ನಲ್ಲಿ.
ಕೃತಿಗಳು
ಬದಲಾಯಿಸಿನಾಟಕ
ಬದಲಾಯಿಸಿ- ಬಕ
- ಮಹಾಪ್ರಸ್ಥಾನ
- ಸಿಸೆರೊ
- ಬೆತ್ತಲೆ ಅರಸನ ರಾಜರಹಸ್ಯ
- ಮುಖಾಬಿಲೆ
- ಒಳ್ಳೆಯ ಸಮಯ ಮತ್ತು ಇತರ ನಾಟಕಗಳು
ಕಥೆ
ಬದಲಾಯಿಸಿ- ಕೆಲವು ವಿದೇಶಿ ಕತೆಗಳು
- ಕಾಣೆಯಾದ ಟೋಪಿಯ ರಹಸ್ಯ ಮತ್ತು ಇತರ ಕತೆಗಳು (ಅನುವಾದ)
- ಶೋಧ (ಪತ್ತೇದಾರಿ ಕಥಾಸಂಕಲನ)
- ವಿರೋಧ ವಿಲಾಸ
ಪ್ರಬಂಧ
ಬದಲಾಯಿಸಿ- ಸಾಹಿತ್ಯದಲ್ಲಿ ಫ್ಯಾಂಟಸಿ