ಜೇಡ

(ಊರ್ಣನಾಭ ಇಂದ ಪುನರ್ನಿರ್ದೇಶಿತ)



ಜೇಡ
Temporal range: ಕಾರ್ಬೊನಿಫೆರಸ್ ಇಂದ ಪ್ರಸಕ್ತ ಕಾಲ
ಬಲೆ ನೇಯುತ್ತಿರುವ ಒಂದು ಜೇಡ
Scientific classification
ಸಾಮ್ರಾಜ್ಯ:
ವಿಭಾಗ:
ಉಪವಿಭಾಗ:
(ಶ್ರೇಣಿಯಿಲ್ಲದ್ದು):
ವರ್ಗ:
ಗಣ:
ಉಪಗಣಗಳು

ಮೆಸೊಥೆಲೇ
ಮೈಗಾಲೋಮಾರ್ಫೇ
ಅರೇನೊಮಾರ್ಫೇ

Diversity
[[ಅರೇನಿಯ ಕುಟುಂಬಗಳು|109 families, c.40,000 species]]

ಜೇಡ(ನ್ಯೂ ಲ್ಯಾಟಿನ್‌, ಫ್ರೆಂಚ್‍ - ಚೆಲಿಕೇರ್‌ನ, ಪ್ರಾಚೀನ ಗ್ರೀಕ್‌ನಿ χηλή (khēlḗ) 'ಕ್ಲಾವ್, ಚೇಲಾ' ಮತ್ತು κέρας (ಕೆರಾಸ್) 'ಹಾರ್ನ್')[] ಆತ್ರ್ರಾಪೊಡ ವಿಭಾಗದ ಆರ್ಯಾಕ್ನಿಡ ವರ್ಗದ ಆರನೀಯಿಡ ಗಣಕ್ಕೆ ಸೇರಿದ ಒಂದು ಪ್ರಾಣಿ (ಸ್ಪೈಡರ್). ಗಾಳಿಯಿಂದ ಆಮ್ಲಜನಕ ಪಡೆದು ಉಸಿರಾಡುವ ಕೆಲಿಸೆರಾಟಾ ಉಪಸಂತತಿಗೆ (ಸಬ್‌ಫೈಲಮ್) ಸೇರಿರುವ ಎಂಟು ಕಾಲುಗಳನ್ನು ಹೊಂದಿರುವ, ಮತ್ತು ಕಲಿಸರಾಗಳು ವಿಷವನ್ನು ಒಳಹಾಕುವ ವಿಷದ ಹಲ್ಲುಗಳಾಗಿ ಮಾರ್ಪಾಡಾಗಿರುವ ಸಂಧಿಪದಿಗಳು. ಜೇಡಗಳು ವಿಶ್ವಾದ್ಯಂತ ಅಂಟಾರ್ಕ್‌ಟಿಕದ ಹೊರತಾಗಿ ಎಲ್ಲ ಖಂಡಗಳಲ್ಲೂ ಕಂಡುಬರುತ್ತವೆ, ಮತ್ತು ಗಾಳಿ ಹಾಗೂ ಸಾಗರ ವಾಸದ ಹೊರತಾಗಿ ಹೆಚ್ಚುಕಡಮೆ ಪ್ರತಿಯೊಂದು ಜೀವಿ ಪರಿಸ್ಥಿತಿ ಆವರಣದಲ್ಲೂ ನೆಲೆಗೊಂಡಿವೆ. ೨೦೦೮ರ ವೇಳೆಗೆ, ವರ್ಗೀಕರಣ ವಿಜ್ಞಾನಿಗಳಿಂದ ಸುಮಾರು ೪೦,೦೦೦ ಜೇಡ ಜಾತಿಗಳು, ಮತ್ತು ೧೦೯ ಕುಟುಂಬಗಳನ್ನು ದಾಖಲಿಸಲಾಗಿದೆ.

ಆರ್ಯಾಕ್ನಿಡ ವರ್ಗದಲ್ಲಿರುವ ಹನ್ನೊಂದು ಗಣಗಳಲ್ಲೆಲ್ಲ ಪ್ರಭೇದಗಳ ಸಂಖ್ಯೆಯ ದೃಷ್ಟಿಯಿಂದ ಮತ್ತು ವ್ಯಾಪ್ತಿಯ ದೃಷ್ಟಿಯಿಂದ ಜೇಗಳ ಗಣವೇ ಅತ್ಯಂತ ಪ್ರಮುಖವಾದ್ದು. ಅಂತೆಯೇ ಇವು ಹಲವಾರು ವಿಧಗಳಲ್ಲಿ ಅತ್ಯಂತ ಕುತೂಹಲಕಾರಿಗಳು ಮತ್ತು ಪರಿಚಿತವಾಗಿರುವಂಥವು. ಮುಂದೆ ಹೇಳುವ ಲಕ್ಷಣಗಳಿಂದ ಇವನ್ನು ಆತ್ರ್ರಾಪೊಡ ವಿಭಾಗದ ಇತರ ಸದಸ್ಯಗಳಿಂದ ಭಿನ್ನವಾಗಿ ಗುರುತಿಸಬಹುದು: ಜೇಡದ ದೇಹ ಪ್ರೋಸೋಮ ಅಥವಾ ಸೆಫಲೊತೋರ್ಯಾಕ್ಸ್ (ಶೀರೋವಕ್ಷ) ಮತ್ತು ಒಪಸ್ತೊಸೋಮ ಅಥವಾ ಉದರ ಎಂಬ ಎರಡು ವಲಯಗಳಾಗಿ ವಿಭಾಗವಾಗಿದೆ; ವಿಷಗ್ರಂಥಿಗಳು ಕೀಲಿಸೆರೀ ಎಂಬ ಉಪಾಂಗಗಳಲ್ಲಿ ಇವೆ. ಪ್ರತಿಯೊಂದು ಕೀಲಿಸೆರದಲ್ಲೂ ಮ್ಯಾಂಡಿಬಲ್ ಎಂಬ ಬುಡಭಾಗ ಮತ್ತು ನಖ ಎಂಬ ತುದಿಭಾಗ ಉಂಟು. ವಿಷ ಗ್ರಂಥಿಗಳಿಂದ ಹೊರಡುವ ನಾಲ ಕೀಲಿಸೆರದ ತುದಿಯಲ್ಲಿ ಹೊರತೆಗೆಯುತ್ತದೆ; ಸಾಧಾರಣವಾಗಿ ಒಪಿಸ್ತೊಸೋಮ ಮತ್ತು ಯಾವಾಗಲೂ ಪ್ರೋಸೋಮ ಅಖಂಡವಾಗಿವೆ; ಉಸಿರಾಟ ಪದರಫುಪ್ಫುಸ (ಬುಕ್‍ಲಂಗ್) ಮತ್ತು ಶ್ಯಾಸನಾಳ (ಟ್ರೇಕಿಯ) ಎರಡರಿಂದಲೂ ನಡೆಯುತ್ತದೆ; ಗಂಡು ಜೇಡದ ಪ್ಯಾಲ್ಟಿನ ಕೊನೆಯ ಖಂಡ ಶುಕ್ರಾಣು ವಾಹಕ ಅಂಗವಾಗಿ ಮಾರ್ಪಟ್ಟಿದೆ.

ಜೇಡಗಳ ಇತಿಯಾಸ

ಬದಲಾಯಿಸಿ

ಜೇಡಗಳಿಗೆ ಅತ್ಯಂತ ಪ್ರಾಚೀನವಾದ ಮತ್ತು ಅಖಂಡವಾದ ಇತಿಹಾಸ ಉಂಟು. ಮೊಟ್ಟಮೊದಲು ಜೇಡವೆಂದು ಖಚಿತವಾಗಿ ಹೇಳಬಹುದಾದ ಕೀಟ ಪ್ರೋಟೊಲೈಕೋಸ ಆಂತ್ರಕಾಫಿಲ ಎಂಬುದು ಪೇಲಿಯೊಜೋಯಿಕ್ ಯುಗದ ಕಾರ್ಬಾನಿಫೆರಸ್ ಅವಧಿಯಲ್ಲಿ ಜೀವಿಸಿತ್ತು. ಆಧುನಿಕ ಜೇಡ ಕುಟುಂಬವಾದ ಲೈಕಾಸಿಡೀಯ ಸದಸ್ಯಗಳನ್ನು ಮೇಲ್ನೋಟಕ್ಕೆ ಹೋಲುವ ಇದು ಖಂಡೀಭವನನಾದ ಉದರ, ಕಣ್ಣುಗಳು ಪರಸ್ಪರ ಹತ್ತಿದಲ್ಲಿರುವುದು. ಒಂದೇ ಉದ್ದದ ಕಾಲುಗಳು ಮುಂತಾದ ಹಲವಾರು ನಿಮ್ನಲಕ್ಷಣಗಳನ್ನು ತೋರುತ್ತದೆ. ಟರ್ಷಿಯರಿ ಅವಧಿಯಲ್ಲಿ ಜೀವಿಸಿದ್ದ ಕಲೆವು ಜೇಡಗಳ ಫಾಸಿಲುಗಳು ಅಂಬರಿನಲ್ಲಿ ಬಹಳ ಒಳ್ಳೆಯ ಸ್ಥಿತಿಯಲ್ಲಿ ರಕ್ಷಿತವಾಗಿವೆ. ಇದರಿಂದಾಗಿ ಬಹಳ ಪ್ರಾಚೀನ ಕಾಲದಿಂದಲೂ-ಸ್ತನಿಗಳಾಗಲಿ, ಹಕ್ಕಿಗಳಾಗಲಿ, ಅಷ್ಟೇಕೆ ದ್ವಿಚರಿ ಮತ್ತು ಉರಗಗಳ ಬಹುಪಾಲು ಪ್ರಭೇದಗಳಾಗಲಿ, ಭೂಮಿಯ ಮೇಲೆ ಅವತರಿಸುವ ಬಹುಮನ್ನವೇ-ಜೇಡಗಳು ತಮ್ಮ ಇಂದಿನ ಬಾಹ್ಯಸ್ವರೂಪದಲ್ಲಿ ಜೀವಿಸಿದ್ದವು ಎಂದು ವ್ಯಕ್ತವಾಗುತ್ತದೆ.

ವಿವಿಧ ಬಗೆಗೆಳ ವಯಸ್ಕ ಜೇಗಳ ಗಾತ್ರದಲ್ಲಿ ವ್ಯತ್ಯಾಸವುಂಟು. ಅತ್ಯಂತ ಚಿಕ್ಕಗಾತ್ರದ ಜೇಡವೆಂದರೆ ಈಪೈರಿಡೀ ಕುಟುಂಬಕ್ಕೆ ಸೇರಿದ ಓಗಲ್‍ನಿಯಸ್ ಆಬ್‍ಟೆಕ್ಟಸ್ ಎಂಬ ಪ್ರಭೇದ (ಅಮೆಜಾನ್ ನದಿಯ ಕಾಡುಗಳಲ್ಲಿ ವಾಸಿಸುತ್ತದೆ); ಇದರ ಉದ್ದ ಒಂದು ಮಿಲಿ ಮೀಟರಿಗಿಂತ ಕಡಿಮೆ. ಸರ್ವೇ ಸಾಮಾನ್ಯವಾಗಿ ಗಂಡು ಜೇಡಗಳು ಹೆಣ್ಣುಗಳಿಗಿಂತಲೂ ಚಿಕ್ಕವು. ಗಾತ್ರ ವ್ಯತ್ಯಾಸದ ಇನ್ನೊಂದು ತುದಿಯಲ್ಲಿರುವ ಜೇಡವೆಂದರೆ ಬ್ರಜಿಲಿನಲ್ಲಿ ಕಾಣಸಿಗುವ ಲೇಸಿ ಯಾಡೊ ಎಂಬುದು. ಇದರ ಉದ್ದ ಸುಮಾರು 9 ಸೆಮೀ ತೂಕ 93ಗ್ರಾಂ ತೆಪೋಸಿಡೀ ಮತ್ತು ಲೈಫಸ್ಟೈಯಿಡೀ ಕುಟುಂಬದ ಜೇಡಗಳೂ ದೊಡ್ಡ ಗಾತ್ರದವೇ.

ಜೇಡದ ದೇಹ ರಚನೆ

ಬದಲಾಯಿಸಿ

ಜೇಡದ ದೇಹದ ಮುಂಭಾಗವಾದ ಸೆಫಲೊತೋರ್ಯಾಕ್ಸ್ ಹೆಚ್ಚು ಕಡಿಮೆ ಒಂದು ಏಕರೂಪದ ರಚನೆ. ಇದರ ಮೇಲ್ಮೈ ನಯವಾಗಿದೆ. ಆದರೆ ಅನೇಕ ವೇಳೆ ಇದನ್ನು ತಲೆ ಮತ್ತು ವಕ್ಷಭಾಗ ಎಂಬ ಎರಡು ಭಾಗಗಳಾಗಿ ವಿಂಗಡಿಸುವ ಒಂದು ತೋಡು ಇರುವುದುಂಟು. ತಲೆಯ ಭಾಗಕ್ಕೆ ಪಾರ್ಸ್ ಸೆಫ್ಯಾಲಿಕ್ ಎಂಬ ಹೆಸರಿದೆ. ಇದರ ಮುಂತುದಿಯಲ್ಲಿ ನೇತ್ರಭಾಗವುಂಟು. ಇದರಲ್ಲಿ 8 ಕಣ್ಣುಗಳಿವೆ. ಕಣ್ಣುಗಳು ಕೀಟಗಳಲ್ಲಿರುವಂತೆ ಸಂಯುಕ್ತಬಗೆಯವಾಗಿರದೆ ಸರಳ ಅಸೆಲೈಗಳಾಗಿರುವುದು ಜೇಡಗಳ ವ್ಯಶಿಷ್ಟ್ಯ. ಸೆಫಲಾನಿನ ತುಟ್ಟತುದಿಗೂ ಮೊದಲ ಜೊತೆ ಕಣ್ಣುಗಳಿಗೂ ನಡುವೆ ಇರುವ ಕ್ಷೇತ್ರಕ್ಕೆ ಕ್ಲೈಪಿಯಸ್ ಎಂದು ಹೆಸರು. ಜೇಡಗಳ ವಿವಿಧ ಜಾತಿಗಳನ್ನು ಗುರುತಿಸುವಲ್ಲಿ ಕ್ಲೈಪಿಯಸಿನ ಗಾತ್ರ, ಅಗಲ ಮತ್ತು ಪ್ರವಣತೆಗಳನ್ನು ಬಳಸಲಾಗುತ್ತದೆ. ನೇತ್ರಭಾಗ ಹಲವಾರು ರೀತಿಗಳಲ್ಲಿ ಮುಂಚಾಚಿಕೊಂಡಿರುವುದುಂಟು. ಉದಾಹರಣೆಗೆ ವಾಲ್ಕನೀರ ಮತ್ತು ಪೋಲ್ಕಸ್ ಪ್ರಭೇದಗಳಲ್ಲಿ ಕಾಣಬರುವ ವಿಚಿತ್ರ ರಚನೆಗಳು ಇಂಥ ಮುಂಚಾಚುಗಳೇ. ಸೆಫಲೊತೋರ್ಯಾಕ್ಸಿನ ಮೇಲೆ ಅರೀಯ ರೀತಿಯಲ್ಲಿ ಜೋಡಣೆಯಗೊಂಡ ಎಂಟು ಉದ್ದಗೆರೆಗಳನ್ನು ಕಾಣಬಹುದು. ಇವು ಕಾಲುಗಳ ಮಾಂಸಖಂಡಗಳ ಸೇರುವೆಗಳನ್ನು ಸೂಚಿಸುತ್ತವೆ. ಕೆಲವು ಪ್ರಭೇದಗಳಲ್ಲಿ ಸೆಫಲೊತೋರ್ಯಾಕ್ಸಿನ ಮೇಲೆ ಮುಳ್ಳುಗಳಿರುವುದುಂಟು.

ತೆಳುವಾದ ಸೊಂಟ ಅಥವಾ ವೃಂತದ ಮೂಲಕ ಸೆಫಲೊತೋರ್ಯಾಕ್ಸ ಉದರಕ್ಕೆ ಸೇರಿಕೊಂಡಿವೆ. ವೃಂತ ಸೂಕ್ಷ್ಮವಾದ ಬಂಧ, ಉದರ ಬಹಳ ಮುಂದಕ್ಕೆ ಚಾಚಿರುವುದರಿಂದ ವೃಂತ ಕಣ್ಣಿಗೆ ಬೀಳುವುದಿಲ್ಲ. ಮೇಲ್ಬಾಗದಲ್ಲಿ ಲೋದಮ್ ಎಂಬ ಮತ್ತು ಕೆಳಭಾಗದಲ್ಲಿ ಪ್ಲಾಗ್ಯುಲ ಎಂಬ ಕೈಟಿನ್ ಫಲಕಗಳು ಇದಕ್ಕೆ ರಕ್ಷೆಣೆಯನ್ನೂ ಬಲವನ್ನೂ ಕೊಡುತ್ತವೆ. ವೃಂತದ ವ್ಯಾಸ ಬಲು ಚಿಕ್ಕದು. ಆದರೂ ಇದರ ಮುಖಾಂತರ ಒಂದು ಅಪಧಮನಿಯೂ ಮುಖ್ಯ ನರಹುರಿಯೂ ಜೀರ್ಣನಾಳದ ಒಂದಂಶವೂ ಹಾದುಹೋಗುತ್ತವೆ.

ಉದರ ಹೆಚ್ಚು ಕಡಿಮೆ ಉದ್ದನೆಯ ಉರುಳೆಯಂಥ ಚೀಲ. ಇದರಲ್ಲಿ ಯಾವ ತೆರನ ಖಂಡಗಳೂ ಇಲ್ಲ. ಆದರೆ ಇದರಲ್ಲಿ ಹೆಚ್ಚಿನ ವೈವಿಧ್ಯವನ್ನು ಕಾಣಬಹುದು. ಕೆಲವು ಕುಟುಂಬಗಳ ಜೇಡಗಳಲ್ಲಿ ಉದರ ವರ್ಣಮಯವೂ ವಿನ್ಯಾಸಪೂರಿತವೂ ಆಗಿದ್ದು ಸುಂದರವಾಗಿದೆ. ಅನೇಕ ವೇಳೆ ಬೆನ್ನುಭಾಗದ ಮೇಲೆ ಕಿರಿಯಗಲದ ಮತ್ತು ಉದ್ದುದ್ದವಾದ ಗುರುತು ಇರುವುದುಂಟು. ವರ್ತುಲಾಕಾರದ ಬಲನೇಯುವ ಜೇಡಗಳ ಉದರದ ಮೇಲೆ ಅಗಲವಾದ ಎಲೆಯಾಕಾರದ ಗುರುತು ಇದೆ. ಈ ಗುರುತಿಗೆ ಪೋಲಿಯಮ್ ಎಂದು ಹೆಸರು. ಇನ್ನು ಕೆಲವು ಜೇಡಗಳಲ್ಲಿ ಸಮರೂಪದಲ್ಲಿ ಅಳವಡಿಕೆಯಾಗಿರುವ ಸಣ್ಣ ಸಣ್ಣ ತಗ್ಗುಗಳುಂಟು. ಉದರದ ಆಕಾರದಲ್ಲೂ ಅಸಾಧಾರಣ ವೈವಿಧ್ಯ ಇರುವುದನ್ನು ಕೆಲವು ಬಗೆಗಳಲ್ಲಿ ಕಾಣಬಹುದು. ಉದಾಹರಣೆಗೆ ಫ್ರಿಕಾಟಿಲಸ್ ಸ್ಟೆಲಿಗರ್ ಎಂಬ ಪ್ರಭೇದದಲ್ಲಿ ಉದರ ಮೇಲ್ಮುಖವಾಗಿ ಬಾಗಿರುವ ಶಂಕುವಿನಾಕಾರದ ರಚನೆಯಾಗಿ ಮಾರ್ಪಟ್ಟಿದೆ. ಇದರ ತುದಿಯಲ್ಲಿ ತೊಟ್ಟುಳ್ಳ ನಕ್ಷತ್ರದಾಕಾರದ ಒಂದು ಬುರುಡೆ ಉಂಟು. ಪಾಲ್ಟಿಸ್ ಇಡಿಯೀ ಎಂಬ ಪ್ರಭೇದದಲ್ಲಿ ಉದರದ ಮೇಲ್ಬಾಗ ಉದ್ದವಾದ, ತೆಳುವಾದ, ಸುಲಭವಾಗಿ ಬಾಗುವಂಥ ಉರುಳೆಯಾಗಿ ಮಾರ್ಪಟ್ಟಿದೆ. ಲೆಪ್ಟೊಪಫಾಲ್ಕಸ್ ಸಿಗ್ನಿಫರ್ ಎಂಬುದರಲ್ಲಿ ಉದರದ ಹಿಂತುದಿ ಉದ್ದವಾದ ತೆಳುವಾದ ರಚನೆಯಾಗಿ ಚಾಚಲ್ಪ್ಟಿದೆ. ಹಾಗೆಯೇ ಮುಳ್ಳುಗಳಿಂದ ಕೂಡಿದ ಉದರವಿರುವ ಜೇಡಗಳಲ್ಲೂ ವಿವಿಧತೆಯನ್ನು ಗಮನಿಸಬಹುದು. ಪೊರಾನ್ ಸಿಡಿಯ ಟ್ರೈಸ್ಟೈನೋಸ ಎಂಬುದರಲ್ಲಿ ಹೆಚ್ಚು ಕಡಿಮೆ ಸಮಾನಗಾತ್ರದ 3 ಮುಳ್ಳುಗಳಿವೆಯಾದರೆ ಅರನೀಯಿಸ್ ಪೆಂಟಕ್ಯಾಂತ ಎಂಬುದರಲ್ಲಿ 5 ಮುಳ್ಳುಗಳೂ ಮ್ಯುಕ್ರತೀನ ಸೈ ಯಾಣಿಯೊಸ್ಟೈನದಲ್ಲಿ ಹಿಮ್ಮಖುವಾಗಿ ಚಾಚಿರುವಂಥ 8 ಮುಳ್ಳುಗಳೂ ಇವೆ. ಪಿಕ್ನ ಕ್ಯಾಂತ ಟ್ರಿಬ್ಯುಲಸ್ ಎಂಬುದರಲ್ಲಿ ವಿವಿಧ ಗಾತ್ರಗಳ ಹಲವಾರು ಮುಳ್ಳುಗಳುಂಟು. ಇವುಗಳಲ್ಲಿ ಎರಡು ಮುಳ್ಳುಗಳು ಉದ್ದವಾದವೂ ಹೊರಮುಖವಾಗಿ ಬಾರಿದಂಥವೂ ಆಗಿವೆ. ಇವುಗಳ ತುದಿ ಇಬ್ಬಾಗವಾಗಿದೆ. ಉದರದ ಈ ತೆರನ ಆಕಾರದ ಮತ್ತು ಬಣ್ಣದ ವ್ಯತ್ಯಾಸಗಳು ಬೇಡಗಳಿಗೆ ಹಲವಾರು ರೀತಿಯಲ್ಲಿ ಉಪಯುಕ್ತವಾಗಿವೆ : ಜೇಡಗಳು ವಾಸಮಾಡುವ ನೆಲೆಯಲ್ಲಿನ ಅನೇಕ ಬಗೆಯ ವಸ್ತುಗಳನ್ನು ಇವು ಹೋಲುತ್ತವಾದ್ದರಿಂದ ಜೇಡಗಳಿಗೆ ರಕ್ಷಣೆ ಸಿಕ್ಕುತ್ತದೆ. ಇಂಥ ಮುಳ್ಳುಗಳಿರುವುದರಿಂದ ಜೇಡಗಳು ಇತರ ಪ್ರಾಣಿಗಳ ಆಕಾರವನ್ನು ಅನುಕರಿಸುತ್ತವೆ ಅಥವಾ ಮೆತುಬಾಯಿಯುಳ್ಳ ಭಕ್ಷಕ ಪ್ರಾಣಿಗಳು ಜೇಡಗಳನ್ನು ತಿನ್ನಲಾರದಂತೆ ಇಂಥ ಮುಳ್ಳುಗಳು ರಕ್ಷಣೆಯೊದಗಿಸುತ್ತವೆ.

ಉದರದ ತಳಭಾಗ ಬೆನ್ನುಭಾಗಕ್ಕಿಂತ ಹೆಚ್ಚು ವೈವಿಧ್ಯಪೂರ್ಣವಾಗಿದೆ. ವೃಂತದ ಪಕ್ಕದಲ್ಲಿರುವ ಭಾಗ ಉದರದ ಉಳಿದ ಭಾಗಕ್ಕಿಂತ ಹೆಚ್ಚು ಪೀನಮಧ್ಯವಾಗಿದೆ. ಇದಕ್ಕೆ ಎಪಿಗ್ಯಾಸ್ಟ್ರಮ್ ಎಂದು ಹೆಸರು. ಇದಕ್ಕೂ ಉಳಿದ ಭಾಗದಕ್ಕೂ ಮಧ್ಯ ಎಪಿಗ್ಯಾಸ್ಟ್ರಕ್ ಜಾಡು ಉಂಟು. ಎರಡೂ ಪದರ ಪುಪ್ಪಸಗಳು ಅಥವಾ ನಾಲ್ಕು ಪದರಪುಪ್ಪುಸಗಳಿದ್ದರ ಮುಂಭಾಗದ ಎರಡು ಎಪಿಗ್ಯಾಸ್ಟ್ರಿಕ್ ಪ್ರದೇಶದಲ್ಲಿ ಸ್ಥಿತವಾಗಿವೆ. ಎಪಿಗ್ಯಾಸ್ಟ್ರಿಕ್ ಜಾಡಿನ ಮಧ್ಯ ಭಾಗದಲ್ಲಿ ಜನನಾಂಗಗಳ ತೆರಪು ಉಂಟು. ಈ ತೆರಪು ಗಂಡಿನಲ್ಲಿ ಸೂಕ್ಷ್ಮವಾದ ರಂಧ್ರದಂತಿದೆಯಾದರೆ ಹೆಣ್ಣಿನಲ್ಲಿ ಸರಳವಾದ ದೊಡ್ಡ ತೂತಿನಂತಿದೆ. ಕೆಲವೊಮ್ಮೆ ಇದರ ಸುತ್ತ ಕುಳಿಗಳೂ ಚಾಚುಗಳೂ ಇರುವುದುಂಟು. ಬೇತಿಫಾಂಟಿಸ್ ಪ್ರಭೇದದಲ್ಲಿನ ಈ ಚಾಚುಗಳು ಟೊಳ್ಳಾಗಿಯೂ ಅಕ್ಕಪಕ್ಕಗಳಲ್ಲಿರುವಂಥವೂ ಆಗಿವೆ. ಮೊಟ್ಟಿಯಿಡುವ ಸಾಧನವಾಗಿ ಇವು ಬಳೆಕೆಯಾಗುತ್ತವೆ. ಉದರಭಾಗದ ಹಿಂತುದಿಯಲ್ಲಿ 6 ತಂತುಕಗಳು (ಸ್ಪಿನರೆಟ್ಸ್) ಉಂಟು. ಉದರದೊಳೆಗ ಇರುವ ರೇಷ್ಮೆ ಗ್ರಂಥಿಗಳಲ್ಲಿ ಉತ್ಪತ್ತಿಯಾಗುವ ದ್ರವ ಈ ತಂತುಕಗಳ ಮೂಲಕ ಹೊರಬಂದು, ಜೇಡರಬಲೆಯ ಎಳೆಗಳಾಗಿ ಗಟ್ಟಿಯಾಗುತ್ತದೆ. ತಂತುಕಗಳನ್ನು ಕ್ರಸ್ಟೇಸಿಯ ಪ್ರಾಣಿಗಳ ದ್ವಿಶಾಖಿ ಪ್ಲವಪಾದಗಳಿಗೆ (ಬೈರ್ಯಾಮಸ್ ಪ್ಲಿಯೊಪಾಡ್ಸ್) ಸದೃಶ ರಚನೆಗಳೆಂದು ತಿಳಿಯಲಾಗಿದೆ. ಗಿಂತುಕಗಳ ಕೊಂಚ ಮೇಲ್ಬಾಗದಲ್ಲಿ ಶಂಕುವಿನಾಕಾರದ ಉಬ್ಬು ಇದೆ. ಇದೇ ಗುದದ್ವಾರದ ಗುಬಟು (ಏನಲ್ ಟ್ಯೂಬರ್ಕಲ್). ಇದರ ಮಧ್ಯದಲ್ಲಿ ಗುದದ್ವಾರ ಇದೆ.

ಸೆಫಲೊತೋರ್ಯಾಕ್ಸಿನಲ್ಲಿರುವ ಉಪಾಂಗಗಳೆಂದರೆ ಒಂದು ಜೊತೆ ಕೀಲಿಸೆರೀ, ಒಂದು ಜೊತೆ ಪ್ಯಾಲ್ಟಿ ಮತ್ತು ಎಂಟು ಕಾಲುಗಳು, ಕೀಲಿಸೆರೀ ಮತ್ತು ಪ್ಯಾಲ್ಪಿಗಳು ಬಾಯನ್ನು ಸುತ್ತುವರಿದಿದೆ. ಕೀಲಿಸೆರೀಗಳೇ ಜೇಡದ ಆಯುಧಗಳು. ಪ್ರತಿಕೀಲಿಸೆರವೂ 2 ಖಂಡಗಳಿಂದ ಕೂಡಿದೆ ತುದಿಭಾಗದ ಖಂಡದಲ್ಲಿ ಮೊನಚಾದ ನಖ ಉಂಟು. ಮೈಗಲೊಮಾರ್ಫ್ ಗುಂಪಿನ ಜಡಗಳಲ್ಲಿ ನಖಗಳು ತುಂಬ ದೊಡ್ಡವು. ಕೆಲವು ಜೇಡಗಳಲ್ಲಿ ಕೀಲಿಸೆರೀಗಳು ಅತ್ಯಂತ ಚಿಕ್ಕವೂ ದುರ್ಬಲವೂ ಆಗಿವೆಯಾದರೆ ಇನ್ನೂ ಕೆಲವಲ್ಲಿ ದೊಡ್ಡವೂ ಕಟ್ಟುಮಸ್ತಾದವೂ ಆಗಿವೆ. ಪ್ಯಾಲ್ಪಿಗಳು ತಲಾ 6 ಖಂಡಗಳಿಂದ ಕೂಡಿವೆ. ಮರಿಗಳಲ್ಲೂ ಹೆಣ್ಣುಗಳಲ್ಲೂ ಇವು ಸ್ಪರ್ಶೇಂದ್ರಿಯಗಳಾಗಿ ಕಾರ್ಯನಿರ್ವಹಿಸುತ್ತವೆ. ವಯಸ್ಕ ಗಂಡಿನಲ್ಲಿ ಪ್ಯಾಲ್ಪಿಗಳ ತುತ್ತ ತುದಿಯ ಖಂಡ ವೈಥುನಾಂಗವಾಗಿ ಮಾರ್ಪಾಟಾಗಿದೆ. ಪ್ಯಾಲ್ಪಿಗಳ ಮೊದಲನೆಯ ಖಂಡ ಆಹಾರವನ್ನು ಅರೆಯಲು ನೆರವಾಗುವ ದವಡೆಯಾಗಿ ಕೆಲಸಮಾಡುತ್ತದೆ. ಜೇಡಗಳ ವಿವಿಧ ಪರಭೇದಗಳನ್ನು ಗುರುತಿಸಲು ಪ್ಯಾಲ್ಪಿಗಳ ರಚನೆ ಅತ್ಯುಪ್ರಯುಕ್ತ. ಕಾಲುಗಳು ತಲಾ ಏಳು ಖಂಡಗಳಿಂದ ಕೂಡಿವೆ. ಪ್ರತಿಯೊಂದು ಖಂಡವೂ ಕೈಟಿನ್ ವಸ್ತುವಿನಿಂದ ರಚಿತವಾದ ಉರುಳೆಯಂತಿದೆ. ಸಾಧಾರಣವಾಗಿ ಒಂದನೆಯ ಮತ್ತು ನಾಲ್ಕನೆಯ ಜೊತೆ ಕಾಲುಗಳು ಉಳಿದವಕ್ಕಿಂತ ಬಹಳ ಉದ್ದವಾಗಿವೆ. ವಿವಿಧ ಜಾತಿಗಳನ್ನು ವಿಂಗಡಿಸುವಲ್ಲಿ ಕಾಲುಗಳ ಸಾಪೇಕ್ಷ ಉದ್ದ ಬಹಳ ಸಹಕಾರಿ. ಈ ಲಕ್ಷಣಕ್ಕೆ ಜೇಡಗಳ ಕಾಲುಗಳ ಸೂತ್ರ ಎಂದು ಹೆಸರು.

ಜೇಡದ ಮೈಮೇಲೆಲ್ಲ (ಕಾಲುಗಳೂ ಸೇರಿ) ಸೀಟೀಗಳೆಂಬ ಕೂದಲುಗಳ ಹೊದಿಕೆಯುಂಟು. ಬಹುಶ: ಇವೆಲ್ಲವೂ ಸ್ಪಶ್ಸಂವೇದಿಗಳಾಗಿವೆ. ಕಾಲುಗಳು ಮೇಲಿರುವ ಕೆಲವು ಸೀಟೀಗಳು ಬಲೆ ನೀಯುವ ಕಾರ್ಯದಲ್ಲಿ ಸಹಾಯಕವಾಗಿವೆ. ಇವುಗಳಲ್ಲಿ ಮೂರು ಬಗೆಗಳನ್ನು ಗುರುತಿಸಬಹುದು : ಕಾಲು ಮತ್ತು ಪ್ಯಾಲ್ಪಗಳ ಮೇಲಿರುವ ದೃಢವಾದ, ಚೂಪಾದ ಮುಳ್ಳುಗಳಂಥ ಕೂದಲುಗಳು-ಇವು ಶಬ್ದಗ್ರಾಹಿಗಳು ಗದೆಯಾಕಾರದ ಅಥವಾ ಚಮಚದಾಕಾರದ ಇಲ್ಲವೆ ಕವಲೊಡೆದ ಇಲ್ಲವೆ ಮುಳ್ಳುಗಳಂತಿರುವ ಮಧ್ಯಮ ಗಾತ್ರದ ಸೀಟೀಗಳು.

ಜೇಡದ ಚರ್ಮದಲ್ಲಿ ಕ್ಯೂಟಿಕಲ್ ಮತ್ತು ಎಪಿಡರ್ಮಿಸ್ ಎಂಬ ಎರಡು ಪದರಗಳುಂಟು. ಜೇಡಗಳ ಮೈಯಿನ ವರ್ಣಸ್ಪುರಣ. ಅಲ್ಲದೆ 3 ತೆರನ ರಾಸಾಯನಿಕಗಳೂ ವರ್ಣವೈವಿಧ್ಯವನ್ನುಂಟುಮಾಡುತ್ತವೆ. ಕಪ್ಪು, ಬೂದು ಮತ್ತು ಕಗ್ಗಂದು ಬಣ್ಣಕ್ಕೆ ಮೆಲನಿನ್ ಎಂಬ ವರ್ಣಕ ಕಾರಣ. ಬಿಳಿಯ ಬಣ್ಣ, ಗ್ವಾನಿನ್ ಎಂಬುದರಿಂದ ಉಂಟಾಗುತ್ತದೆ. ಕ್ಯಾರೊಟಿನಾಯಿಡ್ಡುಗಳು ಕಿತ್ತಳೆ, ಹಳದಿ, ಕೆಂಪು ಮುಂತಾದ ಬಣ್ಣಗಳನ್ನು ಉಂಟುಮಾಡುತ್ತವೆ. ಕೆಲವು ಜೇಡಗಳು ಸುತ್ತಣ ಸನ್ನಿವೇಶಕ್ಕೆ ಅನುಗುಣವಾಗಿ ತಮ್ಮ ಬಣ್ಣವನ್ನು ಬದಲಿಸುವುದು ಉಂಟು. ದೇಹದೊಳಗೆ ಕೆಲವಡೆಗಳಲ್ಲಿ ಚರ್ಮ ಗಡುಸಾದ ಚಾಚುಗಳಂತೆ ಬೆಳೆದುಕೊಂಡು ಮಾಂಸಖಂಡಗಳ ಬಂಧನಕ್ಕೆ ನೆರವಾಗುತ್ತದೆ. ಇಂಥ ಚಾಚುಗಳಿಗೆ ಅಪೊಡೀಮಲುಗಳೆಂದು ಹೆಸರು.

ಸೆಫಲೊತೋರ್ಯಾಕ್ಸಿನಲ್ಲಿ ಕೇಂದ್ರೀಕೃತವಾಗಿರುವ ಎರಡು ನರಗ್ರಂಥಿ ರಾಶಿಗಳೇ ನೆರವ್ಯವಸ್ಥೆಯ ಪ್ರಧಾನ ಭಾಗಗಳು. ಇವುಗಳಲ್ಲಿ ದೊಡ್ಡದು ಅನ್ನನಾಳದ ಕೆಳಗೂ ಸಣ್ಣದು ಮೇಲೂ ಸ್ಥಿತವಾಗಿವೆ. ಮಿದುಳು ಬಲು ಚಿಕ್ಕ ಗಾತ್ರದು ಬರಿಯ ದೃಷ್ಟಿಸಂಬಂಧದ ನರಗಳನ್ನೂ ಕೀಲಿಸೆರಿಗಳ ನರಗ್ರಂಥಿಗಳನ್ನೂ ಒಳಗೊಂಡಿದೆ.

ಅನ್ನನಾಳದಲ್ಲಿ ಅಗ್ರಜೀರ್ಣನಾಳ, ಮಧ್ಯಜೀರ್ಣನಾಳ ಮತ್ತು ಪಶ್ಚಜೀರ್ಣನಾಳ ಎಂಬ ಮೂರು ಮುಖ್ಯಭಾಗಗಳುಂಟು. ಅಗ್ರಜೀರ್ಣನಾಳದ ಫ್ಯಾರಿಂಕ್ಸ್ ಭಾಗ ಆಹಾರವನ್ನು ಹೀರುವುದಕ್ಕೆ ಅನುವಾಗಿದೆಯಾದರೆ ಜಠರ ಆಹಾರವನ್ನು ಮುನ್ನೂಕಲು ಸಹಾಯಕವಾಗಿದೆ. ಮಧ್ಯಜೀರ್ಣನಾಳ 4 ಮುಖ್ಯಭಾಗಗಳಾಗಿ ವಿಂಗಡವಾಗಿದೆ. ಇದರ ಮುಂಭಾಗದಲ್ಲಿ ತೋರ ಸೆಂಟ್ರಾನ್ ಎಂಬ ಅನೇಕ ವಿನಾಳಗಳು (ಡೈವರ್ಟಿಕ್ಯುಲ) ಉಂಟು. ಇದರ ಮಧ್ಯಭಾಗ ತೆಳುವಾದ ತೊಟ್ಟಿನ ಮೂಲಕ ಹಾದುಹೋಗುತ್ತದೆ. ಮಧ್ಯ ಜೀರ್ಣನಾಳದ ಹಿಂಭಾಗಕ್ಕೆ ಕೈಲೆಂಟ್ರಾನ್ ಎಂದು ಹೆಸರು. ಗ್ರಂಥಿಮಯವಾದ ಇದನ್ನು ಅನೇಕ ವೇಳೆ ಯಕೃತ್ ಎಂಬ ಹೆಸರಿನಿಂದ ಕರೆಯುವುದೂ ಉಂಟು. ಕೈಲೆಂಟ್ರಾನಿನಿಂದ ಮುಂದಕ್ಕೆ ಇರುವ ಭಾಗವೆಲ್ಲ ಕರುಳು. ಇದರ ತುದಿಯಲ್ಲಿ ಗುದದ್ವಾರ ಉಂಟು. ಉದರಭಾಗದಲ್ಲಿರುವ ಮ್ಯಾಲ್ಪೀಗಿಯನ್ ನಾಳಗಳು ಮತ್ತು ಸೆಫಲೊತೋರ್ಯಾಕ್ಸಿನಲ್ಲಿರುವ ಕಾಕ್ಸಲ್ ಗ್ರಂಥಿಗಳೇ ವಿಸರ್ಜನೆಯ ಪ್ರಧಾನ ಅಂಗಗಳು. ಅಲ್ಲದೆ ನೆಪ್ರೊಸೈಟುಗಳೂ ವಿಸರ್ಜನೆಯಲ್ಲಿ ನೆರವಾಗುತ್ತವೆ ಎಂದು ಗೊತ್ತಾಗಿದೆ.

ಕೆಲವು ಅಪವಾದಗಳನ್ನುಳಿದು, ಎಲ್ಲ ಜೇಡಗಳಲ್ಲೂ ವಿಷಗ್ರಂಥಿಗಳುಂಟು. ಕೀಲಿಸೆರೀಯ ತುದಿಯಲ್ಲಿ ಇವು ಹೊರಕ್ಕೆ ತೆರೆಯುತ್ತವೆ. ಉದರದೊಳಗೆ ರೇಷ್ಮೆ ಗ್ರಂಥಿಗಳಿವೆ. ಇವು ಸ್ರಾವಕೋಶಗಳಿಂದ ರಚಿತವಾಗಿವೆ. ಜೇಡಗಳ ವಿವಿಧ ಗುಂಪುಗಳಲ್ಲಿ ಇವು ಭಿನ್ನತೆರನಾಗಿವೆ.

ಜೇಡಗಳ ರಕ್ತ ವರ್ಣರಹಿತ, ಹೃದಯ ಉದ್ದವಾದ ಒಂದು ಸರಳಕೊಳವೆ ಉದರದ ಬೆನ್ನುಭಾಗದ ಮಧ್ಯದಲ್ಲಿ ಸ್ಥಿತವಾಗಿದೆ. ಆಸ್ಟಿಯಗಳೆಂದ ಸೀಳುಗಳ ಮೂಲಕ ರಕ್ತ ಹರಿಯುತ್ತದೆ. ಈ ಸೀಳುಗಳ ಸಂಖ್ಯೆ ಕುಟುಂಬದಿಂದ ಕುಟುಂಬಕ್ಕೆ ವ್ಯತ್ಯಾಸವಾಗುತ್ತದೆ.

ಉಸಿರಾಟ ಟ್ರೇಕಿಯಗಳ ಮತ್ತು ಪದರಪುಪ್ಪುಸಗಳ ಸಹಾಯದಿಂದ ನೆಡಯುತ್ತದೆ. ಪದರಪುಪ್ಪುಸಗಳು ಆರ್ಯಾಕ್ನಿಡ ಜೀವಿಗಳಿಗೆ ವಿಶಿಷ್ಟವಾದುವು. ಇವುಗಳ ಸಂಖ್ಯೆ ಸಾಧಾರಣವಾಗಿ ಎರಡು. ಒಂದೊಂದು ಒಂದು ಚೀಲದಂತಿದೆ. ಒಳಗೆ ಎಲೆಗಳಂಥ 15-20 ಸಮಾಂತರ ಬಡುಗಳಿವೆ. ಇವುಗಳ ಮೂಲಕ ರಕ್ತ ಪ್ರವಹಿಸುವುದು. ಸಾಮಾನ್ಯವಾಗಿ ಜೇಡಗಳಲ್ಲಿ ಟ್ರೇಕಿಯಗಳು ದೇಹದ ಎಲ್ಲ ಭಾಗಗಳಿಗೂ ಹರಡುವುದಿಲ್ಲ. ಈ ಲಕ್ಷಣದಲ್ಲಿ ಜೇಡಗಳು ಕೀಟಗಳಿಂದ ಭಿನ್ನವಾಗಿವೆ.

ಜೇಡಗಳು ಭಿನ್ನಲಿಂಗಗಳು

ಬದಲಾಯಿಸಿ

ಗಂಡಿನ ವೃಷಣಗಳೂ ಹೆಣ್ಣಿನ ಅಂಡಾಶಯಗಳು ಉದರ ಭಾಗದೊಳಗೆ ನಾಳಸಮೂಹದಂತೆ ಇವೆ. ಶುಕ್ರಾಣುಗಳು ಗಂಡಿನ ಪೆಡಿಪ್ಯಾಲ್ಟ್‍ಗಳ ನೆರವಿನಿಂದ ಹೆಣ್ನಿಗೆ ವರ್ಗಾವಣೆಯಾಗಿ ಅಲ್ಲಿ ಅಂಡಗಳನ್ನು ನಿಷೇಚಿಸುತ್ತವೆ. ಅನಂತರ ನಿಷೇಚಿತ ಅಂಡಗಳು ರೇಷ್ಮೆ ಗೂಡಿನಲ್ಲಿ ಅಡಕಗೊಂಡು ಇಡಲ್ಪಡುತ್ತವೆ. ಇವನ್ನು ಬಲೆಗೊ, ಗಿಡವೊಂದಕ್ಕೊ ಅಂಟಿಸರಬಹುದು ಅಥವಾ ಹೆಣ್ಣು ಜೇಡೆ ಇತನ್ನು ಹೊತ್ತು ಅಲೆದಾಡಬಹುದು. ಮೊಟ್ಟೆಯೊಡೆದು ಹೊರಬರುವ ಮರಿಗಳು ತಾವು ಓಡಾಡುವಷ್ಟು ಸಾಮಥ್ರ್ಯವನ್ನು ಪಡೆದ ಮೇಲೆ ರೇಷ್ಮೆ ಗೂಡನ್ನು ಬಿಟ್ಟು ಹೊರಬರುತ್ತವೆ. ಜೇಡಗಳ ಕೂಡುವಿಕೆ ಅತ್ಯಂತ ವಿಚಿತ್ರ ರೀತಿಯದು. ಇವು ಸಂಭೋಗ ಕ್ರಿಯೆಯಲ್ಲಿ ತೊಡಗುವ ಮುನ್ನ ಕೆಲವು ಪೂರ್ವಸಿದ್ದತೆಗಳನ್ನು ಆರಂಭಿಸುವುದು ಬಲೆನೇಯುವ ಜೇಡಗಳಲ್ಲಿ ಗಂಡುಗಳು ಉದ್ರೇಕದ ಒಂದು ಘಟ್ಟ ತಲುಪಿದಾಗ, ಬಲೆಯ ಎಳೆಗಳನ್ನು ನುಲಿಚತೊಡಗುತ್ತವೆ. ಜೊತೆಗೆ ಉದರದ ಹಾಗೂ ಪ್ಯಾಲ್ಪೀಯ ಚಲನೆಗಳ್ನು ಪ್ರರ್ಶಿಸತೊಡಗುತ್ತವೆ. ಅಲೆಮಾರಿ ಜೇಡಗಳಲ್ಲಿ (ವ್ಯಾಗಬಂಡ್ ಸ್ಪೈಡರ್) ಈ ವರ್ತನೆ ಇನ್ನೂ ವಿಸ್ತಾರವಾದ್ದು. ಗಂಡು ಜೇಡಗಳು ಹೆಣ್ಣುಗಳ ಮುಂದೆ ತಮ್ಮ ಪ್ಯಾಲ್ಪಿಗಳನ್ನೊ ಕಾಲುಗಳನ್ನೊ (ಕೆಲವೊಮ್ಮೆ ಎರಡನ್ನೂ) ಆಡಿಸುತ್ತ ವಿಚಿತ್ರ ಭಂಗಿಗಳನ್ನು ತಾಳುತ್ತ ನರ್ತಿಸುತ್ತವೆ. ಇಲಂಥ ವರ್ತನೆಗೆ ಕಾರಣಗಳು ಹಲವಾರು ಇರಬಹುದು. ಲೈಂಗಿಕ ಆಯ್ಕೆ ಒಂದು ಕಾರಣವಾದರೆ ಹೆಣ್ನಿನ ಗಮನವನ್ನು ಸೆಳೆಯುವುದು. ಉದ್ರಿಕ್ತ ಸ್ಥಿತಿಸ್ವರಕ್ಷಣೆಯ ಇವು ಇನ್ನಿತರ ಕಾರಣಗಳು ಎಂದು ಹೇಳಲಾಗಿದೆ. ಸಂಭೋಗದ ಕಾಲಾವಧಿಯಲ್ಲಿ ಉಂಟಾಗುವ ತೀವ್ರತೆರನ ಶಾರೀರಿಕ ಚಟುವಟಿಕೆಯ ಬಾಹ್ಯಪ್ರದರ್ಶನ ಹಾಗೂ ಹೆಣ್ಣು ಜೇಡವನ್ನು ಪರಚೀದಿಸಲು ಗಂಡು ನಡೆಸುವ ಪ್ರಣಯಾಚರಣೆ ಇದು ಎಂಬ ಅಭಿಪ್ರಾಯವೂ ಇದೆ. ಹಲವಾರು ಭಂಗಿಗಳಲ್ಲಿ ಕೂಡುವಿಕೆ ನಡೆಯುತ್ತದೆ. ಪ್ರತಿಯೊಂದು ಜಾತಿ ಮತ್ತು ಪ್ರಭೇದಕ್ಕೆ ವಿಶಿಷ್ಟವಾಗಿ ಭಂಗಿ ಉಂಟು.

ಜೇಡಗಳ ಅಂಗಗಳು

ಬದಲಾಯಿಸಿ

ಜೇಡಗಳ ಸಂವೇದನ ಅಂಗಗಳಲ್ಲಿ ಮುಖ್ಯವಾದ್ದು ಕಣ್ಣು. ಬಹುಪಾಲು ಜೇಡಗಳಲ್ಲಿ 8 ಕಣ್ಣುಗಳಿವೆ. ಕೆಲವಲ್ಲಿ ಕೇವಲ ಆರು ಕಣ್ಣುಗಳಿರಬಹುದು. ಶ್ರೀಲಂಕಾದಲ್ಲಿ ಸಿಕ್ಕುವ ಟೆಟ್ರಬ್ಲೆಮ ಎಂದ ಜೇಡದಲ್ಲಿ ನಾಲ್ಕು ಕಣ್ಣುಗಳಿವೆಯಾದರೆ ದಕ್ಷಿಣ ಅಮೆರಿಕದ ನಿವಾಸಿಯಾದ ನಾಪ್ಸ್ ಎಂಬ ಜೇಡದಲ್ಲಿ ಕೇವಲ ಎರಡು ಕಣ್ಣುಗಳಿವೆ. ಗುಹಾವಾಸಿಯಾದ ಆಂತ್ರೋಬಿಯ ಎಂಬ ಜೇಡದಲ್ಲಿ ಕಣ್ಣುಗಳೇ ಇಲ್ಲ. ಕಣ್ಣುಗಳಲ್ಲಿ ಎರಡು ಭಿನ್ನಬಗೆಗಳುಂಟು. ಒಂದು ನೇರ ರೀತಿಯದು. ಇದರಲ್ಲಿ ಅಕ್ಷಿಪಟ ಕೋಶಗಳ ನ್ಯೂಕ್ಲಿಯೈಗಳು ಅಕ್ಷಿಪಟಕ್ಕೆ ವಿರುದ್ದ ದಿಕ್ಕಿನಲ್ಲಿ ಸ್ಥಿತವಾಗಿದೆ. ಇನ್ನೊಂದು `ಪರೋಕ್ಷ ಅಥವಾ ನೇರ ವಲ್ಲದೆ ರೀತಿಯದು. ಇದರಲ್ಲಿ ಅಕ್ಷಿಪಟದ ಕೋಶಗಳು ನ್ಯೂಕ್ಲಿಯಸುಗಳು ಮಸೂರಕ್ಕೆ ಎದುರಾಗಿ ಸ್ಥಿತವಾಗಿವೆ. ಜೇಡಗಳಿಗೆ ಕೆಂಪು ಬಣ್ಣ ಬಲು ಇಷ್ಟ. ಹಳದಿ, ಹಸಿರು ಮತ್ತು ನೀಲಿ ಬಣ್ಣಗಳಿಂದಲೂ ಇವು ಆಕರ್ಷಿತವಾಗುತ್ತವೆ.

ಜೇಡಗಳಲ್ಲಿ ಸ್ಪರ್ಶಾಂಗ ಬಲು ಚೆನ್ನಾಗಿದೆ. ದೈನಂದಿನ ಜೀವನ ನಿರ್ವಹಣೆಗೆ ಇದು ಬಲು ಮುಖ್ಯ. ದೇಹದ ಎಲ್ಲ ಭಾಗಗಳೂ ಸ್ಪರ್ಶ ಸಂವೇದಿಗಳಾಗಿವೆಯಾದರೂ ಸಿಟೀಗಳಲ್ಲಿ ಈ ಗುಣ ಹೆಚ್ಚು ಪ್ರಖರವಾಗಿದೆ. ಬಲೆ ನೇಯುವ ಜೇಡಗಳಲ್ಲಿ ಇದು ಇನ್ನೂ ತೀಕ್ಷ್ಣ. ಬಲೆಯ ಯಾವ ಮೂಲೆಯಲ್ಲಾದರೂ ಕೊಂಚ ಚಲನೆಯಾದರೂ ಜೇಡ ಅದನ್ನು ತಕ್ಷಣ ಗ್ರಹಿಸುವುದಲ್ಲದೆ ಬಲಯನ್ನು ಮುಟ್ಟುತ್ತಿರುವ ಪ್ರಾಣಿ ಯಾವುದು ಎಂಬುದನ್ನೂ ತಿಳಿದುಕೊಳ್ಳಬಲ್ಲದು. ಜೇಡಗಳು ಟ್ರೈಕೊಬಾಕ್ರಿಯಗಳೆಂಬ ಸೂಕ್ಷ್ಮ ಕೂದಲುಗಳ ಸಹಾಯದಿಂದ ಶಬ್ದವನ್ನು ಗ್ರಹಿಸಬಲ್ಲವು. ಅಲ್ಲದೆ ತಮ್ಮ ಅಂಗಗಳ ಗಡಸು ಭಾಗಗಳನ್ನು ಉಜ್ಜುವ ಮೂಲಕ ಒಂದು ತೆರನ ಕೀಚು ಧ್ವನಿಯನ್ನು ಉಂಟುಮಾಡುತ್ತವೆ. ಜೇಡಗಳು ಲೈರಿಫಾರಮ್ ಅಂಗಗಳೆಂಬ ವಿಶಿಷ್ಟ ರಚನೆಗಳ ಸಹಾಯದಿಂದ ವಾಸನೆಯನ್ನು ಗ್ರಹಿಸಬಲ್ಲವು. ಈ ಅಂಗಗಳು ಕಾಲು ಮತ್ತು ಪ್ಯಾಲ್ಪಿಗಳ ಮೇಲೆ ವ್ಯಾಪಿಸಿವೆ. ಅಲ್ಲದೆ ಪ್ಯಾಲ್ಪಿಗಳ ಮೇಲೆ ರುಚಿಗ್ರಾಹಿ ರಚನೆಗಳೂ ಉಂಟು.

ಜೇಡಗಳು ವಿವಿಧ ರೀತಿಯ ನೆಲೆಗಳಲ್ಲಿ ಕಾಣದೊರೆಯುತ್ತವೆ. ಅನೇಕವು ನೆಲದ ಮೇಲೆ ಇಲ್ಲವೆ ಸನಿಹದಲ್ಲಿ ವಾಸಿಸುವುದು. ಸುರಂಗಗಳನ್ನು ಕೊರದು ಇಲ್ಲವೆ ಸ್ವಾಭಾವಿಕವಾದ ಕುಹರಗಳಲ್ಲಿ ಬಿರುಕುಗಳಲ್ಲಿ ಜೀವಿಸುತ್ತವೆ. ಕೆಲವು ಕಲ್ಲುಗಳ ಇಲ್ಲವೆ ದಿಮ್ಮಿಗಳ ಅಡಿಯಲ್ಲಿ ವಾಸಿಸುವುದುಂಟು. ಹುಲ್ಲಿನಲ್ಲಿ ಪೊದೆಗಳಲ್ಲಿ ಮರಗಳಲ್ಲಿ ವಾಸಿಸುವ ಜೇಡಗಳೂ ಇವೆ. ವಾಸದ ಮನೆಗಳಲ್ಲೂ ಜೇಡಗಳು ಬಲು ಸಾಮಾನ್ಯ. ಸಾಮಾನ್ಯವಾಗಿ ಇವು ಕತ್ತಲಿರುವ ಮತ್ತು ನೆರಳಿರುವ ಹಾಗೂ ಆದ್ರತೆ ಹೆಚ್ಚಾಗಿರುವ ನೆಲೆಗಳನ್ನು ಇಚ್ಚಿಸುತ್ತವೆ.

ಜೇಡರಬಲೆ ಮತ್ತು ನೇಯುವ ವಿಧಾನ

ಬದಲಾಯಿಸಿ

ಜೇಡ ಎಂದ ತತ್‍ಕ್ಷಣ ಎಲ್ಲರ ಮನಸ್ಸಿಗೆ ಬರುವುದು ಅವುಗಳ ಬಲೆ. ಜೇಡ ಎಂಬ ಹೆಸರೇ ಇದು ನೇಕಾರ ಎಂದು ಸೂಚಿಸುತ್ತದೆ. ಬಲೆ ನೇಯುವ ಸ್ವಭಾವದ ಆರಂಭ ಲೈಫಿಸಿಟಿಯೊಮಾರ್ಫಿ ಕುಟುಂಬದಲ್ಲಿ ಕಂಡು ಬರುತ್ತದೆ. ಈ ಗುಂಪಿನ ಜೇಡಗಳು ಸುರಂಗದಂಥ ಬಿಲವನ್ನು ರಚಿಸಿ ಅದರ ಸುತ್ತ ರೇಷ್ಮೆಯ ಮೆತ್ತೆಯನ್ನು ರಚಿಸುತ್ತವೆ. ಈ ಬಿಲಕ್ಕೆ ಕೀಲು ಕವಾಟವೊಂದುಂಟು. ಈ ತೆರನ ಬಿಲದಿಂದ ಮುಂದಿನ ಹಂತವೆಂದರೆ ಮನೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಗೋಜುಗೋಜಾದ ಜೇಡನ ಬಲೆಗಳು. ಇದರಲ್ಲೂ ಒಂದು ಕೊಳವೆಯಂಥ ಗೂಡು ಉಂಟು. ಆದರೆ ಇದರ ಅರುಗಿನಲ್ಲಿರುವ ಎಳೆಗಳು ತುಂಬ ವಿಸ್ತಾರವಾಗಿ ಬಲೆಯ ರೂಪದಲ್ಲಿ ಹರಡಿಕೊಂಡಿರುತ್ತವೆ. ಎತ್ತರದಲ್ಲಿ ಹಾರಾಡುವ ಕೀಟಗಳನ್ನು ಹಿಡಿಯುವ ಉದ್ದೇಶವೇ ಈ ರೀತಿ ಬಲೆ ನೇಯುವ ಪ್ರವೃತ್ತಿಗೆ ಮೂಲಕಾರಣ. ಬಲೆ ನೇಯುವ ಪ್ರವೃತ್ತಿಯ ವಿಕಾಸದಲ್ಲಿ ಕೊನೆಯ ಹಂತವೆಂದರೆ ಸುಂದರವಾದ ವೃತ್ತಾಕಾರದ ಜೇಡಬಲೆಗಳು. ಇಂಥ ಬಲೆಯಲ್ಲಿ ಐದು ಭಾಗಗಳಿವೆ : 1 ಮೂಲರೇಖೆಗಳ ಚೌಕಟ್ಟು. 2 ಅರೀಯ ಎಳೆಗಳು. 3 ಅಂಟುಂಟಾದ ಸುರುಳಿ, 4 ಕಚ್ಚುಗಳುಳ್ಳ ವಲಯ, 5 ಗಂಬ. 6 ಬಲೆನೇಯುವುದು ಮೂಲ ಎಳೆಗಳನ್ನು ಕಟ್ಟುವುದರಿಂದ ಆರಂಭವಾಗುತ್ತದೆ. ಮೊದಲು ಯಾವುದೋ ಒಂದು ಬಿಂದುವನ್ನು ಆರಂಭಸ್ಥಾನವನ್ನಾಗಿ ಇಟ್ಟುಕೊಂಡು ಇಲ್ಲಿಗೆ ಒಂದು ಎಳೆಯನ್ನು ಅಂಟಿಸಿ, ಅಲ್ಲಿಂದ ನಿರ್ದಿಷ್ಟ ದೂರದಲ್ಲಿನ ಇನ್ನೊಂದು ನೆಲೆಗೆ ಕ್ಷಿತಿಜೀಯ ಎಳೆಯೊಂದನ್ನು ವಿಸ್ತರಿಸುತ್ತದೆ. ಎಳೆ ಯಾವುದೇ ವಸ್ತುವಿನೊಂದಿಗೆ ಸಿಕ್ಕಿಕೊಳ್ಳದಂತೆ (ತೊಡಕಿ ಹಾಕಿಕೊಳ್ಳದಂತೆ) ನಾಲ್ಕನೆಯ ಜೋಡಿಕಾಲುಗಳು ಎಳೆಯನ್ನು ಎತ್ತಿಹಿಡಿಯುತ್ತವೆ.

ಜೇಡರ ಬಗೆಗಳು

ಬದಲಾಯಿಸಿ

ಜೇಡಬಲೆಗಳಲ್ಲಿ ಹಲವಾರು ಬಗೆಗಳುಂಟು. ಒಂದೊಂದು ಬಗೆಯೂ ಒಂದೊಂದು ಪ್ರಭೇದಕ್ಕೆ ವಿಶಿಷ್ಟವಾದ್ದು ಮತ್ತು ಆಯಾ ಜೇಡಪ್ರಭೇದದ ಹುಟ್ಟಿನಿಂದ ಬಂದ ಗುಣ. ಮನೆಗಳಲ್ಲಿ ವಾಸಿಸುವ ಜೇಡಗಳಲ್ಲಿ ಹೆಚ್ಚಿನವು ಖಚಿತ ಆಕಾರವಿಲ್ಲದೆ ಹೆಣೆಗೆ ರಚನೆಯ ಬಲೆಗಳನ್ನು ನೇಯುತ್ತವೆ. ನವುರಾದ ಎಳೆಗಳಿಂದ ಹೆಣೆಯಲ್ಪಟ್ಟ ಇವು ಮೂರು ಆಯಾಮಗಳುಳ್ಳವು ಇವುಗಳಿಲ್ಲಿ ಬರಿಯ ಎಳೆಗಳೇ ಅಲ್ಲದೆ ದೂಳು ಕಸಕಡ್ಡಿ ಮುಂತಾದುವೂ ಸೆರೆಸಿಕ್ಕುತ್ತವೆ. ಸಾಮಾನ್ಯವಾಗಿ ಗುಂಪುಗುಂಪಾಗಿ ವಾಸಿಸುವ ಜೇಡಗಳು ಇಂಥ ಬಲೆಗಳನ್ನು ನಿರ್ಮಿಸುತ್ತವೆ. ಆಗಿಂದಾಗ್ಗೆ ಬಲೆಗಳನ್ನು ದೊಡ್ಡದು ಮಾಡುವುದು, ದುರಸ್ತು ಮಾಡುವುದು ಮುಂತಾದ ಚಟುವಟಿಕೆಗಳು ನಡೆದೇ ಇರುತ್ತವೆ. ಬಯಲಿನಲ್ಲಿ ಜೀವಿಸುವಂಥ ಜೇಡಗಳಾದರೋ ಹಡಗಿನ ಕೂವೆಕಂಬಗಳಿಂದ ಹರಡಿಕೊಂಡಿರುವ ಹಾಯಿಪಟಗಳ ಮಾದರಿಯಲ್ಲಿ ಹುಲ್ಲು ಮತ್ತು ಉದ್ದ ತೊಟ್ಟಿನ ಹೂಗಳಿಮದ ಹರಡಿಬಿದ್ದಿರುವ ಹಾಳೆ ರೀತಿಯ ಬಲೆಗಳನ್ನು ರಚಿಸುತ್ತವೆ. ಇನ್ನೂ ಕೆಲವು ಜೇಡಗಳು ಸರ್ಕಸ್ಸಿನಲ್ಲಿ ಬಳಸುವ ಜಿಗಿಬಲೆಗಳಂಥ (ಟ್ರ್ಯಾಂಪಲೀನ್) ಬಲೆಗಳನ್ನು ನಿರ್ಮಿಸಿ ಕೀಟಗಳನ್ನು ಹಿಡಿಯುತ್ತವೆ. ಇನ್ನೂ ಕೆಲವು ಬಗೆಯವು ಗುಮ್ಮಟ, ಆಲಿಕೆ, ಕೊಳವೆ ಇಲ್ಲವೆ ಸಂಚಿಗಳಂಥ ಬಲೆಗಳನ್ನು ರಚಿಸುತ್ತವೆ. ಬಲೆಗಳಲ್ಲೆಲ್ಲ ಅತ್ಯಂತ ಕುತೂಹಲಕಾರಿ ಮತ್ತು ಸಂಕೀರ್ಣ ಬಗೆಯವೆಂದರೆ ಒಂದೇ ಒಂದು ಸಮಪಾತಾಳಿಯಲ್ಲಿ ವಿಸ್ತರಿಸಿರುವ ವೃತ್ತಾಕಾರದ ಬಲೆಗಳು (ಆರ್ಬ್ ವೆಬ್ಸ್). ಇಂಥ ಬೆಲೆಗಳಲ್ಲಿ ಹಲವಾರು ಬಗೆಯ ಎಳೆಗಳಿರುತ್ತವೆ. ಇವುಗಳ ವ್ಯಾಸ 0.03 µ ಯಿಂದ 0.1 µ ವರೆಗೆ ವ್ಯತ್ಯಸಬಾಗಬಹುದು. ಈ ತೆರನ ಬಲೆಯನ್ನು ನೇಯುವುದಕ್ಕೆ ಆರಂಭಿಸುವ ಮೊದಲು ಅತ್ಯಂತ ಭಾರವಾದ ಮತ್ತು ಹಲವಾರು ಕೆಲಸಗಳಿಗೆ ಬರುವಂಥ ದೃಢವಾದ ಎಳೆಯನ್ನು ರಚಿಸುತ್ತ ಸೂಕ್ತವಾದ ಜಾಗವನ್ನು ಹುಡುಕಿಕೊಂಡು ಓಡಾಡುತ್ತದೆ. ಈ ದೃಢವಾದ ಎಳೆಗೆ ಕರ್ಷಣಸೂತ್ರ (ಡ್ರ್ಯಾಗ್‍ಲೈನ್) ಎಂದು ಹೆಸರು. ಜೇಡ ಸ್ಥಳದಿಂದ ಸ್ಥಳಕೆ ಓಡಾಡುವಾಗಲೆಲ್ಲ ಇದು ರಚಿತವಾಗುತ್ತಲೇ ಇರುತ್ತದೆ. ಜೇಡ ಯಾವುದಾದರೊಂದು ಸ್ಥಳದಲ್ಲಿ ರೆಂಬೆ ಮುಂತಾದುವುಗಳಿಂದ ಇಳಿಯ ಬೇಕೇನಿಸಿದಾಗ ಈ ಕರ್ಷಣಸೂತ್ರವನ್ನು ರಚಿಸುತ್ತಲೆ ಇಳಿಯುತ್ತ ಹೋಗುತದೆ. ಬೇಕೆನಿಸಿದಾಗ ಅಥವ ಸಮೀಪದಲ್ಲೆಲ್ಲೊ ಅಪಾಯವಿದೆ ಎನಿಸಿದಾಗ ಕರ್ಷಣಸೂತ್ರದ ಗುಂಟ ಜೇಡ ಮೇಲಕ್ಕೇರಬಲ್ಲದು. ಮೊದಲು ಪರಸ್ಪರ ದೂರದಲ್ಲಿರುವ ಎರಡು ಬಿಂದುಗಳನ್ನೂ ಸೇರಿಸುವಂತೆ ಒಂದು ಕ್ಷಿತಿಜೀಯ ಸೇತುವೆ ನಿರ್ಮಾಣವಾಗುತ್ತದೆ. ಇದು ಕರ್ಷಣಸೂತ್ರದಿಂದ ನಿರ್ಮಿತವಾಗಿರಬಹುದು. ಇಲ್ಲವೆ ಹೀಗೆ ಮಾಡಲು ಸಾಧ್ಯವಾಗದಿದ್ದಾಗ, ಅಂದರೆ ಸಣ್ಣ ಹಳ್ಳ, ಝರಿ ಮುಂತಾದವುಗಳ ಮೇಲೆ ಹಾದುಹೋಗುವಂಥ ಸಂದರ್ಭಗಳಲ್ಲಿ ಜೇಡ ತನ್ನ ಉದರಭಾಗವನ್ನು ಕೊಂಚ ಮೇಲೆತ್ತಿ ರೇಷ್ಮೆಯ ಎಳೆಯೊಂದನ್ನು ಹೊರಸೂಸಲಾರಂಭಿಸುತ್ತದೆ. ಗಾಳಿ ಪ್ರವಾಹದ ಮೂಲಕ ಈ ಎಳೆ ದೂರ ಒಯ್ಯಲ್ಪಟ್ಟು ಯಾವುದಾದರೂ ಟೊಂಗೆಗೋ ಎಲೆಗೋ ಸಿಕ್ಕಿಕೊಳ್ಳಬಹುದು. ಆಗ ಜೇಡ ಹೂಸೆಯುವುದನ್ನು ನಿಲ್ಲಿಸಿ ಎಳೆಯನ್ನು ಬಿಗಿಯಾಗಿ ಜಗ್ಗಿಸಿ ಎಳೆದು ಬಂಧಿಸುತ್ತದೆ. ಅನಂತರ ತೆಳುವಾದ ಈ ಎಳೆಯ ಮೇಲೆ ಅತ್ತಿಂದಿತ್ತ ಓಡಾಡಿ ಹೆಚ್ಚು ಹೆಚ್ಚಾಗಿ ಕರ್ಷಣಸೂತ್ರವನ್ನು ಹೊಸೆದು ಬಲಪಡಿಸುವುದು.

ಹೀಗೆ ಒಂದು ಅಸ್ತಿಭಾರವನ್ನು ಹಾಕಿದ ಮೇಲೆ ಬಲೆಯ ಕೇಂದ್ರವನ್ನು ನಿರ್ಧರಿಸಿ ಅದರ ಮೂಲಕ ಹಾಯುವಂತೆ ಒಂದು ಎಳೆಯನ್ನು ಹೊಸೆಯುತ್ತದೆ. ಅನಂತರ ಒಂದೊಂದಾಗಿ ತ್ರಜ್ಯರೇಖೆಗಳನ್ನು ರಚಿಸುತ್ತದೆ. ಒಂದು ತ್ರಿಜ್ಯರೇಖೆ ಪೂರ್ಣಗೊಂಡಮೇಲೆ ಬಲೆಯ ಗುಂಬಕ್ಕೆ ವಾಪಸ್ಸು ಬಂದು ಮತ್ತೊಂದು ಹೊಸ ತ್ರಿಜ್ಯ ರೇಖೆಯನ್ನು ಹೊಸೆಯುವುದು ಇದರ ವಾಡಿಕೆ. ಹೀಗೆ 25 ಅಥವಾ ಅದಕ್ಕೂ ಹೆಚ್ಚು ಅರೀಯ ಎಳೆಗಳನ್ನು ಹೊಸೆದನಂತರ ಈ ಎಳೆಗಳನ್ನು ಸರಿಯಾಗಿ ಹಿಡಿದಿಡುವಂತೆ ಒಂದು ಆಸರೆ ಸುರುಳಿಯನ್ನು (ಗೈಸ್ಪೈರಲ್) ರಚಿಸುತ್ತವೆ. ತರುವಾಯ ಹೆಚ್ಚು ಸ್ಥಿತಿಸ್ಥಾಪಕತೆಯುಳ್ಳ ಮತ್ತು ಅಂಟಂಟಾದ ಇನ್ನೊಂದು ಬಗೆಯ ರೇಷ್ಮೆಯಿಂದ ಇನ್ನೊಂದು ಸುರುಳಿಯನ್ನು ಕೇಂದ್ರಭಿಗಾಮಿಯಾಗಿ ಹೊಸೆಯುತ್ತ ಬರುತ್ತದೆ. ಪ್ರತಿಯೊಂದು ಅರೀಯ ಎಳೆಗೆ ಈ ಸುರುಳಿಯನ್ನು ಅಂಟಿಸುವ ಮುನ್ನ ತನ್ನ ಹಿಂಗಾಲೊಂದರಿಂದ ಒಂದು ಸಲ ಜೀಕು ಹೊಡದು ಜಗ್ಗಿಸುತ್ತದೆ. ಇದರಿಂದಾಗಿ ಅರೀಯ ಎಳೆಗಳಲ್ಲಿ ಚಲನೆಗೆ ಕೊಂಚ ಅವಕಾಶವಿರುತ್ತದೆ (ತೊನೆತವಿರುತ್ತದೆ). ಈ ಎಳೆಗಳಲ್ಲಿ ಯಾವುದಾದರೂ ಕೀಟೆವೊಂದು ಸಿಕ್ಕಿಹಾಕಿಕೊಂಡರೆ ಅದು ಅತ್ತಿಂದಿತ್ತ ಪುಟನೆಗೆದು ಬಿಡಿಸಿಕೊಳ್ಳಲಾರದಂಥೆ ಇತರ ಎಳೆಗಳಲ್ಲಿ ಸಿಕ್ಕುಬೀಳುತ್ತದೆ. ಅಂಟಂಟಾದ ಸುರುಳಿಯನ್ನು ರಚಿಸುತ್ತ ಹೋದಂತೆ ಆಸರೆ ಸುರುಳಿಯನ್ನು ಕತ್ತರಿಸುತ್ತದೆ. ಅನಂತರ ಗುಂಬದಲ್ಲಿ ಸಂಗ್ರಹಗೊಂಡಿರುವ ಎಳೆಗಳನ್ನೆಲ್ಲೆ ತಿಂದುಹಾಕುತ್ತದೆ. ಹೀಗೆ ಬಲೆಯನ್ನು ಸಂಪೂರ್ಣಗೊಳಿಸಿ ಒಪ್ಪಮಾಡಿದ ಮೇಲೆ ಯಾವುದಾದರೊಂದು ಅರೀಯ ಎಳೆಯನ್ನು ಆಯ್ದುಕೊಂಡು ಅದರ ಮೂಲಕ ನಡೆದು ಬಲೆಯಿಂದ ಆಚೆ ಬಂದು ಕೊಂಚ ದೂರದಲ್ಲಿ ಜೇಡ ನಿಲ್ಲುತ್ತದೆ. ಈ ಎಳೆಯೇ ಜಾಡು ಎಳೆ (ಗೈಡ್ ಲೈನ್). ಬಲೆಯ ಸಮೀಪಕ್ಕೆ ಯಾವುದಾದರೂ ಕೀಟ ಬಂದರೆ ಈ ಜಾಡು ಎಳೆ ಅಲುಗಲಾರಂಭಿಸುತ್ತದೆ. ಇದರಿಂದಾಗಿ ಮರೆಯಲ್ಲಿ ಅಡಗಿರುವ ಜೇಡ ಕೀಟದ ಮೇಲೆ ಬಂದೆರಗಿ ಅದರ ಸುತ್ತ ಅನೇಕ ಎಳೆಗಳನ್ನು ಸುತ್ತಿ ಬಿಗಿದು ಅದನ್ನು ತಿನ್ನಲಾರಂಭಿಸುತ್ತದೆ.

ಬಲೆಯನ್ನು ನೇಯುವ ಕ್ರಿಯೆಯನ್ನು ಪ್ರಯೋಗಾಲಯಗಳಲ್ಲಿ ಅಭ್ಯಸಿಸಲಾಗಿದೆ. ಸಾಮಾನ್ಯವಾಗಿ ಅತ್ಯಂತ ತಂಪಾಗಿರುವ ಸಮಯದಲ್ಲಿ ಈ ಚಟುವಟಿಕೆ ಹೆಚ್ಚು ಎಂದು ಕಂಡುಬಂದಿದೆ. ಅನೇಕ ಬಗೆಯ ಜೇಡಗಳು ಪ್ರತಿನಿತ್ಯ ಒಂದೊಂದು ಹೊಸ ಬಲೆಯನ್ನು ನೇಯುತ್ತವಾದರೂ ಇನ್ನು ಕೆಲವು ಒಂದೇ ಬಲೆಯನ್ನು ಅನೇಕ ದಿನಗಳವರಗೆ ಉಪಯೋಗಿಸುತ್ತವೆ. ಸಾಧಾರಣವಾಗಿ 20-30 ಮಿನಿಟುಗಳಲ್ಲಿ ಒಂದು ಬಲೆಯನ್ನು ರಚಿಸಬಲ್ಲವು. ಈ ಚಟುವಟಿಕೆ ಜೇಡಗಳಿಗೆ ಕಲಿಕೆಯಿಂದ ಬಂದ ಚಾತುರ್ಯವಲ್ಲ ಇದೊಂದು ಸಹಜ ಪ್ರವೃತ್ತಿ. ಮರಿಜೇಡಗಳು ಮೊದಮೊದಲು ಸಣ್ಣಪುಟ್ಟ ಬಲೆಗಳನ್ನು ರಚಿಸುತ್ತಿದ್ದು ಅಭ್ಯಾಸ ನಡೆಸಿ ಕಾಲಕ್ರಮೇಣ ದೊಡ್ಡ ಬಲೆಗಳನ್ನು ನಿರ್ಮಿಸತೊಡಗುತ್ತವೆ ಎಂದು ಭಾವಿಸಲಾಗಿತ್ತು. ಆದರೆ ಮೊಟ್ಟೆಯೊಡೆದು ಹೊರಬರುವ ಮರಿ ಜೇಡವನ್ನು ಅದರ ತಾರುಣ್ಯದ ವರೆಗೂ ಏಕಾಂತಬಂಧನದಲ್ಲಿ ಒಂದು ಎಳೆಯನ್ನೂ ಅದು ನೂಲದಂತೆ ಮಡಿ ಇರಿಸಿ, ಅನಂತರ ಮುಕ್ತಗೊಳಿಸಿದರೆ ಆ ಜೇಡ ಪ್ರಥಮ ಯತ್ನದಲ್ಲೇ ಪರಿಪೂರ್ಣವಾದ ಒಂದು ದೊಡ್ಡ ಗಾತ್ರದ ಬಲೆಯನ್ನು ರಚಿಸುತ್ತದೆ ಎಂದು ರಷ್ಯನ್ ಪ್ರಯೋಗಗಳಿಂದ ವ್ಯಕ್ತವಾಗಿದೆ. ಬಲೆಯನ್ನು ನೇಯುವ ಚಟುವಟಿಕೆಯಲ್ಲಿ ಹಲವು ಕುತೂಹಲಕಾರಿ ಅಂಶಗಳೂ ಉಂಟು. ಬಲೆ ನೇಯುವ ಲಭ್ಯವಿರುವ ರೇಷ್ಮೆಯ ಮೊತ್ತವನ್ನವಲಂಬಿಸಿ ಬಲೆಯ ವಿನ್ಯಾಸವನ್ನು ಜೇಡ ನಿರ್ಧರಿಸುತ್ತದೆ. ಪ್ರೋಟೀನ್ ಪೂರೈಕೆ ಕಡಿಮೆಯಿರುವಾಗ ಬಲೆಯ ಗಾತ್ರವನ್ನು ಕಡಿಮೆ ಮಾಡುವುದಲ್ಲದೆ ಎಳೆಗಳನ್ನು ಹೆಚ್ಚು ತೆಳುವಾಗಿ ರಚಿಸುತ್ತದೆ ; ರೇಷ್ಮೆ ಉತ್ಪಾದನೆಯನ್ನು ಹೆಚ್ಚಿಸುವ ಸಾಮಾಥ್ರ್ಯವುಳ್ಳ ಫೈಸೊಸ್ಟಿಗ್ಮೈನ್ ಎಂಬ ರಾಸಾಯನಿಕವನ್ನು ಜೇಡಗಳಿಗೆ ಉಣಿಸಿದಾಗ ದೊಡ್ಡ ಗಾತ್ರದ ಬಲೆಗಳನ್ನು ನೇಯುವುವು. ಅಂತೆಯೇ ಜೇಡಗಳು ಭಾರವಾಗಿದ್ದರೆ ಬಲೆಗಳೂ ದೃಡವಾಗಿ ಗಡುಸಾಗಿ ಇರುತ್ತವೆ. ಹಗುರವಾದ ಜೇಡವೊಂದಕ್ಕೆ ಸೀಸದ ಸಣ್ಣ ತುಂಡನ್ನು ಕಟ್ಟಿದರೆ ಅದು ಭಾರವಾದ ಎಳೆಯ ಬಲೆಯನ್ನು ರಚಿಸುವುದು. ಆದರೆ ಇಂಥ ಬಲೆಯನ್ನು ನಿರ್ಮಿಸುವುದಕ್ಕೆ ಹೆಚ್ಚು ಮೊತ್ತದ ರೇಷ್ಮೆ ಬೇಕಾಗುವುದರಿಂದ ಅಷ್ಟು ರೇಷ್ಮೆಯನ್ನು ಪೂರೈಸಲಾರದೆ ಬಲೆಯ ತ್ರಿಜ್ಯಗಳನ್ನೂ ಸುರುಳಿಗಳನ್ನೂ ಕಡಿಮೆ ಮಾಡಿ ಸರಿದೂಗಿಸುತ್ತದೆ.

ಬಲೆ ನೇಯುವ ಚಟುವಟಿಕೆಗೆ ಜೇಡದ ದೇಹದಲ್ಲಿನ ಹಲವಾರು ವಿವಿಧ ವ್ಯವಸ್ಥೆಗಳ ಸುಸಂಘಟಿತ ಹಾಗೂ ಸುಗಮ ಕಾರ್ಯನಿರ್ವಹಣೆ ಅತ್ಯಗತ್ಯ. ಇವುಗಳಲ್ಲಿ ಯಾವ ಒಂದು ವ್ಯವಸ್ಥೆಗೆ ಆತಂಕವುಂಟಾದರೂ ಅದರಿಂದ ಬಲೆಯ ವಿನ್ಯಾಸದಲ್ಲಿ ನಿರ್ದಿಷ್ಟವಾದ ಮತ್ತು ಮುಖ್ಯವಾಗಿ,ಕ್ರಮವಾಗಿ ಪುನರಾವೃತ್ತಿಯಾಗುವ ಬದಲಾವಣೆಗಳು ಕಂಡುಬರುತ್ತವೆ. ಉದಾಹರಣೆಗೆ ಜೇಡಗಳ ಮುಂಗಾಲುಗಳಲ್ಲಿ ಯಾವುದಾದರೂ ಒಂದನ್ನು ಕತ್ತರಿಸಿಹಾಕಿದರೆ ಅಂಥ ಜೇಡಗಳು ರಚಿಸುವ ಬಲೆಗಳ ಆಕಾರ ಕಾಲು ತೆಗೆದುಹಾಕದಿರುವ ಜೇಡಗಳಿಂದ ನಿರ್ಮಿತವಾದ ಬಲೆಗಳ ಆಕಾರದಂತೆಯೇ ಇದ್ದರೂ ಆ ಬಲೆಗಳಲ್ಲಿನ ತ್ರಿಜ್ಯಗಳ ಮತ್ತು ಕೆಲವು ಸಲ ಸುರುಳಿಗಳ ಕೋನಗಳು ಅನಿಯತವಾಗಿರುತ್ತವೆ. ಇದರಿಂದ ಆ ರೀತಿಯ ಕೋನಗಳನ್ನು ಅಳೆಯಲು ಮುಮಗಾಲು ಆವಶ್ಯಕವೆಂದು ಬಗೆಯಲಾಗಿದೆ.

ಇತ್ತೀಚೆಗೆ ಲೇಸರ್ ಕಿರಣಗಳನ್ನು ಬಳಸಿ ಜೇಡಗಳ ಸೆಫೆಲೊತೋರ್ಯಾಕ್ಸಿನಲ್ಲಿರುವ ಮಿದುಳಿನ ಗಾಯಗಳನ್ನುಂಟುಮಾಡಿ ಬಲೆ ನಿರ್ಮಾಣದ ಚಟುವಟಿಕೆಯ ಮೇಲೆ ಯಾವ ರೀತಿಯ ಪರಿಣಾಮವಾಗುತ್ತದೆ ಎಂಬುದನ್ನು ಅಭ್ಯಸಿಸಲಾಗಿದೆ. ಅಂತೆಯೇ ವಿವಿಧ ರೀತಿಯ ರಾಸಾಯನಿಕಗಳ ಪ್ರಭಾವದ ಬಗ್ಗೆಯೂ ಆಧ್ಯಯನಗಳು ನಡೆದಿವೆ. ಉದಾಹರಣೆಗೆ ಮೆಸ್ಕಲೀನ್ ಮತ್ತು ಪೆಂಟೊಬಾರ್ಬಿಟಾಲುಗಳನ್ನು ಪ್ರಯೋಗಿಸಿದರೆ ಜೇಡಗಳ ಪ್ರೇರಕ ನಡವೆಳಿಕೆಗಳ ಮೇಲೆ ತೀವ್ರ ಪರಿಣಾಮಗಳಾಗುವುವೆಂದು ಕಂಡುಬಂದಿದೆ. ಇದರಿಂದಾಗಿ ಜೇಡಗಳು ಸಣ್ಣ ಗಾತ್ರದ ಮತ್ತು ಅನಿಯತ ಆಕಾರದ ಬಲೆಗಳನ್ನು ನಿರ್ಮಿಸುವುವು. ಕ್ಲೋರ್ ಪ್ರೋಮಜೀನ್ ಆಥವಾ ಸೈಲೋಸೈಬಿನ್ ಎಂಬವುಗಳ ಪ್ರಯೋಗದಿಂದ ಜೇಡಗಳು ಬಲೆ ನೇಯುವ ಪ್ರವೃತ್ತಿಯಲ್ಲಿ ಆಸಕ್ತಿಯನ್ನೇ ಕೊಂಚಕಾಲ ಕಳೆದುಕೊಳ್ಳುತ್ತವೆ.

ಸಾಮಾನ್ಯವಾಗಿ ಬಲೆಗಳನ್ನು ನೆಲದ ಮೇಲಿನ ನೆಲೆಗಳಾದ ಮರಗಿಡಗಳು, ಕಲ್ಲುಬಂಡೆಗಳು ಮುಂತಾದುವುಗಳ ಮೇಲೆ ನಿರ್ಮಿಸವುವಾದರೂ ಕೆಲವು ಬಗೆಯ ಜಲವಾಸಿ ಜೇಡಗಳು (ಉದಾಹರಣೆಗೆ ಏಷ್ಯ ಮತ್ತು ಯೂರೋಪುಗಳಲ್ಲಿ ಕಾಣದೊರೆಯುವ ಆರ್ಗೊನೀಟ ಅಕ್ವಾಟಿಕ) ನೀರಿನೊಳಗೇ ಬಲೆಯನ್ನು ರಚಿಸಿ ಸಣ್ಣ ಪುಟ್ಟ ಮೀನುಮರಿಗಳನ್ನು ಕಠಿಣಚರ್ಮಿಗಳನ್ನು ಹಿಡಿಯಲು ಬಳಸುತ್ತವೆ. ಇಂಥ ಜೇಡಗಳು ಹೆಚ್ಚಾಗಿ ನೀರಪಾತಳಿಯ ಮೇಲೆಯೇ ಇರುತ್ತವಾದರೂ ಬಲೆಗೆ ಬಳಿಗೆ ಹೋಗಬೇಕಾದ ಒಂದು ದೊಡ್ಡ ಗಾಳಿಗುಳ್ಳೆಯನ್ನು ಮೈಗೆ ಅಂಟಿಸಿಕೊಂಡು ಮುಳುಗುತ್ತವೆ. ಇದರಿಂದ ನೀರಿನೊಳಗಿದ್ದುಕೊಂಡು ಇವು ಉಸಿರಾಡಬಲ್ಲವು.

ಜೇಡಬಲೆಯ ರೇಷ್ಮೆ ಹುಳುಗಳ ರೇಷ್ಮೆಗಿಂತ ಹೆಚ್ಚು ಧೃಡವಾದುದೂ ಹಗುರವಾದುದೂ ನಾಜೂಕಾದುದೂ ಆಗಿದೆ. ಇದನ್ನು ಬಟ್ಟೆ ತಯಾರಿಕೆಯಲ್ಲಿ ಉಪಯೋಗಿಸಲು ಪ್ರಯತ್ನಗಳು ನಡೆದಿವೆಯಾದರೂ ಅವು ಯಶಸ್ವಿಯಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಬಟ್ಟೆ ತಯಾರಿಕೆಗೆ ಸಾಕಾಗುವಷ್ಟು ರೇಷ್ಮೆಯನ್ನು ಪಡೆಯಲು ಜೇಡಗಳನ್ನು ಸಾಕುವುದಕ್ಕೆ ತಗಲುವ ಅಪಾರ ವೆಚ್ಚ. ಮಡಗಾಸ್ಕರಿನಲ್ಲಿ ಹತ್ತೊಂಬತ್ತನೆಯ ಶತಮಾನದಲ್ಲಿ ಜೇಡಗಳನ್ನು (ನೆಫೈಲ ಮಡಗಾಸ್ಕರಿಯೆನ್ಸಿಸ್ ಎಂಬ ಪ್ರಭೇದ) ದೊಡ್ಡ ಗುಂಪುಗಳಲ್ಲಿ ಸಾಕುವ ಪ್ರಯತ್ನ ನಡೆಯಿತು. ಆದರೆ ಆಧಿಕ ಮೊತ್ತದ ಖರ್ಚಿನಿಂದಾಗಿ ಈ ಯತ್ನವನ್ನು ಕೈಬಿಡಲಾಯಿತು. ಈಗ ಜೇಡಬಲೆಯ ರೇಷ್ಮೆಯನ್ನು ದೃಗ್ಯಂತ್ರ ಸಲಕರಣೆಗಳ ರೇಖಾ ಫಲಕಗಳ (ಗ್ರೀಟಿಂಗ್ಸ) ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ಜೇಡಬಲೆಗೆ ಔಷಧೀಯ ಮಹತ್ತ್ವವೂ ಉಂಟು. ಗಾಯ ಮತ್ತು ಕೊಯ್ತಗಳಲ್ಲಿ ಇದನ್ನು ಕಟ್ಟುಪಟ್ಟಿಯಾಗಿ ಬಳಸುವ ಕ್ರಮ ಆಫ್ರಿಕದ ಕೆಲವು ಜನಾಂಗಗಳಲ್ಲಿ ಇದೆ. ಇದರಿಂದ ಗಾಯಗಳು ಬೇಗ ವಾಸಿಯಾಗುವುವು ಎಂದು ಹೇಳಲಾಗಿದೆ.

ಜೇಡಗಳ ವಿಷ

ಬದಲಾಯಿಸಿ

ಜೇಡಗಳ ಇನ್ನೊಂದು ವಿಶೇಷ ಲಕ್ಷಣವೆಂದರೆ ಅವು ವಿಷಪೂರಿತವಾಗಿರುವುದು. ಎರಡು ಕುಟುಂಬಗಳಿಗೆ ಸೇರಿದ ಜೇಡಗಳನ್ನು ಬಿಟ್ಟರೆ ಉಳಿದವೆಲ್ಲ ವಿಷಯುಕ್ತವಾದುವು. ಆದರೂ ಕೇವಲ ಕೆಲವೇ ಜೇಡಗಳು ಮಾತ್ರ ಮನುಷ್ಯನಿಗೆ ಅಪಾಯಕಾರಿಯಾದ ವಿಷವನ್ನು ಉತ್ಪಾದಿಸುವುವು. ಇಂಥ ಜೇಡಗಳ ವಿಷ ಕೆಲವೊಮ್ಮೆ ಸಾವನ್ನು ತರಬಲ್ಲದು. ಉದಾಹರಣೆಗೆ ಲ್ಯಾಟ್ರೊಡೆಕ್ಟಸ್ ಮ್ಯಾಕ್ಟನ್ಸ್ (ಕರಿಜೇಡ) ಎಂಬುದರ ಕಡಿತ ಮಾನವನಿಗೆ ಮಾರಕ ಎಂದು ಹೇಳಲಾಗಿದೆ. ಜೇಡಗಳ ಕಡಿತದ ಪ್ರಭಾವಕ್ಕೆ ಆರ್ಯಾಕ್ನಿಡಿಸಮ್ ಎಂದು ಹೆಸರು. ವಿಷದ ಪ್ರಭಾವ ವಿಶೇಷವಾಗಿ ನರಮಂಡಲ, ಮೂತ್ರಪಿಂಡಗಳು ಮತ್ತು ಯಕೃತ್ತುಗಳ ಮೇಲೆ ಆಗುತ್ತದೆ. ದಕ್ಷಿಣ ಅಮೆರಿಕದಲ್ಲಿ ಕಾಣಸಿಗುವ ಕೆಲವು ಬಗೆಯ ಟರ್ಯಾಂಟಲ ಜೇಡಗಳ ವಿಷ ಮಂಪರ ಉಂಟುಮಾಡುವುದಲ್ಲದೆ ಕೆಲವು ಸಲ ಪುಪ್ಪಸ ಸ್ನಾಯುಗಳ ಪಾಶ್ರ್ವವಾಯುವನ್ನೂ ತರುವುದು. ಲ್ಯಾಟ್ರೊಡೆಕ್ಟಸಿನ ವಿಷ ನರಗಳ ಮೇಲೆ ಪ್ರಭಾವ ಬೀರುವುದಾದರೂ ಮಾಂಸಖಂಡಗಳ ಬಿಗುವನ್ನು ಕಡಿಮೆ ಮಾಡುವುದರ ಮೂಲಕ ಉದರದ ಸೆಡೆತವನ್ನುಂಟುಮಾಡುತ್ತದೆ. ಜೊತೆಗೆ ರಕ್ತದ ಒತ್ತಡ, ದೇಹದ ಉಷ್ಣತೆ, ಬೆವರುವಿಕೆ ಮತ್ತು ಪ್ರತಿವರ್ತನೆಗಳನ್ನು ಹೆಚ್ಚು ಮಾಡುವುದಲ್ಲದೆ ಪಿತ್ರೋದ್ರೇಕ ಊದುವಿಕೆ ಬಿಳಿರಕ್ತಕಣಗಳ ಹೆಚ್ಚಳಗಳನ್ನೂ ಉಂಟುಮಾಡುತ್ತದೆ. ಕೆಲವು ತೆರನ ಜೇಡಗಳ ನಂಜಿನಿಂದ ಅಂಗಗಳು ಕೊಳಯುವುದುಂಟು. ಲೈಕೋಸ ರ್ಯಾಪ್ಟೋರಿಯ ಜೇಡದ ವಿಷದಿಂದ ಚರ್ಮ ಮತ್ತು ಮಾಂಸಖಂಡಗಳ ಮೇಲೆ ತೀವ್ರ ಪರಿಣಾಮ ಆಗುತ್ತದೆ. ಈ ವಿಷಕ್ಕೆ ಪ್ರಬಲ ಕ್ಷಾರೀಯ ಗುಣಗಳಿವೆ. ಇದು ನೀರಿನಲ್ಲಿ ಕರಗುತ್ತದೆ. ಆದರೆ ಈಥರಿನಲ್ಲಾಗಲಿ, ಆಲ್ಕೊಹಾಲಿನಲ್ಲಾಗಲಿ ಕರಗದು. ಜೇಡಗಳಲ್ಲಿ ವಿಷವೊಂದೇ ಅಲ್ಲದೆ, ಇವುಗಳ ದೇಹದ ಬೇರೆ ಭಾಗಗಳಲ್ಲಿ ಮತ್ತು ಮೊಟ್ಟಗಳಲ್ಲಿ, ರಕ್ತಕಣಗಳನ್ನೂ ಪ್ರೋಟೀನು ವಸ್ತುಗಳನ್ನು ಒಡೆಯುವ ಗುಣವುಳ್ಳ ಅನೇಕ ವಸ್ತುಗಳಿವೆ. ಇಂಥ ವಸ್ತುಗಳಲ್ಲಿ ಮುಖ್ಯವಾದವು ಎಪೈರಾಲೈಸಿನ್, ಆರ್ಯಾಕ್ನೊಟಾಕ್ಸಿನ್, ಆರ್ಯಾಕ್ನೊಲೈಸಿನ್ ಮತ್ತು ಎಪೈರಾಟಾಕ್ಸಿನ್.

ಜೇಡಗಳ ಉಪಗಣಗಳು

ಬದಲಾಯಿಸಿ

ಜೇಡಗಳ ಗುಂಪಾದ ಆರನೀಯಿಡವನ್ನು ಕೀಲಿಸೆರೀಗಳ ಸಂರಚನೆಯ ಆಧಾರದ ಮೇಲೆ ಆರ್ತೊನ್ಯಾತ (ಏವಿಕ್ಯುಲರಾಯ್ಡಿಯ) ಮತ್ತು ಲ್ಯಾಬಿಡೊನ್ಯಾತ (ಆರ್ಜಿಯೊಪಾಯ್ಡಿಯ) ಎಂಬ ಎರಡು ಉಪಗಣಗಳಾಗಿ ವಿಂಗಡಿಸಲಾಗಿದೆ. ಮೊದಲನೆಯ ಉಪಗಣಕ್ಕೆ ಸೇರಿದ ಜೇಡಗಳು ಮುಖ್ಯವಾಗಿ ಉಷ್ಣವಲಯದವು. ಇವು ದೊಡ್ಡ ದೇಹದವು ಮತ್ತು ಧೃಡವಾದ ಕಾಲುಗಳುಳ್ಳವು. ನೆಲದಲ್ಲಿ ಬಿಲ ನಿರ್ಮಿಸಿಕೊಂಡು ವಾಸಿಸುವ ಜೇಡಗಳು, ಟರ್ಯಾಂಟಲಗಳು, ಆಲಿಕೆ ಬಲೆಯ ಟರ್ಯಾಂಟಲಗಳ ಇತ್ಯಾದಿ ಈ ಗುಂಪಿಗೆ ಸೇರಿವೆ. ಇದರಲ್ಲಿ ಆರು ಕುಟುಂಬಗಳುಂಟು. ಲ್ಯಾಬಿಡೊನ್ಯಾತ ಉಪಗಣದಲ್ಲಿ ಕ್ರೈಬೆಲೇಟೀ ಮತ್ತು ಈಕ್ರೆಐ ಬೆಲೇಟೀ ಎಂಬ ಎರಡು ಪಂಗಡಗಳಿವೆ. ಮೊದಲನೆಯ ಪಂಗಡಕ್ಕೆ ಸೇರಿದ ಜೇಡಗಳ ಸ್ಪಿನರೆಟ್ಟುಗಳ ಮುಂಭಾಗದಲ್ಲಿ ಕ್ರೈಬೆಲಿಮ್ ಎಂಬ ಅಂಗವೂ ಹಿಂಗಾಲುಗಳ ಮೇಲೆ ಕ್ಯಾಲಮೈಸ್ಟ್ರಮ್ ಎಂಬ ಬಿರುಗೂದಲುಗಳು ಉಂಟು. ಕ್ಯಾಲಮ್ಯಸ್ಟ್ರಮ್ ಇರುವುದರಿಂದ ಈ ಜೇಡಗಳು ರಿಬ್ಬನ್ನಿನಂಥ ರೇಷ್ಮೆ ಪಟ್ಟಿಯನ್ನು ರಚಿಸುತ್ತವೆ. ಈ ಪಂಗಡಗಳಲ್ಲಿ ಎಂಟು ಕುಟುಂಬಗಳಿವೆ.

ಈಕ್ರೈಬೆಲೆಟೀ ಪಂಗಡಕ್ಕೆ ಸೇರಿದ ಜೇಡಗಳಲ್ಲಿ ಕ್ರೈಬೆಲಮ್ ಆಗಲೀ ಕ್ಯಾಲಮೈಸ್ಟ್ರಮ್ ಆಗಲೀ ಇಲ್ಲ. ಇದರಲ್ಲಿ ಇಪ್ಪತ್ತಾರಕ್ಕೂ ಹೆಚ್ಚು ಕುಟುಂಬಗಳುಂಟು. ಸಾಮಾನ್ಯವಾಗಿ ಈ ಜೇಡಗಳೆಲ್ಲವೂ ಸಣ್ಣ ಗಾತ್ರದವು. ಜಿಗಿ ಜೇಡಗಳು, ಅಲೆಮಾರಿ ಜೇಡಗಳು, ಬೇಟೆಗಾರ ಜೇಡಗಳು, ಉದ್ದಕಾಲಿಕ ಜೇಡಗಳು, ಅಲೆಮಾರಿ ಜೇಡಗಳು, ಏಡಿ ಜೇಡಗಳು, ಆಲಿಕೆ ಬೆಲಯ ಜೇಡಗಳು, ಮೀನುಗಾರ ಜೇಡಗಳು, ತೋಳ ಜೇಡಗಳು, ಕುಬ್ಜ ಜೇಡಗಳು ಮುಂತಾದವು ಈ ಪಂಗಡಕ್ಕೆ ಉದಾಹರಣೆಗಳು. ಜಿಗಿ ಜೇಡಗಳು ಸಾಲ್ಟಿಸಿಡೀ ಕುಟುಂಬಕ್ಕೆ ಸೇರಿವೆ. ಉಷ್ಣವಲಯಗಳೆಲ್ಲೆಲ್ಲ ಇವು ಬಲುಸಾಮಾನ್ಯ. ಇವು ಬಲೆ ನೇಯುವುದಿಲ್ಲ. ಸಾಮಾನ್ಯವಾಗಿ ಜಿಗಿಯುತ್ತ ನೆಲದ ಮೇಲೆ ಅಲೆದಾಡುತ್ತವೆ. ದೇಹದ ಮೇಲೆದಟ್ಟವಾದ ಕೂದಲುಗಳುಂಟು. ಸಾಧಾರಣವಾಗಿ ಇವು ಕಲ್ಲು, ಕಸಕಡ್ಡಿಗಳ ಅಡಿಯಲ್ಲಿ ಅಡಗಿದ್ದು ಎರೆಗಳಿಗಾಗಿ ಹೊಂಚುಹಾಕಿ ಅವು ಸಿಕ್ಕಿದಾಗ ಅವುಗಳ ಮೇಲೆರಗಿ ಬೇಟೆಯಾಡುತ್ತವೆ.

ಪೂರಕ ಓದಿಗೆ

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ
  1. The invertebrates : a synthesis (Third ed.). Oxford. ISBN 978-1-4443-1233-1.
 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಜೇಡ&oldid=1140038" ಇಂದ ಪಡೆಯಲ್ಪಟ್ಟಿದೆ