ಉಮಾ ಪ್ರಭಾಕರ್ ರಾವ್, ಒಬ್ಬ ಸೃಜನಶೀಲ, ಪ್ರಗತಿಪರ ವಿಚಾರಧಾರೆಗಳನ್ನು ಪ್ರತಿಪಾದಿಸುವ ಲೇಖಕಿಯಾಗಿ ಹೆಸರಾಗಿದ್ದಾರೆ. ಕನ್ನಡದಲ್ಲಿ ಸಣ್ಣ ಕತೆಗಳನ್ನು ರಚಿಸಲು ಆರಂಭಿಸಿ ಪ್ರಜಾವಾಣಿ, ಸುಧಾ, ಮಯೂರ, ಉದಯವಾಣಿ, ಕನ್ನಡ ಪ್ರಭ, ಲಂಕೇಶ್ ಪ್ರತ್ರಿಕೆ, ಕಸ್ತೂರಿ, ವಿಜಯ ಕರ್ನಾಟಕ, ತರಂಗ, ಮುಂತಾದ ಪತ್ರಿಕೆಗಳಲ್ಲಿ ಪ್ರಕಟಿಸಿ ಪ್ರಸ್ತುತ ಕವಿತೆ, ಪ್ರವಾಸಕಥನ, ಜೀವನಚರಿತ್ರೆ, ಅನುವಾದ, ಟೆಲಿವಿಷನ್ ಧಾರಾವಾಹಿಗಳಿಗೆ ಅಳವಡಿಸುವ ಪಟ್ಕಥೆಗಳು, ಸಂವಾದಗಳು ಮೊದಲಾದುವುಗಳಲ್ಲಿ ಸಮರ್ಥವಾಗಿ ವ್ಯವಸಾಯ ಮಾಡಿ, ತಮ್ಮದೇ ಆದ ಛಾಪನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ಮೂಡಿಸಿದ್ದಾರೆ. ಕೆಂಡಸಂಪಿಗೆ, ಚುಕ್ಕು-ಬುಕ್ಕು, ಅವಧಿ, ಮೊದಲಾದ ಅಂತರ್ಜಾಲ ಪತ್ರಿಕೆಗಳಲ್ಲೂ ಕೂಡಾ ಹಲವಾರು ಬರಹಗಳು ಪ್ರಕಟವಾಗಿವೆ. ಅವುಗಳಲ್ಲಿ ಮಹತ್ವದ ಪತ್ರಿಕೆ 'ಕೆಂಡಸಂಪಿಗೆ'ಯಲ್ಲಿ ಸಂಸ್ಕೃತಿ, ಸರಣಿ, ಅಂಕಣ, ಪ್ರವಾಸ ಕಥನ, ವ್ಯಕ್ತಿ-ವಿಶೇಷ, ಸಂಪಿಗೆಸ್ಪೆಷಲ್ ಶಿರೋನಾಮೆಗಳಲ್ಲಿ ಉಮಾರಾವ್ ಅವರ ಲೇಖನಗಳನ್ನು ತೆರೆದು ನೋಡಬಹುದಾಗಿದೆ.

ಉಮಾ ರಾವ್,
ಜನನ
ಸೆಪ್ಟೆಂಬರ್ ೧ರಂದು, ಬೆಂಗಳೂರಿನಲ್ಲಿ.
ರಾಷ್ಟ್ರೀಯತೆಭಾರತೀಯ. ತಂದೆ: ಸಿ.ಎನ್.ಸ್ವಾಮಿರಾವ್. ತಾಯಿ : ರತ್ನಾ ಸ್ವಾಮಿರಾವ್, ತಮ್ಮಂದಿರು: ಅಜಿತ್, ಸುಧೀರ್. ಪತಿ: ಡಾ.ಎಮ್.ವಿ.ಪ್ರಭಾಕರ್ ರಾವ್, ಎಂ.ಎಸ್ಸಿ; ಪಿ.ಎಚ್.ಡಿ, ಮುಂಬಯಿನ ಬಿ.ಎ.ಆರ್.ಸಿ ಯಲ್ಲಿ 'ನ್ಯೂಕ್ಲಿಯರ್ ಅಗ್ರಿಕಲ್ಚರ್ ವಿಭಾಗದಲ್ಲಿ ಹಿರಿಯ ವಿಜ್ಞಾನಿ'. ಮಗ : ಡಾ ರೋಹಿತ್, ಸೊಸೆ: ಅಪರ್ಣಾ, ಮೊಮ್ಮಕ್ಕಳು: ಧ್ರುವ್, ಈಶಾನ್
ಹಳೆ ವಿದ್ಯಾರ್ಥಿತುಮಕೂರಿನ ಕಾಲೇಜ್. ಬಿ.ಎಸ್ಸಿ; ಬಿ.ಎಲ್. ಪದವೀಧರೆ.
ಉದ್ಯೋಗಲೇಖಕಿ, ಅನುವಾದಕಿ, ಅಂಕಣಕಾರ್ತಿ, ಟೆಲಿವಿಷನ್ ಧಾರಾವಾಹಿಗಳಿಗೆ ಪಟ್ಕಥಾ ರಚಿಸಿ, ನಿರ್ದೇಶಿಸಿದ್ದಾರೆ. ಕನ್ನಡ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಇದಕ್ಕೆ ಖ್ಯಾತರುವಿಶ್ವವಿಖ್ಯಾತ ಸೈನ್ ಛಾಯಾಗ್ರಾಹಕ ಪ್ರತಿಷ್ಟಿತ ಫಾಲ್ಕೆ ಪ್ರಶಸ್ತಿ ವಿಜೇತ, ವಿ.ಕೆ.ಮೂರ್ತಿ ಅವರ ಜೀವನ ಚರಿತ್ರೆ, 'ಬಿಸಿಲು ಕೋಲು' ಕಾದಂಬರಿಯ ಕರ್ತೃ. * ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , * ಡಾ.ಎಚ್.ವಿ.ಸಾವಿತ್ರಮ್ಮ ಪ್ರಶಸ್ತಿ ವಿಜೇತೆ.
ಜಾಲತಾಣumaraobarahagalu.blogspot.com//

ಪರಿವಾರಸಂಪಾದಿಸಿ

ಉಮಾರಾವ್ ಹುಟ್ಟಿದ್ದು ಸೆಪ್ಟೆಂಬರ್೧, ಬೆಂಗಳೂರಿನಲ್ಲಿ. ತಂದೆ ಸಿ.ಎನ್.ಸ್ವಾಮಿರಾವ್. ಮೈಸೂರು ಮೆಡಿಕಲ್ ಕಾಲೇಜ್ ನಿಂದ ಎಂ.ಬಿ,ಬಿ.ಎಸ್. ಪದವಿ ಗಳಿಸಿ, ತುಮಕೂರಿನಲ್ಲಿ ಮೆಡಿಕಲ್ ಪ್ರಾಕ್ಟೀಷನರ್ ಆಗಿ ಕೆಲಸ ಮಾಡುತ್ತಿದ್ದರು. ತಾಯಿ ಶ್ರೀಮತಿ ರತ್ನಾ ಸ್ವಾಮಿರಾವ್. ಬೆಂಗಳೂರು ಸೆಂಟ್ರೆಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ, ಮೈಸೂರು ವಿಶ್ವವಿದ್ಯಾನಿಲಯದ ಬಿ.ಎಸ್ಸಿ(ಆನರ್ಸ್, ಫಿಸಿಕ್ಸ್) ಪದವಿ ಗಳಿಸಿದ್ದರು. ಸಮಾಜ ಸೇವೆಯಲ್ಲಿಯೇ ಹೆಚ್ಚು ಅಸಕ್ತಿ ಇದ್ದುದನ್ನು ಗ್ರಹಿಸಿ, ಅದರಲ್ಲೇ ತಮ್ಮನ್ನು ತೊಡಗಿಸಿಕೊಂಡರು. ತಮ್ಮ ಸಾಧನೆಗಳಿಗಾಗಿ ರತ್ನಾ ಸ್ವಾಮಿರಾವ್, 'ಶಾಶ್ವತಿ ಟ್ರರ್ಸ್ಟ್ ನ, 'ಗಾರ್ಗಿ ಪ್ರಶಸ್ತಿ' ಪಡೆದರು. ಉಮಾಗೆ ಇಬ್ಬರು ತಮ್ಮಂದಿರು. ಮೊದಲನೆಯವರು ಅಜಿತ್, ಕಂಪ್ಯೂಟರ್ ವಿಜ್ಞಾನಿ. ಚಿಕ್ಕವರು, ಸುಧೀರ್. ಭಾರತೀಯ ಸೇನೆಯಲ್ಲಿ ನೇತ್ರ ವೈದ್ಯರು. ಉಮಾರವರು ಬಿ.ಎಸ್ಸಿ; ಬಿ.ಎಲ್ ಪದವೀಧರರು.

ಬಾಲ್ಯ/ ಮನೆಯ ಪರಿಸರಸಂಪಾದಿಸಿ

ಮನೆಯ ವಾತಾವರಣ ಹಾಗೂ ಸಮಾಜದಲ್ಲಿ ಪ್ರತಿಷ್ಥಿತ ವರ್ಗಕ್ಕೆ ಪಾತ್ರರಾಗಿದ್ದ ತಂದೆ ತಾಯಿಯರ ಒಡನಾಟ, ಉಮಾರವರ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿತು. ತಂದೆಯವರು ಬಹಳ ಪುಸ್ತಕಗಳನ್ನು ಓದುತ್ತಿದ್ದರು. ಮನೆಯ ಗ್ರಂಥಾಲಯದಲ್ಲಿದ್ದ ದ.ರಾ.ಬೇಂದ್ರೆ, ಕುಮಾರ ವ್ಯಾಸ, ಡಿವಿಜಿ, ಕೈಲಾಸಂ, ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರು, ವಿಲಿಯಂ ಶೇಕ್ಸ್ ಪಿಯರ್, ಚೆಕಾಫ್, ಟಾಲ್ಸ್ಟಾಯ್, ಹೀಗೆ ನೂರಾರು ಶ್ರೇಷ್ಠ ಕೃತಿಗಳಿದ್ದವು. ತಂದೆ ಇಂಗ್ಲಿಷ್, ಕನ್ನಡದಲ್ಲಿ ಯಾವ ಪುಸ್ತಕಗಳನ್ನು ಓದಬೇಕು ಎನ್ನುವ ಬಗ್ಗೆ ಮಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಬಾಲ್ಯದಲ್ಲಿ ಉಮಾಗೆ ಚಂದಮಾಮ, ಬಾಲಮಿತ್ರ, ಅತ್ಯಂತ ಪ್ರಿಯ ಪತ್ರಿಕೆಗಳು. ಅವರು ಮಾಧ್ಯಮಿಕ ಶಾಲೆಯಲ್ಲಿದ್ದಾಗಲೇ ‘ತೆನಾಲಿ ರಾಮ’ ನಾಟಕ ರಚಿಸಿ, ಅದರಲ್ಲಿ ತಾವೇ ಪಾತ್ರವಹಿಸಿ, ಆಡಿಸಿ ಜನಪ್ರಿಯರಾಗಿದ್ದರು. ಗಳಗನಾಥರ ಶಿವಾಜಿ ಬಗ್ಗೆಯ ಕಾದಂಬರಿ ಸರಣಿಯನು ಓದಲು ಶುರುಮಾಡಿದ್ದರು. ಹಾಗೆಯೇ, ನಿಧಾನವಾಗಿ ತ್ರಿವೇಣಿ, ಎಂ.ಕೆ.ಜಯಲಕ್ಷ್ಮಿದೇವಿ, ಅ.ನ.ಕೃಷ್ಣರಾಯ, ತ.ರಾ.ಸುಬ್ಬರಾಯ, ಶಿವರಾಮ ಕಾರಂತ, ದ.ರಾ.ಬೇಂದ್ರೆ, ಎಸ್.ಎಲ್. ಭೈರಪ್ಪ,ಯು. ಆರ್. ಅನಂತಮೂರ್ತಿ, ಪಿ.ಲಂಕೇಶ್, ಮೊದಲಾದ ಲೇಖಕರ ಬರಹಗಳನ್ನು ಓದುವ ಹವ್ಯಾಸ ಬೆಳೆಯಿತು. ತಂದೆ ಇಂಗ್ಲಿಷ್ ಸಾಹಿತ್ಯ ಅಭಿರುಚಿ ಹತ್ತಿಸಲು ಮೊದಲು ಆಗಾಥಾ ಕ್ರಿಷ್ಟಿ, ಡಾಫ್ನೆಡ್ಯು ಮೊರಿಯರ್, ಮೊದಲಾದವರು ರಚಿಸಿದ ರಮ್ಯ ಮನೋರಂಜಕ ಕಾದಂಬರಿಗಳನ್ನು ಓದಲು ಪ್ರೊತ್ಸಾಹಿಸುತ್ತಿದ್ದರು. ಹಾಗೆಯೇ ಬರು ಬರುತ್ತಾ, ಗಾನ್ ವಿತ್ ದ ವಿಂಡ್ , ವುದರಿಂಗ್ ಹೈಟ್ಸ್, ಜೆಕಾಪ್ಹ್, ಟಾಲ್ ಸ್ಟಾಯ್, ಗಾರ್ಗಿ, ಮುಂತಾದವರ ಕತೆಗಳು ಉಮಾಗೆ ಪ್ರಿಯವಾಗತೊಡಗಿದವು. ಭಾಷಾ ಜ್ಞಾನ ವ್ರುದ್ಧಿಸಿತು.

ಮುಂಬಯಿಯ್ಯಲ್ಲಿಸಂಪಾದಿಸಿ

೧೯ ವರ್ಷಕ್ಕೆ ಮದುವೆಯಾಗಿ ಉಮಾ ತಮ್ಮ ಪತಿಯೊಂದಿಗೆ ಮುಂಬಯಿಗೆ ಬಂದರು. ಅವರ ವ್ಯಕ್ತಿತ್ವ ವಿಕಸನ ಆದದ್ದು ಮುಂಬಯಿನಗರದಲ್ಲೇ. ಮೊದಲು ಸುಧಾ, ಮಯೂರ, ಇವ್ಸ್ ವೀಕ್ಲಿ, ಮೊದಲಾದ ಪತ್ರಿಕೆಗಳಲ್ಲಿ ಬರೆಯಲು ಪ್ರಾರಂಭಿಸಿ ಉಮಾರಾವ್, ೧೯೭೬ ರಲ್ಲಿ ತಮ್ಮ ಮೊದಲ ಲೇಖನವನ್ನು ಸುಧಾ ವಾರಪತ್ರಿಕೆಗೆ ಪ್ರಕಟಣೆಗೆ ಕಳಿಸಿದರು. ಅದು ಪ್ರಕಟವಾದಾಗ ಬಲು ಖುಷಿಯಾಯಿತು. ಚಿಕ್ಕ ಊರಿನಿಂದ ಮುಂಬಯಿಯಂತಹ ಬೃಹತ್ ನಗರಕ್ಕೆ ಬಂದಿದ್ದು ಅವರಿಗೆ ದೊಡ್ಡ 'ಶಾಕ್' ಆದಂತಾಗಿ, ಅದರ ಸಾಮಾಜಿಕ, ಕೌಟುಂಬಿಕ ಹಾಗೂ ವ್ಯಾವಹಾರಿಕ ಪರಿಸರಕ್ಕೆ ಹೊಂದಿಕೊಳ್ಳಲು ಬಹಳ ವರ್ಷಗಳೇ ಹಿಡಿದವು. ಹೀಗೆ ತಮ್ಮ ಕುಟುಂಬ, ನೆರೆ-ಹೊರೆ, ಸುತ್ತ-ಮುತ್ತಲಿನ ಸಾಮಾಜಿಕ ವಾತಾವರಣದಲ್ಲಿ ಕಂಡು ಬಂದ ಸ್ವಾರಸ್ಯಕರ ಅನುಭವಗಳನ್ನು ಸಣ್ಣ ಕತೆಗಳ ರೂಪದಲ್ಲಿ ಬರೆಯಲು ಶುರುಮಾಡಿದರು. ಆ ಸಮಯದಲ್ಲಿ ಮುಂಬಯಿನ ಸೋಫಿಯಾ ಕಾಲೇಜಿನಲ್ಲಿ ಪ್ರಾರಂಭವಾದ 'ಓಪನ್ ಕ್ಲಾಸ್ ರೂಂ' ಹಲವಾರು ಸಣ್ಣ ಅವಧಿಯ ಕೋರ್ಸ್ ಗಳನ್ನೂ ಮಾಡಿಕೊಂಡರು.

ಹಲವಾರು ಲೇಖಕರ ಕೃತಿಗಳು ದೊರೆತವುಸಂಪಾದಿಸಿ

ಅವರಲ್ಲಿ ಜಗದ್ವಿಖ್ಯಾತ ಸ್ತ್ರೀವಾದಿ, ಜರ್ಮೆನ್ ಗ್ರಿಯರ್ ರ, ಮೂಲಕ ಸ್ತ್ರೀವಾದದ ಪರಿಚಯವಾಯಿತು. ಜೂಲಿಯನ್ ಬರ್ಕೆಟ್ ಎಂಬ ಪ್ರತಿಭಾವಂತ ಬ್ರಿಟಿಷ್ ಲೇಖಕ ನಡೆಸಿ ಕೊಡುತ್ತಿದ್ದ ಕ್ರಿಯೇಟಿವ್ ರೈಟಿಂಗ್ ಶಾರ್ಟ್ ಸ್ಟೋರಿ ರೈಟಿಂಗ್ ವರ್ಕ್ ಶಾಪ್, ಮಾಡರ್ನ್ ರೈಟರ್ಸ್, ರ ಓದು ಬರಹದ ವಲಯವನ್ನು ಹಿಗ್ಗಿಸಿದವು. ಅಲ್ಲಿ ಕಾಫ್ಕಾ, ಬೋಹೇರ್ಸ್,ಗೇಬ್ರಿಯಲ್ ಗಾಸಿ‌‌‌ಯಾ ಮಾಕ್ವೆ‍ಜ್, ಜಾಯ್ಸ್, ರಂತಹ ಹಲವು ಹೆಸರಾಂತ ಬರಹಗಾರರ ಕೃತಿಗಳ ಪರಿಚಯವಾಯಿತು. ಇನ್ನು ಮೈಸೂರ್ ಅಸೋಸಿಯೇಷನ್, ಕರ್ನಾಟಕ ಸಂಘ, ಕನ್ನಡ ವನಿತಾ ಸಮಾಜ, ಮುಂತಾದ ಕನ್ನಡ ಸಮ್ಮೇಳನಗಳ ಕಾರ್ಯಕ್ರಮಗಳಲ್ಲಿ ಮುಂಬಯಿ ಬರಹಗಾರರ ಸ್ನೇಹ ಬೆಲೆಯಿತು. ಯಶವಂತ ಚಿತ್ತಾಲ, ಜಯಂತ ಕಾಯ್ಕಿಣಿ, ವ್ಯಾಸರಾಯ ಬಲ್ಲಾಳ, ಅರವಿಂದ ನಾಡಕರ್ಣಿ ,ಮುಕುಂದ್ ಜೋಷಿ, ಕುಮಾರ್ ಜೋಷಿ, ಬಿ.ಎ.ಸನದಿ, ಸುನಿತಾ ಶೆಟ್ಟಿ, ಮಿತ್ರಾ ವೆಂಕಟ್ರಾಜ್, ತುಳಸಿ ವೇಣುಗೋಪಾಲ್, ಮನಿಮಾಲಿನಿ, ತಾಳ್ತಜೆ ವಸಂತಕುಮಾರ, ಸಂತೋಷಕುಮಾರ್ ಗುಲ್ವಾಡಿ, ಮುಂತಾದ ಲೇಖಕರ ಭೇಟಿಯಾಗುತ್ತಿತ್ತು. ಅವರೆಲ್ಲರೊಡನೆ ಫೋನಿನಲ್ಲಿ ಮಾತುಕತೆ, ವಿಚಾರ ವಿನಿಮಯಗಳು ನಡೆಯುತ್ತಲೇ ಇದ್ದವು. ತಾವು ಬರೆದ ಪ್ರತಿ ಕತೆಗಳನ್ನೂ ಬರೆದ ಕೂಡಲೇ ಯಶವಂತ ಚಿತ್ತಾಲ್, ಜಯಂತ ಕಾಯ್ಕಿಣಿ ಅವರಿಗೆ ಕಳಿಸಿ ಅಭಿಪ್ರಾಯ ಪಡೆಯುತ್ತಿದ್ದರು. ಆಗಲೇ ಪ್ರಖ್ಯಾತ ಕವಿಗಳಾಗಿದ್ದರೂ ಅವರುಗಳು ಯಾವ ಹಮ್ಮಿಲ್ಲದೆ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಿದ್ದರು. ಉಮಾರಾವ್ ಮನೆಯಲ್ಲಿ ಎಲ್ಲರೂ ಕನ್ನಡ ಮಾತಾಡುತ್ತಿದ್ದುದರಿಂದ, ಮಗ ರೋಹಿತ್ ಸ್ಪಷ್ಟವಾಗಿ ಕನ್ನಡ ಮಾತಾಡುವುದಲ್ಲದೆ ಮೈಸೂರ್ ಅಸೋಸಿಯೇಶನ್ ನಲ್ಲಿ ಆಯೋಜಿಸಿದ ನಾಟಕಗಳಲ್ಲೂ ಅಭಿನಯಿಸುತ್ತಿದ್ದನು.

ಪತಿಯ ಪ್ರೋತ್ಸಾಹಸಂಪಾದಿಸಿ

ಡಾ.ಎಂ.ವಿ.ಪ್ರಭಾಕರ್ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ ಪದವಿ ಗಳಿಸಿದ ಮೇಲೆ, ಪುಣೆಯಿಂದ ಎಮ್.ಎಸ್ಸಿ(ಬಾಟನಿ) ಮುಗಿಸಿ, ಬಳಿಕ ನವದೆಹಲಿಯ ಐ.ಎ.ಆರ್.ಐ ನಲ್ಲಿ, ಡಾ.ಎಮ್.ಎಸ್.ಸ್ವಾಮಿನಾಥನ್ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ. ಪದವಿ ಸಂಪಾದಿಸಿ ದರು. ನಂತರ ಮುಂಬಯಿನ ಬಿ.ಎ.ಆರ್.ಸಿ. ವೈಜ್ಞಾನಿಕ ಸಂಸ್ಥೆಯಲ್ಲಿ ನ್ಯೂಕ್ಲಿಯರ್ ಅಗ್ರಿಕಲ್ಚರ್ ವಿಭಾಗದಲ್ಲಿ ವಿಜ್ಞಾನಿಯಾಗಿ ಸೇರಿ ಕೊಂಡರು. ಉಮಾರವರು ಮದುವೆಯಾಗಿ ಪತಿಯ ಜೊತೆ ಬೊಂಬಾಯಿಗೆ ಪಾದಾರ್ಪಣೆ ಮಾಡಿದಾಗ, ಚೆಂಬೂರಿನ 'ಅಣು ಶಕ್ತಿನಗರದ ವಿಜ್ಞಾನಿಗಳ ವಸತಿಗೃಹ'ದಲ್ಲಿ ವಾಸವಾಗಿದ್ದರು. ಮೈಸೂರು ಅಸೋಸಿಯೇಷನ್ ನಲ್ಲಿ ಸದಸ್ಯರಾದ ಬಳಿಕ ಅಲ್ಲಿನ ಸ್ನೇಹಮಯ ವಾತಾವರಣ, ಮೈಸೂರು ತರಹದ ರುಚಿಕರವಾದ ಕಾಫಿ-ತಿಂಡಿ, ಊಟದ ವ್ಯವಸ್ಥೆ, ಉಗಾದಿ, ದೀಪಾವಳಿ, ಸಂಕ್ರಾಂತಿ, ಗೌರಿ-ಗಣೇಶನ ಹಬ್ಬಗಳು ಮೊದಲಾದ ಆಚರಣೆ ಗಳು, ಹಬ್ಬದ ದಿನಕ್ಕೆ ತಕ್ಕ ಊಟದ ವ್ಯವಸ್ಥೆ, ಸುವ್ಯವಸ್ಥಿತ ಪುಸ್ತಕ ಭಂಡಾರ, ಕನ್ನಡ ನಾಟಕಗಳು, ಭರತನಾಟ್ಯ ಮೊದಲಾದ ಕಾರ್ಯಕ್ರಮಗಳ ಆಯೋಜನೆ, ಬಿಲಿಯರ್ಡ್ಸ್, ಟೇಬಲ್ ಟೆನಿಸ್, ಕೇರಂ, ಚೆಸ್, ಮೊದಲಾದ ಆಟಗಳ ವ್ಯವಸ್ಥೆ, ಅವರಿಗೆ ಮುದಕೊಟ್ಟಿತು. ತವರು ಮನೆಯ ನೆನಪನ್ನು ಮಾಡಿ ಕೊಡುತ್ತಿತ್ತು. ಅಲ್ಲಿ ಅವರು ತಮ್ಮ ಪತಿ ಡಾ ಪ್ರಭಾಕರ್, ರೋಹಿತ್ ಜೊತೆ, ನಾಟಕ, ಶಾಸ್ತ್ರಿಯ ಸಂಗೀತ, ಉಪನ್ಯಾಸ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಪ್ಪದೆ ಪಾಲ್ಗೊಳ್ಳುತ್ತಿದ್ದರು. ಈಗ ಅವರ ಮಗ ರೋಹಿತ್, ಡಾ ರೋಹಿತ್ ಆಗಿ, ಅಮೇರಿಕಾದ ಅರಿಜೋನ ರಾಜ್ಯದಲ್ಲಿನ 'ಫಿನಿಕ್ಸ್ ಚಿಲ್ದ್ರೆನ್ಸ್ ಹಾಸ್ಪಿಟಲ್' ನಲ್ಲಿ ಪೀಡಿಯಾಟ್ರಿಕ್ ಕಾರ್ಡಿಯಾಕ್ ಇನ್ಟೆನ್ನ್ತೆನ್ಸಿ ವಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾನೆ. ಅದೇ ಆಸ್ಪತ್ರೆಯಲ್ಲಿ ಸೊಸೆ, ಪಲ್ಮನಾಲಜಿಸ್ಟ್ ಆಗಿಯೂ ಕೆಲಸ ಮಾಡುತ್ತಿದ್ದಾಳೆ. ಈ ದಂಪತಿಗಳಿಗೆ ಇಬ್ಬರು ಮಕ್ಕಳು : ಧ್ರುವ್ ಮತ್ತು ಇಶಾನ್. [೧][permanent dead link]

ಚಟುವಟಿಕೆಗಳುಸಂಪಾದಿಸಿ

'ಮೈಸೂರ್ ಅಸೋಸಿಯೇಶನ್ ನ ಲಲಿತಕಲಾ ವಿಭಾಗ'ದಡಿಯಲ್ಲಿ ಉಮಾರವರು, ಹಲವಾರು ನಾಟಕಗಳಲ್ಲಿ ಅಭಿನಯಿಸಿದರು. ಅವುಗಳಲ್ಲಿ ಮುಖ್ಯವಾದವುಗಳು : ಡಾ.ಬಿ.ಆರ್.ಮಂಜುನಾಥ್ನಿರ್ದೇಶನದಲ್ಲಿ ಪ್ರದರ್ಶನಗೊಂಡ,

 • ಹಯವದನ,
 • ಬೆಕ್ಕಿನ ಕಣ್ಣು
 • ಆ ರಾತ್ರಿ,
 • ರಂಗೋಲಿ ನ್ಯಾಯ,
 • ಬಿಸಿಲ್ಗುದುರೆ,

ಬೇರೆ ಬೇರೆ ನಿರ್ದೇಶಕರ ನಿರ್ದೇಶನದಲ್ಲಿಸಂಪಾದಿಸಿ

ಟಿ.ಪ್ರಸನ್ನರ ನಿರ್ದೇಶನದಲ್ಲಿ

 • ಗೃಹಸ್ಥಾಶ್ರಮ,
 • ತಪ್ಪಿದ ಎಳೆ,
 • ಸೂತ್ರದ ಗೊಂಬೆ,
 • ಪದ್ಮಶ್ರೀ ಧುಂಡಿರಾಜ್- ಮೊದಲಾದವುಗಳು

ಉಮಾ ಅವರು ಮೋಹನ್ ರಾಕೇಶ್ ರ ಹಿಂದಿ ನಾಟಕ ‘ಅಂಡೆ ಕೆ ಛಿಲ್ಕೆ'ನಾಟಕವನ್ನು 'ಮೊಟ್ಟೆಯ ಚಿಪ್ಪುಗಳು' ಎಂದು ಕನ್ನಡಕ್ಕೆ ಅನುವಾದಿಸಿ, ನಿರ್ದೇಶಿಸಿದರು.

ಬರವಣಿಗೆ ಹಲವು ದಿಕ್ಕುಗಳಲ್ಲಿಸಂಪಾದಿಸಿ

೮೦ ರ ದಶಕದಲ್ಲಿ, ಉಮಾರಾವ್ ರವರು 'ಫ್ರೀಲಾನ್ಸ್ ಕಾಪಿರೈಟರ್' ಹಾಗೂ 'ಜರ್ನಲಿಸ್ಟ್' ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಜೊತೆಗೆ, 'ಆಲ್ ಇಂಡಿಯಾ ರೇಡಿಯೋ ಮುಂಬಯಿ' ಶಾಖೆಯಲ್ಲಿ ಇವರ, ಇಂಗ್ಲಿಷ್ ಮತ್ತು ಕನ್ನಡ ಲೇಖನಗಳು, ಕವನಗಳು ಪ್ರಸಾರ ವಾಗುತ್ತಿದ್ದವು. ಮುಂದೆ ಉಮಾರವರ ಕತೆಗಳು ಸುಧಾ, ಮಯೂರ, ಪ್ರಜಾವಾಣಿ, ಉದಯವಾಣಿ, ತರಂಗ, ಕನ್ನಡ ಪ್ರಭ, ಕಸ್ತೂರಿ, ಲಂಕೇಶ್ ಪತ್ರಿಕೆ, ವನಿತಾ, ನೇಸರು, ಹೊಸತು, ಹೀಗೆ ಪ್ರಮುಖ ಪತ್ರಿಕೆಗಳಲ್ಲಿ ಬೆಳಕು ಕಂಡವು. * [೨][permanent dead link]

೯೦ ರ ದಶಕದಲ್ಲಿಸಂಪಾದಿಸಿ

ಇವರ ಬರವಣಿಗೆಯನ್ನು ಮೆಚ್ಚಿದ ಲಂಕೇಶ್, ಮುಂಬಯಿನಿಂದ ಅವರ ಪತ್ರಿಕೆಗೆ ಅಂಕಣಗಳನ್ನು ನಿಯಮಿತ ರೂಪದಲ್ಲಿ ಬರೆಯಲು ಒತ್ತಾಯ ಮಾಡಿದರು. ಹಾಗೆ ಪ್ರಾರಂಭವಾದ 'ಮುಂಬಯಿ ಡೈರಿ', ಇಂದಿಗೂ ಒಂದು ಅಪರೂಪದ ಜನಪ್ರಿಯ ಸಂಗ್ರಹವೆಂದು ಹೆಸರು ಮಾಡಿದೆ. ಮುಂದೆ ಅವರ ಕತೆಗಳು ಲಂಕೇಶ್ ಪತ್ರಿಕೆಯಲ್ಲಿ ಬರವಣಿಗೆ ಹಲವಾರು ದಿಕ್ಕುಗಳಲ್ಲಿ ಹರಿಯಿತು. ಅನುವಾದ, ಕವಿತೆ, ಕತೆ, ಸಂದರ್ಶನಗಳಲ್ಲದೆ, ಮೊದಲ ಕಾದಂಬರಿ- ನೂರುಸ್ವರ, ಧಾರಾವಾಹಿಯಾಗಿ ಪ್ರಕಟಗೊಂಡಿದೆ. ಕನ್ನಡಕ್ಕೆ ಇನ್ನು ಹೊಸತಾಗಿದ್ದ, ಕಿರುಕತೆಗಳ ಸರಣಿಯು ಅಲ್ಲೇ ಹೊರ ಬಂದಿದ್ದು. ಇವರ ಕತೆಗಳು ಹಿಂದಿ, ಪಂಜಾಬಿ, ತಮಿಳು, ಭಾಷೆಗಳಿಗೆ ಅನುವಾದವಾಗಿವೆ.

೧೯೯೪ ರಲ್ಲಿ ಕೆನಡಾದ ಆಂಡ್ರ್ಯೂಸ್ ಫೆಲೋಶಿಪ್ಸಂಪಾದಿಸಿ

೧೯೯೪ ರಲ್ಲಿ ಕೆನಡಾದ ವ್ಯಾಕೂವರ್ ನಿಂದ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ 'ಕ್ರಿಯೇಟಿವ್ ರೈಟಿಂಗ್ ವಿಭಾಗ'ದವರು ನೀಡುವ 'ಪ್ರತಿಷ್ಥಿತ ಆಂಡ್ರ್ಯೂಸ್ ಫೆಲೋಶಿಪ್' ಗಿಟ್ಟಿಸಿ ೩ ತಿಂಗಳು ಅಲ್ಲಿ ಅಧ್ಯಯನ ಮಾಡಿ ಬಂದರು. ಹೊಸ ಸಂಸ್ಕೃತಿಯ ಪರಿಚಯ, ಹಲವಾರು ಲೇಖಕರ ಜೊತೆ ಒಡನಾಟ, ಕೆನಡಾ, ಅಮೇರಿಕಾ,ದಲ್ಲಿ ಫೆಲೋಶಿಪ್ ಅವಧಿಯ ನಂತರ ೧ ತಿಂಗಳು ಎಡೆಬಿಡದೆ ಒಬ್ಬಂಟಿ ಸುತ್ತಾಟದ ಅನುಭವ, ಅವರ ಬರವಣಿಗೆಗೆ ಹೊಸ ಆಯಾಮವನ್ನೇ ತಂದುಕೊಟ್ಟಿತು.

ಟೆಲಿವಿಷನ್ ಕಾರ್ಯಕ್ರಮಗಳುಸಂಪಾದಿಸಿ

೧೯೯೬ ರ ಡಿಸೆಂಬರ್ ನಲ್ಲಿ ಉಮಾರಾವ್ ಕುಟುಂಬ, ಬೆಂಗಳೂರಿಗೆ ಬಂದು ನೆಲೆಸಿದರು. ಮೊದಲೇ ಅಡ್ವಟೈಸಿಂಗ್ ಕ್ಷೇತ್ರದಲ್ಲಿ ಡಾಕ್ಯುಮೆಂಟರಿ ಕಮರ್ಶಿಯಲ್ಸ್ ಗಳನ್ನೂ ಬರೆದು ಅಭ್ಯಾಸಹೊಂದಿದ್ದ ಉಮಾ, 'ಈ ಟಿವಿಗೆ' ಹಲವಾರು ಕಾರ್ಯಕ್ರಮಗಳನ್ನು ಬರೆದು ನಿರ್ದೇಶಿಸಿ, ನಡೆಸಿ ಕೊಟ್ಟರು. [೩] Archived 2013-08-12 at the Wayback Machine. ಅವುಗಳಲ್ಲಿ ಮುಖ್ಯವಾದದ್ದು 'ಗೀತಾ ವಿಶ್ವನಾಥ್' ಜೊತೆ ಆಂಕರ್ ಮಾಡಿದ 'ಪಂಚಮಿ' ೨೫ ಎಪಿಸೋಡ್ ಗಳ ಟಾಕ್ ಶೋ' ಪ್ರಮುಖವಾದದ್ದು. ವಿಖ್ಯಾತ ಚಲನಚಿತ್ರ ನಿರ್ದೇಶಕ, ಪಿ.ಎಚ್ ವಿಶ್ವನಾಥರ ನಿರ್ದೇಶನದ 'ಪ್ರೇಮಕಥೆಗಳು ಸರಣಿ', [ಕತೆ ಹಾಗು ಸ್ಕ್ರೀನ್ ಪ್ಲೇ], ಅಂತರ ಹೊಸಹಾದಿ [ಸಂದರ್ಶನಾಧಾರಿತ ಕಾರ್ಯಕ್ರಮಗಳು], ಅಲ್ಲದೆ ಮಿಂಚು ಟೀಮ್ ಜೊತೆ, ೨೦೦ ಎಪಿಸೋಡ್ ಗಳ ಧಾರಾವಾಹಿಗೆ ಕತೆ ಸಂಭಾಷಣೆ, ಬರೆದು ಕೊಟ್ಟರು.

ಕೃತಿಗಳುಸಂಪಾದಿಸಿ

 • 'ಅಗಸ್ತ್ಯ' ಕಥಾ ಸಂಕಲನ (ನಂದನ ಪ್ರಕಾಶನ) ೧೯೮೬
 • 'ಕಡಲ ಹಾದಿ'(ಕಥಾಸಂಕಲನ ಗ್ರಂಥಾವಳಿ) ೧೯೯೫
 • 'ನೂರುಸ್ವರ' ಕಾದಂಬರಿ ಪತ್ರಿಕೆ ಪ್ರಕಾಶನ ೧೯೯೯
 • 'ಅವಳ ಸೂರ್ಯ' ಕೆನೆಡಿಯನ್ ಲೇಖಕಿಯರ ಕತೆಗಳ ಅನುವಾದ [ಮಹಿಳಾ ಸಾಹಿತ್ಯಿಕಾ , ಹುಬ್ಬಳ್ಳಿ, ೨೦೦೦೦]
 • 'ರಾಕಿ ಪರ್ವತಗಳ ನಡುವೆ ಕ್ಯಾಬರೆ', ಪ್ರವಾಸ ಕಥನ ಕರ್ನಾಟಕ ಸಂಘ, ಪುತ್ತೂರು, ೨೦೦೨]
 • 'ಮುಂಬಯಿಡೈರಿ' [ಅಂಕಣಗಳ ಸಂಗ್ರಹ] (ನವಕರ್ನಾಟಕ ಪ್ರಕಾಶನ) ೨೦೦೧
 • 'ಬಿಸಿಲು ಕೋಲು', ಖ್ಯಾತ ಸೈನ್ ಛಾಯಾಗ್ರಾಹಕ, ವಿ. ಕೆ ಮೂರ್ತಿ ಯವರ ಜೀವನ ಚರಿತ್ರೆ,

(ಪ್ರಿಸಮ್. ಪ್ರಕಾಶನ), ೨೦೦೬, ೨೦೧೩) [೧]

 • 'ಸಿಲೋನ್ ಸುಶೀಲಾ', ಹಾವಾಡಿಗ, ಮೀಸೆ ಹೆಂಗಸು, ಮತ್ತು ಇತರರು, -ಕಥಾ ಸಂಕಲನ [ನುಡಿ ಪುಸ್ತಕ -೨೦೧೦
 • 'ದಲೈಲಾಮಾ'- ಸಂಕ್ಷಿಪ್ತ ಜೀವನ ಚರಿತ್ರೆ, (ವಸಂತ ಪ್ರಕಾಶನ) -೨೦೧೩
 • 'ವನಜಮ್ಮನ ಸೀಟು' ಕಾದಂಬರಿ, (ವಿಕಾಸ್ ಪ್ರಕಾಶನ) [೨][೩]

ಪ್ರಶಸ್ತಿ/ಗೌರವ/ಬಹುಮಾನ/ಪುರಸ್ಕಾರಗಳುಸಂಪಾದಿಸಿ

 • ವಿಶ್ವವಿಖ್ಯಾತ ಸೈನ್ ಛಾಯಾಗ್ರಾಹಕ, ಪ್ರತಿಷ್ಟಿತ ಫಾಲ್ಕೆ ಪ್ರಶಸ್ತಿ ವಿಜೇತ ವಿ. ಕೆ. ಮೂರ್ತಿ ಜೀವನ ಚರಿತ್ರೆ, 'ಬಿಸಿಲು ಕೋಲು, ೨೦೦೬ ರಲ್ಲಿ ಬಂದ ಈ ಕೃತಿಯಲ್ಲಿ ಮೂರ್ತಿಯವರ ವೈಯಕ್ತಿಕ ಜೀವನ ದ ಜೊತೆಗೆ ಅವರ ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಜೊತಗೆ ಕೆಲಸಗಾರರು, ಶ್ಯಾಮ್ ಬೆನೆಗಲ್, ಗೋವಿಂದ ನಿಹಲಾನಿ, ವಹೀದಾ ರೆಹಮಾನ್, ಓಂ ಪುರಿ,ಗಳಂತಹ ಧೀಮಂತ ಕಲಾವಿದರೊಂದಿಗೆ ಸಂದರ್ಶನಗಳಿವೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಬಹುಮಾನ ಪ್ರಾಪ್ತವಾಗಿದೆ.
   
  'ಡಾ.ಎಂ.ವಿ.ಪ್ರಭಾಕರ್ ರಾವ್, ಹಾಗೂ ಉಮಾರಾವ್, ಇನ್ನಿತರ ಗಣ್ಯರ ಜೊತೆ, ಕಾರ್ಯಕ್ರಮ ವೀಕ್ಷಿಸುತ್ತಿರುವುದು'
 • ೨೦೦೯,೧೧,೧೨ರಲ್ಲಿ ಹೊರ ಬಂದ ಬರಹಗಳಲ್ಲಿ, ಅತ್ಯುತ್ತಮ ಕಥಾ ಸಂಕಲನವೆಂದು ಪರಿಗಣಿಸಲ್ಪಟ್ಟು 'ಸಿಲೋನ್ ಸುಶೀಲಾ'ಗೆ, ಎಚ್.ವಿ.ಸಾವಿತ್ರಮ್ಮ ಜನ್ಮ ಶತಾಭ್ಧಿ ಪ್ರಶಸ್ತಿ ದೊರೆಯಿತು.[೪] ಕನ್ನಡಕ್ಕೆ ಅಪರೂಪವೆನಿಸುವ ೨೦ ಕಿರುಗತೆಗಳೂ, ಜೊತೆಗೆ ಸಾಮಾನ್ಯ ಉದ್ದದ ೧೧ ಕತೆಗಳಿವೆ.
 • ಅಗಸ್ತ್ಯ, ಮುಂಬಯಿ ಡೈರಿಗೆ ಕರ್ನಾಟಕ ಪರಿಷತ್ತಿನ ಅಂತಾರಾಷ್ಟ್ರೀಯ ಮಹಿಳಾ ವರ್ಷದ ದತ್ತಿ ನಿಧಿ ಬಹುಮಾನಗಳು
 • ನೂರು ಸ್ವರ ಕ್ಕೆ, ಗೊರೂರು ಸಾಹಿತ್ಯ ಪ್ರಶಸ್ತಿ
 • ಬಿಸಿಲು ಕೋಲು ಗೆ ಕರ್ನಾಟಕ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ

ಆಂಥಾಲಜಿಸಂಪಾದಿಸಿ

 • ‘ಅವಳ ಕತೆಗಳು’(ಈ ಶತಮಾನದ ೨೫ ಮಹಿಳೆಯರ ಆಯ್ದ ಕತೆಗಳ ಸಂಕಲನ) ಡಾ.ಜಿ.ಎಸ್.ಅಮೂರ್ ರವರ ಆಯ್ಕೆ, ಮತ್ತು ಪ್ರಸ್ತಾವನೆಯೊಂದಿಗೆ.(೧೯೯೯ ರಲ್ಲಿ ಪ್ರಿಸಂನಿಂದ ಬಂದ ಸಂಕಲನದಲ್ಲಿ ಉಮಾ ರಾವ್ ಬರೆದ 'ದೇಹಾಂತ'
 • 'ಕನ್ನಡದ ಅತಿ ಸಣ್ಣ ಕತೆಗಳು' ಪ್ರಿಸಂ ಗಾಗಿ ಎಸ್. ದಿವಾಕರ್ ಆಯ್ದ, ಸಂಕಲನದ ಕತೆಗಳಲ್ಲಿ ಉಮಾರಾವ್ ರ 'ವಿಗ್' ಕತೆ ಸೇರ್ಪಡೆ. (೨೦೦೭-೨೦೧೩)
 • 'ಮುಂಬಯಿ ಕತೆಗಳು' -ಪ್ರಾತಿನಿಧಿಕ ಕಥಾಸಂಕಲನ ೧೯೯೪ ರಲ್ಲಿ ಬಿ.ಎ.ಸನದಿಯವರ ಡಾ ವ್ಯಾಸರಾವ್ ನಿಂಜೂರ್ ಆರಿಸಿದ ಕರ್ನಾಟಕ ಸಂಘ ಮುಂಬಯಿ ನಿಂದ ಪ್ರಕಟಗೊಂಡ ಸಂಕಲನದಲ್ಲಿ ಉಮಾರಾವ್ ಬರೆದ 'ಪ್ರತಿಧ್ವನಿಗಳನ್ನು ಮಾರುವವನು' ಕೃತಿಯ ಆಯ್ಕೆ.
 • ಪ್ರಣಯಿನಿ - ಕನ್ನಡ ಕವಯಿತ್ರಿಯರ ಪ್ರಣಯ, ವಿರಹ, ದಾಂಪತ್ಯ ಕವನ ಸಂಕಲನ, ಶಶಿಕಲಾ ವೀರಯ್ಯ ಸ್ವಾಮಿ, ಮತ್ತು ಸುಕನ್ಯಾ ಮಾರುತಿ, ಆರಿಸಿ ನೆಲೆ ಪ್ರಕಾಶನ ಸಿಂದಗಿಯಿಂದ ಬಂದ ಕೃತಿಯಲ್ಲಿ ಉಮಾ ರಾವ್ ರವರ ಕಾದಂಬರಿ, 'ಅದೇ ಹುಡುಗ' ದ,ಸೇರ್ಪಡೆ.

ಕರ್ನಾಟಕ ಸಾಹಿತ್ಯ ಅಕ್ಯಾಡೆಮಿಗಾಗಿ ಡಾ.ಹೇಮಾ ಪಟ್ಟಣಶೆಟ್ಟಿ ಆರಿಸಿ ಸಂಪಾದಿಸಿದ ವರ್ಷದ ಅತ್ಯುತ್ತಮ ಕತೆಗಳ ಸಂಕಲನದಲ್ಲಿ ೧೯೯೫ ರಲ್ಲಿ ಪ್ರಕಟಿಸಿದ ಉಮಾರವರ ಕೃತಿ, 'ಕಡಲ ಹಾದಿ' ಸೇರ್ಪಡೆ.

 • ಕೆನಡಾದ ಬ್ರಿಟಿಷ್ ಕೊಲಂಬಿಯ ವಿಶ್ವವಿದ್ಯಾಲಯದ ಕ್ರಿಯೇಟಿವ್ ರೈಟರ್ಸ್ ವಿಭಾಗದಿಂದ ಬರುವ 'ಪ್ರಿಸಂ ಸಾಹಿತ್ಯ ಪತ್ರಿಕೆ'ಯಲ್ಲಿ ಉಮಾರಾವ್ ರವರ,ಕತೆಗಳು ‘ರೀ ಪ್ರಸನ್ನ’ ಮತ್ತು 'ಶಾಲಿಮ ಅಂಡ್ ಹರ ಚಿಲ್ಡ್ರನ್' ಮತ್ತು 'ಆಮ್ಮನ ಸ್ಯಾರಿ' ಮತ್ತು, 'ಅ ಸಿಂಗಲ್ ಹಿಯರಿಂಗ್' ಇಂಗ್ಲಿಷ್ ಅನುವಾದ, ೧೯೯೪ ರಲ್ಲಿ ಪ್ರಕಟಣೆಗೊಂಡಿತು.[೫]

ಹವ್ಯಾಸಗಳುಸಂಪಾದಿಸಿ

 • ಉಮಾರಾವ್ ಗೆ, ಬದುಕಿನಲ್ಲಿ ಅತಿ ಪ್ರೀತಿಯ ಹವ್ಯಾಸವೆಂದರೆ ತಿರುಗಾಟ. 'ತಿರುಗಾಟದ ಕಥೆಗಳು'[೬] ಎನ್ನುವ ಶೀರ್ಷಿಕೆಯಲ್ಲಿ 'ಇ ಪತ್ರಿಕೆ ಚುಕ್ಕು ಬುಕ್ಕು' ಗೆ ಬರೆದ ಲೇಖನಗಳು ಹಲವಾರು. ಪತಿ ಪ್ರಭಾಕರ್ ಸಹಿತ, ಪರ್ಯಟನೆಯ ಬಗ್ಗೆ ಪರಮಾಸಕ್ತರು. ಇಬ್ಬರು ಒಟ್ಟಿಗೆ ಅನೇಕ ದೇಶಗಳನ್ನು ಮತ್ತು ಭಾರತದ ಅನೇಕ ಭಾಗಗಳನ್ನು ಜೊತೆಯಾಗಿ ಸುತ್ತಿದ್ದಾರೆ. ಬೆಂಗಳೂರಿಗೆ ಬಂದನಂತರ ಈ ಹುಚ್ಚು ಇನ್ನು ಅತಿಯಾಯಿತು. ಸಾಕಷ್ಟು ಸಮಯ ಸಿಕ್ಕಿದ್ದು ಇದಕ್ಕೆ ಮತ್ತಷ್ಟು ಪುಷ್ಟಿ ದೊರೆಯಿತು. ಅಮೇರಿಕಾದಲ್ಲಿ ಮಕ್ಕಳ ಮನೆಗೆ ಹೋದಾಗ, ಹಾಗೆಯೇ ಅವರು ಭಾರತಕ್ಕೆ ಬಂದಾಗ ಸಾಕಷ್ಟು ಸ್ಥಳಗಳನ್ನು ಸುತ್ತಿಬರುವುದು, ಪರಿವಾರದ ಎಲ್ಲ ಸದಸ್ಯರಿಗೂ ಅತಿ ಮುದ ಕೊಡುವ ಸಂಗತಿಯಾಗಿದೆ.
 • ಶಾಲೆಯಲ್ಲಿ ಓದುವ ಕಾಲದಿಂದಲೂ ಉಮಾರಿಗೆ ಕ್ರೀಡೆಗಳೆಂದರೆ ಪಂಚಪ್ರಾಣ. ಮುಂದೆ ಮುಂಬಯಿಗೆ ಮದುವೆಯಾದಮೇಲೆ ಅಣುಶಕ್ತಿನಗರದಲ್ಲಿ ವಾಸ್ತವ್ಯಹೂಡಿದಾಗಲೂ ಎಲ್ಲಾರೀತಿಯ ಅನುಕೂಲಗಳು ಇದ್ದದ್ದರಿಂದ ತಪ್ಪದೆ ಟೆನ್ನಿಸ್, ಬ್ಯಾಡ್ಮಿಂಟನ್ ಆಟ ಆಡುತ್ತಿದ್ದರು. ಆದರೆ ಬೆಂಗಳೂರಿಗೆ ಹೋದಮೇಲೆ ಇವೆಲ್ಲಾ ನಿಂತುಹೋಗಿ, ಅವರ ಚಟುವಟಿಕೆಗಳು ಕೇವಲ ವಾಕಿಂಗ್ ಗೆ ಮಾತ್ರ, ಸೀಮಿತವಾಯಿತು.

ಉಲ್ಲೇಖಗಳುಸಂಪಾದಿಸಿ

 1. ಉಮಾರಾವ್ ಬರೆಯುವ ವಿ.ಕೆ.ಮೂರ್ತಿ ಚರಿತೆ : ಕುಟ್ಟಿ ಕ್ಯಾಮರಾಮನ್ ಆದದ್ದು[permanent dead link], ಉಮಾರಾವ್ ಬರೆಯುವ ವಿ.ಕೆ.ಮೂರ್ತಿ ಚರಿತ- ಕೊನೆಯ ಕಂತು: ಪಂಡಿತ್ ಹೌಸಿನ ದಿನಗಳು Archived 2010-11-25 at the Wayback Machine.
 2. ಉಮಾರಾವ್‌ ಅವರ ‘ವನಜಮ್ಮನ ಸೀಟು’ 'ಚುಕ್ಕು-ಬುಕ್ಕು'-ವಿವೇಕ್ ಶಾನುಭೋಗ್[permanent dead link]
 3. 'ಆಧುನಿಕ ಮನಸ್ಸು,ಪ್ರಾಮಾಣಿಕ ಕಾಳಜಿ', ವನಜಮ್ಮನ ಸೀಟು, 'ಉದಯವಾಣಿ ಪತ್ರಿಕೆ, ಜೂನ್, ೧೨,೨೦೧೪[permanent dead link]
 4. "೨೦೧೩ ರಲ್ಲಿ ಎಚ್.ವಿ.ಸಾವಿತ್ರಮ್ಮ ಪ್ರಶಸ್ತಿ ವಿಜೇತೆ". Archived from the original on 2015-09-26. Retrieved 2015-03-21.
 5. Bangalore Mirror, By Prathibha Nandakumar | Aug 23, 2013, GOOD STORIES COME FROM FREE WOMEN
 6. "ತಿರುಗಾಟದ ಕಥೆಗಳು". Archived from the original on 2014-04-27. Retrieved 2014-04-29.

ಬಾಹ್ಯ ಸಂಪರ್ಕಗಳುಸಂಪಾದಿಸಿ